ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
Published Date: 15-Aug-2024 Link-Copied
ಮೂಡುಬಿದಿರೆ:- ಭಾರತ ದೇಶದಲ್ಲಿ ಜನಿಸಿರುವುದೇ ನಮ್ಮೆಲ್ಲರ ಭಾಗ್ಯ ಭಾರತ ಪುಣ್ಯ ಭೂಮಿ. 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ನಾವೆಲ್ಲರೂ ಸ್ವಾತಂತ್ರ್ಯಕ್ಕಾಗಿ ಮಡಿದ ಲಕ್ಷಾಂತರ ವೀರರ ಸ್ಮರಣೆಯನ್ನು ಮಾಡಿಕೊಳ್ಳುತ್ತಾ ತಾಯಿ ಭಾರತಿಗೆ, ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಆಕೆಯ ಕೀರ್ತಿಯನ್ನು ಜಗದಗಲಕ್ಕೆ ತಲುಪಿಸುವ ಅತ್ಯಂತ ಮಹತ್ವದ ದಿನ ಇದಾಗಿದೆ. ಪ್ರತಿಯೊಬ್ಬರ ಮನಸಿನಲ್ಲಿ ತಿರಂಗ ಸದಾ ಹಾರುತ್ತಿರಲಿ ಎಂದು ಮೂಡುಬಿದಿರೆ-ಮುಲ್ಕಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ಸ್ವಾತಂತ್ರ್ಯ ಲಭಿಸಿದ 77 ವರ್ಷಗಳಿಂದ ದೇಶದಲ್ಲಿ ಏನೆಲ್ಲ ಬದಲಾವಣೆಯಾಗಿದೆ. ನಮ್ಮ ದೇಶದ ಪ್ರಗತಿ ಹೇಗಿದೆ ಎನ್ನುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರ ಹೃದಯದಲ್ಲಿ ತಾಯಿನಾಡಿನ ಬಗ್ಗೆ ಮಾತೃಭೂಮಿಯ ಬಗ್ಗೆ ಅಭಿಮಾನವಿರಬೇಕು. ನಮಗಾಗಿ ಹೋರಾಡಿ ಮಡಿದ ವೀರ ಯೋಧರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕಿ ಸಾಯಿಶೃತಿ ನಿರೂಪಿಸಿದರು. ಸಹ ಮುಖ್ಯೋಪಾಧ್ಯಾಯ ಸ್ವಾಗತಿಸಿದರು. ಸಿಬಿಎಸ್‌ಸಿ ಶಾಲೆಯ ಪ್ರಾಂಶುಪಾಲರಾದ ಸುರೇಶ್ ವಂದಿಸಿದರು.