Article Image

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ- ಸಮಾಲೋಚನಾ ಸಭೆ

Article Image

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ- ಸಮಾಲೋಚನಾ ಸಭೆ

ಬೆಂಗಳೂರು ಕೇಂದ್ರ ಕಚೇರಿಯಲ್ಲಿ ರಾಜ್ಯದ ಜೈನ ಸಮುದಾಯದ ಕುಂದು ಕೊರತೆಗಳ ಬಗ್ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ನಿಸಾರ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳಜೈನ್ ರವರ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶೇಕ್ ಲತಿಫ್ ರವರ ಉಪಸ್ಥಿತಿಯಲ್ಲಿ ಇಂದು (ಜು. 21) ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಸಮಾಜದ ಪ್ರಮುಖರು ಹಾಗೂ ಡಾ. ಕೆ ಜಯಕೀರ್ತಿ ಜೈನ್ ಧರ್ಮಸ್ಥಳ, ಧನ ಕೀರ್ತಿ ಶೆಟ್ಟಿ ಧರ್ಮಸ್ಥಳ, ಮಹಾವೀರ್ ಜೈನ್ ದೆಪ್ಪುನಿ ಮುಂತಾದವರು ಭಾಗವಹಿಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರಮುಖವಾಗಿ ತಸ್ತಿಕ್ ಕೊಡುತ್ತಿರುವ ಬಸದಿಗಳಿಗೆ ಸಹಾಯಕ ಪುರೋಹಿತರಿಗೂ ಗೌರವಧನ ನೀಡಬೇಕು, ಸ್ತ್ರೀ ಶಕ್ತಿ ಗುಂಪುಗಳಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಕೊಡಬೇಕು, ಆಯೋಗದ ಕಚೇರಿಗಳಲ್ಲಿ ಸಮಾಜದವರಿಗೆ ಉದ್ಯೋಗ ಅವಕಾಶಗಳನ್ನು ನೀಡಬೇಕು, ಬಸದಿಗಳ ದಾಖಲೆಗಳನ್ನು ಸರಿಪಡಿಸಲು ಸಹಕರಿಸಬೇಕು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮುಂತಾದ ಹಲವಾರು ವಿಷಯಗಳನ್ನು ಅಧ್ಯಕ್ಷರ ಗಮನಕ್ಕೆ ತಂದು ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಸಲಾಯಿತು.

ಹೇಮಾವತಿ ವೀ. ಹೆಗ್ಗಡೆಯವರಿಗೆÀ ಗೌರವ ಡಾಕ್ಟರೇಟ್ ಪ್ರದಾನ

Article Image

ಹೇಮಾವತಿ ವೀ. ಹೆಗ್ಗಡೆಯವರಿಗೆÀ ಗೌರವ ಡಾಕ್ಟರೇಟ್ ಪ್ರದಾನ

ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನವಿಕಾಸ’ ಕಾರ್ಯಕ್ರಮದ ಅಧ್ಯಕ್ಷರಾಗಿ ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವಾ ಚಟುವಟಿಕೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಜಾಗತಿಕ ಮನ್ನಣೆ ಪಡೆದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯಾದ ‘ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಡನ್‌ಸ್ಟರ್ ಬ್ಯುಸಿನೆಸ್ ಸ್ಕೂಲ್’ ಇವರು ‘ಗೌರವ ಡಾಕ್ಟರೇಟ್’ ಪದವಿಯನ್ನು ನೀಡಿ ಗೌರವಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ರಾಜ್ಯಮಟ್ಟದ ಪುನಶ್ಚೇತನಾ ಕಾರ್ಯಾಗಾರದಲ್ಲಿ ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷರಾದ ಫಿಲಿಪ್ ಥೆವೆನೋಟ್‌ರವರು ಆನ್‌ಲೈನ್ ಮೂಲಕ ಪದವಿಯನ್ನು ಪ್ರಕಟಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಪರವಾಗಿ ಅವಿನಾಶ್ ಗುಪ್ತಾರವರು ಗೌರವ ಡಾಕ್ಟರೇಟ್ ಪದವಿಯನ್ನು ಧರ್ಮಸ್ಥಳದಲ್ಲಿ ಪ್ರದಾನಿಸಿದರು. ಈ ಸಂದರ್ಭದಲ್ಲಿ ಅವಿನಾಶ್ ಗುಪ್ತಾರವರು ಮಾತಾನಾಡುತ್ತಾ ‘ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರನ್ನು ಗೌರವಿಸುವ ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳುವುದು ನಮ್ಮ ಸಂಸ್ಥೆಗೆ ಹೆಮ್ಮೆ ಹಾಗೂ ಧನ್ಯತೆಯ ಕ್ಷಣವಾಗಿದೆ. ನಾವಿಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿಲ್ಲ. ಬದಲಾಗಿ ಅಸಂಖ್ಯಾತ ಜನರ ಬದುಕಿನಲ್ಲಿ ಬೆಳಕಾಗಿ, ಅವರ ಜೀವನವನ್ನೇ ಧನ್ಯಗೊಳಿಸಿದ ಮಹೋನ್ನತ ಚೇತನವೊಂದರ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ. ಅಪರೂಪಕ್ಕೊಮ್ಮೆ ನಮಗೆ ಇಂತಹ ಅಸಾಧಾರಣ ವ್ಯಕ್ತಿಗಳು ಸಿಗುತ್ತಾರೆ. ಇವರು ನಮಗೆ ಅತ್ಯುನ್ನತವಾದ ಜ್ಞಾನ ಅಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ, ಬದಲಾಗಿ ಮಾನವನ ಬದುಕನ್ನು ಸುಧಾರಿಸುವ ಶಕ್ತಿ ಇದೆ ಎಂಬುದನ್ನು ನೆನಪಿಸುತ್ತಾರೆ. ಅಂತಹ ಅಸಾಧಾರಣ ವ್ಯಕ್ತಿತ್ವವೇ ಹೇಮಾವತಿ ವೀ. ಹೆಗ್ಗಡೆಯವರು. ಕಳೆದ ನಾಲ್ಕು ದಶಕಗಳಿಂದ ಗ್ರಾಮೀಣ ಮಟ್ಟದಲ್ಲಿ ಸುಸ್ಥಿರವಾದ ಸಾಮಾಜಿಕ ಪರಿವರ್ತನೆಯನ್ನು ನಿರಂತರವಾಗಿ ಹೇಗೆ ತರಬಹುದು ಎಂಬುವುದನ್ನು ಮಾತೃಶ್ರೀಯವರು ಅತ್ಯಂತ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ. ಜಗತ್ತು ಮಹಿಳಾ ಸಬಲೀಕರಣ, ಆರ್ಥಿಕತೆ, ಸಾಮಾಜಿಕ ಉದ್ಯಮಶೀಲತೆ ಮತ್ತು ಸಮಗ್ರ ಅಭಿವೃದ್ಧಿಯಂತಹ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ದಶಕಗಳ ಹಿಂದೆಯೆ ರಾಜ್ಯದಾದ್ಯಂತ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಇವರು ಕೆಲಸವನ್ನು ಮಾಡಿದ್ದಾರೆ. ಇವರ ಉದಾತ್ತ ಆದರ್ಶಗಳಿಗೆ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಸಾಕ್ಷಿಯಾಗಿದೆ. ಗ್ರಾಮೀಣ ಮಹಿಳೆಯರು ಎದುರಿಸುತ್ತಿದ್ದ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರವಾಗಿ ನಾಲ್ಕು ದಶಕಗಳ ಹಿಂದೆ ‘ಜ್ಞಾನವಿಕಾಸ’ ಎಂಬ ಕಾರ್ಯಕ್ರಮವನ್ನು ಆರಂಭಿಸಿದರು. ಅದು ಇಂದು ಹೆಮ್ಮರವಾಗಿ ಬೆಳೆದು ವಾತ್ಸಲ್ಯ, ಮಾಸಾಶನ ಮುಂತಾದ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಜ್ಞಾನವಿಕಾಸದಿಂದಾಗಿ ಹಳ್ಳಿಯ ಮಹಿಳೆಯರಲ್ಲಿ ಮಹತ್ತರ ಬದಲಾವಣೆಯಾಗಿದೆ. ಆತ್ಮವಿಶ್ವಾಸ, ಸ್ವಾಭಿಮಾನದಿಂದ ಬದುಕು ಸಾಗಿಸಲು ಸಾಧ್ಯವಾಗಿದೆ. ಸಿರಿ ಗ್ರಾಮೋದ್ಯೋಗ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿದೆ. ಪರಿಸರ, ಜಲ ಸಂರಕ್ಷಣೆಯ ನಿಟ್ಟಿನಲ್ಲೂ ಕೆಲಸ ಮಾಡಿದ್ದಾರೆ. ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪೂರ್ವವಾದುದು. ಮಾತೃಶ್ರೀಯವರು ಸರ್ವ ಆದರ್ಶಗಳಿಗೆ ಮಾದರಿಯಾಗಿದ್ದಾರೆ. ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿ ಸಮುದಾಯದ ನಾಯಕತ್ವ ಮತ್ತು ಮಾನವೀಯ ಸೇವೆಗೆ ಇವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಲಾಗಿದೆ’ ಎಂದರು. ಹೆಗ್ಗಡೆಯವರು, ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣ ಸ್ವಾಮಿ, ಉದಯಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದÀ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ., ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರುಗಳು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. 1972 ಡಿಸೆಂಬರ್ 27ರಂದು ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿಯಾದ ಹೇಮಾವತಿ ವೀ. ಹೆಗ್ಗಡೆಯವರು ಮಹಿಳಾ ಸಬಲೀಕರಣಕ್ಕಾಗಿ, ಸಮಾಜದ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೈಗೊಂಡ ಕೆಲಸಗಳ ಪಟ್ಟಿ ಬಹುದೊಡ್ಡದು. ಧರ್ಮಸ್ಥಳದ ಯುವತಿಯರನ್ನೇ ಸೇರಿಸಿಕೊಂಡು ಆರಂಭಿಸಿದ ‘ಕನ್ಯಾಕುಮಾರಿ ಯುವತಿ ಮಂಡಲ ಮುಂದೆ ಅವರ ಸಮಾಜಸೇವೆಗೆ ಮುನ್ನುಡಿ ಬರೆಯಿತು. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ಸ್ವಉದ್ಯೋಗಿಗಳನ್ನಾಗಿಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಆರಂಭ, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಗೆಳತಿ ಕೌಟುಂಬಿಕ ಸಲಹಾ ಕೇಂದ್ರ’ ಗ್ರಾಮೀಣ ಮಹಿಳೆಯರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ, ಬೆಳೆಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಮಹಿಳೆಯರು ನೀರಿಗಾಗಿ ಪಡುತ್ತಿರುವ ಬವಣೆಯನ್ನು ನೀಗಿಸಲು ರಾಜ್ಯದ ಕೆರೆಗಳನ್ನು ಹೂಳೆತ್ತುವ ಕಾರ್ಯಕ್ರಮ, ರಾಜ್ಯದಲ್ಲಿರುವ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ‘ವಾತ್ಸಲ್ಯ’, ‘ಮಾಸಾಶನ’ ಕಾರ್ಯಕ್ರಮ ಹೀಗೆ ಅವರು ಕೈಗೊಂಡ ಕಾರ್ಯಕ್ರಮಗಳು ಒಂದೆರಡಲ್ಲ. ಇವರು ಕಲಾಪ್ರಿಯರೂ ಹೌದು. ಧರ್ಮಸ್ಥಳದ ಸಿಬ್ಬಂದಿಗಳನ್ನು ಸೇರಿಸಿ ಕಟ್ಟಿದ ‘ರಂಗಶಿವ ಕಲಾ ಬಳಗ’ ಈಗಾಗಲೇ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಮನೆಗೆದ್ದಿದೆ. ಹಾಗೆಯೇ ಉಜಿರೆಯಲ್ಲಿ ‘ಸಮೂಹ’ ಸಾಂಸ್ಕೃತಿಕ ಕೇಂದ್ರ ವನ್ನು ಸ್ಥಾಪಿಸುವ ಮೂಲಕ ಉಜಿರೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಾರಣೀಕರ್ತರಾಗಿದ್ದಾರೆ. ಓದು ಇವರ ಹವ್ಯಾಸಗಳಲ್ಲೊಂದು. ನಿರಂತರದ ‘ಗೆಳತಿ’, ಮಂಜುವಾಣಿಯ ‘ಮಗಳಿಗೊಂದು ಪತ್ರ’ ಅಂಕಣದ ಮೂಲಕವೂ ಇವರು ಚಿರಪರಿಚಿತರು. ಇವರು ಕೈಗೊಂಡಿರುವ ಕೆಲಸ ಕಾರ್ಯಗಳು, ಸೇವೆಗಳು ನಾಡಿಗೆ ಮಾದರಿಯಾಗಿದೆ.

