Article Image

ಬೆಳಗಾವಿ: ನವರಾತ್ರಿ ಉತ್ಸವ

Article Image

ಬೆಳಗಾವಿ: ನವರಾತ್ರಿ ಉತ್ಸವ

ಬೆಳಗಾವಿ: ನಗರದ ಮಜಗಾವಿ ಗ್ರಾಮದ ಭಗವಾನ್ ಶ್ರೀ 1008 ಆದಿನಾಥ್ ದಿಗಂಬರ ಜೈನ ಮಂದಿರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಪ್ರತಿನಿತ್ಯ ಜಿನಭಗವಂತರ ಅಭಿಷೇಕ ಮತ್ತು ಶಾಂತಿಧಾರ ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ. ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳು ಸಾನಿದ್ಯ ವಹಿಸಿ ತಮ್ಮ ಪ್ರವಚನದಲ್ಲಿ ಮಾತನಾಡುತ್ತ ವರ್ಷಕ್ಕೊಮ್ಮೆ ಬರುವ ಜೈನ ಧರ್ಮದ ಈ ಉತ್ಸವದಲ್ಲಿ ಧರ್ಮ ಬಂಧುಗಳು ತಮ್ಮ ಪಾಪ ಕರ್ಮಗಳನ್ನು ಕಳೆಯಲು ಇದನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಪ್ರತಿನಿತ್ಯ ಮಡಿ ಬಟ್ಟೆ ಧರಿಸಿ ಜಿನಭಗವಂತರ ಪೂಜಾ ಅಭಿಷೇಕ ಮಾಡಬೇಕು. ಜೈನ ಧರ್ಮದ ಪ್ರಭಾವನೆ ಮಾಡಬೇಕು ಎಂದು ತಿಳಿಸಿದರು. 9 ದಿನಗಳ ಕಾಲ ನಡೆಯುವ ಈ ಉತ್ಸವದ ನಿಮಿತ್ಯ ಮಂದಿರದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಮುನಿ ಮಹಾರಾಜರ ಸಾನಿಧ್ಯದಲ್ಲಿ ಬೃಹತ್ ಧಾರ್ಮಿಕ ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿದೆ, ಇದರಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಹಾಕುವದು, ವ್ಯಸನದಿಂದ ಮುಕ್ತ ಮಾಡುವುದು, ಗುರು ಹಿರಿಯರಿಗೆ ಗೌರವ ಕೊಟ್ಟು, ಭಗವಂತರ ಪೂಜೆಯ ವಿಧಿ, ವಿಧಾನಗಳನ್ನು ಕಲಿಸುವದು ಈ ಶಿಬಿರದ ಉದ್ದೇಶವಾಗಿದ್ದು ಪರಿವಾರ ಸಮೇತ ಭಾಗವಹಿಸಿ ಪುಣ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಎಲ್ಲಾ ಜೈನ ಬಂಧುಗಳು ಭಕ್ತಿಯಿಂದ ನೃತ್ಯ ಮಾಡಿ ಭಗವಂತರಿಗೆ ಪೂಜೆ ಸಲ್ಲಿಸಿದರು. ಮಜಗಾವಿ ಗ್ರಾಮದ ಪಂಚ್ ಕಮಿಟಿ ಚತುರ್ಮಾಸ್ ಕಮಿಟಿ ಎಲ್ಲ ಯುವಕ ಮಂಡಳ ಮಹಿಳಾ ಮಂಡಳ ಹಾಗೂ ಪಾಠಶಾಲೆಯ ಬಾಲಕ ಮತ್ತು ಬಾಲಕಿಯರು ಉಪಸ್ಥಿತರಿದ್ದರು.

ಪುರಾತತ್ವ ಇಲಾಖೆ ನಿರ್ಧಾರದ ಪರಿಶೀಲನೆಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ

Article Image

ಪುರಾತತ್ವ ಇಲಾಖೆ ನಿರ್ಧಾರದ ಪರಿಶೀಲನೆಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಪುರಾತನ ಬಸದಿಗಳ ಮಾಹಿತಿಗಳನ್ನು ಕೇಳಿದ್ದು ಕೆಲವೊಂದು ಬಸದಿಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲು ಪ್ರಯತ್ನಿಸುತ್ತಿರುವುದು ತಿಳಿದು ಬಂದಿದ್ದು ಇದನ್ನು ನಾವು ತೀವ್ರವಾಗಿ ವಿರೋಧಿಸುತಿದ್ದೇವೆ. ಎಲ್ಲಾ ಬಸದಿಗಳಲ್ಲಿ ನಿತ್ಯ ಪೂಜೆಗಳು ನಡೆಯುತ್ತಿದ್ದು ಜೈನ ಸಮಾಜದ ಶ್ರದ್ದಾ ಕೇಂದ್ರಗಳಾಗಿದ್ದು ಪುರಾತತ್ವ ಇಲಾಖೆ ನಿರ್ಧಾರದಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಲಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ ನೀಡಿ ಎಲ್ಲ ಬಸದಿಗಳ ಸ್ಥಳ ಪರಿಶೀಲನೆ ಮಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗದಂತೆ ಹಾಗೂ ಪುರಾತತ್ವ ಇಲಾಖೆಗೆ ಸೇರಿಸುವ ಅಗತ್ಯ ಇಲ್ಲದಿರುವ ಬಗ್ಗೆ ಪುರಾತತ್ವ ಇಲಾಖೆಗೆ ವರದಿ ನೀಡಬೇಕಾಗಿ ಮನವಿ ಮಾಡಲಾಯಿತು. ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಯಶೋಧರ್ ಬಳ್ಳಾಲ್ ಬಂಗಾಡಿ ಅರಮನೆ, ವಿಜಯಕುಮಾರ್ ಸಿದ್ದಾರ್ಥ್ ನಿಲಯ, ಯುವರಾಜ್ ಪೂವಣಿ, ಜಿನರಾಜ ಪೂವಣಿ, ಪಣಿರಾಜ್ ಜೈನ್, ಸುರಭಿ, ಅಭಿನಂದನ್, ವೀರೇಂದ್ರ ಜೈನ್, ಸುರೇಂದ್ರ ಕುಮಾರ್ ಧರ್ಮಸ್ಥಳ, ವಿನಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಸತ್ತೂರು, ಧಾರವಾಡ, ಸೆ.24: ಅಲೈಡ್ ಸೈನ್ಸಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Article Image

ಸತ್ತೂರು, ಧಾರವಾಡ, ಸೆ.24: ಅಲೈಡ್ ಸೈನ್ಸಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ, ಅಲೈಡ್ ಹೆಲ್ತ್ ಸೈನ್ಸಸ್ ಘಟಕವು ಸೆಪ್ಟೆಂಬರ್ 24, 2025 ರಂದು 7ನೇ ಬ್ಯಾಚ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಖ್ಯಾತ ಸಮಾಜ ಸೇವಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷರು ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ರಾಜಣ್ಣ ಕೊರವಿ ಅವರು ಮುಖ್ಯ ಅತಿಥಿಗಳಾಗಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಗೌರವ ಅತಿಥಿಗಳಾಗಿದ್ದು ದೀಪ ಬೆಳಗಿಸುವ ಮೂಲಕ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ರಾಜಣ್ಣ ಕೊರವಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ: ಆರೋಗ್ಯ ವೃತ್ತಿಪರರು ಧೈರ್ಯ ಮತ್ತು ಸಹಾನುಭೂತಿಯಿಂದ ರೋಗಿಗಳ ಸೇವೆ ಮಾಡಬೇಕು. ಎಸ್.ಡಿ.ಎಂ ಸಂಸ್ಥೆಗಳು ಶ್ರೇಷ್ಠತೆಯೊಂದಿಗೆ ಮಾನವೀಯ ಸೇವೆಗಳಿಗೆ ಹೆಸರುವಾಸಿಯಾಗಿವೆ. ಹೊಸ ಹೊಸ ತಂತ್ರಜ್ಞಾನದ ಬಳಕೆಯೊಂದಿಗೆ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡಬೇಕು. ಸಮಯಪಾಲನೆ, ಶಿಸ್ತು ಮತ್ತು ಒಗಟ್ಟಿಗೆ ಆರೋಗ್ಯ ವೃತ್ತಿಪರರು ಆದ್ಯತೆ ನೀಡಬೇಕು. ಮಾನವೀಯತೆಯಿಂದ ರೋಗಿಗಳ ಸೇವೆ ಮಾಡುವುದರೊಂಗೆ ಉತ್ತಮ ಸಂವಹನವನ್ನು ಹೊಂದಬೇಕು. ಪ್ರತಿದಿನ ನಾವು ದೊಡ್ಡ ಕನಸುಗಳನ್ನು ಕಾಣತ್ತಾ, ಅದನ್ನು ಸಾಧಿಸುವ ಗುರಿ ಹೊಂದಬೇಕು. ಎಸ್.ಡಿ.ಎಂ.ನ ಅತ್ಯುತ್ತಮ ಸೌಲಭ್ಯ ಮತ್ತು ನಿಮಗೆ ಲಭ್ಯವಿರುವ ವಿಫುಲ ಅವಕಾಶವನ್ನು ಬಳಸಿಕೊಳ್ಳಬೇಕು. ಎಸ್.ಡಿ.ಎಂ. ಸಂಸ್ಥೆಗಳು ಸದೃಢ ಕಟ್ಟಡಗಳನ್ನು ನಿರ್ಮಿಸುವುದಲ್ಲದೆ ಜ್ಞಾನದ ಬದ್ರಬುನಾದಿಯನ್ನು ಸಹ ನಿರ್ಮಿಸುತ್ತದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್ ಮತ್ತು ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ವಿಶ್ವವಿದ್ಯಾಲಯದ ಇತರ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹೊಸ ವಿದ್ಯಾರ್ಥಿಗಳಿಗೆ ಬಿಳಿ ಕೋಟುಗಳನ್ನು ವಿತರಿಸಲಾಯಿತು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ, ಕಾಲೇಜಿನ ವೈಶಿಷ್ಟ್ಯದ ಬಗ್ಗೆ ಪರಿಚಯ ಮಾಡಿಕೊಟ್ಟರು. ನೇಫ್ರಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗರಾಜ್ ನಾಯಕ್, ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಉಪ ಕುಲಸಚಿವರಾದ ಡಾ. ಅಜಂತಾ ಜಿಎಸ್, ವಿಶ್ವವಿದ್ಯಾಲಯದ ತತ್ವಗಳು ಮತ್ತು ನೀತಿಗಳ ಬಗ್ಗೆ ವಿವರಿಸಿದರು. ಅಂಗ ರಚನಾಶಾಸ್ತ್ರ ವಿಭಾಗದ ಅಧ್ಯಾಪಕಿ ಡಾ. ರೋಶನಿ ಸದಾಶಿವ, ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಅಲೈಡ್ ಹೆಲ್ತ್ ಸೈನ್ಸ್ನ ಸಂಯೋಜಕಿಯವರಾದ ಡಾ. ವಿದ್ಯಾ ಎಸ್ ಪಾಟೀಲ್ ಅತಿಥಿಗಳನ್ನು ಸ್ವಾಗತಿಸಿದರು. ಉಪ ಸಂಯೋಜಕರಾದ ಡಾ. ಅನಿಲ್ ಬರ್ಗಲೆ, ಆಡಳಿತಾಧಿಕಾರಿಗಳು ಮತ್ತು ವಿಭಾಗಗಳ ಮುಖ್ಯಸ್ಥರನ್ನು ಪರಿಚಯಿಸಿದರು. ಡಾ. ಉಪೇಂದ್ರ ಜೋಯಿಶ್ ವಂದನಾರ್ಪಣೆ ಸಲ್ಲಿಸಿದರು.

ಗರ್ಡಾಡಿ ಗುಂಡದ ಬಸದಿಯ : ಶಿಲಾನ್ಯಾಸ ಕಾರ್ಯಕ್ರಮ

Article Image

ಗರ್ಡಾಡಿ ಗುಂಡದ ಬಸದಿಯ : ಶಿಲಾನ್ಯಾಸ ಕಾರ್ಯಕ್ರಮ

ಗರ್ಡಾಡಿ ಗುಂಡದ ಬಸದಿಯ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರದ ನಿಮಿತ್ತ ನಿರ್ಮಾಣಗೊಂಡ ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಸೆ.24 ರಂದು ಬೆಳಗ್ಗೆ 8.45ಗಂಟೆಗೆ ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ್ಯಕ್ರಮ

Article Image

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ್ಯಕ್ರಮ

ಮೂಡಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನವರಾತ್ರಿಯ ಪ್ರಯುಕ್ತ “ನವರಾತ್ರಿ - ನವಶಕ್ತಿ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. “ಮಹಿಳಾ ಸ್ವಾವಲಂಬನೆ ಸಮಾಜದ ಪ್ರಗತಿಯ ಮೂಲವಾಗಿದೆ, ಹೆಣ್ಣುಮಕ್ಕಳಿಗೆ ಕನಸು ಕಾಣಲು ಹಕ್ಕು ಇದೆ ಸಾಧಿಸಲು ಶಕ್ತಿ ಎಂದರು ಜೊತೆಗೆ ಎಕ್ಸಲೆಂಟ್ ಸಂಸ್ಥೆಯ ಸ್ವಚ್ಛ ಪರಿಸರವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಇಂದು.ಎಂ. ಮುಖ್ಯ ಅಧಿಕಾರಿಗಳು ಮೂಡುಬಿದರೆ ಪುರಸಭೆ ಇವರು ಪ್ರಶಂಸಿಸಿದರು. ಈ ಕಾರ್ಯಕ್ರಮವು ನವರಾತ್ರಿಯ ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ ಮಹತ್ವವನ್ನು ಬಿಂಬಿಸುತ್ತದೆ.“ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ನವರಾತ್ರಿಯು ಹೆಣ್ಣಿನ ಶಕ್ತಿಯ ಪ್ರತೀಕ” ಎಂದು ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ರವರು ಮಾತನಾಡಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ನಕಾರಾತ್ಮಕತೆಯನ್ನು ನವಶಕ್ತಿಗಳು ಸಕಾರಾತ್ಮಕತೆಯನ್ನಾಗಿ ಪರಿವರ್ತಿಸಲಿ ಎಂದು ನವಶಕ್ತಿಯ ಮಹತ್ವವನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯುವರಾಜ್ ಜೈನ್ ನವರು ತಿಳಿಸಿದರು. ಶಾರದಾದೇವಿಗೆ ಪುಷ್ಪ ಅರ್ಪಿಸಿ, ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸುಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ರವರ ಮಾತೃಶ್ರೀ ಪದ್ಮಾವತಿ ಅಮ್ಮನವರನ್ನು ವಿಶೇಷವಾಗಿ ಗೌರವ ಪೂರ್ವಕವಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ನವಶಕ್ತಿ ಸ್ವರೂಪದ ನವನಾರಿಯರಾದ ಅಮರಾಜಿ, ಸುಮಿತ್ರಾ, ಚಂದನಾ, ದೀಪಾ ಉಮೇಶ್ ರಾವ್, ಅನಿತಾ ಸಿಕ್ವೇರಾ, ಸೌಮ್ಯ ಕುಲದೀಪ್, ದಿವ್ಯಾ ಪಡಿವಾಳ್, ರೇಷ್ಮಾ ವರ್ಮಾ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತಗೊಂಡ ದೀಪಾ ಉಮೇಶ್ ರಾವ್ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಇಂದಿನ ಕಾರ್ಯಕ್ರಮದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಎಕ್ಸಲೆಂಟ್ ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್, ಅಪೇಕ್ಷರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯಾದ ಅರ್ಚನಾ ಹಾಗೂ ಸ್ವಾತಿಯಾವರು ನೆರವೇರಿಸಿ ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್ ರವರು ವಂದಿಸಿದರು.

ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಪ್ರೋತ್ಸಾಹ ಧನ ಶೈಕ್ಷಣಿಕ ಅಡಿಗಲ್ಲು: ಅಜಿತ್ ಕುಮಾರ್ ಕೊಕ್ರಾಡಿ

Article Image

ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಪ್ರೋತ್ಸಾಹ ಧನ ಶೈಕ್ಷಣಿಕ ಅಡಿಗಲ್ಲು: ಅಜಿತ್ ಕುಮಾರ್ ಕೊಕ್ರಾಡಿ

ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಪರಿಪೂರ್ಣತೆಯತ ಸಾಗಬೇಕಾದರೆ ಶಿಕ್ಷಣವು ಬಹಳ ಮುಖ್ಯವಾಗಿ ಬೇಕು. ಶಿಕ್ಷಣ ಎನ್ನುವುದು ಅವರ ಬದುಕಿಗೆ ಭದ್ರತೆಯ ಅಡಿಗಲ್ಲು ಆಗಬೇಕಾದರೆ ಇಂತಹ ವಿದ್ಯಾ ಪ್ರೋತ್ಸಾಹ ಧನದ ಅವಶ್ಯಕತೆ ಖಂಡಿತ ಇದೆ. ಅಂತಹ ಕಾರ್ಯವನ್ನು ಮಾಡುತ್ತಿರುವ ಕೆಲ್ಲಗುತ್ತು ಕಿನ್ಯಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ ಹಾಗೂ ಬೆಳ್ತಂಗಡಿ ತಾಲೂಕಿನ ಸಮಸ್ತ ಶ್ರಾವಕ ಹಾಗೂ ಶ್ರಾವಿಕೆಯರ ಈ ಕಾರ್ಯವು ಮಹತ್ತರವಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವುದರೊಂದಿಗೆ ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಿ. ಅಂತಹ ಮೌಲ್ಯವೇ ನಮ್ಮ ನಿಮ್ಮೆಲ್ಲರ ಬದುಕಿನ ಭೂಷಣವಾಗಲಿ ಎಂದು ಗೇರುಕಟ್ಟೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ಕುಮಾರ್ ಕೊಕ್ರಾಡಿರವರು ಮಾತಾಡಿದರು. ಅವರು ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯ ಸಮುಚ್ಛಯದಲ್ಲಿ ಇರುವ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮನವರ 36ನೇ ಪುಣ್ಯತಿಥಿಯ ಸಂದರ್ಭದಲ್ಲಿ ಶ್ರೀ ಅತಿಶಯ ಕ್ಷೇತ್ರ ಹುಂಬುಜ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಶ್ರೀಮದ್ದದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬೆಳ್ತಂಗಡಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ರವರು ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಪ್ರಿಯ ಬಳ್ಳಾಲ್ ರವರು ಟ್ರಸ್ಟ್ ವತಿಯಿಂದ ನೀಡುತ್ತಿರುವ ವೈದ್ಯಕೀಯ ನೆರವಿನ ಕುರಿತು ವಿವರವಾಗಿ ಮಾಹಿತಿಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆ.ರಾಜವರ್ಮ ರಾಜ ಬಳ್ಳಾಲ್ ಹಾಗೂ ಮಾಲಾಡಿ ಗುತ್ತು ವಜ್ರ ಕುಮಾರ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಟ್ರಸ್ಟ ಹಾಗೂ ದಾನಿಗಳ ಸಹಕಾರದಿಂದ ಈ ವರ್ಷ 753 ವಿದ್ಯಾರ್ಥಿಗಳಿಗೆ 22,10,550 ರೂಪಾಯಿಯನ್ನು ವಿದ್ಯಾಪ್ರೋತ್ಸಾಹ ಧನವಾಗಿ ವಿತರಿಸಲಾಯಿತು. ಇದೇ ರೀತಿ ಈ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ 25 ವರ್ಷಗಳಿಂದ ನೀಡುತ್ತಾ ಬಂದಿರುವುದು ನಮ್ಮ ಸಮಾಜಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ. ಇಷ್ಟು ಮಾತ್ರವಲ್ಲದೆ 12 ಜನರಿಗೆ ಕ್ಯಾನ್ಸರ್ ಹಾಗೂ ಇನ್ನಿತರ ವೈದ್ಯಕೀಯ ಚಿಕಿತ್ಸೆಗಾಗಿ ನೀಡಿರುವ ಸಹಕಾರವನ್ನು ನೆನಪಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ವಕೀಲರಾದ ಶಶಿಕಿರಣ್ ಜೈನ ಸ್ವಾಗತಿಸಿ, ಧವಳ ಸಹಕರಿಸಿ, ನಿರಂಜನ್ ಜೈನ್ ಧನ್ಯವಾದ ಸಲ್ಲಿಸಿ, ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸುವುದರೊಂದಿಗೆ ಸಮಾಪನಗೊಂಡಿತು.

ಧರ್ಮಸ್ಥಳದಲ್ಲಿ 27 ನೇ ವರ್ಷದ ಭಜನಾ ಕಮ್ಮಟ: ಉದ್ಘಾಟನಾ ಸಮಾರಂಭ

Article Image

ಧರ್ಮಸ್ಥಳದಲ್ಲಿ 27 ನೇ ವರ್ಷದ ಭಜನಾ ಕಮ್ಮಟ: ಉದ್ಘಾಟನಾ ಸಮಾರಂಭ

ಉಜಿರೆ: ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ದೇಹ ಮತ್ತು ಮನಸಿನಿಂದ ರಾಗ, ತಾಳ, ಲಯಬದ್ಧವಾಗಿ ಭಜನೆ ಮಾಡುವುದರಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 27 ನೇ ವರ್ಷದ ಭಜನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು. ಭಜನೆಯಿಂದ ಸುಲಭದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು, ಭಜನೆಯಿಂದ ಜನಜಾಗೃತಿ ಉಂಟಾಗಿ ಎಲ್ಲರೂ ಸಮಾನರಾಗಿ, ಗುರು-ಹಿರಿಯರಿಂದ ಮಾರ್ಗದರ್ಶನ, ಪ್ರೇರಣೆ ಪಡೆದು ದೃಢಭಕ್ತಿ ಮತ್ತು ಪರಿಶುದ್ಧ ಮನಸಿನಿಂದ ಭಜನೆ ಮಾಡಿದಾಗ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ದಾಸರ ಪದಗಳು, ಭಾಗ್ಯದ ಲಕ್ಷ್ಮೀ ಬಾರಮ್ಮ ಮೊದಲಾದ ಭಜನೆಗಳು ನಮಗೆ ಸಾರ್ಥಕ ಜೀವನದ ಪಾಠವನ್ನು ಕಲಿಸುತ್ತವೆ ಎಂದು ಡಾ. ಮೋಹನ ಆಳ್ವ ಹೇಳಿದರು. ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಶಂಸನೆ ಮಾಡಿ, ಭಜನಾ ತರಬೇತಿ ಪಡೆದವರು ತಮ್ಮ ಮಕ್ಕಳಿಗೂ ಭಜನೆಯ ಮೂಲಕ ಉತ್ತಮ ಸಂಸ್ಕಾರ ನೀಡಬೇಕು. ಭಜನೆ ಮಾಡುವಾಗ ನಿತ್ಯವೂ ಶಿವಪಂಚಾಕ್ಷರಿ ಪಠಣ ಮಾಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ಶಿಸ್ತು, ಸಮಯಪಾಲನೆ, ಸ್ವಚ್ಛತೆಯೊಂದಿಗೆ ನಾಯಕತ್ವಗುಣವನ್ನೂ ಬೆಳೆಸಿಕೊಂಡು ಪ್ರಗತಿಯ ರೂವಾರಿಗಳಾಗಬೇಕು. ಸಂಸ್ಕೃತಿ ಪ್ರಸಾರದ ರಾಯಭಾರಿಗಳಾಗಿ ಎಲ್ಲರನ್ನೂ ನಮ್ಮವರೇ ಎಂದು ಭಾವಿಸಿ ವಿಶ್ವಮಾನವರಾಗಿ ಸಮಾಜಸೇವೆ ಮಾಡಬೇಕು. ನೃತ್ಯ ಭಜನೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಕಾಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರ ಪಡಿಸಿದರು. ಭಜನಾಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ಧನ್ಯವಾದವಿತ್ತರು. ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು. 111 ಪುರುಷರು ಹಾಗೂ 71 ಮಹಿಳೆಯರು ಸೇರಿದಂತೆ ಒಟ್ಟು 182 ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.

ಬೆಳ್ತಂಗಡಿ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಚಂದನ ಷಷ್ಠಿ ನೋಂಪಿ ಉದ್ಯಾಪನೆ

Article Image

ಬೆಳ್ತಂಗಡಿ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಚಂದನ ಷಷ್ಠಿ ನೋಂಪಿ ಉದ್ಯಾಪನೆ

ಉಜಿರೆ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥಕ್ಷೇತ್ರದಲ್ಲಿ ಶನಿವಾರ ಚಂದನ ಷಷ್ಠಿ ನೋಂಪಿ ವಿಧಾನದ ಉದ್ಯಾಪನಾ ಕಾರ್ಯಕ್ರಮ ವಿಧಿ-ವಿಧಾನಗಳೊಂದಿಗೆ ಶ್ರವಣಬೆಳಗೊಳದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಮೂರೂ ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಬಳಿಕ ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದ ಬಳಿಕ ಸಾಮೂಹಿಕ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಚಂದ್ರಪ್ರಭ ತೀರ್ಥಂಕರರ ಪೂಜೆ, ಭಗವಾನ್ ಶಾಂತಿನಾಥ ಸ್ವಾಮಿ ಪೂಜೆ, ನವದೇವತೆಗಳ ಪೂಜೆ, ಪಂಚಪರಮೇಷ್ಠಿಗಳ ಪೂಜೆ, ಕ್ಷೇತ್ರಪಾಲಪೂಜೆ, ಪದ್ಮಾವತಿ ದೇವಿಪೂಜೆ, ಬ್ರಹ್ಮಯಕ್ಷ ಪೂಜೆ, ಭಗವಾನ್ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಸಲಾಯಿತು. 108 ಮಂತ್ರಪುಷ್ಟ ಅರ್ಚನೆ ಬಳಿಕ ಜಯಮಾಲಾ ಅರ್ಘ್ಯ ಅರ್ಪಿಸಲಾಯಿತು. ಬಸದಿಯ ಪ್ರಧಾನ ಅರ್ಚಕ ಕೆ. ಜಯರಾಜ ಇಂದ್ರರ ನೇತೃತ್ವದಲ್ಲಿ ನವೀನ ಕುಮಾರ ಇಂದ್ರ ಮತ್ತು ಕೆ. ಮಹಾವೀರ ಇಂದ್ರರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಧರ್ಮಸ್ಥಳದ ಸೌಮ್ಯ ಸುಭಾಶ್ ಮತ್ತು ಬಳಗದವರ ಜಿನಭಜನೆಗಳ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಮೂಡಬಿದ್ರೆಯ ಸರ್ವೇಶ್ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗೀತೆಗಳ ಗಾಯನ ನಡೆಯಿತು. ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ್ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಶ್ರೀನಾಥ್ ಬಳ್ಳಾಲ್, ವಿನಯಾ ಜೆ. ಬಳ್ಳಾಲ್, ವೈಶಾಲಿ ಬಳ್ಳಾಲ್, ಡಾ. ಪ್ರಿಯಾ ಬಳ್ಳಾಲ್, ವಿಜಯಾ ಬ್ಯಾಂಕ್ ನಿವೃತ್ತ ಮೇನೇಜರ್ ಎಂ. ಜಿನರಾಜ ಶೆಟ್ಟಿ ಮತ್ತು ಬಳ್ಳಾಲ್ ಕುಟುಂಬಸ್ಥರು ಉಪಸ್ಥಿತರಿದ್ದರು. 18 ಮಂದಿ ಚಂದನ ಷಷ್ಠಿ ನೋಂಪಿ ವ್ರತಧಾರಿಗಳಲ್ಲಿ 8 ಮಂದಿ 6 ವರ್ಷಗಳನ್ನು ಪೂರೈಸಿದ್ದು ನೋಂಪಿ ಉದ್ಯಾಪನೆ ಮಾಡಿದರು. ನೋಂಪಿ ವ್ರತಧಾರಿಗಳಾದ ಕುಂಡದಬೆಟ್ಟು ವಿನಯಮ್ಮ, ಸಬ್ರಬೈಲು ಸುಮಲತಾ ಜೀವಂಧರ ಚೌಟ ಮತ್ತು ಸುಜಾತ ಧನಕೀರ್ತಿ ಆರಿಗ ಧರ್ಮಸ್ಥಳ ಪ್ರಕಟಿಸಿದ “ಚಂದನ ಷಷ್ಠಿ ನೋಂಪಿ ವಿಧಾನ” ಕೃತಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಕೃತಿಯನ್ನು ಎಲ್ಲರಿಗೂ ಶಾಸ್ತ್ರದಾನವಾಗಿ ವಿತರಿಸಲಾಯಿತು. ಸ್ವಾಮೀಜಿಯವರಿಂದ ಮಂಗಲಪ್ರವಚನ: ನೋಂಪಿಗಳಿಂದ ಕರ್ಮನಿರ್ಜರೆಯಾಗಿ ಮೋಕ್ಷ ಪ್ರಾಪ್ತಿ: ಉಪನ್ಯಾಸ ಹಾಗೂ ಕಠಿಣವ್ರತ ನಿಯಮಗಳ ಪಾಲನೆಯೊಂದಿಗೆ ಚಂದನ ಷಷ್ಠಿಯಂತಹ ಪವಿತ್ರ ನೋಂಪಿಗಳನ್ನು ಮಾಡಿದರೆ ನಮ್ಮ ಕರ್ಮಗಳ ನಿರ್ಜರೆಯಾಗಿ ರೋಗಗಳೂ ನಿವಾರಣೆಯಾಗಿ ಶಾಶ್ವತ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಮಂಗಲಪ್ರವಚನ ನೀಡಿದ ಶ್ರವಣಬೆಳಗೊಳದ ಸ್ವಾಮೀಜಿ ಹೇಳಿದರು. ಹೆಚ್ಚಾಗಿ ನೋಂಪಿಗಳನ್ನು ಚಾತುರ್ಮಾಸದ ಅವಧಿಯಲ್ಲಿ ಭಾದ್ರಪದ ಮಾಸದಲ್ಲಿ ಮಾಡುತ್ತಾರೆ. ಏಕೆಂದರೆ ಭಾದ್ರಪದ ಮಾಸ ಬಹಳ ಹಿತಕರವಾಗಿದ್ದು ಆಗ ನಾವು ಮಾಡಿದ ಭಾವನೆಗಳು ಭದ್ರವಾಗುತ್ತವೆ. ಪರಿಶುದ್ಧ ತನು, ಮನದೊಂದಿಗೆ ವೃತ ನಿಯಮಗಳ ಪಾಲನೆಯೊಂದಿಗೆ ದೇವರು ಮತ್ತು ಗುರುಗಳ ಸೇವೆ, ಆರಾಧನೆ ಮಾಡಬೇಕು. ಆಧುನಿಕತೆಯ ನೆಪದಲ್ಲಿ ಎಂದೂ ಅಪವಿತ್ರ, ಅವಿನಯ ಮಾಡಬಾರದು ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಬಸದಿಯ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಅಧ್ಯಕ್ಷತೆ ವಹಿಸಿದರು. ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಧರ್ಮಸ್ಥಳದ ಡಾ. ಕೆ. ಜಯಕೀರ್ತಿ ಜೈನ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶಿಕ್ಷಕ ಧರಣೇಂದ್ರ ಕುಮಾರ್ ಕೊನೆಯಲ್ಲಿ ಧನ್ಯವಾದವಿತ್ತರು.

