Article Image 1 Article Image 2

ವೇಣೂರು : ಸರ್ವಾಂಗ ಸುಂದರ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ

Article Image

ವೇಣೂರು : ಸರ್ವಾಂಗ ಸುಂದರ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ

ಸುಮಾರು 420 ವರ್ಷಗಳ ಹಿಂದೆ ಏಕಶಿಯಲ್ಲಿ ಕೆತ್ತಲಾದ ನಾಡಿನ ಅಪೂರ್ವ ವಿಗ್ರಹಗಳ ಸಾಲಿನಲ್ಲಿ ಕಂಗೊಳಿಸುತ್ತಿರುವ ದ.ಕ. ಜಿಲ್ಲೆಯ ಪುರಾತನ "ಅಜಿಲ" ಅರಸು ಸಂಸ್ಥಾನ ವ್ಯಾಪ್ತಿಯಲ್ಲಿರುವ ವೇಣೂರಿನ 35 ಅಡಿ ಎತ್ತರದ ಭಗವಾನ್ ಬಾಹುಬಲಿ ಮೂರ್ತಿಗೆ ಈ ಶತಮಾನದ 3ನೇ ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ ಆರಂಭಗೊಂಡಿದೆ. ಯುಗಲಮುನಿವರ್ಯರಾದ ೧೦೮ ಅಮೋಘಕೀರ್ತಿ ಮುನಿ ಮಹಾರಾಜರು ಮತ್ತು ೧೦೮ ಅಮರಕೀರ್ತಿ ಮುನಿ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರ ಕಾರ್ಯಾಧ್ಯಕ್ಷತೆಯಲ್ಲಿ ನೆರವೇರಲಿದೆ. ದೇಶದ ಮೂಲೆಮೂಲೆಯಿಂದ ಮುನಿವರ್ಯರು, ಕರುನಾಡಿನ ಸಮಸ್ತ ಭಟ್ಟಾರಕ ಸ್ವಾಮೀಜಿಗಳವರು ಸೇರಿದಂತೆ ಶ್ರಾವಕ -ಶ್ರಾವಕಿಯರು ಈ ಪುಣ್ಯೋತ್ಸವದಲ್ಲಿ ಭಾಗಿಯಾಗಲಿದ್ದು, 9 ದಿನಗಳ (ಫೆ. 22ರಿಂದ ಮಾ. 1ರ ವರೆಗೆ) ಮಸ್ತಕಾಭಿಷೇಕದಲ್ಲಿ ಲಕ್ಷಾಂತರ ಭಕ್ತರ ಸೇರುವಿಕೆಯನ್ನು ನಿರೀಕ್ಷಿಸಲಾಗಿದೆ. 35 ಅಡಿ ಎತ್ತರವಿರುವ ಗೊಮ್ಮಟ ವಿಗ್ರಹದ 3 ಭಾಗಗಳಲ್ಲಿ ಸುಮಾರು 50 ಅಡಿ ಎತ್ತರದ ಸುಂದರ ಕಬ್ಬಿಣದ ಅಟ್ಟಳಿಗೆ ಗೋಪುರವನ್ನು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಟ್ಟಳಿಗೆ ಮೇಲೆ ಹತ್ತಿ ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಾಗಿದ್ದು, ಅಟ್ಟಳಿಗೆ ಅಲಂಕಾರ ಕಾರ್ಯ ಆರಂಭವಾಗಬೇಕಿದೆ. 1 ಕೋಟಿ ಕಾಮಗಾರಿ: ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ ಬಾಹುಬಲಿ ಬೆಟ್ಟದಲ್ಲಿರುವ ಅಕ್ಕಂಗಳ ಬಸದಿಗಳ ನವೀಕರಣ, ಗ್ರಾನೈಟ್ ಹಾಸುವಿಕೆ, ಬೆಟ್ಟದ ಸುತ್ತ ಧರ್ಮದರ್ಶನಕ್ಕಾಗಿ ಪಾಥ್ ವೇ‌ (Path Way) ನಿರ್ಮಾಣ, ನೂತನ ಹಾಸುಕಲ್ಲು ಅಳವಡಿಕೆ ಮತ್ತು ಒಳಾವರಣದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಸರಕಾರದಿಂದ ಬಿಡುಗಡೆಯಾದ 45 ಲಕ್ಷ ರೂ. ಅನುದಾನದಲ್ಲಿ ವೇಣೂರು ಕಲ್ಲು ಬಸದಿಯ ಆವರಣ ತಡೆಗೋಡೆ ಕಾಮಗಾರಿ ನಡೆಸಲಾಗಿದೆ. ಮೆಗಾ ವ್ಯವಸ್ಥೆ: ಭ| ಪಾರ್ಶ್ವನಾಥ ಸ್ವಾಮಿ ಬಸದಿ ಹಾಗೂ ಬಾಹುಬಲಿ ಬೆಟ್ಟದ ಸುತ್ತಲಿನ ಪ್ರದೇಶಗಳು ಮಸ್ತಕಾಭಿಷೇಕಕ್ಕಾಗಿ ಸಜ್ಜುಗೊಳ್ಳುತ್ತಿದೆ. ವಾಹನ ಪಾರ್ಕಿಂಗ್‌ಗಾಗಿ 6 ಕಡೆ ಸಮತಟ್ಟು ನಡೆದಿದೆ. ನೀರಿನ ವ್ಯವಸ್ಥೆಗಾಗಿ ಪ್ರತ್ಯೇಕ ಬೋರ್‌ವೆಲ್ ಕೊರೆಯಲಾಗಿದೆ. 3 ಕಡೆ ಶಾಶ್ವತ ಶೌಚಾಲಯ ನಿರ್ಮಿಸಲಾಗಿದೆ. 1 ಸಾವಿರ ಜನ ಕುಳಿತು ಊಟ ಮಾಡುವ ಭೋಜನ ಶಾಲೆ ಸಿದ್ಧವಾಗುತ್ತಿದೆ. ಬಫೆ ಊಟಕ್ಕೆ ಪ್ರತ್ಯೇಕ ವ್ಯವಸ್ಥೆಯಾಗಲಿದೆ. ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭರತೇಶ ಸಭಾಭವನದಲ್ಲಿ ವ್ಯವಸ್ಥೆಯಾಗುತ್ತಿದ್ದು, 3 ಎಕರೆ ವಿಶಾಲ ಪ್ರದೇಶದಲ್ಲಿ ಮೆಗಾ ವಸ್ತು ಪ್ರದರ್ಶನ ಮಳಿಗೆ ಏರ್ಪಾಡಾಗಲಿದೆ. ಕುಡಿಯುವ ನೀರು, ನಿರಂತರ ಅನ್ನದಾನ, ಶುಚಿತ್ವ, ಪ್ರಥಮ ಚಿಕಿತ್ಸೆ, ಸುಗಮ ಪಾರ್ಕಿಂಗ್‌ಗೆ ಗಮನ ಹರಿಸಲಾಗಿದ್ದು, ಉಪ ಸಮಿತಿಗಳು ಹೊಣೆ ನಿರ್ವಹಿಸಲಿವೆ. ಉತ್ಸವ ವೇಳೆ 24 ಗಂಟೆಯೂ ವಿದ್ಯುತ್ ಪೂರೈಸಲು ಸಚಿವರು ಮೆಸ್ಕಾಂಗೆ ಸೂಚನೆ ನೀಡಿದ್ದಾರೆ.

ಫೆ. 12ರಂದು ಮೆಸ್ಕಾಂ ದರ ಪರಿಷ್ಕರಣೆ ಹಿನ್ನಲೆಯಲ್ಲಿ ಸಾರ್ವಜನಿಕ ವಿಚಾರಣೆ

Article Image

ಫೆ. 12ರಂದು ಮೆಸ್ಕಾಂ ದರ ಪರಿಷ್ಕರಣೆ ಹಿನ್ನಲೆಯಲ್ಲಿ ಸಾರ್ವಜನಿಕ ವಿಚಾರಣೆ

ಮಂಗಳೂರು: ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುಚ್ಛಕ್ತಿ ದರ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ವಿಚಾರಣೆ ಫೆ. 12ರಂದು ಬೆಳಗ್ಗೆ 10ಕ್ಕೆ ಬಿಜೈಯ ಮೆಸ್ಕಾಂ ಭವನದಲ್ಲಿರುವ, ಮೆಸ್ಕಾಂ ಕಾರ್ಪೊರೇಟ್ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಹಾಗೂ ಸದಸ್ಯ ಎಂ.ಡಿ. ರವಿ ಭಾಗವಹಿಸುವರು ಎಂದು ಮೆಸ್ಕಾಂ ಲೆಕ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಇಎಯಿಂದ ವಿವಿಧ ಪರೀಕ್ಷೆ ಪ್ರವೇಶಪತ್ರ ಡೌನ್ ಲೋಡ್‌ಗೆ ಅವಕಾಶ

Article Image

ಕೆಇಎಯಿಂದ ವಿವಿಧ ಪರೀಕ್ಷೆ ಪ್ರವೇಶಪತ್ರ ಡೌನ್ ಲೋಡ್‌ಗೆ ಅವಕಾಶ

ಬೆಂಗಳೂರು: ಹಿಂದುಳಿದ ವರ್ಗಗಳ ಇಲಾಖೆ/ಸಮಾಜ ಕಲ್ಯಾಣ ಇಲಾಖೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಫೆ. 18ರಂದು ಪರೀಕ್ಷೆ ನಡೆಸಲಿದೆ. ಅರ್ಹ ಅಭ್ಯರ್ಥಿಗಳು ಹೆಸರು, ಜನ್ಮ ದಿನಾಂಕ, ಅರ್ಜಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ http://kea.kar.nic.inನಿಂದ ಪ್ರವೇಶಪತ್ರ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ. ಜೊತೆಗೆ ಕೆಇಎಯು ಕೆಪಿಸಿಎಲ್ ಸಂಸ್ಥೆಯ ನೇಮಕಾತಿ ಸಂಬಂಧ ಫೆ. 18ರಂದು ಮರುಪರೀಕ್ಷೆ ಮತ್ತು 19ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಿದೆ. ಕರ್ನಾಟಕ ರಾಜ್ಯ ಹಣಕಾಸು ನಿಗಮದ (ಕೆಎಸ್‌ಎಫ್‌ಸಿ) ಖಾಲಿ ಹುದ್ದೆಗಳ ನೇಮಕಾತಿಗಾಗಿ ಫೆ. 17ರಂದು ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಳಿಗೂ ಅಭ್ಯರ್ಥಿಗಳು ಪ್ರವೇಶಪತ್ರ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫೆ. 14: ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ

