ಮರುಕಳಿಸಿದ ಹಂತೂರಿನ ಗತವೈಭವ: ಸರ್ವಧರ್ಮ ಸಮನ್ವಯತೆಯ ಕ್ಷೇತ್ರ
ಮೂಡಿಗೆರೆ, ಮಾ. 22: ಹೊಯ್ಸಳ ಸಾಮ್ರಾಜ್ಯದ ನಾಡದ ಹಂತೂರು ವೈಭವದಿಂದ ಮೆರೆದ ನಾಡಾಗಿತ್ತು, ಶಿಲ್ಪಕಲೆಗೆ ಹೆಸರಾಗಿತ್ತು, ಹೊಯ್ಸಳ ಸಾಮ್ರಾಜ್ಯದ ಉಗಮ ಸ್ಥಾನ ಸಮೀಪದ ಅಂಗಡಿ ಗ್ರಾಮವೇ ಆಗಿತ್ತು, ಅಹಿಂಸಾ ವೈಭವದಿಂದ ಮೆರೆದ ನಾಡು, ಕಾಲಚಕ್ರಕ್ಕೆ ಸಿಲುಕಿ ಅವನತಿಯಾಯಿತು, ಸರ್ವಧರ್ಮ ಜನರ ಸಹಕಾರ, ಧಾರ್ಮಿಕ ಮನೋಭಾವ, ಶಾಂತಿ ಅಹಿಂಸೆ ಫಲವಾಗಿ ಇಂದು ಶಿಲ್ಪಕಲಾ ಬಸದಿಯ ಪುನರ್ ನಿರ್ಮಾಣದಿಂದ ಈ ಹಿಂದಿನ ಗತವೈಭವ ಮರುಕಳಿಸಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹೇಳಿದರು.
ಅವರಿಂದು ಹಂತೂರಿನ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಧಾಮಸಂಪ್ರೋಕ್ಷಣಾಪೂರ್ವಕ ಪಂಚಕಲ್ಯಾಣ ಮಹೋತ್ಸವ ಸಹಿತ ಮಾನಸ್ತಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಲ್ಲಿನ ಜನ, ಧರ್ಮ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದು, ಯಾವುದೇ ತಪ್ಪು ಒಪ್ಪುಗಳಿಗೆ ಜಟ್ಟಿಂಗರಾಯನ ಆಶ್ರಯಿಸುತ್ತಾರೆ. ಇಂತಹ ಧರ್ಮಭೂಮಿಯಲ್ಲಿ ಬಿಟ್ಟಿದೇವ, ಶಾಂತಲೆ, ಹರಿಯಲೇ, ಶಿಲ್ಪಕಲಾ ಬಸದಿ ಕಟ್ಟಿಸಿದರು, ಈ ಬಸದಿ ಸಂರಕ್ಷಣೆಯಲ್ಲಿ ಸ್ಥಳೀಯ ಗ್ರಾಮಸ್ಥರ ಕೊಡುಗೆ ಅಪಾರ. ಸ್ಥಳೀಯ ಜನರು ಹಾಗೂ ಕಳಸ ಭಾಗದ 8 ಸೀಮೆಯ ಜನರ ಸಹಕಾರದಿಂದ ಈ ಬಸದಿ ಜೀರ್ಣೋದ್ಧಾರಗೊಂಡಿದೆ ಎಂದರು. ಇಲ್ಲಿಯ ಜನ ಶ್ರೀಮಂತಿಕೆ ಜನರು ಇಲ್ಲಿನ ಪದ್ಮಾವತಿ ಮೂರ್ತಿ ಮನಮೋಹಕವಾಗಿದೆ. ಈ ಗತ ವೈಭವಕ್ಕೆ ಜನಸಾಗರವೇ ಹರಿದು ಬರುತ್ತಿದೆ ಎಂದು ಹೇಳಿದರು. ಬಳಿಕ ಕಂಬದಹಳ್ಳಿ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೆಚ್.ಏನ್.ಸುಬ್ಬೆ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂಡಿಗೆರೆ ಹಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾನಾಗರಾಜ್, ಮಾಜಿ ಶಾಸಕ ಬಿ. ಬಿ. ನಿಂಗಯ್ಯ, ಅಶೋಕ್ ಗೌಡ, ಕೆ. ಸಿ. ಧರಣೇಂದ್ರಯ್ಯ, ವಿಮಲ್ ತಾಳಿಕೋಟೆ, ಶ್ರೀಪಾಲಯ್ಯ, ಎಚ್. ಕೆ. ಸುದರ್ಶನ್, ಪ್ರಶಾಂತ್ ಚಿತ್ರಗುತ್ತಿ, ತೇಜು ಕುಮಾರ್ ಕಟೋರಿಯ, ಪಾಶ್ವನಾಥ, ಜಿ. ಬಿ. ಸನ್ಮತಿ ಕುಮಾರ್, ಶೈಲಾ ಹರೀಶ್, ಭರತ್‌ರಾಜು, ಎಳನೀರು ಕೀರ್ತಿ ಜೈನ್, ಬಿ. ಎಲ್. ಜಿನರಾಜ ಇಂದ್ರ, ಬ್ರಹ್ಮಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ಏಳಿಗೆಗೆ ಸಹಕರಿಸಿದ ಸ್ಥಳೀಯರನ್ನು, ಹಲವಾರು ಗಣ್ಯರನ್ನು ಸನ್ಮಾನಿಸಲಾಯಿತು. ಹೊರನಾಡು ಅರ್ಕಕೀರ್ತಿರವರು ಪ್ರಾರ್ಥಿಸಿದರು. ಎಚ್. ಸಿ. ಅಣ್ಣಯ್ಯ ಸ್ವಾಗತಿಸಿದರು. ಪ್ರದೀಪ್ ಕುಮಾರ್ ತಡಪಾಲು ಪ್ರಾಸ್ತಾವಿಕ ನುಡಿಗಳನ್ನಾಡಿದರು.
-ಜೆ. ರಂಗನಾಥ, ತುಮಕೂರು