Article Image 1 Article Image 2

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯದ ಘಟಿಕೋತ್ಸವ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯದ ಘಟಿಕೋತ್ಸವ

ಧಾರವಾಡದ ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವವು ಮಾರ್ಚ್ 27ರಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಪ್ರೇಮಾ ಧನರಾಜ್, ಸ್ಥಾಪಕ ನಿರ್ದೇಶಕರು, ಅಗ್ನಿ ಸುರಕ್ಷಾ, ಬೆಂಗಳೂರು ಮತ್ತು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತಿತರ ಗಣ್ಯರು ಘಟಿಕೊತ್ಸವವನ್ನು ಉದ್ಘಾಟಿಸಿದರು. ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ವಿದ್ಯಾರ್ಥಿಗಳಿಗೆ ಆಶೀರ್ವದಿಸಿ, ಮಾತನಾಡುತ್ತಾ, ಸರಿಯಾದ ನಿರ್ಧಾರ ಮತ್ತು ಪರಿಶ್ರಮದಿಂದ ವೈದ್ಯರು ಉತ್ತುಂಗಕ್ಕೇರಬಹುದು, ಉತ್ತಮ ಆರೋಗ್ಯ ಮತ್ತು ನೆಮ್ಮದಿಗೆ ಸರಿಯಾದ ಜೀವನ ಶೈಲಿಯು ಕಾರಣ, ವಿದ್ಯಾರ್ಥಿಗಳು ಹೆತ್ತವರ ತ್ಯಾಗ ಮತ್ತು ಕನಸನ್ನು ನನಸಾಗಿಸುವಲ್ಲಿ ಕಾರ್ಯನಿರತರಾಗಬೇಕು, ಮಾನವೀಯತೆ ಮತ್ತು ವಿನಂಮೃತೆಯಿಂದ ವೈದ್ಯರು ರೋಗಿಯ ಸೇವೆ ಮಾಡಬೇಕು, ರೋಗಿಗಳಿಗೆ ವೈದ್ಯರ ಮೇಲೆ ವಿಶ್ವಾಸ ಮತ್ತು ಸಂತೋಷವಾಗಲು ಸದಾ ಅವರನ್ನು ವಿಚಾರಿಸುತ್ತಿರಬೇಕು. ಮುಖ್ಯ ಅತಿಥಿಗಳಾದ ಡಾ. ಪ್ರೇಮಾ ಧನರಾಜ್ ಅವರು ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನ ಹರಿಸುತ್ತಾ ಸಮಸ್ಯೆಗಳನ್ನು ನಿಭಾಯಿಸಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ನೈತಿಕತೆಯ ಪ್ರಾಮುಖ್ಯತೆಯನ್ನು ಹೆತ್ತವರು ತಿಳಿಸಬೇಕು, ಮತ್ತೊಬ್ಬರನ್ನು ತುಲನೆ ಮಾಡಿಕೊಳ್ಳದೇ ನಾವು ಸದಾ ಖುಷಿ-ಸಂತೋಷದಿಂದಿರಬೇಕು. ಕಠಿಣ ಪರಿಶ್ರಮ, ನೈತಿಕತೆ, ಮಾನವೀಯತೆಯಿಂದ ಒಬ್ಬ ಪರಿಪೂರ್ಣ ವ್ಯಕ್ತಿ ಎನಿಸಬಹುದು. ಪ್ರತಿಯೊಬ್ಬರೂ ನಿಖರವಾದ ಗುರಿಯನ್ನು ಹೊಂದುವುದರೊಂದಿಗೆ ಗುರಿ ಮುಟ್ಟುವಂತೆ ಶ್ರಮಿಸಬೇಕು. ಜೀವನದಲ್ಲಿ ಏರಿಳಿತ ಸ್ವಾಭಾವಿಕವಾದುದರಿಂದ ಅದನ್ನು ಮೆಟ್ಟಿನಿಂತು ಪರಿಹರಿಸಬೇಕು. ಏಕಾಗ್ರತೆ, ಪ್ರೇರಣೆ, ಸೂಕ್ತ ನಿರ್ಣಯಗಳು ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ದಿನದಿಂದ ದಿನಕ್ಕೆ ಮೇಲುಗೈ ಸಾಧಿಸುತ್ತಾ ವಿಜಯಿಯಾಗಬೇಕು. ಈ ಘಟಿಕೋತ್ಸವದಲ್ಲಿ ಎಸ್.ಡಿ.ಎಂ. ಸಂಸ್ಥೆಗಳ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ, ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಡಾ. ನೈದಿಲ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು, ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 115 ಪದವಿಧರರು ಮತ್ತು 180 ಸ್ನಾತ್ತಕೋತ್ತರ ಪದವಿಧರರು ತಮ್ಮ ಪದವಿಗಳನ್ನು ಮುಖ್ಯ ಅತಿಥಿಗಳಿಂದ ಪಡೆದರು. 9 ಪ್ರತಿಭಾವಂತ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ಪಡೆದರು. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ ಅವರು ವಿಶ್ವವಿದ್ಯಾಲಯದ ವಾರ್ಷಿಕ ವರದಿ ಮಂಡಿಸಿದರು. ಡಾ. ಸುರೇಶ ಮನಗುತ್ತಿ ಮತ್ತು ಡಾ. ಅಂಕಿತಾ ಪಾಟೀಲ ಕಾರ್ಯಕ್ರವನ್ನು ನಿರೂಪಿಸಿದರು. ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್. ಅವರು ವಂದನಾರ್ಪಣೆ ಸಲ್ಲಿಸಿದರು.

ಪಿಎಸ್‌ಐ ಪರೀಕ್ಷೆ ಮುಂದೂಡಿಕೆ

Article Image

ಪಿಎಸ್‌ಐ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಮೇ 8ರಂದು ನಿಗದಿ ಮಾಡಿದ್ದ ಪಿಎಸ್‌ಐ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ. ಲೋಕಸಭಾ ಚುನಾವಣೆ ಕಾರಣಕ್ಕೆ ಮುಂದೂಡಲಾಗಿದೆ. ಪರಿಷ್ಕ್ರತ ದಿನಾಂಕವನ್ನು ಚುನಾವಣೆ ಮುಗಿದ ಬಳಿಕ ಪ್ರಕಟಿಸಲಾಗುವುದು ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಹೇಳಿದ್ದಾರೆ. 402 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇರ ನೇಮಕಾತಿಗೆ ಮೇ 8ರಂದು ಲಿಖಿತ ಪರೀಕ್ಷೆ ನಿಗದಿಯಾಗಿತ್ತು. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದವರಿಗೆ ಲಿಖಿತ ಪರೀಕ್ಷೆಗೆ ಅವಕಾಶ ನೀಡಲು ಕೆಇಎ ಪ್ರಕಟಣೆ ಹೊರಡಿಸಿತ್ತು.

ರಜಾದಿನಗಳಲ್ಲೂ ಮೆಸ್ಕಾಂ ಕೌಂಟರ್ ಲಭ್ಯ

Article Image

ರಜಾದಿನಗಳಲ್ಲೂ ಮೆಸ್ಕಾಂ ಕೌಂಟರ್ ಲಭ್ಯ

ಮಂಗಳೂರು/ಉಡುಪಿ ಮಾ. 22: ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜಾದಿನಗಳಾದ ಮಾ. 23 (ನಾಲ್ಕನೇ ಶನಿವಾರ), ಮಾ. 24 (ರವಿವಾರ), ಮಾ. 29(ಗುಡ್ ಫ್ರೈಡೆ) ಹಾಗೂ ಮಾ. 31 (ರವಿವಾರ)ರಂದು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮೆಸ್ಕಾಂನ ಎಲ್ಲ ನಗದು ಕೌಂಟರ್‌ಗಳು ತೆರೆದಿರುತ್ತವೆ. ಈ ದಿನಗಳಂದು ಗ್ರಾಹಕರು ಸೌಲಭ್ಯದ ಸದುಪಯೋಗಪಡಿಸಿಕೊಂಡು ವಿದ್ಯುತ್ ಬಿಲ್‌ಗಳನ್ನು ಪಾವತಿಸಬಹುದು ಎಂದು ಮೆಸ್ಕಾಂ ತಿಳಿಸಿದೆ.

ಎಸ್ಕಾಂಗಳ ಆನ್‌ಲೈನ್ ಸೇವೆ ಪುನಾರಂಭ

Article Image

ಎಸ್ಕಾಂಗಳ ಆನ್‌ಲೈನ್ ಸೇವೆ ಪುನಾರಂಭ

ಬೆಂಗಳೂರು: ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣಕ್ಕಾಗಿ ಮಾರ್ಚ್ 10ರಿಂದ 19ರವರೆಗೆ ಸ್ಥಗಿತಗೊಂಡಿದ್ದ ನಗರ ಪ್ರದೇಶಗಳ ಐದು ಎಸ್ಕಾಂಗಳ ಆನ್‌ಲೈನ್ ವಿದ್ಯುತ್ ಸೇವೆ ಸದ್ಯ ಪುನರಾರಂಭಗೊಂಡಿದೆ. ಈ ತಿಂಗಳ 30ರೊಳಗೆ ಎಲ್ಲ ಸೇವೆಗಳು ಯಥಾಸ್ಥಿತಿಗೆ ಮರಳಲಿವೆ ಎಂದು ಇಂಧನ ಇಲಾಖೆ ತಿಳಿಸಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ಇಲಾಖೆ, ಸಾಫ್ಟ್ವೇರ್ ಉನ್ನತೀಕರಣದಿಂದಾಗಿ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಲು ವಿಳಂಬವಾಗಿದ್ದಕ್ಕೆ ಬಡ್ಡಿ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ವರ್‌ನಲ್ಲಿ ವ್ಯತ್ಯಯ: ಕಳೆದ 2 ದಿನಗಳಿಂದ ಒಂದೇ ಬಾರಿ ವಿದ್ಯುತ್ ಬಿಲ್ ಪಾವತಿಸಲು ಎಸ್ಕಾಂಗಳ ಕೌಂಟರ್ ಗಳಿಗೆ ದೌಡಾಯಿಸಿದ್ದರಿಂದ ಸರ್ವರ್ ನಲ್ಲಿ ವ್ಯತ್ಯಯ ಉಂಟಾಗಿದೆ. ಇದನ್ನು ಹಂತಹಂತವಾಗಿ ಸರಿಪಡಿಸುವ ಕಾರ್ಯ ನಡೆಯುತ್ತಿದ್ದು, ಮಾ.30ರೊಳಗೆ ಆನ್‌ಲೈನ್ ಸೇವೆ ಯಥಾಸ್ಥಿತಿಗೆ ಮರಳಲಿದೆ ಎಂದು ಹೇಳಿದೆ. ಕಳೆದ 10 ದಿನಗಳಿಂದ ಆನ್‌ಲೈನ್ ಸೇವೆಗಳು ಗ್ರಾಹಕರಿಗೆ ಲಭ್ಯವಿರಲಿಲ್ಲ, ಮಾ.20ರಿಂದ ಪುನರಾರಂಭಗೊಂಡಿವೆ.

ಬೋರ್ಡ್ ಪರೀಕ್ಷೆಗೆ ಕೋರ್ಟ್ ಗ್ರೀನ್ ಸಿಗ್ನಲ್

Article Image

ಬೋರ್ಡ್ ಪರೀಕ್ಷೆಗೆ ಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: ಹೈಕೋರ್ಟ್ ನ ತೀರ್ಪಿನ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 5,8 ಮತ್ತು 9ನೇ ತರಗತಿಗಳ ಮೌಲ್ಯಂಕನ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಜತೆ ಜತೆಗೆ ಮಾ.25ರಿಂದ ಮೌಲ್ಯಂಕನ ಪರೀಕ್ಷೆ ಆರಂಭವಾಗಲಿದ್ದು, 28ರಂದು ಮುಗಿಯಲಿದೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಪರೀಕ್ಷೆ ನಡೆಯುತ್ತದೋ ಅಥವಾ ಇಲ್ಲವೊ ಎಂಬ ಗೊಂದಲದಲ್ಲಿ ಸಿಲುಕಿದ್ದ ವಿದ್ಯಾಥಿಗಳು ಹಾಗೂ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ. 5ನೇ ತರಗತಿ : ಮಾ.25-ಪರಿಸರ ಅಧ್ಯಯನ, ಮಾ.26- ಗಣಿತ. 8ನೇ ತರಗತಿ : ಮಾ. 25- ತೃತೀಯ ಭಾಷೆ, ಮಾ.26- ಗಣಿತ, ಮಾ.27- ವಿಜ್ಞಾನ, ಮಾ.28- ಸಮಾಜ ವಿಜ್ಞಾನ. 9ನೇ ತರಗತಿ : ಮಾ.25- ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್, ಮಾ.26- ಗಣಿತ, ಮಾ.27- ವಿಜ್ಞಾನ, ಮಾ.28- ಸಮಾಜ ವಿಜ್ಞಾನ.