Article Image

ಫೆ. 14: ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ

ಉಜಿರೆ: ಫೆ. 14ರ ಬುಧವಾರ ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಹೇಮಾವತಿ ವೀ. ಹೆಗ್ಗಡೆಯವರ ನಿರ್ದೇಶನದಂತೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಡಾ. ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್ ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ ರೋಗ ತಪಾಸಣೆ, ಬಂಜೆತನ ತಪಾಸಣೆ, ಮುಟ್ಟಿನ ಅಸ್ವಸ್ಥತೆಗಳು, ಮೂತ್ರನಾಳದ ಸೋಂಕು ತಪಾಸಣೆ, ಸ್ತನದ ತಪಾಸಣೆ, ಗರ್ಭಾಶಯದ ತಪಾಸಣೆ, ಮಹಿಳೆಯರ ಕ್ಯಾನ್ಸರ್ ಮುಂತಾದ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು. ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ. ಸ್ವರ್ಣಲತಾ, ಡಾ. ಪ್ರಿಯಾಂಕ, ಡಾ. ಅನ್ವಿತಾ ಹಾಗೂ ಸಂತಾನೋತ್ಪತ್ತಿ ಔಷಧ ಕನ್ಸಲ್ಟೆಂಟ್ ಆಗಿರುವ ಡಾ. ಪ್ರಮೋದ ಲಕ್ಷ್ಮಣ್ ಈ ಶಿಬಿರದಲ್ಲಿ ಮಹಿಳೆಯರ ತಪಾಸಣೆ ನಡೆಸಲಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತ, ಸ್ಕಾನಿಂಗ್ 50%, ಔಷಧದಲ್ಲಿ 10%, ಒಳರೋಗಿ ವಿಭಾಗದಲ್ಲಿ 10%, ರಕ್ತಪರೀಕ್ಷೆ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ದೊರೆಯಲಿದೆ.

ಫೆ. 9, 10: ಮೂಡುಗಿಳಿಯಾರಿನಲ್ಲಿ ಅಭಿಮತ ಸಂಭ್ರಮ

Article Image

ಫೆ. 9, 10: ಮೂಡುಗಿಳಿಯಾರಿನಲ್ಲಿ ಅಭಿಮತ ಸಂಭ್ರಮ

ಕುಂದಾಪುರ ತಾಲೂಕಿನ ಮೂಡುಗಿಳಿಯಾರಿನಲ್ಲಿ ಜನಸೇವಾ ಟ್ರಸ್ಟ್ (ರಿ.) ಇವರ ವತಿಯಿಂದ ಅಲ್ಸೆಕೆರೆ ಶ್ರೀ ಮಹಾಲಿಂಗೇಶ್ವರ ಆವಾರದಲ್ಲಿ “ಅಭಿಮತ ಸಂಭ್ರಮ” ಕಾರ್ಯಕ್ರಮವು ಫೆ. 9 ಮತ್ತು 10ರಂದು ನಡೆಯಲಿದೆ. ಫೆ. 9ರಂದು ಜಿ.ಎಂ. ಸೋಮಯಾಜಿ ನೇತೃತ್ವದಲ್ಲಿ ಸಹಸ್ರ ನಾಳಿಕೇರ ಗಣಯಾಗ ಮತ್ತು ಶೃಂಗೇರಿ ಶ್ರೀ ಮಠ, ಶ್ರೀ ಸನ್ನಿಧಾನಂ ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರಭಾರತಿ ಮಹಾಸ್ವಾಮಿಗಳವರು ಧಾರ್ಮಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಫೆ. 10ರಂದು ಸಂಜೆ 6.30ರಿಂದ ನಡೆಯುವ ಸಾಂಸ್ಕೃತಿಕ ಸಂಭ್ರಮದಲ್ಲಿ ಮಂಗಳೂರು ನಂದಗೋಕುಲ ಕಲಾವಿದರು ಪ್ರಸ್ತುತಪಡಿಸುವ "ಆನೆಗುಡ್ಡೆ ಆ ಶ್ರೀ ವಿನಾಯಕ", ಪಟ್ಲ-ಜನ್ಸಾಲೆ ಜೊತೆಗೆ ತೆಂಕು-ಬಡಗಿನ ಕಲಾವಿದರುಗಳಿಂದ "ಸ್ವರ ನೂಪುರ" ಮತ್ತು ಮಂಗಳೂರು ಜರ್ನಿ ಥೇಟರ್ ಗ್ರೂಪ್ ಪ್ರಸ್ತುತಪಡಿಸುವ "ಸಾವಿರದ ಹಾಡುಗಳು" ಹಾಗೂ ಮಂಗಳೂರು ಶ್ರೀ ಮೂಕಾಂಬಿಕಾ ಚೆಂಡೆ ಬಳಗ ಪ್ರಸ್ತುತ ಪಡಿಸುವ "ಡಿವೈನ್ ಬೀಟ್ಸ್" ಚೆಂಡೆ, ವಯಲಿನ್‌, ಕೊಳಲು, ಸ್ಯಾಕ್ಸೋಫೋನ್‌ ಜುಗಲ್ಬಂಧಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ರಿಂದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವರವರ ಅಧ್ಯಕ್ಷತೆಯಲ್ಲಿ, ಎಂ.ಆರ್.ಜಿ. ಸಮೂಹದ ಚೇರ್‌ಮನ್ ಕೆ. ಪ್ರಕಾಶ್ ಶೆಟ್ಟಿಯವರ ಉದ್ಘಾಟನೆಯೊಂದಿಗೆ ಗೌರವಾನ್ವಿತ ಅತಿಥಿಗಳ ಉಪಸ್ಥಿತಿಯಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ದಿ.ಜಿ.ಆರ್.‌ ಕಾಳಿಂಗ ನಾವಡ ಅವರಿಗೆ ಮರಣೋತ್ತರ ಕೀರ್ತಿ ಕಲಶ ಪ್ರದಾನ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಯಶೋಗಾಥೆ ಗೌರವಾದರ ಕಾರ್ಯಕ್ರಮ ಜರಗಲಿರುವುದು.

ಫೆ. 10ರಂದು ಕಲ್ಲಡ್ಕದಲ್ಲಿ ಬೃಹತ್‌ ಉಚಿತ ವೈದ್ಯಕೀಯ, ಕ್ಯಾನ್ಸರ್‌ ತಪಾಸಣೆ, ನೇತ್ರ ಮತ್ತು ದಂತ ಚಿಕಿತ್ಸಾ ಶಿಬಿರ

Article Image

ಫೆ. 10ರಂದು ಕಲ್ಲಡ್ಕದಲ್ಲಿ ಬೃಹತ್‌ ಉಚಿತ ವೈದ್ಯಕೀಯ, ಕ್ಯಾನ್ಸರ್‌ ತಪಾಸಣೆ, ನೇತ್ರ ಮತ್ತು ದಂತ ಚಿಕಿತ್ಸಾ ಶಿಬಿರ

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿ.‌, ಇಂಡಿಯನ್ ಕ್ಯಾನ್ಸರ್‌ ಸೊಸೈಟಿ, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಮತ್ತು ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸಸ್‌ ಹಾಗೂ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ., ಗುರೂಜಿ ಸ್ವ ಸಹಾಯ ಸಂಘ ಕಲ್ಲಡ್ಕ, ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಹಾಗೂ ಝಾನ್ಸಿರಾಣಿ ಲಕ್ಷ್ಮೀ ಬಾಯಿ ಮಹಿಳಾ ಮಂಡಳಿ ಕಲ್ಲಡ್ಕ ಇವರ ಜಂಟಿ ಸಹಯೋಗದೊಂದಿಗೆ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿ.‌ ಕಲ್ಲಡ್ಕ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಬೃಹತ್‌ ಉಚಿತ ವೈದ್ಯಕೀಯ, ಕ್ಯಾನ್ಸರ್‌ ತಪಾಸಣೆ, ನೇತ್ರ ಮತ್ತು ದಂತ ಚಿಕಿತ್ಸಾ ಶಿಬಿರವು ಫೆ. 10ರಂದು ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪಂಚವಟಿ ವಾಣಿಜ್ಯ ಸಂಕೀರ್ಣದಲ್ಲಿರುವ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ. ಸಾರ್ವಜನಿಕರು ಸಕಾಲದಲ್ಲಿ ಆಗಮಿಸಿ, ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಡುಬಿದಿರೆ : ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ರಾಶಿ ಪೂಜಾ

