Mon, Apr 28, 2025

Mon, Apr 28, 2025

ವತ್ಸಲೆ ಕೃತಿ ಬಿಡುಗಡೆ

Article Image

ವತ್ಸಲೆ ಕೃತಿ ಬಿಡುಗಡೆ

ಉಜಿರೆ: “ವಾತ್ಸಲ್ಯ” ಮನೆ ನಿವಾಸಿಗಳ ಸಂತೃಪ್ತ ಮತ್ತು ನೆಮ್ಮದಿಯ ಜೀವನ ನಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿಯನ್ನು ನೀಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಬುಧವಾರ ಧರ್ಮಸ್ಥಳದಲ್ಲಿ ಬೀಡಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪೂಜಾ ಪ್ರಶಾಂತ್ ಶೆಟ್ಟಿ ರಚಿಸಿದ “ವತ್ಸಲೆ” ಕೃತಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ತಾವು ಇತ್ತೀಚೆಗೆ ಮೈಸೂರಿನಲ್ಲಿ “ವಾತ್ಸಲ್ಯ” ಮನೆಗೆ ಭೇಟಿ ನೀಡಿ ಪುಟ್ಟ ಮನೆಯಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳಿದ್ದು ನಿವಾಸಿಗಳ ಸಂತೃಪ್ತ ಜೀವನ ಕಂಡು ತಮಗೆ ಅತೀವ ಸಂತೋಷ ಮತ್ತು ತೃಪ್ತಿ ಉಂಟಾಯಿತು ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಸಬಲೀಕರಣದ ರೂವಾರಿ ಹೇಮಾವತಿ ವೀ. ಹೆಗ್ಗಡೆಯವರ ಕನಸಿನ ಕೂಸು “ವಾತ್ಸಲ್ಯ” ಯೋಜನೆ. ಬದುಕಿನುದ್ದಕ್ಕೂ ಶ್ರಮ ಜೀವನ ಮಾಡಿ ಹೋರಾಡಿ ಬಳಲಿ ಬೆಂಡಾದ ಹಿರಿಯ ಜೀವಗಳಿಗೆ ಅಂತಿಮ ದಿನಗಳಲ್ಲಿ ಗೌರವದ, ನೆಮ್ಮದಿಯ ಸಂತೃಪ್ತ ಜೀವನ ಮಾಡಲು ಸೂರನ್ನು ಕಟ್ಟಿ ಕೊಡುವ ಕಾರ್ಯಕ್ರಮವೇ “ವಾತ್ಸಲ್ಯ”. ರಾಜ್ಯದೆಲ್ಲೆಡೆ ಈಗಾಗಲೆ 610 ಮನೆಗಳನ್ನು ಈ ಯೋಜನೆಯಡಿ ನಿರ್ಮಿಸಿದ್ದು ಬಡವರ ಪಾಲಿಗೆ ಆಶಾಜ್ಯೋತಿಯಾಗಿ, “ನಂದಾದೀಪ”ವಾಗಿ ಬೆಳಗುತ್ತಿವೆ. ಲೇಖಕಿ ಪೂಜಾಪ್ರಶಾಂತ್ ಶೆಟ್ಟಿ ಫಲಾನುಭವಿಗಳ ಅನುಭವ, ಅನಿಸಿಕೆಗಳನ್ನು ಹೃದಯಸ್ಪರ್ಶಿಯಾಗಿ ಕಥೆಗಳ ಮೂಲಕ ಸಾದರಪಡಿಸಿದ್ದಾರೆ. ಇವರಿಗೆ ಸಂದೀಪ್ ದೇವ್ ಸಹಕರಿಸಿರುತ್ತಾರೆ. ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ “ವಾತ್ಸಲ್ಯ” ಯೋಜನೆಯ ಅನುಷ್ಠಾನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ನಿಷ್ಠೆ, ಕಾಳಜಿ ಹಾಗೂ ಶ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು. ಇದು ತಮಗೆ ಅತ್ಯಂತ ಆಪ್ತವಾದ ಕಾರ್ಯಕ್ರಮವಾಗಿದ್ದು “ವಾತ್ಸಲ್ಯ” ನಿವಾಸಿಗಳ ಪ್ರೀತಿ, ವಿಶ್ವಾಸ ಹಾಗೂ ಗೌರವ ತಿಳಿದು ನಮಗೆ ಸಂತೋಷವಾಗಿದೆ. ತಮ್ಮನ್ನೂ ಪ್ರೀತಿಸುವವರು “ಅಭಯ” ನೀಡುವವರೂ ಇದ್ದಾರೆ ಎಂಬ ವಿಶ್ವಾಸದಿಂದ ಅವರು ಇಂದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು. ಲೇಖಕಿ ಪೂಜಾ ಪ್ರಶಾಂತ್ ಶೆಟ್ಟಿ ಅವರನ್ನು ಹೇಮಾವತಿ ವೀ. ಹೆಗ್ಗಡೆಯವರು ಸನ್ಮಾನಿಸಿ ಅಭಿನಂದಿಸಿದರು. ಡಿ. ಸುರೇಂದ್ರ ಕುಮಾರ್, ಅನಿತಾಸುರೇಂದ್ರ ಕುಮಾರ್, ಸೋನಿಯಾಯಶೋವರ್ಮ, ಅಮಿತ್, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಪ್ರಾದೇಶಿಕ ಹಣಕಾಸು ನಿರ್ದೇಶಕರು ಶಾಂತಾರಾಮ ಪೈ, ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಾಧಕಿ ಶ್ರದ್ಧಾ ಶೆಟ್ಟಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿನಂದನೆ

Article Image

ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಾಧಕಿ ಶ್ರದ್ಧಾ ಶೆಟ್ಟಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿನಂದನೆ

ಉಜಿರೆ : ಅತಿ ದೊಡ್ಡ ಪುಷ್ಪ ರಂಗೋಲಿ ರಚಿಸಿದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿಯ ಸಾಧನೆಗೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿನಂದಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಎಣಿಂಜೆ ನಿವಾಸಿ ಶೇಖರ್ ಶೆಟ್ಟಿ ಅವರ ಪುತ್ರಿ ಶ್ರದ್ಧಾ ಶೆಟ್ಟಿ ಅವರು ಎಂಟು ಅಡಿ ಅಂದರೆ 246 ಸೆಂಟಿಮೀಟರ್ ವ್ಯಾಸದ ವೃತ್ತಾಕಾರದ ಹೂವಿನಿಂದ ರಚಿಸಿದ ರಂಗೋಲಿಗೆ ಪ್ರಶಸ್ತಿ ಲಭಿಸಿದೆ. ಇದನ್ನು 1 ಗಂಟೆ 39 ನಿಮಿಷಗಳಲ್ಲಿ ಗುಲಾಬಿ, ಮಲ್ಲಿಗೆ ಮೊದಲಾದ ವಿವಿಧ ಜಾತಿಯ ಬಣ್ಣ ಬಣ್ಣದ ಹೂಗಳ ದಳದಲ್ಲಿ ರಂಗೋಲಿಯನ್ನು ರಚಿಸಿ ದಾಖಲೆ ಮಾಡಿದ್ದಾರೆ. ಪ್ರಸ್ತುತ ಶ್ರದ್ಧಾ ಶೆಟ್ಟಿ ಅವರು ಎಸ್‌ಡಿಎಂ ಕಾಲೇಜಿನಲ್ಲಿ ತೃತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು ಪೋಷಕರು ಹಾಗೂ ಕಾಲೇಜಿನ ಅಧ್ಯಾಪಕರ ಪ್ರೇರಣೆಯೊಂದಿಗೆ ವಿದ್ಯಾರ್ಥಿನಿ ಈ ದಾಖಲೆಯನ್ನು ಬರೆದಿದ್ದಾರೆ. ಈ ಸಾಧನೆಯನ್ನು ಶ್ಲಾಘಿಸಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ವಿದ್ಯಾರ್ಥಿನಿಯ ಪರಿಶ್ರಮದ ಪ್ರತಿಫಲಕ್ಕೆ ಅಭಿನಂದಿಸಿದರು.

ಸತ್ತೂರು, ಧಾರವಾಡ : ಜೀವ ಉಳಿಸುವ ಕೌಶಲ್ಯಗಳ ತರಬೇತಿ

Article Image

ಸತ್ತೂರು, ಧಾರವಾಡ : ಜೀವ ಉಳಿಸುವ ಕೌಶಲ್ಯಗಳ ತರಬೇತಿ

ಸತ್ತೂರು, ಧಾರವಾಡ ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ, ತುರ್ತು ಚಿಕಿತ್ಸಾ ವಿಭಾಗವು AHA (ಅಮೇರಿಕನ್ ಹಾರ್ಟ್ ಅಸೋಸಿಯೇಷನ್) ಸಹಯೋಗದೊಂದಿಗೆ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಕೌಶಲ್ಯಗಳನ್ನು ತರಬೇತಿ ನೀಡಲು AHA ಪ್ರಮಾಣೀಕೃತ BLS (ಬೇಸಿಕ್ ಲೈಫ್ ಸಪೋರ್ಟ್) ಮತ್ತು ACLS (ಅಡ್ವಾನ್ಸ್ಡ್ ಕಾರ್ಡಿಯಾಕ್ ಲೈಫ್ ಸಪೋರ್ಟ್) ಕೋರ್ಸ್ಗಳ ಘಟಕವನ್ನು ಪ್ರಾರಂಭಿಸುತ್ತಿದೆ. ಈ ತರಬೇತಿಯು ಉತ್ತರ ಕರ್ನಾಟಕದಲ್ಲಿ ಇದೇ ಮೊದಲನೆಯದು. ಒಂದು ದಿನದ BLS ತರಬೇತಿ ಕಾರ್ಯಕ್ರಮದ ಉದ್ದೇಶವು ವೈದ್ಯಕೀಯ ಸಹಾಯವನ್ನು ಪಡೆಯುವ ಮೊದಲು ಯಾರಾದರೂ ಯಾವುದೇ ಸ್ಥಳದಲ್ಲಿ ಹೃದಯ ಸ್ತಂಭನ ಎದುರಾದಾಗ ಜೀವ ಉಳಿಸುವ ಕೌಶಲ್ಯವನ್ನು ಕಲಿಸುತ್ತದೆ. ಸಾಮಾನ್ಯ ಜನರು ಇದರ ತರಬೇತಿ ಪಡೆದು ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಸಹಾಯ ಮಾಡಬಹುದಾಗಿದೆ. 2 ದಿನಗಳ ACLS ತರಬೇತಿ ಕಾರ್ಯಕ್ರಮವು ಮುಖ್ಯವಾಗಿ ಆರೋಗ್ಯ ವೃತ್ತಿಪರರಾದ ವೈದ್ಯರು, ದಾದಿಯರು, ಭೌತಚಿಕಿತ್ಸಕರು, ದಂತ ಮತ್ತು ವೈದ್ಯಕೀಯ ಪದವೀಧರರು, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸ್ನಾತಕೋತ್ತರ ಪದವೀಧರರಿಗೆ ಅಗತ್ಯವಾಗಿರುತ್ತದೆ. ACLS ತರಬೇತಿಯು ಔಷಧಿಗಳನ್ನು ನೀಡುವುದು, ಸುಧಾರಿತ ವಾಯುಮಾರ್ಗ ತಂತ್ರಗಳನ್ನು ಬಳಸುವುದು ಮತ್ತು ಡಿಫಿಬ್ರಿಲೇಷನ್‌ನೊಂದಿಗೆ ಹೃದಯದ ಸ್ತಂಭನವನ್ನು ನಿರ್ವಹಿಸುವಂತಹ ಕೌಶಲ್ಯಗಳನ್ನು ಒಳಗೊಂಡಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ. ಶಾಹನವಾಜ್ (ಮೊ: 97401 44367) ಮತ್ತು ಡಾ. ಅಮೀತ್ (ಮೊ: 72597 85318) ತುರ್ತು ಚಿಕಿತ್ಸಾ ವಿಭಾಗ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಧಾರವಾಡ ದೂರವಾಣಿ: 0836 247 4104, Extn.: 7063 Email: emergencymed@sdmucmsh.edu.in

ಮೂಡುಬಿದಿರೆ: ಎಕ್ಸಲೆಂಟ್ ಜೆಇಇ ಮೈನ್-2 ಫಲಿತಾಂಶ ರಾಷ್ಟ್ರಮಟ್ಟದ ರ‍್ಯಾಂಕ್‌ಗಳ ಸಾಧನೆ

Article Image

ಮೂಡುಬಿದಿರೆ: ಎಕ್ಸಲೆಂಟ್ ಜೆಇಇ ಮೈನ್-2 ಫಲಿತಾಂಶ ರಾಷ್ಟ್ರಮಟ್ಟದ ರ‍್ಯಾಂಕ್‌ಗಳ ಸಾಧನೆ

ಎನ್‌ಟಿಎ ನಡೆಸುವ ರಾಷ್ಟ್ರಮಟ್ಟದ ಇಂಜಿನಿಯರ್ ಪ್ರವೇಶ ಪರೀಕ್ಷೆಯ ಜೆಇಇ ಮೈನ್-2 ಇದರ ಫಲಿತಾಂಶ ಪ್ರಕಟವಾಗಿದ್ದು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆಯಲು ನಡೆಸುವ ಈ ಪರೀಕ್ಷೆಯ ಈ ಬಾರಿಯ ಫಲಿತಾಂಶದಲ್ಲಿ ಸಂಸ್ಥೆಯ ಶಿಶಿರ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ 528 ನೇ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ ಸಂಸ್ಥೆಯ ಶ್ರೇಯಾಂಕ್ ಮನೋಹರ್ ಪೈ ರಾಷ್ಟ್ರಮಟ್ಟದಲ್ಲಿ 2800 ನೇ ರ‍್ಯಾಂಕ್, ಕಾರ್ತಿಕ್ ಎಸ್ 3620ನೇ (ews) ರ‍್ಯಾಂಕ್ ಸ್ಮಿರಾ ತಲ್ವಾರ್ 480 ನೇ ರ‍್ಯಾಂಕ್ (c), ಶ್ರೇಯಸ್ ಹೆಚ್.ಎಸ್ 1648(c)ನೇ ರ‍್ಯಾಂಕ್, ಶೌರ್ಯ ಬಿ ತಲ್ವಾರ್ 1962ನೇ ರ‍್ಯಾಂಕ್(c), ಪೂರ್ಣಚಂದ್ರ 3051ನೇರ‍್ಯಾಂಕ್(c) ಪಡೆಯುದರೊಂದಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪರೀಕ್ಷೆಗೆ ಹಾಜರಾದ 97 ವಿದ್ಯಾರ್ಥಿಗಳಲ್ಲಿ ಒಟ್ಟು 45 ವಿದ್ಯಾರ್ಥಿಗಳು ಎನ್‌ಟಿಎ ನಡೆಸುವ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೇದಿರುತ್ತಾರೆ. ಅದರಲ್ಲಿ 3 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಹೆಚ್ಚು, 5 ವಿದ್ಯಾರ್ಥಿಗಳು 98 ಪರ್ಸೆಂಟೈಲ್‌ಗಿಂತ ಹೆಚ್ಚು ಮತ್ತು 12 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿಂತ ಹೆಚ್ಚು, 63 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಎಕ್ಸಲೆಂಟ್ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಪ್ರತಿವರ್ಷದಂತೆ ಈ ವರ್ಷವೂ ರಾಷ್ಟ್ರಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಕ್ರೀಡೆಯಲ್ಲಿ ಸಾಧನೆ ಮಾಡಬಹುದು: ಡಾ. ಮೋಹನ ಆಳ್ವ

