ಷೋಡಶ ಭಾವನೆಗಳು
ಷೋಡಶ ಅಂದರೆ ಹದಿನಾರು. ಭಾವನೆಗಳು ಎಂದರೆ ದಿನ ನಿತ್ಯ ಪದೇ ಪದೇ ಚಿಂತಿಸುವುದು ಎಂದರ್ಥ. ಆತ್ಮೋನ್ನತಿಯ, ಆತ್ಮ ಸಂಸ್ಕಾರದ ಉತ್ತಮವಾದ ಹಂತಗಳಾದ ಕ್ರಿಯಾ ಕಲಾಪಗಳನ್ನು ವಿಚಾರ ಪೂರ್ವಕ,ಭಾವನಾ ಪೂರ್ವಕವಾಗಿ ಆರಾಧಿಸುವ ಹದಿನಾರು ರೀತಿಯ ಮಾರ್ಗೋಪಾಯಗಳೇ ಷೋಡಶ ಕಾರಣ ಭಾವನೆಗಳು ಆತ್ಮ ಕಲ್ಯಾಣಕ್ಕೆ, ಮೋಕ್ಷಕ್ಕೆ ಮತ್ತು ತೀರ್ಥಂಕರ ಪದವಿ ಪಡೆಯಲು ಷೋಡಶ ಕಾರಣ ಭಾವನೆಗಳನ್ನು ಭಾವಿಸಿ ಆರಾಧಿಸುತ್ತೇವೆ.
1. ದರ್ಶನ ವಿಶುದ್ಧಿ ಭಾವನೆ: ದರ್ಶನ ಅಂದರೆ ನಂಬಿಕೆ. ವಿಶುದ್ಧಿ ಅಂದರೆ ಪರಿಶುದ್ಧವಾದ ಭಾವನೆ. ಅಂದರೆ ಯಾರು ಪರಿಶುದ್ಧವಾದ ಭಾವನೆಗಳಿಂದ ಜೀವನದುದ್ದಕ್ಕೂ ಜೈನ ಧರ್ಮದ ತತ್ವ-ಸಿದ್ಧಾಂತ ವಿಚಾರಗಳನ್ನು ದೃಢವಾಗಿ ನಂಬಿ, ಅದರಂತೆ ನಡೆಯುತ್ತಾರೋ ಅವರು ದರ್ಶನ ವಿಶುದ್ಧಿ ಭಾವನೆ ಹೊಂದಿದವರಾಗಿದ್ದಾರೆ ನಿಜವಾದ ದೇವ, ಶಾಸ್ರ, ಗುರುಗಳಲ್ಲಿ ದೃಢವಾದ ಶ್ರದ್ಧೆಯನ್ನು ಇಡುವುದು.
2. ವಿನಯ ಸಂಪನ್ನತಾ ಭಾವನೆ :- ಅಷ್ಟ ಮದಗಳಿಂದ ದೂರ ಇದ್ದವರಲ್ಲಿ ಸಹಜವಾಗಿಯೇ ವಿನಯ ಗುಣ ಇರುತ್ತದೆ. ವಿನಯ ಗುಣವು ಮಾನವೀಯತೆಯ ಹೆಗ್ಗುರುತು. ಪ್ರತಿಯೊಂದು ಜೀವಿಯಲ್ಲಿ ಇರುವ ಆತ್ಮ ಸಮಾನವೂ, ಶ್ರೇಷ್ಠವೂ ಆಗಿದೆ. ವಿನಯದಲ್ಲಿ ಐದು ವಿಧಗಳಿವೆ. ದರ್ಶನ ವಿನಯ. ಜ್ಞಾನ ವಿನಯ, ಚಾರಿತ್ರ್ಯ ವಿನಯ, ತಪ ವಿನಯ, ಉಪಚಾರ ವಿನಯ ಇವು ನಮ್ಮ ಆತ್ಮನನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯ್ಯುತ್ತವೆ.
