ಉಜಿರೆ: ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ
Published Date: 23-Jun-2025 Link-Copied
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ಡಿ. ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ದಿನಾಂಕ 22-06-2025ನೇ ಆದಿತ್ಯವಾರ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ ನಡೆಯಿತು. ಜನರಲ್ ಸರ್ಜನ್ ಡಾ| ಕಿರಣ್ ಕುಮಾರ್ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನಂತ ನಗರದ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸಾ ಸೌಲಭ್ಯ ಈ ಗ್ರಾಮೀಣ ಆಸ್ಪತ್ರೆಯಲ್ಲಿ ದೊರೆಯುತ್ತದೆ. ಇಲ್ಲಿನ ವೈದ್ಯಕೀಯ ಸೇವೆ ನಗರದ ಆಸ್ಪತ್ರೆಗಳಿಗೆ ಸಮಾನವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡುತ್ತಾ, ಒಳ್ಳೆಯ ಮನಸ್ಸು ಮತ್ತು ಸೇವಾ ಮನೋಭಾವ ಹೊಂದಿರುವ ಅನುಭವಿ ತಜ್ಞ ವೈದ್ಯರ ತಂಡ, ತರಬೇತಿ ಹೊಂದಿದ ನುರಿತ ದಾದಿಯರು ಮತ್ತು ಟೆಕ್ನಿಶಿಯನ್ಸ್ ಇಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಇಲ್ಲಿ ನಡೆಸಲಾಗುವ ಉಚಿತ ಶಿಬಿರಗಳ ಮೂಲಕ ಹಲವಾರು ಮಂದಿಯ ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಾಗಿದೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ, ಜನರಲ್ ಸರ್ಜನ್ ಡಾ| ಬಾಲಾಜಿ ಪ್ರಭಾಕರನ್ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಶಿಬಿರದಲ್ಲಿ ಸಾಮಾನ್ಯ ಶಸ್ತçಚಿಕಿತ್ಸಾ ತಪಾಸಣೆ, ಹರ್ನಿಯಾ (ಕಿಬ್ಬೊಟ್ಟೆ, ತೊಡೆಸಂದು, ಹೊಕ್ಕಳು) ಕಡಿಮೆ ಮಾಡಬಹುದಾದ ಊತ, ಪಿತ್ತಕೋಶದ ಕಲ್ಲುಗಳು, ಕಿಬ್ಬೊಟ್ಟೆಯ ನೋವು, ಕಾಮಾಲೆ, ಅಪೆಂಡಿಸೈಟಿಸ್ (ಕೆಳಗಿನ ಬಲ ಹೊಟ್ಟೆ ನೋವು), ಮೂಲವ್ಯಾದಿ, ಪಿಸ್ತುಲಾ, ವೃಷಣಗಳ ನೋವು ರಹಿತ ಊತ, ಚರ್ಮದ ಗಾಯಗಳು ಮತ್ತು ಗೆಡ್ಡೆಗಳ ತಪಾಸಣೆ ನಡೆಸಲಾಯಿತು. 75ಕ್ಕಿಂತಲೂ ಅಧಿಕ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು.