ಶಿಕ್ಷಕ ಲಕ್ಷ್ಮಣ್ ಮಲ್ಲಸಮುದ್ರಗೆ : ಶಿಕ್ಷಣ ಸೇವಾ ರತ್ನ ಪ್ರಶಸ್ತಿ
Published Date: 22-Sep-2025 Link-Copied
ಕರ್ನಾಟಕ ಪ್ರೆಸ್ ಕ್ಲಬ್ ಬೆಂಗಳೂರು ಇವರು ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷನ್ ಇವರ ಜನ್ಮದಿನಾಚರಣೆ ಮತ್ತು ಶಿಕ್ಷಕ ದಿನಾಚರಣೆಯ ಅಂಗವಾಗಿ ಕೊಡಮಾಡುವ ರಾಜ್ಯಮಟ್ಟದ "ಶಿಕ್ಷಣ ಸೇವಾ ರತ್ನ" ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ಲಕ್ಷ್ಮಣ್ ಮಲ್ಲಸಮುದ್ರಇವರು ಭಾಜನರಾಗಿದ್ದಾರೆ. ಲಕ್ಷ್ಮಣ್ ರವರು ಕಳೆದ 35 ವರ್ಷಗಳಿಂದ ಶಿಕ್ಷಕರಾಗಿ ಅತ್ಯತ್ತಮ ಸೇವೆ ಸಲ್ಲಿಸುತ್ತಿದ್ದು ಸಹಸ್ರಾರು ಮಕ್ಕಳ ಬಾಳಲ್ಲಿ ಬೆಳಕಾಗಿದ್ದಾರೆ. ಇವರು ಮಕ್ಕಳಿಗೆ ಕೇವಲ ಅಕ್ಷರಗಳನ್ನು ಭೋದನೆ ಮಾಡಿಲ್ಲ ಅವರು ವಿದ್ಯಾರ್ಥಿಗಳಿಗೆ ಬದುಕುವ ರೀತಿಯನ್ನು ಕಲಿಸಿ ಅವರ ಭವಿಷ್ಯವನ್ನು ರೂಪಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರು ಕಾಡ ಕಲ್ಲನ್ನು ಸುಂದರ ಮೂರ್ತಿಯನ್ನಾಗಿ ಮಾಡುವ ಶಿಲ್ಪಿಗಳಿದ್ದಹಾಗೆ ಇದು ಶಿಕ್ಷಕರಿಂದ ಮಾತ್ರ ಸಾಧ್ಯ ಈ ಕಾರಣಕ್ಕೆ ಶಿಕ್ಷಕರ ಬಗ್ಗೆ ಅಪಾರವಾದ ಗೌರವ ಅಭಿಮಾನ ಇರುವದು ಸಹಜ. ಪ್ರಸ್ತುತ ಗದಗ ಜಿಲ್ಲೆ ಶಿರಹಟ್ಟಿ ತಾಲೂಕ ಲಕ್ಷ್ಮೇಶ್ವರ ದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿನ ಶಾಲೆಯೊಂದರಲ್ಲಿ ಸ್ಥಳೀಯರ ಸಹಕಾರ ಸಹಾಯದಿಂದ ಸುಂದರವಾದ ಕೊಠಡಿಗಳನ್ನು ನಿರ್ಮಿಸಿ ಅದರ ಆವರಣದಲ್ಲಿ ಕೈದೋಟ ಹೂವಿನ ಗಿಡಗಳನ್ನು ಬೆಳೆಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿದ್ದಾರೆ. ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರಪ್ರೇಮ, ಸಹಬಾಳ್ವೆ ಸಮಾನತೆಯ ತಿಳುವಳಿಕೆ ನೀಡಿ ಮಕ್ಕಳ ಮನದಲ್ಲಿ ಹೆಮ್ಮೆಯ ಶಿಕ್ಷಕರಾಗಿ ರುಪುಗೊಂಡಿದ್ದಾರೆ. ಇವರ ಅತ್ಯುತ್ತಮ ಸೇವೆಯನ್ನು ಗಮನಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಪ್ರಸಕ್ತ ಸಾಲಿನಲ್ಲಿ "ಶಿಕ್ಷಣ ಸೇವಾ ರತ್ನ ಪ್ರಶಸ್ತಿ" ನೀಡಿ ಗೌರವಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ದಿನಾಂಕ 