3. ಶೀಲವ್ರತೇಷ್ಟನತಿಚಾರ ಭಾವನೆ:- ತನ್ನ ನಡತೆಯಲ್ಲಾಗಲೀ, ವ್ರತ ಪಾಲನೆಯಲ್ಲಿ ಆಗಲೀ, ಯಾವತ್ತೂ ಒಂದಿಷ್ಟೂ ದೋಷ ಬಾರದಂತೆ ಜಾಗ್ರತೆ ವಹಿಸುವ ಭಾವನೆಯೇ ಶೀಲವ್ರತೇಷ್ಟನತಿಚಾರ ಭಾವನೆ. ಈ ಭಾವನೆಯು ನಮ್ಮನ್ನು ನಾಲ್ಕು ಕಷಾಯಗಳಿಂದ, ಪಂಚ ಪಾಪಗಳಿಂದ ದೂರವಿರಿಸುತ್ತದೆ. ಈ ಭಾವನೆಯುಳ್ಳವರು ಯಾವಾಗಲೂ ದೇವ ಪೂಜೆ, ಗುರುಗಳ ಸೇವೆ, ಸ್ವಾಧ್ಯಾಯ, ಸಂಯಮ, ತಪ, ದಾನ ಮುಂತಾದ ಧರ್ಮ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ.
4. ಅಭೀಕ್ಷ್ಣ ಜ್ಞಾನೋಪಯೋಗ ಭಾವನೆ:- ಅಭೀಕ್ಷ್ಣ ಅಂದರೆ ನಿರಂತರ. ಜ್ಞಾನೋಪಯೋಗ ಅಂದರೆ ಜ್ಞಾನದ ಆರಾಧನೆ, ಆಧ್ಯಾತ್ಮಿಕ ಜ್ಞಾನದಲ್ಲಿ ಸದಾ ಜಾಗೃತರಾಗಿರುವುದು. ಅಂದರೆ ಆತ್ಮ ಕಲ್ಯಾಣಕ್ಕೆ ಕಾರಣವಾಗುವ ವಿಚಾರಗಳ ಚಿಂತನೆಯಲ್ಲಿ ಯಾವಾಗಲೂ ನಿರತವಾಗಿರುವುದೇ ಈ ಭಾವನೆ.
5. ಸಂವೇಗ ಭಾವನೆ :- ಸಂವೇಗ ಭಾವನೆ ಎಂದರೆ ಸಂಸಾರ ದು:ಖಮಯವಿದೆ ಎಂದು ಭಾವಿಸುವುದು. ಸಂಸಾರ, ಶರೀರ ಬೋಗಗಳಲ್ಲಿ ಅನುಭವಿಸುವ ದು:ಖವನ್ನು ನೋಡಿ, ಕೇಳಿ, ತಾನೂ ಅನುಭವಿಸಿ, ಈ ಸಂಸಾರದ ಅಸಾರತೆ, ಅನಿತ್ಯತೆಗಳನ್ನು ಭಾವಿಸಿ ಭೀತಿ ಹೊಂದಿ, ಇದಕ್ಕೆ ಹೇಸಿ,ಕೊಕ್ಕರಿಸಿ, ಇವುಗಳಿಂದ ವಿರಕ್ತಿ ಹೊಂದುವುದು ಸಂವೇಗ ಭಾವನೆ.