ಪದ್ಮಾಂಬ ಮಹಿಳಾ ಸಮಾಜ: ಮಾಸಿಕ ಸಭೆ

Article Image

ಪದ್ಮಾಂಬ ಮಹಿಳಾ ಸಮಾಜ: ಮಾಸಿಕ ಸಭೆ

ದಾವಣಗೆರೆ: ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ, ಶ್ರೀ 1008 ಪಾರ್ಶ್ಶ್ವನಾಥ ಜಿನಮಂದಿರದ ಆವರಣದಲ್ಲಿ, ನಡೆದ ಸಮಾರಂಭದಲ್ಲಿ D.R.M. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರೂಪಶ್ರೀರವರು ದಾವಣಗೆರೆಯಲ್ಲಿ ಪ್ರಾಧ್ಯಾಪಕರಾಗಿ,ವಿಭಾಗ ಮುಖ್ಯಸ್ಥರಾಗಿ, ಪ್ರಾಶುಂಪಾಲರಾಗಿ ಅತ್ಯುತ್ತಮ ಸೇವೆ ಮತ್ತು ದಾವಣಗೆರೆಯ ಜೈನ ಸಮಾಜದ ಜೊತೆ ನಿಕಟ ಬಾಂಧವ್ಯವನ್ನು ಹೊಂದಿರುವುದನ್ನು ಗಮನಿಸಿ "ಪದ್ಮಾಂಬ ಮಹಿಳಾ ಸಾಧನಾ ಪ್ರಶಸ್ತಿ"ಯನ್ನು ನೀಡಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಮಹಿಳೆಯರ ಸಬಲೀಕರಣ ಮತ್ತು ಮಹಿಳಾ ಸಮಾಜಕ್ಕೆ ಮಹಿಳೆಯರ ಕೊಡುಗೆ ಇದರ ಬಗ್ಗೆ ತುಂಬಾ ವಿವರವಾಗಿ ಚೆನ್ನಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದ ವರ್ಷ ಸುಧೀರ್, ಕಾರ್ಯದರ್ಶಿಯಾದ ಸುಹಾಸಿನಿ ದೀಪಕ್, ಖಜಾಂಚಿಯಾದ ಚೇತನ ಪದ್ಮರಾಜ್ ಹಾಗೂ ಗೌರವಾಧ್ಯಕ್ಷರಾದ ಸರಸ್ವತಮ್ಮ ಬೆತುರ, ಸಂಸ್ಥಾಪಕರಾದ ಉಷಾ ಜಯಪ್ರಕಾಶ್ ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮ ಪ್ರಕಾಶ್ ಹಾಗೂ ಕಾರ್ಯದರ್ಶಿಯಾದ ಹರ್ಷ ನಾಗರಾಜ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯೆಯರು ಉಪಸ್ಥಿತರಿದ್ದರು.

ಹುಬ್ಬಳ್ಳಿಯ ಬ್ರಹ್ಮಕುಮಾರ ಬೀಳಗಿರವರಿಗೆ ಚಾಣಕ್ಯಶ್ರೀ ಪುರಸ್ಕಾರ

Article Image

ಹುಬ್ಬಳ್ಳಿಯ ಬ್ರಹ್ಮಕುಮಾರ ಬೀಳಗಿರವರಿಗೆ ಚಾಣಕ್ಯಶ್ರೀ ಪುರಸ್ಕಾರ

ಹುಬ್ಬಳಿಯ ಹೆಸರಾಂತ ವ್ಯಾಪಾರೋಧ್ಯಮಿ, ಸರಳ ಸಜ್ಜನಿಕೆಯ ಸ್ನೇಹಜೀವಿ, ಅಜಾತ ಶತ್ರು ಹಾಗೂ ಜೈನ ಸಮಾಜದ ಗಣ್ಯರು, ಸಕ್ರಿಯ ಸಮಾಜಸೇವೆಯಲ್ಲಿ ಕ್ರೀಯಾಶೀಲರಾದ 80 ರ ಹರೆಯದ ಬ್ರಹ್ಮಕುಮಾರ ಬೀಳಗಿ ಇವರ ಸಹಸ್ರ ಚಂದ್ರದರ್ಶನ ಅಭಿಮಾನೋತ್ಸವ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮ ವೈಭವದಿಂದ ಮಾತ್ರ ಕೂಡಿರಲಿಲ್ಲ ಇದು ಇತರರಿಗೂ ಒಂದು ಅನುಕರಣಿಯ ಆದರ್ಶದ ಪಾಠ ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ಸಂದೇಶ ರವಾನಿಸಿದಂತಿತ್ತು ಯಾಕಂದರೆ ಬ್ರಹ್ಮಕುಮಾರ ಬೀಳಗಿ ಇವರು 80 ರ ಹರೆಯದಲ್ಲೂ ಅವರ ಜೀವನ ಶೈಲಿ, ಯುವಕರನ್ನು ನಾಚಿಸುವ ಜೀವನೋತ್ಸಾಹ, ಕ್ರಮಬದ್ಧ ಶಿಸ್ತಿನ ದಿನಚರಿ, ಆರೋಗ್ಯ ಭಾಗ್ಯ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಇವರ ಸಮಾಜಮುಖಿ ಕಲ್ಯಾಣ ಕಾರ್ಯಗಳು ನಿಜಕ್ಕೂ ಮೆಚ್ಚಬೇಕು. ಈ ಇಳಿ ವಯಸ್ಸಿನಲ್ಲೂ ನಿಮ್ಮ ಉತ್ಸಾಹಕ್ಕೆ ಚಿರಯೌವನ ಮತ್ತು ಆರೋಗ್ಯದ ಗುಟ್ಟೇನು? ಎಂದು ಯಾರಾದರೂ ಕೇಳಿದರೆ ಅದಕ್ಕೆ ಅವರು ಕೊಡುವ ಉತ್ತರ - ನಾನು ಎಲ್ಲರನ್ನೂ ಆತ್ಮೀಯವಾಗಿ ಪ್ರೀತಿಸುತ್ತೇನೆ ಯಾರನ್ನೂ ದ್ವೇಷಿಸುವದಿಲ್ಲ ಪ್ರತಿಯೊಬ್ಬರೂ ಒಳ್ಳೆಯವರೇ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಸ್ವೀಕರಿಸುತ್ತೇನೆ, ಯಾರನ್ನೂ ನಿಂದಿಸುವದಿಲ್ಲ, ಸಹಾಯ, ಸಹಕಾರ, ಪರೋಪಕಾರ ದಾನ ಧರ್ಮ, ಮಾಡುವ ಮನೋಭಾವನೆ ಧಾರ್ಮಿಕ ಚಿಂತನೆ ಮೂಲಕ ಸಮಾಜದ ಕೆಲಸದಲ್ಲಿ ದೇವರನ್ನು ಕಾಣುವ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದೇನೆ ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ " ಎನ್ನುತ್ತಾರೆ. ಇದೇ ಇವರ ದೀರ್ಘ ಜೀವನೋತ್ಸಾಹದ ಸೂತ್ರ. ಇತ್ತೀಚಿನ ಆಧುನಿಕ ಪರಿಸರದಲ್ಲಿ ನಿತ್ಯ ಒತ್ತಡದ ಬದುಕು ಮತ್ತು ಅನಾರೋಗ್ಯ ಜೀವನಶೈಲಿ ಮಧ್ಯದಲ್ಲೂ ನಾವು ಹೇಗೆ ಉತ್ಸಾಹದಿಂದ ಬದುಕಬೇಕು ಎನ್ನುವದನ್ನು ಮೌಲ್ಯಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವದನ್ನು ಇವರಿಂದ ಕಲಿಯಬೇಕು ಎಂದು ಅನೇಕರು ಅಂದುಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಶ್ರೀ ಶಾಂತಿನಾಥ ತೀರ್ಥಂಕರ ದಿಗಂಬರ ಜೈನ ಬಸದಿ ಟ್ರಸ್ಟ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಮಹಾವೀರ ಗೊಂಗಡಿ ಸೇರಿ ಪದಾಧಿಕಾರಿಗಳು ಇವರ ಸಮಾಜ ಸೇವೆಯನ್ನು ಗುರುತಿಸಿ "ಚಾಣಕ್ಯಶ್ರೀ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಿದರು. ಮಾಜಿ ಮುಖ್ಯಮಂತ್ರಿ, ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ ರಾಜಕೀಯ ಮುಖಂಡರಾದ ಮಹೇಶ್ ತೆಂಗಿನಕಾಯಿ,ಶಂಕರಣ್ಣ ಮುನವಳ್ಳಿ, ಮೋಹನ್ ಲಿಂಬಿಕಾಯಿ, ಖ್ಯಾತ ಪತ್ರಕರ್ತ ಅಜಿತ್ ಹನಮಕ್ಕನವರ ಮುಂತಾದವರು ಭಾಗವಹಿಸಿ ಶುಭಕೋರಿ ಅಭಿನಂದಿಸಿದರು. ಎನ್ ಆರ್ ಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮಿಗಳು, ಹೊಂಬುಜದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಸೇರಿದಂತೆ ಎಲ್ಲಾ ಜೈನ ಮಠಗಳ ಸ್ವಾಮೀಜಿಯವರು ಮತ್ತು ಮಾಜಿ ಮುಖ್ಯಮಂತ್ರಿ ಯಡೆಯೂರಪ್ಪ ಸೇರಿ ಹಲವು ರಾಜಕೀಯ ಗಣ್ಯರು ಶುಭ ಸಂದೇಶ ಕಳಿಸುವ ಮೂಲಕ ಶುಭಾಶಯ ತಿಳಿಸಿದ್ದಾರೆ. ವರದಿ : ಎಸ್ ಆರ್ ಮಲ್ಲಸಮುದ್ರ

ಸುಕೇಶ್‌ ಕುಮಾರ್ ಜೈನ್ ರವರಿಗೆ- ಆರೋಗ್ಯ ಸೇವಾ ರತ್ನ ಪ್ರಶಸ್ತಿ

Article Image

ಸುಕೇಶ್‌ ಕುಮಾರ್ ಜೈನ್ ರವರಿಗೆ- ಆರೋಗ್ಯ ಸೇವಾ ರತ್ನ ಪ್ರಶಸ್ತಿ

ಬೆಳ್ತಂಗಡಿ: ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾದ ಅಕ್ಯುಪ್ರೆಶರ್ ಹಾಗೂ ಮರ್ಮಬಿಂದು ಕಾರ್ಯಾಗಾರದಲ್ಲಿ ಔಷಧ ರಹಿತ ಚಿಕಿತ್ಸಾ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಗಾಗಿ ಅಳದಂಗಡಿಯ ಕಲ‌ ಥೆರಪಿಸ್ಟ್ ಸುಕೇಶ್ ಕುಮಾರ್ ಜೈನ್ ಅವರಿಗೆ “ಆರೋಗ್ಯ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಲ್ಲಿ ಕಲರ್ ಥೆರಪಿ, ಅಕ್ಯುಪ್ರೆಶರ್, ಮರ್ಮ ಪಾಯಿಂಟ್ ಥೆರಪಿ, ಸೀಡ್ ಥೆರಪಿ, ರೇಖೆ ಹೀಲಿಂಗ್ ಸೇರಿದಂತೆ ವಿವಿಧ ಪರ್ಯಾಯ ಚಿಕಿತ್ಸೆಗಳು ಲಭ್ಯವಿದ್ದು, ಆರೋಗ್ಯ ಜಾಗೃತಿ ಮತ್ತು ಸೇವೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಸುಕೇಶ್ ಕುಮಾರ್‌ ಜೈನ್‌ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿ ಅಭಿನಂದಿಸಿದರು.

