Article Image

ಧರ್ಮಸ್ಥಳದಲ್ಲಿ 26ನೆ ವರ್ಷದ ಭಜನಾ ತರಬೇತಿ: ಸಮಾರೋಪ ಸಮಾರಂಭ

Article Image

ಧರ್ಮಸ್ಥಳದಲ್ಲಿ 26ನೆ ವರ್ಷದ ಭಜನಾ ತರಬೇತಿ: ಸಮಾರೋಪ ಸಮಾರಂಭ

ಉಜಿರೆ: ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಡದ ಸೇವೆ ಇಲ್ಲ. ಗ್ರಾಮಾಭಿವೃದ್ಧಿ, ಆರೋಗ್ಯ, ಶಿಕ್ಷಣ, ದೇವಸ್ಥಾನಗಳ ಜೀರ್ಣೋದ್ಧಾರ, ಶುದ್ಧನೀರಿನ ಘಟಕಗಳು, ಕೆರೆಗಳ ಪುನಶ್ಚೇತನ, ಮಹಿಳಾ ಸಬಲೀಕರಣ, ಜನಜಾಗೃತಿ ವೇದಿಕೆ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಇತ್ಯಾದಿ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ ಎಂದು ಕುಂದಗೋಳ ಕಲ್ಯಾಣಪುರ ಮಠದ ಪೂಜ್ಯ ಬಸವಣ್ಣಜ್ಜನವರು ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ 26ನೆ ವರ್ಷದ ಭಜನಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಭಜನಾ ಸಂಸ್ಕ್ರತಿಯಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕ್ರತಿಯ ರಕ್ಷಣೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ನಶಿಸಿ ಹೋಗುತ್ತಿರುವ ಭಜನಾ ಸಂಸ್ಕ್ರತಿಗೆ ನವಚೈತನ್ಯದೊಂದಿಗೆ ಜೀವಕಳೆ ನೀಡಿ ರಾಗ, ತಾಳ, ಲಯಬದ್ಧವಾಗಿ ಶಿಸ್ತಿನಿಂದ ಹೇಗೆ ಭಜನೆ ಮಾಡಬೇಕೆಂದು ಅವರು ಕಳೆದ 25 ವರ್ಷಗಳಿಂದ ತರಬೇತಿ ನೀಡಿ ವಿಶಿಷ್ಟ ಭಜನಾಪಟುಗಳನ್ನು ರೂಪಿಸಿದ್ದಾರೆ. ಇವರು ಧರ್ಮ ಮತ್ತು ಸಂಸ್ಕ್ರತಿಯ ಸಂರಕ್ಷಣೆಯ ರೂವಾರಿಗಳಾಗಿ ಆರೋಗ್ಯಪೂರ್ಣ ಸಮಾಜ ರೂಪಿಸಬೇಕೆಂದು ಸ್ವಾಮೀಜಿ ಸಲಹೆ ನೀಡಿದರು. ಸಂಸದ ಬ್ರಿಜೇಶ್ ಚೌಟ ಶುಭಾಶಂಸನೆ ಮಾಡಿ, ಭಜನೆಯಿಂದ ನಮ್ಮ ಭವ್ಯ ಪರಂಪರೆ ಮತ್ತು ಸಂಸ್ಕ್ರತಿಯನ್ನು ರಕ್ಷಿಸಬಹುದು. ತರಬೇತಿ ಪಡೆದ ಭಜನಾಪಟುಗಳು ಅವರವರ ಊರಿನಲ್ಲಿ ಭಜನಾ ಸಂಸ್ಕ್ರತಿಯನ್ನು ಮುಂದುವರಿಸಬೇಕೆಂದು ಸಲಹೆ ನೀಡಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ಭಾಷಣದ ಬದಲು ಭಜನೆಯೊಂದನ್ನು ಸುಶ್ರಾವ್ಯವಾಗಿ ಹಾಡಿದರು. ಶಾಸಕ ಹರೀಶ್ ಪೂಂಜ ಮಾತನಾಡಿ, ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಭಜನಾ ಸಂಸ್ಕ್ರತಿಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ಮುಂದೆ ತಾನು ಭಾಗವಹಿಸುವ ಎಲ್ಲಾ ಸಭೆ-ಸಮಾರಂಭಗಳಲ್ಲಿ ಭಜನೆಯ ಮಹತ್ವದ ಬಗ್ಗೆಯೂ ಉಲ್ಲೇಖಿಸುವುದಾಗಿ ತಿಳಿಸಿದರು. ರಾಸಾಯನಿಕಗಳನ್ನು ಬಳಸಿ ಬೆಳೆಸಿದ ವಿಷಪೂರಿತ ಆಹಾರಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳು ಇರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಸಾಧ್ಯವಾದಷ್ಟು ನಾವು ಹೊಲ, ತೋಟಗಳಲ್ಲಿ ಭತ್ತ, ತರಕಾರಿಗಳನ್ನು ಬೆಳೆಸಿ ಬಳಸಬೇಕೆಂದು ಅವರು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಎಲ್ಲರೂ ಅಂತರಂಗ ಮತ್ತು ಬಹಿರಂಗ ಶುದ್ಧಿಯೊಂದಿಗೆ ಭಜನೆ ಮಾಡಿದಾಗ ಆತ್ಮಶುದ್ಧಿಯಾಗುತ್ತದೆ. ಮಾನಸಿಕ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. ಭಜನೆ ಮಾಡುವವರು ಎಂದೂ ದುಶ್ಚಟಗಳಿಗೆ ಬಲಿಯಾಗದೆ ಆದರ್ಶ ಹಾಗೂ ಸಾರ್ಥಕ ಜೀವನ ನಡೆಸಬೇಕೆಂದು ಹೇಳಿ ಶುಭ ಹಾರೈಸಿದರು. ಶಿಬಿರಾರ್ಥಿಗಳ ಪರವಾಗಿ ಉಮೇಶ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಭಜನಾಕಮ್ಮಟದ ಕಾರ್ಯದರ್ಶಿ ಎ.ವಿ.ಶೆಟ್ಟಿ ವರದಿ ಸಾದರಪಡಿಸಿದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಧನ್ಯಕುಮಾರ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 7ನೇ ದಿನದ ಕಾರ್ಯಕ್ರಮ

Article Image

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 7ನೇ ದಿನದ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾಕಮ್ಮಟದ 7ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಮಕೃಷ್ಣ ಕಾಟುಕುಕ್ಕೆ, ಗಾಯಕರು ಕಾಸರಗೋಡು ಇವರು ಹಾಡುಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಕಮ್ಮಟಕ್ಕೆ ಆಗಮಿಸಿದ ಪೂಜನೀಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಡಿ. ಸುರೇಂದ್ರ ಕುಮಾರ್‌ರವರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರೇರೇಪಿಸಿದರು. ಮನೆಯಲ್ಲಿ ಧಾರ್ಮಿಕ ಸಂಸ್ಕಾರಕ್ಕೆ ಪೂರಕ ಭಜನೆ: ನಮ್ಮ ಆತ್ಮಸಾಕ್ಷಿಯೇ ನಮಗೆ ದೇವರಾಗಿದ್ದು ಆತ್ಮಸಾಕ್ಷಿಗೆ ಸರಿಯಾಗಿ ನಾವು ಕೆಲಸ ಮಾಡಬೇಕು ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ಒಬ್ಬರೆ ತಿಂದರೆ ಸುಖ, ಹಂಚಿ ತಿಂದರೆ ಸಂತೋಷ ಎಂಬ ಮಾತಿದೆ. ಸುಖಕ್ಕಿಂತ ನಮಗೆ ಹಂಚಿ ತಿಂದಾಗ ಬರುವ ಸಂತೋಷವೇ ಮುಖ್ಯ. ನೀ ನನಗಿದ್ದರೆ ನಾ ನಿನಗೆ ಎಂಬಂತೆ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸ, ಗೌರವ, ಸಹಕಾರ, ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಜೀವನ ನಡೆಸಬೇಕು. ದಾಸರ ಹಾಡುಗಳು, ಶರಣರ ವಚನಗಳು, ಜೈನರ ಭಜನೆಗಳು, ತತ್ವ-ಸಿದ್ಧಾಂತಗಳು ನಮ್ಮ ಸಾರ್ಥಕ ಬದುಕಿಗೆ ಉತ್ತಮ ಸಂದೇಶ ನೀಡುತ್ತವೆ. ಪ್ರತಿ ಮನೆಯಲ್ಲಿ ತಾಯಿ-ತಂದೆಯನ್ನು ದೇವರಂತೆ ಕಾಣಬೇಕು. ಪುರುಷರು ಮಹಿಳೆಯರಿಗೆ ಗೌರವ ಕೊಡುವ ಸಂಸ್ಕಾರ ಮನೆಯಿಂದಲೆ ಆರಂಭವಾಗಬೇಕು. ಇಂದು ಪುರುಷರು ಮಾಡುವ ಎಲ್ಲಾ ಕೆಲಸಗಳನ್ನು ಮಹಿಳೆಯರು ಮಾಡುತ್ತಾರೆ. ಆದರೆ ಮಹಿಳೆಯರು ಮಾಡುವ ಅಡುಗೆ, ಸ್ವಚ್ಛತೆ ಇತ್ಯಾದಿಯನ್ನು ಪುರುಷರು ಯಾಕೆ ಮಾಡುವುದಿಲ್ಲ ಎಂದು ಅವರು ಯಕ್ಷಪ್ರಶ್ನೆ ಹಾಕಿದರು. ಸಿನೆಮಾ ತಾರೆಯರು, ರಾಜಕಾರಣಿಗಳು, ಮಠಾಧಿಪತಿಗಳು ನಮಗೆ ರೋಲ್ ಮೋಡೆಲ್‌ಗಳಲ್ಲ. ನಮಗೆ ನಾವೇ ರೋಲ್‌ಮೋಡೆಲ್‌ಗಳಾಗಬೇಕು. ದೈಹಿಕ ರೋಗಗಳಿಗೆ ನಮ್ಮ ಮನಸೇ ಮೂಲ ಕಾರಣ. ಮುಖದಲ್ಲಿ ಸದಾ ಮುಗುಳ್ನಗೆ ನಮ್ಮ ಮುಖ ಬೆಲೆಯನ್ನು ಹೆಚ್ಚಿಸುತ್ತದೆ. ಪರೋಪಕಾರ, ಪ್ರೀತಿ, ಸೇವೆ, ದಯೆ, ಅನುಕಂಪ, ಆತಿಥ್ಯ ಮೊದಲಾದ ಸತ್ಕಾರ್ಯಗಳಿಂದ ಮನಸು ತೃಪ್ತಿಯಿಂದ ಹಗುರವಾಗಿ ಶಾಂತಿ, ನೆಮ್ಮದಿ ಸಿಗುತ್ತದೆ. ಕೋಪ, ದ್ವೇಷ, ಚಿಂತೆ, ಟೀಕೆ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ ಮೊದಲಾದ ರೋಗಗಳು ಕಾಡುತ್ತವೆ. ಪ್ರತಿಯೊಬ್ಬರೂ ವಾರದಲ್ಲಿ ಒಂದು ದಿನವಾದರೂ ಸಂಚಾರಿ ದೂರವಾಣಿ ಬಳಸದಿರುವ ವೃತ ಮಾಡಿದರೆ ಎಲ್ಲರಿಗೂ ಸತ್ಕಾರ್ಯ ಮಾಡಲು ಸಾಕಷ್ಟು ಸಮಯ ಸಿಗುತ್ತದೆ ಎಂದು ಅವರು ಹೇಳಿದರು. ಭಾವನೆ ಮತ್ತು ಸಾಹಿತ್ಯ ಇಲ್ಲದ ಭಜನೆ ನೀರಸವಾಗುತ್ತದೆ. ಉತ್ತಮ ಸಾಹಿತ್ಯ ಮತ್ತು ಭಾವನೆ ಹೊಂದಿರುವ ಭಜನೆಗಳನ್ನು ಬಾಯಿಪಾಠವಾಗಿ ಹಾಡಬೇಕು ಎಂದು ಅವರು ಸಲಹೆ ನೀಡಿದರು. ಶಿಬಿರಾರ್ಥಿಗಳು ತಮ್ಮ ದೋಷಗಳನ್ನೆಲ್ಲ ಇಲ್ಲೇ ಬಿಟ್ಟು ಹೋಗಿ. ಉತ್ತಮ ಅಭ್ಯಾಸಗಳನ್ನು ಹಾಗೂ ಸಂಸ್ಕಾರವನ್ನು ಬೆಳೆಸಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು. ಭಜನಾ ತರಬೇತಿ ಕಮ್ಮಟದ ಶಿಬಿರಾರ್ಥಿಗಳಿಂದ 4ನೇ ದಿನದ ನಗರ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯಪ್ರಸಾದ್, ಕಾರ್ಯದರ್ಶಿಗಳಾದ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್‌ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು. ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಂದ್ರಕುಮಾರ್ ಸದಸ್ಯರಾದ ಪದ್ಮರಾಜ್ ಜೈನ್, ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಮಹಾವೀರ ಅಜ್ರಿ, ಭವಾನಿ, ಮೋಹನ್ ಶೆಟ್ಟಿ, ಸತೀಶ್ ಪೈ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಸಮನ್ವಯಾಧಿಕಾರಿಗಳಾಗಿ ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.

‘ಸ್ವಸ್ಥ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಭಜನೆ ಪೂರಕ’ : ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ

Article Image

‘ಸ್ವಸ್ಥ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಭಜನೆ ಪೂರಕ’ : ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ

ದಿನಾಂಕ:27-9-2024ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ವಿಶೇಷ ಸಭೆಯು ಶ್ರೀಕ್ಷೇತ್ರದ ವಸಂತ ಮಹಲ್‌ನಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ಶ್ರೀ ವೀರೇಂದ್ರ ಹೆಗ್ಗಡೆಯವರು ಮಾತನಾಡಿ ‘ಸ್ವಸ್ಥ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಭಜನೆ ಪೂರಕ’ ಎಂದು ಹೇಳಿದರು. ಮಕ್ಕಳಿಗೆ ಭಜನಾ ಸಂಸ್ಕಾರ ಕಲಿಸಿಕೊಡಲಾಗುತ್ತದೆ. ಭಜನೆಯ ಜೊತೆಗೆ ಶ್ಲೋಕಗಳು, ವಚನಗಳನ್ನು ಮುಂದಿನ ತಲೆಮಾರಿಗೆ ಕಲಿಸಬೇಕಾಗಿದೆ. ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಮದುವೆಯ ಮುಂಚಿನ ದಿನ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಗೃಹಪ್ರವೇಶ, ನಾಮಕರಣ ಕಾರ್ಯಕ್ರಮದಲ್ಲಿ ಭಜನೆ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪರಿಷತ್ ಸಭೆಯಲ್ಲಿ ಭಾಗವಹಿಸಿದ ಅವರು ಮಾರ್ಗದರ್ಶನ, ಪ್ರೇರಣೆ ನೀಡಿದರು. ಮಾತೃಶ್ರೀ ಡಾ. ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ ಭಜನಾ ಪರಿಷತ್ತಿನ ನಿರ್ವಹಣೆಗೆ 7 ಮಂದಿ ಸಮನ್ವಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಭಜನಾ ಮಂಡಳಿಗಳಿಗೆ ಗ್ರೇಡಿಂಗ್ ನೀಡಲಾಗುವುದು. ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನ ಮೂಲಕ ನಡೆಯುತ್ತಿದೆ. ಸಂಖ್ಯೆಗೆ ಮಹತ್ವ ನೀಡದೆ ಗುಣಮಟ್ಟಕೆ ಆದ್ಯತೆ ನೀಡಬೇಕು. ಪ್ರಸ್ತುತ ಭಜನಾ ಮಂಡಳಿಗಳಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಪರಿಷತ್‌ನವರು ಉತ್ತಮವಾಗಿ ದುಡಿಯುತ್ತಿದ್ದಾರೆ ಎಂದು ಶ್ಲಾಘಿಸಿದರು. ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ 25 ವರ್ಷಗಳಿಂದ ಭಜನೆ ಇತ್ತು. ಆದರೆ ರಾಗ, ತಾಳಗಳ ಜ್ಞಾನಗಳ ಕೊರತೆ ಇತ್ತು. ಭಜನಾ ಕಮ್ಮಟದ ಮೂಲಕ ಶಿಸ್ತು, ರಾಗ, ತಾಳದ ಜ್ಞಾನ ಬಂದಿದೆ. ಭಜನಾ ಮಂಡಳಿಗೆ ಸ್ವರೂಪ ಸಿಕ್ಕಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದ ರೀತಿಯಲ್ಲಿ ಕುಣಿತ ಭಜನೆಯ ತರಬೇತಿ ನೀಡಬೇಕು. ಮನೆಮನೆಯಲ್ಲಿ ಭಜನೆ ನಡೆಯುತ್ತಿದೆ ಎಂದು ಮಾರ್ಗದರ್ಶನ ನೀಡಿದರು. ಸುಬ್ರಹ್ಮಣ್ಯ ಪ್ರಸಾದ್, ಸಂಚಾಲಕರು, ಭಜನಾ ಕಮ್ಮಟ ಇವರು ಪ್ರಸ್ತಾವನೆ ನೆರವೇರಿಸಿದರು. ವೀರು ಶೆಟ್ಟಿ, ಕಾರ್ಯದರ್ಶಿ, ಭಜನಾ ಕಮ್ಮಟ, ಮಹಾವೀರ ಅಜ್ರಿ, ಸದಸ್ಯರು, ಭಜನಾ ಕಮ್ಮಟ ಉಪಸ್ಥಿತರಿದ್ದರು. ಭಜನಾ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್ ಇವರು ಸ್ವಾಗತಿಸಿ, ಸಮನ್ವಯಾಧಿಕಾರಿ ಸಂತೋಷ್ ಪಿ., ವರದಿ ವಾಚಿಸಿದರು. ಭಜನಾ ಪರಿಷತ್‌ನ ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಇವರು ಧನ್ಯವಾದವಿತ್ತರು. ಭಜನಾ ಪರಿಷತ್‌ನ ಸಮನ್ವಯಾಧಿಕಾರಿ ರಾಘವೇಂದ್ರ, ಇವರು ಕಾರ್ಯಕ್ರಮ ನಿರ್ವಹಿಸಿದರು.