6. ಶಕ್ತಿತ: ತ್ಯಾಗ:- ತ್ಯಾಗ ಎಂದರೆ ಬಿಟ್ಟು ಬಿಡುವುದು ಎಂದರ್ಥ. ಆತ್ಮನ ಹೊರತಾಗಿ ಉಳಿದೆಲ್ಲಾ ವಸ್ತುಗಳನ್ನು ಪರ ವಸ್ತುಗಳೆಂದು ತಿಳಿದು ತ್ಯಾಗ ಮಾಡುವುದು. ತ್ಯಾಗ ಬುದ್ಧಿ ಬರಬೇಕಾದರೆ ಮೊದಲು ದಾನ ಮಾಡಬೇಕು. ದಾನದಲ್ಲಿ ಆಹಾರ ದಾನ ಅಭಯ ದಾನ, ಔಷಧ ದಾನ, ಶಾಸ್ತ್ರ ದಾನ ಮುಖ್ಯವಾದವುಗಳು. ಈ ಪ್ರಕಾರದ ದಾನಗಳನ್ನು ಮಾಡಿ ನಂತರ ನಿಧಾನವಾಗಿ ಅಂತರಂಗ -ಬಹಿರಂಗ ಪರಿಗ್ರಹಗಳನ್ನು ತ್ಯಾಗ ಮಾಡಿ ಆತ್ಮನನ್ನು ಮೋಕ್ಷ ದೆಡೆಗೆ ಕೊಂಡೊಯ್ಯುವುದು.
7. ಶಕ್ತಿತ: ತಪ:- ಆತ್ಮನಿಗೆ ಅಂಟಿದ ಕರ್ಮಗಳು ನಾಶವಾದರೆ ಮುಕ್ತಿ. ಕರ್ಮಗಳ ನಾಶಕ್ಕೆ ತಪಸ್ಸು ಶ್ರೇಷ್ಠವಾದ ಮಾರ್ಗ. ಒಂದೇ ಬಾರಿ ಘೋರ ತಪ ಮಾಡಬೇಕಾಗಿಲ್ಲ. ನಿಧಾನವಾಗಿ ಜಪ,ಧ್ಯಾನಾದಿಗಳ ಮೂಲಕ ಶಕ್ತಿಯಿದ್ದಷ್ಟು ತಪ ಮಾಡಬೇಕು. ಶುದ್ಧಾತ್ಮನ ಚಿಂತನೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸಿಸುವುದೇ ತಪ. ಆಚಾರ್ಯ ಪರಮೇಷ್ಟಿಗಳ 36 ಗುಣಗಳಲ್ಲಿ ಹನ್ನೆರೆಡು ತಪಸ್ಸುಗಳೂ ಸೇರಿವೆ.
8. ಸಾಧು ಸಮಾಧಿ ಭಾವನೆ :-(ಮೃತ್ಯು ಮಹೋತ್ಸವ)ಮರಣ ಎಂಬುದು ಒಂದು ಭವದ ಅಂತ್ಯ. ಆಗ ನಾಶವಿಲ್ಲದ ಆತ್ಮ ಕರ್ಮ ಫಲದಿಂದ ದೊರೆತ ದೇಹವನ್ನು ತೊರೆದು ಹೋಗುತ್ತದೆ. ಅದುದರಿಂದ ಮರಣಕ್ಕೆ ಹೆದರದೆ ದು:ಖಿಸದೆ, ಸಾಧುಗಳಂತೆ, ತ್ಯಾಗಿಗಳಂತೆ, ಸಮಾಧಿ ಮರಣವನ್ನು ಸ್ವೀಕರಿಸುವುದು, ಅದಕ್ಕಾಗಿ ಸದಾ ಸಿದ್ಧವಾಗಿರುವುದು ಸಾಧು ಸಮಾಧಿ ಭಾವನೆ.
9. ವೈಯ್ಯಾವೃತ್ತಿ ಭಾವನೆ:- ಸಜ್ಜನರ ಕಷ್ಟವನ್ನು ಪರಿಹರಿಸುವ ಹಂಬಲ. ತ್ಯಾಗಿಗಳು ಅಥವಾ ಶ್ರಾವಕರು ಪೂರ್ವಾರ್ಜಿತ ಕರ್ಮಗಳ ಕಾರಣದಿಂದ ವಾತ, ಪಿತ್ಥ, ಕಫಗಳೆಂಬ ತ್ರಿದೋಷಗಳಿಂದಾಗುವ ವಿವಿಧ ರೀತಿಯ ರೋಗಗಳಿಂದ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ಸರಿಯಾದ ಸೇವೆ, ಶುಶ್ರೂಷೆಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡುವುದು.
