Article Image

ಮೂಡುಬಿದಿರೆ: ಲೆಕ್ಕ ಪರಿಶೋಧಕರ (ಸಿ.ಎ) ಕಛೇರಿ ಶುಭಾರಂಭ

Article Image

ಮೂಡುಬಿದಿರೆ: ಲೆಕ್ಕ ಪರಿಶೋಧಕರ (ಸಿ.ಎ) ಕಛೇರಿ ಶುಭಾರಂಭ

ಮೂಡುಬಿದಿರೆ ನಾಗರಕಟ್ಟೆ ರಸ್ತೆಯ ಕೆನರಾ ಟ್ರೇಡ್ ಸೆಂಟರ್ ಕಟ್ಟಡದಲ್ಲಿ ಸಿ.ಎ ಅಕ್ಷಯ ಜೈನ್, ಲೆಕ್ಕ ಪರಿಶೋಧಕರು (Chartered Accountant) ಇವರ ನೂತನ ಕಛೇರಿಯ ಶುಭಾರಂಭವು ಜರುಗಿತು. ಈ ಸಂದರ್ಭದಲ್ಲಿ ಸಿ.ಎ ಪ್ರಭಾತ ಕುಮಾರ್, ಸಿ.ಎ ಅಭಿನಯ್ ಕುಲಾಲ್, ಡಾ. ಅಶೋಕ ಜೈನ್, ಕತ್ತೋಡಿ ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ರಾಜಶ್ರೀ ಕೆ.ಸೂಜಿ ಮಾಸ್ಟರ್ಸ್ ಪದವಿ

Article Image

ರಾಜಶ್ರೀ ಕೆ.ಸೂಜಿ ಮಾಸ್ಟರ್ಸ್ ಪದವಿ

ಹುಬ್ಬಳ್ಳಿ:- ಡಾ| ರಾಜಶ್ರೀ ಕೆ.ಸೂಜಿರವರು 2026 ಸಾಲಿನ ಮಾರ್ಚ್ ತಿಂಗಳಿನಲ್ಲಿ ಆರ್ಯುವೇದ ವಾಚಸ್ಪತಿ (ಮಾಸ್ಟರ್ಸ್ ಪದವಿ)ಯನ್ನು ಆರ್ಯುವೇದ ಮಹಾವಿದ್ಯಾಲಯ ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ಹುಬ್ಬಳ್ಳಿಯ ಶಕುಂತಳ ಎಂ.ಸೂಜಿರವರ ಮೊಮ್ಮಗಳು ಮತ್ತು ಆಸ್ಮಿತಾ ಕಿರಣ್ ಸೂಜಿ ಮತ್ತು ಕಿರಣ್ ಎಂ. ಸೂಜಿರವರ ಪುತ್ರಿ.

ಧರ್ಮಸ್ಥಳ: ಬಸದಿಯ ವಾರ್ಷಿಕೋತ್ಸವ

Article Image

ಧರ್ಮಸ್ಥಳ: ಬಸದಿಯ ವಾರ್ಷಿಕೋತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ದೇವರಿಗೆ ಸಹಸ್ರನಾಮ ಪುಷ್ಪಾರ್ಚನೆ ನಡೆಯಿತು. ಶ್ರದ್ಧಾಅಮಿತ್ ಮತ್ತು ಊರಿನ ಶ್ರಾವಕರು, ಶ್ರಾವಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತೋರಣಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಲ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

ಮೂಡುಬಿದಿರೆ ಪುರಸಭೆ: ಸ್ವಚ್ಛತಾ ರಾಯಭಾರಿಯಾಗಿ ಶ್ವೇತಾ ಜೈನ್ ನೇಮಕ

Article Image

ಮೂಡುಬಿದಿರೆ ಪುರಸಭೆ: ಸ್ವಚ್ಛತಾ ರಾಯಭಾರಿಯಾಗಿ ಶ್ವೇತಾ ಜೈನ್ ನೇಮಕ

ಮೂಡುಬಿದಿರೆ: ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿಗೆ ಮೂಡುಬಿದಿರೆ ಪುರಸಭೆಯ ಸ್ವಚ್ಛತಾ ರಾಯಭಾರಿಯಾಗಿ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷೆ, ನ್ಯಾಯವಾದಿ ಶ್ವೇತಾ ಜೈನ್ ಅವರನ್ನು ಗೌರವ ಪೂರ್ವಕವಾಗಿ ನೇಮಕ ಮಾಡಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಇಂದು ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಉಲ್ಲೇಖಿತ ವಿಷಯಕ್ಕೆ ಸಂಬಂಧಿಸಿದಂತೆ, ಸ್ವಚ್ಛ ಭಾರತ್ ಮಿಷನ್ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಶೂನ್ಯ ತ್ಯಾಜ್ಯ ಕಾರ್ಯಕ್ರಮಗಳ ಆಯೋಜನೆ, ಶೂನ್ಯ ತ್ಯಾಜ್ಯ ಕ್ಯಾಂಪಸ್ ಗಳ ರಚನೆಗಾಗಿ ಹಾಗೂ ಸ್ವಚ್ಛತೆಯ ಸಂದೇಶವನ್ನು ಸಾರುವ ಸಲುವಾಗಿ ಈ ನೇಮಕ ಮಾಡಲಾಗಿದೆ. ನ್ಯಾಯವಾದಿ ಶ್ವೇತಾ ಜೈನ್ ಅವರು ಭಾರತೀಯ ಜೈನ್ ಮಿಲನ್ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುವ ಜೊತೆಗೆ ಬಸದಿ ಸ್ವಚ್ಛತಾ ತಂಡವನ್ನು ಕಟ್ಟಿಕೊಂಡು ಅವಿಭಜಿತ ಜಿಲ್ಲೆಯ ಹಲವು ಬಸದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜನಿತರಾಗಿದ್ದಾರೆ.

ಧಾರವಾಡ: ಜೆಎಸ್ಎಸ್ ಸಭಾಭವನದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

Article Image

ಧಾರವಾಡ: ಜೆಎಸ್ಎಸ್ ಸಭಾಭವನದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಜೈನಶಾಸ್ತ್ರ ಅಧ್ಯಯನ ಪೀಠ ಮತ್ತು ಜೆ. ಎಸ್. ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 12-3-2026 ರಂದು ಗುರುವಾರ ಧಾರವಾಡ ಜೆ.ಎಸ್.ಎಸ್.ಡಿ.ಆರ್.ಎಚ್. ಸಭಾ ಭವನದಲ್ಲಿ "ಸಾಹಿತ್ಯ ಸಂಸ್ಕೃತಿ" ಕುರಿತಾಗಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಮುಂಜಾನೆ 10.30 ಗಂಟೆಗೆ ಧಾರವಾಡ ಜೆ ಎಸ್ ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತಪ್ರಸಾದ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿ ಡಾ. ಎಎಮ್ ಖಾನ್ ಇವರು ಉದ್ಘಾಟಿಸಲಿದ್ದಾರೆ. ಡಾ. ಜೆ.ಎಮ್. ನಾಗಯ್ಯ ನಿವೃತ್ತ ಪ್ರಾಧ್ಯಾಪಕರು ಕ ವಿ ವಿ ಇವರು ದಿಕ್ಸೂಚಿ ನುಡಿಗಳನ್ನಾಡುವರು. 11.30 ಗಂಟೆಗೆ ಮೊದಲ ಗೋಷ್ಠಿ "ಕನ್ನಡ ಸಾಹಿತ್ಯಕ್ಕೆ ರನ್ನ ಕವಿಯ ಕೊಡುಗೆ" ವಿಷಯವಾಗಿ ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕರಾದ ಡಾ. ವೈ ಎಂ ಭಜಂತ್ರಿ ಇವರು ಉಪನ್ಯಾಸ ನೀಡಲಿದ್ದು ಅಧ್ಯಕ್ಷತೆಯನ್ನು ಖ್ಯಾತ ಶಾಸನ ತಜ್ಞರು ಹಿರಿಯ ಸಾಹಿತಿ ಹನುಮಾಕ್ಷಿ ಗೋಗಿ ವಹಿಸುವರು. ಊಟದ ವಿರಾಮದ ನಂತರ ಮಧ್ಯಾನ್ಹ 2 ಗಂಟೆಗೆ ಎರಡನೇ ಗೋಷ್ಠಿ "ಸರ್ವ ಧರ್ಮ ಸಮನ್ವಯ ಕೇಂದ್ರ : ಶ್ರೀ ಕ್ಷೇತ್ರ ಧರ್ಮಸ್ಥಳ " ವಿಷಯವಾಗಿ ರಂಗ ಕರ್ಮಿ ಸಾಹಿತಿ ಡಾ. ಶಶಿಧರ ನರೇಂದ್ರ ಮಾತನಾಡುವರು. ಅಧ್ಯಕ್ಷತೆಯನ್ನು ಸಾಹಿತಿ ಪ್ರಾಧ್ಯಾಪಕಿ ಡಾ. ವೀಣಾಯಲಿಗಾರ ವಹಿಸುವರು. ಮಧ್ಯಾನ್ಹ 3.30 ಗಂಟೆಗೆ ಜನತಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅರಿಹಂತಪ್ರಸಾದ ಇವರ ಗೌರವ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು ಹಿರಿಯ ಸಾಹಿತಿ ಪ್ರೊ ಕೆ. ಎಸ್. ಕೌಜಲಗಿ ಇವರ ಸಮಾರೋಪ ನುಡಿಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವುದು. ಇದೇ ಸಂದರ್ಭದಲ್ಲಿ 'ಹಳಗನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ 'ಎಂಬ ವಿಷಯ ಕುರಿತು ಆಯೋಜಿಸಿದ್ದ ಲೇಖನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಜೈನಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಹಾಗೂ ಸಲಹಾ ಸಮಿತಿ ಸದಸ್ಯರಾದ ಧರಣೇಂದ್ರ ಜವಳಿ, ಶಾಂತಿನಾಥ ಹೊತಪೇಟಿ, ಧನಪಾಲ ಮುನ್ನೊಳ್ಳಿ, ಡಾ. ರಾಯಪ್ಪ ಬಾಳಿಕಾಯಿ ಹಾಗೂ ಶಾಂತರಾಜ ಮಲ್ಲಸಮುದ್ರ ಉಪಸ್ಥಿತರಿರುವರು. ಅತ್ಯಂತ ವಿದ್ವತ್ಪೂರ್ಣ ಈ ವಿಚಾರ ಸಂಕಿರಣದಲ್ಲಿ ತಾವುಗಳು ತಪ್ಪದೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ. ವರದಿ: ಎಸ್ ಆರ್ ಮಲ್ಲಸಮುದ್ರ