ಉಜಿರೆ, ಮಾ.22: ಡಾ. ಬಿ. ಯಶೋವರ್ಮ ಸಂಸ್ಮರಣಾರ್ಥ “ತಾಂತ್ರಿಕ ವಿಷಯಗಳ ವಿನಿಮಯ” ಬಗ್ಗೆ ವಿಶೇಷ ಉಪನ್ಯಾಸ

Article Image

ಉಜಿರೆ, ಮಾ.22: ಡಾ. ಬಿ. ಯಶೋವರ್ಮ ಸಂಸ್ಮರಣಾರ್ಥ “ತಾಂತ್ರಿಕ ವಿಷಯಗಳ ವಿನಿಮಯ” ಬಗ್ಗೆ ವಿಶೇಷ ಉಪನ್ಯಾಸ

ಆರ್ಯಭಟ, ಬ್ರಹ್ಮದತ್ತ, ಚರಕ, ಸುಶ್ರುತ ಮೊದಲಾದ ಭಾರತೀಯ ವಿಜ್ಞಾನಿಗಳು ಗಣಿತ ಮತ್ತು ಖಗೋಳಶಾಸ್ತ್ರದಲ್ಲಿ ಅನೇಕ ಸಂಶೋಧನೆ ನಡೆಸಿದ್ದಾರೆ. ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಜಿಜ್ಞಾಸೆ ಮತ್ತು ಪ್ರಶ್ನಿಸುವ ಮನೋಭಾವ ಇರಬೇಕು ಎಂದು ಯುನೈಟೆಡ್ ಕಿಂಗ್‌ಡಮ್‌ನ ವಿಮಾನಶಾಸ್ತ್ರ ತಜ್ಞ ಯೋಗೀಂದ್ರ ಮರವಂತೆ ಹೇಳಿದರು. ಅವರು ಶುಕ್ರವಾರ ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ದಿವಂಗತ ಡಾ. ಬಿ. ಯಶೋವರ್ಮ ಸಂಸ್ಮರಣಾರ್ಥ ಆಯೋಜಿಸಿದ “ತಾಂತ್ರಿಕ ವಿಷಯಗಳ ವಿನಿಮಯ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಗಣಿತದ ಬಗ್ಗೆ ಭಾರತೀಯರಿಗೆ ವಿಶೇಷ ಒಲವು, ಆಸಕ್ತಿ ಮತ್ತು ಪರಿಣತಿ ಇದೆ. ಉಪಗ್ರಹಗಳ ಉಡಾವಣೆ ಬಗ್ಗೆಯೂ ಭಾರತೀಯರು ವಿಶೇಷ ಸಾಧನೆ ಮಾಡಿದ್ದಾರೆ. ಭಾರತದಲ್ಲಿ ಯುವಜನತೆಯ ಸಂಖ್ಯೆ ಅಧಿಕವಾಗಿರುವುದರಿಂದ ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ತಂತ್ರಜ್ಞಾನದ ಬಳಕೆ ಹೆಚ್ಚಾದಷ್ಟು ಪ್ರಗತಿಯೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಸಮಾರಂಭವನ್ನು ಉದ್ಘಾಟಿಸಿದ ಸೋನಿಯಾ ಯಶೋವರ್ಮರವರು ಮಾತನಾಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ನೀಡಲಾಗುತ್ತದೆ. ತಮಗೆ ಸಿಗುವ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ವಿದ್ಯಾರ್ಥಿಗಳು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ಎಸ್.ಡಿ.ಎಂ. ಸಂಸ್ಕೃತಿಯ ರಾಯಭಾರಿಗಳಾಗಬೇಕು ಎಂದು ಸಲಹೆ ನೀಡಿದರು. ಡಾ. ಬಿ. ಯಶೋವರ್ಮರು ನಡೆಸಿದ ಅನೇಕ ಹೊಸ ಪ್ರಯೋಗಗಳು ಇಂದು ಯಶಸ್ವಿಯಾಗುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್.ಡಿ.ಎಂ. ಪಾಲಿಟೆಕ್ನಿಕ್ ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿದರು. ಎಸ್.ಡಿ.ಎಮ್. ಕಾಲೇಜಿನ ಕನ್ನಡ ಉಪನ್ಯಾಸಕ ರಾಜಶೇಖರ ಹಳೇಮನೆ ಮತ್ತು ಕಾರ್ಯಕ್ರಮ ಸಂಯೋಜಕರಾದ ಚಂದ್ರನಾಥ್ ಜೈನ್ ಹಾಗೂ ಮಿಥುನ್ ಜೈನ್ ಉಪಸ್ಥಿತರಿದ್ದರು. ಸಂಪತ್‌ಕುಮಾರ್ ಜೈನ್ ಸ್ವಾಗತಿಸಿದರು. ನಿಖಿಲ್ ಜೈನ್ ಧನ್ಯವಾದವಿತ್ತರು.

23ರಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Article Image

23ರಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು,ಮಾ, 19: ದಕ್ಷಿಣ ಕನ್ನಡ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.23, 24ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.23ರಂದು 8.45ಕ್ಕೆ ವಿವಿ ಕಾಲೇಜಿನಿಂದ ಪುರಭವನಕ್ಕೆ ಕನ್ನಡ ಭುವನೇಶ್ವರಿಯ ಮೆರವಣಿಗೆ ಬಳಿಕ 9.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ ಸಮ್ಮೇಳನಾಧ್ಯಕ್ಷರಾಗಿರುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹೇಮಾವತಿ ವಿ. ಹೆಗ್ಗಡೆ ಉಪಸ್ಥಿತರಿರುವರು. ಮಂಗಳೂರು ವಿವಿ ಕುಲಪತಿ ಪಿ.ಎಲ್. ಧರ್ಮ ಪ್ರದರ್ಶನ ಮಳಿಗೆ ಉದ್ಘಾಟಿಸುವರು ಎಂದರು. ಮಧ್ಯಾಹ್ನ 11.30ರಿಂದ 11.45ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, 11.45 ರಿಂದ ಕರಾವಳಿಯ ಸಾಹಿತ್ಯ ಪರಂಪರೆಯ ಅವಲೋಕನ ಗೋಷ್ಠಿ, ಮಧ್ಯಾಹ್ನ 2ರಿಂದ ಬಹುಭಾಷಾ ಕವಿಗೋಷ್ಠಿ, ಮಧ್ಯಾಹ್ನ 3ರಿಂದ ಹಾಸಭಾಸ-ನಗೆ ಗೋಷ್ಠಿ, ಸಂಜೆ 4ರಿಂದ ಕರ್ನಾಟಕ ಸುವರ್ಣ ಸಂಭ್ರಮ-ದ.ಕ. ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆ ವಿಶೇಷ ಉಪನ್ಯಾಸ, 4.30ರಿಂದ ಜಾನಪದ ಗಾಯನ ಹಾಗೂ ನೃತ್ಯ ವೈವಿಧ್ಯ, ಸಂಜೆ 5ರಿಂದ ಅಗಲಿದ ಗಣ್ಯರಿಗೆ ನುಡಿನಮನ, 5.30ರಿಂದ ಸಪ್ತಮಾತೃಕೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಮಾ.24ರಂದು ಬೆಳಗ್ಗೆ 8ರಿಂದ ಉದಯರಾಗ, 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 9ರಿಂದ ಯುವ ಕವಿಗೋಷ್ಠಿ ನಡೆಯಲಿದೆ. 10ರಿಂದ ವಿಶೇಷ ಉಪನ್ಯಾಸ, 10.30ರಿಂದ ಮಾಧ್ಯಮ-ದಿಕ್ಕುದೆಸೆ ಗೋಷ್ಠಿ, 11.30ರಿಂದ ಹರಿಕಥೆ, ಮಧ್ಯಾಹ್ನ 12ರಿಂದ ವೈದ್ಯಕೀಯ ಸಾಹಿತ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ, 1ರಿಂದ ಸಮೂಹ ನೃತ್ಯ, 1.30ರಿಂದ ಗಮಕ ನಡೆಯಲಿದೆ. 2ರಿಂದ ರಾಮಕೃಷ್ಣಭಟ್ ಚೊಕ್ಕಾಡಿ ಅವರಿಂದ ಕರಾವಳಿಯ ಕನ್ನಡ ಮಾಧ್ಯಮ ಶಾಲೆಗಳು, ವಿಶೇಷ ಉಪನ್ಯಾಸ- 3, 2.30ರಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 3.15ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 3.30ರಿಂದ ಬಹಿರಂಗ ಅಧಿವೇಶನ, 4ರಿಂದ ಸನ್ಮಾನ ಮತ್ತು ಸಮಾರೋಪ ನಡೆಯಲಿದೆ ಎಂದರು. ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂಂತಾರು, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಾಧವ ಎಂ.ಕೆ., ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಸಮ್ಮೇಳನ ಸಂಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಸ್. ರೇವಣ್‌ಕರ್, ಕಾರ್ಯದರ್ಶಿ ಪುಷ್ಪರಾಜ್ ಕೆ., ಕೋಶಾಧ್ಯಕ್ಷ ಕೆ. ಚಂದ್ರಹಾಸ ಶೆಟ್ಟಿ, ಮಾಧ್ಯಮ ಸಮಿತಿ ಸಂಚಾಲಕ ರೇಮಂಡ್ ಡಿಕುನ್ಹ ತಾಕೊಡೆ ಉಪಸ್ಥಿತರಿದ್ದರು.

ಹೊಸದಿಲ್ಲಿ: ಅವಧಿ ವಿಸ್ತರಣೆ

Article Image

ಹೊಸದಿಲ್ಲಿ: ಅವಧಿ ವಿಸ್ತರಣೆ

ಆಧಾರ್ ಕಾರ್ಡ್ ಮಾಹಿತಿಯನ್ನು ಉಚಿತವಾಗಿ ಪರಿಷ್ಕರಿಸಲು ನೀಡಿದ್ದ ಗಡುವನ್ನು ಆಧಾರ್ ಪ್ರಾಧಿಕಾರ 2024ರ ಜೂನ್ 14ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಇನ್ನೂ ಮೂರು ತಿಂಗಳು ಆಧಾರ್ ಕಾರ್ಡ್ ಬಳಕೆದಾರರು ಉಚಿತ ಆಧಾರ್ ಅಪ್‌ಡೇಟ್ ಪ್ರಯೋಜನ ಪಡೆಯಬಹುದಾಗಿದೆ. ಆದರೆ, ಉಚಿತ ಪರಿಷ್ಕರಣೆ ಸೇವೆಯು ಆನ್‌ಲೈನ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದ್ದು, ಅಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ತಿದ್ದುಪಡಿಗೆ ಮನವಿ ಸಲ್ಲಿಸಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋದರೆ 50 ರೂ. ಪಾವತಿಸುವುದು ಕಡ್ಡಾಯ. ಈ ಮುನ್ನ ಮಾರ್ಚ್ 14ರವರೆಗೆ ಉಚಿತ ಆಧಾರ್ ಪರಿಷ್ಕರಣೆಗೆ ಪ್ರಾಧಿಕಾರ ಗಡುವು ನೀಡಿತ್ತು.