10. ಅರ್ಹದ್ಭಕ್ತಿ ಭಾವನೆ:- ವೀತರಾಗಿಯೂ, ಸರ್ವಜ್ಞರೂ, ಹಿತೋಪದೇಶಿಗಳೂ ಆದ ಅರಹಂತ ಭಗವಂತರಲ್ಲಿ ಸದಾ ಭಕ್ತಿಯನ್ನಿಡುವುದೇ ಅರ್ಹದ್ಭಕ್ತಿ ಭಾವನೆ. ಈ ಭಾವನೆ ಮೋಕ್ಷ ಸುಖವನ್ನು ನೀಡುವುದು.
11. ಆಚಾರ್ಯ ಭಕ್ತಿ ಭಾವನೆ;- ಆಚಾರ್ಯರು 36 ಮೂಲ ಗುಣಗಳನ್ನು ಹೊಂದಿದ್ದಾರೆ. ಸದಾಚಾರದಿಂದ ಕೂಡಿರುವ, ಶ್ರೇಷ್ಠ ಗುಣಯುತರಾದ ಶಿಷ್ಯರ ಯೋಗ್ಯತೆಯನ್ನು ಪರೀಕ್ಷೆ ಮಾಡಿ, ಅವರಿಗೆ ದೀಕ್ಷೆ, ಪ್ರಾಯಶ್ಚಿತ್ತ ನೀಡುವುದರಲ್ಲಿ ಸಮರ್ಥರಾಗಿರುವ, ಶರೀರದ ಬಗ್ಗೆ ಮಮಕಾರ ತೊರೆದಿರುವ ಮುನಿಗಳು ಅಥವಾ ಆಚಾರ್ಯರಲ್ಲಿ ಭಕ್ತಿಯ ಭಾವನೆ ಹೊಂದಿರುವುದೇ ಆಚಾರ್ಯ ಭಕ್ತಿ ಭಾವನೆ
12. ಬಹುಶ್ರುತ ಭಕ್ತಿ ಭಾವನೆ;- ತ್ಯಾಗಿಗಳ, ಗುರುಗಳ ಉಪದೇಶ ಕೇಳುವುದು, ಧರ್ಮ ಗ್ರಂಥಗಳಲ್ಲಿ ಭಕ್ತಿ, ಶ್ರದ್ಧೆಯನ್ನಿಟ್ಟು ಅಧ್ಯಯನ ಮಾಡಿ ಚಿಂತನ -ಮನನ ಮಾಡುವುದು ಇತ್ಯಾದಿಗಳೆಲ್ಲವನ್ನೂ ಬಹುಶ್ರುತ ಭಕ್ತಿ ಭಾವನೆ ಎನ್ನುತ್ತೇವೆ. ಇದರಲ್ಲಿ ಶಾಸ್ತ್ರ ದಾನವೂ ಅಡಕವಾಗಿದೆ.
