ರಾಜ್ಯ ಬಜೆಟ್‌ನಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನುದಾನ ಮೀಸಲಿಡುವಂತೆ ಸಚಿವ ಡಿ. ಸುಧಾಕರ್ ಅವರಿಂದ ಮನವಿ
ಕ್ರಿ.ಪೂ. 3ನೇ ಶತಮಾನದಿಂದ ಜೈನ ಧರ್ಮವು ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆಗಳನ್ನು ನಾಡಿಗೆ ನೀಡಿದ್ದು, ಕರ್ನಾಟಕ ರಾಜ್ಯವನ್ನು ಶ್ರೀಮಂತಗೊಳಿಸಿದೆ. ಪ್ರಸ್ತುತ ರಾಜ್ಯದಲ್ಲಿ 25-30 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಜೈನ ಸಮುದಾಯವು ಆರ್ಥಿಕವಾಗಿ ಹಿಂದುಳಿದಿರುತ್ತದೆ. ಕರ್ನಾಟಕದಾದ್ಯಂತ ಜೈನ ಸಮುದಾಯಕ್ಕೆ ಸೇರಿದ ಬಸದಿಗಳು, ಸ್ಮಾರಕಗಳು ತುಂಬಾ ಶಿಥಿಲಾವಸ್ಥೆಯಲ್ಲಿದ್ದು, ಅವುಗಳ ಜೀರ್ಣೋದ್ದಾರ ಆಗಬೇಕಿದೆ. ಕರುನಾಡಿನ ಇತಿಹಾಸ ಮತ್ತು ಸಾಹಿತ್ಯದ ಪುಟಗಳಲ್ಲಿ ಆನೇಕ ರಾಜರು, ಸಾಮಂತರು ಮತ್ತು ದಂಡನಾಯಕರ ಆಳ್ವಿಕೆಯಲ್ಲಿ ಜೈನ ಧರ್ಮವು ಕನ್ನಡ ನಾಡಿಗೆ ಅತ್ಯಮೂಲ್ಯವಾದ ಕಲೆ ಮತ್ತು ಸಾಹಿತ್ಯಗಳ ಮೂಲಕ ಅಪಾರ ಕೊಡುಗೆಯನ್ನು ನೀಡಿದೆ. ಆದ್ದರಿಂದ, ಜೈನ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ 2024-25ನೇ ಸಾಲಿನ ಆಯವ್ಯಯದಲ್ಲಿ "ಜೈನ ಅಭಿವೃದ್ಧಿ ನಿಗಮ"ವನ್ನು ಸ್ಥಾಪಿಸಲು ಘೋಷಣೆ ಮಾಡಿ ರೂ. 100 ಕೋಟಿಗಳ ಅನುದಾನವನ್ನು ಮೀಸಲಿಡಬೇಕೆಂದು ಹಾಗೂ ಶ್ರೀಕ್ಷೇತ್ರ ಶ್ರವಣಬೆಳಗೊಳವನ್ನು ಸಾಂಸ್ಕೃತಿಕ ಪಾರಂಪರಿಕ ನಗರವನ್ನಾಗಿ ಘೋಷಣೆ ಮಾಡಬೇಕೆಂದು ಜೈನ ಸಮುದಾಯದ ಪರವಾಗಿ ಕರ್ನಾಟಕ ಸರಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿ. ಸುಧಾಕರ್ ಅವರು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿಯನ್ನು ಜ. 31ರಂದು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀ ಮಠದ ವತಿಯಿಂದ ರಾಜೇಶ ಖನ್ನಾ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಅಶ್ವಿತ್ ಜೈನ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿಕಟಪೂರ್ವ ನಿರ್ದೇಶಕ ಸುರೇಶ ತಂಗಾ, ಯೋಜನೆ ಮತ್ತು ಸಾಂಖ್ಯಿಕ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅಜಿತ್ ಮುರಗುಂಡೆ, ಬೆಳಗಾವಿ ಜೈನ ಸಮಾಜದ ಮುಖಂಡರಾದ ನೇಮಿನಾಥ ಚೌಗಲೆ ಉಪಸ್ಥಿತರಿದ್ದರು.