Article Image

ರಾಷ್ಟ್ರಮಟ್ಟದ ಪ್ರತಿಷ್ಠಿತ ಯುವ ವಿಜ್ಞಾನಿ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಪ್ರತಿಭೆ ಮೌಲ್ಯ ವೈ. ಆರ್. ಜೈನ್

Article Image

ರಾಷ್ಟ್ರಮಟ್ಟದ ಪ್ರತಿಷ್ಠಿತ ಯುವ ವಿಜ್ಞಾನಿ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಪ್ರತಿಭೆ ಮೌಲ್ಯ ವೈ. ಆರ್. ಜೈನ್

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಇವರು ಶಾಲಾ ಮಕ್ಕಳಿಗಾಗಿ ಪ್ರತಿ ವರ್ಷವೂ ಆಯೋಜಿಸುವ ರಾಷ್ಟ್ರಮಟ್ಟದ ಯುವ ವಿಜ್ಞಾನಿ ಕಾರ್ಯಕ್ರಮ ‘ಯುವಿಕ’ಗೆ ಈ ಬಾರಿ ಎಕ್ಸಲೆಂಟ್ ಮೂಡುಬಿದಿರೆಯ ಪ್ರತಿಭೆ ಮೌಲ್ಯ ವೈ. ಆರ್. ಜೈನ್ ಆಯ್ಕೆಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಯನ್ನು ಗೈದಿದ್ದಾರೆ. ಇಸ್ರೋ’ ನ ವಿವಿಧ ಕೇಂದ್ರಗಳಲ್ಲಿ ಎರಡು ವಾರಗಳ ಕಾಲ ಜರಗುವ 'ಯುವಿಕ-2024' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈ ಬಾರಿ ದೇಶದ ಎಲ್ಲಾ ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 85,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಕಾಂಕ್ಷಿಗಳಾಗಿ ಅರ್ಜಿಯನ್ನು ಸಲ್ಲಿಸಿದ್ದರು. ವಿದ್ಯಾರ್ಥಿಗಳ ಮೂರು ವರುಷಗಳ ಶೈಕ್ಷಣಿಕ ಸಾಧನೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ವೈಜ್ಞಾನಿಕ, ಕ್ರೀಡಾ ಸಾಧನೆಗಳು, ಒಲಂಪಿಯಾಡ್ ತತ್ಸಮಾನ ಸ್ಪರ್ಧೆಗಳಲ್ಲಿ ಪಡೆದ ರ‍್ಯಾಂಕ್ ಜೊತೆಗೆ ಮುಖ್ಯವಾಗಿ ಇಸ್ರೋ ಆಯೋಜಿಸುವ ಆನ್‌ಲೈನ್ ರಸಪ್ರಸ್ನೆಯಲ್ಲಿ ವಿದ್ಯಾರ್ಥಿಯ ಪಲಿತಾಂಶ ಇವೆಲ್ಲವನ್ನು ಮಾನದಂಡವನ್ನಾಗಿರಿಸಿ 250 ಮಂದಿ ವಿದ್ಯಾರ್ಥಿಗಳನ್ನು ಪ್ರಸಕ್ತ ಸಾಲಿನ ‘ಯುವಿಕ’ಗೆ ಆಯ್ಕೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ 12 ಮಂದಿಗಳಲ್ಲಿ ರಾಜ್ಯ ಪಠ್ಯಕ್ರಮ ಭೋಧಿಸುವ ಶಿಕ್ಷಣ ಸಂಸ್ಥೆಯಿಂದ ಆಯ್ಕೆಯಾಗಿ ಭಾಗವಹಿಸಿದ ಕರ್ನಾಟಕದ ಏಕೈಕ ವಿದ್ಯಾರ್ಥಿನಿ ಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮೌಲ್ಯ ವೈ. ಆರ್. ಜೈನ್ ಆಗಿರುವುದು ಶಿಕ್ಷಣ ಕಾಶಿ ಎನಿಸಿದ ಮೂಡುಬಿದಿರೆಗೆ ವಿಶೇಷ ಮೆರಗನ್ನು ತಂದಿದೆ ಈಗಾಗಲೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ, ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ವಿಜ್ಞಾನ ಮಾದರಿ ತಯಾರಿ, ಜಿಲ್ಲಾ ರಾಜ್ಯ ಮಟ್ಟದ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆಯ ಜೊತೆಗೆ ರಾಷ್ಟ್ರ, ರಾಜ್ಯಮಟ್ಟದ ಅಟಲ್ ಮಾರಥಾನ್, ಇನ್‌ಸ್ಪಾಯರ್ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿನೂತನವಾದ ಸಂಶೋಧನಾತ್ಮಕ ಮಾದರಿಗಳನ್ನು ಪ್ರಸ್ತುತ ಪಡಿಸುವ ಮೂಲಕ ಗಮನ ಸೆಳೆದಿರುವ ಈ ಪ್ರತಿಭೆ ಮೂಡುಬಿದಿರೆಯ ಪ್ರತಿಷ್ಠಿತ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಇವರ ಸುಪುತ್ರಿಯಾಗಿದ್ದಾಳೆ.

ಜೈನ ಬಸದಿಗಳ ಅಭಿವೃದ್ಧಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಯವರಿಗೆ ಮನವಿ

Article Image

ಜೈನ ಬಸದಿಗಳ ಅಭಿವೃದ್ಧಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಯವರಿಗೆ ಮನವಿ

ಬೆಳ್ತಂಗಡಿ; ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಗೌರವಾನ್ವಿತ ಸಿದ್ದರಾಮಯ್ಯನವರನ್ನು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭೇಟಿ ಮಾಡಿ ಜೈನ ಬಸದಿಗಳ ಅಭಿವೃದ್ಧಿಗಳ ಬಗ್ಗೆ ಇರುವ ಸಮಸ್ಯೆಗಳನ್ನು ಗಮನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ನಾಭಿರಾಜ್ ಜೈನ್ ಬೆಂಗಳೂರು, ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ, ಸುದರ್ಶನ್ ಜೈನ್ ಬಂಟ್ವಾಳ, ವಿಜಯಕುಮಾರ್ ಕಾರ್ಯತ್ತಡ್ಕ, ಧನ ಕೀರ್ತಿ ಶೆಟ್ಟಿ ಧರ್ಮಸ್ಥಳ, ಶಶಿಕಿರಣ್ ಜೈನ್ ಬೆಳ್ತಂಗಡಿ, ಪಣಿರಾಜ್ ಜೈನ್ ಕೊಕ್ಕಡ, ಪ್ರಜ್ವಲ್ ಜೈನ್ ಅಳದoಗಡಿ ಮುಂತಾದವರಿದ್ದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಮೇ 30 ರಂದು ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಸಮಾರಂಭ

Article Image

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಮೇ 30 ರಂದು ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಸಮಾರಂಭ

ಉಜಿರೆ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭ ಇದೇ 30 ರಂದು ಗುರುವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಬೆಂಗಳೂರಿನ ಪದ್ಮಿನಿ ಪದ್ಮರಾಜ್ ರವರು ತಿಳಿಸಿದ್ದಾರೆ. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸೇವೆ, ಸಾಧನೆ ಬಗ್ಗೆ ಅವರು ಧರ್ಮಸ್ಥಳದಲ್ಲಿ ಮಾಹಿತಿ ನೀಡಿದರು. ಮೇ 30 ರಂದು ಗುರುವಾರ ಪೂರ್ವಾಹ್ನ ಹತ್ತು ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸುವರು. ಹೇಮಾವತಿ ವೀ. ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಖ್ಯಾತ ಹೃದ್ರೋಗ ತಜ್ಞರಾದ ಬೆಂಗಳೂರಿನ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರೀಯವರು ಮತ್ತು ಚಲನಚಿತ್ರ ನಟಿ ಪದ್ಮಜಾ ರಾವ್ ರವರು ಶುಭಾಶಂಸನೆ ಮಾಡುವರು. ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ, ಬೆಳಗಾವಿಯ ಸುಮನ್ ಪತ್ರಾವಳಿ, ಮೂಡಬಿದ್ರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುರೀಮಾ ಯಶವಂತ್, ಹುಣಸೂರಿನ ಛಾಯಾ ಮತ್ತು ಮೈಸೂರಿನ ಕುಮಾರಿ ಅನನ್ಯಾ ಅವರನ್ನು ಸನ್ಮಾನಿಸಲಾಗುವುದು. ರಾಜ್ಯದಲ್ಲಿರುವ ಜೈನ ಮಹಿಳಾ ಒಕ್ಕೂಟದ ಎಲ್ಲಾ ಶಾಖೆಗಳಿಂದ ಸುಮಾರು ಒಂದು ಸಾವಿರ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದು ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಪದ್ಮಿನಿ ಪದ್ಮರಾಜ್ ರವರು ಮಾಹಿತಿ ನೀಡಿದರು.

ಸತ್ತೂರು, ಧಾರವಾಡ: “ಪರ್ವ 2024”-ಸಾಂಸ್ಕೃತಿಕ ಕಾರ್ಯಕ್ರಮ

Article Image

ಸತ್ತೂರು, ಧಾರವಾಡ: “ಪರ್ವ 2024”-ಸಾಂಸ್ಕೃತಿಕ ಕಾರ್ಯಕ್ರಮ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಅಲೈಡ ಹೆಲ್ತ್ ಸೈನ್ಸ್ ವಿಭಾಗದವರಿಂದ “ಪರ್ವ 2024”-ಸಾಗರ ಸಂರಕ್ಷಣೆಯ ಭಾಗವಾಗಿ “ಸಮುದ್ರ ನಮ್ಮ ಜೀವನದ ಸೌಂದರ್ಯ” ಎಂಬ ಧ್ಯೇಯೆಯೊಂದಿಗೆ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಮತ್ತಿತರ ಗಣ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪದ್ಮಲತಾ ನಿರಂಜನ್, ಸಾಕೇತ್ ಶೆಟ್ಟಿ, ಡಾ. ಚಿದೇಂದ್ರ ಶೆಟ್ಟರ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಲೈಡ ಹೆಲ್ತ್ ಸೈನ್ಸ್ ನ ಸಂಯೋಜಕರಾದ ಡಾ. ವಿದ್ಯಾ ಪಾಟೀಲ ಅವರು ಪರ್ವ 2024 ಸಾಂಸ್ಕೃತಿಕ ಕಾರ್ಯಕ್ರಮದ ಅವಲೋಕನವನ್ನು ನೀಡಿದರು. ಶೋಧನ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಮೀನಾಜ್ ಮತ್ತು ತಾಂಜೀಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಸೌಮ್ಯ ವಂದನಾರ್ಪಣೆ ಸಲ್ಲಿಸಿದರು.

