Article Image

ಭ. ಶ್ರೀ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ 2024ರ ಲೆಕ್ಕ ಪತ್ರ ಮಂಡಣೆ

Article Image

ಭ. ಶ್ರೀ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ 2024ರ ಲೆಕ್ಕ ಪತ್ರ ಮಂಡಣೆ

ವೇಣೂರು: ಭ| ಶ್ರೀ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ-2024ರ ಲೆಕ್ಕ ಪತ್ರ ಮಂಡಣೆಯು ನಾಳೆ(ಡಿ.15) ಅಪರಾಹ್ನ ಗಂಟೆ 4.30ಕ್ಕೆ ಸರಿಯಾಗಿ ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಜರುಗಲಿರುವುದು. ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಭಾರತಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಮಹಾಮಸ್ತಕಾಭಿಷೇಕ ಮಹೋತ್ಸವ-2024ರ ಅಧ್ಯಕ್ಷರೂ ಆಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಗೌರವ ಮಾರ್ಗದರ್ಶನ ನೀಡಲಿದ್ದಾರೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರು, ಮಹಾಮಸ್ತಕಾಭಿಷೇಕ ಮಹೋತ್ಸವದ 2024ರ ಕಾರ್ಯಧ್ಯಕ್ಷರಾಗಿರುವ ಡಾ. ಪದ್ಮಪ್ರಸಾದ ಅಜಿಲರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಮಾಜಿ ಸಚಿವರು, ಮಹಾಮಸ್ತಕಾಭಿಷೇಕ ಮಹೋತ್ಸವದ 2024ರ ಉಪಾಧ್ಯಕ್ಷರು ಹಾಗೂ ಸರಕಾರಿ ಸಂಪರ್ಕ ಸಮಿತಿಯ ಸಂಚಾಲಕರಾಗಿರುವ ಕೆ. ಅಭಯಚಂದ್ರ ಜೈನ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವೇಣೂರಿನ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಗಳು, ಮಹಾಮಸ್ತಕಾಭಿಷೇಕ ಮಹೋತ್ಸವ-2024ರ ಪ್ರಧಾನ ಕಾರ್ಯದರ್ಶಿಗಳಾಗಿರುವ ವಿ. ಪ್ರವೀಣ್ ಕುಮಾರ್ ಇಂದ್ರರವರು ತಿಳಿಸಿರುತ್ತಾರೆ.

ಎಕ್ಸಲೆಂಟ್ ಸಿ.ಬಿ.ಎಸ್.ಇ, ಮೂಡುಬಿದಿರೆ ಶಾಲಾ ವಾರ್ಷಿಕೋತ್ಸವ

Article Image

ಎಕ್ಸಲೆಂಟ್ ಸಿ.ಬಿ.ಎಸ್.ಇ, ಮೂಡುಬಿದಿರೆ ಶಾಲಾ ವಾರ್ಷಿಕೋತ್ಸವ

ವಿದ್ಯಾರ್ಥಿಗಳಾದವರು ತಮ್ಮ ವ್ಯಕ್ತಿತ್ವ, ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ನಮ್ಮ ದೇಶ, ನಮ್ಮ ಸಮಾಜ, ನಮ್ಮ ಕುಟುಂಬ ಎಂಬ ಭಾವನೆಯನ್ನು ಹೊಂದಿರಬೇಕು ಅಲ್ಲದೇ ನೈತಿಕ ಮೌಲ್ಯವನ್ನು ಬೆಳೆಸುವುದರೊಂದಿಗೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಮಾನವೀಯತೆ. ವಿದ್ಯೆಯೆಂಬುದು ಮನುಷ್ಯನ ಪ್ರಶಸ್ತಿ ಪಾತ್ರದಲ್ಲಿ ಇರುವುದಲ್ಲ ಬದಲಾಗಿ ಅವನ ವ್ಯಕ್ತಿತ್ವದಲ್ಲಿರುತ್ತದೆ ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ Dr. ಎಂ ಬಿ ಪುರಾಣಿಕ್ ರವರು ಎಕ್ಸಲೆಂಟ್ ಸಿಬಿಎಸ್ಈ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪುಸ್ತಕದ ವಿದ್ಯೆಯನ್ನು ಮಸ್ತಕಕ್ಕೆ ತೆಗೆದುಕೊಳ್ಳಬೇಕು ವಿದ್ಯಾರ್ಥಿಯಾದವನು ಜೀವನದ ನಾಲ್ಕು ಕಂಬಗಳಾದ ಹೆತ್ತವರು, ಸಮಾಜ, ಗುರು ಹಿರಿಯರು ಹಾಗೂ ಸ್ನೇಹಿತರನ್ನು ಹೊಂದಿರಬೇಕು, ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ವಿರೂಪಾಕ್ಷಪ್ಪರವರು ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಗೆ ಹುಟ್ಟಿನಿಂದಲೇ ಪ್ರತಿಭೆ ಬಂದಿರುತ್ತದೆ. ಅದು ಹೊರ ಹೊಮ್ಮಬೇಕಾದರೆ ವ್ಯಕ್ತಿಗೆ ಸೂಕ್ತ ವೇದಿಕೆ ಬೇಕು, ಸೂಕ್ತ ವಾತಾವರಣ ಹಾಗೂ ಪ್ರೋತ್ಸಾಹ ಬೇಕು. ಶಿಕ್ಷಣವು ಕೇವಲ ಪುಸ್ತಕದ ಬದನೆಕಾಯಿ ಆಗದೇ ಅದು ನೈಜ ರೀತಿಯಲ್ಲಿ ಇರಬೇಕು ಎಂದು ಮುಖ್ಯ ಅತಿಥಿಗಳಾದ ಮಾಜಿ ಎಪಿಎಂಸಿ ಅಧ್ಯಕ್ಷರಾದ ಕೃಷ್ಣರಾಜ ಹೆಗ್ಡೆಯವರು ಹೇಳಿದರು. ವಿದ್ಯಾರ್ಥಿಗಳಾದವರು ಓದು-ಬರಹದ ಜೊತೆಗೆ ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು. ಒಳ್ಳೆಯ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು. ಹೆತ್ತವರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಆ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯಾಗಬೇಕು ಎಂಬುವುದನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ರವರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ರವರು ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮೂಲಕ ಶುಭ ಹಾರೈಸಿದರು. ಪ್ರಾಂಶುಪಾಲರಾದ ಸುರೇಷರವರು ಶಾಲಾ ಶೈಕ್ಷಣಿಕ ವರದಿಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮಾಜಿ ಉಪಾಧ್ಯಕ್ಷೆಯಾದ ಸುಜಾತ, ಆಡಳಿತ ನಿರ್ದೇಶಕರಾದ ಬಿ. ಪಿ ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಬಿ. ಪುಷ್ಪರಾಜ್, ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ನಿಶಾಂತ್ ಪಿ ಹೆಗ್ಡೆ, ಶಾಲಾ ವಿದ್ಯಾರ್ಥಿ ನಾಯಕ ಪೃಥ್ವಿರಾಜ್ ಹಾಗೂ ನಾಯಕಿ ಸಾತ್ವಿಕ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯಾದ ಸ್ವಾತಿ ನಿರೂಪಿಸಿ, ಶೈಕ್ಷಣಿಕ ಸಂಯೋಜಕರಾದ ಶ್ರಿಪ್ರಸಾದ್ ರವರು ಸ್ವಾಗತಿಸಿ, ಸಾತ್ವಿಕ ರವರು ವಂದಿಸಿದರು.

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

Article Image

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಈಗ ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಸಂಭ್ರಮ, ಸಡಗರ. ದೇವಸ್ಥಾನ, ಬೀಡು, ವಸತಿಛತ್ರಗಳು, ಬಾಹುಬಲಿಬೆಟ್ಟ, ಪ್ರವೇಶದ್ವಾರ ಮೊದಲಾದ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ನಾಡಿನೆಲ್ಲೆಡೆಯಿಂದ ಪ್ರತಿದಿನ ಸಹಸ್ರಾರು ಭಕ್ತಾದಿಗಳು ಹಾಗೂ ಪ್ರವಾಸಿಗರು ಬರುತ್ತಿದ್ದು, ದೇವರ ದರ್ಶನದ ಬಳಿಕ ಮಂಜೂಷಾ ವಸ್ತುಸಂಗ್ರಹಾಲಯ, ಕಾರ್‌ಮ್ಯೂಸಿಯಂ, ಲಲಿತೋದ್ಯಾನ, ರತ್ನಗಿರಿ (ಬಾಹುಬಲಿಬೆಟ್ಟ) ವೀಕ್ಷಿಸಿ ಸುಂದರ ಪ್ರಾಕೃತಿಕ ಪರಿಸರದ ಸೊಗಡನ್ನು ಸವಿಯುವುದರೊಂದಿಗೆ ತಮ್ಮ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರನ್ನು ಸೆಳೆಯುವ ವಸ್ತುಪ್ರದರ್ಶನ: ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ವಸ್ತುಪ್ರದರ್ಶನದಲ್ಲಿ ಮುನ್ನೂರಕ್ಕೂ ಮಿಕ್ಕಿ ಮಳಿಗೆಗಳಿದ್ದು, ಪ್ರೇಕ್ಷಕರ ಕಣ್ಮನ ಸೆಳೆಯುತ್ತಿವೆ. ಪುಸ್ತಕಮಳಿಗೆಗಳು, ಕೃಷಿ, ವಿಜ್ಞಾನ, ಕಲೆ, ಸಂಸ್ಕೃತಿ ಹಾಗೂ ಗ್ರಾಮೀಣ ಕರಕುಶಲ ಕಲೆಗಳಿಗೆ ಸಂಬAಧಪಟ್ಟ ಮಳಿಗೆಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಳಿಗೆ, ಪುಸ್ತಕದ ಮಳಿಗೆಗಳು, ಮಡಿಕೆ ತಯಾರಿ, ಹಾಳೆತಟ್ಟೆಗಳ ಮಳಿಗೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಮಳಿಗೆ, ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ಮಳಿಗೆ ಪ್ರೇಕ್ಷಕರ ಕಣ್ಮನ ಸೆಳೆಯುತ್ತವೆ. ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಜೀವವಿಮೆ, ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡುತ್ತಿವೆ. ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಹಲವಾರು ಮಂದಿ ಭಕ್ತರು ಪಾದಯಾತ್ರೆಯಲ್ಲಿ, ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬರುತ್ತಿದ್ದಾರೆ. ಭಕ್ತರು ತಾವು ಬೆಳೆದ ತರಕಾರಿ, ಹಣ್ಣುಹಂಪಲು, ಅಕ್ಕಿ, ದವಸಧಾನ್ಯಗಳನ್ನು ಕೂಡಾ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಎಲ್ಲೆಲ್ಲೂ ಸೊಬಗಿದೆ, ಸೊಗಸಿದೆ. ಶಿಸ್ತು, ಸ್ವಚ್ಛತೆ, ದಕ್ಷತೆ ಹಾಗೂ ದೇವಳ ಸಿಬ್ಬಂದಿ ಮತ್ತು ಸ್ವಯಂ ಸೇವಕರ ನಗುಮೊಗದ ಸೇವೆ ಭಕ್ತರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6.30 ರಿಂದ ರಾತ್ರಿ 10.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು ಶುಕ್ರವಾರ ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 92ನೆ ಅಧೀವೇಶನವನ್ನು ಗೃಹಸಚಿವ ಡಾ. ಜಿ.ಪರಮೇಶ್ವರ ಉದ್ಘಾಟಿಸುವರು. ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಡಾ. ಜಿ.ಬಿ. ಹರೀಶ್, ಡಾ. ಜೋಸೇಫ್, ಎನ್. ಎಂ. ಮತ್ತು ಬಿಜಾಪುರದ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಧಾರ್ಮಿಕ ಉಪನ್ಯಾಸ ನೀಡುವರು.