13. ಪ್ರವಚನ ಭಕ್ತಿ ಭಾವನೆ:-ವೀತರಾಗ ಭಗವಂತರು ಬೋಧಿಸಿದ ತತ್ವ ಸಿದ್ಧಾಂತಗಳು ಪರಮ ಸತ್ಯವಾಗಿವೆ. ಅವುಗಳು ಇಡೀ ಜಗತ್ತಿಗೆ ಕಲ್ಯಾಣಕಾರಿ ಆಗಿವೆ. ಅನೇಕಾಂತ ಸಿದ್ಧಾಂತವನ್ನು ಒಳಗೊಂಡಿರುವ ಶಾಸ್ತ್ರಗಳನ್ನು ಓದುವುದರ ಮೂಲಕ, ತಾನು ತಿಳಿದು ಇತರರಿಗೆ ಹೇಳುವುದರ ಮೂಲಕ, ಧರ್ಮಾತ್ಮರ ಪ್ರವಚನಗಳನ್ನು ಕೇಳುವುದರ ಮೂಲಕ, ದೇವ-ಶಾಸ್ತ್ರ-ಗುರುಗಳನ್ನು ಪೂಜಿಸಿ, ಗೌರವಿಸುವುದರ ಮೂಲಕ, ಧರ್ಮ ಗ್ರಂಥಗಳನ್ನು ದಾನ ಮಾಡುವುದರ ಮೂಲಕ ಪ್ರವಚನ ಭಕ್ತಿ ಭಾವನೆ ಪ್ರಕಟ ಆಗುತ್ತದೆ.
14. ಆವಶ್ಯಕ ಪರಿಹಾಣಿ ಭಾವನೆ:- ಇದು ಅತ್ಯಂತ ಅನುಷ್ಠಾನಾತ್ಮಕ ಶಬ್ಧ. ಎಲ್ಲವನ್ನೂ ಕೇಳಬಹುದು, ಓದಬಹುದು, ಅದನ್ನು ಆಚರಣೆಯ ರೂಪದಲ್ಲಿ ನಮ್ಮ ಆತ್ಮನಲ್ಲಿ ಪ್ರಯೋಗ ಮಾಡಲಿಕ್ಕೋಸ್ಕರ ಹಲವಾರು ವಿಧಿ, ವಿಧಾನಗಳಿವೆ. ತ್ಯಾಗಿಗಳು ಮತ್ತು ಶ್ರಾವಕ/ ಶ್ರಾವಕಿಯರು ತಮ್ಮ ದಿನಚರಿಯನ್ನು ತಪ್ಪದೇ ನಿರ್ವಹಿಸುವುದು ಆವಶ್ಯಕ ಪರಿಹಾಣಿ ಭಾವನೆ. ತಮ್ಮ ಆತ್ಮ ಚಿಂತನ ಹಿತಕ್ಕೆ ಪೂರಕವಾದ ಸಾಮಾಯಿಕ, ಸ್ತವನ, ವಂದನ, ಪ್ರತಿಕ್ರಮಣ, ಪ್ರತ್ಯಾಖ್ಯಾನ, ಕಾಯೋತ್ಸರ್ಗ, ಮೊದಲಾದ ಕ್ರಿಯೆಗಳನ್ನು ಮಾಡುತ್ತಾ ಮುನಿಗಳೂ, ಶ್ರಾವಕರು ಷಟ್ಕರ್ಮಗಳನ್ನು ಮಾಡುತ್ತಾ ತಮ್ಮ ಆವಶ್ಯಕ ಕ್ರಿಯೆಗಳನ್ನು ಮಾಡುವುದೇ ಆವಶ್ಯಕ ಪರಿಹಾಣಿ ಭಾವನೆ.