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ

Article Image

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಅಪರಾಹ್ನ ಶ್ರೀ ಪದ್ಮಾವತಿದೇವಿ ಆರಾಧನೆ, ಶ್ರಾವಕಿಯರಿಂದ ಸಹಸ್ರನಾಮ ಕುಂಕುಮಾರ್ಚನೆ, ಪದ್ಮಾವತಿದೇವಿ ಪ್ರತಿಷ್ಠೆ ಮೊದಲಾದ ಕಾರ್ಯಕ್ರಮಗಳು ನಡೆದವು. ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ೧೦೮ ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ ಹೆಗ್ಗಡೆಯವರು, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಮೂಡುಬಿದಿರೆ: 3ನೇ ವಾರ್ಷಿಕೋತ್ಸವ

Article Image

ಮೂಡುಬಿದಿರೆ: 3ನೇ ವಾರ್ಷಿಕೋತ್ಸವ

2022ರಂದು ಜೀರ್ಣೋದ್ಧಾರಗೊಳಿಸಿ, ಪ್ರತಿಷ್ಠಾಪಿಸಿದ ಮೂಡುಬಿದಿರೆ ಪಡುಬಸದಿ ಭಗವಾನ್ ಶ್ರೀಶ್ರೀಶ್ರೀ ವಿಮಲ ಶ್ರೀಶ್ರೀಶ್ರೀ ಅನಂತ, ಶ್ರೀಶ್ರೀಶ್ರೀ ಧರ್ಮನಾಥ ಸ್ವಾಮಿಯ ಬಿಂಬ ಪ್ರತಿಷ್ಠಾ ಮಹೋತ್ಸವದ 3ನೇ ವಾರ್ಷಿಕೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ, ನಾಳೆ (ಮೇ 24) ವಿಮಾನಶುದ್ಧಿ, ಶ್ರುತ ಪೂಜೆ, ಭ| ಶೀತಲ ತೀರ್ಥಂಕರ-ಶ್ರೀ ಬ್ರಹ್ಮಯಕ್ಷ ಆರಾಧನೆ- ಶ್ರೀ ಪದ್ಮಾವತಿ ಷೋಡಶೋಪಚಾರ ಪೂಜೆ, ಉತ್ಸವ ಮತ್ತು ಧಾರ್ಮಿಕ ಸಭಾಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ನಿಧನ: ಕಟ್ಟೆಮನೆ ಉದಯ್ ಕುಮಾರ್

Article Image

ನಿಧನ: ಕಟ್ಟೆಮನೆ ಉದಯ್ ಕುಮಾರ್

ಪುಂಜಾಲಕಟ್ಟೆ: ಇಲ್ಲಿಯ ಕಟ್ಟೆಮನೆ ಉದಯ್ ಕುಮಾರ್ (77ವ) ಇವರು ಮೇ 21 ರಂದು ರಾತ್ರಿ ನಿಧನ ಹೊಂದಿದರು. ಇವರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು- ವರ್ಗವನ್ನು ಅಗಲಿದ್ದಾರೆ

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

Article Image

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ(ಮೇ.21) ತೋರಣ ಮುಹೂರ್ತ, ವಿಮಾನಶುದ್ಧಿ, ಆರಾಧನಾ ಪೂರ್ವಕ ಕ್ಷೇತ್ರಪಾಲ ಪ್ರತಿಷ್ಠೆ, ನವಕಲಶ ಅಭಿಷೇಕ ಮತ್ತು ನಾಂದಿಮಂಗಲ ಪೂಜಾವಿಧಾನ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು ಮತ್ತು ಊರಿನ ಶ್ರಾವಕರು- ಶ್ರಾವಕಿಯರು ಉಪಸ್ಥಿತರಿದ್ದರು. ಇಂದಿನ ಕಾರ್ಯಕ್ರಮ: ಇಂದು ಬುಧವಾರ ವಾಸ್ತುಪೂಜಾ ವಿಧಾನ, ಜಿನಸಹಸ್ರನಾಮ ಪುಷ್ಪಾರ್ಚನೆ, ಷೋಡಶ ಕಲಶಾಭಿಷೇಕ, ನವಗ್ರಹ ಮಹಾಶಾಂತಿ, ಮಹಾಮಂಗಳಾರತಿ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ. ನಾಳೆ ಗುರುವಾರ ಅಪರಾಹ್ನ ಗಂಟೆ 2.30 ರಿಂದ ಮಹಾಮಾತೆ ಶ್ರೀಪದ್ಮಾವತಿ ಅಮ್ಮನವರ ಆರಾಧನೆ, ಸಹಸ್ರನಾಮ ಕುಂಕುಮಾರ್ಚನೆ, ಪದ್ಮಾವತಿ ದೇವಿ ಪ್ರತಿಷ್ಠೆ, ಭವ್ಯ ಅಗ್ರೋದಕ ಮೆರವಣಿಗೆ ಮತ್ತು ಉತ್ಸವ ಸಹಿತ ಭಗವಾನ್ ಚಂದ್ರನಾಥ ಸ್ವಾಮಿಗೆ 108 ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ.

ಧರ್ಮಸ್ಥಳ ಮ್ಯೂಸಿಯಂಗೆ ಕಾರ್ ಕೊಡುಗೆ ನೀಡಿದ ಭಟ್ಟಾರಕ ಶ್ರೀಗಳವರು

Article Image

ಧರ್ಮಸ್ಥಳ ಮ್ಯೂಸಿಯಂಗೆ ಕಾರ್ ಕೊಡುಗೆ ನೀಡಿದ ಭಟ್ಟಾರಕ ಶ್ರೀಗಳವರು

ಮೂಡುಬಿದಿರೆ: ಇಲ್ಲಿನ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು 2003ರಲ್ಲಿ ಖರೀದಿಸಿದ ಟೊಯೋಟಾ ಕ್ವಾಲಿಸ್ ವಾಹನವನ್ನು ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕಾರ್ ಮ್ಯೂಸಿಯಂಗೆ ವಾಹನ ವರ್ಗಾವಣೆ ಸಹಿ ಮಾಡಿ ವರ್ಗಾಯಿಸಿದರು. ೧೦೮ ಶಾಂತಿ ಸಾಗರ ಆಚಾರ್ಯ ಪದರೋಹಣ ಶತಾಬ್ಧಿ ಮಹೋತ್ಸವ ಶ್ರೀಮಠದ ವತಿಯಿಂದ ವೇಣೂರು ಮಹಾಮಸ್ತಕಾಭಿಷೇಕ ಸಂದರ್ಭ ನೆರವೇರಿಸಿದ ನೆನಪಿನಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ದಂಪತಿಯನ್ನು ಸ್ವಾಮೀಜಿಗಳವರು ಗೌರವಿಸಿ, ಅಭಿನಂದನಾ ಪತ್ರ, ಶ್ರೀಫಲ ನೀಡಿ ಹರಸಿದರು. ಹೆಗ್ಗಡೆಯವರು ವಾಹನ ವಸ್ತು ಸಂಗ್ರಹಾಲಯಕ್ಕೆ ಮೋಟಾರ್ ಕಾರ್ ಕೊಡುಗೆ ನೀಡಿದ ಸ್ವಾಮೀಜಿಗಳವರಿಗೆ ಅಭಿನಂದನಾ ಪತ್ರ ನೀಡಿದರು. ಶೈಲೇಂದ್ರ ಜೈನ್, ಎಂ. ಬಾಹುಬಲಿ ಪ್ರಸಾದ್, ಪ್ರವೀಣ್ ಇಂದ್ರ ವೇಣೂರು, ನಾಗವರ್ಮ ಆದಿತ್ಯ ಜೈನ್ ಉಪಸ್ಥಿತರಿದ್ದರು.