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

Article Image

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

ಉಜಿರೆ: ಪುದುವೆಟ್ಟು ಗ್ರಾಮದ ನಿಡ್ವಾಳ ಬಸದಿಯಲ್ಲಿ ಭಾನುವಾರ ಕೇವಲಜ್ಞಾನ ಕಲ್ಯಾಣ, ಸಮವಸರಣ ಪೂಜೆ, ಭವ್ಯ ಅಗ್ರೋಧಕ ಮೆರವಣಿಗೆ ಬಳಿಕ ಸಹಸ್ರಫಣಿ ಪಾರ್ಶ್ವನಾಥ ಸ್ವಾಮಿ ಮೂರ್ತಿಗೆ ೧೦೦೮ ಕಲಶಗಳಿಂದ ಅಭಿಷೇಕ ಹಾಗೂ ಮಹಾಮಂಗಲಾರತಿಯೊಂದಿಗೆ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನಗೊಂಡಿತು. ಪೂಜ್ಯ ಏಲಾಚಾರ್ಯ ಪ್ರಸಂಗ ಸಾಗರ ಮುನಿಮಹಾರಾಜರು ಮತ್ತು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆದವು. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಉಪದೇಶಾಮೃತ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಕೇಳುವ ಅವಕಾಶವಿದೆ. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ. ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕರಾದ ಪ್ರತಿಷ್ಠಾಚಾರ್ಯ ಜಯರಾಜ ಇಂದ್ರರು ಮತ್ತು ಧರಣೇಂದ್ರ ಕುಮಾರ್ ಹಾಗೂ ಸ್ಥಳ ಪುರೋಹಿತರಾದ ಶ್ರೀಕೀರ್ತಿ ಇಂದ್ರರು, ಬೈಲಂಗಡಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಧರ್ಮಸ್ಥಳದ ಕೋಟ್ಯಣ್ಣ ಬಂಟರಾದ ಸುರೇಂದ್ರಕುಮಾರ್ ಜೈನ್, ಪಂಚಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಿ. ಧನಕೀರ್ತಿ ಆರಿಗ, ಉಪಾಧ್ಯಕ್ಷ ಮಹಾವೀರ ಜೈನ್, ಪ್ರಧಾನ ಕಾರ್ಯದರ್ಶಿ ಚಂದ್ರನಾಥ ಜೈನ್, ಸಂಚಾಲಕ ಜಯವರ್ಮ ಕಾಜವ ಮತ್ತು ಕೋಶಾಧಿಕಾರಿ ಅಜಯ್ ಕುಮಾರ್ ಹಾಗೂ ಸರ್ವಸದಸ್ಯರು ಮತ್ತು ಊರಿನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದು ಸಮಾರಂಭದ ಯಶಸ್ವಿಗೆ ಸಹಕರಿಸಿದರು

ವೇಣೂರು: ಕಲ್ಲು ಬಸದಿಯ ವಾರ್ಷಿಕ ಮಹೋತ್ಸವ

Article Image

ವೇಣೂರು: ಕಲ್ಲು ಬಸದಿಯ ವಾರ್ಷಿಕ ಮಹೋತ್ಸವ

ಬೆಳ್ತಂಗಡಿ, ಫೆ. 08: ವೇಣೂರು ಕಲ್ಲು ಬಸದಿ ಸಮುಚ್ಚಯದ ಭ|| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಶ್ರೀ ಆದಿನಾಥ ಸ್ವಾಮಿ, ಶ್ರೀ ೨೪ ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ನಂತರ ಪೂಜ್ಯ ಶ್ರೀಗಳು ಆಶೀರ್ವಚನವನ್ನು ದಯಪಾಲಿಸಿದರು. ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶ್ರೀ ದಿ. ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಇಂದ್ರ, ಸಮಿತಿಯ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ, ಸಮಿತಿಯ ಸರ್ವಸದಸ್ಯರು, ಊರ-ಪರವೂರ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ್‌ ಜೈನ್‌ ಮೂಡುಕೋಡಿರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ಪದ್ಮಾವತಿ ದೇವಿಯ ಆರಾಧನ ಪೂರ್ವಕ ಪ್ರತಿಷ್ಠೆ ಮತ್ತು ಸರಸ್ವತಿ ದೇವಿ ಆರಾಧನಾ ಪೂರ್ವಕ ಪ್ರತಿಷ್ಠೆ ನೆರವೇರಿತು. ಶ್ರಾವಕ-ಶ್ರಾವಕಿಯರು ಸಹಕರಿಸಿದರು.

ವೇಣೂರು: ಕಲ್ಲು ಬಸದಿಗಳ ವಾರ್ಷಿಕ ಮಹೋತ್ಸವ

Article Image

ವೇಣೂರು: ಕಲ್ಲು ಬಸದಿಗಳ ವಾರ್ಷಿಕ ಮಹೋತ್ಸವ

ವೇಣೂರು: ಇಲ್ಲಿನ ಕಲ್ಲು ಬಸದಿ ಸಮಚ್ಚಯದ ಭ| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಆದಿನಾಥ ಸ್ವಾಮಿ, ಶ್ರೀ ೨೪ ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಫೆ. ೦೮ರಂದು (ನಾಳೆ) ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನಾಲ್ಕನೆ ವರ್ಧಂತ್ಯುತ್ಸವ

Article Image

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನಾಲ್ಕನೆ ವರ್ಧಂತ್ಯುತ್ಸವ

ಧರ್ಮಸ್ಥಳ : ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಮಂಗಳವಾರ ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಪಾದಾಭಿಷೇಕ ನಡೆಸಲಾಯಿತು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಕ್ಷುಲ್ಲಕ ನಿರ್ವಾಣ ಸಾಗರ ಮಹಾರಾಜರು ಪಾದಾಭಿಷೇಕ ಮಾಡಿದರು. ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ಪೂರನ್‌ವರ್ಮ ಪಾದಾಭಿಷೇಕ ನೆರವೇರಿಸಿದರು. ಪೂಜಾಮಂತ್ರ ಪಠಣ, ಬಾಹುಬಲಿ ಸೇವಾ ಸಮಿತಿಯ ಸದಸ್ಯರಿಂದ ಸುಶ್ರಾವ್ಯ ಜಿನಭಕ್ತಿ ಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. 216 ಕಲಶಗಳಿಂದ ಜಲಾಭಿಷೇಕದ ಬಳಿಕ ಇಕ್ಷುರಸ (ಕಬ್ಬಿನ ಹಾಲು), ಗಂಧ, ಚಂದನ, ಅರಿಶಿನ, ಕಲ್ಕಚೂರ್ಣ ಮೊದಲಾದ ಮಂಗಲದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು. ಪೂರ್ಣಕುಂಭದಿಂದ ಪಾದಾಭಿಷೇಕ, ಪುಷ್ಪವೃಷ್ಠಿ, ಮಹಾಮಂಗಳಾರತಿ ಹಾಗೂ ಶಾಂತಿಮಂತ್ರ ಪಠಣದೊಂದಿಗೆ ಸಮಾರಂಭ ಸಮಾಪನಗೊಂಡಿತು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು. ಇಂದಿನ ಮಕ್ಕಳೆ ಮುಂದಿನ ಸಮಾಜದ ಅಮೂಲ್ಯ ಆಸ್ತಿಯಾಗಿದ್ದು ಬಾಲ್ಯದಿಂದಲೆ ಮನೆಯಲ್ಲಿ ಅವರಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಿ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಮಂಗಲಪ್ರವಚನ ನೀಡಿದ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಬಾಹುಬಲಿಯ ತ್ಯಾಗ, ಅಹಿಂಸೆ ವಿಶ್ವಮಾನ್ಯವಾಗಿದೆ. ಮೊದಲು ನಮ್ಮನ್ನು ನಾವು ಅರಿತುಕೊಂಡು, ಜೈನಧರ್ಮದ ಮರ್ಮವನ್ನರಿತು ವೃತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಜೀವನ ನಡೆಸಬೇಕು. ಮಕ್ಕಳು ನಮ್ಮ ಉತ್ತರಾಧಿಕಾರಿಗಳಾಗಿದ್ದು ಅವರಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಕ್ಷುಲ್ಲಕ ನಿರ್ವಾಣ ಸಾಗರ ಮಹಾರಾಜರು ಮಾತನಾಡಿ, ಜೈನಧರ್ಮದ ಸಾರವಾದ ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯ ಎಂಬ ತ್ರೈರತ್ನಗಳ ಪಾಲನೆಯಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದರು. ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಪಂಜಿಕಲ್ಲು: ಚತುರ್ಥ ವರ್ಧಂತ್ಯುತ್ವವ

Article Image

ಪಂಜಿಕಲ್ಲು: ಚತುರ್ಥ ವರ್ಧಂತ್ಯುತ್ವವ

ಬಂಟ್ವಾಳ : ಪಂಜಿಕಲ್ಲು ೧೦೦೮ ಭಗವಾನ್‌ ಶ್ರೀ ಆದಿನಾಥ ಸ್ವಾಮಿ ಬಸದಿಯ ಶಿಲಾಮಯ ಪುನರ್‌ ನಿರ್ಮಾಣ ಹಾಗೂ ನೂತನ ಮಾನಸ್ಥಂಭ ಪ್ರತಿಷ್ಟಾಪನಾ ಪಂಚಕಲ್ಯಾಣ ಮಹೋತ್ವವದ ಚತುರ್ಥ ವರ್ಧಂತ್ಯುತ್ವವವು, ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದಿನಾಂಕ 07-02-2026ನೇ ಶನಿವಾರದಂದು ಧಾರ್ಮಿಕ ವಿಧಿ - ವಿಧಾನಗಳೊಂದಿಗೆ ನೆರವೇರಲಿದೆ.

ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Article Image

ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಮೂಡುಬಿದಿರೆಯ ಆವರಣದಲ್ಲಿ ಇಂದು ಜನವರಿ 26ರಂದು 77ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. "ಭಾರತದ ಸಂವಿಧಾನವು ಭಾರತದ ಪರಮೋಚ್ಚ ಕಾನೂನು. ನಾವು ಸದಾ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ತತ್ವಗಳನ್ನು ಗೌರವಿಸಿ ಪಾಲಿಸಬೇಕು" ಎಂದು ಗೌರವಾನ್ವಿತ ಅತಿಥಿಗಳಾದ ಡಾ. ದಯಾನಂದ (ಜೆಇಇ ಮತ್ತು ನೀಟ್ ಕೆಮಿಸ್ಟ್ರಿ ಡೀನ್) ಎಕ್ಸಲೆಂಟ್ ಪಿ.ಯು ಕಾಲೇಜ್ ಮೂಡಬಿದಿರೆಯವರು ಆಶಯವನ್ನು ಅಭಿವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ಇನ್ನೋರ್ವ ಅತಿಥಿ ಎಕ್ಸಲೆಂಟ್ ಪಿಯು ಕಾಲೇಜ್ ಉಪ ಪ್ರಾಂಶುಪಾಲ ತೇಜಸ್ವಿ ಭಟ್ ರವರು "ಒಂದೇ ಧ್ವಜದಡಿ ನಿಂತಿರುವ ನಾವೆಲ್ಲರೂ ಸಮಾನರು. ಸಮಾಜವನ್ನು ಕಟ್ಟುವಲ್ಲಿ ನಾವು ಶ್ರಮಿಸಬೇಕು. ಇಂದು ನಮ್ಮ ಹಕ್ಕು ಮತ್ತು ಕರ್ತವ್ಯವನ್ನು ನೆನಪಿಸಿಕೊಳ್ಳುವ ದಿನವಾಗಿದೆ" ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಪ್ರಾಂಶುಪಾಲ ಶ್ರೀ ಪ್ರಸಾದ್, ಸಿಬಿಎಸ್ಇ ಸಂಯೋಜಕಿ ಶ್ರೀಮತಿ ವಿಮಲ, ಶಾಲಾ ನಾಯಕ ಶ್ರೀಕರ್ ಮತ್ತು ಶಿಕ್ಷಕ ಶಿಕ್ಷಕೇತರ ವರ್ಗ ಮತ್ತು ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಹರ್ಷ್ ಸ್ವಾಗತಿಸಿ, ವಿದ್ಯಾರ್ಥಿನಿ ಪೂರ್ವಿ ವಂದಿಸಿ ನಿರೂಪಿಸಿದರು.

ಎಸ್.ಡಿ.ಎಂ ಅಂಗಳದಲ್ಲಿ 77ನೇ ಗಣರಾಜ್ಯೋತ್ಸವ

Article Image

ಎಸ್.ಡಿ.ಎಂ ಅಂಗಳದಲ್ಲಿ 77ನೇ ಗಣರಾಜ್ಯೋತ್ಸವ

ಉಜಿರೆ, ಜ 26: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಉಜಿರೆಯ ಶ್ರೀ ಡಿ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮವು ಭಾರತದ ಶ್ರೇಷ್ಠ ಪರಂಪರೆಯ ಗಟ್ಟಿ ಅಡಿಪಾಯದ ಮೇಲೆ ವರ್ತಮಾನವನ್ನು ಸಮೃದ್ಧಗೊಳಿಸಿಕೊಂಡು ಉಜ್ವಲ ಭವಿಷ್ಯದ ಹಾದಿ ನಿಚ್ಛಳಗೊಳಿಸಿಕೊಳ್ಳುವ ಮಹತ್ವಾಕಾಂಕ್ಷಿ ಸಂಕಲ್ಪವನ್ನು ಎತ್ತಿಹಿಡಿಯಿತು. ಈ ಮೌಲಿಕ ಆಶಯ ಧ್ವನಿಸುವ ವಿದ್ಯಾರ್ಥಿಗಳ ಪ್ರತಿಭಾಪೂರ್ಣ ಕಲಾತ್ಮಕ ಅಭಿವ್ಯಕ್ತಿಯ ಪ್ರದರ್ಶನವು ಭಾರತದ ಆಡಳಿತಾತ್ಮಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ದೃಢೀಕರಿಸಿದವು. ಭಾರತೀಯ ನೌಕಾದಳದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಭರತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜಿನ ಎನ್.ಸಿ.ಸಿ ವಿಭಾಗದ ಕೆಡೆಟ್ಸ್, ರೋವರ್ಸ್ ಆ್ಯಂಡ್ ರೇಂಜರ್ಸ್ ಪ್ರತಿನಿಧಿಗಳ ಪಥಸಂಚಲನ, ಶಿಸ್ತುಬದ್ಧ ನಡೆಯು ಗಮನ ಸೆಳೆಯಿತು. ಎನ್.ಸಿ.ಸಿ. ಅಧಿಕಾರಿ ಭಾನುಪ್ರಕಾಶ್ (ಆರ್ಮಿ) ಅವರ ಮಾರ್ಗದರ್ಶನದಲ್ಲಿ ಪಥಸಂಚಲನ ನಡೆಯಿತು. ತದನಂತರ ಎಸ್.ಡಿ.ಎಂ ಸಂಸ್ಥೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಅಭಿವ್ಯಕ್ತಿಯ ವಿವಿಧ ಮಾದರಿಗಳು ವೈವಿಧ್ಯಮಯ ಇತಿಹಾಸವನ್ನು ಸಮಗ್ರವಾಗಿ ತಿಳಿದುಕೊಂಡು ಹೊಸ ಕಾಲದ ಸ್ಪರ್ಧಾತ್ಮಕತೆರೂಢಿಸಿಕೊಳ್ಳುವ ಉತ್ಸಾಹವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಎಸ್.ಡಿ.ಎಂ ಶಾಲೆಯ ಚಿಣ್ಣರು ಅನಾವರಣಗೊಳಿಸಿದ ಪ್ಯಾರಾಚ್ಯೂಟ್ ಜೊತೆಗಿನ ಸಂವಾದಿ ಅಭಿನಯ ಭಾರತದ ಭವಿಷ್ಯದ ದಿಗ್ವಿಜಯದ ಮುನ್ನಡೆಯ ಹುಮ್ಮಸ್ಸನ್ನು ಸಂಕೇತಿಸಿತು. ಅವರ ನೃತ್ಯಸಂವಾದದ ಅಭಿವ್ಯಕ್ತಿಯ ಹಿನ್ನೆಲೆಯಾಗಿ ಕೇಳಿಬಂದ ಜನಜನಿತ "ಡಾಗ್ ಮಿಲಿನಿಯೇರ್" ಸಿನಿಮಾದ "ಜೈ ಹೋ" ಹಾಡು ಹೊಸ ತಲೆಮಾರಿನ ಎಳೆಯ ಮನಸುಗಳ ಆತ್ಮವಿಶ್ವಾಸದ ಜೋಷ್‌ಅನ್ನು ಆಕರ್ಷಣೀಯವಾಗಿ ಅನಾವರಣಗೊಳಿಸಿತು. ಭಾರತವನ್ನು ಅನ್ಯರ ಹಿಡಿತದಿಂದ ವಿಮುಕ್ತಗೊಳಿಸುವ ಕ್ರಾಂತಿಕಾರಕ ಹೋರಾಟಗಳಲ್ಲಿ ಭಾಗಿಯಾಗಿದ್ದ ಮಹಿಳಾ ಹೋರಾಟಗಾರರಾಗಿದ್ದ ರಜಿಯಾ ಸುಲ್ತಾನಾ, ರುದ್ರಮಾದೇವಿ, ರಾಣಿ ಪದ್ಮಿನಿ, ರಾಣಿ ಅಬ್ಬಕ್ಕ, ಚೆನ್ನ ಬೈರಾದೇವಿ, ಬೆಳವಡಿ ಮಲ್ಲಮ್ಮ, ತಾರಾಬಾಯಿ, ಅಹಲ್ಯಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಭೀಮಾಬಾಯಿ ಮತ್ತು ಝಾನ್ಸಿರಾಣಿ ಲಕ್ಷ್ಮೀಬಾಯಿ ಕುರಿತ ವೀರೋಚಿತ ಇತಿಹಾಸದ ವಿವರಗಳು ವಿದ್ಯಾರ್ಥಿನಿಯರ ಕಲಾತ್ಮಕ ಅಭಿನಯದ ಮೂಲಕ ದೇಶದ ಬಗೆಗಿನ ಹೆಮ್ಮೆ ಮತ್ತು ಅಭಿಮಾನ ಹೆಚ್ಚಿಸಿದವು. ಹಿಂದಿನ ಕಾಲದ ಬದುಕಿನ ವೈಶಿಷ್ಟ್ಯತೆಯನ್ನು ಕಾಣಿಸಿ ಸದ್ಯದ ವೈರುಧ್ಯಗಳನ್ನು ಅನಾವರಣಗೊಳಿಸಿದ ವಿದ್ಯಾರ್ಥಿಗಳ ಅಭಿನಯ ಸಾಮರ್ಥ್ಯ ವಿಭಿನ್ನವಾಗಿತ್ತು. ಹಿನ್ನೆಲೆಯಲ್ಲಿ "ಮಾಲ್ಗುಡಿ ಡೇಸ್" ಧಾರಾವಹಿಯ ಶೀರ್ಷಿಕೆ ಗೀತೆಯ ಸಂಗೀತ ನಿನಾದ ಹಳೆಯ ಕಾಲ ಮತ್ತು ಹೊಸ ಕಾಲದ ಅರ್ಥಪೂರ್ಣ ಸಂಯೋಜನೆಯ ದ್ಯೋತಕವಾಗಿ ಮನಸೂರೆಗೊಂಡಿತು. ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಲಾಭಿವ್ಯಕ್ತಿಯು ನಿಸರ್ಗಸಹಜವಾದ ಪ್ರಾಕೃತಿಕ ಚಿಕಿತ್ಸೆಯ ವಿಧಾನಗಳ ಅನುಸರಣೆಯೊಂದೇ ಮನುಷ್ಯ ಬದುಕನ್ನು ಪುನರುಜ್ಜೀವನಗೊಳಿಸಬಲ್ಲದು ಎಂಬ ಸಂದೇಶವನ್ನು ಸಾರಿತು. ಶಿವ ಪಾರ್ವತಿ ನಡುವಿನ ಇಂಗ್ಲಿಷ್ ಸಂಭಾಷಣೆಯ ಮೂಲಕ ಶುರುವಾದ ಈ ಕಲಾತ್ಮಕ ಪ್ರದರ್ಶನವು ಋಷಿಮುನಿಗಳೂ ಸೇರಿದಂತೆ ವಿವಿಧ ಪ್ರಾಜ್ಞರು ಕೊಡಮಾಡಿದ ನಿಸರ್ಗಸ್ನೇಹಿ ಚಿಕಿತ್ಸಾ ಜ್ಞಾನ ಹಿಂದಿನ ಕಾಲದಿಂದ ಸದ್ಯದ ಆಧುನಿಕ ಕಾಲದವರೆಗೆ ದಾಟಿಕೊಂಡ ಬಗೆಯನ್ನು ಆಪ್ತವಾಗಿ ಚಿತ್ರಿಸಿತು. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪ್ರಕೃತಿಯಲ್ಲಿಯೇ ಅಡಗಿದೆ ಎನ್ನುವ ಮೌಲಿಕ ಚಿಂತನೆಯನ್ನು ಧ್ವನಿಸಿತು. ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಸಾಧನೆಯ ಹೆಜ್ಜೆಗಳ ಮೂಲಕ ಅಭಿವೃದ್ಧಿಯ ಸಾಧ್ಯತೆಗಳನ್ನು ಕಂಡರಿಸುವ ಹೊಸ ಮಾದರಿಗಳನ್ನು ಕಾಣಿಸುತ್ತಾ ಹೇಗೆ ತಲೆಮಾರುಗಳನ್ನು ಪ್ರಭಾವಿಸಿದರು ಎಂಬ ಅಂಶವನ್ನು ಎತ್ತಿಹಿಡಿಯುವ ವಿದ್ಯಾರ್ಥಿ ತಂಡದ ಮತ್ತೊಂದು ಪ್ರದರ್ಶನ ಆಕರ್ಷಣೀಯವಾಗಿತ್ತು. ಭಾರತದ ಜಾನಪದ ವೈಭವ, ಕೇರಳ ಸಂಸ್ಕೃತಿಯ ವಿಶೇಷತೆ, ಆಪರೇಷನ್ ಸಿಂಧೂರದ ವಿವರ, ವಂದೇ ಮಾತರಂ ಗೀತೆಯ ಜೊತೆಗಿನ ಸತ್ವಯುತ ಮೌಲ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ನಿಖರ ಸಾಧನೆಯ ವಿವರಗಳನ್ನು ವಿವಿಧ ಪ್ರದರ್ಶನಗಳು ಬಿಂಬಿಸಿದವು. ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿವರ್ಗ, ಕ್ರೀಡಾವಿಭಾಗ ಹಾಗೂ ಊರಿನ ನಾಗರಿಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯ ವಿವರಗಳನ್ನು ಪ್ರಸ್ತುಪಡಿಸಲಾಯಿತು.