ಮಲೆನಾಡು ಜೈನ್ ಮಿಲನ್ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶೃಂಗೇರಿ ಚಿನಿವಾರ್ ರಾಜಶೇಖರಯ್ಯ ಜನ್ಮ ಶತಮಾನೋತ್ಸವ

Article Image

ಮಲೆನಾಡು ಜೈನ್ ಮಿಲನ್ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶೃಂಗೇರಿ ಚಿನಿವಾರ್ ರಾಜಶೇಖರಯ್ಯ ಜನ್ಮ ಶತಮಾನೋತ್ಸವ

ನ.16: ಮೇಲ್ಕಂಡ ಸಂಸ್ಥೆಯ ಆಶ್ರಯದಲ್ಲಿ ಶೃಂಗೇರಿ ಸ್ವಾತಂತ್ರ್ಯ ಹೋರಾಟಗಾರ ಶೃಂಗೇರಿ ಚಿನಿವಾಶ್ ರಾಜಶೇಖರಯ್ಯನವರ ಜನ್ಮ ಶತಮಾನೋತ್ಸವವನ್ನು ಶೃಂಗೇರಿ ಬಸದಿ ಆವರಣದಲ್ಲಿ ಆಚರಿಸಲಾಯಿತು. ಚಿನಿವಾಶ್ ರಾಜಶೇಖರಯ್ಯನವರ ಮಗಳು ಕೀರ್ತಿಲತಾ ಮಲ್ಲಪ್ರಸಾದ್ ಶ್ರೀಯುತರ ಸ್ಮರಣಾರ್ಥ ಹತ್ತು ಜನ ಫಲಾನುಭವಿಗಳಿಗೆ ತಲಾ ಹತ್ತು ಸಾವಿರ ರೂ. ಸಹಾಯಧನ ನೀಡಿದರು. ಮಿಲನ್‌ನ ಅಧ್ಯಕ್ಷ ಶ್ರೇಣಿಕ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಶಿಲ್ಪಾರವಿ ಹಾಗೂ ಪ್ರವೀಣ್ ಪೂಜಾರಿ ಅತಿಥಿಗಳಾಗಿ ಆಗಮಿಸಿದ್ದರು. ಜೇಸಿ ಟ್ರೈನರ್ ಎನ್. ಪಿ. ಪಾಂಡುರಂಗ ರಾಜಶೇಖರಯ್ಯನವರ ಗುಣಗಾನ ಮಾಡಿದರು. ಕೀರ್ತಿಲತಾ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ| ನಿರಂಜನ್ ಸ್ವಾಗತಿಸಿ ಶುಭಾಶ್ಚಂದ್ರ ವಂದಿಸಿದರು ನಂತರ ಜೈನ ಬಸದಿಯಲ್ಲಿ ಮಿಲನ್ ಸದಸ್ಯರು ಶ್ರದ್ಧಾಭಕ್ತಿಯೊಂದಿಗೆ ದೀಪೋತ್ಸವ ಆಚರಿಸಿದು. ಶಶಿಪ್ರಭಾ ಶಾಂತಕುಮಾರ್ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮವನ್ನು ಶ್ರಾವಕಿಯರು ನಡೆಸಿಕೊಟ್ಟರು.

ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ

Article Image

ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ

ಉಜಿರೆ: ಸಾಹಿತ್ಯಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದ್ದು, ಅಂತರಾತ್ಮದಲ್ಲಿ ದೇವರನ್ನು ಸ್ಮರಿಸಿ ಧ್ಯಾನ ಮಾಡಿ ರಾಗ, ತಾಳ, ಲಯ ಬದ್ಧವಾಗಿ ಭಜನೆ ಹಾಡಿದರೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಮಕ್ಕಳಿಗೂ, ನಿತ್ಯವೂ ಭಜನೆ ಹಾಡುವ ಸಂಸ್ಕಾರವನ್ನು ನೀಡಿದರೆ ಅವರು ಧರ್ಮದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಭಾರತೀಯ ಜೈನ್‌ಮಿಲನ್ ನೇತೃತ್ವದಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಶಾಖೆಯ ಸಹಯೋಗದೊಂದಿಗೆ ಆಯೋಜಿಸಿದ ಮಂಗಳೂರು ವಿಭಾಗಮಟ್ಟದ ಜಿನಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಭಜನೆಯನ್ನು ಸ್ಪರ್ಧೆಗಾಗಿ ಕಲಿಯದೆ ಮನೆಯಲ್ಲಿ ನಿತ್ಯವೂ ಸಹಜವಾಗಿ ಭಜನೆ ಹಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಸೋಲು-ಗೆಲುವಿನ ಬಗ್ಯೆ ಚಿಂತಿಸದೆ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಿ ಭಜನಾ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಹೇಳಿದರು. ಸಾಧ್ಯವಾದರೆ ಮಕ್ಕಳೆ ಸಾಹಿತ್ಯ ರಚನೆ ಮಾಡಿ ರಾಗ, ಭಾವ, ತಾಳ ಸಂಯೋಜನೆಯೊAದಿಗೆ ಭಜನೆ ಹಾಡುವ ಅಭ್ಯಾಸ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಇಂದು(ಸೋಮವಾರ) ಹೆಗ್ಗಡೆಯವರ 76ನೆ ಜನ್ಮದಿನ ಆಚರಣೆಗಾಗಿ ನಿರೀಕ್ಷಾ ಹೊಸ್ಮಾರು ಜನ್ಮದಿನದ ಶುಭಾಶಯ ಕೋರುವ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿದರು. ಜೈನ್‌ಮಿಲನ್ ವತಿಯಿಂದ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳನ್ನು ಗೌರವಪೂರ್ವಕವಾಗಿ ಅರ್ಪಿಸಲಾಯಿತು. ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರಕುಮಾರ್, ಉಜಿರೆಯ ಸೋನಿಯಾ ಯಶೋವರ್ಮ, ಪೂರನ್‌ವರ್ಮ, ಪೆರಿಂಜೆ ಪಡ್ಯಾರಬೆಟ್ಟು ಕೊಡಮಣಿತ್ತಾಯ ದೈವಸ್ಥಾನದ ಆಡಳಿತಮೊಕ್ತೇಸರ ಜೀವಂಧರಕುಮಾರ್, ಭಾರತೀಯ ಜೈನ್‌ಮಿಲನ್ ವಲಯ 8 ರ ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್, ಮೂಡಬಿದ್ರೆಯ ನೋಟರಿ ಶ್ವೇತಾ ಜೈನ್, ಕಾರ್ಕಳದ ಶಶಿಕಲಾ ಹೆಗ್ಡೆ, ವೇಣೂರು ಜೈನತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ ಮತ್ತು ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್‌ಕುಮಾರ್ ಜೈನ್ ಹಾಗೂ ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಸುದರ್ಶನ್‌ಜೈನ್ ಬಂಟ್ವಾಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಜಿರೆಯ ಬಿ. ಸೋಮಶೇಖರ ಶೆಟ್ಟಿ ಧನ್ಯವಾದವಿತ್ತರು. ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಉಪನ್ಯಾಸಕಿ ದಿವ್ಯಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. ಭಜನಾ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ೪೫ ತಂಡಗಳು ಹಾಗೂ ಕಿರಿಯರ ವಿಭಾಗದಲ್ಲಿ 32 ತಂಡಗಳು ಸೇರಿದಂತೆ ಒಟ್ಟು ಐದುನೂರಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗವಹಿಸಿದರು.

ತುಳುನಾಡಿನ ಸಾಂಸ್ಕೃತಿಕ ಅನನ್ಯತೆಗೆ ಜೈನ ಅರಸರ ಕೊಡುಗೆ ಅಪೂರ್ವವಾದದ್ದು: ಡಾ. ಪುಂಡಿಕಾಯಿ ಗಣಪಯ್ಯ ಭಟ್

Article Image

ತುಳುನಾಡಿನ ಸಾಂಸ್ಕೃತಿಕ ಅನನ್ಯತೆಗೆ ಜೈನ ಅರಸರ ಕೊಡುಗೆ ಅಪೂರ್ವವಾದದ್ದು: ಡಾ. ಪುಂಡಿಕಾಯಿ ಗಣಪಯ್ಯ ಭಟ್

ತುಳುನಾಡಿನ ಸಾಂಸ್ಕೃತಿಕ ಅನನ್ಯತೆಗೆ ಉದಾರವಾದಿ ನಿಲುಮೆಗೆ ಸ್ವಾಭಿಮಾನದ ಚಿಂತನೆಗಳಿಗೆ ಜೈನ ಅರಸರ ಕೊಡುಗೆ ಗಣನೀಯವಾದದ್ದು ಎಂಬುದಾಗಿ ಡಾ. ಪುಂಡಿ ಕಾಯಿ ಗಣಪಯ್ಯ ಭಟ್ ಅಭಿಪ್ರಾಯಪಟ್ಟರು. ಇಂದು ಮೂಡುಬಿದರೆ ಜೈನ್ ಮಿಲನ್ ಆಶ್ರಯದಲ್ಲಿ ಜೈನ ಹೈಸ್ಕೂಲಿನಲ್ಲಿ ನಡೆದ ಮಾಸಿಕ ಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇವರು ತುಳುನಾಡಿಗೆ ಜೈನ ಅರಸರ ಕೊಡುಗೆಗಳು ಎನ್ನುವ ವಿಚಾರದಲ್ಲಿ ಉಪನ್ಯಾಸವನ್ನು ನೀಡಿದರು ಅಳುಪರ ನಂತರ ಸುಮಾರು ಐದು ಶತಮಾನಗಳಷ್ಟು ದೀರ್ಘಾವಧಿಗೆ ತುಳುನಾಡನ್ನು ಆಳ್ವಿಕೆ ಮಾಡಿದ ಸುಮಾರು 15 ಕಿಂತ ಹೆಚ್ಚು ರಾಜಮನೆತನಗಳು ಬೀಡು ಬಲ್ಲಾಳರು ತುಳುನಾಡಿನ ಸ್ವಾಭಿಮಾನಿ ಅಸ್ಮಿತೆಗೆ ಕಾರಣರಾಗಿದ್ದಾರೆ ಎಂಬುದಾಗಿ ತಿಳಿಸಿದರು ವಿಜಯನಗರ ಹಾಗೂ ಕೆಳಗೆ ಅರಸರೊಂದಿಗೂ ಸಂಘರ್ಷಕ್ಕೆ ಇಳಿದ ಇಲ್ಲಿನ ಅರಸರು ಇಲ್ಲಿಯ ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ತಮ್ಮೊಳಗೆ ಸಂಘರ್ಷಗಳು ನಡೆಸಿದ್ದರು ರಕ್ತಪಾತವಿಲ್ಲದೆ ಒಪ್ಪಂದದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದ ಹತ್ತಾರು ಉದಾಹರಣೆಗಳನ್ನ ಜೈನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಗಮನಿಸಬಹುದು ಹಿಂದೂ ದೇವಾಲಯಗಳ ಸ್ಥಾಪನೆ ಧರ್ಮ ಸಾಮರಸ್ಯದ ಮೂಲಕ ಬಹು ಜನರಿಗೆ, ಪ್ರಜೆಗಳಿಗೆ ಬೇಕಾದ ರೀತಿಯಲ್ಲಿ ಬದುಕಿ ಬಾಳಿದವರು ಇಲ್ಲಿಯ ಅರಸು ಮನೆತನದವರು ಎಂದು ಉದಾಹರಣೆಗಳ ಮೂಲಕ ವಿವರಿಸಿದರು ಸಭೆಯ ಅಧ್ಯಕ್ಷತೆ ವಹಿಸಿದ್ದ ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಅವರು ಸುಳ್ಯ ಭಾಗದಲ್ಲಿ ಆಳ್ವಿಕೆ ಮಾಡಿದ ಬಲ್ಲಾಳರ ಮತ್ತು ಉಳಿದಿರುವ ಬಸದಿಗಳ ಕುರುಹುಗಳನ್ನು ರಕ್ಷಿಸುವ ಅಗತ್ಯವನ್ನು ವಿವರಿಸಿದರು. ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ರಕ್ತಗತವಾಗಿ ಇರುವುದರಿಂದಲೇ ನೂರಾರು ದೇವಾಲಯಗಳನ್ನು ದೈವಸ್ಥಾನಗಳನ್ನು ಬಸದಿಗಳನ್ನು ನಿರ್ಮಾಣ ಮಾಡುವ ಆಶ್ರಯ ಕೊಡುವ ಪೋಷಕರಾಗಿ ಗುತ್ತು ಬೀಡು ಅರಮನೆಗಳು ಬೆಳೆದು ಬರಲು ಕಾರಣವಾಯಿತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಜೈನ್ ಮಿಲನ್ ಅಧ್ಯಕ್ಷರಾದ ಆನಡ್ಕ ದಿನೇಶ್ ಕುಮಾರ್ ಅವರ ಕಲ್ಪನೆಯ ಬೆಳ್ಳಿಯ ಚಿತ್ತಾರ ಸಹಿತದ ಸನ್ಮಾನ ಪತ್ರವನ್ನು ನೀಡಿ ವೀಣಾ ರಘು ಚಂದ್ರ ಶೆಟ್ಟಿ ಅವರನ್ನು ಅವರ ಸಾಹಿತ್ಯ ಸೇವೆಗಳಿಗಾಗಿ ಸನ್ಮಾನಿಸಲಾಯಿತು. ಕೃಷಿ ವಿಚಾರ ವಿನಿಮಯ ಕೇಂದ್ರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಭಯ್ ಕುಮಾರ್ ಅವರನ್ನು ಗೌರವಿಸಲಾಯಿತು. ಡಾ. ಬಿ.ಪಿ. ಸಂಪತ್ ಕುಮಾರ್ ಸ್ವಾಗತಿಸಿ ಅನಂತವೀರ ಜೈನ್ ವರದಿ ವಾಚಿಸಿ ವಂದಿಸಿದರು. ಖಜಾಂಜಿ ಪುಷ್ಪರಾಜ್ ಜೈನ್ ಮುಖ್ಯ ಅತಿಥಿಯವರ ಪರಿಚಯ ಮಾಡಿದರು. ವಲಯ ನಿರ್ದೇಶಕರಾದ ಜಯರಾಜ್ ಕಂಬಳಿ ಅತಿಥೇಯರ ಪರವಾಗಿ ಸಂಪತ್ ಸಾಮ್ರಾಜ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿನ್ಮಯಿ ಪ್ರಾರ್ಥನೆ ನೆರವೇರಿಸಿ, ಅಪೇಕ್ಷ ಕಾರ್ಯಕ್ರಮ ನಿರ್ವಹಿಸಿದರು.

ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವ: ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕ್ರತಿಕ ಕಾರ್ಯಕ್

Article Image

ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವ: ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕ್ರತಿಕ ಕಾರ್ಯಕ್

ರಿಪ್ಪನ್ ಪೇಟೆ: ಅತಿಶಯ ಶ್ರೀ ಕ್ಷೇತ್ರ ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಮಹಾ ಸನ್ನಿಧಿಯಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಯವರ ನೇತೃತ್ವದಲ್ಲಿ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಶನಿವಾರ (16-11-2024) ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು ಎಲ್ಲರ ಮೆಚ್ಚುಗೆ ಪಡೆಯಿತು. ಅನನ್ಯ ರಂಜನಿ, ನೀಶ್ಮಾ ಜೈನ್, ದೀಪ್ತಿ ಜೈನ್, ಅರೀಕಾ ಜೈನ್, ಜಯಂತಿ ಜೈನ್, ಅನಘ ಜೈನ್, ಅವನಿ ಜೈನ್, ಅರುಹ ಜೈನ್, ಈಯಾ ಜೈನ್ ಭಾಗವಹಿಸಿದರು. ವಾಣಿಶ್ರೀ ಜೈನ್ ಕಾರ್ಯಕ್ರಮ ನಿರೂಪಿಸಿದರು. ರತ್ವಿಕ್ ಜೈನ್, ಪ್ರಪುಲ್ಲ ಜೈನ್, ಸನ್ಮತ್ ರಾಜ್ ಜೈನ್ ಸಹಕರಿಸಿದರು. ಈ ಸಂದರ್ಭದಲ್ಲಿ 105 ಶಿವಮತಿ ಮಾತಾಜಿ ಮತ್ತು ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ ಹಾಗೂ ಶ್ರೀ ಕ್ಷೇತ್ರ ಸೋಂದಾ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಯವರು ಉಪಸ್ಥಿತರಿದ್ದು ಎಲ್ಲ ಕಲಾವಿದರನ್ನು ಆಶಿರ್ವದಿಸಿ ಗೌರವಿಸಿದರು .

ತೌಳವ ಇಂದ್ರ ಸಮಾಜದ ವಾರ್ಷಿಕ ಮಹಾಸಭೆ

Article Image

ತೌಳವ ಇಂದ್ರ ಸಮಾಜದ ವಾರ್ಷಿಕ ಮಹಾಸಭೆ

ತೌಳವ ಇಂದ್ರ ಸಮಾಜ(ರಿ) ಇದರ ಮಹಾಸಭೆ ದಿನಾಂಕ 3/11/2024ರಂದು ಮೂಡಬಿದ್ರೆಯ ಶ್ರೀ ಧವಲಾ ಕಾಲೇಜ್ ನ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು. "ತುಳು ಇಂದ್ರರ ಜೀವನ ಶೈಲಿ, ಸಾಮಾಜಿಕ ಪರಂಪರೆ, ಪೌರೋಹಿತ್ಯದ ಮಾದರಿಗಳು ವಿಭಿನ್ನವಾಗಿಯೂ ಶಾಸ್ತ್ರೋಕ್ತವೂ ಆಗಿದ್ದು ಸರ್ವ ಜನಾಧರಣೆಗೆ ಪಾತ್ರವಾಗಿದೆ, ಈ ಉನ್ನತ ಪರಂಪರೆಯನ್ನು ಕಾಪಾಡುವುದು ಮತ್ತು ಪರಸ್ಪರ ಬಂಧುತ್ವ ಸಂವರ್ಧನೆ ಈ ಸಂಘಟನೆಯ ಉದ್ದೇಶ" ಎಂದು ಪ್ರಾಸ್ತಾವಿಕ ಮಾತುಗಳನ್ನು ಆಡುತ್ತಾ ಉಪಾಧ್ಯಕ್ಷರಾದ ಎಂ. ಅಕ್ಷಯ ಕುಮಾರ್ ರವರು ಅತಿಥಿಗಳನ್ನೂ, ಸನ್ಮಾನಗೊಳ್ಳಲಿರುವ ಮಹನೀಯರನ್ನೂ ಪದಾಧಿಕಾರಿಗಳನ್ನೂ ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾಗಿರುವ ಮೂಡಬಿದ್ರೆ ಜ್ಞಾನಚಂದ್ರ ಇಂದ್ರರು ಮಾತಾಡುತ್ತ "ಹಿಂದೆ ಇಂದ್ರರ ಕುಲಕಸುಬು ಪೌರೋಹಿತ್ಯ ಆದರೂ ಇಂದು ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಉದ್ಯೋಗ, ಬುಸ್ಸಿನೆಸ್ ಗಳನ್ನು ನೆಚ್ಚಿಕೊಂಡಿದ್ದಾರೆ. ಪೌರೋಹಿತ್ಯ ಈಗ ಮುಖ್ಯ ಕಸುಬಾಗಿ ಉಳಿದಿಲ್ಲಾ ಎಂದರಲ್ಲದೆ, ಸದಸ್ಯರೆಲ್ಲರೂ ಅಂಗಸಂಸ್ಥೆಯಾದ ಸದ್ಧರ್ಮ ಸೌಹಾರ್ದ ಸಹಕಾರಿ ಸಂಸ್ಥೆ ಲಾಭದಲ್ಲಿ ನಡೆಯುತ್ತಿದ್ದು, ಆ ಸಹಕಾರಿಯನ್ನು ಇನ್ನೂ ಚೆನ್ನಾಗಿ ಬೆಳೆಸಬೇಕಾಗಿದೆ"ಎಂದರು. ನಂತರ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ I ಎಸ್.ಪಿ.ವಿಧ್ಯಾಕುಮಾರ್, ವಿಜ್ಞಾನಿ ಡಾI ಸುಕೇಶ್ ಕುಮಾರ್ ಬಜಿರೆ ಹಾಗೂ ಪ್ರಾಂಶುಪಾಲೆ ಆಶಾಲತಾ ದಾಂಡೇಲಿಯವರನ್ನೂ ಹಿರಿಯ ಪುರೋಹಿತರಾದ ಚಂದ್ರಶೇಖರ ಇಂದ್ರ ಬೋಳ ಬಸದಿ ಮತ್ತು ದೇವಕುಮಾರ್ ಇಂದ್ರ ಮುಳಿಕಾರು ಬಸದಿ ಇವರುಗಳನ್ನು ಶಾಲು, ಹಾರ, ಫಲ ಕಾಣಿಕೆ, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ. ಯ ಪ್ರತಿಭಾವಂತ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕಾರ್ಯದರ್ಶಿ ಬಿ. ಅಭಯ ಕುಮಾರ್ ಇಂದ್ರ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ವಿಜಯಕುಮಾರಿ ಯವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರತಿಷ್ಠಾ ಪುರೋಹಿತರಾದ ಪದ್ಮಪ್ರಭ ಇಂದ್ರ, ನಾಗೇಂದ್ರ ಇಂದ್ರ, ಅಜಿತಕುಮಾರ್ ಇಂದ್ರ, ಅರುಣಕುಮಾರ್ ಇಂದ್ರರವರನ್ನು ಗೌರವಿಸಲಾಯಿತು. ದಿವ್ಯಾ ವೀರೇಂದ್ರರವರು ಪ್ರಸ್ತುತ ವರ್ಷದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಣಾ ಕಾರ್ಯಕ್ರಮ ನೆರವೇರಿಸಿದರು. ನಿರ್ದೇಶಕ ಶೀತಲ್ ಕುಮಾರ್ ಸರಕಾರದಿಂದ ಅಲ್ಪಸಂಖ್ಯಾತರಿಗೆ ಕೊಡಮಾಡಿದ ಸೌಲಭ್ಯಗಳ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಇಂದ್ರ ಸಮಾಜದ ಸದಸ್ಯರ ವಿಳಾಸದ ತಿದ್ದುಪಡಿ ಮಾಡಿದ ಡೈರೆಕ್ಟರಿ ಪ್ರತಿಯನ್ನು ಬಿಡುಗಡೆ ಗೊಳಿಸಲಾಯಿತು. ಆರತಿ ವಿರಾಜ್ ಪ್ರಾರ್ಥನೆ ಮಾಡಿದರು, ನಿರ್ದೇಶಕ ಹರಿಶ್ಚಂದ್ರ ಜೈನ್ ಸನ್ಮಾನಕಾರ್ಯಕ್ರಮದ ನಿರೂಪಣೆ ಮಾಡಿದರು. ಸದ್ಧರ್ಮ ಸೌಹಾರ್ಧ ಸಹಕಾರಿ ಅಧ್ಯಕ್ಷರಾದ ಪ್ರವೀಣ ಕುಮಾರ್ ಉಜಿರೆ, ನಿರ್ದೇಶಕರಾದ ವೃಷಭ ಕುಮಾರ್ ಇಂದ್ರ, ಅರ್ಕ ಕೀರ್ತಿ ಇಂದ್ರ, ಯುವತೌಳವ ಇಂದ್ರ ಸಮಾಜದ ಅಧ್ಯಕ್ಷರಾದ ಶ್ವೇತ ಪ್ರವೀಣ್ ಹಾಗೂ ಕಾರ್ಯದರ್ಶಿ ಅನಿತ್ ಕುಮಾರ್ ಬಿ. ಮತ್ತು ತೌಳವ ಇಂದ್ರ ಸಮಾಜದ ಎಲ್ಲಾ ನಿರ್ದೇಶಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ಪ್ರಮೋದ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ಸುವಿಧಿ ಇಂದ್ರರು ಧನ್ಯವಾದ ಅರ್ಪಿಸಿದರು. ಅರುಣಾ ಇಂದ್ರರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Article Image

ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಅವರಿಗೆ 2024 ನೇಯ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿಲಾಗಿದೆ. ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ಶುಭಾವಸರದಲ್ಲಿ ಮಂಗಳೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಈ ಪುರಸ್ಕಾರವನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಸದರಾದ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಹುಬ್ಬಳ್ಳಿ ಜೈನ ಬೋರ್ಡಿಂಗ್ ನಲ್ಲಿ ರತ್ನತ್ರಯ ವಿಧಾನ ಮತ್ತು ಮೃತ್ಯುಂಜಯ ಆರಾಧನಾ ಕಾರ್ಯಕ್ರಮ

Article Image

ಹುಬ್ಬಳ್ಳಿ ಜೈನ ಬೋರ್ಡಿಂಗ್ ನಲ್ಲಿ ರತ್ನತ್ರಯ ವಿಧಾನ ಮತ್ತು ಮೃತ್ಯುಂಜಯ ಆರಾಧನಾ ಕಾರ್ಯಕ್ರಮ

ಹುಬ್ಬಳ್ಳಿ ಜೈನ ಬೋರ್ಡಿಂಗ್ ನಲ್ಲಿ ಚಾತುರ್ಮಾಸ ಅನುಷ್ಠಾನದಲ್ಲಿರುವ ಪರಮ ಪೂಜ್ಯ ವಾತ್ಸಲ್ಯ ಮೂರ್ತಿ ಪುಣ್ಯಸಾಗರ್ ಮಹಾರಾಜರ ಸಾನಿಧ್ಯದಲ್ಲಿ ರವಿವಾರ ಜರುಗಿದ "ರತ್ನತ್ರಯ ವಿಧಾನ ಮತ್ತು ಮೃತ್ಯುಂಜಯ ಆರಾಧನಾ" ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರಾದ ಸನ್ಮಾನ್ಯ ಡಿ. ಸುಧಾಕರ್ ಇವರು ಭಾಗಿಯಾಗಿ ಪೂಜ್ಯರ ಆಶೀರ್ವಾದ ಪಡೆದರು. ದಿಗಂಬರ ಜೈನ್ ಬೋರ್ಡಿಂಗ್ ವತಿಯಿಂದ ಅಧ್ಯಕ್ಷರಾದ ವಿದ್ಯಾದರ ಪಾಟೀಲ ಹಾಗೂ ಕಮಿಟಿ ಸದಸ್ಯರು ಸಚಿವರನ್ನು ಸನ್ಮಾನಿಸಿ ಜೈನ ಸಮುದಾಯದ ಬಹುದಿನಗಳ ಬೇಡಿಕೆಯಾದ "ಜೈನ್ ಅಭಿವೃದ್ಧಿ ನಿಗಮ" ಸ್ಥಾಪಿಸುವ ಕುರಿತು ಮನವಿ ಸಲ್ಲಿಸಿ ಆದಷ್ಟು ಬೇಗ ಅನುಷ್ಠಾನಗೊಳಿಸಲು ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಆರ್ ಟಿ ತನ್ನಪ್ಪನವರ, ಜಿ ಜಿ ಲೋಬೋಗೋಳ, ಸುಭದ್ರಮ್ಮ ಮುತ್ತಿನ, ದೇವೇಂದ್ರಪ್ಪ ಕಾಗೆನವರ, ವಿಮಲ ಚಂದ ಸಂಗಮಿ, ಪ್ರಶಾಂತ್ ಬಿ ಶೆಟ್ಟಿ , ಸ್ಮಿತಾ ವಾಕಳೆ, ಮಹಾವೀರ ಮಣಕಟ್ಟಿ, ಮಹಾವೀರ ಕಂಚಗಾರ ಉದಯ್ ಧಡೋತಿ, ಪಂಕಜಾ ಸೂಜಿ, ಹಾಗೂ ಸಮಾಜದ ಶ್ರಾವಕ-ಶ್ರಾವಕಿಯರು ಹಾಜರಿದ್ದರು. ವರದಿ : ಎಸ್. ಆರ್. ಮಲ್ಲಸಮುದ್ರ