ನಿಧನ: ಗುರುವಾಯನಕೆರೆ ಶಕ್ತಿನಗರದ ಧನಂಜಯ ಇಂದ್ರ

Article Image

ನಿಧನ: ಗುರುವಾಯನಕೆರೆ ಶಕ್ತಿನಗರದ ಧನಂಜಯ ಇಂದ್ರ

ಗುರುವಾಯನಕೆರೆ ಶಕ್ತಿನಗರದ ಧನಂಜಯ ಇಂದ್ರ(72ವ) ಇವರು ಇಂದು (ಮೇ. 19) ಬೆಳಗ್ಗೆ ನಿಧನ ಹೊಂದಿದರು. ಇವರು ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ಬಸದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಓರ್ವ ಮಗ, ಸೊಸೆ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

Article Image

ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

ಭಾರತೀಯ ಜೈನ್ ಮಿಲನ್ ಮೂಡುಬಿದಿರೆಯ ಮಾಸಿಕ ಸಭೆ ವಾಲ್ಪಾಡಿ ಬಸದಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀಪಾಲ್ ಎಸ್. ರವರು ತಮ್ಮ ಧರ್ಮಪತ್ನಿ ಮತ್ತು ಮಾತೃಶ್ರೀಯವರ ಸ್ಮರಣೆಯಲ್ಲಿ ಕೊಡಮಾಡುವ "ವಜ್ರಶ್ರೀ ಅರ್ಚಕ ಪುರಸ್ಕಾರ"ವನ್ನು ಅಳಿಯೂರು ಬಸದಿಯ ಹಿರಿಯ ಅರ್ಚಕರಾದ ರತ್ನವರ್ಮ ಇಂದ್ರರ ಸೇವೆಯನ್ನು ಗುರುತಿಸಿ, ರತ್ನವರ್ಮ ಇಂದ್ರ ಹಾಗೂ ವಿನಯ ದಂಪತಿಯನ್ನು ಶಾಲು, ಫಲಕಾಣಿಕೆ, ಸನ್ಮಾನ ಪತ್ರ ಹಾಗೂ ನಗದು ಪುರಸ್ಕಾರದೊಂದಿಗೆ ಜೈನ್ ಮಿಲನ್ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಮಿಲನ್ ಅಧ್ಯಕ್ಷ ದಿನೇಶ್ ಕುಮಾರ್ ಆನಡ್ಕ, ಶ್ವೇತಾ ಜೈನ್, ಪ್ರಭಾಚಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

Article Image

ಮಂಗಳೂರು: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

ಮಂಗಳೂರು ಭಾರತೀಯ ಜೈನ್ ಮಿಲನ್ ಮಾಸಿಕ ಸಭೆಯು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಜೈನ್ ಮಿಲನ್ ಅಧ್ಯಕ್ಷರಾದ ರತ್ನಾಕರ್ ಜೈನ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಲಯ 8ರ ರಾಷ್ಟ್ರೀಯ ಉಪ ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ಧರ್ಮಸ್ಥಳ ಕ್ಷೇತ್ರದ ರಾಜೇಂದ್ರ ಕುಮಾರ್ ಭಾಗವಹಿಸಿದ್ದರು. ಮಂಗಳೂರು ಜೈನ್ ಸಮಾಜದ ಹಿರಿಯ ವಕೀಲರು ಹಾಗೂ ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷರಾದ ಎಲ್.ಡಿ. ಬಲ್ಲಾಳ್ ಮತ್ತು ಹಿರಿಯ ಜೈನ ವಿದ್ವಾಂಸ ಎಂ.ಕೆ. ಕುಟುಂಬದ ನಿರ್ಮಲ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಮಿಲನ್ ಸಭೆಯಲ್ಲಿ ನೂತನವಾಗಿ ಸೇರ್ಪಡೆಗೊಂಡ 10 ಸದಸ್ಯರನ್ನು ಸ್ವಾಗತಿಸಿ, ಪ್ರಮಾಣವಚನ ನೀಡಿದ ವಲಯ 8ರ ರಾಷ್ಟ್ರೀಯ ಉಪಾಧ್ಯಕ್ಷ ಪ್ರಸನ್ನಕುಮಾರ್ ಮಿಲನ್ ಬಗೆಗೆನ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡರು. ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿ ಸಾಧನೆ ಮಾಡಿದ ನಗರದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯದರ್ಶಿ ವೈಶಾಲಿ ಪಡಿವಾಳ್, ಪ್ರಿಯಾ ಸುದೇಶ್ ವಂದಿಸಿದರು.

ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯ: ಬಿ. ಸೋಮ ಶೇಖರ ಶೆಟ್ಟಿ

Article Image

ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯ: ಬಿ. ಸೋಮ ಶೇಖರ ಶೆಟ್ಟಿ

ಉಜಿರೆ: ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಶಾಖೆಯ ಮಾಸಿಕ ಸಭೆಯು ಮಿಲನ್ ಅಧ್ಯಕ್ಷರಾದ ಡಾಕ್ಟರ್ ನವೀನ್ ಕುಮಾರ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಜೈನ್ ಮಿಲನ್ ನ ಕಾರ್ಯ ಕ್ರಮಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸವಿವರವಾಗಿ ಅಧ್ಯಕ್ಷರು ವಿವರಿಸಿ ತಿಳಿಸಿದರು. ಭುಜಬಲಿಯವರು ಯಶಸ್ವಿ ಮಾಸಿಕ ಸಭೆ ನಡೆಸುವ ಬಗ್ಗೆ ಸಲಹೆ ನೀಡಿದರು. ಧೀಮಹಿ ಮಹಿಳಾ ಸಮಾಜದ ಅಧ್ಯಕ್ಷೆ ಡಾಕ್ಟರ್ ರಜತ ಅವರು ಮಾತನಾಡಿ ತಿಂಗಳಿಗೆ ಒಂದು ಸಲ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಇಂತಹ ಸಭೆಗಳಿಂದ ಅವಕಾಶ ದೊರೆಯುತ್ತದೆ ಮತ್ತು ಇದನ್ನು ಎಲ್ಲಾ ಸದಸ್ಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮಿಲನ್ ನಿರ್ದೇಶಕರಾದ ಬಿ. ಸೋಮ ಶೇಖರ ಶೆಟ್ಟಿ ಅವರು ಮಾತನಾಡಿ ಮಿಲನ್ ಸಂಘಟನೆಯ ಮಹತ್ವ ಹಾಗೂ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಸಂಘಟನೆ ಬಲಗೊಳಿಸುವಲ್ಲಿ ಸದಸ್ಯರ ಸಹಕಾರವನ್ನು ಕೋರಿದರು, ವೇದಿಕೆಯಲ್ಲಿ ಮುನಿರಾಜ ಅಜ್ರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು, ನಿಖಿತ್ ವಂದಿಸಿದರು.

ನಿರಂಜನ ಲಹರಿ ಮಾಧ್ಯಮದ ಮೂಲಕ ಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ

Article Image

ನಿರಂಜನ ಲಹರಿ ಮಾಧ್ಯಮದ ಮೂಲಕ ಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ

ನಿರಂಜನ ಲಹರಿ ಮಾಧ್ಯಮದ ಮೂಲಕ ಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ (ಉಚಿತ ) online ( zoom app) ಮಾಧ್ಯಮದ ಮೂಲಕ ನಡೆಸಲಾಗುತ್ತದೆ. ಕಾಯ೯ಕ್ರಮದ ನೇರ ಪ್ರಸಾರವನ್ನು ನಿರಂಜನ ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು. ಧಾರ್ಮಿಕ ಶಿಬಿರದಲ್ಲಿ ಶಿಕ್ಷಕಿಯಾಗಿ ಸುಮನಾ ಪತ್ರಾವಳಿ ಬೆಳಗಾವಿರವರು ಪಾಲ್ಗೊಳ್ಳಲಿದ್ದಾರೆ. 12.05.2024ರಿಂದ 16.05.2024 ಗುರುವಾರದವರೆಗೆ ಪ್ರತೀ ದಿನ ಮಧ್ಯಾಹ್ನ 12.00ರಿಂದ 1.00 ರವರೆಗೆ ನಡೆಯುತ್ತದೆ. ವಿಶೇಷ ಆಕರ್ಷಣೆಯಾಗಿ 16.05.2024 ರ ಗುರುವಾರ ಮಕ್ಕಳಿಗಾಗಿ ಅಷ್ಟವಿಧಾರ್ಚನೆಯನ್ನು ಕಲಿಸಿಕೊಡಲಾಗುವುದು, ಈ ಕಾರ್ಯಕ್ರಮ ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರವನ್ನು ಉದ್ದೀಪನಗೊಳಿಸಲು ಆಯೋಜಿಸಲಾಗಿದೆ. ಹೆಸರು ನೊಂದಾಯಿಸಲು ಸಂಪರ್ಕಿಸಿ ನಿರಂಜನ್ ಜೈನ್- 9945563529.

ಎಕ್ಸಲೆಂಟ್: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ

Article Image

ಎಕ್ಸಲೆಂಟ್: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ

2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು 100% ಫಲಿತಾಂಶವನ್ನು ದಾಖಲಿಸುವುದರೊಂದಿಗೆ ಆದಿತ್ಯ ಆರ್. ಪುಣಚಿತ್ತಾಯ 620 ಅಂಕ ಗಳಿಸಿ ರಾಜ್ಯಕ್ಕೆ ಆರನೇ ಸ್ಥಾನವನ್ನು ಪಡೆದಿರುತ್ತಾರೆ. ಉಳಿದಂತೆ ಭಾರ್ಗವ ಭಟ್ (614), ಪೂರ್ಣಚಂದ್ರ ವಿ. (614), ಪೂರ್ವಿಕ್ (607), ತುಷಾರ್ (607), ಅಭಿಷೇಕ್ ಎಂ.ಸಿ. (605), ಹಿಮಧ್ವನಿ (601), ಕರಾಂಶು (601), ಕೃತಿಕಾ ಕಾಮತ್ (600), ಪವನ್ ಕಲ್ಯಾಣ್ (601) ಅಂಕವನ್ನು ಗಳಿಸಿರುತ್ತಾರೆ. ಅದೇ ರೀತಿ ವರುಣ್ ಆರ್. (599), ದ್ರುವ ಡೋಂಗ್ರೆ (598), ಯಶ್ ಭಿಡೆ (597), ಯಶಸ್ವಿನಿ ಎಸ್. (597), ಧನುಷ್ ಎಸ್. (595), ಪ್ರತೀಶ್ ಗೌಡ (595), ಶೆಝಾ ಶಕೀರ್ (595), ತನೀಷ್ ಜೈನ್ (595), ತನ್ಮಯಿ ಕೋರಿ (595), ಸಂಜೀತ್ ವೈ (594), ಅಕ್ಷರಾ (592), ಚೇತನ್ ಜೆ. (592), ಪ್ರೇರಣಾ (592), ಮೌಲ್ಯಾ ವೈ ಆರ್ ಜೈನ್ (591), ಡಿ. ಎಂ. ತನೀಷ್ (591), ಭವೇಶ್ ಜೆ. (589), ಅನ್ವಿತಾ ಕಾಮತ್ (588), ಉದಯ ಇ. (588), ಆರುಷ್ ಸಿ. (586), ಸುಜಲ್ ಶೆಟ್ಟಿ (586), ಪರಾಶ್ ಸಚಿನ್ (586), ಮೋನಿಷಾ ಆರ್. (582), ಪೂಜಿತ್ ಎಸ್. (582), ಪ್ರಾರ್ಥನಾ ಆರ್. (581), ತನನ್ ಗೌಡ (581), ಕಾರ್ತಿಕ್ ಸತ್ಯಪ್ಪ (580), ಅಂಕಗಳನ್ನು ಪಡೆಯುವುದರೊಂದಿಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ. ಹಾಜರಾದ 161 ವಿದ್ಯಾರ್ಥಿಗಳಲ್ಲಿ 105 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಮೋಘ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳ, ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಈ ಸಾಧನೆಗೆ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಯಾದ ರಶ್ಮಿತಾ ಜೈನ್, ಆಡಳಿತ ನಿರ್ದೇಶಕರಾದ ಡಾ. ಸಂಪತ್ ಕುಮಾರ್ ಹಾಗೂ ಶೈಕ್ಷಣಿಕ ನಿರ್ದೇಶಕರಾದ ಪುಷ್ಪರಾಜ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ಎಸ್ ಎಸ್ ಎಲ್ ಸಿಯಲ್ಲಿ ಶೇಕಡ 100 ಫಲಿತಾಂಶ