ತುಮಕೂರು: ಮುನಿ ಮಹಾರಾಜರುಗಳ ಆಗಮನ

Article Image

ತುಮಕೂರು: ಮುನಿ ಮಹಾರಾಜರುಗಳ ಆಗಮನ

ತುಮಕೂರು ನಗರದಲ್ಲಿ 2026 ರ ಚಾತುರ್ಮಾಸವನ್ನು ಆಚರಿಸಲು ದಿಗಂಬರ ಜೈನಾಚಾರ್ಯ 108 ಶ್ರೀ ಪ್ರಮುಖ ಸಾಗರ್ ಜೀ ಮಹಾರಾಜ್ ಮತ್ತು ಅವರ ಮುನಿ ಸಂಘ ದಿನಾಂಕ 6-7-2026 ಸೋಮವಾರ ತುಮಕೂರು ತಾಲ್ಲೂಕು ಪಂಡಿತನ ಹಳ್ಳಿ ಬಳಿ ಇರುವ ಮಂದಾರ ಗಿರಿ ಅತಿಶಯ ಕ್ಷೇತ್ರಕ್ಕೆ ಆಗಮಿಸಿದರು. ಜೈನ ಸಮಾಜದ ಅಧ್ಯಕ್ಷರಾದ ಟಿ ಡಿ ಬಾಹುಬಲಿ ಬಾಬು, ಪದಾಧಿಕಾರಿಗಳು ಮತ್ತು ತುಮಕೂರು ನಗರದ ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸುಧೀರ್ ಕುಮಾರ್- ಅಧ್ಯಕ್ಷರಾಗಿ ಆಯ್ಕೆ

Article Image

ಸುಧೀರ್ ಕುಮಾರ್- ಅಧ್ಯಕ್ಷರಾಗಿ ಆಯ್ಕೆ

ಮೂಡುಬಿದಿರೆ ರೋಟರಿ ಇಂಗ್ಲೀಷ್ ಮೀಡಿಯಂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವೇಣೂರಿನ ಸುಧೀರ್ ಕುಮಾರ್ ರವರು ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್: ವಿವೇಕ್ ಆಳ್ವ ನೇಮಕ

Article Image

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್: ವಿವೇಕ್ ಆಳ್ವ ನೇಮಕ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ರವರನ್ನು ನವದೆಹಲಿ ಕೇಂದ್ರ ಕಚೇರಿಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಡಾ ಪಿ.ಜಿ.ಆರ್. ಸಿಂಧಿಯಾ ರವರ ಶಿಫಾರಸಿನ ಮೇರೆಗೆ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಮುಖ್ಯ ರಾಷ್ಟ್ರೀಯ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಕೆ.ಕೆ. ಖಂಡೇಲ್ವಾಲ್ ಇವರನ್ನು ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರನ್ನಾಗಿ ನೇಮಕಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ನೇಮಕಾತಿಯು ಕರ್ನಾಟಕಕ್ಕೆ ಹಾಗೂ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಷಯವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಯುವಜನರಲ್ಲಿ ಸಾಂಸ್ಕೃತಿಕ ಸಾಮರಸ್ಯ, ರಾಷ್ಟ್ರೀಯ ಏಕತೆ ಹಾಗೂ ಅಂತರಾಷ್ಟ್ರೀಯ ಸ್ನೇಹ ಸಂಬಂಧಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಉಪ ರಾಷ್ಟ್ರೀಯ ಆಯುಕ್ತ (ಸಾಂಸ್ಕೃತಿಕ ವಿನಿಮಯ) ಹುದ್ದೆಯಲ್ಲಿ ವಿವೇಕ್ ಆಳ್ವರು ದೇಶದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ರೂಪಿಸುವುದು, ರಾಷ್ಟ್ರೀಯ ಸಮಗ್ರತಾ ಶಿಬಿರಗಳು, ಯುವ ವಿನಿಮಯ ಯೋಜನೆಗಳು, ಸಾಂಸ್ಕೃತಿಕ ಜಾಂಬೂರಿಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯುವ ಸಂವಾದಗಳು ಹಾಗೂ ವಿಶ್ವ ಸ್ಕೌಟ್ಸ್–ಗೈಡ್ಸ್ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ವಿವಿಧ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ನಡುವೆ ಪರಸ್ಪರ ಗೌರವ, ರಾಷ್ಟ್ರೀಯ ಐಕ್ಯತೆ ಹಾಗೂ ವೈವಿಧ್ಯದಲ್ಲಿ ಏಕತೆ ಎಂಬ ಭಾರತದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಕಾರ್ಯಕ್ಕೂ ಅವರು ನಾಯಕತ್ವ ವಹಿಸಲಿದ್ದಾರೆ. ಇದರ ಜೊತೆಗೆ ವಿವಿಧ ರಾಜ್ಯಗಳ ಪ್ರತಿಭಾವಂತ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ರಾಷ್ಟ್ರೀಯ ವೇದಿಕೆ ಕಲ್ಪಿಸುವುದು, ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸುವುದು, ಯುವಜನರಲ್ಲಿ ನಾಯಕತ್ವ ಕೌಶಲ್ಯ, ಸಂವಹನ ಸಾಮರ್ಥ್ಯ ಮತ್ತು ಅಂತರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿಯೂ ಪ್ರಮುಖ ಪಾತ್ರವಹಿಸಲಿದ್ದಾರೆ. ವಿವೇಕ್ ಆಳ್ವರವರು ಹಲವು ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದು, ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ, ರಾಷ್ಟ್ರೀಯ ಸಮಗ್ರತಾ ಶಿಬಿರ, ಯುವ ನಾಯಕತ್ವ ತರಬೇತಿಗಳು ಹಾಗೂ ವಿವಿಧ ರಾಷ್ಟ್ರೀಯ ಮಟ್ಟದ ಸ್ಕೌಟ್ಸ್–ಗೈಡ್ಸ್ ಕಾರ್ಯಕ್ರಮಗಳ ಯಶಸ್ವಿ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಿಶೇಷವಾಗಿ ಮೂಡುಬಿದಿರೆಯಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಯಶಸ್ವಿ ಸಂಘಟನೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದಾರೆ.

ಸಂತಶಿರೋಮಣಿ ಆಚಾರ್ಯ ವಿದ್ಯಾಸಾಗರ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆ

Article Image

ಸಂತಶಿರೋಮಣಿ ಆಚಾರ್ಯ ವಿದ್ಯಾಸಾಗರ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆ

ದಿಗಂಬರ ಜೈನ ಸಮಾಜದ ಅತಿದೊಡ್ಡ ನಕ್ಷತ್ರ ಎಂದೇ ಹೆಸರಾಗಿದ್ದ, ವಿಶ್ವ ವಂದನೀಯ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆಯು ಧಾರವಾಡ ಚಿಕ್ಕಮಲ್ಲಿಗವಾಡ ಹೊರವಲಯದ ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಇವರ ನಿವಾಸದಲ್ಲಿ ಪರಮಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಮತ್ತು ಪ.ಪೂ ಮುನಿಶ್ರೀ ಪುರಾಣ ಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ವೈಭವದಿಂದ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಶ್ರಾವಕ ಶ್ರಾವಕಿಯರಿಂದ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಪೂಜಾ ಅಷ್ಟಕ ಜರುಗಿತು. ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಮತ್ತು ಪರಿವಾರದವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ತೀರ್ಥಂಕರರನ್ನು ನಾವು ನೋಡಿಲ್ಲ ಆದರೆ ದೇಶದಾದ್ಯಂತ ಶಾಂತಿ ಅಹಿಂಸೆ ಸಂದೇಶಗಳ ಮೂಲಕ ಧರ್ಮ ಪ್ರಭಾವನೆ ಮಾಡುತ್ತಿರುವ ಕಣ್ಣಿಗೆ ಕಾಣುವ ತೀರ್ಥಂಕರರನ್ನೇ ದಿಗಂಬರ ಮುನಿ ಮಹಾರಾಜರು ಇಂಥ ಮುನಿ ಮಹಾರಾಜರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ತಿಳಿಸಿ ಅವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಕೆ ಜೆ ರಪಾಟಿ, ಎಸ್ ಆರ್ ಮಲ್ಲಸಮುದ್ರ ಮುಂತಾದವರು ಮಾತನಾಡಿದರು. ಪರಮಪೂಜ್ಯ ಮುನಿಶ್ರೀ ಪುರಾಣ ಸಾಗರ ಮಹಾರಾಜರು ತಮ್ಮ ಪ್ರವಚನದಲ್ಲಿ ಆಚಾರ್ಯಶ್ರೀಗಳ ಗುಣಗಾನ ಮಾಡಿ ಸ್ಮರಿಸಿದರು. ಸಾನಿಧ್ಯ ವಹಿಸಿ ಪ್ರವಚನ ದಯಪಾಲಿಸಿದ ಆಚಾರ್ಯ ಶ್ರೀ ಪುಣ್ಯಸಾಗರ ಮಹಾರಾಜರು ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಭಾರತ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಭಾವಿ ಆಚಾರ್ಯರಾಗಿದ್ದರು ಅವರು ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ದಿಗಂಬರ ಜೈನ ಸರೋವರದ ರಾಜಹಂಸ ಎಂದು ಕರೆಯಲ್ಪಡುತ್ತಿದ್ದರು, ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿ ಶ್ರೀಮತಿದೇವಿ ಹಾಗೂ ಶ್ರೀ ಮಲ್ಲಪ್ಪಾಜಿಯವರ ಸುಪುತ್ರರಾಗಿ ದಿನಾಂಕ 10-10-1946 ಜನಿಸಿದರು. ಬಾಲ್ಯದಿಂದಲೂ ಆದ್ಯಾತ್ಮದ ಕಡೆ ಒಲವು ಹೊಂದಿದ್ದರು, ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಅನೇಕ ಸ್ಥಳಗಲ್ಲಿ ಸಂಚಾರಿಸುತ್ತ ಧರ್ಮದ ಅಧ್ಯಯನ ಮಾಡಿದರು. ಪೂಜ್ಯ ಜ್ಞಾನ ಸಾಗರ ಮಹಾರಾಜರಿಂದ ದಿನಾಂಕ 30-6-1968 ರಲ್ಲಿ ದಿಗಂಬರ ದೀಕ್ಷೆ ಪಡೆದು ಇಂದಿಗೆ 58 ವರ್ಷ ಮುಗಿದು 59ನೇ ವರ್ಷಕ್ಕೆ ಜೈನ ಮುನಿಯಾದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು. ಆಶ್ಚರ್ಯವೆಂದರೆ ಆಚಾರ್ಯರ ಮೂಕ ಮಾಟಿ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿದೆ. ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಇಂಥ ಗುರುವರ್ಯರಿಂದ ನನ್ನನ್ನೂ ಸೇರಿ ಹಲವಾರು ಮುನಿಗಳು ದೀಕ್ಷೆ ಪಡೆದು ಧನ್ಯರಾಗಿದ್ದೇವೆ ಎಂದು ದೀಕ್ಷಾ ಗುರುಗಳನ್ನು ಸ್ಮರಿಸಿದರು. ನಂತರ 59 ದೀಪಗಳಿಂದ ಮಹಾ ಮಂಗಳಾರತಿ ವೈಭವದಿಂದ ನಡೆಯಿತು. ಸಮಾರಂಭದಲ್ಲಿ ಹುಬ್ಬಳ್ಳಿ ನವನಗರ ಧಾರವಾಡ ಮುಮ್ಮಿಗಟ್ಟಿ ಗದಗ ಮುಂತಾದ ಊರುಗಳಿಂದ ಹಲವಾರು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಕುಶಲ ಅವಲಕ್ಕಿ ಅವರು ಪ್ರಾರ್ಥಿಸಿ, ಎಸ್ ಆರ್ ಮಲ್ಲಸಮುದ್ರರವರು ಸ್ವಾಗತಿಸಿ, ನಂದಿನಿ ಗೊಟೂರೆ ಇವರಿಂದ ಮಂಗಳಾಚರಣೆ ನೆರವೇರಿತು. ವರದಿ : ಶಾಂತರಾಜ ಮಲ್ಲಸಮುದ್ರ.

ಮೈಸೂರು: 20ನೇ ವಲಯ ಸಮ್ಮೇಳನ

Article Image

ಮೈಸೂರು: 20ನೇ ವಲಯ ಸಮ್ಮೇಳನ

ಮೈಸೂರು: ಭಾರತೀಯ ಜೈನ್ ಮಿಲನ್ ವಲಯ 8ರ 20ನೇ ವಲಯ ಸಮ್ಮೇಳನವು ಇತ್ತೀಚೆಗೆ ಮಾನಸ ಗಂಗೋತ್ರಿಯ ಸೆನೆಟ್ ಹಾಲ್ ನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ರವರು ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೈನ್ ಮಿಲನ್ ಗಳ ಬಗ್ಗೆ ಮಾಹಿತಿ ನೀಡಿದರು. ದುಬೈ, ಜರ್ಮನಿ, ಲಂಡನ್, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಲ್ಲಿ ಜೈನ್ ಮಿಲನ್ ಶಾಖೆಗಳು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಬಹಳ ಜನಪ್ರಿಯವಾಗಿವೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್ ಸೇರಿದಂತೆ ಗಣ್ಯಾತೀಗಣ್ಯರು ಉಪಸ್ಥಿತರಿದ್ದರು.