ಸುರ್ಯ ಶ್ರೀ ಸದಾಶಿವರುದ್ರ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

Article Image

ಸುರ್ಯ ಶ್ರೀ ಸದಾಶಿವರುದ್ರ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಬೆಳ್ತಂಗಡಿಯ ನಡ ಗ್ರಾಮದ ಶ್ರೀ ಸದಾಶಿವರುದ್ರ ದೇವಾಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಮಾ. 19ರಂದು ಮೊದಲ್ಗೊಂಡು ಮಾ. 23ರ ವೆರೆಗೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು: ಮಾ. 18 ಬೆಳಗ್ಗೆ 7.30ರಿಂದ ಪುಣ್ಯಾಹ, ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8-00ರಿಂದ ರಂಗಪೂಜೆ, ಉತ್ಸವ. ಮಾ. 19 ಬೆಳಗ್ಗೆ 9-15ರಿಂದ ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ. ಮಾ. 20 ಮಧ್ಯಾಹ್ನ 12.30ರಿಂದ ಮಹಾಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ ಸಂಜೆ 6.00ರಿಂದ ಸುರ್ಯಗುತ್ತು ಮನೆಯಿಂದ ಧರ್ಮದೈವಗಳ ಭಂಡಾರದ ಆಗಮನ, ರಾತ್ರಿ 8.00ರಿಂದ ಉತ್ಸವ ಹೊರಟು ವಸಂತಕಟ್ಟೆ ಪೂಜೆ, ಮಹಾಪೂಜೆ. ಮಾ. 21 ಬೆಳಗ್ಗೆ 7.00ರಿಂದ ಸೊಡರಬಲಿ ಉತ್ಸವ. ಮಧ್ಯಾಹ್ನ 12.30ರಿಂದ ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ 8.00 ರಿಂದ ಉತ್ಸವ ಹೊರಟು ಕೆರೆಕಟ್ಟೆ ಪೂಜೆ, ಮಹಾಪೂಜೆ. ಮಾ. 22 ಬೆಳಗ್ಗೆ 8.45ರಿಂದ ದರ್ಶನಬಲಿ ಉತ್ಸವ, ಮಧ್ಯಾಹ್ನ ಗಂಟೆ 12.30ರಿಂದ ಮಹಾಪೂಜೆ, 1.00ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8.00ರಿಂದ ಉತ್ಸವ, ಪುಷ್ಪ ರಥೋತ್ಸವ, ನೃತ್ಯಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಶಯನೋತ್ಸವಮಾ. 23 ಬೆಳಗ್ಗೆ 9.00ರಿಂದ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಂಜೆ 6.00ಕ್ಕೆ ಯಾತ್ರಾ ಹೋಮ, ಅವಬೃತ ಸ್ನಾನಕ್ಕೆ ಹೊರಡುವುದು. ರಾತ್ರಿ 10.30ಕ್ಕೆ ಧ್ವಜಾವರೋಹಣ. ರಾತ್ರಿ 11.00ರಿಂದ ದೈವಗಳ ನೇಮ. ಸಾಂಸ್ಕೃತಿಕ ಕಾರ್ಯಕ್ರಮಗಳು: ಮಾ. 20 ರಾತ್ರಿ 9.30ರಿಂದ ರಾಜ್ಯ ಪ್ರಶಸ್ತಿ ವಿಜೇತ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್ ರಚಿಸಿ, ನಟಿಸಿ ನಿರ್ದೇಶಿಸಿರುವ ತುಳು ಹಾಸ್ಯಮಯ ನಾಟಕ “ಪುದರ್‌ದೀದಾಂಡ್”. ಮಾ. 21 ರಾತ್ರಿ 9.30ರಿಂದ ದುರ್ಗಾ ಸ್ವಾತಿ ನೃತ್ಯಾಲಯ, ಅಸೈಗೊಳಿ ಇದರ ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದುಷಿ ಸ್ಥಾತಿ ಭಟ್ ಪಿ. ಇವರ ಶಿಷ್ಯರಿಂದ ನೃತ್ಯಾರಾಧನ ರಾತ್ರಿ 11.00ರಿಂದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ ಇವರಿಂದ ಯಕ್ಷಗಾನ ಬಯಲಾಟ “ನಾಗರ ಪಂಚಮಿ”. ಮಾ. 22 ರಾತ್ರಿ 9.30ರಿಂದ ಅಂಗನವಾಡಿ ಕೇಂದ್ರ, ಸುರ್ಯ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸುರ್ಯ ಇಲ್ಲಿಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 11.00ರಿಂದ "ಸಂಗಮ ಕಲಾವಿದರು'' ಉಜಿರೆ ಇವರಿಂದ ಸುಬ್ಬು ಸಂಟ್ಯಾರ್ ರಚಿಸಿ, ಗಿರೀಶ್ ಹೊಳ್ಳ ನಿರ್ದೇಶಿಸಿರುವ ತುಳು ಸಾಂಸಾರಿಕ ಹಾಸ್ಯಮಯ ನಾಟಕ “ಪಚ್ಚು ಪಾತೆರೊಡು”.

ಎಸ್.ಡಿ.ಎಂ ಝೇಂಕಾರ-ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪರ್ವ

Article Image

ಎಸ್.ಡಿ.ಎಂ ಝೇಂಕಾರ-ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪರ್ವ

ಉಜಿರೆ: ವಿದ್ಯಾರ್ಥಿಗಳು ಸೃಜನಾತ್ಮಕ ಚಿಂತನೆಯೊಂದಿಗೆ ಆದರ್ಶ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕೊಡಗು ವಿ.ವಿ.ಯ ಉಪಕುಲಪತಿ ಪ್ರೊ. ಅಶೋಕ್ ಎಸ್. ಆಲೂರ್ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಎರಡು ದಿನ ನಡೆಯುವ ಎಸ್.ಡಿ.ಎಂ. ಝೇಂಕಾರ-ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪರ್ವದ ಉದ್ಘಾಟನಾ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಬದುಕಿಗೊಂದು ನಿರ್ಧಿಷ್ಠ ಗುರಿಯನ್ನು ಇಟ್ಟುಕೊಂಡು ಉತ್ತಮ ಕೌಶಲಗಳನ್ನು ಬೆಳೆಸಿಕೊಂಡು, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು, ಸವಾಲುಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ವಿದ್ಯಾರ್ಥಿಗಳು ಉತ್ತಮ ಚಾರಿತ್ರ್ಯ, ಕೌಶಲ, ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಯೊಂದಿಗೆ ಸಂವಹನ ಕೌಶಲವನ್ನೂ ಬೆಳೆಸಿಕೊಳ್ಳಬೇಕು, ದಕ್ಷ ಕಾರ್ಯಕ್ಷಮತೆಯನ್ನೂ ಬೆಳೆಸಿಕೊಂಡು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ಸಮಾಜಸೇವೆ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಶ್ರಮ ಸಂಸ್ಕ್ರತಿಯೊಂದಿಗೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ದೃಢಸಂಕಲ್ಪದೊಂದಿಗೆ ಉನ್ನತ ಗುರಿ ಸಾಧನೆ ಮಾಡಬೇಕು ಎಂದು ಹೇಳಿದರು. ಸ್ನಾತಕೋತ್ತರ ಕೇಂದ್ರದ ಡೀನ್ ಪಿ. ವಿಶ್ವನಾಥ್ ಸ್ವಾಗತಿಸಿದರು. ಪ್ರೊ. ಸುವೀರ್ ಜೈನ್ ಧನ್ಯವಾದವಿತ್ತರು. ಪ್ರೊ. ನೆಫಿಸೆತ್ ಮತ್ತು ಪ್ರೊ. ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯಸಮ್ಮೇಳನದ ಆಮಂತ್ರಣಪತ್ರ ಬಿಡುಗಡೆ

Article Image

ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯಸಮ್ಮೇಳನದ ಆಮಂತ್ರಣಪತ್ರ ಬಿಡುಗಡೆ

ಮಂಗಳೂರಿನ ಪುರಭವನದಲ್ಲಿ ಮಾ.23 ಮತ್ತು 24 ರಂದು ನಡೆಯಲಿರುವ ದ.ಕ. ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರವನ್ನು ಗುರುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ನಾಗಣ್ಣ, ಡಿ.ಎ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ, ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ಡಾ. ರಾಜಶೇಖರ್ ಹಳೇಮನೆ, ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಷಾ ಕಿರಣ್ ಕಾರಂತ್, ಅರವಿಂದ ಕಾರಂತ್ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅಂತಾರಾಷ್ಟ್ರೀಯ ಐ.ಎಸ್.ಒ. 27001 ಪ್ರಶಸ್ತಿ ಪ್ರದಾನ

Article Image

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅಂತಾರಾಷ್ಟ್ರೀಯ ಐ.ಎಸ್.ಒ. 27001 ಪ್ರಶಸ್ತಿ ಪ್ರದಾನ

ಉಜಿರೆ: ಲಂಡನ್‌ನಲ್ಲಿ ಪ್ರಧಾನಕಛೇರಿ ಹೊಂದಿರುವ ಎನ್.ಕ್ಯೂ.ಎ. ಸಂಸ್ಥೆ 2023 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ಪಾರದರ್ಶಕತೆ, ತಂತ್ರಜ್ಞಾನಗಳ ಬಳಕೆ, ಸುರಕ್ಷತೆ, ಬದ್ಧತೆ, ಕಾರ್ಯಕರ್ತರ ಕಾರ್ಯಕುಶಲತೆ, ವರದಿಗಳ ತಯಾರಿ ಮತ್ತು ಬಳಕೆ, ವ್ಯವಹಾರದಲ್ಲಿ ನೈಪುಣ್ಯತೆ ಮೊದಲಾದ 114 ವಿಷಯಗಳನ್ನು ಗಮನಿಸಿ ಅಂತಾರಾಷ್ಟ್ರೀಯ ಐ.ಎಸ್.ಒ. 27001 ಪ್ರಶಸ್ತಿ ಪ್ರದಾನ ಮಾಡಲು ಸಂತೋಷ ಮತ್ತು ಅಭಿಮಾನ ಉಂಟಾಗುತ್ತದೆ ಎಂದು ಎನ್.ಕ್ಯೂ.ಎ. ಸಂಸ್ಥೆಯ ಮಹಾಪ್ರಬಂಧಕ ಅಮರ್‌ದೀಪ್ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಐ.ಎಸ್.ಒ. 27001 ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಮುಂದಿನ ಮೂರು ವರ್ಷಗಳವರೆಗೆ ಇದು ಚಾಲ್ತಿಯಲ್ಲಿದ್ದು ಬ್ಯಾಂಕ್‌ಗಳೊಡನೆ ವಿಶ್ವಾಸಾರ್ಹ ವ್ಯವಹಾರಗಳನ್ನು ನಡೆಸಲು ನೆರವಾಗಲಿದೆ. ಬ್ಯಾಂಕುಗಳಿಗೆ ಯೋಜನೆಯ ಮೇಲೆ ಹೆಚ್ಚಿನ ವಿಶ್ವಾಸಾರ್ಹತೆ ಮೂಡಿಸಲು ಸಹಾಯವಾಗುತ್ತದೆ. ಸ್ವ-ಸಹಾಯ ಸಂಘಗಳ ಸದಸ್ಯರು ಇನ್ನೂ ಹೆಚ್ಚಿನ ಸೇವೆಯನ್ನು ನಿರೀಕ್ಷಿಸಬಹುದು ಎಂದು ಅವರು ಹೇಳಿದರು. ಪ್ರಶಸ್ತಿ ಗೋಡೆಯಲ್ಲಿ ಮಾತ್ರ ಪ್ರದರ್ಶನಕ್ಕೆ ಅಲ್ಲ. ಮನಃಪೂರ್ವಕವಾಗಿ ಅದರ ಉದ್ದೇಶ ಫಲಾನುಭವಿಗಳ ಸೇವೆಯಲ್ಲಿ ಬಳಕೆಯಾಗಬೇಕು ಎಂದು ಅವರು ಹೇಳಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೇವಸ್ಥಾನ, ಕಛೇರಿ ಹಾಗೂ ಎಲ್ಲಾ ವಿಭಾಗಗಳಲ್ಲಿಯೂ ಈಗ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಗ್ರಾಮೀಣ ಪ್ರದೇಶದ ಫಲಾನುಭವಿಗಳು ಕೂಡಾ ತಂತ್ರಜ್ಞಾನದ ಬಳಕೆಯೊಂದಿಗೆ ಈಗ ತಮ್ಮ ವ್ಯವಹಾರ ನಡೆಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರೆ ಈ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ತಂತ್ರಜ್ಞಾನ ನಮ್ಮ ಸೇವಕ ಆಗಬೇಕು. ಮಾಲಕ ಆಗಬಾರದು. ತಂತ್ರಜ್ಞಾನದ ನೆಪದಲ್ಲಿ ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂದು ಅವರು ಎಚ್ಚರಿಕೆ ನೀಡಿದರು. ತಂತ್ರಜ್ಞಾನದ ಬಳಕೆಯಿಂದಾಗಿ ವಂಚನೆ, ಅವ್ಯವಹಾರಕ್ಕೆ ಅವಕಾಶವಿಲ್ಲ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಹೊಣೆಗಾರಿಕೆಯಿಂದ ನಿರ್ವಹಿಸಿ ಸಂಸ್ಥೆ ಇನ್ನೂ ಹೆಚ್ಚು ಬೆಳೆಯಲಿ, ಬೆಳಗಲಿ ಎಂದು ಹೆಗ್ಗಡೆಯವರು ಹಾರೈಸಿದರು. ಹರೀಶ್‌ಕೃಷ್ಣಸ್ವಾಮಿ ಮಾತನಾಡಿ, ಅಂತಾರಾಷ್ಟ್ರೀಯ ಮಾನ್ಯತೆಯಿಂದ ಫಲಾನುಭವಿಗಳ ನಂಬಿಕೆ, ವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು. ಹೇಮಾವತಿ ವಿ. ಹೆಗ್ಗಡೆ, ಜಿ.ಎಸ್. ಭಾರ್ಗವ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮತ್ತು ಹಣಕಾಸು ಅಧಿಕಾರಿ ಶಾಂತಾರಾಮ ಪೈ. ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ಸ್ವಾಗತಿಸಿದರು. ಅನಿಲ್‌ಕುಮಾರ್ ಧನ್ಯವಾದವಿತ್ತರು.

