Article Image

ನಾರಾವಿ: ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ

Article Image

ನಾರಾವಿ: ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ

ಜೈನಧರ್ಮವು ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಧರ್ಮವಾಗಿದ್ದು ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬುದು ಜೈನಧರ್ಮದ ಸಾರವಾಗಿದೆ ಎಂದು ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಪೂಜ್ಯ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳವರು ಹೇಳಿದರು. ಅವರು ಶುಕ್ರವಾರ(ಮೇ 3)ನಾರಾವಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ನಿತ್ಯವೂ ಧರ್ಮದ ಅನುಷ್ಠಾನಕ್ಕೆ ಸ್ಪೂರ್ತಿ, ಪ್ರೇರಣೆ ನೀಡುತ್ತವೆ. ಅಹಿಂಸೆ ಮತ್ತು ತ್ಯಾಗವನ್ನು ಪಾಲಿಸುವವರೆಲ್ಲ ಜೈನರೇ ಆಗುತ್ತಾರೆ. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಧರ್ಮೋಪದೇಶ ನೀಡುವ ಧರ್ಮಸಭೆಯೇ ಸಮವಸರಣವಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಜೈನಧರ್ಮ ಅಪೂರ್ವ ಹಾಗೂ ಅಪಾರ ಕೊಡುಗೆ ನೀಡಿದೆ. ಕಾಲಕಾಲಕ್ಕೆ ಬಸದಿಗಳ ಜೀರ್ಣೋದ್ಧಾರ ಮತ್ತು ಧಾಮಸಂಪ್ರೋಕ್ಷಣೆಯಿಂದ ಸಾನ್ನಿಧ್ಯ ವೃದ್ಧಿಯಾಗಿ ಊರಿನಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ. ಆಧ್ಯಾತ್ಮಿಕ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿಯವರು ಹೇಳಿದರು. ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಸಮವಸರಣದ ಪ್ರತೀಕವಾದ ಬಸದಿಗಳು ನಮ್ಮನ್ನು ನಾವು ತಿದ್ದಿಕೊಂಡು ಸುಧಾರಣೆ ಮಾಡಲು ಪ್ರೇರಣೆ ನೀಡುತ್ತವೆ. ಶ್ರದ್ದಾ-ಭಕ್ತಿಯಿಂದ ನಿತ್ಯವೂ ಬಸದಿಗೆ ಹೋಗಿ ಏಕಾಗ್ರತೆಯಿಂದ ದೇವರ ದರ್ಶನ, ಜಪ, ತಪ, ಧ್ಯಾನ ಮಾಡಿದಾಗ ಆತ್ಮಕಲ್ಯಾಣವಾಗುತ್ತದೆ. ಶ್ರಾವಕರು, ಶ್ರಾವಕಿಯರು ಹಾಗೂ ದಾನಿಗಳೆಲ್ಲ ಸೇರಿ ಒಗ್ಗಟ್ಟಿನಿಂದ ಬಸದಿ ಜೀರ್ಣೋದ್ಧಾರ ಮಾಡಿದ ಬಗ್ಗೆ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ರವರು ಮಾತನಾಡಿ ಜೈನರ ಆಚಾರ-ವಿಚಾರ, ನೇರ ನಡೆ-ನುಡಿ ಹಾಗೂ ನಾಯಕತ್ವ ಗುಣದಿಂದಾಗಿ ಸಮಾಜದಲ್ಲಿ ಜೈನರಿಗೆ ವಿಶೇಷ ಮಾನ್ಯತೆ, ಗೌರವ ಇದೆ. ಜೈನರು ವೃತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಹಾಗೂ ಸಾತ್ವಿಕ ಜೀವನ ನಡೆಸುತ್ತಿದ್ದಾರೆ. ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ ಎಂದು ಅವರು ಹೇಳಿದರು. ಶಿಶುಪಾಲ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜಿರೆಯ ಮಹಾವೀರ ಜೈನ್ ಇಚಿಲಂಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು. ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜವರ್ಮ ಜೈನ್, ಆಡಳಿತ ಸಮಿತಿ ಕಾರ್ಯಾಧ್ಯಕ್ಷ ಪ್ರೇಮ್ ಕುಮಾರ್ ಹೊಸ್ಮಾರು, ಅಧ್ಯಕ್ಷ ನಿರಂಜನ ಅಜ್ರಿ, ಎಂ.ಕೆ. ಆರಿಗ ಮರೋಡಿ ಮತ್ತು ಹರ್ಷೇಂದ್ರ ಕುಮಾರ್ ನೂರಾಳಬೆಟ್ಟು ಉಪಸ್ಥಿತರಿದ್ದರು. ಬಸದಿಯಲ್ಲಿ ಇಂದ್ರ ಪ್ರತಿಷ್ಠೆ, ತೋರಣ ಮುಹೂರ್ತ, ವಿಮಾನಶುದ್ಧಿ, ವಾಸ್ತುಪೂಜೆ, ಕ್ಷೇತ್ರಪಾಲ ಪ್ರತಿಷ್ಠೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಈ ಸಂದರ್ಭದಲ್ಲಿ ಸೇವಾಕರ್ತೃಗಳನ್ನು ಮತ್ತು ದಾನಿಗಳನ್ನು ಗೌರವಿಸಲಾಯಿತು. ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ ಕುಮಾರ್ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಜೈನ ಶ್ರಾವಕ ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ಫಲಿತಾಂಶ ಪ್ರಕಟ

Article Image

ಜೈನ ಶ್ರಾವಕ ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ಫಲಿತಾಂಶ ಪ್ರಕಟ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಮಾಗಣೆ ಭ|| ೧೦೦೮ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವ ಮೇ 3 ರಿಂದ ಮೇ 5 ವರೆಗೆ ನಡೆಯಲಿದೆ. ಈ ಪ್ರಯುಕ್ತ ಜೈನ ಶ್ರಾವಕ, ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡಲಾಯಿತು. ವಿಜೇತರ ವಿವರಗಳು ಇಂತಿವೆ : 1. ಧರ್ಮನಾಥ ಸ್ವಾಮಿಯ ಸಂಗೀತ/ಭಜನೆ ಸ್ಪರ್ಧೆ ಪ್ರಥಮ ಬಹುಮಾನ : ನವೀನ್ ಪ್ರಸಾದ್ ಜಾಂಬ್ಳೆ, ಬೆಂಗಳೂರು ದ್ವಿತೀಯ ಬಹುಮಾನ : ಸರ್ವಾರ್ಥ್. ಎಸ್. ಜೈನ್ ,ವೇಣೂರು 2. "ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ" - ಪ್ರಬಂಧ ಸ್ಪರ್ಧೆ ಪ್ರಥಮ ಬಹುಮಾನ : ಅಶ್ವಿಕಾ ಜೈನ್, ನೂರಾಳ್ ಬೆಟ್ಟು ದ್ವಿತೀಯ ಬಹುಮಾನ : ನಾಗರತ್ನ ನಾಗರಾಜ್, ಬೆಂಗಳೂರು ವಿಜೇತರನ್ನು ದಿನಾಂಕ 5 ಮೇ ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು.