ಭಗವಾನ್ ಮಹಾವೀರ ಸ್ವಾಮಿ ನಿರ್ವಾಣೋತ್ಸವ

Article Image

ಭಗವಾನ್ ಮಹಾವೀರ ಸ್ವಾಮಿ ನಿರ್ವಾಣೋತ್ಸವ

ಉಜಿರೆ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಗವಾನ್ ಮಹಾವೀರಸ್ವಾಮಿ ನಿರ್ವಾಣೋತ್ಸವದ ಪ್ರಯುಕ್ತ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ಶುಕ್ರವಾರ ಮುಂಜಾನೆ ಸಮಸ್ತ ಶ್ರಾವಕರು, ಶ್ರಾವಕಿಯರು ಅಷ್ಟವಿಧಾರ್ಚನೆ ಪೂಜೆ ಸಹಿತ ಅರ್ಘ್ಯವೆತ್ತಿದರು. ಧರ್ಮಾಧಿಕಾರಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಬಾಹುಬಲಿ ಸೇವಾಸಮಿತಿಯ ಸರ್ವಸದಸ್ಯರು ಹಾಗೂ ಊರಿನ ಶ್ರಾವಕರು, ಶ್ರಾವಕಿಯರು ಅಷ್ಟವಿಧಾರ್ಚನೆ ಪೂಜೆ ಸಹಿತ ಅರ್ಘ್ಯ ಎತ್ತುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೇಶದ ಎಲ್ಲಾ ಜಿನಮಂದಿರಗಳಲ್ಲಿ ಶುಕ್ರವಾರ ಮುಂಜಾನೆ ಭಗವಾನ್ ಮಹಾವೀರ ಸ್ವಾಮಿಯ ನಿರ್ವಾಣಮಹೋತ್ಸವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಜೈನರು ಜಪ, ತಪ, ಧ್ಯಾನ, ಸ್ವಾಧ್ಯಾಯದೊಂದಿಗೆ ಉಪವಾಸ ಮೊದಲಾದ ವೃತ-ನಿಯಮಗಳನ್ನು ಪಾಲಿಸಿ ಪುಣ್ಯಸಂಚಯ ಮಾಡಿದರು.

ಧರ್ಮಸ್ಥಳ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೭ನೇ ವರ್ಧಂತ್ಯುತ್ಸವ

Article Image

ಧರ್ಮಸ್ಥಳ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೭ನೇ ವರ್ಧಂತ್ಯುತ್ಸವ

ಉಜಿರೆ: ರಾಷ್ಟ್ರಕವಿ ಕುವೆಂಪು ಸಾರಿದ ವಿಶ್ವಮಾನವ ಸಂದೇಶವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಕ್ಷರಶಃ ಸೇವಾ ರೂಪದಲ್ಲಿ ಮಾಡಿ ತೋರಿಸಿದ್ದಾರೆ. ಜೈನಧರ್ಮಕ್ಕೂ ಹಿಂದೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದ್ದು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ – ಎಲ್ಲಾ ರಂಗಗಳಲ್ಲಿಯೂ ಹೆಗ್ಗಡೆಯವರು ಹೊಗಳಿಕೆಗೆ ಹಿಗ್ಗದೆ, ಟೀಕೆಗಳಿಗೆ ಅಂಜದೆ, ಸ್ಥಿತಪ್ರಜ್ಞೆಯಿಂದ ಎಲ್ಲಾ ಮಠ-ಮಂದಿರಗಳಿಗೂ ಮಾದರಿಯಾಗಿ ಅನವರತ ಸೇವೆ ಮಾಡಿ ಧರ್ಮಸ್ಥಳದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಪಸರಿಸಿದ್ದಾರೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೭ನೆ ವರ್ಧಂತ್ಯುತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಜನರು ರಾಜಕಾರಣಿಗಳಿಗಿಂತಲೂ ಹೆಚ್ಚು ಧರ್ಮಾಧಿಕಾರಿಗಳಾದ ಹೆಗ್ಗಡೆಯವರಿಂದ ನಿರೀಕ್ಷೆ ಮಾಡುತ್ತಾರೆ. ಮಾತು ಬಿಡ ಮಂಜುನಾಥ ಎಂಬ ಮಾತಿನಿಂತೆ ಚತುರ್ವಿಧ ದಾನ ಪರಂಪರೆಯೊಂದಿಗೆ ಅರಿಷಡ್ವರ್ಗಗಳನ್ನು ಗೆದ್ದು ಬಹುಮುಖಿ ಸಮಾಜಸೇವಾ ಕಾರ್ಯಗಳಿಂದ ಇಂದು ಹೆಗ್ಗಡೆಯವರು ವಿಶ್ವ ಮಾನವರಾಗಿದ್ದಾರೆ ಎಂದು ಸ್ವಾಮೀಜಿ ಶ್ಲಾಘಿಸಿ ಅಭಿನಂದಿಸಿದರು. ಸರ್ವಜನಾಂಗದ ಶಾಂತಿಯ ತೋಟ ಧರ್ಮಸ್ಥಳ: ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಪ್ರತಿಮೆ ಅನಾವರಣ ಮಾಡಿ ಶುಭಾಶಂಸನೆ ಮಾಡಿದ ಬೆಂಗಳೂರು ಗ್ರಾಮಾಂತರದ ಸಂಸದ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕಆರೋಗ್ಯ ಮುಖ್ಯವಾದುದರಿಂದ ಸರ್ವಧರ್ಮೀಯರಿಗೂ ಶ್ರದ್ಧಾ-ಭಕ್ತಿಯ ಕೇಂದ್ರವಾದ ಧರ್ಮಸ್ಥಳವು ಮಾನಸಿಕ ಶಾಂತಿ-ನೆಮ್ಮದಿ ನೀಡುವ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ಬಣ್ಣಿಸಿದರು. ಲಕ್ಷಾಂತರ ಮನೆಗಳಲ್ಲಿ ಇಂದು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ, ಉಚಿತ ಸಾಮೂಹಿಕ ವಿವಾಹ, ಸ್ವ-ಉದ್ಯೋಗ ತರಬೇತಿ ಕೇಂದ್ರ ಇತ್ಯಾದಿ ಯೋಜನೆಗಳಿಂದ ಜನರು ಸಾರ್ಥಕ ಬದುಕನ್ನು ಕಟ್ಟಿಕೊಂಡು ಎಲ್ಲಾ ಮನೆಗಳಲ್ಲಿ ನಂದಾದೀಪದಂತೆ ಬೆಳಗುತ್ತಿದ್ದಾರೆ. ಯಾವುದೇ ವ್ಯಾಪಾರೀಕರಣದ ಭಾವನೆಯಿಲ್ಲದೆ ನಿಸ್ವಾರ್ಥ ಸೇವಾ ಮನೋಭಾವದಿಂದ ಆರೋಗ್ಯ ಶಿಸ್ತು, ಸಂಯಮ, ಉತ್ತಮ ಸಂಸ್ಕಾರ ಮೂಡಿಸಿರುವುದು ಸಮಾಜಕ್ಕೆ ಕೊಟ್ಟ ಅಮೂಲ್ಯ ಕೊಡುಗೆಯಾಗಿದೆ. ಹುಂಡಿಯ ಹಣವನ್ನು ಲೋಕಕಲ್ಯಾಣಕ್ಕಾಗಿ ಬಳಿಸಿದ ಏಕೈಕ ಕ್ಷೇತ್ರ ಧರ್ಮಸ್ಥಳ ಆಗಿದೆ ಎಂದು ಅವರು ಶ್ಲಾಘಿಸಿದರು. ಅನುದಾನಕ್ಕಿಂತ ಅನುಷ್ಠಾನ ಮುಖ್ಯ. ಅನುಷ್ಠಾನಕ್ಕಿಂತ ನಿರ್ವಹಣೆ ಮುಖ್ಯ. ಧರ್ಮಸ್ಥಳದ ಸಮಾಜಮುಖಿ ಸೇವಾಕಾರ್ಯಗಳಿಂದಾಗಿ ಇಂದು ಕೂಲಿಕಾರ್ಮಿಕರು ಮಾಲಿಕರಾಗಿದ್ದಾರೆ. ಪೂಜಾ ಕ್ಷೇತ್ರವನ್ನು ಸೇವಾ ಕ್ಷೇತ್ರವಾಗಿ ರೂಪಿಸಿದ ಹೆಗ್ಗಡೆಯವರು ದೈವತ್ವ ಮತ್ತು ಮಾನವೀಯತೆಯೊಂದಿಗೆ ಬಡವರ ಕಣ್ಣೀರು ಒರೆಸುವ ಕಾಯಕ ಮಾಡಿದ್ದಾರೆ. ದೃಷ್ಠಿ ಇದ್ದರೆ ಸಾಲದು, ದೂರದೃಷ್ಠಿ ಇರಬೇಕು. ಜಾಣ್ಮೆ ಇದ್ದರೆ ಸಾಲದು, ತಾಳ್ಮೆ ಇರಬೇಕು. ಸಂಪತ್ತಿನಲ್ಲಿ ಸರಳತೆ, ಅಧಿಕಾರದಲ್ಲಿ ಸೌಮ್ಯ ಸ್ವಭಾವ ಹಾಗೂ ಕೋಪದಲ್ಲಿ ಮೌನ ಇರಬೇಕು ಎಂದು ಅವರು ಹೇಳಿದರು. ಕಾಲ ಬದಲಾಗಿಲ್ಲ ಆದರೆ ಜನರ ಆಸೆ-ಆಕಾಂಕ್ಷೆಗಳು, ನಿರೀಕ್ಷೆಗಳು ಹೆಚ್ಚಾಗಿವೆ. ಶೇ. 75ರಷ್ಟು ಜನ ಇಂದು ಮದ್ಯಪಾನಕ್ಕೆ ಬಲಿಯಾಗಿ ಅಧಿಕಾರ, ಆರೋಗ್ಯ, ಸ್ಥಾನ-ಮಾನ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದುದರಿಂದಲೇ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡದಂತಹ ಭೀಕರ ರೋಗಳಿಂದ ಎಳೆಯ ಪ್ರಾಯದವರೂ ಸಾವನ್ನಪ್ಪುತ್ತಿರುವುದು ಖೇದಕರವಾಗಿದೆ ಎಂದರು. ಇನ್‌ಕಮ್ ಇದ್ದವರನ್ನು ಮಾತ್ರ ಇಂದು ವೆಲ್‌ಕಮ್ ಮಾಡುತ್ತಾರೆ. ಅಧಿಕ ಹಣ ಮತ್ತು ಸಂಚಾರಿ ದೂರವಾಣಿ ಬಳಕೆಯಿಂದ ಇಡೀ ಸಮಾಜವೇ ಹಾಳಾಗುತ್ತಿದೆ. ಆದರ್ಶ ವ್ಯಕ್ತಿತ್ವದಿಂದ ಮಾತ್ರ ನಮಗೆ ಗೌರವ ಸಿಗುತ್ತದೆ. ಧರ್ಮಸ್ಥಳವು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಂಜೀವಿನಿಯಾಗಿದೆ ಎಂದು ಅವರು ಅಭಿಪಾಯಪಟ್ಟರು. ಜಪ, ತಪ, ಉಪವಾಸ, ಧ್ಯಾನ, ವಿಶ್ರಾಂತಿ, ಒಳ್ಳೆಯ ನಿದ್ರೆ, ದಯೆ, ಅನುಕಂಪ, ಕೃತಜ್ಞತೆ ಮೊದಲಾದ ಮಾನವೀಯ ಮೌಲ್ಯಗಳಿದ್ದಾಗ ಮನೆಯೇ ಶಾಂತಿ, ನೆಮ್ಮದಿಯ ಸಾಂತ್ವನ ಕೇಂದ್ರವಾಗುತ್ತದೆ ಎಂದು ಅವರು ಹೇಳಿದರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಹೆಗ್ಗಡೆಯವರು ಮಾಡುತ್ತಿರುವ ಬಹಮುಖಿ ಸಮಾಜಸೇವೆಗೆ ಅಭಿನಂದಿಸಿದರು. ಹೆಗ್ಗಡೆಯವರಿಂದ ನೂತನ ಯೋಜನೆಗಳ ಪ್ರಕಟ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಮಾಡಿ ಭಕ್ತಾದಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು. ಇದೇ ನವೆಂಬರ್ 8ರಂದು ಧರ್ಮಸ್ಥಳದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆರಾಮದಾಯಕ ಸರತಿ ಸಾಲಿನ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಿಸಿದರು. ಸೇವಾಕಾರ್ಯಗಳ ಮೂಲಕ ಜನರ ಹೃದಯ ಪರಿವರ್ತನೆಯ ಕಾರ್ಯಮಾಡಲಾಗುತ್ತದೆ. ತನ್ಮೂಲಕ ನವಚೈತನ್ಯದೊಂದಿಗೆ ಪರಿವರ್ತನೆ ಹಾಗೂ ಪ್ರಗತಿಯ ಹರಿಕಾರರನ್ನು ರೂಪಿಸಲಾಗುತ್ತದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ದೇಶದಲ್ಲಿ ಇನ್ನೂ 120 ಹೊಸ ರುಡ್‌ಸೆಟ್ ಸಂಸ್ಥೆಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು. ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿ ಸಂಚಾಲಕ ಹಾಗೂ ದೇವಳ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್ ಧನ್ಯವಾದವಿತ್ತರು. ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ

Article Image

ಧರ್ಮಸ್ಥಳ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ

ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕೆ.ಪಿ.ಸಿ.ಸಿ. ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್ ಕುಮಾರ್, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್‌ಸಾಮ್ರಾಜ್ಯ, ಶಿರ್ತಾಡಿ, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್, ವಿಜಯಾ ಬ್ಯಾಂಕ್ ನಿವೃತ್ತ ಪ್ರಬಂಧಕ ಎಮ್. ಜಿನರಾಜ ಶೆಟ್ಟಿ, ಮಂಗಳೂರು, ಪಿ. ಜಯರಾಜ ಕಂಬಳಿ, ಪೆರಿಂಜೆಗುತ್ತು, ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಮೊಕ್ತೆಸರ ಜೀವಂಧರ ಕುಮಾರ್, ಕೆ. ಪ್ರದೀಪ್‌ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು ಮೊದಲಾದ ಗಣ್ಯರು ಹೆಗ್ಗಡೆಯವರಿಗೆ ಗೌರವಾರ್ಪಣೆ ಮಾಡಿ ಅಭಿನಂದಿಸಿದರು. ಧರ್ಮಸ್ಥಳದಲ್ಲಿ ಗುರುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ ಪ್ರಯುಕ್ತ ನಡೆದ ಛದ್ಮವೇಷ ಸ್ಫರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ತೃಷಿಕಾ ಡಿ. ಬಳಗ : ಪ್ರಥಮ, ಅವಿಷ್ಖಾರ್ ಶೆಟ್ಟಿ : ದ್ವಿತೀಯ, ದೃವಿ ದೊಂಡೋಲೆ : ತೃತೀಯ, ವಿರೂಷ್ ಗೌಡ. ಪ್ರೋತ್ಸಾಹಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಶಕ್ತಿಪ್ರಿಯ ತಂಡ : ಪ್ರಥಮ, ಮಹಿಳಾ ವಿಭಾಗದಲ್ಲಿ ವಿಮಲ ಮತ್ತು ಬಳಗ : ಪ್ರಥಮ, ಪುಷ್ಪಾ ಮತ್ತು ತಂಡ : ದ್ವಿತೀಯ, ವನಿತಾ ಮತ್ತು ತಂಡ : ತೃತೀಯ, ಸೀನಿಯರ್ ವಿಭಾಗದಲ್ಲಿ ದೇವಸ್ಥಾನ ಕೌಂಟರ್ ಬಳಗ : ಪ್ರಥಮ, ಜನಾರ್ದನ ಮತ್ತು ಬಳಗ : ದ್ವಿತೀಯ, ಸೂಪರ್ ಸೀನಿಯರ್ ವಿಭಾಗದಲ್ಲಿ ಸಾಮರ್ ಸೆಟ್ ತಂಡ ಹಾಗೂ ರಂಗಶಿವಕಲಾ ಬಳಗ : ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಯುವರಾಜ ಜೈನ್ ಅವರಿಗೆ ರಾಜ್ಯಮಟ್ಟದ ಉತ್ತಮ ಆಡಳಿತ ಮಂಡಳಿ(ಆಡಳಿತಗಾರ) ಪ್ರಶಸ್ತಿ

Article Image

ಯುವರಾಜ ಜೈನ್ ಅವರಿಗೆ ರಾಜ್ಯಮಟ್ಟದ ಉತ್ತಮ ಆಡಳಿತ ಮಂಡಳಿ(ಆಡಳಿತಗಾರ) ಪ್ರಶಸ್ತಿ

ಯುವರಾಜ ಜೈನ್ ಅವರಿಗೆ ಮಾನ್ಯತೆ ಪಡೆದ ಅನುದಾನ ರಹಿತ ಸಂಘ ಕರ್ನಾಟಕ (RECOGNISED UNAIDED PRIVAT SCHOOLS ASSOCIATION OF KARNATAKA) ರುಪ್ಸಾ ಇವರು ಕೊಡಮಾಡುವ 2024-25 ನೇ ಸಾಲಿನ 'ರಾಜ್ಯಮಟ್ಟದ ಉತ್ತಮ ಆಡಳಿತ ಮಂಡಳಿ(ಆಡಳಿತಗಾರ) ಪ್ರಶಸ್ತಿ' ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಇವರಿಗೆ ನೀಡಲಾಯಿತು. ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ರಾಜ್ಯ, ರಾಷ್ಟ್ರದಲ್ಲಿ ಗುರುತಿಸುವಂತೆ ಅಮೋಘವಾದ ಸಾಧನೆಯನ್ನು ಶ್ರೀಯುತರು ಮಾಡಿದ್ದಾರೆ. ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕ್ರತಿಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿರುತ್ತಾರೆ. ಕಳೆದ ಮೂರು ದಶಕಗಳಿಂದ ಶಿಕ್ಷಣ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ವಲಯ 8 ಸಭೆ

Article Image

ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ವಲಯ 8 ಸಭೆ

ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ವಲಯ 8-ಜಿನ ಭಜನಾ ಸೀಸನ್ 8 ಇದರ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆ ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ, ಶ್ರೀ ಮಂಜುನಾಥ ಸ್ವಾಮಿ ಕಲಾ ಮಂಟಪ ಬೆಳ್ತಂಗಡಿಯಲ್ಲಿ ನವೆಂಬರ್ ತಿಂಗಳ 24 ಭಾನುವಾರ ಜರಗಲಿದೆ. ಡಿ, ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಂತೆ ಸಮಾಲೋಚನಾ ಸಭೆ ಉಜಿರೆಯಲ್ಲಿ ಜರಗಿತು. ವಲಯ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ಸೋನಿಯಾ ಯಶೋವರ್ಮ, ಪೂರನ್ ವರ್ಮ, ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ, ವೇಣೂರು ತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್, ವಲಯ ನಿರ್ದೇಶಕರಾದ ಬಿ.ಸೋಮಶೇಖರ್ ಶೆಟ್ಟಿ, ಪ್ರಮೋದ್ ಕುಮಾರ್, ರಾಜಶ್ರೀ ಸುದರ್ಶನ್ ಮತ್ತು ತ್ರಿಶಾಲ ಉದಯಕುಮಾರ್ ಮಲ್ಲ, ರಜತ ಪಿ. ಶೆಟ್ಟಿ,ಪೂರ್ವ ಅಧ್ಯಕ್ಷರು, ವೀರ ವೀರಾಂಗನೆಯರು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಡಾಕ್ಟರ್ ನವೀನ್ ಕುಮಾರ್ ಜೈನ್ ವಹಿಸಿದ್ದರು. ಕಾರ್ಯದರ್ಶಿ ಸಂಪತ್ ಕುಮಾರ್, ಖಜಾಂಜಿ ನಿಖಿತ್ ಕುಮಾರ್, ಧೀಮತಿ ಮಹಿಳಾ ಸಮಾಜದ ಸದಸ್ಯೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ಸಿನ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು.

ಇತ್ತೀಚೆಗೆ ಅಗಲಿದ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ನುಡಿ ನಮನ

Article Image

ಇತ್ತೀಚೆಗೆ ಅಗಲಿದ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ನುಡಿ ನಮನ

ಮೂಡುಬಿದಿರೆ, ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘ(ರಿ.) ಇದರ ಆಡಳಿತಕ್ಕೆ ಒಳಪಟ್ಟ ಜೈನ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 21-10-2024 ನೇ‌ ಸೋಮವಾರದಂದು ಇತ್ತೀಚೆಗೆ ಅಗಲಿದ ಯಶಸ್ವಿ ಹಿರಿಯ ಉದ್ಯಮಿ, ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ನುಡಿ ನಮನವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿ.ಜೆ.ವಿ.ಸಂಘ(ರಿ.) ಹಾಗೂ ಕಾಲೇಜಿನ ಗೌರವಾನ್ವಿತ ಸಂಚಾಲಕರಾದ ಕೆ. ಹೇಮರಾಜ್ ಇವರು ಜ್ಯೋತಿಯನ್ನು ಬೆಳಗಿಸುವ ಮೂಲಕ ರತನ್ ಟಾಟಾ ಅವರಿಗೆ ಗೌರವವನ್ನು ಸಮರ್ಪಿಸಿದರು. ನಂತರ ಮಾತನಾಡುತ್ತಾ " ದೇಶ ಕಂಡ ಅಪರೂಪದ, ಅಗ್ರಗಣ್ಯ ವಾಣಿಜ್ಯೋದ್ಯಮಿ ಹಾಗೂ ಮಾನವತಾವಾದಿಗಳಲ್ಲಿ ರತನ್ ಟಾಟಾ ಒಬ್ಬರಾಗಿದ್ದಾರೆ. ನನ್ನ ಬದುಕು ಎಂದಿಗೂ ಭಾರತದ ಅಭಿವೃದ್ಧಿಗಾಗಿ ಮುಡಿಪು ಎಂದು ಹೇಳುತ್ತಾ ತಮ್ಮ ಲಾಭದ ಅರುವತ್ತು ಶೇಕಡಾ ಸಂಪತ್ತನ್ನು ಚಾರಿಟೇಬಲ್ ಟ್ರಸ್ಟ್ ಗಳಿಗಾಗಿ ಖರ್ಚು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸೇವಾ ಮನೋಭಾವವನ್ನು ಮೆರೆದವರು ಇವರಾಗಿದ್ದಾರೆ. ಆದುದರಿಂದ ವಿದ್ಯಾರ್ಥಿಗಳೆಲ್ಲರೂ ರತನ್ ಟಾಟಾ ಅವರ ಸರಳ ಜೀವನ, ಸಾಧನೆ ಹಾಗೂ ಗೈದ ಸೇವೆಯನ್ನು ತಮ್ಮ ಜೇವನದಲ್ಲಿ ಅಳವಡಿಸಿಕೊಂಡು, ಅವರನ್ನು ಮಾದರಿಯಾಗಿ ಇಟ್ಟುಕೊಂಡು ಅವರಂತೆ ಆಗಲು ಕನಸನ್ನು ಕಂಡು ಅದಕ್ಕಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾI ಪ್ರಭಾತ್ ಬಲ್ನಾಡು ಇವರು ರತನ್ ಟಾಟಾ ಇವರ ಸಾಧನೆಯನ್ನು ವಿವರಿಸುತ್ತಾ ಸುಮಾರು 150 ದೇಶಗಳಲ್ಲಿ ತಮ್ಮ ಕಂಪೆನಿಯನ್ನು ಸ್ಥಾಪಿಸಿ, ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗದಾತರಾಗಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳಾದ ನೀವೂ ಕೂಡ ಇನ್ನೊಬ್ಬರಿಗೆ ಉದ್ಯೋಗ ನೀಡುವ ಮಟ್ಟದಲ್ಲಿ ಬೆಳೆಯಬೇಕು. ರತನ್ ಟಾಟಾ ಅವರು ತಮ್ಮ ಆದಾಯದ ನೂರಕ್ಕೆ ನೂರು ಶೇಕಡಾ ತೆರಿಗೆ ಕಟ್ಟುವ ಮೂಲಕ ಬಹಳ ಶುಭ್ರ ಹಾಗೂ ಪ್ರಾಮಾಣಿಕವಾಗಿ ಧ್ರುವ ನಕ್ಷತ್ರದಂತೆ ಬೆಳಗಿದ್ದಾರೆ ಹಾಗೂ ಭಾರತದ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿದ್ದಾರೆ ಎಂದು ಹೇಳುತ್ತಾ ನುಡಿ ನಮನವನ್ನು ಸಮರ್ಪಿಸಿದರು. ನಂತರ ಸಭೆಯಲ್ಲಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಡಿ.ಜೆ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ, ಡಿ. ಜೆ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ವೀಣಾ, ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯರಾದ ಮಧುಕರ್ ಸಾಲಿನ್ಸ್, ಸಹ ಸಂಸ್ಥೆಗಳ ಉಪನ್ಯಾಸಕರು, ಕಾಲೇಜಿನ ಉಪನ್ಯಾಸಕರು - ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿ ನಾಯಕರು ಶ್ರೀ ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು ಹಾಗೂ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಮಹಾವೀರ್ ಎಂ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಮಯಿ ಜೈನ್ ಆಯ್ಕೆ

Article Image

ಪ್ರಮಯಿ ಜೈನ್ ಆಯ್ಕೆ

ಪ್ರಮಯಿ ಜೈನ್, ಎಸ್‌ಡಿಎಂ ಕಾನೂನು ಕಾಲೇಜಿನ 2ನೇ ಬಿಬಿಎ, ಎಲ್‌ಎಲ್‌ಬಿ ವಿದ್ಯಾರ್ಥಿನಿ 2024-25ರ ಅಂತರ ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಬ್ಯಾಡ್ಮಿಂಟನ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಸತ್ತೂರು, ಧಾರವಾಡ: ವಿಶ್ವ ಶರೀರ ರಚನಾಶಾಸ್ತ್ರ ದಿನ ಆಚರಣೆ

