Article Image

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ

Article Image

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಮುಂದಿನ ತಿಂಗಳು ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ ಆಯೋಜಿಸಲಾಗುವುದು ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಹೇಳಿದರು. ಶನಿವಾರ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಬಗ್ಗೆ ಅವರು ಮಾತನಾಡಿ ಧನ ಸಂಗ್ರಹದ ಬಗ್ಗೆ ಸಲಹೆ, ಸೂಚನೆ ನೀಡಿದರು. ಕೃಷ್ಣ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಗಣೇಶ ಐತಾಳ, ಪದ್ಮಕುಮಾರ್ ಮತ್ತು ವಸಂತ ರಾವ್ ದೇಣಿಗೆ ಸಂಗ್ರಹದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ನಿಧನರಾದ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಎನ್.ಜಿ. ಪಟವರ್ಧನ್ ಬಗ್ಗೆ ಆರ್.ಯನ್. ಪೂವಣಿ ನುಡಿನಮನ ಸಲ್ಲಿಸಿದರು. ಬಳಿಕ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ವಿಶ್ವಾಸ ರಾವ್ ವರದಿ ಸಾದರ ಪಡಿಸಿದರು. ಕುಸುಮಾವತಿ ಸ್ವಾಗತಿಸಿದರು. ವಿಶ್ವಾಸ ರಾವ್ ಧನ್ಯವಾದವಿತ್ತರು.

ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Article Image

ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಮೂಡುಬಿದಿರೆ, ವಿದ್ಯಾಗಿರಿ: ಸ್ನಾತಕೋತ್ತರ ವಾಣಿಜ್ಯ ವಿದ್ಯಾರ್ಥಿಗಳು ವಾಣಿಜ್ಯದ ಎಲ್ಲಾ ಆಯಾಮಗಳಲ್ಲಿ ನಿಪುಣತೆ ಹೊಂದುವುದು ಅವಶ್ಯಕ ಎಂದು ಲೆಕ್ಕಪರಿಶೋಧಕ ಎಂ. ಉಮೇಶ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತು ಒಂದು ರಣರಂಗ. ಇದನ್ನು ಎದುರಿಸುವ ಎಲ್ಲ ಕಲೆಗಳನ್ನು ವಿದ್ಯಾರ್ಥಿ ಆಗಿದ್ದಾಗಲೇ ಸಿದ್ಧ ಪಡಿಸಿಕೊಳ್ಳಬೇಕು. ತಂತ್ರಜ್ಞಾನದ ಹೊಸ ಆವಿಷ್ಕಾರ ಕೃತಕ ಬುದ್ಧಿಮತ್ತೆ ವಾಣಿಜ್ಯ ವಿದ್ಯಾರ್ಥಿಗಳಿಗೆ ಸವಾಲಾಗಿ ರೂಪುಗೊಂಡಿದ್ದು,, ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಂಡರೆ ಮಾತ್ರ ಇದನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದರು. ವಾಣಿಜ್ಯ ವಿದ್ಯಾರ್ಥಿಗಳು ಖಾತೆ, ತೆರಿಗೆ ಹಾಗೂ ಈ ಕ್ಷೇತ್ರದ ಇತರ ವಿಷಯಗಳ ಕುರಿತು ತಿಳಿಯುವುದು ಹಾಗೂ ವಾಣಿಜ್ಯದ ಎಲ್ಲಾ ಆಗುಹೋಗುಗಳನ್ನು ಗಮನಿಸಬೇಕು ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳ ನಿಜವಾದ ಜೀವನ ಪ್ರಾರಂಭವಾಗುತ್ತಿದೆ. ಈ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ನಿಮ್ಮ ಮೇಲಿನ ನಂಬಿಕೆಯನ್ನು ಬೆಳೆಸಿಕೊಳ್ಳಿ ಎಂದರು. ಧನಾತ್ಮಕ ಆಲೋಚನೆಗಳು ನಿಮ್ಮ ಜೀವನದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಬೀಳ್ಕೊಡುಗೆ ಸಮಾರಂಭ ವಿದ್ಯಾರ್ಥಿ ಜೀವನದ ಒಂದು ಅಮೂಲ್ಯ ಕಾರ್ಯಕ್ರಮ. ಮುಂದಕ್ಕೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ನಮಗೆ ಒಳ್ಳೆಯ ಹೆಸರನ್ನು ತಂದುಕೊಡಲಿ ಎಂದು ಆಶಿಸುತ್ತೇನೆ ಎಂದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ರೇಖಾ ಶೆಟ್ಟಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಪುಷ್ಪಲತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಿಬಾ ಫಾತಿಮಾ ಸ್ವಾಗತಿಸಿ, ಖತೀಜಾ ಇನಾಜ್ ನಿರೂಪಿಸಿದರು. ಪ್ರಜ್ಞಾಶ್ರೀ ವಂದಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆ: ಸಮಾಲೋಚನಾ ಕಾರ್ಯಾಗಾರ

Article Image

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆ: ಸಮಾಲೋಚನಾ ಕಾರ್ಯಾಗಾರ

ಮೂಡುಬಿದಿರೆ: ದೇಶದ 142 ಕೋಟಿ ಜನಸಂಖ್ಯೆಯಲ್ಲಿ 50 ಕೋಟಿಯವರೆಗೆ ವಿದ್ಯಾರ್ಥಿಗಳು ಇರುವುದು ನಮ್ಮ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಜಿಲ್ಲಾ ಆಯುಕ್ತರಾದ ಡಾ. ಎಂ. ಮೋಹನ ಆಳ್ವ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಬುಧವಾರ ನಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳ ಸಮಾಲೋಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವಿದ್ಯೆ ಹಾಗೂ ಬುದ್ಧಿಯನ್ನು ಬೆಳೆಸುವುದರ ಜೊತೆಗೆ ಒಂದು ಒಳ್ಳೆಯ ಮನಸ್ಸನ್ನು ಕಟ್ಟುವ ಅವಶ್ಯಕತೆ ಇದೆ. ಇದನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ನೆರವೇರಿಸಲು ಸಾಧ್ಯ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಇರುವ ಅವಕಾಶಗಳು ಅಪಾರ. ಸ್ಕೌಟ್ಸ್ ಮತ್ತು ಗೈಡ್ಸ್ ನ ಚಟುವಟಿಕೆಗಳು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಪಸರಿಸಬೇಕು ಎಂದರು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲವಾಗಿ ಮೂಡುವ ಅವಶ್ಯಕತೆ ಇದೆ. ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಕೊರತೆ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಅಲ್ಲಿನ ಸಿಬ್ಬಂದಿಯದ್ದು. ಇದರಿಂದ ನಮ್ಮ ಜಿಲ್ಲೆಯು ದೇಶಕ್ಕೆ ಮಾದರಿಯಾಗಲಿದೆ ಎಂದರು. ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಸಿ. ಡಿ. ಜಯಣ್ಣ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಕಾಲೇಜು ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ನಾನು ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಪಸರಿಸುವ ಧ್ಯೇಯದ ಸಭೆಯನ್ನು ಆಯೋಜಿಸುತ್ತೇನೆ ಎಂದು ಭರವಸೆ ನೀಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತರಾದ ಪಿ. ಜಿ. ಆರ್ ಸಿಂಧ್ಯ ಮಾತನಾಡಿ, ರಾಜ್ಯದ ಶಿಕ್ಷಣ ಕ್ಷೇತ್ರದ ಸಿಬ್ಬಂದಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡುವಲ್ಲಿ ಸಹಕಾರಿಯಾಗಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಯಾವುದೇ ರೀತಿಯ ಸಂಭಾವನೆ ನೀಡದೆ ಇದ್ದರೂ, ನಮ್ಮ ಸಿಬ್ಬಂದಿ ಯಾವುದೇ ಅಪೇಕ್ಷೆ ಇಲ್ಲದೆ ತಮ್ಮ ಅಮೂಲ್ಯ ಸಮಯವನ್ನು ಸಮರ್ಪಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ದೇಶದಲ್ಲೇ ಸ್ಥಳೀಯ ಸಂಸ್ಥೆಯೊಂದಕ್ಕೆ ಇಷ್ಟು ಸುಲಲಿತವಾದ ಕಾರ್ಯಾಲಯ ಇರುವುದು ಮೂಡುಬಿದಿರೆಯಲ್ಲಿ ಮಾತ್ರ, ಇದು ಡಾ ಎಂ ಮೋಹನ ಆಳ್ವರ ಮಾರ್ಗದರ್ಶನದಿಂದ ಸಾಧ್ಯವಾಗಿದೆ. ಎಲ್ಲಾ ಪಕ್ಷ, ಜಾತಿ, ಧರ್ಮಗಳೂ ಪ್ರೀತಿಸುವ ವ್ಯಕ್ತಿ ಡಾ. ಎಂ. ಮೋಹನ ಆಳ್ವ ಅವರಿಂದ ನಮಗೆ ಹೆಚ್ಚಿನ ಶಕ್ತಿ ಬಂದಿದೆ ಎಂದು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ ನ2024-25ನೇ ಸಾಲಿನಲ್ಲಿ ನಡೆಯಲಿರುವ ಚಟುವಟಿಕೆಗಳ ಪುಸ್ತಕ ಬಿಡುಗಡೆ ಮಾಡಲಾಯಿತು. ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಬಿ. ಎನ್ ತುಂಬೆ ಸ್ವಾಗತಿಸಿ, ರಾಜ್ಯ ಸಂಘಟನಾ ಆಯುಕ್ತರಾದ ಎಂ ಪ್ರಭಾಕರ ಭಟ್ ವಂದಿಸಿ, ಜಿಲ್ಲಾ ಕೋಶಾಧಿಕಾರಿಗಳಾದ ನವೀನ್‌ಚಂದ್ರ ಅಂಬೂರಿ ನಿರೂಪಿಸಿದರು.

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯಕೀಯ ದಿನಾಚರಣೆ

Article Image

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯಕೀಯ ದಿನಾಚರಣೆ

'ವೈದ್ಯೋ ನಾರಾಯಣೋ ಹರಿ' ಎಂಬ ಉಕ್ತಿಯಂತೆ, ಜುಲೈ 1ರಂದು ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯಕೀಯ ದಿನಾಚರಣೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ದೀಪ್ತಿ ರಾವ್ ರವರು ಉಪಸ್ಥಿತರಿದ್ದು ಉತ್ತಮ ಆರೋಗ್ಯಕರವಾದ ಜೀವನ ನಡೆಸಲು ಯಾವ ಕ್ರಮವನ್ನು ಅನುಸರಿಸಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅದೇ ರೀತಿ ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್‌ರವರು ನಾವು ಜೀವನದಲ್ಲಿ ಒಂದಲ್ಲ ಒಂದು ಗುರಿಯನ್ನು ಹೊಂದಿರಬೇಕು, ನಮ್ಮ ಗುರಿ ಏನಿದೆಯೋ ಅದನ್ನು ಮುಟ್ಟಲು ನಿರಂತರ ಓದು ಅಗತ್ಯ ಅನ್ನುವುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ರಶ್ಮಿತಾರವರು ವೈದ್ಯಕೀಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಂಯೋಜಕರಾದ ಶ್ರಿಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಖಾರವರು ನೆರವೇರಿಸಿ, ದಿಯಾರವರು ವಂದಿಸಿದರು.