Article Image

ಕ್ರೀಡೆಯಲ್ಲಿ ಸಾಧನೆ ಮಾಡಬಹುದು: ಡಾ. ಮೋಹನ ಆಳ್ವ

ವಿದ್ಯಾಗಿರಿ: ನಮ್ಮ ದೇಶದಲ್ಲಿ 11 ಕೋಟಿಗೂ ಹೆಚ್ಚು ವಿದ್ಯಾರ್ಥಿ ಸಮುದಾಯವಿದ್ದು, ನಾವು ಕ್ರೀಡೆಗೆ ವಿಶೇಷ ಆಸಕ್ತಿ ನೀಡಬೇಕು. ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶವಿದೆ. ದೇಶದ ಯುವಶಕ್ತಿ ರಾಷ್ಟ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಆದರೆ ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡದೆ ಇರುವುದು ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗುತ್ತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಯುವ ಸಂಪನ್ಮೂಲ ಇರುವ ದೇಶದ ಜೊತೆಗೂ ನಮಗೂ ಹೊರಡಲು ಕಷ್ಟವಾಗುತ್ತಿದೆ ಎಂದು ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈಜುಕೊಳ ಆವರಣದಲ್ಲಿ ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್‌ನ ಖೇಲೋ ಇಂಡಿಯಾಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಈಜುಗಾರರಿಗೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗುವಂತ ವ್ಯವಸ್ಥೆ ಕಲ್ಪಿಸಬೇಕು ಎಂದರು. ದಕ್ಷಿಣ ಕನ್ನಡ ಈಜುಗಾರರ ಸಂಘದ ಅಧ್ಯಕ್ಷ ಯತೀಶ್ ಬೈಕಂಪಾಡಿ ಮಾತನಾಡಿ ಡಾ. ಮೋಹನ ಆಳ್ವರ ಗುರಿ ವಿದ್ಯಾರ್ಥಿಗಳ ಯಶಸ್ಸು. ಅದು ಆಳ್ವರಿಗೆ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ಪೂರ್ತಿ ನೀಡುತ್ತಿದೆ. ವಿದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಈಜು ಪಠ್ಯದ ಒಂದು ಭಾಗವಾಗಿರುತ್ತದೆ. ಅದು ಸಾಧನೆಗೆ ಸಹಕರಿಯಾಗುತ್ತದೆ. ಪ್ರತಿಯೊಬ್ಬರೂ ಈಜು ಕಲಿಯಬೇಕು. ಆಗ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಈಜುಪಟುಗಳ ಸಂಖ್ಯೆ ಅಭಿವೃದ್ಧಿಯಾಗುತ್ತದೆ ಎಂದರು. ಭಾರತದ ಮಾಜಿ ಸ್ವಿಮ್ಮಿಂಗ್ ಕೋಚ್ ಪಾರ್ಥ ವಾರಣಾಸಿ ಮಾತನಾಡಿ ಭಾರತದಲ್ಲಿ 2030ರ ಹೊತ್ತಿಗೆ ಕ್ರೀಡೆ ಮುಖ್ಯವಾದ ವೃತ್ತಿಯಾಗಲಿದೆ. ಜನರು ಕ್ರೀಡೆಯಲ್ಲಿ ಹೆಚ್ಚಿನ ಗೌರವವನ್ನು ಪಡೆಯಲಿದ್ದಾರೆ. ಈಜು ಕ್ರೀಡೆಯಲ್ಲಿ ಪ್ರಮುಖ ಬದಲಾವಣೆಗಳಾಗಲಿದೆ ಎಂದರು. ಬಿಹಾರದ ಗಯಾದಲ್ಲಿ ಮೇ 5 ರಿಂದ 9 ರ ವರೆಗೆ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಚಿಂತನ್ ಶೆಟ್ಟಿ, ಪ್ರತೀಕ್ಷಾ ಶೆಣೈ ಹಾಗೂ ಅಲೈಸ್ಟರ್ ಸ್ಯಾಮುಲ್ ರೆಗೋ ರವರಿಗೆ ದಕ್ಷಿಣ ಕನ್ನಡ ಈಜುಗಾರರ ಸಂಘದಿAದ ತಲಾ 15000 ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 5,000ಯನ್ನು ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಈಜುಗಾರರ ಸಂಘದ ಕಾರ್ಯದರ್ಶಿ ಮಹೇಶ್ ಕೋಡಿಕಲ್, ಮಂಗಳ ಈಜುಗಾರರ ಕ್ಲಬ್‌ನ ಅಧ್ಯಕ್ಷ ಶಿವಾನಂದ ಗಟ್ಟಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಈಜುಗಾರರ ಸಂಘದ ಸಹ ಕಾರ್ಯದರ್ಶಿ ಶರ್ಲಿ ರೇಗೋ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳದಲ್ಲಿ ನೂತನ ಕಲ್ಯಾಣ ಮಂಟಪಗಳ ಸಮುಚ್ಚಯ ಉದ್ಘಾಟನೆ ನಾಳೆ

Article Image

ಧರ್ಮಸ್ಥಳದಲ್ಲಿ ನೂತನ ಕಲ್ಯಾಣ ಮಂಟಪಗಳ ಸಮುಚ್ಚಯ ಉದ್ಘಾಟನೆ ನಾಳೆ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಶ್ರೀ ಉಮಾಮಹೇಶ್ವರ, ಶ್ರೀ ಶಿವಪಾರ್ವತಿ ಮತ್ತು ಶ್ರೀ ಗೌರೀಶಂಕರ ಎಂಬ ಮೂರು ನೂತನ ಕಲ್ಯಾಣಮಂಟಪಗಳ ಸಮುಚ್ಚಯವನ್ನು ನಿರ್ಮಿಸಿದ್ದು, ಇದೇ 20ರಂದು ಭಾನುವಾರ ಅಪರಾಹ್ನ ನಾಲ್ಕು ಗಂಟೆಗೆ ರಾಜ್ಯದ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಹೇಮಾವತಿ ವೀ. ಹೆಗ್ಗಡೆಯವರು ಮತ್ತು ಡಿ. ಸುರೇಂದ್ರ ಕುಮಾರ್ ಶುಭಾಶಂಸನೆ ಮಾಡುವರು. ಶಾಸಕರುಗಳಾದ ಕೆ. ಹರೀಶ್ ಪೂಂಜ, ಮತ್ತು ಕೆ. ಪ್ರತಾಪಸಿಂಹ ನಾಯಕ್, ಹಾಗೂ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಮೃತವರ್ಷಿಣಿ ಸಭಾಭವನದಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ.

ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಹೆಗ್ಗಡೆಯವರು ಅಭಿನಂದಿಸಿದರು

Article Image

ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಹೆಗ್ಗಡೆಯವರು ಅಭಿನಂದಿಸಿದರು

ಸ್ಥಳೀಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಭಾನುವಾರ ಧರ್ಮಸ್ಥಳಕ್ಕೆ ಹೋಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಹೆಗ್ಗಡೆಯವರು ಅಭಿನಂದಿಸಿ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು: ವಿಜ್ಞಾನ ವಿಭಾಗ: • ಕುಮಾರಿ ತುಷಾರ ಬಿ.ಎಸ್., (5ನೇ ರ‍್ಯಾಂಕ್) ಪಡೆದ ಅಂಕಗಳು: 595 • ಕುಮಾರಿ ನೀತಿ ಕೆ.ಪಿ. (9ನೇ ರ‍್ಯಾಂಕ್) ಪಡೆದ ಅಂಕಗಳು: 591 ವಾಣಿಜ್ಯ ವಿಭಾಗ: • ಆರ್ಯದಿನೇಶ್ (7ನೇ ರ‍್ಯಾಂಕ್) ಪಡೆದ ಅಂಕಗಳು: 593 ಕಲಾ ವಿಭಾಗ: • ಶ್ರೇಯಾ, ಎಚ್.ಎ. (9ನೆ ರ‍್ಯಾಂಕ್) ಪಡೆದ ಅಂಕಗಳು: 589 ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಿಂದ ಒಟ್ಟು 1099 ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಹಾಜರಾಗಿದ್ದು, 1069 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 97.27 ಫಲಿತಾಂಶ ಬಂದಿರುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಹೆಗ್ಗಡೆಯವರು ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರಾಂಶುಪಾಲ ಬಿ. ಪ್ರಮೋದ್ ಕುಮಾರ್, ಉಪನ್ಯಾಸಕರು, ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಳಿಯ ಹೊಸ ಲೋಗೋ ಅನಾವರಣ

Article Image

ಮುಳಿಯ ಹೊಸ ಲೋಗೋ ಅನಾವರಣ

ಪುತ್ತೂರು ಮೂಲದ 81+ ವರ್ಷ ಪರಂಪರೆಯ ಮುಳಿಯ ಜ್ಯುವೆಲ್ಸ್ ಇನ್ನು ಮುಂದೆ ಹೊಸ ಲೋಗೊ ದೊಂದಿಗೆ ನಿಮ್ಮ ಮುಂದಿದೆ. ಜನಪ್ರಿಯ ಸೆಲೆಬ್ರಿಟಿ ರಮೇಶ್ ಅರವಿಂದ್ ಈ ಹೊಸ ಲಾಂಛನವನ್ನು ಬಿಡುಗಡೆ ಮಾಡಿದರು. ಮುಳಿಯ ಇನ್ನು ಮುಂದೆ ಮತ್ತಷ್ಟು ಹೊಸತನದೊಂದಿಗೆ ಸದಾ ಸಂತೋಷ ( creating happiness) ನೀಡುವ ಧ್ಯೇಯ ವಾಕ್ಯದೊಂದಿಗೆ ಮುಂದುವರಿಯಲಿದೆ. "ಇದೇ ತಿಂಗಳು ಹೊಚ್ಚ ಹೊಸತನದೊಂದಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಎಂದು ಮರುನಾಮಕರಣಗೊಳ್ಳಲಿದೆ. ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ. ಈ ಹೊಸ ಲೋಗೋ ಆಧುನಿಕತೆಯನ್ನು ಮತ್ತು ಡಿಸೈನ್ ಎಲಿಮೆಂಟ್ ಹೊಂದಿದ್ದು ಹೊಸ ಟ್ರೆಂಡ್ ಗಳನ್ನು ಹೊರ ಸೂಸುತ್ತದೆ. ನಂಬಿಕೆ ಮತ್ತು ಪರಂಪರೆಯ ಜೊತೆಗೆ ಮುಳಿಯದ mascot ಆಗಿರುವ ಆನೆ ಮರಿ ದೃಢತೆ ಮತ್ತು ನಾಯಕತ್ವ ಮತ್ತು ಎಗ್ರೆಸಿವ್ ವಿಚಾರಗಳನ್ನು ಮುಂದಿಡುತ್ತದೆ" ಶುದ್ಧತೆ ಮೀರಿದ ಪರಿಪೂರ್ಣತೆ ಯೆಡೆಗೆ ಸಾಗಿ ಬಂದು ಮುಳಿಯ ತನ್ನ ಸುತ್ತಮುತ್ತ ಸಂತೋಷ ಉಣ ಬಡಿಸಿದೆ ಎನ್ನುತ್ತಾರೆ ಕೇಶವ ಪ್ರಸಾದ್ ಮುಳಿಯ. ಕಳೆದ ಮೂರು ತಲೆಮಾರುಗಳಿಂದ ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ-ಉಳಿಸುತ್ತಿರುವುದು ನಮ್ಮ ಮುಳಿಯ ಪರಂಪರೆ. ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ,- ಸಂತೋಷ ನೀಡಿದ್ದೇವೆ.. ನೀವು ಮನಸಾರೆ ನಮ್ಮನ್ನು ಹರಸಿದ್ದೀರಿ.. Creating happiness (ಸದಾ ಸಂತೋಷ ) ನೀಡುವ ನಮ್ಮ ಹೊಸತನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ಹೊಸತನದೊಂದಿಗೆ ಬರುತ್ತಿದ್ದೇವೆ" ಎನ್ನುತ್ತಾರೆ ಕೃಷ್ಣ ನಾರಾಯಣ ಮುಳಿಯ. "ಈ ಹೊಸ ಲೋಗೋವನ್ನು ಪುತ್ತೂರಿನ ಸಾಫ್ಟ್ವೇರ್ ಕಂಪನಿಯಾದ " ದ ವೆಬ್ ಪೀಪಲ್ "ಮಾಡಿರುತ್ತದೆ ಎಂದು ಮುಳಿಯ ಸಂಸ್ಥೆಯ ಬ್ರಾಂಡ್ ಮತ್ತು ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಈ ಸಂದರ್ಭದಲ್ಲಿ ಲೋಗೋದ ವಿನ್ಯಾಸದ ಕುರಿತು ವಿವರಿಸಿದರು. ಸಂಸ್ಥೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಸಂಜೀವ ಹಾಗೂ ದ ವೆಬ್ ಪೀಪಲ್ ಪಾಲುದಾರರಾದ ಆದಿತ್ಯ ಕಲ್ಲುರಾಯ ಮತ್ತು ಶರತ್ ಉಪಸ್ಥಿತರಿದ್ದರು...

ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳ ರ‍್ಯಾಂಕ್ ಸಾಧನೆ 13 ಸ್ಥಾನಗಳನ್ನು ಮಡಿಲಿಗೆಳೆದುಕೊ0ಡ ಎಕ್ಸಲೆಂಟ್

Article Image

ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳ ರ‍್ಯಾಂಕ್ ಸಾಧನೆ 13 ಸ್ಥಾನಗಳನ್ನು ಮಡಿಲಿಗೆಳೆದುಕೊ0ಡ ಎಕ್ಸಲೆಂಟ್

ಮೂಡುಬಿದಿರೆ: 2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾರ್ಚ್ 1 ರಿ0ದ ಮಾರ್ಚ್ 20 ರ ವರಗೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ನಾಲ್ಕನೇ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ಸ್ಥಾನದೊ0ದಿಗೆ 13 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ. ಸಂಸ್ಥೆಯಲ್ಲಿ ಪರೀಕ್ಷೆ ಬರೆದ 953 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದರ‍್ಯಾಂಕ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದಿದ್ದಾರೆ. ಜೈನ ಕಾಶಿಯಾದ ಮೂಡುಬಿದಿರೆ ಶಿಕ್ಷಣ ಕಾಶಿಯಾಗಿ ರೂಪುಗೊ0ಡಿದ್ದು, ಎಕ್ಸಲೆಂಟ್ ವಿದ್ಯಾ ಸ0ಸ್ಥೆ ಕಳೆದ ಹದಿಮೂರು ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸುತ್ತಿದ್ದು, ಶಿಸ್ತು ಸಂಸ್ಕಾರ ಬದ್ಧ ಜೀವನದ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಗುಣಮಟ್ಟದ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ. ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ನಿರಂತರವಾಗಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುತ್ತದೆ. ವಿಜ್ಞಾನ ವಿಭಾಗದಲ್ಲಿ ಪ್ರಮುಖ್ ತುಳುಪುಳೆ (596) 4ನೇ ಸ್ಥಾನ, ರೋಹಿತ್ ಕಾಮತ್ (593) 7ನೇ ಸ್ಥಾನ, ಶಿಶಿರ್ ಎಚ್ ಶೆಟ್ಟಿ(593) 7ನೇ ಸ್ಥಾನ, ಥಿಯಾನ್ ಮಹೇಶ್ ಸೋನ್ಸ್(593) 7ನೇ ಸ್ಥಾನ, ವರುಣ್ ವಿ (593) 7ನೇ ಸ್ಥಾನ, ಸುಜನಾ (591) 9ನೇ ಸ್ಥಾನ, ಮೂಡುಬಿದಿರೆಯ ಪಾಂಡುರ0ಗ ಪೈ ಮತ್ತು ಸವಿತಾ ಪೈ ಅವರ ಪುತ್ರಿ ಕೆ ಸುಮಾ ಪೈ (591) 9ನೇ ಸ್ಥಾನ, ಸಕಲೇಶಪುರದ ವಿಶ್ವಾ ಜೆ ಎಸ್ ಮತ್ತು ಬವಿತಾ ಡಿ ಎಸ್ ಅವರ ಪುತ್ರ ಧನಾ0ಶ್ ವಿ(590) 10ನೇ ಸ್ಥಾನ, ದಿವ್ಯೇಶ್ ಶರ್ಮಾ (590) 10ನೇ ಸ್ಥಾನ, ಎಡುಲಾ ಓ0ಸಾಯಿ(590) 10ನೇ ಸ್ಥಾನ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಅನೂಪ್ ಶಾನ್ ಗೋಮ್ಸ್ (596) ರಾಜ್ಯಕ್ಕೆ 4ನೇ ಸ್ಥಾನ, ಅದಿತಿ ಕೆ (594) 6ನೇ ಸ್ಥಾನ, ಆದಿತ್ಯ ಶೆಟ್ಟಿ (590) 10ನೇ ಸ್ಥಾನವನ್ನು ಪಡೆದಿದ್ದು ಸ0ಸ್ಥೆಗೆ ಕೀರ್ತಿಯನ್ನು ತ0ದಿದ್ದಾರೆ. ಪರೀಕ್ಷೆಗೆ ಹಾಜರಾದ 953 ವಿದ್ಯಾರ್ಥಿಗಳಲ್ಲಿ 595 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೆಕಡಾ ನೂರು ಫಲಿತಾ0ಶ ದಾಖಲಾಗಿದ್ದು ಸ0ಸ್ಥೆಯ 241 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅ0ಕಗಳನ್ನು ಪಡೆದಿರುತ್ತಾರೆ. ಸ0ಸ್ಥೆಯ ಒಟ್ಟು ಫಲಿತಾ0ಶ 99.895 ಎ0ದು ಸ0ಸ್ಥೆಯ ಪ್ರಕಟಣೆ ತಿಳಿಸಿದೆ. ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.