Article Image

ಸತ್ತೂರು, ಧಾರವಾಡ: ವಿಶ್ವ ಶರೀರ ರಚನಾಶಾಸ್ತ್ರ ದಿನ ಆಚರಣೆ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರ ವಿಭಾಗದಿಂದ “ವಿಶ್ವ ಶರೀರ ರಚನಾಶಾಸ್ತ್ರ ದಿನ”ವನ್ನು ಅಕ್ಟೋಬರ್ 18, 2024 ರಂದು ಆಚರಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ವೀರೇಶ ಕುಮಾರ ಶಿರೋಳ, ಹಿರಿಯ ಪ್ರಾಧ್ಯಾಪಕರು, ಶರೀರ ರಚನಾ ಶಾಸ್ತ್ರ ವಿಭಾಗ, ಜೆ.ಎನ್.ಎಂ.ಸಿ., ಬೆಳಗಾವಿ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ: ತಮ್ಮ ಕಲಿಕೆಗೆ ಮಿಸಲಿಟ್ಟ ಶವವನ್ನು ತಮ್ಮ ಶಿಕ್ಷಕರೆಂದು ಪರಿಗಣಿಸಬೇಕು, ಏಕೆಂದರೆ ಅದು ಮಾನವ ದೇಹದ ಒಳನೋಟಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ದೇಹ ದಾನಿಗಳ ಅವರ ಉದಾತ್ತ ನಿರ್ಧಾರವನ್ನು ಗುರುತಿಸಿ ಗೌರವಿಸಬೇಕು. ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ವೃತ್ತಿಯನ್ನು ಆರಂಭದಿಂದಲೇ ಗಂಭೀರವಾಗಿ ಪರಿಗಣಿಸಬೇಕು. ವೈದ್ಯಕೀಯ ವಿದ್ಯಾರ್ಥಿಗಳ ಕಠಿಣ ಪರಿಶ್ರಮವು ಅವರನ್ನು ಉತ್ತಮ ವೃತ್ತಿಪರರನ್ನಾಗಿ ಮಾಡುತ್ತದೆ. ಈ ಸಂದರ್ಭದಲ್ಲಿ 3 ಹಿರಿಯ ಶರೀರ ರಚನಾ ಶಾಸ್ತ್ರಜ್ಞರಾದ ಡಾ. ವೀರೇಶ ಕುಮಾರ ಶಿರೋಳ, ಡಾ. ಎ. ವಿ. ಕುಲಕರ್ಣಿ ಮತ್ತು ಡಾ. ಎಸ್. ಕೆ. ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು. ಶರೀರ ರಚನಾಶಾಸ್ತ್ರ ದಿನದ ಅಂಗವಾಗಿ ಶರೀರ ರಚನಾಶಾಸ್ತ್ರದ ಮಾದರಿ ಪ್ರದರ್ಶನ ಮತ್ತು ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲತಿಗಳಾದ ವಿ. ಜೀವಂಧರ ಕುಮಾರ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವೀಣಾ ಕುಲಕರ್ಣಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸುರೇಶ ಮನಗುತ್ತಿ ಸನ್ಮಾನಿತರನ್ನು ಪರಿಚಯಿಸಿದರು. ಡಾ. ವಿನಯ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ರೋಶನಿ ಸದಾಶಿವ ವಂದನಾರ್ಪಣೆ ಸಲ್ಲಿಸಿದರು.

ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ನೇಮಕ

Article Image

ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ನೇಮಕ

ಬೆಳ್ತಂಗಡಿ: ಕರ್ನಾಟಕ ಸರ್ಕಾರಿ ನಿವೃತ್ತರ ಸಂಘ ಬೆಂಗಳೂರು ಕೇಂದ್ರ ಸಂಘದ ಮೈಸೂರು ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಅವರನ್ನು ನೇಮಕಗೊಳಿಸಿದ್ದಾರೆ. ಡಾ. ಕೆ. ಜಯಕೀರ್ತಿ ಜೈನ್ ಕರ್ನಾಟಕ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ, 25 ವರ್ಷ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ, ಪಶು ವೈದ್ಯಕೀಯ ಪರಿವೀಕ್ಷಕರಾಗಿ, ಸಂಘದಲ್ಲಿ 35 ವರ್ಷ ಜಿಲ್ಲಾಧ್ಯಕ್ಷರಾಗಿ, ವೇಣೂರು ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಸರ್ಕಾರದಿಂದ ಸಮನ್ವಯಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮಹಾವೀರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಶ್ರೀಕ್ಷೇತ್ರ ಚಂದ್ರಪುರ, ಶಿಶಿಲ ಆಡಳಿತ ಮಂಡಳಿಯ ಸಂಚಾಲಕರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುವರಾಜ ಜೈನ ಅವರಿಗೆ ಸಿರಿಪುರ ಪ್ರಶಸ್ತಿ

Article Image

ಯುವರಾಜ ಜೈನ ಅವರಿಗೆ ಸಿರಿಪುರ ಪ್ರಶಸ್ತಿ

ಮೂಡುಬಿದಿರೆ : ಮೂಡುಬಿದಿರೆ ಪೂನೆಚ್ಚಾರಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸಮಿತಿಯಿಂದ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಶಾರದಾ ಮಹೋತ್ಸವದ ಸಂದರ್ಭದಲ್ಲಿ ಪ್ರತಿಷ್ಠಿತ "ಸಿರಿಪುರ ಪ್ರಶಸ್ತಿ-2024"ನ್ನು ಎಕ್ಸಲೆಂಟ್ ವಿದ್ಯಾರ್ಥಿ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ ಅವರಿಗೆ ನೀಡಲಾಯಿತು. ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಅಮೋಘವಾದ ಸಾಧನೆಯನ್ನು ಶ್ರೀಯುತರು ಮಾಡಿದ್ದಾರೆ. ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿರುತ್ತಾರೆ. ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಹಿರಿಯ ಕಲಾವಿದರಾದ ಎಮ್. ಆರ್. ಬಾಳಿಕಾಯಿ ಇವರಿಗೆ ಗೌರವ ಪಿಆರ್‌ಟಿ ಕಲಾಪ್ರಶಸ್ತಿ

Article Image

ಹಿರಿಯ ಕಲಾವಿದರಾದ ಎಮ್. ಆರ್. ಬಾಳಿಕಾಯಿ ಇವರಿಗೆ ಗೌರವ ಪಿಆರ್‌ಟಿ ಕಲಾಪ್ರಶಸ್ತಿ

ಹಿರಿಯ ಕಲಾವಿದರಿಗೆ ಪಿ ಆರ್ ತಿಪ್ಪೇಸ್ವಾಮಿ ಪ್ರತಿಷ್ಠಾನ (ರಿ), ಮೈಸೂರು ಇವರು ಕೊಡಮಾಡುವ “ಗೌರವ ಪಿಆರ್‌ಟಿ ಕಲಾಪ್ರಶಸ್ತಿ” ಗೆ ಧಾರವಾಡದ ಹಿರಿಯ ಕಲಾವಿದರಾದ ಮಹಾವೀರ ರಾಯಪ್ಪ ಬಾಳಿಕಾಯಿ ಇವರು ಭಾಜನರಾಗಿದ್ದಾರೆ. ಮೈಸೂರಿನ ಶ್ರೀ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ದಿನಾಂಕ 20-09-2024ರಂದು ಜರುಗಿದ ಹಿರಿಯ ಕಲಾವಿದ ಶ್ರೀ ಪಿ.ಆರ್. ತಿಪ್ಪೇಸ್ವಾಮಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಮಹಾವೀರ ರಾಯಪ್ಪ ಬಾಳಿಕಾಯಿ ಇವರಿಗೆ ಪ್ರದಾನ ಮಾಡಿದರು. ಈ ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಇವರಿಗೆ 1995ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, 2017ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ನೀಡುವ ಜೀವಮಾನ ಸಾಧಕ ಸನ್ಮಾನ, 2012-13ರ ನಾಡೋಜ ಆರ್. ಎಮ್. ಹಡಪದ ಪ್ರಶಸ್ತಿ, 2010ರಲ್ಲಿ ಕಲಾಗುರು ಶ್ರೀ ಡಿ. ವಿ. ಹಾಲಭಾವಿ ಗೌರವ ಪ್ರಶಸ್ತಿ, 2016ರಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇಂತಹ ವ್ಯಕ್ತಿತ್ವವನ್ನು ಹೊಂದಿರುವ ಎಮ್. ಆರ್. ಬಾಳಿಕಾಯಿ ಅವರ ಕಲಾ ಸೇವೆಯನ್ನು ಗುರುತಿಸಿ ಧಾರವಾಡದ ಚಿತ್ರಕಲಾ ಶಿಲ್ಪಿ ಶ್ರೀ ಡಿ. ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಚಿತ್ರಕಲಾ ಪ್ರಪಂಚದಲ್ಲಿ ಜೀವಮಾನ ಸಾಧನೆಗಾಗಿ ಪ್ರತಿಷ್ಠಿತ “ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ 2023” ನ್ನು ದಿನಾಂಕ 28-11-2023ರಂದು ನೀಡಿ ಗೌರವಿಸಲಾಗಿದೆ.

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಸಾಂಸ್ಕ್ರತಿಕ ವೈಭವ

Article Image

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಸಾಂಸ್ಕ್ರತಿಕ ವೈಭವ

ಮಠದಕಣಿ ಯ ಶ್ರೀ ವೀರಭದ್ರ - ಮಹಾಮಾಯಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 47ನೇ ವಾರ್ಷಿಕೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಭಾನುವಾರ (6-10-2024) ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಎಲ್ಲರ ಮೆಚ್ಚುಗೆ ಪಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಿರುತೆರೆ ನಟಿ, ಭರತನಾಟ್ಯ ಕಲಾವಿದೆ ತನ್ವಿ ರಾವ್ ರವರಿಗೆ ಮಕ್ಕಿಮನೆ ಕಲಾವೃಂದದ ಗೌರವ ಪ್ರಶಸ್ತಿ "ಕರುನಾಡ ಕಲಾ ಸಿರಿ" ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ವೇತಾ ಜೈನ್ ವಕೀಲರು ಮೂಡುಬಿದಿರೆ, ಅಶೋಕ್ ಎ. ಮಂಗಳೂರು, ಸಂಪತ್ ಜೈನ್ ಮುಂಡೂರು, ಬಾಲಕೃಷ್ಣ ಕಲ್ಬಾವಿ, ಲೋಕಯ್ಯ ಶೆಟ್ಟಿಗಾರ, ವಿಶ್ವನಾಥ್ ಶೆಟ್ಟಿಗಾರ, ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು, ಗೌರವ್ ಶೆಟ್ಟಿಗಾರ, ಕೃತಿ ಸನಿಲ್, ಪೆರಣಾ ಜೆ, ಶ್ರೇಯಾ ಭಟ್, ಅಪೇಕ್ಷಾ ಎ, ಸಾನಿಧ್ಯ ಜೈನ್, ನಯನಾ ಮೊದಲಾದವರು ಸಹಕರಿಸಿದರು. ಶ್ರಾವ್ಯ ಕಿಶೋರ್, ಪಾರ್ಥನಾ ರೋಹಿತ್, ರಿಮಾ ಜಗನ್ನಾಥ್, ವಂಸತ್ ನಾಯ್ಕ್, ಆಶಿಶ್ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಶ್ರೇಯಾ ದಾಸ್ ಹಾಗೂ ಅರ್ಚಿತ್ ಜೈನ್ ನಿರೂಪಿಸಿದರು.

ಶ್ರೀ ಕ್ಷೇತ್ರ ನವಗ್ರಹ ತೀರ್ಥದಲ್ಲಿ ನವರಾತ್ರಿಯ ವೈಭವ

Article Image

ಶ್ರೀ ಕ್ಷೇತ್ರ ನವಗ್ರಹ ತೀರ್ಥದಲ್ಲಿ ನವರಾತ್ರಿಯ ವೈಭವ

ಪರಮ ಪೂಜ್ಯ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ ಮಾರ್ಗದರ್ಶನದಲ್ಲಿ, ಆರ್ಯಿಕಾ ಸಂಘ ಉಪಸ್ಥಿತಿಯಲ್ಲಿ, ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರ ನಿರ್ದೇಶನದಲ್ಲಿ ವರೂರು ನವಗ್ರತೀರ್ಥದಲ್ಲಿ ಲೋಕಕಲ್ಯಾಣ ಭಾವನೆಯಿಂದ ನವರಾತ್ರಿಯ ಶುಭ ಸಂದರ್ಭದಲ್ಲಿ ವಿವಿಧ ಹವನ, ಶ್ರೀ ಜಿನರ ಆರಾಧನೆ,, ವಿಶೇಷ ಪೂಜೆ, ಅಭಿಷೇಕ, ಮಾತೆ ಪದ್ಮಾವತಿ ಅಮ್ಮನವರ ವಿಶೇಷ ಅಲಂಕಾರ, ಷೋಡಶೋಪಚಾರ ಪೂಜೆಗಳು ವೈಭವದಿಂದ ನಡೆಯುತ್ತಿದ್ದು ಜನ ಶ್ರದ್ಧೆ ಭಕ್ತಿಗಳಿಂದ ಭಾಗವಹಿಸುತ್ತಿದ್ದಾರೆ. ನವದಿನಗಳ ಸಂಭ್ರಮಕ್ಕೆ ಮೊದಲ ದಿನದಂದು ಹುಬ್ಬಳ್ಳಿ ಜೈನ ಸಮಾಜ ಅಧ್ಯಕ್ಷ ರಾಜೇಂದ್ರ ಬೀಳಗಿ,ಉಪಾಧ್ಯಕ್ಷ ವಿಮಲ್ ತಾಳಿಕೋಟಿ, ಜೈನ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ ಬಸ್ತಿ ಪರಿವಾರ ದೇವೇಂದ್ರ ಕಾಗಿನವರು ಮತ್ತಿತರರು ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.