ಅಭಿನಂದನಾ ಕಾರ್ಯಕ್ರಮ

Article Image

ಅಭಿನಂದನಾ ಕಾರ್ಯಕ್ರಮ

ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದಿರೆ ಶಾಲೆಯ ಮುಖ್ಯೋಪಾಧ್ಯಯರಿಗೆ ಅಭಿನಂದನಾ ಕಾರ್ಯಕ್ರಮವು ಶಾಲಾ ಸಂಚಾಲಕರ ನೇತೃತ್ವದಲ್ಲಿ ಶಾಲೆಯ ಅಮೃತಮಹೋತ್ಸವ ಕಟ್ಟಡದಲ್ಲಿ ನೇರವೇರಿತು. ಶಶಿಕಾಂತ್ ವೈ ಇವರು ರಾಜ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಕೊಡಲ್ಪಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಕೆ. ಹೇಮರಾಜ್‌ರವರು ವಹಿಸಿದ್ದರು. ಸಂಚಾಲಕರು ಗಣ್ಯರೊಂದಿಗೆ ಸೇರಿ ಶ್ರೀಯುತರನ್ನು ಶಾಲು ಹೊದಿಸಿ ಫಲ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಶ್ರೀಯುತರ ಹುಟ್ಟೂರು ಮತ್ತು ಅವರ ವೃತ್ತಿ ಬದುಕಿನ ಜೊತೆಗಿನ ಅನುಭವನ್ನು ಶಾಲೆಯ ಹಿರಿಯ ಶಿಕ್ಷಕಿ ಮಂಜುಳಾ ಜೈನ್‌ರವರು ಹಂಚಿಕೊಂಡರು. ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರೆ ಮತ್ತು ಈ ಪ್ರಶಸ್ತಿ ಅವರಿಗೆ ಬಂದಿರುವುದು ನಮಗೆ ಅತೀವ ಸಂತೋಷವನ್ನು ತಂದಿದೆ. ಎಂದು ತಮ್ಮ ಅಭಿನಂದನಾ ಭಾಷಣದಲ್ಲಿ ತಿಳಿಸಿದ್ದರು. ಸನ್ಮನಿತರು ಈ ಅಭಿನಂದನಾ ಕಾರ‍್ಯಕ್ರಮಕ್ಕೆ ಸಂತೋಷ ವ್ಯಕ್ತಪಡಿಸಿದ್ದರು ಹಾಗೂ ಈ ಪ್ರಶಸ್ತಿ ಬರಲು ಸಹಕಾರ ನೀಡಿದ ಶಾಲಾ ಸಂಚಾಲಕರಿಗೆ, ಶಾಲಾ ಆಡಳಿತ ಮಂಡಳಿಯಗೆ ಶಿಕ್ಷಕ-ಶಿಕ್ಷಕೇತರಿಗೆ, ಹೆತ್ತವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೃತ್ಞಜತೆಯನ್ನು ಸಲ್ಲಿಸಿದ್ದರು. ಈ ಪ್ರಶಸ್ತಿಗೆ ಅಗೌರವವಾಗದಂತೆ ಮುಂದೆಯೂ ಸೇವೆಯನ್ನು ಸಲ್ಲಿಸುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು. ಶಾಲಾ ಸಂಚಾಲಕರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಶಾಲಾ ಮುಖ್ಯೋಪಾಧ್ಯಯರ ಅವಿರತ ಪರಿಶ್ರಮ ಮತ್ತು ಅವರ ವ್ಯಕ್ತಿತ್ವವೇ ಈ ಪ್ರಶಸ್ತಿ ಬರಲು ಕಾರಣ ಎಂದು ಹೇಳಿದರು. ಈ ಪ್ರಶಸ್ತಿಯಿಂದ ನಮ್ಮ ಶಾಲೆಯಕೀರ್ತಿ ಗೌರವ ಇನ್ನಷ್ಟು ಹೆಚ್ಚಾಯಿತು ಎಂದು ಅಭಿಮಾನದ ಮಾತುಗಳನ್ನಾಡಿದ್ದರು. ಸಂಸ್ಥೆಯ ಸಿಬ್ಬಂದಿ ವರ್ಗದವರು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಈ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಣೀತರವರು ಸ್ವಾಗತಿಸಿದರು, ಮಂಜುಳಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದ್ದರು. ದಿವ್ಯಾಶ್ರೀ ಧನ್ಯವಾದಗೈದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 6ನೇ ದಿನದ ಕಾರ್ಯಕ್ರಮ

Article Image

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 6ನೇ ದಿನದ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 6ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಪ್ಪುಂದ ರಾಜೇಶ್ ಪಡಿಯಾರ್, ಮೈಸೂರು ಹಾಗೂ ರಾಮಕೃಷ್ಣ ಕಾಟುಕುಕ್ಕೆ, ಗಾಯಕರು ಕಾಸರಗೋಡು ಇವರು ಹಾಡುಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಕಮ್ಮಟಕ್ಕೆ ಆಗಮಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರೇರೇಪಿಸಿದರು. ಧರ್ಮಸ್ಥಳದಲ್ಲಿ 'ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ' ಕುರಿತು ಉಪನ್ಯಾಸ ಕಾರ್ಯಕ್ರಮ; ಧರ್ಮಸ್ಥಳದ 'ಮಹೋತ್ಸವ ಸಭಾಭವನ'ದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ್ದ 26ನೇ ವರ್ಷದ 'ಭಜನಾ ತರಬೇತಿ ಕಮ್ಮಟ' ಕಾರ್ಯಾಗಾರದ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಶುಕ್ರವಾರ 'ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ' ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ ಇವರು “ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ತಮ್ಮ ಉಪನ್ಯಾಸದಲ್ಲಿ ಸಾಮರಸ್ಯವೇ ಬದುಕಿನ ಮೂಲ ಗುರಿಯಾಗಿದ್ದು, ಭಜನೆಗೆ ಜಾತಿ, ಮತ, ಪಂಥಗಳು ಅಡ್ಡಿಯಾಗುವುದಿಲ್ಲ. ಹಾಗಾಗಿ ಭಜನೆಯ ಮೂಲವೇ ಸಾಮರಸ್ಯ ಮೂಡಿಸುವುದು ಎಂದು ನುಡಿದರು. ಭಜನೆಯು ಮನಸ್ಸಿನ ಮೇಲೆ ಪರಿಣಾಮ ಬೀರಲು ಅದರ ಅರ್ಥ ಗಮನಿಸುವುದು ಮುಖ್ಯವಾಗುತ್ತದೆ. ಸಮಾಜದಲ್ಲಿ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಎಚ್ಚರಿಕೆ ನೀಡುವ ಕೆಲಸವನ್ನು ಭಜನೆ ಮಾಡುತ್ತದೆ. ದೇವರ ಭಜನೆಯಷ್ಟೇ, ನೀತಿಯುಕ್ತ ಭಜನೆಗಳಿಗೂ ಮಹತ್ವ ನೀಡಬೇಕಾಗಿದೆ ಎಂದರು. ದೇವರ ಮೇಲೆ ಶ್ರದ್ಧೆ ಇದ್ದಾಗ ಅಹಂಕಾರ ಇರಲು ಸಾಧ್ಯವಿಲ್ಲ. ಹಾಗಾಗಿ, ಭಜನೆಯ ಮೂಲಕ ಭಗವಂತನ ಗೆಲ್ಲಲು ಸಾಧ್ಯ. ದೇಶಭಕ್ತಿ ಇದ್ದವರಲ್ಲಿ ದೈವ ಭಕ್ತಿಯೂ ಇರುತ್ತದೆ, ಮನುಷ್ಯನು ಎರಡನ್ನೂ ಅಳವಡಿಸಿಕೊಳ್ಳಬೇಕು. ಆಗ ಸಾಮರಸ್ಯ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು. ಎಸ್.ಡಿ.ಯಂ. ನ್ಯಾಚುರೋಪತಿ ಕಾಲೇಜು ಉಜಿರೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನಡೆಯಿತು. ಯೋಗ ತರಬೇತಿಯನ್ನು ಡಾ. ಐ. ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಸೌಮ್ಯ ಸುಭಾಷ್, ಧರ್ಮಸ್ಥಳ ಇವರು ಸಾಂಪ್ರದಾಯಿಕ ಹಾಡುಗಳನ್ನು ಕಲಿಸಿಕೊಟ್ಟರು. ಭಜನಾ ತರಬೇತಿ ಕಮ್ಮಟದ ಶಿಬಿರಾರ್ಥಿಗಳಿಂದ 3ನೇ ದಿನದ ನಗರ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್‌ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು. ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯನ್, ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಸದಸ್ಯರಾದ ಪದ್ಮರಾಜ್ ಜೈನ್, ಪೂರ್ಣಿಮ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಮಹಾವೀರ ಅಜ್ರಿ, ಭವಾನಿ, ಮೋಹನ್ ಶೆಟ್ಟಿ, ಸತೀಶ್ ಪೈ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಸಮನ್ವಯಾಧಿಕಾರಿಗಳಾಗಿ ರಾಘವೇಂದ್ರ, ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 5ನೇ ದಿನದ ಕಾರ್ಯಕ್ರಮ

Article Image

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 5ನೇ ದಿನದ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 5ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿದುಷಿ ಅನುಸೂಯ ಪಾಠಕ್, ಉಜಿರೆ ಹಾಗೂ ಉಪ್ಪುಂದ ರಾಜೇಶ್ ಪಡಿಯಾರ್, ಮೈಸೂರು ಇವರು ಹಾಡುಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಕಮ್ಮಟಕ್ಕೆ ಆಗಮಿಸಿದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರೇರೇಪಿಸಿದರು. ಭಜನೆಯು ಭಕ್ತಿಯನ್ನು ಉದ್ದೀಪನಗೊಳಿಸಿ, ಬದುಕನ್ನು ಕಟ್ಟಿಕೊಡುತ್ತದೆ. ಬದುಕಿಗಿಂತ ಭಜನೆಯು ದೊಡ್ಡದಾಗಿದ್ದು, ಮಾಡುವ ಕೆಲಸವೇ ಭಜನೆಯಾಗಬೇಕು. ಇಂತಹ ಉಪನ್ಯಾಸಗಳು ಆತ್ಮವಲೋಕನ ಮಾಡಿಕೊಳ್ಳುವುದಕ್ಕೆ ದಾರಿಯಾಗಿದೆ ಎಂದು ಅಸೆಮ್ಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಪವನ್ ಕಿರಣ್‌ಕೆರೆ ನುಡಿದರು. ಧರ್ಮಸ್ಥಳದ 'ಮಹೋತ್ಸವ ಸಭಾಭವನ'ದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ್ದ 26ನೇ ವರ್ಷದ 'ಭಜನಾ ತರಬೇತಿ ಕಮ್ಮಟ' ಕಾರ್ಯಾಗಾರದ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಗುರುವಾರ 'ಭಜನೆ ಮತ್ತು ಬದುಕು' ಕುರಿತು ಉಪನ್ಯಾಸ ನೀಡಿದರು. ಭಜನೆಯಿಂದ ಮನಸ್ಸು ಶುದ್ದವಾಗುತ್ತದೆ, ಭಜನೆ ಮಾಡುವಾಗ ದೇವರ ಮೇಲೆ ನಂಬಿಕೆಯಿರಬೇಕು. ಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ಮಾಡುವ ಶಕ್ತಿ ಭಜನೆಗಿದ್ದು, ಅದು ಪಾಪವನ್ನು ತೊಳೆಯುವ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು. ಮನುಷ್ಯನು ತನ್ನ ವಿವೇಕ ಹಾಗೂ ಚಿಂತನೆಯಿಂದ ಬೇರೆ ಪ್ರಾಣಿಗಳಿಗಿಂತ ಬೇರೆಯಾಗಿದ್ದಾನೆ. ಆದರೆ, ನಾನು ಎಂಬ ಅರಿವಿಲ್ಲದಿರುವುದು ಇಂದು ಮನುಷ್ಯನ ಬಹುದೊಡ್ಡ ಸಮಸ್ಯೆಯಾಗಿದೆ. ಭಜನೆಯು ಅರಿವನ್ನು ಮೂಡಿಸುವ ಕೆಲಸ ಮಾಡುತ್ತದೆ ಎಂದರು. ಎಸ್.ಡಿ.ಯಂ. ಕಲಾಕೇಂದ್ರ, ಉಜಿರೆ ಇವರಿಂದ ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಿತು. ಯೋಗ ತರಬೇತಿಯನ್ನು ಡಾ. ಐ. ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಸೌಮ್ಯ ಸುಭಾಶ್, ಧರ್ಮಸ್ಥಳ ಇವರು ಸಾಂಪ್ರದಾಯಿಕ ಹಾಡುಗಳನ್ನು ಕಲಿಸಿಕೊಟ್ಟರು. ಭಜನಾ ತರಬೇತಿ ಕಮ್ಮಟದ ಶಿಬಿರಾರ್ಥಿಗಳಿಂದ 2ನೇ ದಿನದ ನಗರ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್‌ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು, ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯನ್, ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಸದಸ್ಯರಾದ ಪದ್ಮರಾಜ್ ಜೈನ್, ಮಹಾವೀರ ಅಜ್ರಿ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಸಮನ್ವಯಾಧಿಕಾರಿಗಳಾಗಿ ರಾಘವೇಂದ್ರ, ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ಪದ್ಮರಾಜ್ ಜೈನ್ ನಿರೂಪಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮ

Article Image

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ರಾಘವೇಂದ್ರ ಆಚಾರ್ಯ, ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರು ಹಾಗೂ ವಿದುಷಿ ಅನುಸೂಯ ಪಾಠಕ್, ಉಜಿರೆ ಇವರು ಹಾಡುಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಕಮ್ಮಟಕ್ಕೆ ಆಗಮಿಸಿದ ಪೂಜ್ಯನೀಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರೇರೇಪಿಸಿದರು. ಉಪನ್ಯಾಸ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಸಮಾಜಕ್ಕೆ ಧರ್ಮಸ್ಥಳದ ಬಹುಮುಖಿ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. 84 ಲಕ್ಷ ಜೀವರಾಶಿಗಳಲ್ಲಿ ಮಾನವಜನ್ಮ ದೊಡ್ಡದು. ಏಕೆಂದರೆ ಇತರ ಎಲ್ಲಾ ಪ್ರಾಣಿಗಳಿಗಿಂತ ಮನುಷ್ಯನಿಗೆ ವಿವೇಚನಾ ಶಕ್ತಿ ಅಂದರೆ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವ ಶಕ್ತಿ ಇದೆ. ಆದುದರಿಂದ ಎಲ್ಲರೂ ತಮ್ಮ ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದಾಗ ಎಲ್ಲವೂ ಪರಿಶುದ್ಧವಾಗಿ ಮಾಡಿದ ಕೆಲಸ ಕೂಡಾ ಉತ್ತಮ ಪರಿಣಾಮವನ್ನು ಬೀರುತ್ತದೆ. ಭಗವಂತನ ಭಜನೆಯಿಂದ ನಮ್ಮ ಆತ್ಮ ಪರಿಶುದ್ಧವಾಗಿ, ನಾವು ಮಾಡುವ ಎಲ್ಲಾ ಕೆಲಸಗಳು ಕೂಡಾ ಪರಿಶುದ್ಧವಾಗಿರುತ್ತವೆ. ಇಂತಹ ಕಾರ್ಯಗಳಿಂದ ನಮಗೂ ಆತ್ಮತೃಪ್ತಿ ಸಿಗುತ್ತದೆ ಹಾಗೂ ಸಮಾಜಕ್ಕೂ ಒಳಿತಾಗುತ್ತದೆ. ಭಜನಾ ತರಬೇತಿ ಕಮ್ಮಟದಲ್ಲಿ ನೀಡಿದ ಎಲ್ಲಾ ಮಾಹಿತಿ ಮಾರ್ಗದರ್ಶನವನ್ನು ಮುಂದೆ ನೀವು ನಿತ್ಯವೂ ಜೀವನದಲ್ಲಿ ಅನುಷ್ಠಾನಗೊಳಿಸಿ, ಇತರರನ್ನೂ ಪ್ರೇರೇಪಿಸಿದಲ್ಲಿ ನಿಮಗೆ ಆತ್ಮತೃಪ್ತಿಯೂ ಸಿಗುತ್ತದೆ. ಅಲ್ಲದೆ ರಾಮರಾಜ್ಯದ ಕನಸು ನನಸಾಗುತ್ತದೆ. ಈ ದಿಸೆಯಲ್ಲಿ ನೀವೆಲ್ಲರೂ ಸಿದ್ಧರಾಗಿ, ಬದ್ಧರಾಗಿ ಸಮಾಜ ಕಲ್ಯಾಣ ಕಾರ್ಯಗಳನ್ನು ಮಾಡಬಹುದು. ಇದರಿಂದಾಗಿ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಸಿಗುವುದಲ್ಲದೆ ಸಮಾಜ ಸೇವೆ ಮಾಡಿದ ಸಂತೃಪ್ತಿಯೂ ನಿಮಗೆ ಸಿಗುತ್ತದೆ ಎಂದು ಹೇಳಿದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಶ್ರೀ ಹೆಗ್ಗಡೆಯವರು ಬಹುಮುಖಿ ಸಮಾಜ ಸೇವಾಕಾರ್ಯಗಳ ಮೂಲಕ ಮಾಡುತ್ತಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡಿದರು. ಸಂಜೆ ಭಜಣಾ ತಂಡದಿಂದ ನಗರ ಭಜನೆ ನಡೆಯಿತು. ರಂಗಶಿವ ಕಲಾಬಳಗ, ಧರ್ಮಸ್ಥಳ ಇವರಿಂದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ನಿರ್ದೇಶನದಲ್ಲಿ ಮೂಡಿಬಂದ “ಕೇಳೆಸಖಿ ಚಂದ್ರಮುಖಿ’ ನಾಟಕ ಪ್ರದರ್ಶನ ನಡೆಯಿತು. ಯೋಗ ತರಬೇತಿಯನ್ನು ಡಾ. ಐ. ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್‌ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು, ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯನ್, ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಸದಸ್ಯರಾದ ಪದ್ಮರಾಜ್ ಜೈನ್ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಶ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಶಿಬಿರಾರ್ಥಿಗಳಾಗಿ ರಾಘವೇಂದ್ರ, ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.

