Article Image

ನೀರು ಉಳಿಸಿ: ಕಾರ್ಯಕ್ರಮದ ವಾರ್ಷಿಕ ವರದಿ ಬಿಡುಗಡೆ

Article Image

ನೀರು ಉಳಿಸಿ: ಕಾರ್ಯಕ್ರಮದ ವಾರ್ಷಿಕ ವರದಿ ಬಿಡುಗಡೆ

ಉಜಿರೆ: ಯುನಿಸೆಫ್ ಹಮ್ಮಿಕೊಂಡಿರುವ “ನೀರು ಉಳಿಸಿ” ಅಭಿಯಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೀರು ಉಳಿಸಿ ಕಾರ್ಯಕ್ರಮದ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಜಲಸಂರಕ್ಷಣೆ ಬಗ್ಯೆ ಯುನಿಸೆಫ್‌ನ ಕಾಳಜಿ ಹಾಗೂ ಪ್ರಯತ್ನ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಹೇಳಿ ಅವರನ್ನು ಅಭಿನಂದಿಸಿದರು. ಹೇಮಾವತಿ ವೀ. ಹೆಗ್ಗಡೆಯವರು ಉಪಸ್ಥಿತರಿದ್ದರು. ಹೈದ್ರಾಬಾದ್‌ನ ಯುನಿಸೆಫ್‌ನ ಹಿರಿಯ ಅಧಿಕಾರಿಗಳಾದ ವೆಂಕಟೇಶ್ ಅರಳಿಕಟ್ಟೆ ಮತ್ತು ಡಾ. ಪ್ರಭಾತ್ ಮಟ್ಟಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ ಹಾಗೂ ನಿಖಿಲೇಶ್ ಉಪಸ್ಥಿತರಿದ್ದರು.

ಮುಳಿಯ ಜುವೆಲ್ಸ್ ನ ಮಳಿಗೆಯಲ್ಲಿ ನವರತ್ನ ಆಭರಣಗಳ ಅಮೋಘ ಸಂಗ್ರಹ

Article Image

ಮುಳಿಯ ಜುವೆಲ್ಸ್ ನ ಮಳಿಗೆಯಲ್ಲಿ ನವರತ್ನ ಆಭರಣಗಳ ಅಮೋಘ ಸಂಗ್ರಹ

ಬೆಳ್ತಂಗಡಿ: ನವೀನತೆ ಹಾಗೂ ಪರಿಶುದ್ದತೆ ಆಭರಣದ ಮೂಲಕ ಮನೆ ಮಾತಾಗಿರುವ ಮುಳಿಯ ಜುವೆಲ್ಸ್ ನ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ನವರತ್ನ ಆಭರಣಗಳ ಅಮೋಘ ಸಂಗ್ರಹವು ಫೆ.15 ರಿಂದ ಫೆ.28ರವರೆಗೆ ನಡೆಯಲಿದೆ. ಗ್ರಾಹಕರಿಗೆ ವಿಶೇಷತೆಗಳನ್ನು ನೀಡುತ್ತಾ ಬಂದಿರುವ ಮುಳಿಯ 15 ದಿನಗಳ ಕಾಲ ನವರತ್ನ ಉತ್ಸವದ ಮೂಲಕ ಗ್ರಾಹಕರಿಗೆ ಹೊಸತನವನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ಒಂಬತ್ತು ವಿಭಿನ್ನ ರತ್ನದ ಕಲ್ಲುಗಳನ್ನು ಒಳಗೊಂಡಿರುವ ವಿಶಿಷ್ಠ ರೀತಿಯ ಆಭರಣಗಳಾದ ಉಂಗುರಗಳು, ನವರತ್ನ ಪೆಂಡೆಂಟ್ಸ್ , ನವರತ್ನ ಕಿವಿಯೋಲೆಗಳು, ನವರತ್ನ ಬಳೆಗಳು ಲಭ್ಯವಿದೆ.