ಕರಾವಳಿಯಲ್ಲಿ ಬಿಸಿಗಾಳಿ ಭೀತಿ ಮುನ್ನೆಚ್ಚರಿಕೆ ವಹಿಸಲು ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ

Article Image

ಕರಾವಳಿಯಲ್ಲಿ ಬಿಸಿಗಾಳಿ ಭೀತಿ ಮುನ್ನೆಚ್ಚರಿಕೆ ವಹಿಸಲು ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ

ಮಂಗಳೂರು/ಉಡುಪಿ, ಮಾ. 11: ಮಾರ್ಚ್ ನಿಂದ ತೊಡಗಿ ಮೇ ಅಂತ್ಯದವರೆಗೆ ತೀವ್ರವಾದ ಬಿಸಿಲು ಹಾಗೂ ಕೆಲವೆಡೆ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ನೆಚ್ಚರಿಕೆ ನೀಡಿದ್ದು, ಜನರು ಜಾಗರೂಕತೆ ವಹಿಸುವಂತೆ ದ.ಕ ಮತ್ತು ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಬಿಸಿಗಾಳಿ(ಹೀಟ್‌ವೇವ್) ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಬಿಸಿಲು ಇರುವಾಗ ಕೊಡೆ ಬಳಸುವುದು, ತಂಪಿರುವ ಸ್ಥಳದಲ್ಲಿರುವುದು, ತೆಳುವಾದ ಮತ್ತು ಸಡಿಲವಾದ ಹತ್ತಿ ಉಡುಪು ಬಳಸುವುದು, ಆದಷ್ಟು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ ಎಂದು ತಿಳಿಸಿದೆ. ಹಿರಿಯ ನಾಗರಿಕರು ಮತ್ತು ಮಕ್ಕಳು ಹೆಚ್ಚು ನೀರು ಕುಡಿಯಬೇಕು, ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಹೊರಾಂಗಣ ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡಿ, ಸಾಕಷ್ಟು ನೀರು, ಮಜ್ಜಿಗೆಯಂತಹ ದ್ರವ ಪದಾರ್ಥ ಸೇವಿಸಬೇಕು. ಹತ್ತಿ ಅಥವಾ ಟರ್ಬನ್ ಟೋಪಿ ಧರಿಸಬೇಕು. ಮನೆಯೊಳಗೆ ಸಾಕಷ್ಟು ಗಾಳಿಯಾಡುವಂತೆ ನೋಡಿಕೊಳ್ಳಬೇಕು. ಹೀಟ್ ಸ್ಟೋಕ್‌ಗೆ ಒಳಗಾದ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ, ತಣ್ಣೀರಿನಿಂದ ಸ್ಪಾಂಜ್‌ಬಾತ್ ಮಾಡಿಸಬೇಕು. ಸುಧಾರಣೆ ಕಂಡುಬರದಿದ್ದರೆ ಕೂಲಿಂಗ್ ವ್ಯವಸ್ಥೆಯೊಂದಿಗೆ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು. ಹೊರಗೆ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಡ್ಡಾಯ ವಿರಾಮವನ್ನು ನಿಗದಿಪಡಿಸಬೇಕು. ಬಿಸಿಲಿನಿಂದ ವಿಟಮಿನ್ ಸಿ ಕೊರತೆ ಎದುರಾಗುವುದರಿಂದ ಹೆಚ್ಚು ನಿಂಬೆ ಹಣ್ಣಿನ ಪಾನಕ ಸೇವಿಸುವುದು ಉತ್ತಮ. ಸಕ್ಕರೆ ಬದಲಿಗೆ ಬೆಲ್ಲ ಸೂಕ್ತ. ಬೆಳಗ್ಗೆ ಎದ್ದ ಬಳಿಕ ತುಳಸಿ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಎರಡು ಲೋಟ ನೀರು ಬೆರೆಸಿ ಕುಡಿದರೆ ಕೆಲಸ ಮಾಡುವಾಗ ಸುಸ್ತಾಗುವುದಿಲ್ಲ. ಆಹಾರದಲ್ಲಿ ಮಸಾಲೆ ಪದಾರ್ಥ ಹೆಚ್ಚು ಬಳಸಬಾರದು. ತಣ್ಣೀರ ಸ್ನಾನ ಹೆಚ್ಚು ಸೂಕ್ತ. 5 ವರ್ಷದೊಳಗಿನ ಮಕ್ಕಳಿಗೆ ಪ್ರತಿ ಅರ್ಧಗಂಟೆಗೊಮ್ಮೆ ಒಂದು ಚಿಟಿಕೆ ಅಯೋಡಿನ್ ಉಪ್ಪು ಬೆರೆಸಿದ ನೀರು ಕುಡಿಸಬೇಕು ಎಂದು ಪ್ರಾಧಿಕಾರ ತಿಳಿಸಿದೆ. ತುರ್ತು ಸೇವೆಗಾಗಿ 1077 ಅಥವಾ 0824 - 2442590 (ಮಂಗಳೂರು) ಅಥವಾ 0820-2574802 (ಉಡುಪಿ) ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕಂದಾಯ ಇಲಾಖೆಯಿಂದ ಅರ್ಜಿ ಆಹ್ವಾನ

Article Image

ಕಂದಾಯ ಇಲಾಖೆಯಿಂದ ಅರ್ಜಿ ಆಹ್ವಾನ

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಖಾಲಿಯಿರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿರುವ ಒಟ್ಟು ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಆಸಕ್ತರು ಮಾರ್ಚ್ 4 ರಿಂದ http://kea.kar.nic.in ನ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು. ಅಭ್ಯಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ನೇರ ನೇಮಕ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಏ.3 ಕೊನೆಯ ದಿನವಾಗಿದ್ದು, ಏ.6ರವರೆಗೆ ಶುಲ್ಕ ಪಾವತಿಗೆ ಅವಕಾಶವಿದೆ. ಅಭ್ಯರ್ಥಿಗಳು ಒಂದು ಜಿಲ್ಲೆಗೆ ಆಯ್ಕೆ ಬಯಸಿ, ಅಗತ್ಯ ದಾಖಲೆ ಜತೆಗೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಪಡೆಯಲು 080-23460460ಗೆ ಸಂಪರ್ಕಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಬೆಂಗಳೂರು, ಮಾ7: ಬೋರ್ಡ್ ಪರೀಕ್ಷೆಗೆ ಅನುಮತಿ

Article Image

ಬೆಂಗಳೂರು, ಮಾ7: ಬೋರ್ಡ್ ಪರೀಕ್ಷೆಗೆ ಅನುಮತಿ

ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಹಾಗೂ ಅನುದಾನಿತ ರಹಿತ ಶಾಲೆಗಳ 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ(ಬೋರ್ಡ್ ಎಕ್ಸಾಂ) ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಇದರಿಂದ ಪರೀಕ್ಷೆ ಕುರಿತು ಉಂಟಾಗಿದ್ದ ಅನಿಶ್ಚಿತತೆ ದೂರವಾಗಿದ್ದು, ರಾಜ್ಯಾದ್ಯಂತ ನಿಗದಿತ ವೇಳಾಪಟ್ಟಿಯಂತೆ ಮಾರ್ಚ್ 11ರಿಂದ ಪರೀಕ್ಷೆಗಳು ನಡೆಯಲಿವೆ. ಬೋರ್ಡ್ ಪರೀಕ್ಷೆ ಸಂಬಂಧ ರಾಜ್ಯ ಸರಕಾರ ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ರದ್ದುಪಡಿಸಿ, ಬುಧವಾರವಷ್ಟೇ ನ್ಯಾ| ರವಿ ವಿ. ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾ|ಕೆ. ಸೋಮಶೇಖರ್ ಹಾಗೂ ನ್ಯಾ| ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಸರಕಾರದ ಮನವಿಯನ್ನು ಪುರಸ್ಕರಿಸಿ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಿ ವಿಭಾಗೀಯ ಪೀಠ ಆದೇಶಿಸಿದೆ. ಗುರುವಾರ ಮಧ್ಯಾಹ್ನ ಪ್ರಕರಣದ ವಿಚಾರಣೆ ಕೈಗೆತ್ತಿಗೊಂಡ ವಿಭಾಗೀಯ ನ್ಯಾಯಪೀಠ ಸುಮಾರು ಒಂದೂವರೆ ತಾಸು ವಾದ-ಪ್ರತಿವಾದ ಆಲಿಸಿ, ಬಳಿಕ ಒಂದೂವರೆ ತಾಸಿಗೂ ಅಧಿಕ ಚರ್ಚೆ ನಡೆಸಿದ ಬಳಿಕ ಸಂಜೆ 7 ಗಂಟೆಗೆ ಆದೇಶ ಪ್ರಕಟಿಸಿತು. ಪ್ರಕರಣದ ಮೆರಿಟ್ ಕುರಿತು ಯಾವುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸದೆ ಮೇಲ್ಮನವಿಗಳ ಅಂತಿಮ ಇತ್ಯರ್ಥಕ್ಕೆ ಒಳಪಟ್ಟು ಮಾ.6ರಂದು ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಮಹಾಮಸ್ತಕಾಭಿಷೇಕದ ಇಂದಿನ ಕಾರ್ಯಕ್ರಮಗಳು