ಎಕ್ಸಲೆಂಟ್‌ನ ಯುವರಾಜ್ ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾಸೇವಾರತ್ನ ಪುರಸ್ಕಾರ

Article Image

ಎಕ್ಸಲೆಂಟ್‌ನ ಯುವರಾಜ್ ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾಸೇವಾರತ್ನ ಪುರಸ್ಕಾರ

ಮೂಡುಬಿದಿರೆ: ವಿಶ್ವಶಾಂತಿ ಯುವಸೇವಾ ಸಮಿತಿ(ರಿ.) ಬೆಂಗಳೂರು ಆಯೋಜನೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶ್ರೀ ಆದಿನಾಥ ವೈಭವ ಜಿನಸಹಸ್ರನಾಮ ಸ್ತುತಿ ಗಾಯನ ವಿಶ್ವದಾಖಲೆ ಕಾರ‍್ಯಕ್ರಮದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಯುವರಾಜ್ ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾ ಸೇವಾರತ್ನ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಕ್ರಾಂತಿಕಾರಕ ಸಾಧನೆ. ಸಾಮಾಜಿಕ ಕ್ಷೇತ್ರಗಳಲ್ಲಿ ಸೇವಾ ತತ್ವರತೆ, ಜೈನ ಧರ್ಮದ ಸಂಘಟನೆಯಲ್ಲಿನ ಬದ್ಧತೆ, ನಾಡುನುಡಿಗೆ ಅನನ್ಯ ಕೊಡುಗೆಯನ್ನು ಗುರುತಿಸಿ ಈ ಪುರಸ್ಕಾರ ಮಾಡಲಾಯಿತು. ವೇದಿಕೆಯಲ್ಲಿ ಮೂಡುಬಿದ್ರೆ ಜೈನ ಮಠದ ಪರಮಪೂಜ್ಯ ಭಾರತಭೂಷಣ ಜಗದ್ಗುರು ಸ್ವಸ್ತಿಶ್ರೀ ಭಟ್ಟಾರಕ ಡಾ. ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಡಿ. ಹರ್ಷೆಂದ್ರ ಹೆಗ್ಡೆ, ಮಾಜಿಸಚಿವರಾದ ಅಭಯಚಂದ್ರ ಜೈನ್, ಎಕ್ಸಲೆಂಟ್ ಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ ಜೈನ್, ಧವಳಾ ಕಾಲೇಜು ಉಪನ್ಯಾಸಕರಾದ ಅಜಿತ್‌ಪ್ರಸಾದ್, ವೀಣಾ ಬಿ. ಆರ್. ಶೆಟ್ಟಿ, ವಿಶ್ವಶಾಂತಿ ಯುವಸೇನಾ ಸಮಿತಿಯ ನವೀನ್ ಪ್ರಸಾದ್ ಜಾಂಬಳೆ ಮತ್ತಿತರರು ಉಪಸ್ಥಿತರಿದ್ದರು. ಸೇವಾ ಸಮಿತಿಯ ಧೀರಜ್ ಹೊಳೆನರಸೀಪುರ ಕಾರ‍್ಯಕ್ರಮ ನಿರ್ವಹಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 3ನೇ ದಿನದ ಕಾರ್ಯಕ್ರಮ

Article Image

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 3ನೇ ದಿನದ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 3ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲದ ಸಂಗೀತ ವಿದುಷಿ ಉಷಾ ಹೆಬ್ಬಾರ್ ಹಾಗೂ ಮಣಿಪಾಲದ ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರಾದ ಕೆ. ಆರ್. ರಾಘವೇಂದ್ರ ಭಜನಾ ತರಬೇತಿ ನೀಡಿದರು. ಕಮ್ಮಟಕ್ಕೆ ಆಗಮಿಸಿದ ಪೂಜ್ಯನೀಯ ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಉಪಸ್ಥಿತರಿದ್ದು ಶಿಬಿರಾರ್ಥಿಗಳನ್ನು ಪ್ರೇರೇಪಿಸಿದರು. ಅಶೋಕ್ ಭಟ್ ಭಜನಾ ತರಬೇತಿ ಕಮ್ಮಟದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಉಪನ್ಯಾಸದಲ್ಲಿ ಭಗವಂತ ಸರ್ವಾಂತರ್ಯಾಮಿಯಾಗಿದ್ದರೂ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭಾರತದಲ್ಲಿ ದೇವನೊಬ್ಬ ನಾಮ ಹಲವು ಎಂಬಂತೆ ನಮ್ಮ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು, ಪೂಜಾವಿಧಾನ, ಮಂತ್ರ - ತಂತ್ರ – ಎಲ್ಲವೂ ವೈವಿಧ್ಯಮಯವಾಗಿದೆ. ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಅತ್ಯಂತ ಸರಳ ಹಾಗೂ ಸುಲಭ ಮಾಧ್ಯಮ ಭಜನೆ ಆಗಿದೆ. ಭಜನಾಮಂದಿರಗಳು ಧರ್ಮ ಮತ್ತು ಸಂಸ್ಕೃತಿಯ ಪ್ರಭಾವನೆಯೊಂದಿಗೆ ಧಾರ್ಮಿಕ ಚಿಂತನ-ಮಂಥನ, ಸತ್ಸಂಗ ಹಾಗೂ ಸಾಮೂಹಿಕ ಆಚರಣೆಗಳ ಕೇಂದ್ರಗಳಾಗಬೇಕು. ಭಜನೆ ಜನತಾ ವೇದವಾಗಿದ್ದು ಮನ, ವಚನ, ಕಾಯದಿಂದ ಪರಿಶುದ್ಧರಾಗಿ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡಿದರೆ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ. ಭಜನೆಯು ಭಕ್ತಿಯ ಪ್ರಧಾನ ಸಾಧನವಾಗಿದ್ದು ಶಿಸ್ತುಬದ್ಧವಾಗಿ ರಾಗ, ತಾಳ, ಲಯಬದ್ಧವಾಗಿ ಭಜನೆ ಹಾಡಲು ಕಲಿಸುವುದೇ ಭಜನಾ ತರಬೇತಿಯ ಉದ್ದೇಶವಾಗಿದೆ. ತನ್ಮೂಲಕ ಮುಂದಿನ ಜನಾಂಗಕ್ಕೆ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು. ಜನ್ಮದಿನಾಚರಣೆ, ಮದುವೆಯ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ, ಮಗುವಿನ ನಾಮಕರಣ ಮುಂತಾದ ಕಾರ್ಯಕ್ರಮಗಳನ್ನು ಭಜನಾಮಂದಿರಗಳಲ್ಲಿ ಮಾಡಿದರೆ ಸಮಾಜದ ಸಂಘಟನೆ ಮತ್ತು ಬಲವರ್ಧನೆಯೂ ಆಗುತ್ತದೆ ಎಂದು ಅವರು ಹೇಳಿದರು. ಭಜನೆಯ ಮೂಲಕ ಧಾರ್ಮಿಕ ಅಂತ್ಯೋದಯದಿಂದ ಧಾರ್ಮಿಕ ಸರ್ವೋದಯವಾಗಬೇಕು. ಭಜನಾಪಟುಗಳೆಲ್ಲ ಧಾರ್ಮಿಕಯೋಧರಾಗಿ, ಧರ್ಮ ಮತ್ತು ಸಂಸ್ಕೃತಿಯ ವಕ್ತಾರರಾಗಬೇಕು, ರಾಯಭಾರಿಗಳಾಗಬೇಕು ಎಂದು ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಹೇಳಿದರು. ರಂಗಶಿವ ಕಲಾಬಳಗ, ಧರ್ಮಸ್ಥಳ ಇವರಿಂದ ರಂಗಗೀತೆ ಹಾಗೂ ವಿವಿಧ ಗೀತೆಗಳ ಪ್ರಾತ್ಯಕ್ಷಿಕೆ ನಡೆಯಿತು. ಯೋಗ ತರಬೇತಿಯನ್ನು ಡಾ. ಐ. ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ಎ. ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್‌ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು, ಶ್ರೀಜಾ ಕಾರ್ಯಕ್ರಮ ನಿರೂಪಿಸಿದರು. ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಸದಸ್ಯರಾದ ವಸಂತ್ ಭಟ್, ಮಹಾವೀರ ಅಜ್ರಿ, ಸೀತಾರಾಮ ತೋಳ್ಪಾಡಿತ್ತಾಯ, ಪದ್ಮರಾಜ್ ಜೈನ್ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಸಮನ್ವಯ ಅಧಿಕಾರಿಗಳಾದ ರಾಘವೇಂದ್ರ ಮತ್ತು ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 2ನೇ ದಿನದ ಕಾರ್ಯಕ್ರಮ

Article Image

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 2ನೇ ದಿನದ ಕಾರ್ಯಕ್ರಮ

ಸಮುದ್ರ ಯಾರನ್ನು ಮುಳುಗಿಸುವುದಿಲ್ಲ. ದೋಣಿಯಲ್ಲಿರುವ ದೋಷ ಮುಳುಗಿಸುತ್ತದೆ. ವ್ಯಕ್ತಿಯ ದುರಭ್ಯಾಸ ವ್ಯಕ್ತಿಯನ್ನು ಮುಗಿಸುತ್ತದೆ ಎಂದು ವಿವೇಕ್ ವಿ. ಪಾಯಸ್ ನುಡಿದರು. ಭಜಕನಿಗೆ ಕಾಳಜಿ ಇರಬೇಕು, ಜ್ಞಾನ ಇರಬೇಕು, ಭಕ್ತಿ-ಶ್ರದ್ಧೆ ಇರಬೇಕು. ಭಕ್ತಿ ಇಲ್ಲದ ಭಜನೆ ವ್ಯರ್ಥ. ವ್ಯಸನದಲ್ಲಿ ಬಿದ್ದವ ವ್ಯಸನದಲ್ಲಿ ಸಾಯುತ್ತಾನೆ. ವ್ಯಸನಿಯಾದ ವ್ಯಕ್ತಿಯನ್ನು ಕುಟುಂಬ, ಸಮಾಜ ದೂರ ಮಾಡುತ್ತದೆ. ವ್ಯಕ್ತಿಯ ಸೋಲಿಗೆ ದೌರ್ಬಲ್ಯಗಳೆ ಮೂಲ ಕಾರಣವಾಗಿದೆ. ಯಾವ ಹೆಣ್ಣಿಗೂ ಕುಡುಕ ಗಂಡ ಬೇಡ, ಯಾವ ಕುಟುಂಬಕ್ಕೂ ವ್ಯಸನಿಯಾದವ ಬೇಡ, ಯಾವ ದೇವರಿಗೂ ಕುಡುಕ ಭಕ್ತ ಬೇಡ ಎಂದು ಭಜನಾ ಕಮ್ಮಟದ 2ನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ “ಆರೋಗ್ಯಕರ ಅಭ್ಯಾಸಗಳ ಕುರಿತು” ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್ ರವರು ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಉಷಾ ಹೆಬ್ಬಾರ್, ಸಂಗೀತ ವಿದುಷಿ ಮಣಿಪಾಲ ಹಾಗೂ ಮನೋರಮ ತೋಳ್ಪಾಡಿತ್ತಾಯ, ಸುನಿಲ್ ಕೊಪ್ಪ ಇವರು ಭಜನಾ ಹಾಡುಗಳನ್ನು 176 ಮಂದಿ ಭಜಕರಿಗೆ ಕಲಿಸಿಕೊಟ್ಟರು. ಪೂಜ್ಯನೀಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಉಪಸ್ಥಿತರಿದ್ದರು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್‌ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು, ಪೂರ್ಣಿಮಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಮ್ ರಂಗ ಶಿಕ್ಷಣ ಕೇಂದ್ರ, ಉಜಿರೆ ಇವರು ‘ಬೇಂದ್ರೆ’ ನಾಟಕವನ್ನು ಪ್ರದರ್ಶಿಸಿದರು. ಯೋಗ ತರಬೇತಿಯನ್ನು ಡಾ. ಐ. ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಸದಸ್ಯರಾದ ಸತೀಶ್ ಪೈ, ಭವಾನಿ, ಮೋಹನ್ ಶೆಟ್ಟಿ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಶ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಶಿಬಿರಾರ್ಥಿಗಳಾಗಿ ರಾಘವೇಂದ್ರ, ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.