Article Image

ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ಎಸ್ ಎಸ್ ಎಲ್ ಸಿಯಲ್ಲಿ ಶೇಕಡ 100 ಫಲಿತಾಂಶ

ಧರ್ಮಸ್ಥಳ: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಲಭಿಸಿದ್ದು, ಒಟ್ಟು 54 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳಿಗೆ ಏ+ ಹಾಗೂ 20 ವಿದ್ಯಾರ್ಥಿಗಳಿಗೆ ಏ ಗ್ರೇಡ್ ಲಭಿಸಿದ್ದು ಒಟ್ಟಾರೆಯಾಗಿ 29 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 23 ಪ್ರಥಮ ದರ್ಜೆ, ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಅತ್ಯಧಿಕ 618 ಅಂಕಗಳೊಂದಿಗೆ ಶೇಕಡ 100 ಫಲಿತಾಂಶ ಲಭ್ಯವಾಗಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಬಹಳ ಸಂತಸ ನೀಡಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ. ಸಂತಸ ವ್ಯಕ್ತಪಡಿಸಿದ್ದಾರೆ. ಸಾಧನೆ ಮಾಡಿರುವ ಮಕ್ಕಳ ವಿವರ ಇಂತಿವೆ: ಹಂಸಿನಿ ಭಿಡೆ-618(98.9%), ಆಶಿತಾ-606(97%), ಭಾರ್ಗವಿ-604(96.6%), ಶ್ರಿವತ್ಸ ಯು.-598(95.7%), ಸುಮಿತ್ ಎಸ್.-597(95.5%), ಚಿನ್ಮಯಿ-596(95.4%), ಸುಶಾನ್-596(95.4%), ಸಮನ್ವಿ ಪಿ.-593(94.9%), ಅನ್ವಿತಾ ಹೆಬ್ಬಾರ್ ಎಮ್-586(93.8%), ಅಶ್ವಿಜ್-578(92.5%), ದೀಕ್ಷಾ-578(92.5%), ಸಾನ್ವಿ ಜೈನ್-570(91.2%), ಚಿನ್ನಮ್ಮ-569(91%), ಜೆಸ್ವಿನ್ ಕೆ. ಜೆ.-567(90.7%), ಅನಘಾ ಎಮ್.ಡಿ-558(89.3%), ಕುಶಾಲ್ ಆರಾಧ್ಯ-558(89.3%), ಅನಿಕಾ ಪಿ.-557(89.1%), ದೀಕ್ಷಾ ರೋಸ್-555(88.8%), ನಿಶಾಂತ್-547(87.5%), ಪೂರ್ವಿಕಾ ಆರ್.-547(87.5%), ಜೆಸ್ನಾ ಎಮ್. ಡಿ.-546(87.4%), ಆದಿತ್ಯಾ ಎಚ್. ಎಸ್.-544(87%), ರೇವಂತ್ ಮನೋಹರ್ ರಾವ್-543(86.9%), ಅಭಿಜ್ನಾನ್ ಎ. ಶೆಟ್ಟಿ-542(86.7%), ಅಪೇಕ್ಷಾ- 542(86.7%), ಅಶ್ವಲ್ ಹೆಬ್ಬಾರ್ ಎಮ್.-540(86.4%), ಪವಿತ್ರಾ ಜೈನ್-537 (85.9%), ಹರ್ಷಿತಾ ವಿ. ಆರ್.-533(85.3%), ನಿವೇದ್ಯಾ ಆರ್. ಬಿ.-533(85.3%).

ಮೂಡುಬಿದಿರೆ: ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್, 1 ಕೋಟಿ ರೂ. ವಿದ್ಯಾರ್ಥಿವೇತನ

Article Image

ಮೂಡುಬಿದಿರೆ: ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್, 1 ಕೋಟಿ ರೂ. ವಿದ್ಯಾರ್ಥಿವೇತನ

ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುತ್ತಿರುವ ಮೂಡುಬಿದಿರೆಯ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆಯುವ ಆರ್ಥಿಕವಾಗಿ ಹಿಂದುಳಿದಿರುವ, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಮಾರು 1 ಕೋಟಿ ರೂ ವಿದ್ಯಾರ್ಥಿವೇತನವನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಘೋಷಿಸಿದ್ದಾರೆ. ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಲು ಉದ್ದೇಶಿಸಿರುವ ಬಡ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡುವ ಉದ್ದೇಶದಿಂದ 10ನೇ ತರಗತಿಯಲ್ಲಿ 98% ಹಾಗೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿಗೆ ವಿದ್ಯಾರ್ಥಿವೇತನದ ಮೂಲಕ ಶಿಕ್ಷಣ ನೀಡಲು ಸಂಸ್ಥೆ ತೀರ್ಮಾನಿಸಿದೆ ಈ ಅವಕಾಶವನ್ನು ಪ್ರತಿಭಾವಂತ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದು. ಸಂಸ್ಥೆಯು ಪಿಯುಸಿ ಶಿಕ್ಷಣದ ಜೊತೆಗೆ ಮೆಡಿಕಲ್ ಹಾಗೂ ಉನ್ನತ ತಾಂತ್ರಿಕ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ನೀಟ್/ಜೆಇಇ/ಸಿಇಟಿ/ಸಿಎ ಮುಂತಾದ ತರಬೇತಿಯನ್ನು ಕೊಡಲು ಅತ್ಯುನ್ನತ ತರಬೇತಿ ಕೌಶಲ್ಯವನ್ನು ಪಡೆದಿರುವ ಅಧ್ಯಾಪಕ ವೃಂದವನ್ನು ಹೊಂದಿರುತ್ತದೆ. ಈ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ 20 ರಾಜ್ಯಮಟ್ಟದ ರ‍್ಯಾಂಕ್‌ಗಳಲ್ಲಿ 15 ರ‍್ಯಾಂಕ್‌ಗಳನ್ನು ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ಪಡೆದು ಅದ್ವಿತೀಯ ಸಾಧನೆಯನ್ನು ಮಾಡಿರುತ್ತಾರೆ. ಪ್ರತೀ ವರ್ಷವೂ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ AIIMS, JIPMER, BOMBAY IIT, CHENAI IIT, BMC, MMC ಸೇರುತ್ತಿರುವುದು ಸಂಸ್ಥೆಯು ನೀಡುತ್ತಿರುವ ಅತ್ಯುತ್ತಮ ತರಬೇತಿ ವ್ಯವಸ್ಥೆಗೆ ಅತ್ಯುನ್ನತ ನಿದರ್ಶನವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಬೋರ್ಡ್, ಐಸಿಎಸ್‌ಐ ಮತ್ತು ಸಿಬಿಎಸ್‌ಇ ನಡೆಸುವ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 98ಕ್ಕಿಂತ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳು ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿವೇತನದ ಮೂಲಕ ಶಿಕ್ಷಣ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೂಡುಬಿದಿರೆ ಕಲ್ಲಬೆಟ್ಟುವಿನ ಸಂಸ್ಥೆಯ ಆಡಳಿತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಸಂಸ್ಥೆಯ ವೆಬ್‌ಸೈಟ್ – www.excellentmoodbidri.in

