Article Image

ಮುಸಕೊಂಡ್ಲಿ ಶ್ರೀ ಪಾರ್ಶ್ವನಾಥ - ಉಡೆದಾರ್ ಪದ್ಮಾವತಿ ವಾರ್ಷಿಕ ಪೂಜಾ ಸಂಪನ್ನ

Article Image

ಮುಸಕೊಂಡ್ಲಿ ಶ್ರೀ ಪಾರ್ಶ್ವನಾಥ - ಉಡೆದಾರ್ ಪದ್ಮಾವತಿ ವಾರ್ಷಿಕ ಪೂಜಾ ಸಂಪನ್ನ

ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಮುಸಕೊಂಡ್ಲಿಯ ಇತಿಹಾಸ ಪ್ರಸಿದ್ಧ ಶ್ರೀ ಪಾರ್ಶ್ವನಾಥ ತೀರ್ಥಂಕರ, ಉಡೆದರ್ ಪದ್ಮಾವತಿ ಜೈನಬಸದಿಯ ವಾರ್ಷಿಕ ಪೂಜಾ ಮಹೋತ್ಸವ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿಗಳವರ ದಿವ್ಯ ಆಶೀರ್ವಾದದೊಂದಿಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ ನಿತ್ಯ ಅಭಿಷೇಕ, ಪೂಜೆ, ಉತ್ಸವ, ಆರಾಧನೆಗಳು, 108 ಕಳಶಗಳ ಅಭಿಷೇಕಗಳು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಪಾರ್ಶ್ವನಾಥ, ಉಡೆದರ್ ಪದ್ಮಾವತಿ ಜೈನ ಬಸದಿ ಸಮಿತಿಯ ಅಧ್ಯಕ್ಷ ಕಾಂತರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಮಕೂರು ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಮಹಾವೀರ್, ಮುಸಕೊಂಡ್ಲಿ ಜೈನ ಸಮಾಜದ ಎಂ.ಡಿ ಶಾಂತರಾಜು, ಪತ್ರಿಕಾ ವರದಿಗಾರ ಎಂ.ಡಿ. ಮೋಹನ್ ಎಂ.ಡಿ. ಚಂದ್ರಯ್ಯ. ಪಂಕಜ ಚಂದ್ರಯ್ಯ, ಉಡೆದರ್ ವಂಶಸ್ಥರಾದ ಧರಣಿಂದ್ರ, ಭರತ್ ಕುಮಾರ್, ಪದ್ಮಲತಾ, ಎಂ.ಎನ್. ಬಾಹುಬಲಿ, ಶ್ರೀ ಮಹಾವೀರ ಜೈ ನ ಬಸದಿ ಹಾಗೂ ಶ್ರೀ ಪಾರ್ಶ್ವನಾಥ- ಉಡೆದರ್ ಪದ್ಮಾವತಿ ಜೈನಬಸದಿಯ ಸದಸ್ಯರು, ಮುಸಕೊಂಡ್ಲಿ ಜೈನ ಸಮಾಜದ ಮುಖಂಡರು, ಪದ್ಮಾವತಿ ಮಹಿಳಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಉಡೇದಾರ್ ವಂಶಸ್ಥರು, ಮೈಸೂರು, ಮುಸಕೊಂಡ್ಲಿ, ತುಮಕೂರು, ಕುಣಿಗಲ್, ಬೆಂಗಳೂರು, ಸೇರಿದಂತೆ ರಾಜ್ಯದ ವಿವಿಧಡೆಗಳಿಂದ ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು. ಪ್ರತಿಷ್ಠಾಪನಾಚಾರ್ಯ ಅನಿಲ್ ಕುಮಾರ್ ಹಾಗೂ ಸ್ಥಳೀಯ ಪುರೋಹಿತರಾದ ಅಮೃತ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಜೆ. ರoಗನಾಥ, ತುಮಕೂರು.

ಕಾರ್ಕಳ: ಪೂಜಾ ಕಾರ್ಯಕ್ರಮ

Article Image

ಕಾರ್ಕಳ: ಪೂಜಾ ಕಾರ್ಯಕ್ರಮ

ಕಾರ್ಕಳ: ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರಿನ ಭ| 1008 ಶ್ರೀ ಅನಂತನಾಥ ಸ್ವಾಮಿ ಸನ್ನಿಧಿಯಲ್ಲಿ ನಾಳೆ (ಜೂ.24) ಮಂಗಳವಾರದಂದು ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮಯಕ್ಷ ದೇವರ ಸ್ಥಂಭಾರೋಹನ ಪೂಜಾ ಕಾರ್ಯಕ್ರಮವು ಜರಗಲಿರುವುದು ಕಾರ್ಯಕ್ರಮ: ದಿನಾಂಕ 24-06-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 9.15ರಿಂದ ವಿಮಾನಶುದ್ಧಿ ಬೆಳಿಗ್ಗೆ ಗಂಟೆ 11.55ರಿಂದ ಶ್ರೀ ಬ್ರಹ್ಮಯಕ್ಷ ದೇವರಿಗೆ ಕಲಾರೋಪಣೆ ಮಧ್ಯಾಹ್ನ ಗಂಟೆ 12.30ಕ್ಕೆ ಲಕ್ಷ ಹೂವಿನ ಪೂಜೆ ಮಧ್ಯಾಹ್ನ ಗಂಟೆ 1.00ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ರಾತ್ರಿ ಗಂಟೆ 9.00ಕ್ಕೆ ವಿಶೇಷ ಮಂಗಳಾರತಿ, ಸ್ಥಂಭಾರೋಹಣ.

ಜೈನ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Article Image

ಜೈನ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಮೂಡುಬಿದರೆಯ ಜೈನ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಪ್ರಾಣಾಯಾಮ ಮತ್ತು ಯೋಗದ ಮಹತ್ವವನ್ನು ತಿಳಿಸಲಾಯಿತು. ಆಳ್ವಾಸ್ ನ್ಯಾಚುರೋಪತಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಪ್ರಜ್ಞ ಶೆಟ್ಟಿ ಹಾಗೂ ಡಾ. ಶಾಲಿನಿ ಅವರು ಪ್ರಾಣಾಯಾಮವನ್ನು ಮಾಡಿಸುವುದರ ಮೂಲಕ ಅದರ ಮಹತ್ವವನ್ನು ವಿವರಿಸಿದರು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ನೀಶಾ ಜೈನ್ ನಿರೂಪಿಸಿದರು

ಸತ್ತೂರು, ಧಾರವಾಡ: 11ನೇ ಅಂತರರಾಷ್ಟ್ರೀಯ ಯೋಗ ದಿನ

Article Image

ಸತ್ತೂರು, ಧಾರವಾಡ: 11ನೇ ಅಂತರರಾಷ್ಟ್ರೀಯ ಯೋಗ ದಿನ

ಎಸ್.ಡಿ.ಎಂ. ವಿಶ್ವವಿದ್ಯಾಲಯವು 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ “ಒಂದು ಭೂಮಿ - ಒಂದು ಆರೋಗ್ಯ” ಎಂಬ ಧ್ಯೇಯವಾಕ್ಯದಡಿಯಲ್ಲಿ ಆಚರಿಸಲಾಯಿತು. ಹೆಸರಾಂತ ದಂತ ಚಿಕಿತ್ಸಕರು ಮತ್ತು ಯೋಗ ತಜ್ಞೆಯಾದ ಡಾ. ಕೃತಿಕಾ ಗುತ್ತಲ್ ಅವರು ಮುಖ್ಯ ಅತಿಥಿಯಾಗಿದ್ದರು. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಡಾ. ಕೃತಿಕಾ ಗುತ್ತಲ್, ಯೋಗದ ಮಹತ್ವವನ್ನು ತಿಳಿಸಿ ಮಾತನಾಡುತ್ತಾ: ಯೋಗವು ಆರೋಗ್ಯಕರ ಜೀವನಕ್ಕೆ ಸಮಗ್ರ ಜ್ಞಾನವನ್ನು ಒದಗಿಸುತ್ತದೆ, ಯೋಗಾಸನಗಳನ್ನು ಮಾಡುವ ಮೂಲಕ ನಮ್ಮ ದೇಹ ಮತ್ತು ಮನಸ್ಸು ಉಲ್ಲಾಸದಿಂದಿರುತ್ತದೆ, ಯೋಗವು ದೇಹ ಮತ್ತು ಮನಸ್ಸಿಗೆ ಸುಲಭವಾದ ವ್ಯಾಯಾಮವಾಗಿದ್ದು ಎಲ್ಲರೂ ಅದನ್ನು ರೂಢಿಸಿಕೊಳ್ಳಬಹುದು, ಯೋಗವು ದೇಹದ ಲವಲವಿಕೆಯನ್ನು ಹೆಚ್ಚಿಸಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಮನಸ್ಸಿನ ಶಾಂತತೆಗೆ ಮತ್ತು ದಕ್ಷತೆಯ ಕಾರ್ಯನಿರ್ವಹಣೆಗೆ ಯೋಗಾಭ್ಯಸಗಳು ಅತ್ಯಾವಶ್ಯಕ, ನಿರಂತರ ಯೋಗ ಅಭ್ಯಾಸ ಹಾಗೂ ಪ್ರಾಚೀನ ಆಹಾರ ಸೇವನಾ ಪದ್ದತ್ತಿಯಿಂದ ಉತ್ತಮ ಜೀವನ ಶೈಲಿ ನಡೆಸಲು ಸಾಧ್ಯ ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಕುಲಸಚಿವರಾದ ಡಾ. ಚಿದೇಂದ್ರ ಎಂ ಶೆಟ್ಟರ್, ಡಾ. ಸತೀಶ್ ಪಾಟೀಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸುಮಾರು 300ಕ್ಕೂ ಅಧಿಕ ವೈದ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಲರಾಮ್ ಡಿ. ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಪ್ರಶಾಂತ್ ಮೋಗಿ ಧನ್ಯವಾದ ಅರ್ಪಿಸಿದರು ಮತ್ತು ಡಾ. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು. ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಂಡದವರು ದೇವರ ನಾಮ ಸ್ತುತಿಸಿ, ಯೋಗಾಸನಗಳನ್ನು ಪ್ರಸ್ತುತಿಪಡಿಸಿದರು.

ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ ಅಂತರಾ‌ಷ್ಟ್ರೀಯ ಯೋಗ ದಿನಾಚರಣೆ

Article Image

ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ ಅಂತರಾ‌ಷ್ಟ್ರೀಯ ಯೋಗ ದಿನಾಚರಣೆ

ಯೋಗವು ವಿಶ್ವಕ್ಕೆ ಭಾರತೀಯರ ಅಮೂಲ್ಯ ಕೊಡುಗೆ, ವಿದ್ಯಾರ್ಥಿಗಳು ಯೋಗಭ್ಯಾಸ ಮಾಡುವುದರಿಂದ ದೈನಂದಿನ ಕಾರ್ಯಗಳು ಸುಲಲಿತವಾಗಿ ಸಾಗುತ್ತದೆ. ಯೋಗವನ್ನು ಕೇವಲ ಚಟುವಟಿಕೆ ಆಗಿ ಸ್ವೀಕರಿಸದೆ ದೈನಂದಿನ ಜೀವನ ಶೈಲಿಯಾಗಿ ಸ್ವೀಕರಿಸಿ ಎಂದು ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಇವರು ಅಭಿಪ್ರಾಯ ಪಟ್ಟರು. ಅಂತರಾ‌ಷ್ಟ್ರೀಯ ಯೋಗ ದಿನಾಚರಣೆಯ ಅವಸರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವದ್ಯಂತ 180 ಅಧಿಕ ರಾಷ್ಟ್ರಗಳು ಯೋಗಸಕ್ತರಾಗಿದ್ದು. ಯೋಗವು ಇಂದು ವಿಶ್ವಮಾನ್ಯವಾಗಿದೆ, ಪ್ರತಿಯೊಬ್ಬ ಮಗುವು ಕೂಡ ನಿತ್ಯ ಜೀವನದಲ್ಲಿ ಯೋಗಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಕು. ದಿಶಾ ಪ್ರಶಾಂತ್, ಮಾತನಾಡಿ ಯೋಗಭ್ಯಾಸಕ್ಕೆ ವಯಸ್ಸಿನ ಮಿತಿ ಇಲ್ಲ, ದೇಹ ಮತ್ತು ಮನಸ್ಸಿನ ಶುಚಿತ್ವಕ್ಕೆ ಯೋಗ ಬಲು ಸಹಕಾರಿ, ಪ್ರತಿಯೊಬ್ಬರು ತಮ್ಮ ದಿನನಿತ್ಯದ ಚಟುವಟಿಕೆ ಸುಗಮವಾಗಿ ಸಾಗಲು ಅಭ್ಯಸಿಸುವುದು ಉತ್ತಮ ಎಂದು ತಿಳಿಸಿದರು. ಸಂಸ್ಥೆಯ ಯೋಗ ತರಬೇತುದಾರರಾದ ದಿವ್ಯ ಎಂ. ಇವರು ಉಪಸ್ಥಿತರಿದ್ದು ಆಂತರಿಕ ಮತ್ತು ಬಾಹ್ಯ ಯೋಗಗಳ ಕುರಿತಾಗಿ ಮಾಹಿತಿ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಯೋಗ ಪ್ರದರ್ಶನ ಮತ್ತು ಯೋಗ ನೃತ್ಯ ಪ್ರದರ್ಶಿಸಿ ಯೋಗ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿ ಶಾಶ್ವತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸಿ ಬಿ ಎಸ್ ಇ ಶಾಲಾ ಪ್ರಾಂಶುಪಾಲರಾದ ಶ್ರೀಪ್ರಸಾದ್, ಉಪ ಮುಖ್ಯೋಪಾಧ್ಯಾಯರಾದ ಜಯಶೀಲ, ಜೀವಶಾಸ್ತ್ರ ಉಪನ್ಯಾಸಕರಾದ ಪ್ರಶಾಂತ್ ಆರ್ ಉಪಸ್ಥಿತರಿದ್ದರು.

ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನೆ

Article Image

ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನೆ

ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಮೂಡಬಿದ್ರಿ ಶ್ರೀ ದಿಗಂಬರ ಜೈನ ಮಠದಲ್ಲಿ ನಡೆದ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿಗಳು ಕರ್ನಾಟಕ ಸರಕಾರಿ ನಿವೃತ್ತಿ ನೌಕರರ ಸಂಘ ಬೆಂಗಳೂರು ಹಾಗೂ ಬೆಳ್ತಂಗಡಿ ತಾಲೂಕು ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಆದ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳ, ಬಾಹುಬಲಿ ಪ್ರಸಾದ್, ಉಪಸ್ಥಿತರಿದ್ದರು.

ದ ಕ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ

Article Image

ದ ಕ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಶ್ರೀ ದಿಗಂಬರ ಜೈನ ಮಠ ಮೂಡುಬಿದ್ರೆ ಇವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರವು ಮೂಡಬಿದ್ರೆ ಜೈನ್ ಮಠದ ಶ್ರೀ ಭಟ್ಟಾರಕರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಪೂಜ್ಯ ಸ್ವಾಮೀಜಿಯವರು ಉದ್ಘಾಟಿಸಿದರು. ಶಿಬಿರದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳ ಅವರು ದ ಕ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಜಿನೇಂದ್ರ ಕೋಟ್ಯಾನ್, ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಬಸದಿಯ ಆಡಳಿತ ಮಂಡಳಿಯ ಸಂಚಾಲಕರು ಡಾ. ಕೆ. ಜಯಕೀರ್ತಿ ಜೈನ್, ಶ್ರೀ ಜೈನ್ ಮಠದ ಸಲಹಾ ಸಮಿತಿ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕಾರಿಗಳು ಭಾಗವಸಿದ್ದರು. ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳರವರನ್ನು ಪೂಜ್ಯ ಸ್ವಾಮೀಜಿಯವರು ಸನ್ಮಾನಿಸಿದರು, ಜಿನೇಂದ್ರ ಕೋಟ್ಯಾನ್, ಡಾ. ಕೆ. ಜಯಕೀರ್ತಿ ಜೈನ್ ರವರನ್ನು ಪೂಜ್ಯ ಸ್ವಾಮೀಜಿಯವರು ಅಭಿನಂದಿಸಿದರು. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ಹಾಗೂ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪುರೋಹಿತರುಗಳಿಗೆ ಧಾರ್ಮಿಕ ಪ್ರಮಾಣ ಪತ್ರವನ್ನು ನೀಡಲಾಯಿತು. ಡಾ. ಕೆ. ಜಯಕೀರ್ತಿ ಜೈನ್ ಸ್ವಾಗತಿಸಿ, ಬಾಹುಬಲಿ ಪ್ರಸಾದ್ ವಂದನಾರ್ಪಣೆ ಸಲ್ಲಿಸಿ, ಸೌಮ್ಯಶ್ರೀ ಪ್ರಾoಶುಪಾಲರು ಸ್ವಸ್ತಿಶ್ರೀ ಪದವಿ ಪೂರ್ವ ವಸತಿ ಕಾಲೇಜು ಮೂಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

ಜೂನ್ 21: ಮೈಸೂರಿನಲ್ಲಿ ಹನ್ನೊಂದನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Article Image

ಜೂನ್ 21: ಮೈಸೂರಿನಲ್ಲಿ ಹನ್ನೊಂದನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಉಜಿರೆ: ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜು, ಉಜಿರೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು “ಪಯಣ” ವಿಂಟೇಜ್ ಕಾರುಗಳ ಸಂಗ್ರಹಾಲಯ, ಮೈಸೂರು-ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ.21 ರಂದು ಶನಿವಾರ ಬೆಳಿಗ್ಗೆ ಏಳು ಗಂಟೆಯಿಂದ ಮೈಸೂರಿನಲ್ಲಿ “ಪಯಣ” ಆವರಣದಲ್ಲಿರುವ ಸಭಾಭವನದಲ್ಲಿ ಹನ್ನೊಂದನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಮತ್ತು ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ತಿಳಿಸಿದ್ದಾರೆ. ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಸಮಾರಂಭವನ್ನು ಉದ್ಘಾಟಿಸುವರು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯ ಸ್ವಾಮಿ, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಬಂಡಿಸಿದ್ದೇಗೌಡ ಮತ್ತು ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಂಸನೆ ಮಾಡುವರು. ಮೈಸೂರಿನಲ್ಲಿ ವಿವಿಧ ಕೇಂದ್ರಗಳಲ್ಲಿ ಈಗಾಗಲೆ ಸಾರ್ವಜನಿಕರಿಗೆ ಯೋಗ ತರಬೇತಿ ಶಿಬಿರ ನಡೆಸಿದ್ದು, ಇಲ್ಲಿ ತರಬೇತಿ ಪಡೆದ 3,500 ಮಂದಿ “ಪಯಣ”ದಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆಯಲ್ಲಿ ಭಾಗವಹಿಸುವರು. ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಆಶ್ರಯದಲ್ಲಿ ನಡೆಸಲ್ಪಡುವ ಎಲ್ಲಾ 54 ಶಿಕ್ಷಣ ಸಂಸ್ಥೆಗಳಲ್ಲಿ ಕೂಡಾ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಣಿ ಅಬ್ಬಕ್ಕ ರಾಣಿ ಚೆನ್ನಭೈರಾದೇವಿ ನಾಡಿನ ರಕ್ಷಣೆ ಮಾಡಲಿಲ್ಲವೇ