ಜೈನ ಪದವಿಪೂರ್ವ ಕಾಲೇಜಿಗೆ 96 ಡಿಸ್ಟಿಂಕ್ಷನ್

Article Image

ಜೈನ ಪದವಿಪೂರ್ವ ಕಾಲೇಜಿಗೆ 96 ಡಿಸ್ಟಿಂಕ್ಷನ್

ಮೂಡುಬಿದಿರೆಯ ಸ್ಥಳೀಯ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಜೈನ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಫಲಿತಾಂಶ ಲಭ್ಯವಾಗಿದ್ದು ಪರೀಕ್ಷೆ ಬರೆದ 355 ವಿದ್ಯಾರ್ಥಿಗಳಲ್ಲಿ 335 ವಿದ್ಯಾರ್ಥಿಗಳು ಉತ್ತೀರ್ಣರಾಗಿ 94.5% ಪಲಿತಾಂಶ ಲಭ್ಯವಾಗಿರುತ್ತದೆ. ವಾಣಿಜ್ಯ ವಿಭಾಗದ ಸುಧೀಕ್ಷಾ 587 (97.83% )ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 13ನೇ ಸ್ಥಾನವನ್ನು ಪಡೆದಿರುತ್ತಾಳೆ. ವಿಜ್ಞಾನ ವಿಭಾಗದಲ್ಲಿ ವಿಜೇತ್ ಜೈನ್ 586(97.66%) ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ 14ನೆಯ ಸ್ಥಾನವನ್ನು ಪಡೆದಿರುತ್ತಾನೆ. ಕಲಾ ವಿಭಾಗದ ಕೀರ್ತನ 531 ಅಂಕ ಗಳಿಸಿರುತ್ತಾಳೆ. ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ದಿಗಂಬರ ಜೈನ ವಿದ್ಯಾವರ್ಧಕ ಸಂಘ ಅಭಿನಂದನೆಗಳನ್ನು ಸಲ್ಲಿಸಿದೆ.

ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮ ಹಿರಿಯಂಗಡಿ ಕಾರ್ಕಳ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

Article Image

ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮ ಹಿರಿಯಂಗಡಿ ಕಾರ್ಕಳ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

ನಿಲಯದ ಒಟ್ಟು 13 ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿಯಲ್ಲಿ ಹಾಗೂ 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಿದ್ಯಾರ್ಥಿ ಪಾರ್ಶ್ವನಾಥ್ ಜೈನ್ 573/600 ಅಂಕಗಳೊಂದಿಗೆ (Statistics 100) ಆಶ್ರಮಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅದೇ ರೀತಿ ಚವೀಶ್ (572), ರಜತ್ (563), ಸೂರಜ್ ಜೆ ಜೈನ್ (557) ( Stats -100) ಮತ್ತು ಯತಿನ್ (513) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

ಉಜಿರೆ: ಎಸ್ ಡಿ ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯರಿಗೆ ಬೀಳ್ಕೊಡುಗೆ

Article Image

ಉಜಿರೆ: ಎಸ್ ಡಿ ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯರಿಗೆ ಬೀಳ್ಕೊಡುಗೆ

ಸೇವಾ ನಿವೃತ್ತಿ ಪಡೆದ ಡಾ| ಬಾಲಕೃಷ್ಣ ಭಟ್ ಮತ್ತು ಡಾ| ಕಮಲಾ ಭಟ್ ಇವರ ಅತ್ಯುತ್ತಮ ಸೇವೆಯನ್ನು ಗೌರವಿಸಿ, ಬೀಳ್ಕೊಡುಗೆ ನೀಡುತ್ತಾ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿದರು. ಜನಸೇವೆಯ ಉದ್ದೇಶದೊಂದಿಗೆ ಡಾ.ಡಿ. ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಹರ್ಷೇಂದ್ರ ಕುಮಾರ್ ಹಾಗೂ ಹೆಗ್ಗಡೆ ಪರಿವಾರದವರ ಸಹಕಾರದಲ್ಲಿ ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಸಮಯದ ಬಗ್ಗೆ ಚಿಂತಿಸದೆ, ರೋಗಿಯ ಆರೈಕೆಯಲ್ಲಿಯೇ ತಮ್ಮ ಬದುಕಿನ ಅತೀ ಹೆಚ್ಚಿನ ಸಮಯವನ್ನು ಕಳೆದವರು ಇವರು. ತಮ್ಮ ಇಳಿವಯಸ್ಸಿನಲ್ಲಿಯೂ ರೋಗಿಗಳ ಹಿತವನ್ನೇ ಬಯಸಿದ ಇವರ ಸೇವೆ ಈ ಆಸ್ಪತ್ರೆಗೆ ಅತ್ಯುತ್ತಮ ಕೊಡುಗೆಯಾಗಿದೆ ಎಂದರು. ನಿವೃತ್ತರಾದ ಡಾ| ಬಾಲಕೃಷ್ಣ ಭಟ್ ಮಾತನಾಡಿ, ದೇವಮಾನವರಾದ ಹೆಗ್ಗಡೆಯವರ ಸಂಸ್ಥೆಯಲ್ಲಿ ವೈದ್ಯಕೀಯ ಸೇವೆ ಮಾಡುವ ಸದಾವಕಾಶ ನಮಗೆ ದೊರೆತಿದೆ. ಇದಕ್ಕಾಗಿ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ವಯೋ ಸಹಜ ಸಮಸ್ಯೆಯಿಂದ ನಿವೃತ್ತಿ ಪಡೆಯುತ್ತಿದ್ದು, ವೈದ್ಯಕೀಯ ಸೇವಾ ಬದುಕಿನಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ರೋಗಿಗಳ ಸೇವೆ ಮಾಡಿದ ಸಂತೃಪ್ತಿ ನಮಗಿದೆ. ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರ ಸಮರ್ಥ ನಾಯಕತ್ವದಲ್ಲಿ ಜನಪ್ರಿಯಗೊಂಡಿರುವ ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯವೃಂದ, ನುರಿತ ದಾದಿಯರು, ಒಳ್ಳೆಯ ಸಿಬ್ಬಂದಿಗಳೊAದಿಗೆ ಸೇವೆ ಮಾಡಿದ್ದು, ಎಲ್ಲರೂ ನಮಗೆ ಸದಾ ಸ್ಮರಣೀಯರು ಎಂದರು. ಡಾ| ಚಿನ್ಮಯ್ ಇವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಧೀರ್ಘಕಾಲದ ಅನುಭವ ಹೊಂದಿರುವ ಮತ್ತು ತಮ್ಮ ಇಳಿವಯಸ್ಸಿನಲ್ಲಿಯೂ ಲವಲವಿಕೆ ಮತ್ತು ಸದಾ ಕಳೆದ 13 ವರ್ಷಗಳಿಂದ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ವಿ ಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ| ಬಾಲಕೃಷ್ಣ ಭಟ್, ಹಾಗೂ ಡಾ| ಕಮಲಾ ಭಟ್ ಇವರು ವಯೋಸಹಜ ಸಮಸ್ಯೆಗಳಿಂದಾಗಿ ಸೇವಾ ನಿವೃತ್ತಿ ಪಡೆದರು. ಚಟುವಟಿಕೆಯಲ್ಲಿರುವ ಇವರಿಬ್ಬರೂ ಕೂಡ ನಮ್ಮಂತಹ ವೈದ್ಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು. ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರು ಮಾತನಾಡಿ, ತಮ್ಮ ವೈದ್ಯಕೀಯ ವೃತ್ತಿ ಜೀವನದಲ್ಲಿ ಅಪಾರ ಅನುಭವ ಹೊಂದಿರುವ ಡಾ| ಬಾಲಕೃಷ್ಣ ಭಟ್, ಮೆಡಿಸಿನ್ ವಿಭಾಗದಲ್ಲಿದ್ದರೂ ಮೂಳೆಚಿಕಿತ್ಸೆ, ಮಕ್ಕಳ ಚಿಕಿತ್ಸೆಯಲ್ಲಿಯೂ ಪರಿಣತಿ ಪಡೆದಿದ್ದರು. ಡಾ| ಕಮಲಾ ಭಟ್ ತಮ್ಮ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು. ಇನ್ಯೂರೆನ್ಸ್ ವಿಭಾಗದ ಜಗನ್ನಾಥ್ ನಿರೂಪಿಸಿದರು. ವೈದ್ಯರು, ದಾದಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ

Article Image

ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಗ್ಗಡೆಯವರ ಆದೇಶದಂತೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ, ಹೇಮಾವತಿ ವಿ. ಹೆಗ್ಗಡೆಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ, ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ ಏ.2 ಬುಧವಾರ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 2.30ರವರೆಗೆ ನಡೆಯಿತು. ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಖ್ಯಾತ ಸಂಧಿವಾತ ತಜ್ಞರಾದ ಡಾ| ಶಿವರಾಜ್ ಪಡಿಯಾರ್ ಶಿಬಿರ ಉದ್ಘಾಟಿಸಿ ಮಾತನಾಡಿದರು. ದೇಹದ ರೋಗನಿರೋಧಕ ಅವ್ಯವಸ್ಥೆಯಿಂದ ಆರೋಗ್ಯಕರ ಅಂಗಾಂಶಗಳ ಮೇಲೆ ಪರಿಣಾಮ ಬೀಳುತ್ತದೆ. ಇದರಿಂದ ಆಟೋಇಮ್ಯೂನ್ ಕಾಯಿಲೆಗಳು ಸಂಭವಿಸುತ್ತವೆ. ರುಮಟಾಯ್ಡ್ ಸಂಧಿವಾತ, ಮಲ್ಟಿಪಲ್ ಸ್ಕೆರೋಸಿಸ್ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ತೊಂದರೆಗಳಿಗೆ ಈ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಪ್ರತೀಕ್ಷ್. ಪಿ ಇವರು ಮಾತನಾಡಿ, ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಖ್ಯಾತ ಸಂಧಿವಾತ ತಜ್ಞರಾದ ಡಾ| ಶಿವರಾಜ್ ಪಡಿಯಾರ್ ಮತ್ತು ಪ್ರತ್ಯೂಷ ಮಣಿಕುಪ್ಪಂ ಸಂಧಿವಾತ, ಅಟೋ ಇಮ್ಯೂನ್ ತೊಂದರೆಗಳಿಗೆ ಚಿಕಿತ್ಸೆ ನೀಡುವ ನುರಿತ ತಜ್ಞ ವೈದ್ಯರಾಗಿದ್ದು, ಎಲ್ಲರೂ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಇವರು ಮಾತನಾಡಿ, ಎಲ್ಲಾ ಖಾಯಿಲೆಗಳಿಗೆ ಇಲ್ಲಿಯೇ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕು ಎಂಬುದು ಹೆಗ್ಗಡೆಯವರ ಬಯಕೆ. ಹೆಗ್ಗಡೆಯವರ ಆದೇಶದಂತೆ ಹಲವಾರು ಉಚಿತ ಶಿಬರಗಳನ್ನು ನಡೆಸಲಾಗುತ್ತಿದೆ. ಹಲವಾರು ಜನರ ಕಾಯಿಲೆಗಳನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆಹಚ್ಚಲು ಸಾಧ್ಯವಾಗುವುದರಿಂದ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಕಡಿಮೆಯಾಗುವುದಲ್ಲದೇ ಅತ್ಯಂತ ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂದರು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಸಿಷಿಯನ್ ಡಾ| ಯಶಸ್ವಿನಿ, ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ರಜತ್ ಉಪಸ್ಥಿತರಿದ್ದರು. ಇನ್ಶೂರೆನ್ಸ್ ವಿಭಾಗದ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ಈ ಶಿಬಿರದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಖ್ಯಾತ ಸಂಧಿವಾತ ತಜ್ಞರಾದ ಡಾ| ಶಿವರಾಜ್ ಪಡಿಯಾರ್ ಮತ್ತು ಪ್ರತ್ಯೂಷ ಮಣಿಕುಪ್ಪಂ ಭಾಗವಹಿಸಿದ್ದರು. ಸಂಧಿವಾತ, ಅಸ್ಥಿ ಸಂಧಿವಾತ, ಮಕ್ಕಳ ಸಂಧಿವಾತ, ರುಮಟಾಯ್ಡ್, ಆರ್ಥೈಟಿಸ್, ಸ್ಟಾಂಡಿಲೋ ಆರ್ಥೈಟಿಸ್, ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್, ಸೋರಿಯಾಸಿಸ್, ವಾಸ್ಕುಲೈಟಿಸ್ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದರು.

ಎಕ್ಸಲೆಂಟ್ ಸಿಬಿಎಸ್ಇ ಕಿಂಡರ್ ಗಾರ್ಟನ್ ಪುಟಾಣಿ ವಿದ್ಯಾರ್ಥಿಗಳಿಗೆ ಚಿಣ್ಣರ ಪ್ರಶಸ್ತಿ ಪ್ರಧಾನ ಸಮಾರಂಭ

Article Image

ಎಕ್ಸಲೆಂಟ್ ಸಿಬಿಎಸ್ಇ ಕಿಂಡರ್ ಗಾರ್ಟನ್ ಪುಟಾಣಿ ವಿದ್ಯಾರ್ಥಿಗಳಿಗೆ ಚಿಣ್ಣರ ಪ್ರಶಸ್ತಿ ಪ್ರಧಾನ ಸಮಾರಂಭ

ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಯುಕೆಜಿ ತರಗತಿಯ ಪುಟಾಣಿ ವಿದ್ಯಾರ್ಥಿಗಳಿಗೆ ಚಿಣ್ಣರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಸಮಾರಂಭವನ್ನು ಪುಟಾಣಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೂಡಬಿದಿರೆಯ ಖ್ಯಾತ ಮಕ್ಕಳ ತಜ್ಞ ಡಾಕ್ಟರ್. ಟಿ. ವಸಂತ್ ರವರು ಉಪಸ್ಥಿತಿಯಲ್ಲಿದ್ದು ಮಕ್ಕಳ ಮನಸ್ಸು ಸೂಕ್ಷ್ಮವಾದುದು, ಎಳೆಯ ವಯಸ್ಸಿನಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾದ ಎಲ್ಲಾ ಚೌಕಟ್ಟನ್ನು ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರದ್ದೂ ಆಗಿರುತ್ತದೆ ಎಂದು ತಿಳಿಸಿದರು. ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಶೈಕ್ಷಣಿಕ ನಿರ್ದೇಶಕರು ಹಾಗೂ ಶೈಕ್ಷಣಿಕ ಮನಶಾಸ್ತ್ರಜ್ಞರು ಆಗಿರುವ ಬಿ. ಪುಷ್ಪರಾಜ ರವರು ಮಾತನಾಡಿ, ಎಳೆಯ ಮಕ್ಕಳ ಕಲಿಕೆಗೆ ಅನುಕೂಲಕರವಾದ ಚಟುವಟಿಕೆ ಆಧಾರಿತ ಶಿಕ್ಷಣ ನೀಡುವುದರಿಂದ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿ ಬೆಳೆಯಲು ಸಾಧ್ಯವಾಗುವುದು.ಅಲ್ಲದೆ ಎಳೆಯ ಮಕ್ಕಳಿಗೆ ಮಾತನಾಡುವ ಕೌಶಲ್ಯವನ್ನು ಬೆಳೆಸುವ ಹಲವು ಚಟುವಟಿಕೆಗಳನ್ನು ನೀಡುವುದರಿಂದ ಅವರ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಲು ಅನುಕೂಲವಾಗುತ್ತದೆ ಎನ್ನುವುದನ್ನು ತಿಳಿಸಿದರು. ಈ ಸಂದರ್ಭದಲ್ಲಿ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ರವರು ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಸಂಯಮ, ಗೌರವಭಕ್ತಿಯ ಮನೋಭಾವವನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವೂ ಆಗಿದೆ ಎಂದು ಹೇಳುವ ಮೂಲಕ ಎಳೆಯ ವಯಸ್ಸಿನ ಮಕ್ಕಳು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕಾದರೆ ಮಗು ಬೆಳೆದಿರುವ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಬೇಕು ಅನ್ನುವುದನ್ನು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರು ಆಗಿರುವ ಬಿ. ಪುಷ್ಪರಾಜ್, ಆಡಳಿತ ನಿರ್ದೇಶಕರಾದ ಬಿ. ಪಿ.ಸಂಪತ್ ಕುಮಾರ್, ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲರಾದ ಸುರೇಶ್, ಶೈಕ್ಷಣಿಕ ಸಂಯೋಜಕರಾದ ಪ್ರಸಾದ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುಕೆಜಿ ಪುಟಾಣಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಯುಕೆಜಿ ವಿದ್ಯಾರ್ಥಿನಿಯರಾದ ಶ್ರುತಿಕ ಕಾಮತ್ ಹಾಗೂ ಅಮೂಲ್ಯ ನೆರವೇರಿಸಿದರು. ಅತುಲಿತ್ ಗ್ಯಾನ್ ಸ್ವಾಗತಿಸಿ, ಆರಲ್ ಲೋಬೊ ವಂದಿಸಿದರು. ಯುಕೆಜಿಯ ರಕ್ಷಿತ್ ಕಾಮತ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಎಕ್ಸಲೆಂಟ್: ಸ್ಕೌಟ್ಸ್ ಗೈಡ್ಸ್ ನಾಲ್ಕು ದಿನದ ಬೇಸಿಗೆ ಶಿಬಿರ ಜ್ಞಾನ ರಶ್ಮಿ ಉದ್ಘಾಟನೆ