ರಜತ ರಥೋತ್ಸವ ಮತ್ತು ಮಹಾಮಸ್ತಕಾಭಿಷೇಕ

Article Image

ರಜತ ರಥೋತ್ಸವ ಮತ್ತು ಮಹಾಮಸ್ತಕಾಭಿಷೇಕ

ಕಾರ್ಕಳ ತಾಲೂಕಿನ ಶಿರ್ಲಾಲು ಬಸದಿಯ ಭಗವಾನ್ ಶ್ರೀ ಅನಂತನಾಥ ಸ್ವಾಮಿಯ ಮತ್ತು ಮಹಾಮಾತೆ ಶ್ರಿ ಪದ್ಮಾವತಿ ದೇವಿಯ ರಜತ ರಥಯಾತ್ರಾ ಮಹೋತ್ಸವ, ಸಿದ್ಧಗಿರಿ ಕ್ಷೇತ್ರದ ಭ|| ಶ್ರೀ ಆದಿನಾಥ ಸ್ವಾಮಿ ಮತ್ತು ಭ|| ಶ್ರೀ ಭರತ ಕೇವಲೀ ಸ್ವಾಮಿ ಹಾಗೂ ಭ|| ಶ್ರೀ ಬಾಹುಬಲಿ ಕೇವಲಿ ಸ್ವಾಮಿ ಜಿನ ಬಿಂಬಗಳಿಗೆ 108 ಕಲಶಗಳಿಂದ ಅಭಿಷೇಕ ಮತ್ತು ಮಸ್ತಕಾಭಿಷೇಕ ಮಹೋತ್ಸವವು ಶ್ರವಣಬೆಳಗೊಳ ಶ್ರೀ ಜೈನ ಮಠದ ಸ್ವರ್ಗೀಯ ಪ. ಪೂ. ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪ್ರೇರಣೆಯೊಂದಿಗೆ, ಕಾರ್ಕಳ ಶ್ರೀ ಜೈನ ಮಠದ ಪ. ಪೂ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವದಲ್ಲಿ ಮತ್ತು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಭಾರತಭೂಷಣ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ಆಶೀರ್ವಚನದೊಂದಿಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ದಿನಾಂಕ 8-5-2024ನೇ ಬುಧವಾರ ಮೊದಲ್ಗೊಂಡು 10-5-2024ನೇ ಶನಿವಾರದಂದು ಸಂಪನ್ನಗೊಳ್ಳಲಿರುವುದು. ಅತಿಶಯ ಕ್ಷೇತ್ರ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯ ಪರಿಸರದಲ್ಲಿ ಭ|| ಶ್ರೀ ಆದಿನಾಥ ಸ್ವಾಮಿ ಮತ್ತು ಭ|| ಶ್ರೀ ಭರತ ಕೇವಲೀ ಸ್ವಾಮಿ ಹಾಗೂ ಭ|| ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿಗಳನ್ನು ‘ಧರ್ಮರತ್ನಾಕರ’ ಶಿರ್ಲಾಲು ದೊಡ್ಡಮನೆ ಸ್ವರ್ಗಿಯ ರತ್ನವರ್ಮ ಪೂವಣಿ ದಂಪತಿಗಳು ದಿನಾಂಕ 18-02-2013ರಲ್ಲಿ ಪ್ರತಿಷ್ಠಾಪಿಸಿದ್ದಾರೆ

ವೇಣೂರು, ಮೇ 4: ಮಹಾಮಸ್ತಕಾಭಿಷೇಕ ಸಂಪನ್ನ

Article Image

ವೇಣೂರು, ಮೇ 4: ಮಹಾಮಸ್ತಕಾಭಿಷೇಕ ಸಂಪನ್ನ

ವೇಣೂರು ಫಲ್ಗುಣಿ ತಟದಲ್ಲಿ ನೆಲೆಸಿರುವ ವಿರಾಟ ವಿರಾಗಿ ಭಗವಾನ್ ಬಾಹುಬಲಿ ಸ್ವಾಮಿಗೆ ಫೆ. 22ರಿಂದ ಆರಂಭಗೊಂಡು ಮಾ. 1ರ ವರೆಗೆ ನೆರವೇರಿದ ಮಹಾಮಸ್ತಕಾಭಿಷೇಕದ ಬಳಿಕ ಪ್ರಮುಖ ದಿನಗಳಲ್ಲಿ ನೆರವೇರುವ ಮಸ್ತಕಾಭಿಷೇಕಗಳಲ್ಲಿ ಕೊನೆಯ ಮಹಾಮಸ್ತಕಾಭಿಷೇಕವು ಶನಿವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಸ್ತಕಾಭಿಷೇಕ ಪ್ರಾರಂಭವಾಗುವ ಮೊದಲು ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಹಾಗೂ ಚಾರಿತ್ರ ಚಕ್ರವರ್ತಿ ೧೦೮ ಶಾಂತಿ ಸಾಗರ ಮುನಿಮಹಾರಾಜರ ಆಚಾರ್ಯ ಪದರೋಹಣ, ಆಚಾರ್ಯ ೧೦೮ ವಿದ್ಯಾನಂದ ಮುನಿಮಹಾರಾಜರ ಜನ್ಮ ಶತಾಬ್ಧಿ ನಿಮಿತ್ತ ವೇಣೂರು ಪಾರ್ಶ್ವನಾಥ ಬಸದಿಯಿಂದ ಕಲ್ಲುಬಸದಿವರೆಗೆ ರಜತ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ, ಪ್ರಥಮ ಕಲಶವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು. ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಪಡುಬೀಡು ಕಿನ್ಯಕ್ಕ ಅರಸ ರತ್ನಕರ ಬಲ್ಲಾಳ್, ಸತೀಶ್ ಪಡಿವಾಳ್, ಶ್ರೀಮಂದರ್ ಅರಿಗಾ ಕುಳವಳಿಕೆ ಕಡಬ, ಸಂಜಯಂತ್ ಕುಮಾರ್, ಧನಕೀರ್ತಿ ಬಲಿಪ ಕ್ರಮವಾಗಿ ವಿವಿಧ ಕಲಶ ನೆರವೇರಿಸಿದರು. ಮೂಡುಬಿದಿರೆ ಜೈನ ಮಠದ ವತಿಯಿಂದ ಅಮೆರಿಕಾದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ, ಅಷ್ಟ ಗಂಧ ಅಭಿಷೇಕ ವಹಿಸಿಕೊಂಡ ಡಾ. ವಸಂತ ಕುಮಾರಯ್ಯ ದಂಪತಿ, ಅಜಿಲ ಅರಸರು, ಪ್ರವೀಣ್ ಇಂದ್ರ, ಅಭಯ ಚಂದ್ರ ಜೈನ್, ಪುಷ್ಪರಾಜ್ ಜೈನ್, ಶಿವಪ್ರಸಾದ್ ಅಜಿಲ ಹಾಗೂ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾನಾ ಮಹಾನೀಯರನ್ನು ಸ್ವಾಮೀಜಿಯವರು ಗೌರವಿಸಿದರು. ಚಂದನ, ಸರ್ವ ಔಷಧ, ಸುಗಂಧ ಕಲಶ, ಕನಕವೃಷ್ಟಿ, ಪುಷ್ಪವೃಷ್ಟಿ ಈ ಬಾರಿಯ ಕೊನೆಯ ಮಸ್ತಕಾಭಿಷೇಕದಂದು ಹೆಚ್ಚುವರಿ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. 2036ರಲ್ಲಿ ಮುಂದಿನ ಅಭಿಷೇಕ: ವೇಣೂರಿನಲ್ಲಿ 12 ವರ್ಷಗಳ ಬಳಿಕ ನಡೆದ ತ್ಯಾಗವೀರ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸರ್ವಜನ ಶಾಂತಿಯ ಸಂದೇಶವಾಗಿ ಮೂಡಿಬಂದಿದೆ. 30 ಉಪಸಮಿತಿಗಳ ಅಚ್ಚುಕಟ್ಟಿನ ನಿರ್ವಹಣೆಯೊಂದಿಗೆ 9 ದಿನಗಳು ಇರುಳ ಬೆಳಕಲ್ಲಿ ನಡೆದ ಮಹಾಮಸ್ತಕಾಭಿಷೇಕ ಸ್ವರ್ಣ ಯುಗಕ್ಕೆ ಸಾಕ್ಷಿಯಾಗಿತ್ತು. ಬಳಿಕ ಪ್ರಮುಖ ದಿನಗಳಲ್ಲಿ ನೆರವೇರಿದ ಅಭಿಷೇಕದ ಕೊನೆಯ ಪ್ರಕ್ರಿಯೆ ಮೇ 4ರಂದು ಸಂಪನ್ನಗೊಂಡಿತು. ಮುಂದೆ ವೇಣೂರಿನ ವಿರಾಟ ವಿರಾಗಿಗೆ 2036ರಲ್ಲಿ ಮಹಾಮಸ್ತಕಾಭಿಷೇಕ ನೆರವೇರಲಿದೆ.

