Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ

10ನೇ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ “SDM MitO24” (ಸೊಸೈಟಿ ಆಫ್ ಮೈಟೊಕಾಂಡ್ರಿಯಾ ರಿಸರ್ಚ್ ಆ್ಯಂಡ್ ಮೆಡಿಸಿನ್, ಭಾರತ) “ಮೈಟೊಕಾಂಡ್ರಿಯ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ಪ್ರಗತಿ” ಎಂಬ ಧ್ಯೆಯೆಯೊಂದಿಗೆ ನವೆಂಬರ್ 11 ರಿಂದ 12 ರವರೆಗೆ ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ದೇಶ ವಿದೇಶಗಳಿಂದ ಸುಮಾರು 100ಕ್ಕೂ ಹೆಚ್ಚು ತಜ್ಞ ಪ್ರತಿನಿಧಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಮತ್ತು ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್ ಮತ್ತಿತರ ಗಣ್ಯರು ಸಮ್ಮೇಳನವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ಡಾ. ನಿರಂಜನ ಕುಮಾರ್ ಮಾತನಾಡುತ್ತಾ: ಮೈಟೊಕಾಂಡ್ರಿಯವು ಎಲ್ಲಾ ಜೀವಕೋಶಗಳ ಶಕ್ತಿ ಕೇಂದ್ರವಾಗಿದೆ. ಮೈಟೊಕಾಂಡ್ರಿಯದ ಕಾಯಿಲೆಗಳು ಬಹಳ ಅಪರೂಪದ ಕಾಯಿಲೆಗಳಾಗಿದ್ದು ಜೀವಕೋಶಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ರೋಗಗಳನ್ನು ಗುಣಪಡಿಸಬಹುದು. ಜೀವನದ ಗುಣಮಟ್ಟವನ್ನು ಆಧರಿಸಿ ಸಂಶೋಧನೆ ಮಾಡಬೇಕು. ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಮೈಟೊಕಾಂಡ್ರಿಯದ ಸಂಶೋಧನೆಗಳು ಪ್ರಗತಿಯಲ್ಲಿವೆ. ಸೊಸೈಟಿ ಆಫ್ ಮೈಟೊಕಾಂಡ್ರಿಯಾ ರಿಸರ್ಚ್ ಆ್ಯಂಡ್ ಮೆಡಿಸಿನ್, ಭಾರತದ ಅಧ್ಯಕ್ಷರಾದ ಡಾ. ಕೆ ತಂಗರಾಜ್ ಅವರು ಸೊಸೈಟಿಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಸಮ್ಮೇಳನದ ಭಾಗವಾಗಿ ಬಿತ್ತಿಪತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಮ್ಮೇಳನದಲ್ಲಿ ಅತ್ಯುತ್ತಮ ಬಿತ್ತಿಪತ್ರ ಪ್ರಶಸ್ತಿ ಮತ್ತು ಯುವ ವಿಜ್ಞಾನಿಗಳ ಪ್ರಶಸ್ತಿಗಳನ್ನು ನೀಡಲಾಯಿತು. ಸಂಶೋಧನ ನಿರ್ದೇಶಕ ಮತ್ತು ಸಂಘಟನಾ ಕಾರ್ಯದರ್ಶಿಗಳಾದ ಡಾ. ಕೆ. ಸತ್ಯಮೂರ್ತಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಅರವಿಂದ ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ. ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಅಜಯ್ ಕುಮಾರ್ ಓಲಿ ವಂದನಾರ್ಪಣೆ ಸಲ್ಲಿಸಿದರು.

