Tue, May 6, 2025
ತುಮಕೂರು: ವೈಭವದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಆಚರಣೆ
ಶಾಂತಿ ಮತ್ತು ಅಹಿಂಸೆಯ ಪ್ರತಿಪಾದಕ ಭಗವಾನ್ ಮಹಾವೀರರ 2624 ನೆಯ ಜನ್ಮ ಜಯಂತಿಯನ್ನು ತುಮಕೂರು ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ವತಿಯಿಂದ ವೈಭವದಿಂದ ಆಚರಿಸಲಾಯಿತು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜೆ, ಅಭಿಷೇಕ, ಆರಾಧನೆಗಳು ನಡೆದವು. ನಂತರ ನಗರದ ಚಿಕ್ಕಪೇಟೆಯ ಶ್ರೀ ಪಾರ್ಶ್ವನಾಥ ಜಿನ ಮಂದಿರದ ತ್ರಿಲೋಕ್ ಭವನದಿಂದ ಮೆರವಣಿಗೆ ಸಾಗಿದ ಭಕ್ತರು, ಗ್ರಾಮ ದೇವತೆ ವೃತ್ತ, ಚಿಕ್ಕಪೇಟೆ ವೃತ್ತ, ಚಿಕ್ಕಪೇಟೆಯ ಮುಖ್ಯರಸ್ತೆ, ಕೋಟೆ ಆಂಜನೇಯ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಎಂ.ಜಿ. ರಸ್ತೆ, ಬಿ.ಎಚ್. ರಸ್ತೆಯ ಮೂಲಕ ಸಾಗಿ ಜೈನ ಭವನದಲ್ಲಿ ಸಮಾವೇಶಗೊಂಡರು. ತುಮಕೂರು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಸಭೆಯನ್ನ ಉದ್ದೇಶಿಸಿ ಮಾತನಾಡಿ ಭಗವಾನ್ ಶ್ರೀ ಮಹಾವೀರರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶಾಂತಿ, ಅಹಿಂಸೆಗೆ ಸಹಕರಿಸಬೇಕೆಂದರು. ಸವಿತಾ, ಸುಭೋದ್ ಕುಮಾರ್ ಜೈನ್ ಇಂದ್ರ ಇಂದ್ರಾಣಿಯರಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಾವೀರ ಜಯಂತಿ ಅಂಗವಾಗಿ ನಗರದ ಸುರೇಶ್ ಬಾಂಡ್ ಟೀ ವತಿಯಿಂದ ಹಾಗೂ ಜೈನ ಸಮಾಜದ ವತಿಯಿಂದ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು- ಹಂಪಲುಗಳನ್ನು ವಿತರಿಸಲಾಯಿತು. ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಟಿ. ಡಿ. ಬಾಹುಬಲಿ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಮಂದರಗಿರಿ ಯಾತ್ರಾ ಸಂಘದ ಅಧ್ಯಕ್ಷ ಕೆ.ಪಿ. ವೀರೇಂದ್ರ, ಡೈರಿ ರಾಜೇಂದ್ರ ಪ್ರಸಾದ್, ಟಿ.ಜೆ. ನಾಗರಾಜ್, ಎ. ಆರ್. ಬ್ರಹ್ಮಪ್ರಕಾಶ್, ಜ್ವಾಲಾಮಾಲಿನಿ, (ಎಂ.ಎಲ್.ಎ. ಮಾಲಮ್ಮ)ಮಂಜುಳಾ ಚಂದ್ರಪ್ರಭ, ಎಸ್.ವಿ. ಜಿನೇಶ್, ಬಿ .ಎಸ್ ಪಾರ್ಶ್ವನಾಥ, ವಿನಯ್ ಸೇರಿದ್ದಂತೆ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ಸದಸ್ಯರುಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಜೈನ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಜೆ. ರoಗನಾಥ - ತುಮಕೂರು.