ಭುವನವಾಹಿನಿ ಕ್ಯಾಲೆಂಡರ್‌ ಬಿಡುಗಡೆ

Article Image

ಭುವನವಾಹಿನಿ ಕ್ಯಾಲೆಂಡರ್‌ ಬಿಡುಗಡೆ

ವೇಣೂರು: ಭುವನವಾಹಿನಿ ಜಿನಮಿತ್ರ ಪತ್ರಿಕೆಯು ರಜತ ವರ್ಷ ಆಚರಣೆಯ ಸುಸಂದರ್ಭದಲ್ಲಿ ನೂತನವಾಗಿ ಆರಂಭಿಸಿದ ಭುವನವಾಹಿನಿ ಕ್ಯಾಲೆಂಡರ್‌ನ್ನು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಧರ್ಮಸ್ಥಳ ಲಕ್ಷದೀಪೋತ್ಸವ : ಸಮವಸರಣ ಪೂಜೆ

Article Image

ಧರ್ಮಸ್ಥಳ ಲಕ್ಷದೀಪೋತ್ಸವ : ಸಮವಸರಣ ಪೂಜೆ

ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಗುರುವಾರ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಪಡೆಯುವ ಅವಕಾಶವಿದೆ. ಜೈನರ ಆರಾಧನಾ ಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ. ಬೀಡಿನಿಂದ ಭವ್ಯ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಮೂರ್ತಿಯನ್ನು ಮಹೋತ್ಸವ ಸಭಾಭವನಕ್ಕೆ ಕೊಂಡುಹೋಗಿ ಅಲ್ಲಿ ಸಮವಸರಣ ಪೂಜೆ ನಡೆಸಲಾಯಿತು. ಬಾಹುಬಲಿ ಸೇವಾಸಮಿತಿ ಆಶ್ರಯದಲ್ಲಿ ಧರ್ಮಸ್ಥಳದ ಶ್ರಾವಕರು-ಶ್ರಾವಕಿಯರಿಂದ ಅಷ್ಟವಿಧಾರ್ಚನೆ ಪೂಜೆ ನಡೆಸಲಾಯಿತು. ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಕುಮಾರಿ ಮಾನ್ಯ, ರಜತಾ ಹಾಗೂ ಶ್ರಾವಕಿಯರು ಪೂಜೆಯಲ್ಲಿ ಭಾಗವಹಿಸಿದರು. ಅರುಣ ಮತ್ತು ಮಂಜುಳಾ ಜಿನಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶಿಶಿರ್ ಇಂದ್ರ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಹಿಮ್ಮೇಳದಲ್ಲಿ ರವಿರಾಜ ಉಜಿರೆ ಮತ್ತು ಶೋಧನ್ ಧರ್ಮಸ್ಥಳ ಸಹಕರಿಸಿದರು. ಮಂಗಳೂರಿನ ಸುಕುಮಾರ್ ಬಳ್ಳಾಲ್ ನಿರ್ದೇಶನದಲ್ಲಿ ಸಾಣೂರು ಶ್ರೀಧರ ಪಾಂಡಿ ವಿರಚಿತ “ಕನಕ ಜ್ವಾಲೆ” ಯಕ್ಷಾಮೃತ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು. ಡಾ. ಪ್ರಖ್ಯಾತ್ ಶೆಟ್ಟಿ ಭಾಗವತರಾಗಿ, ಚೆಂಡೆವಾದನದಲ್ಲಿ ಚಂದ್ರಶೇಖರ ಹಾಗೂ ಮದ್ದಳೆ ವಾದನದಲ್ಲಿ ಬಿ. ಜನಾರ್ದನ ತೋಳ್ಪಾಡಿತ್ತಾಯ ಸಹಕರಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಡಾ. ಸಿ.ಕೆ. ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಕಳದ ಚಿರಂತ್ ಜೈನ್ ಇವರಿಗೆ ರಾಷ್ಟ್ರೀಯ ಮಟ್ಟದ ಕಾರ್ ರೇಸ್ ನಲ್ಲಿ ತೃತೀಯ ಸ್ಥಾನ

Article Image

ಕಾರ್ಕಳದ ಚಿರಂತ್ ಜೈನ್ ಇವರಿಗೆ ರಾಷ್ಟ್ರೀಯ ಮಟ್ಟದ ಕಾರ್ ರೇಸ್ ನಲ್ಲಿ ತೃತೀಯ ಸ್ಥಾನ

ನವೆಂಬರ್ 14 ರಿಂದ 16 ರವರೆಗೆ ಕೊಡಗಿನಲ್ಲಿ Blueband Sports ಇವರು ನಡೆಸಿದ Robusta Rally, round 3 of Blueband FMSCI, Indaian National Rally Championship 2025 ರಲ್ಲಿ ಕಾರ್ಕಳದ ಶಿರ್ಲಾಲಿನ ಯುವ ರೇಸರ್ ಚಿರಂತ್ ಜೈನ್ ಇವರು ತಮ್ಮ ಸ್ನೇಹಿತ ವಿಶಾಖ್ ಜೊತೆಗೂಡಿ ಕಾರ್ ರೇಸಿಂಗ್ ನಲ್ಲಿ ತೃತೀಯ ಸ್ಥಾನ ಮತ್ತು ಓವರ್ ಆಲ್ ಕೆಟಗರಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಚಿರಂತ್ ಜೈನ್ ಇವರು ಕಾರ್ಕಳ ಶಿರ್ಲಾಲಿನ ರತ್ನರಾಜ್ ಹೆಗ್ಡೆ ಮತ್ತು ನೀತು ರತ್ನರಾಜ್ ಹೆಗ್ಡೆ ದಂಪತಿಗಳ ಸುಪುತ್ರರಾಗಿದ್ದು, ಮೂಡಬಿದ್ರೆಯ ಮೈಟ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿ ಪ್ರಸ್ತುತ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುವುದರೊಂದಿಗೆ ರೇಸಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ.

ಯುವಜನ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Article Image

ಯುವಜನ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ವೇಣೂರು: ಶ್ರೀ ಬಾಹುಬಲಿ ಯುವಜನ ಸಂಘದ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷರಾದ ಪ್ರಭಾಚಂದ್ರರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಯದರ್ಶಿಗಳಾದ ಅಶ್ವಿನ್ ರವರು ವರದಿ ಮತ್ತು ಲೆಕ್ಕಪತ್ರ ಮಂಡನೆ ಮಾಡಿದರು. ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು . ಅಧ್ಯಕ್ಷರು : ಪ್ರಭಾಚಂದ್ರ ಬೆಳ್ಳಿಬೆಟ್ಟು, ಕಾರ್ಯದರ್ಶಿ : ಪವನ್ ಶ್ರೀಪದ್ಮ ಪೆರ್ಮಾಣು, ಖಜಾಂಚಿ : ಸಂತೋಷ್ ಎಂ.ಆರ್, ಜತೆ ಕಾರ್ಯದರ್ಶಿ: ಯುವರಾಜ್ ವೇಣೂರು ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಕ್ರೀಡಾಕೂಟವನ್ನು ಡಿಸೆಂಬರ್ 25ರಂದು ನಡೆಸುವುದಾಗಿ ನಿರ್ದರಿಸಲಾಯಿತು.

ನೆಲ್ಲಿಕಾರಿನಲ್ಲಿ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಸಂಪನ್ನ

Article Image

ನೆಲ್ಲಿಕಾರಿನಲ್ಲಿ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಸಂಪನ್ನ

ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಭ|1008 ಶ್ರೀ ಅನಂತನಾಥ ಸ್ವಾಮಿ ಬಸದಿಯಲ್ಲಿ ಅಷ್ಟಾಹ್ನಿಕ ಪರ್ವದ ಶುಭ ಸಮಯದಲ್ಲಿ ದಿನಾಂಕ 29/10/2025 ರಿಂದ 5/11/2025 ರವರೆಗೆ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ನೆರೆವೆರಿದ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನವು, ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಮೂಡುಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿಯವರ ಪಾವನ ಸಾನಿದ್ಯ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಅತ್ಯಂತ ಅದ್ದೂರಿಯಾಗಿ ಸಂಪನ್ನಗೊಂಡಿತು. ಬಸದಿಯ ಆಡಳಿತ ಮೊಕ್ತೇಸರರು ಮತ್ತು ಸೇವಾ ಕರ್ತೃಗಳಾದ ನೆಲ್ಲಿಕಾರಿನ ಧರ್ಮಬಂಧು ಮನ್ಮಥಕುಮಾರ್ ಮತ್ತು ರೂಪ ದಂಪತಿಗಳು ಹಾಗೂ ಶಂಭವ್ ಕುಮಾರ್ ಮತ್ತು ರಾಜೇಶ್ವರಿ ದಂಪತಿಗಳ ಪರಿವಾರದವರು ಆರಾಧನೆಯ ನೇತೃತ್ವ ವಹಿಸಿಕೊಂಡಿದ್ದರು. ಹಾಗೂ ಊರಿನ ಶ್ರಾವಕ ಶ್ರಾವಕಿಯರು ಪೂಜೆಯಲ್ಲಿ ಪಾಲ್ಗೊಂಡರು. ಪ್ರತಿಷ್ಠಾಚಾರ್ಯ ನೆಲ್ಲಿಕಾರಿನ ಪ್ರಸನ್ನಕುಮಾರ್ ಇಂದ್ರ ಮತ್ತು ಸಹ ಪುರೋಹಿತರು ಆರಾಧನ ವಿಧಿ ವಿಧಾನವನ್ನು ನೆರೆವೇರಿಸಿ ಕೊಟ್ಟರು. ಧಾರ್ಮಿಕ ವಿಧ್ವ0ಸರಾದ ಮುನಿರಾಜ್ ರೆಂಜಾಳರವರು ಪೂಜಾ ವಿಧಾನದ ವಿವರಣೆ ನೆರೆವೇರಿಸಿದರು. ನಿರೀಕ್ಷಾ ಜೈನ್ ಹೊಸ್ಮಾರ್ ರವರ ಸಂಗೀತ ಪೂಜಾಷ್ಟಕವು ದೇಶ ವಿದೇಶದ ಧರ್ಮ ಬಂಧುಗಳ ಮನ ಸೂರೆಗೊಳಿಸಿತು.

