Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತನ್ವೀರ್ ಅಹಮದ್ ಉಲ್ಲಾ ಭೇಟಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತನ್ವೀರ್ ಅಹಮದ್ ಉಲ್ಲಾ ಭೇಟಿ

ಅಂಕಣಕಾರರಾಗಿ, ಕವಿಯಾಗಿ, ರಾಜಕಾರಣಿಯಾಗಿ, ಉದ್ಯಮಿಯಾಗಿ, ಶಿಕ್ಷಕರಾಗಿ, ವಕೀಲರಾಗಿ ಮತ್ತು ರಾಷ್ಟ್ರೀಯ ಚಿಂತಕರಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ತನ್ವೀರ್ ಅಹಮದ್ ಉಲ್ಲಾ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದಲ್ಲಿ “ಇಸ್ಲಾಂ ಧರ್ಮದಲ್ಲಿ ಸಮನ್ವಯತೆ” ವಿ಼ಷಯದಲ್ಲಿ ಉಪನ್ಯಾಸ ನೀಡಲಿರುವ ತನ್ವೀರ್ ಅಹಮದ್ ಉಲ್ಲಾ ಅವರು ಪಾದಯಾತ್ರೆಯ ಮೂಲಕ ಬೆಂಗಳೂರಿನಿಂದ ಆಗಮಿಸಿದ್ದರು. ಈ ಸಂದರ್ಭದಲ್ಲಿ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಿದ ನನಗೆ ದಾರಿಯುದ್ದಕ್ಕೂ ಧರ್ಮಸ್ಥಳ ವಿಶೇಷವಾಗಿ ಕಾಣಿಸಿತು. ನೊಂದವರ ಕಣ್ಣೀರಿನಲ್ಲಿ ಆಶಾದಾಯಕವಾಗಿ, ಪ್ರೀತಿಸುವವರ ಹೃದಯದಲ್ಲಿ ಪ್ರೀತಿಯಾಗಿ, ಓದುವ ಮಕ್ಕಳ ಪುಸ್ತಕದಲ್ಲಿ, ಮರುಅರಣ್ಯೀಕರಣದ ಮರಗಳ ಗೂಡಿನಲ್ಲಿರುವ ಹಕ್ಕಿಯ ಮರಿಗಳಲ್ಲಿ ನನಗೆ ಪೂಜ್ಯರ ಸಮಾಜ ಸೇವೆಯ ಮೂಲಕ ಧರ್ಮಸ್ಥಳ ಕಂಡಿತು. ಈ ಆಸ್ಪತ್ರೆಗೆ ಬಂದು ಇಲ್ಲಿನ ಹೈಟೆಕ್ ಸೌಲಭ್ಯವಿರುವ ಡಯಾಲಿಸಿಸ್ ಕೇಂದ್ರದಲ್ಲಿ ಸಿಗುತ್ತಿರುವ ಉಚಿತ ಡಯಾಲಿಸಿಸ್ ಸೇವೆ ನೋಡಿದಾಗ ಧರ್ಮಸ್ಥಳ ನನಗೆ ಒಂದು ಅನನ್ಯ ಕ್ಷೇತ್ರವಾಗಿ ಕಾಣಿಸಿತು. ಪೂಜ್ಯರ ಸಮಾಜ ಸೇವೆಯ ದರ್ಶನವಾಯಿತು. ಧರ್ಮಸ್ಥಳ ಎಂದರೆ ಧರ್ಮ. ಇಲ್ಲಿ ಧರ್ಮ ಪ್ರೀತಿಯಲ್ಲಿದೆ. ತ್ಯಾಗದಲ್ಲಿದೆ. ಸೇವೆಯ ರೂಪದಲ್ಲಿದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಯ ಸಿಬ್ಬಂದಿಗಳು ಧನ್ಯರು. ಭಾವೈಕ್ಯದ ಭಾರತ, ಪ್ರೀತಿಯ ಭಾರತ, ನಮ್ಮಲ್ಲೆರ ಭಾರತವನ್ನು ಕಟ್ಟೋಣ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಟೋರ್ ಇನ್-ಚಾರ್ಜ್ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ, ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ, ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ

ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು. ಈ ಶಿಬಿರದಲ್ಲಿ ಖ್ಯಾತ ಸಂಧಿವಾತ ತಜ್ಞರಾದ ಡಾ| ಅಶ್ವಿನಿ ಕಾಮತ್ ಭಾಗವಹಿಸಿ ರೋಗಿಗಳ ತಪಾಸಣೆ ನಡೆಸಿದರು. ಸಂಧಿವಾತ, ಅಸ್ಥಿ ಸಂಧಿವಾತ, ಮಕ್ಕಳ ಸಂಧಿವಾತ, ರುಮಟಾಯ್ಡ್, ಆರ್ಥೈಟಿಸ್, ಸ್ಟಾಂಡಿಲೋ ಆರ್ಥೈಟಿಸ್, ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್, ಸೋರಿಯಾಸಿಸ್, ವಾಸ್ಕುಲೈಟಿಸ್ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು. ಈ ಶಿಬಿರದಲ್ಲಿ ಉಚಿತ ಸಮಾಲೋಚನೆಯ ಜತೆಗೆ ರಕ್ತ ಪರೀಕ್ಷೆಗೆ 20% ಹಾಗೂ ಔಷಧಗಳಿಗೆ 10% ರಿಯಾಯಿತಿಯನ್ನು ನೀಡಲಾಯಿತು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಏಕಕಾಲಕ್ಕೆ ಗರ್ಭಕೋಶದ ಗೆಡ್ಡೆ ಮತ್ತು ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಏಕಕಾಲಕ್ಕೆ ಗರ್ಭಕೋಶದ ಗೆಡ್ಡೆ ಮತ್ತು ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆ

ಇತ್ತೀಚೆಗೆ ತೀವ್ರ ಹೊಟ್ಟೆ ನೋವಿನಿಂದ ಕಳೆದ 6 ತಿಂಗಳಿನಿಂದ ಬಳಲುತ್ತಿದ್ದ 45 ವರ್ಷ ಪ್ರಾಯದ ಮಹಿಳೆಯೊಬ್ಬರು ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಾಗ ಈಕೆ ಅಸಹಜ ಗರ್ಭಾಶಯದ ರಕ್ತಸ್ರಾವದಿಂದ ಬಳಲುತ್ತಿದ್ದು, ಆಕೆಯ ಹೊಟ್ಟೆಯಲ್ಲಿ 7 ಸೆಂ.ಮೀ ಗಾತ್ರದ ಗೆಡ್ಡೆ ಸೇರಿದಂತೆ ಒಟ್ಟು 4 ಗೆಡ್ಡೆಯೊಂದಿಗೆ ಹರ್ನಿಯಾ (ಹೊಕ್ಕಳಿನ ಅಂಡವಾಯು)ಸಮಸ್ಯೆ ಕೂಡ ಇರುವುದು ಕಂಡು ಬಂದಿತ್ತು. ಇಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಸ್ವರ್ಣಲತಾ, ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಬಾಲಾಜಿ ಪ್ರಭಾಕರನ್ ಮತ್ತು ಅರೆವಳಿಕೆ ತಜ್ಞರಾದ ಡಾ| ಸುಪ್ರೀತ್ ಆರ್. ಶೆಟ್ಟಿ ಇವರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಿಂದ ದೊಡ್ಡ ಗಾತ್ರದ ಗೆಡ್ಡೆ ಸೇರಿದಂತೆ ಎಲ್ಲಾ ಗೆಡ್ಡೆಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಇದೇ ಸಮಯದಲ್ಲಿ ಜಾಲರಿಯೊಂದಿಗೆ ಹರ್ನಿಯಾ ದುರಸ್ತಿ ಶಸ್ತ್ರಚಿಕಿತ್ಸೆಯನ್ನು ಕೂಡ ಮಾಡಲಾಗಿದ್ದು, ಮಹಿಳೆಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಅತೀ ಹೆಚ್ಚು ಗರ್ಭಕೋಶದ ಗೆಡ್ಡೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಇದುವರೆಗೆ ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕೋಶದ ಗೆಡ್ಡೆಯ ಸಮಸ್ಯೆಯಿಂದ ಬಳಲುತ್ತಿರುವ ಬಹಳಷ್ಟು ಮಂದಿಗೆ ಶಸ್ತçಚಿಕಿತ್ಸೆ ಮಾಡಲಾಗಿದೆ ಎಂದು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿ

ತೀವ್ರವಾದ ಬೆನ್ನುನೋವಿನಿಂದ ನಡೆಯಲು ಕಷ್ಡಪಡುತ್ತಿದ್ದ 58 ವರ್ಷ ವಯಸ್ಸಿನ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ಆಗಮಿಸಿದ್ದರು. ಇಲ್ಲಿನ ವೈದ್ಯರು ಪರೀಕ್ಷಿಸಿದಾಗ ಬೆನ್ನುಮೂಳೆಯಲ್ಲಿ ಸಮಸ್ಯೆ ಇರುವ ಬಗ್ಗೆ ತಿಳಿಯಿತು. ಕನಿಷ್ಟ ಆಕ್ರಮಣಕಾರಿ (Minimal invasive) ಸರ್ಜರಿ ಮತ್ತು ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆಯುತ್ತಿರುವ, ಈಗಾಗಲೇ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಅನುಭವ ಹೊಂದಿರುವ ಇಲ್ಲಿನ ಮೂಳೆ ಶಸ್ತ್ರಚಿಕಿತ್ಸಕರಾಗಿರುವ ಡಾ| ಶತಾನಂದ ಪ್ರಸಾದ್ ರಾವ್ ರೋಗಿಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಈ ಮಹಿಳೆಯ ಎದೆಗೂಡಿನ ಬೆನ್ನುಮೂಳೆಯ ಭಾಗವಾಗಿರುವ ಡಿ-10 ಕಶೇರುಖಂಡದ ಮುರಿತವಾಗಿರುವುದು ಕಂಡುಬಂದಿತ್ತು. ಸಮಸ್ಯೆಯನ್ನು ಖಚಿತಪಡಿಸಿಕೊಂಡ ವೈದ್ಯರು ಕನಿಷ್ಟ ಆಕ್ರಮಣಕಾರಿ ಮೂಲಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅರೆವಳಿಕೆ ತಜ್ಞರಾದ ಡಾ| ಸುಪ್ರೀತ್ ಶೆಟ್ಟಿ ಸಹಕರಿಸಿದರು. ಪ್ರಸ್ತುತ ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ| ಶತಾನಂದ ಪ್ರಸಾದ್ ರಾವ್ ತಿಳಿಸಿದರು. ಡಾ| ಶತಾನಂದ ಪ್ರಸಾದ್ ರಾವ್ ಇವರು ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆದಿರುವ ಖ್ಯಾತ ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಮಹೇಶ್. ಕೆ, ಇವರ ಜೊತೆಗೂಡಿ ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಇಂಟ್ರಾ ಡ್ಯೂರಲ್ ಸ್ಪೈನಲ್ ಟ್ಯೂಮರ್ ಶಸ್ತ್ರಚಿಕಿತ್ಸೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಈ ಬಾರಿ ಸ್ವತಂತ್ರವಾಗಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿಯನ್ನು ನಡೆಸಿದ್ದಾರೆ. ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ, ನುರಿತ ತಜ್ಞ ವೈದ್ಯರ ತಂಡದಿಂದ ಇಲ್ಲಿ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದರು.

ಉಜಿರೆ: ಸಾರ್ವಜನಿಕರಿಗಾಗಿ ಹೃದಯ ಪುನಶ್ಚೇತನ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

Article Image

ಉಜಿರೆ: ಸಾರ್ವಜನಿಕರಿಗಾಗಿ ಹೃದಯ ಪುನಶ್ಚೇತನ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಧರ್ಮಸ್ಥಳ ಇವರ ಸಂಯುಕ್ತ ಆಶ್ರಯದಲ್ಲಿ 27 ಜುಲೈ 2025 ರಂದು CPR (Cardiopulmonary Resuscitation) ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಅಗಸ್ಟೀನ್ ಟಿ.ಎ. ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರೆವ್. ಫಾ. ಸುನಿಲ್ ಪೂವತಿಂಗಲ್ ಉಪಸ್ಥಿತರಿದ್ದರು. ತರಬೇತಿಯನ್ನು ನೀಡಲು ಎಸ್.ಡಿ.ಎಂ ಮಲ್ಟಿಸ್ಪೆಲಾಲಿಟಿ ಆಸ್ಪತ್ರೆಯ ನರ್ಸಿಂಗ್ ಸೂಪೆರಿಂಟೆಂಡೆಂಟ್ ಶೆರ್ಲಿ ಮತ್ತು ಅವರ ವೈದ್ಯಕೀಯ ತಂಡ ಹಾಜರಿದ್ದರು. ಅವರು ಸಾಮಾನ್ಯ ಜನರಿಗೆ CRP ತಂತ್ರಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಪ್ರಾಯೋಗಿಕವಾಗಿ ತರಬೇತಿಯನ್ನೂ ನೀಡಿದರು. ಸಂಘದ ಕಾರ್ಯದರ್ಶಿ ಶಿಜೋ ಜೋಸೆಫ್ ಸ್ವಾಗತ ಭಾಷಣ ಮಾಡಿದರು, ನಿರೂಪಣೆಯನ್ನು ನಿರ್ವಹಿಸಿದರು. ಉಪಾಧ್ಯಕ್ಷ ಮ್ಯಾಥ್ ವಿ.ಟಿ., ಕೋಶಾಧಿಕಾರಿ ರಂಜಿತ್ ಪಿ.ಎಸ್., ಸಂಘದ ಇತರ ಸದಸ್ಯರು ಹಾಗೂ ಊರಿನ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾಹಿತಿ ಮತ್ತು ತರಬೇತಿಯನ್ನು ಪಡೆದುಕೊಂಡರು. ಈ ಕಾರ್ಯಕ್ರಮ ಜನಜಾಗೃತಿ ಮೂಡಿಸಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಅತ್ಯಂತ ಪರಿಣಾಮಕಾರಿ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ ಕುರಿತು ಅತಿಥಿ ಉಪನ್ಯಾಸ