ನಾರಾವಿ ಬಸದಿ: ಧಾಮಸಂಪ್ರೋಕ್ಷಣಾ ಮತ್ತು ಪ್ರತಿಷ್ಠಾ ಮಹೋತ್ಸವ

Article Image

ನಾರಾವಿ ಬಸದಿ: ಧಾಮಸಂಪ್ರೋಕ್ಷಣಾ ಮತ್ತು ಪ್ರತಿಷ್ಠಾ ಮಹೋತ್ಸವ

ತಮ್ಮ ಪ್ರದೇಶದ ಮಠದ ಭಟ್ಟಾರಕರ ಅನುಮತಿ ಇಲ್ಲದೆ ಶ್ರಾವಕರು ಯಾವುದೇ ಸಂಪ್ರದಾಯ, ಪೂಜಾವಿಧಾನ, ಧಾರ್ಮಿಕ ಸಂಪ್ರದಾಯ ಬದಲಾಯಿಸಬಾರದು ಎಂದು ಮೂಡಬಿದಿರೆ ಶ್ರೀ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳವರು ಭಾನುವಾರ(ಮೇ 5) ನಾರಾವಿ ಬಸದಿಯಲ್ಲಿ ಜಿನಬಿಂಬ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು. ನಿರ್ಮಲ ಮನಸ್ಸಿನಿಂದ ದೇವರಪೂಜೆ, ಗುರುಗಳ ಸೇವೆ ಮಾಡಿ, ಸ್ವಾಧ್ಯಾಯದ ಮೂಲಕ ತಮ್ಮ ವರ್ತನೆಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು. ಪಂಚೇಂದ್ರಿಯಗಳನ್ನು ಸತ್ಕಾರ್ಯಗಳಲ್ಲಿ ಬಳಸಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು ಎಂದು ಕಾರ್ಕಳ ಶ್ರೀ ಜೈನ ಮಠದ ಪರಮ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿದರು. ಧಾರ್ಮಿಕ ಉಪನ್ಯಾಸ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳರವರು ಮಾತನಾಡಿ, ಧಾಮಸಂಪ್ರೋಕ್ಷಣೆ ಸಂದರ್ಭದಲ್ಲಿ ನಮ್ಮನ್ನು ನಾವು ಶುದ್ಧಿಕರಿಸಿಕೊಳ್ಳಬೇಕು. ಆಚಾರ್ಯರುಗಳು ಬರೆದ ಧಾರ್ಮಿಕ ಗ್ರಂಥಗಳ ಸ್ವಾಧ್ಯಾಯ ಮಾಡಿ, ಮಕ್ಕಳಿಗೂ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ ಅಹಿಂಸೆ ಮತ್ತು ತ್ಯಾಗ ಜೈನಧರ್ಮದ ವಿಶೇಷ ತತ್ವಗಳಾಗಿದ್ದು ಎಲ್ಲರೂ ಇದನ್ನು ಅನುಸರಿಸಬೇಕು. ಧರ್ಮದ ಚೌಕಟ್ಟಿನೊಳಗೆ ಪುರುಷಾರ್ಥಗಳನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ, ಮಂಗಳೂರಿನ ಪುಷ್ಪರಾಜ ಜೈನ್, ಬಂಟ್ವಾಳದ ಸುದರ್ಶನ ಜೈನ್ ಮತ್ತು ನಿವೃತ್ತ ಪ್ರಾಂಶುಪಾಲರಾದ ರಾಜವೀರ ಇಂದ್ರ ಶುಭಾಶಂಸನೆ ಮಾಡಿದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಅಧ್ಯಕ್ಷತೆ ವಹಿಸಿದ್ದರು. ರಾಜವೀರ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಧನ್ಯವಾದವಿತ್ತರು. ನಿರಂಜನ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಭವ್ಯ ಅಗ್ರೋದಕ ಮೆರವಣಿಗೆ: ಅರಸಕಟ್ಟೆಯಿಂದ ನಾರಾವಿ ಬಸದಿವರೆಗೆ ಮೂರು ಕಿ.ಮೀ. ದೂರ ನಡೆದ ಭವ್ಯ ಮೆರವಣಿಗೆಯಲ್ಲಿ 24 ತೀರ್ಥಂಕರರ ಬಿಂಬಗಳನ್ನು ಬಸದಿಗೆ ತರಲಾಯಿತು. ನಾರಾವಿ, ಹೊಸ್ಮಾರು, ರೆಂಜಾಳ, ಅಳದಂಗಡಿ, ಈದು, ನೂರಾಳಬೆಟ್ಟು ಮೊದಲಾದ 24 ಗ್ರಾಮಗಳ ಶ್ರಾವಕರು-ಶ್ರಾವಕಿಯರು ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದರು. ಬಸದಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿಯ ಪ್ರತಿಷ್ಠೆ, ಶಿಖರಾರೋಹಣ, ಭಗವಾನ್ ಚಂದ್ರನಾಥ ಸ್ವಾಮಿಯ ಪ್ರತಿಷ್ಠೆ, ಶಾಂತಿಚಕ್ರ ಆರಾಧನೆ, 24 ತೀರ್ಥಂಕರರ ಆರಾಧನೆ, ಅಭಿಷೇಕ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ರಕ್ತೇಶ್ವರಿ ದೈವದ ನೇಮ ನಡೆಯಿತು.

ನಾರಾವಿ ಬಸದಿ: ಜಿನಬಿಂಬ ಪ್ರತಿಷ್ಠಾ ಮಹೋತ್ಸವದ ಎರಡನೇ ದಿನ

Article Image

ನಾರಾವಿ ಬಸದಿ: ಜಿನಬಿಂಬ ಪ್ರತಿಷ್ಠಾ ಮಹೋತ್ಸವದ ಎರಡನೇ ದಿನ

ಬಸದಿಗೆ ಹೋಗಿ ದೇವರದರ್ಶನ ಮಾಡಿ, ವೃತ-ನಿಯಮಗಳೊಂದಿಗೆ ಜಪ, ತಪ, ಧ್ಯಾನ ಮಾಡಿದಾಗ ಆರೋಗ್ಯ ಸುಧಾರಣೆಯೊಂದಿಗೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶನಿವಾರ ನಾರಾವಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾಮಹೋತ್ಸವ ಸಂದರ್ಭ ಆಯೋಜಿಸಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾನ, ಧರ್ಮಾದಿ ಸತ್ಕಾರ್ಯಗಳಿಗೆ ಅಂತಸ್ತು, ಸಂಪತ್ತಿನ ಇತಿ-ಮಿತಿ ಇರುವುದಿಲ್ಲ. ಶ್ರಾವಕರು, ಶ್ರಾವಕಿಯರು ಹಾಗೂ ಉದಾರ ದಾನಿಗಳು ಶ್ರದ್ಧಾ, ಭಕ್ತಿಯೊಂದಿಗೆ ತನು, ಮನ, ಧನದೊಂದಿಗೆ ನೀಡಿದ ದಾನ ಮತ್ತು ಸಕ್ರಿಯ ಸಹಕಾರದಿಂದ ಬಸದಿಯು ಆಕರ್ಷಕವಾಗಿ ಮೂಡಿ ಬಂದಿದೆ. ಬಸದಿಗೆ ಬಂದಾಗ ಇಲ್ಲಿ ಸ್ವಲ್ಪ ಹೊತ್ತು ಇದ್ದು ಧ್ಯಾನ, ಪ್ರಾರ್ಥನೆ, ಜಪ-ತಪ ಮಾಡುವ ಪ್ರೇರಣೆ ಸಿಗುತ್ತದೆ. ಇಂತಹ ಪವಿತ್ರ ಶ್ರದ್ಧಾ ಕೇಂದ್ರಗಳಿಂದ ಜೈನಧರ್ಮದ ಅಹಿಂಸೆ, ತ್ಯಾಗ, ಸಂಯಮ, ತಾಳ್ಮೆ ಮೊದಲಾದ ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ಜೀವನ ನಡೆಸಲು ಸ್ಪೂರ್ತಿ, ಪ್ರೇರಣೆ ಸಿಗುತ್ತದೆ. ಜೈನರ ಪ್ರಭಾವದಿಂದ ಅನ್ಯಧರ್ಮಿಯರು ಕೂಡಾ ಮದ್ಯ, ಮಾಂಸ, ಮಧು ತ್ಯಾಗ, ರಾತ್ರಿಭೋಜನ ತ್ಯಾಗ ಮೊದಲಾದವುಗಳನ್ನು ಪಾಲಿಸಿ ಸಾತ್ವಿಕ ಜೀವನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ನಾರಾವಿ ಬಸದಿ ಅತಿಶಯ ಕ್ಷೇತ್ರವಾಗಿ ಬೆಳೆಯಲಿ, ಬೆಳಗಲಿ ಎಂದು ಹೆಗ್ಗಡೆಯವರು ಹಾರೈಸಿದರು. ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಆಚಾರ್ಯ ಪರಂಪರೆಯಿಂದ ದೇವರು, ಗುರುಗಳು ಮತ್ತು ಶಾಸ್ತ್ರದ ಮೂಲಕ ಧರ್ಮಪ್ರಭಾವನೆಯಾಗುತ್ತಿದೆ. ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬಿಂಬ ಪ್ರತಿಷ್ಠಾಪನೆ ಮಾಡಿದಾಗ ಮಂದಿರದಲ್ಲಿ ಸಾನ್ನಿಧ್ಯ ವೃದ್ಧಿಯೊಂದಿಗೆ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತದೆ, ಬೆಳಗುತ್ತದೆ ಎಂದರು. ಮೂಡಬಿದ್ರೆಯ ವಕೀಲರಾದ ಶ್ವೇತಾ ಜೈನ್, ಧಾರ್ಮಿಕ ಉಪನ್ಯಾಸ ನೀಡಿ, ಧರ್ಮದ ಮರ್ಮವನ್ನರಿತು ನಿತ್ಯವೂ ಅನುಷ್ಠಾನಗೊಳಿಸಬೇಕು. ಆತ್ಮ ಬೇರೆ, ದೇಹ ಬೇರೆ ಎಂಬ ಸತ್ಯವನ್ನರಿತು ದೇವರ ದರ್ಶನ, ಪ್ರಾರ್ಥನೆ, ಧ್ಯಾನ, ಉಪವಾಸ ಮೊದಲಾದ ವೃತ-ನಿಯಮಗಳ ಪಾಲನೆಯೊಂದಿಗೆ ಕರ್ಮನಿರ್ಜರೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಕಳದ ಹಿರಿಯ ವಕೀಲ ಎಂ. ಕೆ. ವಿಜಯಕುಮಾರ್ ಮಾತನಾಡಿ, ಬಸದಿ ಜೀರ್ಣೋದ್ಧಾರದಿಂದ ಧರ್ಮಜಾಗೃತಿಯೊಂದಿಗೆ ಧರ್ಮಪ್ರಭಾವನೆಯೂ ಆಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಜೈನಧರ್ಮ ಸಾರ್ವಕಾಲಿಕ ಧರ್ಮವಾಗಿದ್ದು, ಬಸದಿಗಳ ಜೀರ್ಣೋದ್ಧಾರದಿಂದ ಧರ್ಮಪ್ರಭಾವನೆಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮೂಡಬಿದ್ರೆಯ ನ್ಯಾಯವಾದಿ ಶ್ವೇತಾ ಜೈನ್ ಅವರನ್ನು ಅಭಿನಂದಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ವಸಂತ ಭಟ್ ನಾರಾವಿ ಉಪಸ್ಥಿತರಿದ್ದರು. ಅರವಿಂದ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದವಿತ್ತರು.