Article Image

ಎಕ್ಸಲೆಂಟ್: ಸ್ಕೌಟ್ಸ್ ಗೈಡ್ಸ್ ನಾಲ್ಕು ದಿನದ ಬೇಸಿಗೆ ಶಿಬಿರ ಜ್ಞಾನ ರಶ್ಮಿ ಉದ್ಘಾಟನೆ

ಮೂಡುಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ಕೌಟ್ಸ್ ಗೈಡ್ಸ್ ನಾಲ್ಕು ದಿನದ ಬೇಸಿಗೆ ಶಿಬಿರ ಜ್ಞಾನ ರಶ್ಮಿ. ಇದರ ಉದ್ಘಾಟನೆಯನ್ನು ಖ್ಯಾತ ರಂಗಕರ್ಮಿ ರಾಷ್ಟ್ರಪ್ರಶಸ್ತಿ ವಿಜೇತ ಡಾಕ್ಟರ್ ಜೀವನ್ ರಾಮ್ ಸುಳ್ಯ ಉದ್ಘಾಟಿಸಿ, ಸಮಾಜದಲ್ಲಿ ಸಾಧಕ ನೆನೆಸಿಕೊಳ್ಳಲು ಹಲವು ದಿನಗಳ ನಿದ್ದೆ ಹಸಿವು ಸಮಯ ಇತ್ಯಾದಿಗಳ ಪರಿವೇ ಇಲ್ಲದೆ ಪರಿಶ್ರಮ ಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳಲ್ಲಿ ಸುಪ್ತ ಪ್ರತಿಭೆಗಳಿದ್ದು ಹೊರತೆಗೆಯಲು ಈ ತರದ ಶಿಬಿರಗಳು ಅನುಕೂಲಕರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕಬೇಕು ಅಂದರೆ ಜ್ಞಾನ ದೊಂದಿಗೆ ಈಜಬೇಕು. ತಾಂತ್ರಿಕ ಯುಗದಲ್ಲಿ ಜ್ಞಾನಕ್ಕೆ ಬೆಲೆ ಬರುವುದು ಸಕಲ ವಿದ್ಯೆಯಿಂದ. ಮಕ್ಕಳು ಸಾಧ್ಯವಾದಷ್ಟು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿಭೆಯನ್ನು ಹೊರೆಸು ಚೆಲ್ಲಬೇಕು. ಆಗ ಸಮಾಜದ ಆಸ್ತಿಯಾಗುತ್ತಾರೆ ಮತ್ತು ಅತ್ಯುತ್ತಮ ಗೌರವ ಸಿಗುತ್ತದೆ ಎಂದರು. ವೇದಿಕೆಯ ಮೇಲೆ ಎಕ್ಸಲೆಂಟ್ ಸಿಬಿಎಸ್‌ಸಿ ಸಂಸ್ಥೆಯ ಪ್ರಾಂಶುಪಾಲರಾದ ಸುರೇಶ, ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರು ಉಪಸ್ಥಿತರಿದ್ದರು. ಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿಯವರು ಅತಿಥಿ ಪರಿಚಯಿಸಿ, ಸುಧೀಕ್ಷಾ ಸ್ವಾಗತಿಸಿ, ಮಾನಿತಾ ವಂದಿಸಿ, ಕಾರ್ಯಕ್ರಮವನ್ನು ಲಕ್ಷ್ಮೀ ನಿರೂಪಿಸಿದರು.

ಮೂಡುಬಿದಿರೆ: ಆಳ್ವಾಸ್ ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

Article Image

ಮೂಡುಬಿದಿರೆ: ಆಳ್ವಾಸ್ ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ವಿದ್ಯಾಗಿರಿ: 'ರಂಗ ಚಟುವಟಿಕೆಯೇ ನನ್ನ ಬದುಕಿನ ಯಶಸ್ಸಿನ ಸೂತ್ರ' ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ.ಮೋಹನ ಆಳ್ವ ಹೇಳಿದರು. ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ 'ವಿಶ್ವರಂಗಭೂಮಿ ದಿನಾಚರಣೆ' ಅಂಗವಾಗಿ ಶುಕ್ರವಾರ ಹಮ್ಮಿಕೊಂಡ 'ರಂಗಗೀತೆ- ಉಪನ್ಯಾಸ- ಸನ್ಮಾನ- ನಾಟಕ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜ ಮತ್ತು ಬದುಕಿಗೆ ರಂಗಭೂಮಿ ಕೊಡುಗೆ ಅಪಾರ. ಪಠ್ಯಕ್ಕಿಂತ ರಂಗ ಚಟುವಟಿಕೆಗಳ ನೆನಪು ನನಗೆ ಇಂದಿಗೂ ಚಿರಸ್ಥಾಯಿಯಾಗಿದೆ' ಎಂದರು. ಭೋಜ ಶೆಟ್ಟ ನಮ್ಮ ಸಮಕಾಲೀನರು. ರಂಗದಲ್ಲಿ ಅವರ ಒಡನಾಟವೇ ಸುಂದರ ಎಂದು ಶ್ಲಾಘಿಸಿದರು. ಲಂಕೇಶ್ ಬರೆದ 'ಪೋಲಿಸರಿದ್ದಾರೆ ಎಚ್ಚರಿಕೆ' ನಾಟಕದ 'ರುದ್ರಮೂರ್ತಿ' ಪಾತ್ರ ಸೇರಿದಂತೆ ತಾವು ನಿರ್ವಹಿಸಿದ ‘ಗುಂಡ', ‘ತುಘಲಕ್', 'ಬಯ್ಯಮಲ್ಲಿಗೆ' ನಾಟಕದಲ್ಲಿ ತಾವು ನಿರ್ವಹಿಸಿದ ‘ವಿದೂಷಕ' ಪಾತ್ರ ಸೇರಿದಂತೆ ಎಲ್ಲ ಪಾತ್ರಗಳನ್ನು ತೃಪ್ತ ಭಾವದಿಂದ ಮೆಲುಕು ಹಾಕಿದರು. ವಿಠಲ್ ಮಾಸ್ಟರ್ ಮೂಲಕ ಭರತ ನಾಟ್ಯ ಕಲಿತು ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಿರುವುದನ್ನು ನೆನಪಿಸಿಕೊಂಡರು. ‘ಮೂಕಾನಭಿಯ, ಮ್ಯಾಜಿಕ್ ಕಲಿತ - ಪ್ರಯೋಗಿಸಿದ ಅನುಭವ ನನ್ನನ್ನು ಗಟ್ಟಿಗೊಳಿಸಿದೆ' ಎಂದ ಅವರು, 'ಮಕ್ಕಳೇ ನೀವು ಎಲ್ಲಿಯೇ ಪ್ರದರ್ಶನ ನೀಡಿದರೂ, ನಾನು ಪ್ರೇಕ್ಷಕನಾಗಿದ್ದೇನೆ ಎಂಬುದನ್ನು ನೆನಪಿಸಿಕೊಳ್ಳಿ' ಎಂದು ಹಿತವಚನ ಹೇಳಿದರು. ‘ಬೆಸ್ತರ, ಬೇಡರ ನೃತ್ಯ ನಿರಂತರವಾಗಿ ಮಾಡಿದ್ದೇನೆ. ಅದೇ ರೀತಿ ಅವಿರತವಾಗಿ ತೊಡಗಿಸಿಕೊಂಡಾಗ ಬದುಕಿನ ಯಶಸ್ಸು ದೊರೆಯುತ್ತದೆ' ಎಂದರು. ‘ಬದುಕೇ ಒಂದು ನಾಟಕ, ವಿವಿಧ ಹಂತದಲ್ಲಿ ನಾವು ನಟನೆ ಮಾಡಬೇಕಾಗುತ್ತದೆ' ಎಂದು ಮಾರ್ಮಿಕವಾಗಿ ಹೇಳಿದರು. ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಹಿರಿಯ ರಂಗಕರ್ಮಿ ಡಾ| ನರಸಿಂಹಮೂರ್ತಿ ಆರ್. ಮಾತನಾಡಿ, ‘ಲಲಿತಕಲೆಗಳ ಸಂಗಮ ಕ್ಷೇತ್ರವೇ ‘ರಂಗಭೂಮಿ' ಎಂದು ವಿಶ್ಲೇಷಿಸಿದರು. ಪಂಚೇಂದ್ರಿಯ ಮೂಲಕ ನೆಮ್ಮದಿ ನೀಡುವ ಮನುಷ್ಯ ಕೃತ ಕ್ರಿಯೆಗಳೇ ಕಲೆ. ಪ್ರಾಚೀನ ಭಾರತದಲ್ಲಿ 64 ಕಲೆಗಳನ್ನು ಗುರುತಿಸಲಾಗಿದೆ. ನಾಟಕ ಎಂಬುದು ‘ಕಲಾ ರಸಾಯನ'. ಹಲವು ಕಲೆಗಳ ಮೇಳೈಸುವಿಕೆ ಎಂದು ವಿವರಿಸಿದರು.ವಿಭಿನ್ನ ರುಚಿ ಉಳ್ಳವರ ಭೋಜನವೇ ನಾಟಕ. ಎಲ್ಲರಿಗೂ ಏಕ ಕಾಲದಲ್ಲಿ ಕಲೆಗಳ ಖಾದ್ಯ ಲಭ್ಯ. ನಾಟಕ ಅರಿವು- ಮನುಷ್ಯತ್ವ ಮೂಡಿಸಬೇಕು ಎಂದರು. ‘ದೇಗುಲಗಳಿಗೆ ಹೋಗದಿದ್ದರೂ ರಂಗಭೂಮಿಯನ್ನು ಕಳೆದುಕೊಳ್ಳಬೇಡಿ' ಎಂದು ಬರ್ನಾಡ್ ಷಾ ಹೇಳಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜೀವನ್ ರಾಮ್ ಸುಳ್ಯ, ನಾಟಕವಿಲ್ಲದೇ ಜೀವನ ಇಲ್ಲ. ನಾವು ರಂಗದಲ್ಲಿ ನಾಟಕಕಾರರು, ಆದರೆ, ಎಲ್ಲರೂ ಜೀನದಲ್ಲಿ ನಾಟಕಕಾರರು. ಪಾತ್ರಗಳು ಮಾತ್ರ ವಿಭಿನ್ನ. ಎಲ್ಲ ವೃತ್ತಿಗಳು ‘ನಾಟಕ' ಬಯಸುತ್ತವೆ ಎಂದು ರಂಗಭೂಮಿ ದಿನದ ಕುರಿತು ಮಾಹಿತಿ ಹಂಚಿಕೊಂಡರು. ವಿಶ್ವರಂಗ ಸನ್ಮಾನ: ರಂಗಭೂಮಿಯ ಹಿರಿಯ ಮತ್ತು ಚಲನಚಿತ್ರ ಕಲಾವಿದ ಎಂ.ಭೋಜ ಶೆಟ್ಟಿ ತೋಟದಮನೆ ಅವರನ್ನು ಸನ್ಮಾನಿಸಲಾಯಿತು. ಜೀವನ್ ರಾಮ್ ಸುಳ್ಯ, ವಿದುಷಿ ಸುಮನಾ ಪ್ರಸಾದ್ ಮತ್ತು ಮಮತಾ ಕಲ್ಮಕಾರು ಅವರು, ‘ಸಾವಿರದ ಮಾಯೆ', ‘ಸಣ್ಣ ಹುಡುಗಿ ನಿನ್ನ', 'ಮದುವೆ ಎಂಬ ಮೂರಕ್ಷರ' ‘ಅಂತಿಂಥ ಮದುವೆಯಲ್ಲ, ಊಟ', ‘ಗೋರ್ ಮಾಟಿ' ರಂಗಗೀತೆಗಳನ್ನು ಹಾಡಿದರು. ಚಿನ್ಮಯ ಕಮಲಾಕರ ಭಟ್ ಹಾಗೂ ಮನುಜ ನೇಹಿಗೆ ಸುಳ್ಯ ಹಿನ್ನೆಲೆಯಲ್ಲಿ ಸಾಥ್ ನೀಡಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಮ್ ಸುಳ್ಯ ನಿರ್ದೇಶನದಲ್ಲಿ ಶಶಿರಾಜ್ ಕಾವೂರು ಬರೆದ ‘ಏಕಾದಶಾನನ' ನಾಟಕವನ್ನು ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಮನುಜ ನೇಹಿಗೆ ಸುಳ್ಯ ಸಂಗೀತ ನೀಡಿದರು.

ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ

Article Image

ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ

ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ. ಸ್ಪಾಂಡಿಲೋಆರ್ಥೈಟಿಸ್, ಸಿಸ್ಟಮಿಕ್ ಲೂಪಸ್, ಎರಿಥೆಮಾಟೋಸಸ್ (SLE), ಸಂಧಿವಾತ, ಅಸ್ಥಿಸಂಧಿವಾತ, ಸೋರಿಯಾಸಿಸ್, ವಾಸ್ತುಲೈಟಿಸ್‌, ಸ್ಟೆರೋಡರ್ಮಾ, ಮಕ್ಕಳ ಸಂಧಿವಾತ, ರುಮ್‌ಟಾಯ್ಡ್ ಸಂಧಿವಾತ‌ ರೋಗ ಲಕ್ಷಣ ಹೊಂದಿರುವವರು ಭಾಗವಹಿಸಬಹುದು. ಶಿಬಿರದಲ್ಲಿ ಲಭ್ಯಏರುವ ತಜ್ಞ ವೈದ್ಯರು: ಡಾ. ಶಿವ್‌ರಾಜ್‌ ಪಡಿಯಾ‌ (MBBS, MD, DM ಕನ್ದಪ್ಟೆಂಟ್ ರುಮಟಾಲಜಸ್ಟ್ ಮತ್ತು ಕ್ಲಿನಿಕಲ್ ಇಮ್ಮೂನಾಲಜಸ್ಟ್ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ, ಮಂಗಳೂರು) ಡಾ. ಪ್ರತ್ಯಷ ಮಣಿಕುಪ್ಪಂ (MBBS, MD, DM ಕನ್ಸಲ್ಲೆಂಟ್ ರುಮಟಾಲಜಿಸ್ಟ್ ಮತ್ತು ಕ್ಲಿನಿಕಲ್ ಇನ್ನೂ ನಾಲಟಿಸ್ಟ್ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ, ಮಂಗಳೂರು) ಸೌಲಭ್ಯಗಳು: ನುರಿತ ತಜ್ಞ ವೈದ್ಯರ ಜತೆ ಉಚಿತ ಸಮಾಲೋಚನೆ, ರಕ್ತ ಪರೀಕ್ಷೆಗಳಿಗೆ ಶೇ. 10 ಲಿಯಾಯಿತಿ, ಔಷಧಿಗಳಿಗೆ ಶೇ. 10 ರಿಯಾಯಿತಿ. ದಿನಾಂಕ: 2 ಏಪ್ರಿಲ್ 2025 ಬುಧವಾರದಂದು ಬೆಳಗ್ಗೆ 9.00ರಿಂದ ಅಪರಾಹ್ನ 2.30 ರವರೆಗೆ ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ಇಲ್ಲಿನ ಹೊರರೋಗಿ ಏಭಾಗದಲ್ಲಿ ನಡೆಯಲಿದೆ. ನೋಂದಾವಣಿಗಾಗಿ ದಯವಿಟ್ಟು ಕರೆ ಮಾಡಿ: 77603 97878, 77603 97878 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99720 00438