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ 'ಅಂಕುರ 2024' ಕಾರ್ಯಗಾರ

Article Image

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ 'ಅಂಕುರ 2024' ಕಾರ್ಯಗಾರ

ಮೂಡುಬಿದಿರೆ: 21ನೇ ಶತಮಾನದಲ್ಲಿ ಜನರಿಗೆ ಆಯುರ್ವೇದದ ಮಹತ್ವ ತಿಳಿಯುತ್ತಿರುವುದು ಸಂತಸದ ಬೆಳವಣಿಗೆ ಎಂದು ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರಿರೋಗ ತಜ್ಞೆ ಡಾ. ರೇವತಿ ಭಟ್ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ಪ್ರಸೂತಿ ತಂತ್ರ ಹಾಗೂ ಸ್ತ್ರಿರೋಗ ವಿಭಾಗದ ವತಿಯಿಂದ ಪ್ರಾಜ್ಞಾ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ‘ಎಂಡೊಮೆಟ್ರಿಯೊಸಿಸ್- ಒಂದು ಸಂಯೋಜಿತ ವಿಧಾನ’ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚು ಕಾರ್ಯಗಾರ ಹಾಗೂ ವಿಚಾರ ಸಂಕಿರಣಗಳು ನಡೆಯಬೇಕು. ಇದರಿಂದ ಪಡೆದ ಜ್ಞಾನವನ್ನು ನಾವು ಇತರರಿಗೆ ತಿಳಿಸುವ ಅವಶ್ಯಕತೆ ಇದೆ. ಪ್ರಸ್ತುತ ವರ್ತಮಾನದಲ್ಲಿ ಜನರು ಸಾಕ್ಷಿಗಳನ್ನು ಹೆಚ್ಚು ನಂಬುತ್ತಾರೆ. ಹಾಗಾಗಿ ಸಾಕ್ಷಿಗಳ ಜೊತೆ ಆಯುರ್ವೇದದ ಬಗೆಗೆ ಜನರಿಗೆ ಖಾತರಿ ಪಡಿಸಬೇಕು ಎಂದು ಹೇಳಿದರು. ನಮ್ಮ ಹಿಂದಿನ ತಲೆಮಾರಿನ ಜನರಿಗೆ ಪ್ರಕೃತಿಯಲ್ಲಿ ದೊರೆಯುವ ಔಷಧಿಗಳ ಬಗ್ಗೆ ಅಪಾರ ಜ್ಞಾನವಿದ್ದರೂ ಅವರು ಆ ಜ್ಞಾನವನ್ನು ಮುಂದಿನ ತಲೆಮಾರಿಗೆ ಪಸರಿಸಿಲ್ಲ. ಆದರೆ ಈ ತಪ್ಪನ್ನು ನಾವು ಮಾಡಿದರೆ ಇದರಿಂದ ನಮ್ಮ ಮುಂದಿನ ಪೀಳಿಗೆಗೆ ನಷ್ಟವಾಗಲಿದೆ. ಹಾಗಾಗಿ ಇಂತಹ ಕಾರ್ಯಗಾರದಲ್ಲಿ ಪಡೆದ ಜ್ಞಾನವನ್ನು ನಾವು ಸಂಗ್ರಹಿಸಿ, ಪಸರಿಸಬೇಕು ಎಂದರು. ಆಳ್ವಾಸ್ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಯಶಸ್ಸಿನ ಹಿಂದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವರ ಶ್ರಮವಿದೆ. ಇದನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು. ಕಾರ್ಯಗಾರದ ಮೊದಲ ಅವಧಿಯನ್ನು ಆಳ್ವಾಸ್ ವೈದ್ಯಕೀಯ ಕೇಂದ್ರದ ಸ್ತ್ರಿರೋಗ ತಜ್ಞೆ ಡಾ. ಹನಾ ಶೆಟ್ಟಿ ಹಾಗೂ ನಂತರದ ಅವಧಿಗಳನ್ನು ಕೇರಳದ ಸರಕಾರಿ ಆಯುರ್ವೇದ ವೈದ್ಯಕೀಯ ಕೇಂದ್ರದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಮಿನಿ ಪಿ., ಸ್ನಾತಕೋತ್ತರ ಪ್ರಸೂತಿ ಹಾಗೂ ಸ್ತ್ರಿರೋಗ ವಿಭಾಗದ ಮುಖ್ಯಸ್ಥ ಡಾ. ಅಶೋಕನ್, ಜಾಮ್‌ನಗರ ವಿವಿಯ ಇನ್‌ಸ್ಟಿಟ್ಯೂಟ್ ಆಫ್ ಟೀಚಿಂಗ್ ಆ್ಯಂಡ್ ರಿಸರ್ಚ್ ಇನ್ ಆಯುರ್ವೇದದ ಸ್ನಾತಕೋತ್ತರ ಪ್ರಸೂತಿ ಹಾಗೂ ಸ್ತ್ರಿರೋಗ ವಿಭಾಗದ ಪ್ರಾಧ್ಯಾಪಕಿ ಡಾ. ಶಿಲ್ಪಾ ಬಿ. ಡೊಂಗಾ ನಡೆಸಿದರು. ದೇಶದ ವಿವಿಧ ಕಾಲೇಜುಗಳಿಂದ 80ಕ್ಕೂ ಅಧಿಕ ವಿದ್ಯಾರ್ಥಿಗಳು, ಪ್ರಾಧ್ಯಪಕರು ಭಾಗವಹಿಸಿದ್ದರು. ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಡಾ. ಕಾವ್ಯ ರಾವ್ ಹಾಗೂ ಡಾ. ಪ್ರವೀಣಾ ಕೆ. ನಿರೂಪಿಸಿದರು

ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

Article Image

ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

ವಿದ್ಯಾಗಿರಿ: ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್ ನ ಸೇವೆಯ ಧ್ಯೇಯದಿಂದ ವ್ಯಕ್ತಿ ನಿರ್ಮಾಣ ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡದ ಜಿಲ್ಲೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ 2024-25ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜೀವನಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಕಲಿಯಲು ಸಾಧ್ಯ. ಇಲ್ಲಿ ನಡೆಯುವ ಶಿಬಿರಗಳು ವಿದ್ಯಾರ್ಥಿಗಳ ಜೀವನಕ್ಕೆ ಅವಶ್ಯವಾದ ಪಾಠಗಳನ್ನು ಹೇಳಿಕೊಡುತ್ತವೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತ ಡಾ. ಮೋಹನ ಆಳ್ವ ಅವರ ಶ್ರಮದಿಂದ ಜಿಲ್ಲಾ ಘಟಕವು ಮುಂಚೂಣಿಯಲ್ಲಿದೆ. ಆಳ್ವಾಸ್ ಸಾಂಸ್ಕೃತಿಕ ಜಾಂಬೂರಿಯು ಇಡೀ ವಿಶ್ವವೇ ಮೂಡುಬಿದಿರೆಯತ್ತ ಮುಖ ಮಾಡುವಂತೆ ಮಾಡಿತ್ತು ಎಂದರು. ಪಠ್ಯದ ಕಲಿಕೆಯ ಜೊತೆಗೆ ಪಠ್ಯತರ ಚಟುವಟಿಕೆಗಳು ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಮನಸ್ಥಿತಿ ಧನಾತ್ಮನಕವಾಗಿರಲು ಸಾಧ್ಯ ಎಂದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮದ್ ಸದಾಕತ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಾರ್ಥನೆಯಿಂದಲೇ ಇದರ ಧ್ಯೇಯವನ್ನು ತಿಳಿಯಬಹುದಾಗಿದೆ. ಸೇವಾ ಮನೋಭಾವ ಎಲ್ಲಾ ವಿದ್ಯಾರ್ಥಿಗಳು ಬೆಳೆಸುವುದು ಅವಶ್ಯಕ ಎಂದರು. ಯುವಜನತೆ ದೇಶದ ಆಸ್ತಿ. ಈ ಯುವಶಕ್ತಿಯನ್ನು ಬೆಳೆಸುವ ಕಾರ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಕೌಶಲ, ನಾಗರಿಕ ಮೌಲ್ಯಗಳು ಹಾಗೂ ದೈಹಿಕ ಸಾಮರ್ಥ್ಯ ಬೆಳೆಸುವಲ್ಲಿ ಇದರ ಪಾತ್ರ ಅನನ್ಯ ಎಂದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಝಾನ್ಸಿ ಪಿ. ಎನ್ ಹಾಗೂ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ರೋವರ್ ಸ್ಕೌಟ್ ಲೀಡರ್ ಸುನಿಲ್, ರೇಂಜರ್ ಲೀಡರ್ ವೀಣಾ, ದಳನಾಯಕ ಕಾರ್ತಿಕ್, ದಳ ನಾಯಕಿ ನಕ್ಷತ್ರ ಇದ್ದರು. ವಿದ್ಯಾರ್ಥಿನಿ ನಕ್ಷತ್ರ ಸ್ವಾಗತಿಸಿ, ವಿದ್ಯಾರ್ಥಿನಿ ವರ್ಷ ವಂದಿಸಿ, ವಿದ್ಯಾರ್ಥಿನಿ ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಜು. 31: ಜಮೀನಿಗೆ ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕ

Article Image

ಜು. 31: ಜಮೀನಿಗೆ ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕ

ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರೈತರು ತಮ್ಮ ಜಮೀನಿಗಳ ಎಲ್ಲಾ ಸರ್ವೆ ನಂಬರಿನ ಎಲ್ಲಾ ಪಹಣಿ (RTC), ಆಧಾರ್ ಕಾರ್ಡ್ ಪ್ರತಿ ಮತ್ತು ಆಧಾರ್‌ಗೆ ಲಿಂಕ್ ಇರುವ ಮೊಬೈಲ್ ಪೋನ್‌ನೊಂದಿಗೆ ನಿಮ್ಮ ಗ್ರಾಮ ಲೆಕ್ಕಾಧಿಕಾರಿ (VA) ಅಥವಾ ನಾಡಕಚೇರಿಗೆ ಭೇಟಿ ಮಾಡಿ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬಹುದು.

ಧಾರವಾಡ: ವಿಶ್ವ ಅಧಿಕ ರಕ್ತದೊತ್ತಡ ದಿನ

Article Image

ಧಾರವಾಡ: ವಿಶ್ವ ಅಧಿಕ ರಕ್ತದೊತ್ತಡ ದಿನ

ಎಸ್.ಡಿ.ಎಂ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಇತ್ತೀಚೆಗೆ “ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ, ಅದನ್ನು ನಿಯಂತ್ರಿಸಿ, ಹೆಚ್ಚು ಕಾಲ ಬದುಕಿ” ಎಂಬ ಧ್ಯೇಯೆಯೊಂದಿಗೆ “ವಿಶ್ವ ಅಧಿಕ ರಕ್ತದೊತ್ತಡ ದಿನ”ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ರ‍್ಯಾಲಿ ಮತ್ತು ಅಧಿಕ ರಕ್ತದೊತ್ತಡ ತಡೆಯುವ ಪ್ರತಿಜ್ಞೆ ಸ್ವೀಕಾರ, ವೃದ್ದಾಶ್ರಮ ಭೇಟಿ, ಆರೋಗ್ಯ ಸಂಸ್ಥೆಗಳಲ್ಲಿ ರಕ್ತದೊತ್ತಡ ಪರೀಕ್ಷಿಸುವುದು, ರಸಪ್ರಶ್ನೆ ಹಾಗೂ ಬಿತ್ತಿಪತ್ರ ಪ್ರದರ್ಶನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವೈದ್ಯಕೀಯ ವiಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕಿಯವರಾದ ಡಾ. ಪುಷ್ಪಾ ಪಾಟೀಲ್ ಅವರು ರ‍್ಯಾಲಿಯನ್ನು ಉದ್ಘಾಟಿಸಿ, ಮಾತನಾಡುತ್ತಾ: 40 ವರ್ಷ ಮೇಲ್ಪಟ್ಟ ಜನರು ಆಗಾಗ ಅಧಿಕ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ರಕ್ತದೊತ್ತಡದಿಂದ ಅನೇಕ ಆರೋಗ್ಯ ಸಮಸ್ಯೆಗಳುಂಟಾಗುವುದರಿಂದ ಆಗಾಗ ವೈದ್ಯರ ಹತ್ತಿರ ತಪಾಸಣೆ ಮಾಡುತ್ತಿರಬೇಕು. ಯಾವುದೇ ರೋಗ ಲಕ್ಷಣಗಳು ಕಾಣದೆ ಕೆಲವೊಮ್ಮೆ ಅಧಿಕ ರಕ್ತದೊತ್ತಡವು ಅನುವಂಶೀಯವಾಗಿರಬಹುದು. ಆರೋಗ್ಯಕರ ಆಹಾರ ಸೇವನೆ, ಯೋಗ, ಧ್ಯಾನ, ವ್ಯಾಯಾಮಗಳೊಂದಿಗೆ ಉತ್ತಮ ಜೀವನ ಶೈಲಿಯಿಂದ ರೋಗಗಳನ್ನು ತಡೆಯಬಹುದು ಎಂದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ವಿಭಾಗದ ವೈದ್ಯರಾದ ಡಾ. ದೀಪ್ತಿ ಮತ್ತು ಡಾ. ವಂದನಾ, ಎಸ್.ಡಿ.ಎಂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ದೇಶಪಾಂಡೆ, ಮಲ್ಲಿಕಾರ್ಜುನ ಪಿ., ರೇಣುಕಾ ಬಾಗೇವಾಡಿ, ಪ್ರವೀಣ ತುಪ್ಪದ್ ಹಾಗೂ ಲಕಮಾಪುರ ಗ್ರಾಮ ಪಂಚಾಯಿತಿ ಮುಖಂಡರು ಉಪಸ್ಥಿತರಿದ್ದರು. ಲಕಮಾಪುರ ಗ್ರಾಮಸ್ಥರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸೋಮಶೇಖರ್ ಕೊಡ್ಲಿವಾಡ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ಎಕ್ಸಲೆಂಟ್ ವಿದ್ಯಾಲಯದಲ್ಲಿ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ

Article Image

ಎಕ್ಸಲೆಂಟ್ ವಿದ್ಯಾಲಯದಲ್ಲಿ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ

ಆಧುನಿಕ ಸಮಾಜದ ಬಹುದೊಡ್ಡ ಸವಾಲು ಮಾದಕ ದ್ರವ್ಯ ಸೇವನೆಯಾಗಿದೆ. ವಿಶೇಷವಾಗಿ ಯುವಜನತೆ ದುರ್ವ್ಯಸನಗಳಿಗೆ ದಾಸರಾಗಿ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಶಾಪವಾಗಿ ಪರಿಣಮಿಸುತ್ತಿದ್ದಾರೆ. ತಾತ್ಕಾಲಿಕ ಮೋಜಿಗಾಗಿ ಆರಂಭವಾಗುವ ಮಾದಕ ವಸ್ತುಗಳ ಸೇವನೆಯಿಂದ ಅವರ ಭವಿಷ್ಯವನ್ನು ನಾಶಮಾಡುವ ಜೊತೆಗೆ ಸಮಾಜದ ನೆಮ್ಮದಿಯನ್ನು ಕೆಡಿಸುವರು. ಮನುಷ್ಯನ ನರಮಂಡಲದ ಮೇಲೆ ಪರಿಣಾಮ ಬೀರುವ ಇಂತಹ ದುಶ್ಚಟಗಳಿಂದ ದೂರವಿದ್ದು ವೈಯಕ್ತಿಕ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕರಾದ ಸಂದೇಶ ಪಿ. ಜಿ. ಅವರು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆಯ ಅಡ್ಡ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಅವರು ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮಾತನಾಡಿ ಹದಿಹರೆಯದ ಸಮಸ್ಯೆಗಳಲ್ಲಿ ಮಾದಕ ವಸ್ತು ಸೇವನೆಯು ಪ್ರಮುಖವಾದುದು. ಅವುಗಳಿಂದ ಉಂಟಾಗುವ ಅನರ್ಥಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಸುರಕ್ಷಿತ ಮತ್ತು ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಮಾಜ ಸ್ಪಂದಿಸಬೇಕಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕರಾದ ದಿವಾಕರ ರೈ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರೋ. ನರೇಂದ್ರ ಎಲ್. ನಾಯಕ್ ಅವರ ಷಷ್ಟಬ್ದಿ ‘ನಮ್ಮೊಲುಮೆ’ ಸನ್ಮಾನ ಸಮಾರಂಭ ಮತ್ತು ಕುಪ್ಮಾ ಸದಸ್ಯರ ಸಮಾಗಮ

