ಡಾ. ಕೆ. ಸತ್ಯಮೂರ್ತಿ ಅವರಿಗೆ ಡಾ. ರಾಜಾ ರಾಮಣ್ಣ ಪ್ರಶಸ್ತಿ
ಧಾರವಾಡ : ಎಸ್.ಡಿ.ಎಂ. ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ ಅವರಿಗೆ ಕರ್ನಾಟಕ ಸರಕಾರದಿಂದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ವಿಭಾಗದ 2022ನೇ ಸಾಲಿನ ಪ್ರತಿಷ್ಠಿತ ರಾಜಾ ರಾಮಣ್ಣ ಪ್ರಶಸ್ತಿ ಲಭಿಸಿರುತ್ತದೆ. ಸೆಪ್ಟಂಬರ್ 26ರಂದು ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಖ್ಯಾತ ವಿಜ್ಞಾನಿ, ಭಾರತ ರತ್ನ ಪ್ರೋ. ಸಿ.ಎನ್.ಆರ್. ರಾವ್, ಶ್ರೀ. ಎನ್. ಎಸ್. ಬೋಸರಾಜು, ಮಂತ್ರಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷರಾದ ಪ್ರೊ. ಎ. ಎಸ್. ಕಿರಣ್ ಕುಮಾರ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಗೋವಿಂದನ್ ರಂಗರಾಜನ್, ಡಾ. ಎಕ್ರೂಪ್ ಕೌರ್, ಐ.ಎ.ಎಸ್, ಕಾರ್ಯದರ್ಶಿಗಳು, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ & ತಂತ್ರಜ್ಞಾನ ಕರ್ನಾಟಕ ಸರ್ಕಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಳೆದ 35 ವರ್ಷಗಳಲ್ಲಿ ಡಾ. ಸತ್ಯಮೂರ್ತಿ ಅವರು ರೂಪಾಂತರಗಳು, ಕಾರ್ಯವಿಧಾನಗಳು, ರೋಗನಿರ್ಣಯ ಮತ್ತು ಚಿಕಿತ್ಸಕ ತಂತ್ರಗಳ ಪ್ರಮುಖ ಸಂಶೋಧನೆಗಳನ್ನು ಸಂಶೋಧಿಸಿರುತ್ತಾರೆ. ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಕುರಿತು ಅವರ ಸಂಶೋಧನೆಯು ಉತ್ತಮ ರೀತಿಯಲ್ಲಿ ಗುರುತಿಸಲ್ಪಟ್ಟಿದೆ. ಅವರು ಪ್ರಕೃತಿ ಮತ್ತು ಚಿಕಿತ್ಸೆಯಂತಹ ಆಯುರ್ವೇದ ತತ್ವಗಳ ಸಮಕಾಲೀನ ಜ್ಞಾನವನ್ನು ಗಣನೀಯವಾಗಿ ಮುನ್ನಡೆಸಿ, 350 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಂಶೋಧನಾ ಪ್ರಕಟಣೆಗಳು ಮತ್ತು 18 ಪೇಟೆಂಟ್‌ಗಳೊಂದಿಗೆ , ಅವರು ಮಾನವ ರೋಗ, ರೋಗನಿರ್ಣಯ, ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ವಿಜ್ಞಾನ ಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿರುತ್ತಾರೆ.