ಎಸ್.ಡಿ.ಎಂ. ಯುನಿವರ್ಸಿಟಿ ಚೆಸ್ ಕಪ್

Article Image

ಎಸ್.ಡಿ.ಎಂ. ಯುನಿವರ್ಸಿಟಿ ಚೆಸ್ ಕಪ್

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಚರ್ಮರೋಗ ಮತ್ತು ದೈಹಿಕ ಶಿಕ್ಷಣ ವಿಭಾಗ, ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಮತ್ತು ಇಂಟರ್‌ನ್ಯಾಶನಲ್ ಆರ್ಬಿಟರ್, ಪ್ರಮೋದ್ ಮೋರೆ ಅವರ ಸಹಯೋಗದೊಂದಿಗೆ ಎಸ್.ಡಿ.ಎಂ. ಡೆಂಟಲ್ ಕಾಲೇಜಿನಲ್ಲಿ ಅಕ್ಟೋಬರ್ 02, 2024 ರಂದು “ಅಖಿಲ ಭಾರತ ಮುಕ್ತ ಫಿಡೆ ಚೆಸ್ ಪಂದ್ಯಾವಳಿಯನ್ನು” ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ದೇಶದಾದ್ಯಂತ 12 ಟೈಟಲ್ಡ್ ಮತ್ತು 2 ಅಂತರಾಷ್ಟ್ರೀಯ ಆಟಗಾರರು ಸೇರಿದಂತೆ ಒಟ್ಟು 277 ಆಟಗಾರರು ಭಾಗವಹಿಸಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್. ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯಕರ ಮತ್ತು ಏಕಾಗ್ರತೆಯ ಮನಸ್ಸಿಗೆ ಚೆಸ್ ಆಟವು ಉತ್ತಮವಾಗಿದೆ ಎಂದರು. ಪಂದ್ಯಾವಳಿಯ ನಿರ್ದೇಶಕರಾದ ಡಾ. ನವೀನ್ ಕೆ.ಎನ್, ಸಹ ನಿರ್ದೇಶಕಿಯಾದ ಡಾ. ಶ್ವೇತಾ ಪ್ರಭು, ಸಂಘಟನಾ ಕಾರ್ಯದರ್ಶಿ ಅನುರಾಗ ಖನ್ನೂರ್, ಎಸ್.ಡಿ.ಎಂ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎಸ್. ಜಿ. ಕೊಪ್ಪದ್, ಡಾ. ಶರದ್ ಜವಳಿ, ಎಸ್.ಡಿ.ಎಂ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯ್ಕ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಹಾರಾಷ್ಟ್ರದ ಶ್ರೀ ಆಕಾಶ್ ದಳವಿ 8 ಅಂಕಗಳೊಂದಿಗೆ ಪ್ರಥಮ, ನವಲಗುಂದ ನಿರಂಜನ್ 8 ಅಂಕಗಳೊಂದಿಗೆ ದ್ವಿತಿಯ ಮತ್ತು 7.5 ಅಂಕಗಳೊಂದಿಗೆ ಮೊಹಮ್ಮದ ನುಬೇರಷಾ ಶೇಖ್ ತೃತೀಯ ಸ್ಥಾನ ಪಡೆದಿದ್ದಾರೆ. ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ ಅವರ ಉಪಸ್ಥಿತಿಯಲ್ಲಿ ಎಲ್ಲಾ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಹಾರ್ದಿಕ್ ರಾಣೆ ಅತಿಥಿಗಳನ್ನು ಸ್ವಾಗತಿಸಿದರು. ಆದಿತ್ಯ ಟಿ ಕಾರ್ಯಕ್ರಮ ನಿರೂಪಿಸಿದರು. ಪಂಚಮಿ ಸರ್ಪಂಗಳ ವಂದನಾರ್ಪಣೆ ಸಲ್ಲಿಸಿದರು.

ಡಾ. ಕೆ. ಸತ್ಯಮೂರ್ತಿ ಅವರಿಗೆ ಡಾ. ರಾಜಾ ರಾಮಣ್ಣ ಪ್ರಶಸ್ತಿ

Article Image

ಡಾ. ಕೆ. ಸತ್ಯಮೂರ್ತಿ ಅವರಿಗೆ ಡಾ. ರಾಜಾ ರಾಮಣ್ಣ ಪ್ರಶಸ್ತಿ

ಧಾರವಾಡ : ಎಸ್.ಡಿ.ಎಂ. ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ ಅವರಿಗೆ ಕರ್ನಾಟಕ ಸರಕಾರದಿಂದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ವಿಭಾಗದ 2022ನೇ ಸಾಲಿನ ಪ್ರತಿಷ್ಠಿತ ರಾಜಾ ರಾಮಣ್ಣ ಪ್ರಶಸ್ತಿ ಲಭಿಸಿರುತ್ತದೆ. ಸೆಪ್ಟಂಬರ್ 26ರಂದು ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಖ್ಯಾತ ವಿಜ್ಞಾನಿ, ಭಾರತ ರತ್ನ ಪ್ರೋ. ಸಿ.ಎನ್.ಆರ್. ರಾವ್, ಶ್ರೀ. ಎನ್. ಎಸ್. ಬೋಸರಾಜು, ಮಂತ್ರಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷರಾದ ಪ್ರೊ. ಎ. ಎಸ್. ಕಿರಣ್ ಕುಮಾರ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಗೋವಿಂದನ್ ರಂಗರಾಜನ್, ಡಾ. ಎಕ್ರೂಪ್ ಕೌರ್, ಐ.ಎ.ಎಸ್, ಕಾರ್ಯದರ್ಶಿಗಳು, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ & ತಂತ್ರಜ್ಞಾನ ಕರ್ನಾಟಕ ಸರ್ಕಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಳೆದ 35 ವರ್ಷಗಳಲ್ಲಿ ಡಾ. ಸತ್ಯಮೂರ್ತಿ ಅವರು ರೂಪಾಂತರಗಳು, ಕಾರ್ಯವಿಧಾನಗಳು, ರೋಗನಿರ್ಣಯ ಮತ್ತು ಚಿಕಿತ್ಸಕ ತಂತ್ರಗಳ ಪ್ರಮುಖ ಸಂಶೋಧನೆಗಳನ್ನು ಸಂಶೋಧಿಸಿರುತ್ತಾರೆ. ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಕುರಿತು ಅವರ ಸಂಶೋಧನೆಯು ಉತ್ತಮ ರೀತಿಯಲ್ಲಿ ಗುರುತಿಸಲ್ಪಟ್ಟಿದೆ. ಅವರು ಪ್ರಕೃತಿ ಮತ್ತು ಚಿಕಿತ್ಸೆಯಂತಹ ಆಯುರ್ವೇದ ತತ್ವಗಳ ಸಮಕಾಲೀನ ಜ್ಞಾನವನ್ನು ಗಣನೀಯವಾಗಿ ಮುನ್ನಡೆಸಿ, 350 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಂಶೋಧನಾ ಪ್ರಕಟಣೆಗಳು ಮತ್ತು 18 ಪೇಟೆಂಟ್‌ಗಳೊಂದಿಗೆ , ಅವರು ಮಾನವ ರೋಗ, ರೋಗನಿರ್ಣಯ, ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ವಿಜ್ಞಾನ ಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿರುತ್ತಾರೆ.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳಲ್ಲಿ ನಡೆದ “ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ” ತರಬೇತಿಯ ಸಮಾರೋಪ ಸಮಾರಂಭ

