Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಮಹೋತ್ಸವ ಸಮ್ಮೇಳನ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಮಹೋತ್ಸವ ಸಮ್ಮೇಳನ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗವು ಆಗಸ್ಟ್ 22 ರಿಂದ 24, 2025 ರವರೆಗೆ ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಕರ್ನಾಟಕ ಅಂಗರಚನಾಶಾಸ್ತ್ರಜ್ಞರ ಘಟಕದ ಬೆಳ್ಳಿ ಮಹೋತ್ಸವ ಸಮ್ಮೇಳನವನ್ನು “ಅನುವಾದ ಅಂಗರಚನಾಶಾಸ್ತ್ರ: ಸಂಪ್ರದಾಯ ಮತ್ತು ತಂತ್ರಜ್ಞಾನದ ಸಿನ್ಸಿಟಿಯಮ್” ಎಂಬ ಧ್ಯೇಯೆಯೊಂದಿಗೆ ಆಯೋಜಿಸಲಾಗಿತ್ತು. ಕರ್ನಾಟಕದಾದ್ಯಂತ 300ಕ್ಕೂ ಹೆಚ್ಚು ಅಂಗರಚನಾಶಾಸ್ತ್ರಜ್ಞರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಸುಮಾರು 200ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಮಂಡಿಸಲಾಯಿತು. ಕರ್ನಾಟಕ ಅಂಗರಚನಾಶಾಸ್ತ್ರಜ್ಞರ ಘಟಕದ (ಏಅಂ) ಸ್ಥಾಪಕ ಅಧ್ಯಕ್ಷರಾದ ಡಾ. ಎಸ್ ಕಾಂತ ಮತ್ತು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಮುಖ್ಯ ಅತಿಥಿಗಳಾಗಿ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಅಂಗರಚನಾಶಾಸ್ತ್ರಜ್ಞರ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಖಜಾಂಚಿಗಳಾದ ಡಾ. ಅಶ್ವಿನಿ ಸಿಎ, ಉಪಾಧ್ಯಕ್ಷರುಗಳಾದ ಡಾ. ಎನ್ ಎಂ ಸುರೇಶ್ ಮತ್ತು ಡಾ. ವಿದ್ಯಾ ಸಿಎಸ್, ಪ್ರಧಾನ ಕಾರ್ಯದರ್ಶಿಗಳಾದ ಡಾ. ಪಿ. ಎಸ್. ಭೂಸರಡ್ಡಿ ಅವರು ಗೌರವ ಅತಿಥಿಗಳಾಗಿದ್ದರು. ಗಣ್ಯರು ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ಡಾ. ಕಾಂತ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ, ಅನ್ಯಾಟಮಿಸ್ಟ್ಸ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿಗಳಾದ ಡಾ. ಜಥಾನಿ, ಖ್ಯಾತ ಸ್ವರೂಪ ಶಸ್ತ್ರಚಿಕಿತ್ಸಕರಾದ ಡಾ. ಎಸ್. ಎ. ಸುಬ್ರಮಣಿ ಮತ್ತು ಇತರರ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಕಾಂತ ಎಸ್. ಮತ್ತು ಡಾ. ನಿರಂಜನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಂಘಟನಾ ಕಾರ್ಯದರ್ಶಿಗಳಾದ ಡಾ. ವೀಣಾ ಕುಲಕರ್ಣಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ರೋಶನಿ ಸದಾಶಿವ ಮತ್ತು ಡಾ. ವಿನಯ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಸಂಘಟನಾ ಕಾರ್ಯದರ್ಶಿಗಳಾದ ಡಾ. ಸುರೇಶ್ ಮನಗುತ್ತಿ ವಂದನಾರ್ಪಣೆ ಸಲ್ಲಿಸಿದರು.

ಧರ್ಮಸ್ಥಳದಲ್ಲಿ ಜ್ಞಾನಪಥ ಮತ್ತು ಜ್ಞಾನರಥ ಕೃತಿಗಳ ಲೋಕಾರ್ಪಣೆ

Article Image

ಧರ್ಮಸ್ಥಳದಲ್ಲಿ ಜ್ಞಾನಪಥ ಮತ್ತು ಜ್ಞಾನರಥ ಕೃತಿಗಳ ಲೋಕಾರ್ಪಣೆ

ಉಜಿರೆ: ನೈತಿಕಶಿಕ್ಷಣ ಪ್ರಸ್ತುತ ಸಮಾಜಕ್ಕೆ ತುರ್ತು ಅನಿವಾರ್ಯವಾಗಿದ್ದು ಪುಸ್ತಕಗಳು ಸಾರ್ಥಕ ಬದುಕಿಗೆ ದಾರಿದೀಪವಾಗಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಕಟಿಸಿದ “ಜ್ಞಾನಪಥ” ಮತ್ತು “ಜ್ಞಾನರಥ” ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಜ್ಞಾನದೀವಿಗೆಯಾದ ಪುಸ್ತಕಗಳು ಉತ್ತಮ ಹಾಗೂ ಉಪಯುಕ್ತ ಜೀವನ ಸಂಗಾತಿಯಾಗಿದ್ದು, ನೈತಿಕ ಪುಸ್ತಕಗಳಲ್ಲಿರುವ ಲೇಖನಗಳು ಸಾರ್ಥಕ ಬದುಕಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುತ್ತವೆ ಎಂದು ಅವರು ಶ್ಲಾಘಿಸಿ ಅಭಿನಂದಿಸಿದರು. ಶ್ರೀ ಮಂಜುನಾಥ ಚಲನಚಿತ್ರ: ತಾನು ಬಾಲ್ಯದಿಂದಲೂ ಧರ್ಮಸ್ಥಳದ ಪರಮ ಭಕ್ತನಾಗಿದ್ದು ಕೆಲವು ವರ್ಷಗಳ ಹಿಂದೆ ಸುಮಾರು ಮೂರು ತಿಂಗಳು ಧರ್ಮಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಾಸ್ತವ್ಯ ಇದ್ದು, “ಶ್ರೀ ಮಂಜುನಾಥ” ಚಲನಚಿತ್ರ ನಿರ್ಮಾಣ ಮಾಡಿರುವ ಸವಿನೆನಪನ್ನು ಸ್ಮರಿಸಿದರು. ಧರ್ಮಸ್ಥಳಕ್ಕೆ ಬಂದು ಪ್ರಥಮವಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು “ಶ್ರೀ ಮಂಜುನಾಥ” ಚಲನಚಿತ್ರ ತಯಾರಿಸುವ ಬಗ್ಗೆ ಅನುಮತಿ ಕೋರಿದಾಗ ಬಹಳ ನಿರೀಕ್ಷೆಯಲ್ಲಿದ್ದ ಅವರಿಗೆ ಆಶ್ಚರ್ಯವಾಯಿತು. ಹೆಗ್ಗಡೆಯವರು ತಕ್ಷಣ ಮಂಜುನಾಥ ದೇವರನ್ನು ವ್ಯಾಪಾರೀಕರಣ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಆದರೂ ದೇವರನ್ನು ಪ್ರಾರ್ಥಿಸಿ ತನ್ನ ದೃಢಸಂಕಲ್ಪ ನೆರವೇರಿಸಲು ಪ್ರಯತ್ನಿಸಿದರು. ಚಲನಚಿತ್ರ ನಿರ್ಮಾಣಕ್ಕೆ ಭಗೀರಥ ಪ್ರಯತ್ನ ಮಾಡಿದರು. ವಿಶೇಷವಾಗಿ ಜೈನಧರ್ಮದ ಬಗ್ಗೆ ವಿಶೇಷ ಗೌರವ, ಆದರ ಹೊಂದಿದ ಅವರು ಆಳವಾದ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿದರು. ಕನ್ನಡದ ಆದಿಕವಿ ಪಂಪನಿಂದ ಹಿಡಿದು ರನ್ನ, ಜನ್ನ, ಪೊನ್ನರ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಏಳು ಕೋಟಿ ರೂ. ವೆಚ್ಛದಲ್ಲಿ ತಯಾರಾದ ಚಲನಚಿತ್ರದಲ್ಲಿ ತಾನು ನಷ್ಟ ಅನುಭವಿಸಬೇಕಾಯಿತು ಎಂದು ಸಿಹಿ-ಕಹಿ ಅನುಭವವನ್ನು ನೆನಪಿಸಿಕೊಂಡರು. ಶುಭಾಶಂಸನೆ ಮಾಡಿದ ಚಲನಚಿತ್ರ ನಟ ದತ್ತಣ್ಣ (ದತ್ತಾತ್ರೇಯ ಎಚ್.ಡಿ.) ಮನೆಯ ವಾತಾವರಣದಿಂದಲೇ ಉತ್ತಮ ಸಂಸ್ಕಾರ ಮೂಡಿ ಬರಬೇಕು. ಜೀವ ದೊಡ್ಡದಲ್ಲ, ಜೀವನ ದೊಡ್ಡದು. ಮೊದಲು ನಾವು ಯಾರು ಎಂಬುದನ್ನು ಅರಿತುಕೊಂಡು, ನವಚೈತನ್ಯವನ್ನು ಹೊಂದಬೇಕು. ಸಜ್ಜನರ ಸತ್ಸಂಗ ಹಾಗೂ ಉತ್ತಮ ಪುಸ್ತಕಗಳನ್ನು ಓದುವುದರಿಂದ ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಸಂಸ್ಕಾರ ಮೂಡಿಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿದ್ಯಾರ್ಥಿಗಳು ದೇಶದ ಮುಂದಿನ ಜನಾಂಗವಾಗಿದ್ದು ಅವರ ಉಜ್ವಲ ಭವಿಷ್ಯ ರೂಪಿಸಲಿಕ್ಕಾಗಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸ್ವಾಮಿ ವಿವೇಕಾನಂದರಂತೆ ಓದಿದ ಪುಸ್ತಕದ ಅನುಭವವನ್ನು ಬದುಕಿನಲ್ಲಿ ಅಳವಡಿಸಿದಾಗ ಜೀವನ ಪಾವನವಾಗುತ್ತದೆ. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು ಸಮಾಜದ ಅಮೂಲ್ಯ ಆಸ್ತಿಯಾಗಿ ರೂಪುಗೊಳ್ಳಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು. ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ನೀಡಲಾಯಿತು. ಶಾರದಾಮಣಿಶೇಖರ್ ನೇತೃತ್ವದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಸುಶ್ರಾವ್ಯ ಗಾಯನ ಮತ್ತು ನೃತ್ಯ ಪ್ರದರ್ಶನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಧನ್ಯವಾದವಿತ್ತರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಶಶಿಕಾಂತ ಜೈನ್ ಸ್ವಾಗತಿಸಿದರು. ಪುದುವೆಟ್ಟು ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

ಮೂಡುಬಿದಿರೆ ಎಕ್ಸಲೆಂಟ್ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ

Article Image

ಮೂಡುಬಿದಿರೆ ಎಕ್ಸಲೆಂಟ್ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ

ಎಕ್ಸಲೆಂಟ್ ಮೂಡುಬಿದಿರೆಯ ರಾಷ್ಟ್ರೀಯ ಸೇವಾ ಯೋಜನೆ, ಕಾಲೇಜಿನ ಮಾದ್ಕ ವ್ಯಸನ ವಿರೋಧಿ ಸಮಿತಿ ಹಾಗೂ ಮೂಡುಬಿದಿರೆ ಆರಕ್ಷಕ ಠಾಣೆಯ ಸಹಯೋಗದೊಂದಿಗೆ ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮ ಹಾಗೂ ಕಾನೂನು ಅರಿವು ನೀಡುವ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ ಎಕ್ಸಲೆಂಟ್‌ಮೂಡುಬಿದಿರೆಯ ರಾಜಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕಾನೂನಿನ ಅರಿವು ನೀಡಿದ ಮೂಡುಬಿದಿರೆ ಆರಕ್ಷಕ ಠಾಣೆಯ ಪಿಎಸ್‌ಐ ಪ್ರತಿಭಾ ಅವರು ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಭಾರತದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಜಾರಿಗೆ ತರಲಾದ ಒಂದು ಕಾಯ್ದೆ. ಈ ಕಾಯ್ದೆಯು ಮಾದಕ ವಸ್ತುಗಳ ಉತ್ಪಾದನೆ, ತಯಾರಿಕೆ, ಸಂಗ್ರಹಣೆ, ಸಾಗಣೆ, ಮಾರಾಟ, ಖರೀದಿ ಮತ್ತು ಬಳಕೆಯನ್ನು ನಿಷೇಧಿಸುತ್ತದೆ. ಮದ್ಯ, ಶುಗರ್, ವೈದ್ಯರ ಅನುಮತಿ ಇಲ್ಲದ ರಾಸಾಯನಿಕ ಔಷಧಗಳು ಇತ್ಯಾದಿ ಸೇವನೆಯು ದೇಶದಾದ್ಯಂತ ಯುವಜನರಲ್ಲಿ ಬೆಳೆಯುವ ಭೀತಿಯಾಗಿದೆ. ಇದರಿಂದ ಯುವಶಕ್ತಿ ತನ್ನ ಬಲವನ್ನು ಕಳಕೊಂಡಿದೆ. ಹದಿಹರೆಯದವರು ಮಾತ್ರವಲ್ಲ ಕೆಲವು ಸಂದರ್ಭಗಳಲ್ಲಿ ಹದಿಹರೆಯದ ಪೂರ್ವದ ಮಕ್ಕಳು ಇದಕ್ಕೆ ಬಲಿಯಾಗುತ್ತಾರೆ. ದೇಶದಲ್ಲಿ ಬಹಳಷ್ಟು ಜನರು ಸಹವಾಸ ದೋಷದಿಂದ, ಅನ್ಯ ಕಾರಣಗಳಿಂದ ಮಾದಕ ದ್ರವ್ಯ ಉಪಯೋಗಿಸುತ್ತಾರೆ. ಇದು ದೇಹದ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರಿ ಆರೋಗ್ಯವನ್ನು ಹಾಳು ಮಾಡುತ್ತದೆ. ಒಮ್ಮೆ ಅಪರಾಧ ಲೋಕದಲ್ಲಿ ಗುರುತಿಸಿ ಆದರೆ ನಿಮ್ಮ ಬಂಗಾರದತಹ ಭವಿಷ್ಯ, ಮನೆಯವರ ಸಾಮಾಜಿಕ ಸ್ಥಾನಮಾನ ಹಾಳಾಗುತ್ತದೆ ಎಂದರು. ಬಳಿಕ ಸೈಬರ್ ಅಪರಾಧಗಳ ಬಗ್ಗೆ, ಸಾಮಾಜಿಕ ಮಾಧ್ಯಮಗಳಿಂದ ಆಗುವ ತೊಂದರೆಗಳು, ವಿದ್ಯಾರ್ಥಿಗಳು ವಹಿಸಬೇಕಾದ ಎಚ್ಚರಿಕೆಗಳ ಕುರಿತು ವಿವರಣಾತ್ಮಕ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಮಾದಕ ದ್ರವ್ಯದ ಜಾಲವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆಯ ಪ್ರಯತ್ನ ಶ್ಲಾಘನೀಯ. ಪ್ರತಿಯೊಂದು ಮಗುವಿನ ಬೆಳವಣಿಗೆ ಆರೋಗ್ಯದಾಯಕವಾಗಿರಬೇಕು. ಎತ್ತರಕ್ಕೆ ಏರಬೇಕು ಎಂಬುವುದು ಪ್ರತೀ ಹೆತ್ತವರ ಕನಸು. ಆ ಕನಸನ್ನು ಇಂತಹ ಮಾದಕ ದ್ರವ್ಯಗಳು ಪುಡಿಮಾಡಕೂಡದು. ನಾವು ಒಳ್ಳೆಯ ಅಭ್ಯಾಸಗಳಿಗೆ ವ್ಯಸನಿಗಳೋಣ. ಮಾನವೀಯ ಸಂಬಂಧ, ಶ್ರೇಷ್ಠ ಅಭ್ಯಾಸಗಳು, ದೇಶದ ಕುರಿತಾಗಿ ಗೌರವ ಬೆಳೆಸಿಕೊಳ್ಳಿ. ಸತ್ಯದ ದಾರಿಯಲ್ಲಿ ಮುಂದುವರಿಯಿರಿ. ಒಳ್ಳೆಯದನ್ನು ಬೆಂಬಲಿಸುತ್ತಾ ಇಂತಹ ಒಳ್ಳೆಯ ಕಾರ್ಯಕ್ರಮ ನಡೆಸುವರೇ ಎಕ್ಸಲೆಂಟ್ ಸಂಸ್ಥೆಗೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷ ಪಡುತ್ತಾ, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆದು ಮಾದಕ ವ್ಯಸನ ಮುಕ್ತ ಶ್ರೇಷ್ಠ ಭಾರತ ನಿರ್ಮಾಣವಾಗಲಿ ಎಂದರು. ವಿದ್ಯಾರ್ಥಿ ನಿತಿನ್ ಮಾದಕ ವ್ಯಸನ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ರಶ್ಮಿತಾ ಶೆಟ್ಟಿ ಹಾಗೂ ಸಂಜನ್ ಕೋಟೆ ಮಾದಕ ವ್ಯಸನದ ಕುರಿತು ಮಾತಾನಾಡಿದರು. ವಿದ್ಯಾರ್ಥಿಗಳಿಂದ ಮಾದಕ ವ್ಯಸನ ಮುಕ್ತ ಸಮಾಜ ಎಂಬ ಪ್ರಹಸನ ನಡೆಯಿತು. ವೇದಿಕೆಯಲ್ಲಿ ಕಾಲೇಜಿನ ಮಾದಕ ವ್ಯಸನ ವಿರೋಧಿ ಸಮಿತಿಯ ಮುಖ್ಯಸ್ಥರಾದ ಪ್ರದೀಪ್ ಕೆ ಪಿ ಉಪಸ್ಥಿತರಿದ್ದರು. ಕಾರ್ತಿಕ್ ಹೆಚ್. ನಿರೂಪಿಸಿ ಕಾರ್ತಿಕ್ ಅಗಡಿ ವಂದಿಸಿದರು.