ಉಜಿರೆ ರುಡ್ ಸೆಟ್ ಸಂಸ್ಥೆ: ಸಮಾರೋಪ ಸಮಾರಂಭ

Article Image

ಉಜಿರೆ ರುಡ್ ಸೆಟ್ ಸಂಸ್ಥೆ: ಸಮಾರೋಪ ಸಮಾರಂಭ

ಉಜಿರೆ : ಕಲಿಕೆ ಚೆನ್ನಾಗಿದ್ದರೆ ಗಳಿಕೆಯೂ ಚೆನ್ನಾಗಿರುತ್ತದೆ. ಕಲಿಕೆಯ ಸಂದರ್ಭದಲ್ಲಿ ಹೆತ್ತವರ ಶ್ರಮ, ಗಳಿಕೆಯ ಸಂದರ್ಭ ನಿಮ್ಮ ಪರಿಶ್ರಮ ನಿಮ್ಮ ಜೀವನವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ಈ ರುಡ್‌ ಸೆಟ್‌ ಸಂಸ್ಥೆಯಲ್ಲಿ ಕಲಿತ ತರಬೇತಿಗಳು ನಿಮ್ಮ ಬದುಕಿಗೆ ದಾರಿ ದೀಪವಾಗಲಿ, ವೃತಿಯಲ್ಲಿ ಯಾವುದೇ ಕಾರಣಕ್ಕೂ ಅಡಗಿಸಿಕೊಳ್ಳಬೇಡಿ, ಹೆಚ್ಚು ತೊಡಗಿಸಿಕೊಳ್ಳಿ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಆನೇಕ ಯುವಕ-ಯುವತಿಯರು ಸ್ವಂತ ಉದ್ಯೋಗ ಮೂಲಕ ತನ್ನ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್‌ ಅಭಿಪ್ರಾಯಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಟಿ.ವಿ. ಟೆಕ್ನಿಷಿಯನ್‌ ತರಬೇತಿ ಮತ್ತು 13 ದಿನಗಳ ಕಾಲ ನಡೆದೆ ಸಿ.ಸಿ. ಟಿವಿ ಕ್ಯಾಮರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿ ಸ್ವ ಉದ್ಯೋಗಕ್ಕೆ ಬೇಕಾದ ಸಾಲ ಸೌಲಭ್ಯಗಳಿಗೆ ಯೋಜನಾ ವರದಿಯನ್ನು ತಯಾರಿಸಿಕೊಂಡು ಬ್ಯಾಂಕಗಳನ್ನು ಸಂಪರ್ಕ ಮಾಡಿ ಎಂದು ತಿಳಿಸಿದರು. ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟ ನೀಡಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 64 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು. ಕೀರ್ತನಾ ಮತ್ತು ಪ್ರತಿಷ್ಟಾ ಪ್ರಾರ್ಥನೆ ಮಾಡಿದರು, ಮಹ್ಮಮದ್ ಫಯಾಜ್‌, ಅಶೋಕ, ಆನಂದ‌, ಕುಮಾರಿ ನಿಸರ್ಗ ತರಬೇತಿಯ ಅನುಭವ ಹಂಚಿಕೊಂಡರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣಪತ್ರ ಬಿಡುಗಡೆ

Article Image

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣಪತ್ರ ಬಿಡುಗಡೆ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಇಪ್ಪತ್ತೇಳನೆ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.21 ಮತ್ತು 22ರಂದು ಮಂಗಳೂರಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳಸಭಾಂಗಣದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರವನ್ನು ಬುಧವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಯುವರಾಜ ಪೂವಣಿ, ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಮತ್ತು ಸಹಶಿಕ್ಷಕಿ ಸುಮಲತಾ ಉಪಸ್ಥಿತರಿದ್ದರು