ನಿರಂಜನ ಲಹರಿ ಆಯೋಜಿಸಿರುವ ಭಾಷಣ ಸ್ಪರ್ಧೆ

Article Image

ನಿರಂಜನ ಲಹರಿ ಆಯೋಜಿಸಿರುವ ಭಾಷಣ ಸ್ಪರ್ಧೆ

ನಿರಂಜನ ಲಹರಿಯು “ಭಗವಾನ್ ಮಹಾವೀರ” ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ. ನಿಯಮಗಳು: 1. 15 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ 2. ಭಾಷಣದ ವೀಡಿಯೋ 5 ನಿಮಿಷದ ಒಳಗಿರಬೇಕು 3. ಮೊಬೈಲ್ ಅಡ್ಡಲಾಗಿ(horizontal) ಹಿಡಿದು ಚಿತ್ರೀಕರಿಸಿರಬೇಕು 4. ವೀಡಿಯೋ ಬಂದ ಕೂಡಲೇ ನಿರಂಜನ ಲಹರಿ ಯೂಟ್ಯೂಬ್ ಗೆ upload ಮಾಡಲಾಗುವುದು 5. ವೀಡಿಯೋ ಜೊತೆ ಪ್ರತ್ಯೇಕವಾಗಿ ಹೆಸರು/ ಊರು/ ನಂಬರ್ ನಮೂದಿಸಬೇಕು 6. ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಾಧಾನಕರ ಬಹುಮಾನ ಇರುತ್ತದೆ. 7. ಅತೀ ಹೆಚ್ಚು ಯೂಟ್ಯೂಬ್ ಲೈಕ್‌ಗೆ ಒಂದು ವಿಶೇಷ ಬಹುಮಾನ ಇರುತ್ತದೆ. 8. ನಿಮ್ಮ ವೀಡಿಯೋಗಳನ್ನು ಹಾಕಿ ಲಿಂಕ್ ಕೊಡಲಾಗುವುದು 9. ಲೈಕ್ ಗಾಗಿ ವೀಡಿಯೋ ಲಿಂಕ್ ಗಳನ್ನು ನೀವೇ ಪ್ರಚಾರ ಮಾಡಬೇಕು 10. ವೀಡಿಯೋಗಳನ್ನು ಕಳುಹಿಸಲು ಕೊನೆಯ ದಿನಾಂಕ - 15.05.2024 11. ಭಾಷಣವು ಕನ್ನಡ ಭಾಷೆಯಲ್ಲಿ ಮಾತ್ರ ಇರಬೇಕು ವೀಡಿಯೋ ಕಳುಹಿಸಬೇಕಾದ ವಾಟ್ಸಾಪ್ ಮತ್ತು ಟೆಲಿಗ್ರಾಂ ನಂಬರ್: 9945563529

ನಾರಾವಿ: ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ

Article Image

ನಾರಾವಿ: ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ

ಜೈನಧರ್ಮವು ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಧರ್ಮವಾಗಿದ್ದು ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬುದು ಜೈನಧರ್ಮದ ಸಾರವಾಗಿದೆ ಎಂದು ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಪೂಜ್ಯ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳವರು ಹೇಳಿದರು. ಅವರು ಶುಕ್ರವಾರ(ಮೇ 3)ನಾರಾವಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ನಿತ್ಯವೂ ಧರ್ಮದ ಅನುಷ್ಠಾನಕ್ಕೆ ಸ್ಪೂರ್ತಿ, ಪ್ರೇರಣೆ ನೀಡುತ್ತವೆ. ಅಹಿಂಸೆ ಮತ್ತು ತ್ಯಾಗವನ್ನು ಪಾಲಿಸುವವರೆಲ್ಲ ಜೈನರೇ ಆಗುತ್ತಾರೆ. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಧರ್ಮೋಪದೇಶ ನೀಡುವ ಧರ್ಮಸಭೆಯೇ ಸಮವಸರಣವಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಜೈನಧರ್ಮ ಅಪೂರ್ವ ಹಾಗೂ ಅಪಾರ ಕೊಡುಗೆ ನೀಡಿದೆ. ಕಾಲಕಾಲಕ್ಕೆ ಬಸದಿಗಳ ಜೀರ್ಣೋದ್ಧಾರ ಮತ್ತು ಧಾಮಸಂಪ್ರೋಕ್ಷಣೆಯಿಂದ ಸಾನ್ನಿಧ್ಯ ವೃದ್ಧಿಯಾಗಿ ಊರಿನಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ. ಆಧ್ಯಾತ್ಮಿಕ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿಯವರು ಹೇಳಿದರು. ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಸಮವಸರಣದ ಪ್ರತೀಕವಾದ ಬಸದಿಗಳು ನಮ್ಮನ್ನು ನಾವು ತಿದ್ದಿಕೊಂಡು ಸುಧಾರಣೆ ಮಾಡಲು ಪ್ರೇರಣೆ ನೀಡುತ್ತವೆ. ಶ್ರದ್ದಾ-ಭಕ್ತಿಯಿಂದ ನಿತ್ಯವೂ ಬಸದಿಗೆ ಹೋಗಿ ಏಕಾಗ್ರತೆಯಿಂದ ದೇವರ ದರ್ಶನ, ಜಪ, ತಪ, ಧ್ಯಾನ ಮಾಡಿದಾಗ ಆತ್ಮಕಲ್ಯಾಣವಾಗುತ್ತದೆ. ಶ್ರಾವಕರು, ಶ್ರಾವಕಿಯರು ಹಾಗೂ ದಾನಿಗಳೆಲ್ಲ ಸೇರಿ ಒಗ್ಗಟ್ಟಿನಿಂದ ಬಸದಿ ಜೀರ್ಣೋದ್ಧಾರ ಮಾಡಿದ ಬಗ್ಗೆ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ರವರು ಮಾತನಾಡಿ ಜೈನರ ಆಚಾರ-ವಿಚಾರ, ನೇರ ನಡೆ-ನುಡಿ ಹಾಗೂ ನಾಯಕತ್ವ ಗುಣದಿಂದಾಗಿ ಸಮಾಜದಲ್ಲಿ ಜೈನರಿಗೆ ವಿಶೇಷ ಮಾನ್ಯತೆ, ಗೌರವ ಇದೆ. ಜೈನರು ವೃತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಹಾಗೂ ಸಾತ್ವಿಕ ಜೀವನ ನಡೆಸುತ್ತಿದ್ದಾರೆ. ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ ಎಂದು ಅವರು ಹೇಳಿದರು. ಶಿಶುಪಾಲ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜಿರೆಯ ಮಹಾವೀರ ಜೈನ್ ಇಚಿಲಂಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು. ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜವರ್ಮ ಜೈನ್, ಆಡಳಿತ ಸಮಿತಿ ಕಾರ್ಯಾಧ್ಯಕ್ಷ ಪ್ರೇಮ್ ಕುಮಾರ್ ಹೊಸ್ಮಾರು, ಅಧ್ಯಕ್ಷ ನಿರಂಜನ ಅಜ್ರಿ, ಎಂ.ಕೆ. ಆರಿಗ ಮರೋಡಿ ಮತ್ತು ಹರ್ಷೇಂದ್ರ ಕುಮಾರ್ ನೂರಾಳಬೆಟ್ಟು ಉಪಸ್ಥಿತರಿದ್ದರು. ಬಸದಿಯಲ್ಲಿ ಇಂದ್ರ ಪ್ರತಿಷ್ಠೆ, ತೋರಣ ಮುಹೂರ್ತ, ವಿಮಾನಶುದ್ಧಿ, ವಾಸ್ತುಪೂಜೆ, ಕ್ಷೇತ್ರಪಾಲ ಪ್ರತಿಷ್ಠೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಈ ಸಂದರ್ಭದಲ್ಲಿ ಸೇವಾಕರ್ತೃಗಳನ್ನು ಮತ್ತು ದಾನಿಗಳನ್ನು ಗೌರವಿಸಲಾಯಿತು. ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ ಕುಮಾರ್ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಜೈನ ಶ್ರಾವಕ ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ಫಲಿತಾಂಶ ಪ್ರಕಟ

Article Image

ಜೈನ ಶ್ರಾವಕ ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ಫಲಿತಾಂಶ ಪ್ರಕಟ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಮಾಗಣೆ ಭ|| ೧೦೦೮ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವ ಮೇ 3 ರಿಂದ ಮೇ 5 ವರೆಗೆ ನಡೆಯಲಿದೆ. ಈ ಪ್ರಯುಕ್ತ ಜೈನ ಶ್ರಾವಕ, ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡಲಾಯಿತು. ವಿಜೇತರ ವಿವರಗಳು ಇಂತಿವೆ : 1. ಧರ್ಮನಾಥ ಸ್ವಾಮಿಯ ಸಂಗೀತ/ಭಜನೆ ಸ್ಪರ್ಧೆ ಪ್ರಥಮ ಬಹುಮಾನ : ನವೀನ್ ಪ್ರಸಾದ್ ಜಾಂಬ್ಳೆ, ಬೆಂಗಳೂರು ದ್ವಿತೀಯ ಬಹುಮಾನ : ಸರ್ವಾರ್ಥ್. ಎಸ್. ಜೈನ್ ,ವೇಣೂರು 2. "ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ" - ಪ್ರಬಂಧ ಸ್ಪರ್ಧೆ ಪ್ರಥಮ ಬಹುಮಾನ : ಅಶ್ವಿಕಾ ಜೈನ್, ನೂರಾಳ್ ಬೆಟ್ಟು ದ್ವಿತೀಯ ಬಹುಮಾನ : ನಾಗರತ್ನ ನಾಗರಾಜ್, ಬೆಂಗಳೂರು ವಿಜೇತರನ್ನು ದಿನಾಂಕ 5 ಮೇ ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು.