Article Image

ಮೂಡುಬಿದಿರೆ : ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ರಾಶಿ ಪೂಜಾ

ಮೂಡುಬಿದಿರೆ ಸ್ವರಾಜ್ಯ ಮೈದಾನದ ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ರಾಶಿ ಪೂಜಾ ಮಹೋತ್ಸವವು ಎಡಪದವು ವೇದಮೂರ್ತಿ ವೆಂಕಟೇಶ ತಂತ್ರಿ ಹಾಗೂ ಕುಂಗೂರು ಚಾವಡಿ ಮನೆ ಶಿವಪ್ರಸಾದ್ ಆಚಾರ್ ಅವರ ನೇತೃತ್ವದಲ್ಲಿ ಫೆ. 8ರಿಂದ ಫೆ. 17ರ ವರೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ. ಫೆ. 11ರಂದು ಗಂಟೆ 10.50ಕ್ಕೆ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕ ಹಾಗೂ ಫೆ. 16ರಂದು ವಾರ್ಷಿಕ ರಾಶಿ ಪೂಜಾ ಮಹೋತ್ಸವವು ನಡೆಯಲಿದೆ. ಫೆ. 16ರಂದು ರಾತ್ರಿ 8ರಿಂದ ಮೂಲ ಮೈಸಂದಾಯ ಹಾಗೂ ಪಿಲಿಚಾಮುಂಡಿ ದೈವಗಳ ಗಗ್ಗರ ಸೇವೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ: ಫೆ. 8ರಂದು ಸಂಜೆ ಗಂಟೆ 5.30ರಿಂದ ರಾತ್ರಿ 12ರ ತನಕ ಶ್ರೀ ಕ್ಷೇತ್ರ ಕಟೀಲು ಮೇಳದವರಿಂದ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ”. ಫೆ. 9ರಂದು ಸಂಜೆ 6ರಿಂದ ಪೂರ್ಣಿಮಾ ಶೆಟ್ಟಿ ಮತ್ತು ಶಿಷ್ಯ ವೃಂದದವರಿಂದ “ಭರತನಾಟ್ಯ- ನೃತ್ಯ ಸಂಧ್ಯಾ” ಮತ್ತು ರಾತ್ರಿ 9ರಿಂದ ಶರತ್ ಶೆಟ್ಟಿ, ಕಿನ್ನಿಗೋಳಿ ಮತ್ತು ಅವಿಭಜಿತ ದ.ಕ. ಜಿಲ್ಲಾ ಖ್ಯಾತ ಹಾಸ್ಯ ಕೊಡುವಿಕೆಯಿಂದ ಹಾಸ್ಯಮಯ ತುಳು ನಾಟಕ “ಪಿರಾವುಡು ಒರಿ ಉಲ್ಲೆ”. ಫೆ. 10ರಂದು ರಾತ್ರಿ 7ಕ್ಕೆ ಗೀತ ನರ್ತನ (ರಿ.), ಭರತನಾಟ್ಯ ನೃತ್ಯ ಕೇಂದ್ರ, ಶಿವನಗರ, ಮೂಡುಶೆಡ್ಡೆ ವಿದುಷಿ ರಕ್ಷಿತಾ ಲಕ್ಷ್ಮಿ ನಾರಾಯಣ ಭಟ್ ಇವರ ಶಿಷ್ಯವರ್ಗದಿಂದ “ನೃತ್ಯ ವೈಭವ” ಮತ್ತು ರಾತ್ರಿ 9ಕ್ಕೆ ಝೀ ಕನ್ನಡ ಕಾಮಿಡಿ ಕಿಲಾಡಿಗಳು ಯುವ ಶೆಟ್ಟಿ ಬಳಗ, ಬೆಂಗಳೂರು ಇವರಿಂದ “ಹಾಸ್ಯ ಸಿಂಚನ”. ಫೆ. 11ರಂದು ರಾತ್ರಿ 8.30ಕ್ಕೆ ಸನಾತನ ನಾಟ್ಯಾಲಯ ಮಂಗಳೂರು ಮತ್ತು ಮೂಡುಬಿದಿರೆಯ ನೃತ್ಯ ವಿದ್ಯಾರ್ಥಿಗಳಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯ ವೃಂದದವರಿಂದ “ಸನಾತನ ನೃತ್ಯಾಂಜಲಿ” (ಭರತನಾಟ್ಯ, ದೇಶಭಕ್ತಿ ಗೀತೆಯ ನೃತ್ಯ ಮತ್ತು ಜಾನಪದ ನೃತ್ಯ) ಮತ್ತು ಅನೀಶ್ ಮತ್ತು ತಂಡ, ಮೂಡುಬಿದಿರೆ ಇವರಿಂದ “ನೃತ್ಯ ವೈವಿಧ್ಯ”. ಫೆ. 16ರಂದು ಮೂಡುಬಿದಿರೆಯ ಸೌಮ್ಯ, ಸರ್ವೇಶ್ ಜೈನ್ ಮತ್ತು ತಂಡ ಜೈನ್ ಬೀಟ್ಸ್ ಸಂಗೀತ ಸಂಸ್ಥಾನ ಇವರಿಂದ “ಸಂಗೀತ ರಸಸಂಜೆ” ಮತ್ತು ಕಲಾಶ್ರೀ ಕುಡ್ಲ ತಂಡದ ಮತ್ತು ಖ್ಯಾತ ಕಲಾವಿದರ ಕೊಡುವಿಕೆಯಿಂದ ಹಾಸ್ಯಮಯ ನಾಟಕ “ಕುಸಲ್ದ ಕುರ್ಲರಿ”.

ಬೆಳ್ತಂಗಡಿ : ಚಾರಣ ಸ್ಥಳಗಳಿಗೆ ಪ್ರವೇಶ ನಿಷೇಧ

Article Image

ಬೆಳ್ತಂಗಡಿ : ಚಾರಣ ಸ್ಥಳಗಳಿಗೆ ಪ್ರವೇಶ ನಿಷೇಧ

ಬೆಳ್ತಂಗಡಿ: ಅರಣ್ಯ ಇಲಾಖೆಯ ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳದ ಬೆಳ್ತಂಗಡಿ ವನ್ಯಜೀವಿ ವಲಯದ ಪ್ರಮುಖ ಚಾರಣ ಸ್ಥಳಗಳಿಗೆ ಬಸ್ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಚಾರಣ ನಿಷೇಧಿಸಲಾಗಿದೆ. ಇಲಾಖೆ ಆದೇಶದ ಪ್ರಕಾರ ಐತಿಹಾಸಿಕ ಸ್ಥಳವಾದ ನಡ ಗ್ರಾಮದ ಗಡಾಯಿಕಲ್ಲು, ಮಲವಂತಿಗೆ ಗ್ರಾಮದ ನೇತ್ರಾವತಿ ಪೀಕ್‌ ಸೇರಿದಂತೆ ತಾಲೂಕಿನ ಯಾವುದೇ ಚಾರಣ ಪ್ರದೇಶಗಳಿಗೆ ತೆರಳಲು ಅವಕಾಶವಿರುವುದಿಲ್ಲ. ಇದು ಮುಂದಿನ ಆದೇಶದ ತನಕ ಜಾರಿ ಇರಲಿದೆ. ಗಡಾಯಿಕಲ್ಲು ನೇತ್ರಾವತಿ ಪೀಕ್ ಸೇರಿದಂತೆ ಮಲವಂತಿಗೆ ಗ್ರಾಮದ ಹಲವು ಸ್ಥಳಗಳಿಗೆ ರಾಜ್ಯದ ನಾನಾ ಭಾಗಗಳಿಂದ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಇದೀಗ ಚಾರಣ ನಡೆಸಲು ಅನುಕೂಲ ಸಮಯವೂ ಆಗಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆ ಪ್ರವೇಶ ನಿಷೇಧ ಕ್ರಮ ಕೈಗೊಂಡಿದೆ. ಕಾರಣವೇನು ? ಚಾರಣ ಪ್ರದೇಶಗಳಿಗೆ ಆಗಮಿಸುವ ಪ್ರವಾಸಿಗರು ಇಲ್ಲಿ ಧೂಮಪಾನ ಮಾಡುವುದು ಇತ್ಯಾದಿ ಸಾಮಾನ್ಯವಾಗಿದೆ. ಬಳಿಕ ಬೆಂಕಿಯನ್ನು ಆರಿಸದೆ ಹಿಂದಿರುಗುವವರು ಇದ್ದಾರೆ. ಇಂತಹ ಸಂದರ್ಭ ಬೆಂಕಿ ಅರಣ್ಯ ಪ್ರದೇಶವನ್ನು ಪಸರಿಸಿ ಕಾಡ್ಗಿಚ್ಚು ಉಂಟಾಗುವ ಸಾಧ್ಯತೆ ಅಧಿಕವಿರುವ ಕಾರಣ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಕಳೆದ ವರ್ಷ ಈ ಪ್ರದೇಶಗಳಲ್ಲಿ ಕಾಡ್ಗಿಚ್ಚು ಉಂಟಾಗಿದ್ದು, ಹತೋಟಿಗೆ ತರಲು ಇಲಾಖೆ ಅಹರ್ನಿಶಿ ಕೆಲಸ ಮಾಡಿತ್ತು. ಆದರೂ ಅರಣ್ಯ ಪ್ರದೇಶದಲ್ಲಿ ಬೆಂಕಿ ಪಸರಿಸಿ ಗಿಡ, ಮರ, ಔಷಧೀಯ ಸಸ್ಯಗಳು ನಾಶವಾಗಿದ್ದು ಅಲ್ಲದೆ ವನ್ಯಜೀವಿಗಳಿಗೂ ತೊಂದರೆ ಉಂಟಾಗಿತ್ತು. ಪ್ರವಾಸಿಗರಿಂದಾಗಿ ಚಾರಣ ಪ್ರದೇಶದಲ್ಲಿರುವ ನದಿ, ಹಳ್ಳಿಗಳ ಪರಿಸರದಲ್ಲಿ ನೀರು ಕಲುಷಿತಗೊಳ್ಳುತ್ತದೆ. ಈ ನೀರು ಹಲವರಿಗೆ ದಿನನಿತ್ಯದ ಉಪಯೋಗ, ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದ್ದು ಸಮಸ್ಯೆ ಅನುಭವಿಸುವಂತಾಗುತ್ತದೆ. ಇದರಿಂದ ಪ್ರವೇಶ ನಿಷೇಧ ಆ ಪರಿಸರದ ಜನರಿಗೂ ಅನುಕೂಲ ನೀಡಲಿದೆ. ಜಲಪಾತಗಳಿಗೂ ನಿಷೇಧ ? ತಾಲೂಕಿನ ಮಲವಂತಿಗೆ ಗ್ರಾಮದಲ್ಲಿ ಹಲವು ಜಲಪಾತಗಳಿದ್ದು ಇವಕ್ಕೂ ಪ್ರವಾಸಿಗರಿಗೆ ಪ್ರವೇಶ ನಿಷೇಧ ಹೇರುವ ಸಾಧ್ಯತೆ ಇದೆ. ಆದರೆ ಇದು ಇನ್ನೂ ಕೂಡ ಅಧಿಕೃತಗೊಂಡಿಲ್ಲ. ಜಲಪಾತ ಪ್ರದೇಶಗಳು ಅರಣ್ಯ ಪ್ರದೇಶದಲ್ಲಿದ್ದು ಇಲ್ಲೂ ಕೂಡ ಬೆಂಕಿ ಪ್ರಕರಣ, ನೀರು ಕಲುಷಿತಗೊಳ್ಳಲು ಪ್ರವಾಸಿಗರು ಕಾರಣರಾಗುತ್ತಿದ್ದಾರೆ. ಆದಾಯಕ್ಕೆ ಹೊಡೆತ : ಚಾರಣ ಸ್ಥಳ, ಜಲಪಾತಗಳಿಗೆ ಪ್ರವೇಶ ದರವಿದ್ದು ಇವುಗಳನ್ನು ವೀಕ್ಷಿಸುವ ಪ್ರತಿಯೊಬ್ಬ ಸರಿಯಾದ ಸಮಯಕ್ಕೆ ನಿಷೇಧ ಹೇರಿರುವುದರಿಂದ ಇಲಾಖೆಯ ಆದಾಯಕ್ಕೆ ಹೊಡೆತ ಬೀಳಲಿದೆ. ಅಲ್ಲದೆ ಇಲ್ಲಿ ಕೆಲವೊಂದು ಅಧಿಕೃತ ಹಾಗೂ ಅನಧಿಕೃತ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಸಿಗರಿಗೆ ಕಡಿವಾಣ ಇರುವ ಕಾರಣ ಹೋಂ ಸ್ಟೇಗಳ ಆದಾಯ ಕುಂಠಿತಗೊಳ್ಳಲಿದೆ. ಇಲಾಖೆ ನಿರ್ಬಂಧ ಹೇರಿದ್ದರೂ ಅನ್ಯಮಾರ್ಗಗಳ ಮೂಲಕ ಪ್ರವಾಸಿಗರು ಆಗಮಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಚಿಕ್ಕಮಗಳೂರು : ಚಾರಣಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