15. ಮಾರ್ಗ ಪ್ರಭಾವನಾ ಭಾವನೆ:- ಕರ್ಮ ಫಲದಿಂದ ಬಂದ ಸಂಸಾರ ನಶ್ವರವಾದುದು. ಧರ್ಮಮಾರ್ಗದಿಂದ ಪಡೆಯುವ ಮೋಕ್ಷವು ಶಾಶ್ವತವಾದುದು. ಜೀವಿಯನ್ನು ವಿನಾಶದತ್ತ ಒಯ್ಯುವ ಕ್ರೋಧಾದಿ ಕಷಾಯಗಳನ್ನು ದೂರ ಮಾಡಲು ಹಾಗೂ ಧರ್ಮ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುವುದೇ ಮಾರ್ಗಪ್ರಭಾವನಾ ಭಾವನೆಯಾಗಿದೆ. ಇತರರನ್ನು ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾಡುವುದು, ದೇವ, ಶಾಸ್ತ್ರ, ಗುರುಗಳನ್ನು ಪೂಜಿಸುವುದು, ಜಿನಾಲಯಗಳನ್ನು ಕಟ್ಟಿಸಿ, ಜಿನಬಿಂಬಗಳನ್ನು ಪ್ರತಿಷ್ಠಾಪಿಸಿ, ಪಂಚಕಲ್ಯಾಣಗಳನ್ನು ಮಾಡುವುದು, ಮಾಡಿಸುವುದು, ಚತುರ್ವಿಧ ದಾನಗಳನ್ನು ಮಾಡುವುದು ಇತ್ಯಾದಿಗಳು ಮಾರ್ಗಪ್ರಭಾವನಾ ಭಾವನೆಯ ಕ್ರಿಯಾ ರೂಪಗಳಾಗಿವೆ.
16. ಪ್ರವಚನ ವತ್ಸಲತ್ವ ಭಾವನೆ:- ಸದಾ ಧರ್ಮ ಮಾರ್ಗದಲ್ಲಿ ನಡೆಯುವ ಮುನಿಗಳು, ಆರ್ಯಿಕೆಯರು, ಧರ್ಮಾತ್ಮರಾದ ಶ್ರಾವಕ/ ಶ್ರಾವಕಿಯರಲ್ಲಿ ಪ್ರೀತಿಯನ್ನು ಇಡುವುದೇ ಪ್ರವಚನ ವತ್ಸಲತ್ವ ಭಾವನೆ. ತ್ಯಾಗಿಗಳು ಮತ್ತು ಸಮಾಜ ಧರ್ಮ ರಥಕ್ಕೆ ಎರಡು ಚಕ್ರಗಳಿದ್ದಂತೆ. ಒಂದು ಚಕ್ರ ಕೆಟ್ಟು ಹೋದರೂ ಚಕ್ರ ನಡೆಯುವುದಿಲ್ಲ.ಎರಡೂ ಜೊತೆಯಲ್ಲಿರಬೇಕು.
ಬಂಧುಗಳೇ, ಈ ರೀತಿಯಾಗಿ ಜೈನ ಧರ್ಮದಲ್ಲಿ ಷೋಡಶ ಭಾವನೆಗಳಿಗೆ ವಿಶೇಷವಾದ ಮಹತ್ವವಿದೆ. ಯಾವ ಜೀವಿ ತನ್ನ ಪೂರ್ವ ಜನ್ಮಗಳಲ್ಲಿ ಶ್ರದ್ಧೆಯಿಂದ ಷೋಡಶ ಕಾರಣ ಭಾವನೆಗಳನ್ನು ಚಿಂತಿಸುತ್ತಿರುವುದೋ ಅಂತಹ ಜೀವನಿಗೆ ಮಾತ್ರ ತೀರ್ಥಂಕರ ಎಂಬ ನಾಮ ಕರ್ಮದ ಬಂಧ ಆಗುತ್ತದೆ.ಅಂತಹ ವಿಶೇಷ ಶಕ್ತಿಯುಳ್ಳ ಷೋಡಶ ಭಾವನೆಗಳನ್ನು ಪ್ರತಿಯೊಬ್ಬರೂ ಅವಶ್ಯವಾಗಿ ತಿಳಿದಿರಬೇಕು. ಆದುದರಿಂದ ಪ್ರತಿಯೊಬ್ಬರೂ ಈ ಭಾವನೆಗಳನ್ನು ಭಾವಿಸಿಕೊಂಡು ಆತ್ಮನನ್ನು ಪರಮಾತ್ಮನನ್ನಾಗಿಸುವಲ್ಲಿ ಮುಂದಡಿಯಿಡೋಣ.
ಮಾಲತಿ ವಸಂತರಾಜ್, ಕಾರ್ಕಳ