24-9-2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 3-30 ಕ್ಕೆ ಜರುಗಲಿದ್ದು ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರು, ಮಂತ್ರಿಗಳು ಶಾಸಕರು, ಸಂಸದರು ಗಣ್ಯರು ಭಾಗವಹಿಸಲಿದ್ದಾರೆ. ತನ್ನಿಮಿತ್ಯ ಇವರ ಸಂಕ್ಷಿಪ್ತ ಪರಿಚಯ : ದಿನಾಂಕ: 22-05-1966 ರಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಹರ್ಲಾಪುರ ಗ್ರಾಮದಲ್ಲಿ ರಾಮಣ್ಣ ಮತ್ತು ಸಾವಿತ್ರಮ್ಮ ದಂಪತಿಗಳ ನಾಲ್ಕು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು. (ಜೈನ ಸಮಾಜದ ಗಣ್ಯರೂ, ಹಿರಿಯ ಬರಹಗಾರರು ಸಾಮಾಜಿಕ ಕಾರ್ಯಕರ್ತರು ಆದ ಶ್ರೀ ಶಾಂತರಾಜ ಮಲ್ಲಸಮುದ್ರ ಇವರು ಇವರ ಹಿರಿಯ ಸಹೋದರ). ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಮಾಧ್ಯಮಿಕ ಶಿಕ್ಷಣ, ಕಾಲೇಜ್ ಶಿಕ್ಷಣ ಹಾಗೂ ಶಿಕ್ಷಕ ತರಬೇತಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ್ ಪಟ್ಟಣದಲ್ಲಿ ಮುಗಿಸಿದರು. ಹಾಸನ ಜಿಲ್ಲೆ ಶ್ರವಣಬೆಳಗೊಳದ ಶ್ರೀಮಠವು ನಡೆಸುವ ಶ್ರೀ ಅಂಬಿಕಾ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ಇಲ್ಲಿ 10-06-1990 ರಿಂದ 04-01-1999 ರ ವರೆಗೆ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ 1999ರಲ್ಲಿ ಹಾಸನ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಸರಕಾರಿ ಶಾಲಾ ಶಿಕ್ಷಕರಾಗಿ ನಿಯುಕ್ತಿಗೊಂಡು ದಿನಾಂಕ 05.01.1999 ರಿಂದ 07-07-2000 ರವರೆಗೆ ಸ .ಹಿ. ಪ್ರಾಥಮಿಕ ಶಾಲೆ ಬಿ ಹೊನ್ನೆನಹಳ್ಳಿ ಹೋಂ.ಬಾಗೂರು. ತಾಲೂಕು ಚನ್ನರಾಯಪಟ್ಟಣ ಇಲ್ಲಿ ಸೇವೆ ನಂತರ 08.07.2000 ರಿಂದ 07.03.2003 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿ ಹೊನ್ನೇನಹಳ್ಳಿ ಬೆಕ್ಕ ಹೋಬಳಿ ಕ್ಲಸ್ಟರ್ ಶ್ರವಣಬೆಳಗೊಳ ಜಿಲ್ಲಾ ಹಾಸನ ಇಲ್ಲಿಗೆ ವರ್ಗಾವಣೆ ಗೊಂಡರು. ಮುಂದೆ ಹಾಸನ ಜಿಲ್ಲೆಯಿಂದ ಗದಗ ಜಿಲ್ಲೆಗೆ ವರ್ಗಾವಣೆಗೊಂದು ದಿ. 