ವೇಣೂರು: ಶ್ರೀ ಬಾಹುಬಲಿ ಸ್ವಾಮಿಯ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕ

Article Image

ವೇಣೂರು: ಶ್ರೀ ಬಾಹುಬಲಿ ಸ್ವಾಮಿಯ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕ

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಹಸನ್ಮುಖಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ಫೆ. 22ರಿಂದ ಮಾ. 1ರ ತನಕ ಸಡಗರ, ಸಂಭ್ರಮದೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿದ್ದು, ತದನಂತರ ಮಾ. 16 ಮತ್ತು ಏ. 13ರಂದು ಮತ್ತೊಮ್ಮೆ ಮಸ್ತಕಾಭಿಷೇಕ ನಡೆದು, ಇದೀಗ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದೊಂದಿಗೆ ಇಂದು ಜರುಗಲಿದೆ.

ನಾರಾವಿ: ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

Article Image

ನಾರಾವಿ: ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಮಾಗಣೆ ಭ|| 1008 ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಮತ್ತು ನಾಡಿನ ಸಮಸ್ತ ಶ್ರೀ ಜೈನ ಮಠದ ಭಟ್ಟಾರಕರುಗಳ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಇಂದಿನಿಂದ(ಮೇ. 3) ಪ್ರಾರಂಭಗೊಂಡು ಮೇ. 5ರತನಕ ಜರುಗಲಿರುವುದು.

ಎಳನೀರು: 20ನೇ ವಾರ್ಷಿಕೋತ್ಸವ

Article Image

ಎಳನೀರು: 20ನೇ ವಾರ್ಷಿಕೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎಳನೀರು ಭ|| 1008 ಶ್ರೀ ಆದಿನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಬಿಂಬ ಪ್ರತಿಷ್ಠಾ ಮಹೋತ್ಸವದ 20ನೇ ವಾರ್ಷಿಕೋತ್ಸವವು ದಿನಾಂಕ 30-04-2024 ಮತ್ತು 01-05-2024 ರಂದು ಜರುಗಲಿದೆ. ವಿ.ಸೂ: ದಿನಾಂಕ 01-05-2024ನೇ ಬುಧವಾರ ಸಂಜೆ 7.00 ರಿಂದ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ದೆಹಲಿ: ಜಿನ ಬಸದಿ 24 ತೀರ್ಥಂಕರರ ಪಂಚ ಕಲ್ಯಾಣ-ವಿವಿಧ ಜಿನ ಬಿಂಬಗಳ ಸ್ಥಾಪನೆ

Article Image

ದೆಹಲಿ: ಜಿನ ಬಸದಿ 24 ತೀರ್ಥಂಕರರ ಪಂಚ ಕಲ್ಯಾಣ-ವಿವಿಧ ಜಿನ ಬಿಂಬಗಳ ಸ್ಥಾಪನೆ

ಮುಂಬಯಿ, ಏ.25: ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿಯಲ್ಲಿ 24 ತೀರ್ಥಂಕರರ ಪಂಚ ಕಲ್ಯಾಣವು ರಾಷ್ಟ್ರಸಂತ ೧೦೮ ಉಪಾಧ್ಯಾಯ ಗುಪ್ತಿ ಸಾಗರ ಮುನಿಮಹಾರಾಜರ ಮಾರ್ಗದರ್ಶನ, ಪಾವನ ಸಾನ್ನಿಧ್ಯದಲ್ಲಿ ಮೂಡಬಿದಿರೆ ಶ್ರೀ ದಿಗಂಬರ ಜೈನ ಮಠದ, ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಇಂದು ಜರುಗಿತು. ಮೂರು ಆಡಿ ಎತ್ತರದ ಪಂಚ ಲೋಹದ ಇಪ್ಪತ್ತನಾಲ್ಕು ತೀರ್ಥಂಕರರ ಹಾಗೂ ವಿವಿಧ ಜಿನ ಬಿಂಬಗಳ ಸ್ಥಾಪನೆ, ಮೋಕ್ಷ ಕಲ್ಯಾಣ ಪೂಜೆ, ನಂತರ ದೆಹಲಿ ವಿಶ್ವ ವಿದ್ಯಾಲಯ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಿಂದ ಮೆರವಣಿಗೆ ಮೂಲಕ ಮೂರು ಕಿ.ಮೀ ದೂರದ ಬಸದಿಗೆ ತೆರಳಿ ಬೆಳಿಗ್ಗೆಯಿಂದ ಮಧ್ಯಾಹ್ನವರೆಗೂ ದೆಹಲಿ ರಾಣಾಪತ್ ನಗರದ ಬಸದಿಯಲ್ಲಿ ಮೂರ್ತಿ ಸ್ಥಾಪನೆ ಜರುಗಿತು. ಬಳಿಕ ಧಾರ್ಮಿಕ ಸಭೆಯಲ್ಲಿ ಧರ್ಮೋಪದೇಶ ನೀಡಿದ ಮೂಡುಬಿದಿರೆ ಸ್ವಸ್ತಿಶ್ರೀ ಡಾ|| ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಜಿನ ಬಿಂಬ ಸ್ಥಾಪನೆಯಿಂದ ಆತ್ಮಕಲ್ಯಾಣ ಹಾಗೂ ಪರ ಕಲ್ಯಾಣವಾಗುವುದು, ಜನ ಸಂಸ್ಕೃತಿ ಸಂಸ್ಕಾರ ಧರ್ಮದಿಂದ ಸಾಧ್ಯ ಎಂದು ಹೇಳುತ್ತಾ, ಸುಂದರ ಜಿನಾಲಯ ಸ್ಥಾಪನೆಗೆ ಕಾರಣರಾದ ದಾನಿಗಳನ್ನು ಗೌರವಿಸಿ ಹರಸಿದರು. ರಾಷ್ಟ್ರಸಂತ ೧೦೮ ಗುಪ್ತಿ ಸಾಗರ ಮುನಿಮಹಾರಾಜರು ಮೂಡುಬಿದಿರೆ ಶ್ರೀಗಳವರಿಗೆ ಶಾಸ್ತ್ರ ಸ್ಮರಣಿಕೆ ನೀಡಿ ಹರಸಿ ಆಶೀರ್ವಾದಿಸಿದರು. ಬಳಿಕ ದೆಹಲಿ ಗ್ರೀನ್ ಪಾರ್ಕ್ ಬಸದಿಯಲ್ಲಿ ಉಪಸ್ಥಿತರಿದ್ದ ರಾಷ್ಟ್ರಸಂತ ೧೦೮ ಆಚಾರ್ಯ ಪ್ರಾಗ್ಯ ಸಾಗರ ಮುನಿಮಹಾರಾಜರು ಶ್ರೀಗಳಿಗೆ ಗೌರವಾನ್ವಿತ ಪ್ರಧಾನ ಮಂತ್ರಿಗಳಿಂದ ಏ.21 ರ ಭಗವಾನ್ ಮಹಾವೀರ ಜನ್ಮ ಕಲ್ಯಾಣದಂದು ನಿರ್ವಾಣ ವರ್ಷ 2550ರ ಅಂಗವಾಗಿ ಬಿಡುಗಡೆಗೊಳಿಸಿದ ರೂಪಾಯಿ 100ರ ನಾಣ್ಯ ಹಾಗೂ ಅಂಚೆ ಇಲಾಖೆ ಬಿಡುಗಡೆಗೊಳಿಸಿದ ಪಾವಪುರಿ ಸಿದ್ದಕ್ಷೇತ್ರ ಫಸ್ಟೇಡ್ ಕವರ್ ನೀಡಿ ಹರಸಿದರು. ಈ ಸಂದರ್ಭ ಮೂಡುಬಿದಿರೆ ಸ್ವಾಮೀಜಿಯವರು ಈ ವರ್ಷ ಪೂರ್ತಿ ಆಚಾರ್ಯ ಶಾಂತಿ ಸಾಗರ ಮುನಿಮಹಾರಾಜರ ಆಚಾರ್ಯ ಶತಾಬ್ಧಿ ವರ್ಷ ಹಾಗೂ ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಕಲ್ಯಾಣವನ್ನು ವಿವಿಧೆಡೆ ಆಚರಿಸಲು ಸಂಕಲ್ಪ ಮಾಡಿದರು.

ಮೂಡುಬಿದಿರೆ: ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ

Article Image

ಮೂಡುಬಿದಿರೆ: ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜೈನ ಸಮಾಜ ಬಾಂಧವರ ಸಹಕಾರದೊಂದಿಗೆ ಭ| ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆಯು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ವಿದ್ಯಾಗಿರಿಯ ಮೋಹಿನಿ ಅಪ್ಪಾಜಿ ನಾಯಕ್ ಸಭಾಭವನದಲ್ಲಿ ಏ.27 (ನಾಳೆ)ರಂದು ಜರಗಲಿರುವುದು.

ಇಜಿಲಂಪಾಡಿ: ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

Article Image

ಇಜಿಲಂಪಾಡಿ: ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಇಜಿಲಂಪಾಡಿ ಭಗವಾನ್ ೧೦೦೮ ಶ್ರೀ ಅನಂತನಾಥ ಸ್ವಾಮಿ ಬಸದಿಯು ಸಂಪೂರ್ಣ ಶಿಲಾಮಯವಾಗಿ ಜೀಣೋದ್ಧಾರಗೊಂಡು, ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ, ನಾಡಿನ ಎಲ್ಲಾ ಶ್ರೀ ಮಠದ ಪ.ಪೂ. ಭಟ್ಟಾರಕ ಸ್ವಾಮೀಜಿಗಳವರ ಆರ್ಶೀವಾದಗಳೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ, ದಿನಾಂಕ 26-04-2024ನೇ ಶುಕ್ರವಾರ ಮೊದಲ್ಗೊಂಡು ದಿನಾಂಕ 28-04-2024ನೇ ಭಾನುವಾರ ಪರ್ಯಂತ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿರುವುದು.

First Previous

Showing 4 of 8 pages

Next Last