ವೇಣೂರು: ಬಾಹುಬಲಿ ಸಭಾಭವನದಲ್ಲಿ ಸಾಮೂಹಿಕ ವೃತೋಪದೇಶ
ಉಜಿರೆ: ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯಂ ಎಂಬ ರತ್ನತ್ರಯ ಧರ್ಮದ ಪಾಲನೆಯೊಂದಿಗೆ ರಾಗ-ದ್ವೇಷ ರಹಿತನಾದ ವೀತರಾಗ ಭಗವಂತನ ಶ್ರದ್ಧಾ-ಭಕ್ತಿಯ ಧ್ಯಾನದಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ವೇಣೂರಿನಲ್ಲಿ ಬಾಹುಬಲಿ ಸಭಾಭವನದಲ್ಲಿ ಬಾಹುಬಲಿ ಯುವಜನ ಸಂಘ, ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿ ಹಾಗೂ ಬ್ರಾಹ್ಮಿ ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಸಾಮೂಹಿಕ ವೃತೋಪದೇಶ ಸಮಾರಂಭದಲ್ಲಿ 53 ಮಂದಿ ಬಾಲಕರು ಮತ್ತು ಬಾಲಕಿಯರಗೆ ವೃತೋಪದೇಶ ನೀಡಿ ಆಶೀರ್ವದಿಸಿದರು. ವೃತ ಸ್ವೀಕಾರದಿಂದ ವರ್ತನೆಗಳ ಪರಿವರ್ತನೆ ಹಾಗೂ ಸುಧಾರಣೆಯಾಗುತ್ತದೆ. ಮನ, ವಚನ, ಕಾಯದಿಂದ ಪರಿಶುದ್ಧರಾಗಿ ದೇವರು, ಗುರುಗಳು ಮತ್ತು ಶಾಸ್ತçದಲ್ಲಿ ಅಚಲ ನಂಬಿಕೆ ಇಟ್ಟು ನಿತ್ಯವೂ ಜಪ, ತಪ, ಧ್ಯಾನದ ಮೂಲಕ ಆತ್ಮನಿಗಂಟಿದ ಸಕಲ ಪಾಪ ಕರ್ಮಗಳ ಕೊಳೆ ಕಳೆದುಕೊಂಡಾಗ ಮೋಕ್ಷ ಪ್ರಾಫ್ತಿಯಾಗುತ್ತದೆ. ನಿತ್ಯವೂ ಪಂಚಾಣುವೃತಗಳ ಪಾಲನೆ ಮಾಡಬೇಕು. ನೀರನ್ನು ಸೋಸಿ ಕುಡಿಯಬೇಕು ಹಾಗೂ ರಾತ್ರಿ ಭೋಜನ ತ್ಯಾಗ ಮಾಡಿ “ಬದುಕು ಮತ್ತು ಬದುಕಲು ಬಿಡು” ಎಂಬ ತತ್ವದೊಂದಿಗೆ ಸಾತ್ವಿಕ ಜೀವನ ನಡೆಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಜನಿವಾರ ಎಂಬುದು ರತ್ನತ್ರಯ ಧರ್ಮ ಧಾರಣೆಯ ಸಂಕೇತ. ಬೀಗದ ಕೀ ಹಾಕಲು ಅಥವಾ ಬೆನ್ನು ತುರಿಸಲು ಅದನ್ನು ಬಳಸಬಾರದು ಎಂದು ಅವರು ಕಿವಿಮಾತು ಹೇಳಿದರು. ಮಾತಾ-ಪಿತರನ್ನು ಹಾಗೂ ಗುರು-ಹಿರಿಯರನ್ನು ಗೌರವಿಸಿ ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದೊಂದಿಗೆ ಆದರ್ಶ ಜೀವನ ನಡೆಸಬೇಕು ಎಂದು ಸ್ವಾಮೀಜಿ ಹೇಳಿದರು. ಎಲ್ಲರಿಗೂ ಜನಿವಾರ ವಿತರಿಸಿ, ಸಾಮೂಹಿಕವಾಗಿ ಪಂಚನಮಸ್ಕಾರ ಮಂತ್ರ ಪಠಣ ನಡೆಸಲಾಯಿತು.