ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರ


Logo

Published Date: 20-Jun-2025 Link-Copied

ಉಜಿರೆ, ಜೂನ್ 18: ಭಾರತದ ಸಮೃದ್ಧ ಜ್ಞಾನ ಪರಂಪರೆಯ ಹಲವು ವಿಶೇಷತೆಗಳ ಸೊಗಡಿನ ರಕ್ಷಣೆಗೆ ಬೌದ್ಧಿಕ ಆಸ್ತಿ ಹಕ್ಕು ಸಹಾಯಕವಾಗುತ್ತದೆ ಎಂದು ನಿಟ್ಟೆ ಡೀಮ್ಡ್ ಟುಬಿ ಯುನಿವರ್ಸಿಟಿಯ ಎನ್‌ಎಂಎಎಂ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿ ಮಾನವಿಕ ವಿಭಾಗದ ಪ್ರಾಧ್ಯಾಪಕ ಡಾ.ರಾಮಕೃಷ್ಣ ಬಿ. ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ‘ಇನ್ನೋವೇಟ್ ಆ್ಯಂಡ್ ಪ್ರೊಟೆಕ್ಟ್: ಪೇಟೆಂಟ್ಸ್, ಟ್ರೇಡ್‌ಮಾರ್ಕ್ಸ್, ಪಬ್ಲಿಷಿಂಗ್ ರೈಟ್ಸ್’ ಕುರಿತು ಬುಧವಾರ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಪಾರಂಪರಿಕ ಜ್ಞಾನ ಅಗಾಧವಾದುದು. ಈ ಜ್ಞಾನದ ಆವರಣದಲ್ಲಿ ಲಭ್ಯವಾಗಿರುವ ಅಪರೂಪದ ಮಾದರಿಗಳನ್ನು ಕದ್ದು ತಮ್ಮದೆಂದು ಪ್ರತಿಪಾದಿಸುವ ಪ್ರಯತ್ನಗಳು ವಿಶ್ವಮಟ್ಟದಲ್ಲಿ ಆಗುತ್ತಿವೆ. ಇಂತಹ ಪ್ರಯತ್ನಗಳನ್ನು ತಡೆದು ಭಾರತದ್ದೇ ಆದ ಪಾರಂಪರಿಕ ಜ್ಞಾನದ ಅಸ್ಮಿತೆಯನ್ನು ಎತ್ತಿಹಿಡಿಯುವುದಕ್ಕೆ ಬೌದ್ಧಿಕ ಆಸ್ತಿ ಹಕ್ಕು ಪೂಕರವಾಗಿರುವುದು ವಿವಿಧ ಪ್ರಕರಣಗಳಲ್ಲಿ ದೃಢವಾಗಿದೆ ಎಂದರು. ಜಪಾನ್ ನಮ್ಮ ಗಾಯಿತ್ರಿ ಮಂತ್ರ ತನ್ನದೆಂದು ಹೇಳಿಕೊಂಡು ಪೇಟೆಂಟ್ ಪಡೆಯಲು ಮುಂದಾಗಿತ್ತು. ಅರಿಷಿಣದ ಚಿಕಿತ್ಸಕ ಗುಣದ ವಿಶೇಷತೆಯನ್ನು ಅರಿತು ಅಮೆರಿಕದವರು ತಮ್ಮದೆಂದು ವಾದಿಸಿ ಪೇಟೆಂಟ್ ಪಡೆಯಲು ಮುಂದಾಗಿದ್ದರು. ಅರೇಬಿಕ್ ಸಾಹಿತ್ಯದಲ್ಲಿ ಉಲ್ಲೇಖಿತ ವಿವರವೊಂದು ಅರಿಷಿಣ ಭಾರತದ್ದು ಎಂಬುದನ್ನು ಸಾಬೀತುಪಡಿಸಿತ್ತು. ಭಾರತದ ಜ್ಞಾನ ಪರಂಪರೆಯ ಒಳಗೆ ಲಭ್ಯವಿರುವ ಇಂತಹ ಹಲವು ಪ್ರಯೋಜನಕಾರಿ ಅಂಶಗಳನ್ನು ಪತ್ತೆ ಹಚ್ಚಿ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮದನ್ನಾಗಿಸಿಕೊಳ್ಳುವ ಹುನ್ನಾರ ನಡೆಸುತ್ತಿವೆ. ಇಂತಹ ಹುನ್ನಾರಗಳಿಗೆ ತಡೆಯೊಡ್ಡುವ ಏಕೈಕ ಮಾರ್ಗ ಎಂದರೆ ಬೌದ್ಧಿಕ ಆಸ್ತಿ ಹಕ್ಕಿನ ಸಮರ್ಪಕ ಬಳಕೆ ಮತ್ತು ಅನ್ವಯಿಸಿಕೊಳ್ಳುವಿಕೆ ಎಂದು ಅವರು ತಿಳಿಸಿದರು. ಈಗಾಗಲೇ ಭಾರತೀಯ ಜ್ಞಾನ ಪರಂಪರೆಯ ವೈವಿಧ್ಯಮಯ ಅಂಶಗಳನ್ನು ಕಳೆದುಕೊಂಡಿದ್ದೇವೆ. ಇದೀಗ ಎಚ್ಚೆತ್ತುಕೊಳ್ಳುವ ಕಾಲ. ಮುಂಬರುವ ದಿನಗಳಲ್ಲಿ ನಮ್ಮ ಭಾರತೀಯ ಜ್ಞಾನದ ವಿಭಿನ್ನ ಅಂಶಗಳನ್ನು ಗೊತ್ತುಮಾಡಿಕೊಂಡು ಅವುಗಳ ಮೇಲೆ ಹಕ್ಕುಸ್ವಾಮ್ಯ ಸ್ಥಾಪಿಸುವ ಉಳಿದ ದೇಶಗಳ ಹುನ್ನಾರಗಳನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಭಾರತ ಸರ್ಕಾರ ವಿಶೇಷ ನಿಗಾವಹಿಸಿ ಕಟ್ಟುನಿಟ್ಟಿನ ಹೆಜ್ಜೆಗಳನ್ನಿರಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ಶೈಕ್ಷಣಿಕ ಕಲಿಕೆಯೊಂದಿಗೆ ಸಂಶೋಧನಾತ್ಮಕ ಹೆಜ್ಜೆಗಳಿಗೂ ಹೆಚ್ಚಿನ ಆದ್ಯತೆ ನೀಡುವ ಟ್ರೆಂಡ್‌ಗೆ ಅನುಗುಣವಾಗಿ ಎಸ್.ಡಿ.ಎಂ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ದೇಶದ ಶೈಕ್ಷಣಿಕ ವಲಯವು ಸಂಶೋಧನೆಯನ್ನು ಪ್ರಧಾನ ಆದ್ಯತೆಯ ಭಾಗವಾಗಿ ಪರಿಗಣಿಸುತ್ತಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಂಶೋಧನೆಯ ಬಹು ಆಯಾಮಗಳನ್ನು ಪರಿಚಯಿಸುವ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದೆ ಎಂದರು. ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ನಿರ್ದೇಶಕಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ ಅವರು ಸ್ವಾಗತಿಸಿದರು. ಡಾ. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಘಟಕದ ಸಂಘಟನಾ ಕಾರ್ಯದರ್ಶಿ ಡಾ. ನೆಫಿಸತ್ ವಂದಿಸಿದರು. ಉದ್ಘಾಟನಾ ಸಮಾರಂಭದ ‘ಪೇಟೆಂಟಿಂಗ್ ಟು ಪ್ರೊಟೆಕ್ಟ್ ದ ಇಂಟಲೆಕ್ಚುವಲ್ ಪ್ರಾಪರ್ಟಿ, ಐಪಿ ಮ್ಯಾನೇಜ್‌ಮೆಂಟ್ ಫಾರ್ ಸ್ಟಾರ್ಟ್ಅಪ್ಸ್’ ಕುರಿತು ಡಾ.ರಾಮಕೃಷ್ಣ ಬಿ ವಿಚಾರಗಳನ್ನು ಮಂಡಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img