Article Image

ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ ಕುರಿತು ಅತಿಥಿ ಉಪನ್ಯಾಸ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ‘ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಜು.11ರಂದು ನಡೆಯಿತು. ಪತ್ರಕರ್ತೆ ರಶ್ಮಿ ಯಾದವ್ ಕೆ. ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಹೆಚ್ಚು ಸಾಹಿತ್ಯವನ್ನು ಓದಿದಾಗ ಭಾಷಾ ಕೌಶಲ್ಯ ಬೆಳೆಯುತ್ತದೆ. ಜೀವನ ಹಲವು ಬಗೆಯಲ್ಲಿ ಅರ್ಥವಾಗುತ್ತದೆ. ಯಾಕೆಂದರೆ ಸಾಹಿತ್ಯದಲ್ಲಿ ಜೀವನದ ಅನೇಕ ಅನುಭವಗಳು ಇರುತ್ತವೆ. ಅನುಭವಗಳು ಜೀವನವನ್ನು ರೂಪಿಸುತ್ತವೆ ಎಂದರು. “ಸಾಹಿತ್ಯದ ಓದು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಸಾಹಿತ್ಯವನ್ನು ಓದಲೇಬೇಕು. ನಮ್ಮ ಮಾಧ್ಯಮಗಳ ಚರಿತ್ರೆ ನೋಡಿದರೆ ಅಲ್ಲಿ ಸಾಹಿತ್ಯ ಓದಿದ ಮಹಾನ್ ಪತ್ರಕರ್ತರನ್ನು ಕಾಣಬಹುದು. ನಾವು ಯಾವುದೇ ವಿಷಯವನ್ನು ಬರೆಯುವಾಗ ಕವಿಗಳ ಪದ್ಯಗಳನ್ನು, ಹೇಳಿಕೆ, ವಿಚಾರಗಳನ್ನು ಉಲ್ಲೇಖಿಸಿದರೆ ಆ ಬರಹಕ್ಕೆ ಹೆಚ್ಚು ತೂಕ ಬರುತ್ತದೆ. ಓದುಗರ ಮನಸ್ಸನ್ನು ಸೆಳೆಯುತ್ತದೆ. ಆದ್ದರಿಂದ ಸಾಹಿತ್ಯವನ್ನು ಅಧ್ಯಯನ ಮಾಡುವುದು ಕೇವಲ ಬರವಣಿಗೆಗೆ ಅಷ್ಟೇ ಅಲ್ಲದೆ ಬದುಕಿಗೂ ಉಪಯುಕ್ತ” ಎಂದರು. ಮಾಧ್ಯಮ ಬರವಣಿಗೆ ಸ್ವರೂಪ ಕುರಿತು ವಿದ್ಯಾರ್ಥಿಗಳು ಸಂವಾದ ನಡೆಸಿದರು. ಕಾರ್ಯಕ್ರಮ ಸಂಯೋಜಕ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಉಪಸ್ಥಿತರಿದ್ದರು. ಐಚ್ಛಿಕ ಕನ್ನಡ ದ್ವಿತೀಯ ವರ್ಷದ ವಿದ್ಯಾರ್ಥಿ ರಂಗನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರ

Article Image

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರ

ಮಡಂತ್ಯಾರು: 2024-2025ನೇ ಸಾಲಿನ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರವು ಜು.13ರಂದು ಪೂರ್ವಾಹ್ನ ಗಂಟೆ 11.00ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷ ಜೋಯೆಲ್ ಗಾಡ್ ಫ್ರೀ ಮೆಂಡೋನ್ಸ ಅವರ ಅಧ್ಯಕ್ಷತೆಯಲ್ಲಿ, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಜರಗಲಿದೆ. ಮಹಾಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ, ಕ್ರೀಡಾ ಸಾಧಕರಿಗೆ, ಕೃಷಿ ಸಾಧನೆ ಮಾಡಿದ ಕೃಷಿಕರಿಗೆ, ಪ್ರಸ್ತುತ ವರ್ಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಹಾಗೂ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 'ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಫಾ. ಎಲ್.ಎಮ್. ಪಿಂಟೋ ಆಸ್ಪತ್ರೆ, ಬದ್ಯಾರು ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಇದರ ರಾಷ್ಟ್ರೀಯ ಸೇವಾ ಯೋಜನೆ (N.S.S.) ಮತ್ತು ಯೂತ್ ರಡ್ ಕ್ರಾಸ್ (Y.R.C) ಸಹಯೋಗದೊಂದಿಗೆ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರವು ಬೆಳಿಗ್ಗೆ 9ರಿಂದ ನಡೆಯಲಿದೆ. ಲಭ್ಯವಿರುವ ವೈದ್ಯರ ಸೇವೆ ಮೆಡಿಸಿನ್ ವಿಭಾಗ : ಡಾ. ಜೆಫ್ರಿ ಲೂವಿಸ್ ಮೂಳೆ ಚಿಕಿತ್ಸಾ ವಿಭಾಗ : ಡಾ. ವಿಲ್ಕರ್ ಲಿಯಾಂಡರ್ ಕುಟಿನ್ಹ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ: ಡಾ.ಜ್ಞಾನೇಶ್ವರಿ ಎಂಡಿ, ಒಜಿಬಿ ಶಸ್ತ್ರ ಚಿಕಿತ್ಸಾ ಹಾಗೂ ಕ್ಯಾನ್ಸರ್ ಚಿಕಿತ್ಸಾ ವಿಭಾಗ: ಡಾ. ಎಲ್ಲೋಯ್ ಸಲ್ದಾನ್ಹ ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗ: ಡಾ. ದೇವಶ್ಯ ಮಕ್ಕಳ ಚಿಕಿತ್ಸಾ ವಿಭಾಗ: ಡಾ. ಜೇಸನ್ ಡಿಸೋಜ ಕಣ್ಣಿನ ಚಿಕಿತ್ಸಾ ವಿಭಾಗ: ಡಾ. ಮಹೇಶ್ ಚರ್ಮರೋಗ ಚಿಕಿತ್ಸಾ ವಿಭಾಗ: ಡಾ. ನಾಗಭೂಷನ್, ಮನೋರೋಗ ಚಿಕಿತ್ಸಾ ವಿಭಾಗ: ಡಾ. ಕ್ಲಿಂಟನ್ ಕ್ಯಾಸ್ಟಲಿನೋ ಸೇವೆ ನೀಡಲಿದ್ದಾರೆ. ಲಭ್ಯವಿರುವ ಸೇವೆಗಳು: ಉಚಿತ ವೈದ್ಯರ ಸೇವೆ, ಮಹಿಳೆಯರಿಗೆ ಉಚಿತ ಪ್ಯಾಪ್ ಸ್ಮಿಯರ್ ಪರೀಕ್ಷೆ, ಉಚಿತ ಕ್ಯಾನ್ಸರ್ ತಪಾಸಣಾ, ಸ್ತನ ಪರೀಕ್ಷೆ, ಉಚಿತ ಫಾ. ಎಲ್.ಎಮ್. ಪಿಂಟೋ ಹೆಲ್ತ್ ಕರ‍್ಡ್, ಉಚಿತ ಮಧುಮೇಹ ತಪಾಸಣೆ, ಉಚಿತ ಇಸಿಜಿ (ಅಗತ್ಯವಿರುವವರಿಗೆ ಮಾತ್ರ), ಉಚಿತ ಔಷಧಿ, 50% ಹರ‍್ಮೊನ್ ರಕ್ತ ಪರೀಕ್ಷೆ, 50% ವಿಟಮಿನ್ 'ಡಿ'2 ಮತ್ತು ವಿಟಮಿನ್ ಬಿ 12, 50% ಹಿಮೋಗ್ಲೋಬಿನ್ ಪರೀಕ್ಷೆ, ಉಚಿತ ಕಣ್ಣು ತಪಾಸಣಾ ಶಿಬಿರ, ಶಿಬಿರ ಪ್ರಯುಕ್ತ ರೂ.1500/- ಬೆಲೆಯ ಕನ್ನಡಕಗಳನ್ನು 50% ರಿಯಾಯಿತಿ ದರದಲ್ಲಿ ರೂ. 750/-ಗೆ ವಿತರಿಸಲಾಗುವುದು. ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಕನ್ನಡಕವನ್ನು (ಐದು ದಿನಗಳಲ್ಲಿ) ವಿತರಿಸಲಾಗುವುದು.

ಸಮಯನಿಷ್ಠೆಯಿಂದ ಕಾರ್ಯಪ್ರವೃತ್ತನಾಗುವವನೇ ನಿಜವಾದ ವೈದ್ಯ: ಡಾಕ್ಟರ್ ಪುನೀತ್

Article Image

ಸಮಯನಿಷ್ಠೆಯಿಂದ ಕಾರ್ಯಪ್ರವೃತ್ತನಾಗುವವನೇ ನಿಜವಾದ ವೈದ್ಯ: ಡಾಕ್ಟರ್ ಪುನೀತ್

ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್ಇ ಶಾಲೆಯಲ್ಲಿ ವೈದ್ಯ ದಿನಾಚರಣೆಯನ್ನು ನೆರವೇರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನದೊಂದಿಗೆ ವೈದ್ಯರಿಗೆ ಗೌರವವನ್ನು ಅರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಯುವರಾಜ್ ಜೈನ್ ರವರು ಉಪಸ್ಥಿತರಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳ ಜೀವನದ ಘಟನೆಗಳನ್ನು ಸ್ಮರಿಸುವ ಮೂಲಕ ವೈದ್ಯ ವೃತ್ತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾಕ್ಟರ್ ಪುನೀತ್ ರವರು ಮಾತನಾಡಿ ಸಮಯ ನಿಷ್ಠೆಯಿಂದ ಕಾರ್ಯಪ್ರವೃತ್ತನಾಗುವವನೇ ನಿಜವಾದ ವೈದ್ಯ ಎಂದು ಹೇಳುವ ಮೂಲಕ ವೈದ್ಯರಾಗಬೇಕೆಂಬ ಕನಸನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿಯ ಘನತೆಯ ಕುರಿತು ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಮುಖ್ಯಸ್ಥರಾಗಿರುವ ವಿಶ್ವರಾಜ್, ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾದ ಶ್ರೀಪ್ರಸಾದ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಇಷಿತ ನೆರವೇರಿಸಿದರು. ವಿದ್ಯಾರ್ಥಿನಿಯಾದ ಪ್ರಿಯಾಂಕರವರು ಸ್ವಾಗತಿಸಿ, ಆರವ್ ಕಿರಣ್ ವಂದಿಸಿದರು.

ಉಜಿರೆ ಎಸ್.ಡಿ.ಎಂ. ಆಸ್ಪತ್ರೆ ವೈದ್ಯರಿಂದ ಮೈತ್ರಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಉಚಿತ ಚರ್ಮರೋಗ ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ. ಆಸ್ಪತ್ರೆ ವೈದ್ಯರಿಂದ ಮೈತ್ರಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಉಚಿತ ಚರ್ಮರೋಗ ತಪಾಸಣಾ ಶಿಬಿರ

ಡಾ. ಡಿ. ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಎಸ್.ಡಿ.ಎಂ ಎಜ್ಯುಕೇಶನ್ ಸೊಸೈಟಿ ಸಹಯೋಗದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ| ಭವಿಷ್ಯ ಕೆ. ಶೆಟ್ಟಿ ಇವರು ಮೈತ್ರೆ ಹಾಸ್ಟೆಲ್ ಪದವಿ ಪೂರ್ವ ವಿದ್ಯಾರ್ಥಿನಿಯರಿಗೆ ಉಚಿತ ಚರ್ಮರೋಗ ತಪಾಸಣೆ ಮತ್ತು ಜಾಗೃತಿ ಶಿಬಿರವನ್ನು 2 ದಿನ ನಡೆಸಿಕೊಟ್ಟರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು, ಶರೀರದ ಆರೋಗ್ಯ ಕಾಪಾಡುವಲ್ಲಿ ಚರ್ಮದ ಪಾತ್ರ, ಹಾನಿಕಾರಕ ಪರಿಸರದ ಅಂಶಗಳಿಂದ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಮಾಡಬೇಕಾದ ಚರ್ಮದ ಆರೈಕೆ. ಹದಿಹರೆಯದಲ್ಲಿ ಮೊಡವೆಗಳನ್ನು ತಡೆಗಟ್ಟುವ ವಿಧಾನ ಇತ್ಯಾದಿ ವಿಷಯಗಳನ್ನು ತಿಳಿಸಿಕೊಟ್ಟರು. ಸುಮಾರು 120 ವಿದ್ಯಾರ್ಥಿನಿಯರಿಗೆ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಿದರು.