ಎಕ್ಸಲೆಂಟ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Article Image

ಎಕ್ಸಲೆಂಟ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಮೂಡುಬಿದಿರೆ: ಮೂಡುಬಿದಿರೆಯ ಎಕ್ಸಲೆ0ಟ್ ವಿದ್ಯಾ ಸ0ಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾ0ಶುಪಾಲರಾದ ದಿನೇಶ್ ಚೌಟ ಮಾತನಾಡುತ್ತಾ, ಶಿಕ್ಷಕರ ದಿನಾಚರಣೆ ವಿದ್ಯಾರ್ಥಿಗಳ ಪ್ರೀತಿ ಮತ್ತು ಅಭಿಮಾನಗಳ ಧ್ಯೋತಕವಾಗಿದೆ. ಡಾ. ರಾಧಾಕೃಷ್ಣ ಅವರ ಜ್ಞಾನ ಮತ್ತು ಸಾಧನೆ ಶಿಕ್ಷಣ ವೃತ್ತಿಯಲ್ಲಿರುವ ನಮಗೆಲ್ಲರಿಗೂ ಮಾದರಿ. ಅವರು ಮೇಧಾವಿಗಳಾಗಿದ್ದರೂ ತಮ್ಮ ವಿದ್ಯಾರ್ಥಿಗಳೊಂದಿಗೆ ಸರಳತೆ ಮತ್ತು ಸಜ್ಜನಿಕೆಯೊ0ದಿಗೆ ನಡೆದುಕೊಳ್ಳುತ್ತಿದ್ದರು. ಅವರ ವಿದ್ಯಾರ್ಥಿಗಳಿಂದ ಅವರಿಗೆ ಸಿಕ್ಕ ಪ್ರೀತಿ ಮತ್ತು ಗೌರವ ಎಲ್ಲಾ ಶಿಕ್ಷರಿಗೂ ಸಲ್ಲಬೇಕೆನ್ನುವ ಅವರ ಆಶಯವೇ ಅವರ ಜನ್ಮ ದಿನದಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲು ಕಾರಣವಾಯಿತು ಎಂದರು. ಒಬ್ಬ ಉತ್ತಮ ಶಿಕ್ಷಕ ಒಬ್ಬ ಶ್ರೇಷ್ಟ ಶಿಷ್ಯ ವೃಂದವನ್ನು ಹುಟ್ಟು ಹಾಕುತ್ತಾನೆ. ಅಂಥಹ ಶಿಕ್ಷಕರ ಸಾಲಿನಲ್ಲಿ ನನಗೆ ಅಗ್ರ ಪಂಕ್ತಿಯಲ್ಲಿ ಕಂಡು ಬರುವುದು ನೋಬಲ್ ಪ್ರಶಸ್ತಿ ವಿಜೇತ ಜೆ ಜೆ ಥಾಮ್ಸನ್. ಕೇವಲ ಆತನಷ್ಟೇ ಅಲ್ಲದೆ ಆತನಿಂದ ಪ್ರಭಾವಿತರಾಗಿ ಒಟ್ಟು ಏಳು ಜನ ಶಿಷ್ಯರು ತಮ್ಮ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿ ನೋಬಲ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅದು ಅತ್ಯಂತ ಶ್ಲಾಘನೀಯವಾದ ವಿಚಾರ. ಇಂದು ನನ್ನ ಶಿಷ್ಯರಲ್ಲೊಬ್ಬರಾದ ಯುವರಾಜ ಜೈನರ ಸಾಧನೆ ನನಗೆ ಅತ್ಯಂತ ಸಂತಸವನ್ನುಂಟು ಮಾಡಿದೆ. ಇವರ ಸಾಧನೆ ಇತರರಿಗೂ ಪ್ರೇರಣೆಯಾಗಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡುತ್ತಾ ಒಳ್ಳೆಯ ಗುರುವನ್ನು ಪಡೆಯಲು ಹಾಗೂ ಒಳ್ಳೆಯ ಶಿಷ್ಯವೃಂದವನ್ನು ಪಡೆಯಲು ಯೋಗ ಬೇಕು. ನಾನು ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದಾಗ ನನಗೆ ಪಾಠ ಮಾಡಿದ ಗುರುಗಳೇ ನನ್ನ ಸಹೋದ್ಯೋಗಿಗಳಾಗಿದ್ದರು. ಈ ರೀತಿ ನಮ್ಮ ವಿಭಾಗದಲ್ಲಿ ನಾಲ್ಕು ತಲೆಮಾರುಗಳ ಗುರು ಶಿಷ್ಯ ಪರಂಪರೆ ಇತ್ತು. ನನ್ನನ್ನು ಆಸಂದರ್ಭದಲ್ಲಿ ಕೈ ಹಿಡಿದು ನಡೆಸಿದ ಗುರುಗಳಿಗೆ ನಾನು ಋಣಿ ಎಂದರು. ನನ್ನ ಗುರುಗಳ ಕರ್ತವ್ಯ ಪ್ರಜ್ಞೆ, ಶಿಷ್ಯರೆಡೆಗೆ ಅವರು ತೋರುವ ಪ್ರೀತಿ ನನಗೆ ಪ್ರೇರಣೆಯಾಗಿದೆ. ಸಮಾಜದಲ್ಲಿ ಏನೇ ಕಷ್ಟ ಬಂದರೂ ಅದನ್ನು ಎದುರಿಸಲು ತಯಾರಿರಬೇಕು. ಅದು ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸಾಧ್ಯ. ಕೊಡೆ ಮಳೆಯನ್ನು ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ ಮಳೆಯಿಂದ ರಕ್ಷಣೆ ನೀಡುತ್ತದೆ. ಈ ಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಸಿಗುವ ಸಂಸ್ಕಾರ ಮು0ದೆ ಬದುಕನ್ನು ಎದುರಿಸಲು ನಿಮಗೆ ದಾರಿದೀಪವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಮೂಡು ಮಾರ್ನಾಡಿನ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ರಾಜಶ್ರೀ ಬಿ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಧನಕನಕಾದಿಗಳಿಂದ ಬದುಕು ಭವ್ಯವಾಗಬಲ್ಲದೇ ಹೊರತು ದಿವ್ಯವಾಗುವುದಿಲ್ಲ. ಜೀವನದಲ್ಲಿ ಹಣ ಗಳಿಸುವುದು ಇದ್ದೇ ಇದೆ. ಆದರೆ ಸಮಾಜಕ್ಕೆ ಕೊಡುಗೆ ನೀಡುವುದರ ಕುರಿತು ಕೂಡ ತಮ್ಮ ಗಮನವಿರಲಿ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ಜೀವನವನ್ನು ಬೆಳಗಿಸಿಕೊಂಡು ಹೋಗುವುದೇ ಗುರುಗಳಾದವರಿಗೆ ಕೊಡಬಹುದಾದ ದೊಡ್ಡ ಗುರುದಕ್ಷಿಣೆ ಎಂದರು. ಸನ್ಮಾನಕ್ಕೆ ಉತ್ತರಿಸಿದ ರಾಷ್ಟ್ರ ಮಟ್ಟದ ವಿಕಸನ ತರಬೇತುದಾರರು ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರಾದ ಜೇಸಿ ರಾಜೇ0ದ್ರ ಭಟ್ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ತನ್ನ ಬುದ್ಧಿವಂತಿಕೆಯ ಅನುಸಾರ ತಾನು ಬೇರೆ ಕೋರ್ಸುಗಳನ್ನು ಆಯ್ಕೆ ಮಾಡಲು ಅವಕಾಶವಿದ್ದರೂ ಶಿಕ್ಷಕಿಯಾಗಿದ್ದ ತನ್ನ ತಾಯಿಗೆ ಸಮಾಜದಲ್ಲಿ ಸಿಗುತ್ತಿದ್ದ ಗೌರವಾದರಗಳನ್ನು ಕಂಡು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡೆ. ಭಾರತ ಗುರು ಪರಂಪರೆಗೆ ಹೆಸರುವಾಸಿಯಾಗಿದೆ. ಜಗತ್ತಿನ ಶ್ರೇಷ್ಟ ವಿಶ್ವ ವಿದ್ಯಾನಿಲಯಗಳಲ್ಲಿ ಹದಿನೆಂಟು ವಿಶ್ವವಿದ್ಯಾನಿಲಯಗಳು ಒಂದು ಕಾಲದಲ್ಲಿ ಭಾರತದಲ್ಲಿತ್ತು. ವಿದೇಶಿಗರ ಆಕ್ರಮಾಣದಿಂದ ಭಾರತದ ಜ್ಞಾನ ಸ0ಪತ್ತು ನಾಶವಾದರೂ ಗುರುವಿನ ಛಲದಿಂದ ಕೆಲವೇ ವರ್ಷಗಳಲ್ಲಿ ಅದನ್ನು ಮರುಕಳಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಇದು ಪ್ರಪಂಚದಲ್ಲಿ ಎಲ್ಲೂ ನಡೆದಿಲ್ಲ. ಅವತಾರ ಪುರುಷರಿಗೂ ಗುರುಗಳಿದ್ದರು ಎ0ಬುದೇ ನಮ್ಮ ದೇಶದ ಗುರುಪರಂಪರೆಯ ಮಹತ್ವಕ್ಕೆ ಸಾಕ್ಷಿ. ಕೇವಲ ಪಾಠಕ್ಕೆ ಸೀಮಿತವಾಗಿರದೆ ಜೀವನಕ್ಕೆ ಸಜ್ಜುಗೊಳಿಸುವವನೇ ನಿಜವಾದ ಗುರು ಎಂದರು. ಉಜಿರೆ ಎಸ್ ಡಿ ಎಂ ಕಾಲೇಜಿನ ಸಹ ಪ್ರಾಧ್ಯಾಪಕರಾದ ಗಜಾನನ ಆರ್ ಭಟ್ ಸನ್ಮಾನಕ್ಕೆ ಉತ್ತರಿಸುತ್ತಾ ತಾನು ಕರ್ತವ್ಯ ನಿಷ್ಠೆಗೆ ಹೆಸರಾದ ಅನೇಕ ಹಿರಿಯ ಶಿಕ್ಷಕರಿಂದ ಸ್ಪೂರ್ತಿಯನ್ನು ಪಡೆದುಕೊಂಡಿದ್ದೇನೆ. ಬದುಕಿನಲ್ಲಿ ಜ್ಞಾನವನ್ನು ಗಳಿಸಲು ಕಷ್ಟಪಡಲೇ ಬೇಕು. ಕಷ್ಟ ಸಹುಷ್ಣುತೆ ಇದ್ದಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ. ಆಗ ಮಾತ್ರ ಸಾಧನೆ ಸಾಧ್ಯ. ಪ್ರಾಮಾಣಿಕತೆಯಿಂದ ಒಂದು ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ಯಬಹುದು ಅನ್ನುವುದಕ್ಕೆ ಎಕ್ಸಲೆಂಟ್ ವಿದ್ಯಾ ಸ0ಸ್ಥೆಯೇ ಸಾಕ್ಷಿ ಎಂದರು. ಸನ್ಮಾನಿತರಾದ ಎಸ್ ಡಿ ಎಂ ಕಾಲೇಜಿನ ಉಪಪ್ರಾ0ಶುಪಾಲರಾದ ನಂದಾ ಕುಮಾರಿ ಕೆ ಪಿ ಮಾತನಾಡುತ್ತಾ ಈ ಕಲ್ಲಬೆಟ್ಟುವಿನ ಕಲ್ಲು ಕಲ್ಲುಗಳಲ್ಲಿ ಹೂವುಗಳನ್ನು ಅರಳಿಸುವ ಕೆಲಸವನ್ನು ಯುವರಾಜ ಜೈನ್ ರಶ್ಮಿತಾ ಜೈನ್ ದ0ಪತಿಗಳು ಮಾಡಿದ್ದಾರೆ. ಈ ಸಂಸ್ಥೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ನನ್ನ ವಿದ್ಯಾರ್ಥಿಯ ಸಾಧನೆಗೆ ಹೃದಯ ತುಂಬಿ ಬಂದಿದೆ. ವಿದ್ಯೆಗೆ ವಿನಯವೇ ಭೂಷಣ ಅನ್ನುವ ಮಾತಿನ0ತೆ ಸಾಧನೆಗೆ ಗುರುಗಳೇ ಕಾರಣ ಅನ್ನುವ ಅವರ ಮನೋಭಾವವೇ ಅವರನ್ನು ಈ ಎತ್ತರಕ್ಕೇರಿಸಿದೆ. ಈ ಸ0ಸ್ಥೆ ಇನ್ನು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟಗಳಲ್ಲೂ ಬೆಳಗಲಿ ಎಂದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸದಾ ಕಾರ್ಯಪ್ರವೃತ್ತರಾಗಿರುವ ಶಿಕ್ಷಕರು ಜಗತ್ತಿನಾದ್ಯಂತ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವಿದ್ಯಾರ್ಥಿಯ ಉದ್ಧಾರ ಆಗಬೇಕೆಂದರೆ ಗುರುವಿನ ಸಾಂಗತ್ಯ ಇರಲೇಬೇಕು. ಹಾಗಾಗಿ ಗುರು ಶಿಷ್ಯ ಸಂಬಂಧ ಈ ಹಿಂದಿನಂತೆಯೇ ನಡೆದುಕೊಂಡು ಬಂದಿದೆ ಎಂದರು. ತಮ್ಮ ಬದುಕಿನಲ್ಲಿ ಮಾರ್ಗದರ್ಶನವನ್ನು ನೀಡುತ್ತಾ ಬಂದಿರುವ ಗುರುಗಳನ್ನು ಹಾಗೂ ಸಂಸ್ಥೆಯಲ್ಲಿ ಕಾರ್ಯನಿರತರಾಗಿರುವ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಸ0ಸ್ಥೆಯ ಮಾಸ ಪತ್ರಿಕೆ “ಮನೋರಮಾ”ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. 100 ಅಂಕ ತೆಗೆದ ವಿಷಯವಾರು ಶಿಕ್ಷಕರನ್ನು ಮತ್ತು ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲರಾದ ಶ್ರೀಪ್ರಸಾದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪದವಿಪೂರ್ವ ಪ್ರಾ0ಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾರರಾದ ಶಿವಪ್ರಸಾದ ಭಟ್ ವಂದಿಸಿದರು.ಉಪನ್ಯಾಸಕರಾದ ಯಶಸ್ವಿನಿ ಮತ್ತು ದಿವ್ಯಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