Article Image

ಮಹಾಮಸ್ತಕಾಭಿಷೇಕದ ಇಂದಿನ ಕಾರ್ಯಕ್ರಮಗಳು

ಫೆ. 24ರಂದು ಬೆಳಗ್ಗೆ ನಿತ್ಯವಿಧಿ ಸಹಿತ ಶ್ರೀ ಪೀಠ ಯಂತ್ರರಾಧನಾ ವಿಧಾನ, ಧ್ವಜಪೂಜೆ ಶ್ರೀಬಲಿ ವಿಧಾನ, ಮಧ್ಯಾಹ್ನ ಭಕ್ತಾಮರ ಯಂತ್ರಾರಾಧನವಿಧಾನ, ಅಗ್ರೋದಕ ಮೆರವಣಿಗೆ ಬಳಿಕ 108 ಕಲಶಗಳಿಂದ ಮಹಾಮಸ್ತಕಾಭಿಷೇಕ ಮಹಾಪೂಜೆ ಹಾಗೂ ಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಪರಾಹ್ನ ಗಂಟೆ 3ಕ್ಕೆ ಯುಗಳ ಮುನಿಗಳ ಆಶೀರ್ವಚನದೊಂದಿಗೆ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಎಂಎಲ್ ಸಿ ಮಂಜುನಾಥ ಭಂಡಾರಿ, ಹೃದ್ರೋಗತಜ್ಞ ಡಾ| ಪದ್ಮನಾಭ ಕಾಮತ್, ಎಚ್ ಪಿಸಿಎಲ್ ನ ಡಿಜಿಎಂ ನವೀನ್ ಕುಮಾರ್ ಎಂ.ಜಿ., ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಜಿನೇಂದ್ರ ಕಣಗಾವಿ, ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಭಾಗವಹಿಸುವರು. ಜಿನ ಸಿದ್ಧಾಂತದ ಶ್ರೇಷ್ಠತೆ-ಅನೇಕಾಂತವಾದದ ಕುರಿತು ಪತ್ರಕರ್ತ ಅಜಿತ್ ಹನುಮಕ್ಕನವರ್ ಉಪನ್ಯಾಸ ನೀಡಲಿರುವರು. ಸಾಂಸ್ಕೃತಿಕ ಕಾರ್ಯಕ್ರಮ: ಮುಖ್ಯ ವೇದಿಕೆಯಲ್ಲಿ ರಾತ್ರಿ 7.30ಕ್ಕೆ ಪ್ರಖ್ಯಾತ ಗಾಯಕರಾದ ಅಜಯ್ ವಾರಿಯರ್, ಶಶಿಕಲಾ ಸುನಿಲ್, ಅನನ್ಯ ಪ್ರಸಾದ್ ಹಾಗೂ ಸಂದೇಶ್ ನೀರುಮಾರ್ಗ, ಬಳಗ ಬೆಂಗಳೂರು ಇವರಿಂದ ‘ಸಂಗೀತಯಾನ’ ವಸ್ತುಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7ರಿಂದ 8ರವರೆಗೆ ಈಶ ಕಲಾ ಪ್ರತಿಷ್ಠಾನ ಉಜಿರೆ ಇವರಿಂದ ‘ಭರತನಾಟ್ಯ’, ರಾತ್ರಿ 8ರಿಂದ 11ರವೆರೆಗೆ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ಇವರ ನೇತೃತ್ವದ ಯಜ್ಞ ತಂಡದವರಿಂದ ‘ನೃತ್ಯ ಸಂಗಮ’ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿದೆ.

ಮೂಡುಬಿದಿರೆ: ಫೆಬ್ರವರಿ 19ರಿಂದ 24ರವರೆಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಆಧಾರ್ ಶಿಬಿರ

Article Image

ಮೂಡುಬಿದಿರೆ: ಫೆಬ್ರವರಿ 19ರಿಂದ 24ರವರೆಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಆಧಾರ್ ಶಿಬಿರ

ಮೂಡುಬಿದಿರೆ : ಪುರಸಭೆ ಸಮಾಜ ಮಂದಿರ ಹಾಗೂ ಮಂಗಳೂರು ಆಧಾರ್ ಸೇವಾ ಕೇಂದ್ರ ಇವುಗಳ ಸಹಯೋಗದಲ್ಲಿ ಸಮಾಜ ಮಂದಿರದಲ್ಲಿ ಫೆ. 19ರಿಂದ 24ರ ವರೆಗೆ ಬೆ. ಗಂ. 10ರಿಂದ ಸಂಜೆ 4ರವರೆಗೆ ಆಧಾರ್ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ಈ ಆಧಾರ್ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಪುರಸಭಾ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‌ 1. ಹೊಸ ಆಧಾರ್ ಕಾರ್ಡ್: ಹೊಸದಾಗಿ ಮಾಡಿಸುವವರು ಜನನ ಪ್ರಮಾಣ ಪತ್ರದ ಮೂಲಪ್ರತಿ, ತಂದೆ/ತಾಯಿಯ ಆಧಾರ್ ಕಾರ್ಡ್ ತರಬೇಕು, ಶುಲ್ಕ ಇಲ್ಲ. 2. ಬಯೋಮೆಟ್ರಿಕ್ ಅಪ್ಡೇಟ್: 5 ರಿಂದ 7 ಹಾಗೂ 15 ರಿಂದ 17 ವರ್ಷದ ಮಕ್ಕಳು ಫೋಟೋ, ಥಂಬ್ ಅಪ್ಡೇಟ್ ಕಡ್ಡಾಯವಾಗಿ ಮಾಡಬೇಕು. ಅಪ್ಡೇಟ್ ಮಾಡದಿದ್ದಲ್ಲಿ ಆಧಾರ್ ಸಸ್ಪೆಂಡ್ ಆಗುತ್ತದೆ, ಸ್ಕಾಲರ್‌ಶಿಪ್ ಸಿಗುವುದೂ ರದ್ದಾಗುತ್ತದೆ. 3. ಇತರ ತಿದ್ದುಪಡಿಗಳು: ತಂದೆ/ತಾಯಿ/ಗಂಡನ ಹೆಸರು, ಜನ್ಮ ದಿನಾಂಕ, ವಿಳಾಸ ತಿದ್ದುಪಡಿ, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ತಿದ್ದುಪಡಿಗಳಿಗೆ ಶುಲ್ಕ 50 ರೂ. ತೆರಬೇಕಾಗುವುದು. 4. ಆಧಾರ್‌ನಲ್ಲಿ ಫೋಟೋ ತಿದ್ದುಪಡಿ: 2016ಕ್ಕಿಂತ ಹಳೆಯ ಆಧಾರ್ ಹೊಂದಿದವರು ಕಡ್ಡಾಯವಾಗಿ ಥಂಬ್ ಅಪ್ಡೇಟ್ ಮಾಡಬೇಕು. ಈಗಾಗಲೇ ಹಲವಾರು ಥಂಬ್ ಅಪ್ಡೇಟ್ ಮಾಡದೆ ರೇಶನ್ ಕಾರ್ಡ್, ಪೆನ್ಶನ್ ಮತ್ತು ಇತರ ಸರಕಾರಿ ಸೌಲಭ್ಯಗಳಿಂದ ವಂಚಿರಾಗುತ್ತಿದ್ದಾರೆ. ಇದಕ್ಕೆ ಶುಲ್ಕ 100 ರೂ. ಮಾತ್ರ. 5. ಯೋಜನೆಗಳು: ಎಲ್ಲಾ ಸರಕಾರಿ ಯೋಜನೆಗಳನ್ನು ಪಡೆಯಲು 10 ವರ್ಷ ಮತ್ತು ಅದಕ್ಕೂ ಮೀರಿದ ಆಧಾರ್ ಹೊಂದಿರುವವರು ಕಡ್ಡಾಯವಾಗಿ ಬಯೋಮೆಟ್ರಿಕ್ ಮತ್ತು ಡಾಕ್ಯುಮೆಂಟ್ಸ್ ಅಪ್ಡೇಟ್ ಮಾಡಬೇಕಾಗಿದೆ. ಇಲ್ಲವಾದಲ್ಲಿ ಆಧಾರ್ ಮಾಡದಿದ್ದರೆ ಆಧಾರ್ ಡಿಆಕ್ಟಿವೇಟ್ ಆಗುತ್ತದೆ. ಈ ಬಗ್ಗೆ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾಸ್‌ಪೋರ್ಟ್ ಇತ್ಯಾದಿಗಳ ಮೂಲಪ್ರತಿ, ಬಯೋಮೆಟ್ರಿಕ್ ಅಪ್ಡೇಟ್ (ಫೋಟೋ ಥಂಬ್)ಗೆ ಶುಲ್ಕ 100 ರೂ. 6. ಡಾಕ್ಯುಮೆಂಟ್ಸ್ ಅಪ್ಡೇಟ್: 2016ಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿದವರು ಕಡ್ಡಾಯವಾಗಿ 10 ವರ್ಷದೊಳಗೆ ಅಪ್ಡೇಟ್ ಮಾಡಬೇಕು. ಅಪ್ಡೇಟ್ ಮಾಡದಿದಲ್ಲಿ ಆಧಾರ್ ಡಿಆಕ್ಟಿವೇಟ್ ಆಗುತ್ತದೆ. ಇದಕ್ಕೆ ಶುಲ್ಕ 50 ರೂ. ಒರಿಜಿನಲ್ ಡಾಕ್ಯುಮೆಂಟ್ಸ್ ಕಡ್ಡಾಯವಾಗಿ ತರಬೇಕು ಜೆರಾಕ್ಸ್‌ ಪ್ರತಿ ಸ್ವೀಕರಿಸುವುದಿಲ್ಲ.

ಪಿಎಚ್‌ಡಿ ಪ್ರವೇಶಾತಿಗೆ ಅರ್ಜಿ ಆಹ್ವಾನ

Article Image

ಪಿಎಚ್‌ಡಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಮಂಗಳೂರ: ಮಂಗಳೂರು ವಿ.ವಿ.ಯ ವಿವಿಧ ಸ್ನಾತಕೋತ್ತರ ವಿಭಾಗಗಳು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ, ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ ಕುಶಾಲನಗರ ಹಾಗೂ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳಲ್ಲಿ ಪಿ.ಎಚ್.ಡಿ. ಕಾರ್ಯಕ್ರಮಕ್ಕೆ ಖಾಲಿ ಇರುವ ಸೀಟುಗಳಿಗೆ ನೋಂದಾಯಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರು/ಮಾನ್ಯತೆ ಪಡೆದ ಸಂಶೋಧನ ಕೇಂದ್ರದ ಮುಖ್ಯಸ್ಥರಿಗೆ ಮಾ. 5ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ವೆಬ್‌ಸೈಟ್ www.mangaloreuniversity.ac.in ಪರಿಶೀಲಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರ ಪ್ರಕಟಣೆ ತಿಳಿಸಿದೆ.

ಫೆ. 26, 27 : ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

Article Image

ಫೆ. 26, 27 : ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಮತ ಜೀವನೋಪಾಯ ಇಲಾಖೆಯಡಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಫೆ. 26 ಹಾಗೂ 27ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಆಯೋಜಿಸಲಾಗಿದೆ. ಬೃಹತ್ ಉದ್ಯೋಗ ಮೇಳದಲ್ಲಿ ರಾಜ್ಯದ ಎಲ್ಲ ವಲಯಗಳಿಂದ 500ಕ್ಕೂ ಹೆಚ್ಚಿನ ಪ್ರತಿಷ್ಠಿತ ಬೃಹತ್/ಮಧ್ಯಮ/ಸಣ್ಣ ಉದ್ಯೋಗದಾತರ ಸಂಸ್ಥೆಗಳು ಭಾಗವಹಿಸಲಿವೆ. ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ನರ್ಸಿಂಗ್, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಮತ್ತು ಇತರ ವಿದ್ಯಾರ್ಹತೆಯುಳ್ಳ ರಾಜ್ಯದ ಯುವಜನತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ನೋಂದಣಿಯ ಹಂತಗಳು https://skillconnect.kaushalkar.com/ಗೆ ಭೇಟಿ ನೀಡಿ, ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು, ನಂತರ ಉದ್ಯೋಗ ಮೇಳ ಮೇಲೆ ಕ್ಲಿಕ್ ಮಾಡಿ ಅಭ್ಯರ್ಥಿ ನೋಂದಣಿ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸತ್ತೂರು, ಧಾರವಾಡ: ಕರ್ನಾಟಕ ಭೌತಚಿಕಿತ್ಸಕರ ಘಟಕದ ಪ್ರಥಮ ವಾರ್ಷಿಕ ರಾಜ್ಯ ಸಮ್ಮೇಳನ