Article Image

ರಾಣಿ ಅಬ್ಬಕ್ಕ ರಾಣಿ ಚೆನ್ನಭೈರಾದೇವಿ ನಾಡಿನ ರಕ್ಷಣೆ ಮಾಡಲಿಲ್ಲವೇ

ನಮ್ಮ ದೇಶದಲ್ಲಿ ಮಕ್ಕಳ ಶಾಲಾ ಪಠ್ಯ ಪುಸ್ತಕಗಳಲ್ಲೂ ಮಕ್ಕಳಿಗೆ ನಿಜವಾದ ಇತಿಹಾಸವನ್ನು ತಿಳಿಸಲಾಗುವುದಿಲ್ಲ. ಪಠ್ಯ ಪುಸ್ತಕ ರಚನೆಯಲ್ಲೂ ರಾಜಕೀಯ ಪಕ್ಷಪಾತವನ್ನು ಮಾಡಲಾಗುತ್ತಿದೆ. ಇಲ್ಲೂ ಕೂಡ ಧರ್ಮ, ಜಾತಿಗಳನ್ನು ನೋಡಲಾಗುತ್ತಿದೆ. ಇದನ್ನು ಉದಾಹರಣೆ ಸಹಿತ ವಿವರಿಸುತ್ತೇನೆ. ಇವತ್ತು ನಮ್ಮ ಮನೆಯ ಮಕ್ಕಳಿಗೆ ಓದಿಸುವಾಗ ಇಂಗ್ಲೀಷ್ ಮೀಡಿಯಂ 5 ನೇ ತರಗತಿಯ ಕನ್ನಡ ಪಠ್ಯ ಪುಸ್ತಕವನ್ನು ಗಮನಿಸುತ್ತಿರುವಾಗ ಈ ವಿಷಯ ತಿಳಿಯಿತು. ನಮ್ಮ ನಾಡಿನ ರಕ್ಷಣೆ ಮಾಡಿದವರ ಪಟ್ಟಿ ಗಮನಿಸಿದೆ. ಕಿತ್ತೂರು ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ, ಟಿಪ್ಪುಸುಲ್ತಾನ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಇಷ್ಟು ಜನರ ಹೆಸರಿದೆ. ಇವರ ಹೆಸರಿನ ಬಗ್ಗೆ ನನ್ನದೇನೂ ಆಕ್ಷೇಪಣೆ ಇಲ್ಲ. ಇಲ್ಲಿ ಎಲ್ಲರ ಹೆಸರು ಹೇಳಲೂ ಕೂಡ ಅಸಾಧ್ಯ ಎಂಬುದೂ ಕೂಡ ನನಗೆ ತಿಳಿದಿದೆ. ಇಲ್ಲಿ ಮುಖ್ಯರಾದವರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂಬ ವಿಚಾರವೂ ಕೂಡ ಸರಿ ಓಕೆ. ಆದರೆ ಇವರೆಲ್ಲರಿಗಿಂತ ಮೊದಲು ನಮ್ಮ ನಾಡಿನ ರಕ್ಷಣೆಗಾಗಿ ಜೀವವನ್ನೇ ತೆತ್ತ ಇಬ್ಬರು ಪ್ರಮುಖ ಮಹಿಳಾ ಹೋರಾಟಗಾರರಾದ ರಾಣಿ ಅಬ್ಬಕ್ಕ, ರಾಣಿ ಚೆನ್ನಾಭೈರಾದೇವಿಯರ ಹೆಸರು ಇತಿಹಾಸಕಾರರಿಗೆ ನೆನಪು ಆಗಲಿಲ್ಲವೇ. ರಾಣಿ ಅಬ್ಬಕ್ಕಳ ಪರಾಕ್ರಮಕ್ಕೆ ಪೋರ್ಚುಗೀಸರು ಧರಶಾಹಿಯಾಗಿದ್ದರು, ಆಕೆಯ ಪರಾಕ್ರಮವನ್ನು ವಿದೇಶದಿಂದ ಬಂದು ನೋಡಿದ್ದಂತಹ ಪ್ರವಾಸಿಗರೇ ತಮ್ಮ ಲೇಖನದಲ್ಲಿ ರಾಣಿ ಅಬ್ಬಕ್ಕಳನ್ನು ಹಾಡಿ ಹೊಗಳಿದ್ದಾರೆ. ಪೋರ್ಚುಗೀಸರೊಡನೆ ನಿರಂತರವಾಗಿ ಹೋರಾಡಿ ಗೇರುಸೊಪ್ಪೆಯನ್ನು ರಕ್ಷಿಸಿದ ಕಾಳು ಮೆಣಸಿನ ರಾಣಿ ಹಾಗೂ ಇಂಗ್ಲೆಂಡಿನ ರಾಣಿಗೆ ಸರಿಸಮಳು ಎಂದು ವಿದೇಶಿಗರಿಂದ ಬಣ್ಣಿಸಲ್ಪಟ್ಟ ಚೆನ್ನಾಭೈರಾದೇವಿಯನ್ನು ಇತಿಹಾಸಕಾರರು ಮರೆತಿದ್ದಾರೆ. ಮಹಿಳೆಯರಾಗಿದ್ದುಕೊಂಡು ಈ ನಾಡಿನ ರಕ್ಷಣೆಗಾಗಿಯೇ ಪ್ರಾಣತೆತ್ತ ಈ ಮಹಿಳಾ ಮಣಿಗಳನ್ನು ಪಠ್ಯಪುಸ್ತಕ ರಚನಾ ಸಮಿತಿಯವರು ಧರ್ಮದ ಆಧಾರದ ಮೇಲೆ ಪುಸ್ತಕದಿಂದ ಹೊರಗಿಟ್ಟಿರಬೇಕು ಅನಿಸುತ್ತೆ. ಖಂಡಿತವಾಗಿಯೂ ಅನೇಕರು ಈ ನಾಡುನುಡಿಗಾಗಿ ಪ್ರಾಣತೆತ್ತಿದ್ದಾರೆ. ಆದರೆ ಇಲ್ಲಿ ಬೇಕಂತಲೇ ತಾರತಮ್ಯ ಮಾಡಿ ಅಬ್ಬಕ್ಕ ಹಾಗೂ ಚೆನ್ನಾಭೈರಾದೇವಿಯ ಹೆಸರನ್ನು ಇತಿಹಾಸದಿಂದ ಮರೆಮಾಚಬೇಕೆಂಬ ಹುನ್ನಾರ ನಡೆಯುತ್ತಿದೆ ಎಂದು ಭಾಸವಾಗುತ್ತಿದೆ. ಮಹಾವೀರರ ಹೆಸರಿಲ್ಲ ಯಾಕೆ ಹಾಗೆಯೇ ದಾರ್ಶನಿಕರ ಹೆಸರನ್ನೂ ಕೂಡ ಉಲ್ಲೇಖಿಸಲಾಗಿದೆ. ಬುದ್ಧ, ಬಸವ, ಅಲ್ಲಮ, ಗಾಂಧಿ, ಅಂಬೇಡ್ಕರ್ ಹೆಸರನ್ನು ತಿಳಿಯಪಡಿಸಲಾಗಿದೆ. ಇಲ್ಲೂ ಕೂಡ ಕೊಟ್ಟಿರುವ ಹೆಸರಿನ ಬಗ್ಗೆ ಆಕ್ಷೇಪ ಇಲ್ಲ. ಆದರೆ ಜಗತ್ತಿನ ಮಹಾನ್ ದಾರ್ಶನಿಕ, ತ್ಯಾಗ ಅಹಿಂಸೆಯ ಪ್ರತಿಪಾದಕ ಮಹಾವೀರರ ಹೆಸರು ತೆಗೆದುಕೊಂಡಿಲ್ಲ. ಮಹಾವೀರರ ಉಪದೇಶದಂತೆ ನಡೆದರೆ ಈ ಜಗತ್ತು ಶಾಂತಿಯಿಂದ, ನೆಮ್ಮದಿಯಿಂದ ಇರುತ್ತದೆ ಎಂದು ಅನೇಕ ದಾರ್ಶನಿಕರು ಉಲ್ಲೇಖಿಸಿದ್ದಾರೆ. ಬುದ್ಧನಿಗಿಂತಲೂ ಮೊದಲೇ ಮಹಾವೀರರು ಅಹಿಂಸೆಯನ್ನು ಬೋಧಿಸಿದ್ದಾರೆ ಎಂಬುದು ಅತೀ ಬುದ್ಧಿವಂತ ಇತಿಹಾಸಕಾರರಿಗೆ ಗೊತ್ತಿಲ್ಲ ಅನಿಸುತ್ತೆ ಪಾಪ. ಆದರೆ ಈ ಪಠ್ಯಪುಸ್ತಕ ಸಮಿತಿಯವರು ಬೇಕಂತಲೇ ಧರ್ಮಜಾತಿಗಳನ್ನು , ರಾಜಕೀಯ ಮಾಡಿ ನೋಡಿ ಹೆಸರುಗಳನ್ನು ತೆಗೆದುಕೊಂಡಿರುವುದು ಅನಿಸುತ್ತೆ. ಮಕ್ಕಳಿಗೆ ನಿಜವಾದ ಇತಿಹಾಸ ತಿಳಿಸುವಂತಾಗಲಿ ಮಕ್ಕಳನ್ನು ನಿಜವಾದ ಇತಿಹಾಸ ತಿಳಿದುಕೊಳ್ಳುವಲ್ಲಿ ವಂಚನೆ ಮಾಡಲಾಗುತ್ತದೆ. ಮೊದಲಿನಿಂದಲೂ ಬ್ರಿಟಿಷರಿಂದ ಹಿಡಿದು ಈಗಿನವರೆಗೂ ನಿಜವಾದ ಇತಿಹಾಸವನ್ನು ಬಚ್ಚಿಡಲಾಗುತ್ತಿದೆ ಹಾಗೂ ತಿರುಚಲಾಗುತ್ತಿದೆ. ವಿವಾದಿತ ವ್ಯಕ್ತಿಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ ನಾಡಿನಲ್ಲಿ ಅರಾಜಕತೆಯನ್ನು ಸೃಷ್ಟಿಸಲಾಗುತ್ತಿದೆ. ಅದರಲ್ಲೂ ಜೈನ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಇರುವ ಪಠ್ಯಪುಸ್ತಕಗಳಿಂದಲೂ ಕೈಬಿಡುತ್ತಿರುವ ವಿಚಾರ ಬೆಳಕಿಗೆ ಬರುತ್ತಿದೆ. ರಾಜಕೀಯ ಪ್ರೇರಿತವಾಗಿ ಡೊಂಬರಾಟ ಆಡುತ್ತಿರುವ ಈ ವ್ಯವಸ್ಥೆಗೆ ನನ್ನ ಧಿಕ್ಕಾರವಿದೆ. ಅದರಲ್ಲೂ ಭಾರತದ ಎಲ್ಲಾ ರಾಜಕೀಯ ಪಕ್ಷಗಳ ಕಪಟ ಹಾಗೂ ನೀಚ ರಾಜಕೀಯಕ್ಕೆ ಧಿಕ್ಕಾರವಿದೆ. ನಿರಂಜನ್ ಜೈನ್ ಕುದ್ಯಾಡಿ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪಿತೃದೇವೋಭವ ಕಾರ್ಯಕ್ರಮ

Article Image

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪಿತೃದೇವೋಭವ ಕಾರ್ಯಕ್ರಮ

ಮೂಡುಬಿದಿರೆ: ನಾವೆಲ್ಲಾ ಅಪ್ಪ ಎಂದರೆ ಪ್ರೀತಿ ಮಾಡುತ್ತೇವೆ. ನಮ್ಮ ಎಲ್ಲಾ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರುವ ಹೀರೋ ಅಪ್ಪ. ಅಮ್ಮನಿಂದ ಜೀವ ಲಭಿಸಿದರೆ, ಅಪ್ಪನಿಂದ ಜೀವನ ಲಭಿಸುತ್ತದೆ. ನಮ್ಮ ಧೈರ್ಯವೇ ಅಪ್ಪನ ಕೈ ಬೆರಳು. ಅಪ್ಪನ ಹೆಗಲ ಮೇಲೆ ಮಲಗಿದಾಗ ಆಗುವ ಆನಂದ ಮತ್ತೆಲ್ಲಿಯೂ ಸಿಗುವುದಿಲ್ಲ. ಅಪ್ಪ ನಮ್ಮ ಕಣ್ಣ ಮುಂದಿರುವ ನಿಜವಾದ ದೇವರು. ಅಪ್ಪನಿಂದ ಜೀವನದಲ್ಲಿ ಶಿಸ್ತು, ಬದುಕುವ ಕಲೆ ಎಲ್ಲವನ್ನೂ ಮಕ್ಕಳು ಕಲಿಯುತ್ತಾರೆ. ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು. ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ತಂದೆಗೆ ಗೌರವ ಸಲ್ಲಿಸುವ ವಿನೂತನ “ಪಿತೃ ದೇವೋಭವ” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮಾತನಾಡಿ, ತಂದೆಯೇ ನನಗೆ ದೇವರು. ತಂದೆಯೇ ನನ್ನ ಖುಷಿ, ಸಂತಸ ಎಲ್ಲವೂ ಆಗಿದ್ದಾರೆ. ಅವರ ಮಮತೆ, ಮಾರ್ಗದರ್ಶನ ಮತ್ತು ತಾಳ್ಮೆ ನನ್ನ ಜೀವನವನ್ನು ಬೆಳಗಿಸುತ್ತಿವೆ. ಅವರು ಬೋಧಿಸಿದ ಪ್ರತೀ ಪಾಠ, ತೋರಿಸಿದ ಪ್ರತೀ ದಾರಿಯಲ್ಲಿ ನಾ ನನ್ನ ಕನಸುಗಳನ್ನು ಸಾಕಾರಗೊಳಿಸಿಕೊಂಡು ಸಾಗುತ್ತಿದ್ದೇನೆ. ನನ್ನ ಕನಸುಗಳಿಗೆ ಚೆನ್ನಾಗಿ ನಿಂತು ನಾ ಓಡಿದಾಗ ಹಿಂದೆಯೇ ಓಡಿ ನೀಡಿದ ಆಶೀರ್ವಾದಗಳ ನೆರಳನ್ನು ನಾನು ಇಂದಿಗೂ ಅನುಭವಿಸುತ್ತಿದ್ದೇನೆ. ತಂದೆ ಮಕ್ಕಳ ನಡುವಿನ ಪ್ರೀತಿ, ಒಲುಮೆ, ಭಾಂದವ್ಯ ಎಂದಿಗೂ ಮರೆಯಲಾಗದು. ಮಕ್ಕಳಾದ ನಾವು ನಮ್ಮ ತಂದೆಯ ನೋವು-ನಲಿವುಗಳೆಲ್ಲವೂ ತಿಳಿದಿರಬೇಕು. ಅವರ ಪ್ರತೀ ಹೆಜ್ಜೆಯಲ್ಲಿಯೂ ನಾವೂ ಅವರ ಜೊತೆಯಾಗಿರಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳವರ ತಂದೆ ಹಾಗೂ ಟ್ರಸ್ಟಿಯೂ ಆಗಿರುವ ಕೆ. ರಾಜರತ್ನ ಜೈನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಬಿ. ಪಿ. ಸಂಪತ್ ಕುಮಾರ್, ಮುಖ್ಯೋಪಾಧ್ಯಾ ಯರಾದ ಶಿವಪ್ರಸಾದ್ ಭಟ್, ಉಪ ಮುಖ್ಯೋಪಾಧ್ಯಾಯ ಜಯ ಶೀಲ, ಕಾರ್ಕಳದ ಸೂಪರ್ ಮಾರ್ಕೆಟ್‌ನ ಮಾಲಿಕರಾದ ರೂಪೇಶ್ ಉಪಸ್ಥಿತರಿದ್ದರು. ನಂತರ ತಂದೆಯ ಮಹತ್ವವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳಾದ ಧನುಷ್ ನಿರೂಪಿಸಿದರು. ಸಾನ್ವಿ ಸ್ವಾಗತಿಸಿದರು. ವರುಣ್ ವಂದಿಸಿದರು.

ತುಮಕೂರು ಟಿ.ಎನ್. ಅಜಿತ್ ಜೈನ್ ರವರು ನಿಧನ

Article Image

ತುಮಕೂರು ಟಿ.ಎನ್. ಅಜಿತ್ ಜೈನ್ ರವರು ನಿಧನ

ತುಮಕೂರು ನಗರ ಅಗ್ರಹಾರದಲ್ಲಿ ವಾಸವಾಗಿದ್ದ ತುಮಕೂರಿನ ಹೆಸರಾಂತ ಸನ್ಮತಿ ಪೇಂಟ್ಸ್ ಮಾಲೀಕರಾದ, ಹಿರಿಯ ವಾಣಿಜ್ಯೋದ್ಯಮಿ ಟಿ.ಎನ್. ಅಜಿತ್ ಜೈನ್ ರವರು ಇಂದು (ಜೂ.13) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. ಇವರು ಪತ್ನಿ ಶಾಂತಲಾ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪರಮಪೂಜ್ಯ ಯುಗಳ ಮನಿ ಮಹಾರಾಜರ ಸಂಘಪತಿಗಳಾಗಿದ್ದ ಇವರು ಧಾರ್ಮಿಕ, ಸಾಮಾಜಿಕ ವ್ಯವಹಾರಿಕ, ಇಂಜಿನಿಯರಿಂಗ್, ಶೈಕ್ಷಣಿಕ ಹಾಗೂ ಧರ್ಮ ಪ್ರಭಾವನೆಗೆ ಮಾಡಿದ ಶ್ರೇಷ್ಠ ಸೇವೆ ಹಾಗೂ ಸತ್ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ವೈ. ಡಿ.ರತ್ನಾಕರವರಿಗೆ ಸನ್ಮಾನ

Article Image

ವೈ. ಡಿ.ರತ್ನಾಕರವರಿಗೆ ಸನ್ಮಾನ

ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಯುವ ರತ್ನ ಪ್ರಶಸ್ತಿಯ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಪುಟ್ಟೇನ ಹಳ್ಳಿಯ ಸಿದ್ಧಾಂಥ ಧಾರ್ಮಿಕ ಪತ್ರಿಕೆಯ ಸಂಪಾದಕರಾದ ವೈ. ಡಿ.ರತ್ನಾಕರವರಿಗೆ ಸಂಘದ ಅಧ್ಯಕ್ಷರು ಹಾಗೂ ವೇದಿಕೆಯಲ್ಲಿನ ಗಣ್ಯರು ಪ್ರಶಸ್ತಿನೀಡಿ ಸನ್ಮಾನಿಸಿದರು.