ಷೋಡಶ ಭಾವನೆಗಳು

Article Image

ಷೋಡಶ ಭಾವನೆಗಳು

ಷೋಡಶ ಅಂದರೆ ಹದಿನಾರು. ಭಾವನೆಗಳು ಎಂದರೆ ದಿನ ನಿತ್ಯ ಪದೇ ಪದೇ ಚಿಂತಿಸುವುದು ಎಂದರ್ಥ. ಆತ್ಮೋನ್ನತಿಯ, ಆತ್ಮ ಸಂಸ್ಕಾರದ ಉತ್ತಮವಾದ ಹಂತಗಳಾದ ಕ್ರಿಯಾ ಕಲಾಪಗಳನ್ನು ವಿಚಾರ ಪೂರ್ವಕ,ಭಾವನಾ ಪೂರ್ವಕವಾಗಿ ಆರಾಧಿಸುವ ಹದಿನಾರು ರೀತಿಯ ಮಾರ್ಗೋಪಾಯಗಳೇ ಷೋಡಶ ಕಾರಣ ಭಾವನೆಗಳು ಆತ್ಮ ಕಲ್ಯಾಣಕ್ಕೆ, ಮೋಕ್ಷಕ್ಕೆ ಮತ್ತು ತೀರ್ಥಂಕರ ಪದವಿ ಪಡೆಯಲು ಷೋಡಶ ಕಾರಣ ಭಾವನೆಗಳನ್ನು ಭಾವಿಸಿ ಆರಾಧಿಸುತ್ತೇವೆ. 1. ದರ್ಶನ ವಿಶುದ್ಧಿ ಭಾವನೆ: ದರ್ಶನ ಅಂದರೆ ನಂಬಿಕೆ. ವಿಶುದ್ಧಿ ಅಂದರೆ ಪರಿಶುದ್ಧವಾದ ಭಾವನೆ. ಅಂದರೆ ಯಾರು ಪರಿಶುದ್ಧವಾದ ಭಾವನೆಗಳಿಂದ ಜೀವನದುದ್ದಕ್ಕೂ ಜೈನ ಧರ್ಮದ ತತ್ವ-ಸಿದ್ಧಾಂತ ವಿಚಾರಗಳನ್ನು ದೃಢವಾಗಿ ನಂಬಿ, ಅದರಂತೆ ನಡೆಯುತ್ತಾರೋ ಅವರು ದರ್ಶನ ವಿಶುದ್ಧಿ ಭಾವನೆ ಹೊಂದಿದವರಾಗಿದ್ದಾರೆ ನಿಜವಾದ ದೇವ, ಶಾಸ್ರ, ಗುರುಗಳಲ್ಲಿ ದೃಢವಾದ ಶ್ರದ್ಧೆಯನ್ನು ಇಡುವುದು. 2. ವಿನಯ ಸಂಪನ್ನತಾ ಭಾವನೆ :- ಅಷ್ಟ ಮದಗಳಿಂದ ದೂರ ಇದ್ದವರಲ್ಲಿ ಸಹಜವಾಗಿಯೇ ವಿನಯ ಗುಣ ಇರುತ್ತದೆ. ವಿನಯ ಗುಣವು ಮಾನವೀಯತೆಯ ಹೆಗ್ಗುರುತು. ಪ್ರತಿಯೊಂದು ಜೀವಿಯಲ್ಲಿ ಇರುವ ಆತ್ಮ ಸಮಾನವೂ, ಶ್ರೇಷ್ಠವೂ ಆಗಿದೆ. ವಿನಯದಲ್ಲಿ ಐದು ವಿಧಗಳಿವೆ. ದರ್ಶನ ವಿನಯ. ಜ್ಞಾನ ವಿನಯ, ಚಾರಿತ್ರ್ಯ ವಿನಯ, ತಪ ವಿನಯ, ಉಪಚಾರ ವಿನಯ ಇವು ನಮ್ಮ ಆತ್ಮನನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯ್ಯುತ್ತವೆ. 3. ಶೀಲವ್ರತೇಷ್ಟನತಿಚಾರ ಭಾವನೆ:- ತನ್ನ ನಡತೆಯಲ್ಲಾಗಲೀ, ವ್ರತ ಪಾಲನೆಯಲ್ಲಿ ಆಗಲೀ, ಯಾವತ್ತೂ ಒಂದಿಷ್ಟೂ ದೋಷ ಬಾರದಂತೆ ಜಾಗ್ರತೆ ವಹಿಸುವ ಭಾವನೆಯೇ ಶೀಲವ್ರತೇಷ್ಟನತಿಚಾರ ಭಾವನೆ. ಈ ಭಾವನೆಯು ನಮ್ಮನ್ನು ನಾಲ್ಕು ಕಷಾಯಗಳಿಂದ, ಪಂಚ ಪಾಪಗಳಿಂದ ದೂರವಿರಿಸುತ್ತದೆ. ಈ ಭಾವನೆಯುಳ್ಳವರು ಯಾವಾಗಲೂ ದೇವ ಪೂಜೆ, ಗುರುಗಳ ಸೇವೆ, ಸ್ವಾಧ್ಯಾಯ, ಸಂಯಮ, ತಪ, ದಾನ ಮುಂತಾದ ಧರ್ಮ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. 4. ಅಭೀಕ್ಷ್ಣ ಜ್ಞಾನೋಪಯೋಗ ಭಾವನೆ:- ಅಭೀಕ್ಷ್ಣ ಅಂದರೆ ನಿರಂತರ. ಜ್ಞಾನೋಪಯೋಗ ಅಂದರೆ ಜ್ಞಾನದ ಆರಾಧನೆ, ಆಧ್ಯಾತ್ಮಿಕ ಜ್ಞಾನದಲ್ಲಿ ಸದಾ ಜಾಗೃತರಾಗಿರುವುದು. ಅಂದರೆ ಆತ್ಮ ಕಲ್ಯಾಣಕ್ಕೆ ಕಾರಣವಾಗುವ ವಿಚಾರಗಳ ಚಿಂತನೆಯಲ್ಲಿ ಯಾವಾಗಲೂ ನಿರತವಾಗಿರುವುದೇ ಈ ಭಾವನೆ. 5. ಸಂವೇಗ ಭಾವನೆ :- ಸಂವೇಗ ಭಾವನೆ ಎಂದರೆ ಸಂಸಾರ ದು:ಖಮಯವಿದೆ ಎಂದು ಭಾವಿಸುವುದು. ಸಂಸಾರ, ಶರೀರ ಬೋಗಗಳಲ್ಲಿ ಅನುಭವಿಸುವ ದು:ಖವನ್ನು ನೋಡಿ, ಕೇಳಿ, ತಾನೂ ಅನುಭವಿಸಿ, ಈ ಸಂಸಾರದ ಅಸಾರತೆ, ಅನಿತ್ಯತೆಗಳನ್ನು ಭಾವಿಸಿ ಭೀತಿ ಹೊಂದಿ, ಇದಕ್ಕೆ ಹೇಸಿ,ಕೊಕ್ಕರಿಸಿ, ಇವುಗಳಿಂದ ವಿರಕ್ತಿ ಹೊಂದುವುದು ಸಂವೇಗ ಭಾವನೆ. 6. ಶಕ್ತಿತ: ತ್ಯಾಗ:- ತ್ಯಾಗ ಎಂದರೆ ಬಿಟ್ಟು ಬಿಡುವುದು ಎಂದರ್ಥ. ಆತ್ಮನ ಹೊರತಾಗಿ ಉಳಿದೆಲ್ಲಾ ವಸ್ತುಗಳನ್ನು ಪರ ವಸ್ತುಗಳೆಂದು ತಿಳಿದು ತ್ಯಾಗ ಮಾಡುವುದು. ತ್ಯಾಗ ಬುದ್ಧಿ ಬರಬೇಕಾದರೆ ಮೊದಲು ದಾನ ಮಾಡಬೇಕು. ದಾನದಲ್ಲಿ ಆಹಾರ ದಾನ ಅಭಯ ದಾನ, ಔಷಧ ದಾನ, ಶಾಸ್ತ್ರ ದಾನ ಮುಖ್ಯವಾದವುಗಳು. ಈ ಪ್ರಕಾರದ ದಾನಗಳನ್ನು ಮಾಡಿ ನಂತರ ನಿಧಾನವಾಗಿ ಅಂತರಂಗ -ಬಹಿರಂಗ ಪರಿಗ್ರಹಗಳನ್ನು ತ್ಯಾಗ ಮಾಡಿ ಆತ್ಮನನ್ನು ಮೋಕ್ಷ ದೆಡೆಗೆ ಕೊಂಡೊಯ್ಯುವುದು. 7. ಶಕ್ತಿತ: ತಪ:- ಆತ್ಮನಿಗೆ ಅಂಟಿದ ಕರ್ಮಗಳು ನಾಶವಾದರೆ ಮುಕ್ತಿ. ಕರ್ಮಗಳ ನಾಶಕ್ಕೆ ತಪಸ್ಸು ಶ್ರೇಷ್ಠವಾದ ಮಾರ್ಗ. ಒಂದೇ ಬಾರಿ ಘೋರ ತಪ ಮಾಡಬೇಕಾಗಿಲ್ಲ. ನಿಧಾನವಾಗಿ ಜಪ,ಧ್ಯಾನಾದಿಗಳ ಮೂಲಕ ಶಕ್ತಿಯಿದ್ದಷ್ಟು ತಪ ಮಾಡಬೇಕು. ಶುದ್ಧಾತ್ಮನ ಚಿಂತನೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸಿಸುವುದೇ ತಪ. ಆಚಾರ್ಯ ಪರಮೇಷ್ಟಿಗಳ 36 ಗುಣಗಳಲ್ಲಿ ಹನ್ನೆರೆಡು ತಪಸ್ಸುಗಳೂ ಸೇರಿವೆ. 8. ಸಾಧು ಸಮಾಧಿ ಭಾವನೆ :-(ಮೃತ್ಯು ಮಹೋತ್ಸವ)ಮರಣ ಎಂಬುದು ಒಂದು ಭವದ ಅಂತ್ಯ. ಆಗ ನಾಶವಿಲ್ಲದ ಆತ್ಮ ಕರ್ಮ ಫಲದಿಂದ ದೊರೆತ ದೇಹವನ್ನು ತೊರೆದು ಹೋಗುತ್ತದೆ. ಅದುದರಿಂದ ಮರಣಕ್ಕೆ ಹೆದರದೆ ದು:ಖಿಸದೆ, ಸಾಧುಗಳಂತೆ, ತ್ಯಾಗಿಗಳಂತೆ, ಸಮಾಧಿ ಮರಣವನ್ನು ಸ್ವೀಕರಿಸುವುದು, ಅದಕ್ಕಾಗಿ ಸದಾ ಸಿದ್ಧವಾಗಿರುವುದು ಸಾಧು ಸಮಾಧಿ ಭಾವನೆ. 9. ವೈಯ್ಯಾವೃತ್ತಿ ಭಾವನೆ:- ಸಜ್ಜನರ ಕಷ್ಟವನ್ನು ಪರಿಹರಿಸುವ ಹಂಬಲ. ತ್ಯಾಗಿಗಳು ಅಥವಾ ಶ್ರಾವಕರು ಪೂರ್ವಾರ್ಜಿತ ಕರ್ಮಗಳ ಕಾರಣದಿಂದ ವಾತ, ಪಿತ್ಥ, ಕಫಗಳೆಂಬ ತ್ರಿದೋಷಗಳಿಂದಾಗುವ ವಿವಿಧ ರೀತಿಯ ರೋಗಗಳಿಂದ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ಸರಿಯಾದ ಸೇವೆ, ಶುಶ್ರೂಷೆಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡುವುದು. 10. ಅರ್ಹದ್ಭಕ್ತಿ ಭಾವನೆ:- ವೀತರಾಗಿಯೂ, ಸರ್ವಜ್ಞರೂ, ಹಿತೋಪದೇಶಿಗಳೂ ಆದ ಅರಹಂತ ಭಗವಂತರಲ್ಲಿ ಸದಾ ಭಕ್ತಿಯನ್ನಿಡುವುದೇ ಅರ್ಹದ್ಭಕ್ತಿ ಭಾವನೆ. ಈ ಭಾವನೆ ಮೋಕ್ಷ ಸುಖವನ್ನು ನೀಡುವುದು. 11. ಆಚಾರ್ಯ ಭಕ್ತಿ ಭಾವನೆ;- ಆಚಾರ್ಯರು 36 ಮೂಲ ಗುಣಗಳನ್ನು ಹೊಂದಿದ್ದಾರೆ. ಸದಾಚಾರದಿಂದ ಕೂಡಿರುವ, ಶ್ರೇಷ್ಠ ಗುಣಯುತರಾದ ಶಿಷ್ಯರ ಯೋಗ್ಯತೆಯನ್ನು ಪರೀಕ್ಷೆ ಮಾಡಿ, ಅವರಿಗೆ ದೀಕ್ಷೆ, ಪ್ರಾಯಶ್ಚಿತ್ತ ನೀಡುವುದರಲ್ಲಿ ಸಮರ್ಥರಾಗಿರುವ, ಶರೀರದ ಬಗ್ಗೆ ಮಮಕಾರ ತೊರೆದಿರುವ ಮುನಿಗಳು ಅಥವಾ ಆಚಾರ್ಯರಲ್ಲಿ ಭಕ್ತಿಯ ಭಾವನೆ ಹೊಂದಿರುವುದೇ ಆಚಾರ್ಯ ಭಕ್ತಿ ಭಾವನೆ 12. ಬಹುಶ್ರುತ ಭಕ್ತಿ ಭಾವನೆ;- ತ್ಯಾಗಿಗಳ, ಗುರುಗಳ ಉಪದೇಶ ಕೇಳುವುದು, ಧರ್ಮ ಗ್ರಂಥಗಳಲ್ಲಿ ಭಕ್ತಿ, ಶ್ರದ್ಧೆಯನ್ನಿಟ್ಟು ಅಧ್ಯಯನ ಮಾಡಿ ಚಿಂತನ -ಮನನ ಮಾಡುವುದು ಇತ್ಯಾದಿಗಳೆಲ್ಲವನ್ನೂ ಬಹುಶ್ರುತ ಭಕ್ತಿ ಭಾವನೆ ಎನ್ನುತ್ತೇವೆ. ಇದರಲ್ಲಿ ಶಾಸ್ತ್ರ ದಾನವೂ ಅಡಕವಾಗಿದೆ. 13. ಪ್ರವಚನ ಭಕ್ತಿ ಭಾವನೆ:-ವೀತರಾಗ ಭಗವಂತರು ಬೋಧಿಸಿದ ತತ್ವ ಸಿದ್ಧಾಂತಗಳು ಪರಮ ಸತ್ಯವಾಗಿವೆ. ಅವುಗಳು ಇಡೀ ಜಗತ್ತಿಗೆ ಕಲ್ಯಾಣಕಾರಿ ಆಗಿವೆ. ಅನೇಕಾಂತ ಸಿದ್ಧಾಂತವನ್ನು ಒಳಗೊಂಡಿರುವ ಶಾಸ್ತ್ರಗಳನ್ನು ಓದುವುದರ ಮೂಲಕ, ತಾನು ತಿಳಿದು ಇತರರಿಗೆ ಹೇಳುವುದರ ಮೂಲಕ, ಧರ್ಮಾತ್ಮರ ಪ್ರವಚನಗಳನ್ನು ಕೇಳುವುದರ ಮೂಲಕ, ದೇವ-ಶಾಸ್ತ್ರ-ಗುರುಗಳನ್ನು ಪೂಜಿಸಿ, ಗೌರವಿಸುವುದರ ಮೂಲಕ, ಧರ್ಮ ಗ್ರಂಥಗಳನ್ನು ದಾನ ಮಾಡುವುದರ ಮೂಲಕ ಪ್ರವಚನ ಭಕ್ತಿ ಭಾವನೆ ಪ್ರಕಟ ಆಗುತ್ತದೆ. 14. ಆವಶ್ಯಕ ಪರಿಹಾಣಿ ಭಾವನೆ:- ಇದು ಅತ್ಯಂತ ಅನುಷ್ಠಾನಾತ್ಮಕ ಶಬ್ಧ. ಎಲ್ಲವನ್ನೂ ಕೇಳಬಹುದು, ಓದಬಹುದು, ಅದನ್ನು ಆಚರಣೆಯ ರೂಪದಲ್ಲಿ ನಮ್ಮ ಆತ್ಮನಲ್ಲಿ ಪ್ರಯೋಗ ಮಾಡಲಿಕ್ಕೋಸ್ಕರ ಹಲವಾರು ವಿಧಿ, ವಿಧಾನಗಳಿವೆ. ತ್ಯಾಗಿಗಳು ಮತ್ತು ಶ್ರಾವಕ/ ಶ್ರಾವಕಿಯರು ತಮ್ಮ ದಿನಚರಿಯನ್ನು ತಪ್ಪದೇ ನಿರ್ವಹಿಸುವುದು ಆವಶ್ಯಕ ಪರಿಹಾಣಿ ಭಾವನೆ. ತಮ್ಮ ಆತ್ಮ ಚಿಂತನ ಹಿತಕ್ಕೆ ಪೂರಕವಾದ ಸಾಮಾಯಿಕ, ಸ್ತವನ, ವಂದನ, ಪ್ರತಿಕ್ರಮಣ, ಪ್ರತ್ಯಾಖ್ಯಾನ, ಕಾಯೋತ್ಸರ್ಗ, ಮೊದಲಾದ ಕ್ರಿಯೆಗಳನ್ನು ಮಾಡುತ್ತಾ ಮುನಿಗಳೂ, ಶ್ರಾವಕರು ಷಟ್ಕರ್ಮಗಳನ್ನು ಮಾಡುತ್ತಾ ತಮ್ಮ ಆವಶ್ಯಕ ಕ್ರಿಯೆಗಳನ್ನು ಮಾಡುವುದೇ ಆವಶ್ಯಕ ಪರಿಹಾಣಿ ಭಾವನೆ. 15. ಮಾರ್ಗ ಪ್ರಭಾವನಾ ಭಾವನೆ:- ಕರ್ಮ ಫಲದಿಂದ ಬಂದ ಸಂಸಾರ ನಶ್ವರವಾದುದು. ಧರ್ಮಮಾರ್ಗದಿಂದ ಪಡೆಯುವ ಮೋಕ್ಷವು ಶಾಶ್ವತವಾದುದು. ಜೀವಿಯನ್ನು ವಿನಾಶದತ್ತ ಒಯ್ಯುವ ಕ್ರೋಧಾದಿ ಕಷಾಯಗಳನ್ನು ದೂರ ಮಾಡಲು ಹಾಗೂ ಧರ್ಮ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುವುದೇ ಮಾರ್ಗಪ್ರಭಾವನಾ ಭಾವನೆಯಾಗಿದೆ. ಇತರರನ್ನು ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾಡುವುದು, ದೇವ, ಶಾಸ್ತ್ರ, ಗುರುಗಳನ್ನು ಪೂಜಿಸುವುದು, ಜಿನಾಲಯಗಳನ್ನು ಕಟ್ಟಿಸಿ, ಜಿನಬಿಂಬಗಳನ್ನು ಪ್ರತಿಷ್ಠಾಪಿಸಿ, ಪಂಚಕಲ್ಯಾಣಗಳನ್ನು ಮಾಡುವುದು, ಮಾಡಿಸುವುದು, ಚತುರ್ವಿಧ ದಾನಗಳನ್ನು ಮಾಡುವುದು ಇತ್ಯಾದಿಗಳು ಮಾರ್ಗಪ್ರಭಾವನಾ ಭಾವನೆಯ ಕ್ರಿಯಾ ರೂಪಗಳಾಗಿವೆ. 16. ಪ್ರವಚನ ವತ್ಸಲತ್ವ ಭಾವನೆ:- ಸದಾ ಧರ್ಮ ಮಾರ್ಗದಲ್ಲಿ ನಡೆಯುವ ಮುನಿಗಳು, ಆರ್ಯಿಕೆಯರು, ಧರ್ಮಾತ್ಮರಾದ ಶ್ರಾವಕ/ ಶ್ರಾವಕಿಯರಲ್ಲಿ ಪ್ರೀತಿಯನ್ನು ಇಡುವುದೇ ಪ್ರವಚನ ವತ್ಸಲತ್ವ ಭಾವನೆ. ತ್ಯಾಗಿಗಳು ಮತ್ತು ಸಮಾಜ ಧರ್ಮ ರಥಕ್ಕೆ ಎರಡು ಚಕ್ರಗಳಿದ್ದಂತೆ. ಒಂದು ಚಕ್ರ ಕೆಟ್ಟು ಹೋದರೂ ಚಕ್ರ ನಡೆಯುವುದಿಲ್ಲ.ಎರಡೂ ಜೊತೆಯಲ್ಲಿರಬೇಕು. ಬಂಧುಗಳೇ, ಈ ರೀತಿಯಾಗಿ ಜೈನ ಧರ್ಮದಲ್ಲಿ ಷೋಡಶ ಭಾವನೆಗಳಿಗೆ ವಿಶೇಷವಾದ ಮಹತ್ವವಿದೆ. ಯಾವ ಜೀವಿ ತನ್ನ ಪೂರ್ವ ಜನ್ಮಗಳಲ್ಲಿ ಶ್ರದ್ಧೆಯಿಂದ ಷೋಡಶ ಕಾರಣ ಭಾವನೆಗಳನ್ನು ಚಿಂತಿಸುತ್ತಿರುವುದೋ ಅಂತಹ ಜೀವನಿಗೆ ಮಾತ್ರ ತೀರ್ಥಂಕರ ಎಂಬ ನಾಮ ಕರ್ಮದ ಬಂಧ ಆಗುತ್ತದೆ.ಅಂತಹ ವಿಶೇಷ ಶಕ್ತಿಯುಳ್ಳ ಷೋಡಶ ಭಾವನೆಗಳನ್ನು ಪ್ರತಿಯೊಬ್ಬರೂ ಅವಶ್ಯವಾಗಿ ತಿಳಿದಿರಬೇಕು. ಆದುದರಿಂದ ಪ್ರತಿಯೊಬ್ಬರೂ ಈ ಭಾವನೆಗಳನ್ನು ಭಾವಿಸಿಕೊಂಡು ಆತ್ಮನನ್ನು ಪರಮಾತ್ಮನನ್ನಾಗಿಸುವಲ್ಲಿ ಮುಂದಡಿಯಿಡೋಣ. ಮಾಲತಿ ವಸಂತರಾಜ್, ಕಾರ್ಕಳ

ಧರ್ಮಸ್ಥಳ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

Article Image

ಧರ್ಮಸ್ಥಳ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

ಉಜಿರೆ: ಎಂಟು ಶತಮಾನಗಳಿಂದ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿ ದಾನದೊಂದಿಗೆ ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಹಾಗೂ ಸಾಮಾಜಿಕಸಾಮರಸ್ಯದ ಶ್ರದ್ಧಾಕೇಂದ್ರವಾಗಿ ಬೆಳೆಯುತ್ತಿರುವ, ಬೆಳಗುತ್ತಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳವು ಭಕ್ತರಿಗೆ ಕಲಿಯುಗದ ಕಲ್ಪವೃಕ್ಷವಾಗಿದೆ. ಇಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿ, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಬಾಹುಬಲಿ ಬೆಟ್ಟ, ಅಣ್ಣಪ್ಪಬೆಟ್ಟ, ಪ್ರಶಾಂತ ಪ್ರಾಕೃತಿಕ ಪರಿಸರ, ಪವಿತ್ರ ಪುಣ್ಯನದಿ ನೇತ್ರಾವತಿ – ಎಲ್ಲವುಗಳ ದರ್ಶನ ಮಾಡಿದಾಗ ನಮ್ಮ ಮಾನಸಿಕ ದುಃಖ, ದುಮ್ಮಾನಗಳೆಲ್ಲ ದೂರವಾಗಿ ಶಾಂತಿ, ನೆಮ್ಮದಿ ಸಿಗುತ್ತದೆ. ಧರ್ಮಸ್ಥಳವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಕಾರದ ಪ್ರೇರಣೆ ಮತ್ತು ಸ್ಪೂರ್ತಿಯ ಕೇಂದ್ರವಾಗಿದೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೆಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 26 ನೆ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು. ಭಜನೆ ಇದ್ದಲ್ಲಿ ವಿಭಜನೆ ಇರುವುದಿಲ್ಲ. ನೃತ್ಯಭಜನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವರ್ಧನೆಯಾಗುತ್ತದೆ. ಚಂಚಲವಾದ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ಮನಸ್ಸಿನಿಂದ ಭಜನೆ ಮಾಡಿದರೆ ಜನರೆಲ್ಲ ಜಿನರಾಗಬಹುದು. ಜನಾರ್ದನರೂ ಆಗಬಹುದು. ಭಜನೆಯಿಂದ ತೀರ್ಥಯಾತ್ರೆ ಮಾಡಿದಷ್ಟೆ ಪುಣ್ಯ ಸಂಚಯವಾಗುತ್ತದೆ. ಪ್ರತಿ ಮನೆಯಲ್ಲಿಯೂ ಭಜನೆ ಮಾಡಿದರೆ ಸತ್ಯ, ಧರ್ಮ, ನ್ಯಾಯ, ನೀತಿ, ಅಹಿಂಸೆಯ ನೆಲೆಯಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಧರ್ಮಸ್ಥಳದ ಜ್ಞಾನದಾಸೋಹ ಕಾರ್ಯವೂ ಶ್ಲಾಘನೀಯವಾಗಿದ್ದು, ತಾವು ಪೂರ್ವಾಶ್ರಮದಲ್ಲಿ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸುವ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಿರುವುದನ್ನು ಧನ್ಯತೆಯಿಂದ ಸ್ಮರಿಸಿಕೊಂಡರು. ರಾಷ್ಟ್ರಪತಿಗಳಿಂದ “ರಾಜರ್ಷಿ” ಗೌರವ ಪಡೆದು, ಪ್ರಧಾನಿಯವರಿಂದಲೂ ವಿಶಿಷ್ಠ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಪಡೆದಿರುವ ಬಗ್ಗೆ ಹೆಗ್ಗಡೆಯವರನ್ನು ಸ್ವಾಮೀಜಿಯವರು ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ನಾಯಕತ್ವ, ಶಿಸ್ತು, ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಆಯಾ ಊರಿನಲ್ಲಿ ಸಾಮಾಜಿಕ ಪರಿವರ್ತನೆ ಹಾಗೂ ಪ್ರಗತಿಯ ರೂವಾರಿಗಳಾಗಬೇಕು. ಉತ್ತಮ ಸಂಘಟಕರಾಗಿ ಆರೋಗ್ಯಪೂರ್ಣ ಸಮಾಜ ರೂಪಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಬಾಲ್ಯದಲ್ಲಿ ತಮಗೆ ಮನೆಯಲ್ಲಿಯೆ ತಾಯಿ ರತ್ನಮ್ಮನವರಿಂದ ಜಪ, ಧ್ಯಾನ, ಭಜನೆ ಬಗ್ಗೆ ದೊರೆತ ಸಂಸ್ಕಾರ ಮತ್ತು ಮಾರ್ಗದರ್ಶನವನ್ನು ಸ್ಮರಿಸಿದರು. ಅಲ್ಲದೆ ಬೀಡಿನಲ್ಲೆ ಇದ್ದ ಗುರೂಜಿ (ಗುಣಪಾಲ) ಹಾಗೂ ಆಗಾಗ ಬರುತ್ತಿದ್ದ ಮಾರ್ನಾಡು ವರ್ಧಮಾನ ಹೆಗ್ಡೆ (ಮಾ.ವ. ಹೆಗ್ಡೆ) ಅವರ ಪ್ರೇರಣೆಯನ್ನೂ ಹೆಗ್ಗಡೆಯವರು ಸ್ಮರಿಸಿದರು. ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಾಶಂಸನೆ ಮಾಡಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ವರದಿ ಸಾದರಪಡಿಸಿದ ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ, ಕಳೆದ 25 ತರಬೇತಿ ಕಮ್ಮಟಗಳಲ್ಲಿ 2,725 ಭಜನಾ ಮಂಡಳಿಗಳ 5,450 ಮಂದಿಗೆ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ 5000 ಭಜನಾ ಮಂಡಳಿಗಳಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಭಜನೆಯಲ್ಲಿ ಪರಿಣತರಾಗಿದ್ದಾರೆ ಎಂದರು. ಈ ಬಾರಿಯ ತರಬೇತಿ ಕಮ್ಮಟದಲ್ಲಿ ಹನ್ನೊಂದು ಜಿಲ್ಲೆಗಳಿಂದ 98 ಪುರುಷರು ಮತ್ತು 71 ಮಹಿಳೆಯರು ಸೇರಿದಂತೆ ಒಟ್ಟು 169 ಮಂದಿ ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ವಿದುಷಿ ಚೈತ್ರಾಭಟ್ ಧರ್ಮಸ್ಥಳ ಮತ್ತು ಬಳಗದವರ ನೃತ್ಯರೂಪಕದ ಮೂಲಕ ಪ್ರಾರ್ಥನೆ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಮ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಬೆಳ್ತಂಗಡಿ ಬಸದಿಯಲ್ಲಿ ವಿಶೇಷ ಆರಾಧನೆ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ

Article Image

ಬೆಳ್ತಂಗಡಿ ಬಸದಿಯಲ್ಲಿ ವಿಶೇಷ ಆರಾಧನೆ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ

ಉಜಿರೆ: ವಿದ್ಯಾರ್ಥಿಗಳು ವಿದ್ಯೆಯ ಜೊತೆ ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶನಿವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ 733 ವಿದ್ಯಾರ್ಥಿಗಳಿಗೆ 20,29,000 ರೂ. ವಿದ್ಯಾರ್ಥಿ ಪ್ರೋತ್ಸಾಹಧನವನ್ನು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸ್ಮಾರಕ ಟ್ರಸ್ಟ್ ವತಿಯಿಂದ ವಿತರಿಸಿ ಆಶೀರ್ವಚನ ನೀಡಿದರು. ಇಂದಿನ ಅತ್ಯಂತ ವೇಗ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಒತ್ತಡದಲ್ಲೇ ಬದುಕುತ್ತಿದ್ದಾರೆ. ಗುರುಹಿರಿಯರಿಂದಲೂ ಮಕ್ಕಳಿಗೆ ಸಕಾಲಿಕ ಮಾರ್ಗದರ್ಶನ ಸಿಗುತ್ತಿಲ್ಲ. ಹಣ, ಉದ್ಯೋಗ, ಆಸ್ತಿ, ಕೀತಿ- ಯಾವುದೂ ಶಾಶ್ವತವಲ್ಲ. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯ, ಪರೋಪಕಾರ, ಕರುಣೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಸ್ವಾಗತಿಸಿದರು. ಕೆ. ರಾಜವರ್ಮ ಬಳ್ಳಾಲ್, ಡಾ. ಜೀವಂಧರ ಬಳ್ಳಾಲ್, ಕೆ. ಪ್ರಸನ್ನ ಕುಮಾರ್, ಪ್ರೇಮ್ ಕುಮಾರ್ ಹೊಸ್ಮಾರು, ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎಂ. ಜಿನರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಸದಿಯಲ್ಲಿ 24 ತೀರ್ಥಂಕರರ ಆರಾಧನೆ ಮತ್ತು ವಿಶೇಷ ಪೂಜೆ ನಡೆಯಿತು. ಕಾರ್ಯಕ್ರಮ ನಿರ್ವಹಿಸಿದ ಶಿಕ್ಷಕ ಧರಣೇಂದ್ರ ಕುಮಾರ್ ಧನ್ಯವಾದವಿತ್ತರು.

