ರೂ. 54 ಲಕ್ಷದ ಪ್ಯಾಕೇಜ್ ಧಿಕ್ಕರಿಸಿ ವೈರಾಗ್ಯದ ಮಾರ್ಗ ಹಿಡಿದ 24ರ ಸಾಫ್ಟ್ವೇರ್ ಇಂಜಿನಿಯರ್
Published Date: 09-Oct-2025 Link-Copied
ಅಶೋಕನಗರ (ಮಧ್ಯ ಪ್ರದೇಶ )- ಆತ 24ರ ಹರಯದ ಯುವಕ, ಹೆಸರು ಪಿಯುಷ್ ಜೈನ, ಸಾಫ್ಟ್ ವೇರ್ ಇಂಜಿನಿಯರ್ ಆಗಿ ಪುಣೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕಾರ್ಯನಿರತ. ತಂದೆ ತಾಯಿಗಳು ಬಹು ಕನಸು ಹೊತ್ತು ಮಗನ ಭವಿಷ್ಯ ಉಜ್ವಲವಾಗಲಿ ಎಂದು ಆತನನ್ನು ಈ ಹಂತಕ್ಕೆ ಬೆಳೆಸಿದ್ದರು. ಮಗನಿಗೆ ಮದುವೆ ಮಾಡುವುದು ಎಂದು ಯೋಚಿಸಿದ ತಾಯಿ ಸೀಮಾ ಜೈನ್ ಹೆಣ್ಣನ್ನು ಕೂಡ ನೋಡಿ ಮಗನಿಗೆ ತಿಳಿಸಿದ್ದರು. ಬಾಲ್ಯದಿಂದ ಧಾರ್ಮಿಕ ಪರಿಸರ, ಜಿನ ಮುನಿಗಳ ಸಂಪರ್ಕದಲ್ಲಿ ಬೆಳೆದಿದ್ದ ಪಿಯುಷ್ ಮನಸ್ಸು ವೈರಾಗ್ಯದ ಕಡೆ ಮುಖ ಮಾಡಿತ್ತು. ಮಧ್ಯಪ್ರದೇಶದ ಅಶೋಕನಗರದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಶ್ರಮಣ ಶಿರೋಮಣಿ, ಮುನಿಪುಂಗವ ಸುಧಾಸಾಗರರ ಕಡೆಗೆ ಆತನ ಮನಸ್ಸು ಓಡುತ್ತಿತ್ತು. ಹೆಣ್ಣು ನೋಡಲು ಬರುವಂತೆ ತಾಯಿ ಕರೆ ಮಾಡಿದಾಗ ಮಗ ಹೇಳಿದ - ಅಮ್ಮ ನಾನು ನಿಮ್ಮ ಮಗನಾಗಿ ಇನ್ನು ಮುಂದೆ ನಿಮ್ಮ ಎದುರು ಬರಲಾರೆ, ಆದರೆ ಶ್ರಮಣ ಜೀವನದ ಪಥಿಕನಾಗಿ ನಿಮಗೆ ಕಾಣಿಸಿಕೊಳ್ಳುತ್ತೇನೆ. ಹೀಗೆ ಹೇಳಿದ ಪಿಯೂಷ್ ತನ್ನ 54 ಲಕ್ಷದ ಪ್ಯಾಕೇಜ್‌ಗೆ ವಿದಾಯ ಹೇಳಿ ನೇರವಾಗಿ ಮುನಿಗಳ ಚಾತುರ್ಮಾಸ ಸ್ಥಾನಕ್ಕೆ ತೆರಳಿ ತನಗೆ ಸನ್ಯಾಸ ಮಾರ್ಗದ ಮೊದಲ ಹೆಜ್ಜೆ ಬ್ರಹ್ಮಚರ್ಯ ವ್ರತವನ್ನು