ಆಳ್ವಾಸ್: ಮೂರು ದಿನಗಳ ಯೂತ್ ಯೋಗ ಫೆಸ್ಟ್

Article Image

ಆಳ್ವಾಸ್: ಮೂರು ದಿನಗಳ ಯೂತ್ ಯೋಗ ಫೆಸ್ಟ್

ಮಿಜಾರು: ಯೋಗದಲ್ಲಿ ಮುಖ್ಯವಾಗಿ ಎರಡು ಅಂಶಗಳು. ಒಂದು ತತ್ವಶಾಸ್ತ್ರ ಇನ್ನೊಂದು ಅಭ್ಯಾಸ. ಆದರೆ ಈ ಎರಡು ಅಂಶಗಳು ಒಟ್ಟಿಗೆ ಮೇಳೈಸಬೇಕಾದಾಗ, ಮೊದಲು ತತ್ತ್ವಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಅಭ್ಯಾಸ ಮಾಡಲು ಮೊದಲು ಯೋಗವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು ಎಂದು ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಉಪಪ್ರಾಂಶುಪಾಲೆ ಹಾಗೂ ಡೀನ್ ಡಾ. ಸುಜಾತ ದಿನೇಶ್ ಹೇಳಿದರು. ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ ಪರಿಷತ್ತು, ಭಾರತ ಸರ್ಕಾರದ ಆಯುಷ್ ಸಚಿವಾಲಯ ಇವುಗಳ ಜಂಟಿ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 16 ರಿಂದ 19ರವರೆಗೆ `ಯೂತ್ ಯೋಗ ಫೆಸ್ಟಿವಲ್' ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನ್ಯಾಚುರೋಪಥಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬರುವ ಅಡೆತಡೆಗಳನ್ನು ಯೋಗತತ್ವಶಾಸ್ತ್ರ ಸಿದ್ಧಾಂತಗಳ ನೆಲೆಯಲ್ಲಿ ಪರಿಹರಿಸಿಕೊಳ್ಳಬೇಕು. ನಮ್ಮ ಭವಿಷ್ಯವನ್ನು ನಮ್ಮ ವರ್ತಮಾನ ನಿರ್ಧರಿಸುತ್ತದೆ. ಆದುದರಿಂದ ನಾವು ತಿನ್ನುವ ಆಹಾರ ಹಾಗೂ ನಿದ್ರೆ ನಮ್ಮ ಭವಿಷ್ಯದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಯೋಗ ಅಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಧನಾತ್ಮಕ ಶಕ್ತಿ ಹೆಚ್ಚಳವಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕೇಂದ್ರೀಯ ಸಂಶೋಧನಾ ಮಂಡಳಿ ನಾಗಮಂಡಲ ಇಲ್ಲಿನ ಸಂಶೋಧನಾ ಅಧಿಕಾರಿ ಡಾ. ನಿತೀಶ್ ಎಂ ಕೆ, ಈ ವರ್ಷ ಭಾರತ ಆಯುಷ್ ಸಚಿವಾಲಯವು ಅಂತರರಾಷ್ಟ್ರೀಯ ಯೋಗ ದಿನದ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 2014ರಲ್ಲಿ ಪ್ರಧಾನಿಯವರಿಂದ ಈ ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರಾರಂಭಿಸಲಾಯಿತು. ಇಂದು ಯೋಗವು 190ಕ್ಕೂ ಹೆಚ್ಚಿನ ದೇಶಗಳಲ್ಲಿ ಜೀವನ ಪದ್ದತಿಯ ಭಾಗವಾಗಿ ಆಳವಡಿಸಿಕೊಳ್ಳಲಾಗಿದೆ ಮತ್ತು 144 ದೇಶಗಳು ಪ್ರಕೃತಿ ಚಿಕಿತ್ಸೆಯನ್ನು ಸ್ವೀಕರಿಸಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ 2022ರ ಯೋಗಸಮೀಕ್ಷೆಯ ಪ್ರಕಾರ ಯುಎಸ್‌ನಲ್ಲಿ 38.4 ಮಿಲಿಯನ್ ಜನರು ಯೋಗವನ್ನು ಅನುಸರಿಸುತ್ತಿದ್ದಾರೆ. ಸಾಮನ್ಯವಾಗಿ ಜನರು ಒತ್ತಡ ನಿವಾರಣೆ, ನಮ್ಯತೆ, ಮಾನಸಿಕ ಸ್ಪಷ್ಟತೆಗೆ ಯೋಗವನ್ನು ಅನುಸರಿಸುತ್ತಾರೆ. ಆದರೆ ಯೋಗದೊಂದಿಗೆ ನಾವು ತಿನ್ನುವ ಆಹಾರ ಕೂಡಾ ಪರಿಣಾಮ ಬೀರಬಲ್ಲದು. ಯೋಗವನ್ನು ಅನುಸರಿಸುವುದರ ಜೊತೆಯಲ್ಲಿ, ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಬೇಕು ಎಂದರು. ಕಾರ್ಯಕ್ರಮದ ಆರಂಭದಲ್ಲಿ ಪತಂಜಲಿ ಮಹರ್ಷಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮೂರು ದಿನಗಳ ಕಾಲ ನಡೆದ ಯೂತ್ ಯೋಗ ಫೆಸ್ಟಿವಲ್‌ನಲ್ಲಿ ಯೋಗ ಒಲಿಂಪಿಯಾಡ್, ಯೋಗ ಸ್ಕಿಟ್, ಯೋಗ ಡ್ಯಾನ್ಸ್ ಫ್ಯೂಷನ್, ಯೋಗ ಡಿಬೇಟ್, ಯೋಗ ರೀಲ್ಸ್, ಯೋಗ ಗಿಬ್ಲಿ, ಯೋಗ ಪೋಸ್ಟರ್ ಸ್ಪರ್ಧೆಗಳು ನಡೆಯಲಿವೆ. ಎಸ್‌ಡಿಎಮ್ ಕಾಲೇಜ್ ಉಜಿರೆ, ಯೆನೆಪೋಯ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು, ಶಾರದಾ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು, ಮುನಿಯಾಲ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಹಾಗೂ ಆಳ್ವಾಸ್ ಶಾಲೆ ಹಾಗೂ ಪದವಿ ಕಾಲೇಜುಗಳ ಸುಮಾರು 200 ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಹಾಗೂ ಉಪಪ್ರಾಂಶುಪಾಲೆ ಡಾ. ವಿದ್ಯಾರಾಣಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರೀನಾ ರೊಡ್ರಿಗಸ್ ನಿರೂಪಿಸಿದರು.

ಡರ್ಮಾ ಅಡ್ವಾನ್ಸ್ 2025ರ ಮೊದಲ ದಿನದ ಕಾರ್ಯಕ್ರಮ

Article Image

ಡರ್ಮಾ ಅಡ್ವಾನ್ಸ್ 2025ರ ಮೊದಲ ದಿನದ ಕಾರ್ಯಕ್ರಮ

ಸತ್ತೂರು, ಧಾರವಾಡ: ಡರ್ಮಾ ಅಡ್ವಾನ್ಸ್ 2025ರ ಮೊದಲ ದಿನದ ಕಾರ್ಯಕ್ರಮ ಜೂನ್ 14ರಂದು ಧಾರವಾಡದ ಎಸ್ಡಿಎಂ ಮೆಡಿಕಲ್ ಸೈನ್ಸಸ್ ಅಂಡ್ ಹಾಸ್ಪಿಟಲ್ (SDMCMSH) ನಲ್ಲಿ ಆರಂಭವಾಯಿತು. ಈ ಕಾರ್ಯಕ್ರಮವು ವಿಶೇಷವಾಗಿ ಸ್ನಾತಕೋತ್ತರ ಚರ್ಮರೋಗ ತರಬೇತಿಗೆ ಹೋಲಿಸಿದ ಶೈಕ್ಷಣಿಕ ಕೇಂದ್ರೀಕೃತತೆಗೆ ಸಾಕ್ಷಿಯಾದ ದಿನವಾಯಿತು. ದಿನವು ಕ್ಲಿನಿಕಲ್ ಜ್ಞಾನವನ್ನು ಗಟ್ಟಿಗೊಳಿಸುವುದರೊಂದಿಗೆ ಪರೀಕ್ಷಾ ಸಿದ್ಧತೆಯನ್ನು ಹೆಚ್ಚಿಸುವ ಗಂಭೀರವಾದ, ಪರೀಕ್ಷಾ ಆಧಾರಿತ ಅಧಿವೇಶನಗಳಿಂದ ಕೂಡಿತ್ತು. ಕರ್ನಾಟಕದ ಎಲ್ಲೆಡೆ ಹಾಗೂ ಇತರ ರಾಜ್ಯಗಳಿಂದ ಬಂದ ಸ್ನಾತಕೋತ್ತರ ವಿದ್ಯಾರ್ಥಿಗಳು, ಪ್ರತಿನಿಧಿಗಳು ಮತ್ತು ಬೋಧಕವರ್ಗದವರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಅಧಿವೇಶನಗಳು ಪರಸ್ಪರ ಸಂವಾದಾತ್ಮಕವಾಗಿದ್ದು, ಪ್ರಕರಣಾಧಾರಿತವಾಗಿದ್ದವು ಮತ್ತು ಇತ್ತೀಚಿನ ಪರೀಕ್ಷಾ ಮಾದರಿಗಳಿಗೆ ತಕ್ಕಂತೆ ರೂಪುಗೊಂಡಿದ್ದವು. ಇದರಿಂದಾಗಿ ಭಾಗವಹಿಸಿದವರಿಗೆ ಸಮೃದ್ಧವಾದ ಹಾಗೂ ಪ್ರಾಯೋಗಿಕ ಅಧ್ಯಯನ ಅನುಭವವನ್ನು ಒದಗಿಸಿತು. ಈ ಕಾರ್ಯಕ್ರಮವನ್ನು ಈ ಕೆಳಗಿನ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು: ಡಾ. ನಿರಂಜನ್ ಕುಮಾರ್, ಉಪಕುಲಪತಿ, ಎಸ್ಡಿಎಂ ವಿಶ್ವವಿದ್ಯಾಲಯ; ಡಾ. ಚಿದೇಂದ್ರ ಶೆಟ್ಟರ್, ರಿಜಿಸ್ಟ್ರಾರ್, ಎಸ್ಡಿಎಂ ವಿಶ್ವವಿದ್ಯಾಲಯ; ಡಾ. ವಿಜಯ ಕುಲಕರ್ಣಿ, ಪ್ರಾಚಾರ್ಯರು, SDMCMSH; ಡಾ. ನವೀನ್ ಕೆ. ಎನ್., ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಚರ್ಮರೋಗ ವಿಭಾಗ, SDMCMSH; ಡಾ. ಮಂಜುನಾಥ ಹುಲಿಮಣಿ, ಅಧ್ಯಕ್ಷರು, IADVL ಕರ್ನಾಟಕ; ಡಾ. ಮಹೇಶ್ ಕುಮಾರ್, ಗೌರವ ಕಾರ್ಯದರ್ಶಿ, IADVL ಕರ್ನಾಟಕ; ಡಾ. ಎಸ್. ಬಿ. ಅಥಣಿಕರ್, ಆಯೋಜನಾ ಸಹ-ಅಧ್ಯಕ್ಷರು; ಡಾ. ಶ್ವೇತಾ ಆರ್. ಪ್ರಭು, ಆಯೋಜನಾ ಕಾರ್ಯದರ್ಶಿ ಮತ್ತು ಇತರ ಗಣ್ಯರುಯವರ ಸಾನ್ನಿಧ್ಯವು ಕಾರ್ಯಕ್ರಮಕ್ಕೆ ಗೌರವ ಹಾಗೂ ಮಹತ್ವವನ್ನು ನೀಡಿತು. ಅತ್ಯುತ್ತಮ ಭಾಗವಹಿಸುವಿಕೆ, ಶೈಕ್ಷಣಿಕ ಕಟ್ಟುನಿಟ್ಟು ಮತ್ತು ಗುರಿಯುತ ವಿಷಯ ವಸ್ತುಗಳೊಂದಿಗೆ, ಮೊದಲ ದಿನವೇ ಈ ಸಮಾವೇಶದ ಮುಂದಿನ ದಿನಗಳಿಗೊಂದು ಶಕ್ತಿಯುತ ಹಾಗೂ ಪ್ರೇರಣಾದಾಯಕ ಶೈಲಿಯನ್ನು ಸ್ಥಾಪಿಸಿತು.

ಆಳ್ವಾಸ್: ವರ್ಷದ 3ನೇ ಉಚಿತ ನೇತ್ರ ತಪಾಸಣೆ

Article Image

ಆಳ್ವಾಸ್: ವರ್ಷದ 3ನೇ ಉಚಿತ ನೇತ್ರ ತಪಾಸಣೆ

ವಿದ್ಯಾಗಿರಿ: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವರ್ಷದ ಮೂರನೇ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನಾ ಕ್ರಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಕಳೆದ ಬಾರಿ ವಿವಿಧ ಸಮುದಾಯಗಳ ಸಹಯೋಗದಲ್ಲಿ 9 ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲಾಗಿತ್ತು. ಇದರಲ್ಲಿ 1478 ಜನರು ಪಾಲ್ಗೊಂಡು, 784 ಜನರಿಗೆ ಉಚಿತ ಕನ್ನಡಕ ಹಾಗೂ 109 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಕೈಗೊಳ್ಳಲಾಗಿದೆ ಎಂದರು. ಜೂನ್ 16ಕ್ಕೆ ಮುಂದಿನ ಹಂತದ ಉಚಿತ ನೇತ್ರ ತಪಾಸಣಾ ಶಿಬಿರವು ನಡೆಯಲಿದೆ ಎಂದು ತಿಳಿಸಿದರು. ಈ ಬಾರಿಯ ಒಟ್ಟು ಮೂರು ಹಂತದ ಶಿಬಿರಗಳಲ್ಲಿ 348 ಮಂದಿ ಭಾಗಿಯಾಗಿ 178 ಜನರು ಉಚಿತ ಕನ್ನಡಕ ಪಡೆಯಲು ಹಾಗೂ 39 ಜನರು ಶಸ್ತ್ರ ಚಿಕಿತ್ಸೆಯನ್ನು ಪಡೆಯಲು ಹೆಸರು ನೋಂದಾಯಿಸಿಕೊಂಡರು. ಕಾರ್ಯಕ್ರಮದಲ್ಲಿ ಮಂಗಳೂರಿನ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ. ಆಕಾಂಕ್ಷ ಶೆಟ್ಟಿ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ, ಮೂಡುಬಿದಿರೆಯ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ, ಮೂಡುಬಿದಿರೆಯ ಭಾರತೀಯ ಜೈನ ಮಿಲನ್ ಕೋಶಾಧಿಕಾರಿ ಪುಷ್ಪರಾಜ್ ಜೈನ್, ಜಂಟಿ ಕಾರ್ಯದರ್ಶಿ ಅನಂತವೀರ್ ಜೈನ್, ಅಶ್ವಥ್ಥಪುರದ ಶ್ರೀಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ, ಮರಾಠಿ ಸಮಾಜ ಸೇವಾ ಸಂಘದ ಮೂಡುಬಿದಿರೆಯ ಅಧ್ಯಕ್ಷ ರಾಮಚಂದ್ರ ಕೆಂಬಾರೆ, ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶೀನ ಎಂ, ಮಿಜಾರು-ಎಡಪದವು ಗಾಣಿಗ ಯಾನೆ ಸಫಲಿಗ ಸೇವಾ ಸಂಘದ ಅಧ್ಯಕ್ಷ ಭಾಸ್ಕರ ಸಫಲಿಗ, ಯುವವಾಹಿನಿ ಮೂಡುಬಿದಿರೆ ಘಟಕದ ಉಪಾಧ್ಯಕ್ಷ ವಿದೇಶ ಎಂ ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ಕಿರಿಯ ವೈದ್ಯ ಡಾ ಸುಮಂತ್ ನಿರ್ವಹಿಸಿದರು.

ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

Article Image

ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

ಸಂಬಂಧಿಕರೇ ಕೆಲವೊಂದು ರೋಗಿಗಳ ಶುಶ್ರೂಷೆ ಮಾಡಲು ಹಿಂಜರಿಯುತ್ತಾರೆ. ಆದರೆ ದಾದಿಯರು ಮತ್ತು ವೈದ್ಯರು ಅದನ್ನು ಕರ್ತವ್ಯದ ದೃಷ್ಟಿಯಿಂದ ಯಾವುದೇ ಹಿಂಜರಿಕೆ ಇಲ್ಲದೆ ರೋಗಿಗಳ ಸೇವೆ ಮಾಡುತ್ತಾರೆ. ಮಧ್ಯರಾತ್ರಿಯೂ ನಿದ್ದೆ ಇಲ್ಲದೆ ರೋಗಿಗಳ ಸೇವೆ ಮಾಡುವ ದಾದಿಯರ ಸೇವೆ ನಿಜವಾಗಿಯೂ ಶ್ಲಾಘನೀಯ. ರೋಗಿಗಳ ಸೇವೆ ಮಾಡುವ ಎಲ್ಲಾ ದಾದಿಯರ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ದಂಪತಿಗಳ ಶುಭಾಶೀರ್ವಾದ ದಾದಿಯರ ಪಾಲಿಗೆ ಸದಾ ಇದೆ ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಹೇಳಿದರು. ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ದಾದಿಯರ ದಿನಾಚರಣೆಯ ಪ್ರಯುಕ್ತ ದಾದಿಯರನ್ನು ಗೌರವಿಸಿ ಮಾತನಾಡುತ್ತಾ ವೈದ್ಯಕೀಯ ಕ್ಷೇತ್ರದ ಸೇವೆಯಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆಯ ಸೇವೆ ದಾದಿಯರದ್ದು ಎಂದರು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ದಾದಿಯರಿಗೆ ಶುಭ ಹಾರೈಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಶುಭ ಹಾರೈಸಿ ಮಾತನಾಡಿ, ವೈದ್ಯರಿಗೆ ರೋಗಿಗಳ ಸೇವೆ ಮಾಡಲುದಾದಿಯರ ಸಹಾಯ ಅತ್ಯಂತ ಅಗತ್ಯ. ಅದರಲ್ಲೂ ನಮ್ಮ ಆಸ್ಪತ್ರೆಯ ದಾದಿಯರ ಸೇವೆ ಅಮೋಘವಾದದ್ದು ಎಂದರು. ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರು ಎಲ್ಲಾ ದಾದಿಯರಿಗೆ ಕರ್ತವ್ಯದ ಪ್ರತಿಜ್ಞಾವಿಧಿ ಬೋಧಿಸಿ, ಮಾತನಾಡುತ್ತಾ, ದಾದಿಯರು ವೈದ್ಯಕೀಯ ಕ್ಷೇತ್ರದ ಬೆನ್ನೆಲುಬು, ಪೂಜ್ಯ ಹೆಗ್ಗಡೆಯವರು ಮತ್ತು ಅವರ ಪರಿವಾರದವರ ಪ್ರೀತಿ, ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರ ಕಾಳಜಿ ಮತ್ತು ಪ್ರೋತ್ಸಾಹ, ವೈದ್ಯರ ಬೆಂಬಲದೊಂದಿಗೆ ಈ ಸಂಸ್ಥೆಯಲ್ಲಿ ದುಡಿಯುವ ಸದಾವಕಾಶ ನಮಗೆ ದೊರೆತಿದೆ. ಪೂಜ್ಯರ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದೇ ನಮ್ಮೆಲ್ಲರ ಸೌಭಾಗ್ಯ ಎಂದರು. ಇದೇ ಸಂದರ್ಭದಲ್ಲಿ ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರನ್ನು ಸನ್ಮಾನಿಸಲಾಯಿತು. ಎಲ್ಲಾ ದಾದಿಯರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Article Image

ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್ಸ ಸಹಯೋಗದಲ್ಲಿ ಮಾ. 7ರಂದು ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ ನಡೆಯಿತು. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಂತೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಸಹಕಾರದಲ್ಲಿ ಈ ಆಸ್ಪತ್ರೆಯಲ್ಲಿ ಹಲವಾರು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನೂರಾರು ಉಚಿತ ಶಿಬಿರಗಳಿಂದ ಜನಮನ ಗೆದ್ದಿರುವ ನಮ್ಮ ಆಸ್ಪತ್ರೆಯಲ್ಲಿ ಈ ದಿನ ವಿಶೇಷವಾಗಿ ಮಹಿಳೆಯರ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದರು. ಕೆನರಾ ಬ್ಯಾಂಕ್ ಡಿ.ಜಿ.ಎಂ, ನಾಗಪುರ ಇದರ ರೀಜನಲ್ ಹೆಡ್ ಆಗಿರುವ ಸುರೇಂದ್ರ ಬಾಬು ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಸೌಲಭ್ಯವಿರುವ ಆಸ್ಪತ್ರೆ ತೆರೆದು ವೈದ್ಯಕೀಯ ಸೇವೆ ಒದಗಿಸಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯ ನಿಜವಾಗಲೂ ಶ್ಲಾಘನೀಯ. ಎಲ್ಲರೂ ಈ ಆಸ್ಪತ್ರೆಯ ಮತ್ತು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಡಾ. ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್ ಸಂತಾನೋತ್ಪತ್ತಿ ಔಷಧ ಕನ್ಸಲ್ಟೆಂಟ್ ಆಗಿರುವ ಡಾ. ಪ್ರಮೋದ ಲಕ್ಷ್ಮಣ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಗ್ರಾಮೀಣ ಭಾಗದ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವುದು ನನ್ನ ಸೌಭಾಗ್ಯ ಎಂದರು. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸ್ವರ್ಣಲತಾ ಇವರು ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ಇತ್ಯಾದಿಗಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಂಡÀರೆ ರೋಗಿಗಳು ಗುಣಮುಖರಾಗುತ್ತಾರೆ. ಇದೇ ಉದ್ದೇಶದಿಂದ ನಡೆಸಲ್ಪಡುವ ಈ ಶಿಬಿರದ ಪ್ರಯೋಜನವನ್ನು ಎಲ್ಲರು ಪಡೆದುಕೊಳ್ಳುವಂತೆ ವಿನಂತಿಸಿದರು. ಸ್ಕ್ಯಾನಿಂಗ್ ತಜ್ಞರಾದ ಡಾ| ಮಹೇಶ್, ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್.ಪಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಪ್ರಿಯಾಂಕ, ಡಾ. ಅನ್ವಿತಾ ರಾವ್ ಉಪಸ್ಥಿತರಿದ್ದು, ಶಿಬಿರಕ್ಕೆ ಶುಭ ಹಾರೈಸಿದರು. 100ಕ್ಕೂ ಅಧಿಕ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು. ಮಾರ್ಕೆಟಿಂಗ್ ಎಕ್ಷಕ್ಯೂಟಿವ್ ಸುಮಂತ್ ರೈ ಕಾರ್ಯಕ್ರಮ ಸಂಯೋಜಿಸಿ, ಸಂಪರ್ಕ ಅಧಿಕಾರಿ ಚಿದಾನಂದ ಕಾರ್ಯಕ್ರಮ ನಡೆಸಿಕೊಟ್ಟರು.

ಸತ್ತೂರು, ಧಾರವಾಡ : ಜೀವ ಉಳಿಸುವ ಕೌಶಲ್ಯಗಳ ತರಬೇತಿ

Article Image

ಸತ್ತೂರು, ಧಾರವಾಡ : ಜೀವ ಉಳಿಸುವ ಕೌಶಲ್ಯಗಳ ತರಬೇತಿ

ಸತ್ತೂರು, ಧಾರವಾಡ ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ, ತುರ್ತು ಚಿಕಿತ್ಸಾ ವಿಭಾಗವು AHA (ಅಮೇರಿಕನ್ ಹಾರ್ಟ್ ಅಸೋಸಿಯೇಷನ್) ಸಹಯೋಗದೊಂದಿಗೆ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಕೌಶಲ್ಯಗಳನ್ನು ತರಬೇತಿ ನೀಡಲು AHA ಪ್ರಮಾಣೀಕೃತ BLS (ಬೇಸಿಕ್ ಲೈಫ್ ಸಪೋರ್ಟ್) ಮತ್ತು ACLS (ಅಡ್ವಾನ್ಸ್ಡ್ ಕಾರ್ಡಿಯಾಕ್ ಲೈಫ್ ಸಪೋರ್ಟ್) ಕೋರ್ಸ್ಗಳ ಘಟಕವನ್ನು ಪ್ರಾರಂಭಿಸುತ್ತಿದೆ. ಈ ತರಬೇತಿಯು ಉತ್ತರ ಕರ್ನಾಟಕದಲ್ಲಿ ಇದೇ ಮೊದಲನೆಯದು. ಒಂದು ದಿನದ BLS ತರಬೇತಿ ಕಾರ್ಯಕ್ರಮದ ಉದ್ದೇಶವು ವೈದ್ಯಕೀಯ ಸಹಾಯವನ್ನು ಪಡೆಯುವ ಮೊದಲು ಯಾರಾದರೂ ಯಾವುದೇ ಸ್ಥಳದಲ್ಲಿ ಹೃದಯ ಸ್ತಂಭನ ಎದುರಾದಾಗ ಜೀವ ಉಳಿಸುವ ಕೌಶಲ್ಯವನ್ನು ಕಲಿಸುತ್ತದೆ. ಸಾಮಾನ್ಯ ಜನರು ಇದರ ತರಬೇತಿ ಪಡೆದು ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಸಹಾಯ ಮಾಡಬಹುದಾಗಿದೆ. 2 ದಿನಗಳ ACLS ತರಬೇತಿ ಕಾರ್ಯಕ್ರಮವು ಮುಖ್ಯವಾಗಿ ಆರೋಗ್ಯ ವೃತ್ತಿಪರರಾದ ವೈದ್ಯರು, ದಾದಿಯರು, ಭೌತಚಿಕಿತ್ಸಕರು, ದಂತ ಮತ್ತು ವೈದ್ಯಕೀಯ ಪದವೀಧರರು, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸ್ನಾತಕೋತ್ತರ ಪದವೀಧರರಿಗೆ ಅಗತ್ಯವಾಗಿರುತ್ತದೆ. ACLS ತರಬೇತಿಯು ಔಷಧಿಗಳನ್ನು ನೀಡುವುದು, ಸುಧಾರಿತ ವಾಯುಮಾರ್ಗ ತಂತ್ರಗಳನ್ನು ಬಳಸುವುದು ಮತ್ತು ಡಿಫಿಬ್ರಿಲೇಷನ್‌ನೊಂದಿಗೆ ಹೃದಯದ ಸ್ತಂಭನವನ್ನು ನಿರ್ವಹಿಸುವಂತಹ ಕೌಶಲ್ಯಗಳನ್ನು ಒಳಗೊಂಡಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ. ಶಾಹನವಾಜ್ (ಮೊ: 97401 44367) ಮತ್ತು ಡಾ. ಅಮೀತ್ (ಮೊ: 72597 85318) ತುರ್ತು ಚಿಕಿತ್ಸಾ ವಿಭಾಗ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಧಾರವಾಡ ದೂರವಾಣಿ: 0836 247 4104, Extn.: 7063 Email: emergencymed@sdmucmsh.edu.in

ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ

Article Image

ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ

ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ. ಸ್ಪಾಂಡಿಲೋಆರ್ಥೈಟಿಸ್, ಸಿಸ್ಟಮಿಕ್ ಲೂಪಸ್, ಎರಿಥೆಮಾಟೋಸಸ್ (SLE), ಸಂಧಿವಾತ, ಅಸ್ಥಿಸಂಧಿವಾತ, ಸೋರಿಯಾಸಿಸ್, ವಾಸ್ತುಲೈಟಿಸ್‌, ಸ್ಟೆರೋಡರ್ಮಾ, ಮಕ್ಕಳ ಸಂಧಿವಾತ, ರುಮ್‌ಟಾಯ್ಡ್ ಸಂಧಿವಾತ‌ ರೋಗ ಲಕ್ಷಣ ಹೊಂದಿರುವವರು ಭಾಗವಹಿಸಬಹುದು. ಶಿಬಿರದಲ್ಲಿ ಲಭ್ಯಏರುವ ತಜ್ಞ ವೈದ್ಯರು: ಡಾ. ಶಿವ್‌ರಾಜ್‌ ಪಡಿಯಾ‌ (MBBS, MD, DM ಕನ್ದಪ್ಟೆಂಟ್ ರುಮಟಾಲಜಸ್ಟ್ ಮತ್ತು ಕ್ಲಿನಿಕಲ್ ಇಮ್ಮೂನಾಲಜಸ್ಟ್ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ, ಮಂಗಳೂರು) ಡಾ. ಪ್ರತ್ಯಷ ಮಣಿಕುಪ್ಪಂ (MBBS, MD, DM ಕನ್ಸಲ್ಲೆಂಟ್ ರುಮಟಾಲಜಿಸ್ಟ್ ಮತ್ತು ಕ್ಲಿನಿಕಲ್ ಇನ್ನೂ ನಾಲಟಿಸ್ಟ್ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ, ಮಂಗಳೂರು) ಸೌಲಭ್ಯಗಳು: ನುರಿತ ತಜ್ಞ ವೈದ್ಯರ ಜತೆ ಉಚಿತ ಸಮಾಲೋಚನೆ, ರಕ್ತ ಪರೀಕ್ಷೆಗಳಿಗೆ ಶೇ. 10 ಲಿಯಾಯಿತಿ, ಔಷಧಿಗಳಿಗೆ ಶೇ. 10 ರಿಯಾಯಿತಿ. ದಿನಾಂಕ: 2 ಏಪ್ರಿಲ್ 2025 ಬುಧವಾರದಂದು ಬೆಳಗ್ಗೆ 9.00ರಿಂದ ಅಪರಾಹ್ನ 2.30 ರವರೆಗೆ ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ಇಲ್ಲಿನ ಹೊರರೋಗಿ ಏಭಾಗದಲ್ಲಿ ನಡೆಯಲಿದೆ. ನೋಂದಾವಣಿಗಾಗಿ ದಯವಿಟ್ಟು ಕರೆ ಮಾಡಿ: 77603 97878, 77603 97878 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99720 00438

ಧರ್ಮಸ್ಥಳ ಪಾದಯಾತ್ರಿಗಳ ಸೇವೆಗಾಗಿ ಉಚಿತ ವೈದ್ಯಕೀಯ ಶಿಬಿರಗಳ ಉದ್ಘಾಟನೆ

Article Image

ಧರ್ಮಸ್ಥಳ ಪಾದಯಾತ್ರಿಗಳ ಸೇವೆಗಾಗಿ ಉಚಿತ ವೈದ್ಯಕೀಯ ಶಿಬಿರಗಳ ಉದ್ಘಾಟನೆ

ಪಾದಯಾತ್ರಿಗಳಿಗಾಗಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಬಹಳ ಮುಖ್ಯವಾಗಿ ಪಾದಯಾತ್ರಿಗಳ ಆರೋಗ್ಯ ರಕ್ಷಣೆಗಾಗಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಆರೋಗ್ಯ ಸೇವೆ ನೀಡುತ್ತಿರುವುದು ನಿಜವಾಗಲೂ ಶ್ಲಾಘನೀಯ ಎಂದು ಡಾ. ಕೆ.ವಿ. ಮೂರ್ತಿ ಕಕ್ಕಿಂಜೆ ಹೇಳಿದರು. ಅವರು ಪಾದಯಾತ್ರಿಗಳಿಗೆ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಚಾರ್ಮಾಡಿಯಲ್ಲಿ ತೆರೆಯಲಾದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಪಾದಯಾತ್ರಿಗಳಿಗೆ ಶುಭ ಹಾರೈಸಿದರು. ಮಹಾಶಿವರಾತ್ರಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಬರುತ್ತಿದ್ದು, ಇವರ ಆರೋಗ್ಯ ರಕ್ಷಣೆಗೆ ಅನುಕೂಲವಾಗುವಂತೆ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮಾತೃಶ್ರೀ ಅಮ್ಮನವರ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಆರೋಗ್ಯ ಶಿಬಿರಗಳನ್ನು ತೆರೆಯಲಾಗಿದೆ. ಚಾರ್ಮಾಡಿ, ಮುಂಡಾಜೆ, ಬೂಡುಜಾಲು, ಎಸ್.ಡಿ.ಎಂ ಆಸ್ಪತ್ರೆ, ಎಸ್.ಡಿ.ಎಂ. ಡಿ.ಎಡ್ ಕಾಲೇಜು ಬಳಿ, ಹಾಗೂ ಧರ್ಮಸ್ಥಳ ಮುಂತಾದ 6 ಕಡೆಗಳಲ್ಲಿ ಆರೋಗ್ಯ ಶಿಬಿರಗಳನ್ನು ತೆರೆದು, ಅಗತ್ಯವಿರುವ ಔಷಧಿ, ಮುಲಾಮು, ಸ್ಪ್ರೇ ಬ್ಯಾಂಡೇಜ್ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. 2024ರಲ್ಲಿ 24,506 ಮಂದಿ ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಿದ್ದು, ಇದಕ್ಕಾಗಿ ಸರಿಸುಮಾರು 7 ಲಕ್ಷ ರೂಪಾಯಿಯನ್ನು ಪೂಜ್ಯ ಖಾವಂದರರ ಆದೇಶದಂತೆ ವಿನಿಯೋಗಿಸಲಾಗಿತ್ತು ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಅಖಿಲಾ, ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಪರ್ಚೇಸ್ ಮೆನೇಜರ್ ಅಜಯ್ ಕುಮಾರ್ ಪಿ.ಕೆ, ಶಿಬಿರದ ಸಂಯೋಜಕ ರವೀಂದ್ರ ಗುಡಿಗಾರ್ ಉಪಸ್ಥಿತರಿದ್ದರು. ಜಗನ್ನಾಥ ಎಂ. ಕಾರ್ಯಕ್ರಮ ನಿರೂಪಿಸಿದರು.