ಸಂಸ್ಕೃತಿ ಪರಂಪರೆಯ ಬೇರು ಸಂಸ್ಕೃತ - ಯುವರಾಜ ಜೈನ್

Article Image

ಸಂಸ್ಕೃತಿ ಪರಂಪರೆಯ ಬೇರು ಸಂಸ್ಕೃತ - ಯುವರಾಜ ಜೈನ್

ನಮ್ಮ ಭಾರತೀಯ ಸಂಸ್ಕೃತಿಯ ಗಾಢವಾದ ಬೇರು ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ. ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ನಾಡಿನ ಸಂಸ್ಕೃತಿ, ತತ್ತ್ವ, ಧರ್ಮ, ಸಾಹಿತ್ಯ, ಕಲೆ ಮತ್ತು ಜ್ಞಾನದ ನಿರಂತರ ಪ್ರಕಾಶ. ಇಂದು ನಾವು ಕಾಣುತ್ತಿರುವ ಜೀವನಮೌಲ್ಯಗಳು, ಶಿಷ್ಟಾಚಾರಗಳು, ಶ್ರೀಮಂತ ಕಲೆಗಳು, ಜ್ಞಾನದ ಹರವುಗಳೆಲ್ಲ ಸಂಸ್ಕೃತ ಸಾಹಿತ್ಯದಲ್ಲಿ ನೆಲೆ ನಿಂತಿವೆ. ಸಂಸ್ಕೃತ ಅಧ್ಯಯನ ಮಾಡಿದರೆ ನಾವೇ ನಮ್ಮ ಮೂಲಗಳಿಗೆ ಹತ್ತಿರವಾಗುತ್ತೇವೆ, ಜಗತ್ತಿನೊಂದಿಗೆ ನಿಂತು ಮಾತನಾಡುವ ಶಕ್ತಿಯನ್ನು ಪಡೆಯುತ್ತೇವೆ ಎಂದು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಅಭಿಪ್ರಾಯಪಟ್ಟರು. ಅವರು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಸಂಸ್ಕೃತ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಪ್ರಾಂಶುಪಾಲರ ಸಂಘ ಹಾಗೂ ಎಕ್ಸಲೆಂಟ್ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ  ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಸಂಸ್ಕೃತ ಭಾಷಾ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರವನ್ನು  ಉದ್ಘಾಟಿಸಿ ಮಾತನಾಡಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿದ್ವಾಂಸರು ಮಂಗಳೂರಿನ ವಾಸುದೇವ ಕಾರಂತರು ಮಾತನಾಡುತ್ತ ಗುರು ಎಂದರೆ ಕೇವಲ ಪಾಠ ಹೇಳುವವನು ಮಾತ್ರವಲ್ಲ. ಆತನು ವಿಷಯದಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು. ಜ್ಞಾನವು ಕೇವಲ ಪುಸ್ತಕಗಳಲ್ಲಿ ಸೀಮಿತವಾಗದೆ, ಜೀವನದ ವಿವಿಧ ಕ್ಷೇತ್ರಗಳಲ್ಲಿ ಆಳವಾಗಿ ಅರ್ಥೈಸಿದಾಗ ಮಾತ್ರ ಅದು ಶಿಷ್ಯನಿಗೆ ಮಾರ್ಗದರ್ಶಕವಾಗುತ್ತದೆ. ನಿಜವಾದ ಗುರುವು ಸದಾ ಶಿಷ್ಯನ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಾನೆ. ವಿದ್ಯಾರ್ಥಿಯ ಮನಸ್ಸು ಅನೇಕ ವಿಚಾರಗಳಲ್ಲಿ ಅಲೆದಾಡುವುದು ಸಹಜ. ಇಂತಹ ಸಂದರ್ಭದಲ್ಲಿ ಶಿಷ್ಯನ ವಿಕ್ಷಿಪ್ತ ಮನಸ್ಸನ್ನು ನಿರ್ದಿಷ್ಟ ವಿಷಯದಲ್ಲಿ ನೆಲೆಗೊಳಿಸಿ, ಅಧ್ಯಯನದಲ್ಲಿ ಏಕಾಗ್ರತೆಯನ್ನು ಹುಟ್ಟಿಸುವುದು ಗುರುವಿನ ದೊಡ್ಡ ಹೊಣೆಗಾರಿಕೆ. ಇಂತಹ ಕಾರ್ಯವನ್ನು ನೆರವೇರಿಸಲು ಗುರುವು ಶಾಂತಿ, ಸಹನೆ ಮತ್ತು ತಾಳ್ಮೆಯನ್ನು ಹೊಂದಿರಬೇಕು ಎಂದು ಹಿತವಚನ ನುಡಿದರು. ಇದೇ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 100 ಅಂಕ ಗಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷ ರಮೇಶ ಆಚಾರ್ಯ ಸ್ವಾಗತಿಸಿ, ಉಪಾಧ್ಯಕ್ಷ ಡಾ. ಪ್ರಸನ್ನ ಕುಮಾರ್ ಐತಾಳ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ತೇಜಸ್ವೀ ಭಟ್ ನಿರೂಪಿಸಿ ಸಂಘದ ಕಾರ್ಯದರ್ಶೀ ಡಾ. ಮಧುಕೇಶ್ವರ ಶಾಸ್ತ್ರೀ ವಂದಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 79ನೇ ಸ್ವಾತಂತ್ರ‍್ಯ ದಿನಾಚರಣೆ

Article Image

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 79ನೇ ಸ್ವಾತಂತ್ರ‍್ಯ ದಿನಾಚರಣೆ

ಮೂಡುಬಿದಿರೆ: ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತ ನಿರ್ಮಿಸುವಲ್ಲಿ ಶ್ರಮವಹಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ನಿವೃತ್ತ ಅಧಿಕಾರಿ ಲೆ. ಜನರಲ್ ಅರುಣ್ ಅನಂತನಾರಾಯಣ್ ಹೇಳಿದರು. ವಿದ್ಯಾಗಿರಿಯ ಕೆ. ವಿ. ಸುಬ್ಬಣ್ಣ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವತಿಯಿಂದ ನಡೆದ 79ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಗೈದು ಮಾತನಾಡಿದ ಅವರು, ಇಂದಿನ ಪೀಳಿಗೆಗೆ ಸ್ವಾತಂತ್ರ‍್ಯವೆಂದರೆ ಏನನ್ನಾದರೂ ಸಾಧಿಸುವ ಅವಕಾಶ ಎಂದು ಭಾಸವಾಗಬಹುದು, ಆದರೆ ನಮ್ಮ ಹಿರಿಯರು ಸರಿಯಾದ ಶಿಕ್ಷಣ ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದೇ ಬದುಕಿದ್ದರು. ನಿಜವಾದ ಸ್ವಾತಂತ್ರ‍್ಯ ಎಂದರೆ ಅಭಿವೃದ್ಧಿ ಪ್ರತಿಯೊಬ್ಬರಿಗೂ ತಲುಪಿದಾಗ ಹಾಗೂ ಪ್ರತಿಯೊಬ್ಬರೂ ಈ ಅಗತ್ಯ ಸೌಲಭ್ಯಗಳನ್ನು ಪಡೆದಾಗ ಸಾಧ್ಯವಾಗುವುದು. ಸ್ವಾತಂತ್ರ‍್ಯ ಹೋರಾಟದಲ್ಲಿ ಹಿರಿಯರು ನೀಡಿದ ತ್ಯಾಗಗಳಿಗೆ ಗೌರವ ಸಲ್ಲಿಸಿದ ಅವರು, “ಆಧುನಿಕ ಭಾರತವನ್ನು ಒಬ್ಬ ವ್ಯಕ್ತಿ ಮಾತ್ರ ನಿರ್ಮಿಸಲು ಸಾಧ್ಯವಿಲ್ಲ,ಅದಕ್ಕೆ ಸಮೂಹ ಶ್ರಮ ಅಗತ್ಯ. ಶಿಕ್ಷಕರು ಕೇವಲ ವೃತ್ತಿಯಲ್ಲಿಲ್ಲ, ಸೇವೆಯಲ್ಲಿ ಇದ್ದು, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತವನ್ನು ಕಟ್ಟುವವರಾಗಿದ್ದಾರೆ ಎಂದರು. ಇಂತಹ ಮೌಲ್ಯಯುತ ಶಿಕ್ಷಣ ಪಡೆದ ವಿಧ್ಯಾರ್ಥಿ ಸಮೂಹದಿಂದ ನವ ಭಾರತದ ನಿರ್ಮಾಣ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮೂಲ್ಕಿ-ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ ಆಳ್ವ ಡಾ. ಗ್ರೀಷ್ಮಾ, ಡಾ.ಹನಾ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಡಿಸೋಜ ಹಾಗೂ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್: 222 ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

Article Image

ಬೆಳ್ತಂಗಡಿ ರೋಟರಿ ಕ್ಲಬ್: 222 ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

ಉಜಿರೆ: ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ತಮಗೆ ದೊರಕುವ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ಉತ್ತಮ ಸಂಸ್ಕಾರ ಹಾಗೂ ಗುರು-ಹಿರಿಯರಿಗೆ ಗೌರವ, ವಿನಯ, ಸೇವೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕೇನ್‌ಫಿನ್ ಹೋಮ್ಸ್ ಲಿಮಿಟೆಡ್‌ನ ಡಿ.ಜಿ.ಎಂ. ಪ್ರಶಾಂತ್ ಜೋಶಿ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ರೋಟರಿ ಭವನದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಆಶ್ರಯದಲ್ಲಿ ಕೇನ್‌ಫಿನ್ ಹೋಮ್ಸ್ ಸಹಯೋಗದಲ್ಲಿ 222 ವಿದ್ಯಾರ್ಥಿಗಳಿಗೆ ಇಪ್ಪತ್ತು ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ವಿದ್ಯಾರ್ಥಿವೇತನದ ಸದುಪಯೋಗ ಪಡೆದು ದೃಢಸಂಕಲ್ಪ ಮತ್ತು ಏಕಾಗ್ರತೆಯಿಂದ ಅಧ್ಯಯನ ಮಾಡಿ ವಿದ್ಯಾರ್ಥಿಗಳು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪುಗೊಳ್ಳಬೇಕು. ಮುಂದೆ ತಾವು ಸ್ವಾವಲಂಬಿ ಜೀವನ ನಡೆಸುವಾಗ, ತಾವು ಪಡೆದ ವಿದ್ಯಾರ್ಥಿವೇತನಕ್ಕಿಂತಲೂ ಹೆಚ್ಚಿನ ನೆರವನ್ನು ಇತರರಿಗೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ, ಶುಭಾಶಂಸನೆ ಮಾಡಿ, ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಸಾಮಾಜಿಕ ಪರಿವರ್ತನೆಯಾಗುತ್ತದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಸದುಪಯೋಗ ಮಾಡಬೇಕು. ಸದಾ ನಗುಮೊಗದಿಒಂದ ಸಂಕಷ್ಟದಲ್ಲಿರುವವರಿಗೆ ಸಕಾಲಿಕ ನೆರವುನೀಡಿ ಅವರು ಸುಖ-ಶಾಂತಿ, ಸಂತೋಷದಿಂದ ಜೀವನ ಮಾಡುವಂತೆ ಸಹಕರಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು. ಬೆಂಗಳೂರು ಇಂದಿರಾನಗರ ರೋಟರಿಕ್ಲಬ್‌ನ ಮಾಜಿ ಅಧ್ಯಕ್ಷರಾದ ಸುಪ್ರಿಯಾ ಖಾಂದಾರಿ ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಜವಾಬ್ದಾರಿಯುತ ಆದರ್ಶ ನಾಯಕರಾಗಿ ಸಮಾಜ ಸೇವೆ ಮತ್ತು ದೇಶಸೇವೆ ಮಾಡಬೇಕು ಎಂದು ಹೇಳಿದರು. ಕೇನ್‌ಫಿನ್ ಹೋಮ್ಸ್‌ನ ಉಪಪ್ರಬಂಧಕಿ ಚಿತ್ರಾಂಗದ ಸಾರಂಗಿ, ಸುರೇಶ್ ಸಾಲಿಯಾನ್, ಡಾ. ಎ. ಜಯಕುಮಾರ್ ಶೆಟ್ಟಿ, ರೋಟರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀಕಾಂತ್ ಕಾಮತ್ ವಿದ್ಯಾರ್ಥಿವೇತನ ಸಮಿತಿ ಅಧ್ಯಕ್ಷ ಅಬೂಬಕ್ಕರ್, ಗೀತಾಪ್ರಭು ಉಪಸ್ಥಿತರಿದ್ದರು. ಮಂಗಳೂರಿನ ಸರ್ವಜ್ಞ ಐ.ಎ.ಎಸ್. ಅಕಾಡೆಮಿಯ ಸುರೇಶ್, ಎಂ.ಎಸ್. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ್ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಉಜಿರೆಯ ಡಾ. ದಯಾಕರ್, ಎಂ.ಎಂ. ಧನ್ಯವಾದವಿತ್ತರು. ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಏಕಕಾಲಕ್ಕೆ ಗರ್ಭಕೋಶದ ಗೆಡ್ಡೆ ಮತ್ತು ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಏಕಕಾಲಕ್ಕೆ ಗರ್ಭಕೋಶದ ಗೆಡ್ಡೆ ಮತ್ತು ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆ

ಇತ್ತೀಚೆಗೆ ತೀವ್ರ ಹೊಟ್ಟೆ ನೋವಿನಿಂದ ಕಳೆದ 6 ತಿಂಗಳಿನಿಂದ ಬಳಲುತ್ತಿದ್ದ 45 ವರ್ಷ ಪ್ರಾಯದ ಮಹಿಳೆಯೊಬ್ಬರು ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಾಗ ಈಕೆ ಅಸಹಜ ಗರ್ಭಾಶಯದ ರಕ್ತಸ್ರಾವದಿಂದ ಬಳಲುತ್ತಿದ್ದು, ಆಕೆಯ ಹೊಟ್ಟೆಯಲ್ಲಿ 7 ಸೆಂ.ಮೀ ಗಾತ್ರದ ಗೆಡ್ಡೆ ಸೇರಿದಂತೆ ಒಟ್ಟು 4 ಗೆಡ್ಡೆಯೊಂದಿಗೆ ಹರ್ನಿಯಾ (ಹೊಕ್ಕಳಿನ ಅಂಡವಾಯು)ಸಮಸ್ಯೆ ಕೂಡ ಇರುವುದು ಕಂಡು ಬಂದಿತ್ತು. ಇಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಸ್ವರ್ಣಲತಾ, ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಬಾಲಾಜಿ ಪ್ರಭಾಕರನ್ ಮತ್ತು ಅರೆವಳಿಕೆ ತಜ್ಞರಾದ ಡಾ| ಸುಪ್ರೀತ್ ಆರ್. ಶೆಟ್ಟಿ ಇವರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಿಂದ ದೊಡ್ಡ ಗಾತ್ರದ ಗೆಡ್ಡೆ ಸೇರಿದಂತೆ ಎಲ್ಲಾ ಗೆಡ್ಡೆಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಇದೇ ಸಮಯದಲ್ಲಿ ಜಾಲರಿಯೊಂದಿಗೆ ಹರ್ನಿಯಾ ದುರಸ್ತಿ ಶಸ್ತ್ರಚಿಕಿತ್ಸೆಯನ್ನು ಕೂಡ ಮಾಡಲಾಗಿದ್ದು, ಮಹಿಳೆಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಅತೀ ಹೆಚ್ಚು ಗರ್ಭಕೋಶದ ಗೆಡ್ಡೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಇದುವರೆಗೆ ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕೋಶದ ಗೆಡ್ಡೆಯ ಸಮಸ್ಯೆಯಿಂದ ಬಳಲುತ್ತಿರುವ ಬಹಳಷ್ಟು ಮಂದಿಗೆ ಶಸ್ತçಚಿಕಿತ್ಸೆ ಮಾಡಲಾಗಿದೆ ಎಂದು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಗಮನಹರಿಸಿ: ಜಯಶ್ರೀ

Article Image

ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಗಮನಹರಿಸಿ: ಜಯಶ್ರೀ

ಕಾಲೇಜು ಜೀವನದಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ವಿದ್ಯಾರ್ಥಿಗಳು ಗಮನಹರಿಸಿ ಸೂಕ್ತ ತಯಾರಿಯಲ್ಲಿ ತೊಡಗಬೇಕು ಎಂದು ಮನಃಶಾಸ್ತ್ರಜ್ಞೆ, ಬೆಂಗಳೂರಿನ ಭಾರತೀಯ ಮನಃಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆಯ ನಿಕಟಪೂರ್ವ ಪ್ರಾಧ್ಯಾಪಕಿ ಜಯಶ್ರೀ ಹೇಳಿದರು. ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗದ ವತಿಯಿಂದ ಜು.30 ರಂದು ನಡೆದ ‘ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ’ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪುಸ್ತಕದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು, ಪ್ರಾಯೋಗಿಕ ಕಲಿಕೆ ವಿದ್ಯಾರ್ಥಿಗಳಿಂದ ಆಗಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಅದನ್ನು ಕಲಿಕೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿನಿಯೋಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪದ್ಮಶ್ರೀ ಸ್ವಾಗತಿಸಿ, ಯಶಸ್ವಿ ವಂದಿಸಿದರು.

ರೋಟಾಲಯ ಸಂಗೀತ ಸ್ಪರ್ಧೆ

Article Image

ರೋಟಾಲಯ ಸಂಗೀತ ಸ್ಪರ್ಧೆ

ಉಜಿರೆ: ಬೆಳ್ತಂಗಡಿ ರೋಟರಿಕ್ಲಬ್ ಮತ್ತು ಲಯನ್ಸ್‌ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಭಾನುವಾರ ಬೆಳ್ತಂಗಡಿಯಲ್ಲಿ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ರೋಟಾಲಯ ಸಂಗೀತ ಸ್ಪರ್ಧೆ ನಡೆಸಲಾಯಿತು. ರೋಟರಿ ಜಿಲ್ಲಾ ಉಪರಾಜ್ಯಪಾಲ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಮತ್ತು ಲಯನ್ಸ್ ಕ್ಲಬ್‌ನ ರಾಜು ಶೆಟ್ಟಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಫಲಿತಾಂಶ: ದೇಶಭಕ್ತಿಗೀತೆ: ಸಮೂಹ ಗಾಯನ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಸಿ), ಉಜಿರೆ (ಪ್ರಥಮ). ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ (ದ್ವಿತೀಯ) ಭಾವಗೀತೆ: ಪ್ರಾಪ್ತಿ ಶೆಟ್ಟಿ, ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ (ಪ್ರಥಮ). ಸ್ವಸ್ತಿಶ್ರೀ ಹೆಬ್ಬಾರ್ ಎಸ್.ಡಿ.ಎಂ., ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಸಿ), ಉಜಿರೆ (ದ್ವಿತೀಯ) ದೇಶಭಕ್ತಿ ಸಮೂಹ ಗಾಯನ: ಎಸ್.ಡಿ.ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆ, ಧರ್ಮಸ್ಥಳ (ಪ್ರಥಮ). ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ (ದ್ವಿತೀಯ) ಎ. ವಿಭಾಗ: ಭಾವಗೀತೆ ಸ್ಪರ್ಧೆ: ಸನ್ನಿಧಿ, ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್ ಸಿ) ಉಜಿರೆ (ಪ್ರಥಮ). ಅಂಜಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ (ದ್ವಿತೀಯ) ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ್ ಪ್ರಭು, ಗೀತಾಪ್ರಭು, ಕಾರ್ಯದರ್ಶಿ ಡಾ. ಎಂ. ಎಂ. ದಯಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಲಿಯೊ ಕ್ಲಬ್ ಅಧ್ಯಕ್ಷರಾದ ಡಾ. ಭಾಷಿಣಿ, ಡಾ. ಶಶಿಕಾಂತ ಡೋಂಗ್ರೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಎಸ್.ಡಿ.ಎಂ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಉಜಿರೆಯ ಬಿ. ಜನಾರ್ದನ ತೋಳ್ಪಾಡಿತ್ತಾಯ, ಸುಬ್ರಹಣ್ಯ, ಪ್ರಶಾಂತ ಬಾಳಿಗ ಬೆಳ್ತಂಗಡಿ ಮತ್ತು ಅಯ್ಯಪ್ಪ ಪ್ರಭು ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.

ಗೃಹವಿಜ್ಞಾನ ವಿಭಾಗದ ಚಟುವಟಿಕೆ ಉದ್ಘಾಟನಾ ಸಮಾರಂಭ

Article Image

ಗೃಹವಿಜ್ಞಾನ ವಿಭಾಗದ ಚಟುವಟಿಕೆ ಉದ್ಘಾಟನಾ ಸಮಾರಂಭ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಗೃಹವಿಜ್ಞಾನ ವಿಭಾಗದ ಪ್ರಸಕ್ತ ವರ್ಷದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ‘ಗೃಹವಾಹಿನಿ’ ಜು.25ರಂದು ನಡೆಯಿತು. ವಿಭಾಗದ ನಿಕಟಪೂರ್ವ ಮುಖ್ಯಸ್ಥೆ ಪ್ರೊ. ಆಲ್ಫೋನ್ಸಮ್ಮ ಅವರು ಉದ್ಘಾಟಿಸಿ ಮಾತನಾಡಿ, ಸ್ವಾವಲಂಬಿ ಜೀವನ ಹಾಗೂ ಅದಕ್ಕೆ ಬೇಕಾದ ಎಲ್ಲಾ ಪೂರಕ ಶಿಕ್ಷಣ ಗೃಹವಿಜ್ಞಾನ ಒದಗಿಸುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿಯುವುದು, ಅಡುಗೆ ಮಾಡುವುದು ಸಹಿತ ನಿತ್ಯ ಜೀವನಕ್ಕೆ ಬೇಕಾದ ಎಲ್ಲಾ ಕೌಶಲಗಳನ್ನು ಸೂಕ್ತ ರೀತಿಯಲ್ಲಿ ತಿಳಿದುಕೊಳ್ಳಲು ಅವಕಾಶ ದೊರೆಯುತ್ತದೆ ಎಂದರು. ವಿಭಾಗದ ಭಿತ್ತಿಪತ್ರಿಕೆ ಗೃಹವಾಣಿಯ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವಿಭಾಗದ ಮುಖ್ಯಸ್ಥೆ ಶೋಭಾ, ಸಹಾಯಕ ಪ್ರಾಧ್ಯಾಪಕಿ ಐಶ್ವರ್ಯ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಂಜಲಿ ಎಚ್ ಆರ್, ಐಶ್ವರ್ಯ ಹೆಚ್ ಆರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದರ್ಶಿನಿ ಮತ್ತು ತಂಡದವರು ಪ್ರಾರ್ಥಿಸಿದರು. ಅಂಜಲಿ ಸ್ವಾಗತಿಸಿ, ಸೌಜನ್ಯ ವಂದಿಸಿ, ಸನುಷ ಪಿಂಟೋ ನಿರೂಪಿಸಿದರು.

ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಉತ್ಸವಕ್ಕೆ ಚಾಲನೆ

Article Image

ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಉತ್ಸವಕ್ಕೆ ಚಾಲನೆ

ಬೆಳ್ತಂಗಡಿ: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಬೆಳ್ತಂಗಡಿ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ನಲ್ಲಿ ಆ.9ರಂದು ಡೈಮಂಡ್ ಫೆಸ್ಟ್ ಗೆ ಚಾಲನೆ ನೀಡಲಾಯಿತು. ಬೆಳ್ತಂಗಡಿ ಮಹಿಳಾ ಉದ್ಯಮಿ ಪ್ರೀತಿ ರತೀಶ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮುಳಿಯ ಸಂಸ್ಥೆಯಲ್ಲಿ ಹೊಸ ಹೊಸ ವಿನ್ಯಾಸದ ಆಭರಣಗಳ ಸಂಗ್ರಹಗಳಿದ್ದು ಗ್ರಾಹಕರಿಗೆ ಖುಷಿ ತಂದಿದೆ. ಮುಳಿಯದ ಎಲ್ಲಾ ಕುಶಲಕರ್ಮಿಗಳಿಗೆ ಹಾಟ್ಸ್ ಆಫ್ ಹೇಳಲೇಬೇಕು. ಯಾಕೆಂದರೆ ಪ್ರತಿ ಬಾರಿಯೂ ಬಂದಾಗ ಡಿಸೈನ್ ಗಳು ಬದಲಾವಣೆಗಳು ಆಗುತ್ತಿದ್ದು ಒಂದಕ್ಕೊಂದು ಆಕರ್ಷಣೆಯಾಗಿರುತ್ತದೆ. ಈ ಶ್ರಾವಣ ಮಾಸದ ಶನಿವಾರದಂದು ಪ್ರಾರಂಭ ಮಾಡಿರುವ ಡೈಮಂಡ್ ಫೆಸ್ಟ್ ಮಾರುಕಟ್ಟೆಯಲ್ಲಿ ಒಳ್ಳೆಯ ರೀತಿಯಲ್ಲಿ ಮೂಡಿಬರಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿ ಇಂದಬೆಟ್ಟು ಗ್ರಾಮ ಆಡಳಿತ ಅಧಿಕಾರಿ ಅಂಕಿತ್ ಜೈನ್ ಮಾತನಾಡಿ, ಮುಳಿಯ ಸಂಸ್ಥೆ ಹಲವಾರು ವರ್ಷಗಳಿಂದ ತನ್ನ ಗ್ರಾಹಕರನ್ನು ಸೆಳೆಯುತ್ತಲೇ ಬಂದಿರುತ್ತದೆ. ನಾನು ಕಳೆದ ಎರಡು ವರ್ಷದಿಂದ ಮುಳಿಯ ಸಂಸ್ಥೆಯ ಗ್ರಾಹಕನಾಗಿದ್ದು, ನಮ್ಮ ನಿರೀಕ್ಷೆಯ ಡಿಸೈನ್ ಗಳು ಇಲ್ಲಿ ದೊರೆಯುತ್ತಿದೆ. ಎಲ್ಲಾ ಸಿಬ್ಬಂದಿಗಳು ವಿನಮ್ರವಾಗಿದ್ದು ಮತ್ತೆ ಮತ್ತೆ ಬರಬೇಕು ಎಂದು ಭಾಸವಾಗುತ್ತದೆ. ಯಾವುದೇ ಹಬ್ಬಗಳ ಸಂಭ್ರಮದಂದು ನಮಗೆ ಮುಳಿಯ ನೆನಪಾಗುತ್ತಿದ್ದು ಡೈಮಂಡ್ ಫೆಸ್ಟ್ ಯಶಸ್ಸಾಗಲಿ ಎಂದು ಶುಭ ಹಾರೈಸಿದರು. ಹಲವು ವಿನ್ಯಾಸದ ವಜ್ರದ ಸಂಗ್ರಹಣೆ: 81 ವರ್ಷಗಳ ಇತಿಹಾಸವಿರುವಂತಹ ಮುಳಿಯ ಸಂಸ್ಥೆ ಸುಂದರ ಅರಮನೆಯ ಕಿರೀಟಕ್ಕೆ ಇಂದು ಮತ್ತೊಂದು ಸಾಧನೆಯ ಗರಿಯ ಜೋಡಿಸುವ ಸಂಭ್ರಮ. ವಜ್ರಗಳ ವಿವಿಧ ವಿನ್ಯಾಸಗಳನ್ನು ಸಂಭ್ರಮಿಸುವ ದಿನ. ಸುಮಾರು 4000 ಸಾವಿರದಿಂದ ಪ್ರಾರಂಭವಾಗುವಂತಹ ವಜ್ರದ ಬೆಲೆಯು ಹಲವು ವಿನ್ಯಾಸ ಮತ್ತು ವೈವಿಧ್ಯತೆಯನ್ನೊಳಗೊಂಡು 1 ಲಕ್ಷದವರೆಗೂ ಮುಂದುವರೆಯುತ್ತದೆ. ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ವಜ್ರದ ಗುಣಮಟ್ಟವನ್ನು ಗ್ರಾಹಕರಿಕೆ ತಿಳಿಸುವಂತಹ ಯಂತ್ರವೂ ಕೂಡ ಮುಳಿಯದಲ್ಲಿದೆ. ಹಲವು ವಿನ್ಯಾಸದ ವಜ್ರದ ಸಂಗ್ರಹಣೆಯ ಹಬ್ಬ ಇಂದಿನಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಗ್ರಾಹಕರು, ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕರು ಲೋಹಿತ್ ಸ್ವಾಗತಿಸಿದರು. ಸಿಬ್ಬಂದಿ ಅಕ್ಷಯ್ ಪ್ರಾರ್ಥಿಸಿ ವಂದಿಸಿದರು. ಸೋನಾಕ್ಷಿ ನಿರೂಪಿಸಿದರು.