ವೇಣೂರು: ಶ್ರೀ ಬಾಹುಬಲಿ ಸ್ವಾಮಿಯ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕ

Article Image

ವೇಣೂರು: ಶ್ರೀ ಬಾಹುಬಲಿ ಸ್ವಾಮಿಯ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕ

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಹಸನ್ಮುಖಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ಫೆ. 22ರಿಂದ ಮಾ. 1ರ ತನಕ ಸಡಗರ, ಸಂಭ್ರಮದೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿದ್ದು, ತದನಂತರ ಮಾ. 16 ಮತ್ತು ಏ. 13ರಂದು ಮತ್ತೊಮ್ಮೆ ಮಸ್ತಕಾಭಿಷೇಕ ನಡೆದು, ಇದೀಗ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದೊಂದಿಗೆ ಇಂದು ಜರುಗಲಿದೆ.

ನಾರಾವಿ: ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

Article Image

ನಾರಾವಿ: ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಮಾಗಣೆ ಭ|| 1008 ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಮತ್ತು ನಾಡಿನ ಸಮಸ್ತ ಶ್ರೀ ಜೈನ ಮಠದ ಭಟ್ಟಾರಕರುಗಳ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಇಂದಿನಿಂದ(ಮೇ. 3) ಪ್ರಾರಂಭಗೊಂಡು ಮೇ. 5ರತನಕ ಜರುಗಲಿರುವುದು.

ಮೂಡುಬಿದಿರೆ: ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ

Article Image

ಮೂಡುಬಿದಿರೆ: ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜೈನ ಸಮಾಜ ಬಾಂಧವರ ಸಹಕಾರದೊಂದಿಗೆ ಭ| ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆಯು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ವಿದ್ಯಾಗಿರಿಯ ಮೋಹಿನಿ ಅಪ್ಪಾಜಿ ನಾಯಕ್ ಸಭಾಭವನದಲ್ಲಿ ಏ.27 (ನಾಳೆ)ರಂದು ಜರಗಲಿರುವುದು.

ಇಜಿಲಂಪಾಡಿ: ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

Article Image

ಇಜಿಲಂಪಾಡಿ: ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಇಜಿಲಂಪಾಡಿ ಭಗವಾನ್ ೧೦೦೮ ಶ್ರೀ ಅನಂತನಾಥ ಸ್ವಾಮಿ ಬಸದಿಯು ಸಂಪೂರ್ಣ ಶಿಲಾಮಯವಾಗಿ ಜೀಣೋದ್ಧಾರಗೊಂಡು, ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ, ನಾಡಿನ ಎಲ್ಲಾ ಶ್ರೀ ಮಠದ ಪ.ಪೂ. ಭಟ್ಟಾರಕ ಸ್ವಾಮೀಜಿಗಳವರ ಆರ್ಶೀವಾದಗಳೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ, ದಿನಾಂಕ 26-04-2024ನೇ ಶುಕ್ರವಾರ ಮೊದಲ್ಗೊಂಡು ದಿನಾಂಕ 28-04-2024ನೇ ಭಾನುವಾರ ಪರ್ಯಂತ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿರುವುದು.

ಧರ್ಮಸ್ಥಳ: ವಿಷು ಜಾತ್ರೆ ಸಂಪನ್ನ

Article Image

ಧರ್ಮಸ್ಥಳ: ವಿಷು ಜಾತ್ರೆ ಸಂಪನ್ನ

ಬೆಳ್ತಂಗಡಿ, ಏ. 23: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಎ. 13ರಂದು ಮೊದಲ್ಗೊಂಡು ಎ. 23ರಂದು ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿ ಓಕುಳಿಯಾಗಿ ನೇತ್ರಾವತಿ ನದಿಯಲ್ಲಿ ಅವಭೃಥ ಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ಭಕ್ತಿ, ಸಂಭ್ರಮದಿಂದ ವಿಧ್ಯುಕ್ತವಾಗಿ ಸಂಪನ್ನಗೊಂಡಿತು. ಎ.22ರಂದು ರಾತ್ರಿ ಶ್ರೀ ಸ್ವಾಮಿಯ ಮಹಾರಥೋತ್ಸವ ಪ್ರಯುಕ್ತ ದೇವಸ್ಥಾನದ ಒಳಾಂಗಣದಲ್ಲಿ ಉತ್ಸವ ಮೂರ್ತಿಯ ಉಡ್ಕು ಹಾಗೂ ವಿವಿಧ ವಾದ್ಯ ವೈಭವಗಳ ನಾಲ್ಕು ಸುತ್ತು ಬಲಿ ಉತ್ಸವ ನಡೆದು, ಹೊರಾಂಗಣದಲ್ಲಿ ಚೆಂಡೆ, ನಾದಸ್ವರ, ಶಂಖ ಜಾಗಟೆ, ಬ್ಯಾಂಡ್ ವಾಲಗ, ಸರ್ವ ವಾದ್ಯ, ತಟ್ಟಿರಾಯ ಸಹಿತ ಪ್ರದಕ್ಷಿಣೆ ಬಂದು ಬ್ರಹ್ಮ ರಥಕ್ಕೆ ಸುತ್ತು ಪ್ರದಕ್ಷಿಣೆ ಬಂದು ರಥಾರೋಹಣ ನಡೆಯಿತು. ಕ್ಷೇತ್ರದ ಸಕಲ ಬಿರುದಾವಲಿಗಳೊಂದಿಗೆ ಬಸವ, ಎರಡು ಆನೆಗಳು, ಸಹಸ್ರಾರು ಭಕ್ತರು ಮಹೋತ್ಸವದಲ್ಲಿ ಭಾಗಿಗಳಾಗಿದ್ದರು. ರಥಕ್ಕೆ ಭಕ್ತರು ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಸೋನಿಯಾ ವರ್ಮಾ, ಕೆ.ಎನ್.ಜನಾರ್ದನ, ಜನಾರ್ದನ ಎಂ., ಡಾ| ಸತೀಶ್ಚಂದ್ರ ಎಸ್., ಡಾ| ಬಿ.ಎ.ಕುಮಾರ ಹೆಗ್ಡೆ, ಡಾ| ಶ್ರೀನಾಥ್ ಎಂ.ಪಿ., ವೀರು ಶೆಟ್ಟಿ, ಲಕ್ಷ್ಮೀನಾರಾಯಣ ರಾವ್, ಕ್ಷೇತ್ರದ ಅರ್ಚಕವೃಂದ, ಸಿಬ್ಬಂದಿ ಹಾಗೂ ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.

ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ

Article Image

ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಭ| ೧೦೦೮ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಇದೇ ಬರುವ ದಿನಾಂಕ 3, 4 ಮತ್ತು 5 ಮೇ 2024 ರಂದು ವಿಜೃಂಭಣೆಯಿಂದ ಜರಗಲಿರುವುದು. ಈ ಪ್ರಯುಕ್ತ ಜೈನ ಶ್ರಾವಕ, ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳ ವಿವರ ಮತ್ತು ನಿಯಮ 1.ಧರ್ಮನಾಥ ಸ್ವಾಮಿಯ ಸಂಗೀತ/ಭಜನೆ ಸ್ಪರ್ಧೆ ಪ್ರಥಮ ಬಹುಮಾನ : 10,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 8,000 ನಗದು ಮತ್ತು ಸ್ಮರಣಿಕೆ ನಿಯಮಗಳು :- ಧರ್ಮನಾಥ ಸ್ವಾಮಿಯ ಬಗ್ಗೆ ಹಾಡು/ಭಜನೆಯನ್ನು ಒಬ್ಬರೇ ಹಾಡಿ (ಹಿನ್ನೆಲೆ/ಮುನ್ನೆಲೆ) ವಿಡಿಯೋ ಮಾಡಿ ಕಳುಹಿಸಬೇಕು. ಸಾಹಿತ್ಯ ರಚಿಸುವವರು ಮತ್ತು ಗಾಯಕರು ಕಡ್ಡಾಯವಾಗಿ ‌‌ಶ್ರಾವಕ/ಶ್ರಾವಕಿಯರೇ ಆಗಿರಬೇಕು ಮತ್ತು ವಿಡಿಯೋದಲ್ಲಿ ಪ್ರತಿಯೊಬ್ಬರ ಹೆಸರುಗಳನ್ನು ನಮೂದಿಸಬೇಕು. ರಚನೆ ಮತ್ತು ಗಾಯನಕ್ಕೆ ಒಬ್ಬರಿಗೆ ಒಂದೇ ವಿಡಿಯೋಕ್ಕೆ ಮಾತ್ರ ಅವಕಾಶ. ಸಾಹಿತ್ಯ, ಸ್ವರ, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಇತ್ಯಾದಿ ಅಂಶಗಳನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ನಕಲು ಮಾಡಿದ ಅಥವಾ ಈ ಹಿಂದೆ ಪ್ರಕಟವಾದ ಹಾಡು/ಭಜನೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಭಜನೆ/ಸಂಗೀತ ಕನ್ನಡ ಅಥವಾ ಹಿಂದಿ ಭಾಷೆಯಲ್ಲಿರಬೇಕು. 2. ಪ್ರಬಂಧ ಸ್ಪರ್ಧೆ ಪ್ರಥಮ ಬಹುಮಾನ : 3,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 2000 ನಗದು ಮತ್ತು ಸ್ಮರಣಿಕೆ ನಿಯಮಗಳು :- ಪ್ರಬಂಧದ ವಿಷಯ : "ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ". ಪ್ರಬಂಧವು 900 ಶಬ್ದಗಳನ್ನು ಮೀರಬಾರದು. (ಅಂದಾಜು 2 ಪುಟಗಳು) ಪ್ರಬಂಧವನ್ನು ಕನ್ನಡ ನುಡಿಯಲ್ಲಿ ಟೈಪ್ ಮಾಡಿ PDF ಮಾಡಿ ಕಳುಹಿಸಬೇಕು. ವಿಶೇಷ ಸೂಚನೆಗಳು ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ 30 ಎಪ್ರಿಲ್ 2024. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸುವವರು ತಮ್ಮ ಫೋಟೊ, ವಿಳಾಸ, ಹಾಗೂ ಮೊಬೈಲ್ ನಂಬರ್ ನೊಂದಿಗೆ 9481016887 ಈ ವಾಟ್ಸಪ್ ನಂಬರ್ ಗೆ ಅಥವಾ naravibasadi24@gmail.com ಗೆ ಕಳುಹಿಸಬೇಕಾಗಿ ವಿನಂತಿ. ದಿನಾಂಕ 1 ಮೇ 2024 ರಂದು ವಿಜೇತರನ್ನು ಆಯ್ಕೆ ಮಾಡಲಾಗುವುದು ಮತ್ತು ದಿನಾಂಕ 5 ಮೇ 2024 ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಜೇತರನ್ನು ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅತುಲ್ ಎಸ್. ಸೇಮಿತ: 9481016887 ಜ್ಞಾನೇಂದ್ರ ಕುಮಾರ್ ಜೈನ್: 9902799196

ಮೂಡುಬಿದಿರೆ: ಸಾವಿರ ಕಂಬ ಬಸದಿಯ ಕಿರಿಯ ಮತ್ತು ಹಿರಿಯ ರಥೋತ್ಸವ

Article Image

ಮೂಡುಬಿದಿರೆ: ಸಾವಿರ ಕಂಬ ಬಸದಿಯ ಕಿರಿಯ ಮತ್ತು ಹಿರಿಯ ರಥೋತ್ಸವ

ವರ್ಷಂಪ್ರತಿ ಜರುಗುವ ಜಗತ್ಪ್ರಸಿದ್ಧ ತ್ರಿಭುವನ ತಿಲಕ ಚೂಡಾಮಣಿ ಸಾವಿರ ಕಂಬ ಬಸದಿಯ ಕಿರಿಯ ಮತ್ತು ಹಿರಿಯ ರಥೋತ್ಸವವು ಎ. 18ರಿಂದ ಪ್ರಾರಂಭಗೊಂಡಿದ್ದು, ಇಂದು (ಏ.23) ಹಿರಿಯ ರಥೋತ್ಸವ ಮತ್ತು ಶ್ರವಣ ಸಂಸ್ಕೃತಿ ಸಮ್ಮೇಳನ ೧೦೮ ಚಾರಿತ್ರ ಚಕ್ರವರ್ತಿ ಶಾಂತಿಸಾಗರ ಮುನಿಮಹಾರಾಜರ ಆಚಾರ್ಯ ಪದಾರೋಹಣ ಶತಾಬ್ಧಿವರ್ಷ ಆಚರಣೆಯು, ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಪಾವನ ಸಾನಿಧ್ಯ ಮತ್ತು ಆಶೀರ್ವಚನದೊಂದಿಗೆ ಜರಗಲಿರುವುದು.