ಸರ್ವಮಂಗಳ ಜೈನ ಮಹಿಳಾ ಸಂಘ (ರಿ.) ನ ಮಾಸಿಕ ಸಭೆ

Article Image

ಸರ್ವಮಂಗಳ ಜೈನ ಮಹಿಳಾ ಸಂಘ (ರಿ.) ನ ಮಾಸಿಕ ಸಭೆ

ಮೂಡಬಿದಿರೆ: ಸರ್ವಮಂಗಳ ಜೈನ ಮಹಿಳಾ ಸಂಘ (ರಿ.) ನ ಮಾಸಿಕ ಸಭೆಯು ಅ. 2 ರಂದು ಶೆಟ್ರ ಬಸದಿ ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಸನ್ನಿಧಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಕ್ಷೀರಾಭಿಷೇಕ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರ ಪೂಜೆಯೊಂದಿಗೆ ಪ್ರಾರಂಭವಾಯಿತು. ತದನಂತರ ಮಹಾತ್ಮಾ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಬಗ್ಗೆ ಮಾತ್ರವಲ್ಲದೆ ಜೈನ ಧರ್ಮದ ತತ್ವಗಳನ್ನು ಪಾಲಿಸಿದ್ದರಿಂದ ಅವರು ಮಹಾತ್ಮಾರಾದರು ಎನ್ನುವುದನ್ನು ಸುಧಾ ಪಾರ್ಶ್ವನಾಥ್ ಅವರು ಮನಮುಟ್ಟುವಂತೆ ತಿಳಿಸಿಕೊಟ್ಟರು. ನಂತರ ಆದಿನಾಥ ವೈಭವ ವಿಶ್ವ ದಾಖಲೆಯ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದವರಿಗೆ ಆದಿನಾಥ ವೈಭವದ ಕವಯತ್ರಿ ಮೂಡಬಿದಿರೆಯ ವೀಣಾ ರಘಚಂದ್ರ ಶೆಟ್ಟಿಯವರು ಸ್ಮರಣಿಕೆ ವಿತರಣೆ ಮಾಡಿದರು. ಸರ್ವಮಂಗಳದ ಅಧ್ಯಕ್ಷೆಯಾದ ಮಂಜುಳ ಯಶೋಧರ್ ರವರು ಎಲ್ಲರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ, ಕಾರ್ಯದರ್ಶಿ ಆರತಿ ಮಹಾವೀರ್ ವಂದನಾರ್ಪಣೆ ಗೈದರು

ಲಂಡನ್: ಜೈನ್ ಮಿಲನ್ ಇದರ ವಾರ್ಷಿಕ ಸಭೆ

Article Image

ಲಂಡನ್: ಜೈನ್ ಮಿಲನ್ ಇದರ ವಾರ್ಷಿಕ ಸಭೆ

ಲಂಡನ್: ಜೈನ್ ಮಿಲನ್ ಇದರ ವಾರ್ಷಿಕ ಸಭೆಯು ಶಾಂತಿನಾಥ ದಿಗಂಬರ ಜೈನ ಬಸದಿ , Slough, ಇಂಗ್ಲೆಂಡ್ ನಲ್ಲಿ ಸೆ. 28 ಶನಿವಾರ ನಡೆಯಿತು. ಮೊದಲಿಗೆ ವಿಜಯ್ ಭಯ್ಯಾಜಿ ಅವರ ಮಾರ್ಗದರ್ಶನದಲ್ಲಿ ಅಭಿಷೇಕ, ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಜೈನ್ ಮಿಲನ್ ಅಧ್ಯಕ್ಷ ಡಾ. ನರೇಂದ್ರ ಅಳದಂಗಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು .ಮಿಲನ್ ಸದಸ್ಯರು ಪ್ರಾರ್ಥನೆ ಹಾಗೂ ಸಾಮೂಹಿಕ ಪಂಚ ನಮಸ್ಕಾರ ಪಠಣದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು .ಆರವ್ ಜೈನ್ ಅವರು ಜೈನ ಧರ್ಮದ ಮಹತ್ವದ ಬಗ್ಗೆ ಮಾತನಾಡಿದರು. ಕೈವಲ್ಯ ಮತ್ತು ಕೇವಲ್ ಜೈನ್ ಪಂಚ ಪರಮೇಸ್ಟಿ ಸ್ತುತಿ ಹಾಡಿದರು. ಸಾರ್ಥಕ್ ಜೈನ್ ಜಿನ ಭಜನೆ ಹಾಡಿದರು. ದೀಕ್ಷಾ ಜೈನ್ ಅವರು ಜೈನ ಧರ್ಮದಲ್ಲಿ ದೀಪಾವಳಿ ಆಚರಣೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಜಿನ ಭಜನೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಮಿಲನ್ ಸದಸ್ಯರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಮಿಲನ್ ಉಪಾಧ್ಯಕ್ಷ ನಿಖಿಲ್ B.A ಅವರು ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಸುವ ಮಿಲನ್ ಸದಸ್ಯರಿಗೆ ಶುಭ ಹಾರೈಸಿದರು. ಕೋಶಾಧಿಕಾರಿ ಡಾ. ವೈಶಾಕ್ ಬಲ್ಲಾಳ್ ವಂದಿಸಿದರು. ಮಿಲನ್ ಕಾರ್ಯದರ್ಶಿ ಅಶ್ವಿನಿ ಚಂದ್ರ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿ, ಸಭಾ ಕಾರ್ಯಕ್ರಮದ ನಂತರ ಸದಸ್ಯರಿಗೆ ಸ್ಪರ್ಧೆಗಳನ್ನು ನಡೆಸಿಕೊಟ್ಟರು . ಕಾರ್ಯಕ್ರಮದ ಆತಿಥೇಯರಾಗಿ ಸಂಪತ್ ಕುಮಾರ್, ಶೀತಲ್ ಜೈನ್ ,ಧೀರೇಂದ್ರ ಬಲ್ಲಾಳ್ ಕುಟುಂಬದವರು ಸಹಕರಿಸಿದರು.

ಪುತ್ತೂರು: ಮಂಗಳೂರು ವಿಭಾಗದ ಮಿಲನ್ ಪದಾಧಿಕಾರಿಗಳ ಕಾರ್ಯಗಾರ

Article Image

ಪುತ್ತೂರು: ಮಂಗಳೂರು ವಿಭಾಗದ ಮಿಲನ್ ಪದಾಧಿಕಾರಿಗಳ ಕಾರ್ಯಗಾರ

ಪುತ್ತೂರು: ಭಾರತೀಯ ಜೈನ್ ಮಿಲನ್ ವಲಯ - 8 ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರು ವಿಭಾಗದ ಎಲ್ಲಾ ಮಿಲನ್ ಪದಾಧಿಕಾರಿಗಳ ಕಾರ್ಯಗಾರವು ಪುತ್ತೂರು ಜೈನ್ ಮಿಲನ್ ಆತಿಥೇಯದಲ್ಲಿ ಮಹಾವೀರ ವೆಂಚರ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸೋನಿಯ ಯಶೋವರ್ಮ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಭಾರತೀಯ ಜೈನ್ ಮಿಲನ್ ವಲಯ - 8 ರ ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್ ಉಡುಪಿ, ಉಪಾಧ್ಯಕ್ಷ ಸುದರ್ಶನ್ ಜೈನ್ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಂಜಿನಿಯರ್ ಹಾಗೂ ಉದ್ಯಮಿ ವಿ.ಕೆ ಜೈನ್ ಪುತ್ತೂರು, ಭಾರತೀಯ ಜೈನ್ ಮಿಲನ್ ವಲಯ -8 ರ ಉಪಾಧ್ಯಕ್ಷ ಜಿತೇಶ್ ಜೈನ್ ಮಂಗಳೂರು ಭಾಗವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ವಲಯದ ಎಲ್ಲಾ ನಿರ್ದೇಶಕರುಗಳು, ಸುಭಾಶ್ಚಂದ್ರ ಜೈನ್ ಕಾರ್ಯದರ್ಶಿ ವಲಯ-8 ಮತ್ತು ಪುತ್ತೂರು ಜೈನ್ ಮಿಲನ್ ಅಧ್ಯಕ್ಷ ಸತೀಶ್ ಪಡಿವಾಳ್, ಕಾರ್ಯದರ್ಶಿ ರಾಜೇಶ್ ಕುಮಾರ್ ಪಿ, ಕೋಶಾಧಿಕಾರಿ ನರೇಂದ್ರ ಪಡಿವಾಳ್ ಆಸೀನರಾಗಿದ್ದರು.. ವಲಯ - 8ರ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿ, ಜೈನ್ ಮಿಲನ್ ಪುತ್ತೂರು ಅಧ್ಯಕ್ಷ ಸತೀಶ್ ಪಡಿವಾಳ್ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಕುಮಾರ್ ಪಿ. ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 125 ಜಿನ ವೀರ, ವೀರಾಂಗನೆಯವರು ಭಾಗವಹಿಸಿದ್ದರು.