ಪ್ರಥ್ವಿ ಪರ್ವ ರಾಷ್ಟೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ

Article Image

ಪ್ರಥ್ವಿ ಪರ್ವ ರಾಷ್ಟೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ

ವಿದ್ಯಾಗಿರಿ: ಸಮಾಜದಿಂದ ಎಲ್ಲವನ್ನು ಪಡೆದು, ಸಮಾಜಕ್ಕೆ ಹಿಂತಿರುಗಿಸುವ ಬದ್ಧತೆಯನ್ನು ಪ್ರತಿಯೊಬ್ಬರು ಹೊಂದಿರಬೇಕು. ಇದು ದೇಶದ ಸಮತೋಲಿತ ಬೆಳವಣಿಗೆಗೆ ಸಹಕಾರಿ ಎಂದು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಮಾನವಿಕ ವಿಭಾಗ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಎರಡು ದಿನಗಳ ‘ಪ್ರಥ್ವಿ ಪರ್ವ’ ರಾಷ್ಟೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಕೊಡುಗೆ ಕೇವಲ ಆರ್ಥಿಕ ನೆರವಿನ ಮೂಲಕ ಮಾತ್ರ ಆಗಬೇಕೆಂದಿಲ್ಲ. ಪರಿಸರದ ರಕ್ಷಣೆ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಭವಿಷ್ಯ ಪೀಳಿಗೆಗೆ ಉಚಿತವಾಗಿ ನೀಡಬಹುದಾದ ಅಮೂಲ್ಯ ಕೊಡುಗೆಯಾಗಿದೆ. ನಾವಿಂದು ಪ್ರಕೃತಿಯಿಂದ ಎಲ್ಲವನ್ನು ಪಡೆದು, ಅದೇ ಪ್ರಕೃತಿಯನ್ನು ನಾಶ ಮಾಡಲು ಹೊರಟಿದ್ದೇವೆ. ಪರಿಸರದ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡದಿದ್ದರೆ ಭವಿಷ್ಯದಲ್ಲಿ ಹಲವು ಸಂಕಟಗಳನ್ನು ಎದುರಿಸಬೇಕಾಗುತ್ತದೆ. "ನಾವು ಪ್ರಕೃತಿಯನ್ನು ಸಂರಕ್ಷಿಸಿದರೆ, ಅದು ನಮ್ಮನ್ನು ಸಂರಕ್ಷಿಸುತ್ತದೆ" ಎಂಬ ಸತ್ಯವನ್ನು ಅರಿಯಬೇಕಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು. ನಾವು ಬಳಸುವ ಪ್ರತಿಯೊಂದು ವಸ್ತುವಿನಲ್ಲಿ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಜೈವಿಕವಾಗಿ ವಿಘಟನೆಯಾಗುವ ವಸ್ತುಗಳನ್ನ ಹೆಚ್ಚೆಚ್ಚು ಬಳಸಬೇಕು. ಬಳಸಿದ ವಸ್ತುಗಳನ್ನು ಮರುಬಳಕೆ ಮಾಡಬೇಕು. ಅನಗತ್ಯ ತಿರುಗಾಟ, ಅನಗತ್ಯ ವಿದ್ಯುತ್ ಬಳಕೆ ಇವೆಲ್ಲವೂ ಪರಿಸರ ರಕ್ಷಣೆಯ ಭಾಗ ಎಂದು ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಕೇವಲ ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸಾಲದು, ಪರಿಸರ ಸಂರಕ್ಷಣೆ ಕೆಲಸಗಳು ವಿದ್ಯಾರ್ಥಿ ಸಮುದಾಯದಿಂದ ಮೂಡಿಬರಬೇಕು ಎಂದರು ಕಲಾ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದ್ಭಳಕೆಯಾದರೆ ದಕ್ಷಿಣ ಭಾರತದಲ್ಲೂ ಕಲಾ ವಿಭಾಗದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ ಇಂದಿನ ಯುಗದಲ್ಲಿ "ಬಳಸಿ-ಬಿಸಾಡುವ’’ ಮನೋಭಾವ ವ್ಯಾಪಕವಾಗಿ ಹೆಚ್ಚುತ್ತಿದೆ. ಈ ಪ್ರವೃತ್ತಿ ಪರಿಸರದ ಮಟ್ಟದಲ್ಲಿ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತಿದೆ. ಸಂಪನ್ಮೂಲಗಳನ್ನು ಮಿತವಾದ ಬಳಕೆ ಅತ್ಯಗತ್ಯ. ಪ್ಲಾಸ್ಟಿಕ್ ಉತ್ಪಾದನೆ ಕಡಿಮೆಯಾದಾಗ ಬಳಕೆಯೂ ಕಡಿಮೆಯಾಗುತ್ತದೆ. ಭೂಮಿಯೂ ನಮ್ಮ ಅಗತ್ಯಗಳನ್ನು ಈಡೇರಿಸಬಹುದೇ ಹೊರತು ನಮ್ಮ ಅತಿಯಾಸೆಯನ್ನಲ್ಲ. ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆಯ ಚಿಂತನೆ ಮೂಡಬೇಕಿದೆ ಎಂದರು. ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ದಿಶಾ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶ್ರೀವಲ್ಲಿ ಹಾಗೂ ಸುದರ್ಶಿನಿ ನಿರೂಪಿಸಿದರು. ತೇಜಸ್ವಿನಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್. ಉಪನ್ಯಾಸಕಿ ರಕ್ಷಿತಾ ತೋಡಾರ್, ವಿದ್ಯಾರ್ಥಿ ಸಂಯೋಜಕ ಚೇತನ್ ಇದ್ದರು.

ಎಸ್.ಡಿ.ಎಂ ರಸಾಯನಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಅಂತರ್‌ಕಾಲೇಜು ಫೆಸ್ಟ್

Article Image

ಎಸ್.ಡಿ.ಎಂ ರಸಾಯನಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಅಂತರ್‌ಕಾಲೇಜು ಫೆಸ್ಟ್

ಉಜಿರೆ, ಮಾರ್ಚ್: 24: ವಿಜ್ಞಾನದ ಎಲ್ಲಾ ವಲಯಗಳಿಗೂ ಪೂರಕವಾಗುವ ಸಂಶೋಧನಾ ಫಲಿತಗಳೊಂದಿಗೆ ಸಂಶ್ಲೇಷಿತ ಸಾವಯವ ರಸಾಯನಶಾಸ್ತ್ರ ಗಮನ ಸೆಳೆಯುತ್ತಿದೆ ಎಂದು ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಕೆಮಿಕಲ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಅನಿಲ್‌ಕುಮಾರ್ ಅಭಿಪ್ರಾಯಪಟ್ಟರು. ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ‘ಅಡ್ವಾನ್ಸಸ್ ಇನ್ ಸಿಂಥೆಟಿಕ್ ರ‍್ಗಾನಿಕ್ ಕೆಮಿಸ್ಟ್ರೀʼ ಕುರಿತು ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ರಾಷ್ಟ್ರಮಟ್ಟದ ‘ಕೆಮ್‌ಶೋಧನಾ’ ಅಂತರ್‌ಕಾಲೇಜು ಸ್ಪರ್ಧಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಸಾಯನಶಾಸ್ತ್ರವು ವಿಜ್ಞಾನದ ಶಕ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಔಷಧೀಯ ಸಂಶೋಧನೆಗೆ ನೆರವಾಗುವ ನಿಟ್ಟಿನಲ್ಲಿ ಸಾವಯವ ರಸಾಯನಶಾಸ್ತ್ರ ಮಹತ್ವದ ಕೊಡುಗೆಗಳನ್ನು ನೀಡುತ್ತಿದೆ. ಸಂಶೋಧನಾ ಫಲಿತಗಳ ಸಾಮಾಜಿಕ ಪ್ರಯೋಜನದ ಸಂದರ್ಭದಲ್ಲಿ ಗಮನಾರ್ಹ ಸುಧಾರಣೆಗಳಾಗುತ್ತಿವೆ ಎಂದು ಹೇಳಿದರು. ಸಾವಯವ ರಸಾಯನಶಾಸ್ತ್ರದ ಸಂಕೀರ್ಣ ವಿಭಾಗಗಳ ಕುರಿತು ವಿಸ್ತೃತ ಅಧ್ಯಯನಕ್ಕೆ ಇರುವ ಅವಕಾಶಗಳನ್ನು ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಬಳಸಿಕೊಳ್ಳಬೇಕು. ಸಂಶೋಧನೆಯ ತೊಡಗಿಸಿಕೊಳ್ಳುವಿಕೆಯೊಂದಿಗೆ ರಾಸಾಯನಿಕ ಜ್ಞಾನಶಿಸ್ತಿಗೆ ಮಹತ್ವದ ಕೊಡುಗೆಗಳನ್ನು ನೀಡುವತ್ತ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು. ಗೋವಾದ ಸೈಂಗೆಟಾ ಬಯೋಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ.ಮಂಜುನಾಥ ಚೆನ್ನಾಪುರ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭವಿಷ್ಯದ ದಿನಗಳನ್ನು ಸುಸ್ಥಿರ ಅಭಿವೃದ್ಧಿಯ ನೆಲೆಗಟ್ಟಿನಲ್ಲಿ ರೂಪಿಸಿಕೊಳ್ಳಲು ಹಸಿರು ರಸಾಯನಶಾಸ್ತ್ರದ ಪರಿಕಲ್ಪನೆಯನ್ನು ಅನ್ವಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು. ಹಸಿರು ಸಮೃದ್ಧಿಯೊಂದಿಗೆ ಮನುಷ್ಯ ಬದುಕು ಸುಸ್ಥಿರವಾಗುತ್ತದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಹಸಿರು ರಸಾಯನಶಾಸ್ತ್ರದ ಪರಿಕಲ್ಪನೆಯನ್ನು ಗಟ್ಟಿಗೊಳಿಸುವಂಥ ಸಂಶೋಧನಾ ಹೆಜ್ಜೆಗಳು ರೂಪುಗೊಳ್ಳಬೇಕು. ಹಾಗಾದಾಗ ಮಾತ್ರ ರಸಾಯನಶಾಸ್ತ್ರದ ಸಂಶೋಧನಾತ್ಮಕತೆಗೆ ಸುಸ್ಥಿರತೆಯ ಆಯಾಮ ದೊರಕುತ್ತದೆ ಎಂದು ನುಡಿದರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ಅವರು ಮಾತನಾಡಿದರು. ಹೊಸ ರೀತಿಯಲ್ಲಿ ಆಲೋಚಿಸುವ ಯುವ ಪೀಳಿಗೆ ಶಿಕ್ಷಣ ವಲಯದಲ್ಲಿ ಗಮನ ಸೆಳೆಯುತ್ತಿದೆ. ಶೈಕ್ಷಣಿಕ ಕಲಿಕೆಯ ಸ್ವರೂಪ ಬದಲಾಗುತ್ತಿದ್ದಂತೆ ಅದಕ್ಕೆ ತಕ್ಕಂತೆ ಸಾಮರ್ಥ್ಯ ರೂಪಿಸಿಕೊಳ್ಳುವ ಉತ್ಸಾಹವೂ ಕಂಡುಬರುತ್ತಿದೆ. ಇಂತಹ ಉತ್ಸಾಹಕ್ಕೆ ಪೂರಕವಾಗಿ ರಾಷ್ಟ್ರೀಯ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮಗಳು ಹೊಸದೊಂದನ್ನು ಆವಿಷ್ಕರಿಸುವುದಕ್ಕೆ ಪ್ರೇರಣೆ ಒದಗಿಸುವ ವೇದಿಕೆಗಳಾಗಿ ಪ್ರಮುಖ ಪಾತ್ರವಹಿಸುತ್ತವೆ ಎಂದರು. ಸ್ಪರ್ಧಾತ್ಮಕ ಉತ್ಸವಗಳು ವಿದ್ಯಾರ್ಥಿಗಳ ಜ್ಞಾನಾಧಾರಿತ ಕೌಶಲ್ಯಗಳ ಪ್ರದರ್ಶನಕ್ಕೆ ಅವಕಾಶ ಒದಗಿಸಿಕೊಡುತ್ತವೆ. ಸೃಜನಶೀಲತೆಯೊಂದಿಗೆ ಮುನ್ನಡೆಯಲು ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ವಸಂತಕುಮಾರ್, ಡಾ.ರಾಜೇಶ್ ಹೆಗ್ಡೆ ಉಪಸ್ಥಿತರಿದ್ದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ.ನೆಫಿಸತ್ ವಂದಿಸಿದರು. ವಿದ್ಯಾರ್ಥಿನಿ ಸೋನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಪ್ರಾಯೋಜಿತ ರಾಷ್ಟ್ರೀಯ ಸಮ್ಮೇಳನ

Article Image

ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಪ್ರಾಯೋಜಿತ ರಾಷ್ಟ್ರೀಯ ಸಮ್ಮೇಳನ

ವಿದ್ಯಾಗಿರಿ: ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನ ಮತ್ತು ಜೈವಿಕ ವಿಜ್ಞಾನ ವಿಲೀನಗೊಂಡು ಸಂಶೋಧನಾ ಅಧ್ಯಯನ ನಡೆಸಲು ಪೂರಕ ವಾತವರಣ ನಿರ್ಮಾಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಣಿಪಾಲ ಕೆಎಂಸಿಯ ಔಷಧಶಾಸ್ತ್ರ ವಿಭಾಗದ ಸಂಶೋಧನಾ ಸಹಾಯಕಿ ಡಾ. ರಮ್ಯಾ ಕಟೀಲ್ ಹೇಳಿದರು. ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಜೈವಿಕ ವಿಜ್ಞಾನ ವಿಭಾಗ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಇದರ ಸಹಯೋಗದೊಂದಿಗೆ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ "ಜೈವಿಕ ವಿಜ್ಞಾನಗಳಲ್ಲಿ ಇತ್ತೀಚಿನ ಪ್ರಗತಿಗಳು ಮತ್ತು ನಾವೀನ್ಯತೆಗಳು" ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವೈಜ್ಞಾನಿಕ ವಿಚಾರ ಸಂಕಿರಣವು ಸಂಶೋಧನಾರ್ಥಿಗಳಿಗೆ ಸೃಜನಾತ್ಮಕ ಜ್ಞಾನ, ವಿಚಾರ ವಿನಿಮಯ ಮತ್ತು ಅಧ್ಯಯನದಲ್ಲಿ ಪಾಲ್ಗೊಳ್ಳಲು ಸಹಕಾರಿ ಎಂದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಇಲ್ಲಿನ ಪರಿಸರ ಅಧಿಕಾರಿ ಡಾ. ಎಚ್. ಲಕ್ಷ್ಮಿಕಾಂತ, ಸಂಶೋಧನಾ ಪ್ರಬಂಧಗಳನ್ನು ತಯಾರಿಸುವ ಸಂದರ್ಭಗಳಲ್ಲಿ ಹಲವಾರು ಬಾರಿ ನಿರಾಕರಣೆಯಾಗುವ ಸಂಭವ ಎದುರಾಗಬಹುದು. ಪರಿಶ್ರಮ ಮತ್ತು ಸ್ಥಿರತೆಯಿಂದ ಅಧ್ಯಯನವನ್ನು ಪೂರ್ಣಗೊಳಿಸಿ. ಪ್ರತಿ ಅಧ್ಯಯನದಲ್ಲಿಯೂ ಕುತೂಹಲ ಮತ್ತು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ. ಜೀವನದ ಪ್ರತಿ ಹಂತವನ್ನು ಸವಾಲಾಗಿ ಸ್ವೀಕರಿಸಿ, ಯಶಸ್ಸನ್ನು ಪಡೆಯಿರಿ ಎಂದರು. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಸಂಶೋಧಕನಿಗೆ ಸಮಾಜದಲ್ಲಾಗುವ ಎಲ್ಲಾ ಪ್ರಚಲಿತ ಘಟನೆಗಳ ಅರಿವು ಬಹಳ ಅವಶ್ಯಕ ಎಂದು ತಿಳಿಸಿದರು. ಈ ರೀತಿಯ ವೈಜ್ಞಾನಿಕ ವಿಚಾರ ಸಂಕಿರಣ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಉತ್ತೇಜಿಸಲು ಪೂರಕ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧಿಕೃತ ಸಂಶೋಧನಾ ಲೇಖನಗಳ ಪುಸ್ತಕದ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ನಂತರ ನಡೆದ ವಿವಿಧ ವಿಷಯವಾರು ಅಧಿವೇಶನಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ಎಚ್. ಲಕ್ಷ್ಮಿಕಾಂತ, ಬೆಂಗಳೂರು ನ್ಯೂಟ್ರೇಸ್‌ನ ಎಲೆಕ್ಟ್ರೋ ಕೆಮಿಸ್ಟ್ರೀ ವಿಭಾಗದ ಪ್ರಧಾನ ಸಂಶೋಧಕಿ ಡಾ. ಹರ್ಷಿತಾ ಬಿ. ಎ. ಹಾಗೂ ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜಿನ ಜೀವ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಪ್ರಿಯಾಂಕಾ ಶ್ರೀಧರನ್‌ರಿಂದ ಉಪನ್ಯಾಸ ನಡೆಯಿತು. ಆಳ್ವಾಸ್ ಕಾಲೇಜು ಮತ್ತು ವಿವಿಧ ಕಾಲೇಜಿನ ಜೈವಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ 'ಜೈವಿಕ ವಿಜ್ಞಾನಗಳಲ್ಲಿ ಇತ್ತೀಚಿನ ಪ್ರಗತಿಗಳು ಮತ್ತು ನಾವೀನ್ಯತೆಗಳು' ಕುರಿತ ಮೌಖಿಕ ಪ್ರಸ್ತುತಿ ಮತ್ತು ಪೋಸ್ಟರ್ ಪ್ರಸ್ತುತಿ ನೆರವೇರಿತು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಹಾಗೂ ಸಂಚಾಲಕ ಡಾ. ರಾಮ ಭಟ್ ಪಿ. ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಹನಾ ಪೂಜಾರಿ ನಿರೂಪಿಸಿ, ಅನಿಕೇತ ಸುಧೀರ್ ವಂದಿಸಿದರು.