Article Image

ಸತ್ತೂರು, ಧಾರವಾಡ: ಕರ್ನಾಟಕ ಭೌತಚಿಕಿತ್ಸಕರ ಘಟಕದ ಪ್ರಥಮ ವಾರ್ಷಿಕ ರಾಜ್ಯ ಸಮ್ಮೇಳನ

ಧಾರವಾಡದ ಎಸ್.ಡಿ.ಎಂ. ಕಾಲೇಜ್ ಆಫ್ ಫಿಸಿಯೋಥೆರಪಿಯು “ಕರ್ನಾಟಕ ಭೌತಚಿಕಿತ್ಸಕರ ಘಟಕದ” ಪ್ರಥಮ ವಾರ್ಷಿಕ ರಾಜ್ಯ ಸಮ್ಮೇಳನವನ್ನು ಆಯೋಜಿಸಲಾಯಿತು. “ಅಭ್ಯಾಸದ ಸಿದ್ದಾಂತ” ಎಂಬ ಧ್ಯೇಯೆಯೊಂದಿಗೆ ಫೆಬ್ರವರಿ 16 ಮತ್ತು 17ರಂದು ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಯಿತು. ಈ ಸಮ್ಮೇಳನದಲ್ಲಿ ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಭೌತಚಿಕಿತ್ಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತದ ಸಂಸದೀಯ ವ್ಯವಹಾರಗಳ ಸಚಿವರು ಮತ್ತು ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮುಖ್ಯ ಅತಿಥಿಗಳಾಗಿದ್ದು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ಭೌತಚಿಕಿತ್ಸಕರು ಮತ್ತು ನಾನವತಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಲಿ ಇರಾನಿ, ಎನ್.ಸಿ.ಎ.ಎಚ್.ಪಿ.ಯ ಸದಸ್ಯರಾದ ಡಾ. ಕೆ. ಮಾಧವಿ, ಭಾರತೀಯ ಭೌತಚಿಕಿತ್ಸಕರ ಸಂಘದ ಉಪ ರಾಷ್ಟ್ರಾಧ್ಯಕ್ಷರಾದ ಡಾ. ಸುರೇಶ ಬಾಬು ರೆಡ್ಡಿ ಅವರು ಗೌರವ ಅತಿಥಿಗಳಾಗಿದ್ದರು. ಎಸ್.ಡಿ.ಎಂ. ಫಿಸಿಯೋಥೆರಪಿಯ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಭೌತಚಿಕಿತ್ಸಾ ತಜ್ಞರಿಗೆ ವೃತ್ತಿಪರ ಪ್ರಶಸ್ತಿಗಳನ್ನು ನೀಡಲಾಯಿತು. ಮುಖ್ಯ ಅತಿಥಿಗಳು ಸಮ್ಮೇಳನದ ಸ್ಮರಿಣಿಕೆಯನ್ನು ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾದ ಪ್ರಹ್ಲಾದ್ ಜೋಶಿ ಅವರು ಸಮ್ಮೇಳನ ಉದ್ದೇಶಿಸಿ ಮಾತನಾಡುತ್ತಾ, ಭೌತಚಿಕಿತ್ಸೆ ಮತ್ತು ಯೋಗವು ರೋಗಿಯನ್ನು ಗುಣಪಡಿಸುವಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತವೆ. ನಮ್ಮ ದೇಶವನ್ನು ರೋಗ ಮುಕ್ತ ಮಾಡುವಲ್ಲಿ ಎಲ್ಲರೂ ಶ್ರಮಿಸಬೇಕು. ಭೌತಚಿಕಿತ್ಸಕರು ರೋಗಿಗಳನ್ನು ಆತ್ಮವಿಶ್ವಾಸದಿಂದ ಗುಣಪಡಿಸಬೇಕು. ಭಾರತೀಯ ಆರೋಗ್ಯ ವಿಜ್ಞಾನ ವೃತ್ತಿಪರರು ವಿಶ್ವದಲ್ಲಿ ಅತ್ಯುನ್ನತ ವಿಶ್ವಾಸಾರ್ಹತೆಯನ್ನು ಹೊಂದಿದ್ದಾರೆ. ಭೌತಚಿಕಿತ್ಸಕರು ಹೊಸ ಆವಿಷ್ಕಾರ ಮತ್ತು ಜ್ಞಾನದೊಂದಿಗೆ ತಮ್ಮನ್ನು ನವೀಕರಿಸಿಕೊಳ್ಳಬೇಕು. ವೃತ್ತಿಪರರು ತಮ್ಮ ಅನುಭವಗಳೊಂದಿಗೆ ಪರಿಣಿತರಾಗುತ್ತಾರೆ. ‌ ಈ ಸಮ್ಮೇಳನದಲ್ಲಿ ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ಡಾ. ಎಸ್. ಕೆ ಜೋಶಿ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಸಂಘಟನಾ ಕಾರ್ಯದರ್ಶಿಗಳಾದ ಡಾ. ಮಧುಲಿಖಾ ಹೊರಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಂಜನಾ ಮತ್ತು ವೃಂದಾ ಪ್ರಾರ್ಥಿಸಿದರು. ಪ್ರೋ. ಸುಧೀರ ಬಟ್‌ಬೋಲನ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷರಾದ ಡಾ. ಯು. ಟಿ. ಇಫ್ತಿಖರ ಅಲಿ ಅವರು ವಂದಣಾರ್ಪನೆ ಸಲ್ಲಿಸಿದರು. ಡಾ. ಶರ್ಮಿಳಾ ದುದಾನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿರುವ ಹುದ್ದೆಗಳ ಭತಿ೯ಗೆ ಅಜಿ೯ ಆಹ್ವಾನ

Article Image

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿರುವ ಹುದ್ದೆಗಳ ಭತಿ೯ಗೆ ಅಜಿ೯ ಆಹ್ವಾನ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿರುವ 50 ಸಹಾಯಕ ಎಂಜಿನಿಯರ್ (ಸಿವಿಲ್) ಮತ್ತು 14 ಪ್ರಥಮ ದರ್ಜೆ ಲೆಕ್ಕ ಸಹಾಯಕರ (ಗ್ರೂಪ್-ಸಿ) ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಸೂಚನೆ ಹೊರಡಿಸಿದೆ. ಮೂಲ ವೃಂದದಲ್ಲಿ 54 ಮತ್ತು ಕಲ್ಯಾಣ ಕರ್ನಾಟಕದಲ್ಲಿ 10 ಮೀಸಲು ಹುದ್ದೆ ದೊರೆಯಲಿವೆ. ಫೆ. 10ರಿಂದ ಮಾರ್ಚ್ 10ರವರೆಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ಮಾ. 14 ಕೊನೆಯ ದಿನವಾಗಿದೆ. ಸಾಮಾನ್ಯ ಮತ್ತು ಇತರೆ ಪ್ರವರ್ಗಗಳಿಗೆ 750 ರೂ. ಮತ್ತು ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿ ಮಾಡಲಾಗಿದೆ. ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 35, ಪ್ರವರ್ಗ 2 ಎ, 2 ಬಿ, 3 ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 38 ಮತ್ತು ಪರಿಶಿಷ್ಟ ಜಾತಿ / ಪಂಗಡದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್: http:// kea.kar.nic.in ಈ ಲಿಂಕ್ ಮೂಲಕ ತಿಳಿದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

HSRPಗೆ ಇನ್ನಷ್ಟು ಗಡುವು ವಿಸ್ತರಣೆ

Article Image

HSRPಗೆ ಇನ್ನಷ್ಟು ಗಡುವು ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್-ಎಚ್ಎಸ್‌ಆರ್‌ಪಿ) ಅಳವಡಿಕೆಗೆ ನಿಗದಿಪಡಿಸಿದ್ದ ಗಡುವನ್ನು ಮೇ 31ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆ ಫೆ. 16ರಂದು ಆದೇಶ ಹೊರಡಿಸಿದೆ. ಈ ಹಿಂದೆ 2023ರ ಆ. 18ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆಯು ರಾಜ್ಯದಲ್ಲಿ 2019ರ ಏ. 1ಕ್ಕೂ ಮುನ್ನ ನೋಂದಣಿಯಾದ ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ನ. 17ರವರೆಗೆ ಕಾಲಾವಕಾಶ ನೀಡಿತ್ತು. ರಾಜ್ಯದಲ್ಲಿ ಅಂತಹ ಸುಮಾರು 2 ಕೋಟಿ ವಾಹನಗಳಿದ್ದು, ನ. 17ರ ಗಡುವಿನೊಳಗೆ ಬಹುತೇಕ ಹಳೆ ವಾಹನಗಳ ಮಾಲೀಕರು ಎಚ್ಎಸ್‌ಆರ್‌ಪಿ ಅಳವಡಿಸಿಕೊಳ್ಳಬಹುದೆಂದು ಇಲಾಖೆ ನಿರೀಕ್ಷಿಸಿತ್ತು. ಆದರೆ, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಹೀಗಾಗಿ, ಸಾರಿಗೆ ಇಲಾಖೆಯು ಫೆ. 17ರವರೆಗೆ ಗಡುವು ವಿಸ್ತರಿಸಿತ್ತು. ಈ ಗಡುವು ಈಗಾಗಲೇ ಅಂತ್ಯಗೊಂಡಿದ್ದು, ಈವರೆಗೆ 2 ಕೋಟಿ ಹಳೆ ವಾಹನಗಳ ಪೈಕಿ 19 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ. ಮತ್ತೊಂದೆಡೆ ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಕೋರಿಕೆ ಸಲ್ಲಿಸುವ ವೆಬ್‌ಪೊಟ೯ಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಈ ಕಾರಣಕ್ಕೆ ಮತ್ತೊಮ್ಮೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಗಡುವು ವಿಸ್ತರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಈ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಸಾರಿಗೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಗಡುವು ವಿಸ್ತರಿಸಿದೆ.

ಹೊಸದಿಲ್ಲಿ: ಯುಪಿಎಸ್‌ಸಿ ಪ್ರಿಲಿಮ್ಸ್‌ಗೆ ಅರ್ಜಿ ಹಾಕಿ

Article Image

ಹೊಸದಿಲ್ಲಿ: ಯುಪಿಎಸ್‌ಸಿ ಪ್ರಿಲಿಮ್ಸ್‌ಗೆ ಅರ್ಜಿ ಹಾಕಿ

ನಾಗರಿಕ ಸೇವೆಗಳಿಗೆ ಸೇರ ಬಯಸುವವರಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ 2024ನೇ ಸಾಲಿನ ಪೂರ್ವಭಾವಿ ಪರೀಕ್ಷಾ ದಿನಾಂಕ ಬಿಡುಗಡೆಯಾಗಿದೆ. ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೇ 26ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ಮಾ. 5 ಕಡೆಯ ದಿನ. https://upsconline.nic.in/upsc/OTRP ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಉಜಿರೆಯಲ್ಲಿ ಪೊಲೀಸ್ ಕಾನ್ಸ್‌ಸ್ಟೇಬಲ್‌ ಹುದ್ದೆಗೆ ಪರೀಕ್ಷೆ

Article Image

ಉಜಿರೆಯಲ್ಲಿ ಪೊಲೀಸ್ ಕಾನ್ಸ್‌ಸ್ಟೇಬಲ್‌ ಹುದ್ದೆಗೆ ಪರೀಕ್ಷೆ

ಬೆಳ್ತಂಗಡಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) (ಪುರುಷ, ಮಹಿಳಾ) ಮತ್ತು ತೃತೀಯ ಲಿಂಗ ಪುರುಷ ಹಾಗೂ ಮಹಿಳಾ) ಮತ್ತು ಸೇವಾ ನಿರತ ಹಾಗೂ ಬ್ಯಾಕ್ ಲಾಗ್-1,137 ಹುದ್ದೆಗಳಿಗೆ ನಡೆಯಲಿರುವ ಲಿಖಿತ ಪರೀಕ್ಷೆಯು ಉಜಿರೆಯಲ್ಲಿ ಫೆ. 25ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12.30 ಗಂಟೆ ತನಕ ನಡೆಯಲಿದೆ. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿ.ಜಿ. ಕಾಲೇಜು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐ.ಟಿ. ಕಾಲೇಜು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿ.ಬಿ.ಎಸ್.ಇ. ಶಾಲೆಗಳು ಪರೀಕ್ಷಾ ಕೇಂದ್ರಗಳಾಗಿವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ. ಲಿಖಿತ ಪರೀಕ್ಷೆಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಕರೆ ಪತ್ರದ ಬಗ್ಗೆ ಮುಂಬರುವ ದಿನಗಳಲ್ಲಿ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಹಾಗೂ ಕರೆಪತ್ರದ ಲಿಂಕ್ ಅನ್ನು ಕಳುಹಿಸಲಾಗುವುದು. ಕರೆ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಲಿಖಿತ ಪರೀಕ್ಷೆಗೆ ಅಭ್ಯರ್ಥಿಗಳು ಇಲಾಖೆ ಸೂಚಿಸಿದ ವಸ್ತ್ರಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಳ್ವಾಸ್: ಕ್ರೀಡಾ ಕ್ಷೇತ್ರದಲ್ಲಿ ಉಚಿತ ಶಿಕ್ಷಣದ ಅವಕಾಶ