ಜೈನ ಧರ್ಮದ ನವರಾತ್ರಿ ಜೀವದಯಾಷ್ಟಮಿ ಆಚರಣೆ

Article Image

ಜೈನ ಧರ್ಮದ ನವರಾತ್ರಿ ಜೀವದಯಾಷ್ಟಮಿ ಆಚರಣೆ

ಜೈನ ಧರ್ಮದಲ್ಲಿ ಆಚರಿಸುವ ಹಬ್ಬಗಳು ಕೆಲವೊಂದು ರೀತಿಯಲ್ಲಿ ಭಿನ್ನವಾಗಿವೆ. ಹಬ್ಬಗಳ ಆಚರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸ ಇರಬಹುದು. ಆದರೆ ಉದ್ದೇಶ ಮತ್ತು ಸಾಫಲ್ಯತೆಯಲ್ಲಿ ಭಿನ್ನತೆ ಇಲ್ಲ. ಆಶ್ವೇಜ ಮಾಸದ ಶುಕ್ಲ ಪಾಡ್ಯದಿಂದ ದಶಮಿವರೆಗೆ ನವರಾತ್ರಿ ಆಚರಿಸಲಾಗುತಿದೆ.ಹೆಚ್ಚು ವಿಜೃಂಬರಣೆಯಿಲ್ಲದೆ ತಮ್ಮತಮ್ಮ ಕುಲದೇವಿಯರ ಬಸದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಯಕ್ಷಿಣಿ ದೇವತೆಗಳನ್ನು ಷೋಡಶ ವಿಧಗಳಲ್ಲಿ ಅರ್ಚನೆ ಮಾಡಿ ಅಲಂಕೃತ ದೇವಿಯರನ್ನು ಪೂಜಿಸುವರು. ಜೈನರ 24 ತೀರ್ಥಂಕರರಿಗೂ ಯಕ್ಷ ಮತ್ತು ಯಕ್ಷಿಣಿಯರು ಇರುವರು. ತೀರ್ಥಂಕರರ ಬಲಭಾಗದಲ್ಲಿ ಇರುವುದೇ ಯಕ್ಷ,ಎಡಭಾಗದಲ್ಲಿ ಇರುವುದು ಯಕ್ಷಿಣಿಯರು. ತೀರ್ಥಂಕರರ ಪೂಜೆ ಮಾಡಿದರೆ ಇವರು ಫಲ ಕೊಡುವರು ಮತ್ತು ತೀರ್ಥಂಕರರ ಸೇವಕರೂ ಆಗಿರುವರು. ಆದರೆ ಜೈನ ಮುನಿಗಳು ಇವರನ್ನು ಪೂಜಿಸುವುದಿಲ್ಲ. 2024ನೇ ಅಕ್ಟೋಬ‌ರ್ 3ರಂದು (ಆಶ್ವೀಜ ಶುಕ್ಲ ಪಾಡ್ಯ) ಮೊದಲನೇ ತೀರ್ಥಂಕರ ಶ್ರೀಆದಿನಾಥರ ಯಕ್ಷಿಣಿ ಶ್ರೀಚಕ್ರೇಶ್ವರಿ ದೇವಿಯನ್ನು ಪೂಜಿಸುವರು. ಬಿದಿಗೆಯಂದು (22ನೇ ತೀರ್ಥಂಕರ) ಶ್ರೀ ನೇಮಿನಾಥ ಸ್ವಾಮಿಯವರ ಯಕ್ಷಿಣಿ ಶ್ರೀ ಕೂಷ್ಮಾಂಡಿನಿ ದೇವಿ ಅಲಂಕಾರ ಮಾಡಿ ಷೋಡಷೋಪಚಾರಗಳಿಂದ ಪೂಜಿಸುವರು. ತದಿಗೆಯಂದು (11 ನೇ ತೀರ್ಥಂಕರ) ಶ್ರೀ ಶ್ರೇಯಾಂಸನಾಥ ಸ್ವಾಮಿಯವರ ಯಕ್ಷಿಣಿ ಶ್ರೀಗೌರಿ ದೇವಿಯನ್ನು ಪೂಜಿಸುವರು. ಚೌತಿಯಂದು (9ನೇ ತೀರ್ಥಂಕರ) ಶ್ರೀಪುಷ್ಪದಂತ ಸ್ವಾಮಿಯವರ ಯಕ್ಷಿಣಿ ಶ್ರೀಮಹಾಂಕಾಳಿ ದೇವಿಯನ್ನು ಪೂಜಿಸುವರು. ಪಂಚಮಿಯಂದು (14 ನೇ ತೀರ್ಥಂಕರ) ಶ್ರೀಅನಂತನಾಥ ಸ್ವಾಮಿಯವರ ಯಕ್ಷಿಣಿ ಅನಂತಮತಿ ದೇವಿಯನ್ನು ಪೂಜೆಮಾಡುವರು. ಷಷ್ಠಿಯಂದು(8 ನೇ ತೀರ್ಥಂಕರ) ಶ್ರೀಚಂದ್ರಪ್ರಭ ಸ್ವಾಮಿಯವರ ಯಕ್ಷಿಣಿ ಶ್ರೀಜ್ವಾಲಾಮಾಲಿನಿ ದೇವಿಯವರನ್ನು ಪೂಜಿಸುವರು. ಸಪ್ತಮಿಯಂದು (23ನೇ ತೀರ್ಥಂಕರ) ಶ್ರೀ ಪಾರ್ಶ್ವನಾಥ ಸ್ವಾಮಿಯವರ ಯಕ್ಷಿಣಿಶ್ರೀಪದ್ಮಾವತಿ ದೇವಿಯನ್ನು ಪೂಜಿಸುವರು. ಅಷ್ಟಮಿಯಂದು ಅಂದರೆ ಅಕ್ಟೋಬರ್ 11ರಂದು ತೀರ್ಥಂಕರ ಶ್ರೀಮುನಿಸುವ್ರತ ಸ್ವಾಮಿಯವರ ಯಕ್ಷಿಣಿ ಶ್ರೀಬಹುರೂಪಿಣಿ ದೇವಿಯನ್ನು ಪೂಜಿಸುವರು.ನವಮಿಯಂದು (24 ನೇ ತೀರ್ಥಂಕರ) ಶ್ರೀಮಹಾವೀರ ಸ್ವಾಮಿಯವರ ಯಕ್ಷಿಣಿ ಶ್ರೀಸಿದ್ದಾಯಿನಿ ದೇವಿಯನ್ನು ಪೂಜಿಸುವರು. ನವರಾತ್ರಿ ಕೊನೇಯ ದಿನ ದಶಮಿಯಂದು (10ನೇ ತೀರ್ಥಂಕರ) ಶ್ರೀ ಶೀತಲನಾಥಸ್ವಾಮಿಯಕ್ಷಿಣಿ ಶ್ರೀಸರಸ್ವತಿ ದೇವಿ ಪೂಜೆ ಮಾಡುತ್ತಾರೆ. ಮೊದಲನೇ ತೀರ್ಥಂಕರ ಶ್ರೀ ಆಧಿನಾಥರ ಪುತ್ರ ಭರತೇಶ ಚಕ್ರವರ್ತಿ ತನ್ನ ದಿಗ್ವಿಜಯಕ್ಕೆ ಮೊದಲು, ಆಯುಧಾಗಾರದಲ್ಲಿ ಹುಟ್ಟಿದ ಚಕ್ರರತ್ನ ಸಹಿತ ಇತರ ಆಯುಧಗಳ ವಿಶೇಷ ಪೂಜೆ ಮಾಡಿದ ದಿನವನ್ನು ನೆನೆದು ಮಾಡುವ ಹಬ್ಬದಾಚಾರಣೆವಾಗಿದೆ. ಅಲ್ಲದೆ ಈ ಅವಧಿಯಲ್ಲಿ ಅಶ್ವಯುಜ ಶುದ್ಧ ಅಷ್ಟಮಿಯಂದು ಆಚರಿಸುವ 'ಜೀವದಯಾಷ್ಟಮಿ' ಬಹಳ ಮುಖ್ಯವಾದ ಪವಿತ್ರ ಹಬ್ಬ. ಸಂಕಲ್ಪ ಹಿಂಸೆಯಿಂದಾಗುವ ಅನಾಹುತಗಳನ್ನು ನಿರೂಪಿಸುವ ಹಬ್ಬವಿದು. ಹಿಟ್ಟಿನ ಕೋಳಿಯನ್ನು ಬಲಿ ಕೊಡಲು ಹೋದ ಯಶೋಧರ ಹಿಂಸೆಗೆ ಒಳಗಾಗಿ ಏಳೇಳು ಭವಗಳಲ್ಲಿ ತೊಳಲಾಡಿದ 'ಯಶೋಧರ ಚರಿತ್ರೆ'ಯ ಹಿನ್ನೆಲೆಯಲ್ಲಿ ಈ ಜೀವದಯಾಷ್ಟಮಿಗೆ ಬಹಳ ಮಹತ್ವವಿದೆ. ಜೈನ ಧರ್ಮದ ಅಹಿಂಸೆಯ ಮಹತ್ವವನ್ನು ಎತ್ತಿ ಹಿಡಿದ ಹಬ್ಬವಿದು. ಜೈನರೆಲ್ಲರೂ ಬಹು ಶ್ರದ್ಧಾ ಭಕ್ತಿಗಳಿಂದ ಶ್ರವಣಬೆಳಗೊಳ ಮೂಡಬಿದ್ರಿ , ಕಾರ್ಕಳ, ವೇಣೂರು, ವರಂಗ, ಹುಂಬುಜ, ಎನ್.ಆರ್.ಪುರ ಮುಂತಾದ ಪುಣ್ಯಕ್ಷೇತ್ರಗಳಿಗೆ ತೆರಳಿ ಜೈನಬಸದಿಗಳ ದರ್ಶನ, ಜಿನಪೂಜೆ ಇತ್ಯಾದಿ ಪುಣ್ಯ ಕಾರ್ಯಗಳ ಮೂಲಕ ಹಿಂಸಾರಹಿತ ದಿನವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. -ಪ್ರೊ.ಅಕ್ಷಯ ಕುಮಾರ್, ಮಳಲಿ.

ನರಸಿಂಹರಾಜಪುರ: ಪೂಜಾ ಕಾರ್ಯಕ್ರಮ

Article Image

ನರಸಿಂಹರಾಜಪುರ: ಪೂಜಾ ಕಾರ್ಯಕ್ರಮ

ನರಸಿಂಹರಾಜಪುರ: ಸಿಂಹನಗದ್ದೆ ಬಸ್ತಿಮಠ, ಶ್ರೀ ಜ್ವಾಲಾಮಾಲಿನಿ ದೇವಿ ಅತಿಶಯ ಕ್ಷೇತ್ರದಲ್ಲಿ ಶ್ರೀ ಮತ್ ಶರನ್ನವರಾತ್ರಿ ಹಾಗೂ ವಿಜಯದಶಮಿಯ ಮಂಗಳ ಕಾರ್ಯಕ್ರಮಗಳು ಪ. ಪೂ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಇಂದಿನಿಂದ (ಅ. 03) ಅ. 12ರವರೆಗೆ ಪ್ರತಿ ನಿತ್ಯ ಬೆಳ್ಳಿಗ್ಗೆ 8-00ರಿಂದ ಶ್ರೀ ಕ್ಷೇತ್ರದ ಎಲ್ಲಾ ಬಸದಿಗಳಲ್ಲಿ ಪಂಚಾಮೃತ ಅಭಿಷೇಕ ಮತ್ತು ಸಂಜೆ 6-00ರಿಂದ ಅಮ್ಮನವರಿಗೆ ಶೋಡಷೋಪಚಾರ ಪೂಜೆ/ ಧರ್ಮೋಪದೇಶ/ ಮಹಾಮಂಗಳಾರತಿ ಜರುಗಲಿದೆ. ವಿಜಯದಶಮಿಯಂದು ಪೂರ್ವ ಪಟ್ಟಾಧೀಶರ ನಿಷದಿಯ ಪಾದುಕೆ ಪೂಜೆ ಮತ್ತು ಪೂರ್ವಾಚಾರ್ಯರ ಪಾದುಕೆಗಳ ಪೂಜೆ ಮತ್ತು ನಂತರ ಸರಿಯಾಗಿ ಮದ್ಯಾಹ್ನ 3-00 ಸಲ್ಲುವ ಕುಂಭ ಲಗ್ನದಲ್ಲಿ ಸ್ವಸ್ತಿಶ್ರೀಗಳ ಪರಂಪರಾಗತ ಸದ್ಧರ್ಮ ಸಿಂಹಾಸನ ಪೀಠಾರೋಹಣ ಮತ್ತು ಧರ್ಮೋಪದೇಶ, ಶ್ರೀ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ದಿನಾಂಕ 12-10-2024ನೇ ಶನಿವಾರ ಸಂಜೆ 5-00ಗಂಟೆಗೆ ರಾಜಬೀದಿಯಲ್ಲಿ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಉತ್ಸವ ಜರುಗಲಿದೆ.

ಹೊಂಬುಜ: ಶರನ್ನವರಾತ್ರಿ ವಿಜಯದಶಮಿ ಉತ್ಸವ

Article Image

ಹೊಂಬುಜ: ಶರನ್ನವರಾತ್ರಿ ವಿಜಯದಶಮಿ ಉತ್ಸವ

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ನೇತೃತ್ವ, ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ದಿನವನ್ನು ಪರಂಪರೆಯಂತೆ ಧಾರ್ಮಿಕ ವಿಧಿಪೂರ್ವಕವಾಗಿ ನೆರವೇರಿಸಲಾಗುವುದು. ನಿನ್ನೆ (ಅ. 03) ಗುರುವಾರದಂದು-ಶರನ್ನವರಾತ್ರಿ ಪ್ರಾರಂಭಗೊಂಡು (ಘಟಸ್ಥಾಪನೆ) ಅ. 09 ಬುಧವಾರ- ಸರಸ್ವತಿ ಪೂಜೆ, (ಮೂಲಾ ನಕ್ಷತ್ರ) ಅ. 10 ಗುರುವಾರ-ಜೀವದಯಾಷ್ಟಮಿ ಪೂಜೆ, ಅ. 11 ಶುಕ್ರವಾರ-ಮಹಾನವಮಿ (ಆಯುಧಪೂಜೆ) ಅ. 12 ಶನಿವಾರ-ವಿಜಯದಶಮಿ, ಬನ್ನಿಮಂಟಪಕ್ಕೆ ಶ್ರೀದೇವಿ, ಪಲ್ಲಕ್ಕಿ ಉತ್ಸವ, ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ನೆರವೇರಲಿದೆ. ಹೊಂಬುಜ ಜೈನ ಮಠದ ಅಧೀನ ಕ್ಷೇತ್ರಗಳಾದ ಶ್ರೀಕ್ಷೇತ್ರ ಕುಂದಾದ್ರಿ, ವರಂಗ ಹಾಗೂ ಹಟ್ಟಿಯಂಗಡಿ ಜಿನಮಂದಿರಗಳಲ್ಲಿ ಶರನ್ನವರಾತ್ರಿ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನೆರವೇರಲಿವೆ. ಭಕ್ತವೃಂದದವರು ಶರನ್ನವರಾತ್ರಿ ಉತ್ಸವಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮೊ: 9481453653, 9483801460.

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Article Image

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವೇಣೂರು, ಅ. 2: ಗಾಂಧಿ ಜಯಂತಿ ಪ್ರಯುಕ್ತ ಭ| ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ವೇಣೂರು ವಲಯ ಅರಣ್ಯ ಇಲಾಖೆ ವತಿಯಿಂದ ಶ್ರೀ ದಿಗಂಬರ ಜೈ ತೀರ್ಥ ಕ್ಷೇತ್ರ ಸಮಿತಿ ವೇಣೂರು ಇವರ ಸಹಭಾಗಿತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಯಾತ್ರಿ ನಿವಾಸದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೇಣೂರು ವಲಯ ಅರಣ್ಯ ಅಧಿಕಾರಿ ಸುಬ್ರಮಣ್ಯ ಆಚಾರ್ ತಮ್ಮ ಮನೆ ಅಲ್ಲದೆ ತಾವಿರುವ ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕದಲ್ಲಿ ಅರಣ್ಯ ಇಲಾಖೆ ವತಿಯಿಂದ ಇವರು ನೀಡಿದ ಸಹಕಾರವನ್ನು ಸ್ಮರಿಸುತ್ತಾ ಇವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ವತಿಯಿಂದ ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ ಸನ್ಮಾನಿಸಿದರು. ವಲಯದ ಎಲ್ಲ ಉಪ ಅರಣ್ಯಾಧಿಕಾರಿಗಳಾದ ಸುನಿಲ್, ಹರಿಪ್ರಸಾದ್, ಇಬ್ರಾಹಿಂ, ಸುರೇಶ್ ಮತ್ತು ಅರಣ್ಯ ಪಾಲಕರು, ಅರಣ್ಯ ವೀಕ್ಷಕರು ಹಾಗೂ ಸಿಬ್ಬಂದಿಗಳು ಮತ್ತು ತೀರ್ಥಕ್ಷೇತ್ರ ಸಮಿತಿಯ ಸಿಬ್ಬಂದಿಗಳಾದ ವೈ. ಜಯರಾಜ್, ದೀಪಶ್ರೀ ಉಪಸ್ಥಿತರಿದ್ದರು. ವಿ. ಪ್ರವೀಣ್ ಕುಮಾರ್ ಇಂದ್ರರವರು ಸ್ವಾಗತಿಸಿದರು. ತೀರ್ಥಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಮಹಾವೀರ್ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.

First Previous

Showing 1 of 10 pages

Next Last