ಬೆಳ್ತಂಗಡಿ: ಮಹಾವೀರ ಜಯಂತಿ ಆಚರಣೆ, ಚತುರ್ವಿಂಶತಿ ತೀರ್ಥಂಕರರ ಆರಾಧನೆ

Article Image

ಬೆಳ್ತಂಗಡಿ: ಮಹಾವೀರ ಜಯಂತಿ ಆಚರಣೆ, ಚತುರ್ವಿಂಶತಿ ತೀರ್ಥಂಕರರ ಆರಾಧನೆ

ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಇದೇ 21 ರಂದು ಭಾನುವಾರ ಹತ್ತನೆ ವಾರ್ಷಿಕೋತ್ಸವ, ಚತುರ್ವಿಂಶತಿ (ಇಪ್ಪತ್ತನಾಲ್ಕು) ತೀರ್ಥಂಕರರ ಆರಾಧನೆ, ೧೦೮ ಕಲಶಾಭಿಷೇಕ ಹಾಗೂ ಭಗವಾನ್ ಮಹಾವೀರ ಜಯಂತಿ ಆಚರಣೆ ನಡೆಯಲಿದೆ ಎಂದು ಬಸದಿಯ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಏಳು ಗಂಟೆಯಿಂದ ತೋರಣಮುಹೂರ್ತ, ವಿಮಾನಶುದ್ಧಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ. ಪೂರ್ವಾಹ್ನ ಗಂಟೆ 8.45 ರಿಂದ ಸಾಮೂಹಿಕ ಚತುರ್ವಿಂಶತಿ (24) ತೀರ್ಥಂಕರರ ಆರಾಧನೆ ನಡೆಯಲಿದೆ. ಭಗವಾನ್ ಮಹಾವೀರ ಸ್ವಾಮಿಗೆ ನವಕಲಶಾಭಿಷೇಕ, ಭಗವಾನ್ ಶಾಂತಿನಾಥ ಸ್ವಾಮಿಗೆ ೧೦೮ ಕಲಶಗಳಿಂದ ಅಭಿಷೇಕ, ನೂತನ ಗಂಧಕುಟಿಯಲ್ಲಿ 24 ತೀರ್ಥಂಕರರ ಬಿಂಬಗಳ ಸ್ಥಾಪನೆ ನಡೆಯಲಿದೆ. ಅಪರಾಹ್ನ 3.00 ಗಂಟೆಗೆ ಹೊಂಬುಜ ಶ್ರೀ ಜೈನಮಠದ ಪ.ಪೂ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಹಾವೀರ ಜಯಂತಿ ಆಚರಣೆ ಬಗ್ಗೆ ಮಂಗಲ ಪ್ರವಚನ ನೀಡಲಿದ್ದಾರೆ. ಬಳಿಕ ನೂತನ ಘಂಟಾಮಂಟಪ ಹಾಗೂ ಜಲಧಾರ ಲೋಕಾರ್ಪಣೆಗೊಳ್ಳಲಿದೆ.

ಧರ್ಮಸ್ಥಳ: 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Article Image

ಧರ್ಮಸ್ಥಳ: 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ನೆರವೇರುವ ಉಚಿತ ಸಾಮೂಹಿಕ ವಿವಾಹವು ದಿನಾಂಕ 01-05-2024ನೇ ಬುಧವಾರ ಸಂಜೆ ಗಂಟೆ 6.45ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಜರುಗಲಿರುವುದು. ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾಗಲಿಚ್ಛಿಸುವವರು ದಿನಾಂಕ 25-04-2024ನೇ ಗುರುವಾರದ ಒಳಗಾಗಿ ವಧೂ-ವರರ ಹೆಸರು ದಾಖಲು ಮಾಡಿಸುವುದು. ಬರುವಾಗ ಮಂಡಲ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಯಾ ಕಾರ್ಯದರ್ಶಿಯವರಿಂದ ವಧೂ-ವರರ ಹೆಸರು, ಪ್ರಾಯ, ಹಿರಿಯರ ಒಪ್ಪಿಗೆ ಹಾಗೂ ಅವಿವಾಹಿತನೆಂಬುದಕ್ಕೆ ಅವಶ್ಯ ದೃಢಪತ್ರಿಕೆ ಮತ್ತು ವಧೂ-ವರರ ಇತ್ತೀಚಿನ ಭಾವಚಿತ್ರ 1+1 (ಪಾಸ್‌ಪೋರ್ಟ್ ಅಳತೆ) ತರಬೇಕು. ವರನಿಗೆ ಧೋತಿ, ಶಾಲು, ವಧುವಿಗೆ ಸೀರೆ, ರವಿಕೆಕಣ ಮತ್ತು ಮಂಗಲಸೂತ್ರವನ್ನು ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿರುವ ಸಾಮೂಹಿಕ ವಿವಾಹ ನೋಂದಣಿ ಕಚೇರಿಯನ್ನು ಸಂಪರ್ಕಿಸಿ: 9663464648/8147263422/08256 - 266644 ಅರ್ಜಿ ಮತ್ತು ಹೆಚ್ಚಿನ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ: www.shridharmasthala.org ವಿ.ಸೂ.: ಯಾವುದೇ ಸಂದರ್ಭದಲ್ಲಿ ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ.

ನಾರಾವಿ ಮಾಗಣೆ ಬಸದಿಯಲ್ಲಿ ಪೂಜಾ ಕಾರ್ಯಕ್ರಮ

Article Image

ನಾರಾವಿ ಮಾಗಣೆ ಬಸದಿಯಲ್ಲಿ ಪೂಜಾ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕಿನ ನಾರಾವಿ ಮಾಗಣೆ ಭ| ೧೦೦೮ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಏ.15(ನಾಳೆ )ರಂದು ಶ್ರೀ ಸ್ವಾಮಿಯ ಜಿನ ಬಿಂಬಕ್ಕೆ "ವಜ್ರ ಲೇಪನಾ "ಪ್ರಕ್ರಿಯೆ ಜರುಗಲಿರುವುದು. ಆ ಪ್ರಯುಕ್ತ ಬೆಳಿಗ್ಗೆ 8 ಗಂಟೆಯಿಂದ "ಚೌವ್ವೀಸ ತೀರ್ಥಂಕರ"ರ ಸಾಮೂಹಿಕ ಆರಾಧನಾ ಪೂಜಾ ವಿಧಾನ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Article Image

ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ ತಾಲೂಕಿನ ವೇಣೂರಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. “ಭಾರತ ಭೂಷಣ” ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಏ. 13ರಂದು ಜರಗಲಿರುವುದು. ನಿರೀಕ್ಷಾ ಜೈನ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿ. ಸೂ.: ವಿವಿಧ ದ್ರವ್ಯಗಳ ಅಭಿಷೇಕ ಮತ್ತು ಜಲಾಭಿಷೇಕ ಮಾಡಲಿಚ್ಚಿಸುವ ಧರ್ಮ ಬಂಧುಗಳು ಯಾತ್ರಿನಿವಾಸದಲ್ಲಿರುವ ಕಚೇರಿ ದೂರವಾಣಿ: 9606356288ನ್ನು ಸಂಪರ್ಕಿಸಬಹುದು.

ಶ್ರೀ ಕ್ಷೇತ್ರ ಕತ್ತೋಡಿಯಲ್ಲಿ ಸಂಕ್ರಮಣ

Article Image

ಶ್ರೀ ಕ್ಷೇತ್ರ ಕತ್ತೋಡಿಯಲ್ಲಿ ಸಂಕ್ರಮಣ

ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಶ್ರೀ ಕ್ಷೇತ್ರ ಕತ್ತೋಡಿಯ ಶಿವಭುವನೇಶ್ವರಿ ದೇಗುಲದಲ್ಲಿ ಮೇಷ ಸಂಕ್ರಮಣವು ಏ.13ರಂದು ನಡೆಯಲಿದೆ. ವಿ. ಸೂ.: ತುಪ್ಪದ ಸೇವೆ, ಹೂವಿನ ಪೂಜೆ ಹಾಗೂ ಮತ್ತಿತರ ಸೇವೆಗಳು ಇರಲಿದೆ. ಈ ಎಲ್ಲಾ ಸೇವೆಗಳನ್ನು ಮಾಡಲಿಚ್ಚಿಸುವವರು ಧರ್ಮದರ್ಶಿಗಳು: 94449714337 ನ್ನು ಸಂಪರ್ಕಿಸಬಹುದು.