ವಿಶ್ವಶಾಂತಿ ಯುವಸೇವಾ ಸಮಿತಿ (ರಿ) ಬೆಂಗಳೂರು ಶ್ರೀ ಆದಿನಾಥ ವೈಭವ ಕಾರ್ಯಕ್ರಮ

Article Image

ವಿಶ್ವಶಾಂತಿ ಯುವಸೇವಾ ಸಮಿತಿ (ರಿ) ಬೆಂಗಳೂರು ಶ್ರೀ ಆದಿನಾಥ ವೈಭವ ಕಾರ್ಯಕ್ರಮ

ವಿಶ್ವಶಾಂತಿ ಯುವಸೇವಾ ಸಮಿತಿ (ರಿ) ಬೆಂಗಳೂರು “ಶ್ರೀ ಆದಿನಾಥ ವೈಭವ” ವಿಶ್ವದ ಮೊದಲ ಬೃಹತ್ ಜಿನಸಹಸ್ರನಾಮ ಸ್ತುತಿ ವಿಶ್ವ ದಾಖಲೆ ಕಾರ್ಯಕ್ರಮವು ಸಾವಿರಕಂಬ ಬಸದಿಯಲ್ಲಿ ಪೂಜ್ಯ ಸ್ವಾಮೀಜಿಯವರ ಚಾಲನೆ ಮೂಲಕ ಸೆ. 22ರಂದು ಪ್ರಾತಃಕಾಲ 3.15ಕ್ಕೆ ನಡೆಯಲಿದೆ. ಕಾರ್ಯಕ್ರಮದ ಸಮಾರೋಪ ಸಮಾರಂಭವು ಮೂಡುಬಿದಿರೆ ಶ್ರೀ ಜೈನ ಮಠದ ಭಾರತಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ, ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ಸಂಜೆ 6.15ರಿಂದ ನಡೆಯಲಿದ್ದು, ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಗೌರವ ಅಧ್ಯಕ್ಷತೆಯಲ್ಲಿ, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರೀಯಾ ಹರ್ಷೇಂದ್ರ ಕುಮಾರ್ ಇವರ ಗೌರವ ಅತಿಥೇಯದಲ್ಲಿ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮತ್ತು ಕಾರ್ಯದರ್ಶೀಯಾದ ರಶ್ಮಿತಾ ಯುವರಾಜ್ ಜೈನ್ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಇವರ ವಿಶೇಷ ಅತಿಥೇಯದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರೊ. ಅಜಿತ್ ಪ್ರಸಾದ್ ನಿವೃತ್ತ ಉಪ ಪ್ರಾಂಶುಪಾಲರು ಮತ್ತು ವಿಭಾಗ ಮುಖ್ಯಸ್ಥರು ಮತ್ತು ವೀಣಾ ಬಿ. ಆರ್. ಶೆಟ್ಟಿ ಸಾಹಿತಿಗಳು ಮೂಡುಬಿದಿರೆ ಇವರು ಆಗಮಿಸಲಿದ್ದಾರೆ.

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಶಲಕ್ಷಣ ಪರ್ವ ಆಚರಣೆ

Article Image

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಶಲಕ್ಷಣ ಪರ್ವ ಆಚರಣೆ

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಿನಾಂಕ 08.09.2024 ನೇ ಭಾನುವಾರದಿಂದ ದಿನಾಂಕ 10.09.2024 ನೇ ಮಂಗಳವಾರದವರೆಗೆ ಕಾರ್ಕಳ ದಾನಶಾಲಾ ಜೈನ ಮಠದ ರಾಜಗುರು ಧ್ಯಾನ ಯೋಗಿ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ದಶಲಕ್ಷಣ ಪರ್ವವನ್ನು ಶ್ರದ್ಧಾ ಭಕ್ತಿಯಿಂದ ಪ್ರತಿ ವರ್ಷದಂತೆ ಆಚರಿಸಲಾಯಿತು. ಉತ್ತಮ ಕ್ಷಮಾಧರ್ಮದಂದು ಧಾರ್ಮಿಕ ಚಿಂತಕರಾದ ಭರತ್ ರಾಜ್ ಮುಡಾರು, ಹಿರಿಯ ಮಾಘಮಾಲ, ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ್ ಕುಮಾರ್ ಬಲ್ಲಾಳ್, ಪ್ರಭಾತ್ ಕುಮಾರ್, ಕಾರ್ಕಳ ಜೈನ್ ಮಿಲನಿನ ಅಧ್ಯಕ್ಷರಾದ ಅಶೋಕ್ ಎಚ್. ಎಂ., ಆಶ್ರಮದ ಮೇಲ್ವಿಚಾರಕರಾದ ವೀರೇಂದ್ರ ಜೈನ್ ಇವರುಗಳು ದೀಪ ಬೆಳಗಿಸುವುದರ ಮೂಲಕ 10 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿದಿನ ಸಂಜೆ ಶ್ರೀ ಜಿನಪೂಜೆ, ಭಜನೆ, ಮಹಾಮಂಗಳಾರತಿ, ವಿದ್ವಾಂಸರಿಂದ ಉಪನ್ಯಾಸ, ತತ್ವಾರ್ಥ ಸೂತ್ರವಾಚನ, ನಿಲಯದ ವಿದ್ಯಾರ್ಥಿಗಳಿಂದ ಭಾಷಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕೊನೆಯ ದಿನವಾದ ದಿನಾಂಕ 17.09.2024 ನೇ ಮಂಗಳವಾರ ಉತ್ತಮ ಬ್ರಹ್ಮಚರ್ಯ ಧರ್ಮದ ಆಚರಣೆಯಂದು ಆಶ್ರಮದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಎಂ.ಕೆ. ವಿಜಯಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕೋಶಾಧಿಕಾರಿಗಳಾದ ಎಸ್. ಅನಂತರಾಜ್ ಪೂವಣಿ ಮತ್ತು ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬ್ರಹ್ಮದೇವ ಆರ್. ಕೆ. ಕಳಸ ಇವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ ಯೋಗರಾಜ್ ಶಾಸ್ತ್ರಿ ಇವರು ಸ್ವಾಗತಿಸಿದರು. ಪರ್ವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಡೆಸಲಾದ ಧಾರ್ಮಿಕ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ವತಿಯಿಂದ 7 ನೇ, 10 ನೇ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಬಿ. ಭರತ್ ರಾಜ್ ಇವರು ಪ್ರತಿವರ್ಷದಂತೆ ಇಬ್ಬರು ವಿದ್ಯಾರ್ಥಿಗಳ ಭೋಜನಶುಲ್ಕದ ವೆಚ್ಚವನ್ನು ದಾನವಾಗಿ ನೀಡಿದರು. ಅದೇ ರೀತಿ ದಿ| ಕೆ ನಾಗ ಕುಮಾರ ಇಂದ್ರ ಮತ್ತು ಇವರ ಧರ್ಮಪತ್ನಿ ದಿ| ವಿಜಯ ಲಕ್ಷ್ಮಿ ಇವರ ಸ್ಮರಣಾರ್ಥವಾಗಿ ಮೃತರ ಪುತ್ರಿ ಬಬಿತಾ ಮಂಜುನಾಥ್ ಪ್ರಸಾದ್ ಇವರು ಮೂವರು ವಿದ್ಯಾರ್ಥಿಗಳಿಗೆ ಔಷಧ ದಾನವನ್ನು ಮಾಡಿದರು. ಹಾಗೆ ಕಾರ್ಕಳದ ಹಿರಿಯ ಶ್ರಾವಕರಾದ ಸಾಂತ್ರಬೆಟ್ಟು ಪುಷ್ಪಾವತಿ ಅಮ್ಮ ಇವರು ಆಶ್ರಮದ ಭೋಜನ ನಿಧಿಗೆ ರೂ. 15000ವನ್ನು ದಾನವಾಗಿ ನೀಡಿದರು. ಪರ್ವದ ಹತ್ತು ದಿನಗಳ ಪೂಜಾ ಮತ್ತು ಇತರ ವೆಚ್ಚಗಳ ದಾನಿಗಳನ್ನು ಹಾಗೂ ಸಂಸ್ಥೆಗೆ ಧನ ಸಹಾಯ ಮಾಡಿದ, ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದ ಮಹನೀಯರುಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಆಶ್ರಮದ ಸಹ ಮೇಲ್ವಿಚಾರಕರಾದ ಶ್ರೀ ಬಾಹುಬಲಿ ಇವರು ತತ್ವಾರ್ಥಸೂತ್ರ ಪಠಿಸಿದರು. ವಿದ್ಯಾರ್ಥಿಗಳಾದ ಉತ್ಸವ್ ಮತ್ತು ಧ್ರುವ ಪ್ರಾರ್ಥಿಸಿದರು. ಪವನ್ ವರದಿ ಮಂಡಿಸಿದರು. ಪಾರ್ಶ್ವನಾಥ್ ಸಂದೇಶ ವಾಚಿಸಿದರು. ಪ್ರಜ್ವಲ್ ಮತ್ತು ಹರ್ಷಿತ್ ವಿದ್ಯಾರ್ಥಿ ಭಾಷಣ ನೆರವೇರಿಸಿದರು. ರಜತ್ ಧನ್ಯವಾದ ಸಮರ್ಪಿಸಿದರು. ತೀರ್ಥನ್ ಇವರು ಕಾರ್ಯಕ್ರಮ ನಿರೂಪಿಸಿದರು.

ಬಜಿಲಕೇರಿ ಶ್ರೀ ಆದಿನಾಥ ಬಸದಿ: ದಶಲಕ್ಷಣ ಪರ್ವ

Article Image

ಬಜಿಲಕೇರಿ ಶ್ರೀ ಆದಿನಾಥ ಬಸದಿ: ದಶಲಕ್ಷಣ ಪರ್ವ

ಬಜಲಕೇರಿ, ಸೆ. 21: ಭಾರತೀಯ ಜೈನ್ ಮಿಲನ್ ಆಶ್ರಯದಲ್ಲಿ ಬಜಿಲಕೇರಿಯ ಶ್ರೀ ಆದಿನಾಥ ಬಸದಿಯಲ್ಲಿ ದಶಲಕ್ಷಣ ಪರ್ವದ ಹಿನ್ನೆಲೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಮೂಡುಬಿದಿರೆಯ ಶ್ರೀ ಜೈನ ಮಠದ ಸ್ವಸ್ತಿಶ್ರೀ ಡಾ। ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನಗೈದರು. ಬಸದಿಯ ಮೊಕ್ತೇಸರರಾದ ಸುರೇಶ್ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ರಾಜವರ್ಮ ಬಳ್ಳಾಲ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ವಿದ್ವಾಂಸ ಮುನಿರಾಜ ರೆಂಜಾಳ ಕಾರ್ಕಳ ಅವರನ್ನು ಸಮ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ನ ಮಂಗಳೂರು ವಲಯ ಅಧ್ಯಕ್ಷರಾದ ರತ್ನಾಕರ್ ಜೈನ್ ಸ್ವಾಗತಿಸಿದರು. ವೈಶಾಲಿ ಪಡಿವಾಲ್ ವಂದಿಸಿದರು. ಪ್ರಿಯಾ ಸುದೇಶ್ ನಿರೂಪಿಸಿದರು. ಸನತ್ ಕುಮಾರ್ ಜೈನ್ ಸಹಕರಿಸಿದರು. ದಿ। ಎಂ. ಶ್ರೀಧರ ಪಾಂಡಿ ವಿರಚಿತ ಜಿನಕಾವ್ಯ 'ಶ್ರೀ ಜ್ವಾಲಾಮಾಲಿನಿ ದೇವಿ ಚರಿತೆ' ಯಕ್ಷಗಾನದ ಶೈಲಿಯ ಕಾವ್ಯವಾಚನ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಅಜೇರು ಅವರಿಂದ ಹಾಡುಗಾರಿಕೆ ಹಾಗೂ ಮುನಿರಾಜ ರೆಂಜಾಳ ಕಾರ್ಕಳ ಅವರಿಂದ ಪ್ರವಚನ ನಡೆಯಿತು. ಚೆಂಡೆಯಲ್ಲಿ ಶ್ರೀಪತಿ ನಾಯಕ್ ಅಜೇರು, ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಸಹಕರಿಸಿದರು.

ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶ ಲಕ್ಷಣ ಮಹಾಪರ್ವದ ಆಚರಣೆ

Article Image

ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶ ಲಕ್ಷಣ ಮಹಾಪರ್ವದ ಆಚರಣೆ

ಪ.ಪೂ.ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಶ್ರೀ ಜೈನ ಮಠ, ಕಾರ್ಕಳ, ಇವರ ಪಾವನ ಸಾನಿಧ್ಯ, ಪೂಜ್ಯ ಖಾವಂದರ ಆಶೀರ್ವಾದ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶಲಕ್ಷಣ ಮಹಾಪರ್ವವು ಹತ್ತು ದಿನಗಳ ಪರ್ಯಂತ ಅಷ್ಟವಿಧಾರ್ಚನೆ ಪೂಜಾವಿಧಿಗಳೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬರು ಉಪಾಹಾರದ ವ್ಯವಸ್ಥೆಯನ್ನು ಮಾಡಿದ್ದಲ್ಲದೆ, ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಅಭಿವೃದ್ಧಿ ಕಾರ್ಯಗಳಿಗಾಗಿ ರೂ. ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದುದನ್ನು ದಾನವಾಗಿ ನೀಡಿದ್ದಾರೆ. ಇವರನ್ನು ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಶಿಶುಪಾಲ ಪೂವಣಿಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಸನ್ಮಾನಿಸಿದರು. ಡಾ. ಭರತೇಶ್ ರವರು, ಊರಿನ ಸದ್ಧರ್ಮ ಬಂಧುಗಳು ಮತ್ತು ಆಡಳಿತ ಮಂಡಳಿಯ ಸದಸ್ಯರೆಲ್ಲಾ ಉಪಸ್ಥಿತರಿದ್ದರು.

ದತ್ತಿನಿಧಿ ಪ್ರಶಸ್ತಿ ಪ್ರಧಾನ

Article Image

ದತ್ತಿನಿಧಿ ಪ್ರಶಸ್ತಿ ಪ್ರಧಾನ

2023ನೇ ಸಾಲಿನ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಜೈನ ಮಠ ಶ್ರವಣಬೆಳಗೊಳ ದತ್ತಿನಿಧಿ ಪ್ರಶಸ್ತಿ”ಯನ್ನು ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ವಿದ್ಯಾರ್ಥಿನಿ ಪ್ರೀತಿ ಸುನಿಲ್ ವೈಗುಡೆ, ಭೋಜ್, ಚಿಕ್ಕೋಡಿ ತಾ|| ಇವರಿಗೆ ನೀಡಲಾಯಿತು. ಧಾರ್ಮಿಕ ಚಿಂತಕ, ಉಪನ್ಯಾಸಕ, ಮಹಾವೀರ್ ಜೈನ್ ಇಚಿಲಂಪಾಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ಇವರು, ಪ್ರಶಸ್ತಿ ಪ್ರಧಾನ ಮಾಡಿದರು. ಅವರು ಕಾರ್ಕಳದ ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನುದ್ಧೇಶಿಸಿ ಮಾತನಾಡುತ್ತಾ, ಉತ್ತಮ ‘ಮಾರ್ಕ್ಸ್’ ಗಳಿಸಿದಲ್ಲಿ ಉನ್ನತ ಉದ್ಯೋಗ ಸಿಗಬಹುದು. 'ರಿಮಾರ್ಕ್ಸ್’ ಇಲ್ಲದ ರೀತಿಯಲ್ಲಿ ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಬೇಕಾದರೆ, ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕಾರ ಬೇಕಾಗಿದೆ. ಇಂತಹ ಮೌಲ್ಯಯುತ ಸಂಸ್ಕಾರವು, ಮಾತೃಶ್ರೀಯವರು ನಡೆಸುತ್ತಿರುವ ಆಶ್ರಮದಿಂದ ಸಿಗುತ್ತಿರುವುದು ಶ್ಲಾಘನೀಯವಾಗಿದೆ. ಎಂದು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀಯುತರನ್ನು ಶಾಲು, ಹಾರ ಹಾಕಿ, ಫಲ-ಪುಷ್ಪ ನೀಡಿ ಗೌರವಿಸಲಾಯಿತು. ಆಶ್ರಮದಲ್ಲಿ ಶೈಕ್ಷಣಿಕವಾಗಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ, ಸಂಸ್ಥೆಯ ಅಧ್ಯಕ್ಷರಾದ ಹೇಮಾವತಿ ಅಮ್ಮನವರು ಕೊಡಮಾಡಿದ ಅಭಿನಂದನಾ ಪತ್ರ ಮತ್ತು ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಸಮಾರಂಭದಲ್ಲಿ ಮಾಜಿ ರೋಟರಿ ಗವರ್ನರ್, ಡಾ|| ಭರತೇಶ್ ಜೈನ್, ಕಾರ್ಯದರ್ಶಿ ಶಿಶುಪಾಲ್ ಪೂವಣಿ, ಧರ್ಮಸ್ಥಳ, ಟ್ರಸ್ಟಿಗಳಾದ ಸುಮಾಲಿನಿ, ಮಾಲತಿ, ಜಯಲಕ್ಷ್ಮೀ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ, ಕಾರ್ಕಳ ಶ್ರೀ ಜೈನ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬ ಇವರು ಆಶ್ರಮದ ಅಭಿವೃದ್ಧಿ ನಿಧಿಗಾಗಿ ರೂ.1,11,111/-ರ (ಒಂದು ಲಕ್ಷದ, ಹನ್ನೊಂದು ಸಾವಿರದ, ನೂರ ಹನ್ನೊಂದು) ಚಕ್ ನ್ನು ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. 10 ದಿವಸವೂ ಅಷ್ಟವಿಧಾರ್ಚನೆ, ದಶಲಕ್ಷಣ ಪೂಜೆ, ಪದ್ಮಾವತಿ ಅಮ್ಮನವರ ಪೂಜೆ, ಭಜನೆ, ಗಣ್ಯರಿಂದ ಹಾಗೂ ವಿದ್ಯಾರ್ಥಿನಿಯರಿಂದ ಧಾರ್ಮಿಕ ಪ್ರವಚನವನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಶ್ರಾವಕ, ಶ್ರಾವಿಕೆಯರು ಪೂಜೆಯಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು. ವರದಿ : ಶಿಶುಪಾಲ್ ಪೂವಣಿ, ಧರ್ಮಸ್ಥಳ