Article Image

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳಲ್ಲಿ ನಡೆದ “ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ” ತರಬೇತಿಯ ಸಮಾರೋಪ ಸಮಾರಂಭ

ಉಜಿರೆ: ಛಾಯಾಗ್ರಹಣ (ಫೋಟೊಗ್ರಫಿ) ವಿಶಿಷ್ಟ ಕಲೆಯಾಗಿದ್ದು, ಸಮಯ, ಸಂದರ್ಭ ಮತ್ತು ಭಾವನೆಗಳನ್ನು ಗಮನಿಸಿ ಫೋಟೊ ತೆಗೆಯುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಬೆಳಕು, ಮುಖದ ಭಾವನೆಗಳು, ಹಾಗೂ ಮಾನಸಿಕ ಸ್ಥಿತಿಯನ್ನು ಗಮನಿಸಿ ಫೋಟೊ ತೆಗೆದರೆ ಮಾತ್ರ ಅದು ಆಕರ್ಷಕವಾಗಿ ಮೂಡಿ ಬರಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಉಜಿರೆಯಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳಲ್ಲಿ ನಡೆದ “ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ” ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು. ಇಂದು ವಿವಿಧ ರೀತಿಯ ಪ್ರಿಂಟಿಂಗ್ ಪೇಪರ್‌ಗಳು ಬಂದಿವೆ. ಅದರ ಬಗ್ಯೆಯೂ ಮಾಹಿತಿ ಕಲೆ ಹಾಕಿ, ಆಲ್ಬಂ ಮಾಡುವಾಗಲೂ ಹತ್ತು ಸಾರಿ ಮತ್ತೆ ಮತ್ತೆ ನೋಡುವಂತೆ ಅದನ್ನು ತಯಾರಿಸಬೇಕು. ಜೀವನದಲ್ಲಿ ಉತ್ತಮ ಶಿಸ್ತನ್ನು ಕೂಡಾ ಅಳವಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಧರ್ಮಸ್ಥಳದಲ್ಲಿರುವ “ಮಂಜೂಷಾ” ವಸ್ತುಸಂಗ್ರಹಾಲಯದಲ್ಲಿ 700 ಕ್ಯಾಮರಾಗಳು ಇವೆ. ಕ್ಯಾಮರಾಗಳ ಮೌಲ್ಯವರ್ಧನೆ ಹಾಗೂ ಮಾದರಿಗಳನ್ನು ಗಮನಿಸಿ ಬುದ್ಧಿವಂತಿಕೆಯಿಂದ ಪ್ರಗತಿ ಸಾಧಿಸಬೇಕು ಎಂದು ಹೆಗ್ಗಡೆಯವರು ತಿಳಿಸಿದರು. “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ರುಡ್‌ಸೆಟ್ ಬೆಳೆದು ಬಂದ ವಿಧಾನದ ಅವಲೋಕನ ಮಾಡಿದರು. ಜಯರಾಮ ಮತ್ತು ಸಿದ್ದಾರ್ಥ ತರಬೇತಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಮತ್ತು ಅತಿಥಿ ಉಪನ್ಯಾಸಕ ಸೂರ್ಯಪ್ರಕಾಶ್ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರ್ವಹಿಸಿದರು.

ಶಿಷ್ಯವೇತನ: ಅರ್ಜಿ ಆಹ್ವಾನ

Article Image

ಶಿಷ್ಯವೇತನ: ಅರ್ಜಿ ಆಹ್ವಾನ

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ಪದವಿ, ಡಿಪ್ಲೊಮಾ ಮತ್ತು ವೃತ್ತಿಪರ ಪದವಿವರೆಗೆ ರಾಜ್ಯದಲ್ಲಿರುವ ಹಾಗೂ ಸರಕಾರದಿಂದ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ರಾಜ್ಯದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯವೇತನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. 1ನೇ ತರಗತಿಯಿಂದ ಅಂತಿಮ ವರ್ಷದ ಪದವಿ ಹಾಗೂ ಡಿಪ್ಲೊಮಾವರೆಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆ.15 ಹಾಗೂ ವೃತ್ತಿಪರ ಪದವಿ ವಿದ್ಯಾರ್ಥಿಗಳು ಅ.15ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಕಚೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಧಾರವಾಡ: ವಿಶ್ವ ಅಧಿಕ ರಕ್ತದೊತ್ತಡ ದಿನ