ಜೈನ ಯುವ ಗೆಳೆಯರ ಬಳಗದಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ

Article Image

ಜೈನ ಯುವ ಗೆಳೆಯರ ಬಳಗದಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ

ಜೈನ ಯುವ ಗೆಳೆಯರ ಬಳಗ (ಯೂತ್ ವಿಂಗ್, ಜೈನ ಗೆಳೆಯರ ಬಳಗ) ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಜುಲೈ 13ರಂದು ಭಾನುವಾರ, ಬೆಳಿಗ್ಗೆ 9:30 ರಿಂದ ಸಂಜೆ 5:00ರವರೆಗೆ ಮಂಜುಷಾ ಸ್ಪೋರ್ಟ್ಸ್ ಕ್ಲಬ್ ಪಟೇಲ್ ಚಿನ್ನಪ್ಪ ರೋಡ್, ಆದಿತ್ಯ ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರಿನಲ್ಲಿ ಆಯೋಜಿಸಿದೆ. ಕೇವಲ ದಿಗಂಬರ ಜೈನರಿಗೆ ಮಾತ್ರ, ಸ್ಪರ್ಧೆಯ ವಿಭಾಗಗಳು: ಪುರುಷರ ಡಬಲ್ಸ್: 40 ವರ್ಷಕ್ಕಿಂತ ಕಡಿಮೆ, 40 ವರ್ಷಕ್ಕಿಂತ ಹೆಚ್ಚು ಮಹಿಳೆಯರ ಡಬಲ್ಸ್: 35 ವರ್ಷಕ್ಕಿಂತ ಕಡಿಮೆ, 35 ವರ್ಷಕ್ಕಿಂತ ಹೆಚ್ಚು ಪ್ರವೇಶ ಶುಲ್ಕ: ₹ 800/- (ಪ್ರತಿ ತಂಡಕ್ಕೆ), ಸೀಮಿತ ಸ್ಥಾನಗಳು ಮಾತ್ರ ನಿರಾಶೆಯಾಗದಂತೆ ಮುಂಚಿತವಾಗಿ ನೋಂದಾಯಿಸಿ. ಗಮನಿಸಬೇಕಾದ ಸಂಗತಿಗಳು: - ವಯಸ್ಸಿನ ಪುರಾವೆಗಾಗಿ ಆಧಾರ್ ಪ್ರತಿ ಅಗತ್ಯ - ರಾಜ್ಯ/ರಾಷ್ಟ್ರೀಯ ಶ್ರೇಣಿಯ ಆಟಗಾರರಿಗೆ ಅನುಮತಿಯಿಲ್ಲ - ಯೋನೆಕ್ಸ್ ಮಾವಿಸ್ 350 ಶಟಲ್ ಬಳಸಲಾಗುವುದು - ಅಂಪೈರ್ ನಿರ್ಧಾರ ಅಂತಿಮ - ಆಟಕ್ಕೆ ಮಾರ್ಕ್ ಇಲ್ಲದ ಶೂಗಳು ಮಾತ್ರ ಅನುಮತಿ - ಎಲ್ಲಾ ಭಾಗವಹಿಸುವವರಿಗೆ ಪ್ರಮಾಣ ಪತ್ರ ಮತ್ತು ಪದಕ ನೀಡಲಾಗುವುದು - ಎಲ್ಲರಿಗೂ ಮಧ್ಯಾಹ್ನದ ಊಟ ಒದಗಿಸಲಾಗುವುದು ಪ್ರಶಸ್ತಿಗಳು: ವಿಜೇತರು, ಉಪವಿಜೇತರಿಗೆ ಟ್ರೋಫಿಗಳು ನೋಂದಣಿಗಾಗಿ ಸಂಪರ್ಕಿಸಿ: ಸನ್ಮತಿ - 91 98453 28203 ಮಹಾವೀರ್ ರಾಜಕೀರ್ತಿ- 91 97427 09709 ವಿದ್ಯಾನಂದ - 91 98450 81162 ಚಿರಂತ್ - 91 72046 96475

ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೆ ಸಾಲಿನ ಶೈಕ್ಷಣಿಕ ತರಗತಿಗಳ ಶುಭಾರಂಭ ಕಾರ್ಯಕ್ರಮ

Article Image

ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೆ ಸಾಲಿನ ಶೈಕ್ಷಣಿಕ ತರಗತಿಗಳ ಶುಭಾರಂಭ ಕಾರ್ಯಕ್ರಮ

ಮೂಡುಬಿದಿರೆ, ಜೂ.12: ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೆ ಸಾಲಿನ ಶೈಕ್ಷಣಿಕ ತರಗತಿಗಳ ಶುಭಾರಂಭ ಕಾರ್ಯಕ್ರಮವನ್ನು ಪ. ಪೂ. ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿಗಳವರು ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವಿಧ್ಯೆ ಯಾರೂ ಅಪಹರಿಸಲಾಗದ ಅಮೂಲ್ಯ ನಿಧಿ ಅದನ್ನು ಉತ್ತಮ ಮನಸ್ಸೆಂಬ ಕುಂಭದಲ್ಲಿ ಭೋದಕರ ಅಮೃತವಾಣಿ ತುಂಬಿ ಉದಾಸೀನ ಮರೆವು ಎಂಬ ಕೊಳೆಯನ್ನು ತೊಳೆದು ಯಶಸ್ವಿ ಜೀವನಕ್ಕಾಗಿ ಉಪಯೋಗಿಸಿ ಎಂದು ಆಶೀರ್ವಾದ ನೀಡಿದರು. ಕಾರ್ಯಕ್ರಮವು ಬೆಳಿಗ್ಗೆ 10.00 ಗಂಟೆಗೆ ರಮಾ ರಾಣಿ ಶೋಧ ಸಂಸ್ಥಾನ ಬಳಿ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಶುಭಾರoಭಗೊಂಡು, ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ನೀಡಲಾಯಿತು. ಮೂಡಬಿದ್ರೆ ಎಂ.ಸಿ.ಸಿ. ಬ್ಯಾಂಕ್ ನ ಅಧ್ಯಕ್ಷರೊ ಸಂಸ್ಥೆ ಯ ಆಡಳಿತ ಮಂಡಳಿಯಾವರೂ ಅದ ಎಂ. ಬಾಹುಬಲಿ ಪ್ರಸಾದ್ ರವರು 2024-25ರ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಾದ ಮನಸ್ವೀನಿ, ರೋಹಿತ್, ಶ್ರುತಿ ಇವರಿಗೆ ನಗದು ಮೊತ್ತ ಬಹುಮಾನ ವಿತರಿಸಿದರು ಹಾಗೂ ವಿದ್ಯಾರ್ಥಿಗಳಿಗೆ ವಿಧ್ಯೆಯ ಮಹತ್ವವನ್ನು ತಿಳಿಸಿಕೊಟ್ಟರು. ಮೂಡಬಿದಿರೆಯ ಖ್ಯಾತ ನ್ಯಾಯವಾದಿಗಳು ಹಾಗೂ ನೋಟರಿ ಹಾಗೂ ಸಂಸ್ಥೆಯ ನೂತನ ಬಾಲಕ ಪಾಲಕ ಸಮಿತಿ ಅಧ್ಯಕ್ಷರಾಗಿ ನಿಯುಕ್ತಗೊಂಡ ಶ್ವೇತಾ ಜೈನ್ ಇವರು ಇನ್ನೆರವೀಲ್ ಕ್ಲಬ್ ನ ಮೂಲಕ ಕಾಲೇಜ್ ಗೆ ಕುಡಿಯುವ ನೀರಿನ ಡ್ರಮ್ ಅನ್ನು ತಮ್ಮ ತಂಡ ಸದಸ್ಯರೊಂದಿಗೆ ಕೊಡುಗೆಯಾಗಿ ನೀಡಿ ಮಾತನಾಡಿದರು, ಮೂಡುಬಿದಿರೆ ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ವಿದ್ಯಾಕೇಂದ್ರ ಎಂದರು. ಸಂಜಯಂತ ಕುಮಾರ್ ಶೆಟ್ಟಿ ಶುಭಕೋರಿದರು ವಿದ್ಯಾರ್ಥಿಗಳಿಗೆ ಶ್ರೀ ದವಳತ್ರಯ ಟ್ರಸ್ಟ್ ವತಿಯಿಂದ ಉಚಿತ ಪುಸ್ತಕಗಳನ್ನು ನೀಡಲಾಯಿತು. ಉಪನ್ಯಾಸಕರಾದ ಹಿತೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ಇವರು ಸ್ವಾಗತಿದರು. ಉಪನ್ಯಾಸಕಿ ಸುಜಾತಾ ಇವರು ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಪದಾಧಿಕಾರಿಗಳಾದ ಅನಿತಾ ಪೃಥ್ವಿರಾಜ್, ಸುಮಂಗಲ ತಂತ್ರಿ, ದಿವ್ಯ ಹರ್ಷಪಡಿವಾಳ, ಶೋಭಾ ಸಿಕ್ವೆರಾ, ರೇಷ್ಮಾ ಮಹೇಂದ್ರವರ್ಮ, ವೀಣಾ ರತ್ನರಾಜ್, ಪದ್ಮಜಾ ಮಹೇಂದ್ರ ಉಪಸ್ಥಿತರಿದ್ದರು.

ಮಹಾವೀರ ಜೈನ್‌ ಇಚ್ಲಂಪಾಡಿ ಇವರಿಗೆ ಪಿ.ಹೆಚ್.ಡಿ ಪದವಿ

Article Image

ಮಹಾವೀರ ಜೈನ್‌ ಇಚ್ಲಂಪಾಡಿ ಇವರಿಗೆ ಪಿ.ಹೆಚ್.ಡಿ ಪದವಿ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್‌ ಇಚ್ಲಂಪಾಡಿ ಇವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ. ಉಜಿರೆಯ ಡಾ. ಹಾಮಾನಾ ಸಂಶೋಧನಾ ಕೇಂದ್ರದ ಮೂಲಕ ಡಾ.ಬಿ.ಪಿ ಸಂಪತ್ ಕುಮಾರ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಸಲ್ಲಿಸಿದ "ಕನ್ನಡ ಜೈನ ಸಾಹಿತ್ಯದಲ್ಲಿ ಕರ್ಮಸಿದ್ಧಾಂತದ ಸ್ವರೂಪ" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿಯನ್ನು ನೀಡಿದೆ. ಇವರು ಧಾರ್ಮಿಕ ಉಪನ್ಯಾಸಕ, ಅನೇಕ ಶಾಸ್ತ್ರದಾನ ಪುಸ್ತಕಗಳ ಸಂಪಾದಕರು, ಚಾವಡಿ ಚರ್ಚೆ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ನೆಲ್ಯಾಡಿ ಜೇಸಿಐ ಇದರ ಪೂರ್ವಾಧ್ಯಕ್ಷರು ಹಾಗೂ ಭಾರತೀಯ ಜೈನ್‌ ಮಿಲನ್ ಇದರ ಇಚ್ಲಂಪಾಡಿ ಶಾಖೆಯ ಪೂರ್ವಾಧ್ಯಕ್ಷರು ಆಗಿದ್ದರು.