ಉಜಿರೆ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ

Article Image

ಉಜಿರೆ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ

ಉಜಿರೆ, ಜ.1: ಆರ್ಥಿಕ ಅಗತ್ಯವಿರುವ ರೋಗಿಗಳಿಗೆ ಸಹಾಯವಾಗಲಿ ಅನ್ನುವ ಉದ್ದೇಶದಿಂದ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಾರ್ಷಿಕ 1.40 ಕೋಟಿ ರೂ. ಮೊತ್ತದ ಉಚಿತ ಡಯಾಲಿಸಿಸ್ ಸೇವೆ ನೀಡುವ ಯೋಜನೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ ಎಂದು ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು. ಅವರು ಉಜಿರೆಯ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಡಯಾಲಿಸಿಸ್ ರೋಗಿಗಳಿಗೆ ನಿರಂತರ ಆರೈಕೆ ಬೇಕಾಗಿದ್ದು, ಅವರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ. ಆದರೆ ಬಡ ರೋಗಿಗಳಿಗೆ ಇದು ಸವಾಲಿನ ಸಂಗತಿಯಾಗಿದ್ದು, ಅವರ ಉಳಿತಾಯವೆಲ್ಲಾ ಡಯಾಲಿಸಿಸ್-ನಂತಹ ಚಿಕಿತ್ಸೆಗೇ ವ್ಯಯವಾಗುತ್ತದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಈ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಲಾಗಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಆರ್ಥಿಕ ಸಹಾಯದ ಅಗತ್ಯವಿರುವವರಿಗೆ ಹಾಗೂ ಅಶಕ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಹಿಂದೆಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಸಂಪೂರ್ಣ ಸುರಕ್ಷಾ ಯೋಜನೆಯೂ ಜಾರಿಯಲ್ಲಿದೆ ಎಂದರು. ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು, ಉಜಿರೆಯ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2022ರ ಜನವರಿಯಲ್ಲಿ ಡಯಾಲಿಸಿಸ್ ಸೇವೆ ಆರಂಭವಾಗಿದ್ದು, ಒಟ್ಟು 11 ಡಯಾಲಿಸಿಸ್ ಯಂತ್ರಗಳಿವೆ‌. ಈ ಹವಾನಿಯಂತ್ರಿತ ಕೇಂದ್ರದಲ್ಲಿ ಇದುವರೆಗೂ ಪ್ರತಿದಿನ‌ 30ಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದ್ದು, ಒಟ್ಟು 10 ಸಾವಿರಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದೆ. ಬೆಳ್ತಂಗಡಿ ತಾಲೂಕಿನ ಆಸುಪಾಸಿನಲ್ಲಿರುವ ರೋಗಿಗಳಿಗೆ ಈ ಡಯಾಲಿಸಿಸ್ ಸೆಂಟರ್ ವರದಾನವಾಗಿತ್ತು. ಇದರ ಜೊತೆಗೆ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿರುವುದು ಬಹಳಷ್ಟು ರೋಗಿಗಳಿಗೆ ಅನುಕೂಲವಾಗಲಿದೆ ಎಂದರು. ಪ್ರತಿ ರೋಗಿಗೆ ಒಂದು ಬಾರಿಯ ಡಯಾಲಿಸಿಸ್-ಗೆ 1,500 ರೂಪಾಯಿ ವೆಚ್ಚವಾಗುತ್ತದೆ. ಒಬ್ಬ ರೋಗಿಗೆ ವಾರಕ್ಕೆ 3 ರಿಂದ 4 ಡಯಾಲಿಸಿಸ್ ಅಗತ್ಯವಿರುತ್ತದೆ. ಇದೀಗ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಒಬ್ಬ ರೋಗಿಗೆ ತಿಂಗಳಿಗೆ 12 ಸಾವಿರದಿಂದ 24 ಸಾವಿರ ರೂಪಾಯಿಗಳವರೆಗೂ ಉಳಿತಾಯವಾಗುತ್ತದೆ. ಉಚಿತ ಡಯಾಲಿಸಿಸ್ ಯೋಜನೆಯಲ್ಲಿ ಒಬ್ಬ ರೋಗಿ ಮಾಸಿಕ 12 ಡಯಾಲಿಸಿಸ್ ಮಾಡಿಸಿಕೊಳ್ಳಬಹುದು. ಇದರ ಜೊತೆಗೆ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2024 ನೇ ಸಾಲಿನಲ್ಲಿ 4.98 ಕೋಟಿ ರೂ. ಮೊತ್ತದ ಉಚಿತ ವೈದ್ಯಕೀಯ ಸೇವೆಯನ್ನು ರೋಗಿಗಳಿಗೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷವೂ 40ಕ್ಕೂ ಅಧಿಕ ಉಚಿತ ವೈದ್ಯಕೀಯ ಶಿಬಿರಗಳನ್ನೂ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಜಿಶಿಯನ್ ಡಾ. ಸಾತ್ವಿಕ್ ಜೈನ್, ಜೆನರಲ್ ಫಿಜಿಶಿಯನ್ ಡಾ. ಬಾಲಕೃಷ್ಣ ಭಟ್, ಮೆಡಿಕಲ್ ಸುಪರಿಡೆಂಟ್ ಡಾ. ದೇವೇಂದ್ರ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವೈದ್ಯೆ ಅನುಷಾ ನಿರೂಪಿಸಿದರು. ಸಂಪರ್ಕಾಧಿಕಾರಿ ಚಿದಾನಂದ್ ಅವರು ಧನ್ಯವಾದ ಸಮರ್ಪಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ, ಧಾರವಾಡ ಇದರ ಸಹಯೋಗದಲ್ಲಿ ಅ.4 ಮತ್ತು 5 ರಂದು ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ ನಡೆಯಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು- ಮಾನವ ಶರೀರ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಪಂಚೇಂದ್ರಿಯಗಳೇ ಮೂಲ ಸಾಧನ. ಎಲ್ಲಾ ಅಂಗಗಳ ಬಗ್ಗೆ ಅತೀ ಕಾಳಜಿ ಹೊಂದಿರುವ ಮಾನವ ಕಿವಿಗಳ ಬಗ್ಗೆ ನಿರ್ಲಕ್ಷ ತೋರಿಸುತ್ತಾನೆ. ಪಂಚೇಂದ್ರಿಯಗಳಲ್ಲಿ ಒಂದಕ್ಕೆ ಲೋಪವಾದರೂ ಇತರ ಇಂದ್ರಿಯಗಳ ಮೇಲೆ ಪರಿಣಾಮ ಬೀರಬಲ್ಲದು. ಆದ್ದರಿಂದ ಶ್ರವಣದೋಷದ ಬಗ್ಗೆ ನಿರ್ಲಕ್ಷ ಬೇಡ. ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಗ್ರಾಮೀಣ ಭಾಗದಲ್ಲಿದ್ದು, ನಗರದ ಹೈಟೆಕ್ ಆಸ್ಪತ್ರೆಗಳಂತೆ ಅತ್ಯಾಧುನಿಕ ವೈದ್ಯಕೀಯ ಸೇವೆ ಹಾಗೂ ಕ್ಲಿಷ್ಟಕರ ಶಸ್ತçಚಿಕಿತ್ಸೆಗಳನ್ನು ಮಿತದರದಲ್ಲಿ ನಡೆಸುತ್ತಿದೆ. ಆಸ್ಪತ್ರೆಯ ಬಗ್ಗೆ ಜನ ಒಳ್ಳೆಯ ಅಭಿಪ್ರಾಯ ಹೊಂದಿರುವುದು ಸ್ಥಳಿಯರಾದ ನಮಗೆ ಖುಷಿ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಆಸ್ಪತ್ರೆಯಲ್ಲಿ ಸುಸಜ್ಜಿತ ಶ್ರವಣ ಮತ್ತು ಮಾತು ಪರಿಶೀಲನಾ ಸೆಂಟರ್ ತೆರೆದು ಇನ್ನಷ್ಟು ಸೇವೆ ನೀಡುವಂತಾಗಲಿ ಎಂದರು. ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ವಾಕ್ ಮತ್ತು ಶ್ರವಣ ತಜ್ಞರಾದ ಡಾ| ವಸೀಮ್ ಮಾತನಾಡಿ- ವಿಶ್ವದಲ್ಲಿ 190 ಕೋಟಿ ಮಂದಿ ಶ್ರವಣದೋಷ ಹೊಂದಿದ್ದಾರೆ. ಇದರಲ್ಲಿ 7 ಶೇಕಡಾ ಮಂದಿ ಭಾರತದಲ್ಲಿಯೇ ಇದ್ದಾರೆ. ಅತಿಯಾದ ಹೆಡ್‌ಪೋನ್ ಬಳಕೆ ಮತ್ತು ಡಿಜೆ ಸೌಂಡ್ ಶ್ರವಣದೋಷಕ್ಕೆ ಕಾರಣವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸರ್ವೆ ಪ್ರಕಾರ ಮುಂದಿನ ದಿನಗಳಲ್ಲಿ 10 ರಲ್ಲಿ 4 ಮಂದಿ ಶ್ರವಣ ದೋಷ ಸಮಸ್ಯೆ ಎದುರಿಸಲಿದ್ದಾರೆ. ಶ್ರವಣದೋಷ ನಿವಾರಣೆ ಕ್ಲಿಷ್ಟಕರವಾದದ್ದು. ಕೇಳುವ ಸಾಮರ್ಥ್ಯ ಎಷ್ಟು ಮತ್ತು ಯಾವುದು ಹಿತ ಎಂಬುದನ್ನು ಅರಿತು ಚಿಕಿತ್ಸೆ ನೀಡಬೇಕಾಗುತ್ತದೆ ಎಂದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತಾ, ಉಜಿರೆಯಲ್ಲಿ ಪ್ರಥಮ ಬಾರಿಗೆ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ ನಡೆಯುತ್ತಿದೆ. ಶ್ರವಣ ಮತ್ತು ಮಾತು ಪರಿಶೀಲನಾ ಚಿಕಿತ್ಸೆ ಅತೀ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿನ ಜನ ದೂರದ ಊರಿಗೆ ಹೋಗಿ ಇಂತಹ ಚಿಕಿತ್ಸೆ ಪಡೆಯುವುದು ಕಷ್ಟ. ಇದೇ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಇದರಿಂದ ಬೆಳ್ತಂಗಡಿ ಮತ್ತು ಆಸುಪಾಸಿನ ತಾಲೂಕಿನ ಜನತೆಗೆ ಪ್ರಯೋಜನವಾಗಿದೆ ಎಂದರು. 2 ದಿನ ನಡೆದ ಉಚಿತ ಶಿಬಿರದಲ್ಲಿ ಉಜಿರೆ ಎಸ್.ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್, ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ವಾಕ್ ಮತ್ತು ಶ್ರವಣ ತಜ್ಞರಾದ ಡಾ| ವಸೀಮ್ ಮತ್ತು 8 ಮಂದಿಯ ತಂಡದವರಿಂದ ಎಲ್ಲಾ ವಯಸ್ಸಿನ ಜನರಿಗೆ ಮಾತು, ಭಾಷೆ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಲಾಯಿತು. 150ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಶಿಬಿರದಲ್ಲಿ ಭಾರತ ಸರಕಾರದ ಎ.ಡಿ.ಐ.ಪಿ ಯೋಜನೆಯಡಿ ಶ್ರವಣ ಉಪಕರಣಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಮಮತಾ, ಜಯಶ್ರೀ, ಅಕ್ಷತಾ ಮತ್ತು ನಿಶಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಉದ್ಘಾಟನಾ ಸಮಾರಂಭದಲ್ಲಿ ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್,ಪಿ ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 30 ಲಕ್ಷ ಮೌಲ್ಯದ 2 ಬಿಪಿಎಲ್ ಲೋವೆನ್‌ಸ್ಪೆöನ್ ಎಲಿಸಾ-600 ವೆಂಟಿಲೇಟರ್‌ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು. ಡಿ. ಹರ್ಷೇಂದ್ರ ಕುಮಾರ್ ಅವರು ಹೊಸ ತಂತ್ರಜ್ಞಾನದ 2 ಐಸಿಯು ವೆಂಟಿಲೇಟರ್‌ಗಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿಯೊಂದು ಸಂಸ್ಥೆಗಳು ಕೂಡ ಸೇವೆಯ ಉದ್ದೇಶದಿಂದ ನಡೆಸಲ್ಪಡುತ್ತದೆ. ಖರ್ಚು ಬಗ್ಗೆ ಚಿಂತಿಸದೆ ಜನತೆಗೆ ಉತ್ತಮ ಸೇವೆ ನೀಡುವ ಗುರಿಯೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದೇ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಸುಧಾರಿತ ವೈದ್ಯಕೀಯ ಸೇವೆ ನೀಡಲು ಸಹಕಾರಿಯಾಗಿದೆ. ಹಾಗಾಗಿ ದಿನೇ-ದಿನ ಈ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಈ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳು ಕೂಡ ಈ ಆಸ್ಪತ್ರೆಯ ಮೇಲೆ ಗ್ರಾಮೀಣ ಜನತೆಯಲ್ಲಿ ಭರವಸೆ ಹೆಚ್ಚಿಸಿದೆ. ಈ ಆಸ್ಪತ್ರೆ ಅನೇಕ ಮಂದಿಗೆ ಉದ್ಯೋಗದ ಅವಕಾಶ ನೀಡಿ ಅನೇಕ ಕುಟುಂಬಗಳು ನೆಮ್ಮದಿಗೆ ಕಾರಣವಾಗಿದೆ. ಇತರ ಅನೇಕರಿಗೆ ಪರೋಕ್ಷ ರೀತಿಯಲ್ಲಿ ವಿವಿಧ ಅವಕಾಶ ಒದಗಿಸುವ ಮೂಲಕ ಪ್ರಯೋಜನಕಾರಿಯಾಗಿದೆ ಎಂದರು. 9 ಹಾಸಿಗೆಗಳ ಸುಸಜ್ಜಿತ ಐಸಿಯು ಹೊಂದಿರುವ ಈ ಆಸ್ಪತ್ರೆಯು ಈಗಾಗಲೇ 6 ವೆಂಟಿಲೇಟರ್‌ಗಳನ್ನು ಹೊಂದಿದ್ದು, ಈಗ ಒಟ್ಟು 8 ವೆಂಟಿಲೇಟರ್‌ಗಳಿವೆ. ಹೃದಯಾಘಾತ, ಸ್ಟ್ರೋಕ್, ಉಸಿರಾಟದ ಸಮಸ್ಯೆ ಮುಂತಾದ ತುರ್ತು ಸಂದರ್ಭದಲ್ಲಿ ಈ ಅತ್ಯಾಧುನಿಕ ವೆಂಟಿಲೇಟರ್‌ಗಳು ಬಹಳ ಉಪಯುಕ್ತವಾಗಲಿದೆ. ಇದು ಉತ್ತಮ ಗುಣಮಟ್ಟದ ಉಸಿರಾಟವನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಿರುವ ಪ್ಯಾರಾಮೀಟರ್ ಹಾಗೂ ರೋಗಿಯಿಂದ ಸಂಪರ್ಕ ಕಳೆದುಕೊಂಡಾಗ ಎಚ್ಚರಿಸುವ ಸೈರನ್ ಹೊಂದಿದ್ದು, ರೋಗಿಗೆ ಉಸಿರಾಟದಲ್ಲಿ ವ್ಯತ್ಯವಾಗದಂತೆ ನಿಗಾವಹಿಸುತ್ತದೆ. ಹೊಸ ತಂತ್ರಜ್ಞಾನ ಹೊಂದಿರುವ ಈ ವೆಂಟಿಲೇಟರ್ ವಯಸ್ಕರು, ಮಕ್ಕಳು ಮತ್ತು ನವಜಾತ ಶಿಶುಗಳಿಗೆ ಹೊಂದಾಣಿಕೆಯಾಗಬಲ್ಲದು. ಈ ವೆಂಟಿಲೇಟರ್ ಪರ‍್ಟೇಬಲ್ ಆಗಿದೆ. ಅಗತ್ಯ ಬಿದ್ದಾಗ ಆಂಬ್ಯುಲೆನ್ಸ್ಗಳಲ್ಲಿಯೂ ಅಳವಡಿಸಲು ಸಾಧ್ಯವಿದೆ. ಮಂಗಳೂರು ಬಳಿಕ ಈ ಅತ್ಯಾಧುನಿಕ ವೆಂಟಿಲೇಟರ್ ಹೊಂದಿರುವ ಏಕೈಕ ಆಸ್ಪತ್ರೆ ಇದಾಗಿದೆ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ಇಲ್ಲಿನ ವೈದ್ಯರು, ದಾದಿಯರು ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಬ್ಬಿರುವ ರಕ್ತನಾಳದ ಸಮಸ್ಯೆ ಇರುವ 41 ವರ್ಷ ಹಾಗೂ 40 ವರ್ಷ ಪ್ರಾಯದ ಇಬ್ಬರಿಗೆ ಮೊದಲ ಬಾರಿಗೆ ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಕಿರಣ್ ಹಾಗೂ ಅರೆವಳಿಕೆ ತಜ್ಞರಾದ ಡಾ| ಚೈತ್ರಾ ಆರ್. ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳು ಕೂಡ ಅತೀ ಕಡಿಮೆ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ. ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆ ಎನ್ನುವುದು ಶಸ್ತ್ರಚಿಕಿತ್ಸೆ ಇಲ್ಲದೆ ಉಬ್ಬಿರುವ ರಕ್ತನಾಳಗಳಿಗೆ ನೀಡುವ ಚಿಕಿತ್ಸೆಯ ಹೊಸ ವಿಧಾನವಾಗಿದೆ. ಉಬ್ಬಿರುವ ರಕ್ತನಾಳಗಳನ್ನು ತೊಡೆದು ಹಾಕಲು ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯ ನಂತರ ರೋಗಿ ಬಹಳ ಬೇಗನೇ ಚೇತರಿಸಿಕೊಳ್ಳುತ್ತಾರೆ. ಈ ಶಸ್ತ್ರಚಿಕಿತ್ಸೆಯಲ್ಲಿ ಕಡಿಮೆ ನೋವು, ಕಡಿಮೆ ರಕ್ತಸ್ರಾವ ಹಾಗೂ ಸೋಂಕಿನ ಅಪಾಯ ತುಂಬಾ ಕಡಿಮೆ ಇರುತ್ತದೆ. ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯುತ್ತಿದೆ. ನಗರ ಪ್ರದೇಶದ ಅಸ್ಪತ್ರೆಗಳಿಗೆ ಹೋಲಿಸಿದರೆ ಈ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಗ್ಗೆ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ': ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