Article Image

ಧಾರವಾಡ: ವಿಶ್ವ ಅಧಿಕ ರಕ್ತದೊತ್ತಡ ದಿನ

ಎಸ್.ಡಿ.ಎಂ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಇತ್ತೀಚೆಗೆ “ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ, ಅದನ್ನು ನಿಯಂತ್ರಿಸಿ, ಹೆಚ್ಚು ಕಾಲ ಬದುಕಿ” ಎಂಬ ಧ್ಯೇಯೆಯೊಂದಿಗೆ “ವಿಶ್ವ ಅಧಿಕ ರಕ್ತದೊತ್ತಡ ದಿನ”ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ರ‍್ಯಾಲಿ ಮತ್ತು ಅಧಿಕ ರಕ್ತದೊತ್ತಡ ತಡೆಯುವ ಪ್ರತಿಜ್ಞೆ ಸ್ವೀಕಾರ, ವೃದ್ದಾಶ್ರಮ ಭೇಟಿ, ಆರೋಗ್ಯ ಸಂಸ್ಥೆಗಳಲ್ಲಿ ರಕ್ತದೊತ್ತಡ ಪರೀಕ್ಷಿಸುವುದು, ರಸಪ್ರಶ್ನೆ ಹಾಗೂ ಬಿತ್ತಿಪತ್ರ ಪ್ರದರ್ಶನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವೈದ್ಯಕೀಯ ವiಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕಿಯವರಾದ ಡಾ. ಪುಷ್ಪಾ ಪಾಟೀಲ್ ಅವರು ರ‍್ಯಾಲಿಯನ್ನು ಉದ್ಘಾಟಿಸಿ, ಮಾತನಾಡುತ್ತಾ: 40 ವರ್ಷ ಮೇಲ್ಪಟ್ಟ ಜನರು ಆಗಾಗ ಅಧಿಕ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ರಕ್ತದೊತ್ತಡದಿಂದ ಅನೇಕ ಆರೋಗ್ಯ ಸಮಸ್ಯೆಗಳುಂಟಾಗುವುದರಿಂದ ಆಗಾಗ ವೈದ್ಯರ ಹತ್ತಿರ ತಪಾಸಣೆ ಮಾಡುತ್ತಿರಬೇಕು. ಯಾವುದೇ ರೋಗ ಲಕ್ಷಣಗಳು ಕಾಣದೆ ಕೆಲವೊಮ್ಮೆ ಅಧಿಕ ರಕ್ತದೊತ್ತಡವು ಅನುವಂಶೀಯವಾಗಿರಬಹುದು. ಆರೋಗ್ಯಕರ ಆಹಾರ ಸೇವನೆ, ಯೋಗ, ಧ್ಯಾನ, ವ್ಯಾಯಾಮಗಳೊಂದಿಗೆ ಉತ್ತಮ ಜೀವನ ಶೈಲಿಯಿಂದ ರೋಗಗಳನ್ನು ತಡೆಯಬಹುದು ಎಂದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ವಿಭಾಗದ ವೈದ್ಯರಾದ ಡಾ. ದೀಪ್ತಿ ಮತ್ತು ಡಾ. ವಂದನಾ, ಎಸ್.ಡಿ.ಎಂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ದೇಶಪಾಂಡೆ, ಮಲ್ಲಿಕಾರ್ಜುನ ಪಿ., ರೇಣುಕಾ ಬಾಗೇವಾಡಿ, ಪ್ರವೀಣ ತುಪ್ಪದ್ ಹಾಗೂ ಲಕಮಾಪುರ ಗ್ರಾಮ ಪಂಚಾಯಿತಿ ಮುಖಂಡರು ಉಪಸ್ಥಿತರಿದ್ದರು. ಲಕಮಾಪುರ ಗ್ರಾಮಸ್ಥರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸೋಮಶೇಖರ್ ಕೊಡ್ಲಿವಾಡ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ಸತ್ತೂರು, ಧಾರವಾಡ: ಅಂತರಾಷ್ಟ್ರಿಯ ಯೋಗ ದಿನಾಚರಣೆ