ಹೊಸ್ಮಾರು: ಸಾಮೂಹಿಕ ವ್ರತ ಸ್ವೀಕಾರ (ವೃತೋಪದೇಶ) ಸಮಾರಂಭ

Article Image

ಹೊಸ್ಮಾರು: ಸಾಮೂಹಿಕ ವ್ರತ ಸ್ವೀಕಾರ (ವೃತೋಪದೇಶ) ಸಮಾರಂಭ

ಶ್ರೀ ಸಿದ್ಧಿ ಕ್ಷೇತ್ರ ಸಿದ್ದರವನ ಬಸದಿಯಲ್ಲಿ ನಡೆದ ಸಾಮೂಹಿಕ ವ್ರತ ಸ್ವೀಕಾರ (ವೃತೋಪದೇಶ) ಸಮಾರಂಭವು ಪ. ಪೂ. 105 ಮುಕ್ತಿ ಮತಿ ಮಾತಾಜಿಯವರ ಧರ್ಮೋಪದೇಶ ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ದಿವ್ಯ ಮಾರ್ಗದರ್ಶನ, ಸಿಂಹನಗದ್ದೆ ಬಸ್ತಿಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ಆಶೀರ್ವಚನಗಳೊಂದಿಗೆ ಸೆ.15ರಂದು ಸಂಪನ್ನಗೊಂಡಿತು. ಜೈನರ ಪವಿತ್ರ ವ್ರತ ನಿಯಮಗಳನ್ನು ಪಾಲನೆ ಮಾಡಿದರೆ ಜಗತ್ತಿನ ಯಾವ ಕಾನೂನುಗಳು ಜೈನರಿಗೆ ಅನ್ವಯಿಸುವುದಿಲ್ಲ ಹಾಗಾಗಿ ಯಾರು ಭಯ ಆತಂಕ ಪಡದೆ ವ್ರತ ನಿಯಮಗಳನ್ನು ಪಾಲನೆ ಮಾಡಬೇಕು. ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಧರ್ಮ ಸಂಸ್ಕೃತಿ ಇದ್ದರೂ ನಮ್ಮ ಧರ್ಮವನ್ನು ರಕ್ಷಿಸುವ ಹಕ್ಕು ಮತ್ತು ಅಧಿಕಾರ ನಮಗಿದೆ. ಕನ್ಯಾ ಕುಮಾರಿಯಿಂದ ಗೋವಾ ಕರಾವಳಿಯವರೆಗೆ ಯಾವ ವಿದೇಶಿಗನು ಪ್ರವೇಶಿಸದಂತೆ ಹೋರಾಟ ಮಾಡಿದ ಜೈನ ಮಹಿಳೆ ಚೆನ್ನಾಬೈರಾದೇವಿಯ ಪರಾಕ್ರಮವನ್ನು ಸವಿಸ್ತಾರವಾಗಿ ವಿವರಿಸಿದರು. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ ಎಂದು ಸಿಂಹನಗದ್ದೆ ಬಸ್ತಿಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಮೂಡಾ ಅಧ್ಯಕ್ಷರಾದ ಹರ್ಷವರ್ಧನ ಪಡಿವಾಲ್ ಅವರನ್ನು ಗೌರವಿಸಲಾಯಿತು. ಮುನಿರಾಜ ರೆಂಜಾಳರವರು ಮಕ್ಕಳಿಗೆ ಸಂಸ್ಕಾರದ ಮಾಹಿತಿ ನೀಡಿದರು. ಸುಮಾರು 112 ಜೈನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡು ಜೈನಾಗಮದಂತೆ ದೇವ ಗುರು ಶಾಸ್ತ್ರದೊಂದಿಗೆ ರತ್ನತ್ರಯವನ್ನು ಧಾರಣೆ ಮಾಡಿದರು. ಸೇವಾ ಕರ್ತೃರಾದ ಶ್ರುತಾಂಜನ್ ಜೈನ್ ಉಪಸ್ಥಿತರಿದ್ದರು. ವಿಜಯ ಕುಮಾರ್ ಕಂಗಿನಮನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು.

ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ

Article Image

ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆದಿಂಜೆ ಶ್ರೀ ವಿದ್ಯಾಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು ಇವರ ವತಿಯಿಂದ ಶಿಕ್ಷಕ ವೃತ್ತಿಯಲ್ಲಿ ಅಮೋಘ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದು ಇವರ ಸೇವೆಯನ್ನು ಪುರಸ್ಕರಿಸಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ 2024-25ನೇ ಸಾಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯ ಅತಿಥಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಮೊದಲು ಇವರಿಗೆ, "ತಾಲೂಕು ಸಾಧಕ ಶಿಕ್ಷಕ ಪ್ರಶಸ್ತಿ" "ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ", "ನಿಟ್ಟೆ ರೋಟರಿ ಸಂಸ್ಥೆಯ ನೇಶನ್ ಬಿಲ್ಡರ್ ಅವಾರ್ಡ್" ಲಭಿಸಿರುತ್ತದೆ.

ದಶಲಕ್ಷಣ ಪರ್ವದ ಅಂಗವಾಗಿ ಅಷ್ಟವಿಧಾರ್ಚನೆ ಪೂಜೆ

Article Image

ದಶಲಕ್ಷಣ ಪರ್ವದ ಅಂಗವಾಗಿ ಅಷ್ಟವಿಧಾರ್ಚನೆ ಪೂಜೆ

ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಡಿ ವೀರೇಂದ್ರ ಹೆಗ್ಗಡೆಯವರ, ಹೇಮಾವತಿ ವಿ. ಹೆಗ್ಗಡೆಯವರ, ಡಿ. ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ದಿನಾಂಕ 8/ 9/ 2024 ರಿಂದ 17/9/2024 ರವರೆಗೆ ದಶಲಕ್ಷಣ ಪರ್ವದ ಅಂಗವಾಗಿ ಅಷ್ಟವಿಧಾರ್ಚನೆ ಪೂಜೆ ಹಾಗೂ ದಶಲಕ್ಷಣ ಪರ್ವಗಳಿಗೆ ಸಂಬಂಧಿಸಿದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಹಾಗೆಯೇ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಮತ್ತು ಸ್ವಾಧ್ಯಾಯವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶ್ರಾವಕ ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗಿಗಳಾದರು.

ಪುರಾಣ ವಾಚನ-ಪ್ರವಚನ: ಸಮಾರೋಪ ಸಮಾರಂಭ

Article Image

ಪುರಾಣ ವಾಚನ-ಪ್ರವಚನ: ಸಮಾರೋಪ ಸಮಾರಂಭ

ಉಜಿರೆ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಎರಡು ತಿಂಗಳ ಕಾಲ ನಡೆದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಸೋಮವಾರ ಮುಕ್ತಾಯಗೊಂಡಿತು. ಎರಡು ತಿಂಗಳು ಪ್ರತಿದಿನ ಸಂಜೆ ಗಂಟೆ 6 ರಿಂದ ರಾತ್ರಿ ಗಂಟೆ 8ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ಊರಿನ ನಾಗರಿಕರು ಹಾಗೂ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ಕೂಡಾ ಕಾರ್ಯಕ್ರಮದ ಸೊಗಡನ್ನು ಆಸ್ವಾದಿಸಿ ಪುಣ್ಯಸಂಚಯ ಮಾಡಿಕೊಂಡರು. ಎರಡು ತಿಂಗಳು ನಡೆದ ಪುರಾಣ ವಾಚನದಲ್ಲಿ 14 ಮಂದಿ ಹಾಗೂ ಪ್ರವಚನದಲ್ಲಿ 20 ಮಂದಿ ವಿದ್ವಾಂಸರು ಭಾಗವಹಿಸಿದರು. ಸೋಮವಾರ ಸುಪ್ರೀತಾ ಕೋರ್ನಾಯ ವಾಚನ ಮಾಡಿದರೆ ಅಶೋಕ ಭಟ್ ಪ್ರವಚನ ನೀಡಿದರು. ಸಮಾರೋಪ ಸಮಾರಂಭದಲ್ಲಿ ಹೆಗ್ಗಡೆಯವರು ಪುರಾಣ ವಾಚನ-ಪ್ರವಚನದಲ್ಲಿ ಭಾಗವಹಿಸಿ, ಎಲ್ಲರನ್ನೂ ಗೌರವಿಸಿ ಅಭಿನಂದಿಸಿದರು.

ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ವಿಧಾನ

Article Image

ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ವಿಧಾನ

ಉಜಿರೆ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಹದಿಮೂರನೆ ವರ್ಷದ ಅನಂತನೋಂಪಿ ಆರಾಧನಾ ವಿಧಾನದ ಪ್ರಥಮ ದಿನದ ಪೂಜೆಯು ಸೋಮವಾರ ನಡೆಯಿತು. 12 ಮಂದಿ ಶ್ರಾವಕರು ಹಾಗೂ 8 ಮಂದಿ ಶ್ರಾವಕಿಯರು ಸೇರಿದಂತೆ ಒಟ್ಟು 20 ಮಂದಿ ನೋಂಪಿಯ ವೃತಧಾರಿಗಳಾಗಿ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿದರು. ಅಳದಂಗಡಿಯ ಪದ್ಮಪ್ರಭ ಇಂದ್ರ ಮತ್ತು ನಾರಾವಿ ಹರ್ಷೇಂದ್ರ ಇಂದ್ರ ಅವರ ಸಹಕಾರದೊಂದಿಗೆ ನೋಂಪಿ ಆರಾಧನಾ ವಿಧಾನ ನಡೆಯಿತು. ಮೂರು ದಿನಗಳಲ್ಲಿ ಅನಂತ ನೋಂಪಿ ನಡೆಯಲಿದ್ದು ಇಂದು ಬುಧವಾರ ಸಮಾಪನಗೊಳ್ಳುತ್ತದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿರಿದ್ದು ಮಂಗಲಪ್ರವಚನ ನೀಡುವರು.

ಆತ್ಮನೇ ಚರೀತೇತಿ ಬ್ರಹ್ಮಚರ್ಯ: ಉತ್ತಮ ಬ್ರಹ್ಮಚರ್ಯ

Article Image

ಆತ್ಮನೇ ಚರೀತೇತಿ ಬ್ರಹ್ಮಚರ್ಯ: ಉತ್ತಮ ಬ್ರಹ್ಮಚರ್ಯ

ಆತ್ಮನೇ ಚರೀತೇತಿ ಬ್ರಹ್ಮಚರ್ಯ: ಆತ್ಮನಲ್ಲಿ ತಲ್ಲೀನವಾಗುವುದು ಲೀನವಾಗುವುದೇ ಬ್ರಹ್ಮಚರ್ಯ. ಆಂತರಿಕವಾಗಿಯೂ, ಬಾಹ್ಯವಾಗಿ ಯೂ ವಿಷಯಾಸಕ್ತಿ ಭೋಗಗಳಲ್ಲಿ ಸದಾ ತಲ್ಲೀನನಾಗಿರದೇ ಮನಸ್ಸಿನ ವಿಕಾರತೆಗೆ ಒಳಗಾಗದೇ ಬದುಕುವುದು ಬ್ರಹ್ಮಚರ್ಯ. ಇಲ್ಲಿ ವಿಕಾರತೆ ಎಂದರೆ ಕೇವಲ ದೈಹಿಕ ವಿಕಾರತೆಗೆ ಒಳಗಾಗದೇ ಇರುವುದು ಮಾತ್ರವಲ್ಲ, ಹೊರಗಿನ ಪ್ರಪಂಚದ ಮಾಯಾಲೋಕಕ್ಕೆ ಸಿಲುಕದೇ ಸಂಸಾರದಲ್ಲಿದ್ದರೂ ತನ್ನ ಪುರುಷ ಅಥವಾ ಸ್ತ್ರೀಯನ್ನು ಹೊರತುಪಡಿಸಿ ಉಳಿದೆಲ್ಲ ಪುರುಷ ಮತ್ತು ಸ್ತ್ರೀಯರನ್ನು ಗೌರವ ಭಾವದಿಂದ, ವಿಕಾರತೆಯಲ್ಲದೇ ನೋಡುವುದೇ ಬ್ರಹ್ಮಚರ್ಯ. ಶ್ವೇತಾ ನಿಹಾಲ್ ಜೈನ್ ಪಾಣೆ ಮಂಗಳೂರು

ತುಳು ನಾಡಿನ ಭವ್ಯ ಪರಂಪರೆಗೆ ಜೈನರ ಕೊಡುಗೆ ಅಪಾರ

Article Image

ತುಳು ನಾಡಿನ ಭವ್ಯ ಪರಂಪರೆಗೆ ಜೈನರ ಕೊಡುಗೆ ಅಪಾರ

ಕರ್ನಾಟಕ ರಾಜ್ಯದಲ್ಲಿರುವ ತುಳುನಾಡು ಭವ್ಯವಾದ ಪರಂಪರೆ, ಸಂಸ್ಕೃತಿ, ಆಚರಣೆಗಳು ಮುಂತಾದ ಮಹೋನ್ನತ ಉದಾತ್ತ ಧ್ಯೇಯಗಳನ್ನು ಹೊಂದಿರುವ ಬೀಡಾಗಿದೆ. ಇಲ್ಲಿ ಸರ್ವಧರ್ಮಗಳು ಸಹೋದರತೆಯ ಪಡಿಯಚ್ಚಿನಲ್ಲಿ ಬಾಳಿ ಬದುಕುವ ಪರಿಯನ್ನು ನೋಡುವ ಸೊಗಸೇ ಅನನ್ಯವಾದದ್ದು. ಆದರೆ ಕೆಲವು ರಾಜಕೀಯ ಹಾಗೂ ಕೊಳಕು ಮನಸ್ಸುಗಳ ಚಿತಾವಣೆಯಿಂದಾಗುವ ಸಾಮರಸ್ಯದ ಧಕ್ಕೆ ಅತ್ಯಲ್ಪವಾದರೂ ಕೆಲವೊಮ್ಮೆ ಗಂಭೀರವಾಗಿ ಬೂದಿ ಮೆಚ್ಚಿದ ಕೆಂಡದಂತೆ ಕಂಡರೂ ತುಳುನಾಡಿನ ಭವ್ಯತೆಗೆ ಕೊಂಕಿಲ್ಲ ಎಂಬುದು ಅಷ್ಟೇ ದಿಟ. ಇಲ್ಲಿ ಬಸದಿಗಳು, ದೇವಸ್ಥಾನಗಳು, ಮಸೀದಿಗಳು, ಚರ್ಚುಗಳು, ಭೂತಸ್ಥಾನಗಳು, ನಾಗಾಲಯಗಳು ಈ ಮಣ್ಣಿನ ಬಾಂಧವ್ಯದ ಸೊಗಡಿನ ಘಮಲನ್ನು ವಿಶ್ವದಾದ್ಯಂತ ಪಸರಿಸುತ್ತಿದೆ. ಮೊದಲೇ ಹೇಳಿದಂತೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಪರಸ್ಪರರ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿವೆ. ಈ ವಿಚಾರಗಳು ಮೋಲ್ನೋಟಕ್ಕೆ ವಿಜ್ರಂಭಿಸುವಂತೆ ಕಂಡರೂ ತುಳುವರ ಅಸಾಮಾನ್ಯ ಸಾಮರಸ್ಯವನ್ನು ಹಾಳುಗೆಡವಲು ಸಾಧ್ಯವೇ ಇಲ್ಲ ಎಬುದು ತುಳುನಾಡಿನ ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ. ತುಳುನಾಡಿನ ಇತಿಹಾಸ , ವರ್ತಮಾನದಲ್ಲಿಯೇ ಆಗಲಿ ಜೈನರು ನೀಡಿರುವ ಕೊಡುಗೆಯ ಮಹಾಪೂರವೇ ದಾಖಲಾಗಿದೆ. ಸಾಮರಸ್ಯದ ಬದುಕಿಗೆ ಜೈನರಸರು ನೀಡಿದ ಕೊಡುಗೆಯ ಉಲ್ಲೇಖ ಚರಿತ್ರಾರ್ಹವಾದದ್ದು. ಭಾರತದ ಇತಿಹಾಸದಲ್ಲಿ ರಾಜಮಹಾರಾಜರುಗಳು ರಕ್ತಸಿಕ್ತ ಚರಿತ್ರೆಯನ್ನು ಹೊಂದಿದ್ದರೆ ತುಳುನಾಡಿನ ಜೈನರಸರು ಇದಕ್ಕೆ ಅಪವಾದವಾಗಿದ್ದಾರೆ. ಬಸದಿಗಳು, ದೇವಸ್ಥಾನಗಳು , ಮಸೀದಿಗಳು, ಚರ್ಚುಗಳು, ಭೂತಾಲಯ, ನಾಗಾಲಯಗಳು ಜೈನರ ಕೊಡುಗೆಯನ್ನು ಸಾರುತ್ತಾ ಗತ ಇತಿಹಾಸದಲ್ಲಿ ನಡೆದ ತ್ಯಾಗ, ದಾನ, ಸಮರ್ಪಣೆಯನ್ನು ಸಾರುತ್ತಾ ಬಂದಿದೆ. ಕೆಲವೊಂದು ಸಂದರ್ಭಗಳಲ್ಲಿ ಜೈನರು ಸಂಪೂರ್ಣವಾಗಿ ಮನೆಮಠಗಳನ್ನು ಕಳೆದುಕೊಂಡರೂ ಸರಿಯೇ ದೈವ ದೇವ ಮಂದಿರಗಳನ್ನು ಉಳಿಸಿ ಬೆಳೆಸಿದ ಪರಿಯನ್ನು ಮೆಲುಕು ಹಾಕುವುದೇ ಹೆಮ್ಮೆಯ ವಿಚಾರವಾಗಿದೆ. ಜಾತ್ಯಾತೀತ ಮನೋಭಾವನೆಯನ್ನು ಮೆರೆದ ಜೈನರಸರು ತಮ್ಮ ಕುಲದೇವರುಗಳನ್ನಾಗಿ ಹಿಂದೂಗಳ ಆರಾಧ್ಯ ದೇವರುಗಳನ್ನು ಪೂಜಿಸಿಕೊಂಡು ಬಂದ ಪರಂಪರೆ ನಮ್ಮ ಮುಂದಿದೆ. ಇವತ್ತಿನವರೆಗೂ ದೈವ ದೇವರ ಸ್ಥಾನಗಳ ಅಡಿಪಾಯದ ಕಲ್ಲುಗಳೂ ಕೂಡ ಜೈನರ ಕೊಡುಗೆಯನ್ನು ಎದೆಯುಬ್ಬಿಸಿ ಸಾರುತ್ತಾ ಬರುತ್ತಿದೆ. ಮಾತೃ ಪ್ರಧಾನ ವ್ಯವಸ್ಥೆಗೆ ಜೈನರು ಕೊಟ್ಟ ಕೊಡುಗೆ ಇಂದು ಹಲವು ಮತಪಂಗಡಗಳಲ್ಲೂ ಚಿಗುರೊಡೆದು ಹೆಮ್ಮರವಾಗಿ ಬೆಳೆದಿದೆ. ತುಳುವರು ಅವರು ಯಾರೇ ಆಗಿರಲಿ, ಹಿಂದೂಗಳೇ ಆಗಿರಲಿ, ಎಲ್ಲರ ಕೊಡುಗೆ ಶ್ರೇಷ್ಠವಾದದ್ದು ಎಂಬ ಅರಿವು ತುಳುವರಿಗಿದೆ. ಆದರೆ ಕೆಲವೊಂದು ಘಟನೆಗಳು ಇತ್ತೀಚೆಗೆ ಜೈನರನ್ನು ತುಳುನಾಡಿನ ಭವ್ಯ ಪರಂಪರೆಯಿಂದ ಬೇರ್ಪಡಿಸುವ ವಿಚಾರಗಳು ಚಿಗುರೊಡೆಯಲು ಪ್ರಾರಂಭವಾಗಿರುವುದು ಖೇದಕರ. ಆದರೆ ಇದನ್ನು ತುಳುನಾಡಿನ ತುಳುವರು ಪರಿಗಣನೆಗೆ ತೆಗೆದುಕೊಳ್ಳಬಾರದು ಹಾಗೂ ತುಳುನಾಡಿನ ಐಕ್ಯತೆಗೆ ಭಂಗ ತರುವ ಕೆಲಸಗಳಿಗೆ ಪ್ರೋತ್ಸಾಹ ನೀಡಬಾರದು.‌ ನಮ್ಮ ತುಳುನಾಡು ವಿಶ್ವದಲ್ಲಿಯೇ ಸರ್ವಶ್ರೇಷ್ಠವಾದ ಸಂಸ್ಕೃತಿಗೆ ಅಪಚಾರವಾಗದಂತೆ ತುಳುವರು ನಡೆದುಕೊಳ್ಳಬೇಕಿರುವುದು ಅತೀ ಅಗತ್ಯವಾಗಿದೆ. ನಿರಂಜನ್ ಜೈನ್ ಕುದ್ಯಾಡಿ