08.03.2003 ರಿಂದ 18.06.2008 ರವರೆಗೆ ಸರ್ಕಾರಿ ಹಿರಿಯ ಗಂಡು ಮಕ್ಕಳ ಶಾಲೆ ಸೂರಣಗಿ ತಾಲೂಕು. ಶಿರಹಟ್ಟಿ ಜಿಲ್ಲಾ ಗದಗ ಇಲ್ಲಿ ನಂತರ 18.06.2008ರಿಂದ 03.09.2013ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆದರಹಳ್ಳಿ ತಾ. ಲಕ್ಷ್ಮೇಶ್ವರ ಜಿಲ್ಲೆ ಗದಗ ನಂತರ 04.09.2013ರಿಂದ ಇಲ್ಲಿಯವರೆಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರ ಲಕ್ಷ್ಮೇಶ್ವರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು ಸೇವೆ 35 ವರ್ಷಗಳ ಸುದೀರ್ಘ ಸೇವೆಯಲ್ಲಿ ಜೀವನದುದ್ದಕ್ಕೂ ಆದರ್ಶ ಮತ್ತು ಶಿಸ್ತು ಮೈಗೂಡಿಸಿಕೊಂಡ ಇವರು ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿ ಆದರ್ಶಪ್ರಾಯರಾಗಿದ್ದಾರೆ. ಇತರ ಸಾಮಾಜಿಕ ಚಟುವಟಿಕೆಗಳು: ಪ್ರತಿ ವರ್ಷ ದಸರಾ ಸಂಧರ್ಭದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಲಕ್ಷ್ಮೇಶ್ವರದಲ್ಲಿ ಐದು ವರ್ಷದಿಂದ ಪುರಾಣ ಪ್ರವಚನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಸುಮಾರು ಹತ್ತು ವರ್ಷದಿಂದ ಬಿ.ಎಲ್.ಓ. (ಬೂತ್ ಲೆವೆಲ್ ಆಫೀಸರ್) ಅಂತ ಕಂದಾಯ ಇಲಾಖೆಯ ಜೊತೆಗೆ ಅಂದರೆ ಹೊಸದಾಗಿ ಮತದಾರರನ್ನು ಮತ ಪಟ್ಟಿಗೆ ಸೇರಿಸುವುದು, ತಿದ್ದುಪಡೆ ಮಾಡುವುದು, ಬೇರೆ ಕಡೆ ವರ್ಗಾವಣೆ ಆದರೆ ವರ್ಗಾವಣೆ ಮಾಡುವುದು ಇತ್ಯಾದಿ ಶಿಕ್ಷಣ ಇಲಾಖೆಯ ಕೆಲಸದ ಜೊತೆಗೆ ಕಂದಾಯ ಇಲಾಖೆಯ ಕೆಲಸವನ್ನು ಕೂಡ ಮಾಡುವ ಮೂಲಕ ಎಲ್ಲಾ ಸರಕಾರಿ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಏತನ್ಮದ್ಯ ದಿನಾಂಕ 15.05.1995 ರಂದು ಸ್ವಗ್ರಾಮದವರೇ ಆದ ಶಿಕ್ಷಕಿ ಸಾವಿತ್ರಿ ಇವರೊಂದಿಗೆ ವಿವಾಹವಾಗಿದ್ದು ಈ ಶಿಕ್ಷಕ ದಂಪತಿಗಳು ಒಂದೇ ಜಿಲ್ಲೆ ಯಲ್ಲಿ ಕಳೆದ ಕೆಲವು ವರ್ಷಗಳಿಂದ ಸೇವೆಯಲ್ಲಿದ್ದಾರೆ. ಇವರ ಸಾಧನೆಯ ಹಿಂದೆ ಇವರ ಪತ್ನಿಯ ಸಹಕಾರ ಪ್ರೋತ್ಸಾಹ ಬಹುಮಟ್ಟಿಗೆ ಕಾರಣವಾಗಿದೆ ಎನ್ನಬಹುದು. ಇವರಿಗೆ ಇಬ್ಬರು ಪುತ್ರರು ಇದ್ದು ಓರ್ವ ಸ್ನಾತಕೋತ್ತರ ಪದವಿ ವಿದ್ಯಾರ್ಥಿ, ಇನ್ನೊರ್ವ ವೈದ್ಯಕೀಯ ಶಿಕ್ಷಣ ಪಡೆಯಲು ಪ್ರವೇಶ ಪರೀಕ್ಷೆ ಬರುತ್ತಿದ್ದಾನೆ. ಇವರ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿ ಇನ್ನೂ ಹಲವಾರು ಪ್ರಶಸ್ತಿ ಸಮ್ಮಾನಗಳು ಸಿಗಲಿ. ಶಾಂತರಾಜ ಮಲ್ಲಸಮುದ್ರ ಲೇಖಕರು