ಒಡಿಯೂರು-ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್‌ನ ಎರಡು ನಾಟಕಗಳಿಗೆ ಪ್ರಶಸ್ತಿ

Article Image

ಒಡಿಯೂರು-ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್‌ನ ಎರಡು ನಾಟಕಗಳಿಗೆ ಪ್ರಶಸ್ತಿ

ಮೂಡುಬಿದಿರೆ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ಒಡಿಯೂರು ಗ್ರಾಮೋತ್ಸವದ ಅಂಗವಾಗಿ, ಶ್ರೀಕ್ಷೇತ್ರದ ರಾಜಾಂಗಣದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎರಡು ನಾಟಕಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ಪಡೆದವು. ಡಾ| ಜೀವನ್ ರಾಂ ಸುಳ್ಯ ರಚಿಸಿ, ನಿರ್ದೇಶಿಸಿದ "ದೇವವೃದ್ಧರು" ನಾಟಕವು ಅತ್ಯುತ್ತಮ ನಾಟಕ ಪ್ರಶಸ್ತಿಯೊಂದಿಗೆ ರೂ.50,000 ನಗದು ಬಹುಮಾನ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ನಾಟಕಕ್ಕೆ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿಯನ್ನು ಆಳ್ವಾಸ್ ಪಿ.ಯು. ವಿದ್ಯಾರ್ಥಿ ಮನುಜ ನೇಹಿಗ ಸುಳ್ಯ ಪಡೆದುಕೊಂಡರು. ಆಳ್ವಾಸ್‌ನ ಇನ್ನೊಂದು ತಂಡ ಪ್ರದರ್ಶಿಸಿದ, ಪ್ರಶಾಂತ್ ಶೆಟ್ಟಿ ಕೋಟ ನಿರ್ದೇಶಿಸಿದ್ದ ‘ಮಗು ಮತ್ತು ಮರ’ ನಾಟಕವು ದ್ವಿತೀಯ ಪ್ರಶಸ್ತಿಯೊಂದಿಗೆ ರೂ 30,000 ನಗದನ್ನು ಪಡೆಯಿತು. ಈ ನಾಟಕದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮನೋಜ್ ತೀರ್ಥಹಳ್ಳಿ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತೇಜಸ್ವಿನಿ ತರೀಕೆರೆ ಪಡೆದುಕೊಂಡರು. ಪ್ರಶಸ್ತಿಯನ್ನು ಶ್ರೀ ಒಡಿಯೂರು ಗುರುದೇವಾನಂದ ಸ್ವಾಮಿಗಳು ನೀಡಿದರು. ಸ್ಪರ್ಧೆಯಲ್ಲಿ ಉಡುಪಿ, ದ.ಕ ಜಿಲ್ಲೆಯ ಒಟ್ಟು 12 ತಂಡಗಳು ಭಾಗವಹಿಸಿದ್ದವು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರು ಅಭಿನಂದಿಸಿದ್ದಾರೆ.

ಎಕ್ಸಲೆಂಟ್ ಮೂಡುಬಿದಿರೆ: ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Article Image

ಎಕ್ಸಲೆಂಟ್ ಮೂಡುಬಿದಿರೆ: ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಪರಿವರ್ತನಾಶೀಲವಾದ ಪ್ರಪಂಚದಲ್ಲಿ ಬದುಕೆನ್ನುವುದು ಪ್ರವೃತ್ಯಾತ್ಮಕ ನೈಜ ಪ್ರವಾಹ ಚೇತನ ಅದರ ಕೇಂದ್ರ ಇಂದಿನ ಸಮಾಜಕ್ಕೆ ಅವಕಾಶಗಳು ಮುಕ್ತವಾಗಿದೆ. ಚೇತನವನ್ನು ಕೇಂದ್ರವಾಗಿರಿಸಿಕೊಂಡು, ವೃತ್ತಿ ನಿರಂತರ ಮಾರ್ಗದರ್ಶನದೊಂದಿಗೆ ಶ್ರದ್ಧೆ, ಅಭ್ಯಾಸದೊಂದಿಗೆ ಮುಂದುವರಿದಲ್ಲಿ ವೃತ್ತಿಯಲ್ಲಿ ಯಶಸ್ಸು ಶತಸಿದ್ಧ. ಎರಡು ದಶಕಗಳ ಹಿಂದೆ ಇದ್ದಷ್ಟು ಕಷ್ಟ ಈಗಿಲ್ಲ ಈಗ ಸರಿಯಾದ ವೃತ್ತಿಯಲ್ಲಿ ಮುಂದೆ ಸಾಗುವುದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಮಾರ್ಗದರ್ಷನ ನೀಡುವ ತಜ್ಞರಿದ್ದಾರೆ. ವಾಣಿಜ್ಯ ವಿಭಾಗದ ಭವಿಷ್ಯ ಉಜ್ವಲವಾಗಿದೆ ಎಂದು ಹಿರಿಯ ಚಾರ್ಟೆಡ್ ಅಕೌಂಟೆಂಟ್, ಆರ್.ಎಸ್. ಭಟ್ ಮತ್ತು ಕೊ.ನ ಸಿಎ ರಘುಪತಿ ಎಸ್. ಭಟ್ ಹೇಳಿದರು. ಅವರು ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು. ಪಿಪಿಕೆ ಎಸೋಷಿಯೇಟ್ಸ್ ಮುಖ್ಯಸ್ಥರಾದ ಸಿಎ ಪ್ರಶಾಂತ್ ಪೈ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ಆದ ನಂತರ ಇರುವ ಬಹು ಆಯ್ಕೆಗಳ ವಿವರಣೆ ನೀಡುತ್ತಾ ಏಕಾಗ್ರತೆ ಹಾಗೂ ಬದ್ಧತೆಯಿಂದ ಸಿಎ ಉತ್ತೀರ್ಣರಾಗಬಹುದು ತನ್ಮೂಲಕ ಆರ್ಥಿಕವಾಗಿ ಬಲಿಷ್ಠರಾಗಬಹುದು ಎಂದರು. ಸಮಾರಂಭದ ಅಧ್ಯಕ್ಷರಾದ ಎಕ್ಸಲೆಂಟ್ ಮೂಡುಬಿದಿರೆಯ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಭಾರತದ ಆರ್ಥಿಕ ನೀತಿಯಲ್ಲಿ ವಾಣಿಜ್ಯ ವಿಭಾಗದ ಪಾತ್ರ ಬಹಳ ದೊಡ್ಡದು. ಈಗಲೂ ಭಾರತದಲ್ಲಿ ಸಿಎ ಉತ್ತೀರ್ಣರಾದವರಿಗೆ ಬಹಳಷ್ಟು ಅವಕಾಶಗಳಿವೆ. ಭವಿಷ್ಯದಲ್ಲಿ ಎತ್ತರಕ್ಕೇರುವ, ಆರ್ಥಿಕವಾಗಿ ಸದೃಢವಾಗುವ ಉಳಿದವರಿಗೆ ನೆರವಾಗುವ ಹಳ್ಳಿಯಿಂದ ರಾಷ್ಟ್ರ ರಾಜಧಾನಿಯ ತನಕ ಅನಿವಾರ್ಯವಾಗಿರುವ ಸಿಎ ವೃತ್ತಿ ಆಯ್ಕೆ ಮಾಡಿ ಕಠಿಣ ಪರಿಶ್ರಮದಿಂದ ಮುಂದುವರಿದರೆ ನಿಮ್ಮೆಲ್ಲರ ಭವಿಷ್ಯ ಭದ್ರವಾಗುವುದು ಅಲ್ಲದೆ ಉಳಿದ ವೃತ್ತಿಗಳ ಸರಿಯಾದ ಆಯ್ಕೆ ನಿಮ್ಮ ಮುಂದಿನ ನಡೆಗಳನ್ನು ಬಲಿಷ್ಠಗೊಳಿಸುವುದು ಎಂದರು. ಬಳಿಕ ಭಾರತೀಯ ಸನದಿ ಲೆಕ್ಕಿಗರ ಸಂಘದ ವತಿಯಿಂದ ಸಿಎ ಆಕಾಶ್‌ದೀಪ್ ಹಾಗೂ ಸಿಎ ವೃಂದಾ ಕೊನ್ನರ್ ಅವರಿಂದ ವಾಣಿಜ್ಯ ವಿಭಾಗ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲಾಯಿತು. ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಖಿತಾ ಸ್ವಾಗತಿಸಿ ಅದಿತಿ ಕಾರ್ಯಕ್ರಮ ನಿರೂಪಿಸಿದರು.

15ನೇ ಆವೃತ್ತಿಯ ಆಳ್ವಾಸ್ ಪ್ರಗತಿ 2873 ಮಂದಿಗೆ ಉದ್ಯೋಗ, 288 ಕಂಪನಿಗಳು ಭಾಗಿ

Article Image

15ನೇ ಆವೃತ್ತಿಯ ಆಳ್ವಾಸ್ ಪ್ರಗತಿ 2873 ಮಂದಿಗೆ ಉದ್ಯೋಗ, 288 ಕಂಪನಿಗಳು ಭಾಗಿ

ಮೂಡುಬಿದಿರೆ: 15ನೇ ಆವೃತ್ತಿಯ "ಆಳ್ವಾಸ್ ಪ್ರಗತಿ" ಬೃಹತ್ ಉದ್ಯೋಗ ಮೇಳ ಆಗಸ್ಟ್ 2 ರಂದು ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಸಮಾಪನಗೊಂಡಿತು. ಎರಡು ದಿನಗಳ ಕಾಲ ನಡೆದ ಉದ್ಯೋಗ ಮೇಳದಲ್ಲಿ, 2873 ಉದ್ಯೋಗಾಕಾಂಕ್ಷಿಗಳನ್ನು ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಯಿತು. ಭಾಗವಹಿಸಿದ ಒಟ್ಟು 288 ಕಂಪನಿಗಳ ಪೈಕಿ 260 ಕಂಪೆನಿಗಳು, 3734 ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಒಟ್ಟು 14,245 ಅಭ್ಯರ್ಥಿಗಳು 2 ದಿನದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದರು. ದುಬೈ ಮೂಲದ ಫಾರ್ಚುನ್ ಸಂಸ್ಥೆಯು 5 ಅಭ್ಯರ್ಥಿಗಳನ್ನು 5 ರಿಂದ 8 ಲಕ್ಷ ವಾರ್ಷಿಕ ವೇತನದ ಹುದ್ದೆಗೆ ಆಯ್ಕೆ ಮಾಡಿದ್ದು, 25 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಗೊಂಡಿದ್ದಾರೆ. ನಾರಾಯಣ ಹೃದಯಾಲಯವು 43 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಮತ್ತು ಅಂತಿಮ ಸುತ್ತಿನ ಸಂದರ್ಶನಕ್ಕೆ 28 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದೆ. ಝೀ ಎಂಟರ್‌ಟೈನ್‌ಮೆಂಟ್ ಕಂಪೆನಿಯು ಅಂತಿಮ ಸುತ್ತಿಗೆ 11 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸೌದಿ ಅರೇಬಿಯಾ ಮೂಲದ ಎಕ್ಪರ್ಟೈಸ್ ಕಂಪೆನಿಯು 37 ಜನರನ್ನು ನೇಮಿಸಿಕೊಂಡಿದೆ. ಮುಂಬೈ ಮೂಲದ ಆಲ್‌ಕಾರ್ಗೋ ಲಾಜಿಸ್ಟಿಕ್ಸ್ 3 ರಿಂದ 5 ಲಕ್ಷ ವರೆಗಿನ ವಾರ್ಷಿಕ ವೇತನವಿರುವ ಹುದ್ದೆಗಳಿಗೆ 9 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ತೇಜಸ್ವಿನಿ ಗ್ರೂಪ್ಸ್ ವಾರ್ಷಿಕ 6 ಲಕ್ಷ ಪ್ಯಾಕೇಜ್‌ಗೆ 11 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇನ್‌ಫೋಸಿಸ್ ಬಿಪಿಎಂ ಕಂಪೆನಿಯು 79 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕೋಡ್‌ಯಂಗ್ ಸಂಸ್ಥೆಯು 20 ಅಭ್ಯರ್ಥಿಗಳನ್ನು 4.36 ದಿಂದ 8.36 ಲಕ್ಷದ ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿಕೊಂಡಿದೆ.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಜೆಕ್ಟ್‌ಗೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ

Article Image

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಜೆಕ್ಟ್‌ಗೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಂದನ್ ಬಿ.ಎಂ, ಉಸ್ಮಾ, ಪ್ರೇಕ್ಷಾ ಹಾಗೂ ಸಾವನ್ ಶೆಟ್ಟಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಶಿವಮೊಗ್ಗದ ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಆಯೋಜಿಸಿದ್ದ 48ನೇ ಸರಣಿಯ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಅವರು ತಯಾರಿಸಿದ ಪ್ರಾಜೆಕ್ಟ್‌ಗೆ ‘ವರ್ಷದ ಅತ್ಯುತ್ತಮ ಪ್ರಾಜೆಕ್ಟ್’ ಪ್ರಶಸ್ತಿ ಲಭಿಸಿತು. ಒಟ್ಟು ಈ ವಿಭಾಗದಲ್ಲಿ 496 ಪ್ರಾಜೆಕ್ಟ್‌ಗಳು ಸ್ಪರ್ಧೆಗೆ ಆಗಮಿಸಿದ್ದವು. ಮೆಕ್ಕುಜೋಳದ ಒಣಗಿದ ಸಿಪ್ಪೆಯಿಂದ ಕಪ್ ತಯಾರಿಕಾ ಯಂತ್ರದ ಅಭಿವೃದ್ಧಿಗಾಗಿ ಈ ಪ್ರಶಸ್ತಿ ಪಡೆದುಕೊಂಡರು. ಪರಿಸರ ಸ್ನೇಹಿ ಆವಿಷ್ಕಾರ ಮತ್ತು ದಕ್ಷತೆಯ ಹಿನ್ನೆಲೆಯಲ್ಲಿ ಈ ಪ್ರಾಜೆಕ್ಟ್ ಮೌಲ್ಯಮಾಪನಾ ಸಮಿತಿಯ ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು. ಈ ಪ್ರಾಜೆ‌ಕ್ಟ್‌ಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಕೆ. ವಿ. ಸುರೇಶ್ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಶ್ಲಾಘಿಸಿದ್ದಾರೆ. ರೈತರಿಗೆ ಉಪಯೋಗವಾಗುವ ಯಂತ್ರ: 10 ರಿಂದ 12 ಡಿಗ್ರಿ ಬಿಸಿ ನೀರನ್ನು 4 ಗಂಟೆ, ತಣ್ಣೀರನ್ನು 5 ರಿಂದ 6 ಘಂಟೆ ಶೇಖರಿಸಬಹುದಾಗಿದೆ. ಒಂದು ಕಪ್‌ಗೆ 59ಪೈಸೆ ಖರ್ಚಾಗಲಿದ್ದು, ಒಂದು ರೂಪಾಯಿಗೆ ಮಾರಾಟ ಮಾಡಿದರೂ 41 ಪೈಸೆಯನ್ನು ಉಳಿಸಬಹುದಾಗಿದೆ. ಈ ಯಂತ್ರ ಒಂದು ಗಂಟೆಗೆ 114 ಕಪ್‌ಗಳನ್ನು ಉತ್ಪಾದನೆ ಮಾಡಬಲ್ಲದು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿ

ತೀವ್ರವಾದ ಬೆನ್ನುನೋವಿನಿಂದ ನಡೆಯಲು ಕಷ್ಡಪಡುತ್ತಿದ್ದ 58 ವರ್ಷ ವಯಸ್ಸಿನ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ಆಗಮಿಸಿದ್ದರು. ಇಲ್ಲಿನ ವೈದ್ಯರು ಪರೀಕ್ಷಿಸಿದಾಗ ಬೆನ್ನುಮೂಳೆಯಲ್ಲಿ ಸಮಸ್ಯೆ ಇರುವ ಬಗ್ಗೆ ತಿಳಿಯಿತು. ಕನಿಷ್ಟ ಆಕ್ರಮಣಕಾರಿ (Minimal invasive) ಸರ್ಜರಿ ಮತ್ತು ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆಯುತ್ತಿರುವ, ಈಗಾಗಲೇ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಅನುಭವ ಹೊಂದಿರುವ ಇಲ್ಲಿನ ಮೂಳೆ ಶಸ್ತ್ರಚಿಕಿತ್ಸಕರಾಗಿರುವ ಡಾ| ಶತಾನಂದ ಪ್ರಸಾದ್ ರಾವ್ ರೋಗಿಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಈ ಮಹಿಳೆಯ ಎದೆಗೂಡಿನ ಬೆನ್ನುಮೂಳೆಯ ಭಾಗವಾಗಿರುವ ಡಿ-10 ಕಶೇರುಖಂಡದ ಮುರಿತವಾಗಿರುವುದು ಕಂಡುಬಂದಿತ್ತು. ಸಮಸ್ಯೆಯನ್ನು ಖಚಿತಪಡಿಸಿಕೊಂಡ ವೈದ್ಯರು ಕನಿಷ್ಟ ಆಕ್ರಮಣಕಾರಿ ಮೂಲಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅರೆವಳಿಕೆ ತಜ್ಞರಾದ ಡಾ| ಸುಪ್ರೀತ್ ಶೆಟ್ಟಿ ಸಹಕರಿಸಿದರು. ಪ್ರಸ್ತುತ ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ| ಶತಾನಂದ ಪ್ರಸಾದ್ ರಾವ್ ತಿಳಿಸಿದರು. ಡಾ| ಶತಾನಂದ ಪ್ರಸಾದ್ ರಾವ್ ಇವರು ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆದಿರುವ ಖ್ಯಾತ ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಮಹೇಶ್. ಕೆ, ಇವರ ಜೊತೆಗೂಡಿ ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಇಂಟ್ರಾ ಡ್ಯೂರಲ್ ಸ್ಪೈನಲ್ ಟ್ಯೂಮರ್ ಶಸ್ತ್ರಚಿಕಿತ್ಸೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಈ ಬಾರಿ ಸ್ವತಂತ್ರವಾಗಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿಯನ್ನು ನಡೆಸಿದ್ದಾರೆ. ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ, ನುರಿತ ತಜ್ಞ ವೈದ್ಯರ ತಂಡದಿಂದ ಇಲ್ಲಿ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಬಾಯಿಯ ನೈರ್ಮಲ್ಯ ದಿನಾಚರಣೆ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಬಾಯಿಯ ನೈರ್ಮಲ್ಯ ದಿನಾಚರಣೆ

ಎಸ್.ಡಿ.ಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಸಡು ಶಾಸ್ತ್ರ ವಿಭಾಗದಲ್ಲಿ ರಾಷ್ಟ್ರೀಯ ಬಾಯಿಯ ನೈರ್ಮಲ್ಯ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ. ಲೇಖಾ ಮತ್ತು ಡಾ. ಆನಂದ್ ತಾವರಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಡಾ. ಸ್ವಾತಿ ಸೆಟ್ಟಿ,ಡಾ ಲೀನಾ ಹಾಗೂ ಇತರ ಶಿಕ್ಷಕ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಿಂಗಳಾದ್ಯಂತ ಹಮ್ಮಿಕೊಂಡಿದ್ದ ಹಲವರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು . ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಪ್ರಭಾವಶೀಲವಾದ ಬಾಯಿಯ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ನಾಟಕ ವಿಶೇಷ ಗಮನ ಸೆಳೆಯಿತು. ಆರೋಗ್ಯ ಕಾರ್ಯ ಚಟುವಟಿಕೆಯ ಭಾಗವಾಗಿ ರೋಗಿಗಳಿಗೆ ಓರಲ್ ಹೈಜಿನ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಉಜಿರೆ: ಸಾರ್ವಜನಿಕರಿಗಾಗಿ ಹೃದಯ ಪುನಶ್ಚೇತನ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

Article Image

ಉಜಿರೆ: ಸಾರ್ವಜನಿಕರಿಗಾಗಿ ಹೃದಯ ಪುನಶ್ಚೇತನ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಧರ್ಮಸ್ಥಳ ಇವರ ಸಂಯುಕ್ತ ಆಶ್ರಯದಲ್ಲಿ 27 ಜುಲೈ 2025 ರಂದು CPR (Cardiopulmonary Resuscitation) ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಅಗಸ್ಟೀನ್ ಟಿ.ಎ. ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರೆವ್. ಫಾ. ಸುನಿಲ್ ಪೂವತಿಂಗಲ್ ಉಪಸ್ಥಿತರಿದ್ದರು. ತರಬೇತಿಯನ್ನು ನೀಡಲು ಎಸ್.ಡಿ.ಎಂ ಮಲ್ಟಿಸ್ಪೆಲಾಲಿಟಿ ಆಸ್ಪತ್ರೆಯ ನರ್ಸಿಂಗ್ ಸೂಪೆರಿಂಟೆಂಡೆಂಟ್ ಶೆರ್ಲಿ ಮತ್ತು ಅವರ ವೈದ್ಯಕೀಯ ತಂಡ ಹಾಜರಿದ್ದರು. ಅವರು ಸಾಮಾನ್ಯ ಜನರಿಗೆ CRP ತಂತ್ರಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಪ್ರಾಯೋಗಿಕವಾಗಿ ತರಬೇತಿಯನ್ನೂ ನೀಡಿದರು. ಸಂಘದ ಕಾರ್ಯದರ್ಶಿ ಶಿಜೋ ಜೋಸೆಫ್ ಸ್ವಾಗತ ಭಾಷಣ ಮಾಡಿದರು, ನಿರೂಪಣೆಯನ್ನು ನಿರ್ವಹಿಸಿದರು. ಉಪಾಧ್ಯಕ್ಷ ಮ್ಯಾಥ್ ವಿ.ಟಿ., ಕೋಶಾಧಿಕಾರಿ ರಂಜಿತ್ ಪಿ.ಎಸ್., ಸಂಘದ ಇತರ ಸದಸ್ಯರು ಹಾಗೂ ಊರಿನ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾಹಿತಿ ಮತ್ತು ತರಬೇತಿಯನ್ನು ಪಡೆದುಕೊಂಡರು. ಈ ಕಾರ್ಯಕ್ರಮ ಜನಜಾಗೃತಿ ಮೂಡಿಸಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಅತ್ಯಂತ ಪರಿಣಾಮಕಾರಿ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

ಮಕ್ಕಳ ಶಸ್ತ್ರಚಿಕಿತ್ಸಕರ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನ

Article Image

ಮಕ್ಕಳ ಶಸ್ತ್ರಚಿಕಿತ್ಸಕರ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯು ಭಾರತೀಯ ಮಕ್ಕಳ ಶಸ್ತ್ರಚಿಕಿತ್ಸೆ ಸಂಘ, ಕರ್ನಾಟಕ ರಾಜ್ಯ ಅಧ್ಯಾಯದ ಆಶ್ರಯದಲ್ಲಿ ಮಕ್ಕಳ ಶಸ್ತ್ರಚಿಕಿತ್ಸಕರ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಶೈಕ್ಷಣಿಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಮಕ್ಕಳ ಶಸ್ತ್ರಚಿಕಿತ್ಸಕರು ಭಾಗವಹಿಸಲಿದ್ದಾರೆ. ಸಮ್ಮೇಳನವು ಆಗಸ್ಟ್ 8 ರಿಂದ 10, 2025 ರವರೆಗೆ ನಡೆಯಲಿದೆ. ಆಗಸ್ಟ್ 8 ರಂದು, ಮಕ್ಕಳಲ್ಲಿ ಮೂತ್ರಪಿಂಡದ ಕಲ್ಲುಗಳಿಗೆ (Kidney Stone) ಸಂಬಂಧಿಸಿದ ಕಾರ್ಯಾಗಾರವನ್ನು ನಡೆಸಲಾಗುವುದು. ಆಗಸ್ಟ್ 9 ಮತ್ತು 10, 2025 ರಂದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೈದ್ಯರಿಂದ ಅನೇಕ ಭಾಷಣಗಳು ನಡೆಯಲಿವೆ. ಈ ಸಮ್ಮೇಳನವು ಮಕ್ಕಳ ಶಸ್ತ್ರಚಿಕಿತ್ಸಕರಿಗೆ ತನ್ನ ರೋಗಿಗಳಿಗೆ ಚಿಕಿತ್ಸೆ ನೀಡಲು, ಹೆಚ್ಚು ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದ ಅಧ್ಯಕ್ಷರು, ಡಾ| ಅನಿಲ್ ಹಲಗೇರಿ ಬಿ, ಡಾ| ವಿಜಯ್ ಪೂಜಾರ್ ಸಿ ಮತ್ತು ಡಾ| ರಾಜಶಂಕರ್ ಸಂಕಲ್. ಕಾರ್ಯದರ್ಶಿಗಳಾಗಿರುವ, ಡಾ| ಅಕ್ಷಯ್ ಕಲವಂತ್ ಬಿ, ಡಾ| ರವೀಂದ್ರ ಜಿ ಖಾಸ್ನಿಸ್ ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ - ಪ್ರೇರಣಾ ದಿವಸ್ 2025