ಕರಿಮಣೇಲು ಗುತ್ತು ಸನತ್ ಕುಮಾರ್ ಸೇಮಿತ ಅವರಿಗೆ ಸನ್ಮಾನ

Article Image

ಕರಿಮಣೇಲು ಗುತ್ತು ಸನತ್ ಕುಮಾರ್ ಸೇಮಿತ ಅವರಿಗೆ ಸನ್ಮಾನ

ನಾರಾವಿ ಜೂ. 7: ನಾರಾವಿ ರಾಮೇರುಗುತ್ತು ಪದ್ಮರಾಜ ಅಧಿಕಾರಿ ಮತ್ತು ಕರಿಮಣೇಲುಗುತ್ತು ಅನಂತಮತಿಯವರ ದ್ವಿತೀಯ ಪುತ್ರರಾದ ಕರಿಮಣೇಲುಗುತ್ತು ಕೆ. ಸನತ್ ಕುಮಾರ್ ಸೇಮಿತರವರ 96ನೇ ಹುಟ್ಟುಹಬ್ಬದ ಪ್ರಯುಕ್ತ ಭ| ಶ್ರೀ ೧೦೦೮ ಧರ್ಮನಾಥ ಸ್ವಾಮಿಯಲ್ಲಿ ನವಗ್ರಹ ಶಾಂತಿ ಮತ್ತು ಪದ್ಮಾವತಿ ಅಮ್ಮನವರಿಗೆ ಲಕ್ಷ ಹೂವಿನಪೂಜೆ ನಡೆದು ಬಳಿಕ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಮತ್ತು ಬಸದಿಯ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಊರ-ಪರವೂರ ಗಣ್ಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಜೈನ ಶೋಭಾನೆ ಹಾಡುಗಳ ಪುಸ್ತಕ ಬಿಡುಗಡೆ

Article Image

ಜೈನ ಶೋಭಾನೆ ಹಾಡುಗಳ ಪುಸ್ತಕ ಬಿಡುಗಡೆ

ಜೈನ ಧರ್ಮದ ಸಂಪ್ರದಾಯದಲ್ಲಿ ಶೋಭಾನೆಗೆ ಬಹಳ ಮಹತ್ವವಿದೆ ಈ ಶೋಭಾನೆಗಳನ್ನು ಪಂಚಕಲ್ಯಾಣದ ವಿಧಿ-ವಿಧಾನಗಳಲ್ಲಿಯೂ ಕೂಡಾ ಹಾಡುತ್ತಾರೆ ಮದುವೆ, ಸೀಮಂತ, ನಾಮಕರಣ, ಉಪನಯನದ ಕಾರ್ಯಕ್ರಮಗಳಲ್ಲಿ ಶೋಭಾನೆ ಹಾಡುಗಳು ಬಹಳ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಎಂದು ಮೂಡಬಿದಿರೆಯ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀಯವರು ಪುಸ್ತಕವನ್ನು ಶ್ರುತ ಪಂಚಮಿಯ ದಿನದಂದು ಶ್ರೀ ಜೈನ ಮಠ ಮೂಡಬಿದಿರೆಯಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಶೋಭಾನೆ ಹಾಡುಗಳ ಪುಸ್ತಕವನ್ನು ರಚಿಸಿದ ವಾಣಿಶ್ರೀ ಅಭಯ ಕುಮಾರ್ ಮೂಡಬಿದಿರೆ ಇವರನ್ನು ಶಾಲು ಹೊದಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಪಟ್ನ ಶೆಟ್ಟಿ ಸುಧೇಶ್ ಕುಮಾರ್, ಬಾಹುಬಲಿ ಪ್ರಸಾದ್, ಅಭಯ ಕುಮಾರ್, ವೀಣಾ ರಘ ಚಂದ್ರ, ವೃಂದಾ ರಾಜೇಂದ್ರ, ರೇಖಾ ಸುಧೇಶ್ ಕುಮಾರ್, ಮಂಜುಳ ಅಭಯ ಚಂದ್ರ, ಶ್ಚೇತಾ ಜೈನ್, ಉಷಾ ಜಯ ವೀರ್, ಮಂಜುಳ ಯಶೋಧರ್, ರಾಜೇಶ್ವರಿ ಶಂಭವ ಕುಮಾರ್, ಸುಧಾ ಪೃಥ್ವಿರಾಜ್ ಶಕುಂತಳಾ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ಶಾಲಾ ಪ್ರಾರಂಭೋತ್ಸವ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

Article Image

ಶಾಲಾ ಪ್ರಾರಂಭೋತ್ಸವ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ಮೂಡುಬಿದಿರೆ, ದ.ಕ ಇಲ್ಲಿಯ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ದಿನಾಂಕ 02-06-2025ನೇ ಸೋಮವಾರದಂದು ಶಾಲಾ ಅಮೃತ ಮಹೋತ್ಸವ ಕಟ್ಟಡದಲ್ಲಿ ನಡೆಸಲಾಯಿತು. ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಬ್ಯಾಂಡ್ ಸೆಟ್ ನೊಂದಿಗೆ ಮೆರವಣಿಗೆಯ ಮೂಲಕ ಶಾಲಾ ಸಭಾಭವನಕ್ಕೆ ಕರೆತರಲಾಯಿತು. ಸಮಾರಂಭದ ಉದ್ಘಾಟನೆಯನ್ನು ಪುರಸಭೆಯ ಸದಸ್ಯರಾದ ಶ್ವೇತಾ ಪ್ರವೀಣ್ ರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಶಾಲೆಯ ಕೀರ್ತಿಯನ್ನು ಹೆಚ್ಚಿಸುವ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಎಸ್.ಡಿ.ಎಂ.ಸಿಯ ಅಧ್ಯಕ್ಷರಾದ ಪವನ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿದರು. ಶಾಲೆಯ ಎಲ್ಲಾ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನಾಡಿದರು. ತಾಯಂದಿರ ಸಮಿತಿಯ ಅಧ್ಯಕ್ಷರಾದ ಆರತಿ ಜೈನ್ ಉಪಸ್ಥಿತರಿದ್ದರು. 2025-26ನೆ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ಶಾಲೆಯ ಹಿರಿಯ ಶಿಕ್ಷಕಿಯಾದ ಮಂಜುಳ ಜೈನ್ ಕಾರ್ಯಕ್ರಮದ ಅದ್ಯಕ್ಷಸ್ಥಾನವನ್ನು ವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ಸ್ವಾಗತಿಸಿ ತಮ್ಮ ಪ್ರಾಸ್ತವಿಕ ನುಡಿಯಲ್ಲಿ 2025-26ನೇ ಸಾಲಿನ ಯೋಜನೆಯ ಬಗ್ಗೆ ತಿಳಿಸಿದರು. 1 ರಿಂದ 7ನೇ ತರಗತಿಯವರೆಗೆ ನೂತನವಾಗಿ ದಾಖಲಾದ ವಿದ್ಯಾರ್ಥಿಗಳು ವೇದಿಕೆಯಲ್ಲಿ ತಮ್ಮ ಸ್ವ-ಪರಿಚಯ ಮಾಡಿಕೊಂಡರು ಕಾರ್ಯಕ್ರಮದ ನಿರೂಪಣೆಯನ್ನು ಮಂಜುಳ ಶಶೀಂದ್ರರವರು ನೆರವೇರಿಸಿದರು ಸಂದ್ಯಾರವರು ಧನ್ಯವಾದ ಗೈದರು.

ಡಾ. ಜೀವಂಧ‌ರ್ ಬಳ್ಳಾಲ್ ಅವರಿಗೆ ಸಮ್ಮಾನ

Article Image

ಡಾ. ಜೀವಂಧ‌ರ್ ಬಳ್ಳಾಲ್ ಅವರಿಗೆ ಸಮ್ಮಾನ

ಕೊಡಿಯಾಲ್‌ಬೈಲ್‌: ಭಾರತೀಯ ಜೈನ್ ಮಿಲನ್ ಮಂಗಳೂರು ಆಶ್ರಯದಲ್ಲಿ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಡಾ| ಜೀವಂಧ‌ರ್ ಬಳ್ಳಾಲ್ ಅವರನ್ನು ಸಮ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ಮಂಗಳೂರು ಇದರ ಅಧ್ಯಕ್ಷ ರತ್ನಾಕರ ಜೈನ್, ಪ್ರಮುಖರಾದ ಸುದರ್ಶನ್ ಜೈನ್, ಸುಕುಮಾ‌ರ್ ಬಳ್ಳಾಲ್, ಮಿಲನ್, ವೈಶಾಲಿ ಪಡಿವಾಳ್, ಪುಷ್ಪರಾಜ್ ಜೈನ್, ಸನತ್ ಕುಮಾರ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಶಿಲಾನ್ಯಾಸ ಪೂಜಾ ಕಾರ್ಯಕ್ರಮ

Article Image

ಶಿಲಾನ್ಯಾಸ ಪೂಜಾ ಕಾರ್ಯಕ್ರಮ

ಪಾಣೆಮಂಗಳೂರು: ಶ್ರೀ ಕ್ಷೇತ್ರ ಪಾಣೇರ್ ಭ। ೧೦೦೮ ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯ, ಭ। ೧೦೦೮ ಶ್ರೀ ಚಂದ್ರನಾಥ ತೀರ್ಥಂಕರ ಶ್ರೀ ಮಹಾಮಾತೆ ಪದ್ಮಾವತಿ ಅಮ್ಮನವರ ಜಿನ ಚೈತ್ಯಾಲಯದಲ್ಲಿ ಪರಮಪೂಜ್ಯ ಮುನಿಶ್ರೀ ೧೦೮ ಚಂದ್ರ ಸಾಗರ ಮುನಿ ಮಹಾರಾಜರ ಪುಣ್ಯಸ್ಮರಣೆಯೊಂದಿಗೆ, ಪರಮಪೂಜ್ಯ ಆಚಾರ್ಯ ೧೦೮ ಶ್ರೀ ಚಂದ್ರಪ್ರಭ ಸಾಗರ ಮುನಿ ಮಹಾರಾಜರ ಪರಮಶಿಷ್ಯರಾದ ಯುವಸಂತ ಪರಮಪೂಜ್ಯ ಮುನಿಶ್ರೀ ೧೦೮ ವೀರ ಸಾಗರ ಮುನಿ ಮಹಾರಾಜರು ಮತ್ತು ಪರಮಪೂಜ್ಯ ಮುನಿಶ್ರೀ ೧೦೮ ಪರಮ ಸಾಗರ ಮುನಿ ಮಹಾರಾಜರ ಶುಭಾಶೀರ್ವಾದಗಳೊಂದಿಗೆ, ಸೀಮೆಯ ಗುರುಗಳಾದ ಪರಮಪೂಜ್ಯ ಭಾರತಭೂಷಣ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಶ್ರೀ ಜೈನ ಮಠ ಮೂಡಬಿದಿರೆ ಇವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ, ಕಾರ್ಯಕಾರಿ ಸಮಿತಿಯ ಗೌರವಾದ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮುಂದಾಳತ್ವ ಹಾಗೂ ಸಹಕಾರದೊಂದಿಗೆ ತ್ಯಾಗಿ ನಿವಾಸ, ಸಭಾಭವನ, ಭೋಜನ ಶಾಲೆ, ತಡೆಗೋಡೆ ನಿರ್ಮಾಣದ ಶಿಲಾನ್ಯಾಸ ಪೂಜಾ ಕಾರ್ಯಕ್ರಮವು 30-5-2025ನೇ ಶುಕ್ರವಾರದಂದು ಜರಗಲಿರುವುದು.

ವೇಣೂರು: ವಾರ್ಷಿಕ ಮಹೋತ್ಸವ

Article Image

ವೇಣೂರು: ವಾರ್ಷಿಕ ಮಹೋತ್ಸವ

ವೇಣೂರು: ಭಗವಾನ್‌ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕ ಮಹೋತ್ಸವವು ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಪರಮ ಪೂಜ್ಯ "ಭಾರತಭೂಷಣ" ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ದಿನಾಂಕ 1-06-2025ನೇ ಆದಿತ್ಯವಾರದಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರುಗಲಿರುವುದು.

ಉಪನ್ಯಾಸ ಕಾರ್ಯಕ್ರಮ

Article Image

ಉಪನ್ಯಾಸ ಕಾರ್ಯಕ್ರಮ

ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಬಹು ನಿರೀಕ್ಷಿತ ಮತ್ತು ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದಾದ ಪ್ರತಿ ತಿಂಗಳು ಕೊನೆಯ ಶನಿವಾರ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಮಾಸಿಕ ಸರಣಿ ಉಪನ್ಯಾಸ ಮಾಲಿಕೆ ದಿವ್ಯ ವಾಣಿ ಯು ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ಪೀಠದ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಈಗಾಗಲೇ ಎರಡು ಉಪನ್ಯಾಸಗಳು ತುಂಬಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಮೂರನೇ ಉಪನ್ಯಾಸ ಕಾರ್ಯಕ್ರಮವನ್ನು ಹುಬ್ಬಳ್ಳಿ ಗೋಕುಲ ರಸ್ತೆ ಮಾನಸಗಿರಿ ಇಲ್ಲಿನ ಮಹಾವೀರ ಭವನದಲ್ಲಿ ದಿನಾಂಕ 31-5-2025ರಂದು ಶನಿವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರು ಜೈನ ಅಧ್ಯಯನ ಪೀಠದ ಸಂಯೋಜಕರೂ ಆದ ಡಾ. ಜಿನದತ್ತ ಹಡಗಲಿ ಇವರು ವಹಿಸಲಿದ್ದು ಹಿರಿಯ ಉಪನ್ಯಾಸಕ ಡಾ. ವೈ ಎಮ್ ಭಜಂತ್ರಿ ಇವರು ಶೃತ ಪಂಚಮಿ ಮತ್ತು ಅದರ ಮಹತ್ವ ಕುರಿತಾಗಿ ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಇಲ್ಲಿನ ತ್ರಿಕೂಟ ಬಸದಿಯ ಭ. ಮಹಾವೀರ ಜೈನ ಹಿತವರ್ಧಕ ಸಂಘದ ಮತ್ತು ಸನ್ಮತಿ ಮಹಿಳಾ ಮಂಡಳದ ಪದಾಧಿಕಾರಿಗಳ ಗೌರವ ಉಪಸ್ಥಿತಿ ಇರಲಿದೆ. ಟ್ರಸ್ಟಿನ ಗೌರವಾಧ್ಯಕ್ಷ ಡಾ. ಅಜಿತ್ ಪ್ರಸಾದ, ಹುಬ್ಬಳ್ಳಿ ಜೈನ ಅಧ್ಯಕ್ಷ ರಾಜೇಂದ್ರ ಬೀಳಗಿ, ಉಪಾಧ್ಯಕ್ಷ ವಿಮಲ್ ತಾಳಿಕೋಟಿ, ಜೈನ್ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ್ ಸೇರಿದಂತ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಟ್ರಸ್ಟಿನ ಕಾರ್ಯದರ್ಶಿ ಹಾಗೂ ಉಪನ್ಯಾಸ ಮಾಲಿಕೆಯ ಪ್ರೇರಕರೂ ಆದ ಎಸ್.ಆರ್. ಮಲ್ಲಸಮುದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಂತರಾಜ ಮಲ್ಲಸಮುದ್ರ

ಹೊಂಬುಜ: ಶ್ರುತ ಪಂಚಮಿ ಆಚರಣೆ

Article Image

ಹೊಂಬುಜ: ಶ್ರುತ ಪಂಚಮಿ ಆಚರಣೆ

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪೂರ್ವ ಪರಂಪರೆಯಂತೆ ನಡೆದುಕೊಂಡು ಬಂದಿರುವ 'ಶ್ರುತ ಪಂಚಮಿ ಮಹೋತ್ಸವ' ವನ್ನು ಮೇ. 31, 2025ರ ಶನಿವಾರದಂದು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನೆರವೇರಲಿದೆ. ಅಂದು 8 ವರ್ಷ ಮೇಲ್ಪಟ್ಟ ಜೈನ ಬಾಲಕ-ಬಾಲಕಿಯರಿಗೆ ಸಾಮೂಹಿಕ ವ್ರತೋಪದೇಶ ಹಾಗೂ ಎರಡರಿಂದ ಮೂರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ವಿಶೇಷ ಜಿನಪೂಜೆಯೊಂದಿಗೆ ಶಾಸ್ತ್ರಗಳನ್ನು ಪೂಜಿಸಿ, ಪಠಿಸಿ ಜಿನವಾಣಿಗೆ ಭಕ್ತಿಭಾವದ ನಮನ ಸಲ್ಲಿಸಲಾಗುವುದು. ಸದ್ಧರ್ಮ ಬಾಂಧವರು ಈ ಪೂಜಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ. ವ್ರತೋಪದೇಶ ಹಾಗೂ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವವರು ಶ್ರೀಮಠದ ಆಡಳಿತ ಕಾರ್ಯಾಲಯದಲ್ಲಿ ಸಂಪರ್ಕಿಸಬೇಕಾಗಿ ವಿನಂತಿ. ಸಂಪರ್ಕ: 08185-262722, 9481453653, 9483801460

ಕು. ಸಾನ್ವಿ ಮಲ್ಲಸಮುದ್ರಗೆ ಅಮೇರಿಕ ಅಧ್ಯಕ್ಷರಿಂದ ಶ್ರೇಷ್ಠ ಶೈಕ್ಷಣಿಕ ಅವಾರ್ಡ್

Article Image

ಕು. ಸಾನ್ವಿ ಮಲ್ಲಸಮುದ್ರಗೆ ಅಮೇರಿಕ ಅಧ್ಯಕ್ಷರಿಂದ ಶ್ರೇಷ್ಠ ಶೈಕ್ಷಣಿಕ ಅವಾರ್ಡ್

ಅಮೇರಿಕಾದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಗರದಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ ಧಾರವಾಡದ ಲೇಖಕ ಶಾಂತರಾಜ ಮಲ್ಲಸಮುದ್ರ ಇವರ ಮೊಮ್ಮಗಳಾದ *ಕುಮಾರಿ ಸಾನ್ವಿ ಸೂರಜ ಮಲ್ಲಸಮುದ್ರ* ಇವಳಿಗೆ 2024 ಶೈಕ್ಷಣಿಕ ವರ್ಷದಲ್ಲಿ "President's award for educational excellence" ದೊರೆತಿದೆ. ಶಿಕ್ಷಣದಲ್ಲಿ ಸರ್ವಾ0ಗೀಣ ಉತ್ತಮ ಪ್ರಗತಿ ಮತ್ತು ಹಿರಿಮೆಯನ್ನು ಗುರುತಿಸಿ ಕೊಡುತ್ತಿರುವ ಈ ಪ್ರತಿಷ್ಠಿತ ಅವಾರ್ಡ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ದಿನಾಂಕ 23-5-2024 ರಂದು ಪ್ರದಾನ ಮಾಡಲಾಯಿತು. ಇವಳು ಶಿಕ್ಷಣದಲ್ಲಿ ಮಾತ್ರವಲ್ಲ ಅತ್ಯಂತ ಸಾಹಸದ ಕ್ರೀಡೆಯಾದ "ಈಜು" (swimming ) ನಲ್ಲೂ ಓಲಂಪಿಕ್ ಆಯ್ಕೆಗಾಗಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾಳೆ. ಈಗಾಗಲೇ ಈ ಕ್ರೀಡೆಯಿಂದ ಹಲವು ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾಳೆ. ಭಾರತ ದೇಶದ ಹೆಮ್ಮೆ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸಿದ ಕು. ಸಾನ್ವಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ನಿಮ್ಮೆಲ್ಲರ ಪ್ರೋತ್ಸಾಹ ಶುಬೇಚ್ಚೆ ಆಶೀರ್ವಾದ ಇರಲೆಂದು ಅಪೇಕ್ಷಿಸುತ್ತೇವೆ.

ವಿಮಲ ತಾಳಿಕೋಟಿ -ಸೇವಾರತ್ನ

Article Image

ವಿಮಲ ತಾಳಿಕೋಟಿ -ಸೇವಾರತ್ನ

ಸಿಂಗಾಪುರ: ಬೆಂಗಳೂರಿನ ಸುಹಾಸ್ತಿ ಯುವ ಜೈನ ಮಿಲನ್ ಸಂಘಟನೆಯು ಸಿಂಗಾಪುರದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಜೈನ ಮಿಲನ್ ಸದಸ್ಯರ ಸಮಾವೇಶ "ಜಿನ ಸಮ್ಮಿಲನ"ದಲ್ಲಿ ಹುಬ್ಬಳ್ಳಿಯ ಸಮಾಜ ಸೇವಾಕರ್ತ ವಿಮಲ್ ತಾಳಿಕೋಟಿ ಅವರಿಗೆ, ಅವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸೇವೆಗಾಗಿ "ಸೇವಾರತ್ನ" ಪ್ರಶಸ್ತಿಯನ್ನು ನೀಡಿ ಅಭಿನಂದಿಸಿ ಗೌರವಿಸಲಾಯಿತು. ನವಗ್ರಹ ತೀರ್ಥ, ವರೂರಿನ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು, ಆರತಿಪುರ ಜೈನ ಮಠದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕರು, ಅಖಿಲ ಭಾರತ ಜೈನ ಮಿಲನ್ ಕಾರ್ಯಧ್ಯಕ್ಷ ಡಿ. ಸುರೇಂದ್ರಕುಮಾರ, ಅನಿತಾ ಸುರೇಂದ್ರಕುಮಾರ್, ಸುಹಾಸ್ತಿ ಜೈನ ಮಿಲನ್ ನ ಚಿತ್ತ ಜಿನೇಂದ್ರ ವಜ್ರ ಕುಮಾರ್, ಜಿನೇಂದ್ರ ಕಣಗಾವಿ ಯುವರಾಜ್ ಜೈನ್, ಮಾಳ ಹರ್ಷೇಂದ್ರ ಉಪಸ್ಥಿತರಿದ್ದರು. ಕರ್ನಾಟಕದಿಂದ 250ಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಿಂಗಪುರದ ಜೈನ್ ಸಮಾಜ ಅತ್ಯುತ್ತಮ ಸಹಕಾರ ನೀಡಿದರು. ಶಾಂತಿನಾಥ ಕೆ ಹೋತಪೇಟಿ

ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನಾ ಮಹೋತ್ಸವ

Article Image

ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನಾ ಮಹೋತ್ಸವ

ಸಹ್ಯಾದ್ರಿಯ ತಪ್ಪಲಿನಲ್ಲಿರುವ ಮಲೆನಾಡಿನ ಸುಂದರ ನಗರ ಶಿವಮೊಗ್ಗದ ಮಹಾವೀರ ನಗರದಲ್ಲಿರುವ ‌ಭಗವಾನ್‌ 1008 ಶ್ರೀ ಆದಿನಾಥ ಸ್ವಾಮಿ ಜಿನಮಂದಿರದಲ್ಲಿ ಮಾನ ಸ್ಥಂಭೋಪರಿ 24 ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನೆ, ನೂತನ ಶಿಲಾಮಯ ಗರ್ಭಗುಡಿಯಲ್ಲಿ ಮಹಾಮಾತೆ ಶ್ರೀ ಪದ್ಮಾವತಿ ದೇವಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನೀ ದೇವಿ ಮತ್ತು ಕ್ಷೇತ್ರಪಾಲ ಪ್ರತಿಷ್ಠಾಪನೆ, ನಾಗ ಪ್ರತಿಷ್ಠೆ ಮುಂತಾದ ಕಾರ್ಯಕ್ರಮಗಳನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಮಾರ್ಗದರ್ಶನ ಹಾಗೂ ನೇತೃತ್ವ ಮತ್ತು ನಾಡಿನ ಸಮಸ್ತ ಭಟ್ಟಾರಕ ಶ್ರೀಗಳವರ ಪಾವನ ಸಾನ್ನಿಧ್ಯದಲ್ಲಿ ಇಂದಿನಿಂದ (ಮೇ. 28) ಮೊದಲ್ಗೊಂಡು ಮೇ. 30ರವರೆಗೆ ಮೂರು ದಿನಗಳ ಕಾಲ ವೈಭವಪೂರ್ಣವಾಗಿ ಜರುಗಲಿದೆ.