ಧರ್ಮಸ್ಥಳ : ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಅಗ್ನಿಶಾಮಕ ವಾಹನ ಕೊಡುಗೆ

Article Image

ಧರ್ಮಸ್ಥಳ : ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಅಗ್ನಿಶಾಮಕ ವಾಹನ ಕೊಡುಗೆ

ಉಜಿರೆ: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳು ಇಲಾಖೆ ವತಿಯಿಂದ ಧರ್ಮಸ್ಥಳದಲ್ಲಿರುವ “ಮಂಜುಷಾ” ವಸ್ತುಸಂಗ್ರಹಾಲಯಕ್ಕೆ ಸಾರ್ವಜನಿಕರ ವೀಕ್ಷಣೆಗಾಗಿ ಮಂಜೂರಾದ ಅಗ್ನಿಶಾಮಕ ವಾಹನವನ್ನು ಬುಧವಾರ ಧರ್ಮಸ್ಥಳದಲ್ಲಿ ಮಂಗಳೂರಿನ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎಂ. ತಿರುಮಲೇಶ್ ಹಸ್ತಾಂತರಿಸಿದರು. ಮಂಜೂಷ ಮ್ಯೂಸಿಯಂನ ಪ್ರಬಂಧಕರಾದ ದಿವಕಾರ ಪ್ರಭು ಉಪಸ್ಥಿತರಿದ್ದರು.

ನೆಲ್ಲಿಕಾರು: ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ

Article Image

ನೆಲ್ಲಿಕಾರು: ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ

ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಗ್ರಾಮದ ಅತಿಶಯ ಕ್ಷೇತ್ರ ಭ| ಶ್ರೀ ಅನಂತನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ಕಳ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಮತ್ತು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರಿ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭಾಶೀರ್ವಾದಗಳೊಂದಿಗೆ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನವು ಇದೇ ಬರುವ ಅ. 29ರಿಂದ ನ. 05ರವರೆಗೆ ಜರಗಲಿದೆ

ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಪುಣ್ಯತಿಥಿ ಆಚರಣೆ

Article Image

ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಪುಣ್ಯತಿಥಿ ಆಚರಣೆ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ತಂದೆ ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಪುಣ್ಯತಿಥಿ ಆಚರಣೆಯನ್ನು ಸೋಮವಾರ ಧರ್ಮಸ್ಥಳದಲ್ಲಿ ನಡೆಸಲಾಯಿತು. ಬೀಡಿನಿಂದ ಭಗವಾನ್ ಚಂದ್ರನಾಥಸ್ವಾಮಿ ಬಸದಿಯವರೆಗೆ ಮೌನ ಮೆರವಣಿಗೆಯಲ್ಲಿ ಹೋಗಿ ಪೂಜ್ಯರ ಪುಣ್ಯಸ್ಮರಣೆ ಮಾಡಲಾಯಿತು.

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

Article Image

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

.ಧರ್ಮಸ್ಥಳ: ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೮ನೇ ವರ್ಧಂತ್ಯುತ್ಸವ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಪೂಜ್ಯರ ತಾತರಾಗಿದ್ದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರ ಕನಸು ಹಾಗೂ ತಂದೆ ರತ್ನವರ್ಮ ಹೆಗ್ಗಡೆಯವರ ಮನಸನ್ನು ಅನುಸರಿಸಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸರ್ವತೋಮುಖ ಪ್ರಗತಿಯೊಂದಿಗೆ ಸಮಾಜಕ್ಕೂ ಅನುಪಮ ಸೇವೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿಯವರ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸನ್ನು ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮನಪರಿವರ್ತನೆ ಮೂಲಕ ಮದ್ಯವರ್ಜನ ಶಿಬಿರದೊಂದಿಗೆ ನನಸಾಗಿ ಮಾಡಿದ್ದಾರೆ. ಪ್ರಧಾನಿ ಮೋದಿಯವರ ವಿಕಸಿತ ಭಾರತ ಕಲ್ಪನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಅನೇಕ ದೀನ-ದಲಿತರ, ಮಹಿಳೆಯರ ಬದುಕಿಗೆ ತಾಯಿ-ತಂದೆ ಹಾಗೂ ಪೋಷಕರಂತೆ ಪ್ರೀತಿಮತ್ತು ವಿಶ್ವಾಸದಿಂದ ನಿರಂತರ ಪ್ರೇರಣೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ನವ ಚೈತನ್ಯದೊಂದಿಗೆ ಸ್ವಾವಲಂಬಿ ಜೀವನ ಮಾಡಲು ದಾರಿದೀಪವಾಗಿದ್ದಾರೆ. ಮಹಿಳಾ ಸಬಲೀಕರಣ, ಧಾರ್ಮಿಕ ಸಂಸ್ಕಾರ, ಭಜನಾ ತರಬೇತಿ ಮೂಲಕ ಸಮಾಜದ ಸರ್ವರೂ ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಎಲ್ಲರಿಗೂ ಕಾಯಕಲ್ಪ ನೀಡಿದ್ದಾರೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳಿಗೆ ಕಾಯಕಲ್ಪ, ಆಧುನಿಕ ತಂತ್ರಜ್ಞಾನ ಬಳಸಿ ಸರದಿಸಾಲಿನಲ್ಲಿ ದೇವರದರ್ಶನದ ಸೌಲಭ್ಯ ಇತ್ಯಾದಿ ಅನುಪಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಅಭಿನಂದಿಸಿದರು. ಹೊಸ ಯೋಜನೆಗಳು: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೊಸ ಯೋಜನೆಗಳನ್ನು ಪ್ರಕಟಿಸಿದರು. ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭ, ಎಂ.ಆರ್.ಐ. ಘಟಕ, 2000ನೇ ಮದ್ಯವರ್ಜನ ಶಿಬಿರ ಧರ್ಮಸ್ಥಳದಲ್ಲಿ ನವಂಬರ್ 6ರಂದು ನಡೆಯಲಿದ್ದು, ವ್ಯಸನಮುಕ್ತರು ಭಾಗವಹಿಸಲಿದ್ದಾರೆ ಎಂದು ಹೆಗ್ಗಡೆಯವರು ಪ್ರಕಟಿಸಿದರು. ಧರ್ಮಸ್ಥಳದ ಅಶೋಕನಗರದಲ್ಲಿ 2 ಕೋಟಿ 41 ಲಕ್ಷ ರೂ. ರಾಜ್ಯಸಭಾ ಸದಸ್ಯರ ಅನುದಾನದಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣ, ಬೀದಿದೀಪಗಳ ಅಳವಡಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಈಗಾಗಲೇ 300 ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಪೂರೈಸಿದ್ದು, ಮುಂದಿನ ವರ್ಷ 13 ದೇವಾಲಯಗಳನ್ನು ಜೀರ್ಣೋದ್ಧಾರಕ್ಕಾಗಿ ಗುರುತಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 25,500 ಕೋಟಿ ರೂ. ಬಿ.ಸಿ. ಟ್ರಸ್ಟ್ ಮೂಲಕ ವಿತರಿಸಲಾಗಿದೆ ಎಂದರು. ೨೦೨೬ರ ಮಾರ್ಚ್ ಒಳಗೆ 1000 ಕೆರೆಗಳಿಗೆ ಕಾಯಕಲ್ಪ ನೀಡಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು. ಬೆಳ್ತAಗಡಿಯಲ್ಲಿ 7 ಎಕ್ರೆ ಜಾಗದಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು. ಕ್ಷೇತ್ರದ ಎಲ್ಲಾ ಭಕ್ತರು, ಅಭಿಮಾನಿಗಳು ಮತ್ತು ಸಾರ್ವಜನಿಕರು “ನಾವು ಸದಾ ನಿಮ್ಮೊಂದಿಗಿದ್ದೇವೆ” ಎಂದು ತಮಗೆ ಭರವಸೆ ನೀಡಿರುವುದರಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ಉತ್ಸಾಹ ಮೂಡಿಬಂದಿದೆ ಎಂದರು. ನೀವೆಲ್ಲರೂ ತೋರಿಸಿದ ಭಕ್ತಿ, ಪ್ರೀತಿ-ವಿಶ್ವಾಸ ಮತ್ತು ಗೌರವವನ್ನು ಶ್ರೀ ಸ್ವಾಮಿಗೆ ಅರ್ಪಿಸುವುದಾಗಿ ಹೆಗ್ಗಡೆಯವರು ತಿಳಿಸಿದರು. ತನ್ನ ಸೇವಾಕಾಯಕದಲ್ಲಿ ಪತ್ನಿ ಹಾಗೂ ಕುಟುಂಬದ ಎಲ್ಲಾ ಸದಸ್ಯರ ಸಕ್ರಿಯ ಸಹಕಾರವನ್ನು ಧನ್ಯತೆಯಿಂದ ಸ್ಮರಿಸಿದರು. ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೈತರ ಆರ್ಥಿಕ ಸ್ವಾವಲಂಬನೆಗೆ ಹೆಗ್ಗಡೆಯವರು ಸೇವಾಕಾರ್ಯಗಳ ಮೂಲಕ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು. ಸತ್ಯ, ಧರ್ಮ, ನ್ಯಾಯ-ನೀತಿಯ ಸನ್ಮಾರ್ಗದಲ್ಲಿ ನಡೆದು ಆದರ್ಶ ಸಮಾಜ ಸುಧಾರಕರಾಗಿ ಎಲ್ಲರಿಗೂ ಶಾಂತಿ ಮತ್ತು ಪ್ರೀತಿಯ ಸಂದೇಶ ನೀಡುವ ಹೆಗ್ಗಡೆಯವರು ಸರ್ವರ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ಕಂಚಿಕಾಮಕೋಟಿ ಪೀಠದ ಪ್ರತಿನಿಧಿ ಗುರುಚರಣಮೂರ್ತಿ ಶುಭಾಶಂಸನೆ ಮಾಡಿದರು. ಡಾ. ವಿಘ್ನರಾಜ ಮತ್ತು ಡಾ. ಪವನ್ ಸಂಪಾದಿಸಿದ “ವೃಷಭೇಶ್ವರ” ಗ್ರಂಥವನ್ನು ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದಲ್ಲಿ ಭಗವಾನ್ ವರ್ಧಮಾನ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ

Article Image

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದಲ್ಲಿ ಭಗವಾನ್ ವರ್ಧಮಾನ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ

ಭಗವಾನ್ ೧0೦೮ ಶ್ರೀ ವರ್ಧಮಾನ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣೋತ್ಸವವು ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಇತ್ತೀಚೆಗೆ ವಿಜ್ರಂಭಣೆಯಿಂದ ಜರಗಿತು. ಭಗವಾನ್ ತೀರ್ಥಂಕರರಿಗೆ ಹಾಲು, ಗಂಧ, ಸಿಯಾಳ ಚಂದನ ಮುಂತಾದ ದೃವ್ಯಗಳಿಂದ ಅಭಿಷೇಕಗಳನ್ನು ಮಾಡಿ ಮಹಾಮತೆ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಿ ಸಾಮೂಹಿಕ ಆರತಿ ಬೆಳಗುದರೊಂದಿಗೆ ಜಿನ ಭಜನೆಯೊಂದಿಗೆ ಪೂಜಾ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ವಿದ್ಯುತ್ ಚಾಲಿತ ಬ್ಯಾಂಡ್ ಸೆಟ್‌ನ್ನು ಶ್ರೇಯ ವಿಶಾಲ್ ಹೆಗಡೆ ಕಾಯರ್ತಡ್ಕ ಇವರು ದಾನ ನೀಡಿದರು ಎಲ್ಲರ ಸಹಕಾರದಿಂದ ದೋಸೆ ಹಬ್ಬವನ್ನು ಆಚರಿಸಲಾಯಿತು. ಅತಿ ಹೆಚ್ಚು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದು ಡಾ. ಕೆ. ಜಯಕೀರ್ತಿ ಜೈನ್, ಹೆಚ್. ವಿಜಯಕುಮರ್, ಫಣಿರಾಜ್ ಜೈನ್, ಯುವರಾಜ್ ಜೈನ್, ಸಂತೋಷ್ ಜೈನ್, ಅತಿಶಯ ಜೈನ್, ವಿಜೇಶ್ ಜೈನ್, ಭುವನ್ ಜೈನ್, ಪ್ರೀತಮ್ ಜೈನ್ ಹಾಗೂ ರಾಣಿ ಶ್ರೀ ಕಾಳಾಲಾ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.

ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಹೆಚ್ಚು: ಪ್ರಶಸ್ತಿ ಪ್ರದಾನದಲ್ಲಿ ಎನ್. ಮುಕುಂದರಾಜ್ ಅಭಿಮತ

Article Image

ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಹೆಚ್ಚು: ಪ್ರಶಸ್ತಿ ಪ್ರದಾನದಲ್ಲಿ ಎನ್. ಮುಕುಂದರಾಜ್ ಅಭಿಮತ

ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತಿಗಳ ಕೊಡುಗೆ ದೊಡ್ಡದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್. ಎನ್. ಮುಕುಂದರಾಜ್ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಭಾನುವಾರ ಹಮ್ಮಿಕೊಂಡಿದ್ದ 24ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದರು. ಪಂಪ, ರನ್ನ, ಪೊನ್ನ, ಜನ್ನ, ನಾಗಚಂದ್ರ ಸೇರಿದಂತೆ ಹಲವು ಜೈನ ಸಾಹಿತಿಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಈ ಪರಂಪರೆ ಹಾಗೆಯೇ ಮುಂದುವರಿದಿದೆ. ಸಂವಿಧಾನದಲ್ಲಿರುವ ಜಾತ್ಯಾತೀತ ತತ್ವವನ್ನು ಮೊದಲು ಸಾರಿದವನು ಜೈನ ಕವಿ ಪಂಪ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳುವ ಮೂಲಕ ಮನುಷ್ಯ ಜಾತಿ ಒಂದೇ ಎಂದು ಸಾರಿದ್ದ ಎಂದು ಮುಕುಂದರಾಜ್ ಸ್ಮರಿಸಿದರು. 11ನೇ ಶತಮಾನಕ್ಕೂ ಮೊದಲು ಈ ನಾಡಿನ ಒಕ್ಕಲಿಗರೆಲ್ಲರೂ ಜೈನ ಸಮುದಾಯಕ್ಕೆ ಸೇರಿದ್ದರು. ಆದರೆ ಹೊಯ್ಸಳ ದೊರೆ ಜೈನ ಸಮುದಾಯ ಪರಂಪರೆಗೆ ಸೇರಿದ ಬಿಟ್ಟಿದೇವ (ವಿಷ್ಣುವರ್ಧನ) ರಾಮಾನುಜಚಾರ್ಯರಿಂದಾಗಿ ವೈಷ್ಣವ ದೀಕ್ಷೆ ಪಡೆಯುತ್ತಾನೆ. ಆತ ಮುಂದೆ ಹಲವು ಜೈನರನ್ನು ವೈಷ್ಣವ ಪರಂಪರೆಗೆ ಮತಾಂತರಿಸುತ್ತಾನೆ. ಹೀಗೆ ಮತಾಂತರರಾದವರು ಈಗ ಒಕ್ಕಲಿಗರಾಗಿದ್ದಾರೆ ಎಂದರು. ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಕಾರ್ಯದರ್ಶಿ ಡಾ.ಪದ್ಮನಿ ನಾಗರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲಿ ಎರಡು ಪ್ರಮುಖ ಸಾಲಿಗ್ರಾಮಗಳಿವೆ. ಒಂದು ಶಿವರಾಮ ಕಾರಂತರ ಸಾಲಿಗ್ರಾಮ ಇನ್ನೊಂದು ನಟ ರಾಜಕುಮಾರ್ ಅವರ ಪತ್ನಿ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಊರು, ಆ ಸಾಲಿಗ್ರಾಮದವರು ನಾವು. ರಾಜಕುಮಾರ ನಮ್ಮೂರಿನ ಅಳಿಯ ಎನ್ನಲು ನಮಗೆ ಹೆಮ್ಮೆ ಆಗುತ್ತಿದೆ. ಮುಂದಿನ ವರ್ಷ ಸಂಘದ ಬೆಳ್ಳಿ ಹಬ್ಬ ಆಚರಿಸಲಾಗುವುದು ಎಂದರು. ಈ ವೇಳೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರಿಗೆ ಸುಮಾ ವಂಸತ ಪ್ರಶಸ್ತಿ ಮತ್ತು ಶಿಲ್ಪ ಕಲಾವಿದ ಚಿತ್ತ ಜಿನೇಂದ್ರ ಅವರಿಗೆ ಶ್ರೇಯೋಭದ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಅಧ್ಯಕ್ಷೆ ಡಾ.ನೀರಜಾ ನಾಗೇಂದ್ರಕುಮಾರ್ ಅಜಿತ್ ಮುರುಗುಂಡೆ ಹಾಗೂ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ಬೆಳಗಾವಿ: ನವರಾತ್ರಿ ಉತ್ಸವ

Article Image

ಬೆಳಗಾವಿ: ನವರಾತ್ರಿ ಉತ್ಸವ

ಬೆಳಗಾವಿ: ನಗರದ ಮಜಗಾವಿ ಗ್ರಾಮದ ಭಗವಾನ್ ಶ್ರೀ 1008 ಆದಿನಾಥ್ ದಿಗಂಬರ ಜೈನ ಮಂದಿರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಪ್ರತಿನಿತ್ಯ ಜಿನಭಗವಂತರ ಅಭಿಷೇಕ ಮತ್ತು ಶಾಂತಿಧಾರ ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ. ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳು ಸಾನಿದ್ಯ ವಹಿಸಿ ತಮ್ಮ ಪ್ರವಚನದಲ್ಲಿ ಮಾತನಾಡುತ್ತ ವರ್ಷಕ್ಕೊಮ್ಮೆ ಬರುವ ಜೈನ ಧರ್ಮದ ಈ ಉತ್ಸವದಲ್ಲಿ ಧರ್ಮ ಬಂಧುಗಳು ತಮ್ಮ ಪಾಪ ಕರ್ಮಗಳನ್ನು ಕಳೆಯಲು ಇದನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಪ್ರತಿನಿತ್ಯ ಮಡಿ ಬಟ್ಟೆ ಧರಿಸಿ ಜಿನಭಗವಂತರ ಪೂಜಾ ಅಭಿಷೇಕ ಮಾಡಬೇಕು. ಜೈನ ಧರ್ಮದ ಪ್ರಭಾವನೆ ಮಾಡಬೇಕು ಎಂದು ತಿಳಿಸಿದರು. 9 ದಿನಗಳ ಕಾಲ ನಡೆಯುವ ಈ ಉತ್ಸವದ ನಿಮಿತ್ಯ ಮಂದಿರದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಮುನಿ ಮಹಾರಾಜರ ಸಾನಿಧ್ಯದಲ್ಲಿ ಬೃಹತ್ ಧಾರ್ಮಿಕ ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿದೆ, ಇದರಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಹಾಕುವದು, ವ್ಯಸನದಿಂದ ಮುಕ್ತ ಮಾಡುವುದು, ಗುರು ಹಿರಿಯರಿಗೆ ಗೌರವ ಕೊಟ್ಟು, ಭಗವಂತರ ಪೂಜೆಯ ವಿಧಿ, ವಿಧಾನಗಳನ್ನು ಕಲಿಸುವದು ಈ ಶಿಬಿರದ ಉದ್ದೇಶವಾಗಿದ್ದು ಪರಿವಾರ ಸಮೇತ ಭಾಗವಹಿಸಿ ಪುಣ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಎಲ್ಲಾ ಜೈನ ಬಂಧುಗಳು ಭಕ್ತಿಯಿಂದ ನೃತ್ಯ ಮಾಡಿ ಭಗವಂತರಿಗೆ ಪೂಜೆ ಸಲ್ಲಿಸಿದರು. ಮಜಗಾವಿ ಗ್ರಾಮದ ಪಂಚ್ ಕಮಿಟಿ ಚತುರ್ಮಾಸ್ ಕಮಿಟಿ ಎಲ್ಲ ಯುವಕ ಮಂಡಳ ಮಹಿಳಾ ಮಂಡಳ ಹಾಗೂ ಪಾಠಶಾಲೆಯ ಬಾಲಕ ಮತ್ತು ಬಾಲಕಿಯರು ಉಪಸ್ಥಿತರಿದ್ದರು.