Article Image

ಚಿಕ್ಕಮಗಳೂರು : ಚಾರಣಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎತ್ತಿನಭುಜ, ರಾಣಿಝರಿ, ಕೆಮ್ಮಣ್ಣು ಗುಂಡಿ ಸಹಿತ ಅನೇಕ ಟ್ರೆಕ್ಕಿಂಗ್ ಸ್ಥಳಗಳಿದ್ದು, ಚಾರಣದಿಂದ ಇಲ್ಲಿನ ವನ್ಯಜೀವಿಗಳಿಗೆ ಕಿರಿಕಿರಿ ಉಂಟಾಗುವ ಕಾರಣಕ್ಕಾಗಿ ಕೆಲವು ನಿರ್ಬಂಧ ಕ್ರಮಗಳಿಗೆ ಸರಕಾರ ಮುಂದಾಗಿದೆ. ಸದ್ಯ ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ವನ್ಯ ಪ್ರಾಣಿಗಳಿಗೂ ಕಿರಿಕಿರಿ ತಪ್ಪಲಿದೆ ಜೊತೆಗೆ ಮಾಲಿನ್ಯಕ್ಕೂ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳ ಜತೆಗೆ ಚಾರಣ ಕೇಂದ್ರಗಳಿವೆ. ಚಾರಣ ತೆರಳುವವರಿಗೆ ಸರಕಾರ ಕೆಲವು ನಿಯಮಗಳನ್ನು ರೂಪಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಚಾರಣ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಚಾರಣಕ್ಕೆ ತೆರಳುವವರು ಆನ್ ಲೈನ್‌ನಲ್ಲಿ ನೋಂದಾಯಿಸಿದ ಬಳಿಕ ನಿರ್ದಿಷ್ಟ ಸಂಖ್ಯೆಯ ಜನರಿಗೆ ಮಾತ್ರವೇ ತೆರಳಲು ಅವಕಾಶ ನೀಡಲಾಗುವುದು ಎಂದು ಚಿಕ್ಕಮಗಳೂರು ಡಿಎಫ್‌ಒ ರಮೇಶ್‌ಬಾಬು ಮಾಹಿತಿ ನೀಡಿದ್ದಾರೆ.

ಫೆ. 10, 11ರಂದು ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

Article Image

ಫೆ. 10, 11ರಂದು ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಮಂಗಳೂರು ನಗರದಲ್ಲಿ ಇದೀಗ 2 ವರ್ಷಗಳ ಬಳಿಕ ಫೆ. 10 ಮತ್ತು 11ರಂದು ತಣ್ಣೀರುಬಾವಿ ‌ಬೀಚ್‌ನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಟೀಂ ಮಂಗಳೂರು ತಂಡದ ನೇತೃತ್ವದಲ್ಲಿ ಒಎನ್‌ಜಿಸಿ-ಎಂ.ಆರ್.ಪಿ.ಎಲ್. ಪ್ರಾಯೋಜಕತ್ವದಲ್ಲಿ ನಡೆಯುವ ಗಾಳಿಪಟ ಉತ್ಸವಕ್ಕೆ ಫೆ. 10ರಂದು ಮಧ್ಯಾಹ್ನ 2.30ಕ್ಕೆ ಚಾಲನೆ ಸಿಗಲಿದ್ದು, ಸಂಜೆ 5ಕ್ಕೆ ಸಭೆ ನಡೆಯಲಿದೆ. ಮರುದಿನ ಅಪರಾಹ್ನ ಗಾಳಿಪಟ ಉತ್ಸವ ಮತ್ತೆ ಆರಂಭವಾಗಲಿದ್ದು, ಸಂಜೆ 7 ಗಂಟೆಗೆ ಸಭೆ ಇರಲಿದೆ. ಮಲೇಷಿಯಾ, ಇಂಡೋನೇಶ್ಯಾ, ಗ್ರೀಸ್, ಸ್ವೀಡನ್, ಉಕ್ರೇನ್, ಥೈಲ್ಯಾಂಡ್, ವಿಯೆಟ್ನಾಂ, ಇಸ್ಟೋನಿಯ ದೇಶಗಳ 13 ಪ್ರತಿನಿಧಿಗಳು, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಮತ್ತು ಕೇರಳದ ಸುಮಾರು 20 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿಗಳಿಗೆ ಅರ್ಜಿ ಆಹ್ವಾನ

Article Image

ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿಗಳಿಗೆ ಅರ್ಜಿ ಆಹ್ವಾನ

ಉಜಿರೆ : ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾಕಿರಣವಾಗಿರುವ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿ ಮಾ. 4 ರಿಂದ ಏ. 2ರ ವರೆಗೆ ಮತ್ತು ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿ ಮಾ. 11 ರಿಂದ ಏ. 9ರ ವರೆಗೆ ನಡೆಯಲಿದೆ. ಈ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. 18ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಆಸಕ್ತ ಯುವಕ/ಯುವತಿಯರು ರುಡ್ ಸೆಟ್ ಸಂಸ್ಥೆಯ ಮೊಬೈಲ್ ನಂ. 6364561982ಗೆ ವಾಟ್ಸ್ಆ್ಯಪ್ ಮೂಲಕ ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿ ಬರೆದು ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ-574240 ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404, ಅಥವಾ 9591044014, 9902594791, 6364561982 ಹಾಗೂ http://forms.gle/Z2pxPLE1FigamcMBd9 ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ 'ಭಾರತ ರತ್ನ' ಘೋಷಣೆ

Article Image

ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ 'ಭಾರತ ರತ್ನ' ಘೋಷಣೆ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಪರಮೋಚ್ಚ ಗೌರವವಾದ "ಭಾರತ ರತ್ನ" ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಫೆ. 3ರಂದು ಮಾಹಿತಿ ಹಂಚಿಕೊಂಡಿದ್ದಾರೆ. ಎಲ್.ಕೆ. ಅಡ್ವಾಣಿ ಅವರು ಭಾರತ ರತ್ನ ಗೌರವಕ್ಕೆ ಭಾಜನರಾಗಿರುವುದರಿಂದ ನನಗೆ ಬಹಳ ಸಂತೋಷವಾಗಿದೆ. ಈಗಾಗಲೇ ಅವರೊಂದಿಗೆ ಮಾತನಾಡಿ, ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಅಭಿನಂದಿಸಿದ್ದೇನೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಅವರು ಒಬ್ಬರು. ಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣಾರ್ಹ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ಉಪ ಪ್ರಧಾನಿಯಾಗಿ ದೇಶಸೇವೆ ಮಾಡುವವರೆಗಿನ ಜೀವನ ಅವರದು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅಡ್ವಾಣಿಯವರ ದಶಕಗಳ ಸುದೀರ್ಘ ಸೇವೆಯು ಅಚಲವಾದ ಬದ್ಧತೆಯಿಂದ ಗುರುತಿಸಲ್ಪಟ್ಟಿದೆ. ಅವರು ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದ ವಿಚಾರದಲ್ಲಿ ದೇಶಕ್ಕೆ ಕೊಡುಗೆ ಸಲ್ಲಿಸಲು ಅಪ್ರತಿಮ ಪ್ರಯತ್ನ ಮಾಡಿದ್ದಾರೆ. ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡುವುದು ನನ್ನ ಪಾಲಿಗೆ ಅತ್ಯಂತ ಭಾವನಾತ್ಮಕ ಕ್ಷಣ. ಅವರೊಂದಿಗೆ ಸಂವಹನ ನಡೆಸಲು ಮತ್ತು ಕಲಿಯಲು ನನಗೆ ಅಸಂಖ್ಯಾತ ಅವಕಾಶಗಳು ಸಿಕ್ಕಿರುವುದು ನನ್ನ ಪುಣ್ಯ ವಿಶೇಷ ಎಂದು ನಾನು ಯಾವಾಗಲೂ ಪರಿಗಣಿಸುತ್ತೇವೆ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಪೇಟಿಎಂ ಮೇಲೆ ಆರ್.ಬಿ.ಐ. ನಿರ್ಬಂಧ; ಇಕ್ಕಟ್ಟಿನಲ್ಲಿ ಗ್ರಾಹಕರು