'ಭುವನವಾಹಿನಿ' ಅಂಕಣಕಾರ ಎಂ.ರತ್ನ ಕುಮಾರ್ ರಿಗೆ ಕ.ಸಾ.ಪ. ಸನ್ಮಾನ

Article Image

'ಭುವನವಾಹಿನಿ' ಅಂಕಣಕಾರ ಎಂ.ರತ್ನ ಕುಮಾರ್ ರಿಗೆ ಕ.ಸಾ.ಪ. ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ 'ಹಿರಿಯ ಕವಿ ಮನೆ ಭೇಟಿ' ಸರಣಿ ಕಾರ್ಯಕ್ರಮದನ್ವಯ ಈ ಬಾರಿ ಕನ್ನಡದ ದೈನಿಕಗಳಾದ ನವ ಭಾರತ, ಉದಯವಾಣಿ, ಹೊಸದಿಗಂತ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಜೈನ ಮಾಸಿಕ 'ಭುವನವಾಹಿನಿ' ಪತ್ರಿಕೆಯ ಅಂಕಣಕಾರರಾಗಿರುವ ಹಿರಿಯ ಕನ್ನಡ, ತುಳು ಸಾಹಿತಿ ರತ್ನ ಕುಮಾರ್ ಎಂ. ಅವರ ಮನೆಗೆ ಭೇಟಿ ನೀಡಿ ಅವರನ್ನು ಹಾರ, ಶಾಲು, ಪೇಟ, ಶ್ರೀಫಲಾದಿಗಳನ್ನು ಸಮರ್ಪಿಸಿ, ಸನ್ಮಾನಿಸಿ, ಪುಸ್ತಕ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನ ಕುಮಾರರು, ತಾನು ಬೆಳೆದು ಬಂದ ಹಾದಿಯನ್ನು ಹಂಚಿಕೊಂಡು "ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಸಾಹಿತಿಗಳಂತೂ ಹೊಸ ದೃಷ್ಟಿ, ಹೊಸ ಸೃಷ್ಟಿಯೊಂದಿಗೆ ಹೊಸ ಕೊಡುಗೆಗಳನ್ನು ನೀಡುತ್ತಲೇ ಇರಬೇಕು. ಹಿರಿಯ ಕವಿಗಳನ್ನು ಮನೆಗೇ ಬಂದು ಆತ್ಮೀಯವಾಗಿ ಸನ್ಮಾನಿಸುವ ಪರಿಷತ್ತಿನ ಕಾರ್ಯಕ್ರಮ ಅಭಿನಂದನೀಯ" ಎಂದು ನುಡಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ್ ಎಸ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿದರು. ಕ. ಸಾ. ಪ. ಕೇಂದ್ರ ಮಾರ್ಗದರ್ಶನ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂಂತಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಗಣೇಶ ಪ್ರಸಾದಜೀ ರತ್ನ ಕುಮಾರ್ ರ ಬದುಕು ಬರಹಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ, ಜಿಲ್ಲಾ ಪ್ರತಿನಿಧಿ ಸನತ್ ಕುಮಾರ್ ಜೈನ್, ರತ್ನ ಕುಮಾರ್ ರ ಪತ್ನಿ ಎಂ. ಎನ್. ಇಂದಿರಾ, ಪುತ್ರ ಅಜಿತ ಕುಮಾರ್, ಸೊಸೆ ಪ್ರದೀಪ್ತಾ ಅಜಿತ್, ಮೊಮ್ಮಕ್ಕಳು ಮತ್ತು ರತ್ನ ಕುಮಾರ್ ರ ಅಭಿಮಾನಿ ವೃಂದದವರು ಉಪಸ್ಥಿತರಿದ್ದರು. ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು.

ಹಿರಿಯ ಸಂಶೋಧಕ ಡಾ. S. D. ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ

Article Image

ಹಿರಿಯ ಸಂಶೋಧಕ ಡಾ. S. D. ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ದಿನಾಂಕ 16.5.25ರಂದು ವಿಶೇಷ ಪೂಜೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸಂಶೋಧಕರೂ ಡಾ. ಹಾಮಾನಾ ಸಂಶೋಧನಾ ಕೇಂದ್ರ ಉಜಿರೆಯ ನಿರ್ದೇಶಕರೂ ಅದ ಡಾ. S. D. ಶೆಟ್ಟಿ ಹಾಗೂ ಸುಗುಣ ಶೆಟ್ಟಿ ದಂಪತಿಗಳನ್ನು ಅವರ ಸಾಧನೆ ಮತ್ತು ಮದುವೆಯ 50ನೇ ವರ್ಷದ ಪ್ರಯುಕ್ತ ಶ್ರೀ ಕ್ಷೇತ್ರ ಚಂದ್ರಪುರ ಆಡಳಿತ ಮಂಡಳಿಯ ಪರವಾಗಿ ಸಮಿತಿ ಸಂಚಾಲಕರು ಡಾ. ಜಯಕೀರ್ತಿ ಜೈನ್ ನೇತೃತ್ವದಲ್ಲಿ ಗೌರವಿಸಲಾಯಿತು. ಉಪಾಧ್ಯಕ್ಷ ಶ್ರೀ ಜಿನರಾಜ ಪೂವಣಿ ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ ಕೊಕ್ಕಡ ಶಾಖೆಯ ಪ್ರಬಂಧಕರಾದ ಪಿ. ಅತೀಶಯ ಜೈನ್, ರಾಣಿ ಕಾಳಲಾ ದೇವಿ ಜೈನ್ ಮಹಿಳಾ ಸಮಾಜದ ರಕ್ಷಾ ಪುರೋಹಿತರಾದ ಅರಹಂತ ಇಂದ್ರ, ಜಿನೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಪ್ರಥಮ ಬಾರಿಗೆ ಧ್ವನಿ -ಬೆಳಕು ಸಂಯೋಜನೆಯ ಸಮವಸರಣ: ಜೈನ ಆಧ್ಯಾತ್ಮಿಕ ಪ್ರಪಂಚಕ್ಕೆ ಹುಬ್ಬಳ್ಳಿಯ ಕೊಡುಗೆ

Article Image

ಪ್ರಥಮ ಬಾರಿಗೆ ಧ್ವನಿ -ಬೆಳಕು ಸಂಯೋಜನೆಯ ಸಮವಸರಣ: ಜೈನ ಆಧ್ಯಾತ್ಮಿಕ ಪ್ರಪಂಚಕ್ಕೆ ಹುಬ್ಬಳ್ಳಿಯ ಕೊಡುಗೆ