ಪುರಾತತ್ವ ಇಲಾಖೆ ನಿರ್ಧಾರದ ಪರಿಶೀಲನೆಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ

Article Image

ಪುರಾತತ್ವ ಇಲಾಖೆ ನಿರ್ಧಾರದ ಪರಿಶೀಲನೆಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಪುರಾತನ ಬಸದಿಗಳ ಮಾಹಿತಿಗಳನ್ನು ಕೇಳಿದ್ದು ಕೆಲವೊಂದು ಬಸದಿಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲು ಪ್ರಯತ್ನಿಸುತ್ತಿರುವುದು ತಿಳಿದು ಬಂದಿದ್ದು ಇದನ್ನು ನಾವು ತೀವ್ರವಾಗಿ ವಿರೋಧಿಸುತಿದ್ದೇವೆ. ಎಲ್ಲಾ ಬಸದಿಗಳಲ್ಲಿ ನಿತ್ಯ ಪೂಜೆಗಳು ನಡೆಯುತ್ತಿದ್ದು ಜೈನ ಸಮಾಜದ ಶ್ರದ್ದಾ ಕೇಂದ್ರಗಳಾಗಿದ್ದು ಪುರಾತತ್ವ ಇಲಾಖೆ ನಿರ್ಧಾರದಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಲಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ ನೀಡಿ ಎಲ್ಲ ಬಸದಿಗಳ ಸ್ಥಳ ಪರಿಶೀಲನೆ ಮಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗದಂತೆ ಹಾಗೂ ಪುರಾತತ್ವ ಇಲಾಖೆಗೆ ಸೇರಿಸುವ ಅಗತ್ಯ ಇಲ್ಲದಿರುವ ಬಗ್ಗೆ ಪುರಾತತ್ವ ಇಲಾಖೆಗೆ ವರದಿ ನೀಡಬೇಕಾಗಿ ಮನವಿ ಮಾಡಲಾಯಿತು. ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಯಶೋಧರ್ ಬಳ್ಳಾಲ್ ಬಂಗಾಡಿ ಅರಮನೆ, ವಿಜಯಕುಮಾರ್ ಸಿದ್ದಾರ್ಥ್ ನಿಲಯ, ಯುವರಾಜ್ ಪೂವಣಿ, ಜಿನರಾಜ ಪೂವಣಿ, ಪಣಿರಾಜ್ ಜೈನ್, ಸುರಭಿ, ಅಭಿನಂದನ್, ವೀರೇಂದ್ರ ಜೈನ್, ಸುರೇಂದ್ರ ಕುಮಾರ್ ಧರ್ಮಸ್ಥಳ, ವಿನಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಸತ್ತೂರು, ಧಾರವಾಡ, ಸೆ.24: ಅಲೈಡ್ ಸೈನ್ಸಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Article Image

ಸತ್ತೂರು, ಧಾರವಾಡ, ಸೆ.24: ಅಲೈಡ್ ಸೈನ್ಸಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ, ಅಲೈಡ್ ಹೆಲ್ತ್ ಸೈನ್ಸಸ್ ಘಟಕವು ಸೆಪ್ಟೆಂಬರ್ 24, 2025 ರಂದು 7ನೇ ಬ್ಯಾಚ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಖ್ಯಾತ ಸಮಾಜ ಸೇವಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷರು ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ರಾಜಣ್ಣ ಕೊರವಿ ಅವರು ಮುಖ್ಯ ಅತಿಥಿಗಳಾಗಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಗೌರವ ಅತಿಥಿಗಳಾಗಿದ್ದು ದೀಪ ಬೆಳಗಿಸುವ ಮೂಲಕ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ರಾಜಣ್ಣ ಕೊರವಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ: ಆರೋಗ್ಯ ವೃತ್ತಿಪರರು ಧೈರ್ಯ ಮತ್ತು ಸಹಾನುಭೂತಿಯಿಂದ ರೋಗಿಗಳ ಸೇವೆ ಮಾಡಬೇಕು. ಎಸ್.ಡಿ.ಎಂ ಸಂಸ್ಥೆಗಳು ಶ್ರೇಷ್ಠತೆಯೊಂದಿಗೆ ಮಾನವೀಯ ಸೇವೆಗಳಿಗೆ ಹೆಸರುವಾಸಿಯಾಗಿವೆ. ಹೊಸ ಹೊಸ ತಂತ್ರಜ್ಞಾನದ ಬಳಕೆಯೊಂದಿಗೆ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡಬೇಕು. ಸಮಯಪಾಲನೆ, ಶಿಸ್ತು ಮತ್ತು ಒಗಟ್ಟಿಗೆ ಆರೋಗ್ಯ ವೃತ್ತಿಪರರು ಆದ್ಯತೆ ನೀಡಬೇಕು. ಮಾನವೀಯತೆಯಿಂದ ರೋಗಿಗಳ ಸೇವೆ ಮಾಡುವುದರೊಂಗೆ ಉತ್ತಮ ಸಂವಹನವನ್ನು ಹೊಂದಬೇಕು. ಪ್ರತಿದಿನ ನಾವು ದೊಡ್ಡ ಕನಸುಗಳನ್ನು ಕಾಣತ್ತಾ, ಅದನ್ನು ಸಾಧಿಸುವ ಗುರಿ ಹೊಂದಬೇಕು. ಎಸ್.ಡಿ.ಎಂ.ನ ಅತ್ಯುತ್ತಮ ಸೌಲಭ್ಯ ಮತ್ತು ನಿಮಗೆ ಲಭ್ಯವಿರುವ ವಿಫುಲ ಅವಕಾಶವನ್ನು ಬಳಸಿಕೊಳ್ಳಬೇಕು. ಎಸ್.ಡಿ.ಎಂ. ಸಂಸ್ಥೆಗಳು ಸದೃಢ ಕಟ್ಟಡಗಳನ್ನು ನಿರ್ಮಿಸುವುದಲ್ಲದೆ ಜ್ಞಾನದ ಬದ್ರಬುನಾದಿಯನ್ನು ಸಹ ನಿರ್ಮಿಸುತ್ತದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್ ಮತ್ತು ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ವಿಶ್ವವಿದ್ಯಾಲಯದ ಇತರ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹೊಸ ವಿದ್ಯಾರ್ಥಿಗಳಿಗೆ ಬಿಳಿ ಕೋಟುಗಳನ್ನು ವಿತರಿಸಲಾಯಿತು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ, ಕಾಲೇಜಿನ ವೈಶಿಷ್ಟ್ಯದ ಬಗ್ಗೆ ಪರಿಚಯ ಮಾಡಿಕೊಟ್ಟರು. ನೇಫ್ರಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗರಾಜ್ ನಾಯಕ್, ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಉಪ ಕುಲಸಚಿವರಾದ ಡಾ. ಅಜಂತಾ ಜಿಎಸ್, ವಿಶ್ವವಿದ್ಯಾಲಯದ ತತ್ವಗಳು ಮತ್ತು ನೀತಿಗಳ ಬಗ್ಗೆ ವಿವರಿಸಿದರು. ಅಂಗ ರಚನಾಶಾಸ್ತ್ರ ವಿಭಾಗದ ಅಧ್ಯಾಪಕಿ ಡಾ. ರೋಶನಿ ಸದಾಶಿವ, ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಅಲೈಡ್ ಹೆಲ್ತ್ ಸೈನ್ಸ್ನ ಸಂಯೋಜಕಿಯವರಾದ ಡಾ. ವಿದ್ಯಾ ಎಸ್ ಪಾಟೀಲ್ ಅತಿಥಿಗಳನ್ನು ಸ್ವಾಗತಿಸಿದರು. ಉಪ ಸಂಯೋಜಕರಾದ ಡಾ. ಅನಿಲ್ ಬರ್ಗಲೆ, ಆಡಳಿತಾಧಿಕಾರಿಗಳು ಮತ್ತು ವಿಭಾಗಗಳ ಮುಖ್ಯಸ್ಥರನ್ನು ಪರಿಚಯಿಸಿದರು. ಡಾ. ಉಪೇಂದ್ರ ಜೋಯಿಶ್ ವಂದನಾರ್ಪಣೆ ಸಲ್ಲಿಸಿದರು.

ಗರ್ಡಾಡಿ ಗುಂಡದ ಬಸದಿಯ : ಶಿಲಾನ್ಯಾಸ ಕಾರ್ಯಕ್ರಮ

Article Image

ಗರ್ಡಾಡಿ ಗುಂಡದ ಬಸದಿಯ : ಶಿಲಾನ್ಯಾಸ ಕಾರ್ಯಕ್ರಮ

ಗರ್ಡಾಡಿ ಗುಂಡದ ಬಸದಿಯ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರದ ನಿಮಿತ್ತ ನಿರ್ಮಾಣಗೊಂಡ ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಸೆ.24 ರಂದು ಬೆಳಗ್ಗೆ 8.45ಗಂಟೆಗೆ ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ್ಯಕ್ರಮ