ಜೈನರ ದೊಡ್ಡ ಹಬ್ಬ - ದಶ ಲಕ್ಷಣ ಪರ್ವ

Article Image

ಜೈನರ ದೊಡ್ಡ ಹಬ್ಬ - ದಶ ಲಕ್ಷಣ ಪರ್ವ

ದಶಲಕ್ಷಣ ಪರ್ವ ದಿಗಂಬರ ಜೈನರು ಆಚರಿಸುವ ಬಲು ದೊಡ್ಡ ಹಬ್ಬ. ದಿಗಂಬರ ಸಂಪ್ರದಾಯದಲ್ಲಿ, ಜೈನರಿಗೆ ಆತ್ಮದ ಗುಣಲಕ್ಷಣಗಳನ್ನು ನೆನಪಿಸಲು ಭಾದ್ರಪದ ಮಾಸದ ಶುಕ್ಲ ಪಂಚಮಿಯಂದು ಪ್ರಾರಂಭವಾಗಿ 10 ದಿನಗಳ ಕಾಲ ಹತ್ತು ಪ್ರಮುಖ ಗುಣಗಳಾದ ದಶಲಕ್ಷಣ ಧರ್ಮವನ್ನು ಆಚರಿಸಲಾಗುತ್ತದೆ. ಹತ್ತು ಧರ್ಮಗಳು ಅಥವಾ ಆತ್ಮದ ಸದ್ಗುಣಗಳೆಂದರೆ: ಕ್ಷಮೆ, ನಮ್ರತೆ, ನೇರತೆ, ತೃಪ್ತಿ, ಸತ್ಯ, ಇಂದ್ರಿಯ ಸಂಯಮ, ತಪಸ್ಸು, ದಾನ, ಸ್ವಾಮ್ಯರಹಿತತೆ ಮತ್ತು ಬ್ರಹ್ಮಚರ್ಯ. ದಶಲಕ್ಷಣ ಪರ್ವ ಹತ್ತು ಪುಣ್ಯಗಳ ಹಬ್ಬ. "ಹತ್ತು ಧರ್ಮ"ಗಳೆಂದೂ ಕರೆಯಲ್ಪಡುವ ಈ ಹತ್ತು ಗುಣಗಳನ್ನು ಕೆಳಗೆ ನೀಡಲಾಗಿದೆ. ವಾಸ್ತವವಾಗಿ ಇವುಗಳ ಮೂಲಕ ನಾವು ಧರ್ಮದ ಅತಿಹತ್ತಿರ ಸಾಗಬಹುದು. ಇವುಗಳನ್ನು ನಿರ್ದಿಷ್ಟ ಕ್ರಮದಲ್ಲಿ ಜೋಡಿಸಲಾಗಿದೆ, ಏಕೆಂದರೆ ಆತ್ಮದ ನಿಯಮಿತ ಬೆಳವಣಿಗೆಗೆ ಮತ್ತು ದುಷ್ಕೃತ್ಯ ಗಳು, ಪಾಪಗಳನ್ನು ಕಡಿಮೆ ಮಾಡಲು ಈ ಕ್ರಮ ಹೆಚ್ಚು ಉಪಯುಕ್ತವಾಗಿದೆ. ಮೊದಲು ನಾವು ಭಾವೋದ್ರೇಕಗಳಿಂದ ಕಳಚಿ ನಾವು ನಮ್ಮ ಆತ್ಮದ ಉನ್ನತಿಗೆ ಅಗತ್ಯವಾದ ಸಂಯಮ, ತಪ, ತ್ಯಾಗ ಇತ್ಯಾದಿಗಳ ಕಡೆಗೆ ನಡೆಯುತ್ತಾ, ಜಾತಿ, ಧರ್ಮ, ಲಿಂಗ ಅಥವಾ ದೇಶದ ಆಧಾರದ ಮೇಲೆ ಯಾವುದೇ ಭೇದಭಾವವಿಲ್ಲದ ಹತ್ತು ಸದ್ಗುಣಗಳು ಎಲ್ಲಾ ಮನುಕುಲಕ್ಕೆ ಆದರ್ಶವಾಗಿದೆ.ಅದರ ಉಪಯುಕ್ತತೆ ಮತ್ತು ಎಲ್ಲರಿಗೂ ಸಮಾನವಾದ ಪ್ರಾಮುಖ್ಯತೆಗೆ ಮುಖ್ಯ ಕಾರಣವೆಂದರೆ ಅದರ ಕರ್ಮ ನೆಲೆ. ನಮ್ಮ ಜೀವನದ ಎಲ್ಲಾ ಸುಖ-ದುಃಖಗಳು ವರ್ತಮಾನದಲ್ಲಿ ಅಥವಾ ಹಿಂದಿನ ಜೀವಿತಾವಧಿಯಲ್ಲಿ ನಾವು ಸಂಗ್ರಹಿಸಿದ ನಮ್ಮ ಆತ್ಮಕ್ಕೆ ಸಂಬಂಧಿಸಿದ ಕರ್ಮಗಳಿಂದಾಗಿ- ಎಂದು ನಾವು ತಿಳಿದಿರಬೇಕು. ನಾವು ಪುರುಷಾರ್ಥ (ಒಳ್ಳೆಯ ಪ್ರಯತ್ನಗಳು) ಅಥವಾ ತಪ (ತಪಸ್ಸು) ಮೂಲಕ ನಮ್ಮ ಆತ್ಮಕ್ಕೆ ಸಂಬಂಧಿಸಿದ ಕೆಟ್ಟ ಕರ್ಮವನ್ನು (ಪಾಪ) ತೆಗೆದುಹಾಕದ ಹೊರತು, ನಮ್ಮ ಜೀವನದಲ್ಲಿ ನಿಜವಾದ ಸಂತೋಷ ಮತ್ತು ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಕೆಲವು ಒಳ್ಳೆಯ ಕರ್ಮಗಳ (ಪುಣ್ಯ) ಫಲದಿಂದಾಗಿ ನಾವು ಏನನ್ನಾದರೂ ಸಾಧಿಸುವ ಸಾಧ್ಯತೆಯಿದೆ ಆದರೆ ಅವು ಕೊನೆಗೊಂಡ ತಕ್ಷಣ ನಾವು ಮತ್ತೆ ಅಸ್ವಸ್ಥತೆಗೆ ಒಳಗಾಗುತ್ತೇವೆ. ಆದ್ದರಿಂದ ನಾವು ದಶಲಕ್ಷಣ ಪರ್ವದಲ್ಲಿ ಅಭ್ಯಾಸ ಮಾಡುವ ಹತ್ತು ವಿಧದ ಧರ್ಮಗಳನ್ನು ತಿಳಿದಿರಬೇಕು ಮತ್ತು ಅವುಗಳನ್ನು ಅತ್ಯುತ್ತಮ ರೀತಿಯಲ್ಲಿ ಅನುಸರಿಸುವುದು ಬಹಳ ಅವಶ್ಯಕ. ವಾಸ್ತವವಾಗಿ ಈ ಸದ್ಗುಣಗಳು/ಧರ್ಮಗಳ ಅಭ್ಯಾಸವು ಶಾಂತಿಯುತ, ಸಮೃದ್ಧ, ಅರ್ಥಪೂರ್ಣ ಮತ್ತು ಸುರಕ್ಷಿತ ಜೀವನದ ನಿಜವಾದ ಕೀಲಿಯಾಗಿದೆ. ಉತ್ತಮ ಕ್ಷಮಾ(Supreme Forgiveness) ಸಹನೆಯನ್ನು ಹೃದಯಾಂತರಾಳದಲ್ಲಿ ಬೆಳೆಸಿ ಕೋಪವನ್ನು ದೂರವಿಡುವುದು ಇದರರ್ಥ ಕೋಪವು ಏರಲುಬಿಡಬಾರದು, ಹಾಗಾದಲ್ಲಿ ಆಂತರಿಕ ಶಕ್ತಿಯ ಮೂಲಕ ಅದನ್ನು ನಿಷ್ಪರಿಣಾಮಕಾರಿಯಾಗಿ ಮಾಡುವುದು. ಕೋಪದ ಸಂಪೂರ್ಣನಿಗ್ರಹ. ಕ್ಷಮೆಯು ಹೇಡಿಯಲ್ಲ ಧೈರ್ಯಶಾಲಿಗಳ ಗುಣ(ಕ್ಷಮಾ ವೀರಸ್ಯ ಭೂಷಣಂ)ಕೋಪವು ಆತ್ಮದ ದೊಡ್ಡ ಶತ್ರುವಾಗಿದೆ ಮತ್ತು ಅದು ಎಲ್ಲಾ ಕೆಡುಕುಗಳ ಮೂಲವಾಗಿದೆ. ನಿಜವಾದ ಕ್ಷಮೆಯು ಯಾವುದೇ ಪ್ರತಿಫಲದ ಭಾವನೆಗಳಿಲ್ಲದೆ ಒಳಗಿನಿಂದ ಬರುತ್ತದೆ. ಹಿರಿಯರ ಗೌರವ ಮತ್ತು ಪಾಲನೆಯಿಂದಾಗಿ ಕ್ಷಮಿಸುವುದು ಅತ್ಯುನ್ನತ ರೀತಿಯ ಕ್ಷಮೆಯಲ್ಲ (ಉತ್ತಮ ಕ್ಷಮ), ಇದು ಕೇವಲ ಉತ್ತಮ ನಡವಳಿಕೆಯಾಗಿದೆ. ಉತ್ತಮ ಮಾರ್ದವ (Tenderness or Humility) ಅಹಂಕಾರ, ಸ್ವಾರ್ಥ ಅಥವಾ ಅಹಂಕಾರದ ಕೊರತೆಯೇ ನಮ್ರತೆ. ಅಹಂಕಾರವು ಶ್ರೇಷ್ಠತೆಯ ಸಂಕೀರ್ಣದ ವರ್ತನೆಯಾಗಿದೆ. ಧನಸಂಪತ್ತು ಹೆಮ್ಮೆಯ ಮುಖ್ಯ ಕಾರಣವಾಗಿದೆ. ಬಡತನ ಅಥವಾ ದೌರ್ಬಲ್ಯದಿಂದಾಗಿ ನಮ್ರತೆಯನ್ನು ತೋರಿಸುವುದು ಸೌಮ್ಯತೆ, ದೀನತೆ ನಿಜವಾದ ನಮ್ರತೆ ಅಲ್ಲ (ಉತ್ತಮ ಮಾರ್ದವ). ನಮ್ರತೆ ಎಂಬುದನ್ನು ಒಪ್ಪಿಕೊಳ್ಳುವುದು. ಒಬ್ಬ ವ್ಯಕ್ತಿಯು ಸ್ವಾಭಿಮಾನ ಮತ್ತು ಹೆಮ್ಮೆಯ ನಡುವಿನವ್ಯತ್ಯಾಸವನ್ನುಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಗೊಂದಲಗೊಳಿಸಬಾರದು.ಇದು ಉತ್ತಮ ಮಾರ್ದವ. ಉತ್ತಮ ಆರ್ಜವ - (ನೇರ ಅಥವಾ ಪ್ರಾಮಾಣಿಕತೆ) ವಂಚನೆಯನ್ನು ತೊಡೆದುಹಾಕುವ ಮೂಲಕ ಜೀವನದಲ್ಲಿ ಮೋಸವಿಲ್ಲದ ನಡವಳಿಕೆಯನ್ನು ಅಭ್ಯಾಸ ಮಾಡಲು.ಕುತಂತ್ರವಿಲ್ಲದ ಅಥವಾ ಮೋಸದ ಮನೋಭಾವವನ್ನು ಸರಳತೆ ಕಪಟವಿಲ್ಲದ ನಡವಳಿಕೆ ಎಂದು ವ್ಯಾಖ್ಯಾನಿಸಲಾಗಿದೆ. ದುರ್ಬಲ ವ್ಯಕ್ತಿಯು ಮಾತ್ರ ಮೋಸವನ್ನು ಮಾಡುತ್ತಾನೆ, ಏಕೆಂದರೆ ಅವನು ಸಿಕ್ಕಿಬೀಳುವ ಭಯದಲ್ಲಿದ್ದಾನೆ. ತನ್ನ ಮೋಸವನ್ನು ಮರೆಮಾಡಲು, ಅವನು ಮತ್ತಷ್ಟು ಮೋಸವನ್ನು ಮಾಡುತ್ತಾನೆ. ಕುತಂತ್ರದ ವ್ಯಕ್ತಿಯ ಆಲೋಚನೆಗಳು, ಮಾತು ಮತ್ತು ಕ್ರಿಯೆಗಳ ನಡುವೆ ಯಾವುದೇ ಸಾಮ್ಯತೆ ಇಲ್ಲ. ಅವನು ಒಂದು ವಿಷಯವನ್ನು ಯೋಚಿಸುತ್ತಾನೆ, ಇನ್ನೊಂದನ್ನು ಹೇಳುತ್ತಾನೆ ಮತ್ತು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ವರ್ತಿಸುತ್ತಾನೆ. ಉತ್ತಮ ಶೌಚ (ತೃಪ್ತಿ ಅಥವಾ ಶುದ್ಧತೆ) ದುರಾಸೆಯನ್ನು ತೊಲಗಿಸಿ ದೇಹ, ಮನಸ್ಸು ಮತ್ತು ಮಾತುಗಳನ್ನು ಶುದ್ಧವಾಗಿಟ್ಟುಕೊಳ್ಳುವುದು. ದುರಾಸೆಯ ಇಲ್ಲದಿರುವುದೇ ನೆಮ್ಮದಿ. ದುರಾಸೆ ಎಂದರೆ ಹೊಂದುವ ಬಯಕೆ. ಇದು ಎಲ್ಲಾ ಪಾಪಗಳ ಮೂಲ ಕಾರಣಗಳು ಮತ್ತು ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಗೆ ಕೋಪದಷ್ಟೇ ಅಪಾಯಕಾರಿ.ನಾಲ್ಕು ಭಾವೋದ್ರೇಕಗಳ ಮೇಲೆ ನಿಯಂತ್ರಣವನ್ನು ಮಾಡಿದ ನಂತರ, ಜನರು ತಮ್ಮ ಆತ್ಮದಲ್ಲಿ ಧನಾತ್ಮಕ ಸದ್ಗುಣಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಾರೆ. ಮುಂಬರುವ ಸದ್ಗುಣಗಳ ಪರಿಚಯಕ್ಕಾಗಿ ಹುರುಪಿನ ನಿಯಂತ್ರಣವು ಅತ್ಯಗತ್ಯ. ಉತ್ತಮ ಸತ್ಯ (Truthfulness) ಯಾವುದೇ ಜೀವಿಗಳಿಗೆ ಯಾವುದೇ ಹಾನಿಯಾಗದಂತೆ ಪವಿತ್ರ ಉದ್ದೇಶದಿಂದ ಪ್ರೀತಿಯಿಂದ ಮಾತನಾಡುವುದು. ಹೆಚ್ಚಿನ ಜನರಿಗೆ ಸತ್ಯತೆ ಎಂದರೆ ಸುಳ್ಳು ಹೇಳದಿರುವುದು,ಆದರೆ ಅದು ಪರಿಪೂರ್ಣವಾಗಿಲ್ಲ. ಸಂಪೂರ್ಣ ಸತ್ಯವೆಂದರೆ ವಿಷಯವನ್ನು ಹಾಗೆಯೇ ತಿಳಿದುಕೊಳ್ಳುವುದು, ಮತ್ತು ಕೆಟ್ಟದ್ದನ್ನು ಒಳ್ಳೆಯದರಿಂದ ಪ್ರತ್ಯೇಕಿಸುವುದು ಮಾತ್ರವಲ್ಲ. ಉತ್ತಮ ಸತ್ಯವನ್ನು ಅನುಸರಿಸಲು ಆನೆಕಾಂತವಾದದ ಆಳವಾದ ತಿಳುವಳಿಕೆ ಅತ್ಯಗತ್ಯ. ಸ್ಯಾದ್ವಾದವು ಅನೇಕಾಂತ ಪ್ರಕಾರ ನಮ್ಮ ಅಭಿಪ್ರಾಯಗಳನ್ನು ಪ್ರಸ್ತುತ ಪಡಿಸುವ ಒಂದು ಮಾರ್ಗವಾಗಿದೆ. ಉತ್ತಮ ಸಂಯಮ್ - (ಸ್ವಯಂ ಸಂಯಮ) ಪಂಚೇಂದ್ರಿಯಗಳು - ಸ್ಪರ್ಶ, ರುಚಿ, ವಾಸನೆ, ದೃಷ್ಟಿ ಮತ್ತು ಶ್ರವಣೇಂದ್ರಿಯಗಳು ಒದಗಿಸುವ ಎಲ್ಲಾ ಸಂತೋಷಗಳಿಂದ ದೂರವಿರುವ ಮತ್ತು ಎಲ್ಲಾ ಜೀವಿಗಳನ್ನು ಅತ್ಯಂತ ಶಕ್ತಿಯಿಂದ ರಕ್ಷಿಸಲು; ಆರನೇ ಮನಸ್ಸಿನ ಗುಣ. ಎಲ್ಲಾ ಜೀವಿಗಳ ವಿರುದ್ಧ ಆಲೋಚನೆಗಳು ಅಥವಾ ದೈಹಿಕ ವಿಧಾನಗಳಿಂದ ಉಂಟಾಗುವ ಹಿಂಸೆಯ ಮೇಲಿನ ನಿಯಂತ್ರಣ ಮತ್ತು ಲೌಕಿಕ ಸಂತೋಷಗಳ ಮೇಲಿನ ನಿಯಂತ್ರಣವು ಸ್ವಯಂ ನಿಯಂತ್ರಣದ ನಿಜವಾದ ವ್ಯಾಖ್ಯಾನವಾಗಿದೆ. ಉತ್ತಮ ತಪ (ತಪಸ್ಸು ಅಥವಾ ತಪಸ್ಸು) ಹಲವಾರು ವಿಧಾನಗಳ ಮೂಲಕ ಎಲ್ಲಾ ಲೌಕಿಕ ಆಸೆಗಳಿಗೆ ನಿರ್ಬಂಧ ಹಾಕುವ ಸಂಯಮವನ್ನು ಅಭ್ಯಾಸ ಮಾಡಲು ತಪಸ್ಸುಅಗತ್ಯ. ತಪಸ್ಸು ಎಂದರೆ ಒಬ್ಬರ ಪಾಪಗಳ ಪಶ್ಚಾತ್ತಾಪ. ಇದು ಬೆಂಕಿ, ಇದು ಕರ್ಮ ಧೂಳಿನ ಶಕ್ತಿಗಳನ್ನು ಸುಟ್ಟು ಮತ್ತು ಬೂದಿ ಮಾಡುತ್ತದೆ. ಸಂಯಮವು ಎರಡು ವಿಧವಾಗಿದೆ: *ಎ. ಬಾಹ್ಯ ವಿಧಗಳು, ಇದು ಭೌತಿಕ ನಿರ್ಬಂಧಗಳನ್ನು ಒಳಗೊಂಡಿರುತ್ತದೆ ಮತ್ತು, *ಬಿ. ಆಂತರಿಕ ಪ್ರಕಾರಗಳು, ಇದು ಮಾನಸಿಕ ಶುದ್ಧೀಕರಣದೊಂದಿಗೆ ವ್ಯವಹರಿಸುತ್ತದೆ. ಉತ್ತಮ ತ್ಯಾಗ (Renunciation) ಆಹಾರ (ಆಹಾರ), ಅಭಯ (ನಿರ್ಭಯತೆ), ಔಷಧ (ಔಷಧ), ಮತ್ತು ಶಾಸ್ತ್ರ ದಾನ (ಪವಿತ್ರ ಗ್ರಂಥಗಳ ವಿತರಣೆ), ಮತ್ತು ಸ್ವಯಂ ಮತ್ತು ಇತರ ಉನ್ನತಿಗಾಗಿ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳನ್ನು ಪೋಷಿಸಲು ನಾಲ್ಕು ಪಟ್ಟು ದತ್ತಿಗಳನ್ನು ನೀಡಲು. ಪರಿತ್ಯಾಗವನ್ನು ಆಂತರಿಕ ಮತ್ತು ಬಾಹ್ಯ ಎರಡೂ ಆಸ್ತಿಗಳನ್ನು ತ್ಯಜಿಸುವುದು ಎಂದು ವ್ಯಾಖ್ಯಾನಿಸಲಾಗಿದೆ. ಉತ್ತಮ ಆಕಿಂಚನ್ಯ - (ಅನುಬಂಧ) ಮೋಹದ ವಿರುದ್ಧವಾಗಿ ನೈಜ ಆತ್ಮದಲ್ಲಿ ನಂಬಿಕೆಯನ್ನು ಹೆಚ್ಚಿಸಿ ಬೇರೆಯೆಲ್ಲ ನನ್ನದಲ್ಲ ಅಂದರೆ, ಭೌತಿಕ ವಸ್ತುಗಳ; ಮತ್ತು ಆಂತರಿಕ ಪರಿಗ್ರಹವನ್ನು ತ್ಯಜಿಸಲು ಉದಾ. ಕೋಪ ಮತ್ತು ಹೆಮ್ಮೆ ಇತ್ಯಾದಿ ಮತ್ತು ಬಾಹ್ಯ ಪರಿಗ್ರಹವು- ಸಂಪತ್ತು, ಆಸ್ತಿ, ಚಿನ್ನ, ಬೆಳ್ಳಿ ವಜ್ರಗಳು ಮತ್ತು ರಾಜ ಸಂಪತ್ತುಗಳ ಮೋಹ ಬಿಡುವುದು. ಉತ್ತಮ ಬ್ರಹ್ಮಚರ್ಯ (ಪರಿಶುದ್ಧತೆ) ಬ್ರಹ್ಮಚರ್ಯದ ಮಹಾನ್ ಪ್ರತಿಜ್ಞೆಯನ್ನು ಆಚರಿಸಲು; ಅಂತರಾತ್ಮ ಮತ್ತು ಸರ್ವಜ್ಞನಾದ ಭಗವಂತನಲ್ಲಿ ಭಕ್ತಿಯನ್ನು ಹೊಂದಲು; ವಿಷಯಲೋಲುಪತೆಯ ಬಯಕೆಗಳು, ಅಸಭ್ಯ ಫ್ಯಾಷನ್‌ಗಳು, ಬಹುಪತ್ನಿತ್ವ, ಮಹಿಳೆಯರ ಮೇಲಿನ ಕ್ರಿಮಿನಲ್ ಆಕ್ರಮಣವನ್ನು ತ್ಯಜಿಸಲು. ಅನಿಯಮಿತ ಲೈಂಗಿಕ ಬಯಕೆಯು ಲೈಂಗಿಕವಾಗಿ ಹರಡುವ ರೋಗಗಳು ಅಬೋಲ, ಏಡ್ಸ್ ಮತ್ತು ಕುಟುಂಬಗಳ ನಾಶಕ್ಕೆ ಮೂಲ ಕಾರಣವಾಗಿದೆ. ಒಬ್ಬನು ತನ್ನ/ಅವಳ ಜೀವನ ಸಂಗಾತಿಗೆ ನಿಷ್ಠನಾಗಿರುವುದರಿಂದ ಅವನ/ಅವಳ ಕುಟುಂಬಕ್ಕೆ ಸ್ಥಿರತೆಯನ್ನು ನೀಡಬಹುದು. ದಶಲಕ್ಷಣ ಪರ್ವ ಶ್ರಾವಕ ಸಮಯದಲ್ಲಿ- ಶ್ರಾವಿಕರು ಸಂಬಂಧಪಟ್ಟ ದಿನಗಳಲ್ಲಿ ಮೇಲಿನ ಸದ್ಗುಣಗಳನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ವಾಸ್ತವವಾಗಿ ಈ ಸದ್ಗುಣಗಳು ಒಂದಕ್ಕೊಂದು ಸಂಬಂಧಿಸಿವೆ ಮತ್ತು ನೀವು ಒಂದನ್ನು ಅನುಸರಿಸಿದರೆ, ಇನ್ನೊಂದು ಸ್ವಯಂಚಾಲಿತವಾಗಿ ಬರುತ್ತವೆ. ಆಧ್ಯಾತ್ಮಿಕ ಅಭಿವೃದ್ಧಿ ಮತ್ತು ಶಾಂತಿಯುತ ಲೌಕಿಕ ಜೀವನದ ದೃಷ್ಟಿಕೋನದಿಂದ ಇವೆಲ್ಲವುಗಳಲ್ಲಿ ನಿಜವಾದ ಕ್ಷಮೆಯು ಅತ್ಯುನ್ನತವಾಗಿದೆ. ಆದ್ದರಿಂದ ನಾವು ಅದರಿಂದ ಪ್ರಾರಂಭಿಸಿ 10 ದಿನಗಳ ಪರ್ವದ ನಂತರ ನಾವು ಅನಂತ ಚತುರ್ದಶಿಯ ಒಂದು ದಿನದ ನಂತರ "ಕ್ಷಮವಾಣಿ"ಯನ್ನು ಆಚರಿಸುತ್ತೇವೆ. ಕ್ಷಮಾವಾಣಿಯ ಮುನ್ನಾದಿನದಂದು ನಾವು ಪರಸ್ಪರ ಕ್ಷಮೆಯನ್ನು ವ್ಯಕ್ತಪಡಿಸುತ್ತೇವೆ ಮತ್ತು ಕೆಟ್ಟ ನೆನಪುಗಳು ಅಥವಾ ಘಟನೆಗಳನ್ನು ಬಿಟ್ಟು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇವೆ. ಸ್ಪರ್ಧೆ ಮತ್ತು ದೈಹಿಕ ಬೆಳವಣಿಗೆಯ ಪ್ರಸ್ತುತ ಯುಗದಲ್ಲಿ ಜನರು ಐಷಾರಾಮಿ ಜೀವನಕ್ಕಾಗಿ ಹಣ ಮತ್ತು ಅನೇಕ ಭೌತಿಕ ಸಾಧನಗಳನ್ನು ಹೊಂದಿದ್ದಾರೆ ಆದರೆ ಅವರು ಮನಸ್ಸಿನ ಶಾಂತಿಯನ್ನು ಕಳೆದುಕೊಂಡಿದ್ದಾರೆ.ಈ ಸದ್ಗುಣಗಳ ಮೂಲಕ ಅವರು ಹೆಚ್ಚು ತೃಪ್ತಿ ಮತ್ತು ಮನಸ್ಸಿನ ಶಾಂತಿಯನ್ನು ಪಡೆಯಬಹುದು. ಮಾನಸಿಕ ಖಿನ್ನತೆಯಿದ್ದರೆ ಅದರಿಂದ ಹೊರಬರಬಹುದು ಮತ್ತು ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಮತ್ತು ಕೆಟ್ಟ ಕಾರ್ಯಗಳನ್ನು/ಪಾಪಗಳನ್ನು ಬಿಟ್ಟು ತಮ್ಮ ಅದೃಷ್ಟವನ್ನು ಬೆಳೆಸಿಕೊಳ್ಳಬಹುದು. ಅನೇಕ ಸಂದರ್ಭಗಳಲ್ಲಿ ಅದೃಷ್ಟವು ನಮ್ಮ ವೃತ್ತಿ ಅಥವಾ ವ್ಯವಹಾರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಕ್ಷಮೆ, ಸರಳ ಮತ್ತು ನೇರವಾದ ಜೀವನ, ಮೋಸ ಮುಕ್ತ ನಡವಳಿಕೆ ಮತ್ತು ದುರಾಶೆಯನ್ನು ತೊಡೆದುಹಾಕುವ ಮೂಲಕ ಅದೃಷ್ಟವನ್ನು ಸಾಧಿಸಬಹುದು. ಈ ಸತ್ಯದ ಹಿನ್ನೆಲೆಯಲ್ಲಿ ದಶಲಕ್ಷಣ ಪರ್ವದಲ್ಲಿ ನಾವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಬೇಕು, ಇದರಿಂದ ನಾವು ಹೆಚ್ಚು ಶಾಂತಿಯುತ ಜೀವನವನ್ನು ಪಡೆಯಬಹುದು. ಪ್ರೊ. ಅಕ್ಷಯ ಕುಮಾರ್ ಮಳಲಿ

