ದತ್ತಿನಿಧಿ ಪ್ರಶಸ್ತಿ ಪ್ರಧಾನ
2023ನೇ ಸಾಲಿನ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಜೈನ ಮಠ ಶ್ರವಣಬೆಳಗೊಳ ದತ್ತಿನಿಧಿ ಪ್ರಶಸ್ತಿ”ಯನ್ನು ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ವಿದ್ಯಾರ್ಥಿನಿ ಪ್ರೀತಿ ಸುನಿಲ್ ವೈಗುಡೆ, ಭೋಜ್, ಚಿಕ್ಕೋಡಿ ತಾ|| ಇವರಿಗೆ ನೀಡಲಾಯಿತು. ಧಾರ್ಮಿಕ ಚಿಂತಕ, ಉಪನ್ಯಾಸಕ, ಮಹಾವೀರ್ ಜೈನ್ ಇಚಿಲಂಪಾಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ಇವರು, ಪ್ರಶಸ್ತಿ ಪ್ರಧಾನ ಮಾಡಿದರು.
ಅವರು ಕಾರ್ಕಳದ ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನುದ್ಧೇಶಿಸಿ ಮಾತನಾಡುತ್ತಾ, ಉತ್ತಮ ‘ಮಾರ್ಕ್ಸ್’ ಗಳಿಸಿದಲ್ಲಿ ಉನ್ನತ ಉದ್ಯೋಗ ಸಿಗಬಹುದು. 'ರಿಮಾರ್ಕ್ಸ್’ ಇಲ್ಲದ ರೀತಿಯಲ್ಲಿ ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಬೇಕಾದರೆ, ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕಾರ ಬೇಕಾಗಿದೆ. ಇಂತಹ ಮೌಲ್ಯಯುತ ಸಂಸ್ಕಾರವು, ಮಾತೃಶ್ರೀಯವರು ನಡೆಸುತ್ತಿರುವ ಆಶ್ರಮದಿಂದ ಸಿಗುತ್ತಿರುವುದು ಶ್ಲಾಘನೀಯವಾಗಿದೆ. ಎಂದು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀಯುತರನ್ನು ಶಾಲು, ಹಾರ ಹಾಕಿ, ಫಲ-ಪುಷ್ಪ ನೀಡಿ ಗೌರವಿಸಲಾಯಿತು. ಆಶ್ರಮದಲ್ಲಿ ಶೈಕ್ಷಣಿಕವಾಗಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ, ಸಂಸ್ಥೆಯ ಅಧ್ಯಕ್ಷರಾದ ಹೇಮಾವತಿ ಅಮ್ಮನವರು ಕೊಡಮಾಡಿದ ಅಭಿನಂದನಾ ಪತ್ರ ಮತ್ತು ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಸಮಾರಂಭದಲ್ಲಿ ಮಾಜಿ ರೋಟರಿ ಗವರ್ನರ್, ಡಾ|| ಭರತೇಶ್ ಜೈನ್, ಕಾರ್ಯದರ್ಶಿ ಶಿಶುಪಾಲ್ ಪೂವಣಿ, ಧರ್ಮಸ್ಥಳ, ಟ್ರಸ್ಟಿಗಳಾದ ಸುಮಾಲಿನಿ, ಮಾಲತಿ, ಜಯಲಕ್ಷ್ಮೀ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ, ಕಾರ್ಕಳ ಶ್ರೀ ಜೈನ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬ ಇವರು ಆಶ್ರಮದ ಅಭಿವೃದ್ಧಿ ನಿಧಿಗಾಗಿ ರೂ.1,11,111/-ರ (ಒಂದು ಲಕ್ಷದ, ಹನ್ನೊಂದು ಸಾವಿರದ, ನೂರ ಹನ್ನೊಂದು) ಚಕ್ ನ್ನು ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. 10 ದಿವಸವೂ ಅಷ್ಟವಿಧಾರ್ಚನೆ, ದಶಲಕ್ಷಣ ಪೂಜೆ, ಪದ್ಮಾವತಿ ಅಮ್ಮನವರ ಪೂಜೆ, ಭಜನೆ, ಗಣ್ಯರಿಂದ ಹಾಗೂ ವಿದ್ಯಾರ್ಥಿನಿಯರಿಂದ ಧಾರ್ಮಿಕ ಪ್ರವಚನವನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಶ್ರಾವಕ, ಶ್ರಾವಿಕೆಯರು ಪೂಜೆಯಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು.
ವರದಿ : ಶಿಶುಪಾಲ್ ಪೂವಣಿ, ಧರ್ಮಸ್ಥಳ