Article Image

ಪೇಟಿಎಂ ಮೇಲೆ ಆರ್.ಬಿ.ಐ. ನಿರ್ಬಂಧ; ಇಕ್ಕಟ್ಟಿನಲ್ಲಿ ಗ್ರಾಹಕರು

ʼಪೇಟಿಎಂ ಕರೋʼ ಅನ್ನುತ್ತಲೇ ಕೋಟ್ಯಾಂತರ ಜನರ ದೈನಂದಿನ ವ್ಯವಹಾರಗಳ ಭಾಗವಾಗಿದ್ದ, ಡಿಜಿಟಲ್‌ ಬ್ಯಾಂಕಿಂಗ್‌ ಕ್ಷೇತ್ರದ ದೈತ್ಯ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಈಗ ಬ್ಯಾಂಕಿಂಗ್‌ನ ಕಾನೂನುಗಳನ್ನು ಉಲ್ಲಂಘನೆ ಮಾಡಿರುವ ಕಾರಣಕ್ಕೆ ಬ್ಯಾಂಕಿಂಗ್‌ ರೆಗ್ಯುಲೇಷನ್‌ ಕಾಯ್ದೆಯಡಿ ಆರ್.ಬಿ.ಐ.ಯು ಫೆ. 29ರಿಂದ ಪೇಟಿಎಂನ ಕೆಲವೊಂದು ವ್ಯವಹಾರಗಳ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧದಿಂದಾಗಿ ಗ್ರಾಹಕರಲ್ಲಿ ಗೊಂದಲವುಂಟಾಗಿದ್ದು, ಈಗಾಗಲೇ ಹಲವರು ಪೇಟಿಎಂ ಅಪ್ಲಿಕೇಷನ್‌ ಅನ್ನು ಮೊಬೈಲ್‌ನಿಂದ ಡಿಲೀಟ್‌ ಮಾಡಿದ್ದಾರೆ. ಈ ಗೊಂದಲದಿಂದಾಗಿ ಷೇರು ಮಾರುಕಟ್ಟೆಯಲ್ಲಿ ದಿಢೀರ್‌ ಕುಸಿತ ಕಂಡಿರುವ ಪೇಟಿಎಂ ಹೂಡಿಕೆದಾರರಲ್ಲೂ ಆತಂಕ ಮೂಡಿಸಿದೆ. ಅಷ್ಟೇ ಅಲ್ಲದೆ ಈ ನಿರ್ಬಂಧ, ರಾಜಕೀಯ ಪಕ್ಷಗಳ ಕೆಸರೆರೆಚಾಟಕ್ಕೂ ಕಾರಣವಾಗಿದೆ. ಅಷ್ಟಕ್ಕೂ ಏನು ನಿರ್ಬಂಧ...? ಯಾಕೆ ಗೊಂದಲ...? * ಆರ್.ಬಿ.ಐ. ನಿರ್ಬಂಧ ಹೇರಿರುವುದು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಮಾತ್ರ. ಆದರೆ ಮೊಬೈಲ್‌ನಲ್ಲಿ ಬಳಸುವ ಪೇಟಿಎಂ ಅಪ್ಲಿಕೇಷನ್‌ಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ.‌ * ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಲಿಂಕ್‌ ಆಗಿರುವ ಯುಪಿಐ ಐಡಿಗಳಿಂದ ಫೆ. 29ರ ವರೆಗೆ ಮಾತ್ರ ವಹಿವಾಟು ನಡೆಸಬಹುದು. ಇತರ ಬ್ಯಾಂಕ್‌ ಖಾತೆ ಹೊಂದಿರುವವರು ಫೆ. 29ರ ಬಳಿಕವೂ ಪೇಟಿಎಂ ಬಳಸಿ ವ್ಯವಹಾರ ನಡೆಸಬಹುದು. * ಪೇಟಿಎಂನ ಇತರ ಯುಪಿಐ ಸೇವೆಗಳಿಗೆ ನಿರ್ಬಂಧ ಯಾವುದೇ ಇಲ್ಲ. ಅಂದರೆ ಪೇಟಿಎಂ ಮೂಲಕ ಯುಪಿಐ ಪೇಮೆಂಟ್‌ ಮಾಡಬಹುದು. * ಪೇಟಿಎಂ ವಹಿವಾಟು ಫೆ. 29ರ ವರೆಗೆ ಎಂದಿನಂತೆ ಇರುತ್ತದೆ. ಫೆ. 29ರ ಬಳಿಕ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ಹೊಸ ಖಾತೆಯನ್ನು ತೆರೆಯಲು, ಹೊಸ ಡೆಪಾಸಿಟ್‌, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿರುವ ತಮ್ಮ ಬ್ಯಾಲೆನ್ಸ್‌ ಅನ್ನು ಯುಪಿಐ ಮೂಲಕ ವರ್ಗಾವಣೆ, ಕ್ರೆಡಿಟ್‌ ವಹಿವಾಟು ನಡೆಸುವುದು ಅಥವಾ ಟಾಪ್‌ಅಪ್‌ ತೆಗೆದುಕೊಳ್ಳುದಕ್ಕೂ ಆರ್.ಬಿ.ಐ. ನಿರ್ಬಂಧ. * ಈಗಾಗಲೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌, ವ್ಯಾಲೆಟ್, ಫಾಸ್ಟ್‌ಟ್ಯಾಗ್‌ ಹಣ ಇದ್ದರೆ ಬಳಕೆ ಮುಂದುವರೆಸಬಹುದು. ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಇದ್ದರೆ ನಿಮ್ಮ ಖಾತೆಗೂ ವರ್ಗಾಯಿಸಬಹುದು. ಆದರೆ ಫೆ. 29ರ ನಂತರ ಪ್ರಿಪೇಯ್ಡ್‌ ಸೇವೆಗಳಾದ ವ್ಯಾಲೆಟ್‌ ಮತ್ತು ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ. * ಪೇಟಿಎಂನ ಮಾಲೀಕ ಸಂಸ್ಥೆಯಾದ ವನ್97‌ ಕಮ್ಯೂನಿಕೇಷನ್ಸ್‌ ಮತ್ತು ಪೇಟಿಎಂ ಪೇಮೆಂಟ್ಸ್‌ ಸರ್ವೀಸಸ್‌ನ ನೋಡಲ್‌ ಅಕೌಂಟ್‌ಗಳನ್ನು ನಿಲ್ಲಿಸುವಂತೆ ಆರ್.ಬಿ.ಐ. ನಿರ್ದೇಶನ ನೀಡಿದೆ. ಗೂಗಲ್‌ ಪೇ, ಫೋನ್‌ ಪೇ ಕೇವಲ ಪೇಮೆಂಟ್‌ ಅಪ್ಲಿಕೇಷನ್‌ಗಳಾಗಿದ್ದು, ಪೇಟಿಎಂ ಪಿ.ಪಿ.ಬಿ.ಎಲ್. ಮೂಲಕ ಬ್ಯಾಂಕಿಂಗ್‌ ಸೌಲಭ್ಯ ನೀಡುತ್ತಿರುವ ಸಂಸ್ಥೆಯಾಗಿದೆ. ಈ ನಿರ್ಬಂಧದಿಂದಾಗಿ ಪೇಟಿಎಂ ಕೇವಲ ಪೇಮೆಂಟ್‌ ಅಪ್ಲಿಕೇಷನ್‌ ಆಗಿ ಉಳಿದುಬಿಡಬಹುದು. ಅಲ್ಲದೆ ಪೇಟಿಎಂ ಸ್ಥಾನವನ್ನು ಉಳಿದ ಪೇಮೆಂಟ್‌ ಅಪ್ಲಿಕೇಷನ್‌ಗಳು ಹೆಚ್ಚಿನ ಸೌಲಭ್ಯ ನೀಡುವುದರ ಮೂಲಕ ಆಕ್ರಮಿಸಿಕೊಳ್ಳಬಹುದು.

ಮೂಡುಬಿದಿರೆ : ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳ ಆಹ್ವಾನ

Article Image

ಮೂಡುಬಿದಿರೆ : ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳ ಆಹ್ವಾನ

ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ನೀಡಲಾಗುವ ಮೂರು ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳನ್ನು ಆಹ್ವಾನಿಸಿದೆ. ಯಾವುದೇ ಪ್ರಕಾರದ 2019-2023ರ ನಡುವೆ ಪ್ರಕಟವಾದ ಕೃತಿಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳುಹಿಸಿಕೊಡಬಹುದಾಗಿದೆ. ಪುರಸ್ಕಾರವು ಪ್ರಶಸ್ತಿ ಫಲಕ ಮತ್ತು ರೂ. 10 ಸಾವಿರ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಆಸಕ್ತರು ಪುರಸ್ಕಾರಕ್ಕೆ ಆಯ್ಕೆ ಮಾಡಲು ಗ್ರಂಥಗಳ ಮೂರು ಪ್ರತಿಗಳನ್ನು ಮಾರ್ಚ್ ಮೊದಲ ವಾರದೊಳಗೆ ‘ಶಿವರಾಮ ಕಾರಂತ ಪ್ರತಿಷ್ಠಾನ’, ಕನ್ನಡ ಭವನ, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ 574227. ಈ ವಿಳಾಸಕ್ಕೆ ಕಳುಹಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ನ್ಯೂಸ್ ​18 ಕನ್ನಡ ವಾಹಿನಿಯ ನಿರೂಪಕಿ ನವಿತಾ ಜೈನ್ ಅವರಿಗೆ ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ

Article Image

ನ್ಯೂಸ್ ​18 ಕನ್ನಡ ವಾಹಿನಿಯ ನಿರೂಪಕಿ ನವಿತಾ ಜೈನ್ ಅವರಿಗೆ ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ

ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (Karnataka Union of Working Journalists) ನೀಡುವ ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ವಿದ್ಯುನ್ಮಾನ ವಿಭಾಗದಲ್ಲಿ ನ್ಯೂಸ್ ​18 ಕನ್ನಡ ವಾರ್ತಾವಾಹಿನಿಯ ಮುಖ್ಯ ನಿರೂಪಕಿ, ಮೂಲತಃ ಬಂಟ್ವಾಳದವರಾದ ನವಿತಾ ಜೈನ್ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ದಾವಣಗೆರೆಯಲ್ಲಿ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು ಎಂದು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿರುತ್ತಾರೆ.

ಮೈಸೂರು ಜ. 31: ಮೈಸೂರು ಮಹಾರಾಜರಿಗೆ ‘ಮಹಾಮಸ್ತಕಾಭಿಷೇಕ’ ಮತ್ತು ‘ಅಜಿಲದರ್ಶನ’ ಕಾವ್ಯ ಸಂಕಲನ ಬಿಡುಗಡೆಗೆ ಆಹ್ವಾನ

Article Image

ಮೈಸೂರು ಜ. 31: ಮೈಸೂರು ಮಹಾರಾಜರಿಗೆ ‘ಮಹಾಮಸ್ತಕಾಭಿಷೇಕ’ ಮತ್ತು ‘ಅಜಿಲದರ್ಶನ’ ಕಾವ್ಯ ಸಂಕಲನ ಬಿಡುಗಡೆಗೆ ಆಹ್ವಾನ

ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಫೆ. 22ರಿಂದ ಮಾ. 1ರ ತನಕ ಜರಗಲಿರುವ ಭ| ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಮತ್ತು ಫೆ. 26ರಂದು ಅಳದಂಗಡಿ ಅರಮನೆಯಲ್ಲಿ ನಡೆಯಲಿರುವ ‘ಅಜಿಲ ದರ್ಶನ’ ಕಾವ್ಯಸಂಕಲನ ಬಿಡುಗಡೆ ಕಾರ್ಯಕ್ರಮಕ್ಕೆ ಮೈಸೂರಿನ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಇಂದು (ಜ. 31) ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ದಂಪತಿಗಳು, ಶಿವಪ್ರಸಾದ್ ಅಜಿಲ ದಂಪತಿಗಳು ಮತ್ತು ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್, ರಾಜೇಂದ್ರ ಕುಮಾರ್ ಮೂಲ್ಕಿ, ಪದ್ಮಕೀರ್ತಿ ಸೂರಾಲು ಅರಮನೆ ಹಾಗೂ ಗೌತಮ್ ಎಂ. ಜೈನ್ ಉಪಸ್ಥಿತರಿದ್ದರು.