ಧಾರವಾಡ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

Article Image

ಧಾರವಾಡ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

‘ಧಾರವಾಡದಲ್ಲಿ ಪ್ರಪ್ರಥಮ ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ವತಿಯಿಂದ ಹಿರಿಯ ಚಿತ್ರಕಲಾವಿದ ಮಹಾವೀರ ರಾಯಪ್ಪಾ ಬಾಳಿಕಾಯಿ ಅವರ ಕುರಿತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ ಮಾತನಾಡಿ, ರಾಜ್ಯದ ನಾಲ್ಕು ವಿಭಾಗಗಳ ಪೈಕಿ ಒಂದು ಜಿಲ್ಲೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಆಯಾ ಜಿಲ್ಲೆಯಲ್ಲಿರುವ ನಾಡು-ನುಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಪರಿಗಣಿಸಿ, ಅವರ ಸಾಧನೆಯನ್ನು ಯುವಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ “ಸಾಧಕರೊಂದಿಗೆ ಸಂವಾದ” ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಧಾರವಾಡ ಜಿಲ್ಲೆಯಿಂದಲೇ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಚಿತ್ರಕಲಾವಿದರಾದ ಎಮ್. ಆರ್. ಬಾಳಿಕಾಯಿ ಅವರ ಜೀವನ-ಸಾಧನೆ ಕುರಿತು ಸಂವಾದ ಮಾಡಲಾಗುತ್ತಿದೆ ಎಂದರು. ಎಮ್. ಆರ್. ಬಾಳಿಕಾಯಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆ ಗುರುತಿಸಿ, 2023ರಲ್ಲಿ ಜರುಗಿದ ಹುಕ್ಕೇರಿ ತಾಲೂಕಾ 11ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಮ್. ಆರ್. ಬಾಳಿಕಾಯಿ ಅವರು, ತಮ್ಮ ಬಾಲ್ಯ, ಜೀವನ, ಕಲಾಕ್ಷೇತ್ರದಲ್ಲಿ ತಾವು ನಡೆದು ಬಂದ ದಾರಿಯನ್ನು ವಿವರಿಸುತ್ತ, ನನ್ನ ಸಾಧನೆಯ ಹಿಂದೆ ಇಡೀ ಸಮಾಜವೇ ಇದೆ. ಅದಕ್ಕಾಗಿ ನನ್ನ ಸಾಧನೆಯನ್ನು ಸಮಾಜಕ್ಕೇ ಅರ್ಪಿಸುತ್ತೇನೆ ಎಂದರು. ಜೀವನದಲ್ಲಿ ನಾವು ಎಷ್ಟು ಕಷ್ಟಗಳನ್ನು ಅನುಭವಿಸಿತ್ತೇವೆಯೋ ಅವುಗಳೇ ಸಾಧನೆಯ ಮೆಟ್ಟಲುಗಳಾಗುತ್ತವೆ. ಯಾವುದೇ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಅನುಭವವೇ ನನ್ನ ಜೀವನಕ್ಕೆ ದಾರಿದೀಪವಾಗಿದೆ. ಸತ್ಯದ ಹಾದಿಯಲ್ಲಿ ನಡೆದರೆ ಜೀವನ ಸುಗಮವಾಗಿರುತ್ತದೆ ಎಂದರು. ತಮ್ಮ ಸಾಧನೆಯ ಮಾರ್ಗವನ್ನು ಮತ್ತು ಗುರು-ಶಿಷ್ಯರುಗಳ ಬೆಸುಗೆಯ ಬಗ್ಗೆ ಸಭಿಕರೊಂದಿಗೆ ಮನಬಿಚ್ಚಿ ಮಾತನಾಡಿದರು. ನಂತರ ಜರುಗಿದ ಸಂವಾದದಲ್ಲಿ ಡಿ. ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಬಿ. ಮಾರುತಿ, ಮಹದೇವ ಜಗತಾಪ, ಡಾ. ಬಿ. ಎಲ್. ಚೌಹಾನ, ಪಿ. ಎಸ್. ಕಡೇಮನಿ, ಡಾ. ಎಸ್. ಸಿ. ಪಾಟೀಲ, ಎಮ್. ಎಸ್. ಚೌಧರಿ, ಡಿ. ಎಮ್. ಬಡಿಗೇರ, ಬಿ. ಐ. ಈಳಗೇರ ಮುಂತಾದವರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಎಮ್. ಆರ್. ಬಾಳಿಕಾಯಿ ಅವರ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸುರೇಶ ಹಾಲಭಾವಿ, ಡಾ. ಶಶಿಧರ ನರೇಂದ್ರ, ಡಾ. ಬಸವರಾಜ ಕುರಿಯವರ, ಎನ್. ಆರ್. ನಾಯ್ಕರ್, ಡಾ. ರಾಯಪ್ಪಾ ಬಾಳಿಕಾಯಿ, ವಿಠ್ಠಲ ಬಸಳಿಗುಂದಿ, ಎಸ್. ಬಿ. ಕಂಕಣವಾಡಿ, ರಮೇಶಕುಮಾರ ಬಾಳಿಕಾಯಿ, ಎಸ್. ಪಿ. ಸತ್ಯನಾಯಕ ಇನ್ನಿತರರು ಇದ್ದರು. ವರದಿ: ಡಾ. ರಾಯಪ್ಪಾ ಬಾಳಿಕಾಯಿ

ರಸಿಕ ಕಂಬಳಿ- ನಿಧನ

Article Image

ರಸಿಕ ಕಂಬಳಿ- ನಿಧನ

ಮೂಡುಬಿದಿರೆ: ಮಹಾವೀರ ಕಾಲೇಜು ಬಳಿಯ ಕಂಬಳಿ ಬಾಗ್ ನಿವಾಸಿ, ಭಾರತೀಯ ಜೈನ್ ಮಿಲನ್ ವಲಯ 8ರ ನಿರ್ದೇಶಕ, ಪೆರಿಂಜೆ ಗುತ್ತು ಜಯರಾಜ ಕಂಬಳಿರವರ ಧರ್ಮಪತ್ನಿ ರಸಿಕ ಕಂಬಳಿರವರು ಇಂದು ನಿಧನ ಹೊಂದಿದರು. ಇವರು ಪತಿ ಮತ್ತು ಮಕ್ಕಳಾದ ನೌವೇಶ್ ಕಂಬಳಿ, ನವ್ಯ ಕಂಬಳಿ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.

ವೈಶಾಲಿ ಚಂದ್ರಪ್ರಭುರವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

Article Image

ವೈಶಾಲಿ ಚಂದ್ರಪ್ರಭುರವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

ಕರ್ನಾಟಕ ಮಿಡಿಯಾ ಕ್ಲಬ್ ವತಿಯಿಂದ ಕೊಡಮಾಡುವ “ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ”ಯನ್ನು ವೈಶಾಲಿ ಚಂದ್ರಪ್ರಭುರವರ ಮಾಧ್ಯಮ ಕ್ಷೇತ್ರದ ಅಪೂರ್ವ ಸಾಧನೆ ಬದುಕಿನ ಧೃಡತೆ, ಮಾನವೀಯ ಮೌಲ್ಯಗಳೊಂದಿಗೆ ಈ ಸಮಾಜಕ್ಕಾಗಿ ಸಾಧಿಸಿದ ಸಾಧನೆಯನ್ನು ಗುರುತಿಸಿ, ಬೆಂಗಳೂರಿನ ವಿಶ್ವವಿದ್ಯಾಲಯ ಆವರಣದ ಕಲಾಗ್ರಾಮದಲ್ಲಿ ಜೂ. 5ರಂದು ನಡೆದ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.

ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ): ನಿಧನ

Article Image

ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ): ನಿಧನ

ಕಾರ್ಕಳ ತಾಲೂಕು ಹೊಸ್ಮಾರು ‘ಧರ್ಮಶ್ರೀ’ ನಿವಾಸಿ ಎನ್. ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ) ಇವರು ಜೂ. 9 ರಂದು ನಿಧನ ಹೊಂದಿದರು. ಇವರು ಪತ್ನಿ ಭಾರತಿ (ಟೀಚರ್) ಹಾಗೂ ಓರ್ವ ಪುತ್ರಿ ಡಾ| ಪ್ರತಿಮಾ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ. ಇವರು ಜೈನ ಧರ್ಮದ ಕಣ್ಮಣಿಯಾಗಿದ್ದು ನಾರಾವಿ ಮಾಗಣಿ ಬಸದಿಯ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸರ್ವ ಧರ್ಮಾನುರಾಗಿಗಳು ಹಾಗೂ ಉದಾರ ದಾನಿಯಾಗಿದ್ದು ತುಳುನಾಡಿನ ಒಬ್ಬ ಪ್ರಮುಖ ಧಾರ್ಮಿಕ ಮುಖಂಡ ಹಾಗೂ ಉದ್ಯಮಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.

ರಾಷ್ಟ್ರ ಯುವ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ಲಾಸ್ಯ ಆಯ್ಕೆ

Article Image

ರಾಷ್ಟ್ರ ಯುವ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ಲಾಸ್ಯ ಆಯ್ಕೆ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಥಮ ವಾಣಿಜ್ಯ ಪದವಿ ವಿದ್ಯಾರ್ಥಿನಿ ಲಾಸ್ಯ ಕರ್ನಾಟಕ ರಾಜ್ಯ ವನಿತೆಯರ ಯುವ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಇವಳು ಉಜಿರೆಯ ಉದ್ಯಮಿ ಸಿದ್ಧಾಂತಕೀರ್ತಿರಾಜ ಮತ್ತು ಭಾಗ್ಯಶ್ರೀ ದಂಪತಿಯ ಪುತ್ರಿ. ಇವಳು ಸಿದ್ದವನದ ಸಂತ ಜೈನ ಸಂಸ್ಕೃತ ವಿದ್ವಾoಸರಾಗಿದ್ದ ನ್ಯಾಯತೀರ್ಥ ಜಿನರಾಜ ಶಾಸ್ತ್ರೀಗಳ ಮರಿಮಗಳು, ಖ್ಯಾತ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಯಕ್ಷಗಾನ ಕಲಾವಿದರಾಗಿದ್ದ ದಿ. ನರೇಂದ್ರಕುಮಾರ್ ರ ಮೊಮ್ಮಗಳು, ಪ್ರಸ್ತುತ ಪೆರಿಂಜೆ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜೇಂದ್ರ ಅವರ ಸೊಸೆ. ಕಳೆದ ಐದು ವರ್ಷಗಳಿಂದ ಕಾಲೇಜಿನ ದೈಹಿಕ ಶಿಕ್ಷಕರಾದ ರಮೇಶ್ ಅವರಲ್ಲಿ ಲಾಸ್ಯ ನಿರಂತರ ತರಬೇತಿ ಪಡೆಯುತ್ತಿದ್ದಾಳೆ.

ಗೃಹರಕ್ಷಕ ಪಾಂಡುರಾಜ್‌ಗೆ ಮುಖ್ಯಮಂತ್ರಿ ಚಿನ್ನದ ಪದಕ

Article Image

ಗೃಹರಕ್ಷಕ ಪಾಂಡುರಾಜ್‌ಗೆ ಮುಖ್ಯಮಂತ್ರಿ ಚಿನ್ನದ ಪದಕ

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ತಾಲೂಕು ಗೃಹರಕ್ಷಕ ದಳ ಘಟಕದ ಹಿರಿಯ ಗೃಹ ರಕ್ಷಕ, ಘಟಕಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವ ಪಾ೦ಡುರಾಜ ಅವರ ಸೇವೆ ಗುರುತಿಸಿ 2024-25ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವ ನೀಡಲಾಗಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ ದಳ ಪೌರ ರಕ್ಷಣೆ ಮತ್ತು ಎಸ್.ಡಿ.ಆರ್.ಎಫ್ ಅವರಿಗೆ ನೀಡಲಾಗುವ ಗೌರವಕ್ಕೆ ದ.ಕ ಜಿಲ್ಲೆಯಿಂದ ಏಕೈಕ ಪ್ರತಿನಿಧಿಯಾಗಿ ಪಾಂಡುರಾಜ ಈ ಗೌರವ ಸ್ವೀಕರಿಸಿದ್ದಾರೆ. ಬೆಂಗಳೂರಿನ ಆ‌ರ್.ವಿ. ಮುಂಡೂರ್‌ ಅಗ್ನಿಶಾಮಕ ತರಬೇತಿ ಅಕಾಡೆಮಿ ಆವರಣದಲ್ಲಿ ಕಳೆದ ಮಂಗಳವಾರ ಜರಗಿದ ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್‌ಸೇವಾಸಾಧಕರಿಗೆ ಪದಕಪ್ರದಾನ ಮಾಡಿ ಗೌರವಿಸಿದರು. ಗೃಹರಕ್ಷಕರಾಗಿ 1986 ರಿಂದ ಹಾಗೂ ಘಟಕಾಧಿಕಾರಿಯಾಗಿ 2015ರಿಂದ 2024 ರ ಅವಧಿಗೆ ಒಟ್ಟು 38 ವರ್ಷಗಳ ಕರ್ತವ್ಯ ನಿರ್ವಹಿಸಿದ್ದಾರೆ.