Article Image

'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ': ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

ಉಜಿರೆ: ಜೀವನವು ಮಾನಸಿಕ ವ್ಯವಸ್ಥೆಯನ್ನು ಅವಲಂಬಿಸಿದೆ ಹಾಗೂ ಆರೋಗ್ಯವೇ ಎಲ್ಲದಕ್ಕೂ ಮೂಲ ಆಧಾರ ಎಂದು ಮೈಸೂರಿನ ಆಹಾರ ಮತ್ತು ಪೌಷ್ಟಿಕಾಂಶ ತಜ್ಞ ಡಾ. ಖಾದರ್ ವಲ್ಲಿ ಹೇಳಿದರು. ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಇಂದು (ಸೆ. 9) ಮನಃಶಾಸ್ತ್ರ ವಿಭಾಗದ (ಪದವಿ, ಸ್ನಾತಕೋತ್ತರ ಪದವಿ) ವತಿಯಿಂದ ಆಯೋಜಿಸಲಾಗಿದ್ದ 'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ' ಕುರಿತ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. “ಇಂದಿನ ಆಧುನಿಕ ಯುಗದಲ್ಲಿ ಜನರು ಫಾಸ್ಟ್ ಫುಡ್ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ದೇಹದಲ್ಲಿ ಹಾರ್ಮೋನ್ ಗಳ ಅಸಮತೋಲನ ಉಂಟಾಗುತ್ತಿದೆ. ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುತ್ತಿಲ್ಲ. ಪೌಷ್ಟಿಕ ಆಹಾರ ಸೇವಿಸುವ ಬದಲು ಅಪೌಷ್ಟಿಕ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಇದರಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಅನೇಕ ಜನರು ಥೈರಾಯಿಡ್ ಮಧುಮೇಹ ರಕ್ತದೊತ್ತಡದಂತಹ ಬಳಲುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಜನರು ಸಿರಿಧಾನ್ಯಗಳನ್ನು ತಮ್ಮ ನಿತ್ಯ ದಿನನಿತ್ಯ ಆಹಾರ ಪದ್ಧತಿಯಲ್ಲಿ ಉಪಯೋಗಿಸಬಹುದು" ಎಂದರು. ಅನೇಕ ಸಿರಿಧಾನ್ಯಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ, ಶಿವಮೊಗ್ಗದ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಡಾ. ಪ್ರೀತಿ ವಿ. ಶಾನಭಾಗ್ ಮಾತನಾಡಿ, "ಹಿಂದಿನ ಕಾಲದಲ್ಲಿ ಆರೋಗ್ಯದ ಏರುಪೇರಿಗೆ ಔಷಧಿಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಔಷಧಿಗಳ ಜೊತೆಗೆ ಕಾಯಿಲೆಗಳು ಹೆಚ್ಚಾಗಿವೆ. ಈಗಿನ ಕಾಲದಲ್ಲಿ ತ್ವರಿತ ಪರಿಣಾಮವನ್ನು ಬಯಸುತ್ತೇವೆ. ಒಂದು ಕೆಲಸ ಆಗುವ ಮುನ್ನವೇ ಇನ್ನೊಂದು ಕೆಲಸದ ಏಳಿಗೆಗೆ ಹೆಜ್ಜೆ ಹಾಕಲು ತಯಾರಾಗಿರುತ್ತೇವೆ. ಅಧ್ಯಯನದ ಪ್ರಕಾರ ಇತ್ತೀಚಿನ ಜನಾಂಗದಲ್ಲಿ ತಾಳ್ಮೆ ಕಡಿಮೆಯಾಗಿ ಎಲ್ಲವನ್ನು ಶೀಘ್ರವಾಗಿ ಮುಗಿಸಬೇಕೆಂಬ ಒತ್ತಡ ಹೆಚ್ಚಾಗಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಮಾನವ ದೇಹವೇ ಒಂದು ರಾಸಾಯನಿಕ ವ್ಯವಸ್ಥೆ. ಹಾಗೆ ಈ ಎಲ್ಲ ರಾಸಾಯನಿಕಗಳು ನಾವು ಹೇಗೆ ಯೋಚಿಸುತ್ತೇವೆ, ಹೇಗೆ ವರ್ತಿಸುತ್ತೇವೆ, ಹೇಗೆ ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸುತ್ತವೆ ಎಂದು ಹೇಳಿದರು. ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ಕಲಾ ನಿಕಾಯದ ಡೀನ್ ಡಾ. ಶ್ರೀಧರ ಎನ್. ಭಟ್, ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ಕುಮಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ರಾಜ್ಯದ ವಿವಿಧೆಡೆಯ 15 ಕಾಲೇಜುಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಅನನ್ಯ ಬಳಗದವರು ಪ್ರಾರ್ಥಿಸಿದರು. ಮನಃಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ವಂದನ ಜೈನ್ ಸ್ವಾಗತಿಸಿ, ಎಂ.ಎಸ್. ಸಿಂದು ವಂದಿಸಿದರು. ಸೀಮಾ ಜಂಗೀರ್ ಮತ್ತು ಜಾನವಿ ಎಮ್. ನಿರೂಪಿಸಿದರು.

ಎಸ್ . ಡಿ . ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,ಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ

Article Image

ಎಸ್ . ಡಿ . ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,ಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,ಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಲ್ಲಾ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಉಚಿತ ECG, BP, GRBS (Sugar Test) ಹಾಗೂ ವೈದ್ಯರ ಸಮಾಲೋಚನೆಯು ನಾಳೆ (ಆ.6) ಬೆಳಿಗ್ಗೆ 9.30ರಿಂದ ಸಂಜೆ 5.00ರ ತನಕ ನಡೆಯಲಿದೆ . ಸೂಚನೆ : ಕೆ.ಕೆವೈಸಿ ಹಾಗೂ ಸುರಕ್ಷಾ ವಿಮಾ ಹೊಂದಿರುವವರು ವಿಮಾ ಕಾರ್ಡ್‌ನ ಪ್ರತಿಯನ್ನು ತರತಕ್ಕದ್ದು. ಎಲ್ಲಾ ಶಿಕ್ಷಕರು ತಮ್ಮ ಶಾಲಾ ಅಥವಾ ಕಾಲೇಜಿನ ಗುರುತಿನ ಚೀಟಿಯನ್ನು ತರತಕ್ಕದ್ದು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ, ವೆಬ್‌ಸೈಟ್: sdmhospitalujire.com ಹೆಸರು ನೋಂದಾಯಿಸಲು ಸಂಪರ್ಕಿಸಿ: 8073349216, 7760397878

ಡೆಂಗ್ಯೂ ಜ್ವರ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ

Article Image

ಡೆಂಗ್ಯೂ ಜ್ವರ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ

ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಉದ್ಯಾನವನ ವಿಭಾಗದ ಸಿಬ್ಬಂದಿಗಳಿಗೆ “ಡೆಂಗ್ಯೂ ಜ್ವರ ತಡೆಗಟ್ಟುವಿಕೆ” ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕೀಟಶಾಸ್ತ್ರಜ್ಞರಾದ ಮಂಜುನಾಥ್ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಈ ಕಾರ್ಯಕ್ರಮವು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಿ ಮತ್ತು ಅವುಗಳ ನಿಯಂತ್ರಣ ಮಾಡುವ ಪ್ರಾಮುಖ್ಯತೆಯನ್ನು ತಿಳಿಸಿದರು. ಸೊಳ್ಳೆ ಕಡಿತದಿಂದ ರಕ್ಷಿಸಲು ವೈಯಕ್ತಿಕ ರಕ್ಷಣಾ ಕ್ರಮಗಳ ಬಳಕೆಗೆ ಒತ್ತು ನೀಡಿತು, ಲಾರ್ವಿವೋರಸ್ ಮೀನುಗಳ (ಗಪ್ಪಿ ಮೀನು) ಜೊತೆಗೆ ಸೊಳ್ಳೆಗಳ ಲಾರ್ವಾ ಮತ್ತು ಪ್ಯೂಪಲ್ ಹಂತಗಳ ನೇರ ಪ್ರದರ್ಶನವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜಕ ಡಾ. ಉಮೇಶ್ ಆರ್. ದೀಕ್ಷಿತ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ರಾಕೇಶ್ ಕೆ. ನಾಯಕ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಸ್ವಯಂ ಸೇವಕರು ಕರಪತ್ರಗಳು ಮತ್ತು ಸ್ಕ್ಯಾಂಡಿಗಳನ್ನು ಬಳಸಿಕೊಂಡು ಸಿಬ್ಬಂದಿಗೆ ಶಿಕ್ಷಣ ನೀಡಿದರು.