ಹುಬ್ಬಳ್ಳಿಯ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಗೋಕುಲ ರಸ್ತೆಯ ಮಾನಸಗಿರಿಯಲ್ಲಿ ವರ್ಷಗಳ ಹಿಂದೆ ಚಿಕ್ಕ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದ ಭಗವಾನ್ ಶ್ರೀ ಮಹಾವೀರ ಜಿನಮಂದಿರ ಈಗ ವಿಶಾಲ ತ್ರಿಕೂಟ ಜಿನಮಂದಿರವಾಗಿ ಪರಿವರ್ತಿತ ಗೊಂಡಿದೆ. ಉತ್ತರ ಭಾರತದ ನೂತನ ಮಂದಿರಗಳ ಶೈಲಿಯಲ್ಲಿ ಅತ್ಯಂತ ಸುಂದರವಾಗಿ ಎರಡು ಮಹಡಿಗಳಲ್ಲಿ (ನೆಲ ಮಹಡಿ ಹಾಗು ಮೊದಲ ಮಹಡಿ) ನಿರ್ಮಾಣಗೊಂಡಿರುವ ಮಂದಿರ ಈಗ ಜೈನ ಬಾಂಧವರಿಗಾಗಿ ಹುಬ್ಬಳ್ಳಿಯ ಕೊಡುಗೆ ಆಗಿದೆ. ಮೊದಲ ಮಹಡಿಯಲ್ಲಿ ವಿವಿಧ ಚಿತ್ತಾರಗಳಿಂದ ಅಲಂಕೃತ ಮೂರು ವಿಶಾಲ ವೇದಿಗಳಲ್ಲಿ ಮಧ್ಯದಲ್ಲಿ ಮೂಲನಾಯಕ ಶ್ರೀ ಮಹಾವೀರ ತೀರ್ಥಂಕರರು, ಎಡ ವೇದಿಯ ಮೇಲೆ 12 ನೆಯ ಶ್ರೀ ವಾಸುಪೂಜ್ಯ ತೀರ್ಥಂಕರರು, ಬಲ ವೇದಿಯ ಮೇಲೆ 22ನೆಯ ಶ್ರೀ ನೇಮಿನಾಥ ತೀರ್ಥಂಕರರ ನಯನ ಮನೋಹರ ಪ್ರತಿಮೆಗಳು ವಿರಾಜಮಾನಗೊಂಡಿದ್ದು ಜಿನಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಮಾನಸಗಿರಿಯ ಶ್ರೀ ಮಹಾವೀರ ಭವನದ ಪರಿಸರವನ್ನು ಪ್ರವೇಶಿಸಿ ಒಳನಡೆದಾಗ ಭವ್ಯ ಮಾನಸ್ತoಭ ಶ್ರದ್ಧಾಳುಗಳನ್ನು ಕೈ ಬೀಸಿ ಕರೆಯುತ್ತದೆ. ಚತುರ್ಮುಖ ಜಿನಬಿಂಬ ದರ್ಶನ ಮಾಡುತ್ತ ಮಾನಸ್ತoಭ ಪ್ರದಕ್ಷಿಣೆ ಹಾಕಿ ಬಸದಿಯ ಕಡೆ ಹೆಜ್ಜೆ ಹಾಕಿದಾಗ. ಕಣ್ಣುಗಳು ಅರಳುತ್ತವೆ, ಅಚ್ಚರಿ ಉಂಟಾಗುತ್ತದೆ, ಮೈ ಮನಗಳು ಪುಳಕಿತಗೊಳ್ಳುತ್ತವೆ, ಸಮವಸರಣದ ಭವ್ಯ ರಚನೆ ನಮ್ಮನ್ನು ತನ್ನತ್ತ ಎಳೆದುಕೊಳ್ಳುತ್ತದೆ. ಏನು ಭವ್ಯ, ಏನು ದಿವ್ಯ, ಅಮಮ, ಸಮವಸರಣವು ಎಂದು ಕೈಗಳು ತನ್ನಿಂದ ತಾನೇ ಸಮವಸರಣದ ಒಡೆಯನಿಗೆ ನಮಿಸುತ್ತವೆ. ಆದಿ ಬ್ರಹ್ಮ, ಪ್ರಥಮ ಜಿನೇಶ ಆದಿನಾಥ ಸ್ವಾಮಿಯ ಸುಂದರಾತಿಸುಂದರ ಸಮವಸರಣ ಮನವನ್ನು ಪ್ರಫುಲ್ಲಿತಗೊಳಿಸುತ್ತದೆ, ಮಸ್ತಕ ಜಿನಚರಣಗಳಲ್ಲಿ ಬಾಗುತ್ತದೆ. ಶಾಸ್ತ್ರಗಳಲ್ಲಿ ಬರುವ ವರ್ಣನೆ ಗನುಸಾರ ಕ್ರಮಬದ್ಧ ರಚನೆ ಯನ್ನು ನೋಡುತ್ತಾ ಇರುವಂತೆ ಧ್ವನಿ ಮತ್ತು ಬೆಳಕಿನ ಆಟ ಆರಂಭವಾಗುತ್ತದೆ. ವರ್ಣಮಯ ಬೆಳಕಿನೊಂದಿಗೆ ಧ್ವನಿಯು ಜೊತೆಗೂಡಿ ಸಮವಸರಣದ ಸ್ವರೂಪವನ್ನು ವಿವರಿಸುತ್ತ ಹೋಗುತ್ತಿರಲು ನಾವು ತೀರ್ಥಂಕರರ ಕಾಲದಲ್ಲಿ ಅವರ ಸಮವಸರಣದಲ್ಲಿ ಇರುವೆವೇ ಎಂದು ಭಾಸವಾಗುತ್ತದೆ. ಎಷ್ಟು ಹೊತ್ತು ಕುಳಿತರೂ ಬಿಟ್ಟು ಹೋಗುವ ಮನಸ್ಸಾಗದು. ಇಂಥ ಧ್ವನಿ ಬೆಳಕು ಸಂಯೋಜನೆ ಇರುವ ಸಮವಸರಣ ರಚನೆ ಇದೇ ಮೊದಲು ಎಂದು ಹೇಳಲಾಗಿದೆ. ಇಂಥ ಸಮವಸರಣವನ್ನು, ಜೈನ ಆಧ್ಯಾತ್ಮಿಕ ಪ್ರಪಂಚಕ್ಕೆ ಕೊಡಮಾಡಿರುವುದು ಹುಬ್ಬಳ್ಳಿಗರಿಗೆ ಹೆಮ್ಮೆ, ಶಾಂತ ಪರಿಸರ, ಹಸಿರು ವಾತಾವರಣ, ಹುಬ್ಬಳ್ಳಿಯ ಪಿಕನಿಕ್ ತಾಣ ತೋಳನ ಕೆರೆಯ ಸುಂದರ ನೋಟ, ಬಸದಿ ದರ್ಶನ ನಂತರ ಸುತ್ತಾಡಬಹುದಾದ ಸಮೀಪದಲ್ಲೇ ಇರುವ ತೋಳನಕೆರೆ ಉದ್ಯಾನ, ಬಸದಿಯಲ್ಲಿ ಕುಳಿತುಕೊಂಡರೆ ಸಂಸಾರದ ತಾಪತ್ರಯಗಳೇ ಮರೆತು ಹೋಗುವ ಶಾಂತಿಯ ಅನುಭವ ಆಗುತ್ತದೆ. ಬನ್ನಿ ಬಸದಿಯ ದರ್ಶನ ಮಾಡಿ ಹುಬ್ಬಳ್ಳಿಯವರು ಮತ್ತು ಹುಬ್ಬಳ್ಳಿಗೆ ಬರುವವರು. ಒಂದು ಸಂಗತಿ ನಿಮಗೂ ಗೊತ್ತು ಸಮವಸರಣ ಎಂದರೆ ಸಮಅವಸರ ಅಂದರೆ ಸರ್ವರಿಗೂ ಸಮಾನ ಅವಕಾಶ ಇರುವ ಧರ್ಮಸಭೆ. ಇಲ್ಲಿ ಭವ್ಯ ಜೀವಿಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಅಭವ್ಯರಿಗೆ ದರ್ಶನ ಮಾಡುವ ಮನಸ್ಸೇ ಬರುವುದಿಲ್ಲ. ಇಂಥ ಭವ್ಯ ನಿರ್ಮಾಣ 20 ವರ್ಷಗಳ ತಪಸ್ಸಿನ ಮಧುರ ಫಲ. ಭಗವಾನ್ ಮಹಾವೀರ ಜೈನ ಹಿತವರ್ಧಕ ಸಂಘ, ಬಸದಿ ನಿರ್ಮಾಣ ಸಮಿತಿ, ಪಂಚಕಲ್ಯಾಣ ಮಹೋತ್ಸವ ಸಮಿತಿ, ಸನ್ಮತಿ ಮಹಿಳಾ ಮಂಡಲಗಳ ಸಂಯುಕ್ತ ಶ್ರಮ, ಹುಬ್ಬಳ್ಳಿ ದಿಗಂಬರ ಜೈನ ಸಮಾಜ ಹಾಗು ಅನ್ಯ ಸಂಘಟನೆಗಳ ಸಹಕಾರಗಳ ಮಿಶ್ರಣ ಒಂದು ತೀರ್ಥವನ್ನೇ ನಿರ್ಮಿಸಿವೆ. ಬಸದಿಯ ಬಲಭಾಗದಲ್ಲಿ ಬ್ರಹ್ಮದೇವರ ಆಲಯವನ್ನು ನಿರ್ಮಿಸಲಾಗಿದ್ದು ಇಲ್ಲಿ ಪ್ರತಿಷ್ಠಾಪನೆ ಗೊಂಡ ಬ್ರಹ್ಮ ದೇವರನ್ನು ಮಕ್ಕಳ ಬ್ರಹ್ಮದೇವರು ಎಂದು ಕರೆಯಲಾಗಿದೆ. 280 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಗದ್ದೆಯೊಂದರಲ್ಲಿ ಭೂ ಗರ್ಭದಲ್ಲಿ ಪ್ರಾಪ್ತವಾಗಿ ಕುಟುಂಬವೊಂದರ ಕುಲದೇವರಾಗಿ ಪೂಜೆಗೊಳ್ಳುತ್ತಿದ್ದ ಬ್ರಹ್ಮ ದೇವ ಆ ಕುಟುಂಬದವರಿಂದಲೇ ಇಂದು ತ್ರಿಕೂಟ ಜಿನಾಲಯ ಕ್ಷೇತ್ರಪಾಲ ಮಂದಿರದಲ್ಲಿ ನೆಲೆಗೊಂಡಿದ್ದಾನೆ. ಸುಂದರ ಆಲಯ ಬ್ರಹ್ಮ ದೇವನಿಗಾಗಿ ನಿರ್ಮಿಸಲ್ಪಟ್ಟಿದೆ. ತ್ರಿಕೂಟ ಜಿನಾಲಯದ ದರ್ಶನ ಮಾಡಿ ಪುಣ್ಯ ಭಾಜನರಾಗಿ: ನೂತನ ಜಿನಮಂದಿರದ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವು 11 ರಿಂದ 15 ಮೇ 2025ರವರೆಗೆ ಪರಮ ಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ, ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕರು, ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರ ಪಾವನ ಸಾನಿಧ್ಯ ಹಾಗು ಮಾರ್ಗದರ್ಶನ ದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು. ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು ಸಾನಿಧ್ಯ ನೀಡಿದರು. ಹುಬ್ಬಳ್ಳಿಯ ಇತರ ಬಸದಿಗಳು: ಹುಬ್ಬಳ್ಳಿಯ ಪ್ರಾಚೀನ ಜಿನಮಂದಿರ 1300 ವರ್ಷ ಪುರಾತನ ಶ್ರೀ ಅನಂತನಾಥ ಬಸದಿ (ಕಿಲ್ಲೆ ಬಸದಿ)450 ವರ್ಷಗಳಿಗೂ ಪುರಾತನ ಶ್ರೀ ಪಾರ್ಶ್ಶ್ವನಾಥ ಬಸದಿ. ಇಲ್ಲಿನ ಶ್ರೀ ಪದ್ಮಾವತಿ ಅಮ್ಮ ನ ಖ್ಯಾತಿಯಿಂದಾಗಿ ಪದ್ಮಾವತಿ ಬಸದಿ ಎಂದೇ ಪ್ರಸಿದ್ಧಿ ಪ್ರಥಮ ಜಿನೇಶ ಆದಿನಾಥರು ಮೂಲನಾಯಕರಾಗಿರುವ, ನಡುವಿನ ಬಸದಿ ಎಂದೂ ಕರೆಯಲ್ಪಡುವ ಬಸದಿ ಅಮೃತ ಮಹೋತ್ಸವ ಆಚರಿಸಿಕೊಂಡು ಭಕ್ತಾ ಮರ ಶ್ಲೋಕ- ಚಿತ್ರಗಳ ಚಿತ್ತಾರದೊಂದಿಗೆ ಭಕ್ತಾಮರ ಜಿನಾಲಯವಾಗಿದೆ. ಮಹಾವೀರ ಗಲ್ಲಿಯ ಶ್ರೀ ಶಾಂತಿನಾಥ ಬಸದಿ ದೊಡ್ಡ ಬಸದಿ ಎಂದೂ ಕರೆಯಲ್ಪಡುತ್ತದೆ, ಹುಬ್ಬಳ್ಳಿ ಜೈನ ಸಮಾಜಕ್ಕೆ ಕೇಂದ್ರ ಬಸದಿ, ಆರಂಭ ಕಾಲದಿಂದಲೂ ಸಮಾಜದ ಚಟುವಟಿಕೆಗಳ ತಾಣ ಪಕ್ಕದಲ್ಲಿ ಶಾಂತಿನಾಥ ಸಾಂಸ್ಕೃತಿಕ ಭವನ ಇಲ್ಲಿಂದ ಮುಂದೆ ಶ್ರೀ ಚಂದ್ರಪ್ರಭ ಬಸದಿ, ಶತಮಾನ ಕಂಡು ಮುನ್ನಡೆದಿದೆ, ಸ್ಟೇಷನ್ ರಸ್ತೆಯ ದಿಗಂಬರ ಜೈನ ಬೋರ್ಡಿಂಗ್ ನ ಶ್ರೀ ಚಂದ್ರಪ್ರಭ ಬಸದಿ, ವಿದ್ಯಾರ್ಥಿ ನಿಲಯ, ಸಮುದಾಯ ಭವನ ಸಹಿತ ಹುಬ್ಬಳ್ಳಿ ವ್ಯಾಪ್ತಿಯಲ್ಲೇ ಬರುವ ಬುಡರಸಿಂಗಿ, ನವನಗರ, ಅಮರಗೋಳಗಳಲ್ಲೂ ಬಸದಿಗಳಿವೆ. ಹುಬ್ಬಳ್ಳಿ ಸಮೀಪದ ದರ್ಶನೀಯ ಸ್ಥಳಗಳು ನವಗ್ರಹ ತೀರ್ಥ, ಅರಟಾಳ, ಲಕ್ಷ್ಮೇ ಶ್ವರ, ಲಕ್ಕುಂಡಿ, ಅಮ್ಮಿನಭಾವಿ, ಸೋಂದಾ, ಕಸಮಳಗಿ ಶಾಂತಿನಾಥ ಕೆ ಹೋತಪೇಟಿ

ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ

Article Image

ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ

ಬಂಟ್ವಾಳ : ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ ಹಾಗೂ ಡಾ. ಪ್ರಭಾಚಂದ್ರ ಜೈನ್ ರವರ ಅಭಿನಂದನಾ ಕಾರ್ಯಕ್ರಮ ದಿನಾಂಕ 4/5/2025ನೇ ಆದಿತ್ಯವಾರ ಸಿದ್ಧಕಟ್ಟೆ ನಲ್ಲೂರಂಗಡಿ ಬಸದಿಯ ಸ್ವಸ್ತಿಕ್ ಸಭಾಭವನದಲ್ಲಿ ನಡೆಯಿತು. ಜೈನ್ ಮಿಲನ್ ಬಂಟ್ವಾಳದ ಅಧ್ಯಕ್ಷರಾದ ಮಧ್ವರಾಜ್ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಮಾರು ನಾಲ್ಕೂವರೆ ದಶಕಗಳಿಂದ ಸಿದ್ಧಕಟ್ಟೆಯಲ್ಲಿ ಜನಪ್ರಿಯ ವೈದ್ಯರಾಗಿರುವ ಪ್ರಭಾಚಂದ್ರ ಜೈನ್ ಇವರನ್ನು ಉಭಯ ಜೈನ್ ಮಿಲನ್‌ಗಳ ವತಿಯಿಂದ ಸನ್ಮಾನಿಸಲಾಯಿತು. ಡಾ. ಪ್ರಭಾಚಂದ್ರ ಜೈನ್ ಇವರನ್ನು ಸನ್ಮಾನಿಸಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಮಾತನಾಡುತ್ತಾ ಡಾ. ಪ್ರಭಾ ಚಂದ್ರ ಜೈನ್ ಕೇವಲ ವೈದ್ಯರು ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು, ಇವರ ಅಭಿನಂದನಾ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದ್ದು ಇದರಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದರು. ನಲ್ಲೂರoಗಡಿ ಬಸದಿಯ ಮೊಕ್ತೇಸರರು ಮತ್ತು ಮಾಜಿ ಮಂತ್ರಿಗಳಾದ ಕೆ. ಅಭಯಚಂದ್ರ ಜೈನ್ ಮಾತನಾಡಿ ಜೈನ್ ಮಿಲನ್ ಗಳು ಸಮಾಜಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದೆ, ಸಿದ್ದಕಟ್ಟೆಯಲ್ಲಿ ಡಾ. ಪ್ರಭಾಚಚಂದ್ರ ಜೈನ್‌ರವರ ಆರೋಗ್ಯ ಸೇವೆಯನ್ನು ಪಡೆಯದ ವ್ಯಕ್ತಿಗಳಿಲ್ಲ ಅವರು ಕೇವಲ ವೈದ್ಯರಾಗಿರದೆ , ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು . ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೂಡಬಿದ್ರೆಯ ನಿವೃತ್ತ ಕನ್ನಡ ಅಧ್ಯಾಪಕರಾದ ಶ್ರೀಧರ್ ಜೈನ್ ಅಭಿನಂದನ ಭಾಷಣ ಮಾಡಿದರು. ಡಾ. ಸುದೀಪ್ ಸಿದ್ದಕಟ್ಟೆ ಸನ್ಮಾನ ಪತ್ರವನ್ನು ವಾಚಿಸಿದರು. ರಶ್ಮಿತ ಯುವರಾಜ್ ಜೈನ್ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸುಭಾಶ್ಚಂದ್ರ ಜೈನ್, ಜಯರಾಜ ಕಂಬಳಿ, ರಾಜೇಶ್ ಕುಮಾರ್, ಪುಷ್ಪರಾಜ್, ಶಶಿಕಲಾ ಮತ್ತು ಗೀತಾ ಜಿನ ಚಂದ್ರ ಉಪಸ್ಥಿತರಿದ್ದರು. ಸಿದ್ಧಕಟ್ಟೆಯ ಶ್ರೀ ಅನಂತಪದ್ಮ ಮಹಿಳಾ ಸಂಘ, ಸ್ವಸ್ತಿಕ್ ಯುವಜನ ಸಂಘ, ಮೂಡಬಿದ್ರೆಯ ಸರ್ವಮಂಗಳ ಮಹಿಳಾ ಸಂಘದ ಅಧ್ಯಕ್ಷರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಶಾ ಸುಧಾಕರ್ ಮತ್ತು ಅರ್ಪಿತ ಪ್ರಾಣೇಶ್ ಪ್ರಾರ್ಥಿಸಿದರು. ಉದಯ್ ಕುಮಾರ್ ಜೈನ್ ಸ್ವಾಗತಿಸಿ ನಿರಂಜನ್ ಕುಮಾರ್ ಧನ್ಯವಾದ ನೀಡಿದರು. ಭರತ್ ಕುಮಾರ್ ಮತ್ತು ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು.

First Previous

Showing 7 of 21 pages

Next Last