ವೇಣೂರು: ದಶಲಕ್ಷಣ ಪರ್ವದ ಸಮಾರೋಪ ಸಮಾರಂಭ

Article Image

ವೇಣೂರು: ದಶಲಕ್ಷಣ ಪರ್ವದ ಸಮಾರೋಪ ಸಮಾರಂಭ

ಉಜಿರೆ: ದಶಲಕ್ಷಣ ಪರ್ವವು ಸರ್ವ ಪರ್ವಗಳ ರಾಜನಾಗಿದ್ದು, ಉತ್ತಮ ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯ ಎಂಬ ದಶಧರ್ಮಗಳ ಪಾಲನೆಯಿಂದ ಮುನಿಯಾಗುವ ಯೋಗವೂ, ಭಾಗ್ಯವೂ ಪ್ರಾಪ್ತಿಯಾಗುತ್ತದೆ ಎಂದು ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶನಿವಾರ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಯಾತ್ರಿನಿವಾಸದಲ್ಲಿ ಕ್ಷಮಾವಳಿಯೊಂದಿಗೆ ದಶಲಕ್ಷಣ ಪರ್ವದ ಸಮಾರೋಪ ಸಮಾರಂಭದಲ್ಲಿ ಮಂಗಲ ಪ್ರವಚನ ನೀಡಿದರು. ದಶಧರ್ಮಗಳು ಮನಸ್ಸನ್ನು ಸುಂದರಗೊಳಿಸಿ ವಿವೇಕ ಪ್ರಾಪ್ತಿಗೆ ಪ್ರೇರಕವಾಗಿವೆ. ಅನುಕಂಪ ಮತ್ತು ಕರುಣೆಯೊಂದಿಗೆ ಅಹಿಂಸೆಯ ಪಾಲನೆ ಮಾಡಿದಾಗ ಕ್ಷಮಾ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಅಜ್ಞಾನ ಮತ್ತು ಮಿಥ್ಯತ್ವವನ್ನು ತ್ಯಜಿಸಿ, ದರ್ಶನಗಳಲ್ಲಿ ಸಮನ್ವಯತೆಯನ್ನು ಸಾಧಿಸಿ, ವಿವೇಕದೊಂದಿಗೆ ಸರ್ವಜೀವಿಗಳಲ್ಲಿಯೂ ಅಹಿಂಸೆಯನ್ನು ತೋರಿದಾಗ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ. ಸದಾ ಸತ್ಯ, ಧರ್ಮ, ನ್ಯಾಯ, ನೀತಿಯ ಪಾಲನೆಯೊಂದಿಗೆ ಸದಾಚಾರದೊಂದಿಗೆ ವರ್ತಮಾನದ ಬದಕಿನ ಸವಾಲುಗಳನ್ನು ಕ್ಷಮಾಗುಣದೊಂದಿಗೆ ತಾಳ್ಮೆ ಮತ್ತು ಸಂಯಮದಿಂದ ಸುಲಭದಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸ್ವಾಮೀಜಿಯವರ ನೇತೃತ್ವದಲ್ಲಿ ಸರ್ವರೂ ಪರಸ್ಪರ ಕ್ಷಮೆ ಯಾಚಿಸಿ ಎಲ್ಲರಿಗೂ ಶುಭ ಹಾರೈಸಿ ಕ್ಷಮಾವಳಿ ಆಚರಿಸಿದರು. ಧಾರ್ಮಿಕ ಉಪನ್ಯಾಸ ನೀಡಿದ ಮೂಡಬಿದ್ರೆ ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಭಾತ್ ಬಲ್ನಾಡ್, ಜೈನ ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ವೇದಗಳ ಕಾಲದಲ್ಲಿಯೂ ಆಚರಣೆಯಲ್ಲಿತ್ತು. ಕರ್ಮಸಿದ್ಧಾಂತದ ಪ್ರಕಾರ ನಾವು ಮಾಡಿದ ಕರ್ಮವನ್ನು ಅನುಭವಿಸಲೇಬೇಕು. ಆಧ್ಯಾತ್ಮಿಕ ಚಿಂತನೆಯೊಂದಿಗೆ ಜಪ-ತಪ, ನೋಂಪಿ, ಆರಾಧನೆ ಮಾಡಿ ಪಂಚಾಣುವೃತಗಳ ಪಾಲನೆಯೊಂದಿಗೆ ಸರಳ ಜೀವನ ನಡೆಸಿ ಧರ್ಮದ ಅನುಷ್ಠಾನ ಮಾಡಬೇಕು. ದಾನ-ಧರ್ಮಾದಿ ಸತ್ಕಾರ್ಯಗಳಿಂದ ಆತ್ಮನಿಂಗಟಿದ ಕರ್ಮದ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗಿ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಕ್ಷಮಾಗುಣ ನಮ್ಮ ದೌರ್ಬಲ್ಯ ಅಲ್ಲ, ವೀರರಿಗೆ ಭೂಷಣವಾಗಿದೆ. ಸಂಯಮದೊಂದಿಗೆ ದೈನಂದಿನ ವ್ಯವಹಾರದಲ್ಲಿ ಕ್ಷಮಾ ಧರ್ಮ ಪಾಲನೆ ಮಾಡಿದರೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಅಶ್ವಿನಿ ಪ್ರವೀಣ್ ಕುಮಾರ್ ಇಂದ್ರ ಧನ್ಯವಾದವಿತ್ತರು. ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಡಾ. ವರ್ಷಾ ಮತ್ತು ಸತ್ಯಪ್ರಸಾದ್ ವಿ. ಜೈನ್ ಸಮಾರಂಭದ ಪ್ರಾಯೋಜಕರಾಗಿ ಸಹಕರಿಸಿದರು.

ನಾರಾವಿ : ಶ್ರೀ ಅನಂತ ನೋಂಪಿ ಆರಾಧನಾ ಪೂಜಾ ವಿಧಾನ

Article Image

ನಾರಾವಿ : ಶ್ರೀ ಅನಂತ ನೋಂಪಿ ಆರಾಧನಾ ಪೂಜಾ ವಿಧಾನ

ನಾರಾವಿ ಮಾಗಣೆ ಭ। ೧೦೦೮ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ, ಪರಮ ಪೂಜ್ಯ ರಾಜಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಮತ್ತು ಆಶೀರ್ವಚನದೊಂದಿಗೆ ದಿನಾಂಕ 5-9-2025ನೇ ಶುಕ್ರವಾರದಿಂದ 7-9-2025ನೇ ಆದಿತ್ಯವಾರದ ಪರ್ಯಂತ 14ನೇ ವರ್ಷದ ಶ್ರೀ ಅನಂತ ನೋಂಪಿ ಆರಾಧನಾ ಪೂಜಾ ವಿಧಾನವು ಜರಗಲಿರುವುದು. ಕಾರ್ಯಕ್ರಮ : 1. ದಿನಾಂಕ 5-9-2025ನೇ ಶುಕ್ರವಾರ, ಅನಂತ ತ್ರಯೋದಶಿ, ಬೆಳಿಗ್ಗೆ ಗಂಟೆ 8.00ರಿಂದ ಜಿನಾಭಿಷೇಕದೊಂದಿಗೆ ಆರಾಧನಾ ಪೂಜಾ ಆರಂಭ. 2. ದಿನಾಂಕ 6-9-2025ನೇ ಶನಿವಾರ, ಅನಂತ ಚತುರ್ದಶಿ, ಬೆಳಿಗ್ಗೆ ಗಂಟೆ 8.00ರಿಂದ ಜಿನಾಭಿಷೇಕದೊಂದಿಗೆ ಆರಾಧನಾ ಪೂಜಾ ಆರಂಭ. ಮಧ್ಯಾಹ್ನ 1.00 ಗಂಟೆಗ ಮಹಾ ಅರ್ಥ್ಯ ಮತ್ತು ಜಿನ ಚೈತ್ಯಾಲಯಗಳಿಗೆ ಆರತಿ. 3. ದಿನಾಂಕ 7-9-2025ನೇ ಆದಿತ್ಯವಾರ, ಅನಂತ ಹುಣ್ಣಿಮೆ, ಬೆಳಿಗ್ಗೆ ಗಂಟೆ 8.00ರಿಂದ ಪರಮ ಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಉಪಸ್ಥಿತಿಯೊಂದಿಗೆ ಆರಾಧನಾ ಪೂಜಾ ವಿಧಾನ ಆರಂಭ. ವಿ.ಸೂ.: * ದಿನಾಂಕ 6-9-2025 ಮತ್ತು 7-9-2025ರಂದು ಸರ್ವೆಶ್ ಜೈನ್ ಮತ್ತು ಬಳಗ, ಮೂಡುಬಿದ್ರೆ ಇವರಿಂದ ಸಂಗೀತ ಪೂಜಾಷ್ಟಕ. * ಪ್ರತಿ ದಿನ ಮಧ್ಯಾಹ್ನ ಗಂಟೆ 1.30ಕ್ಕೆ ಕಂದಮೂಲ ರಹಿತ ಶುದ್ಧ ಭೋಜನದ ವ್ಯವಸ್ಥೆ ಇದೆ. * ದಿನಾಂಕ 7-9-2025ನೇ ಆದಿತ್ಯವಾರ “ಶ್ರೀ ಜಿನ ಪ್ರಸಾದ” ಸಮರ್ಪಣೆ ಇದೆ.

ದಶಲಕ್ಷಣ ಮಹಾಪರ್ವ: ಉತ್ತಮ ಮಾರ್ದವ

Article Image

ದಶಲಕ್ಷಣ ಮಹಾಪರ್ವ: ಉತ್ತಮ ಮಾರ್ದವ

ವೇಣೂರು: ದಶಲಕ್ಷಣ ಮಹಾಪರ್ವದ ಎರಡನೇ ದಿನದಂದು ಉತ್ತಮ ಮಾರ್ದವ ಧರ್ಮದ ಬನ್ನಿ ಉಪಾನ್ಯಾಸ ಕಾರ್ಯಕ್ರಮವು ಯಾತ್ರಿ ನಿವಾಸದಲ್ಲಿ ಆ. 29ರಂದು ನಡೆಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರದಾನ ಮಂತ್ರಿಯವರ ಅಲ್ಪಸಂಖ್ಯಾತ 15 ಅಂಶಗಳ ಕಾರ್ಯಕ್ರಮ ಅನುಷ್ಠಾನದ ಜಿಲ್ಲಾ ಸಮಿತಿಯ ನಿರ್ದೇಶಕರು, ಕೆಲ್ಲಪುತ್ತಿಗೆ ಗುತ್ತು ದರೆಗುಡ್ಡೆಯ ಸುಭಾಶ್ಚಂದ್ರ ಚೌಟರವರು ಗಣ್ಯರೊಂದಿಗೆ ಸೇರಿ ಉದ್ಘಾಟಿಸಿ ಮಾತನಾಡುತ್ತಾ, ಧರ್ಮವನ್ನು ಉಳಿಸಿ, ಬೆಳೆಸಬೇಕು ಧಾರ್ಮಿಕ ಪ್ರವಚನಗಳಿಗೆ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಕರೆದುಕೊಂಡು ಬಂದು ಧರ್ಮದ ಬಗ್ಗೆ ಇನ್ನಷ್ಟು ತಿವಳಿದುಕೊಳ್ಳುವ ಹಾಗೆ ಮಾಡಬೇಕು. ಧರ್ಮದ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಭರತ್‌ರಾಜ್‌ ಜೈನ್‌ ಮುಡಾರು ಇವರು ಉತ್ತಮ ಮಾರ್ದವ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ದಶಧರ್ಮಗಳು ನಮ್ಮನ್ನು ಧರ್ಮಾತ್ಮರನ್ನಾಗಿ ಮಾಡುವುದರ ಜೊತೆಗೆ ನಮ್ಮ ಆತ್ಮವನ್ನು ಕೇವಲ ಧರ್ಮಾತ್ಮರಲ್ಲಿ ಪರಮಾತ್ಮನಾಗಲು ಯೋಗ್ಯತೆ ಹೊಂದಿದೆ ಎನ್ನುವುದನ್ನು ಕೂಡ ಸೂಚಿಸುತ್ತದೆ. ಧರ್ಮಾತ್ಮನಾಗಲು ಅವಕಾಶವಿರುವುದು ಮನುಷ್ಯರಿಗೆ ಮಾತ್ರ. ನಾವೆಲ್ಲರೂ ನಮ್ಮ ಜೀವನದಲ್ಲಿ ದಶಧರ್ಮಗಳನ್ನು ಅಳವಡಿಸಿಕೊಂಡು ಪಾಲಿಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಯವರಾದ ವಿ. ಪ್ರವೀಣ್‌ ಕುಮಾರ್‌ ಇಂದ್ರ ಕಾರ್ಯಕ್ರಮದ ಅತಿಥೇಯರಾದ ಗುಣಪಾಲ ಅತಿಕಾರಿ ಕಡಂಬಿಲ, ಪ್ರಸನ್ನಾ ಆರ್‌. ಹೆಗ್ಡೆ, ಅರುಣ ಅಜಿತ್‌ ಕುಮಾರ್‌, ಪ್ರಿಯಕಾರಿಣಿ, ಸಂಭಾಷಿಣಿ ಉದಯ ಕುಮಾರ್‌ ಹಾಗೂ ಅಪಾರ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯು ಉಪಸ್ಥಿತರಿದ್ದರು. ಸಂಭಾಷಿಣಿ ಉದಯಕುಮಾರ್‌ ಪ್ರಾರ್ಥಿಸಿ, ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ ಜೈನ ಮೂಡುಕೋಡಿಗುತ್ತುರವರು ನಿರೂಪಿಸಿ, ಧನ್ಯವಾದವಿತ್ತರು.

ದಶಲಕ್ಷಣ ಮಹಾಪರ್ವ ಆಚರಣೆ- ಉದ್ಘಾಟಣಾ ಸಮಾರಂಭ

Article Image

ದಶಲಕ್ಷಣ ಮಹಾಪರ್ವ ಆಚರಣೆ- ಉದ್ಘಾಟಣಾ ಸಮಾರಂಭ

ವೇಣೂರು: ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ವತಿಯಿಂದ ಪ್ರತಿವರ್ಷ ನಡೆಯುವ ದಶಲಕ್ಷಣ ಮಹಾಪರ್ವ ಆಚರಣೆಯ ಉದ್ಘಾಟನಾ ಸಮಾರಂಭವು ಆ. 28ರಂದು ನಡೆಯಿತು. ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಮಧುರಾ ಪಿ. ಅಜಿಲರವರು ನೆರವೇರಿಸಿದರು. ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನ್ನಿಧ್ಯ ವಹಿಸಿ ದಶಲಕ್ಷಣ ಮಹಾಪರ್ವದ ಮೊದಲನೇ ದಿನದ ಉತ್ತಮ ಕ್ಷಮಾ ಧರ್ಮದ ಬಗ್ಗೆ ಪ್ರವಚನ ನೀಡುತ್ತಾ, ನಾವು ನಮ್ಮ ಜೀವನದಲ್ಲಿ ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಕ್ರೋಧವನ್ನು ನಿಗ್ರಹಿಸಿಕೊಳ್ಳಬೇಕು. ಕ್ಷಮಿಸುವ ಗುಣ ದೇವರಗುಣ. ಮನುಷ್ಯನ ಸ್ವಭಾವಗಳಲ್ಲಿ ಕ್ರೋಧವು ಕೂಡ ಒಂದು. ಸಿಟ್ಟು ಬಾರದಿರುವ ಹಾಗೆ ಪ್ರಯತ್ನಿಸೋಣ ಎಂದು ಹೇಳಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು, ಹಬ್ಬಗಳ ರಾಜ, ದಶಲಕ್ಷಣ ಪರ್ವ, ಆತ್ಮಶುದ್ಧೀಕರಣದ ಪವಿತ್ರ ಹಬ್ಬವೇ ದಶಲಕ್ಷಣ ಮಹಾಪರ್ವ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲರು ಆಗಮಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಮೂಡುಬಿದಿರೆಯ ಸಂಜಯಂತ್‌ ಕುಮಾರ್‌ ಶೆಟ್ಟಿ, ಶಂಭವ ಕುಮಾರ್‌, ಸುದೇಶ್‌ ಕುಮಾರ್‌ ಮತ್ತಿತರ ಗಣ್ಯರು ಸೇರಿದಂತೆ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು. ಸಮಿತಿಯ ಪ್ರದಾನ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರರವರು ಸ್ವಾಗತಿಸಿದರು. ಅಳದಂಗಡಿ ಅರಮನೆ ಶಿವಪ್ರಸಾದ್‌ ಅಜಿಲರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ್‌ ಜೈನ್‌ ಮೂಡುಕೋಡಿರವರು ನಿರೂಪಿಸಿದರು.

ವೇಣೂರು: ನವೀಕೃತ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ

Article Image

ವೇಣೂರು: ನವೀಕೃತ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ

2000ನೇ ಇಸವಿಯಲ್ಲಿ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಂದಭ೯ದಲ್ಲಿ ಶ್ರೀ ಬಾಹುಬಲಿ ಸಭಾಭವನವನ್ನು ನಿಮಾ೯ಣ ಮಾಡಿ ಲೋಕಾಪ೯ಣೆ ಮಾಡಲಾಗಿತ್ತು. ಈಗ ಈ ಸಭಾಭವನದ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸಿ ಆಧುನಿಕವಾಗಿ ನವೀಕರಿಸಲಾಗಿದೆ. ದಿನಾಂಕ 22.08.2025ನೇ ಶ್ರಾವಣ ಶುಕ್ರವಾರದ ಶುಭ ಸಂದಭ೯ದಲ್ಲಿ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆಯನ್ನು ಮೂಡುಬಿದ್ರಿ ಶ್ರೀ ಜೈನ ಮಠದ ಪರಮ ಪೂಜ್ಯ ,"ಭಾರತಭೂಷಣ" ಡಾ|ಸ್ವಸ್ತಿಶ್ರೀ ಚಾರುಕೀತಿ೯ ಪಂಡಿತಾಚಾಯ೯ವಯ೯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ್‌ ಅಜಿಲರ ಉಪಸ್ಥಿತಿಯಲ್ಲಿ, ಕನಾ೯ಟಕ ಸರಕಾರದ ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್‌ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಈ ಸಂದಭ೯ದಲ್ಲಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಹೇಮರಾಜ್‌ ಬೆಳ್ಳಿಬೀಡು, ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಕಾಯ೯ದಶಿ೯ಗಳಾದ ವಿ.ಪ್ರವೀಣ್‌ ಕುಮಾರ್‌ ಇಂದ್ರ ಕೋಶಾಧಿಕಾರಿಗಳಾದ ಪಿ. ಜಯರಾಜ್‌ ಕಂಬ್ಳಿ, ಜತೆ ಕಾಯ೯ದಶಿ೯ಗಳಾದ ಮಹಾವೀರ್‌ ಜೈನ್‌ ಮೂಡುಕೋಡಿ, ಕಾಯ೯ಕಾರಿ ಸಮಿತಿಯ ಸದಸ್ಯರುಗಳಾದ ಬಿ.ರತ್ನವಮ೯ ಇಂದ್ರ, ಪ್ರವೀಣ್‌ ಅಜ್ರಿ, ಸುರೇಶ್‌ ಕುಮಾರ್‌ ಆರಿಗ, ಭರತ್‌ ಕುಮಾರ್‌ ಆರಿಗ, ಶಮಿ೯ತ್‌ ಕುಮಾರ್‌ ಹಾಗೂ ಹಿರಿಯ ಶ್ರಾವಕಿಯಾದ ಗುಣವತಿ ಎ. ಆಳ್ವ ಮತ್ತು ರಾಜ್ಯ ಜೈನ ಮಹಿಳಾ ಒಕ್ಕೂಟದ ನಿದೇ೯ಶಕಿಯಾದ ಸರೋಜಾ ಜಿ.ಜೈನ್‌, ಪುರೋಹಿತ ಸಚಿನ್‌ ಇಂದ್ರ ಮತ್ತಿತರರು ಉಪಸ್ಥಿತರಿದ್ದರು.

ವೇಣೂರು: ದಶಲಕ್ಷಣ ಮಹಾಪರ್ವ ಆಚರಣೆ

Article Image

ವೇಣೂರು: ದಶಲಕ್ಷಣ ಮಹಾಪರ್ವ ಆಚರಣೆ

ಬೆಳ್ತಂಗಡಿ ತಾಲೂಕಿನ ವೇಣೂರಿನ ಶ್ರೀ ದಿಗಂಬರ ಜೈನ ತೀರ್ಥ ಸಮಿತಿ (ರಿ.) ವತಿಯಿಂದ ಇತಿಹಾಸ ಪ್ರಸಿದ್ಧ ಭ| ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಪರಮಪೂಜ್ಯ 'ಭಾರತಭೂಷಣ' ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇವರ ದಿವ್ಯ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಸಮಿತಿಯ ಅಧ್ಯಕ್ಷರಾದ ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಪ್ರೇರಣೆ ಹಾಗೂ ಸಮಿತಿಯ ಉಪಾಧ್ಯಕ್ಷರಾದ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಅಳದಂಗಡಿ ಅರಮನೆ ಇವರ ನೇತೃತ್ವದಲ್ಲಿ ಇಂದಿನಿಂದ ಮೊದಲ್ಗೊಂಡು ತಾ. 06-09-2025ನೇ ಶನಿವಾರದವರೆಗೆ ಪ್ರತಿದಿನ ಅಪರಾಹ್ನ ಗಂಟೆ 4-30ರಿಂದ 6-00ರ ವರೆಗೆ ದಶಲಕ್ಷಣ ಮಹಾಪರ್ವ ಆಚರಣೆಯು ಜರುಗಲಿದೆ. ವಿ.ಸೂ: ಪ್ರತೀ ದಿನ ಅಪರಾಹ್ನ ಗಂಟೆ 4-00ರಿಂದ ವೇಣೂರು ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಯಾತ್ರಿ ನಿವಾಸದಲ್ಲಿ ಉಪನ್ಯಾಸ ಕಾರ್ಯಕ್ರಮಗಳು ಇರುತ್ತದೆ.

ಗುರುವಂದನಾ ಕಾರ್ಯಕ್ರಮ

Article Image

ಗುರುವಂದನಾ ಕಾರ್ಯಕ್ರಮ

ಮೂಡುಬಿದಿರೆ: ಪ.ಪೂ. ಆಚಾರ್ಯ 108 ಗುಲಾಬು ಭೂಷಣ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ದಶಲಕ್ಷಣ ಮಹಾಪರ್ವ ಆಚರಣೆ ಹಾಗೂ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. "ಭಾರತಭೂಷಣ" ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳವರ ಪಟ್ಟಾಭಿಷೇಕ ವರ್ಧಂತಿ ರಜತ ಮಹೋತ್ಸವದ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವು ದಿನಾಂಕ: 29-08-2025ನೇ ಶುಕ್ರವಾರ 1000 ಕಂಬದ ಬಸದಿ ಆವರಣದಲ್ಲಿ ಜರಗಲಿರುವುದು.

ಜೈನ ವಧು-ವರರ ರಾಜ್ಯಮಟ್ಟದ ಸಮಾವೇಶ

Article Image

ಜೈನ ವಧು-ವರರ ರಾಜ್ಯಮಟ್ಟದ ಸಮಾವೇಶ

ಚಿಗುರು ಆಲ್ ಇಂಡಿಯಾ ವಧು-ವರರ ವೇದಿಕೆಯ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್‌ ನುಡಿಸಿರಿ ವೇದಿಕೆಯಲ್ಲಿ ಭಾನುವಾರ ಸಂಪರ್ಕ-ಪರಿಚಯ ರಾಜ್ಯಮಟ್ಟದ ಜೈನ ವಧು ವರರ ಸಮಾವೇಶ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಸಮಾವೇಶವನ್ನು ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ ಮೋಹನ ಆಳ್ವ ಅವರು ವೆಬ್‌ಸೈಟ್ ಅನಾವರಣಗೊಳಿಸಿದರು. ಸುಭಾಶ್ಚಂದ್ರ ಚೌಟ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಸಂಪತ್ ಜೈನ್ ಹೊಸ್ಕಾರ್ ಪ್ರಸ್ತಾವನೆಗೈದರು. ಜೈನ ಸಮುದಾಯದ ಪ್ರಮುಖರಾದ ಸಂಪತ್‌ ಶಿಮುಂಜೆಗುತ್ತು, ಭುಜಬಲಿ ಧರ್ಮಸ್ಥಳ, ಪೂರ್ಣಚಂದ್ರ ಜೈನ್‌, ವಿಜಯ ಕುಮಾ‌ರ್‌ ಜೈನ್ ನೂರಾಳ್‌ಬೆಟ್ಟು, ರಕ್ಷಿತ್ ಜೈನ್ ಬಡೆಕಾವುಗುತ್ತು, ಪ್ರಭಾತ್ ಬಲ್ನಾಡ್, ನೇಮಿರಾಜ್ ಅರಿಗ, ಜಿನೇಂದ್ರ ಜೈನ್ ಈದು, ಮಹೇಂದ್ರ ಜೈನ್‌, ಕೆ.ಸಿ. ಧರಣೇಂದ್ರಯ್ಯ, ಜ್ವಾಲ ಪ್ರಸಾದ್, ಆಮಂತ್ರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಅನಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶಿರ್ತಾಡಿಬೀಡು ನರೇಂದ್ರಕುಮಾರ್ ಸ್ಮರಣಾರ್ಥ ಬಸದಿಯಲ್ಲಿ ವಿಶೇಷ ಪೂಜೆ, ಯಕ್ಷಜಿನಗಾನ ವೈಭವ

Article Image

ಶಿರ್ತಾಡಿಬೀಡು ನರೇಂದ್ರಕುಮಾರ್ ಸ್ಮರಣಾರ್ಥ ಬಸದಿಯಲ್ಲಿ ವಿಶೇಷ ಪೂಜೆ, ಯಕ್ಷಜಿನಗಾನ ವೈಭವ

ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಬಿ. ನರೇಂದ್ರಕುಮಾರ್ ಆ.4 ರಂದು ನಿಧನರಾಗಿದ್ದು ಅವರ ಆತ್ಮಶಾಂತಿಗಾಗಿ ಆಗೋಸ್ಟ್ 20 ರಂದು ಬುಧವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥ ಕ್ಷೇತ್ರದಲ್ಲಿ ಭಗವಾನ್ ಶಾಂತಿನಾಥಸ್ವಾಮಿ ಸನ್ನಿಧಿಯಲ್ಲಿ 216 ಕಲಶ ಅಭಿಷೇಕ ಮತ್ತು ಪಂಚಾಮೃತ ಅಭಿಷೇಕ ನಡೆಯಿತು. ಯಕ್ಷಜಿನಗಾನ ನಮನ: ಖ್ಯಾತ ಯಕ್ಷಗಾನ ಭಾಗವತರುಗಳಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು, ಚಂದ್ರಶೇಖರ ಆಚಾರ್, ಕುಮಾರಿ ಸಿಂಚನಾ ಮೂಡುಕೋಡಿ ಸುಶ್ರಾವ್ಯವಾಗಿ ಜಿನಭಕ್ತಿಗೀತೆಗಳನ್ನು ಯಕ್ಷಗಾನ ಶೈಲಿಯಲ್ಲಿ ಹಾಡಿದರು. ಕಾವ್ಯಶ್ರೀ ಅಜೇರು ಅವರಿಂದ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಆರಂಭವಾದ ಯಕ್ಷಜಿನಗಾನ ನಮನದಲ್ಲಿ ಉದಯರಾಗ, ಭಗವಾನ್ ಚಂದ್ರನಾಥಸ್ವಾಮಿ ಸ್ತುತಿ, ಜಿನವಾಣಿ ಸ್ತುತಿ, ಶಾಂತಿನಾಥಸ್ವಾಮಿ ಸ್ತುತಿ, ಪಂಚಪರಮೇಷ್ಠಿಗಳ ಸ್ತುತಿ, ಯಕ್ಷಜಿನಗಾನಗಳನ್ನು ಕಲಾವಿದರು ಸುಶ್ರಾವ್ಯವಾಗಿ ಸಾದರಪಡಿಸಿದರು. ಹಿಮ್ಮೇಳದಲ್ಲಿ ಚೆಂಡೆ, ಮದ್ದಳೆ ವಾದನದಲ್ಲಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಬಿ. ಜನಾರ್ದನ ತೋಳ್ಪಾಡಿತ್ತಾಯ, ದೇವಾನಂದ ಭಟ್ ಮತ್ತು ಚಂದ್ರಶೇಖರ ಭಟ್ ಸಹಕರಿಸಿದರು. ನಿವೃತ್ತ ತಹಶೀಲ್ದಾರ್ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಉಜಿರೆಯ ಸುರೇಶ್ ಕುದ್ರೆಂತಾಯ ದಿವಂಗತ ನರೇಂದ್ರ ಕುಮಾರ್ ಜೀವನ-ಸಾಧನೆ ಬಗ್ಯೆ ಸ್ಥಳದಲ್ಲೆ ಕವನ ಒಂದನ್ನು ರಚಿಸಿ ಯಕ್ಷಗಾನ ಶೈಲಿಯಲ್ಲಿ ಹಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಉಜಿರೆಯ ಸೋಮಶೇಖರ ಶೆಟ್ಟಿ ದಿವಂಗತ ನರೇಂದ್ರ ಕುಮಾರ್ ಕ್ರೀಡೆ, ಯಕ್ಷಗಾನ, ಎನ್.ಸಿ.ಸಿ. ಮತ್ತು ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಧನ್ಯತೆಯಿಂದ ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ಕೊನೆಯಲ್ಲಿ ಒಂಬತ್ತು ಬಾರಿ ಪಂಚನಮಸ್ಕಾರ ಮಂತ್ರವನ್ನು ಸಾಮೂಹಿಕ ಪಠಣ ಮಾಡಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಡಾ. ಶೃತಕೀರ್ತಿರಾಜ ಮತ್ತು ಸಿದ್ಧಾಂತಕೀರ್ತಿ ರಾಜ, ಸಹೋದರಿ ಹಾಗೂ ಕುಟುಂಬಸ್ಥರು ಸಮಾರಂಭದ ಯಶಸ್ವಿಗೆ ಸಹಕರಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು.