ಭಾರತೀಯ ಜೈನ್ ಮಿಲನ್ ಕಾರ್ಕಳ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

Article Image

ಭಾರತೀಯ ಜೈನ್ ಮಿಲನ್ ಕಾರ್ಕಳ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ : ಭಾರತೀಯ ಜೈನ್ ಮಿಲನ್ ಕಾರ್ಕಳ ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಾಹುಬಲಿ ಅರ್ಥ್ ಮೂವರ್ಸ್ ಮಾಲಕ ಅಶೋಕ್ ಎಚ್. ಎಂ., ಕಾರ್ಯದರ್ಶಿಯಾಗಿ ವಕೀಲ ವಿಖ್ಯಾತ್ ಜೈನ್ ಆಯ್ಕೆಯಾಗಿದ್ದಾರೆ. ಎ. 7ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅರ್ಥ್ ಮೂವರ್ಸ್ ಯೂನಿಯಾನ್ ಕಾರ್ಯದರ್ಶಿಯಾಗಿರುವ ಅಶೋಕ್ ಅವರು ಈ ಹಿಂದೆ ಜೈನ್ ಮಿಲನ್ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ವಿಖ್ಯಾತ್ ಅವರು ಜೈನ್ ಯುವ ಬ್ರಿಗೇಡ್ ಸಂಚಾಲಕರಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಮತ್ ಕುಮಾರ್ ಬಂಗ ಹಾಗೂ ಖಜಾಂಚಿಯಾಗಿ ಸುರೇಶ್ ಇಂದ್ರ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಜೈನ ಜೀರ್ಣೋದ್ದಾರ ಸಂಘದ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್, ಕಾರ್ಯದರ್ಶಿ ಎಂ. ಕೆ. ವಿಜಯ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಅನಂತನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ

Article Image

ಶ್ರೀ ಅನಂತನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ

ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿ ಭಗವಾನ್ ೧೦೦೮ ಶ್ರೀ ಅನಂತನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ 09-04-2024ನೇ ಮಂಗಳವಾರ ಮೊದಲ್ಗೊಂಡು 15-04-2024ನೇ ಸೋಮವಾರ ಪರ್ಯಂತ ನಡೆಯಲಿದೆ. 14-04-2024ನೇ ಭಾನುವಾರ ಮಹಾರಥಯಾತ್ರಾ ಮಹೋತ್ಸವ ಜರಗಲಿರುವುದು.

ಬೈಪಾಡಿ : ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ

Article Image

ಬೈಪಾಡಿ : ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ

ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬೈಪಾಡಿಯಲ್ಲಿರುವ ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ ಮತ್ತು ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ 1008 ಶ್ರೀ ಶಾಂತಿನಾಥ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ನೇತೃತ್ವದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಎ. 1 ರಂದು ಪ್ರಾರಂಭಗೊಂಡು ಎ.3ರ ತನಕ ನೆರವೇರಲಿರುವುದು.

ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವಾರ್ಷಿಕ ರಥಯಾತ್ರಾ ಮಹೋತ್ಸವ

ನರಸಿಂಹರಾಜಪುರ, ಶ್ರೀಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಪ.ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮಾ.31ರಂದು ಪ್ರಾರಂಭಗೊಂಡು ಎ. 4ರವರೆಗೆ ಜರಗಲಿದೆ.

ವಾಲ್ಪಾಡಿ ಗ್ರಾಮದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

Article Image

ವಾಲ್ಪಾಡಿ ಗ್ರಾಮದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

ದ.ಕ ಜಿಲ್ಲೆಯ ಮೂಡಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಮೂಡಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ನೇತೃತ್ವ ಮತ್ತು ಪಾವನ ಸಾನ್ನಿಧ್ಯದಲ್ಲಿ, ಮಂಡ್ಯ ಶ್ರೀ ಕ್ಷೇತ್ರ ಆರತಿಪುರದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಗೌರವ ಉಪಸ್ಥಿತಿಯೊಂದಿಗೆ ಮಾ.28ರಿಂದ ಮೊದಲ್ಗೊಂಡು ಮಾ.30ರವರೆಗೆ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಜರಗಲಿರುವುದು.

ವೇಣೂರು : ಮಾ. 25ರಂದು ಭಗವಾನ್‌ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆ

Article Image

ವೇಣೂರು : ಮಾ. 25ರಂದು ಭಗವಾನ್‌ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆ

ಬೆಳ್ತಂಗಡಿ ತಾಲೂಕಿನ ವೇಣೂರಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ಇತ್ತೀಚೆಗೆ ಸಂಪನ್ನಗೊಂಡಿದ್ದು, ಇದೀಗ ಮಾ. 25ರಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ದಿನವಾಗಿದ್ದು, ಆ ಪ್ರಯುಕ್ತ ನಾಳೆ (ಮಾ. 25)ರಂದು ಸಾಯಂಕಾಲ ಗಂಟೆ 6.00ರಿಂದ ಭ|| ಶ್ರೀ ಬಾಹುಬಲಿ ಸ್ವಾಮಿಗೆ ೫೪ ಕಲಶಗಳಿಂದ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆಯು ನೆರವೇರಲಿದೆ ಎಂದು ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಪ್ರಕಟಣೆ ತಿಳಿಸಿದೆ.

ದರೆಗುಡ್ಡೆ: ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ

Article Image

ದರೆಗುಡ್ಡೆ: ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ

ದ.ಕ.ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕೆಲ್ಲಪುತ್ತಿಗೆ- ದರೆಗುಡ್ಡೆ ಗ್ರಾಮದ ಭಗವಾನ್ ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ ಮತ್ತು ಅಷ್ಟಮ ನಂದೀಶ್ವರದ ಐವತ್ತೆರಡು ನೂತನ ಜಿನ ಬಿಂಬಗಳಿಗೆ ಮಹಾಭಿಷೇಕವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಮತ್ತು ಆಶೀರ್ವಚನದೊಂದಿಗೆ ಮಾ.24 ರಂದು ನೆರವೇರಲಿರುವುದು.

ಮಾ. 24 : ಕಣ್ಣಿನ ಉಚಿತ ತಪಾಸಣೆ - ಪೊರೆ ಶಸ್ತ್ರಚಿಕಿತ್ಸಾ ಶಿಬಿರ

Article Image

ಮಾ. 24 : ಕಣ್ಣಿನ ಉಚಿತ ತಪಾಸಣೆ - ಪೊರೆ ಶಸ್ತ್ರಚಿಕಿತ್ಸಾ ಶಿಬಿರ

ಕಾರ್ಕಳ : ಜಿನವಾಣಿ ಮಹಿಳಾ ಸಂಘ ದಾನಶಾಲೆ ಮತ್ತು ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಾ. 24ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಕಳ ಜೈನ ಮಠದ ಬಳಿಯಿರುವ ಸಭಾಂಗಣದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ: 9880015655 (ಸುಮನಾಜಿ), 9844511211 (ಹರ್ಷ) ಅಥವಾ 9591918216 (ವಿಶುಕುಮಾರ್) ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಡುಬಿದ್ರೆ: ಗುರುಗಳ ಬಸದಿಯ ಎಂಟನೇಯ ವಾರ್ಷಿಕೋತ್ಸವ