Article Image

ಸತ್ತೂರು, ಧಾರವಾಡ: ಅಂತರಾಷ್ಟ್ರಿಯ ಯೋಗ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯವು ಅಂತರಾಷ್ಟ್ರಿಯ ಯೋಗ ದಿನಾಚರಣೆಯನ್ನು “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಧ್ಯೇಯೆಯೊಂದಿಗೆ ದಿನಾಂಕ 21 ಜೂನ್ ರಂದು ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಮುಖ್ಯ ಅತಿಥಿಗಳಾಗಿದ್ದು, ಮತ್ತಿತರ ಗಣ್ಯರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ಪ್ರಕೃತಿ ಮತ್ತು ಯೋಗ ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಅರಳಿಹಳ್ಳಿ ಅವರು ಯೋಗದ ಮಹತ್ವ ತಿಳಿಸಿ ಅತಿಥಿ ಭಾಷಣ ಮಾಡುತ್ತಾ: ಯೋಗದಿಂದ ನಮ್ಮ ಆತ್ಮ ಸರ್ವೋಚ್ಛವಾಗುತ್ತದೆ. ಯೋಗದಿಂದ ಮನಸ್ಸಿಗೆ ಸುಖ ಮತ್ತು ಶಾಂತಿ ಸಿಗುತ್ತದೆ. ಯೋಗವು ಸಮಗ್ರ ದೇಹವನ್ನು ಸಮತೋಲನದಲ್ಲಿರಿಸುತ್ತದೆ. ಅಷ್ಟಾಂಗ ಯೋಗವು ಜೀವನದಲ್ಲಿ ಪರಿಪೂರ್ಣತೆಯನ್ನು ಗಳಿಸಲು ಸಹಾಯ ಮಾಡುತ್ತದೆ ಎಂದರು. ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಯೋಗ ಪರಿಣಿತರಾದ ಡಾ. ಸತೀಶ ಪಾಟೀಲ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗ ತಜ್ಞರ ತಂಡವು ವಿಶೇಷ ಆಸನಗಳನ್ನು ಪ್ರದರ್ಶಿಸಿದರು. ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಡಾ. ನಿರಂಜನ್ ಕುಮಾರ ಅವರು ಯೋಗ ತಜ್ಞರ ತಂಡವನ್ನು ಶ್ಲಾಘಿಸಿ, ಸನ್ಮಾನಿಸಿದರು. ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ ನಾಯ್ಕ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಕೃತಿಕಾ ಗುತ್ತಲ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಕಿರಣ ಕುಮಾರ ಅವರು ವಂದನಾರ್ಪಣೆ ಸಲ್ಲಿಸಿದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ “ಉತ್ಸವ 2024”

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ “ಉತ್ಸವ 2024”

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ “ಉತ್ಸವ 2024” ಅನ್ನು ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ದಿನಾಂಕ 10ರಂದು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತು ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಕ್ತನ ವಿದ್ಯಾರ್ಥಿ ಮತ್ತು ಬೆಂಗಳೂರಿನ ಖ್ಯಾತ ರೆಡಿಯೋಲಾಜಿಸ್ಟ್ ಆದ ಡಾ. ರೋಹಿತ್ ಮಧುಕರ ಅವರು "ಉತ್ಸವ 2024" ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು 20 ವರ್ಷಗಳ ಹಿಂದೆ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮತ್ತು ಈಗ ಅದರ ಯಶಸ್ಸನ್ನು ಆನಂದಿಸುವುದರೊಂದಿಗೆ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಹೆಮ್ಮೆಯ ಮೊದಲ ಬ್ಯಾಚ್ ಆಗಿದ್ದರಿಂದ ಆಡಳಿತ ಮಂಡಳಿ ಮತ್ತು ಶಿಕ್ಷಕರೇ ನಮಗೆ ಎಲ್ಲವೂ ಆಗಿದ್ದರು. ನಮ್ಮ 2003ನೇ ಬ್ಯಾಚ್ ಹಲವು “ಮೊದಲ” ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದನ್ನು ಸ್ಮರಿಸಿಕೊಂಡರು. ಅಂದಿನ ಅಧ್ಯಾಪಕರು ವಿದ್ಯಾರ್ಥಿಗಳು ತಮ್ಮನ್ನು ಹೇಗೆ ಪೋಷಿಸಿ, ಸಮಾಜಕ್ಕೆ ಉತ್ತಮ ವೈದ್ಯರನ್ನಾಗಿ ರೂಪಿಸಿದ್ದನ್ನು ನೆನಪಿಸಿಕೊಂಡರು. ಉತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆಯನ್ನು ಬೆಳೆಸಿ, ಉತ್ತಮ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಎಸ್.ಡಿ.ಎಂ. ಮಹಾವಿದ್ಯಾಲಯವು ಕಳೆದ 20 ವರ್ಷಗಳಲ್ಲಿ ಸಾಧಿಸಿದ ಉತ್ತಮ ಪ್ರಗತಿಗಾಗಿ ಎಸ್.ಡಿ.ಎಂ. ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಮುಂದೆ ಇರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿಯೇ ದೊಡ್ಡ ದೊಡ್ಡ ಕನಸುಗಳನ್ನು ಕಾಣಲು ಹಿಂಜರಿಯಬಾರದು. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರುತ್ತಾರೆ ಎಂಬುದನ್ನು ನಂಬಬೇಕು. ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅವರಲ್ಲಿ ಹೊಸ ಜ್ಞಾನವನ್ನು ಮೂಡಿಸುತ್ತವೆ ಎಂದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ, ಉಪ ವಿದ್ಯಾರ್ಥಿ ಕಲ್ಯಾಣಾಧಿಕಾರಿಯವರಾದ ಆಶಾ ದೇಶಪಾಂಡೆ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಯಿ ಧೀರಾ ಅವರು ವಿದ್ಯಾರ್ಥಿಗಳ ವಾರ್ಷಿಕ ಸಂಚಿಕೆಯಾದ ಸ್ಟಿಲ್‌ವಾಟರ‍್ಸ್ ನ ವಿಶ್ಲೇಷಣೆ ನೀಡಿದರು. ರೋಹಿಣಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಚಂದನ ಅವರು ವಂದನಾರ್ಪಣೆ ಸಲ್ಲಿಸಿದರು.