ರತ್ನತ್ರಯ ಜೈನ ಮಿಲನ್ ಸಭೆ

Article Image

ರತ್ನತ್ರಯ ಜೈನ ಮಿಲನ್ ಸಭೆ

ದಿನಾಂಕ 06-03-2026ಶುಕ್ರವಾರದಂದು ರತ್ನತ್ರಯ ಜೈನ ಮಿಲನ್ ಆನ್‌ಲೈನ್ ಸಭೆ ಜರುಗಿತು. ಮುಖ್ಯ ಅತಿಥಿಗಳಾಗಿ ತ್ರಿಶಲಾ ಬ್ರಹ್ಮಯ್ಯ ಹಾಗೂ ರತ್ನತ್ರಯ ಜೈನ್ ಮಿಲನ್ ಅಧ್ಯಕ್ಷರಾದ ನವೀನ್ ಕುಮಾರ್ ಉಪಸ್ಥಿತರಿದ್ದರು. ಸಾಮೂಹಿಕ ಪಂಚ ನಮಸ್ಕಾರ ಪಠಣೆ, ಅತಿಥಿಗಳಿಂದ ದೀಪ ಪ್ರಜ್ವಲನೆ ಹಾಗೂ ಭಾಮಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಣಿ ಪ್ರಫುಲ್ಲ ಅವರು ಸ್ವಾಗತ ಭಾಷಣ ಮಾಡಿದರು. ಸುನೀತಾ ಸುಂದರರಾಜ್ ಅವರು ರತ್ನತ್ರಯ ಮಿಲನಿನ ಉದ್ದೇಶವನ್ನು ತಿಳಿಸಿದರು. ಪದ್ಮ ಸೂರಿ ಅವರು ಪರ್ವವಾಚನ ಮಾಡಿದರು. ಶ್ವೇತಾ ನವೀನ್ ಅವರು ಹಿಂದಿನ ಸಭೆಯ ವರದಿಯನ್ನು ಪ್ರಸ್ತುತಪಡಿಸಿದರು. ಶೋಭಿತಾ ನವೀನ್ ಅವರು ಮಾರ್ಚ್ ತಿಂಗಳಲ್ಲಿ ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ್ ಸದಸ್ಯರಿಗೆ ಶುಭ ಕೋರಿದರು. ಚಂದನ ಸುರೇಂದ್ರ ಅವರು ಜಿನ ಭಕ್ತಿ ಗೀತೆಯನ್ನು ಹಾಡಿದರು. ಮಹಾವೀರ ಕುಮಾರ್ ಅವರು ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ‌ ಆಗಮಿಸಿದ್ದ ತ್ರಿಶಲಾ ಬ್ರಹ್ಮಯ್ಯ ಅವರು ‘ಬದಲಾಗುತ್ತಿರುವ ಸಮಾಜದಲ್ಲಿ ಜೈನ ಧರ್ಮ’ ಈ ಕುರಿತು ಅತ್ಯಂತ ಉಪಯುಕ್ತ ಉಪನ್ಯಾಸ ಮಾಡಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಅನಂತರವರು ನಡೆಸಿಕೊಟ್ಟರು. ಉಷಾ ರಾಣಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸದ ಕುರಿತು ಸಂಶೋಧನಾ ಪ್ರಬಂಧ ಮಂಡನೆ

Article Image

ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸದ ಕುರಿತು ಸಂಶೋಧನಾ ಪ್ರಬಂಧ ಮಂಡನೆ

ಚೆನ್ನೈ, ಫೆಬ್ರವರಿ 28, 2026: ಚೆನ್ನೈನ "ಸಿ.ಪಿ. ರಾಮಸ್ವಾಮಿ ಅಯ್ಯರ್ ಇಂಡೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಚೆನ್ನೈ" ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಸ್ಥಾಪಿತವಾದ ಸ್ವಾಯತ್ತ ಸಂಸ್ಥೆಯಾದ ನವದೆಹಲಿಯ "ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್" (ICHR) ಸಂಯುಕ್ತವಾಗಿ ಸಿ.ಪಿ.ರಾಮಸ್ವಾಮಿ ಅಯ್ಯರ್ ಫೌಂಡೇಶನ್‌ನಲ್ಲಿ 27–28 ಫೆಬ್ರವರಿ 2026 ರಂದು “ದಕ್ಷಿಣ ಭಾರತದಲ್ಲಿ ಜೈನಧರ್ಮ – ಇತಿಹಾಸ, ಕಲೆ ಮತ್ತು ಸಂಸ್ಕೃತಿ” ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು. ಈ ರಾಷ್ಟ್ರೀಯ ಸಮ್ಮೇಳನದಲ್ಲಿ “ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸ” ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಜೈನ ಸಂಶೋಧಕ ಬೆಂಗಳೂರಿನ ನಿತಿನ್ ಹೆಚ್.ಪಿ.ರವರು ಮಂಡಿಸಿದರು. ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ - www.jainheritagecentres.com ಅಂತರ್ಜಾಲತಾಣದ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ವಿಪ್ರೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್‌ರವರು ಶ್ರೀ ಭದ್ರಬಾಹು ಮುನಿಗಳ ಆಗಮನದಿಂದ ಆರಂಭವಾದ ಕರ್ನಾಟಕದ ಜೈನಧರ್ಮದ ಶಾಸನೋಕ್ತ ಇತಿಹಾಸ, ಮುನಿ ಹಾಗೂ ಭಟ್ಟಾರಕ ಪರಂಪರೆ, ಜೈನಧರ್ಮಕ್ಕೆ ರಾಜಮನೆತನಗಳ ಪೋಷಣೆ, ಸಾಹಿತ್ಯಿಕ ಕೊಡುಗೆ, ಕರ್ನಾಟಕದಲ್ಲಿ ಜೈನಧರ್ಮಕ್ಕೆ ಅನ್ಯಧರ್ಮಗಳಿಂದುಂಟಾದ ದಾಳಿಗಳು, ಬಸದಿಗಳು ಅವುಗಳ ಬೆಳವಣಿಗೆ ಮತ್ತು ವಾಸ್ತುಶಿಲ್ಪ ಹೀಗೆ ಇನ್ನೂ ಹಲವು ವಿಷಯಗಳನ್ನೊಳಗೊಂಡಂತೆ ವಿಸ್ತೃತವಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಭಾರತದಾದ್ಯಂತದಿಂದ 23 ಸಂಶೋಧಕರು ವಿವಿಧ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಮಂಡಿಸಿದರು.

ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ: ಬೆಸ್ಟ್ ಆರ್ಟಿಕಲ್ ಅವಾರ್ಡ್‌

Article Image

ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ: ಬೆಸ್ಟ್ ಆರ್ಟಿಕಲ್ ಅವಾರ್ಡ್‌

ಅಸೋಸಿಯೇಷನ್ ಆಫ್ ಫಾರ್ಮಾಟಿಕಲ್ ಟೀಚರ್ಸ್‌ ಆಫ್‌ ಇಂಡಿಯಾ (APTI) ಸಂಸ್ಥೆಯು ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ ಶ್ರೀ ಇಶ್ವರ್ ಎನ್. ಹುಕ್ಕೇರಿ ಮೆಮೋರಿಯಲ್ ಅವಾರ್ಡ್ - 2025 ಅಡಿಯಲ್ಲಿ ಕ್ಲಿನಿಕಲ್ ಪ್ರಾಕ್ಟಿಸ್ ಕ್ಷೇತ್ರದ “ಬೆಸ್ಟ್ ಆರ್ಟಿಕಲ್ ಅವಾರ್ಡ್‌” ಅನ್ನು ಪ್ರದಾನ ಮಾಡಿದೆ. ಡಾ. ಜಿನೇಶ್‌ ನಾಗವಿ ಅವರು “Assessment of Compliance in Hypertensive and Diabetic Patients at Primary Health Care: A Prospective Study" ಎಂಬ ಸಂಶೋಧನಾ ಲೇಖನವನ್ನು Indian Journal of Pharmacy Practice ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಈ ಸಂಶೋಧನೆ ಗುಣಮಟ್ಟ, ವೈಜ್ಞಾನಿಕ ಆಳತೆ ಹಾಗೂ ಸಮಕಾಲೀನ ಆರೋಗ್ಯ ಸವಾಲುಗಳಿಗೆ ಹೊಂದಿಕೆಯಾಗಿರುವುದಕ್ಕಾಗಿ ಈ ಗೌರವಕ್ಕೆ ಪಾತ್ರವಾಗಿದೆ. ಈ ಪ್ರಶಸ್ತಿಯನ್ನು 74ನೇ ಇಂಡಿಯನ್ ಫಾರ್ಮಾಸ್ಯೂಟಿಕಲ್ ಕಾಂಗ್ರೆಸ್ (IPC) ಸಮಾವೇಶದ ಸಂದರ್ಭದಲ್ಲಿ, 2025ರ ಡಿಸೆಂಬರ್ 19 ರಿಂದ 21ರವರೆಗೆ ಬೆಂಗಳೂರಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC), ಕರ್ನಾಟಕದಲ್ಲಿ ಆಯೋಜಿಸಲಾದ APTI ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪದಾನ ಮಾಡಲಾಯಿತು. ಈ ಗೌರವವು ಸಾಮಾನ್ಯವಾಗಿ ವೈಜ್ಞಾನಿಕ ವಿಶ್ಲೇಷಣೆಯ ಶ್ರೇಷ್ಠತೆ, ಸಂಶೋಧನಾ ನವೀನತೆ ಹಾಗೂ ಪ್ರಸ್ತುತ ಫಾರ್ಮಾಸ್ಯೂಟಿಕಲ್ ಕ್ಷೇತ್ರದ ಅಗತ್ಯಗಳಿಗೆ ಸ್ಪಂದಿಸುವ ಸಂಶೋಧನೆಗಳಿಗೆ ಮಾತ್ರ ನೀಡಲಾಗುತ್ತದೆ. ಈ ಪ್ರಶಸ್ತಿ ದೊರಕಿರುವುದು ಡಾ. ಜಿನೇಶ್ ನಾಗವಿ ಅವರ ಸಂಶೋಧನಾ ಕಾರ್ಯದ ಗುಣಮಟ್ಟ, ವೈಜ್ಞಾನಿಕ ಪುಸ್ತುತಿಕೆಯ ಸ್ಪಷ್ಟತೆ ಹಾಗೂ ತಜ್ಞ ವಿಮರ್ಶಕರ ಸಮಿತಿಯಿಂದ ದೊರೆತ ಉನ್ನತ ಮೌಲ್ಯಮಾಪನವನ್ನು ಪ್ರತಿಬಿಂಬಿಸುತ್ತದೆ. ಡಾ. ಜಿನೇಶ್ ಬಹುಬಲಿ ನಾಗವಿ ಅವರು ಪ್ರಸ್ತುತ ಶಾರದಾ ವಿಲಾಸ್ ಕಾಲೇಜ್ ಆಫ್ ಫಾರ್ಮಸಿ, ಶಾರದಾ ವಿಲಾಸ್ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್, ಮೈಸೂರು ಇಲ್ಲಿ ಫಾರ್ಮಾಸ್ಯೂಟಿಕಲ್ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಅವರು HESDAR ಸೆಂಟರ್, ಮೈಸೂರುನಲ್ಲಿ ಗೌರವಾನ್ವಿತ ಸಂಯೋಜಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಾಧನ ಡಾ. ಜಿನೇಶ್ ನಾಗವಿ ಅವರ ವೃತ್ತಿಪರ ಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಭಾರತೀಯ ಫಾರ್ಮಾಸ್ಯೂಟಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಅವರ ಕೊಡುಗೆಗೆ ಮತ್ತೊಂದು ಗೌರವವಾಗಿದೆ.