ಬ್ಯೂರೋಕ್ರಾಟ್ಸ್ ಇಂಡಿಯಾ ಸಂಸ್ಥೆ ಗುರುತಿಸಿದ ಸಾಧಕ ಪಟ್ಟಿಗೆ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಆಯ್ಕೆ

Article Image

ಬ್ಯೂರೋಕ್ರಾಟ್ಸ್ ಇಂಡಿಯಾ ಸಂಸ್ಥೆ ಗುರುತಿಸಿದ ಸಾಧಕ ಪಟ್ಟಿಗೆ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಆಯ್ಕೆ

ಬ್ಯೂರೋಕ್ರಾಟ್ಸ್ ಇಂಡಿಯಾ (ಭಾರತದ ಅಧಿಕಾರಶಾಹಿ) ಸಂಸ್ಥೆ ಗುರುತಿಸಿದ 'ಆಡಳಿತ ಶಾಹಿಗಳ ತಳಮಟ್ಟದ ಅವಿಷ್ಕಾರಗಳು ಮತ್ತು ಕಲ್ಯಾಣ ಕಾರ್ಯಕ್ರಮ'ದ ಸಾಧಕರ ಪಟ್ಟಿಗೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಈ ಹಿಂದಿನ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಆಯ್ಕೆಯಾಗಿದ್ದಾರೆ. ಬ್ಯೂರೋಕ್ರಾಟ್ಸ್ ಇಂಡಿಯಾದಲ್ಲಿ ಐಎಎಸ್ ಮತ್ತು ಐಪಿಎಸ್ ಹುದ್ದೆಯಲ್ಲಿದ್ದು, ಸರಕಾರಿ ಕಾಯ೯ಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಅಧಿಕಾರಿಶಾಹಿಗಳ ನಿರಂತರ ಪ್ರಯತ್ನಗಳನ್ನು ಪರಿಗಣಿಸಿ, ಈ ಪಟ್ಟಿಗೆ ಸಾಧಕರನ್ನು ಗುರುತಿಸಲಾಗುತ್ತದೆ. 2023ರ ಸಾಲಿನಲ್ಲಿ ದೇಶಾದ್ಯಂತ ಒಟ್ಟು 23 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಕುಲದೀಪ್ ಆರ್. ಜೈನ್ ಕನಾ೯ಟಕದಿಂದ ಆಯ್ಕೆಯಾದ ಏಕೈಕ ಅಧಿಕಾರಿಯಾಗಿದ್ದಾರೆ. ಇವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಭ್ರಷ್ಟಾಚಾರದ ವಿರುದ್ಧ ದೃಢ ನಿಲುವು ತೋರಿ ಕಾಯ೯ನಿವ೯ಹಿಸಿದ್ದರು. ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಗಳ ಮೂಲಕ ಸಾವ೯ಜನಿಕರ ಸುರಕ್ಷತೆಯನ್ನು ಹೆಚ್ಚಿಸುವತ್ತ ವಿಶೇಷ ಗಮನ ಹರಿಸಿದ್ದರು. ಕನಾ೯ಟಕ ಕೇಡರ್‌ನ 2011ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಇವರು ಪ್ರಸ್ತುತ ಬೆಂಗಳೂರು ಪೂವ೯ ವಿಭಾಗದ (ಟ್ರಾಫಿಕ್) ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಡುಬಿದಿರೆ : ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ರಕ್ತದಾನ, ಕೇಶದಾನ ಶಿಬಿರ

Article Image

ಮೂಡುಬಿದಿರೆ : ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ರಕ್ತದಾನ, ಕೇಶದಾನ ಶಿಬಿರ

ಮೂಡುಬಿದಿರೆ: ಐ.ಸಿ.ವೈ.ಎಂ. ಮೂಡಬಿದಿರೆ, ರೋಟರಿ ಕ್ಲಬ್ ಮೂಡಬಿದಿರೆ ಟೆಂಪಲ್ ಟೌನ್ ಹಾಗೂ ಜೈನ್ ಮೆಡಿಕಲ್ ಸೆಂಟರ್ ಹಾಸ್ಪಿಟಲ್ ಜ್ಯೋತಿ ನಗರ ಇವರ ಸಹಯೋಗದಲ್ಲಿ ರಕ್ತದಾನ ಹಾಗೂ ಕೂದಲು ದಾನ ಶಿಬಿರವು ಜ. 26ರಂದು ಜೈನ್ ಮೆಡಿಕಲ್ ಸೆಂಟರ್ ಹಾಸ್ಪಿಟಲ್‌ನಲ್ಲಿ ನಡೆಯಿತು. ಮಂಗಳೂರು ಫಾದರ್ ಮುಲ್ಲರ್ ಹಾಸ್ಪಿಟಲ್‌ನ ತಜ್ಞರಿಂದ 62 ಬ್ಲಡ್ ಯೂನಿಟ್ಸ್ ಸಂಗ್ರಹಿಸಲಾಯಿತು. ಕ್ಯಾನ್ಸರ್ ಪೀಡಿತ ಜನರಿಗೆ ಕೂದಲಿನ ವಿಗ್ ಅವಶ್ಯವಿರುವ ದೃಷ್ಟಿಯಿಂದ 8 ಜನ ಹೆಣ್ಣುಮಕ್ಕಳು ತಮ್ಮ ಉದ್ದದ ಕೂದಲನ್ನು ದಾನ ಮಾಡಿದರು. ಕಾರ್ಪಸ್ ಕ್ರಿಸ್ಟಿ ಚರ್ಚಿನ ಧರ್ಮಗುರು ರೆ.ಫಾ. ಓನಿಲ್ ಡಿʼಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಜೈನ್ ಮೆಡಿಕಲ್ ಸೆಂಟರ್ ಹಾಸ್ಪಿಟಲ್ ಡಾ. ಮಹಾವೀರ ಜೈನ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ರೋಟರಿ ಅಧ್ಯಕ್ಷ ರೋನಾಲ್ಡ್ ಫೆರ್ನಾಂಡಿಸ್ ಐಸಿವೈಎಂನ ಅಧ್ಯಕ್ಷ ರೂಬೆನ್, ಮಿಚೆಲ್ ಡಿಸೋಜಾ ಜೈನ ಮೆಡಿಕಲ್ ಸೆಂಟರ್ ವೈದ್ಯಾಧಿಕಾರಿ ಡಾ. ಪ್ರಣಮ್ಯ ಜೈನ್, ದಿ. ಗ್ರೇಸನ್ ರೋಡ್ರಿಗಸ್ ಅವರ ತಂದೆ ಲಿಯೋ ರೋಡ್ರಿಗಸ್, ಐ.ಸಿ.ವೈ.ಎಂ. ಮೂಡುಬಿದಿರೆ ಸುವರ್ಣ ಮಹೋತ್ಸವದ ಸಂಚಾಲಕ ವಿನ್ಸೆಂಟ್ ಮಸ್ಕರೇನಸ್, ಐ.ಸಿ.ವೈ.ಎಂ. ಎನಿಮೇಟರ್ ರೊ. ಕೇವಿನ್ ಡಿಸೋಜ, ರೋಯ್‌ಸ್ಟನ್ ಪಿಂಟೊ ಉಪಸ್ಥಿತರಿದ್ದರು. ರೂಬನ್ ಸ್ವಾಗತಿಸಿದರು. ಡಿವಿಟಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ಯಾಲ್ವಿನ್ ವಂದಿಸಿದರು.

ಪ್ರತಿಯೊಂದು ಮನೆಯಲ್ಲಿಯೂ ಗ್ರಂಥಾಲಯವಿರಬೇಕು: ಹೇಮಾವತಿ ವೀ. ಹೆಗ್ಗಡೆ

Article Image

ಪ್ರತಿಯೊಂದು ಮನೆಯಲ್ಲಿಯೂ ಗ್ರಂಥಾಲಯವಿರಬೇಕು: ಹೇಮಾವತಿ ವೀ. ಹೆಗ್ಗಡೆ

ಉಜಿರೆ, ಜ. 27: ಹಿರಿಯರು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಂಡರೆ, ಮಕ್ಕಳೂ ಅವರನ್ನು ಅನುಕರಿಸುತ್ತಾರೆ. ಇದಕ್ಕಾಗಿ ಪ್ರತಿಯೊಂದು ಮನೆಯಲ್ಲಿಯೂ ದೇವರಕೋಣೆ ಇದ್ದಂತೆ ಒಂದು ಪುಟ್ಟ ಗ್ರಂಥಾಲಯವಿರಬೇಕು. ಪುಸ್ತಕಗಳು ಕಲಿತವರಿಗೆ ಕಾಮಧೇನು, ಕಲಿಯದವರಿಗೆ ಕಲ್ಪವೃಕ್ಷವಾಗಿದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು. ಅವರು ಶನಿವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಖ್ಯಾತ ಸಾಹಿತಿ ಕಬ್ಬಿನಾಲೆ ವಸಂತ ಭಾರಧ್ವಾಜ ಶುಭಾಶಂಸನೆ ಮಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಶಾಂತಿವನ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಿದ ಜ್ಞಾನದಾಸೋಹ ಭವ್ಯ ಭಾರತದ ಬಗ್ಗೆ ಹೊಸ ಬೆಳಕನ್ನು ಮೂಡಿಸಿದೆ. ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗಿ, ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರಾಮರಾಜ್ಯದ ಕನಸು ನನಸಾಗಲೆಂದು ಅವರು ಹಾರೈಸಿದರು. ನಂತರ ಅವರು ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಉಜಿರೆ : ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಕೆ. ಜಯಕೀರ್ತಿ ಜೈನ್‌ ಅವರಿಗೆ ಸನ್ಮಾನ

Article Image

ಉಜಿರೆ : ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಕೆ. ಜಯಕೀರ್ತಿ ಜೈನ್‌ ಅವರಿಗೆ ಸನ್ಮಾನ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಹಾಗೂ ಶ್ರೀ ಸಿದ್ಧವನ ಗುರುಕುಲದಲ್ಲಿ ಡೈರಿಂಗ್ ಡಿಪ್ಲೋಮಾ ಮಾಡಿ ಸರ್ಕಾರಿ ಸೇವೆಗೆ ಸೇರಿದ ಅಧಿಕಾರಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸರ್ಕಾರಿ ಸೇವೆಗೆ ಸೇರಲು ಮುಂದಾಳತ್ವವನ್ನು ವಹಿಸಿದ್ದ ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಅವರನ್ನು ಜ. 28ರಂದು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಇವರು ವೇಣೂರು ಭ| ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಸರಕಾರದಿಂದ ಸಮನ್ವಯಾಧಿಕಾರಿಯಾಗಿರುತ್ತಾರೆ.