ವಿಶ್ವ ತುರ್ತು ಚಿಕಿತ್ಸಾ ದಿನಾಚರಣೆ

Article Image

ವಿಶ್ವ ತುರ್ತು ಚಿಕಿತ್ಸಾ ದಿನಾಚರಣೆ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಿಂದ 27 ಮೇ 2024 ರಂದು “ವಿಶ್ವ ತುರ್ತು ಚಿಕಿತ್ಸಾ ದಿನ”ದ ಅಂಗವಾಗಿ “ಅಪಧಮನಿಯ ರಕ್ತದ ಅನಿಲ ವಿಶ್ಲೇಷಣೆಯ ಬಗ್ಗೆ ಪ್ರಾಥಮಿಕ ಜ್ಞಾನ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಉತ್ತರ ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳಿಂದ ಸುಮಾರು 150ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗವು ಕರ್ನಾಟಕದಲ್ಲಿ ಸ್ಥಾಪನೆಯಾದ 5 ನೇ ವಿಭಾಗ ಮತ್ತು 2 ನೇ ಅತಿ ದೊಡ್ಡ ವಿಭಾಗವಾಗಿದೆ. ಎಸ್.ಡಿ.ಎಂ ವೈದ್ಯಕೀಯ ಕಾಲೇಜು ಕಳೆದ ಐದು ವರ್ಷಗಳಿಂದ ತುರ್ತು ಚಿಕಿತ್ಸಾ ವಿಭಾಗದಲ್ಲಿ ಎಂ.ಡಿ. ಸ್ನಾತಕೋತ್ತರ ಪದವಿಯನ್ನು ನೀಡುತ್ತಿದೆ. ಡಾ. ನಿರಂಜನ್ ಕುಮಾರ, ಉಪಕುಲಪತಿಗಳು, ಈ ಕಾರ್ಯಾಗಾರವನ್ನು ಉದ್ಘಾಟಿಸಿದರು. ಡಾ. ರತ್ನಮಾಲಾ ಎಂ. ದೇಸಾಯಿ, ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಡಾ. ವಿಜಯ ಕುಲಕರ್ಣಿ, ಉಪ ಪ್ರಾಂಶುಪಾಲರು, ಡಾ. ಕಿರಣ ಹೆಗ್ಡೆ, ವೈದ್ಯಕೀಯ ಅಧೀಕ್ಷಕರು, ಡಾ. ಮಖ್ದೂಮ್ ಕಿಲ್ಲೇದಾರ ಉಪ ವೈದ್ಯಕೀಯ ಅಧೀಕ್ಷಕರು, ಮತ್ತಿತರರು ಈ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮಹಾದೇವ, ಜೆ ಜೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮಂಜುನಾಥ. ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಉದಯ ಮತ್ತು ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕರುಗಳು ಕಾರ್ಯಾಗಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಾ. ರಜನಿಕಾಂತ, ಅಥಿತಿಗಳನ್ನು ಸ್ವಾಗತಸಿದರು, ಡಾ. ವಿಜಯಲಕ್ಷ್ಮಿ , ಪ್ರಾಧ್ಯಾಪಕರು ಮತ್ತು ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಕಾರ್ಯಗಾರದ ಅವಲೋಕನ ನೀಡಿದರು. ಡಾ. ಸುಚಿತಾ ವಂದನಾರ್ಪಣೆ ಸಲ್ಲಿಸಿದರು.