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಮಾಧ್ಯಮ ವಕ್ತಾರರಾಗಿ ಸುದೇಶ್ ಕುಮಾರ್ ಮಂಗಳೂರು ಆಯ್ಕೆ

Article Image

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಮಾಧ್ಯಮ ವಕ್ತಾರರಾಗಿ ಸುದೇಶ್ ಕುಮಾರ್ ಮಂಗಳೂರು ಆಯ್ಕೆ

ಮಂಗಳೂರು: ಕನ್ನಡ ನಾಡು-ನುಡಿ ಹಾಗೂ ಶಿಕ್ಷಣದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ 'ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ'ದ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಸುದೇಶ್ ಕುಮಾರ್ ಮಂಗಳೂರು ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ​ಕನ್ನಡ ಮಾಧ್ಯಮ ಶಾಲೆಗಳನ್ನು ಸಬಲೀಕರಣಗೊಳಿಸುವ ಮತ್ತು ಸರ್ಕಾರಿ ಶಾಲೆಗಳ ಹಿತರಕ್ಷಣೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಈ ಮಹತ್ವದ ಅಭಿಯಾನಕ್ಕೆ ಮಾಧ್ಯಮಗಳ ಸಹಕಾರ ಮತ್ತು ಸಮರ್ಪಕ ಸಂವಹನದ ಅಗತ್ಯವಿದ್ದು, ಸುದೇಶ್ ಕುಮಾರ್ ಅವರ ಸುದೀರ್ಘ ಪತ್ರಿಕಾ ಅನುಭವವು ಈ ನಿಟ್ಟಿನಲ್ಲಿ ಆನೆಬಲ ತಂದಿದೆ. ​ಆಯ್ಕೆಯ ಪ್ರಮುಖ ಅಂಶಗಳು: ಅನುಭವ: ಪತ್ರಿಕೋದ್ಯಮದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ಸುದೇಶ್ ಕುಮಾರ್ ಅವರು ಸಮಾಜಮುಖಿ ಕಳಕಳಿಯ ಬರಹಗಳ ಮೂಲಕ ಗುರುತಿಸಿಕೊಂಡಿದ್ದಾರೆ. ​ಜವಾಬ್ದಾರಿ: ಇನ್ನು ಮುಂದೆ ಅಭಿಯಾನದ ಅಧಿಕೃತ ಮಾಹಿತಿ, ಉದ್ದೇಶಗಳು ಮತ್ತು ಮುಂಬರುವ ಯೋಜನೆಗಳನ್ನು ಮಾಧ್ಯಮಗಳಿಗೆ ತಲುಪಿಸುವ ಸಂಪರ್ಕ ಸೇತುವೆಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ​ಸಂಘಟನೆ: ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಅವರು ಹೊಂದಿರುವ ಸಂಘಟನಾ ಚತುರತೆಯು ಅಭಿಯಾನವನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಸಹಕಾರಿಯಾಗಲಿದೆ. ಕನ್ನಡ ಶಾಲೆಗಳು ನಮ್ಮ ಸಂಸ್ಕೃತಿಯ ತಾಯಿಬೇರುಗಳು. ಈ ಅಭಿಯಾನದ ಮೂಲಕ ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ, ಎಂದು ಸುದೇಶ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಅಭಿಯಾನದ ರಾಜ್ಯ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಸುದೇಶ್ ಕುಮಾರ್ ಅವರ ಈ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ಯದರ್ಶಿ, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ, ಕರ್ನಾಟಕ.

ಧನ್ಯಕುಮಾರ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ

Article Image

ಧನ್ಯಕುಮಾರ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ

ತಾಲೂಕಿನ ಹಿರಿಯ ಜೈನ ಸಮಾಜದ ಮುಖಂಡರು ಹಾಗೂ ಪಟ್ಟಣದ ಪಾರ್ಶ್ವನಾಥ ಸಹಕಾರ ಸಂಘ ನಿಯಮಿತದ ಅಧ್ಯಕ್ಷರು ಆದ ಇ.ವಿ ಧನ್ಯಕುಮಾ‌ರ್ ಇವರಿಗೆ ಕರ್ನಾಟಕ ಸರ್ಕಾರದ ವತಿಯಿಂದ "ಸಹಕಾರ ರತ್ನ ಪ್ರಶಸ್ತಿ" ಲಭಿಸಿದೆ. ಇವರು ಸಹಕಾರ ಕ್ಷೇತ್ರದಲ್ಲಿ ಐದು ದಶಕಗಳ ಕಾಲ ಹಗಲಿರಳು ಶ್ರಮಿಸಿ ಅನೇಕ ಸಹಕಾರ. ಸಂಘಗಳಲ್ಲಿ ಸೇವೆ ಸಲ್ಲಿಸಿ ಹಾಗೂ ಪಟ್ಟಣದ ಶ್ರೀ ಪಾರ್ಶ್ವನಾಥ ಬ್ಯಾಂಕಿನ ಅಧ್ಯಕ್ಷರು ಮತ್ತು ಸಂಸ್ಥಾಪಕರು ಆಗಿ ಬ್ಯಾಂಕಿನ ಸ್ವಂತ ಕಟ್ಟಡದ ನಿರ್ಮಾತೃ ಆಗಿದ್ದಾರೆ ಹಾಗೂ ಖಾಸಗಿ ಬಸ್ಸಿನ ಮಾಲೀಕರು ಆದಂತಹ ಇವರು ವಿಜಯಗಂಗೋತ್ರಿ ಶಾಲೆಯ ಕಾರ್ಯದರ್ಶಿಯಾಗಿ ಹಾಗೂ ಜೈನ ಸಮಾಜದ ಗೌರವಾಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಗೆ ಶ್ರಮಿಸಿದವರಾಗಿದ್ದ ಇವರ ಹಿರಿಯತನಕ್ಕೆ ಗೌರವ ಲಭಿಸಿದ್ದಾಗಿದೆ. ಜೈನ ಸಮಾಜದ ಮುಖಂಡರುಗಳಾದ ಧನಪಾಲ್‌, ಬ್ರಹ್ಮಪಾಲ್.ಡಿ, ಆದಿರಾಜಯ್ಯ, ಅನುಷ್‌ ಜೈನ್, ಶ್ರೀ ಪಾರ್ಶ್ವನಾಥ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಟಿ.ಜಿ.ಗುರುಸ್ವಾಮಿ, ಸಿಬ್ಬಂಧಿವರ್ಗ, ಸರ್ವ ಸದಸ್ಯರು ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ.

ಕಾರ್ಕಳದ ಶಗುನ್ ಎಸ್ ವರ್ಮಾ ಭಾರತ ತಂಡದ ವಾಲಿಬಾಲ್ ಮಹಿಳಾ ತಂಡಕ್ಕೆ ಆಯ್ಕೆ

Article Image

ಕಾರ್ಕಳದ ಶಗುನ್ ಎಸ್ ವರ್ಮಾ ಭಾರತ ತಂಡದ ವಾಲಿಬಾಲ್ ಮಹಿಳಾ ತಂಡಕ್ಕೆ ಆಯ್ಕೆ

ಕಾರ್ಕಳದ ಶಗುನ್ ಎಸ್ ವರ್ಮಾ ಭಾರತ ತಂಡದ 15 ವರ್ಷ ಕೆಳಗಿನ ವಾಲಿಬಾಲ್ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. World School Games Federation ವತಿಯಿಂದ ಚೀನಾದಲ್ಲಿ ನಡೆಯಲಿರುವ ವಾಲಿಬಾಲ್ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕರ್ನಾಟಕದ ಏಕೈಕ ಆಟಗಾರ್ತಿ ಎಂಬ ಹೆಮ್ಮೆ ಇವರದ್ದು. ಇವರು ಕಾರ್ಕಳದ MMC Decorators ನ ಮಾಲಿಕರಾದ ಸಂದೇಶ್ ವರ್ಮ ಮತ್ತು ಶೃತಿರಾಜ್ ಇವರ ಪುತ್ರಿಯಾಗಿದ್ದು, ಪ್ರಸ್ತುತ ಕ್ರೈಸ್ಟ್ ಕಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಮಲೆನಾಡು ವಿಭಾಗದ ಜಿನ ಭಜನಾ ಸ್ಪರ್ಧೆಗಳು

Article Image

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಮಲೆನಾಡು ವಿಭಾಗದ ಜಿನ ಭಜನಾ ಸ್ಪರ್ಧೆಗಳು

ಭಾರತೀಯ ಜೈನ್ ಮಿಲನ್ ವಲಯ - 8 ಬೆಂಗಳೂರು, ಮಲೆನಾಡು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಗಳು ಸೀಸನ್- 9, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಮಲೆನಾಡು ವಿಭಾಗದ ಜಿನ ಭಜನಾ ಸ್ಪರ್ಧೆಗಳು ದಿನಾಂಕ 16 -11- 2025ರಂದು ಭಾನುವಾರ ಶಿವಮೊಗ್ಗದ ಹೊಂಬುಜ ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ನಡೆದವು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಮತ್ತು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಅನಿತಾ ಸುರೇಂದ್ರ ಕುಮಾರ್ ರವರು ಜಿನ ಭಜನಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕೇಂದ್ರ ಸಮಿತಿಯ ಪಿ .ಅಜಿತ್ ಕುಮಾರ್, ಬೆಂಗಳೂರು ವಿಭಾಗದ ಕಾರ್ಯದರ್ಶಿ ವಿಲಾಸ್ ಪಾಸಣ್ಣವರ್, ಮಲೆನಾಡು ವಿಭಾಗದ ಉಪಾಧ್ಯಕ್ಷರಾದ ಯಶೋಧರ ಹೆಗ್ಡೆ ಕೆ. ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಸಾನಿಧ್ಯ ಮತ್ತು ಆಶೀರ್ವಚನ ನೀಡಿದರು. ಪೂಜ್ಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಭಾರತೀಯ ಆಧ್ಯಾತ್ಮ 14ನೆಯ ಶತಮಾನದವರೆಗೆ ಜ್ಞಾನಮಾರ್ಗದಲ್ಲಿ ಕಠಿಣವಾದ ತಪಸ್ಸುಗಳು, ವ್ರತಗಳು, ನಿಯಮಗಳ ಮೂಲಕ ಭಗವಂತನನ್ನು ತಲುಪುವ ಮಾರ್ಗವಾಗಿತ್ತು. ಹದಿನಾಲ್ಕನೆಯ ಶತಮಾನದ ನಂತರದಲ್ಲಿ ಭಗವಂತನ ಭಜನೆ ಕೀರ್ತನೆ ಮುಂತಾದ ಎಲ್ಲರಿಗೂ ಸುಲಭವಾದ ಭಕ್ತಿ ಮಾರ್ಗದಲ್ಲಿ ಸಾಗುತ್ತಾ ಬಂದಿದೆ. ಮಹಾಕವಿ ರತ್ನಾಕರವರ್ಣಿ ಮುಂತಾದ ಅನೇಕ ಕವಿಗಳು ಜೈನ ಆಧ್ಯಾತ್ಮ ಗೀತೆಗಳನ್ನು ರಚಿಸಿದ್ದಾರೆ. ಶತಮಾನಗಳಿಂದ ಭಜನೆ ಮತ್ತು ಭಕ್ತಿಗೀತೆಗಳು ಸ್ತೋತ್ರಗಳು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ದೈನಂದಿನ ಅವಿಭಾಜ್ಯ ಅಂಗಗಳಾಗಿದ್ದವು. ಆದರೆ ಪ್ರಸ್ತುತದಲ್ಲಿ ಮಕ್ಕಳಿಗೆ ಲೌಕಿಕ ಶಿಕ್ಷಣಕ್ಕೆ ಮಾತ್ರ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಆದ್ದರಿಂದ ತಂದೆ - ತಾಯಿಯರು ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆ ಜೊತೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಸಹ ನೀಡಬೇಕು, ಇಲ್ಲದಿದ್ದರೆ ಮಕ್ಕಳ ಶಿಕ್ಷಣ ಅಪೂರ್ಣವಾಗುತ್ತದೆ. ಪ್ರತಿದಿನ ಅರ್ಧ ಗಂಟೆಯಾದರೂ ಮಕ್ಕಳಿಗೆ ಜೈನ ಧರ್ಮದ ಮೂಲ ಗುಣಗಳು ಮತ್ತು ಆಚಾರ ವಿಚಾರಗಳನ್ನು, ಸಣ್ಣ ಸಣ್ಣ ಸಂಗತಿಗಳನ್ನು ತಿಳಿಸಿಕೊಡಬೇಕು. ಮನೆಗಳಲ್ಲಿ ಹಿರಿಯರು ಮಕ್ಕಳನ್ನು ಸೇರಿಕೊಂಡು ಜಿನ ಭಜನೆಗಳನ್ನು ಮಾಡುವುದು ಮತ್ತು ಮನೆಯಲ್ಲಿಯೇ ಧಾರ್ಮಿಕ ಸಂಸ್ಕಾರ ನಿಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ಜೈನ ಪೂರ್ವಾಚಾರ್ಯರು ಉಪಸರ್ಗಗಳು ಉಂಟಾದಾಗ ಜಿನ ಭಗವಂತರ ಧ್ಯಾನದಲ್ಲಿ ತಲ್ಲೀನರಾಗಿ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ. ಆಚಾರ್ಯ ಸಮಂತಭದ್ರಸ್ವಾಮಿವರ ಸ್ವಯಂಭೂಸ್ತೋತ್ರ, ಮಾನತುಂಗಾಚಾರ್ಯರ ಭಕ್ತಾಮರ ಸ್ತೋತ್ರ, ಧನಂಜಯ ಕವಿಯ ವಿಷಾಪಹಾರ ಸ್ತೋತ್ರ ಇಂತಹ ಅನೇಕ ಸ್ತೋತ್ರಗಳಿಂದ ಜಿನ ಭಕ್ತಿಯ ಮಹಿಮೆಯಿಂದ ಉಪಸರ್ಗಗಳನ್ನು ನಿವಾರಣೆ ಮಾಡಿಕೊಂಡರು. ದೈಹಿಕ ಆರೋಗ್ಯಕ್ಕೆ ಭೋಜನ ಹೇಗೆ ಅಗತ್ಯವಿದೆಯೋ ಅದೇ ರೀತಿಯಲ್ಲಿ ಮಾನಸಿಕ ಆರೋಗ್ಯಕ್ಕೆ ಭಜನೆ ಅಷ್ಟೇ ಅಗತ್ಯವಾಗಿದೆ. ಜಿನಭಜನೆಯನ್ನು ಸ್ಪರ್ಧೆಗಾಗಿ ಮಾತ್ರವಲ್ಲದೆ ಜಿನ ಭಗವಂತರ ಭಕ್ತಿಯನ್ನು ಪ್ರತಿದಿನವೂ ಮಾಡುವುದರಿಂದ ಇಹ ಪರದಲ್ಲಿ ಶಾಂತಿ ನೆಮ್ಮದಿ ಪಡೆಯಬಹುದು ಎಂದು ಹೇಳಿದರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಅನಿತಾ ಸುರೇಂದ್ರ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಮನದಾಳದ ಮಾತುಗಳನ್ನು ಹೇಳುತ್ತಾ, ಕಳೆದ ಒಂಭತ್ತು ವರ್ಷಗಳಿಂದ ಜಿನ ಭಜನಾ ವೇದಿಕೆಯಿಂದ ಸಮಾಜದಲ್ಲಿ ಅನೇಕ ಉತ್ತಮವಾದ ಬೆಳವಣಿಗೆಗಳು ಆಗಿರುತ್ತವೆ. ಜಿನ ಭಜನಾ ಸ್ಪರ್ಧೆಗಳ ಫಲವಾಗಿ ಈಗ ಜೈನ ಸಮಾಜದಲ್ಲಿ ಜಿನ ಭಕ್ತಿ ಗೀತೆಗಳ ಹಾಡುಗಾರು, ಸಾಹಿತ್ಯ ರಚನೆಕಾರರು, ತೀರ್ಪುಗಾರರು, ಸಂಯೋಜಕರು ಮುಂತಾದ ಅನೇಕ ಪ್ರತಿಭೆಗಳು ಮುನ್ನೆಲೆಗೆ ಬಂದಿದ್ದಾರೆ ಎಂದು ಹೇಳಿದರು. ಸಮಾಜದ ಅನೇಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಿದೆ ಎಂಬ ಸಂತಸವನ್ನು ಹಂಚಿಕೊಂಡರು. ಸ್ಪರ್ಧೆಗಳು ಬಹುಮಾನ ಗಳಿಸಲು ಮಾತ್ರವಲ್ಲದೆ ಭಗವಂತರ ಸ್ಮರಣೆಯಿಂದ ಮಾನಸಿಕ ನೆಮ್ಮದಿ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. ಮುಂದಿನ ವರ್ಷದ ದಶಮಾನೋತ್ಸವದ ಯೋಜನೆಗಳ ಕುರಿತು ತಮ್ಮ ಪರಿಕಲ್ಪನೆಯನ್ನು ತಿಳಿಸಿಕೊಟ್ಟರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ರವರು, ಜೈನ್ ಮಿಲನ್ ಸಂಘಟನೆಯು ರಾಷ್ಟ್ರ ಮತ್ತು ರಾಜ್ಯ ವ್ಯಾಪ್ತಿಯ ಸಂಘಟನೆಯಾಗಿದೆ ಎಂದು ಹೇಳಿದರು. ವಿದೇಶಗಳಲ್ಲಿ ಸಹ ಅನಿವಾಸಿ ಭಾರತೀಯ ಜೈನರು ಪ್ರತಿ ಭಾನುವಾರ ಜೈನ ಧರ್ಮದ ಆಚಾರ ವಿಚಾರಗಳನ್ನು ತಮ್ಮ ಮಕ್ಕಳಿಗೆ ಕಲಿಸಿ ಕೊಡುತ್ತಿದ್ದಾರೆ ಎಂದು ಹೇಳಿದರು. ಮುನಿರಾಜ ರೆಂಜಾಳ ಮತ್ತು ಕಾವ್ಯ ಬೆಂಗಳೂರುರವರು ತೀರ್ಪುಗಾರರಾಗಿ ಪ್ರತಿಯೊಂದು ತಂಡದ ಸ್ಪರ್ಧಿಗಳಿಗೆ ಉತ್ತಮವಾದ ವಿಮರ್ಶೆಗಳನ್ನು ಮತ್ತು ಸಲಹೆಗಳನ್ನು ನೀಡಿದರು. ಹಿರಿಯರ ವಿಭಾಗದಲ್ಲಿ ಓಂಕಾರ್ ಜಿನ ಭಜನಾ ತಂಡ ಹೊರನಾಡು ಪ್ರಥಮ ಸ್ಥಾನ, ಸುಸ್ವರ ಜಿನ ಭಜನಾ ತಂಡ ಹೊರನಾಡು ದ್ವಿತೀಯ ಸ್ಥಾನ ಮತ್ತು ತೃತೀಯ ಸ್ಥಾನವನ್ನು ಶ್ರೀ ಶಾಂತಿನಾಥ ಜಿನ ಭಜನಾ ತಂಡ ಮೇಗುಂದ ಹಾಗೂ ದಿವ್ಯ ದ್ವನಿ ಜಿನ ಭಜನಾ ತಂಡ ಹೊರನಾಡು ಎರಡೂ ತಂಡಗಳು ಪಡೆದವು. ಕಿರಿಯರ ವಿಭಾಗದಲ್ಲಿ ಪಾರಸ್ ಜಿನ ಭಜನಾ ತಂಡ ಮಂಡವಳ್ಳಿ ಪ್ರಥಮ ಸ್ಥಾನ, ಶುಭಸ್ವರ ಜಿನ ಭಜನಾ ತಂಡ ಹೊರನಾಡು ದ್ವೀತೀಯ ಸ್ಥಾನ ‌ಮತ್ತು ತೃತೀಯ ಸ್ಥಾನವನ್ನು ಸಿದ್ಧಿ ಪದ್ಮಾವತಿ ಜಿನ ಭಜನಾ ತಂಡ ಹೊರನಾಡು ಹಾಗೂ ಸರ್ವತೋಭದ್ರ ಜಿನ ಭಜನಾ ತಂಡ ಸಾಗರ ಎರಡೂ ತಂಡಗಳು ಹಂಚಿಕೊಂಡವು. ವಿಜೇತ ತಂಡಗಳಿಗೆ ನಗದು ಪುರಸ್ಕಾರ ಮತ್ತು ಟ್ರೊಫಿಗಳನ್ನು ನೀಡಲಾಯಿತು. ಹಿರಿಯರ ವಿಭಾಗದಲ್ಲಿ - 28 ಮತ್ತು ಕಿರಿಯರ ವಿಭಾಗದಲ್ಲಿ - 13 ತಂಡಗಳು ಭಾಗವಹಿಸಿದ್ದವು . ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೈನ್ ಮಿಲನ್ ಜಿನ ಭಜನಾ ಕೇಂದ್ರ ಸಮಿತಿಯ ಪಿ. ಅಜಿತ್ ಕುಮಾರ್ , ಬೆಂಗಳೂರು ವಿಭಾಗದ ಕಾರ್ಯದರ್ಶಿ ವಿಲಾಸ್ ಪಾಸಣ್ಣವರ್, ಶಿವಮೊಗ್ಗ ದಿಗಂಬರ ಸಂಘದ ಅಧ್ಯಕ್ಷರಾದ ಜಯರಾಜ ಬಿ. ಪಾಂಡಿ, ಪ್ರಿಯಕಾರಿಣಿ ಮಹಿಳಾ ಸಮಾಜದ ಅಧ್ಯಕ್ಷೆ ಶೀಲಾ ಸಿರಸಪ್ಪ ಗೋಗಿ, ತೀರ್ಥಹಳ್ಳಿಯ ಡಾ. ಜೀವಂಧರ ಜೈನ್, ಮಲೆನಾಡು ವಿಭಾಗದ ಉಪಾಧ್ಯಕ್ಷ ಯಶೋಧರ ಹೆಗ್ಡೆ. ಕೆ., ಕಾರ್ಯದರ್ಶಿ ಡಿ .ಪೂರ್ಣಿಮಾ ಅಶೋಕ್ ಕುಮಾರ್, ನಿರ್ದೇಶಕರಾದ ಬಿ.ಡಿ. ಧರ್ಮಪಾಲ್, ದೇವರಾಜ್ ಜೈನ್ ಕುಪ್ಪಡಿ ವಗೆಕೆರೆ ಇವರುಗಳು ಉಪಸ್ಥಿತರಿದ್ದರು. ಶಿವಮೊಗ್ಗ ಜೈನ್ ಮಿಲನ್ ಅಧ್ಯಕ್ಷರಾದ ಅಪ್ಪಣ್ಣಜ್ಜ ಎ.ಪಿ ಇವರು ಅಧ್ಯಕ್ಷತೆ ವಹಿಸಿದ್ದರು. ಪೂರ್ಣಿಮಾ ಅಶೋಕ್ ಕುಮಾರ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ರೋಹಿಣಿ ಪ್ರಶಾಂತ ಪ್ರಾರ್ಥನೆ ಮಾಡಿದರು. ಸುಜಾತಾ ಪ್ರಶಾಂತ್ ವಂದಿಸಿದರು .

ನಾರಾವಿ ಬಸದಿಯಲ್ಲಿ ಕಾರ್ತಿಕ ದೀಪೋತ್ಸವ

Article Image

ನಾರಾವಿ ಬಸದಿಯಲ್ಲಿ ಕಾರ್ತಿಕ ದೀಪೋತ್ಸವ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಗ್ರಾಮದಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವವು ನ. 11 ರಂದು ಮಂಗಳವಾರ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ಪೂಜೆ, ಆರಾಧನೆಯೊಂದಿಗೆ ನಡೆಯಲಿದೆ ಎಂದು ಬಸದಿಯ ಆಡಳಿತ ಸಮಿತಿಯವರು ತಿಳಿಸಿದ್ದಾರೆ. ಮಂಗಳವಾರ ಅಪರಾಹ್ನ 2.00 ಗಂಟೆಯಿಂದ ನಿತ್ಯವಿಧಿ ಸಹಿತ ದೇವಿ ಪದ್ಮಾವತಿ ಅಮ್ಮನವರ ಆರಾಧನೆ 6.00 ಗಂಟೆಗೆ ಉಯ್ಯಾಲೆ ಸೇವೆ, ಭಗವಾನ್ ಧರ್ಮನಾಥ ಸ್ವಾಮಿಗೆ 24 ಕಲಶ ಅಭಿಷೇಕ ಹಾಗೂ ದೇವರ ಉತ್ಸವದ ಬಳಿಕ ದೀಪೋತ್ಸವ ನಡೆಯಲಿದೆ. ಹೊರನಾಡು ಜಯಶ್ರೀ ಜೈನ್ ಸಂಗೀತ ಪೂಜಾಷ್ಟಕ ಹಾಡುವರು. ರಾತ್ರಿ 11.00 ಗಂಟೆಯಿಂದ ಇಡೀ ರಾತ್ರಿ ನಾರಾವಿಯ ಭಾರತೀಯ ಜೈನ್‌ಮಿಲನ್ ಆಶ್ರಯದಲ್ಲಿ ಜಿನಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕಕರು ತಿಳಿಸಿದ್ದಾರೆ. ಮಾನಸಿ ಮಹಿಳಾ ಸಂಘ ಉದ್ಘಾಟನೆ: ಸಂಜೆ 5 ಗಂಟೆಗೆ ಮಾನಸಿ ಮಹಿಳಾ ಸಂಘವನ್ನು ಮೂಡಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಉದ್ಘಾಟಿಸುವರು. ಬಿ. ನಿರಂಜನ ಅಜ್ರಿ ರಾಮೆರಗುತ್ತು ಅಧ್ಯಕ್ಷತೆ ವಹಿಸುವರು. ಮೂಡಬಿದ್ರೆ ನೋಟರಿ ವಕೀಲರಾದ ಶ್ವೇತಾ ಜೈನ್ ಶುಭಾಶಂಸನೆ ಮಾಡುವರು.