ನೀಡುವಂತೆ ನಿವೇದಿಸಿಕೊಂಡ. ಮುನಿಗಳು ಆತನನ್ನು ಪರಾಮರ್ಶೆಸಿ, ಚರ್ಚಿಸಿ ವ್ರತ ನೀಡಲು ಒಪ್ಪಿದರು. ವಿಜಯದಶಮಿಯ ಶುಭದಿನ, ಚಾತುರ್ಮಾಸ ಕಾರ್ಯಕ್ರಮಗಳಿಗಾಗಿ ಹಾಕಿದ್ದ ವಿಶಾಲ ಪೆಂಡಾಲನಲ್ಲಿ ಸಹಸ್ರಾರು ಜನರ ಉಪಸ್ಥಿತಿಯಲ್ಲಿ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ಪಿಯುಷನ ತಂದೆ ತಾಯಿಗಳನ್ನೂ ಕರೆಸಲಾಗಿತ್ತು. ಪಿಯುಷನಿಗೆ ಸನ್ಯಾಸ ನೀಡುವ ಬಗ್ಗೆ ಅವರ ಅನುಮತಿಯನ್ನೂ ಪಡೆಯಲಾಗಿತ್ತು. ವೇದಿಕೆಗೆ ಬರುತ್ತಿದ್ದಂತೆ ತಂದೆ ತಾಯಿಯರ ಕಣ್ಣೀರ ಕಟ್ಟೆ ಒಡೆಯಿತು. ಮಗನಿಗೆ ವಿದಾಯ ಹೇಳಬೇಕಾದ ಹೃದಯದ ತಾಪ ಅಶ್ರುವಿನ ರೂಪದಲ್ಲಿ ಧಾರೆಯಾಗಿ ಹರಿಯಿತು. ಈ ಅಶೃಧಾರೆ ಸಂಪೂರ್ಣ ಸಭೆಯನ್ನು ವ್ಯಾಪಿಸಿತು. ನೆರೆದ ಸಭಿಕರೆಲ್ಲರ ಕಣ್ಣುಗಳಿಂದ ಅಶ್ರು ಸುರಿಯುವಿಕೆಯನ್ನು ತಡೆಯಲಾಗಲಿಲ್ಲ. ತಮ್ಮ ಮನೆಯ ಮಗನನ್ನೇ ಬಿಟ್ಟುಕೊಡುತ್ತಿದ್ದೇವೆ ಎನ್ನುವ ನೋವು ಎಲ್ಲರಲ್ಲೂ ಕಾಣುತ್ತಿತ್ತು. ಸಂಪೂರ್ಣ ಪೆಂಡಾಲ್ ಸoವೇದನೆ ಮತ್ತು ಶ್ರದ್ಧೆಯಲ್ಲಿ ನೆನೆದು ಹೋಯಿತು. ಆಗ ಮುನಿ ಶ್ರೀ ಹೇಳಿದರು ಈ ಬಾಲಕನಿಗೆ ಸನ್ಯಾಸ ನೀಡುವ ಮುನ್ನ ಆತನಿಗೆ ಸಾಕಷ್ಟು ತಿಳಿಸಿ ಹೇಳಿದ್ದೇವೆ, ಚರ್ಚಿಸಿದ್ದೇವೆ, ಮೋಕ್ಷ ಮಾರ್ಗ ಸುಲಭವಲ್ಲ, ಇದು ಕತ್ತಿಯ ಅಲಗಿನ ಮೇಲೆ ನಡೆದಂತೆ ಇರುವುದು, ಎಂದೆಲ್ಲ ಹೇಳಿದರೂ ಈ ಬಾಲಕ ಹೆದರಲಿಲ್ಲ, ಹಿಂಜರಿಯಲಿಲ್ಲ, ಯಾವಾಗ ಸಂಸಾರದ ಬಂಧನಗಳು ಸಡಿಲುಗೊಳ್ಳುವವೋ ಆಗ ಈ ಜೀವ ಕಠಿಣ ಮಾರ್ಗದಲ್ಲಿ ಮುನ್ನಡೆಯುತ್ತದೆ. ಇಂದು ವಿಜಯದಶಮಿಯ ಈ ಶುಭ ದಿನ ಪಿಯುಷ್ ವೈರಾಗ್ಯ ಮಾರ್ಗವನ್ನು ಸ್ವೀಕರಿಸಿದ್ದಾನೆ, ಈತ ಸಮಗ್ರ ಸಮಾಜದ ಗೌರವವಾಗಿದ್ದಾನೆ. ಇಂದು ಮಗ ಮನೆಯಿಂದ ದೂರವಾಗುತ್ತಿದ್ದಾನೆ ಎಂದು ತಾಯಿ ಸುರಿಸುತ್ತಿರುವ ಕಣ್ಣೀರು ಮುಂದೊಂದು ದಿನ ಸಂತೋಷದ ಕಣ್ಣೀರಾಗಿ ಪರಿವರ್ತನೆಗೊಳ್ಳಲಿದೆ". ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಿಯುಷ್ ಬ್ರಹ್ಮಚಾರಿ ವ್ರತಧಾರಿಯಾಗಿ ಮುನಿ ಸಂಘ ಸೇರಿದನು. ಹಂತ ಹಂತವಾಗಿ ದಿಗಂಬರತ್ವ ಸ್ವೀಕರಿಸುವನು. ಇಲ್ಲಿಯವರೆಗೆ ಮುನಿ ಸಂಫದಲ್ಲಿ 17 ಬ್ರಹ್ಮಚಾರಿಗಳು ಇದ್ದು ಅವರಲ್ಲಿ ಡಾಕ್ಟರ್, ಇಂಜಿನಿಯರ್, ಸಿ ಎ ಮತ್ತಿತರ ಉನ್ನತ ಶಿಕ್ಷಿತರು ಇದ್ದು ಇದೀಗ ಅವರೊಂದಿಗೆ ಪಿಯುಷ್ ಸೇರ್ಪಡೆಯಾಗಿದೆ. 54 ಲಕ್ಷದ ಪ್ಯಾಕೇಜ್ ಪಡೆದು ಭೋಗ ಜೀವನ ಕೈಗೆಟುಕಿತ್ತಾದರೂ ಅದನ್ನು ಬದಿಗಿಟ್ಟು ಕಠಿಣ ಮಾರ್ಗವನ್ನು ಆಯ್ಕೆ ಮಾಡಿಕೊಂಡು, ಸಭಿಕರ ಅಶ್ರು ಧಾರೆಯ ತೇವದಲ್ಲಿ ವೈರಾಗ್ಯದ ಮಹಿಮೆ ಮತ್ತು ತ್ಯಾಗದ ಹೊಳಪು ಸೇರಿಕೊಂಡ ಸಂದೇಶವನ್ನು ಈ ಪ್ರಸಂಗ ನೀಡುತ್ತಿತ್ತು. ಜೀವನದ ನಿಜಸುಖ ತ್ಯಾಗದಲ್ಲಿದೆ, ವೈರಾಗ್ಯದಲ್ಲಿದೆ ಮತ್ತು ಈ ಮಾರ್ಗವೇ ಅಂತಿಮವಾಗಿ ಆತ್ಮನನ್ನು ಪರಮಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ ಎಂದು ಹೇಳುತ್ತಿತ್ತು. ಇದೇ ಸಂದರ್ಭದಲ್ಲಿ ವಿದ್ವಾಂಸರ ಸಮ್ಮೇಳನ ವೂ ಆಯೋಜಿತವಿದ್ದುದರಿಂದ 550 ಕ್ಕೂ ಹೆಚ್ಚು ವಿದ್ವಾಂಸರು ಕೂಡ ಪಿಯುಷ್ ವೈರಾಗ್ಯ ಪ್ರಸಂಗಕ್ಕೆ ಸಾಕ್ಷಿ ಆದರು. ಶಾಂತಿನಾಥ ಕೆ. ಹೋತಪೇಟಿ