Article Image

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ - ಪ್ರೇರಣಾ ದಿವಸ್ 2025

ಮೂಡುಬಿದಿರೆ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ-‘ಪ್ರೇರಣಾ ದಿವಸ್ 2025’ ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್‌ಚಾಂದ್ ಗೆಹ್ಲೋಟ್, ಶಿಕ್ಷಣ ಕ್ಷೇತ್ರಕ್ಕೆ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಶಿಕ್ಷಕರೆಲ್ಲರೂ ಸದಾ ಸ್ಮರಣಿಯರು ಹಾಗೂ ಅನುಕರಣನೀಯರು. ಜ್ಞಾನ, ಸಂಸ್ಕಾರ ಹಾಗೂ ನೈತಿಕ ಮೌಲ್ಯವನ್ನು ನೀಡುವವರು ಶಿಕ್ಷಕರು. ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ಜೊತೆಯಲ್ಲಿ ಜೀವನದ ದಾರಿಯನ್ನು ತೋರಿಸುತ್ತಾರೆ. ದೀಪ ಹೇಗೆ ಕತ್ತಲೆಯನ್ನು ದೂರ ಮಾಡುತ್ತದೋ ಹಾಗೆ ಶಿಕ್ಷಕರು ಜ್ಞಾನ, ಮೌಲ್ಯ ಹಾಗೂ ಸಂಸ್ಕಾರದ ಮೂಲಕ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಾರೆ. ಆ ಮೂಲಕ ಸಮಾಜದ ಬೆಳವಣಿಗೆಗೆ ಕಾರಣರಾಗುತ್ತಾರೆ. ಪ್ರಾಚೀನ ಕಾಲದ ಚಾಣಕ್ಯನಾಗಿರಬಹುದು ಅಥವಾ ಆಧುನಿಕ ಕಾಲದ ಸರ್ವಪಳ್ಳಿ ರಾಧಾಕೃಷ್ಣರಿರಬಹುದು, ಅವರೆಲ್ಲರೂ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ ಸಮಾಜದ ನಿರ್ಮಾಣಕ್ಕೂ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಿಕ್ಷಕ ರಾಷ್ಟ್ರ ನಿರ್ಮಾಣದ ಶಿಲ್ಪಿ. ತಂತ್ರಜ್ಞಾನದ ಬೆಳವಣಿಗೆಯ ಈ ಕಾಲ ಘಟ್ಟದಲ್ಲಿ ಶಿಕ್ಷಕರ ಪಾತ್ರ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಮೌಲ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುವ, ವಿದ್ಯಾರ್ಥಿ ಕೇಂದ್ರಿತ, ನವಯುಗದ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಕವೃಂದ ನಮ್ಮದಾಗಬೇಕು ಎಂದು ಆಶಿಸಿದರು. ಹೊಸ ದಿಗಂತ ಪತ್ರಿಕೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಕಾಶ್ ಪಿಎಸ್ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ದೇಶ ಅಥವಾ ಸಮಾಜ ಶಿಕ್ಷಣದಿಂದ ರೂಪಿತವಾಗಬೇಕು. ಸಮಾಜದ ನಡೆ ಶಿಕ್ಷಣದಿಂದ ನಿರ್ಧರಿತವಾಗಬೇಕು. ಸತ್ಯದ ದಾರಿಯಲ್ಲಿ ಮೌಲ್ಯವನ್ನು ಹೆಚ್ಚಿಸುವುದೇ ಶಿಕ್ಷಣ. ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಆಸ್ಥೆಯ, ಅಪರಿಗ್ರಹದಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಸ್ವಾಭಿಮಾನಿ ಸಮಾಜ ನಿರ್ಮಾಣವಾಗಬೇಕೆಂದರೆ ಅಂತಹ ಶಿಕ್ಷಣ ನೀಡಬೇಕು ಎಂದರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್ ಡಾ. ಹೆಚ್ ಎಸ್ ಬಲ್ಲಾಳ್ ಹಾಗೂ ಸರಸ್ವತಿ ಸಮೂಹ ವಿದ್ಯಾಸಂಸ್ಥೆ ಮೇಘಾಲಯದ ಸ್ಥಾಪಕರು ಹಾಗೂ ಸಂವಿಧಾನ ತಜ್ಞ ಡಾ. ಅನಂತಕೃಷ್ಣ ಭಟ್‌ರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್, ಡಾ ಹೆಚ್ ಎಸ್ ಬಲ್ಲಾಳ, ಈ ತರಹದ ಗುರುತಿಸುವಿಕೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಪ್ರೇರೆಪಿಸುತ್ತದೆ. ಹುಟ್ಟು ಸಾವಿನ ನಡುವೆ ಏನು ಮಾಡುತ್ತೇವೆ ಎನ್ನುವುದು ಮುಖ್ಯ. ಇನ್ನೊಬ್ಬರಿಗಾಗಿ ಬದುಕಿದರೆ, ಅದೇ ಶ್ರೇಷ್ಠ ಬದುಕು ಎಂದು ನುಡಿದರು. ಕಾಲೇಜು ಆಡಳಿತ ನಿರ್ವಹಣೆಯಲ್ಲಿನ ಸಾಧನೆಗಾಗಿ ಅತ್ಯುತ್ತಮ ಆಡಳಿತ ನಿರ್ವಾಹಕ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಪ್ರಾಚರ‍್ಯ ಡಾ ಕುರಿಯನ್ ಹಾಗೂ ಮಂಗಳೂರಿನ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಇವರಿಗೆ ನೀಡಲಾಯಿತು. ಸಂಶೋಧನ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧಕ ಪ್ರಶಸ್ತಿಗೆ ಮಣಿಪಾಲ್ ಯೂನಿವರ್ಸಿಟಿಯ, ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರೊ. ಹರೀಶ್ ಜೋಶಿ ಹಾಗೂ ಎಜೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶಾಂತರಾಮ ರೈ ಸಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕಿ ಡಾ ಸುಭಾಷಿಣಿ ಶ್ರೀವತ್ಸ ಹಾಗೂ ಅಜ್ಜರಕಾಡಿನ ಡಾ ಜಿ ಶಂಕರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ರಾಜೇಂದ್ರ ಪಿ ಇವರಿಗೆ ನೀಡಲಾಯಿತು. ಅತ್ಯುತ್ತಮ ಗ್ರಂಥಪಾಲಕ ವಿಭಾಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರೊ. ವಿಜಯಲತಾ ಹಾಗೂ ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯಶೋಧರಿಗೆ ನೀಡಿ ಗೌರವಿಸಲಾಯಿತು. ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿಯನ್ನು ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಡಾ. ರಾಧಾಕೃಷ್ಣ ಹಾಗೂ ವಿರಾಜಪೇಟೆಯ ಕಾವೇರಿ ಕಾಲೇಜಿನ ತಮ್ಮಯ್ಯರಿಗೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 2025ನೇ ಸಾಲಿನಲ್ಲಿ ಪಿಹೆಚ್‌ಡಿ ಪದವಿ ಪಡೆದ ಸಂಶೋಧನಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ಮಂಗಳೂರು ವಿವಿಯ ಕುಲಸಚಿವ ಡಾ ಪಿಎಲ್ ಧರ್ಮಾ, ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕೆಆರ್‌ಎಂಎಸ್‌ಎಸ್ ರಾಜ್ಯಾಧ್ಯಕ್ಷ ಡಾ. ಗುರುನಾಥ ಬಡಿಗೇರ್, ಕೆಆರ್‌ಎಂಎಸ್‌ಎಸ್‌ನ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ. ಕೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ ಮಹಾದೇಶ ಸಿ, ಡಾ ಎಸ್ ಬಿ ಎಂ ಪ್ರಸನ್ನ, ಕೆಆರ್‌ಎಂಎಸ್‌ಎಸ್‌ನ ಮಂಗಳೂರು ವಿಭಾಗದ ಅಧ್ಯಕ್ಷೆ ವಾಣಿ ಯುಎಸ್, ಕಾರ‍್ಯದರ್ಶಿ ರಾಜೇಶ್ ಇದ್ದರು. ಕೆಆರ್‌ಎಂಎಸ್‌ಎಸ್‌ನ ಮಮತಾ ಶೆಟ್ಟಿ ಹಾಗೂ ವೆಂಕಟೇಶ್ ನಾಯಕ್ ಕಾರ‍್ಯಕ್ರಮ ನಿರೂಪಿಸಿ ಜಯಲಕ್ಷ್ಮಿ ಶೆಟ್ಟಿ ವಂದಿಸಿದರು.

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಕುರಿತು ವಿಶೇಷ ಉಪನ್ಯಾಸ

Article Image

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಕುರಿತು ವಿಶೇಷ ಉಪನ್ಯಾಸ

ಎಸ್.ಡಿ.ಎಂ. ಬಯೋಮೆಡಿಕಲ್ ಸೈನ್ಸಸ್ ಇನ್‌ಸ್ಟಿಟ್ಯೂಟ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳ ರಾಷ್ಟ್ರೀಯ ಸ್ವಯಂ ಸೇವಕ ಘಟಕಗಳು ಜಂಟಿಯಾಗಿ ಜುಲೈ 24, 2025ರಂದು ಅಂತರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಿತು. ಸಹ ಉಪ ಕುಲಪತಿಗಳು (ಆಡಳಿತ) ಶ್ರೀ ವಿ. ಜೀವಂಧರ್ ಕುಮಾರ್ ಮತ್ತು ಇತರ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಬ್ಬಳ್ಳಿ-ಧಾರವಾಡ ನಗರದ ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯಗಳ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಡಾ. ಶಿವರಾಜ್ ಕೆ. ಕಟಕಭಾವಿ ಮತ್ತು ಹುಬ್ಬಳ್ಳಿಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಮಾದಕವಸ್ತು ವಿಭಾಗದ ವೈಜ್ಞಾನಿಕ ಅಧಿಕಾರಿ ಡಾ. ಮಂಜುನಾಥ್ ಸುಣಗಾರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಡಾ. ಶಿವರಾಜ್ ಕಟಕಭಾವಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ; ವಿದ್ಯಾರ್ಥಿಗಳು ಶ್ರಮವಹಿಸಿ ಕಲಿಯುವ ಮುಖೇನ ಸಂತೃಪ್ತಿಯನ್ನು ಪಡೆಯಬೇಕು. ನಮ್ಮ ಯುವ ಪೀಳಿಗೆಯು ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗದೇ ಅದರಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವುದಲ್ಲದೇ ಇಡೀ ಕುಟುಂಬದ ಶಾಂತಿಯನ್ನು ಹಾಳು ಮಾಡುತ್ತದೆ. ವಿಷಕಾರಕವಾದ ಮಾದಕ ವಸ್ತುಗಳ ಸೇವನೆಯಿಂದ ಹಂತ ಹಂತವಾಗಿ ದೇಹದ ಎಲ್ಲಾ ಅಂಗಗಳನ್ನು ಹಾನಿಗೊಳಗಾಗುತ್ತವೆ. ಕ್ಷಣಿಕ ಸಂತೋಷಕ್ಕಾಗಿ ಅಮೂಲ್ಯವಾದ ನಮ್ಮ ಜೀವನವನ್ನು ಹಾಳುಮಾಡಿಕೊಳ್ಳಬಾರದು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಶಿಕ್ಷಣ ಮತ್ತು ಇಡೀ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ವ್ಯವಹಾರದಲ್ಲಿ ತೊಡಗಿಕೊಳ್ಳುವ ಯಾವುದೇ ರೀತಿಯ ಅಪರಾಧ ಕೃತ್ಯಗಳ ಬಗ್ಗೆ ನಾವು ಯೋಚಿಸಬಾರದು. ನಾವೆಲ್ಲರೂ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆಯ ಕುರಿತಾದ ಕಾನೂನುಗಳನ್ನು ಅನುಸರಿಸಬೇಕು. ಭಾರತವನ್ನು ಮಾದಕ ವಸ್ತುಗಳ ಮುಕ್ತ ದೇಶವನ್ನಾಗಿ ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು. ಆರೋಗ್ಯಕರ ಶೈಕ್ಷಣೀಕ ಪರಿಸರ ಹೊಂದಲು ಆತಂರಿಕ ಮಾದಕ ವಸ್ತು ವಿರೋಧಿ ಸಮಿತಿಯನ್ನು ರಚಿಸಲು ಸಲಹೆ ಮಾಡಲಾಯಿತು. ಡಾ. ಮಂಜುನಾಥ್ ಸುಣಗಾರ ಅವರು ವಿವಿಧ ಮಾದಕ ದ್ರವ್ಯ ವಸ್ತುಗಳ ಪರಿಚಯ, ಸೇವನೆಯ ದುಷ್ಪರಿಣಾಮ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಮುಂಜಾಗೃತಿಯನ್ನು ಮೂಡಿಸಿದರು. ಡಾ. ಶಿವರಾಜ್ ಕಟಕಭಾವಿ ಮತ್ತು ಡಾ. ಮಂಜುನಾಥ್ ಸುಣಗಾರ ಅವರನ್ನು ಎಸ್.ಡಿ.ಎಂ. ಸಂಸ್ಥೆವತಿಯಿಂದ ಗಣ್ಯರು ಸನ್ಮಾನಿಸಿದರು. ಸಂಶೋಧನಾ ನಿರ್ದೇಶಕ ಡಾ. ಕೆ. ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ, ಡಾ. ಅಜಯಕುಮಾರ್ ಓಲಿ ಮತ್ತು ಪ್ರಸನ್ನ ದೇಶಪಾಂಡೆ, ಎನ್.ಎನ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ. ರೇಣುಕಾರಾಧ್ಯ ಕೆ. ಮಠ, ಅಧ್ಯಾಪಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಮೇಘನಾ ಹೆಗ್ಡೆ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಮೈಜಾ ಶಿಬಾರಗಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಸುಸ್ಥಿರ ಆರೋಗ್ಯಕ್ಕೆ ಸ್ವಚ್ಛ ಪರಿಸರ : ರಶ್ಮಿತಾ ಜೈನ್

