Fri, May 2, 2025
ಪಠ್ಯಕ್ರಮ ಅನುಷ್ಠಾನ ಬೆಂಬಲ ಕಾರ್ಯಕ್ರಮ
ಸತ್ತೂರು, ಧಾರವಾಡ : ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಶಿಕ್ಷಣ ಘಟಕವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಪ್ರಾಂತೀಯ ನೋಡಲ್ ಕೇಂದ್ರ, ಜೆ.ಎನ್.ಎಂ.ಸಿ. ಬೆಳಗಾವಿಯ ಸಹಯೋಗದೊಂದಿಗೆ ಏಪ್ರಿಲ್ 03 ಮತ್ತು 04, 2025ರಂದು “ಪಠ್ಯಕ್ರಮ ಅನುಷ್ಠಾನ ಬೆಂಬಲ ಕಾರ್ಯಕ್ರಮ” ಎಂಬ ವಿಷಯದ ಮೇಲೆ 2 ದಿನಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರವು ಅಧ್ಯಾಪಕರಿಗೆ, ವೈದ್ಯಕೀಯ ವಿಷಯದಲ್ಲಿ ಹೊಸ ಬೋಧನೆ ಮತ್ತು ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಹೆಚ್ಚು ಸಹಕಾರಿಯಾಗಿದ್ದು, ಈ ಕಾರ್ಯಾಗಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮೋದಿಸಲ್ಪಟ್ಟಿದೆ. ಅಧ್ಯಾಪಕರು ತಮ್ಮ ದೈನಂದಿನ ವೈದ್ಯಕೀಯ ಜ್ಞಾನವನ್ನು ನವೀಕರಿಸಲು ಇದು ಉತ್ತಮ ವೇದಿಕೆಯಾಗಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ ಅವರು ಮುಖ್ಯ ಅತಿಥಿಗಳಾಗಿದ್ದು, ಜೆ.ಎನ್.ಎಂ.ಸಿಯ, ಎನ್.ಎಂ.ಸಿ. ಪ್ರಾಂತೀಯ ನೋಡಲ್ ಕೇಂದ್ರದ ಸಂಯೋಜಕರಾದ ಡಾ. ಸುನಿತಾ ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾದ ಡಾ. ನಿರಂಜನ್ ಕುಮಾರ, ಉಪ ಕುಲಪತಿಗಳು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ: ಪ್ರೀತಿ ಮತ್ತು ಉತ್ಸಾಹದಿಂದ ಬೋದಿಸುತ್ತಾ ಉತ್ತಮ ಶಿಕ್ಷಕರಾಗಬೇಕು. ವೈದ್ಯಕೀಯ ಶಿಕ್ಷಕರು ಉತ್ತಮ ಜ್ಞಾನ ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು. ವಿದ್ಯಾರ್ಥಿಗಳನ್ನು ಸ್ವತಂತ್ರರಾಗುವಂತೆ ರೂಪಿಸುವುದು ಶಿಕ್ಷಕರಿಗೆ ಉತ್ತಮ ತೃಪ್ತಿಯನ್ನು ನೀಡುತ್ತದೆ. ಶಿಕ್ಷಣವು ವೃತ್ತಿಪರತೆ ಮತ್ತು ಜೀವನದ ಕಲೆಯನ್ನು ಕಲಿಸುತ್ತದೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿಮರ್ಶಾತ್ಮಕ ಚಿಂತನೆ ಅಗತ್ಯ. ಶಿಕ್ಷಣದ ಜ್ಞಾನವನ್ನು ಹಂಚಿಕೊಳ್ಳಲು ಸಹಯೋಗ ಮತ್ತು ಸಹಕಾರ ಅಗತ್ಯ. ಉತ್ತಮ ಶಿಕ್ಷಣವು ವ್ಯಕ್ತಿಯ ಬುದ್ಧಿವಂತಿಕೆಯನ್ನು ಜಾಗೃತಗೊಳಿಸುತ್ತದೆ. ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ದೀಪಕ ಕನಬೂರ, ಔಷಧಗುಣ ಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ವೈದ್ಯಕೀಯ ಶಿಕ್ಷಣ ಘಟಕದ ಸಂಯೋಜಕರಾದ ಡಾ. ರಾಧಿಕಾ ಶೇರ್ಖಾನೆ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಅರ್ಚನಾ ಡಂಬಳ ಅವರು ಅತಿಥಿಗಳನ್ನು ಸ್ವಾಗತಿಸಿ, ಎನ್.ಎಂ.ಸಿ. ಪ್ರಾಂತೀಯ ನೋಡಲ್ ಕೇಂದ್ರದ ಸಂಯೋಜಕರಾದ ಡಾ. ಸುನಿತಾ ಪಾಟೀಲ್ ಅವರನ್ನು ಪರಿಚಯಿಸಿದರು. ಡಾ. ಸ್ಮೀತಾ ಪ್ರಭು ಕಾರ್ಯಕ್ರವನ್ನು ನಿರೂಪಿಸಿದರು. ಡಾ. ಸ್ನೇಹಾ ವಂದನಾರ್ಪಣೆ ಸಲ್ಲಿಸಿದರು.