Article Image

ಪ್ರೋ. ನರೇಂದ್ರ ಎಲ್. ನಾಯಕ್ ಅವರ ಷಷ್ಟಬ್ದಿ ‘ನಮ್ಮೊಲುಮೆ’ ಸನ್ಮಾನ ಸಮಾರಂಭ ಮತ್ತು ಕುಪ್ಮಾ ಸದಸ್ಯರ ಸಮಾಗಮ

ಮೂಡುಬಿದಿರೆ: ಮೂಲತಃ ಕೃಷಿ ಕುಟುಂಬದಿಂದ ಬಂದ ಪ್ರೋ. ನರೇಂದ್ರ ನಾಯಕ್‌ರು ಶೈಕ್ಷಣಿಕ ಕ್ಷೇತ್ರದಲ್ಲೂ ಕೃಷಿಯ ಮೂಲಸತ್ವಗಳನ್ನು ಅಳವಡಿಸಿಕೊಂಡು, ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಶೈಕ್ಷಣಿಕ ಕೃಷಿಕ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ(ಕುಪ್ಮಾ) ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನುಡಿದರು. ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಮೂಡುಬಿದಿರೆಯ ಆಳ್ವಾಸ್‌ನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಕಲಾ ಪ್ರೇಮಿ, ಶಿಕ್ಷಣ ತಜ್ಞ ಪ್ರೋ. ನರೇಂದ್ರ ಎಲ್. ನಾಯಕ್ ಅವರ ಷಷ್ಟಬ್ದಿ ‘ನಮ್ಮೊಲುಮೆ’ ಸನ್ಮಾನ ಸಮಾರಂಭ ಮತ್ತು ಕುಪ್ಮಾ ಸದಸ್ಯರ ಸಮಾಗಮ ಕಾರ‍್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೋ. ನರೇಂದ್ರ ಎಲ್. ನಾಯಕ್, ಒಬ್ಬ ವ್ಯಕ್ತಿ, ತಾನು ಮಾಡುವ ಕೆಲಸದಿಂದ ಗೌರವ, ಪ್ರೀತಿಯನ್ನು ಗಳಿಸಲು ಸಾಧ್ಯ. ನಾನು ಪ್ರತೀ ಕೆಲಸವನ್ನು ನಿಸ್ವಾರ್ಥದಿಂದ, ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತಾ ಕಳೆಯುತ್ತೇನೆ. ಕುಪ್ಮಾದ ಇತರೆ ಸದಸ್ಯರ ಸಾಧನೆ ಮುಂದೆ ನನ್ನ ಸಾಧನೆ ಚಿಕ್ಕದು. ನಿಮ್ಮ ಸಾಧಕರ ಸಾಲಿನಲ್ಲಿ ನನಗೊಂದು ಪುಟ್ಟ ಸ್ಥಾನಕೊಡಿ, ಅಷ್ಟೇ ಸಾಕು ಎಂದು ಸಂತಸವನ್ನು ವ್ಯಕ್ತಪಡಿಸಿದರು. ಶಿಕ್ಷಣ ಪ್ರೇಮಿಗಳಿಂದ ಶಿಕ್ಷಣ ಸಂಸ್ಥೆ ಕುಪ್ಮಾದ ಜೊತೆ ಕಾರ‍್ಯದರ್ಶಿ ಮೈಸೂರಿನ ವಿಶ್ವನಾಥ ಶೇಷಾಚಲ ಮಾತನಾಡಿ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ರಾಜಕೀಯದ ಹಿನ್ನಲೆಯುಳ್ಳವರು ಸ್ಥಾಪಿಸಿದರೆ, ಕರಾವಳಿಯಲ್ಲಿ ಕಲೆ, ಸಾಹಿತ್ಯ, ಶಿಕ್ಷಣದ ಅಭಿರುಚಿಯುಳ್ಳವರು ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದರು. ತಮ್ಮ ವರ್ತನೆಯಲ್ಲಿ ಆದರ್ಶ ತುಂಬಿಕೊಂಡಿರುವವರು ನರೇಂದ್ರ ನಾಯಕರು, ನಮಗೆಲ್ಲರಿಗೆ ಕಾರ‍್ಯಸಫಲತೆಯಲ್ಲಿ ಜೀವಂತ ಉದಾಹರಣೆ ಎಂದರು. ವಿದ್ಯೆ ವಿನಯವುಳ್ಳವನಿಗೆ ಸ್ಥಾನಮಾನ ಬರುತ್ತದೆ ಎಂಬುದಕ್ಕೆ ನರೇಂದ್ರ ನಾಯಕರು ಉತ್ತಮ ಉದಾಹರಣೆ ಎಂದು ದಾವಣಗೆರೆ ಕುಪ್ಮಾ ಘಟಕದ ಸಂಯೋಜಕ ಎಸ್. ಜೆ. ಶ್ರೀಧರ್ ನುಡಿದರು. ಜೀವನ ಮರಳಿ ಅರಳಲಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಪ್ಮಾದ ಗೌರವಾಧ್ಯಕ್ಷ ಡಾ. ಎಂ. ಬಿ. ಪುರಾಣಿಕ್, ಷಷ್ಟಬ್ದಿ ಆಚರಿಸುತ್ತಿರುವ ನರೇಂದ್ರ ನಾಯಕರ ಜೀವನ ಮರಳಿ ಅರಳಲಿ ಎಂದು ಹಾರೈಸಿದರು. ಕಾರ‍್ಯಕ್ರಮದಲ್ಲಿ ಪ್ರೋ. ನರೇಂದ್ರ ಎಲ್. ನಾಯಕ್ ಹಾಗೂ ಡಾ. ಉಷಾ ಪ್ರಭಾ ನಾಯಕ್ ದಂಪತಿಗಳನ್ನು ಕುಪ್ಮಾವತಿಯಿಂದ ಸನ್ಮಾನಿಸಲಾಯಿತು. ಕಾರ‍್ಯಕ್ರಮ ಆರಂಭದಲ್ಲಿ ಪ್ರೋ. ನರೇಂದ್ರ ಎಲ್. ನಾಯಕ್‌ರ ಜೀವನ ಆಧಾರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಶಕ್ತಿ ಶಿಕ್ಷಣ ಸಮೂಹದ ಡಾ. ಕೆ.ಸಿ. ನಾಕ್, ಎಕ್ಸ್ ಪರ್ಟ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ನಾಯಕ್ ಇದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ನಿರೂಪಿಸಿ, ಕುಪ್ಮಾ ಉಪಾಧ್ಯಕ್ಷ ಯುವರಾಜ್ ಜೈನ್ ಸ್ವಾಗತಿಸಿ, ಕುಪ್ಮಾ ಉಪಾಧ್ಯಕ್ಷ ಡಾ. ಸುಧಾಕರ ಶೆಟ್ಟಿ ವಂದಿಸಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ, ಉಚಿತ ಸಮವಸ್ತ್ರ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ

Article Image

ಅಂತರಾಷ್ಟ್ರೀಯ ಯೋಗ ದಿನಾಚರಣೆ, ಉಚಿತ ಸಮವಸ್ತ್ರ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ

ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಟ್ಟಡದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಉಚಿತ ಸಮವಸ್ತ್ರ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ ನೆರವೇರಿಸಲಾಯಿತು. ಮೊದಲಿಗೆ ಮಂಜುಳಾ ಜೈನ್ ಇವರ ಮಾರ್ಗದರ್ಶನದಲ್ಲಿ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕತೆಯನ್ನು ನೀಡಲಾಯಿತು. ಯೋಗ ದಿನಾಚರಣೆಯ ವಿಶೇಷತೆ ಮತ್ತು ಆಚರಣೆಯ ಮಹತ್ವದ ಬಗ್ಗೆ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಯೋಗ ದಿನಾಚರಣೆಯ ಶುಭಾಶಯವನ್ನು ಕೋರಿದರು. ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ದಿಗಂಬರ ಜೈನ ವಿದ್ಯಾ ವರ್ಧಕ ಸಂಘ(ರಿ.) ಇದರ ಸದಸ್ಯರಾದ ಪ್ರಥ್ವಿರಾಜ್ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಲಿ ಎಂದು ಹಾರೈಸಿದರು. ಈ ಸುಸಂದರ್ಭದಲ್ಲಿ ಕೊಡುಗೈ ದಾನಿಯಾದ ಪ್ರಥ್ವಿರಾಜ್ ಶೆಟ್ಟಿ ಇವರು ಸುಮಾರು 30 ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಿದರು. ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾದ ಪೂರ್ಣಚಂದ್ರ ಜೈನ್ ಇವರ ವತಿಯಿಂದ 1 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡೆಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡಬಿದಿರೆ ಇದರ ಅಧ್ಯಕ್ಷರಾಗಿರುವ ಪೂರ್ಣಚಂದ್ರ ಜೈನ್ ಮತ್ತು ಇದರ ಕಾರ್ಯದರ್ಶಿಗಳಾದ ಎಂ.ಕೆ. ಹರೀಶ್, ಶಾಲಾಭಿವೃದ್ಧಿಯ ನೂತನ ಅಧ್ಯಕ್ಷರಾದ ಪವನ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ. ಯೋಗ ಶಿಕ್ಷಕಿ ಮಂಜುಳಾ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ರೋಲಿಟಾರವರು ಸ್ವಾಗತಿಸಿದರು, ದಿವ್ಯಾಶ್ರೀ ಧನ್ಯವಾದಗೈದರು, ಪ್ರಣೀತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಎಕ್ಸಲೆಂಟ್: ಅಂತರಾಷ್ಟ್ರೀಯ ಯೋಗ ದಿನಾಚರಣೆ

Article Image

ಎಕ್ಸಲೆಂಟ್: ಅಂತರಾಷ್ಟ್ರೀಯ ಯೋಗ ದಿನಾಚರಣೆ

ಯೋಗ ಎಂದರೆ ದೇಹ ಮನಸ್ಸುಗಳ ಚೈತನ್ಯದ ಶಕ್ತಿ. ಇದು ಮನುಷ್ಯನನ್ನು ಉಲ್ಲಾಸದಾಯಕನನ್ನಾಗಿ ಮಾಡುತ್ತದೆ. ಪ್ರತಿನಿತ್ಯ ಯೋಗದ ಅಭ್ಯಾಸ ಇಟ್ಟುಕೊಳ್ಳಬೇಕು. ಅದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಆರೋಗ್ಯಕ್ಕೆ ಯೋಗವೇ ಭಾಗ್ಯ ಇಂದು ಪ್ರಪಂಚದಾದ್ಯಂತ ಜನರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. 'ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ' ಎನ್ನುವುದು ಈ ವರ್ಷದ ಥೀಮ್ ಆಗಿದೆ. ಯೋಗವು ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ ಸಾಮಾಜಿಕ ಯೋಗಕ್ಷೇಮಕ್ಕೂ ಕೊಡುಗೆ ನೀಡುತ್ತದೆ. ಇದು ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯದ ಸಂಬಂಧವನ್ನು ಒತ್ತಿ ಹೇಳುತ್ತದೆ. ಆದ್ದರಿಂದ ಯೋಗ ಜೀವನಕ್ಕೆ ಬಹು ಮುಖ್ಯವಾಗಿ ಬೇಕಾಗಿದೆ ಎಂದು ಮಸ್ಕತ್ ನ ಓಮನ್‌ನಲ್ಲಿ ಯೋಗ ತರಬೇತುದಾರರಾಗಿರುವ ಜಗದೀಶ್ ಬಂಗೇರ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಎನ್‌ಸಿ, ಎನ್‌ಎಸ್‌ಎಸ್, ರೇಂಜರ್ ರೋವರ್, ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಯೋಗ ನಮ್ಮ ಭಾರತದ ಸಂಸ್ಕ್ರತಿಯಾಗಿದೆ, ಸಂಸ್ಕಾರವಾಗಿದೆ. ಋಷಿ ಮುನಿಗಳಿಂದ ಬಳುವಳಿಯಾಗಿ ಬಂದಿರುವ ಯೋಗದ ಅಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ದಿನಂಪ್ರತಿ ನಮ್ಮ ಜೀವನದಲ್ಲಿ ಅದು ಒಂದು ಭಾಗವಾಗಬೇಕು. ಯೋಗ ಧ್ಯಾನದಿಂದ ಬದುಕು ಸುಂದರವಾಗಿ ರೂಪಿತಗೊಳ್ಳುತ್ತದೆ. ಅಂತಹ ಯೋಗದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಎಂದರು. ಸಂಸ್ಕ್ರತಿ ಯೋಗ ತಂಡ ಮಸ್ಕತ್ ಓಮನ್ ಇಲ್ಲಿನ ಶ್ವೇತ ಪ್ರಭು, ವೀಣಾ ರೋಹಿತ್ ಕುಮಾರ್, ರವಿ ಪ್ರಕಾಶ್ ಭಟ್ ತರಬೇತುದಾರರಾಗಿ ಆಗಮಿಸಿ ವಿದ್ಯಾರ್ಥಿಗಳಿಂದ ಯೋಗದ ಸರ್ವ ಆಸನಗಳನ್ನು ಪ್ರದರ್ಶನ ಮಾಡಿಸಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಸುರೇಶ್, ಎನ್‌ಸಿಸಿ ಅಧಿಕಾರಿ ಮಹೇಂದ್ರ ಕುಮಾರ್ ಜೈನ್, ಎನ್‌ಎಸ್‌ಎಸ್ ಅಧಿಕಾರಿ ತೇಜಸ್ವಿ ಭಟ್, ರೇಂಜರ‍್ಸ್ ರೋವರ‍್ಸ್ ಅಧಿಕಾರಿಗಳಾದ ಸಂಧ್ಯಾ ಹಾಗೂ ಪ್ರದೀಪ್ ಹಾಗೂ ರೆಡ್ ಕ್ರಾಸ್ ಅಧಿಕಾರಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಎಕ್ಸಲೆಂಟ್ ಸೆಂಟ್ರಲ್ ಶಾಲೆಯ ಶೈಕ್ಷಣಿಕ ಸಂಯೋಜಕ ಪ್ರಸಾದ ಅತಿಥಿಗಳನ್ನು ಪರಿಚಯಿಸಿದರು, ವಿದ್ಯಾರ್ಥಿನಿ ಸುಧಾಶ್ರೀ ಕಾರ್ಯಕ್ರಮ ನಿರೂಪಿಸಿದರು. ದೈವಿಕ್ ಸ್ವಾಗತಿಸಿದರು ಯಶಸ್ವಿನಿ ವಂದಿಸಿದರು. ವಿದ್ಯಾರ್ಥಿಗಳಿಂದ ಯೋಗದ ಕುರಿತಾದ ವೈವಿಧ್ಯಮಯ ನೃತ್ಯ ನಡೆಯಿತು.

ಸತ್ತೂರು, ಧಾರವಾಡ: ಅಂತರಾಷ್ಟ್ರಿಯ ಯೋಗ ದಿನಾಚರಣೆ

Article Image

ಸತ್ತೂರು, ಧಾರವಾಡ: ಅಂತರಾಷ್ಟ್ರಿಯ ಯೋಗ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯವು ಅಂತರಾಷ್ಟ್ರಿಯ ಯೋಗ ದಿನಾಚರಣೆಯನ್ನು “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಧ್ಯೇಯೆಯೊಂದಿಗೆ ದಿನಾಂಕ 21 ಜೂನ್ ರಂದು ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಮುಖ್ಯ ಅತಿಥಿಗಳಾಗಿದ್ದು, ಮತ್ತಿತರ ಗಣ್ಯರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ಪ್ರಕೃತಿ ಮತ್ತು ಯೋಗ ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಅರಳಿಹಳ್ಳಿ ಅವರು ಯೋಗದ ಮಹತ್ವ ತಿಳಿಸಿ ಅತಿಥಿ ಭಾಷಣ ಮಾಡುತ್ತಾ: ಯೋಗದಿಂದ ನಮ್ಮ ಆತ್ಮ ಸರ್ವೋಚ್ಛವಾಗುತ್ತದೆ. ಯೋಗದಿಂದ ಮನಸ್ಸಿಗೆ ಸುಖ ಮತ್ತು ಶಾಂತಿ ಸಿಗುತ್ತದೆ. ಯೋಗವು ಸಮಗ್ರ ದೇಹವನ್ನು ಸಮತೋಲನದಲ್ಲಿರಿಸುತ್ತದೆ. ಅಷ್ಟಾಂಗ ಯೋಗವು ಜೀವನದಲ್ಲಿ ಪರಿಪೂರ್ಣತೆಯನ್ನು ಗಳಿಸಲು ಸಹಾಯ ಮಾಡುತ್ತದೆ ಎಂದರು. ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಯೋಗ ಪರಿಣಿತರಾದ ಡಾ. ಸತೀಶ ಪಾಟೀಲ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗ ತಜ್ಞರ ತಂಡವು ವಿಶೇಷ ಆಸನಗಳನ್ನು ಪ್ರದರ್ಶಿಸಿದರು. ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಡಾ. ನಿರಂಜನ್ ಕುಮಾರ ಅವರು ಯೋಗ ತಜ್ಞರ ತಂಡವನ್ನು ಶ್ಲಾಘಿಸಿ, ಸನ್ಮಾನಿಸಿದರು. ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ ನಾಯ್ಕ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಕೃತಿಕಾ ಗುತ್ತಲ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಕಿರಣ ಕುಮಾರ ಅವರು ವಂದನಾರ್ಪಣೆ ಸಲ್ಲಿಸಿದರು.

ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

Article Image

ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

ಉಜಿರೆ: ದೈಹಿಕ ಹಾಗೂ ಮಾನಸಿಕ ಸಮತೋಲನದೊಂದಿಗೆ ಆರೋಗ್ಯಭಾಗ್ಯ ಕಾಪಾಡಲು ಎಲ್ಲರೂ ನಿತ್ಯವೂ ಯೋಗಾಭ್ಯಾಸ ಮಾಡಬೇಕು. ಯೋಗಾಭ್ಯಾಸಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಹತ್ತನೆ ವಿಶ್ವ ಯೋಗ ದಿನ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತಕ್ಕೆ ವಿದೇಶಗಳಿಂದ ಔಷಧಿ ಆಮದು ಮಾಡುತ್ತೇವೆ. ವಿದೇಶಗಳಿಗೆ ಭಾರತದಿಂದ ಔಷಧಿ ರಹಿತ ಯೋಗವನ್ನು ರಫ್ತು ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ಜಾಗತಿಕಮಟ್ಟದಲ್ಲಿ ಯೋಗದ ಮಹತ್ವ ಪ್ರಚಾರವಾಗಿದ್ದು ಎಲ್ಲರೂ ಆಸಕ್ತಿ ಮತ್ತು ಕುತೂಹಲದಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮದ ತಾತ್ವಿಕ ನೆಲೆಯಲ್ಲಿ ಭಾರತ ವಿಶ್ವಗುರುವಿನ ಮಾನ್ಯತೆ ಹೊಂದಿದೆ. ಧರ್ಮಸ್ಥಳದ ಶಾಂತಿವನಟ್ರಸ್ಟ್ ನೇತೃತ್ವದಲ್ಲಿ ಧರ್ಮಸ್ಥಳ, ಮಣಿಪಾಲದ ಬಳಿ ಪರೀಕ್ಷಾ ಮತ್ತು ಬೆಂಗಳೂರಿನ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿ ಆರೋಗ್ಯಭಾಗ್ಯ ರಕ್ಷಣೆಗೆ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಮೈಸೂರಿನ ಕುಮಾರಿ ಖುಷಿ ಯೋಗ ಪ್ರಚಾರದಲ್ಲಿ ಮಾಡಿದ ಸಾಧನೆಗೆ ಹೆಗ್ಗಡೆಯವರು ಅಭಿನಂದಿಸಿದರು. ಬೆಂಗಳೂರಿನ ಪರಿಮಳ ಆರೋಗ್ಯ ಸೇವಾಕೇಂದ್ರದ ಡಾ. ಜೋಸ್ ಎಬ್‌ನಜೀರ್ ಮತ್ತು ತುಮಕೂರಿನ ಸಿದ್ದಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಉಪಕುಲಪತಿ ಡಾ. ಕೆ. ಬಿ. ಲಿಂಗೇಗೌಡ ಶುಭಾಶಂಸನೆ ಮಾಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗವಿಜ್ಞಾನಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಶ್ಲಾಘಿಸಿದರು. ಯೋಗಪ್ರಚಾರದಲ್ಲಿ ವಿಶೇಷ ಸೇವೆ-ಸಾಧನೆ ಮಾಡಿದ ಮೈಸೂರಿನ ಕುಮಾರಿ ಖುಷಿ, ಎಚ್. ಅವರಿಗೆ “ಯೋಗರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಮಾರಿ ಖುಷಿ ಎಚ್. ಯೋಗ ಪ್ರಾತ್ಯಕ್ಷಿಕೆ ನೀಡಿದರು. ಯೋಗ ಸಾಧಕರಾದ ಅಶ್ವತ್ ಹೆಗಡೆ ಮತ್ತು ಡಾ. ಅಚ್ಯುತ ಈಶ್ವರನ್ ಅವರನ್ನು ಗೌರವಿಸಲಾಯಿತು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭ ಹಾರೈಸಿದರು. ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಸುಧಾಕರ ಕೊಟ್ಟಾರಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಡಾ. ಶಶಿಕಾಂತ್ ಜೈನ್ ಮತ್ತು ಡಾ. ಸುಜಾತ ಉಪಸ್ಥಿತರಿದ್ದರು. ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು. ಕುಮಾರಿ ಅನನ್ಯಾ ಜೈನ್ ಮತ್ತು ಡಾ. ಕೃತಿಕಾ ರಾಮಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಕೃತಿ ಚಿಕಿತ್ಸೆ-ಯೋಗ ವಿಜ್ಞಾನ ವಿದ್ಯಾರ್ಥಿಗಳಿಂದ ಯೋಗ

Article Image

ಪ್ರಕೃತಿ ಚಿಕಿತ್ಸೆ-ಯೋಗ ವಿಜ್ಞಾನ ವಿದ್ಯಾರ್ಥಿಗಳಿಂದ ಯೋಗ

ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವತಿಯಿಂದ ಮಿಜಾರು ಶೋಭಾವನದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಬಾರಿಯ ಯೋಗ ದಿನಾಚರಣೆ ಧ್ಯೇಯ-“ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಅಡಿಯಲ್ಲಿ ಕಾಲೇಜಿನ 400ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಯೋಗ ಪ್ರೋಟೋಕಾಲ್ ನಿಯಮಾವಳಿ ಅನುಸಾರವಾಗಿ ತಾಡಾಸನ, ವೃಕ್ಷಸಾನ, ತ್ರಿಕೋನಾಸನ, ಅರ್ಧಚಕ್ರಾಸನ, ಇನ್ನಿತರ ಆಸನ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಿತು. ವಿದ್ಯಾರ್ಥಿ ಸ್ಫೂರ್ತಿ ಮೊಯ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಭಾಗದ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಪ್ರಯುಕ್ತ ಪೋಸ್ಟರ್ ತಯಾರಿಕೆ, ವಿಡೀಯೋ ತಯಾರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಯೋಗ ವಿಭಾಗದ ಡೀನ್ ಡಾ. ಅರ್ಚನಾ ಇದ್ದರು. ವಿಭಾಗದ ವಿದ್ಯಾರ್ಥಿಗಳು ನೆರೆಹೊರೆಯ ಶಾಲಾ-ಕಾಲೇಜುಗಳಲ್ಲಿ ಕಳೆದ 10 ದಿನಗಳು ಯೋಗ ತರಬೇತಿಯನ್ನು ಉಚಿತವಾಗಿ ನಡೆಸಿಕೊಟ್ಟರು. ಪುರಭವನ: ಆಳ್ವಾಸ್ ಶಿಕ್ಷಣ ಸಂಸ್ಥೆಯ 50 ವಿದ್ಯಾರ್ಥಿಗಳು ಜಿಲ್ಲಾ ಆಯುಷ್ ವಿಭಾಗವು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾದರು.