ಧಾರವಾಡ, ಸತ್ತೂರು: ವಿಶ್ವ ಪ್ರಿಕ್ಲಾಂಪ್ಸಿಯಾ ದಿನಾಚರಣೆ

Article Image

ಧಾರವಾಡ, ಸತ್ತೂರು: ವಿಶ್ವ ಪ್ರಿಕ್ಲಾಂಪ್ಸಿಯಾ ದಿನಾಚರಣೆ

ಧಾರವಾಡದ ಸತ್ತೂರಿನ ಎಸ್.ಡಿ.ಎಂ. ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ವಿಭಾಗ ಮತ್ತು ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರಿಕ್ಲಾಂಪ್ಸಿಯಾ ದಿನದ ಅಂಗವಾಗಿ, ಮೇ 22 ರಂದು ಸತ್ತೂರು ಗ್ರಾಮದಲ್ಲಿ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಬಗ್ಗೆ ಜಾಗೃತಿ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಥಾವನ್ನು ಸತ್ತೂರಿನ ಕಾರ್ಪೊರೇಟರ್ ಆದ ಬಸವರಾಜ ಅರಳವಾಡಿ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಆಶಾದೇವಿ ನೆರವಿ ಅವರು ಮಾತನಾಡುತ್ತಾ, ಗರ್ಭಿಣಿಯರು ಆಗಾಗ ವೈದ್ಯರನ್ನು ಸಂಪರ್ಕಿಸಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ಆರಂಭಿಕ ರಕ್ತದೊತ್ತಡದ ಪತ್ತೆಯು ಉತ್ತಮವಾಗಿ ನಿರ್ವಹಿಸಲು ಸಹಾಯಕಾರಿಯಾಗಿದ್ದು, ಅದನ್ನು ತಡೆಯಬಹುದು. ಆರೋಗ್ಯಕರ ಹೆರಿಗೆ ಮತ್ತು ಆರೋಗ್ಯಕರ ಮಗು ಎಲ್ಲಾ ಗರ್ಭಿಣಿಯರ ಆಶಯವಾಗಿದೆ. ಗರ್ಭಾವಸ್ಥೆಯಲ್ಲಿ ಉತ್ತಮ ಜೀವನಶೈಲಿ, ಆಹಾರ ಮತ್ತು ವ್ಯಾಯಾಮದಿಂದ ರಕ್ತದೊತ್ತಡವನ್ನು ತಡೆಯಬಹುದು ಎಂದು ಹೇಳಿದರು. ಈ ಜಾಥಾದಲ್ಲಿ 70ಕ್ಕೂ ಹೆಚ್ಚು ನರ್ಸಿಂಗ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ, ಗರ್ಭಾವಸ್ಥೆಯಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವುದು ಮತ್ತು ಅದರ ನಿರ್ವಹಣೆಯ ಕುರಿತು ವಿವರಿಸಿ ಕರಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಪುಷ್ಪಾ ಪಾಟೀಲ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಮನಿ ಬಿಜ್ಲಿ ಉಪಸ್ಥಿತರಿದ್ದರು. ಅಕ್ಷತಾ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಸುನೀತಾ ವಂದನಾರ್ಪಣೆ ಸಲ್ಲಿಸಿದರು.

ಜಂಗಮಶೆಟ್ಟಿ ರಂಗಪ್ರಶಸ್ತಿಗೆ ಆಹ್ವಾನ

Article Image

ಜಂಗಮಶೆಟ್ಟಿ ರಂಗಪ್ರಶಸ್ತಿಗೆ ಆಹ್ವಾನ

ಕಲಬುರಗಿ: ಇಲ್ಲಿನ ರಂಗಸಂಗಮ ಕಲಾವೇದಿಕೆ ನೀಡುವ ಎಸ್. ಬಿ. ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಾಧನೆಗೈದ ರಂಗಕರ್ಮಿಗಳ ಹೆಸರನ್ನು ರಂಗಾಸಕ್ತರು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು ಎಂದು ರಂಗಸಂಗಮ ಕಲಾವೇದಿಕೆ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯು ತಲಾ 10,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಒಳಗೊಂಡಿದ್ದು, ಜುಲೈ 18ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಅರ್ಜಿ ಅಥವಾ ನಾಮನಿರ್ದೇಶನಗಳನ್ನು ಜೂ.6 ರೊಳಗೆ ಕಳುಹಿಸಬಹುದು. ವಿಳಾಸ: ಡಾ.ಸುಜಾತಾ ಜಂಗಮ ಶೆಟ್ಟಿ, ಓಂ ರೆಸಿಡೆನ್ಸಿ, ಎರಡನೇ ಮಹಡಿ, ಶ್ರೀನಿವಾಸ ಕಣ್ಣಿನ ಆಸ್ಪತ್ರೆ ಪಕ್ಕ, ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ, ಹಳೆಯ ಜೇವರ್ಗಿ ರಸ್ತೆ, ಕಲಬುರಗಿ- 585102.

ಮಾ. 31ರ ಭಾನುವಾರ ಬ್ಯಾಂಕ್‌ಗೆ ಇಲ್ಲ ರಜೆ

Article Image

ಮಾ. 31ರ ಭಾನುವಾರ ಬ್ಯಾಂಕ್‌ಗೆ ಇಲ್ಲ ರಜೆ

ಹೊಸದಿಲ್ಲಿ: ಮಾರ್ಚ್ 31ರ ಭಾನುವಾರ ದೇಶದ ಪ್ರಮುಖ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ಬ್ಯಾಂಕ್ ವ್ಯವಹಾರಗಳನ್ನು ಮಾಡಬಹುದಾಗಿದೆ. ಸರಕಾರದ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಏಜೆನ್ಸಿ ಬ್ಯಾಂಕುಗಳು ಆರ್ಥಿಕ ವರ್ಷದ ಕೊನೆ ದಿನ (ಮಾ.31) ಕಾರ್ಯನಿರ್ವಹಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ. ಮಾ.31ರಂದು ಸೇವೆ ನೀಡಲಿರುವ ಬ್ಯಾಂಕ್‌ಗಳ ಮಾಹಿತಿ ಇಲ್ಲಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುಸಿಒ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ. ಖಾಸಗಿ ವಲಯದ ಬ್ಯಾಂಕ್‌ಗಳು: ಎಕ್ಸಿಸ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಯೆಸ್ ಬ್ಯಾಂಕ್, ಧನಲಕ್ಷ್ಮಿ ಬ್ಯಾಂಕ್, ಬಂಧನ್ ಬ್ಯಾಂಕ್, ಸಿಎಸ್‌ಬಿ ಬ್ಯಾಂಕ್.