Article Image

ಸುಸ್ಥಿರ ಆರೋಗ್ಯಕ್ಕೆ ಸ್ವಚ್ಛ ಪರಿಸರ : ರಶ್ಮಿತಾ ಜೈನ್

ಕಲ್ಲಬೆಟ್ಟು  : ನೆಲ, ಜಲ, ಪ್ರಕೃತಿಯ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಉಸಿರಾಡುವುದಕ್ಕೆ ಹಸಿರು ಪ್ರಕೃತಿಯ ಅವಶ್ಯಕತೆ ಇದೆ.  ಸದೃಢ ಆರೋಗ್ಯಕ್ಕೆ ಸ್ವಚ್ಛ ಪರಿಸರ ಅತ್ಯಗತ್ಯ. ಇಂದು ನಾವು ನೆಡುವ ಗಿಡಗಳು ಮುಂದಿನ ಪೀಳಿಗೆಗೆ ವರದಾನವಾಗಬೇಕು. ಯುವ ಪೀಳಿಗೆ ಕ್ರಿಯಾಶೀಲವಾದಷ್ಟು ಹಿರಿಯರಿಂದ ಪ್ರೋತ್ಸಾಹ ದೊರಕುತ್ತದೆ. ಪರಿಸರ ಸಂರಕ್ಷಣೆಯತ್ತ ವಿದ್ಯಾರ್ಥಿಗಳ ಮನೋಭಾವ ಬೆಳೆಸುವ ನಿಟ್ಟಿನಲ್ಲಿ, ಸಾಮಾಜಿಕ ಜಾಗೃತಿ ಮೂಡಿಸುವ ನೆಲೆಯಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆ “ಸಸ್ಯ ಶ್ಯಾಮಲಾ” ಎಂಬ ಶೀರ್ಷಿಕೆಯಡಿ ಮೂಡುಬಿದಿರೆ ಸುತ್ತಮುತ್ತ ಪರಿಸರದಲ್ಲಿ 1000 ಗಿಡಗಳನ್ನು  ನೆಟ್ಟು ಸಂರಕ್ಷಿಸುವ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದೆ. ಸಾಮಾಜಿಕ ಜಾಗೃತಿಯ ಘೋಷ ವಾಕ್ಯಗಳು ನಮ್ಮ ಮನಸ್ಸಿನಲ್ಲಿ ಉತ್ಸಾಹವನ್ನು ತುಂಬಿ ದೈನಂದಿನ ಬದುಕಿನಲ್ಲಿ ಹೃದಯಪೂರ್ವಕವಾಗಿ ಆಚರಣೆಗೆ ತಂದಾಗ ಅರ್ಥಪೂರ್ಣ ಕಾರ್ಯಕ್ರಮ ವಾಗುತ್ತದೆ. ಮತ್ತು ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಾಮಾಜಿಕ ಕರ್ತವ್ಯಗಳ ಬಗ್ಗೆ ಯೋಚಿಸುತ್ತ  ಕಾರ್ಯ ಪ್ರವೃತ್ತರಾದಾಗ ಸ್ವಚ್ಛ ಪರಿಸರ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು. ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, ಮೂಡುಬಿದಿರೆರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್’, ಜವಾಹರಲಾಲ್ ನೆಹರು ಪ್ರೌಢಶಾಲೆ, ಶಿರ್ತಾಡಿ, ಜೀವ ನಿಧಿ ಸೇವಾ ಬಳಗ ಆರ್.ಸಿ.ಸಿ. ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸಸ್ಯ ಶ್ಯಾಮಲಾ ವನಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‌ನ ಅಧ್ಯಕ್ಷ ರೊ. ಹರೀಶ್ ಎಂ.ಕೆ. ಅವರು ಮಾತನಾಡುತ್ತ ಎಕ್ಸಲೆಂಟ್ ಸಂಸ್ಥೆಯು ಸಸ್ಯ ಶಾಮಲಾ ಯೋಜನೆಯ ಮೂಲಕ ಜನ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಈ ರೀತಿಯ ಸಾಮಾಜಿಕ ಚಟುವಟಿಕೆಗಳಿಗೆ ರೋಟರಿ ಸಂಸ್ಥೆ ಸದಾ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸುತ್ತ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿಯ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಯ ಆವರಣದಲ್ಲಿ ನೆಟ್ಟ ಗಿಡಗಳ ಸಂರಕ್ಷಣೆಯ ಹೊಣೆಗಾರಿಕೆಗೆ ವಿದ್ಯಾರ್ಥಿಗಳ ತಂಡವನ್ನು ರಚಿಸಿದರು. ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಆಗ್ನೆಸ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಜನಾರ್ದನ ಸೇರಿಗಾರ್, ಜೀವ ನಿಧಿ ಸೇವಾ ಬಳಗ ಆರ್.ಸಿ.ಸಿ.ಯ ಅಧ್ಯಕ್ಷ ಶಶಿಧರ್ ದೇವಾಡಿಗ ಗೆಂದೊಟ್ಟು, ರಾಷ್ಟ್ರ ಸೇವಿಕಾ ಸಮಿತಿಯ ಅಧ್ಯಕ್ಷೆ ಮೂಕಾಂಬಿಕಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಸ್ವಾಗತಿಸಿ. ಎಕ್ಸಲೆಂಟ್ ಸಂಸ್ಥೆಯ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ತೇಜಸ್ವೀ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಶಿಕ್ಷಕಿ ಸುಮಂಗಲಾ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಮಾಲತಿ ವಂದಿಸಿದರು. ಕಾರ್ಯಕ್ರಮದ ನಂತರ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಮತ್ತು ಶಿರ್ತಾಡಿ ಜವಾಹರಲಾಲ್ ನೆಹರೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಕ್ಸಲೆಂಟ್ ಸಂಸ್ಥೆ ಒದಗಿಸಿದ ವಿವಿಧ ತಳಿಯ ಗಿಡಗಳನ್ನು ಶಾಲೆಯ ನೆಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಉಜಿರೆ ಎಸ್.ಡಿ.ಎಂ. ಕಾಲೇಜು ಸಸ್ಯಶಾಸ್ತ್ರ ವಿಭಾಗದಿಂದ ನೇಜಿ ನಾಟಿ ಕಾರ್ಯಕ್ರಮ

Article Image

ಉಜಿರೆ ಎಸ್.ಡಿ.ಎಂ. ಕಾಲೇಜು ಸಸ್ಯಶಾಸ್ತ್ರ ವಿಭಾಗದಿಂದ ನೇಜಿ ನಾಟಿ ಕಾರ್ಯಕ್ರಮ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ಉಜಿರೆಯ ರತ್ನಮಾನಸದಲ್ಲಿ ಜು.20ರಂದು ನೇಜಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರತ್ನಮಾನಸದ ಮೇಲ್ವಿಚಾರಕರಾದ ಯತೀಶ್ ಬಳಂಜ ಇವರು ನೇಜಿ ನೆಡುವ ವಿಧಾನ ಹಾಗೂ ಜಗದೀಶ ಮುಂಡಾಜೆ ಇವರು ಭತ್ತದ ಕೃಷಿಯ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಪ್ರಥಮ ಮತ್ತು ತೃತೀಯ ಬಿ.ಎಸ್ಸಿಯ ಸುಮಾರು 25 ವಿದ್ಯಾರ್ಥಿಗಳು ಉತ್ಸಾಹದಿಂದ ಜೊತೆಗೂಡಿ ನೇಜಿ ನಾಟಿ ಮಾಡಿ ಸಂಭ್ರಮಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಕುಂತಲಾ. ಬಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಭವ್ಯ ನಾಯಕ್ ಮತ್ತು ಮಂಜುಶ್ರೀ ಉಪಸ್ಥಿತರಿದ್ದರು.

ಸ್ಪಟಿಕ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ

Article Image

ಸ್ಪಟಿಕ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ

ವಯೋಸಹಜವಾಗಿ ಮೈಗೂಡುವ ಋಣಾತ್ಮಕ ಚಿಂತನೆಗಳನ್ನು ತೊರೆದಾಗ ಮನಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದು ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಮನಃಶಾಸ್ತ್ರ (ಸ್ನಾತಕೋತ್ತರ) ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ಎಸ್. ಶೆಟ್ಟಿ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.18ರಂದು ಅವರು ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘ ‘ಸ್ಪಟಿಕ’ ಉದ್ಘಾಟಿಸಿ, ‘ಕಾಲೇಜು ಜೀವನದಲ್ಲಿ ಮಾನಸಿಕ ಆರೋಗ್ಯದ ಪೋಷಣೆ’ ಕುರಿತು ಉಪನ್ಯಾಸ ನೀಡಿದರು. ಜೀವನದಲ್ಲಿ ಬರುವ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬರಬೇಕು. ಬದುಕಿನಲ್ಲಿ ಎದುರಾಗುವ ತೊಂದರೆಗಳನ್ನು ಸ್ವೀಕರಿಸಿ, ತಾಳ್ಮೆಯಿಂದ ಚಿಂತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮನಸು ಮತ್ತು ಮೆದುಳಿನ ಸಮತೋಲನ ನಿರ್ವಹಣೆಯಿಂದ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದರು. “ಮನಸ್ಸಿನ ದುಗುಡಗಳನ್ನು ನಮಗೆ ಸೂಕ್ತ ಎನಿಸುವ ವ್ಯಕ್ತಿಯ ಜೊತೆ ಹಂಚಿಕೊಂಡಾಗ ಮಾತ್ರ ಅವುಗಳಿಗೆ ಪರಿಹಾರ ಸಾಧ್ಯ. ನಮ್ಮ ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಗಳಿಗೆ ನಾವು ಯಾವ ರೀತಿ ಸ್ಪಂದಿಸಬೇಕು ಎಂಬುದರ ಬಗ್ಗೆ ನಮಗೆ ಅರಿವಿರಬೇಕು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇದೆ. ಅವುಗಳನ್ನು ಹುಡುಕುವ ತಾಳ್ಮೆ ಮೈಗೂಡಬೇಕು” ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಪ್ರತಿಯೊಂದು ವಿಚಾರಕ್ಕೂ ತಂತ್ರಜ್ಞಾನದ ಮೊರೆ ಹೋಗುವುದನ್ನು ನಿಲ್ಲಿಸಿ ತಮ್ಮ ಮೆದುಳಿಗೆ ಕೆಲಸ ಕೊಡಬೇಕು. ಹಾಗಾದಾಗ ಮಾತ್ರ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಯುವಜನತೆ ಮನಸ್ಸಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಪ್ರತಿ ವಿಷಯಕ್ಕೂ ವಿಷಯವಾರು ಸಂಘ ರಚಿಸಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಮನೋರಂಜನೆಯ ಉದ್ದೇಶಕ್ಕಲ್ಲ. ಬದಲಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಎಂದರು. ರಸಾಯನಶಾಸ್ತ್ರ ವಿಭಾಗವು ಹಿಂದಿನಿಂದಲೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಆ ಯಶಸ್ಸನ್ನು ಮುನ್ನಡೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು. ವಿದ್ಯಾರ್ಥಿಗಳು ತಯಾರಿಸಿದ ‘ಸ್ಪಟಿಕ’ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲೆ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ನಂದ ಕುಮಾರಿ ಕೆ.ಪಿ., ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಮೌಲ್ಯ ಮತ್ತು ಸಿಂಚನ, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಶಾಂತ್ ಸ್ವಾಗತಿಸಿ, ಜೋಷ್ಣಾ ವಂದಿಸಿ, ಅನ್ವಿತಾ ಸೇರಾ ಕಾರ್ಯಕ್ರಮ ನಿರೂಪಿಸಿದರು.

ದ. ಕ. ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಕಾರ್ಯಾಗಾರ

Article Image

ದ. ಕ. ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಕಾರ್ಯಾಗಾರ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಸಂಘ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಾಭಾಗಿತ್ವದಲ್ಲಿ ಒಂದು ದಿನದ ಕಾರ್ಯಾಗಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಎಂ. ಆಳ್ವ ಗಣಿತವು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಎಲ್ಲಾ ತಾರ್ಕಿಕ ವಿಜ್ಞಾನಗಳಿಗೆ ಹೇಗೆ ಅಡಿಪಾಯವನ್ನು ಹಾಕುತ್ತದೆ ಎಂಬುದನ್ನು ಉಲ್ಲೇಖಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಆದರೆ ಜೆ.ಇ.ಇ., ಎನ್.ಎ.ಟಿ.ಎ., ಎನ್.ಡಿ.ಎ., ಬಿ. ನಂತಹ ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಬಂದಾಗ ವಿದ್ಯಾರ್ಥಿಗಳು ಹಿಂದುಳಿಯುತ್ತಾರೆ. ಪಿ.ಯು.ಸಿ. ಮಟ್ಟದಲ್ಲಿ ಫಲಿತಾಂಶಗಳನ್ನು ಹೆಚ್ಚಿಸಲು ಗಣಿತದ ಅಡಿಪಾಯವನ್ನು ಬಲಪಡಿಸಲು ಉಪನ್ಯಾಸಕರು ಕಾರ್ಯ ಪ್ರವೃತರಾಗಬೇಕೆಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ, ಶಿಕ್ಷಕರು ಕೇವಲ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು, ಇಲ್ಲವಾದರೆ ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ (AI) ಶಿಕ್ಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ ಎಂದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ವಿದ್ಯಾರ್ಥಿಗಳು ಗಣಿತದಲ್ಲಿ ಏಕೆ ಹಿಂದುಳಿಯುತ್ತಾರೆ ಎಂಬುದಕ್ಕೆ ಉದಾಹರಣೆಗಳನ್ನು ನೀಡಿದರು. ಗಣಿತ ಮತ್ತು ಭೌತಶಾಸ್ತ್ರವು ಹೇಗೆ ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಡಾ. ಪ್ರಶಾಂತ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ 'ದಿ ಬುಕ್ ಮ್ಯಾಥ್ ಮೇಡ್ ಈಸಿ' ಪುಸ್ತಕದ 8ನೇ ಆವೃತ್ತಿ ಬಿಡುಗಡೆಗೊಳಿಸಲಾಯಿತು. ನಿವೃತ್ತ ಗಣಿತ ಶಿಕ್ಷಕಿ ಸೀತಾ ಹಾಗೂ ಪುಸ್ತಕದ ಸಂಪಾದಕೀಯ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು. ಮುಂಬರುವ ಶೈಕ್ಷಣಿಕ ವರ್ಷದ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಲಾರೆನ್ಸ್ ಸಿಕ್ವೆರಿಯಾ, ಉಪಾಧ್ಯಕ್ಷ ಆದರ್ಶ್ ಚೊಕ್ಕಾಡಿ, ಕಾರ್ಯದರ್ಶಿ ಅನುಪಮಾ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ವರುಣ್ ಪ್ರಭು, ವೆಲಿಟ, ಲೋಹಿತ್ ಸಾಲ್ಯಾನ್ ಹಾಗೂ ಸುಕನ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರನಾಥ್ ಬರ್ವೆ ವಂದಿಸಿದರು.

ಅಡಕೆ ಕೊಳೆರೋಗ ನಿರ್ವಹಣೆಗೆ ರೈತರಿಗೆ ಸಹಾಯಧನ

Article Image

ಅಡಕೆ ಕೊಳೆರೋಗ ನಿರ್ವಹಣೆಗೆ ರೈತರಿಗೆ ಸಹಾಯಧನ

ಮಂಗಳೂರು: ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹಲವೆಡೆ ಅಡಕೆ ಯಲ್ಲಿ ಕೊಳೆರೋಗ ಕಾಣಿಸಿಕೊಂಡಿರುವುದು ತೋಟ ಗಾರಿಕೆ ಇಲಾಖೆಯ ಗಮನಕ್ಕೆ ಬಂದಿದೆ. ಅಡಕೆ ಬೆಳೆಯಲ್ಲಿ ಸಮಗ್ರ ಪೋಷಕಾಂಶ, ಕೀಟ, ರೋಗ ನಿರ್ವಹಣೆ ಸಂಬಂಧ ಗೊಬ್ಬರ, ಸೂಕ್ಷ್ಮ ಪೋಷ ಕಾಂಶ, ಕೀಟನಾಶಕ, ಶಿಲೀಂಧ್ರನಾಶಕಗಳನ್ನು ಖರೀದಿ ಸುವ ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಉಪಯೋಜನೆಯಡಿ ಸಹಾಯಧನ ಸೌಲಭ್ಯ ಲಭ್ಯವಿದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ದ.ಕ. ತೋಟಗಾರಿಕೆ ಉಪ ನಿರ್ದೇಶಕ ಮಂಜುನಾಥ ಡಿ. ತಿಳಿಸಿದ್ದಾರೆ.

ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಿ : ಡಾ. ಮಂಜುನಾಥ್ ಶ್ರೀಪಾದ್ ರೇವಣಕರ್

Article Image

ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಿ : ಡಾ. ಮಂಜುನಾಥ್ ಶ್ರೀಪಾದ್ ರೇವಣಕರ್

ಮೂಡುಬಿದಿರೆ : ಎಕ್ಸಲೆಂಟ್ ಸಿಬಿಎಸ್ಇ ಶಾಲೆಯಲ್ಲಿ 2025 26 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೂರಜ್ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ರೊಟೇರಿಯನ್ ಪಿ.ಎಚ್.ಎಫ್ ಡಾ. ಮಂಜುನಾಥ್ ಶ್ರೀಪಾದ್ ರೇವಣಕರ್ ಇವರು ಆಗಮಿಸಿದ್ದರು. ಗೌರವ ಅತಿಥಿಗಳಾದ ಅಡ್ವೋಕೇಟ್ ಪದ್ಮಪ್ರಸಾದ್ ಜೈನ್, ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಬಿ. ಪಿ. ಸಂಪತ್ ಕುಮಾರ್, ಶಾಲಾ ಪ್ರಾಂಶುಪಾಲರಾದ ಪ್ರಸಾದ್ ಇವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಕೋರಿ ನಾಯಕತ್ವದ ಗುಣವನ್ನು ಎಳವೆಯಲ್ಲಿಯೇ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ರವರು ತಿಳಿಸಿದರು. ಈ ಶುಭ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಯಕತ್ವದ ಗುಣ ದೊಡ್ಡ ಗುಣ. ಶಿಕ್ಷಣದೊಂದಿಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಎಲ್ಲಿ ಸಂಸ್ಕಾರವಿರುತ್ತದೆಯೋ ಅಲ್ಲಿ ಶಿಕ್ಷಣವಿರುತ್ತದೆ ಶಾಲಾ ಸುಧಾರಣೆ ಮಕ್ಕಳ ಕೈಯಲ್ಲಿದೆ ಎಂದು ಮುಖ್ಯ ಅತಿಥಿಗಳಾದ ಡಾ. ಮಂಜುನಾಥ್ ಶ್ರೀಪಾದ್ ರೇವಣ್‌ಕರ್ ರವರು ತಿಳಿಸಿದರು. ಗೌರವ ಅತಿಥಿಗಳಾದ ಪದ್ಮಪ್ರಸಾದ್ ಜೈನರವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗ್ರಹಿಕಾ ಸಾಮರ್ಥ್ಯ ಬಹಳ ಅವಶ್ಯಕತೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬಹಳ ಮುಖ್ಯ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕೆಂದು ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಮಾಣವಚನವನ್ನು ಸ್ವೀಕರಿಸಿ ಉದ್ಘಾಟನಾ ಸಮಾರಂಭವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯಾದ ಹರ್ಷಿತ ನೆರವೇರಿಸಿದರು. ಶಾಲಾ ನಾಯಕಿ ನಿರೀಕ್ಷಾ ಸ್ವಾಗತಿಸಿ, ಶಾಲಾ ನಾಯಕ ಶ್ರೀಕಾರ್ ಪಾಟೀಲ್ ವಂದಿಸಿದರು.

ಮೂಡುಬಿದರೆ : ವಿಚಾರ ವಿನಿಮಯ ಕಾರ್ಯಕ್ರಮ

Article Image

ಮೂಡುಬಿದರೆ : ವಿಚಾರ ವಿನಿಮಯ ಕಾರ್ಯಕ್ರಮ

ಮಂಗಳೂರು ತೋಟಗಾರಿಕಾ ಇಲಾಖೆ, ಮೂಡುಬಿದರೆ ಕೃಷಿ ವಿಚಾರ ವಿನಿಮಯ ಕೇಂದ್ರ ಮತ್ತು ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಜಂಟಿ ಆಶ್ರಯದಲ್ಲಿ ಜುಲೈ 19ರಂದು ಸಮಾಜ ಮಂದಿರದಲ್ಲಿ ಅನಾನಸು ಮತ್ತು ಡ್ರ್ಯಾಗನ್, ಹಣ್ಣುಗಳ ಉಪ ಉತ್ಪನ್ನ ಘಟಕ ಸ್ಥಾಪಿಸುವರೆ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಡಿ ಮಾತನಾಡಿ, ಪ್ರಾಣಿ ಪಕ್ಷಿಗಳು ಮನುಷ್ಯನಿಗಿಂತ ನೂರು ಪಟ್ಟು ಹೆಚ್ಚು ಸೂಕ್ಷ್ಮ ಸಂವೇದಿಗಳಾಗಿದ್ದು ಯಾವುದೇ ಪರಿಸರದ ವಿನಾಶದ ಬಗ್ಗೆ ಮೊದಲೇ ತಿಳಿದಿರುತ್ತವೆ. ತೋಟಗಾರಿಕಾ ಬೆಳೆಗಳನ್ನು ಬೆಳೆಯುವಾಗ ಆಯಾ ಮಣ್ಣಿನ ಗುಣಮಟ್ಟ, ಪೂರಕಾಂಶಗಳನ್ನು ಸಮಗ್ರವಾಗಿ ತಿಳಿದುಕೊಂಡು ಮುಂದುವರಿಯಬೇಕಾಗುತ್ತದೆ ಎಂದು ತಿಳಿಸಿ ತೋಟಗಾರಿಕಾ ಬೆಳೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂವಾದದಲ್ಲಿ ಪ್ರಸ್ತುತಪಡಿಸಿದರು. ಹಣ್ಣಿನ ಯಾವುದೇ ಉಪ ಉತ್ಪನ್ನಗಳಾದ ಡ್ರೈ ಹಣ್ಣು, ಜ್ಯೂಸ್, ಇತ್ಯಾದಿ ತಯಾರಿಸುವಾಗ ಬಹಳ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಹಾಗೂ ಶೇಖರಣಾ ಜಾಗರೂಕತೆಗಳ ಬಗ್ಗೆ ಮೊದಲೇ ತಿಳುವಳಿಕೆಯನ್ನು ಹೊಂದಿರಬೇಕಾಗುತ್ತದೆ ಎಂದು ವಿವೇಕ್ ಸೋನ್ಸ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಉಪ್ಪಿನಂಗಡಿಯ ಜೆರೋಮ್ ಸಂವಾದದಲ್ಲಿ ಭಾಗವಹಿಸಿ ಸ್ಥಾಪಿಸುವ ಸಂಘಕ್ಕೇ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ನೀಡಿ ಸಹಕಾರಿ ಸಂಘದ ಏಳಿಗೆಗೆ ಒಂದಾಗಿರಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಅಮುಲ್ ನಂತಹ ಸಂಸ್ಕರಣ ಘಟಕವನ್ನು ಅನಾನಸ್ಸು ಹಣ್ಣಿಗಾಗಿ ಸ್ಥಾಪಿಸಿ ಮೂಡುಬಿದಿರೆಯ ಬ್ರ್ಯಾಂಡ್ ಉತ್ಪನ್ನವನ್ನು ಜಗತ್ತಿಗೆ ಪರಿಚಯಿಸುವ ಎಂದು ಕರೆಕೊಟ್ಟರು. ವೇದಿಕೆಯಲ್ಲಿ ರಾಜವರ್ಮ ಹಾಜರಿದ್ದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ್ ಕುಮಾರ್ ಸ್ವಾಗತಿಸಿದರು. ಜಿನೇಂದ್ರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ದೀಪಕ್ ವಂದಿಸಿದರು.

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣವಾಚನ ಪ್ರವಚನ ಉದ್ಘಾಟನೆ

Article Image

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣವಾಚನ ಪ್ರವಚನ ಉದ್ಘಾಟನೆ

ಉಜಿರೆ: ಪುರಾಣ ಅಂದರೆ ಭಗವಂತನ ಕಥೆ. ಪುರಾಣ ವಾಚನ-ಪ್ರವಚನ ಎಂಬುದು ಜ್ಞಾನ ಯಜ್ಞ ಹಾಗೂ ಜ್ಞಾನ ಸತ್ರವಾಗಿದ್ದು ಆಸಕ್ತಿ ಮತ್ತು ತನ್ಮಯತೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಪುರಾಣ ವಾಚನ-ಪ್ರವಚನ ಶ್ರವಣದಿಂದ ಪ್ರತಿಯೊಬ್ಬರ ಮನದಲ್ಲೂ, ಮನೆಯಲ್ಲೂ ಸುಖ, ಶಾಂತಿ-ನೆಮ್ಮದಿ ನೆಲೆಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಡಾ. ಶಾಂತರಾಮ ಪ್ರಭು, ನಿಟ್ಟೂರು ಹೇಳಿದರು. ಅವರು ಬುಧವಾರ ಧರ್ಮಸ್ಥಳದಲ್ಲಿ ಪ್ರವಚನಮಂಟಪದಲ್ಲಿ 45ನೇ ವರ್ಷದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾಭಾರತ ಕಥೆ ಕೇಳಿ ಕುಷ್ಠ ರೋಗ ನಿವಾರಣೆಯಾಗಿದೆ ಎಂದು ಪುರಾಣದಿಂದ ತಿಳಿದು ಬಂದಿದೆ. ಪುರಾಣ ವಾಚನ-ಪ್ರವಚನವನ್ನು ಶ್ರದ್ಧಾ-ಭಕ್ತಿಯಿಂದ ಆಲಿಸುವ ಸತ್ಸಂಗದಿಂದ ಪರಸ್ಪರ ಪ್ರೀತಿ-ವಿಶ್ವಾಸ, ಭ್ರಾತೃತ್ವ, ದಯೆ, ಅನುಕಂಪ ಮೊದಲಾದ ಮಾನವೀಯಮೌಲ್ಯಗಳು ಉದ್ದೀಪನಗೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಓದುವ ಹವ್ಯಾಸದಿಂದ ನಮ್ಮ ಜ್ಞಾನಕ್ಷಿತಿಜ ವಿಸ್ತಾರವಾಗುತ್ತದೆ. ಊರಿನವರು ಹಾಗೂ ಧರ್ಮಸ್ಥಳಕ್ಕೆ ಬರುವ ಭಕ್ತರು ಕೂಡಾ ಪುರಾಣ ವಾಚನ-ಪ್ರವಚನದ ಸದುಪಯೋಗ ಪಡೆದು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸುಪ್ರಿಯಾಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ದೇವಳದ ಪಾರುಪತ್ಯಹಾರರಾದ ಲಕ್ಷ್ಮೀನಾರಾಯಣ ರಾವ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾದ ಪುರಂದರ ಭಟ್, ಉದಯಕುಮಾರ್ ಜೈನ್, ಚಂದ್ರಕಾಂತ್, ಮಹಾವೀರ ಅಜ್ರಿ, ಸಂತೋಷ್, ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶಿಕ್ಷಕ ನಿಶಾಂತ್ ಧನ್ಯವಾದವಿತ್ತರು. ಕುಮಾರವ್ಯಾಸ ವಿರಚಿತ “ಕರ್ಣಾಟ ಭಾರತ ಕಥಾಮಂಜರಿ” ಬಗ್ಗೆ ಗಣಪತಿ ಪದ್ಯಾಣ ವಾಚನಕಾರರಾಗಿ ಹಾಗೂ ಉಜಿರೆ ಅಶೋಕ ಭಟ್ ಪ್ರವಚನಕಾರರಾಗಿ ಸಹಕರಿಸಿದರು. ಸೆಪ್ಟೆಂಬರ್ 16ರ ವರೆಗೆ ಎರಡು ತಿಂಗಳು ಪ್ರತಿದಿನ ಸಂಜೆ ಗಂಟೆ 6.30 ರಿಂದ ರಾತ್ರಿ 8.00ರ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ.

ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ ಕುರಿತು ಅತಿಥಿ ಉಪನ್ಯಾಸ

Article Image

ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ ಕುರಿತು ಅತಿಥಿ ಉಪನ್ಯಾಸ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ‘ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಜು.11ರಂದು ನಡೆಯಿತು. ಪತ್ರಕರ್ತೆ ರಶ್ಮಿ ಯಾದವ್ ಕೆ. ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಹೆಚ್ಚು ಸಾಹಿತ್ಯವನ್ನು ಓದಿದಾಗ ಭಾಷಾ ಕೌಶಲ್ಯ ಬೆಳೆಯುತ್ತದೆ. ಜೀವನ ಹಲವು ಬಗೆಯಲ್ಲಿ ಅರ್ಥವಾಗುತ್ತದೆ. ಯಾಕೆಂದರೆ ಸಾಹಿತ್ಯದಲ್ಲಿ ಜೀವನದ ಅನೇಕ ಅನುಭವಗಳು ಇರುತ್ತವೆ. ಅನುಭವಗಳು ಜೀವನವನ್ನು ರೂಪಿಸುತ್ತವೆ ಎಂದರು. “ಸಾಹಿತ್ಯದ ಓದು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಸಾಹಿತ್ಯವನ್ನು ಓದಲೇಬೇಕು. ನಮ್ಮ ಮಾಧ್ಯಮಗಳ ಚರಿತ್ರೆ ನೋಡಿದರೆ ಅಲ್ಲಿ ಸಾಹಿತ್ಯ ಓದಿದ ಮಹಾನ್ ಪತ್ರಕರ್ತರನ್ನು ಕಾಣಬಹುದು. ನಾವು ಯಾವುದೇ ವಿಷಯವನ್ನು ಬರೆಯುವಾಗ ಕವಿಗಳ ಪದ್ಯಗಳನ್ನು, ಹೇಳಿಕೆ, ವಿಚಾರಗಳನ್ನು ಉಲ್ಲೇಖಿಸಿದರೆ ಆ ಬರಹಕ್ಕೆ ಹೆಚ್ಚು ತೂಕ ಬರುತ್ತದೆ. ಓದುಗರ ಮನಸ್ಸನ್ನು ಸೆಳೆಯುತ್ತದೆ. ಆದ್ದರಿಂದ ಸಾಹಿತ್ಯವನ್ನು ಅಧ್ಯಯನ ಮಾಡುವುದು ಕೇವಲ ಬರವಣಿಗೆಗೆ ಅಷ್ಟೇ ಅಲ್ಲದೆ ಬದುಕಿಗೂ ಉಪಯುಕ್ತ” ಎಂದರು. ಮಾಧ್ಯಮ ಬರವಣಿಗೆ ಸ್ವರೂಪ ಕುರಿತು ವಿದ್ಯಾರ್ಥಿಗಳು ಸಂವಾದ ನಡೆಸಿದರು. ಕಾರ್ಯಕ್ರಮ ಸಂಯೋಜಕ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಉಪಸ್ಥಿತರಿದ್ದರು. ಐಚ್ಛಿಕ ಕನ್ನಡ ದ್ವಿತೀಯ ವರ್ಷದ ವಿದ್ಯಾರ್ಥಿ ರಂಗನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

First Previous

Showing 3 of 15 pages

Next Last