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ

Article Image

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ

ಪ್ರತಿಯೊಬ್ಬರಲ್ಲಿಯೂ ತಮ್ಮದೇ ಪ್ರತಿಭೆಗಳಿರುತ್ತದೆ. ನಿಮಗೆ ಸಿಗುವ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ. ಕೌಶಲ್ಯಕ್ಕೆ ಪ್ರತಿಭೆಗೆ ಯಾವುದೇ ಮಿತಿಯಿಲ್ಲ. ಕಳೆದುಕೊಂಡ ಅವಕಾಶಗಳು ಮತ್ತೊಮ್ಮೆ ಸಿಗುವುದಿಲ್ಲ. ನಿಮ್ಮೊಳಗಿರುವ ಕೌಶಲ್ಯವನ್ನು ಗುರುತಿಸಿಕೊಳ್ಳಿ. ಸಮಾಜವನ್ನು ಬದಲಾಯಿಸುವ ಶಕ್ತಿ ವಿದ್ಯೆಗಿದೆ. ಯುಪಿಎಸ್‌ಸಿ, ಐಎಎಸ್, ಐಪಿಎಸ್ ನಂತಹ ಕನಸುಗಳನ್ನು ನೀವು ಕಾಣಬೇಕು. ನಿಮಗೆ ಕಲಿಸಿದ ಗುರುಗಳು ಎದ್ದು ನಿಂತು ನಿಮಗೆ ಗೌರವ ಕೊಡುವಂತಹ ರೀತಿಯಲ್ಲಿ ಸಾಧನೆಯನ್ನು ಮಾಡಬೇಕು. ಜೀವನದಲ್ಲಿ ಯಾವತ್ತಿಗೂ ನಿರಾಶರಾಗಬೇಡಿ ಬದುಕು ನಿರಂತರವಾಗಿ ಸಾಗುವ ನದಿ ಇದ್ದ ಹಾಗೆ. ಜೀವನದಲ್ಲಿ ಸತತ ಪ್ರಯತ್ನ, ಅಭ್ಯಾಸ, ಭರವಸೆಯೊಂದಿದ್ದರೆ ಒಂದಲ್ಲಾ ಒಂದು ದಿವಸ ನೀವು ಸಾಧಕರಾಗಿ ಗುರುತಿಸಿಕೊಳ್ಳುತ್ತೀರಿ ಆದ್ದರಿಂದ ನಿಮ್ಮ ಮೇಲೆ ನಿಮಗೆ ಸಂಪೂರ್ಣ ಭರವಸೆ ಇರಲಿ ಎಂದು ಖ್ಯಾತ Daijiworld 24x7 Media Network ನ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಇವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು. ಪ್ರತಿಭೆ ದೇವರು ನೀಡಿರುವ ಕೊಡುಗೆ. ನಿಮ್ಮಲ್ಲಿ ನಿಮಗೆ ಭರವಸೆ ಇರುವವರೆಗೆ ನಿಮಗೆ ಯಾವತ್ತೂ ಸೋಲಾಗುವುದಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಅನಾವರಣಗೊಳಿಸಿ ಎಂದು ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಹೇಳಿದರು. ಶಿಕ್ಷಣವೆಂದರೆ ಕೇವಲ ಪುಸ್ತಕ ಓದಿ ರ‍್ಯಾಂಕ್ ಪಡೆಯುವುದಲ್ಲ ಅದು ವಿಶಾಲ ವ್ಯಾಪ್ತಿಯನ್ನು ಒಳಗೊಂಡಿದೆ. ಮಗುವನ್ನು ಅತ್ಯುತ್ತಮ ಮಾನವನನ್ನಾಗಿಸುವ ಶಕ್ತಿ ಶಾಲೆಗಿದೆ. ರ‍್ಯಾಂಕ್ ಪಡೆಯುವ ಜೊತೆಗೆ ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಸಾಧಕರೆನಿಸಿಕೊಂಡಿರುವವರೆಲ್ಲ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ನಿಮಗೆ ಮಾದರಿಯಾಗಲಿ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿ ಮೂಡುಬಿದಿರೆಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರುಪಾಕ್ಷಪ್ಪ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಜೀವನವನ್ನು ಬದಲಾಯಿಸುವ ಶಕ್ತಿ ಕಲೆಗಿದೆ. ಕಲೆ ಮನುಷ್ಯನ್ನು ಯಾವತ್ತೂ ಕೈ ಬಿಡುವುದಿಲ್ಲ ಜೀವನದಲ್ಲಿ ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಮುಖ್ಯವಲ್ಲ ಅವಕಾಶಗಳನ್ನು ಬಳಸಿಕೊಳ್ಳುವುದು ಮುಖ್ಯ. ಓದಿನ ಜೊತೆಗೆ ಇನ್ನಿತರ ಕಲಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನು ಕಲಿತುಕೊಳ್ಳಿ ನಮ್ಮಲ್ಲಿ ಏನು ಇಲ್ಲ ಎಂದು ಬೇಸರದ ಬದುಕನ್ನು ಬದುಕಬೇಡಿ. ನಿಮ್ಮಲ್ಲಿರುವ ಆಸಕ್ತಿ ಕ್ಷೇತ್ರದಲ್ಲಿ ಅಭ್ಯಾಸ ಮುಂದುವರೆಸಿ ನಿಮ್ಮಿಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಿ. ಸಮಾಜದಲ್ಲಿ ನಿಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶಗಳು ಸಿಗುತ್ತಲೇ ಇರುತ್ತವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳ ತರಬೇತುದಾರರಾದ ರಶ್ಮಿತಾ-ಭರತನಾಟ್ಯ, ಸರ್ಪಾಜ್-ಕರಾಟೆ, ಸೌಂದರ್ಯ-ಚೆಸ್, ರೂಪೇಶ್ ಕುಮಾರ್-ನೃತ್ಯ, ಪೂರ್ಣಿಮಾ ಗೋರೆ-ಸಂಗೀತ, ಮಹವೀರ ಪಾಂಡಿ-ಯಕ್ಷಗಾನ, ಚಂದ್ರಶೇಖರ ಆಚಾರ್ಯ-ಚೆಂಡೆ, ಗೌರಿಪ್ರಸಾದ್-ತಬಲ, ಬಾಸ್ಕರ್ ನೆಲ್ಯಾಡಿ-ಚಿತ್ರಕಲೆ, ಚೇತನ ಶೆಟ್ಟಿ- ಕ್ರಾಪ್ಟ್ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಸುರೇಶ್, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ| ಸಂಪತ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಿರು ವಯಸ್ಸಿನಲ್ಲಿಯೇ ಸರ್ವಕಲಾ ಪ್ರಕಾರಗಳಲ್ಲಿ ಸಾಧನೆಗೈದ ಬೆಳುವಾಯಿಯ ಶುಭಾಂಜನ ಭಟ್ ಇವರನ್ನು ಗೌರವಿಸಿ ಸಂಮಾನಿಸಲಾಯಿತು. ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆಯ ವಿದ್ಯಾರ್ಥಿ ಸುಮಿತ್ ಹಾಗೂ ಕರಾಟೆ ತರಬೇತುದಾರರಾದ ಸರ್ಫಾಜ್ ಇವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಉಪಮುಖ್ಯೋಪಾಧ್ಯಾಯರಾದ ಜಯಶೀಲ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಾನಿಧ್ಯಾ ರಾವ್ ಸನ್ಮಾನಿತರನ್ನು ಪರಿಚಯಿಸಿದರು, ಸಂಜಲ ನಿರೂಪಿಸಿದರು, ರಶ್ಮಿತಾ ಸ್ವಾಗತಿಸಿದರು, ಭುವನ ವಂದಿಸಿದರು.

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸ

Article Image

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸ

ಭಾಷಾ ಶಾಸ್ತ್ರದಲ್ಲಿ ಪರಿಣಿತಿ ಹೊಂದಿದಾಗ ಇಂಗ್ಲಿಷ್ ಅಧ್ಯಯನ ಸುಲಲಿತವಾಗುತ್ತದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ವತಿಯಿಂದ ಕಾಲೇಜಿನ ಎ.ವಿ ಹಾಲ್‌ನಲ್ಲಿ ಇತೀಚೆಗೆ ನಡೆದ ಭಾಷಾಶಾಸ್ತ್ರ ವಿಷಯದ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳ ಶಿಕ್ಷಣ ವ್ಯವಸ್ಥೆಯಲ್ಲಿ ತಜ್ಞ ಅಧ್ಯಾಪಕರ ಕೊರತೆ ಇದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ, ಆದರೆ ಇದು ಸತ್ಯಕ್ಕೆ ದೂರವಾದ ಮಾತು. ವಿದ್ಯಾರ್ಥಿಗಳು ಜ್ಞಾನದ ಅನ್ವೇಷಣೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡರೆ, ಅಧ್ಯಾಪಕರೊಂದಿಗೆ ಚರ್ಚಿಸಿದರೆ, ಅಧ್ಯಾಪಕರು ಜ್ಞಾನವನ್ನು ವೃದ್ಧಿಸಿಕೊಳ್ಳಲು ಹೆಚ್ಚು ಶ್ರಮವನ್ನು ವಹಿಸುತ್ತಾರೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಕುಲಸಚಿವ (ಅಕಾಡೆಮಿಕ್ಸ್) ಡಾ. ಟಿ. ಕೆ. ರವಿಚಂದ್ರನ್ ಸ್ವಾಗತಿಸಿ, ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಪವಿತ್ರ ತೇಜ್ ನಿರೂಪಿಸಿ, ವಂದಿಸಿದರು.

ಸತ್ತೂರು, ಧಾರವಾಡ: ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ದಿನಾಚರಣೆ

Article Image

ಸತ್ತೂರು, ಧಾರವಾಡ: ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ದಿನಾಚರಣೆ

ಎಸ್.ಡಿಎಂ. ದಂತ ಮಹಾವಿದ್ಯಾಲಯದ, ಸಾಮೂಹಿಕ ದಂತ ಚಿಕಿತ್ಸಾ ವಿಭಾಗವು ಜೂನ್ 19ರಂದು ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ಚಿಕಿತ್ಸಾ ದಿನವನ್ನು ಆಚರಿಸಲಾಯಿತು. ಈ ವಿಭಾಗವು ಧಾರವಾಡದ ಸುತ್ತಮುತ್ತಲಿನ 17 ತಾಲೂಕುಗಳಲ್ಲಿ ಸಂಚಾರಿ ಚಿಕಿತ್ಸಾಲಯದ ಮೂಲಕ ಬಾಯಿಯ ಆರೋಗ್ಯದ ಕುರಿತು ದೂರದ ಹಳ್ಳಿಗಳಿಗೆ ಭೇಟಿ ನೀಡುತ್ತಾ ಬಂದಿದ್ದಾರೆ. ಇತ್ತೀಚಿಗೆ 75 ಶಿಬಿರಗಳಲ್ಲಿ, 12,000ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಶಶಿ ಪಾಟೀಲ್ ಮುಖ್ಯ ಅತಿಥಿಗಳಾಗಿದ್ದರು. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತಿತರ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧಾರವಾಡ ಜಿಲ್ಲೆಯಾದ್ಯಂತ 150ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯವರಾದ ಡಾ. ಶಶಿ ಪಾಟೀಲ್ ಮಾತನಾಡುತ್ತಾ: ಎಸ್.ಡಿ.ಎಂ. ವೈದ್ಯಕೀಯ ಮತ್ತು ದಂತ ಮಹಾವಿದ್ಯಾಲಯವು ಯಾವಾಗಲೂ ಸಮುದಾಯದ ಆರೋಗ್ಯ ಸುಧಾರಣೆಗೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಬಾಯಿಯ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚುವಲ್ಲಿ ಎಸ್.ಡಿ.ಎಂ. ನ ಶಿಬಿರಗಳು ಮತ್ತು ಸಂಚಾರಿ ಆಸ್ಪತ್ರೆಯು ಸಹಕಾರಿಯಾಗಿದೆ. ಆರೋಗ್ಯದ ಮಹತ್ವದ ಬಗ್ಗೆ ಸಮುದಾಯಕ್ಕೆ ತಿಳಿಸಲು ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದರು. ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಕಾರ್ಯಗಾರವನ್ನು ನಡೆಸುತ್ತಿರುವ ಸಾಮೂಹಿಕ ದಂತ ಚಿಕಿತ್ಸಾ ವಿಭಾಗಕ್ಕೆ ಉಪಕುಲಪತಿಗಳಾದ ಡಾ. ನಿರಂಜನ ಕುಮಾರ್ ಅಭಿನಂದಿಸುತ್ತಾ, ಸಮತೋಲನ ಆಹಾರದ ಮೇಲೆ ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಆಶಾ ಕಾರ್ಯಕರ್ತೆಯರು ವಿಶೇಷವಾಗಿ ಅವರ ಆರೋಗ್ಯದ ಉನ್ನತಿಗಾಗಿ ಗಮನಹರಿಸುತ್ತಾರೆ. ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ತಂಬಾಕು ಸೇವನೆಯಿಂದ ಆಗುವ ಸಮಸ್ಯೆಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು ಎಂದರು. ಸಾಮೂಹಿಕ ದಂತ ಚಿಕಿತ್ಸಾ ವಿಭಾಗವು ನಡೆಸಿದ ವಿವಿಧ ಆರೋಗ್ಯ ಶಿಬಿರಗಳ ವರದಿಯನ್ನು ಡಾ. ಶೋದನ್ ಮಂಡಿಸಿದರು. ಡಾ. ಹೇಮಾ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು. ಸಾಮೂಹಿಕ ದಂತ ಚಿಕಿತ್ಸಾ ವಿಭಾಗವು ಜಿಲ್ಲಾ ಆರೋಗ್ಯ ಕಛೇರಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ರೋಟರಿ ಕ್ಲಬ್ ಮತ್ತು SKDRDP ಸಹಯೋಗದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ದಿನದ ಅಂಗವಾಗಿ ಎಸ್.ಡಿ.ಎಂ. ದಂತ ಮಹಾವಿದ್ಯಾಲಯವು ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನದ ಹಲವಾರು ಶಾಲಾ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ವಿಭಾಗದ ಮುಖ್ಯಸ್ಥರಾದ ಡಾ. ರವಿ ಶಿರಹಟ್ಟಿ ಅತಿಥಿಯವರನ್ನು ಸ್ವಾಗತಿಸಿದರು. ಡಾ. ಅಕ್ಷತಾ ಅಗ್ನಿಹೋತ್ರಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಡಾ. ಪ್ರೀತಾ ಶೆಟ್ಟಿ ವಂದಿಸಿದರು. ಡಾ. ಜೆಬಾ ಶೇಖ್ ಕಾರ್ಯಕ್ರಮವನ್ನು ನಿರೂಪಿಸಿದರು.