ಬೆಂಗಳೂರು: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಅವಧಿ ವಿಸ್ತರಣೆ

Article Image

ಬೆಂಗಳೂರು: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಅವಧಿ ವಿಸ್ತರಣೆ

ವಿಧಾನ್ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಮಾದೇಗೌಡ, ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚಿನ ವಾಹನಗಳಿವೆ. ಹಳ್ಳಿ ಜನರು ವಾಹನಗಳಿಗೆ ಇನ್ನೂ ಎಚ್‌ಎಸ್‌ಆರ್‌ಪಿ ನೇಮ್ ಪ್ಲೇಟ್ ಅಳವಡಿಸಿಲ್ಲ. ಆನ್‌ಲೈನ್‌ನಲ್ಲಿ ನೊಂದಣಿ ಮಾಡಬೇಕಿರುವ ಹಿನ್ನೆಲೆಯಲ್ಲಿ ಫೇಕ್ ವೆಬ್ಸೈಟ್ ಹಾವಳಿ ಹೆಚ್ಚಾಗಿದೆ. ಇದರ ಬಗ್ಗೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ (HSRP) ನಂಬರ್ ಪ್ಲೇಟ್ ಅಳವಡಿಸುವ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಹೇಳಿದರು. ಫೇಕ್ ವೆಬ್ಸೈಟ್ ಬಗ್ಗೆ ಎಚ್ಚರ ವಹಿಸಲಾಗುತ್ತದೆ. ಈ ಯೋಜನೆ ಪಾರದರ್ಶಕವಾಗಿದೆ ಎಂದು ಸದನಕ್ಕೆ ತಿಳಿಸಿದರು. ಈಗಾಗಲೇ ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. ಈ ಪ್ಲೇಟ್‌ಗಳಲ್ಲಿ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ನಂಬರ್ ಅಚ್ಚಾಗಿರುತ್ತದೆ. ಈ ಪ್ಲೇಟ್‌ನ ಮೇಲ್ಬಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದು. 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗಿರುತ್ತದೆ. https://transport.karnataka.gov.in ಅಥವಾ http://www.siam.in ಭೇಟಿ ನೀಡಿ ಅಥವಾ Book HSRP ಮೂಲಕ ಈ ನಂಬರ್ ಪ್ಲೇಟ್ ಪಡೆದುಕೊಳ್ಳಲು ಸಾಧ್ಯವಿದೆ.

ಸತ್ತೂರು-ಧಾರವಾಡ ಜ.30: ವಿಶ್ವ ಕುಷ್ಠರೋಗ ದಿನ

Article Image

ಸತ್ತೂರು-ಧಾರವಾಡ ಜ.30: ವಿಶ್ವ ಕುಷ್ಠರೋಗ ದಿನ

ಸತ್ತೂರು/ಧಾರವಾಡ: ಇಲ್ಲಿಯ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಚರ್ಮರೋಗ ವಿಭಾಗದಲ್ಲಿ ವಿಶ್ವ ಕುಷ್ಠರೋಗ ದಿನವನ್ನು ಜನವರಿ 30ರಂದು ಆಚರಿಸಲಾಯಿತು. “ಕುಷ್ಠರೋಗವನ್ನು ಸೋಲಿಸಿ” ಎಂಬ ಧ್ಯೇಯೆಯೊಂದಿಗೆ ಭಿತ್ತಿಪತ್ರ ಪ್ರದರ್ಶನ ಸ್ಪರ್ಧೆ ಏರ್ಪಡಿಸುವ ಮೂಲಕ ಜನರಲ್ಲಿ ರೋಗದ ಕುರಿತು ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ವೈದ್ಯಕೀಯ ಉಪ ಅಧೀಕ್ಷಕರಾದ ಡಾ. ಮಖ್ದೂಮ ಕಿಲ್ಲೆದಾರ, ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ನವೀನ ಕೆ. ಎನ್., ಡಾ. ಎಸ್.ಬಿ. ಅಥಣಿಕರ ಮತ್ತಿತರರು ಉಪಸ್ಥಿತರಿದ್ದರು. ಕುಷ್ಠರೋಗ ಕಳಂಕದ ನಿರ್ಮೂಲನೆ, ಆರಂಭಿಕ ಹಂತದಲ್ಲೆ ಪತ್ತೆ ಹಚ್ಚುವುದು ಮತ್ತು ಸಮುದಾಯ ಜಾಗೃತಿಯನ್ನು ಕೇಂದ್ರಿಕರಿಸುತ್ತಾ ಕುಷ್ಠರೋಗ ಪೀಡಿತ ವ್ಯಕ್ತಿಗಳ ತಾರತಮ್ಯವನ್ನು ತೊಡೆದುಹಾಕಲು ಎಲ್ಲಾ ಸದಸ್ಯರಿಂದ ಪ್ರತಿಜ್ಞೆ ಮಾಡಲಾಯಿತು.

First Previous

Showing 1 of 1 pages

Next Last