ರೀಡರ್ಸ್ ಕ್ಲಬ್ ವತಿಯಿಂದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ

Article Image

ರೀಡರ್ಸ್ ಕ್ಲಬ್ ವತಿಯಿಂದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ರೀಡರ್ಸ್ ಕ್ಲಬ್ ವತಿಯಿಂದ "ಸಂಘರ್ಷ(ಕಾನ್ಫಿಕ್ಟ್) ಪತ್ರಕರ್ತನಾಗಿದ್ದಾಗ ಅಹಿತಕರ ಘಟನೆಗಳಿಂದ ಕಲಿತ ಪಾಠಗಳು" ವಿಷಯದ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ಆಳ್ವಾಸ್ ಎಂಬಿಎ ಸೆಮಿನಾರ್‌ನಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸಂಘರ್ಷ ವರದಿಗಾರ, ಲೇಖಕ ಮತ್ತು ಸಿನಿಮಾ ನಿರ್ಮಾಪಕ ಅವಲೋಕ್ ಲ್ಯಾಂಗರ್ ಪತ್ರಿಕೋದ್ಯಮ ವೃತ್ತಿಯಲ್ಲಿ ಊಹೆ ಸಲ್ಲದು. ರವಾನಿಸುವ ಪ್ರತಿ ಸುದ್ದಿಯನ್ನು ಸೂಕ್ಶ್ಮತೆಯಿಂದ ಅವಲೋಕಿಸಿ. ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಹೊಸ ಆವಿಷ್ಕಾರ, ಪ್ರಯೋಗಗಳ ಕಡೆಗೆ ಹೆಚ್ಚು ಗಮನ ನೀಡುವುದರೊಂದಿಗೆ ಸತ್ಯವನ್ನು ಶೋಧಿಸುವ ಮಾರ್ಗದಲ್ಲಿ ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿ ದಿನಗಳಲ್ಲೇ ಬೆಳೆಸಿಕೊಳ್ಳಿ. ಲಭಿಸಿದ ಎಲ್ಲಾ ಅವಕಾಶಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ , ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನವನ್ನು ಹೆಚ್ಚಿಸಲು ರೀಡರ್ಸ್ ಕ್ಲಬ್ ಕೈಗೊಳ್ಳುತ್ತಿರುವ ಕರ‍್ಯಗಳು ಶ್ಲಾಘನೀಯ. ಇಂದಿನ ಯುವಜನತೆಯಲ್ಲಿ ಆಲೋಚನಾ ಶಕ್ತಿಯ ಕೊರತೆ ಇದೆ. ಎಲ್ಲ ಮಾಹಿತಿಗಳನ್ನು ಯೋಚಿಸದೆ ಸ್ವೀಕರಿಸುವ ಮನೋಭಾವ ಹೊಂದಿರುವುದು ಬೇಸರದ ಸಂಗತಿ. ಇಂದಿನ ಯುವ ಸಮುದಾಯ, ತನ್ನ ಸುತ್ತಮುತ್ತಲಿನ ಎಲ್ಲ ಸುದ್ದಿ ಸಮಾಚಾರಗಳ ಕುರಿತು ಹೆಚ್ಚು ಜಾಗೃತರಾಗಿ ತಮ್ಮ ನಿರ್ದಿಷ್ಟ ನಿಲುವನ್ನು ಹೊಂದುವುದು ಉತ್ತಮ ಎಂದು ಸಲಹೆ ನೀಡಿದರು. ಸಂಘರ್ಷ ಪತ್ರಿಕೋದ್ಯಮದಲ್ಲಿನ ಸವಾಲುಗಳು ಮತ್ತು ಅಹಿತಕರ ಘಟನೆಗಳನ್ನು ಎದುರಿಸಿ, ಸತ್ಯವನ್ನು ಜನರೆದುರಿಗೆ ತೆರೆದಿಡಲು ಪಟ್ಟ ಶ್ರಮವನ್ನು ವಿಧ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಹಂಚಿಕೊAಡರು. ಕಾರ್ಯಕ್ರಮದಲ್ಲಿ ರೀಡರ್ಸ್ ಕ್ಲಬ್ ಸಂಯೋಜಕ ಶಶಿಕುಮಾರ್ ಮತ್ತು ರೀಡರ್ಸ್ ಕ್ಲಬ್ ಸದಸ್ಯರು, ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಜೀವಿಟಾ ಪರ್ಲ್ ಕ್ರಾಸ್ತಾ ನಿರೂಪಿಸಿ, ಅಮಂಡಾ ವಂದಿಸಿದರು.

ಉಜಿರೆ ಎಸ್.ಡಿ.ಎಂ. ಕಾಲೇಜು ವಾರ್ಷಿಕೋತ್ಸವ

Article Image

ಉಜಿರೆ ಎಸ್.ಡಿ.ಎಂ. ಕಾಲೇಜು ವಾರ್ಷಿಕೋತ್ಸವ

ಉಜಿರೆ, ಮಾರ್ಚ್ 21: ಹೊಸ ಕಾಲದ ಸಂಕೀರ್ಣ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ಶೈಕ್ಷಣಿಕ ವಲಯಗಳ ಸಂಯೋಜಿತ ಕಾರ್ಯತಂತ್ರಗಳನ್ನು ಅನ್ವಯಿಸಬೇಕಾದ ಅಗತ್ಯವಿದೆ ಎಂದು ಸುರತ್ಕಲ್‌ನ ಎನ್‌ಐಟಿಕೆಯ ನಿರ್ದೇಶಕರಾದ ಪ್ರೊ. ಬಿ.ರವಿ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. ವಿಜ್ಞಾನ ಮತ್ತುತಂತ್ರಜ್ಞಾನ ವಲಯಗಳಿಂದಲಷ್ಟೇ ವಿಶ್ವ, ದೇಶ ಮತ್ತು ಪ್ರದೇಶ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದು ತಪ್ಪುಕಲ್ಪನೆ. ಮಾನವಿಕ ಶೈಕ್ಷಣಿಕ ವಲಯಗಳವರನ್ನೂ ಒಳಗೊಂಡು ವರ್ತಮಾನದ ಸಂಕೀರ್ಣ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನಗಳಾಗಬೇಕು. ಈ ಬಗೆಯ ಒಳಗೊಳ್ಳುವಿಕೆಯ ಸಂಯೋಜಿತ ಹೊಣೆಗಾರಿಕೆಯ ನಿರ್ವಹಣೆಯಿಂದ ಅನಿಶ್ಚಿತತೆ ಮತ್ತು ಸಂಕೀರ್ಣ ಬಿಕ್ಕಟ್ಟುಗಳಿಂದ ಉಂಟಾಗುವ ಸವಾಲುಗಳನ್ನು ಸಮರ್ಥವಾಗಿಎದುರಿಸಬಹುದುಎಂದರು. ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳ ನಡುವೆ ಕೊಡುಕೊಳ್ಳುವಿಕೆ ನಡೆಯಬೇಕು. ಒಂದುಕ್ಷೇತ್ರ ಮತ್ತೊಂದು ಕ್ಷೇತ್ರಕ್ಕೆ ಪೂರಕವಾಗುವ ಜ್ಞಾನದ ಮಾದರಿಗಳನ್ನು ಹಂಚಿಕೊಳ್ಳಬೇಕು.ಈ ವಲಯಗಳ ಜ್ಞಾನಶಿಸ್ತುಗಳ ವಿಶೇಷ ಪರಿಣತಿಯನ್ನು ಆಧರಿಸಿದ ಚರ್ಚೆ, ಸಂವಾದಗಳ ಮೂಲಕ ಜ್ಞಾನವನ್ನು ಸದ್ಯದ ಅಗತ್ಯಗಳಿಗೆ ತಕ್ಕಂತೆ ಅನ್ವಯಿಸುವ ಮಾರ್ಗಗಳು ಹೊಳೆಯುತ್ತವೆ. ಈ ಮೂಲಕ ಭಾರತಕ್ಕೆ ಬೇಕಾದ ಅಭ್ಯುದಯದ ಹಾದಿ ಸುಗಮಗೊಳ್ಳುತ್ತದೆ ಎಂದು ನುಡಿದರು. ಬದ್ಧತೆ, ಸಾಮರ್ಥ್ಯ, ಸೃಜನಶೀಲತೆಯೊಂದಿಗೆ ಗುರುತಿಸಿಕೊಂಡಾಗ ವಿದ್ಯಾರ್ಥಿಗಳು ಕಲಿಕೆಯ ಹಂತದಿಂದಲೇ ವೃತ್ತಿಪರ ವಲಯ ನಿರೀಕ್ಷಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬಹುದು. ಕಲಿಕೆಯ ವಿಷಯಗಳನ್ನಷ್ಟೇ ಅಲ್ಲದೇ ಉಳಿದ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಅಂಶಗಳನ್ನು ತಿಳಿದುಕೊಳ್ಳುವ ಕುತೂಹಲದೊಂದಿಗೆಇದ್ದರೆ ವಿಶೇಷ ವೃತ್ತಿಪರ ಕೌಶಲ್ಯಗಳನ್ನು ಗಳಿಸಿಕೊಳ್ಳುವುದಕ್ಕೆ¸ ಸಾಧ್ಯವಾಗುತ್ತದೆ.ಕೃತಕ ಬುದ್ಧಿಮತ್ತೆಯಂತಹ ವಿಸ್ತೃತ ತಂತ್ರಜ್ಞಾನದ ಮೇಲೆ ಅವಲಂಬನೆಯಾಗದೇ ವ್ಯಕ್ತಿಗತವಾದ ಜ್ಞಾನಾಧಾರಿತ ಸಾಮರ್ಥ್ಯವನ್ನು ಹೆಚ್ಚು ನೆಚ್ಚಿಕೊಳ್ಳಬೇಕು.ಆಗ ಮಾತ್ರ ಹೊಸ ತಂತ್ರಜ್ಞಾನವನ್ನುಎಚ್ಚರದೊಂದಿಗೆ ಬಳಸಿಕೊಂಡು ನಿರೀಕ್ಷಿತಯಶಸ್ಸು ಗಳಿಸಬಹುದು ಎಂದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು. ಎಸ್. ಡಿ. ಎಂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ, ವಿಶ್ವಮಟ್ಟದಲ್ಲಿ ಹೆಗ್ಗುರುತು ಮೂಡಿಸಿದ್ದಾರೆ. ತಿಳಿದುಕೊಂಡ ಜ್ಞಾನದ ಅಂಶಗಳನ್ನು ಪುನರ್ ಮನನ ಮಾಡಿಕೊಂಡು ಕಲಿಕೆಯಲ್ಲಿ ಮುನ್ನಡೆ ಸಾಧಿಸಬೇಕು. ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ಸಾಮರ್ಥ್ಯ ರೂಪಿಸಿಕೊಂಡು ಸಾಧನೆಯ ಹೊಸ ಹೆಜ್ಜೆಗಳನ್ನು ಕ್ರಮಿಸಬೇಕು ಎಂದು ಹೇಳಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರಕುಮಾರ್, ಡಾ. ಸತೀಶ್ಚಂದ್ರ ಎಸ್., ಎಸ್.ಡಿ.ಎಂ. ಕಾಲೇಜಿನ ಅಕ್ಯಾಡೆಮಿಕ್ ಸಂಯೋಕರಾದ ಎಸ್.ಎನ್.ಕಾಕತ್ಕರ್, ನಿವೃತ್ತ ಪ್ರಾಶುಂಪಾಲ ಡಾ.ಬಿ.ಎ. ಕುಮಾರ ಹೆಗ್ಡೆ, ನಿವೃತ್ತ ಉಪ ಪ್ರಾಂಶುಪಾಲರಾದ ಡಾ. ಶಲೀಫ್ ಬಿ.ಪಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ರಾಮಚಂದ್ರ ಪುರೋಹಿತ, ಶಾಂತಿಪ್ರಕಾಶ್, ಬೋಧಕೇತರ ಸಿಬ್ಬಂದಿ ಸದಾನಂದ್ ಬಿ. ಮುಂಡಾಜೆ, ತುಕಾರಾಂ ಸಾಲಿಯಾನ, ಪದವಿ ಹಾಗೂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರವಣ, ಪ್ರಕೃತಿ, ಮೇಘನಾ, ಮಾರುತಿ ಭಗವಾನ್, ಅಮೀರ್, ಸುದೇಶ್‌ಗೌಡ, ಉಪಸ್ಥಿತರಿದ್ದರು. ನಿವೃತ್ತ ಬೋಧಕರು, ಬೋಧಕೇತರ ಸಿಬ್ಬಂದಿ, ರ‍್ಯಾಂಕ್ ವೀಜೇತರು, ಪಿ.ಹೆಚ್.ಡಿ ಪದವೀಧರ ಅಧ್ಯಾಪಕರು, ವಿಶೇಷ ಸಾಧಕ ಅಧ್ಯಾಪಕರು, ವಿಶೇಷ ಸಾಧಕ ವಿದ್ಯಾರ್ಥಿಗಳು, ಕ್ರೀಡಾ ವಿಭಾಗದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ "ಚಿಗುರು" ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಸ್ವಾಗತಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ನಂದಾಕುಮಾರಿ ವರದಿ ವಾಚನ ಮಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಕುಲಸಚಿವರಾದ ಶ್ರೀಧರ ಎನ್. ಭಟ್ಟ ವಂದಿಸಿದರು. ಡಾ. ನೆಫಿಸತ್ ನಿರೂಪಿಸಿದರು.