ಬೃಹತ್ ರಕ್ತದಾನ ಶಿಬಿರ

Article Image

ಬೃಹತ್ ರಕ್ತದಾನ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಹಳೆ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ. ಐ.ಟಿ.ಐ. ವೇಣೂರು, ಗ್ರಾಮ ಪಂಚಾಯತ್ ಕುಕ್ಕೇಡಿ, ಪದ್ಮಾಂಬ ಸಮೂಹ ಸಂಸ್ಥೆಗಳು ವೇಣೂರು, ಹಾಲು ಉತ್ಪಾದಕರ ಸಹಕಾರಿ ಸಂಘ (ರಿ.) ಕುಕ್ಕೇಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ವೇಣೂರು, ಲಯನ್ಸ್ ಕ್ಲಬ್ ವೇಣೂರು, ಲಯನ್ಸ್ ಕ್ಲಬ್ ಮಂಗಳೂರು, ಫಲ್ಗುಣಿ ಸೇವಾ ಸಂಘ (ರಿ.) ವೇಣೂರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯ, ಮಂಜುಶ್ರೀ ಭಜನಾ ಮಂಡಳಿ (ರಿ.) ಕುಂಡದಬೆಟ್ಟು, ಜನಸೇವಾ ಟ್ರಸ್ಟ್ (ರಿ.) ಪಡ್ಡಂದಡ್ಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕುಕ್ಕೇಡಿ-ನಿಟ್ಟಡೆ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ರಕ್ತದಾನದ ಬೃಹತ್ ಶಿಬಿರವು ವೇಣೂರಿನ ಎಸ್.ಡಿ.ಎಂ ಐಟಿಐ ನಲ್ಲಿ ನಾಳೆ(ಜೂ. 21) ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ‍್ಯಕ್ರಮ

Article Image

ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ‍್ಯಕ್ರಮ

ಮೂಡುಬಿದಿರೆ: ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕ ವಿಜೇತ, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳವಾರ ವಿದ್ಯಾಗಿರಿಯಲ್ಲಿ ಅಭಿನಂದಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಗೌರವಾಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ನಮ್ಮ ದೇಶದಲ್ಲಿ ಪರಿಚಿತ ಆಟವಾಗಿ, ಆದರೆ ಈ ಭಾಗದಲ್ಲಿ ಅಷ್ಟೊಂದು ಖ್ಯಾತಿಗೆ ಬಾರದ ಕ್ರೀಡೆಯನ್ನು, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್, ಕಳೆದ ಐದು ವರ್ಷಗಳ ಸತತ ಪರಿಶ್ರಮದಿಂದಾಗಿ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನಿರ್ಮಾಣ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಜೋಡಿಸಿಕೊಳ್ಳಬೇಕು. ಇವುಗಳ ನಡವಿನ ಸಮತೋಲಿತ ನಡಿಗೆ ಎರಡು ಕ್ಷೇತ್ರದಲ್ಲಿ ಉನ್ನತಿ ಹೊಂದಲು ಸಹಕಾರಿ. ಆದರೆ ಕ್ರೀಡೆಯ ಹೆಸರಿನಲ್ಲಿ ಶಿಕ್ಷಣವನ್ನು ಕುಂಠಿತಗೊಳಿಸುವುದು ಸಾಧುವಲ್ಲ ಎಂದರು. ಆರೋಗ್ಯ, ಮನೋನಿಶ್ಚಯ, ಕ್ರೀಡಾ ಮನೋಭಾವ ಹಾಗೂ ಸೌಹಾರ್ದತೆಯಂತಹ ಗುಣಗಳು ನಾವು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ನಮ್ಮಲ್ಲಿ ಕರಗತವಾಗುತ್ತದೆ ಎಂದರು. ಆಳ್ವಾಸ್ ಸಂಸ್ಥೆ, ಈ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ನಮ್ಮ ಸಂಘದ ಪರಿಶ್ರಮದಿಂದಾಗಿ ಇಂದು ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರತಿ ಹಂತದಲ್ಲೂ ಕಠಿಣ ಸವಾಲನ್ನು ಮೀರಿ ವಿದ್ಯಾರ್ಥಿಗಳು ಜಯಶಾಲಿಗಳಾಗಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ಏಕೈಕ ತಂಡ ನಮ್ಮದು. ಮುಂದಿನ ಆಗಸ್ಟ್ ನಲ್ಲಿ ಹಂಗೇರಿಯ ಬುಡಾಪೇಸ್ಟಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕಿಕ್ ಚಾಂಪಿಯನ್‌ಶಿಫ್‌ನಲ್ಲಿ ಭಾಗವಹಿಸಲು ನಮ್ಮ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪದಕ ವಿಜೇತರ ವಿವರ: ಮೇ 21ರಿಂದ 27ರವರೆಗೆ ಪುಣೆಯಲ್ಲಿ ನಡೆದ ಚಿಲ್ಡನ್ಸ್ ಮತ್ತು ಕೆಡೆಟ್ ಹಾಗೂ ಜೂನ್ 10 ರಿಂದ 14ರ ವರೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಜಿಲ್ಲೆಯ ಕ್ರೀಡಾಪಟುಗಳು 8 ಚಿನ್ನದ ಪದಕ, 7 ಬೆಳ್ಳಿಯ ಪದಕ ಮತ್ತು 13 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಅನ್ಶಿ ಎನ್. ಎಮ್. ವೈಯಕ್ತಿಕ ವಿಭಾಗದಲ್ಲಿ 3 ಚಿನ್ನದ ಪದಕವನ್ನು ಪಡೆದು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಜೂನ್ 10 ರಿಂದ 13ರವರೆಗೆ ಬಾಗಲಕೋಟೆಯಲ್ಲಿ ನಡೆದ ಸೌತ್ ಝೋನ್ ಖೇಲೋ ಇಂಡಿಯಾ ವುಶು ವುಮೆನ್ಸನ ಲೀಗ್ ನಲ್ಲಿ ದಕ್ಷಿಣ ಕನ್ನಡ ವುಶು ಅಸೋಸಿಯೇಷನ್‌ನ ವಿದ್ಯಾರ್ಥಿಗಳು 1 ಚಿನ್ನದ ಪದಕ ಮತ್ತು 6 ಕಂಚಿನ ಪದಕಗಳನ್ನು ಪಡೆದು ಮುಂಬರುವ ರಾಷ್ಟ್ರೀಯ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾರ‍್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದ ನಿತಿನ್ ಸುವರ್ಣ ಮತ್ತು ಶಿಕ್ಷಕ ಸಂಪತ್ ಕುಮಾರ್ ಇದ್ದರು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ಇ.ಎನ್.ಟಿ ಶಿಬಿರದಲ್ಲಿ 143 ಮಂದಿ ಭಾಗಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ಇ.ಎನ್.ಟಿ ಶಿಬಿರದಲ್ಲಿ 143 ಮಂದಿ ಭಾಗಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮತ್ತು ಹರ್ಷೇಂದ್ರ ಕುಮಾರ್ ಅವರ ನಿರ್ದೇಶನದಂತೆ ಪ್ರತಿ ತಿಂಗಳು ಉಚಿತ ರೋಗ ತಪಾಸಣಾ ಶಿಬಿರ ನಡೆಯುತ್ತಿದ್ದು, ದಿನಾಂಕ ಜೂ. 16 ರಂದು ‘ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಶಿಬಿರ’ ನಡೆಯಿತು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಇವರು ಶಿಬಿರ ಉದ್ಘಾಟಿಸಿ ಮಾತನಾಡಿ, ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ತಿಂಗಳಿಗೆ ಮೂರು ಅಥವಾ ನಾಲ್ಕು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತದೆ. ಪೂಜ್ಯ ಹೆಗ್ಗಡೆಯವರ ನಿರ್ದೇಶನದಂತೆ ತಿಂಗಳಿಗೆ 2 ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಗುತ್ತದೆ. ಕನಿಷ್ಟ ಒಬ್ಬ ಎಂ.ಬಿ.ಬಿ.ಎಸ್ ವೈದ್ಯರು ಕೂಡ ಇಲ್ಲದ ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾದ ಜನತೆಗೆ ಅವರು ಇರುವ ಜಾಗದಲ್ಲಿಯೇ ಸೂಪರ್ ಸ್ಪೆಷಾಲಿಟಿ ವೈದ್ಯರ ಸೇವೆ ದೊರಕಿಸಿ ಕೊಡುವುದು ನಮ್ಮ ಗುರಿಯಾಗಿದೆ ಎಂದರು. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್ ಮಾತನಾಡುತ್ತಾ, ಈ ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಇ.ಎನ್.ಟಿ ಸಂಬಂಧಿಸಿದ ಎಲ್ಲಾ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಕೂಡ ಇಲ್ಲಿ ನಡೆಸಲಾಗಿದೆ ಎಂದರು. ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿರುತ್ತದೆ. ಒಳರೋಗಿ ವಿಭಾಗದಲ್ಲಿ 10%, ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ದೊರೆಯಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 143 ಮಂದಿ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡು ಸಂತೋಷ ವ್ಯಕ್ತಪಡಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮ

Article Image

ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮ

ಮೂಡುಬಿದಿರೆ: ಶಿಸ್ತು, ಸಮಯಪ್ರಜ್ಞೆ, ಸೃಜನಶೀಲತೆ, ಕ್ರೀಡಾಮನೋಭಾವ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಅಪಾರ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ ಮೋಹನ ಆಳ್ವ ಹೇಳಿದರು. ನಗರದ ಸ್ವರಾಜ್ ಮೈದಾನದ ಸ್ಕೌಟ್ಸ್ - ಗೈಡ್ಸ್ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಸಹಯೋಗದಲ್ಲಿ ನಡೆದ 2023-24 ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾನ್ವಿತ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳು ಶೈಕ್ಷಣಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿರುವುದು ಅಭಿನಂದನಾರ್ಹ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ, ಪಿ. ಜಿ. ಆರ್. ಸಿಂಧ್ಯಾ ಮಾತನಾಡಿ, ಒಂದು ವಿಶ್ವವಿದ್ಯಾಲಯ ಮಾಡಲಾಗದ ಶೈಕ್ಷಣಿಕ ಕಾರ್ಯವನ್ನು ಮೋಹನ ಆಳ್ವರು ಮಾಡುತ್ತಿದ್ದಾರೆ ಎಂದರು. ಶೈಕ್ಷಣಿಕ ಕಾರ್ಯದ ಜೊತೆಯಲ್ಲಿ ಅಂತರಾಷ್ಟ್ರೀಯ ಜಾಂಬೂರಿ ಆಯೋಜಿಸಿದ್ದ ಕುರಿತು ನೆನೆದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳು ಬಹಳಷ್ಟಿದ್ದಾರೆ ಆದರೆ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ರ‍್ಯಾಂಕ್ ಗಳಿಸಿರುವುದು ಅಭಿನಂದನೀಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್. ವಿರೂಪಾಕ್ಷ ಮಾತನಾಡಿ ಶಿಕ್ಷಣದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಿಸಿಕೊಂಡಾಗ ಸರ್ವತೋಮುಖ ಕಲಿಕೆ ಸಾಧ್ಯ ಎಂದರು. ಉತ್ತಮ ಶಿಸ್ತುಬದ್ಧ ಜೀವನ ರೂಪಿಸುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕರಿಸುತ್ತಿದೆ ಎಂದರು. ಆತ್ಮ ವಿಶ್ವಾಸದ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸುವಲ್ಲಿ ಈ ಶಿಕ್ಷಣ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ದಕ್ಷಿಣ ಕನ್ನಡ, ಕಾರವಾರ, ಉಡುಪಿ, ಶಿರಸಿ, ಕೊಡಗು ಜಿಲ್ಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್ ವಂದಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಶ್ರೀಪತಿ ಭಟ್, ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ಜ್ಯೋತಿ ಜೆ. ಪೈ. ಜಿಲ್ಲಾ ಗೈಡ್ ಆಯುಕ್ತೆ ಉಡುಪಿ ಜಿಲ್ಲೆ, ಜಿಲ್ಲಾ ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್, ಚಂದ್ರಶೇಖರ್ ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತರು, ಶಿರಸಿ ಜಿಲ್ಲೆ, ಸಾವಿತ್ರಿ ಮನೋಹರ್, ALT, ಉಡುಪಿ ಜಿಲ್ಲೆ, ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್ ಉಪಸ್ಥಿತರಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ. ವಿದ್ಯಾರ್ಥಿಗಳ ಅಭಿನಂದನಾ ಪತ್ರಗಳನ್ನು ಘೋಷಿಸಿದರು, ಕಾರ್ಯಕ್ರಮವನ್ನು ನವೀನ್ ಚಂದ್ರ ಅಂಬೂರಿ ನಿರೂಪಿಸಿ, ವಸಂತ್ ದೇವಾಡಿಗ ಸ್ವಾಗತಿಸಿದರು.

ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್

Article Image

ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್

ಮೂಡುಬಿದಿರೆ: ಕಾಲೇಜು ಮಟ್ಟದಲ್ಲಿ ಕ್ರೀಡೆಗೆ ಪ್ರಾಮುಖ್ಯತೆಯನ್ನು ನೀಡಿದರೆ ಮಾತ್ರ ದೇಶದಲ್ಲಿ ಕ್ರೀಡೆ ಬೆಳೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು. ಇಲ್ಲಿರುವ ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಶೆಟ್ಟಿ ಸಭಾಂಗಣದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಆತಿಥ್ಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಅವರು ಮಾತನಾಡಿದರು. ಕ್ರೀಡೆಯನ್ನು ಬೆಳೆಸುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡುಗೆ ಅಪಾರ. ಸರ್ಕಾರದ ನೆರವಿಲ್ಲದೆಯೂ ಆಳ್ವಾಸ್ ಸಂಸ್ಥೆ ಕ್ರೀಡಾಪಟುಗಳ ಬೆಳವಣಿಗೆಗೆ ಶ್ರಮ ಪಡುತ್ತಿದೆ. ಈ ಮಾದರಿ ದೇಶದಲ್ಲೇ ಮೊದಲು ಎಂದರು. ಮುಂದಿನ ದಿನಗಳಲ್ಲಿ ನಮ್ಮ ಫೆಡರೇಶನ್ ಕಪ್ ಅನ್ನು ಆಳ್ವಾಸ್‌ನಲ್ಲೆ ನಡೆಸಲಾಗುವುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ದೇಶಿಯ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತೋಷ ಉಂಟುಮಾಡಿದೆ. ಆಳ್ವಾಸ್ ಸಂಸ್ಥೆಯೂ ಕ್ರೀಡೆಯ ಪೋಷಣೆ ಹಾಗೂ ಬೆಳವಣಿಗೆಗೆ ಮಹತ್ವವನ್ನು ನೀಡುತ್ತದೆ. ಇದರ ಫಲವಾಗಿ ನಮ್ಮ ಸಂಸ್ಥೆಯಿಂದ 7 ಕ್ರೀಡಾಪಟುಗಳು ಒಲಿಂಪಿಕ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು ಎಂದರು. ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಟೂರ್ನಿ ಹಾಗೂ ಖೇಲೊ ಇಂಡಿಯಾ ಟೂರ್ನಿಯಲ್ಲಿ ಚಿನ್ನದ ಪದಕ ಗಳಿಸಿದ ಆಳ್ವಾಸ್ ವಿದ್ಯಾರ್ಥಿ ಜಿತಿನ್ ನಾಯ್ಕ್, ಪ್ರೊ ಕಬಡ್ಡಿ ಆಟಗಾರರಾದ ರಂಜಿತ್ ನಾಯ್ಕ್ ಹಾಗೂ ಶಶಾಂಕ್ ಬಿ. ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪುರುಷೋತ್ತಮ್ ಪೂಜಾರಿ ಹಾಗೂ ರೋಹಿತ್ ತೊಕ್ಕೊಟ್ಟು ಇದ್ದರು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ ಸ್ವಾಗತಿಸಿ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿ ಕುಮಾರ್ ವಂದಿಸಿ, ವಿದ್ಯಾರ್ಥಿ ಅನಂತಕೃಷ್ಣ ನಿರೂಪಿಸಿದರು. ಈ ಟೂರ್ನಿಯಲ್ಲಿ ಒಟ್ಟು 64 ಪುರುಷರ ಹಾಗೂ 19 ಮಹಿಳಾ ತಂಡಗಳು ಪಾಲ್ಗೊಂಡಿದ್ದು, ಮೂರು ದಿನಗಳ ಕಾಲ ಟೂರ್ನಿ ನಡೆಯಲಿದೆ. ಜೂನ್ 20ರಂದು ಅಂತಿಮ ಹಣಾಹಣಿ ಪಂದ್ಯಗಳು ಹಾಗೂ ಸಮಾರೋಪ ನಡೆಯಲಿದೆ.