ಮೂಡುಬಿದಿರೆ: ಎಕ್ಸಲೆಂಟ್ ನೂತನ ಲಾಂಛನ ಬಿಡುಗಡೆ

Article Image

ಮೂಡುಬಿದಿರೆ: ಎಕ್ಸಲೆಂಟ್ ನೂತನ ಲಾಂಛನ ಬಿಡುಗಡೆ

ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಗಳ ನೂತನ ಲಾಂಛನವನ್ನು ಮೂಡುಬಿದಿರೆ ತಾಲೂಕಿನ ತಹಶೀಲ್ದಾರ್ ಶ್ರೀಧರ್ ಎಸ್ ಮುಂದಲಮನಿ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಎದುರಾಗುವ ಅನೀರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ವಿದ್ಯೆ ಸಹಕಾರಿಯಾಗಬಲ್ಲದು ಆದ್ದರಿಂದ ಎಲ್ಲರೂ ವಿದ್ಯಾವಂತರಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ದೇಹಕ್ಕೆ ಶಿರ ಪ್ರಧಾನವೆಂಬತೆ, ಸಂಸ್ಥೆಯ ಉದ್ದೇಶ, ಸಂಕಲ್ಪ, ಬದ್ಧತೆಗಳ ಸಂದೇಶವನ್ನು ಹೊಂದಿದ ಲಾಂಛನ ಸಂಸ್ಥೆಗೆ ಶಿರೋಭೂಷಣವಿದ್ದಂತೆ, ಬೆಳಕಿನ ಪ್ರತೀಕ ಎಕ್ಸಲೆಂಟಿನ ಲಾಂಛನದಲ್ಲಿ ಪುಸ್ತಕದ ಸಂಸ್ಕಾರ ಜ್ಯೋತಿಯ ಬೆಳಕಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕನ್ನೀವ ಸಂಕಲ್ಪವಿದೆ ಎಂದರು. ವೇದಿಕೆಯಲ್ಲಿ ಮಾಜಿ ಸಚಿವರು ಸಂಸ್ಥೆಯ ಸ್ಥಾಪಕ ಗೌರವಾಧ್ಯಕ್ಷರೂ ಆದ ಅಭಯಚಂದ್ರ ಜೈನ್. ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಉಪಮುಖ್ಯೋಪಾಧ್ಯಾಯ ಜಯಶೀಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಪ್ರಮೀಳಾ ಪಿಂಟೋ ವಂದಿಸಿದರು.

ಎಕ್ಸಲೆಂಟ್ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ

Article Image

ಎಕ್ಸಲೆಂಟ್ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ

ಮೂಡುಬಿದಿರೆ: ಎಕ್ಸಲೆಂಟ್ ಸ್ವಾತಂತ್ರೋತ್ಸವ ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಧ್ವಜಾರೋಹಣ ಮಾಡುವುದರೊಂದಿಗೆ ಆಚರಿಸಲಾಯಿತು. ಬಳಿಕ ಮಾತನಾಡಿದ ಅವರು ಬದುಕಿನಲ್ಲಿ ಅನಿರೀಕ್ಷಿತಗಳು ಸಂಭವಿಸಿದಾಗ ಅದನ್ನು ಎದುರಿಸಿ ಈ ದೇಶದ ಘನತೆ ಗೌರವ ಕಾಪಾಡುವಲ್ಲಿ ನಾವು ಕಟಿಬದ್ಧರಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ ನೂತನ ಲಾಂಛನವನ್ನು ತಹಶೀಲ್ದಾರ್ ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಪ್ರತಿಕೂಲತೆಗಳ ನಡುವೆ ದೃಢ ಚಿತ್ತದಿಂದ ಬದುಕಿ ಗೆದ್ದು ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂದರು. ಸಂಸ್ಥೆಯ ಗೌರವಾಧ್ಯಕ್ಷರಾದ ಅಭಯಚಂದ್ರ ಜೈನ್ ದೇಶ ಭಾಷೆಗಳ ರಕ್ಷಣೆ ನಮ್ಮ ಕರ್ತವ್ಯ ಎಂದರು. ಎನ್‌ಸಿಸಿ ವಿದ್ಯಾರ್ಥಿಗಳು ಕವಾಯತಿನೊಂದಿಗೆ ಕಾರ್ಯಕ್ರಮ ಪ್ರಾರಂಭಗೊAಡಿತು. ವೇದಿಕೆಯಲ್ಲಿ ಎಕ್ಸಲೆಂಟ್ ಮೂಡುಬಿದಿರೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕಿ ಕು.ಪ್ರಿಯಾಂಕ ಸ್ವಾಗತಿಸಿ, ಡಾ. ಶೃತಿ ಅತಿಥಿಗಳನ್ನು ಪರಿಚಯಿಸಿದರು. ಕು. ಪ್ರಮೀಳಾ ಪಿಂಟೋ ವಂದಿಸಿದರು. ಉಪಮುಖ್ಯೋಪಾಧ್ಯಾಯ ಜಯಶೀಲ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ ಸ್ವಾತಂತ್ರ್ಯೋತ್ಸವ ಸಂಭ್ರಮ

Article Image

ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ ಸ್ವಾತಂತ್ರ್ಯೋತ್ಸವ ಸಂಭ್ರಮ

ಉಜಿರೆ, ಆಗಸ್ಟ್ 15: ಸಮೃದ್ಧಿ, ಸುರಕ್ಷತೆ ಮತ್ತು ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆಯುವ “39;ಹೊಸ ಭಾರತ” ಕಟ್ಟುವ ಘೋಷವಾಕ್ಯದೊಂದಿಗೆ ಎಸ್.ಡಿ.ಎಂ ಕಾಲೇಜಿನ ಶ್ರೀರತ್ನವರ್ಮ ಹೆಗ್ಗಡೆ ಕ್ರೀಡಾಂಗಣವು 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಎಸ್.ಡಿ.ಎಂ ಶಾಲೆ, ಪದವಿ ಪೂರ್ವ, ಪದವಿ, ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ತಾಂತ್ರಿಕ ಸೇರಿದಂತೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳ ಸಮಕ್ಷಮದಲ್ಲಿ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಎಂ.ವಿ.ಭಟ್ ಅವರು ಧ್ವಜಾರೋಹಣ ನೆರವೇರಿಸಿದರು. ಎನ್.ಸಿ.ಸಿ. ಕೆಡೆಟ್‌ಗಳಿಂದ ಧ್ವಜವಂದನೆ ನಡೆಯಿತು. ಈ ವೇಳೆ ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್, ಎನ್‌ಸಿಸಿ ಆಫಿಸರ್ ಸದಾನಂದ್, ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್.ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ ಕುಮಾರ್, ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ, ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ್ ಮತ್ತಿತರ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ ಕಾಲೇಜಿನ ಆಡಳಿತಾಂಗ ಕುಲಸಚಿವರಾದ ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಬಸದಿ ಸ್ಚಚ್ಛತಾ ಕಾರ್ಯಕ್ರಮ

Article Image

ಬಸದಿ ಸ್ಚಚ್ಛತಾ ಕಾರ್ಯಕ್ರಮ

ಭ 1008 ಶ್ರೀ ಶೀತಲನಾಥ ತೀರ್ಥoಕರ ಹಾಗೂ ಬ್ರಹ್ಮ ದೇವರ ಅತಿಶಯ ಕ್ಷೇತ್ರ ಮುಗುಳಿಯಲ್ಲಿ ಸ್ವಚ್ಛತೆ. ಬಸದಿ ಸ್ವಚ್ಛತಾ ತಂಡದಿಂದ 2ನೇ ವರ್ಷದ ಸ್ವಚ್ಛತೆ. ಸುಮಾರು 45 ಜನ ಶ್ರಾವಕರು ಭಾಗವಹಿಸಿದ್ದರು

ತಿಮ್ಮಣಬೆಟ್ಟು ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

Article Image

ತಿಮ್ಮಣಬೆಟ್ಟು ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

ವೇಣೂರು: ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ನಿಜವಾಗಿಯೂ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಕೇಂದ್ರಗಳಾಗಿವೆ ಇಂತಹ ಶಾಲೆಗಳ ವಿದ್ಯಾರ್ಥಿಗಳನ್ನು ಹಾಗೂ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಮಾಜದ ಸರ್ವರ ಪ್ರೋತ್ಸಾಹ ಅಗತ್ಯವಿದೆ. ಶಾಲಾ ಎಸ್.ಡಿ.ಎಂ.ಸಿ, ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವೃಂದ ಹಾಗೂ ಪೋಷಕರು ಸಹಕಾರವಿದ್ದಾಗ ಮಾತ್ರ ಗ್ರಾಮೀಣ ಪ್ರದೇಶಗಳ ಶಾಲೆಗಳ ಉನ್ನತಿ ಸಾಧ್ಯ ಎಂದು ಮರೋಡಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕೇಸ್ತರ ಹಾಗೂ ಮೂಡುಬಿದಿರೆ ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಹೇಮರಾಜ್ ಬೆಳ್ಳಿಬೀಡು ಹೇಳಿದರು. ಅವರು ಕರಿಮಣೇಲು ಗ್ರಾಮದ ತಿಮ್ಮಣಬೆಟ್ಟು ಸರಕಾರಿ ಉ.ಹಿ.ಪ್ರಾ ಶಾಲಾ ಮಕ್ಕಳಿಗೆ ತಮ್ಮ ವೈಯಕ್ತಿಕ ನಿಧಿಯಿಂದ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಇಡೀ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ಮತ್ತು ಇತರ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿದ ಅವರು ಈ ದಿನದಂದು ವಿತರಿಸಿದ ಪುಸ್ತಕಗಳನ್ನು ಸದುಪಯೋಗ ಪಡಿಸಿಕೊಂಡು ತಾವು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ, ನಿಮ್ಮೊಂದಿಗೆ ನಿಮ್ಮ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ಪೋಷಕರು ಬೆಂಬಲವಾಗಿ ಇರುತ್ತಾರೆ, ಕಲಿಕೆಯಲ್ಲಿ ಉತ್ತಮ ಆಸಕ್ತಿಯನ್ನು ವಹಿಸಿ ತಮ್ಮ ಸಾಧನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಶಾಲೆಗೆ, ಊರಿಗೆ ಮತ್ತು ನಿಮ್ಮ ಹೆತ್ತವರಿಗೆ ಕೀರ್ತಿ ತರಬೇಕೆಂದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್‌ ಮೂಡುಕೋಡಿ ಭಾಗವಹಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ಸುಮ, ಮರಾಠಿ ಸೇವಾ ಸಂಘದ ಅಧ್ಯಕ್ಷ ವಿಠಲ ನಾಯ್ಕ, ಮಾಜಿ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸಚಿನ್ ಬೇಗೂರ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಗಾಯತ್ರಿ ಪ್ರಶಾಂತ್ ಅತಿಥಿಗಳಾದ ಕೆ. ಹೇಮರಾಜ್ ರವರನ್ನು ಸಭೆಗೆ ಪರಿಚಯಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜುನಾಯ್ಕ ವಂದಿಸಿದರು.

ಬೆಳ್ತಂಗಡಿ : ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

Article Image

ಬೆಳ್ತಂಗಡಿ : ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೈನ ಧರ್ಮೀಯ ವಿದ್ಯಾರ್ಥಿಗಳಿಗೆ ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ) ಹಾಗೂ ಶ್ರಾವಕ ಬಂಧುಗಳ ಸರ್ವ ಸಹಕಾರದಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಅದೇ ರೀತಿ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಧರ್ಮೀಯ ವಿದ್ಯಾರ್ಥಿಗಳನ್ನು 2025 ನೇ ಸೆಪ್ಟಂಬರ್ 21ರಂದು ಶ್ರೀಕ್ಷೇತ್ರ ಹೊಂಬುಜ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಶ್ರೀಮದ್ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ SSLC, ಗಿಂತ ಮೇಲ್ಪಟ್ಟು ಪಿಯುಸಿ, ಪದವಿ, ಐಟಿಐ, ಪಾಲಿಟೆಕ್ನಿಕ್, ಬಿಬಿಎಂ, ಎಂಬಿಎ, ಇಂಜಿನಿಯರಿಂಗ್, ವೈದ್ಯಕೀಯ ಇನ್ನಿತರ ವ್ಯಾಸಂಗವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ ನಿಗದಿತ ಅರ್ಜಿ ನಮೂನೆಯಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಕಚೇರಿಯಲ್ಲಿ ಪಡೆದುಕೊಳ್ಳುವುದು ಮತ್ತು ಅರ್ಜಿಯೊಂದಿಗೆ ಪ್ರಸ್ತುತ ಕಲಿಯುತ್ತಿರುವ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ, ಕಳೆದ ವರ್ಷ ಕಲಿತು ತೇರ್ಗಡೆ ಆಗಿರುವ ಬಗ್ಗೆ ಅಂಕಪಟ್ಟಿಯ ಯಥಾಪ್ರತಿ, ವಿದ್ಯಾರ್ಥಿಯ ಪ್ರಸ್ತುತ ಮನೆಯ ವಿಳಾಸ, ವಿದ್ಯಾರ್ಥಿಯ ಆಧಾರ್ ಕಾರ್ಡ್ ಯಥಾಪ್ರತಿ, ಸಂಪರ್ಕ ಸಂಖ್ಯೆ, ತಂದೆ ಮತ್ತು ತಾಯಿಯ ಹೆಸರು ನಮೂದಿಸಿ ಇವರಿಬ್ಬರಲ್ಲಿ ಒಬ್ಬರ ಸಹಿಯೊಂದಿಗೆ ಆಗಸ್ಟ್ 31ರ ಒಳಗೆ ಕೆ. ಜಯವರ್ಮರಾಜ್ ಬಳ್ಳಾಲ್, ಮ್ಯಾನೇಜಿಂಗ್ ಟ್ರಸ್ಟಿ, ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ,) ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ, ಜೈನ್ ಪೇಟೆ, ಬೆಳ್ತಂಗಡಿ,-574214 ದಕ್ಷಿಣ ಕನ್ನಡ ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಬೇಕು. ಅದೇ ರೀತಿ ಉಭಯ ಜಿಲ್ಲೆಗಳಲ್ಲಿ ತೀವ್ರತರದ ಕಾಯಿಲೆಗಳಾದ ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವ ಜೈನ ಸಮಾಜದ ಅರ್ಹ ಬಂಧುಗಳು ಕೂಡ ಈ ಬಗ್ಗೆ ಈ ಕೆಳಗಿನ ವಿಳಾಸದಾರರನ್ನು ಸಂಪರ್ಕಿಸಿದ್ದಲ್ಲಿ ಪರಿಶೀಲಿಸಿ ಅಗತ್ಯ ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 08256-233577 ಅಥವಾ 9448180439,8310381962 ಸಂಖ್ಯೆಯ ದೂರವಾಣಿಯನ್ನು ಸಂಪರ್ಕಿಸಬಹುದೆಂದು ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ. ಜಯವರ್ಮರಾಜ್ ಬಳ್ಳಾಲ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಧಾರವಾಡ ಜೈನ ಮಿಲನದ ಕಾರ್ಯಗಳು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿವೆ : ಡಾ. ಅಜಿತಪ್ರಸಾದ

