ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 7ನೇ ದಿನದ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾಕಮ್ಮಟದ 7ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಮಕೃಷ್ಣ ಕಾಟುಕುಕ್ಕೆ, ಗಾಯಕರು ಕಾಸರಗೋಡು ಇವರು ಹಾಡುಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಕಮ್ಮಟಕ್ಕೆ ಆಗಮಿಸಿದ ಪೂಜನೀಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಡಿ. ಸುರೇಂದ್ರ ಕುಮಾರ್‌ರವರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರೇರೇಪಿಸಿದರು.
ಮನೆಯಲ್ಲಿ ಧಾರ್ಮಿಕ ಸಂಸ್ಕಾರಕ್ಕೆ ಪೂರಕ ಭಜನೆ: ನಮ್ಮ ಆತ್ಮಸಾಕ್ಷಿಯೇ ನಮಗೆ ದೇವರಾಗಿದ್ದು ಆತ್ಮಸಾಕ್ಷಿಗೆ ಸರಿಯಾಗಿ ನಾವು ಕೆಲಸ ಮಾಡಬೇಕು ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ಒಬ್ಬರೆ ತಿಂದರೆ ಸುಖ, ಹಂಚಿ ತಿಂದರೆ ಸಂತೋಷ ಎಂಬ ಮಾತಿದೆ. ಸುಖಕ್ಕಿಂತ ನಮಗೆ ಹಂಚಿ ತಿಂದಾಗ ಬರುವ ಸಂತೋಷವೇ ಮುಖ್ಯ. ನೀ ನನಗಿದ್ದರೆ ನಾ ನಿನಗೆ ಎಂಬಂತೆ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸ, ಗೌರವ, ಸಹಕಾರ, ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಜೀವನ ನಡೆಸಬೇಕು. ದಾಸರ ಹಾಡುಗಳು, ಶರಣರ ವಚನಗಳು, ಜೈನರ ಭಜನೆಗಳು, ತತ್ವ-ಸಿದ್ಧಾಂತಗಳು ನಮ್ಮ ಸಾರ್ಥಕ ಬದುಕಿಗೆ ಉತ್ತಮ ಸಂದೇಶ ನೀಡುತ್ತವೆ. ಪ್ರತಿ ಮನೆಯಲ್ಲಿ ತಾಯಿ-ತಂದೆಯನ್ನು ದೇವರಂತೆ ಕಾಣಬೇಕು. ಪುರುಷರು ಮಹಿಳೆಯರಿಗೆ ಗೌರವ ಕೊಡುವ ಸಂಸ್ಕಾರ ಮನೆಯಿಂದಲೆ ಆರಂಭವಾಗಬೇಕು. ಇಂದು ಪುರುಷರು ಮಾಡುವ ಎಲ್ಲಾ ಕೆಲಸಗಳನ್ನು ಮಹಿಳೆಯರು ಮಾಡುತ್ತಾರೆ. ಆದರೆ ಮಹಿಳೆಯರು ಮಾಡುವ ಅಡುಗೆ, ಸ್ವಚ್ಛತೆ ಇತ್ಯಾದಿಯನ್ನು ಪುರುಷರು ಯಾಕೆ ಮಾಡುವುದಿಲ್ಲ ಎಂದು ಅವರು ಯಕ್ಷಪ್ರಶ್ನೆ ಹಾಕಿದರು. ಸಿನೆಮಾ ತಾರೆಯರು, ರಾಜಕಾರಣಿಗಳು, ಮಠಾಧಿಪತಿಗಳು ನಮಗೆ ರೋಲ್ ಮೋಡೆಲ್‌ಗಳಲ್ಲ. ನಮಗೆ ನಾವೇ ರೋಲ್‌ಮೋಡೆಲ್‌ಗಳಾಗಬೇಕು.
ದೈಹಿಕ ರೋಗಗಳಿಗೆ ನಮ್ಮ ಮನಸೇ ಮೂಲ ಕಾರಣ. ಮುಖದಲ್ಲಿ ಸದಾ ಮುಗುಳ್ನಗೆ ನಮ್ಮ ಮುಖ ಬೆಲೆಯನ್ನು ಹೆಚ್ಚಿಸುತ್ತದೆ. ಪರೋಪಕಾರ, ಪ್ರೀತಿ, ಸೇವೆ, ದಯೆ, ಅನುಕಂಪ, ಆತಿಥ್ಯ ಮೊದಲಾದ ಸತ್ಕಾರ್ಯಗಳಿಂದ ಮನಸು ತೃಪ್ತಿಯಿಂದ ಹಗುರವಾಗಿ ಶಾಂತಿ, ನೆಮ್ಮದಿ ಸಿಗುತ್ತದೆ. ಕೋಪ, ದ್ವೇಷ, ಚಿಂತೆ, ಟೀಕೆ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ ಮೊದಲಾದ ರೋಗಗಳು ಕಾಡುತ್ತವೆ. ಪ್ರತಿಯೊಬ್ಬರೂ ವಾರದಲ್ಲಿ ಒಂದು ದಿನವಾದರೂ ಸಂಚಾರಿ ದೂರವಾಣಿ ಬಳಸದಿರುವ ವೃತ ಮಾಡಿದರೆ ಎಲ್ಲರಿಗೂ ಸತ್ಕಾರ್ಯ ಮಾಡಲು ಸಾಕಷ್ಟು ಸಮಯ ಸಿಗುತ್ತದೆ ಎಂದು ಅವರು ಹೇಳಿದರು. ಭಾವನೆ ಮತ್ತು ಸಾಹಿತ್ಯ ಇಲ್ಲದ ಭಜನೆ ನೀರಸವಾಗುತ್ತದೆ. ಉತ್ತಮ ಸಾಹಿತ್ಯ ಮತ್ತು ಭಾವನೆ ಹೊಂದಿರುವ ಭಜನೆಗಳನ್ನು ಬಾಯಿಪಾಠವಾಗಿ ಹಾಡಬೇಕು ಎಂದು ಅವರು ಸಲಹೆ ನೀಡಿದರು. ಶಿಬಿರಾರ್ಥಿಗಳು ತಮ್ಮ ದೋಷಗಳನ್ನೆಲ್ಲ ಇಲ್ಲೇ ಬಿಟ್ಟು ಹೋಗಿ. ಉತ್ತಮ ಅಭ್ಯಾಸಗಳನ್ನು ಹಾಗೂ ಸಂಸ್ಕಾರವನ್ನು ಬೆಳೆಸಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.
ಭಜನಾ ತರಬೇತಿ ಕಮ್ಮಟದ ಶಿಬಿರಾರ್ಥಿಗಳಿಂದ 4ನೇ ದಿನದ ನಗರ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯಪ್ರಸಾದ್, ಕಾರ್ಯದರ್ಶಿಗಳಾದ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್‌ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು. ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಂದ್ರಕುಮಾರ್ ಸದಸ್ಯರಾದ ಪದ್ಮರಾಜ್ ಜೈನ್, ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಮಹಾವೀರ ಅಜ್ರಿ, ಭವಾನಿ, ಮೋಹನ್ ಶೆಟ್ಟಿ, ಸತೀಶ್ ಪೈ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಸಮನ್ವಯಾಧಿಕಾರಿಗಳಾಗಿ ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.