ಹೊಸ್ಮಾರು: ಸಾಮೂಹಿಕ ಉಚಿತ ವ್ರತ ಸ್ವೀಕಾರ (ವ್ರತೋಪದೇಶ) ಕಾರ್ಯಕ್ರಮ

Article Image

ಹೊಸ್ಮಾರು: ಸಾಮೂಹಿಕ ಉಚಿತ ವ್ರತ ಸ್ವೀಕಾರ (ವ್ರತೋಪದೇಶ) ಕಾರ್ಯಕ್ರಮ

ಹೊಸ್ಮಾರು, ಶ್ರೀ ಸಿದ್ದಿಕ್ಷೇತ್ರ ಸಿದ್ಧರವನ ಭ| 1008 ಶ್ರೀ ಮಹಾವೀರ ಸ್ವಾಮಿ ಬಸದಿಯಲ್ಲಿ ಪ.ಪೂ. ಗಣಿನೀ ಆರ್ಯಿಕಾ 105 ಮುಕ್ತಿಮತಿ ಮಾತಾಜೀಯವರ ಚಾತುರ್ಮಾಸ್ಯದ ಪ್ರಯುಕ್ತ ದಿನಾಂಕ 15-09-2024ನೇ ಆದಿತ್ಯವಾರ ಗಂಟೆ 8.00ರಿಂದ ಸಾಮೂಹಿಕ ಉಚಿತ “ವ್ರತ ಸ್ವೀಕಾರ” (ವ್ರತೋಪದೇಶ) ಕಾರ್ಯಕ್ರಮವು ಕಾರ್ಕಳ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ, ಮಹಾಸ್ವಾಮಿಗಳು ಮತ್ತು ಎನ್.ಆರ್.ಪುರ ಸಿಂಹನಗದ್ದೆ ಬಸ್ತಿಮಠದ, ಪರಮಪೂಜ್ಯ ಸ್ವಸ್ತಿಶ್ರೀ ಮದಭಿನವ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದೆ. ವಿ.ಸೂ: 8 ವರ್ಷ ಮೇಲ್ಪಟ್ಟ ಸದ್ಧರ್ಮ ಬಂಧುಗಳ ಮಕ್ಕಳ ಹೆಸರನ್ನು ನೋಂದಾಯಿಸಿ ಸಹಕರಿಸ ಬೇಕಾಗಿ ವಿನಂತಿ. ವಿವಾಹ ಆಗದೇ ಇರುವ ಯುವಕ ಯುವತಿಯರಿಗೆ ಸಿಂಹನಗದ್ದೆ ಬಸ್ತಿಮಠ, ಎನ್.ಆರ್.ಪುರ ಪೂಜ್ಯ ಸ್ವಾಮೀಜಿಯವರಿಂದ ವಿಶೇಷ ವ್ರತೋಪದೇಶ ಕಾರ್ಯಕ್ರಮ ಜರುಗಲಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭರ್ಮ ಬಂಧುಗಳ ಮಕ್ಕಳು ಮತ್ತು ಅವಿವಾಹಿತ ಯುವಕ ಯುವತಿಯರು ಆಗಮಿಸಿ ಸಹಕರಿಸಬೇಕಾಗಿ ವಿನಂತಿ. ತಮ್ಮ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 12.09.20124 ನೋಂದಾವಣೆಗಾಗಿ ಸಂಪರ್ಕಿಸಿ: 7483068903, 9902066870.

ನಾರಾವಿ: 13 ನೇ ವರ್ಷದ ಅನಂತನೋಂಪಿ ಆರಾಧನಾ ಪೂಜಾ ವಿಧಾನ

Article Image

ನಾರಾವಿ: 13 ನೇ ವರ್ಷದ ಅನಂತನೋಂಪಿ ಆರಾಧನಾ ಪೂಜಾ ವಿಧಾನ

ನಾರಾವಿ ಮಾಗಣೆ ಭ| 1008 ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ದಿನಾಂಕ 16.09.2024ನೇ ಸೋಮವಾರದಿಂದ 18.09.2024ನೇ ಬುಧವಾರ ಪರ್ಯಂತ 13 ನೇ ವರ್ಷದ "ಅನಂತನೋಂಪಿ ಆರಾಧನಾ ಪೂಜಾ ವಿಧಾನ"ವು ಜರುಗಲಿರುವುದು. ಆ ಪ್ರಯುಕ್ತ ದಿನಾಂಕ 16.09.24ನೇ ಸೋಮವಾರ ಅನಂತ ತ್ರಯೋದಶಿಯಂದು ಬೆಳಿಗ್ಗೆ 8 ಗಂಟೆಗೆ ಆರಾಧನಾ ಪೂಜಾ ವಿಧಾನ ಆರಂಭ. ದಿನಾಂಕ 17.09.24ನೇ ಮಂಗಳವಾರ ಅನಂತ ಚತುರ್ದಶಿಯಂದು ಬೆಳಿಗ್ಗೆ 8 ಗಂಟೆಗೆ ಆರಾಧನಾ ಪೂಜಾ ವಿಧಾನವು ಸೌಮ್ಯ ಸರ್ವೆಶ್ ಜೈನ್ ಮತ್ತು ಸರ್ವೆಶ್ ಜೈನ್ ಹಾಗೂ ಬಳಗ ಮೂಡಬಿದ್ರೆ ಇವರ "ಸಂಗೀತ ಪೂಜಾಷ್ಟಕ"ದೊಂದಿಗೆ ಆರಂಭ. ದಿನಾಂಕ 18.09.24 ನೇ ಬುಧವಾರ ಅನಂತ ಹುಣ್ಣಿಮೆ ಯಂದು 8 ಗಂಟೆಗೆ ಆರಾಧನಾ ಪೂಜಾವಿಧಾನ ಆರಂಭ. ಈ ದಿನ ಮಧ್ಯಾಹ್ನ 12 ಗಂಟೆಗೆ ಬೆಳಿಗ್ಗೆ ಕಾರ್ಕಳ ಶ್ರೀ ಜೈನ ಮಠದ, ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಆಶೀರ್ವಚನ ಮಾಡಲಿದ್ದಾರೆ.

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

Article Image

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ ಆಚರಣೆಯ ಸಂದರ್ಭದಲ್ಲಿ ಪರಮ ಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ಮತ್ತು ಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು ನಂತರ ಉತ್ತಮ ಮಾರ್ದವ ಧರ್ಮದ ಬಗ್ಗೆ ಡಾ. ನೀರಜಾ ನಾಗೇಂದ್ರಕುಮಾರ್ ಅವರು ಉಪನ್ಯಾಸ ನೀಡಿದರು. ಹುಬ್ಬಳ್ಳಿ ಜೈನ ಸಮಾಜದ ಲೋಬೋಗೋಳ್, ವಿದ್ಯಾಧರ್, ಬೀಳಗಿ, ರತ್ನಾಕರ್ ಅಣ್ಣಿಗೇರಿ, ಶಾಂತಿನಾಥ ಹೋತಪೇಟೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕುತ್ಲೂರು, ಪರುಷಗುಡ್ಡೆ: ಶ್ರಾವಣ ಮಾಸದ ಸಂಪತ್ತು ಶುಕ್ರವಾರದ ವಿಶೇಷ ಪೂಜೆ

Article Image

ಕುತ್ಲೂರು, ಪರುಷಗುಡ್ಡೆ: ಶ್ರಾವಣ ಮಾಸದ ಸಂಪತ್ತು ಶುಕ್ರವಾರದ ವಿಶೇಷ ಪೂಜೆ

ಅತಿಶಯ ಕ್ಷೇತ್ರ ಕುತ್ಲೂರು ಪರುಷಗುಡ್ಡೆ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯ ಆಡಳಿತ ಟ್ರಸ್ಟ್, ಭಾರತೀಯ ಚೈನ್ ಮಿಲನ್ ಪರುಷಗುಡ್ಡೆ ಶಾಖೆ, ಶ್ರೀ ಶಾಂತಿ ಸೌಹಾರ್ದ ಸಂಘ, ಪರುಷಗುಡ್ಡೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಸಂಪತ್ತು ಶುಕ್ರವಾರ ನಾಳೆ (ಸೆ. 13)ವಿಶೇಷ ಪೂಜೆಯೊಂದಿಗೆ ಬೆಳಗ್ಗೆ 10.30ರಿಂದ ಭರತೇಶ ವೈಭವ ಎಂಬ ಜೈನ ಪುಣ್ಯ ಕಥಾ ಭಾಗ ಯಕ್ಷಗಾನ - ತಾಳಮದ್ದಳೆ ಜರಗಲಿದೆ.

First Previous

Showing 2 of 10 pages

Next Last