Article Image

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ್ಯಕ್ರಮ

ಮೂಡಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನವರಾತ್ರಿಯ ಪ್ರಯುಕ್ತ “ನವರಾತ್ರಿ - ನವಶಕ್ತಿ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. “ಮಹಿಳಾ ಸ್ವಾವಲಂಬನೆ ಸಮಾಜದ ಪ್ರಗತಿಯ ಮೂಲವಾಗಿದೆ, ಹೆಣ್ಣುಮಕ್ಕಳಿಗೆ ಕನಸು ಕಾಣಲು ಹಕ್ಕು ಇದೆ ಸಾಧಿಸಲು ಶಕ್ತಿ ಎಂದರು ಜೊತೆಗೆ ಎಕ್ಸಲೆಂಟ್ ಸಂಸ್ಥೆಯ ಸ್ವಚ್ಛ ಪರಿಸರವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಇಂದು.ಎಂ. ಮುಖ್ಯ ಅಧಿಕಾರಿಗಳು ಮೂಡುಬಿದರೆ ಪುರಸಭೆ ಇವರು ಪ್ರಶಂಸಿಸಿದರು. ಈ ಕಾರ್ಯಕ್ರಮವು ನವರಾತ್ರಿಯ ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ ಮಹತ್ವವನ್ನು ಬಿಂಬಿಸುತ್ತದೆ.“ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ನವರಾತ್ರಿಯು ಹೆಣ್ಣಿನ ಶಕ್ತಿಯ ಪ್ರತೀಕ” ಎಂದು ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ರವರು ಮಾತನಾಡಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ನಕಾರಾತ್ಮಕತೆಯನ್ನು ನವಶಕ್ತಿಗಳು ಸಕಾರಾತ್ಮಕತೆಯನ್ನಾಗಿ ಪರಿವರ್ತಿಸಲಿ ಎಂದು ನವಶಕ್ತಿಯ ಮಹತ್ವವನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯುವರಾಜ್ ಜೈನ್ ನವರು ತಿಳಿಸಿದರು. ಶಾರದಾದೇವಿಗೆ ಪುಷ್ಪ ಅರ್ಪಿಸಿ, ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸುಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ರವರ ಮಾತೃಶ್ರೀ ಪದ್ಮಾವತಿ ಅಮ್ಮನವರನ್ನು ವಿಶೇಷವಾಗಿ ಗೌರವ ಪೂರ್ವಕವಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ನವಶಕ್ತಿ ಸ್ವರೂಪದ ನವನಾರಿಯರಾದ ಅಮರಾಜಿ, ಸುಮಿತ್ರಾ, ಚಂದನಾ, ದೀಪಾ ಉಮೇಶ್ ರಾವ್, ಅನಿತಾ ಸಿಕ್ವೇರಾ, ಸೌಮ್ಯ ಕುಲದೀಪ್, ದಿವ್ಯಾ ಪಡಿವಾಳ್, ರೇಷ್ಮಾ ವರ್ಮಾ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತಗೊಂಡ ದೀಪಾ ಉಮೇಶ್ ರಾವ್ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಇಂದಿನ ಕಾರ್ಯಕ್ರಮದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಎಕ್ಸಲೆಂಟ್ ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್, ಅಪೇಕ್ಷರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯಾದ ಅರ್ಚನಾ ಹಾಗೂ ಸ್ವಾತಿಯಾವರು ನೆರವೇರಿಸಿ ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್ ರವರು ವಂದಿಸಿದರು.

ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಪ್ರೋತ್ಸಾಹ ಧನ ಶೈಕ್ಷಣಿಕ ಅಡಿಗಲ್ಲು: ಅಜಿತ್ ಕುಮಾರ್ ಕೊಕ್ರಾಡಿ

Article Image

ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಪ್ರೋತ್ಸಾಹ ಧನ ಶೈಕ್ಷಣಿಕ ಅಡಿಗಲ್ಲು: ಅಜಿತ್ ಕುಮಾರ್ ಕೊಕ್ರಾಡಿ

ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಪರಿಪೂರ್ಣತೆಯತ ಸಾಗಬೇಕಾದರೆ ಶಿಕ್ಷಣವು ಬಹಳ ಮುಖ್ಯವಾಗಿ ಬೇಕು. ಶಿಕ್ಷಣ ಎನ್ನುವುದು ಅವರ ಬದುಕಿಗೆ ಭದ್ರತೆಯ ಅಡಿಗಲ್ಲು ಆಗಬೇಕಾದರೆ ಇಂತಹ ವಿದ್ಯಾ ಪ್ರೋತ್ಸಾಹ ಧನದ ಅವಶ್ಯಕತೆ ಖಂಡಿತ ಇದೆ. ಅಂತಹ ಕಾರ್ಯವನ್ನು ಮಾಡುತ್ತಿರುವ ಕೆಲ್ಲಗುತ್ತು ಕಿನ್ಯಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ ಹಾಗೂ ಬೆಳ್ತಂಗಡಿ ತಾಲೂಕಿನ ಸಮಸ್ತ ಶ್ರಾವಕ ಹಾಗೂ ಶ್ರಾವಿಕೆಯರ ಈ ಕಾರ್ಯವು ಮಹತ್ತರವಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವುದರೊಂದಿಗೆ ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಿ. ಅಂತಹ ಮೌಲ್ಯವೇ ನಮ್ಮ ನಿಮ್ಮೆಲ್ಲರ ಬದುಕಿನ ಭೂಷಣವಾಗಲಿ ಎಂದು ಗೇರುಕಟ್ಟೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ಕುಮಾರ್ ಕೊಕ್ರಾಡಿರವರು ಮಾತಾಡಿದರು. ಅವರು ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯ ಸಮುಚ್ಛಯದಲ್ಲಿ ಇರುವ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮನವರ 36ನೇ ಪುಣ್ಯತಿಥಿಯ ಸಂದರ್ಭದಲ್ಲಿ ಶ್ರೀ ಅತಿಶಯ ಕ್ಷೇತ್ರ ಹುಂಬುಜ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಶ್ರೀಮದ್ದದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬೆಳ್ತಂಗಡಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ರವರು ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಪ್ರಿಯ ಬಳ್ಳಾಲ್ ರವರು ಟ್ರಸ್ಟ್ ವತಿಯಿಂದ ನೀಡುತ್ತಿರುವ ವೈದ್ಯಕೀಯ ನೆರವಿನ ಕುರಿತು ವಿವರವಾಗಿ ಮಾಹಿತಿಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆ.ರಾಜವರ್ಮ ರಾಜ ಬಳ್ಳಾಲ್ ಹಾಗೂ ಮಾಲಾಡಿ ಗುತ್ತು ವಜ್ರ ಕುಮಾರ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಟ್ರಸ್ಟ ಹಾಗೂ ದಾನಿಗಳ ಸಹಕಾರದಿಂದ ಈ ವರ್ಷ 753 ವಿದ್ಯಾರ್ಥಿಗಳಿಗೆ 22,10,550 ರೂಪಾಯಿಯನ್ನು ವಿದ್ಯಾಪ್ರೋತ್ಸಾಹ ಧನವಾಗಿ ವಿತರಿಸಲಾಯಿತು. ಇದೇ ರೀತಿ ಈ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ 25 ವರ್ಷಗಳಿಂದ ನೀಡುತ್ತಾ ಬಂದಿರುವುದು ನಮ್ಮ ಸಮಾಜಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ. ಇಷ್ಟು ಮಾತ್ರವಲ್ಲದೆ 12 ಜನರಿಗೆ ಕ್ಯಾನ್ಸರ್ ಹಾಗೂ ಇನ್ನಿತರ ವೈದ್ಯಕೀಯ ಚಿಕಿತ್ಸೆಗಾಗಿ ನೀಡಿರುವ ಸಹಕಾರವನ್ನು ನೆನಪಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ವಕೀಲರಾದ ಶಶಿಕಿರಣ್ ಜೈನ ಸ್ವಾಗತಿಸಿ, ಧವಳ ಸಹಕರಿಸಿ, ನಿರಂಜನ್ ಜೈನ್ ಧನ್ಯವಾದ ಸಲ್ಲಿಸಿ, ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸುವುದರೊಂದಿಗೆ ಸಮಾಪನಗೊಂಡಿತು.

ಧರ್ಮಸ್ಥಳದಲ್ಲಿ 27 ನೇ ವರ್ಷದ ಭಜನಾ ಕಮ್ಮಟ: ಉದ್ಘಾಟನಾ ಸಮಾರಂಭ

Article Image

ಧರ್ಮಸ್ಥಳದಲ್ಲಿ 27 ನೇ ವರ್ಷದ ಭಜನಾ ಕಮ್ಮಟ: ಉದ್ಘಾಟನಾ ಸಮಾರಂಭ

ಉಜಿರೆ: ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ದೇಹ ಮತ್ತು ಮನಸಿನಿಂದ ರಾಗ, ತಾಳ, ಲಯಬದ್ಧವಾಗಿ ಭಜನೆ ಮಾಡುವುದರಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 27 ನೇ ವರ್ಷದ ಭಜನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು. ಭಜನೆಯಿಂದ ಸುಲಭದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು, ಭಜನೆಯಿಂದ ಜನಜಾಗೃತಿ ಉಂಟಾಗಿ ಎಲ್ಲರೂ ಸಮಾನರಾಗಿ, ಗುರು-ಹಿರಿಯರಿಂದ ಮಾರ್ಗದರ್ಶನ, ಪ್ರೇರಣೆ ಪಡೆದು ದೃಢಭಕ್ತಿ ಮತ್ತು ಪರಿಶುದ್ಧ ಮನಸಿನಿಂದ ಭಜನೆ ಮಾಡಿದಾಗ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ದಾಸರ ಪದಗಳು, ಭಾಗ್ಯದ ಲಕ್ಷ್ಮೀ ಬಾರಮ್ಮ ಮೊದಲಾದ ಭಜನೆಗಳು ನಮಗೆ ಸಾರ್ಥಕ ಜೀವನದ ಪಾಠವನ್ನು ಕಲಿಸುತ್ತವೆ ಎಂದು ಡಾ. ಮೋಹನ ಆಳ್ವ ಹೇಳಿದರು. ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಶಂಸನೆ ಮಾಡಿ, ಭಜನಾ ತರಬೇತಿ ಪಡೆದವರು ತಮ್ಮ ಮಕ್ಕಳಿಗೂ ಭಜನೆಯ ಮೂಲಕ ಉತ್ತಮ ಸಂಸ್ಕಾರ ನೀಡಬೇಕು. ಭಜನೆ ಮಾಡುವಾಗ ನಿತ್ಯವೂ ಶಿವಪಂಚಾಕ್ಷರಿ ಪಠಣ ಮಾಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ಶಿಸ್ತು, ಸಮಯಪಾಲನೆ, ಸ್ವಚ್ಛತೆಯೊಂದಿಗೆ ನಾಯಕತ್ವಗುಣವನ್ನೂ ಬೆಳೆಸಿಕೊಂಡು ಪ್ರಗತಿಯ ರೂವಾರಿಗಳಾಗಬೇಕು. ಸಂಸ್ಕೃತಿ ಪ್ರಸಾರದ ರಾಯಭಾರಿಗಳಾಗಿ ಎಲ್ಲರನ್ನೂ ನಮ್ಮವರೇ ಎಂದು ಭಾವಿಸಿ ವಿಶ್ವಮಾನವರಾಗಿ ಸಮಾಜಸೇವೆ ಮಾಡಬೇಕು. ನೃತ್ಯ ಭಜನೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಕಾಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರ ಪಡಿಸಿದರು. ಭಜನಾಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ಧನ್ಯವಾದವಿತ್ತರು. ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು. 111 ಪುರುಷರು ಹಾಗೂ 71 ಮಹಿಳೆಯರು ಸೇರಿದಂತೆ ಒಟ್ಟು 182 ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.

First Previous

Showing 1 of 8 pages

Next Last