ಶ್ರೀಕ್ಷೇತ್ರ ಧರ್ಮಸ್ಥಳ : ಮೇ 1ರಂದು 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Article Image

ಶ್ರೀಕ್ಷೇತ್ರ ಧರ್ಮಸ್ಥಳ : ಮೇ 1ರಂದು 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮೇ 1 ಬುಧವಾರದಂದು ಸಂಜೆ 6.45ರ ಗೋಧೋಳಿ ಲಗ್ನದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಳ ಸೂತ್ರ, ಹೂವಿನ ಹಾರ ನೀಡಲಾಗುವುದು. ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ. ಮದುವೆಯ ಎಲ್ಲಾ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಭರಿಸಲಾಗುವುದು. ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿಯವರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿ ವರ್ಷ ನಡೆಸಲಾಗುತ್ತಿದ್ದು, ಈತನಕ ಒಟ್ಟು 12,777 ಜೋಡಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲಿಚ್ಛಿಸುವವರು ಏಪ್ರಿಲ್ 20ರೊಳಗೆ ಸವಿವರ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದೂರವಾಣಿ 08256-266644, ವಾಟ್ಸಪ್ ನಂ. 9663464648, 8147263422

ಮೂಡುಬಿದಿರೆ, ಎಕ್ಸಲೆಂಟ್ : ಜ. 26-27 ಸ್ವಚ್ಛನಗರ ಮಿಷನ್-ಜಾಗೃತಿ ಅಭಿಯಾನ

Article Image

ಮೂಡುಬಿದಿರೆ, ಎಕ್ಸಲೆಂಟ್ : ಜ. 26-27 ಸ್ವಚ್ಛನಗರ ಮಿಷನ್-ಜಾಗೃತಿ ಅಭಿಯಾನ

ವೇಣೂರಿನ ಮಹಾಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ಗಣರಾಜ್ಯೋತ್ಸವದಂದು ‘ಸ್ವಚ್ಛ ನಗರ ಮಿಷನ್‘ ಎಂಬ ಸಂಕಲ್ಪದಡಿಯಲ್ಲಿ 2 ದಿನಗಳ ಸ್ವಚ್ಛತಾ ಜಾಗೃತಿ ಅಭಿಯಾನವನ್ನು ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆ ಹಮ್ಮಿಕೊಂಡಿದೆ. ‘ಸ್ವಚ್ಚತಾ ಹೀ ಸೇವಾ‘ ಎಂಬ ಘೋಷವಾಕ್ಯದೊಂದಿಗೆ ಮೂಡುಬಿದಿರೆಯಿಂದ ವೇಣೂರು ತನಕ 2 ದಿನಗಳ ಸ್ವಚ್ಚತಾ ಜಾಗೃತಿ ಅಭಿಯಾನ ನಡೆಯಲಿದೆ. ಜನವರಿ 26ರಂದು ಬೆಳಗ್ಗೆ ಉದ್ಘಾಟನೆಗೊಂಡು ಜೈನ್ ಮಿಲನ್ ಮೂಡುಬಿದಿರೆ, ರೋಟರಿ ಕ್ಲಬ್ ಟೆಂಪಲ್ ಟೌನ್, ಲಯನ್ಸ್ ಕ್ಲಬ್, ಜೆ.ಸಿ.ಐ. ಮೂಡುಬಿದಿರೆ ಹಾಗೂ ಪತ್ರಕರ್ತರ ಸಂಘ ಮೂಡುಬಿದಿರೆ, ಶ್ರೀ ಧರ್ಮಸ್ಥಳ ಅನುದಾನಿತ ಶಾಲೆ ಪೆರಿಂಜೆ, ನವಚೇತನ ಶಿಕ್ಷಣ ಸಂಸ್ಥೆ ವೇಣೂರು, ಸಂತ ಜೂಡರ ಶಾಲೆ ಕರಿಮಣೇಲು ಇವರ ಸಹಯೋಗದೊಂದಿಗೆ ಈ ಅಭಿಯಾನ ಪ್ರಾರಂಭಗೊಂಡು, ಜನವರಿ 27ರಂದು ಮುಕ್ತಾಯಗೊಳ್ಳಲಿದೆ.

ಹಿರಿಯ ವಕೀಲ, ಎನ್. ನೇಮಿರಾಜ್ ಶೆಟ್ಟಿ ನಿಧನ

Article Image

ಹಿರಿಯ ವಕೀಲ, ಎನ್. ನೇಮಿರಾಜ್ ಶೆಟ್ಟಿ ನಿಧನ

ಬೆಳ್ತಂಗಡಿ ತಾಲೂಕಿನ ಹಿರಿಯ ವಕೀಲರು, ಪಡಂಗಡಿ ನಡಿಬೆಟ್ಟುಗುತ್ತು ನೇಮಿರಾಜ್ ಶೆಟ್ಟಿ (95ವ.) ಇಂದು (20-01-2024) ನಿಧನರಾಗಿದ್ದಾರೆ. ಪಡಂಗಡಿ, ಪೆರಣಮಂಜ ಶ್ರೀ ಮೂಜಿಲ್ನಾಯ ದೈವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾಗಿದ್ದ ಇವರು ಸುಮಾರು 50 ವರ್ಷಕ್ಕೂ ಮಿಕ್ಕಿ ವಕೀಲರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದ ಇವರು ಬಿ.ಜೆ.ಪಿ.ಯ ಹಿರಿಯ ಧುರೀಣರಾಗಿದ್ದರು. ಅಲ್ಲದೆ ಬೆಳ್ತಂಗಡಿ ಕ್ಷೇತ್ರದಿಂದ ಜನಸಂಘ ಪಕ್ಷದಲ್ಲಿ ಶಾಸಕ ಸ್ಥಾನಕ್ಕೂ ಸ್ಪರ್ಧಿಸಿದ್ದರು. ಇವರು ಪತ್ನಿ ಪ್ರೇಮಾ, ಪುತ್ರಿಯರಾದ ವಾಣಿ ರಾಜೇಂದ್ರ ಕುಮಾರ್, ನ್ಯಾಯಾಧೀಶೆ ಉಷಾ ಶಶಿಕಾಂತ್ ಪ್ರಸಾದ್, ಸೌಮ್ಯ ರತನ್ ಕುಮಾರ್ ಮತ್ತು ಕುಟುಂಬ ವರ್ಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಹಿರಿಯ ಪುತ್ರ ಪ್ರಶಾಂತ್‌ ಕುಮಾರ್‌ ನಡಿಬೆಟ್ಟು ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತರ ಅಂತಿಮ ಸಂಸ್ಕಾರವು ಇಂದು (20-01-2024) ಅಪರಾಹ್ನ 2 ಗಂಟೆಯ ನಂತರ ನಡಿಬೆಟ್ಟುಗುತ್ತುವಿನಲ್ಲಿ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಆರಂಭ

Article Image

ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಆರಂಭ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಐತಿಹಾಸಿಕ ಆನೆಕೆರೆ ಚತುರ್ಮುಖ ಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಪ್ರಾರಂಭಗೊಂಡು ಜ. 22ರ ವರೆಗೆ ನಡೆಯಲಿದೆ. ಸುಮಾರು 5 ಶತಮಾನಗಳಷ್ಟು ಪ್ರಾಚೀನ ಆನೆಕೆರೆ ಬಸದಿ ಐವರು ತೀರ್ಥಂಕರರ ಭವ್ಯ ಬಿಂಬಗಳಿಂದ ಕೂಡಿದೆ. ಚತುರ್ಮುಖ ಬಸದಿಯ ವಾಸ್ತು ಶೈಲಿಯನ್ನು ಹೊಂದಿರುವ ಕೆರೆ ಬಸದಿಯನ್ನು ಭೈರವರಸರ ವಂಶಸ್ಥ ಪಾಂಡ್ಯನಾಥ ಪಾಂಡ್ಯಪ್ಪೊಡೆಯ 16.05.1545ರಲ್ಲಿ ಕಟ್ಟಿಸಿದರು ಎಂದು ಇತಿಹಾಸ ಹೇಳುತ್ತದೆ. 2022ರಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದ್ದು, ಸುಮಾರು 26 ಎಕರೆ ವಿಸ್ತೀರ್ಣದಲ್ಲಿ ಆನೆಕೆರೆ ಬಸದಿಯು ಶೋಭಿಸುತ್ತಿದೆ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರೀ ಜೈನಮಠ, ದಾನಶಾಲಾ ಕಾರ್ಕಳ ಇವರ ನೇತೃತ್ವದಲ್ಲಿ ಮತ್ತು ಸಮಸ್ತ ಭಟ್ಟಾರಕರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ರವರ ಸಹಕಾರದೊಂದಿಗೆ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಕಲ್ಯಾಣ ಮಹೋತ್ಸವವು ನೂತನ ಶಿಲಾಮಂದಿರಲ್ಲಿ ಆಗಮೋಕ್ತ ವಿಧಿ- ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ. ನೂತನ ಆನೆಕೆರೆ ಬಸದಿಯು ಸುಂದರವಾದ ಕೆತ್ತನೆಯಲ್ಲಿ ಶಿಲಾಮಯವಾಗಿ ರೂಪುಗೊಂಡ ದ್ವಾರಪಾಲಕರು, ತಿರುಗಿಸಬಹುದಾದಂತಹ ಕಂಬಗಳು, ಪಾಣಿಪೀಠದ ಬುಡದಲ್ಲಿ ಸೂಕ್ಷ್ಮವಾದ ಕೆತ್ತನೆಗಳು, ಶಾಶ್ವತ ವಿದ್ಯುತ್ ದೀಪಾಲಂಕಾರ ಹೀಗೆ ಅನೇಕ ವಿಶೇಷತೆಗಳೊಂದಿಗೆ ಲೋಕಾರ್ಪಣೆಗೆ ಸಿದ್ದವಾಗಿದೆ.

ವೇಣೂರು: ಮಹಾಮಸ್ತಕಾಭಿಷೇಕಕ್ಕೆ ವಿವಿಧ ಮೂಲಗಳಿಂದ ಅನುದಾನ, ಭರದಿಂದ ಸಾಗುತ್ತಿರುವ ಅಭಿವೃದ್ಧಿ ಕಾರ್ಯ

Article Image

ವೇಣೂರು: ಮಹಾಮಸ್ತಕಾಭಿಷೇಕಕ್ಕೆ ವಿವಿಧ ಮೂಲಗಳಿಂದ ಅನುದಾನ, ಭರದಿಂದ ಸಾಗುತ್ತಿರುವ ಅಭಿವೃದ್ಧಿ ಕಾರ್ಯ