Article Image

ಧಾರವಾಡ ಜೈನ ಮಿಲನದ ಕಾರ್ಯಗಳು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿವೆ : ಡಾ. ಅಜಿತಪ್ರಸಾದ

ಒಂದು ಸಂಸ್ಥೆ ಅದು ಮಾಡುವ ಅತ್ಯುನ್ನತ ಕಾರ್ಯಗಳಿಂದಲೇ ಸಮಾಜದಲ್ಲಿ ವಿಶಿಷ್ಟ ಸ್ಥಾನ ಪಡೆದು ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ ಮತ್ತು ಅದು ಧರ್ಮಪ್ರಭಾವನೆಗೆ ಕಾರಣವಾಗುತ್ತದೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಗಳು ಹಾಗೂ ಧಾರವಾಡ ಜೈನ ಮಿಲನ ಸಂಸ್ಥಾಪಕ ಕಾರ್ಯದರ್ಶಿಗಳೂ ಆದ ಡಾ. ಅಜಿತಪ್ರಸಾದ ಹೇಳಿದರು, ಅವರು ಧಾರವಾಡ ಜೈನ ಮಿಲನ್ ಅಯೋಜಿಸಿದ್ದ ವನಮಹೋತ್ಸವ, ಪ್ರಸಕ್ತ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮುಂದುವರೆದ ಅವರು ಕಳೆದ 33 ವರ್ಷಗಳಿಂದ ಧಾರವಾಡ ಜೈನ ಮಿಲನ್ ಇಂಥ ಹಲವಾರು ಜನೋಪಯೋಗಿ ಕಾರ್ಯಕ್ರಮ ಮಾಡುವಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು. ಪ್ರಾರಂಭದಲ್ಲಿ ಜೆ ಎಸ್ ಎಸ್ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ವನಮಹೋತ್ಸವ ಆಚರಿಸಲಾಯಿತು ಮುಂದಿನ ಒಂದು ವಾರದಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ವನಮಹೋತ್ಸವವನ್ನು ರಚನಾತ್ಮಕವಾಗಿ ಆಯೋಜಿಸಲಾಯಿತು. ಸಂಸ್ಥೆಯ ಐವತ್ತಕ್ಕೂ ಹೆಚ್ಚು ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ನೋಟ ಬುಕ್ ವಿತರಿಸಿ ಅವರ ವಿದ್ಯಾರ್ಜನೆಗೆ ಉತ್ಸಾಹ ಪ್ರೋತ್ಸಾಹ ತುಂಬಲಾಯಿತು. ಮಿಲನದ ನೂತನ ಅಧ್ಯಕ್ಷ ಜಿನ್ನಪ್ಪ ಕುಂದಗೋಳ, ಕಾರ್ಯದರ್ಶಿ ರತ್ನಾಕರ ಹೋಳಗಿ ಮತ್ತು ಖಜಾಂಚಿ ಮೋಹನಕುಮಾರ ಗೋಗಿ ಇವರುಗಳಿಗೆ ಬ್ಯಾಡ್ಜ್ ವಿತರಿಸಿ ಪ್ರಮಾಣ ವಚನವನ್ನು ಡಾ. ಅಜಿತಪ್ರಸಾದ ಬೋಧಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಕಾರ್ಯದರ್ಶಿ ಶಾಂತರಾಜ ಮಲ್ಲಸಮುದ್ರ ಇವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಿಲನದ ನಿಕಟಪೂರ್ವಅಧ್ಯಕ್ಷಿಣಿ ಸುಜಾತಾ ಹಡಗಲಿ ಹಾಗೂ ಇತರ ಪದಾಧಿಕಾರಿಗಳಾದ ಸಂಗೀತಾ ಉಪಾಧ್ಯ, ಸುನಂದಾ ವರದಿ ಜೈನ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಿನದತ್ತ ಹಡಗಲಿ, ಗಣ್ಯರಾದ ಮಹಾವೀರ ಉಪಾಧ್ಯ, ಎ ಎ ಬಾಳಿಕಾಯಿ, ಕೆ.ಜೆ. ರಪಾಟಿ ಹಾಗೂ ಬ್ರಹ್ಮಪ್ರಕಾಶ, ಡಿ.ಸಿ. ನಾಯಕ, ಅಮಿತ್ ಡೊರ್ಲೆ ಹಾಗೂ ಮಿಲನದ ಸದಸ್ಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಆಥಿತ್ಯವನ್ನು ನೀಡಿದ ವಾಣಿಪ್ರಸಾದ ಇವರನ್ನು ಗೌರವಿಸಿ ಸತ್ಕಾರಿಸಲಾಯಿತು. ಣಮೋಕಾರ ಮಂತ್ರದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ರಾಜೇಶ್ವರಿ ಶೆಟ್ಟಿ ಇವರು ಸ್ವಾಗತ ಗೀತೆ ಹಾಡಿದರು, ಡಾ. ಸೂರಜ ಜೈನ ಇವರು ಸಮಾರಂಭದಲ್ಲಿ ಭಾಗವಹಿಸಿದ ಸರ್ವರನ್ನು ಸ್ವಾಗತಿಸಿದರು. ಕೊನೆಯಲ್ಲಿ ವೈಶಾಲಿ ಹೊನ್ನಪ್ಪನವರ ಇವರು ವಂದಿಸಿದರು. ಕಾರ್ಯಕ್ರಮವನ್ನು ಸುನಂದಾ ವರೂರ ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿದರು. ವರದಿ: ಶಾಂತರಾಜ ಮಲ್ಲಸಮುದ್ರ

ಜೈನ ಸಮಾಜದ ಅಪರೂಪದ ರಾಜಕಾರಿಣಿ

Article Image

ಜೈನ ಸಮಾಜದ ಅಪರೂಪದ ರಾಜಕಾರಿಣಿ

ಶ್ರೀ ತವನಪ್ಪ ಅಷ್ಟಗಿ ಅವರ ೬೪ ನೇ ಜನ್ಮ ದಿನದ ಸಂಭ್ರಮ ಇಂದು ವಿಧಾನ ಪರಿಷತ್ ಸ್ಥಾನಕ್ಕೆ ನಾಮಕರಣಕ್ಕೆ ಸೂಕ್ತ ಅಭ್ಯರ್ಥಿ. ಜಾತಿ ಆಧಾರವೇ ನಿರ್ಣಾಯಕವಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಲ್ಲಿಯೇ ಅಲ್ಪಸಂಖ್ಯಾತ ಜೈನ ಸಮುದಾಯದ ನಾಯಕ ಧಾರವಾಡ ತಾಲೂಕು ಉಪ್ಪಿನ ಬೆಟಗೇರಿ ಗ್ರಾಮದ ಸ್ನೇಹ ಜೀವಿ ಶ್ರೀ ತವನಪ್ಪ ಅಷ್ಟಗಿಯವರು. ಸಾರ್ವಜನಿಕ ಕ್ಷೇತ್ರದಲ್ಲಿ ಇವರ ಜನಪರ ಕಾಳಜಿ, ಮೌಲ್ಯಾಧಾರಿತ ರಾಜಕೀಯ ಸಿದ್ದಾಂತ,ಸಾಮಾನ್ಯ ಜನರೊಂದಿಗೆ ನಿರಂತರ ಸಂಪರ್ಕ ಮತ್ತು ಸಮಸ್ಯೆ ಪರಿಹಾರದ ಬಗ್ಗೆ ಸ್ಪಂದನೆ ಪ್ರಾಮಾಣಿಕ ಪ್ರಯತ್ನ ಶುದ್ಧ ಚಾರಿತ್ಯ ಇವರ ಹುಟ್ಟುಗುಣ. ಈ ಕಾರಣದಿಂದಲೇ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಬಹಳ ಜನಪ್ರೀಯ ನಾಯಕರಾಗಿ ಹೊರಹೊಮ್ಮಿದ್ದಾರೆ ಹಾಗೂ ಒಂದೂ ವಿವಾದ ಇಲ್ಲದ ಅಪ್ಪಟ ನಾಯಕರು ಎನ್ನಬಹುದು. ಧಾರವಾಡ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಇದ್ದು ಅಪಾರವಾದ ಅಭಿಮಾನಿಗಳನ್ನು, ಹಿತ ಚಿಂತಕರನ್ನು ಹೊoದಿ ಅವರ ಆಶಯದಂತೆ ಜನರ ಸೇವೆಗಾಗಿ ರಾಜಕೀಯವನ್ನು ಬಳಸಿಕೊಳ್ಳುತ್ತಿವ ಅಪರೂಪದ ರಾಜಕಾರಣಿ ಇವರು. ಜೊತೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಿಂದಿನ ಶಕ್ತಿ ಇವರೇ ಆಗಿದ್ದಾರೆ. ಹಿನ್ನಲೆ, ಕಾರ್ಯಾವಲೋಕನ ಮತ್ತು ಸಂಕ್ಷಿಪ್ತ ಪರಿಚಯ : ಶ್ರೀ ತವನಪ್ಪಾ ಅಷ್ಟಗಿಯವರು ಗ್ರಾಮೀಣ ಹಿನ್ನೆಲೆಯುಳ್ಳವರು ಧಾರವಾಡ ತಾಲೂಕು ಉಪ್ಪಿನ ಬೆಟಗೇರಿ ಗ್ರಾಮದ ರೈತ ಕುಟುಂಬದ ಶ್ರೀ ಪಾಯಪ್ಪ ಮತ್ತು ದ್ಯಾಮವ್ವ ದಂಪತಿಗಳ ಉದರದಲ್ಲಿ ಜನಿಸಿದ್ದು ದಿ 6-7-1961ರಲ್ಲಿ ಪಿಯುಸಿವರೆಗೆ ಶಿಕ್ಷಣ ಪಡೆದ ಇವರು ಸಮಾಜ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಅದರಲ್ಲಿ ಸಾರ್ಥಕತೆಯನ್ನು ಕಂಡಿದ್ದಾರೆ. ಸಾರ್ವಜನಿಕ ಸೇವೆಯ ಮನೋಭಾವನೆಯಿಂದ ರಾಜಕೀಯ ಪ್ರವೇಶಿಸಿದ ಇವರು 2005 ರ ಜಿಲ್ಲಾ ಪಂಚಾಯತು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾಯಿತರಾದರು ಹಾಗೂ 2008 - 2009 ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಅರೋಗ್ಯ ಸಂಘಟನೆಯ ಅಧ್ಯಕ್ಷರಾಗಿ ಅತ್ಯಂತ ಸಮರ್ತವಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಧರ್ಮಪತ್ನಿ ಶ್ರೀಮತಿ ಕಸ್ತೂರಿ ಅಷ್ಟಗಿ ಕೂಡ ರಾಜಕೀಯದಲ್ಲಿ ಒಳ್ಳೆಯ ಹೆಸರು ಮಾಡಿದ್ದು ಇವರು ಕೂಡ ಉಪ್ಪಿನ ಬೆಟಗೇರಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತಿ ಸದಸ್ಯರಾಗಿ 2011-2016 ರ ಅವಧಿಗೆ ಆಯ್ಕೆಯಾಗಿ 2016ರಲ್ಲಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. "ಇದುವರೆಗೂ ಎಲ್ಲಿಯೂ ಒಂದು ಪೈಸೆಯೂ ಭ್ರಷ್ಟಾಚಾರದ ಮಾಡಿದವನಲ್ಲ ಹಣಕ್ಕಾಗಿ ನನ್ನ ನಿಷ್ಠೆ ಹಾಗೂ ಕರ್ತವ್ಯ ಮರೆತವನಲ್ಲ" ಎಂದು ಶ್ರೀ ತವನಪ್ಪ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಇವರ ಮೂಲತ ಕೃಷಿ ಕುಟುಂಬದವರಾಗಿದ್ದು ಅತ್ಯಂತ ಪ್ರಗತಿಪರ ರೈತ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜೊತೆಗೆ ರೈತರಲ್ಲಿ ಆತ್ಮಸ್ಥರ್ಯ ತುಂಬಿ ಅವರನ್ನು ಸ್ವಾವಲಂಬರನ್ನಾಗಿ ಮಾಡಿ ಹೆಮ್ಮೆಯಿಂದ ಬದುಕಲು ಪ್ರೇರೇಪಿಸುತ್ತಾ ಅವರಿಗೆ ಪ್ರೀತಿ ಪಾತ್ರರಾಗಿದ್ದು ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಇವರ ಕ್ಷೇತ್ರದಲ್ಲಿ ಸಣ್ಣವರಿರಲಿ ದೊಡ್ಡವರಲಿ ಪ್ರತಿಯೊಬ್ಬರ ಮನೆ ಮನೆಯಲ್ಲಿ ನಡೆಯುವ ಯಾವದೇ ಕಾರ್ಯಕ್ರಮವಿರಲಿ ಅಲ್ಲಿಗೆ ಬಿಡುವು ಮಾಡಿಕೊಂಡು ತಪ್ಪದೇ ಭಾಗವಹಿಸಿ ಅವರೊಂದಿಗೆ ಸ್ಪಂದಿಸುತ್ತಾರೆ ಇದೇ ಇವರ ದೊಡ್ಡಗುಣ. ಇವರದೇ ಮೇಲ್ವಿಚಾರಣೆಯಲ್ಲಿ ಧಾರವಾಡದಲ್ಲಿ ಕೃಷಿಗೆ ಪೂರಕ ಉದ್ದಿಮೆಯಾಗಿ ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ ಫ್ಯಾಕ್ಟರಿಯನ್ನು ಪ್ರಾರಂಭಿಸಿ ರೈತರ ಆಶಾಕಿರಣವಾಗಿದ್ದಾರೆ. ಜನ್ಮ ದಿನದ ವಿಶೇಷ : ತವನಪ್ಪ ಅಷ್ಟಗಿ ಇವರಿಗೆ ಅಭಿಮಾನಿಗಳು ಸ್ನೇಹಿತರು, ಕಾರ್ಯಕರ್ತರ, ಹಿತೈಸಿಗಳ ದೊಡ್ಡ ಬಳಗವೇ ಇದೆ. ಇವರೆಲ್ಲರೂ ಸೇರಿ ಇವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಸಲು ರವಿವಾರ ದಿನಾಂಕ ೬ ರಂದು ಇಡೀ ದಿನ ರಕ್ತದಾನ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಲವಾರು ಪೂಜ್ಯರ ಆಶೀರ್ವಚನ, ಅನ್ನಸಂತರ್ಪಣೆ ಮುಂತಾದ ಜನಸ್ನೇಹಿ ಕಾರ್ಯಕ್ರಗಳನ್ನು ಸವದತ್ತಿ ರಸ್ತೆಯಲ್ಲಿ ರುವ ಪದ್ಮಾವತಿ ಕಾಟನ್ ಇಂಡಸ್ಟ್ರಿ ಯಲ್ಲಿ ಆಯೋಜಿಸಿದ್ದಾರೆ. ಮುಂದಿನ ಚಿಂತನೆಗಳು : ಕ್ಷೇತ್ರ ಸರ್ವಾoಗೀನ ಅಭಿವೃದ್ಧಿಗೆ ಶ್ರಮಿಸುವುದು, ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುವುದು. ಯುವಕರಲ್ಲಿ ನವೋತ್ಸಾಹ ತುಂಬಿ ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸುವುದು ನಿರುದ್ಯೋಗ ನಿವಾರಣೆ, ರಾಜಕೀಯದಲ್ಲಿ ಪ್ರಾಮಾಣಿಕ ಮೌಲ್ಯ ಆಧಾರಿತ ಕ್ರಮವನ್ನು ಅನುಸರಿಸುವುದು. ಇಂಥ ಒಬ್ಬ ನಿಷ್ಠಾವಂತ ರಾಜಕಾರಿಣಿಯನ್ನು ಈಗ ಖಾಲಿ ಇರುವ ವಿಧಾನ ಪರಿಷತ್ ಸ್ಥಾನಕ್ಕೆ ಸರಕಾರ ನಾಮಕರಣ ಮಾಡಬೇಕೆಂದು ಈ ಸಂಧರ್ಭದಲ್ಲಿ ಸರಕಾರವನ್ನು ಒತ್ತಾಯಿಸುತ್ತೇವೆ. ಇವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಈ ನಾಡಿಗೆ ಇವರ ಸೇವೆ ಮಾರ್ಗದರ್ಶನ ಸದಾ ಲಭಿಸಲಿ ಇವರ ಆದರ್ಶ ನಡೆ ನುಡಿ ಇತರರಿಗೆ ಮಾದರಿಯಾಗಲಿ ಎನ್ನುವ ಹಾರೈಕೆಗಳೊಂದಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಾಂತರಾಜ ಮಲ್ಲಸಮುದ್ರ ಲೇಖಕರು

ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

Article Image

ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಜು.1 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವೈದ್ಯರ ಸೇವೆ ಮತ್ತು ತ್ಯಾಗ ಅಮೂಲ್ಯವಾದದ್ದು, ರೋಗಿಗಳ ಸೇವೆಗಾಗಿ ತನ್ನ ಹೆಚ್ಚಿನ ಸಮಯವನ್ನು ಮುಡಿಪಾಗಿಡುವ ವೈದ್ಯರದ್ದು ಒತ್ತಡದ ಜೀವನ. ಇಂತಹ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಾ, ರೋಗಿಗಳ ಸೇವೆಯ ವಿಷಯ ಬಂದಾಗ ಎಲ್ಲರು ಒಗ್ಗಟ್ಟಿನಿಂದ ರೋಗಿಯ ಸೇವೆಗೆ ಮುಂದಾಗುವ ನಮ್ಮ ಆಸ್ಪತ್ರೆಯ ವೈದ್ಯರ ಸೇವೆ ನಿಜವಾಗಿಯೂ ಶ್ಲಾಘನೀಯ ಎಂದರು. ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಆಶೀರ್ವಾದ ಮತ್ತು ಆದೇಶದಂತೆ, ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಮ್ಮ ಆಸ್ಪತ್ರೆಯ ವೈದ್ಯಕೀಯ ತಂಡ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದು, ಸ್ವತಃ ರೋಗಿಗಳೇ ವೈದ್ಯರ ಮತ್ತು ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ ಎಂ.ಆರ್.ಐ ‌ಸ್ಕ್ಯಾನಿಂಗ್ ಸೇವೆ ದೊರೆಯಲಿದ್ದು, ದೇಶದಲ್ಲಿಯೇ ಈ ಅತ್ಯಾಧುನಿಕ ಯಂತ್ರ ಹೊಂದಲಿರುವ 2ನೆಯ ಆಸ್ಪತ್ರೆ ನಮ್ಮದಾಗಲಿದೆ ಎಂದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಮಾತನಾಡಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಹಗಲಿರುಳು ದುಡಿಯುತ್ತಿರುವ ಎಲ್ಲಾ ವೈದ್ಯರಿಗೆ ಶುಭ ಹಾರೈಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮಾತನಾಡಿ, ಎಲ್ಲರಿಗೂ ವೈದ್ಯರ ದಿನಾಚರಣೆಯ ಶುಭಾಶಯ ತಿಳಿಸುತ್ತಾ, ಹಿರಿಯ ಅನುಭವಿ ವೈದ್ಯರೊಂದಿಗೆ ಯುವ ಮತ್ತು ಉತ್ಸಾಹಭರಿತ ವೈದ್ಯರ ತಂಡವೇ ಈ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆ ಸದಾ ಸಿದ್ಧವಾಗಿದೆ ಎಂದರು. ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಲ್ಲಾ ವೈದ್ಯರನ್ನು ಸನ್ಮಾನಿಸಲಾಯಿತು. ವಿವಿಧ ಮನರಂಜನಾ ಹಾಗೂ ಫನ್ನಿ ಗೇಮ್ಸ್‌ಗಳಲ್ಲಿ ಆಸ್ಪತ್ರೆಯ ವೈದ್ಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಖುಷಿಪಟ್ಟರು. ಆಸ್ಪತ್ರೆಯ ವೈದ್ಯರು, ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಜಗನ್ನಾಥ ಎಂ ಮತ್ತು ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇನ್ನರ್ ವೀಲ್ ಕ್ಲಬ್ ಮೂಡುಬಿದಿಯ ಜೈನ್ ಪೇಟೆಯಲ್ಲಿ ಸೋಲಾರ್ ಸ್ಟ್ರೀಟ್ ಲೈಟ್ ಅಳವಡಿಕೆ

Article Image

ಇನ್ನರ್ ವೀಲ್ ಕ್ಲಬ್ ಮೂಡುಬಿದಿಯ ಜೈನ್ ಪೇಟೆಯಲ್ಲಿ ಸೋಲಾರ್ ಸ್ಟ್ರೀಟ್ ಲೈಟ್ ಅಳವಡಿಕೆ

ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಯವರು ಸಾರ್ವಜನಿಕರಿಗೆ ಉಪಯೋಗ ಆಗುವಂತೆ ಸೋಲಾರ್ ಸ್ಟ್ರೀಟ್ ಲೈಟ್ ಅನ್ನು ಸಾವಿರ ಕಂಬದ ಬಸದಿಯ ಹತ್ತಿರ ಅಳವಡಿಸಿದರು. ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು ಉದ್ಘಾಟಿಸಿ ಇನ್ನರ್ ವೀಲ್ ಕ್ಲಬ್ ಇನ್ನಷ್ಟು ಸಮಾಜ ಮುಖಿಯಾಗಿ ತೊಡಗಿಸಿಕೊಳ್ಳಲಿ ಎಂದು ಹಾಗೂ ನೂತನ ಅಧ್ಯಕ್ಷರಾದ ಶ್ವೇತಾ ಜೈನ್ ಹಾಗೂ ಕಾರ್ಯದರ್ಶಿ ಅನಿತಾರವರಿಗೆ ಶುಭವನ್ನು ಹಾರೈಸಿ ಆರ್ಶೀವದಿಸಿದರು. ಎಂ.ಸಿ.ಎಸ್ ಬ್ಯಾಂಕಿನ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್‌ ಪೂರ್ವಾಧ್ಯಕ್ಷರಾದ ಎಂ ಬಾಹುಬಲಿ ಪ್ರಸಾದ್ ರವರು ಎಲ್ಲರಿಗೂ ಉಪಯೋಗವಾಗುವಂತಹ ಸಮಾಜಮುಖಿ ಕಾರ್ಯಕ್ರಮ ಇದಾಗಿದ್ದು ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗಿದೆ. ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯ ಪಕ್ಕದಲ್ಲಿ ಇರುವಂತಹ ಈ ರಸ್ತೆಯಲ್ಲಿ ಸ್ಥಳೀಯರು ಮಾತ್ರವಲ್ಲದೆ ಹೊರ ಪ್ರದೇಶದಿಂದ ಬರುವವರು ಕೂಡ ಸಂಚರಿಸುತ್ತಾರೆ. ಇನ್ನರ್ ವೀಲ್ ಕ್ಲಬ್ ಕಳೆದ 33 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ವರ್ಷವು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸವನ್ನು ಮುಂದುವರಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಮ್., ಮಾಜಿ ಸಚಿವರಾದ ಕೆ. ಅಭಯ ಚಂದ್ರ ಜೈನ್, ಪುರಸಭಾ ಸದಸ್ಯ ಶ್ವೇತಾ ಪ್ರವೀಣೆ, ರೋಟರಿ ಕ್ಲಬ್‌ ಪೂರ್ವಾಧ್ಯಕ್ಷರಾದ ಡಾ| ಹರೀಶ್ ನಾಯಕ್, ಡಾ| ವಿನಯ್ ಕುಮಾರ್ ಹೆಗ್ಡೆ, ರೋ. ಜಯರಾಜ್ ಕಂಬಳಿ, ಇನ್ನರ್ ವೀಲ್ ಕ್ಲಬ್‌ ಸದಸ್ಯರಾದ ಪ್ರಕಾಶಿನಿ ಹೆಗ್ಡೆ, ಸುಜಯ ವೇದ ಕುಮಾರ, ವೀಣಾ, ರೇಷ್ಮಾ, ರಮ್ಯಾ, ಅಪೇಕ್ಷೆ, ದಿವ್ಯಾ ಹಾಗೂ ಜೈನ್ ಮಿಲನ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.

ಜೈನ ಶೋಭಾನೆ ಹಾಡುಗಳ ಪುಸ್ತಕ ಬಿಡುಗಡೆ

Article Image

ಜೈನ ಶೋಭಾನೆ ಹಾಡುಗಳ ಪುಸ್ತಕ ಬಿಡುಗಡೆ

ಜೈನ ಧರ್ಮದ ಸಂಪ್ರದಾಯದಲ್ಲಿ ಶೋಭಾನೆಗೆ ಬಹಳ ಮಹತ್ವವಿದೆ ಈ ಶೋಭಾನೆಗಳನ್ನು ಪಂಚಕಲ್ಯಾಣದ ವಿಧಿ-ವಿಧಾನಗಳಲ್ಲಿಯೂ ಕೂಡಾ ಹಾಡುತ್ತಾರೆ ಮದುವೆ, ಸೀಮಂತ, ನಾಮಕರಣ, ಉಪನಯನದ ಕಾರ್ಯಕ್ರಮಗಳಲ್ಲಿ ಶೋಭಾನೆ ಹಾಡುಗಳು ಬಹಳ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಎಂದು ಮೂಡಬಿದಿರೆಯ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀಯವರು ಪುಸ್ತಕವನ್ನು ಶ್ರುತ ಪಂಚಮಿಯ ದಿನದಂದು ಶ್ರೀ ಜೈನ ಮಠ ಮೂಡಬಿದಿರೆಯಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಶೋಭಾನೆ ಹಾಡುಗಳ ಪುಸ್ತಕವನ್ನು ರಚಿಸಿದ ವಾಣಿಶ್ರೀ ಅಭಯ ಕುಮಾರ್ ಮೂಡಬಿದಿರೆ ಇವರನ್ನು ಶಾಲು ಹೊದಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಪಟ್ನ ಶೆಟ್ಟಿ ಸುಧೇಶ್ ಕುಮಾರ್, ಬಾಹುಬಲಿ ಪ್ರಸಾದ್, ಅಭಯ ಕುಮಾರ್, ವೀಣಾ ರಘ ಚಂದ್ರ, ವೃಂದಾ ರಾಜೇಂದ್ರ, ರೇಖಾ ಸುಧೇಶ್ ಕುಮಾರ್, ಮಂಜುಳ ಅಭಯ ಚಂದ್ರ, ಶ್ಚೇತಾ ಜೈನ್, ಉಷಾ ಜಯ ವೀರ್, ಮಂಜುಳ ಯಶೋಧರ್, ರಾಜೇಶ್ವರಿ ಶಂಭವ ಕುಮಾರ್, ಸುಧಾ ಪೃಥ್ವಿರಾಜ್ ಶಕುಂತಳಾ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ಶಾಲಾ ಪ್ರಾರಂಭೋತ್ಸವ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

Article Image

ಶಾಲಾ ಪ್ರಾರಂಭೋತ್ಸವ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ಮೂಡುಬಿದಿರೆ, ದ.ಕ ಇಲ್ಲಿಯ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ದಿನಾಂಕ 02-06-2025ನೇ ಸೋಮವಾರದಂದು ಶಾಲಾ ಅಮೃತ ಮಹೋತ್ಸವ ಕಟ್ಟಡದಲ್ಲಿ ನಡೆಸಲಾಯಿತು. ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಬ್ಯಾಂಡ್ ಸೆಟ್ ನೊಂದಿಗೆ ಮೆರವಣಿಗೆಯ ಮೂಲಕ ಶಾಲಾ ಸಭಾಭವನಕ್ಕೆ ಕರೆತರಲಾಯಿತು. ಸಮಾರಂಭದ ಉದ್ಘಾಟನೆಯನ್ನು ಪುರಸಭೆಯ ಸದಸ್ಯರಾದ ಶ್ವೇತಾ ಪ್ರವೀಣ್ ರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಶಾಲೆಯ ಕೀರ್ತಿಯನ್ನು ಹೆಚ್ಚಿಸುವ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಎಸ್.ಡಿ.ಎಂ.ಸಿಯ ಅಧ್ಯಕ್ಷರಾದ ಪವನ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿದರು. ಶಾಲೆಯ ಎಲ್ಲಾ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನಾಡಿದರು. ತಾಯಂದಿರ ಸಮಿತಿಯ ಅಧ್ಯಕ್ಷರಾದ ಆರತಿ ಜೈನ್ ಉಪಸ್ಥಿತರಿದ್ದರು. 2025-26ನೆ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ಶಾಲೆಯ ಹಿರಿಯ ಶಿಕ್ಷಕಿಯಾದ ಮಂಜುಳ ಜೈನ್ ಕಾರ್ಯಕ್ರಮದ ಅದ್ಯಕ್ಷಸ್ಥಾನವನ್ನು ವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ಸ್ವಾಗತಿಸಿ ತಮ್ಮ ಪ್ರಾಸ್ತವಿಕ ನುಡಿಯಲ್ಲಿ 2025-26ನೇ ಸಾಲಿನ ಯೋಜನೆಯ ಬಗ್ಗೆ ತಿಳಿಸಿದರು. 1 ರಿಂದ 7ನೇ ತರಗತಿಯವರೆಗೆ ನೂತನವಾಗಿ ದಾಖಲಾದ ವಿದ್ಯಾರ್ಥಿಗಳು ವೇದಿಕೆಯಲ್ಲಿ ತಮ್ಮ ಸ್ವ-ಪರಿಚಯ ಮಾಡಿಕೊಂಡರು ಕಾರ್ಯಕ್ರಮದ ನಿರೂಪಣೆಯನ್ನು ಮಂಜುಳ ಶಶೀಂದ್ರರವರು ನೆರವೇರಿಸಿದರು ಸಂದ್ಯಾರವರು ಧನ್ಯವಾದ ಗೈದರು.

First Previous

Showing 2 of 8 pages

Next Last