“ವೈದ್ಯಕೀಯ ಶಿಕ್ಷಣದಲ್ಲಿ ಅಧ್ಯಯನ” ಎಂಬ ವಿಷಯದ ಕಾರ್ಯಾಗಾರ

Article Image

“ವೈದ್ಯಕೀಯ ಶಿಕ್ಷಣದಲ್ಲಿ ಅಧ್ಯಯನ” ಎಂಬ ವಿಷಯದ ಕಾರ್ಯಾಗಾರ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಶಿಕ್ಷಣ ಘಟಕವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಪ್ರಾಂತೀಯ ನೋಡಲ್ ಕೇಂದ್ರ, ಜೆ.ಎನ್.ಎಂ.ಸಿ. ಬೆಳಗಾವಿಯ ಸಹಯೋಗದೊಂದಿಗೆ ಜುಲೈ 16 ರಿಂದ 18, 2024ರ ವರೆಗೆ “ವೈದ್ಯಕೀಯ ಶಿಕ್ಷಣದಲ್ಲಿ ಅಧ್ಯಯನ” ಎಂಬ ವಿಷಯದ ಮೇಲೆ 3 ದಿನಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಈ ಕಾರ್ಯಾಗಾರವು ಅಧ್ಯಾಪಕರಿಗೆ, ಹೊಸ ಬೋಧನೆಯ ಮತ್ತು ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಹೆಚ್ಚು ಸಹಕಾರಿಯಾಗಿದ್ದು, ಈ ಕಾರ್ಯಾಗಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮೋದಿಸಲ್ಪಟ್ಟಿದೆ. ಅಧ್ಯಾಪಕರು ತಮ್ಮ ದೈನಂದಿನ ಜ್ಞಾನವನ್ನು ನವೀಕರಿಸಲು ಇದು ಉತ್ತಮ ವೇದಿಕೆಯಾಗಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ವೈದ್ಯಕೀಯ ಶಿಕ್ಷಣ ಘಟಕದ ಅಧ್ಯಕ್ಷರಾದ ಡಾ. ರತ್ನಮಾಲಾ ಎಂ. ದೇಸಾಯಿ, ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಶ್ರೀ ಸಾಕೇತ್ ಶೆಟ್ಟಿ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಜೆ.ಎನ್.ಎಂ.ಸಿಯ, ಎನ್.ಎಂ.ಸಿ. ಪ್ರಾಂತೀಯ ನೋಡಲ್ ಕೇಂದ್ರದ ಸಂಯೋಜಕರಾದ ಡಾ. ಜ್ಯೋತಿ ನಾಗಮೋತಿ, ಮತ್ತಿತರರು ಈ ಕಾರ್ಯಾಗಾರವನ್ನು ಉದ್ಘಾಟಿಸಿದರು. ಡಾ. ನಿರಂಜನ್ ಕುಮಾರ ಮತ್ತು ಡಾ. ಜ್ಯೋತಿ ನಾಗಮೋತಿ ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ: ಪರಿಣಾಮಕಾರಿ ಬೋಧನೆಯು ವಿದ್ಯಾರ್ಥಿಗಳನ್ನು ಪರಿವರ್ತಿಸಿ ಪ್ರಬುದ್ಧಗೊಳಿಸುತ್ತದೆ. ಡಿಜಿಟಲ್ ಜ್ಞಾನದ ಕಡೆ ವಿದ್ಯಾರ್ಥಿಗಳು ಬದಲಾಗುತ್ತಿರುವುದು ಕಳಕಳಿಯ ವಿಷಯ. ಬೋಧನೆಯನ್ನು ಆಸಕ್ತಿದಾಯಕ ಮತ್ತು ಸಂವಾದಾತ್ಮಕವಾಗಿ ಮಾಡುವ ಅನಿವಾರ್ಯತೆ ಇದೆ. ಹೊಸ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸುವುದೇ ಶಿಕ್ಷಣದ ಈಗಿನ ಪ್ರಾಶಸ್ತ್ಯವಾಗಿದೆ. ಕಠಿಣ ತರಬೇತಿಯಿಂದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಸರಳಗೋಳಿಸಬಹುದು. ದೃಢ ನಿರ್ಧಾರ ಮತ್ತು ದಿಟ್ಟತನದಿಂದ ಯಾವುದೇ ಭಯವಿಲ್ಲದೆ ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕು. ವೈದ್ಯಕೀಯ ಶಿಕ್ಷಣದಲ್ಲಿ ನವೀನ ಕೌಶಲ್ಯಗಳ ತರಬೇತಿ ಮತ್ತು ಹೊಸ ಜ್ಞಾನಗಳ ಅಗತ್ಯವಿದೆ. ಔಷಧಗುಣ ಶಾಸ್ತ್ರದ ಪ್ರಾಧ್ಯಾಪಕರು ಮತ್ತು ವೈದ್ಯಕೀಯ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ರಾಧಿಕಾ ಶೇರ್ಖಾನೆ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ. ರತ್ನಮಾಲಾ ದೇಸಾಯಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಆದಿತ್ಯಾ ಅಗ್ನಿಹೋತ್ರಿ ಕಾರ್ಯಕ್ರವನ್ನು ನಿರೂಪಿಸಿದರು. ಡಾ. ರಾಕೇಶ ನಾಯಕ ವಂದನಾರ್ಪಣೆ ಸಲ್ಲಿಸಿದರು.

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ 'ಅಂಕುರ 2024' ಕಾರ್ಯಗಾರ

Article Image

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ 'ಅಂಕುರ 2024' ಕಾರ್ಯಗಾರ

ಮೂಡುಬಿದಿರೆ: 21ನೇ ಶತಮಾನದಲ್ಲಿ ಜನರಿಗೆ ಆಯುರ್ವೇದದ ಮಹತ್ವ ತಿಳಿಯುತ್ತಿರುವುದು ಸಂತಸದ ಬೆಳವಣಿಗೆ ಎಂದು ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರಿರೋಗ ತಜ್ಞೆ ಡಾ. ರೇವತಿ ಭಟ್ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ಪ್ರಸೂತಿ ತಂತ್ರ ಹಾಗೂ ಸ್ತ್ರಿರೋಗ ವಿಭಾಗದ ವತಿಯಿಂದ ಪ್ರಾಜ್ಞಾ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ‘ಎಂಡೊಮೆಟ್ರಿಯೊಸಿಸ್- ಒಂದು ಸಂಯೋಜಿತ ವಿಧಾನ’ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚು ಕಾರ್ಯಗಾರ ಹಾಗೂ ವಿಚಾರ ಸಂಕಿರಣಗಳು ನಡೆಯಬೇಕು. ಇದರಿಂದ ಪಡೆದ ಜ್ಞಾನವನ್ನು ನಾವು ಇತರರಿಗೆ ತಿಳಿಸುವ ಅವಶ್ಯಕತೆ ಇದೆ. ಪ್ರಸ್ತುತ ವರ್ತಮಾನದಲ್ಲಿ ಜನರು ಸಾಕ್ಷಿಗಳನ್ನು ಹೆಚ್ಚು ನಂಬುತ್ತಾರೆ. ಹಾಗಾಗಿ ಸಾಕ್ಷಿಗಳ ಜೊತೆ ಆಯುರ್ವೇದದ ಬಗೆಗೆ ಜನರಿಗೆ ಖಾತರಿ ಪಡಿಸಬೇಕು ಎಂದು ಹೇಳಿದರು. ನಮ್ಮ ಹಿಂದಿನ ತಲೆಮಾರಿನ ಜನರಿಗೆ ಪ್ರಕೃತಿಯಲ್ಲಿ ದೊರೆಯುವ ಔಷಧಿಗಳ ಬಗ್ಗೆ ಅಪಾರ ಜ್ಞಾನವಿದ್ದರೂ ಅವರು ಆ ಜ್ಞಾನವನ್ನು ಮುಂದಿನ ತಲೆಮಾರಿಗೆ ಪಸರಿಸಿಲ್ಲ. ಆದರೆ ಈ ತಪ್ಪನ್ನು ನಾವು ಮಾಡಿದರೆ ಇದರಿಂದ ನಮ್ಮ ಮುಂದಿನ ಪೀಳಿಗೆಗೆ ನಷ್ಟವಾಗಲಿದೆ. ಹಾಗಾಗಿ ಇಂತಹ ಕಾರ್ಯಗಾರದಲ್ಲಿ ಪಡೆದ ಜ್ಞಾನವನ್ನು ನಾವು ಸಂಗ್ರಹಿಸಿ, ಪಸರಿಸಬೇಕು ಎಂದರು. ಆಳ್ವಾಸ್ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಯಶಸ್ಸಿನ ಹಿಂದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವರ ಶ್ರಮವಿದೆ. ಇದನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು. ಕಾರ್ಯಗಾರದ ಮೊದಲ ಅವಧಿಯನ್ನು ಆಳ್ವಾಸ್ ವೈದ್ಯಕೀಯ ಕೇಂದ್ರದ ಸ್ತ್ರಿರೋಗ ತಜ್ಞೆ ಡಾ. ಹನಾ ಶೆಟ್ಟಿ ಹಾಗೂ ನಂತರದ ಅವಧಿಗಳನ್ನು ಕೇರಳದ ಸರಕಾರಿ ಆಯುರ್ವೇದ ವೈದ್ಯಕೀಯ ಕೇಂದ್ರದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಮಿನಿ ಪಿ., ಸ್ನಾತಕೋತ್ತರ ಪ್ರಸೂತಿ ಹಾಗೂ ಸ್ತ್ರಿರೋಗ ವಿಭಾಗದ ಮುಖ್ಯಸ್ಥ ಡಾ. ಅಶೋಕನ್, ಜಾಮ್‌ನಗರ ವಿವಿಯ ಇನ್‌ಸ್ಟಿಟ್ಯೂಟ್ ಆಫ್ ಟೀಚಿಂಗ್ ಆ್ಯಂಡ್ ರಿಸರ್ಚ್ ಇನ್ ಆಯುರ್ವೇದದ ಸ್ನಾತಕೋತ್ತರ ಪ್ರಸೂತಿ ಹಾಗೂ ಸ್ತ್ರಿರೋಗ ವಿಭಾಗದ ಪ್ರಾಧ್ಯಾಪಕಿ ಡಾ. ಶಿಲ್ಪಾ ಬಿ. ಡೊಂಗಾ ನಡೆಸಿದರು. ದೇಶದ ವಿವಿಧ ಕಾಲೇಜುಗಳಿಂದ 80ಕ್ಕೂ ಅಧಿಕ ವಿದ್ಯಾರ್ಥಿಗಳು, ಪ್ರಾಧ್ಯಪಕರು ಭಾಗವಹಿಸಿದ್ದರು. ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಡಾ. ಕಾವ್ಯ ರಾವ್ ಹಾಗೂ ಡಾ. ಪ್ರವೀಣಾ ಕೆ. ನಿರೂಪಿಸಿದರು

ಸತ್ತೂರು, ಧಾರವಾಡ: ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ದಿನಾಚರಣೆ

Article Image

ಸತ್ತೂರು, ಧಾರವಾಡ: ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ದಿನಾಚರಣೆ

ಎಸ್.ಡಿಎಂ. ದಂತ ಮಹಾವಿದ್ಯಾಲಯದ, ಸಾಮೂಹಿಕ ದಂತ ಚಿಕಿತ್ಸಾ ವಿಭಾಗವು ಜೂನ್ 19ರಂದು ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ಚಿಕಿತ್ಸಾ ದಿನವನ್ನು ಆಚರಿಸಲಾಯಿತು. ಈ ವಿಭಾಗವು ಧಾರವಾಡದ ಸುತ್ತಮುತ್ತಲಿನ 17 ತಾಲೂಕುಗಳಲ್ಲಿ ಸಂಚಾರಿ ಚಿಕಿತ್ಸಾಲಯದ ಮೂಲಕ ಬಾಯಿಯ ಆರೋಗ್ಯದ ಕುರಿತು ದೂರದ ಹಳ್ಳಿಗಳಿಗೆ ಭೇಟಿ ನೀಡುತ್ತಾ ಬಂದಿದ್ದಾರೆ. ಇತ್ತೀಚಿಗೆ 75 ಶಿಬಿರಗಳಲ್ಲಿ, 12,000ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಶಶಿ ಪಾಟೀಲ್ ಮುಖ್ಯ ಅತಿಥಿಗಳಾಗಿದ್ದರು. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತಿತರ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧಾರವಾಡ ಜಿಲ್ಲೆಯಾದ್ಯಂತ 150ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯವರಾದ ಡಾ. ಶಶಿ ಪಾಟೀಲ್ ಮಾತನಾಡುತ್ತಾ: ಎಸ್.ಡಿ.ಎಂ. ವೈದ್ಯಕೀಯ ಮತ್ತು ದಂತ ಮಹಾವಿದ್ಯಾಲಯವು ಯಾವಾಗಲೂ ಸಮುದಾಯದ ಆರೋಗ್ಯ ಸುಧಾರಣೆಗೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಬಾಯಿಯ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚುವಲ್ಲಿ ಎಸ್.ಡಿ.ಎಂ. ನ ಶಿಬಿರಗಳು ಮತ್ತು ಸಂಚಾರಿ ಆಸ್ಪತ್ರೆಯು ಸಹಕಾರಿಯಾಗಿದೆ. ಆರೋಗ್ಯದ ಮಹತ್ವದ ಬಗ್ಗೆ ಸಮುದಾಯಕ್ಕೆ ತಿಳಿಸಲು ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದರು. ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಕಾರ್ಯಗಾರವನ್ನು ನಡೆಸುತ್ತಿರುವ ಸಾಮೂಹಿಕ ದಂತ ಚಿಕಿತ್ಸಾ ವಿಭಾಗಕ್ಕೆ ಉಪಕುಲಪತಿಗಳಾದ ಡಾ. ನಿರಂಜನ ಕುಮಾರ್ ಅಭಿನಂದಿಸುತ್ತಾ, ಸಮತೋಲನ ಆಹಾರದ ಮೇಲೆ ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಆಶಾ ಕಾರ್ಯಕರ್ತೆಯರು ವಿಶೇಷವಾಗಿ ಅವರ ಆರೋಗ್ಯದ ಉನ್ನತಿಗಾಗಿ ಗಮನಹರಿಸುತ್ತಾರೆ. ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ತಂಬಾಕು ಸೇವನೆಯಿಂದ ಆಗುವ ಸಮಸ್ಯೆಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು ಎಂದರು. ಸಾಮೂಹಿಕ ದಂತ ಚಿಕಿತ್ಸಾ ವಿಭಾಗವು ನಡೆಸಿದ ವಿವಿಧ ಆರೋಗ್ಯ ಶಿಬಿರಗಳ ವರದಿಯನ್ನು ಡಾ. ಶೋದನ್ ಮಂಡಿಸಿದರು. ಡಾ. ಹೇಮಾ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು. ಸಾಮೂಹಿಕ ದಂತ ಚಿಕಿತ್ಸಾ ವಿಭಾಗವು ಜಿಲ್ಲಾ ಆರೋಗ್ಯ ಕಛೇರಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ರೋಟರಿ ಕ್ಲಬ್ ಮತ್ತು SKDRDP ಸಹಯೋಗದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ದಿನದ ಅಂಗವಾಗಿ ಎಸ್.ಡಿ.ಎಂ. ದಂತ ಮಹಾವಿದ್ಯಾಲಯವು ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನದ ಹಲವಾರು ಶಾಲಾ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ವಿಭಾಗದ ಮುಖ್ಯಸ್ಥರಾದ ಡಾ. ರವಿ ಶಿರಹಟ್ಟಿ ಅತಿಥಿಯವರನ್ನು ಸ್ವಾಗತಿಸಿದರು. ಡಾ. ಅಕ್ಷತಾ ಅಗ್ನಿಹೋತ್ರಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಡಾ. ಪ್ರೀತಾ ಶೆಟ್ಟಿ ವಂದಿಸಿದರು. ಡಾ. ಜೆಬಾ ಶೇಖ್ ಕಾರ್ಯಕ್ರಮವನ್ನು ನಿರೂಪಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ಇ.ಎನ್.ಟಿ ಶಿಬಿರದಲ್ಲಿ 143 ಮಂದಿ ಭಾಗಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ಇ.ಎನ್.ಟಿ ಶಿಬಿರದಲ್ಲಿ 143 ಮಂದಿ ಭಾಗಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮತ್ತು ಹರ್ಷೇಂದ್ರ ಕುಮಾರ್ ಅವರ ನಿರ್ದೇಶನದಂತೆ ಪ್ರತಿ ತಿಂಗಳು ಉಚಿತ ರೋಗ ತಪಾಸಣಾ ಶಿಬಿರ ನಡೆಯುತ್ತಿದ್ದು, ದಿನಾಂಕ ಜೂ. 16 ರಂದು ‘ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಶಿಬಿರ’ ನಡೆಯಿತು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಇವರು ಶಿಬಿರ ಉದ್ಘಾಟಿಸಿ ಮಾತನಾಡಿ, ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ತಿಂಗಳಿಗೆ ಮೂರು ಅಥವಾ ನಾಲ್ಕು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತದೆ. ಪೂಜ್ಯ ಹೆಗ್ಗಡೆಯವರ ನಿರ್ದೇಶನದಂತೆ ತಿಂಗಳಿಗೆ 2 ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಗುತ್ತದೆ. ಕನಿಷ್ಟ ಒಬ್ಬ ಎಂ.ಬಿ.ಬಿ.ಎಸ್ ವೈದ್ಯರು ಕೂಡ ಇಲ್ಲದ ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾದ ಜನತೆಗೆ ಅವರು ಇರುವ ಜಾಗದಲ್ಲಿಯೇ ಸೂಪರ್ ಸ್ಪೆಷಾಲಿಟಿ ವೈದ್ಯರ ಸೇವೆ ದೊರಕಿಸಿ ಕೊಡುವುದು ನಮ್ಮ ಗುರಿಯಾಗಿದೆ ಎಂದರು. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್ ಮಾತನಾಡುತ್ತಾ, ಈ ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಇ.ಎನ್.ಟಿ ಸಂಬಂಧಿಸಿದ ಎಲ್ಲಾ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಕೂಡ ಇಲ್ಲಿ ನಡೆಸಲಾಗಿದೆ ಎಂದರು. ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿರುತ್ತದೆ. ಒಳರೋಗಿ ವಿಭಾಗದಲ್ಲಿ 10%, ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ದೊರೆಯಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 143 ಮಂದಿ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡು ಸಂತೋಷ ವ್ಯಕ್ತಪಡಿಸಿದರು.