Article Image

ಆಳ್ವಾಸ್: ಕ್ರೀಡಾ ಕ್ಷೇತ್ರದಲ್ಲಿ ಉಚಿತ ಶಿಕ್ಷಣದ ಅವಕಾಶ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) 2024-25ನೇ ಶೈಕ್ಷಣಿಕ ಸಾಲಿನಲ್ಲಿ ಆಳ್ವಾಸ್ ಹಿರಿಯ ಪ್ರಾಥಮಿಕ, ಪ್ರೌಢಶಾಲೆ (ಕನ್ನಡ, ಇಂಗ್ಲೀಷ್ ಮಾಧ್ಯಮ ಮತ್ತು ಸಿ.ಬಿ.ಎಸ್.ಇ.) ಪದವಿಪೂರ್ವ, ಪದವಿ ಹಾಗೂ ಉನ್ನತ ವ್ಯಾಸಂಗದ ತರಗತಿಗಳಿಗೆ ದಾಖಲಾತಿ ಬಯಸುವ, ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹಾಗೂ ಮಾಡಲಿಚ್ಛಿಸುವ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣದ ಅವಕಾಶವನ್ನು ಕಲ್ಪಿಸಿದೆ. ಸೇರಲಿಚ್ಚಿಸುವವರು ತಮ್ಮ ಕ್ರೀಡಾ ಸಾಧನೆಯ ದಾಖಲೆ, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ ಸಹಿತ ಸ್ವ-ವಿವರಗಳನ್ನು ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ, ದಕ್ಷಿಣ ಕನ್ನಡ - 574227 ಈ ವಿಳಾಸಕ್ಕೆ ದಿನಾಂಕ 20.03.2024 ರೊಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ ಆಯ್ಕೆ ನಡೆಯುವ ಕ್ರೀಡೆಗಳು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ (ಕನ್ನಡ, ಇಂಗ್ಲೀಷ್ ಮಾಧ್ಯಮ ಮತ್ತು ಸಿ.ಬಿ.ಎಸ್.ಇ.): ಅಥ್ಲೆಟಿಕ್ಸ್ ಮತ್ತು ಗುಂಪು ಆಟಗಳು ಪಿಯುಸಿ: ಅಥ್ಲೆಟಿಕ್ಸ್, ಕಬಡ್ಡಿ, ಖೋ ಖೋ, ವಾಲಿಬಾಲ್, ಕುಸ್ತಿ, ಬಾಲ್ ಬ್ಯಾಡ್ಮಿಂಟನ್, ಈಜು, ವೈಟ್‌ಫ್ಟಿಂಗ್, ಬ್ಯಾಡ್ಮಿಂಟನ್ ಪದವಿ ಮತ್ತು ಸ್ನಾತಕೊತ್ತರ: ಅಥ್ಲೆಟಿಕ್ಸ್, ಕಬಡ್ಡಿ, ಖೋ ಖೋ, ಕುಸ್ತಿ, ವೈಟ್‌ಫ್ಟಿಂಗ್, ವಾಲಿಬಾಲ್, ಹ್ಯಾಂಡ್ ಬಾಲ್, ಸಾಫ್ಟ್ ಬಾಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಈಜು, ಬ್ಯಾಡ್ಮಿಂಟನ್ ಡಾ| ಎಂ. ಮೋಹನ್ ಆಳ್ವ 9620387666, 8073037640, 9742109257

ಜೆಇಇ (ಮೈನ್ಸ್) ಅರ್ಹತಾ ಪರೀಕ್ಷೆ: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ವಿಶೇಷ ಸ

Article Image

ಜೆಇಇ (ಮೈನ್ಸ್) ಅರ್ಹತಾ ಪರೀಕ್ಷೆ: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ವಿಶೇಷ ಸ

ಮೂಡಬಿದಿರೆ: ಜೆಇಇ (ಮೈನ್ಸ್) ಫಲಿತಾಂಶ ಜನವರಿ ತಿಂಗಳಿನಲ್ಲಿ ನಡೆದ ರಾಷ್ಟ್ರಮಟ್ಟದ ಉನ್ನತ ತಾಂತ್ರಿಕ ಕಾಲೇಜುಗಳ ಸೇರ್ಪಡೆಗೆ ನಡೆಸುವ ಜೆಇಇ (ಮೈನ್ಸ್) ಅರ್ಹತಾ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡಿರುತ್ತಾರೆ. ನಿಶಾಂತ್ ಪಿ ಹೆಗ್ಡೆ (99.32950), ಸಂಜಯ್ ಬಿರಾದರ್ (99.07267), ಸಚಿನ್ ವಿ ನಾಗರಡ್ಡಿ (99.05742), ರಿಷಭ್ ಆರ್ ನಾಯ್ಕ್ (98.99920), ನಿಖಿಲ್ ಬಿ ಗೌಡ (98.91843), ಶ್ರೀಶೈಲ್ ಬಿ ಪಾಟೀಲ್ (98.84606), ರೋಹನ್ ಎಸ್ (98.80266), ಸೃಜನ್ ಎಮ್ ಆರ್ (97.74), ಗಾಯತ್ರಿ ಎನ್.ಎಮ್ (97.60), ವಿ ಚಿರಾಗ್ ಕಂಚಿರಾಯ್ (97.57), ಆದಿತ್ಯ ಜೆ ಬಿ (97.40), ನವನೀತ ಕೃಷ್ಣ (97.32), ಅಮೋಘ್ ಎಸ್.ಪಾಟೀಲ್ (97.31), ಗೌರವ್ ಪಿ.ಭಾರಧ್ವಜ್ (97.00), ಸಚೀಂದ್ರ ಆರ್ (97.00), ಶ್ರೇಯಾಸ್ ಶ್ರೀಕಾಂತ್ ಮಳಿ (96.63), ಶಶಿಭೂಷಣ್ (96.59), ತರುಣ್ ಆರ್.ಎ (96.59), ರೋಹಿತ್ ಗೌಡ ಜಿ.ಎನ್ (96.55), ಪ್ರಾಪ್ತಿ ಬೆಳೆಕೇರಿ (96.51), ರೋಷನ್ (96.51), ಕೆ.ಜಿ ಪ್ರಣವ್ ಕಶ್ಯಪ್ (96.41), ಶಿಶಿರ ಬಿ.ಇ (96.37), ಸೃಜನ್ ಬಿ.ಆರ್ (96.34), ಚಿನ್ಮಯಿ ರಾಜ್ ಎಮ್.ಎಸ್ (95.95), ಪ್ರಸನ್ನ ಪೂಜಾರಿ (95.50), ಭಾರ್ಗವಿ ಎಮ್.ಜೆ (95.43), ಪ್ರಕೃತಿ ಗೌಡ್ರ (95.17), ಸುಹಾಸ್ ಎಮ್.ಎಸ್ (95.09), ಸೂರಜ್ ಎಮ್. ಕೂಡಲಗಿಮತ್ (95.04) ಇವರುಗಳು 95 ಪಸೆ೯ಂಟ್‌ಗಿಂತಲೂ ಹೆಚ್ಚಿನ ಅಂಕಗಳೊಂದಿಗೆ ಅರ್ಹತೆಯನ್ನು ಪಡೆದಿರುತ್ತಾರೆ. 03 ವಿದ್ಯಾರ್ಥಿಗಳು 99ಕ್ಕೂ ಅಧಿಕ ಪರ್ಸೆಂಟೇಜ್, 07 ವಿದ್ಯಾರ್ಥಿಗಳು 98ಕ್ಕೂ ಅಧಿಕ, 30 ವಿದ್ಯಾರ್ಥಿಗಳು 95ಕ್ಕೂ ಅಧಿಕ, 87 ವಿದ್ಯಾರ್ಥಿಗಳು 90ಕ್ಕೂ ಅಧಿಕ ಮತ್ತು 126 ವಿದ್ಯಾರ್ಥಿಗಳು 85ಕ್ಕೂ ಅಧಿಕ ಪರ್ಸೆಂಟೇಜ್ ಅಂಕಗಳನ್ನು ಗಳಿಸಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪ್ರದೀಪ್‌ ಕುಮಾರ್ ಶೆಟ್ಟಿ, ಐಐಟಿ ಸಂಯೋಜಕರಾದ ಪ್ರೊ ರಾಮಮೂರ್ತಿ, ಡಾ. ದಯಾನಂದ್, ಶೈಲೇಶ್ ಕುಮಾರ್, ಅರುಣ್ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

ರಾಜ್ಯ ಸರಕಾರಿ ನೌಕರರ ವಿವಿಧೊದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಾ. ಕೆ. ಜಯಕೀರ್ತಿ ಜೈನ್

Article Image

ರಾಜ್ಯ ಸರಕಾರಿ ನೌಕರರ ವಿವಿಧೊದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಾ. ಕೆ. ಜಯಕೀರ್ತಿ ಜೈನ್

ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ರಾಜ್ಯ ಸರಕಾರಿ ನೌಕರರ ವಿವಿಧೊದ್ದೇಶ ಸಹಕಾರಿ ಸಂಘ ನಿ. ಇದರ 2024-2029ರ 5 ವರ್ಷಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ 12 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು ಮುಂದಿನ ಸಾಲಿನ ಅಧ್ಯಕ್ಷರಾಗಿ ಡಾ. ಕೆ. ಜಯಕೀರ್ತಿ ಜೈನ್ ಹಾಗೂ ಉಪಾಧ್ಯಕ್ಷರಾಗಿ ಚಿದಾನಂದ ಎಸ್. ಹೂಗಾರ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಉಳಿದಂತೆ ನಿರ್ದೇಶಕರಾಗಿ ಜಯರಾಜ್ ಜೈನ್, ಆರತಿ, ಪರಮೇಶ್ ಟಿ., ಚಂದ್ರಶೇಖರ್, ಅಬ್ದುಲ್ ರಜಾಕ್, ಹರಿಪ್ರಸಾದ್, ಹೇಮಲತಾ, ರತ್ನಾವತಿ, ಪ್ರಶಾಂತ್ ಕುಮಾರ್, ವಾರಿಜ ಕೆ. ಆಯ್ಕೆಯಾಗಿದ್ದಾರೆ.