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ “ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು” ಕುರಿತು ಸಂವಾದ ಕಾರ್ಯಕ್ರಮ

Article Image

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ “ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು” ಕುರಿತು ಸಂವಾದ ಕಾರ್ಯಕ್ರಮ

ಮೂಡುಬಿದಿರೆ: “ವೈದ್ಯಕೀಯ ಬಹಳ ಪವಿತ್ರವಾದ ವೃತ್ತಿ. ಆ ವೃತ್ತಿಯ ಎಲ್ಲಾ ತ್ಯಾಗ ಮತ್ತು ಸವಾಲುಗಳ ನಡುವೆಯೂ ಅದು ಬಹಳ ಸಂತೃಪ್ತಿಯನ್ನು ನೀಡುವ ವೃತ್ತಿ. ಈ ನಿಟ್ಟಿನಲ್ಲಿ ನಾನು ಜಗತ್ತಿನ ಅತ್ಯಂತ ಉತ್ತಮ ವೃತ್ತಿಯಲ್ಲಿದ್ದೇನೆ” ಎಂದು ಬೆಂಗಳೂರಿನ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೊವಾಸ್ಕುಲರ್ ಸಾಯನ್ಸಸ್ ಎಂಡ್ ರಿಸರ್ಚ್ ನ ಸಹಾಯಕ ಪ್ರಾಧ್ಯಾಪಕ ಡಾ. ಪಾರಿತೋಶ್ ಬಲ್ಲಾಳ್ ಹೇಳಿದರು. ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆಸಿದ, “ನೀಟ್ ಪರೀಕ್ಷೆಯ ಯಶಸ್ಸಿನ ಸೂತ್ರ” ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ವೈದ್ಯನಾಗಲು ಪಡಬೇಕಾದ ತ್ಯಾಗ, ಶ್ರಮದ ಬಗ್ಗೆ ವಿದ್ಯಾರ್ಥಿಯೊಬ್ಬನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಹೃದಯ ತಜ್ಞನಾಗಲು ಹದಿಮೂರು ವರ್ಷ ಬೇಕಾಗುತ್ತದೆ ಎಂದರು. “ಈ ಎರಡು ವರ್ಷಗಳಲ್ಲಿ ನೀವು ಎದುರಿಸುವ ಕಷ್ಟಗಳು ನಿಮ್ಮ ಭವಿಷ್ಯತ್ತಿಗೆ ನಿಮ್ಮನ್ನು ತಯಾರಿಸುತ್ತದೆ. ದೊಡ್ಡ ಕನಸನ್ನು ಕಾಣಲು ಹಿಂಜರಿಯಬೇಡಿ. ಪ್ರಥಮ ಪದವಿಪೂರ್ವದಲ್ಲಿ ನಾನು ಕಡಿಮೆ ಅಂಕಗಳನ್ನು ಗಳಿಸಿದ್ದೆ. ಆಗ ನನ್ನ ಪ್ರಾಂಶುಪಾಲರ ಮಾರ್ಗದರ್ಶನದಿಂದ ಆದ್ಯತೆಗಳಿಗನುಗುಣವಾಗಿ ನನ್ನ ಚಟುವಟಿಗಳನ್ನು ಆಯ್ದುಕೊಂಡು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ನಿಮ್ಮ ಪ್ರಸ್ತುತ ಪರಿಸ್ಥಿತಿ ಹೇಗೆಯೇ ಇದ್ದರೂ ಉತ್ಕ್ರಷ್ಟವಾದುದನ್ನು ಸಾಧಿಸಲು ಸಾಧ್ಯ. ನಿಮ್ಮ ಕಲಿಕೆಯ ಶೈಲಿಯನ್ನು ಅರಿತುಕೊಳ್ಳಿ, ಉತ್ತಮ ನೆನಪಿಗಾಗಿ ನೀವು ಗಳಿಸಿದ ಜ್ಞಾನವನ್ನು ನಿಮ್ಮ ಪರಿಸರದ ಜೊತೆ ಹೊಂದಿಸಿ, ಅದರ ಜೊತೆಗೆ ವ್ಯಾಯಾಮವನ್ನು ಮಾಡಿ, ನಿಮ್ಮ ಕಲಿಕಾ ಸಾಮಾಗ್ರಿಗಳನ್ನು ಸರಿಯಾಗಿ ಜೋಡಿಸಿಕೊಳ್ಳಿ, ನಿಮ್ಮ ಗುರಿಯನ್ನು ದೃಶ್ಯೀಕರಿಸಿ, ಅನೇಕ ಪುನರಾವರ್ತನೆಗಳನ್ನು ಮಾಡಿ” ಎಂದರು. ಹೀಗೆ ಅವರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಡಾ ಪಾರಿತೋಶ್ ಬಲ್ಲಾಳರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಗುರಿಯನ್ನು ತಲುಪಲು ಅವರು ನೀಡಿದ ಸಲಹೆಯನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನೋಲಿಯ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

‘ಜಗನ್ಮೋಹನ ಹಾಗೂ ಶೋಭಾಯಮಾನ’ ನೂತನ ಕಾಲೇಜು ಸಂಕೀರ್ಣ ಹಾಗೂ ವಸತಿ ನಿಲಯಗಳ ಲೋಕಾರ್ಪಣೆ

Article Image

‘ಜಗನ್ಮೋಹನ ಹಾಗೂ ಶೋಭಾಯಮಾನ’ ನೂತನ ಕಾಲೇಜು ಸಂಕೀರ್ಣ ಹಾಗೂ ವಸತಿ ನಿಲಯಗಳ ಲೋಕಾರ್ಪಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ವಿದ್ಯಾಗಿರಿಯ ಜಗಜ್ಯೋತಿ ಬಸವೇಶ್ವರ ವೃತ್ತದ, ಜ್ಞಾನಯೋಗಿ ಸರ್ವಜ್ಞ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಕಾಲೇಜು ಸಂಕೀರ್ಣ ಹಾಗೂ ವಿದ್ಯಾರ್ಥಿನಿ ವಸತಿ ನಿಲಯದ ಉದ್ಘಾಟನಾ ಸಮಾರಂಭ ಜೂ. 17ರಂದು ನಡೆಯಿತು. ನೂತನ ಕಾಲೇಜು ಸಂಕೀರ್ಣ-‘ಜಗನ್ಮೋಹನ’ದ ಉದ್ಘಾಟನೆಯನ್ನು ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ, ಉದ್ಯಮಿ ಕೆ. ಶ್ರೀಪತಿ ಭಟ್ ನೆರವೇರಿಸಿದರು. ಡಾ. ಎಂ. ಮೋಹನ ಆಳ್ವರ ಧರ್ಮಪತ್ನಿ ದಿ.ಶೋಭಾ ಆಳ್ವರ ನೆನಪಿಗಾಗಿ ನೂತನ ವಸತಿ ನಿಲಯಕ್ಕೆ ‘ಶೋಭಾಯಮಾನ’ ಎಂದು ಹೆಸರಿಡಲಾಗಿದ್ದು, ಇದರ ಉದ್ಘಾಟನೆಯನ್ನು ಲಲಿತ ರಾಮಣ್ಣ ಶೆಟ್ಟಿ ಮತ್ತು ಜಯಶ್ರೀ ಅಮರನಾಥ್ ಶೆಟ್ಟಿ ನೇರವೇರಿಸಿದರು. ‘ಜಗನ್ಮೋಹನ’ದ ವಿಶೇಷತೆಗಳು: ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ನೂತನ ಕಾಲೇಜು ಕಟ್ಟಡ -‘ಜಗನ್ಮೋಹನ’ದಲ್ಲಿ 68 ತರಗತಿ ಕೊಠಡಿಗಳಿದ್ದು, 3 ಭೌತಶಾಸ್ತ್ರದ ಲ್ಯಾಬ್, 3 ರಸಾಯಶಾಸ್ತ್ರದ ಲ್ಯಾಬ್ ಹಾಗೂ 2 ಜೀವಶಾಸ್ತ್ರದ ಲ್ಯಾಬ್ ಹಾಗೂ ಒಂದು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದೆ. ವಿಶಾಲವಾದ ಸ್ಟಡಿಹಾಲ್‌ನ್ನು ಹೊಂದಿರುವ ಈ ಕಟ್ಟಡ, ಪ್ರತಿಧ್ವನಿ ಮುಕ್ತ ವ್ಯವಸ್ಥೆಯನ್ನು ಹೊಂದಿದೆ. ಪ್ರಶಾಂತ ಪರಿಸರದ ನಡುವೆ, ವಿಶಾಲವಾದ ಹೂದೋಟ, ಸುಂದರವಾದ ವಾಕಿಂಗ್ ಟ್ರ್ಯಾಕ್, ಕಟ್ಟಡದ ಒಳಭಾಗದಲ್ಲಿ ಅಮೃತಶಿಲೆಯಿಂದ ನಿರ್ಮಿಸಿದ ಭಗವಾನ್ ಮಹಾವೀರರ ಮೂರ್ತಿ ಮನಸ್ಸಿಗೆ ಆಹ್ಲಾದಕರ ವಾತವರಣವನ್ನು ಒದಗಿಸುತ್ತದೆ. ಶೋಭಾಯಮಾನ ವಸತಿ ನಿಲಯ: ಶೋಭಾಯಮಾನ ವಸತಿ ನಿಲಯವು ಆಧುನಿಕ ಕಾಲದ ಎಲ್ಲಾ ವ್ಯವಸ್ಥೆಯನ್ನು ಒಳಗೊಂಡ ಸುಸಜ್ಜಿತ ವಸತಿ ಗೃಹವಾಗಿದೆ. 600 ವಿದ್ಯಾರ್ಥಿನಿಯರಿಗೆ ವಸತಿಯನ್ನು ಒದಗಿಸಬಲ್ಲ ಈ ಹಾಸ್ಟೆಲ್, ಎಲ್‌ ಆಕಾರದಲ್ಲಿ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕನುಗುಣವಾಗಿ ಹಾಸ್ಟೆಲ್‌ನ ರೂಮ್‌ಗಳನ್ನು ನಿರ್ಮಿಸಲಾಗಿದ್ದು, ಪ್ರತೀ ರೂಮ್ ಅಟ್ಯಾಚೆಡ್ ಬಾತ್‌ರೂಮ್ ವ್ಯವಸ್ಥೆಯನ್ನು ಒಳಗೊಂಡಿದೆ. ಎರಡು ಅತ್ಯಾಕರ್ಷಕ ಡೈನಿಂಗ್ ಹಾಲ್‌ಗಳಿದ್ದು, ಒಂದೇ ಕಿಚನ್‌ನಿಂದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇಲ್ಲೂ ವಿಶಾಲವಾದ ಸ್ಟಡಿ ಹಾಲ್‌ನ್ನು ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಸದಾ ಕಾಲ ಈ ವ್ಯವಸ್ಥೆಯನ್ನು ಉಪಯೋಗಿಬಹುದಾಗಿದೆ. 24 ಗಂಟೆಗಳ ಸಿಸಿಟಿವಿ ಕಣ್ಗಾವಲಿರುವ ಈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು, ವೈದ್ಯಕೀಯ ತಂಡ, ಆಪ್ತ ಸಲಹೆಗಾರರು, ವಾರ್ಡನ್‌ಗಳು ಸದಾ ಸೇವೆಯಲ್ಲಿ ನಿರತರಾಗಿರುತ್ತಾರೆ. ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉದ್ಯಮಿ ಶ್ರೀಪತಿ ಭಟ್, ಮೀನಾಕ್ಷಿ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ “ಉತ್ಸವ 2024”

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ “ಉತ್ಸವ 2024”