ಅ. 24: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

Article Image

ಅ. 24: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಅ. 24 ರಂದು ಶುಕ್ರವಾರ ಧರ್ಮಸ್ಥಳದಲ್ಲಿ ನೌಕರವೃಂದದವರು, ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಭಗವಾನ್ ಚಂದ್ರನಾಥಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳು ಪೂಜ್ಯ ಹೆಗ್ಗಡೆಯವರಿಗೆ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡುವರು. ಸಭಾಕಾರ್ಯಕ್ರಮ: ಅಪರಾಹ್ನ ನಾಲ್ಕು ಗಂಟೆಯಿಂದ ನಡೆಯುವ ಸಮಾರಂಭದಲ್ಲಿ ತುಮಕೂರಿನ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕರುಗಳಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಮೆಸ್ಕಾಂ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡುವರು. ಹಿರಿಯ ನೌಕರರ ಸನ್ಮಾನ ಹಾಗೂ ಹೆಗ್ಗಡೆಯವರು ಹೊಸ ಯೋಜನೆಗಳನ್ನು ಪ್ರಕಟಿಸುವರು. ಹಬ್ಬದ ವಾತಾವರಣ: ದೀಪಾವಳಿ ಹಬ್ಬದ ಜೊತೆಗೆ ಧರ್ಮಸ್ಥಳದಲ್ಲಿ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಅಂಗವಾಗಿ ಎಲ್ಲೆಲ್ಲೂ ಸಂಭ್ರಮ- ಸಡಗರದ ವಾತಾವರಣವಿದೆ. ಬಸದಿ, ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅನ್ನಪೂರ್ಣ ಹಾಗೂ ವಸತಿಛತ್ರಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳು ಮತ್ತು ಪ್ರಾಕೃತಿಕ ಪರಿಕರಗಳಿಂದ ಅಲಂಕರಿಸಿದ್ದು, ಕಣ್ಮನ ಸೆಳೆಯುತ್ತಿವೆ. 1968ರ ಅಕ್ಟೋಬರ್ 24 ರಂದು ಧರ್ಮಸ್ಥಳದ ಇಪ್ಪತ್ತೊಂದನೆ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಸಂಸ್ಥೆಗಳು, ಕೆರೆಗಳಿಗೆ ಕಾಯಕಲ್ಪ, ಉಚಿತ ಸಾಮೂಹಿಕ ವಿವಾಹ ಸಮಾರಂಭ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ಆಯುರ್ವೇದಕ್ಕೆ ಪ್ರೋತ್ಸಾಹ, ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ, ರುದ್ರಭೂಮಿ ಮೊದಲಾದ ವಿನೂತನ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಮೂಲಕ ಉನ್ನತ ಸೇವೆ-ಸಾಧನೆ ಮಾಡಿ ಎಲ್ಲರ ಪ್ರೀತಿ-ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.

ಹುಬ್ಬಳ್ಳಿ: ಬಸದಿಗಳಲ್ಲಿ ಭಕ್ತಾಮರ ಭಕ್ತಿ

Article Image

ಹುಬ್ಬಳ್ಳಿ: ಬಸದಿಗಳಲ್ಲಿ ಭಕ್ತಾಮರ ಭಕ್ತಿ

ಭಕ್ತಾಮರವಾಲೆ ಬಾಬಾ ಖ್ಯಾತಿಯ ಪರಮಪೂಜ್ಯ ಮುನಿಶ್ರೀ ಪ್ರಣಾಮಸಾಗರ ಮಹಾರಾಜರ ಕರೆಯ ಮೇರೆಗೆ ದೇಶದ ಬಹುಪಾಲು ಜಿನಮಂದಿರಗಳಲ್ಲಿ ಜೈನ ಜಗತ್ತಿನ ಜನಪ್ರಿಯ ಸ್ತೋತ್ರ ಭಕ್ತಾಮರ ಏಕಕಾಲಕ್ಕೆ ಗುಂಜಾಯಮಾನಗೊಳ್ಳುವ ಮೂಲಕ ಸುಖ ಶಾಂತಿ ನೆಮ್ಮದಿ ಸಂತೋಷಗಳ ಹಿತಾನುಭವ ನೀಡಿತು. ವಿಶ್ವಶಾಂತಿಯ ಭಾವನೆಯೊಂದಿಗೆ "ಭಕ್ತಾಮರ ಉತ್ಸವ " ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಿನಿಂದ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಶ್ರಾವಕ ಶ್ರಾವಕಿಯರು ಸಂಭ್ರಮದಿಂದ ಪಾಲ್ಗೊಂಡರು. ಹುಬ್ಬಳ್ಳಿಯ ಎಲ್ಲ ಬಸದಿಗಳಲ್ಲೂ ಭಕ್ತಾಮರ ಉತ್ಸವ ವರ್ಣರಂಜಿತವಾಗಿ ನಡೆಯಿತು. ನಗರದ ವಿವಿಧ ಮಹಿಳಾ ಸಮಾಜಗಳ ನೇತೃತ್ವದಲ್ಲಿ ವಿವಿಧ ಬಸದಿಗಳಲ್ಲಿ ವೈವಿಧ್ಯಮಯ ಅಲಂಕಾರ ಸಹಿತ ಭಕ್ತಾಮರ ಪಾಠ ನಡೆಯಿತು. ಭಕ್ತಾಮರ ನಾಯಕ ಭಗವಾನ್ ಆದಿನಾಥರೇ ಮೂಲನಾಯಕರಾಗಿರುವ, ಭಿತ್ತಿಗಳಲ್ಲಿ ಭಕ್ತಾಮರ ಚಿತ್ತಾರವನ್ನು ಹೊಂದಿರುವ ಭಗವಾನ್ ಶ್ರೀ ಆದಿನಾಥ ಬಸದಿ, ಭಗವಾನ್ ಶ್ರೀ ಶಾಂತಿನಾಥ ಬಸದಿ, ಭಗವಾನ್ ಶ್ರೀ ಚಂದ್ರಪ್ರಭ ಬಸದಿ, ಭಗವಾನ್ ಶ್ರೀ ಅನಂತನಾಥಬಸದಿ, ಭಗವಾನ್ ಶ್ರೀ ಪಾರ್ಶ್ಶ್ವನಾಥ ಬಸದಿ, ಭಗವಾನ್ ಶ್ರೀ ಚಂದ್ರಪ್ರಭ ಬಸದಿ, ಭಗವಾನ್ ಶ್ರೀ ಆದಿನಾಥರ ಸಮವಸರಣವನ್ನೇ ಹೊಂದಿರುವ ತ್ರಿಕೂಟ ಬಸದಿಗಳಲ್ಲಿ ನಡೆದ ಸಾಮೂಹಿಕ ಭಕ್ತಾಮರ ಪಾಠ ನೆರೆದ ಜನರಿಗೆ ವಿಶಿಷ್ಟ, ಅನುಪಮ ಆನಂದವನ್ನು ನೀಡಿತು.. ಪ್ರತಿ ಒಂದು ಶ್ಲೋಕ ಪಾಠದ ನಂತರ ದೀಪ ಬೆಳಗಿ ಭಗವಂತನ ಸನ್ನಿಧಿಗೆ ಅರ್ಪಿಸಿ ಭಕ್ತಿ ಮಾಡಲಾಯಿತು. ದೀಪಾವಳಿಗೆ ಮುನ್ನ ಒಂದು ಕಿರು ದೀಪೋತ್ಸವ ನಡೆಯಿತು. ಭಗವಾನ್ ಶ್ರೀ ಆದಿನಾಥ ಸ್ವಾಮಿ, ಆಚಾರ್ಯ ಶ್ರೀಮಾನತುಂಗರು, ಭಕ್ತಾಮರ ಸ್ತೋತ್ರ, ಭಕ್ತಾಮರವಾಲೇ ಬಾಬಾರ ಜಯಘೋಷಗಳು ಮೊಳಗಿದವು.

ಹಿರಿಯ ವಕೀಲ ಬಿಜೆಪಿ ನೇತಾರ ಎಂ.ಕೆ. ವಿಜಯಕುಮಾರ್

Article Image

ಹಿರಿಯ ವಕೀಲ ಬಿಜೆಪಿ ನೇತಾರ ಎಂ.ಕೆ. ವಿಜಯಕುಮಾರ್

ಕಾರ್ಕಳ, ಅ. 3: ಹಿರಿಯ ವಕೀಲ, ಬಿಜೆಪಿ ಹಿರಿಯ ನಾಯಕರಾದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ. ಕೆ. ವಿಜಯಕುಮಾರ್ (82) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. 1968ರಲ್ಲಿ ವಕೀಲ ವೃತ್ತಿಗೆ ಪ್ರವೇಶಿಸಿದ ಅವರು, ಬಡವರು, ಕೃಷಿ ಕಾರ್ಮಿಕರು ಮತ್ತು ಅಸಹಾಯಕ ಮಹಿಳೆಯರ ಪರ ಉಚಿತವಾಗಿ ವಾದ ಮಂಡಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ವಿಜ್ಞಾನ ಮತ್ತು ಕಾನೂನಿನಲ್ಲಿ ಪದವಿ ಪಡೆದ ಅವರು ಕಾನೂನು ಕ್ಷೇತ್ರದೊಂದಿಗೆ ಸಮಾಜಸೇವೆ, ಧಾರ್ಮಿಕ ಹಾಗೂ ಪರಿಸರಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸಮಾಜಮುಖಿ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದ ಅವರು, ಕಾರ್ಕಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಕಾರ್ಕಳ ಬಿಜೆಪಿಯಲ್ಲಿ ಹಿರಿಯರಾಗಿ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ನಿಧನ: ವೀಣಾ ಅಭಿನಂದನ್‌ ವನಕುದುರೆ

Article Image

ನಿಧನ: ವೀಣಾ ಅಭಿನಂದನ್‌ ವನಕುದುರೆ

ಹುಬ್ಬಳ್ಳಿ: ಪ್ರಿಯದರ್ಶಿನಿ ಕಾಲೋನಿ ನಿವಾಸಿ ವೀಣಾ ಅಭಿನಂದನ್‌ ವನಕುದುರೆ (53ವ) ಇವರು ಇಂದು ಬೆಳಿಗ್ಗೆ ನಿಧನ ಹೊಂದಿದರು. ಇವರು ಪತಿ ಅಭಿನಂದನ್‌ ವನಕುದುರೆ ಮತ್ತು ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.

ಸಚಿನ್ ಕುಮಾರ್ ಜೈನ್ ನಿರ್ದೇಶಕರಾಗಿ ಆಯ್ಕೆ

Article Image

ಸಚಿನ್ ಕುಮಾರ್ ಜೈನ್ ನಿರ್ದೇಶಕರಾಗಿ ಆಯ್ಕೆ

ಸವಣೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಇದರ ಪುತ್ತೂರು ಕ್ಷೇತ್ರದಿಂದ ನಿರ್ದೇಶಕರಾಗಿ ಪುಣ್ಚಪ್ಪಾಡಿ ಗ್ರಾಮದ ಸಚಿನ್ ಕುಮಾರ್ ಜೈನ್ ಅವರು 2ನೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಚಿನ್ ಕುಮಾರ್ ಜೈನ್ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ಪ್ರಸ್ತುತ ಪುಣ್ಚಪ್ಪಾಡಿ ಗೌರಿಗಣೇಶ ಸೇವಾಟ್ರಸ್ಟ್ ಅಧ್ಯಕ್ಷರಾಗಿ, ಮಂಗಳೂರಿನ ಧವಳ ಕೋ-ಅಪರೇಟಿವ್ ಸೊಸೈಟಿ ನಿಯಮಿತ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಚಿನ್ ಕುಮಾರ್ ಅವರು ಪುಣ್ಚಪಾಡಿ ಯುವರಾಜ ಕಡಂಬ ಮತ್ತು ಮಲ್ಲಿಕಾ ಯುವರಾಜ್ ಅವರ ಪುತ್ರ.

ಬೆಳ್ತಂಗಡಿ: ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮ

Article Image

ಬೆಳ್ತಂಗಡಿ: ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗುಂಡದ ಬಸದಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರದ ನಿಮಿತ್ತ ನಿರ್ಮಾಣಗೊಂಡ ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮವು ಇಂದು ಬೆಳಿಗ್ಗೆ ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಗಣ್ಯರು, ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.

First Previous

Showing 1 of 8 pages

Next Last