Article Image

ಮೂಡುಬಿದ್ರೆ: ಗುರುಗಳ ಬಸದಿಯ ಎಂಟನೇಯ ವಾರ್ಷಿಕೋತ್ಸವ

ಮೂಡುಬಿದ್ರೆ ಗುರುಗಳ ಬಸದಿ ಭಗವಾನ್ ಶ್ರೀ 1008 ಪಾರ್ಶ್ಶ್ವನಾಥ ಸ್ವಾಮಿ ತೀರ್ಥಂಕರ ಬಸದಿಯ ಎಂಟನೇಯ ವಾರ್ಷಿಕೋತ್ಸವವು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ನೇತೃತ್ವ, ಪಾವನ ಸಾನಿಧ್ಯದಲ್ಲಿ ಮಾ.16 ಜರುಗಿತು. ಕಾರ್ಯಕ್ರಮದ ಅಂಗವಾಗಿ ತೋರಣ ಮಹೂರ್ತ, ನಾಗ ಕ್ಷೇತ್ರಪಾಲ ಪೂಜೆ, ಶ್ರೀ ಸರಸ್ವತಿ ಪೂಜೆ, ಪದ್ಮಾವತಿ ಯಕ್ಷಿ ಷೋಡಶೋಪಚಾರ ಪೂಜೆ, ಬ್ರಹ್ಮ ದೇವರ ಪೂಜೆ, ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿತು. ಆಶೀರ್ವಚನ ನೀಡಿದ ಪ.ಪೂ ಸ್ವಾಮೀಜಿಗಳವರು ಇಂದಿನಿಂದ ಜೈನರ ಎಂಟು ದಿನಗಳ ಪಾಲ್ಗುಣ ಮಾಸದ ಪರ್ವ ಅಷ್ಟಮ ನಂದಿಶ್ವರ ದ್ವೀಪಗಳ ಐವತ್ತ ಎರಡು ಜಿನಲಾಯಗಳ ಅಕೃತಿಮ ಜಿನ ಮಂದಿರ ಪೂಜೆ ನೆರವೇರಲಿದೆ. ಪ್ರಾರಂಭದ ದಿನ ಗುರು ಬಸದಿ ವಾರ್ಷಿಕೋತ್ಸವದ ನಿಮಿತ್ತ ಜಿನ ಭಗವಂತರ ಕೇವಲ ಜ್ಞಾನದಿಂದ ಪಡೆದ ದಿವ್ಯ ಸಂದೇಶ ತಿಳಿದುಕೊಳ್ಳಲು ಪ್ರಯತ್ನ ಮಾಡುವ ದಿನ ಲೋಕಕಲ್ಯಾಣ ಭಾವನೆಯಿಂದ ಜಿನ ಭಗವಂತ ನೀಡಿದ ಸಂದೇಶ ಅಳವಡಿಸಿ ಜೀವನ ಪಾವನವಾಗುವುದು ಎಂದರು ಹಾಗೂ ಪೂಜಾ ಸೇವಾದಾತರನ್ನು ಹರಸಿ ಆಶೀರ್ವಾದ ಮಾಡಿದರು. ಬಸದಿ ಮೋಕ್ತೆಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್, ಮಂಜುಳಾ ಅಭಯ ಚಂದ್ರ ಜೈನ್, ವೀಣಾ ರಘುಚಂದ್ರ ಶೆಟ್ಟಿ, ಬಿ.ವಿಮಲ್ ಕುಮಾರ್, ವೀರೇಂದ್ರ ಕುಮಾರ್, ವೀರೇಂದ್ರ ಇಂದ್ರ, ಶ್ರೀನಾಥ್ ಬಲ್ಲಾಳ್, ಎಸ್. ಪಿ. ವಿದ್ಯಾಕುಮಾರ್, ಜ್ಞಾನ ಚಂದ್ರ, ಅಜಿತ್ ಪ್ರಸಾದ್, ನವೀನ್ ಲಂಡನ್ ಉಪಸ್ಥಿತರಿದ್ದರು. ವ್ಯವಸ್ಥಾಪಕ ಸಂಜಯಂತ ಕುಮಾರ್ ವಂದಿಸಿದರು.

ಲೋಕ ಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ

Article Image

ಲೋಕ ಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ

ಶಿಶಿಲದ ಚಂದ್ರಪುರ ಭಗವಾನ್ ಶ್ರೀ, ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ ನಡೆಯಿತು. ಕಾರ್ಕಳ ಜೈನಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಅಮ್ಮನವರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ನಡೆಯಿತು. ಶಶಿಪ್ರಭ ಉಜಿರೆ, ಚಂಚಲ ಕೃಷ್ಣರಾಜ ಧರ್ಮಸ್ಥಳ, ಶಕುಂತಲಾ ಡಾ. ಜಯಕೀರ್ತಿ ಜೈನ್, ಶೋಭಾ ಸಂತೋಷ್ ಜೈನ್, ಚಂದನ ವೃಷಭ, ವಿಮಲ ವಿಜಯ್ ಕುಮಾರ್, ಶಾಂತಿ ರಾಜೇಂದ್ರ ಕುಮಾರ್ ಮುಡಾರು, ಪ್ರೇಮ ವಸಂತ್ ಕುಮಾರ್ ಉಜಿರೆ, ರೇಷ್ಮಾ ಫಣಿರಾಜ್, ಸುರಭಿ ಶಿರ್ತಾಡಿ ಹಾಗೂ ಆಡಳಿತ ಮಂಡಳಿ ಜಯಕುಮಾರ್ ಮತ್ತಿತರರು ಪೂಜೆ ನೆರವೇರಿಸಿದರು. ಪ್ರಧಾನ ಪುರೋಹಿತರಾಗಿ ಪ್ರತಿಷ್ಠಾಚಾರ್ಯ ಜಯರಾಜ್ ಇಂದ್ರ ಬೆಳ್ತಂಗಡಿ, ಅರಹಂತ ಇಂದ್ರ ಶಿಶಿಲ, ಕೀರ್ತಿ ಇಂದ್ರ ಬೈಲಂಗಡಿ, ಚಿತ್ತರಂಜನ್ ಶಿರ್ತಾಡಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಾಲ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಸಹಕರಿಸಿದರು.

ಇಂದು ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Article Image

ಇಂದು ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ವೇಣೂರು [ರಿ]. ವತಿಯಿಂದ ಇಂದು ಸಂಜೆ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಜರಗಲಿರುವುದು. ಫೆ.22 ರಿಂದ ಮಾ. 01ರವರೆಗೆ ಜರಗಿದ ಮಹಾಮಸ್ತಕಾಭಿಷೇಕದ ಯಶಸ್ವಿಗೆ ಸಹಕರಿಸಿದ ಶ್ರಾವಕ ಶ್ರಾವಕಿಯರ ಅಭಿನಂದನಾ ಕಾರ್ಯಕ್ರಮವು ಮೂಡಬಿದ್ರೆ ಶ್ರೀ ಜೈನ ಮಠದ ಪರಮಪೂಜ್ಯ ‘ಭಾರತಭೂಷಣ' ಜಗದ್ಗುರು ಸ್ವಸಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಅಧ್ಯಕ್ಷತೆಯಲ್ಲಿ, ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್‌ರವರ ಗೌರವ ಉಪಸ್ಥಿತಿಯಲ್ಲಿ, ಅಪರಾಹ್ನ ಗಂಟೆ 3-30 ಕ್ಕೆ ಶ್ರೀ ಭರತೇಶ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಜೆ 5-00 ರಿಂದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಕೊಡಮಣಿತ್ತಾಯ ದೈವ ಹಾಗೂ ಕಲ್ಕುಡ-ಕಲ್ಲುರ್ಟಿ ದೈವಗಳ ಭಂಡಾರಗಳ ಆಗಮನ. 6-00 ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಜಲಾಭಿಷೇಕ ಪ್ರಾರಂಭ. ರಾತ್ರಿ 7-00 ರಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗ ಪೂಜೆ, 7-30 ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ವಿವಿಧ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ, 8-00 ರಿಂದ ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಕುಡ ಕಲ್ಲುರ್ಟಿ ದೈವಗಳ ನೇಮ. ಈ ಎಲ್ಲ ಕಾರ್ಯಕ್ರಮಗಳು ಜರಗಲಿದೆ. ವಿ.ಸೂ: ಶ್ರಾವಕ ಬಂಧುಗಳು ರೂ.3000. ರೂ.5000, ರೂ.10000 ಕಲಶಗಳನ್ನು ಪಡೆದು ಅಭಿಷೇಕ ಮಾಡಬಹುದು. ದ್ರವ್ಯಾಬಿಷೇಕ ಮಾಡಲಿಚ್ಚಿಸುವ ಬಂಧುಗಳು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು. ಮೊ: 9606356288

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನ ಮಂದಿರಕ್ಕೆ ಪೂಜ್ಯ ಹೆಗ್ಗಡೆಯವರ ಭೇಟಿ

Article Image

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನ ಮಂದಿರಕ್ಕೆ ಪೂಜ್ಯ ಹೆಗ್ಗಡೆಯವರ ಭೇಟಿ

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಆಡಳಿತ ಮಂಡಳಿಯ ಪದಾಧಿಕಾರಿಗಳೊಂದಿಗೆ ಜಿನಮಂದಿರದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಡಾ. ಕೆ. ಜಯಕೀರ್ತಿ ಜೈನ್, ವಿಜಯ ಕುಮಾರ್, ಯುವರಾಜ್ ಪೂವಣಿ, ಫಣಿರಾಜ್ ಜೈನ್, ಜಿನರಾಜ್ ಪೂವಣಿ, ರಾಜೇಂದ್ರ ಕುಮಾರ್, ಪಿ. ಏನ್. ರವಿರಾಜ್, ಸಂತೋಷ ಜೈನ್, ವೀರೇಂದ್ರ ಕುಮಾರ್, ಜಿತೇoದ್ರ, ಸುದೀಂದ್ರ ಗುಣವರ್ಮ ಜೈನ್, ಅಜಿತ್ ಕುಮಾರ್, ಶ್ರೀ ಪಾರ್ಶ್ವ ಹಾಗೂ ಶಿಶುಗಲಿ ರಾಣಿ ಕಾಳಲಾ ದೇವಿ ಜೈನ ಮಹಿಳಾ ಸಮಾಜದ ನಾಗಕನ್ನಿಕಾ, ಶಕುಂತಲಾ ಜೈನ್, ವತ್ಸಲಾ, ಅಪೂರ್ವ, ವಿಮಲಾ, ಮಂಜುಳಾ, ಶೋಭಾ, ಸುರಭಿ, ಚಂಪಾ ಮುಂತಾದವರು ಉಪಸ್ಥಿತರಿದ್ದರು.

ವಾರ್ಷಿಕೋತ್ಸವ

Article Image

ವಾರ್ಷಿಕೋತ್ಸವ

ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಚಂದ್ರಪುರದ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಜಿನಮಂದಿರದ ವಾರ್ಷಿಕೋತ್ಸವವು ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಮತ್ತು ರಾಜಸ್ಥಾನ ತೀಜಾರ ಸಂಸ್ಥಾನ ಮಠದ ಪ.ಪೂ. ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಪ್ರೇರಣೆ, ಮಾರ್ಗದರ್ಶನದೊಂದಿಗೆ ಮಾ.11ರಂದು ನೆರವೇರಲಿರುವುದು.

ದ.ಕ.ಜಿಲ್ಲಾ ಪಶುವೈದ್ಯಕೀಯ ಪರೀಕ್ಷಕರ ಸಂಘದಿಂದ ಸೇವಾ ನಿವೃತ್ತಿಗೊಂಡ ಡಾ.ಕೆ.ಜಯಕೀರ್ತಿ ಜೈನ್ ಅವರಿಗೆ ಸನ್ಮಾನ

Article Image

ದ.ಕ.ಜಿಲ್ಲಾ ಪಶುವೈದ್ಯಕೀಯ ಪರೀಕ್ಷಕರ ಸಂಘದಿಂದ ಸೇವಾ ನಿವೃತ್ತಿಗೊಂಡ ಡಾ.ಕೆ.ಜಯಕೀರ್ತಿ ಜೈನ್ ಅವರಿಗೆ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ಪಶುವೈದ್ಯಕೀಯ ಪರಿಕ್ಷಕರ ಸಂಘದಿಂದ ಜಿಲ್ಲಾ ಸಂಘದ ಅಧ್ಯಕ್ಷ ರಾಗಿ 30 ವರ್ಷ ಸೇವೆ ಸಲ್ಲಿಸಿದ ಡಾ.ಕೆ. ಜಯಕೀರ್ತಿ ಜೈನ್ ಅವರನ್ನು ಪಶು ಸಂಗೋಪನೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಡಾ.ಅರುಣ್ ಕುಮಾರ್ ಶೆಟ್ಟಿ ಯವರು ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಮಂಗಳೂರಿನಲ್ಲಿ ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣಮೂರ್ತಿ.ಜಿ. ವಹಿಸಿದ್ದರು. ಈ ಸಂದರ್ಭದಲ್ಲಿ ಪುಷ್ಪರಾಜ್ ಶೆಟ್ಟಿ, ಪ್ರಶಾಂತ್ ಕುಮಾರ್, ಶ್ರೀಮಂದರ ಜೈನ್, ಮೋಹನ್ ದಾಸ್, ಡಾ. ವಸಂತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ : ಪಾದಯಾತ್ರಿಗಳಿಗೆ ಸನ್ಮಾನ