ಮೂಡುಬಿದಿರೆ: ಎಂತುಝಿಯಾ ಕೋರ್ಪೊ ಕನೆಕ್ಟ್ ಫೆಸ್ಟ್

Article Image

ಮೂಡುಬಿದಿರೆ: ಎಂತುಝಿಯಾ ಕೋರ್ಪೊ ಕನೆಕ್ಟ್ ಫೆಸ್ಟ್

‘ಶಿಕ್ಷಣ ವ್ಯವಸ್ಥೆಯ ಆರಂಭದಲ್ಲೆ, ಒಬ್ಬ ವ್ಯಕ್ತಿಯಾಗಿ ತನ್ನ ಜೀವನದ ಉದ್ದೇಶವೇನೆಂಬುದನ್ನು ಅರಿಯಬೇಕು’ ಎಂದು ಕೋಟೇಶ್ವರದ ರಾಜಾರಾಮ್ ಪೋಲಿಮರ್ಸ್ ಸಂಸ್ಥೆಯ ಸ್ಥಾಪಕ ಸುರೇಶ್ ಕಾಮತ್ ಹೇಳಿದರು. ಆಳ್ವಾಸ್(ಸ್ವಾಯತ್ತ) ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗದ ವತಿಯಿಂದ ಹಮ್ಮಿಕೊಂಡ ಎಂತುಝಿಯಾ ಕೋರ್ಪೊ ಕನೆಕ್ಟ್ ಫೆಸ್ಟ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಗುರಿಯನ್ನು ಆರಂಭದಲ್ಲೆ ಅರಿಯುವುದು ಉತ್ತಮ. ಪ್ರತಿ ಕೆಲಸದಿಂದ ಬರುವ ಅನುಭವದಿಂದ ಬದುಕನ್ನು ಶ್ರೇಷ್ಠತೆಯೆಡೆಗೆ ಒಯ್ಯುವ ಕೆಲಸವಾಗಬೇಕಿದೆ ಎಂದರು. ಮುಖ್ಯಅತಿಥಿ ನೆಲೆಯಲ್ಲಿ ಮಾತನಾಡಿದ ಯುವ ಪ್ರತಿನಿಧಿ ಮಿಥುನ್ ರೈ, ವೃತ್ತಿಪರ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಮ್ಯಾನಜ್ಮೆಂಟ್ ಪದವಿ ಸೂಕ್ತ ಆಯ್ಕೆ ಎಲ್ಲವನ್ನು ಪರಿಶ್ರಮದಿಂದ ಕಲಿಯಬೇಕು. ಸವಾಲುಗಳನ್ನು ಎದುರಿಸಿ ಮುನ್ನಡೆಯುವವ ನಿಜವಾದ ನಾಯಕನೆನಿಸಿಕೊಳ್ಳಬಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ ಅದನ್ನು ತಾವೇ ಗುರುತಿಸಿಕೊಳ್ಳಬೇಕು ಹಾಗೂ ಉಪನ್ಯಾಸಕರು ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು. ದಶಕಗಳ ಹಿಂದೆ ತಾನು ಪದವಿ ವಿದ್ಯಾರ್ಥಿಯಾಗಿದ್ದಾಗ ಆಯೋಜಿಸಿದ ಅಂತರಾಷ್ಟ್ರೀಯ ಸಮ್ಮೇಳನ ಯಶಸ್ಸನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಏಷ್ಯಾ ಖಂಡದ ಹಲವು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡು, ಸರ್ವರಿಂದಲೂ ಪ್ರಶಂಸೆಗೆ ಪಾತ್ರವಾದ ಸನ್ನಿವೇಶ ತನ್ನ ಮುಂದಿನ ಬದುಕಿಗೆ ನಾಯಕತ್ವ ವಹಿಸಲು ಸಹಕರಿಯಾದದ್ದನ್ನು ಸ್ಮರಿಸಿದರು. ತನ್ನ ಸಹಪಾಠಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವರ ಕಾಲೇಜು ದಿನಗಳಲ್ಲಿನ ನಾಯಕತ್ವ ಗುಣವನ್ನು ಕೊಂಡಾಡಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಳುವಂತೆ ಮಾಡಲು ಆಳ್ವಾಸ್ ನೀಡುತ್ತಿರುವ ಪ್ರೋತ್ಸಾಹವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇನ್ನೊರ್ವ ಮುಖ್ಯ ಅತಿಥಿ ಹಾಗೂ ಯುವ ಪ್ರತಿನಿಧಿ ನಂದನ್ ಮಲ್ಯ ಮಾತನಾಡಿ, ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳುವ ಸ್ವಾತಂತ್ರ‍್ಯ ಪ್ರತಿಯೊಬ್ಬರಿಗೂ ಇದೆ. ಕನಸುಗಳನ್ನು ಕಟ್ಟಿಕೊಂಡಲ್ಲಿ ಮಾತ್ರ ಯಶಸ್ಸನ್ನು ಕಾಣುತ್ತೇವೆ. ಸೋಲು ಯಶಸ್ಸಿನ ಭಾಗ, ಹೊರತು ಪ್ರತಿಸ್ಪರ್ಧಿಯಲ್ಲ. ಅವಕಾಶಗಳ ಬಳಸುವಿಕೆಯಲ್ಲಿ ಫಲಿತಾಂಶವನ್ನು ಕಾಣಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಅನುಭವಗಳಿಂದ ಶ್ರೇಷ್ಠ ಪಾಠವನ್ನು ಕಲಿಯಬೇಕು. ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವಲ್ಲ. ಅದರಿಂದ ಲಭಿಸುವ ಅನುಭವ ಮುಖ್ಯ ಎಂದರು. ಎಂತುಝಿಯಾ ಕೋರ್ಪೊ ಕನೆಕ್ಟ್ ಫಸ್ಟ್ನ ಪೋಸ್ಟರ್ ಬಿಡುಗಡೆ ನಡೆಯಿತು. ಕಾರ್ಯಕ್ರಮದಲ್ಲಿ ಪದವಿ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಸಂಯೋಜಕಿ ಅಕ್ಷತಾ ಪ್ರಭು, ಸಂಯೋಜಕ ಸುಹಾಸ್ ಶೆಟ್ಟಿ, ವಿದ್ಯಾರ್ಥಿ ಸಂಯೋಜಕ ಪ್ರಾಣೇಶ್ ಶೆಟ್ಟಿ ಮತ್ತು ವಿಧಿತ್ ಜೈನ್ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಾಥ್ವಿಕ್ ಸ್ವಾಗತಿಸಿ, ಸಾಗರ್ ವಂದಿಸಿ, ವಿದ್ಯಾರ್ಥಿನಿ ವೃಂದ ನಿರೂಪಿಸಿದರು.

ಮಂಗಳೂರು ವಿವಿ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ-ಖೋ ಟೂರ್ನಮೆಂಟ್ -2025

Article Image

ಮಂಗಳೂರು ವಿವಿ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ-ಖೋ ಟೂರ್ನಮೆಂಟ್ -2025

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ- ಖೋ ಟೂರ್ನಮೆಂಟ್-2025ರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ ಜಾಕೆ ಪರಮೇಶ್ವರ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಪಿಯನ್ನು ಸತತ 17 ನೇ ಬಾರಿ ಹಾಗೂ ಮಹಿಳೆಯರ ತಂಡ ಹೆಚ್‌ವಿ ಕಮಲೇಶ್ ರೋಲಿಂಗ್ ಟ್ರೋಪಿಯನ್ನು ಸತತ 14ನೇ ಬಾರಿ ಪಡೆದು ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಪುರುಷರ ವಿಭಾಗದಲ್ಲಿ ಆಳ್ವಾಸ್ ಪುರುಷರ ಖೋ-ಖೋ ತಂಡ 27-5 ಅಂಕಗಳ ಅಂತರದಿಂದ ಪುತ್ತೂರಿನ ವಿವೇಕಾನಂದ ಕಾಲೇಜು ವಿರುದ್ಧ ಗೆಲುವು ಸಾಧಿಸಿದರೆ, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ತಂಡ ಏಕಪಕ್ಷೀಯವಾಗಿ 18-0 ಅಂಕಗಳ ಅಂತರದಲ್ಲಿ ಬೆಳ್ತಂಗಡಿಯ ಜಿಎಫ್‌ಜಿಸಿ ಕಾಲೇಜು ವಿರುದ್ಧ ಗೆಲುವು ಸಾಧಿಸಿ ಎರಡು ವಿಭಾಗದಲ್ಲಿ ''ಸಮಗ್ರ ಪ್ರಶಸ್ತಿ'' ಗೆ ಭಾಜನವಾಯಿತು. ವೈಯಕ್ತಿಕ ಪುರುಷರ ಚಾಂಪಿಯನ್‌ಶಿಪ್‌ನಲ್ಲಿ "ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ"ಗೆ ಆಳ್ವಾಸ್ ಕಾಲೇಜಿನ ನಿಖಿಲ್ ಮತ್ತು"ಬೆಸ್ಟ್ ಡಿಫೆಂಡರ್ ಪ್ರಶಸ್ತಿ"ಗೆ ಪ್ರಮೋದ್ ಡಿ ಹಾಗೂ ವೈಯಕ್ತಿಕ ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲಿ "ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ"ಗೆ ಆಳ್ವಾಸ್ ಕಾಲೇಜಿನ ಪ್ರೇಕ್ಷಾ ಮತ್ತು ''ಬೆಸ್ಟ್ ಚೇಸರ್ '' ಪ್ರಶಸ್ತಿಗೆ ಕವನ ಭಾಜನರಾದರು. ಪುರುಷರ ವಿಭಾಗದ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿಗೆ 4ನೇ ಸ್ಥಾನ, ಹಂಪನಕಟ್ಟೆ ವಿ. ವಿ ಕಾಲೇಜಿಗೆ ತೃತೀಯ ಸ್ಥಾನ, ಪುತ್ತೂರಿನ ವಿವೇಕಾನಂದ ಕಾಲೇಜಿಗೆ ರನ್ನರ್ಸ್ ಅಪ್ ಪ್ರಶಸ್ತಿ ಮತ್ತು ಆಳ್ವಾಸ್ ಕಾಲೇಜಿಗೆ ಸತತ 17ನೇ ಬಾರಿ''ಸಮಗ್ರ ಪ್ರಶಸ್ತಿ''ಲಭಿಸಿತು. ಮಹಿಳೆಯರ ವಿಭಾಗದ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ತೃತೀಯ ಸ್ಥಾನ, ಬೆಳ್ತಂಗಡಿಯ ಜಿಎಫ್‌ಜಿಸಿ ಕಾಲೇಜಿಗೆ ರನ್ನರ್ಸ್ ಅಪ್ ಪ್ರಶಸ್ತಿ ಮತ್ತು ಆಳ್ವಾಸ್ ಕಾಲೇಜಿಗೆ ಸತತ 14ನೇ ಬಾರಿ ''ಸಮಗ್ರ ಪ್ರಶಸ್ತಿ'' ಲಭಿಸಿತು. ಸಮಾರೋಪ ಸಮಾರಂಭ: ದೇಸಿ ಕ್ರೀಡೆಯಾದ ಖೋ- ಖೋ ಆಟವು ಕ್ರೀಡಾಳುಗಳಲ್ಲಿ ಉತ್ತಮ ಕ್ರೀಡಾ ಮನೋಭಾವವನ್ನು ಹುಟ್ಟು ಹಾಕುವ ಶಕ್ತಿ ಹೊಂದಿದೆ ಎಂದು ಆಳ್ವಾಸ್ ಪ. ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ ಎಂ ಸದಾಕತ್ ನುಡಿದರು. ಕ್ರೀಡೆಯಲ್ಲಿ ಮಾನವೀಯತೆ ಸಾರುವ ಮನೋಭಾವ ಬೆಳೆಸಿಕೊಳ್ಳಿ ಎಂದು ತಿಳಿಸಿದರು. ಖೋ-ಖೋ ಆಟದಲ್ಲಿ ಸ್ಪರ್ಧಾರ್ಥಿಗಳು ಕ್ರೀಡಾ ಸ್ಪೂರ್ತಿ, ಚುರುಕುತನ ಮತ್ತು ಬದ್ಧತೆಯನ್ನು ಅಳವಡಿಸಿಕೊಂಡು ಗೆಲ್ಲುವುದರ ಕಡೆಗೆ ಶ್ರಮವಿರಲಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ಡಾ. ಪ್ರಸನ್ನ ಕುಮಾರ್ ಬಿ ಕೆ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ ಮಧು ಜಿ ಆರ್, ಆಳ್ವಾಸ್ ಹಣಕಾಸು ಅಧಿಕಾರಿ ಶಾಂತಾರಾಮ್ ಕಾಮತ್, ಆಳ್ವಾಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಿಲಕ್ ಶೆಟ್ಟಿ, ವಿವಿಧ ಕಾಲೇಜಿನ ಕ್ರೀಡಾ ನಿರ್ದೇಶಕರು, ಕ್ರೀಡಾಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ನಿಯಾ ಸೆಬಾಸ್ಟಿಯನ್ ನಿರೂಪಿಸಿದರು.

ವಿದ್ಯಾಗಿರಿ: ವಿಶ್ವ ಕಾವ್ಯ ದಿನ

Article Image

ವಿದ್ಯಾಗಿರಿ: ವಿಶ್ವ ಕಾವ್ಯ ದಿನ

ಆಳ್ವಾಸ್ ಸ್ವಾಯತ್ತ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರದಂದು ಇಂಗ್ಲಿಷ್ ವಿಭಾಗದ ಗ್ಲಿಸನ್ ಸಂಘದ ವತಿಯಿಂದ ವಿಶ್ವ ಕಾವ್ಯ ದಿನವನ್ನು ಆಚರಿಸಲಾಯಿತು. ಕಾರ‍್ಯಕ್ರಮದ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಉಡುಪಿಯ ಶ್ರೀ ಅದಮಾರು ಮಠದ ಶಿಕ್ಷಣ ಸಮೂಹಗಳ ಉಪ ಆಡಳಿತಾಧಿಕಾರಿ ಪುಂಡರಿಕಾಕ್ಷ ಕೊಡಂಚ, ಕಾವ್ಯವು ನಮ್ಮ ಸಂಸ್ಕೃತಿಯ ಮಹತ್ವಪೂರ್ಣ ಅಂಗ. ಆ ಮೂಲಕ ನಮ್ಮ ಭಾವನೆ ಹಾಗೂ ಅನುಭವಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗಿದೆ. ಕಾವ್ಯ ದಿನವನ್ನು ಆಚರಿಸುವುದರ ಮೂಲಕ ಮಹಾನ್ ಕವಿಗಳ ಕೊಡುಗೆಗಳನ್ನು ಗೌರವಿಸುವುದರ ಜೊತೆಗೆ ಹೊಸ ಬರಹಗಾರರಿಗೆ ಪ್ರೇರಣೆಯಾಗಲು ಸಹಾಯ ಮಾಡುತ್ತದೆ ಎಂದರು. ತಾರ್ಕಿಕವಾಗಿ ಯೋಚಿಸಿ ಮತ್ತು ಸಾಮಾನ್ಯ ಜ್ಞಾನವನ್ನು ಬಳಸಿದರೆ ಯಾರೂ ಬದುಕಿನಲ್ಲಿ ಪ್ರಮಾದವನ್ನೆಸಗಲಾರರು. ತಾರ್ಕಿಕ ಯೋಚನೆಯುಳ್ಳ ವ್ಯಕ್ತಿಗೆ ಅವಕಾಶಗಳು ವಿಫುಲವಾಗಿರುತ್ತವೆ ಎಂದು ಸಲಹೆ ನೀಡಿದರು. ಸುಂದರವಾದ ಭೂಮಿಯನ್ನು ಉಳಿಸಬೇಕು. ಅದು ನಮ್ಮ ಆಸೆಗಳನ್ನು ಪೂರೈಸ ಬಲ್ಲದೇ ಹೊರತು, ನಮ್ಮ ದುರಾಸೆಯನ್ನಲ್ಲ ಎಂದರು. ನಂತರ ಗ್ಲಿಸನ್ ಸಂಘದ ವತಿಯಿಂದ ಆಯೋಜಿಸಲಾದ ಕಾವ್ಯ ವಾಚನ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಬಿಎಸ್ಸಿಯ ಮೇಘಾ ಡಿವಿ ಪ್ರಥಮ ಸ್ಥಾನ ಪಡೆದರೆ, ಎಫ್‌ಎನ್ಡಿಯ ಪ್ರೇರಣಾ ಜೈನ್ ದ್ವಿತೀಯ, ಬಿಎಯ ಸಮೀಕ್ಷಾ ರಾವ್ ತೃತೀಯ ಸ್ಥಾನ ಪಡೆದರು. ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ‍್ಯ ಡಾ. ಕುರಿಯನ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ.ಎಸ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಮಚೇಂದ್ರ ಬೆಲ್ಕಿ, ಗ್ಲಿಸನ್ವೇ ದಿಕೆಯ ಸಂಯೋಜಕರಾದ ಹರ್ಷಿಣಿ ಪಿಂಟೋ ಹಾಗೂ ಸುಮಂತ್ ಇದ್ದರು. ಶ್ರಾವ್ಯ ಶೆಟ್ಟಿ ಸ್ವಾಗತಿಸಿ, ದಿಶಾ ಕೋಟ್ಯಾನ್ ವಂದಿಸಿ, ಸಮೀಕ್ಷಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.

ಧರ್ಮಸ್ಥಳಕ್ಕೆ ನಂದಿ ರಥಯಾತ್ರೆ

Article Image

ಧರ್ಮಸ್ಥಳಕ್ಕೆ ನಂದಿ ರಥಯಾತ್ರೆ

ಉಜಿರೆ: ನಂದಿ ರಥ ಮಂಗಳವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನಂದಿ ರಥಕ್ಕೆ ಗೌರವಾರ್ಪಣೆ ಮಾಡಿ ಶುಭ ಹಾರೈಸಿದರು. ಚಲನಚಿತ್ರ ನಟ ಹಾಗೂ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋ ವಿಜೇತರಾದ ಪ್ರಥಮ್, ದೇವಳದ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ದೇವಳದ ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು. ಕನ್ಯಾಡಿ ಮೂಲಕ ಉಜಿರೆಗೆ ರಥಯಾತ್ರೆ ಮುಂದುವರಿಯಿತು.

ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಅಂತರ್ ಕಾಲೇಜು ಖೋ-ಖೋ ಟೂರ್ನಮೆಂಟ್

Article Image

ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಅಂತರ್ ಕಾಲೇಜು ಖೋ-ಖೋ ಟೂರ್ನಮೆಂಟ್

ವಿದ್ಯಾಗಿರಿ: ದೇಸಿ ಕ್ರೀಡೆ ಖೋ-ಖೋ ಎಲ್ಲಾ ಕ್ರೀಡೆಗಳಿಗೆ ಅಡಿಪಾಯವಿದ್ದಂತೆ. ಈ ಆಟವನ್ನು ಪ್ರೋತ್ಸಾಹಿಸುವ ಮೂಲಕ, ಯುವ ಜನತೆಯಲ್ಲಿ ಶಾರೀರಿಕ ಹಾಗೂ ಮಾನಸಿಕ ಸಿದ್ಧತೆಯನ್ನು ಹೆಚ್ಚಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಡಿʼಸೋಜಾ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ- ಖೋ ಟೂರ್ನಮೆಂಟ್ -2025 ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ಮನೋಭಾವ ನಮ್ಮನ್ನು ಈ ಕ್ಷೇತ್ರದಲ್ಲಿ ಹೆಚ್ಚಿನದ್ದನ್ನು ಸಾಧಿಸಲು ಸಹಕಾರಿಯಾಗುತ್ತದೆ. ಅಂತರ್ ಕಾಲೇಜು ಪಂದ್ಯಾಟವು ಎಲ್ಲಾ ಕ್ರೀಡಾಳುಗಳನ್ನು ಒಟ್ಟು ಗೂಡಿಸುವ ಉದ್ದೇಶ ಹೊಂದಿರುತ್ತದೆ. ಪ್ರತಿಯೊಬ್ಬರೂ ಅವರವರ ಕ್ರೀಡಾ ಶಕ್ತಿಯ ಅನುಸಾರ ಪ್ರದರ್ಶನ ನೀಡಬೇಕು ಎಂದರು. ಆಳ್ವಾಸ್ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹಿಂದೆಲ್ಲ ದೇಸಿ ಕ್ರೀಡೆಯಾದ ಖೋ-ಖೋ ಆಟವು ಗ್ರಾಮೀಣ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಮೀಸಲಾಗಿತ್ತು. ಆದರೆ, ಇಂದು ಕ್ರೀಡೆಯಲ್ಲಿನ ಬೆಳವಣಿಗೆಯು ದೇಸಿ ಕ್ರೀಡೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸುವತ್ತ ಕೊಂಡೊಯ್ಯುತ್ತಿರುವುದು ಬಹಳ ಹೆಮ್ಮೆ ಮತ್ತು ಸಂತಸದ ಸಂಗತಿ ಎಂದರು. ಕ್ರೀಡಾ ಕ್ಷೇತ್ರಕ್ಕೆ ಮಂಗಳೂರು ವಿಶ್ವವಿದ್ಯಾಲಯ ನೀಡುತ್ತಿರುವ ಪ್ರೋತ್ಸಾಹ, ಸಹಕಾರ ಸದಾ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೀಡಾಪಟುಗಳಿಗೆ, ಕ್ರೀಡಾ ಪೋಷಕರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರಕುವಂತಾಗಲಿ ಎಂದು ಆಶಿಸಿದರು. ಖೋ-ಖೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಸಂಸ್ಥೆಯ ಪ್ರತಿಭಾನ್ವಿತ ಕ್ರೀಡಾಪಟುಗಳಾದ ಮರಿಯಪ್ಪ, ದಿವ್ಯ ಕೆ ಆರ್ ಮತ್ತು ನಿಖಿಲ್ ಬಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ, ಪ್ರಸನ್ನ ಕುಮಾರ್ ಬಿ ಕೆ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ ಮಧು ಜಿ ಆರ್ ಇದ್ದರು. ಅಂತರ್ ಕಾಲೇಜು ಖೋ-ಖೋ ಟೂರ್ನಮೆಂಟ್‌ನಲ್ಲಿ ಪುರುಷರ ವಿಭಾಗದಿಂದ 18 ತಂಡ ಮತ್ತು ಮಹಿಳೆಯರ ವಿಭಾಗದಿಂದ 18 ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ನಿಯಾ ಸೆಬಾಸ್ಟಿಯನ್ ನಿರೂಪಿಸಿ, ದೈಹಿಕ ಶಿಕ್ಷಣ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ ಉದಯಕುಮಾರ್ ವಂದಿಸಿದರು.

ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ಅಂತರ್ ಕಾಲೇಜು ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಉತ್ಸವ ವೆಂಚುರ- 2025

Article Image

ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ಅಂತರ್ ಕಾಲೇಜು ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಉತ್ಸವ ವೆಂಚುರ- 2025

ಉಜಿರೆ, ಮಾ. 15: ಪ್ರತಿಯೊಂದು ವಿಚಾರವನ್ನು ನೇರವಾಗಿ ಒಪ್ಪದೇ ಅದನ್ನು ಪ್ರಶ್ನಿಸುವ ಅಭ್ಯಾಸ ಬೆಳೆಸಿಕೊಂಡಾಗ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಎಂದು ಬೆಂಗಳೂರಿನ ಅಮೆಜಾನ್ ಡೆವಲಪ್ ಮೆಂಟ್ ಸೆಂಟರ್ನ ರಿಸ್ಕ್ ಇನ್ವೆಸ್ಟಿಗೇಷನ್ ಮ್ಯಾನೇಜರ್ ದೀಪಕ್ ರಾಜ್ ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ವಾಣಿಜ್ಯ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗಗಳ ಆಶ್ರಯದಲ್ಲಿ ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ (ಸಿ.ಸಿ.ಎ.) ಇಂದು (ಮಾ. 15) ಆಯೋಜಿಸಿದ್ದ ರಾಜ್ಯ ಮಟ್ಟದ ಅಂತರ್ ಕಾಲೇಜು ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಉತ್ಸವ 'ವೆಂಚುರ- 2025' ಉದ್ಘಾಟಿಸಿ ಅವರು ಮಾತನಾಡಿದರು. "ಪ್ರತಿಯೊಂದು ವಿಚಾರದಲ್ಲೂ ಏನು ಮತ್ತು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ನಮ್ಮಲ್ಲಿರಬೇಕು. ಆ ಸ್ಪಷ್ಟತೆ ಇದ್ದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಪ್ರಪಂಚವು ಅನ್ವೇಷಕರನ್ನು (Inventors) ಸದಾ ನೆನಪಿನಲ್ಲಿ ನೆನಪಿಟ್ಟುಕೊಳ್ಳುತ್ತದೆ. ಹಾಗಾಗಿ ಕುತೂಹಲ ಇರುವ ಮನಸ್ಸುಗಳು ಮಾತ್ರ ಇನ್ವೆಂಟರ್ ಆಗಲು ಸಾಧ್ಯ. ಪ್ರತೀ ದಿನ 5 ನಿಮಿಷ ನಮ್ಮನ್ನು ಅವಲೋಕನ ಮಾಡಲು ಸಮಯ ನೀಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ನಮ್ಮನ್ನು ನಾವು ಅರಿತುಕೊಳ್ಳಬೇಕು" ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ)ದ ಸಂಯೋಜಕ ಗಜಾನನ ಆರ್. ಭಟ್ ಮಾತನಾಡಿ, "ವಾಣಿಜ್ಯ ಮತ್ತು ಉದ್ಯಮ ಎನ್ನುವುದು ಎಲ್ಲಾ ಅಪಾಯಗಳ ವಿರುದ್ಧ ಹೋರಾಡುವುದನ್ನು ಕಲಿಸುವ ಪ್ರಪಂಚವಾಗಿದೆ. ಉದ್ಯಮಿಗಳು ಈ ದೇಶವನ್ನು ನಿರ್ಮಾಣ ಮಾಡುವವರು. ಹಣ ಎನ್ನುವುದು ನಮಗೆ ಹೂಡಿಕೆ, ಗಳಿಸುವಿಕೆಯನ್ನು ಕಲಿಸುತ್ತದೆ" ಎಂದರು. ಇದೇ ಸಂದರ್ಭದಲ್ಲಿ, ಕಾಲೇಜಿನ ವಾಣಿಜ್ಯ ನಿಕಾಯದ ಡೀನ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗ ಮುಖ್ಯಸ್ಥೆ ಶಕುಂತಲಾ ಅವರಿಗೆ ನಿವೃತ್ತ ಪ್ರಾಂಶುಪಾಲ ಡಾ. ಉದಯಚಂದ್ರ ಪಿ.ಎನ್. ಅವರು ಸಂಶೋಧನೆಗೆ ನೆರವಾಗಲು ಪ್ರೋತ್ಸಾಹಧನ ನೀಡಿದರು. ಫೆಸ್ಟ್ ಅಂಗವಾಗಿ ಆಯೋಜಿಸಿದ್ದ ಅಂತರ್ ತರಗತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಿ.ಎಸ್.ಇ.ಇ.ಟಿ. ಮತ್ತು ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ., ಕಾರ್ಯಕ್ರಮ ಸಂಯೋಜಕರಾದ ವಿನುತಾ ಡಿ.ಎಂ. ಮತ್ತು ಗುರುರಾಜ್ ಜಿ., ಸಿ.ಸಿ.ಎ. ಸಿಇಒ ದೀಕ್ಷಿತಾ, ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ವಿವಿಧ ಕಾಲೇಜುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಶಕುಂತಲಾ ಸ್ವಾಗತಿಸಿದರು. ಕ್ಷಿತಿ ಮತ್ತು ತಂಡ ಪ್ರಾರ್ಥಿಸಿದರು. ಸಿ.ಸಿ.ಎ. ಕಾರ್ಯದರ್ಶಿ ಸಹನಾ ಡೋಂಗ್ರೆ ವಂದಿಸಿದರು. ಸುಶ್ಮಿತಾ ಬಿ., ಜಯಸೂರ್ಯ ನಾಯಕ್, ಕ್ಷಿತಿ ಕೆ. ರೈ, ಐಶ್ರೀ ಕೆ., ಶರ್ಮಿಳಾ ಎಂ.ಆರ್., ಭೂಮಿಕಾ ಕೆ.ಎಲ್. ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಮಂಗಳೂರು ವಿವಿ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಸ್ಪರ್ಧಾಕೂಟ

Article Image

ಮಂಗಳೂರು ವಿವಿ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಸ್ಪರ್ಧಾಕೂಟ

ಮೂಡುಬಿದಿರೆ: ಕುಂದಾಪುರದ ಭಂಡಾರಕರ‍್ಸ್ ಕಾಲೇಜಿನ ಆಶ್ರಯದಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಸ್ಪರ್ಧಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಮಹಿಳಾ ಮತ್ತು ಪುರುಷರ ಎರಡು ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು. ಮಹಿಳಾ ತಂಡವು ಒಟ್ಟು 6 ಚಿನ್ನ, 2 ಬೆಳ್ಳಿ ಪದಕ ಪಡೆದು ಒಟ್ಟು 58 ಅಂಕ ಪಡೆದು ಈ ಸಾಧನೆ ಮೆರೆದಿದೆ. ಪುರುಷರ ವಿಭಾಗವು 4 ಚಿನ್ನ, 4 ಬೆಳ್ಳಿ, 1 ಕಂಚಿನ ಪದಕ ಗಳಿಸಿ ಒಟ್ಟು 55 ಅಂಕಗಳೊಂದಿಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು. 55ಕೆಜಿ ದೇಹ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಳ್ವಾಸ್ ಕಾಲೇಜಿನ ಪ್ರಶಾಂತ್ ‘’ಬೆಸ್ಟ್ ಲಿಫ್ಟರ್’ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು. ಪುರುಷರ ವಿಭಾಗದಲ್ಲಿ ಪ್ರಶಾಂತ್, ಸಂತೋಷ್, ಪ್ರತ್ಯೂಶ್, ಜೋಸುವ ರಾಜ್‌ಕುಮಾರ್ ಚಿನ್ನದ ಪದಕ ಪಡೆದರೆ, ನಾಗರಾಜ್, ನಾಗೇಂದ್ರ ಅಣ್ಣಪ್ಪ, ದರ್ಶನ್, ಶಶಾಂಕ್ ಬೆಳ್ಳಿ ಪದಕ ಪಡೆದರು. ಮಹಿಳಾ ವಿಭಾಗದಲ್ಲಿ ಶ್ರಾವ್ಯ, ಸೀಮಾ, ಅನುಷಾ, ತನುಷಾ, ವಿತಶ್ರೀ, ದಿವ್ಯಾ ಚಿನ್ನದ ಗಳಿಸಿದರೆ, ಮಲ್ಲಮ್ಮ, ನಾಗಶ್ರೀ ಬೆಳ್ಳಿ ಪದಕ ಮಡೆದುಕೊಂಡರು. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

ಆಳ್ವಾಸ್ ನಲ್ಲಿ 2 ದಿನದ ಟೆಕ್ ಉತ್ಸವ್ - 2025

Article Image

ಆಳ್ವಾಸ್ ನಲ್ಲಿ 2 ದಿನದ ಟೆಕ್ ಉತ್ಸವ್ - 2025

ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ನಡೆಯಲಿರುವ 2 ದಿನಗಳ ಟೆಕ್ ಉತ್ಸವ್ - 2025, ಅಂತರಕಾಲೇಜು ತಂತ್ರಜ್ಞಾನ ಸಂಬAಧಿ ಸ್ಪರ್ಧೆಗಳಿಗೆ ವಿದ್ಯಾಗಿರಿಯ ಡಾ ವಿ ಎಸ್ ಅಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು . ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಜ್ಯುಗೊ ಸ್ಟುಡಿಯೋ ಪ್ರೈ. ಲಿ. ನ ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ ಮಾತನಾಡಿ, ತಂತ್ರಜ್ಞಾನ ಮುಂದುವರಿದAತೆ ಅವುಗಳ ಬಳಕೆಗೆ ಅಗತ್ಯವಿರುವ ಪರಿಣತಿಯನ್ನು ಪಡೆದುಕೊಳ್ಳುವುದು ಬಹಳ ಅವಶ್ಯ. ಬದಲಾಗುತ್ತಿರುವ ತಂತ್ರಜ್ಞಾನದ ಅವಶ್ಯಕತೆ ಹಾಗೂ ಅವುಗಳ ಬಳಕೆ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಕಳೆದ 15 ವರ್ಷಗಳ ತಾಂತ್ರಿಕ ಬದಲಾವಣೆ ಗಣನೀಯವಾಗಿದ್ದು, ಮುಂದಿನ 2 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯು ಇನ್ನಷ್ಟು ಪ್ರಗತಿ ಹೊಂದಲಿದೆ. ಟೆಕ್ಕಿಗಳು, ಇಂಜಿನಿಯರ್ ಗಳು ತಂತ್ರಜ್ಞಾನವನ್ನು ಬಳಸುವ ವಿಧಾನದ ಮೇಲೆ ಒಟ್ಟು ಸಮಾಜದ ರೀತಿ ಅವಲಂಬಿತವಾಗಿರುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ತಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಫೆಸ್ಟ್ಗಳಿಗೆ ಯಾವ ರೀತಿಯ ಹೆಚ್ಚು ಮಹತ್ವ ನೀಡುತ್ತಾರೋ ಅದೇ ರೀತಿ ತಮ್ಮ ಜೀವನದ ಕೌಶಲ್ಯಗಳ ವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು. ಸರ್ಟಿಫಿಕೇಟ್ ಪಡೆಯುವುದಕ್ಕಾಗಿ ಕಲಿಕೆಯನ್ನ ಸೀಮಿತಗೊಳಿಸದೆ ಕಲಿತ ಪಾಠವನ್ನು ಅಳವಡಿಸಿಕೊಳ್ಳುವ ಪ್ರಯತ್ನವಿರಬೇಕು ಆಗ ಮಾತ್ರ ಬದುಕಿನಲ್ಲಿ ಒಂದು ಉನ್ನತಿಯೆಡೆಗಿನ ಪಯಣ ಸಾಧ್ಯ. ಐಟಿ ಯುಗದಲ್ಲಿರುವ ನಾವುಗಳು ನೂತನ ತಂತ್ರಜ್ಞಾನಗಳ ಮಾಹಿತಿಯನ್ನು ತಿಳಿಯುವುದು ಹಾಗೂ ಅವುಗಳನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದರು. ಉದ್ಘಾಟನೆಯ ಬಳಿಕ ಐಟಿ ಕ್ವಿಜ್ , ಕಲ್ಚರಲ್ ಡಾನ್ಸ್, ಐಟಿ ಮ್ಯಾನೇಜರ್, ವೆಬ್ ಡಿಸೈನಿಂಗ್, ಕೊಡಿಂಗ್, ವೀಡಿಯೊಗ್ರಾಫಿ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಎರಡು ದಿನಗಳ ಟೆಕ್ ಉತ್ಸವ್‌ದಲ್ಲಿ ವಿವಿಧ ಭಾಗಗಳಿಂದ 400 ಅಧಿಕ ವಿದ್ಯಾರ್ಥಿಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್, ವಿಭಾಗದ ಮುಖ್ಯಸ್ಥೆ ವನಿತಾ ಪ್ರಭು, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿದ್ಯಾರ್ಥಿ ಸಂಯೋಜಕಿ ಸಮೀಕ್ಷಾ ಎಸ್ ಹಾಗೂ ಶಿಶಿರ್ ಎಸ್ ಉಪಸ್ಥಿತರಿದ್ದರು. ಶ್ರೀಶ್ ಕೋಟೆಗಾರ ಕಾರ್ಯಕ್ರಮ ನಿರೂಪಿಸಿದರು.

First Previous

Showing 1 of 10 pages

Next Last