ಬೆಳ್ತಂಗಡಿ ತಾಲೂಕಿನ ವೇಣೂರಿನ ಭ| ಶ್ರೀ ಬಾಹುಬಲಿ ಸ್ವಾಮಿಯ ವೈಭವದ ಮಹಾಮಸ್ತಕಾಭಿಷೇಕಕ್ಕೆ ಇನ್ನು ಕೆಲವೇ ದಿನಗಳ ಅಂತರವಿದ್ದು, 12 ವರುಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ನಾಡಿನ ಜನತೆ ಕಾತುರರಾಗಿದ್ದಾರೆ. ಅಟ್ಟಳಿಗೆಯ ನಿಮಾ೯ಣವು ಭರದಿಂದ ಸಾಗುತ್ತಿದೆ. ಇದರ ಜೊತೆಗೆ ರಾಜ್ಯ ಸರಕಾರದ ಅಲ್ಪಸಂಖ್ಯಾತರ ಇಲಾಖೆಯಿಂದ ಗ್ರಾನೈಟ್, ಇಂಟರ್ಲಾಕ್ ಮತ್ತು ಹಳೆಯ ಹಾಸುಗಲ್ಲಿನ ಬದಲು ಹೊಸ ಹಾಸುಗಲ್ಲುಗಳ ಹೊದಿಕೆ ಹಾಗೂ ಬೆಟ್ಟದ ಎಡ ಮತ್ತು ಬಲ ಬದಿಯಲ್ಲಿರುವ ಬಿನ್ನಾಣಿ ಬಸದಿ ಮತ್ತು ಅಕ್ಕಂಗಳ ಬಸದಿಯ ದುರಸ್ತಿಗೆ 1 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿರುತ್ತದೆ. ಸ್ವಚ್ಛ ಭಾರತ ಅಭಿಯಾನದಿಂದ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಶೌಚಾಲಯದ ನಿಮಾ೯ಣ, MRPLನ CSR ಫಂಡ್ ಮೂಲಕ ಭಕ್ತಾಧಿಗಳಿಗೆ ಮೂಲಭೂತ ಸೌಕಯ೯ ಒದಗಿಸಲು ತ್ಯಾಗಿನಿವಾಸದ ಬಳಿ ಶೌಚಾಲಯ ಮತ್ತು ಸ್ನಾನಗೃಹದ ನಿಮಾ೯ಣದ ಕೆಲಸವು ನಡೆಯುತ್ತಿದೆ. ಅಲ್ಲದೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ವಿಶೇಷ ಮುತುವರ್ಜಿಯಿಂದ ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ಧರಾಮಯ್ಯನವರು ಕಲ್ಲು ಬಸದಿಯ ಆವರಣದಲ್ಲಿ ಸಭಾ ಭವನದ ನಿರ್ಮಾಣಕ್ಕೆ ರೂ. 50 ಲಕ್ಷ ಬಿಡುಗಡೆಗೊಳಿಸಿರುತ್ತಾರೆ. ಹಾಗೆಯೇ ಕರ್ನಾಟಕ ಸರಕಾರದ ಸಣ್ಣ ನೀರಾವರಿಯ ಇಲಾಖೆಯಿಂದ 45 ಲಕ್ಷ ರೂ. ಕಲ್ಲು ಬಸದಿಯ ಸನಿಹದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿರುತ್ತಾರೆ. ಮಂಗಳೂರಿನ ಶ್ರೀ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಬೆಟ್ಟದ ಹೊರಾಂಗಣಕ್ಕೆ 20 ಸೋಲಾರ್ ದೀಪಗಳ ಅಳವಡಿಕೆಗೆ 2 ಲಕ್ಷ ರೂ.ಗಳನ್ನು ನೀಡಿರುತ್ತಾರೆ. ವಿಶೇಷವಾಗಿ, ಈ ಬಾರಿಯ ಮಹಾಮಸ್ತಕಾಭಿಷೇಕದ ಮನವಿ ಪತ್ರ ಮತ್ತು ಶ್ರೀಮುಖ ಪತ್ರಿಕೆಯನ್ನು ಅವಿಭಜಿತ ದ.ಕ. ಜಿಲ್ಲೆಯ ಪ್ರತಿಯೊಂದು ಮನೆಗೆ ಸಮಿತಿಯ ಸದಸ್ಯರು ಭೇಟಿ ನೀಡಿ ಮಹಾಮಸ್ತಕಾಭಿಷೇಕಕ್ಕೆ ಆಹ್ವಾನಿಸುತ್ತಿದ್ದಾರೆ. ಇದುವರೆಗೆ 1500ಕ್ಕಿಂತಲೂ ಅಧಿಕ ಮನೆಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ನೀಡಿರುತ್ತಾರೆ. ಮಸ್ತಕಾಭಿಷೇಕ ಸಮಿತಿಯಲ್ಲಿ 30ರಷ್ಟು ವಿವಿಧ ಉಪಸಮಿತಿಗಳನ್ನು ರಚನೆ ಮಾಡಲಾಗಿದ್ದು, ಆ ಸಮಿತಿಗಳ ಸಭೆಯು ಆಗಾಗ ನಡೆಯುತ್ತಿದ್ದು, ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಶ್ರಮಿಸುತ್ತಿದೆ. ಪ್ರತಿಯೊಂದು ಮನೆಯವರು ಕನಿಷ್ಟ ಒಂದು ಕಲಶವನ್ನಾದರೂ ಪಡೆದುಕೊಂಡು ಪುಣ್ಯಭಾಗಿಗಳಾಗಬೇಕಾಗಿ ಸಮಿತಿಯವರು ವಿನಂತಿಸಿರುತ್ತಾರೆ.

ಮಾರ್ಚ್ ನಲ್ಲಿ ಕೇಂದ್ರೀಯ ವಿವಿ ಆನ್ ಲೈನ್ ಪ್ರವೇಶ ಪರೀಕ್ಷೆ

Article Image

ಮಾರ್ಚ್ ನಲ್ಲಿ ಕೇಂದ್ರೀಯ ವಿವಿ ಆನ್ ಲೈನ್ ಪ್ರವೇಶ ಪರೀಕ್ಷೆ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ತರಗತಿಗಳ ಪ್ರವೇಶಾತಿಗೆ 2024ರ ಮಾರ್ಚ್ 11ರಿಂದ 28ರವರೆಗೆ ಆನ್ ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಡಿ.26ರಿಂದ ಆನ್ ಲೈನ್ ಮೂಲಕ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದ್ದು, ಜ.24ರಂದು ಸಂಜೆ 5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ತಿದ್ದುಪಡಿಗೆ ಜ.27ರಿಂದ 29ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸ್ನಾತಕ ಪದವಿಯ ಅಂತಿಮ ಸೆಮಿಸ್ಟರ್ ನಲ್ಲಿ ಓದುತ್ತಿರುವ ಮತ್ತು ಈಗಾಗಲೇ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಸಹ http://pgcuet.samarth.ac.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಿಯುಕೆ ಕೋರ್ಸುಗಳ ವಿವರ ಮತ್ತು ನಿಗದಿಪಡಿಸಲಾಗಿರುವ ಅರ್ಹತೆ ಕುರಿತು ವಿಶ್ವವಿದ್ಯಾಲಯದ ವೆಬ್ ಸೈಟ್ www.cuk.ac.in ಮತ್ತು http://nta.ac.in ಹಾಗೂ http://pgcuet.samarth.ac.in ಮೂಲಕ ಪರಿಶೀಲಿಸಬಹುದಾಗಿದೆ ಎಂದರು.

ವಸಂತ ಗಿಳಿಯಾರ್ ರವರಿಂದ ಭುವನವಾಹಿನಿ ವೆಬ್ ಸೈಟ್ ಅನಾವರಣ

Article Image

ವಸಂತ ಗಿಳಿಯಾರ್ ರವರಿಂದ ಭುವನವಾಹಿನಿ ವೆಬ್ ಸೈಟ್ ಅನಾವರಣ

ಕುಂದಾಪುರ ಜ. 16: ಭುವನವಾಹಿನಿ ಜಿನಮಿತ್ರ ಮತ್ತು ಜನಮಿತ್ರ ಪತ್ರಿಕೆಯು ರಜತ ವಷ೯ ಪೂರೈಸಿರುವ ಈ ಸುಸಂದಭ೯ದಲ್ಲಿ ಭುವನವಾಹಿನಿಯ ನೂತನ ವೆಬ್ ಸೈಟ್ ನ್ನು ಪತ್ರಕತ೯ ವಸಂತ ಗಿಳಿಯಾರ್ ಇವರು ಉದ್ಘಾಟಿಸುವ ಮೂಲಕ ಅನಾವರಣಗೊಳಿಸಿ ಶುಭ ಹಾರೈಸಿದರು ಮತ್ತು ಭುವನವಾಹಿನಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ| ವಿಜಯ ಕುಮಾರ್ ಕತ್ತೋಡಿರವರು ಮೊದಲ ನ್ಯೂಸ್ ನ್ನು ಅಪ್ಲೋಡ್ ಮಾಡುವ ಮೂಲಕ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಭುವನವಾಹಿನಿಯ ಪರವಾಗಿ ಶ್ರೀಮುಖ ವಿ. ಕೆ, ಹರ್ಷೇಂದ್ರ ಕುಮಾರ್ ಮೂಡುಕೋಡಿ, ಪ್ರಣಾಮ್ ಎಂ. ಬಿ, ಮಮತಾ ಮತ್ತು ಪವಿತ್ರ ಉಪಸ್ಥಿತರಿದ್ದರು

ಎಂ. ಬಾಹುಬಲಿ ಪ್ರಸಾದ್ ಅವರು ಅಧ್ಯಕ್ಷರಾಗಿ ಆಯ್ಕೆ

Article Image

ಎಂ. ಬಾಹುಬಲಿ ಪ್ರಸಾದ್ ಅವರು ಅಧ್ಯಕ್ಷರಾಗಿ ಆಯ್ಕೆ

ಮೂಡುಬಿದಿರೆ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿ ಲಿ., ಇದರ ಅಧ್ಯಕ್ಷರಾಗಿ “ಸಹಕಾರ ರತ್ನ” ಎಂ. ಬಾಹುಬಲಿ ಪ್ರಸಾದ್ ನ್ಯಾಯವಾದಿ ಇವರು ಎರಡನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ. ಅಭಯಚಂದ್ರ ಜೈನ್, ಅಶೋಕ ಕಾಮತ್ ಎಂ.ಪಿ., ಎಂ. ಜ್ಞಾನೇಶ್ವರ ಕಾಳಿಂಗ ಪೈ, ಜಯರಾಮ ಕೋಟ್ಯಾನ್, ಮನೋಜ್ ಕುಮಾರ್ ಶೆಟ್ಟಿ, ಸಿ. ಎಚ್. ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ. ಈಗಾಗಲೇ ಎಂ. ಗಣೇಶ್ ನಾಯಕ್, ಜಾರ್ಜ್ ಮೋನಿಸ್, ಎಂ. ಪದ್ಮನಾಭ ಹಾಗೂ ದಯಾನಂದ ನಾಯ್ಕರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫೆ. 22 - ಮಾ. 1: ವೇಣೂರು ಭ| ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Article Image

ಫೆ. 22 - ಮಾ. 1: ವೇಣೂರು ಭ| ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವವು ಪರಮಪೂಜ್ಯ ಯುಗಳ ಮುನಿವರ್ಯರಾದ ೧೦೮ ಅಮೋಘಕೀರ್ತಿ ಮುನಿ ಮಹಾರಾಜರು ಹಾಗೂ ೧೦೮ ಅಮರಕೀರ್ತಿ ಮುನಿ ಮಹಾರಾಜರ ಪಾವನ ಸಾನಿಧ್ಯ-ಶುಭಾಶೀರ್ವಾದಗಳೊಂದಿಗೆ, ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ʼರಾಜರ್ಷಿʼ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಕಾರ್ಯಾಧ್ಯಕ್ಷತೆಯಲ್ಲಿ ಫೆ. 22ರಿಂದ ಮಾ. 1ರ ತನಕ ಜರಗಲಿದೆ.

First Previous

Showing 5 of 5 pages

Next Last