Article Image

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ : ಪಾದಯಾತ್ರಿಗಳಿಗೆ ಸನ್ಮಾನ

ಧರ್ಮಸ್ಥಳ,ಮಾ.7: ಶಿವರಾತ್ರಿ ಎಂಬುದು ತಾಳ್ಮೆ. ಸಂಯಮ, ಜಾಗರಣೆ, ಉಪವಾಸ, ವ್ರತ - ನಿಯಮಗಳ ಪಾಲನೆಯೊಂದಿಗೆ ಪಂಚೇಂದ್ರಿಯಗಳ ನಿಯಂತ್ರಣ ಮಾಡಿ ಎಲ್ಲರಿಗೂ ಮಾನಸಿಕ ಪರಿವರ್ತನೆಯ ಶುಭರಾತ್ರಿಯಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ ಕಳೆದ 45 ವರ್ಷಗಳಿಂದ ಶಿವರಾತ್ರಿ ಸಂದರ್ಭ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರತಿವರ್ಷ ಪಾದಯಾತ್ರೆಯನ್ನು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಆಯೋಜಿಸುತ್ತಿರುವ ಹನುಮಂತಪ್ಪ ಸ್ವಾಮೀಜಿ ಮತ್ತು ಅವರ ಶಿಷ್ಯರನ್ನು ಗೌರವಿಸಿ ಅಭಿನಂದಿಸಿದರು. ಮುಂದೆ ನಿರ್ಧಿಷ್ಠ ಗುರಿ ಮತ್ತು ಹಿಂದೆ ಆದರ್ಶ ಗುರು ಇದ್ದಾಗ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಪಾದಯಾತ್ರೆಯಲ್ಲಿ ಶ್ರದ್ಧಾ - ಭಕ್ತಿಯಿಂದ ಭಗವಂತನ ನಾಮಸ್ಮರಣೆಯೊಂದಿಗೆ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ತ್ಯಾಗ ಮನೋಭಾವ ಮತ್ತು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಯುವಜನರು ಹೆಚ್ಚಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಚಲನಚಿತ್ರ ನಿರ್ದೇಶಕ ಶಶಿಕುಮಾರ್, ನಾಗರಾಜ ರೆಡ್ಡಿ, ಕಮಲಾ. ಮೋಹನ ಗೌಡ, ಚಂದ್ರಪ್ಪ, ಹನುಂತರಾಯಪ್ಪ, ನರಸಿಂಹಪ್ಪ ಮತ್ತು ಮರಿಯಪ್ಪ ಅವರನ್ನು ಸನ್ಮಾನಿಸಲಾಯಿತು. ಪಾದಯಾತ್ರಿಗಳ ಕ್ಷೇತ್ರದರ್ಶನ ಸುಗಮವಾಗಲು ಸಹಕರಿಸಿದ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಅವರನ್ನು ಪಾದಯಾತ್ರಿಗಳ ಪರವಾಗಿ ಗೌರವಿಸಲಾಯಿತು.

ಶಿವನಾಮ ಸ್ಮರಣೆಯಿಂದ ಸಕಲದೋಷಗಳ ಪರಿಹಾರ

Article Image

ಶಿವನಾಮ ಸ್ಮರಣೆಯಿಂದ ಸಕಲದೋಷಗಳ ಪರಿಹಾರ

ಧರ್ಮಸ್ಥಳ,ಮಾ. 8: ನೀನೊಲಿದರೆ ಕೊರಡು ಕೊನರುವುದು, ವಿಷವೂ ಅಮೃತವಾಗುವುದು ಎಂಬಂತೆ ಪರಿಶುದ್ಧ ಮನದಿಂದ ಶಿವರಾತ್ರಿಯ ಶುಭರಾತ್ರಿಯಲ್ಲಿ ಶಿವನಾಮ ಸ್ಮರಣೆ ಮಾಡಿದರೆ ಸಕಲದೋಷಗಳ ಪರಿಹಾರವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ಶಿವನಾಮ ಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಎಲ್ಲಾ ಮನೋವಿಕಾರಗಳನ್ನು ದೂರಮಾಡಿ ಸಕಲ ಜೀವಿಗಳಿಗೆ ಲೇಸನ್ನೆ ಬಯಸಿ ಉನ್ನತ ಸಾಧನೆ ಮಾಡಬೇಕು. ಶಿವನ ಜೊತೆಗೆ ಶಿವಭಕ್ತರ ಸೇವೆ ಮಾಡಿದರೂ ಪುಣ್ಯ ಬರುತ್ತದೆ ಎಂದು ಅವರು ಹೇಳಿದರು. ಮಹಿಳೆಯರನ್ನು ಗೌರವದಿಂದ ಕಾಣಬೇಕು. ಅವರು ನೊಂದು ಕಣ್ಣೀರು ಹಾಕಿದರೂ ಅದು ಶಾಪವಾಗಿ ಪರಿಣಮಿಸುತ್ತದೆ. ಹಿತ-ಮಿತ, ಸುಮಧುರ ಮಾತುಗಳನ್ನಾಡಬೇಕು. ಮಾತೇ ಮಾಣಿಕ್ಯ. ಮಾತು ಬಿಡ ಮಂಜುನಾಥ ಎಂಬ ಮಾತನ್ನು ಎಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಮನ, ವಚನ, ಕಾಯದಿಂದ ಪರಿಶುದ್ಧ, ದೃಢಸಂಕಲ್ಪ ಮತ್ತು ಪರಿಶುದ್ಧ ಭಕ್ತಿಯಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಿ ಉನ್ನತ ಸಾಧನೆ ಮಾಡಬಹುದು. ಶಿವರಾತ್ರಿ ಒಂದೇ ರಾತ್ರಿಗೆ ಸೀಮಿತವಾಗದೆ ಪ್ರತಿ ರಾತ್ರಿಯೂ ಶಿವರಾತ್ರಿಯಾಗಿ, ಶುಭರಾತ್ರಿಯಾಗಿ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸಲೆಂದು ಅವರು ಹಾರೈಸಿದರು. ಬಳಿಕ ಡಾ. ಪವನ್ ಸಂಪಾದಿಸಿದ “ವೈದ್ಯಾಮೃತ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಪಾದಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ, ಮರಿಯಪ್ಪ ಉಪಸ್ಥಿತರಿದ್ದರು. ಶಿವರಾತ್ರಿ ಪ್ರಯುಕ್ತ ಆಹೋರಾತ್ರಿ ಜಾಗರಣೆಯಿಂದಾಗಿ ಧರ್ಮಸ್ಥಳ ಅನ್ನಛತ್ರದ ಸೇವೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಭಕ್ತರು ಭಕ್ತರಿಗಾಗಿ ವಿವಿಧ ಉಪಾಹಾರ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ. ಈ ಬಾರಿ ಧರ್ಮಸ್ಥಳದಲ್ಲಿ ಧರ್ಮಶಾಸ್ತ ಅನ್ನದಾನ ಸಮಿತಿ, ಶ್ರೀ ಪಾಪಣ್ಣ ಗೆಳೆಯರ ಬಳಗ, ತಿಮ್ಮಾರೆಡ್ಡಿ, ಯಲಹಂಕ, ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಅನ್ನಸಂತರ್ಪಣಾ ಸಮಿತಿ, ನಾಗರಬಾವಿ, ಬೆಂಗಳೂರು, ಜನಜಾಗೃತಿ ವೇದಿಕೆ, ಹೊಸಪೇಟೆ, ವಿಜಯನಗರ, ಶ್ರೀ ಮಂಜುನಾಥ ಸ್ವಾಮಿ ಸೇವಾ ಸಮಿತಿ, ಬೆಂಗಳೂರು ಇನ್ನು ಹಲವಾರು ಸಂಘಟನೆಗಳು ಸೇರಿ ಶುಕ್ರವಾರ ರಾತ್ರಿ ಭಕ್ತರಿಗೆ ಉಪಾಹಾರ ನೀಡಿದರು.

First Previous

Showing 3 of 5 pages

Next Last