ಧಾರವಾಡ : ಭಾರತೀಯ ಶಸ್ತ್ರಚಿಕಿತ್ಸಕ ಸಂಘದ ಕರ್ನಾಟಕ ರಾಜ್ಯ ಘಟಕದ 42ನೇ ವಾರ್ಷಿಕ ರಾಜ್ಯ ಸಮ್ಮೇಳನ

Article Image

ಧಾರವಾಡ : ಭಾರತೀಯ ಶಸ್ತ್ರಚಿಕಿತ್ಸಕ ಸಂಘದ ಕರ್ನಾಟಕ ರಾಜ್ಯ ಘಟಕದ 42ನೇ ವಾರ್ಷಿಕ ರಾಜ್ಯ ಸಮ್ಮೇಳನ

ಧಾರವಾಡದ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯವು “ಭಾರತೀಯ ಶಸ್ತ್ರಚಿಕಿತ್ಸಕ ಸಂಘದ ಕರ್ನಾಟಕ ರಾಜ್ಯ ಘಟಕದ” 42ನೇ ವಾರ್ಷಿಕ ರಾಜ್ಯ ಸಮ್ಮೇಳನವನ್ನು ಫೆಬ್ರವರಿ 9 ರಿಂದ 11ರವರೆಗೆ ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಯಿತು. “ಪ್ರೋತ್ಸಾಹಿಸಿ, ವರ್ಧಿಸಿ, ಹೊರಹೊಮ್ಮಿರಿ” ಎಂಬ ಧ್ಯೇಯೆಯ ಈ ಸಮ್ಮೇಳನದಲ್ಲಿ 1000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತೀಯ ಶಸ್ತ್ರ ಚಿಕಿತ್ಸಕ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ, ಡಾ. ಪ್ರೋಬಲ್ ನಿಯೋಗಿ ಅವರು ಮುಖ್ಯ ಅತಿಥಿಗಳಾಗಿದ್ದು, ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್, ರಾಜೀವ ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ಎಂ.ಕೆ. ರಮೇಶ, ಯೆನೆಪೊಯಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಎಂ. ವಿಜಯ ಕುಮಾರ, ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘದ ಚುನಾಯಿತ ಅಧ್ಯಕ್ಷರಾದ ಡಾ. ಪ್ರವೀಣ ಸೂರ್ಯವಂಶಿ, ಗೌರವ ಕಾರ್ಯದರ್ಶಿಗಳಾದ ಡಾ. ಪ್ರತಾಪಸಿನ್ಹ ವರುಟೆ ಅವರು ಗೌರವ ಅತಿಥಿಗಳಾಗಿದ್ದು, ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಡಾ. ಎಚ್.ವಿ. ಶಿವರಾಮ ಅವರು ಅಧ್ಯಕ್ಷತೆ ವಹಿಸಿದ್ದರು. ದೀಪ ಬೆಳಗಿಸುವ ಮೂಲಕ ಗಣ್ಯರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್ ಅವರು ಆರ್ಟ್ ಗ್ಯಾಲರಿಯನ್ನು ಮತ್ತು ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿಯವರು ಪ್ರದರ್ಶನ ಮಳಿಗೆಗಳನ್ನೂ ಉದ್ಘಾಟಿಸಿದರು. ಈ ಸಮ್ಮೇಳನದಲ್ಲಿ ಎಸ್.ಡಿ.ಎಂ. ವಿಶ್ವವಿದ್ಯಾಲಯದ ಸಹ ಉಪ ಕುಲಪತಿಗಳಾದ ಡಾ. ಎಸ್.ಕೆ. ಜೋಶಿ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ, ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಕರ್ನಾಟಕ ರಾಜ್ಯ ಘಟಕದ ಚುನಾಯಿತ ಅಧ್ಯಕ್ಷರಾದ ಡಾ. ಎನ್.ಐ. ಹೆಬಸೂರ, ಖಜಾಂಚಿಗಳಾದ ಡಾ. ರಾಜಶೇಖರ ಜಕಾ, ಡಾ. ಪ್ರಶಾಂತ ಟುಬಾಚಿ ಮತ್ತಿತರರು ಉಪಸ್ಥಿತರಿದ್ದರು. ಡಾ. ಚಂದ್ರಶೇಖರ ಅವರು ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಕರ್ನಾಟಕ ರಾಜ್ಯ ಘಟಕದ ಕಾರ್ಯವೈಖರಿಗಳ ವಾರ್ಷಿಕ ವರದಿ ಮಂಡಿಸಿದರು. ನಂತರ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಪ್ರೋಬಲ್ ನಿಯೋಗಿಯವರನ್ನು ಸನ್ಮಾನಿಸಲಾಯಿತು. ಡಾ. ಪದ್ಮಶ್ರೀ ರುದ್ರಾನಿದೇವಿ, ಡಾ. ದಿಶಾ ಮತ್ತು ಡಾ. ಮೇಘದರ್ಶಿನಿ ಸಾನಿಕೊಪ್ಪ ಪ್ರಾರ್ಥಿಸಿ, ಡಾ. ಸ್ಪೂರ್ತಿ ಕಾಮತ್ ಮತ್ತು ಡಾ. ಹರ್ಷಿತಾ ಮಹಿಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಗುರುಶಾಂತಪ್ಪ ಯಲಗಚ್ಚಿನ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಬಿ. ಶ್ರೀನಿವಾಸ ಪೈ ಅವರು ವಂದಣಾರ್ಪನೆ ಸಲ್ಲಿಸಿದರು.

ಸಿಎಪಿಎಫ್ ಪ್ರವೇಶ ಪರೀಕ್ಷೆ : ಕನ್ನಡ, ಕೊಂಕಣಿಗೂ ಅವಕಾಶ

Article Image

ಸಿಎಪಿಎಫ್ ಪ್ರವೇಶ ಪರೀಕ್ಷೆ : ಕನ್ನಡ, ಕೊಂಕಣಿಗೂ ಅವಕಾಶ

ಹೊಸದಿಲ್ಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಯ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಪ್ರವೇಶ ಪರೀಕ್ಷೆಯನ್ನು ಇನ್ನು ಕನ್ನಡ ಮತ್ತು ಕೊಂಕಣಿಯಲ್ಲಿಯೂ ಬರೆಯಲು ಅವಕಾಶ ಸಿಗಲಿದೆ. ಹಿಂದಿ ಮತ್ತು ಇಂಗ್ಲಿಷ್ ಜತೆಗೆ ಇತರ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವ ತೀರ್ಮಾನವನ್ನು ಕೇಂದ್ರ ಸರಕಾರ ಕೈಗೊಂಡಿದೆ. ಕೇಂದ್ರ ಸರಕಾರದ ಹುದ್ದೆಗಳಿಗೆ ಕನ್ನಡದಲ್ಲಿ ಪ್ರವೇಶ ಪರೀಕ್ಷೆ ನಡೆಸುತ್ತಿಲ್ಲ ಎಂಬ ಆರೋಪಗಳ ನಡುವೆ ಇದೊಂದು ಧನಾತ್ಮಕ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸಿದ್ದವು. ರಾಜ್ಯ ಸರಕಾರವೂ ಈ ಬಗ್ಗೆ ಕೇಂದ್ರ ಸರಕಾರವನ್ನು ಆಗ್ರಹಿಸಿತ್ತು. ಇದೊಂದು ಐತಿಹಾಸಿಕ ತೀರ್ಮಾನ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೊಂಡಿದೆ. ಸಿಎಪಿಎಫ್ ಅಂದರೆ ಏನು? ಸಶಸ್ತ್ರ ಪೊಲೀಸ್ ಪಡೆ, ಕೇಂದ್ರ ಗೃಹ ಸಚಿವಾಲಯ ವ್ಯಾಪ್ತಿಯಲ್ಲಿ ಬರುತ್ತದೆ. * ಬಿಎಸ್ಎಫ್, ಕೇಂದ್ರೀಯ ಕೈಗಾರಿಕಾ ಭದ್ರತ ಪಡೆ (ಸಿಐಎಸ್ಎಫ್), ಇಂಡೋ- ಟೆಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ), ಸಶಸ್ತ್ರ ಸೀಮಾ ಬಲ (ಎಸ್ ಎಸ್ಬಿ), ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ಸ್ (ಎನ್ಎಸ್ಜಿ) ಇದರ ಘಟಕಗಳು. ಯಾವೆಲ್ಲ ಭಾಷೆಗಳು? ಕನ್ನಡ, ಕೊಂಕಣಿ, ಬಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ, ಅಸ್ಸಾಮಿ ಪರೀಕ್ಷೆ ಫೆ. 10 ರಿಂದ ಮಾ. 7ರ ವರೆಗೆ 128 ನಗರಗಳಲ್ಲಿ ಪರೀಕ್ಷೆ ನಡೆಯಲಿದ್ದು. 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಶಿಕ್ಷಕರ ಭಡ್ತಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟ - ಫೆ. 13ರಿಂದ ಪ್ರಕ್ರಿಯೆ ಪ್ರಾರಂಭ

Article Image

ಶಿಕ್ಷಕರ ಭಡ್ತಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟ - ಫೆ. 13ರಿಂದ ಪ್ರಕ್ರಿಯೆ ಪ್ರಾರಂಭ

ಬೆಂಗಳೂರು: 2023-24ರ ಸಾಲಿನಲ್ಲಿ ರಾಜ್ಯದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಕೌನ್ಸೆಲಿಂಗ್ ಮೂಲಕ ಭಡ್ತಿ ನೀಡುವ ಪ್ರಕ್ರಿಯೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ. ಫೆ. 13ರಿಂದ 26ರ ವರೆಗೆ ಈ ಭಡ್ತಿ ಪ್ರಕ್ರಿಯೆ ನಡೆಯಲಿದೆ. ಫೆ. 13ರಂದು ಭಡ್ತಿಗೆ ಪರಿಗಣಿಸಬೇಕಾದ ಖಾಲಿ ಹುದ್ದೆಗಳ ಪ್ರಕಟನೆ, ಫೆ. 14ರಂದು ಭಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ 1:2 ಅಂತಿಮ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟನೆ, ಫೆ. 16ರಂದು ಅಂಗವಿಕಲ ಶಿಕ್ಷಕರ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ಅಂತಿಮ ಆದ್ಯತಾ ಪಟ್ಟಿಯಲ್ಲಿ ಭಡ್ತಿ ಮೀಸಲಾತಿಗೆ ಬಿಂದು ಮತ್ತು ರೋಸ್ಟರ್ ಗುರುತಿಸುವಿಕೆಯ ಕ್ರಮವನ್ನು ಅಂತಿಮಗೊಳಿಸುವುದು ಹಾಗೂ ಜಿಲ್ಲಾ ಹಂತದಲ್ಲಿ ಇಲಾಖಾ ಭಡ್ತಿ ಸಮಿತಿ ಸಭೆಯನ್ನು ನಡೆಸಿ ಭಡ್ತಿಗೆ ಅರ್ಹರಿರುವ ಶಿಕ್ಷಕರ ಪಟ್ಟಿಗೆ ಅನುಮೋದನೆ ನೀಡುವುದು. ಫೆ. 15 ರಿಂದ 17ರವರೆಗೆ ಅಂತಿಮ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಶಿಕ್ಷಕರಿಗೆ/ಮುಖ್ಯ ಶಿಕ್ಷಕರಿಗೆ ಅವಕಾಶ ಕಲ್ಪಿಸುವುದು, ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಿ ಇತ್ಯರ್ಥಪಡಿಸಲು ದಿನಾಂಕ ಫೆ. 19 ನಿಗದಿಪಡಿಸಿದೆ. ಫೆ. 20ರಂದು ಭಡ್ತಿ ಕೌನ್ಸೆಲಿಂಗ್‌ಗೆ ಅರ್ಹರಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ 1:1 ಅಂತಿಮ ಜೇಷ್ಠತಾ ಪಟ್ಟಿ ಪ್ರಕಟನೆ, ಫೆ. 26ರಂದು ಮುಖ್ಯ ಶಿಕ್ಷಕ ವೃಂದದಿಂದ ಹಿರಿಯ ಮುಖ್ಯ ಶಿಕ್ಷಕ ವೃಂದಕ್ಕೆ ಭಡ್ತಿ ಕೌನ್ಸೆಲಿಂಗ್, ಫೆ. 26ರಂದು ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರ ವೃಂದಕ್ಕೆ ಭಡ್ತಿ ಕೌನ್ಸೆಲಿಂಗ್‌ಗೆ ದಿನ ನಿಗದಿಪಡಿಸಲಾಗಿದೆ. ಭಡ್ತಿ ಪ್ರಕ್ರಿಯೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಯಾವುದೇ ಲೋಪವಾಗದಂತೆ ಸಾಂಗವಾಗಿ ನಡೆಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಸರಕಾರಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ. ರೋಸ್ಟರ್ ಪದ್ಧತಿಯ ಬಿಂದು ಗುರುತಿಸುವಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳುವಂತೆಯೂ ಆಯುಕ್ತರು ವಿಶೇಷ ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

First Previous

Showing 4 of 5 pages

Next Last