ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ


Logo

Published Date: 01-Sep-2024 Link-Copied

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಸಲ್ಪಡುತ್ತಿರುವ ಎಲ್ಲಾ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣವಿದೆ ಎಂದು ಮಂಗಳೂರಿನ ನೇಶನಲ್ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ಯು.ಎಚ್. ಖಾಲಿದ್ ಉಜಿರೆ ಹೇಳಿದರು. ಅವರು ಶನಿವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ 15 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರೂ. 5,000/- ದಂತೆ ರೂ. 75,000/- ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಧರ್ಮ ಮತ್ತು ರಾಷ್ಟ್ರ ನಮ್ಮ ಎರಡು ಕಣ್ಣುಗಳಂತೆ ಮಹತ್ವಪೂರ್ಣವಾಗಿವೆ. ಎಲ್ಲಾ ಧರ್ಮಗಳೂ ಶಾಂತಿ-ಸಾಮರಸ್ಯದ ಸಂದೇಶವನ್ನು ಸಾರುತ್ತವೆ. ನಮ್ಮ ಧರ್ಮವನ್ನು ಪ್ರೀತಿಸಿ, ಪಾಲಿಸುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸಬೇಕು ಎಂದರು. ಸುಳ್ಳು ಹೇಳಬೇಡಿ, ಮೋಸ, ವಂಚನೆ ಮಾಡದೆ ಹಿತ-ಮಿತ ಮಾತುಗಳೊಂದಿಗೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮೂಡಬಿದ್ರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಬಿ.ಪಿ. ಸಂಪತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳ ಸದುಪಯೋಗ ಪಡೆದು ಸಾರ್ಥಕ ಜೀವನ ನಡೆಸಬೇಕು. ಮೊಬೈಲ್‌ ಫೋನ್‌ನ ಅತಿ ಬಳಕೆಯಿಂದ ಮಾನವೀಯ ಸಂಬಂಧಗಳು ಕುಸಿಯುತ್ತಿವೆ ಎಂದು ಅವರು ವಿಷಾದಿಸಿದರು. ಎಲ್ಲಾ ದಾನಗಳಿಗಿಂತ ವಿದ್ಯಾದಾನ ಶ್ರೇಷ್ಠವಾಗಿದ್ದು ಸಿದ್ದವನ ಗುರುಕುಲ ಮತ್ತು ಎಸ್.ಡಿ.ಎಂ. ಕಾಲೇಜಿನಿಂದಾಗಿ ತಾನು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದರು. ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಮಂಗಳೂರು ಕ್ಷೇತ್ರ ಅಧಿಕಾರಿ ಜಿತು ನಿಡ್ಲೆ ಮಾತನಾಡಿ, ಕಾಲೇಜಿನ ಗ್ರಂಥಾಲಯ, ಭಿತ್ತಿಪತ್ರಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ತನ್ನ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರ ಹೆಗ್ಡೆ, ವಿದ್ಯಾರ್ಥಿ ವೇತನದ ಸದುಪಯೋಗ ಪಡೆದು ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ ಮತ್ತು ಉಪಾಧ್ಯಕ್ಷ ಎಂ. ಗುರುನಾಥ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಎಂ.ಪಿ. ಶ್ರೀನಾಥ್ ಸ್ವಾಗತಿಸಿದರು. ಸಸ್ಯಶಾಸ್ತ್ರ ಉಪನ್ಯಾಸಕ ಅಭಿಲಾಷ್ ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕ ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು. ಯು. ಯಚ್. ಖಾಲಿದ್, ಉಜಿರೆ ಅವರ ಏಕಪಾತ್ರಾಭಿನಯ ಮತ್ತು ಸುಶ್ರಾವ್ಯ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img