ಆಹಾರ ಸುರಕ್ಷತಾ ದಿನ- "ಸುರಕ್ಷಿತ ಆಹಾರ ನಮಗೇಕೆ ಮುಖ್ಯ"

Article Image

ಆಹಾರ ಸುರಕ್ಷತಾ ದಿನ- "ಸುರಕ್ಷಿತ ಆಹಾರ ನಮಗೇಕೆ ಮುಖ್ಯ"

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದಿಂದ ಆಹಾರ ಸುರಕ್ಷತಾ ದಿನವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಆರಂಭದಲ್ಲಿ “ಸುರಕ್ಷಿತ ಆಹಾರ ನಮಗೇಕೆ ಮುಖ್ಯ ಎನ್ನುವುದನ್ನು ಪ್ರಸ್ತುತ ಪಡಿಸುವ ಕಿರುನಾಟಕ, ನಂತರದಲ್ಲಿ ನಮ್ಮ ಸುತ್ತಮುತ್ತಲು ಸುಲಭದಲ್ಲಿ ದೊರೆಯುವ ಅನೇಕ ಅಹಾರ ಪದಾರ್ಥಗಳಾದ ಮಾವಿನಕಾಯಿ, ಎಳನೀರು, ಒಂದೆಲಗ, ಪೇರಲೆಕಾಯಿ, ಬಾಳೆಹಣ್ಣು, ಈರುಳ್ಳಿ ಇತ್ಯಾದಿಗಳ ಉಪಯೋಗಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಸಾಗಿಬಂತು. ಕಾರ್ಯಕ್ರಮವನ್ನು ಕೊಬ್ಬರಿ-ಬೆಲ್ಲವನ್ನು ಅತಿಥಿಗಳಿಂದ ಮಕ್ಕಳಿಗೆ ನೀಡಿ ಆರಂಭಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಸಿದ್ದ-ಸಂಪನ್ಮೂಲ ವ್ಯಕ್ತಿ ಆಳ್ವಾಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ಡಾ. ಸ್ಮಿತಾ ಭಟ್ ಯು. ಎಸ್‌ರವರು- ಆಹಾರ ಕೇವಲ ಒಂದು ಜಡವಸ್ತುವಲ್ಲ ಅದು ನಮ್ಮ ದೇಹವನ್ನು ಪ್ರವೇಶಿಸಿ ದೇಹಕ್ಕೆ ಶಕ್ತಿ ತುಂಬುವ ಅಪರೂಪದ ವಸ್ತು. ನಮ್ಮ ದೇಹ ಕಸದ ಬುಟ್ಟಿಯಲ್ಲ. ಹಾಗಾಗಿ ಆಹಾರವೆಂದುಕೊಂಡು ಸಿಕ್ಕಿದನ್ನೆಲ್ಲ ತಿನ್ನದೇ ಸಮತೂಕದ ಆಹಾರವನ್ನು ಸೇವಿಸುವಂತೆ ಕರೆಯಿತ್ತರು. ಆಹಾರದ ಘಟಕಗಳು ಅವುಗಳ ಮೂಲಗಳು ಮತ್ತು ಅವುಗಳ ಉಪಯುಕ್ತತೆ ತಿಳಿಸಿಕೊಟ್ಟು, ಅದರ ಜೊತೆಗೆ ಸಿಕ್ಕಿದನ್ನೆಲ್ಲ ತಿನ್ನುತ್ತಾ ಹೋದರೆ, ನಾವು ತಿಂದ ಆಹಾರವೇ ಮುಂದೆ ವಿಷವಾಗಿ ನಮಗೆ ಅಪಾಯ ತರುತ್ತದೆ. ಜಂಕ್‌ಫುಡ್ ಎಂಬ ಮಾರಿಯನ್ನು ದೂರವಿಟ್ಟು, ಅತಿಯಾದ ಸಕ್ಕರೆ, ಉಪ್ಪು, ರಾಸಾಯನಿಕ ಬಳಸಿದ ಆಹಾರ ಪದಾರ್ಥಗಳನ್ನು ತ್ಯಜಿಸಿ -ಉತ್ತಮ ಆರೋಗ್ಯವನ್ನು ನಮ್ಮದಾಗಿಸುವತ್ತ ಗಮನ ಕೊಡುವಂತೆ ಕರೆನೀಡಿದರು. ಯಾವುದೇ ಆಹಾರ ಪದಾರ್ಥಗಳನ್ನು ತೆಗೆದುಕೊಂಡಾಗ ಅದನ್ನು ತಯಾರಿಸಲು ಬಳಸುವ ಸಾಮಾಗ್ರಿಗಳ ಮಾಹಿತಿಯನ್ನು ತಪ್ಪದೇ ಓದಿಕೊಳ್ಳಿ. ಸದಾಕಾಲ ಸಮತೂಕದ ಆಹಾರವನ್ನು ಸೇವಿಸಿ ಎನ್ನುವ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಮಾತಾನಾಡಿದ ಮುಖ್ಯಶಿಕ್ಷರಾದ ಶಿವಪ್ರಸಾದ್ ಭಟ್ ಮಾತಾನಾಡಿ ಉತ್ತಮ ಆರೋಗ್ಯ ನಮ್ಮದಾಗಬೇಕಾದರೆ ಅದರ ಬಗ್ಗೆ ಮನಗೆ ಸ್ಪಷ್ಟ ಅರಿವಿರಬೇಕು- ಜಂಕ್‌ಫುಡ್ ಇವತ್ತಿನಿಂದಲೇ ದೂರಮಾಡಿ, ಆರೋಗ್ಯಕ್ಕಿಂತ ದೊಡ್ಡ ಭಾಗ್ಯವಿಲ್ಲ, ಅದನ್ನು ಕಾಪಾಡಿಕೊಳ್ಳಿ ಎಂಬ ಕರೆಯಿತ್ತರು. ಆಹಾರ ಸುರಕ್ಷತಾ ದಿನದ ಮಹತ್ವ ಸಾರುವ ವೀಡಿಯೊ ಸಂದೇಶವನ್ನು ಪ್ರಸ್ತುತ ಪಡಿಸಲಾಯಿತು. ಸಂಸ್ಥೆಯ ವಿಜ್ಞಾನ ವಿಭಾಗದ ಉಸ್ತುವಾರಿಯಲ್ಲಿ ವಿದ್ಯಾರ್ಥಿನಿ ಸೃಷ್ಟಿ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಸಚ್ಚಿನ್ ನಾಯಕ್ ವಂದನೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಸತ್ತೂರು, ಧಾರವಾಡ: ವಿಶ್ವ ಪರಿಸರ ದಿನಾಚರಣೆ

Article Image

ಸತ್ತೂರು, ಧಾರವಾಡ: ವಿಶ್ವ ಪರಿಸರ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಜೂನ್ 05ರಂದು “ವಿಶ್ವ ಪರಿಸರ ದಿನ”ವನ್ನು ಆಚರಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗಿಡಗಳಿಗೆ ನೀರುಣಿಸುವುದರ ಮೂಲಕ ವಿಶ್ವ ಪರಿಸರ ದಿನವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿಗಳು ಪರಿಸರವು ಮಾನವಕುಲಕ್ಕೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿ, ಅದನ್ನು ಸಂರಕ್ಷಿಸುವಂತೆ ತಿಳಿಯ ಹೇಳಿದರು. ಪರಿಸರ ದಿನಾಚರಣೆಯಲ್ಲಿ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ವಿಶ್ವವಿದ್ಯಾಲಯದ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಶ್ವ ಪರಿಸರ ದಿನದ ಅಂಗವಾಗಿ ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಎನ್.ಎಸ್.ಎಸ್. ಘಟಕವು “ಭೂ ಮರುಸ್ಥಾಪನೆ, ಮರು ಭೂಮೀಕರಣ, ಬರ ಸ್ಥಿತಿಸ್ಥಾಪಕತ್ವ” ಎಂಬ ಧ್ಯೇಯದ ಕುರಿತು ತಜ್ಞ ಉಪನ್ಯಾಸವನ್ನು ಆಯೋಜಿಸಿದ್ದರು. ಧಾರವಾಡದ ಪ್ರಸಿದ್ಧ ವೈದ್ಯ ಮತ್ತು ಪರಿಸರವಾದಿ ಡಾ. ಚಿದಾನಂದ ರಾಮನಗೌಡರ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ: ಪ್ರತಿಯೊಬ್ಬರು ಪ್ರಕೃತಿಯನ್ನು ಸಂರಕ್ಷಿಸಲು ತಮ್ಮ ಸುತ್ತಮುತ್ತ ಸಸಿಗಳನ್ನು ನೆಡಬೇಕು ಮತ್ತು ಆಗಾಗ ನೀರುಣಿಸುತ್ತಿರಬೇಕು. ಶುದ್ಧ ಗಾಳಿ ಮತ್ತು ನೀರನ್ನೊಳಗೊಂಡ ಪರಿಸರವು ಮಾನವನಿಗೆ ಮೊದಲ ಮತ್ತು ಪ್ರಥಮ ಪ್ರಾಶಸ್ತ್ಯದ ಔಷಧವಾಗಿದೆ. ಪರಿಸರ ದಿನವನ್ನು ಆಚರಿಸುವುದರಿಂದ ನಾವು ಯುವ ಪೀಳಿಗೆಗೆ ಪರಿಸರದ ಅರಿವು ಮತ್ತು ಜಾಗೃತಿಯನ್ನು ಮೂಡಿಸಿದಂತಾಗುತ್ತದೆ. ಪರಿಸರದ ಅಸಮತೋಲನವು ತಾಪಮಾನ ಮತ್ತು ಹವಾಮಾನದ ವೈಪರಿತ್ಯತೆಗೆ ಕಾರಣವಾಗಿ ಮಾನವರ ಮೇಲೆ ಅತೀವ ಪರಿಣಾಮಗಳುಂಟು ಮಾಡುತ್ತದೆ. ದೇವರ ಕೊಡುಗೆಯಾದ ಹಸಿರು ಎಲೆಗಳು ಉತ್ತಮ ಆಮ್ಲಜನಕವನ್ನು ಕೊಡುವುದರಿಂದ ಅದರ ಸಂರಕ್ಷಣೆಯು ಆವಶ್ಯಕ. ಜನರಿಂದ ಪರಿಸರವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಹೊರತಾಗಿ ಪರಿಸರವೇ ನಮ್ಮನ್ನು ನಿಯಂತ್ರಿಸುತ್ತದೆ ಎಂಬ ಅರಿವಿರಬೇಕು ಎಂದು ಹೇಳಿದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ ವಿಜಯ ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ, ಎನ್.ಎಸ್.ಎಸ್. ಘಟಕದ ಸಂಯೋಜಕರಾದ ಡಾ. ರಾಕೇಶ ನಾಯಕ, ವಿಶ್ವವಿದ್ಯಾಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯವರಾದ ಬಾಬಣ್ಣಾ ಶೆಟ್ಟಿಗಾರ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

First Previous

Showing 1 of 2 pages

Next Last