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ “ಉತ್ಸವ 2024” ಅನ್ನು ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ದಿನಾಂಕ 10ರಂದು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತು ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಕ್ತನ ವಿದ್ಯಾರ್ಥಿ ಮತ್ತು ಬೆಂಗಳೂರಿನ ಖ್ಯಾತ ರೆಡಿಯೋಲಾಜಿಸ್ಟ್ ಆದ ಡಾ. ರೋಹಿತ್ ಮಧುಕರ ಅವರು "ಉತ್ಸವ 2024" ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು 20 ವರ್ಷಗಳ ಹಿಂದೆ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮತ್ತು ಈಗ ಅದರ ಯಶಸ್ಸನ್ನು ಆನಂದಿಸುವುದರೊಂದಿಗೆ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಹೆಮ್ಮೆಯ ಮೊದಲ ಬ್ಯಾಚ್ ಆಗಿದ್ದರಿಂದ ಆಡಳಿತ ಮಂಡಳಿ ಮತ್ತು ಶಿಕ್ಷಕರೇ ನಮಗೆ ಎಲ್ಲವೂ ಆಗಿದ್ದರು. ನಮ್ಮ 2003ನೇ ಬ್ಯಾಚ್ ಹಲವು “ಮೊದಲ” ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದನ್ನು ಸ್ಮರಿಸಿಕೊಂಡರು. ಅಂದಿನ ಅಧ್ಯಾಪಕರು ವಿದ್ಯಾರ್ಥಿಗಳು ತಮ್ಮನ್ನು ಹೇಗೆ ಪೋಷಿಸಿ, ಸಮಾಜಕ್ಕೆ ಉತ್ತಮ ವೈದ್ಯರನ್ನಾಗಿ ರೂಪಿಸಿದ್ದನ್ನು ನೆನಪಿಸಿಕೊಂಡರು. ಉತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆಯನ್ನು ಬೆಳೆಸಿ, ಉತ್ತಮ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಎಸ್.ಡಿ.ಎಂ. ಮಹಾವಿದ್ಯಾಲಯವು ಕಳೆದ 20 ವರ್ಷಗಳಲ್ಲಿ ಸಾಧಿಸಿದ ಉತ್ತಮ ಪ್ರಗತಿಗಾಗಿ ಎಸ್.ಡಿ.ಎಂ. ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಮುಂದೆ ಇರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿಯೇ ದೊಡ್ಡ ದೊಡ್ಡ ಕನಸುಗಳನ್ನು ಕಾಣಲು ಹಿಂಜರಿಯಬಾರದು. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರುತ್ತಾರೆ ಎಂಬುದನ್ನು ನಂಬಬೇಕು. ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅವರಲ್ಲಿ ಹೊಸ ಜ್ಞಾನವನ್ನು ಮೂಡಿಸುತ್ತವೆ ಎಂದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ, ಉಪ ವಿದ್ಯಾರ್ಥಿ ಕಲ್ಯಾಣಾಧಿಕಾರಿಯವರಾದ ಆಶಾ ದೇಶಪಾಂಡೆ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಯಿ ಧೀರಾ ಅವರು ವಿದ್ಯಾರ್ಥಿಗಳ ವಾರ್ಷಿಕ ಸಂಚಿಕೆಯಾದ ಸ್ಟಿಲ್‌ವಾಟರ‍್ಸ್ ನ ವಿಶ್ಲೇಷಣೆ ನೀಡಿದರು. ರೋಹಿಣಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಚಂದನ ಅವರು ವಂದನಾರ್ಪಣೆ ಸಲ್ಲಿಸಿದರು.

ರತ್ನಮಾನಸದಲ್ಲಿ ಪ್ರವೇಶದ್ವಾರ ಉದ್ಘಾಟನೆ

Article Image

ರತ್ನಮಾನಸದಲ್ಲಿ ಪ್ರವೇಶದ್ವಾರ ಉದ್ಘಾಟನೆ

ಜೀವನಶಿಕ್ಷಣ ನೀಡುವ ಉಜಿರೆಯ ರತ್ನಮಾನಸ ವಿದ್ಯಾರ್ಥಿನಿಲಯದ ಪ್ರವೇಶದ್ವಾರವನ್ನು ಬುಧವಾರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ರತ್ನಮಾನಸ ವಿದ್ಯಾರ್ಥಿ ನಿಲಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಕೃಷಿ, ಹೈನುಗಾರಿಕೆ, ಅಡುಗೆ ಮಾಡುವುದು, ತರಕಾರಿ ಬೆಳೆಸುವುದು, ಲೆಕ್ಕಪತ್ರ ನಿರ್ವಹಣೆ, ಕ್ಷೌರ ಮಾಡುವುದು, ನಾಯಕತ್ವ, ಸಮಾಜ ಸೇವೆ ಇತ್ಯಾದಿ ವಿಷಯಗಳಲ್ಲಿ ಸೂಕ್ತ ಮಾಹಿತಿ, ಮಾರ್ಗದರ್ಶನ, ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಾಗುತ್ತದೆ. ತನ್ಮೂಲಕ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು. ಧರ್ಮಸ್ಥಳಕ್ಕೆ ಬಂದ ಗಣ್ಯರನ್ನು ಉಜಿರೆಯಲ್ಲಿರುವ ಸಿದ್ಧವನ ಗುರುಕುಲ ಮತ್ತು ರತ್ನಮಾನಸಕ್ಕೆ ವೀಕ್ಷಣೆಗೆ ಕಳುಹಿಸಿ ಎಲ್ಲರೂ ಬಾಲಕರ ಚಟುವಟಿಕೆಗಳನ್ನು ಕಂಡು ಶ್ಲಾಘಿಸಿದ್ದಾರೆ ಎಂದರು. ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಸಲ್ಪಡುವ ಎಲ್ಲಾ ಪ್ರೌಢಶಾಲೆಗಳು ಶೇ. ನೂರು ಫಲಿತಾಂಶ ಪಡೆದ ಬಗ್ಗೆ ಅವರು ವಿಶೇಷ ಅಭಿನಂದನೆ ಸಲ್ಲಿಸಿದರು. ಸುಪ್ರಿಯಾ ಹರ್ಷೇಂದ್ರ ಕುಮಾರ್ ಶುಭ ಹಾರೈಸಿದರು. ಅಖಿಲ ಭಾರತ ಮಟ್ಟದಲ್ಲಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರತ್ನಮಾನಸದ ಹಿರಿಯ ವಿದ್ಯಾರ್ಥಿ ಶ್ಯಾಂ ಪ್ರಸಾದ್ ಅವರನ್ನು ಗೌರವಿಸಲಾಯಿತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಐ.ಟಿ. ವಿಭಾಗದ ಸಿ.ಇ.ಒ. ಪೂರನ್‌ವರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರೀತಂ ಸ್ವಾಗತಿಸಿದರು. ನಿಶಿತ್ ಧನ್ಯವಾದವಿತ್ತರು. ಹಿರಿಯ ವಿದ್ಯಾರ್ಥಿ ಶ್ಯಾಂ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

ಮೂಡುಬಿದಿರೆ: 'ಸಮೃದ್ಧಿ' ಹಲಸು ಹಣ್ಣುಗಳ ಮಹಾಮೇಳ

Article Image

ಮೂಡುಬಿದಿರೆ: 'ಸಮೃದ್ಧಿ' ಹಲಸು ಹಣ್ಣುಗಳ ಮಹಾಮೇಳ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ, ಆಹಾರೋತ್ಸವ ಮಹಾಮೇಳ ಸಮಿತಿ, ಮೂಡುಬಿದಿರೆ, ಕೃಷಿ ಇಂಜಿನಿಯರಿಂಗ್ ವಿಭಾಗ, ಆಳ್ವಾಸ್ ತಾಂತ್ರಿಕ ಕಾಲೇಜು, ಮಿಜಾರು ಸಂಯುಕ್ತ ಆಶ್ರಯದಲ್ಲಿ ಕೃಷಿ ಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ 'ಸಮೃದ್ಧಿ' ಹಲಸು-ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾ ಮೇಳವು ಮೂಡುಬಿದಿರೆ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಜೂನ್ 14, 15 ಮತ್ತು 16ರಂದು ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯಮಯ ತಳಿಗಳ ಹಲಸಿನ ಹಣ್ಣಿನ ಬೃಹತ್ ಸಂಗ್ರಹ. ಸವಿರುಚಿ ತಳಿಗಳ ಮಾವು, ಪಪ್ಪಾಯ, ಅನಾನಸು, ಪೇರಳೆ, ನೇರಳೆ-ಪ್ರಾದೇಶಿಕ ಹಣ್ಣುಗಳ ವಿಶೇಷ ಸಂಗ್ರಹ. ರಂಬುಟನ್, ಮ್ಯಾಂಗೋಸ್ಟಿನ್, ಡ್ರಾಗನ್, ಬಟರ್ ಫ್ರೂಟ್-ವಿದೇಶಿ ಹಣ್ಣುಗಳ ಮಹಾಮೇಳ. ಕಲ್ಲಂಗಡಿ, ಕಬ್ಬು, ತಾಜಾ ಹಣ್ಣುಗಳ ಸವಿರಸಗಳ ತಾಣ. ಹಣ್ಣು-ತರಕಾರಿಗಳಿಂದಲೇ ತಯಾರಾದ ಸಿದ್ಧ (Readymade) ತಿನಿಸುಗಳ ಬೃಹತ್ ಸಂಗ್ರಹ. ಜೈನ, ಬ್ರಾಹ್ಮಣ, ಗೌಡ ಸಾರಸ್ವತ ಸಮುದಾಯಗಳ ವಿಶೇಷ ಪ್ರಾದೇಶಿಕ ಶುದ್ಧ ಸಸ್ಯಾಹಾರಿ ತಿಂಡಿ-ತಿನಿಸುಗಳ ಆಗರ. ಆಲಂಕಾರಿಕ ವಸ್ತುಗಳು, ಮಣ್ಣಿನ ಮಡಕೆಗಳು, ಗೃಹೋಪಯೋಗಿ ವಸ್ತುಗಳ ಬೃಹತ್ ಮೇಳ. ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಆಹಾರ ಮತ್ತು ಪೋಷಕಾಂಶಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಾಗಾರ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ. ವೈವಿಧ್ಯಮಯ ಫಲ-ಪುಷ್ಪಗಿಡಗಳ ನರ್ಸರಿ ಸಮಾವೇಶ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಬಲೀಕರಣ-ಸ್ವಾವಲಂಬನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಫಲಾನುಭವಿಗಳ 'ಸಿರಿ' ಸ್ವದೇಶಿ ಉತ್ಪನ್ನಗಳ ಬೃಹತ್ ಸಂಗ್ರಹ. ಖಾದಿ-ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಸ್ವದೇಶಿ ಮೇಳ, ಮಳೆಗಾಲದ ಕರಾವಳಿಗರ ವಿಶೇಷ ತಿನಿಸಿನ ಸೊಪ್ಪು ತರಕಾರಿಗಳ ಮಾರಾಟ ವ್ಯವಸ್ಥೆ. ನವವಿಧ ಸಿರಿಧಾನ್ಯಗಳ ಬೃಹತ್ ಸಂಗ್ರಹ. 300ಕ್ಕೂ ಮಿಕ್ಕಿದ ವೈವಿಧ್ಯಮಯ ಮಳಿಗೆಗಳ ಮಹಾಮೇಳ. ಈ ಮೇಲಿನವುಗಳು ವಿಶೇಷ ಆಕರ್ಷಣೆ ಆಗಿದ್ದು, ಪ್ರವೇಶ ಉಚಿತವಾಗಿರುತ್ತದೆ.

ಎಕ್ಸಲೆಂಟ್ ಮೂಡುಬಿದಿರೆ: ಜೆಇಇ ಅಡ್ವಾನ್ಸ್ಡ್ ರಾಷ್ಟ್ರಮಟ್ಟದ ಸಾಧನೆ

Article Image

ಎಕ್ಸಲೆಂಟ್ ಮೂಡುಬಿದಿರೆ: ಜೆಇಇ ಅಡ್ವಾನ್ಸ್ಡ್ ರಾಷ್ಟ್ರಮಟ್ಟದ ಸಾಧನೆ

ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ಕ್ರಷ್ಟ ಸಾಧನೆಗೈದಿದ್ದಾರೆ. ನಿಶಾಂತ್ ಹೆಗ್ಡೆ ರಾಷ್ಟ್ರ ಮಟ್ಟದಲ್ಲಿ 4349ನೇ ಸ್ಥಾನ (GM), ಚಿರಾಗ್ ಕಂಚಿರಾಯ್ 573ನೇ ಸ್ಥಾನ (C), ಸಾನ್ವಿ ಎಸ್. ಟಿ. 1404ನೇ ಸ್ಥಾನ (C), ಸಂಜಯ್ ಬಿರಾದರ್ 2200ನೇ ಸ್ಥಾನ (C), ಸಚಿನ್ 3023ನೇ ಸ್ಥಾನ (C), ರೋಹನ್ ಎಸ್. 4263ನೇ ಸ್ಥಾನ (C) ಪಡೆದು ಉತ್ತಮ ಸ್ಥಾನಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸಂಯೋಜಕರಾದ ರಾಮಮೂರ್ತಿ, ಹಾಗೂ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ಫಲಕ ಕಡ್ಡಾಯ

Article Image

ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ಫಲಕ ಕಡ್ಡಾಯ

ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಉದ್ದೇಶದಿಂದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕಡ್ಡಾಯವಾಗಿ ಎಲ್ಲರಿಗೂ ಕಾಣುವ ರೀತಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ನೋಂದಣಿ ಸಂಖ್ಯಾ ಫಲಕ ಹಾಕಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆ ಹೆಸರು ಮತ್ತು ಮಾಲೀಕರ ಹೆಸರನ್ನೊಳಗೊಂಡ ಫಲಕವನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸಬೇಕು. ಅಲೋಪತಿ ಆಸ್ಪತ್ರೆಗಳು ಆಕಾಶ ನೀಲಿ ಬಣ್ಣ ಮತ್ತು ಆಯುರ್ವೇದಿಕ್ ಆಸ್ಪತ್ರೆಗಳು ತಿಳಿ ಹಸಿರು ಬಣ್ಣದ ಬೋರ್ಡ್ ಬಳಸುವಂತೆ ಸೂಚಿಸಲಾಗಿದೆ. ಫಲಕ ಅಳವಡಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಈ ನಿಯಮಗಳನ್ನು ಅನುಸರಿಸದ ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ವಿರುದ್ಧ ಕೆಪಿಎಂಇ ತಿದ್ದುಪಡಿ ಕಾಯಿದೆ 2017ರ ಸೆಕ್ಷನ್ 19(5)ರ ಅನ್ವಯ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಅಥವಾ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿದೆ.

First Previous

Showing 4 of 7 pages

Next Last