ಎಸ್.ಡಿ.ಎಂ ಗಣರಾಜೋತ್ಸವ ಆಚರಣೆ: ಸಾಧನೆಯ ಮೆಲುಕಿನೊಂದಿಗೆ ಅಭ್ಯುದಯದ ಅಭಿವ್ಯಕ್ತಿ

Article Image

ಎಸ್.ಡಿ.ಎಂ ಗಣರಾಜೋತ್ಸವ ಆಚರಣೆ: ಸಾಧನೆಯ ಮೆಲುಕಿನೊಂದಿಗೆ ಅಭ್ಯುದಯದ ಅಭಿವ್ಯಕ್ತಿ

ಉಜಿರೆ, ಜ.26: ಭಾರತದ ಸಂವೈಧಾನಿಕ ಶ್ರೇಷ್ಠತೆ, ವೈವಿಧ್ಯಮಯ ಸಾಂಸ್ಕೃತಿಕ ವೈವಿಧ್ಯತೆ, ವೈಜ್ಞಾನಿಕ ತಾಂತ್ರಿಕ ಸಾಧನೆಯ ಮೈಲಿಗಲ್ಲುಗಳೊಂದಿಗಿನ ವಿನೂತನ ಅಸ್ಮಿತೆ ಮತ್ತು ವಿವಿಧ ಕ್ಷೇತ್ರಗಳ ಮಹತ್ವದ ಕೊಡುಗೆಗಳ ವಿಶೇಷತೆಯನ್ನು ಅನಾವರಣಗೊಳಿಸುವ ಕಲಾತ್ಮಕ ಅಭಿವ್ಯಕ್ತಿ ಮತ್ತು ಸ್ತಬ್ಧಚಿತ್ರ ಪ್ರದರ್ಶನದೊಂದಿಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು 76ನೇ ಗಣರಾಜ್ಯೋತ್ಸವದ ಸಂಭ್ರಮವನ್ನು ವಿನೂತನಗೊಳಿಸಿದರು. ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಯ ಸಮ್ಮುಖದಲ್ಲಿ 76ನೇ ವರ್ಷದ ಗಣರಾಜ್ಯೋತ್ಸವದ ಪ್ರಯುಕ್ತ ನಿವೃತ್ತ ಕರ್ನಲ್ ನಿತಿನ್ ಭಿಡೆ ಅವರು ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಹಿಳೆಯರು ವಿವಿಧ ರಂಗಗಳಲ್ಲಿ ಸಾಧಿಸಿದ ವಿಶೇಷ ಹೆಜ್ಜೆಗಳು, ಉಜಿರೆಯ ರತ್ನಮಾನಸ ಜೀವನ ಶಿಕ್ಷಣ ವಿಭಾಗ, ಹಾಲಕ್ಕಿ ನುಡಿಯ ಮೌಲಿಕತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆ, ನ್ಯಾಯ ಪರಿಕಲ್ಪನೆಗಳನ್ನು ಕಾಯಕಪ್ರಜ್ಞೆಯೊಂದಿಗೆ ಸಮೀಕರಿಸಿದ ಕಲಾತ್ಮಕತೆ, ಕರಾವಳಿ ಸಂಸ್ಕೃತಿಯ ವಿಶಿಷ್ಠ ಗುಣಲಕ್ಷಣಗಳು, ವೀರಗಾಸೆ ನೃತ್ಯ, ಕರ್ನಾಟಕ ಜನಪದ ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನದೊಂದಿಗಿನ ಅಭ್ಯುದಯದ ಮಹತ್ವದ ಹಂತಗಳು ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಧಾನ ಆಶಯವನ್ನು ಟ್ಯಾಬ್ಲೊ ಪ್ರದರ್ಶನವು ಧ್ವನಿಸಿತು. ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಬಹುಮಾನಕ್ಕೆ ಪಾತ್ರರಾದರು. ಎಸ್.ಡಿ.ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆದರು. ಖ್ಯಾತ ಗಾಯಕ ಸಿ.ಅಶ್ವತ್ಥ್ ಗಾಯನದ ‘ಸ್ತ್ರೀ ಎಂದರೆ ಅಷ್ಟೇ ಸಾಕೇ’ ಹಾಡಿನ ಹಿನ್ನೆಲೆಯೊಂದಿಗೆ ಮಹಿಳೆಯರ ಯಶೋಗಾಥೆಯನ್ನು ಕಾಣಿಸಿದ ಪ್ರದರ್ಶನ ವಿಶೇಷವಾಗಿತ್ತು. ರತ್ನಮಾನಸ ಜೀವನ ಶಿಕ್ಷಣಕ್ಕಿರುವ ಶ್ರಮಸಂಸ್ಕೃತಿ ಮತ್ತು ವಿದ್ಯಾ ಸಂಸ್ಕಾರದ ಆಯಾಮದ ಅಭಿವ್ಯಕ್ತಿಯು ಕಂಗೊಳಿಸಿತು. ಇಸ್ರೋ ಸಂಸ್ಥೆಯ ಉಪಗ್ರಹ ಉಡಾವಣೆಯ ತಾಂತ್ರಿಕ ನೈಪುಣ್ಯದ ಪ್ರಾತ್ಯಕ್ಷಿಕೆಯೂ ಮನಸೆಳೆಯಿತು. ಸೈನಿಕರ ತ್ಯಾಗ ಮತ್ತು ಬಲಿದಾನದ ಪ್ರಾಮುಖ್ಯತೆಯನ್ನು ಕಾಣಿಸುತ್ತಾ ಭಾರತಮಾತೆಯ ಮಡಿಲಲ್ಲಿ ಪ್ರಜೆಗಳೆಲ್ಲರೂ ಸೌಹಾರ್ದದಿಂದ ಬದುಕುವ ಸೌಂದರ್ಯವನ್ನು ಕಾಣಿಸುವ ನೃತ್ಯಪ್ರದರ್ಶನ ದೇಶಪ್ರೇಮದ ಸಂದೇಶ ಸಾರಿತು. ಉಜಿರೆಯ ಎಸ್.ಡಿ.ಎಂ. ಪದವಿ, ಪದವಿಪೂರ್ವ ಕಾಲೇಜು, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ, ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು, ಎಸ್.ಡಿ.ಎಂ. ಶಾಲೆ ಮತ್ತು ಪ್ರೌಢಶಾಲೆಗಳು ಸೇರಿದಂತೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್.ಡಿ.ಎಂ. ಶಾಲಾ ಕಾಲೇಜುಗಳ ಎನ್.ಸಿ.ಸಿ.ಯ ಆರ್ಮಿ ಮತ್ತು ನೌಕಾದಳ ಕೆಡೆಟ್‌ಗಳ ಪಥಸಂಚಲನ ಆಕರ್ಷಕವಾಗಿತ್ತು. ರೋವರ್ಸ್ ಮತ್ತು ರೇಂಜರ್ಸ್ನ ಬ್ಯಾಂಡ್‌ನ ತಂಡವು ಸಾಥ್ ನೀಡಿತು. ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಎಸ್.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭ

Article Image

ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭ

ಭಾರತ ಒಂದು ಪ್ರಜಾಸತ್ತಾತ್ಮಕ ದೇಶವಾಗಿ ವಿಚಾರ ಅಭಿವ್ಯಕ್ತಿ ನಂಬಿಕೆ ಭಕ್ತಿ ಮತ್ತು ಆರಾಧನೆಗಳಿಗೆ ಮಹತ್ವ ನೀಡುತ್ತಾ ಸಮಾನ ಸ್ಥಾನಮಾನ ಮತ್ತು ಅವಕಾಶಗಳನ್ನು ಪ್ರತಿಯೋರ್ವರಿಗೂ ಸಂವಿಧಾನದ ಮೂಲಕ ನೀಡುತ್ತಾ ಬಂದಿದೆ. ತನ್ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಕೆಲವು ಮೂಲಭೂತ ಹಕ್ಕುಗಳನ್ನು ಆನಂದಿಸಲು ಅನುಮತಿಸಲಾಗಿದೆ. ಭಾರತೀಯರಾದ ನಾವು ಭಾರತವನ್ನು ರಾಷ್ಟ್ರವಾಗಿ ಮಾರ್ಗದರ್ಶಿಸುವ ಸಂವಿಧಾನದ ಮೂಲ ತತ್ವಗಳನ್ನು ಹಕ್ಕುಗಳನ್ನು ಗೌರವಿಸುವುದರೊಂದಿಗೆ ದೇಶ ಸೇವೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಸರ್ವದಾ ಸಿದ್ಧರಾಗಿರಬೇಕು ನಮ್ಮ ವಿದ್ಯಾಭ್ಯಾಸದ ಚರಮ ಹಾಗೂ ಪರಮ ಲಕ್ಷ್ಯ ದೇಶಸೇವೆಯೇ ಆಗಿರಬೇಕು. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಅನುಸಂಧಾನದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರು ಡಿ.ಜೆ.ಸಿ.ಎನ್ ಜತೆ ನಿರ್ದೇಶಕರಾದ ಜಗದೀಶ್ ಬಲ್ಲಾಳ್ ತಿಳಿಸಿದರು. ಅವರು ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಬಳಿಕ ಮಾತನಾಡಿದ ಅವರು ಬಲಿಷ್ಠ ರಾಷ್ಟ್ರಕ್ಕಾಗಿ ಪ್ರತಿಯೋರ್ವ ವಿದ್ಯಾರ್ಥಿಯು ದೈಹಿಕ , ಬೌದ್ಧಿಕ ಹಾಗೂ ಸಾಂಸ್ಕ್ರತಿಕವಾಗಿ ಬಲಿಷ್ಠವಾಗಿ ತೊಡಗಿಸಿಕೊಳ್ಳಬೇಕು ಅಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ತಾಳ್ಮೆ ಮತ್ತು ಬ್ರಾತೃತ್ವದಿಂದ ಒಟ್ಟಿಗೆ ವಾಸಿಸುವ ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ಭಾರತೀಯರಿಗೆ ಈ ದಿನ ಅತ್ಯಂತ ಮಹತ್ವದ ದಿನ. ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದರೊಂದಿಗೆ ರಾಷ್ಟ್ರಭಕ್ತರಾಗೋಣ ಎಂದರು. ಬಳಿಕ ಸಂಸ್ಥೆಯ ಎನ್‌ಸಿಸಿ, ನೇವಿ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿ ವಂದಿಸಿದರು.

ರೋಟರಿ ಕ್ಲಬ್ ಬೆಳ್ತಂಗಡಿ : ಭಾರತೀಯ ಸೇನಾದಿನ ಆಚರಣೆ

Article Image

ರೋಟರಿ ಕ್ಲಬ್ ಬೆಳ್ತಂಗಡಿ : ಭಾರತೀಯ ಸೇನಾದಿನ ಆಚರಣೆ

ಬೆಳ್ತಂಗಡಿ : ಗಡಿ ಭಾಗ ಮತ್ತು ಯುದ್ಧ ಭೂಮಿಯ ಪ್ರತಿಯೊಂದು ಕ್ಷಣವು ರೋಚಕ. ಗುಡ್ಡ ಭಾಗದ ಹವಮಾನದ ಪರಿಸ್ಥಿತಿಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ ಪರಕೀಯರ ಸವಾಲುಗಳಿಗೂ ಸದಾ ಸಿದ್ದರಾಗಿರಬೇಕು. ಜೊತೆಯಲ್ಲಿ ಇದ್ದವರು ಕ್ಷಣಾರ್ಧದಲ್ಲಿ ಗುಂಡಿಗೆ ಬಲಿಯಾಗುವ ಸನ್ನಿವೇಶದ ವೇದನೆಗಳು ಹೇಳತೀರದು. ಪ್ರತಿ ಮನೆಯಲ್ಲಿನ ಒಂದು ಕ್ಷಣದ ಪ್ರಾರ್ಥನೆಯೇ ನಮ್ಮ ಆತ್ಮವಿಶ್ವಾಸ ಮತ್ತು ಆರೋಗ್ಯದ ಶಕ್ತಿ ಎಂದು ನಿವೃತ್ತ ಸೇನಾನಿ ವಿಕ್ಟರ್ ಕ್ರಸ್ತಾ ಅಭಿಪ್ರಾಯಪಟ್ಟರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನದಲ್ಲಿ ನಡೆದ 77ನೇ ಭಾರತೀಯ ಸೇನಾದಿನದ ಆಚರಣೆಯಲ್ಲಿ ಮಾತನಾಡಿದರು. 1980 ರ ದಶಕದ ಯುದ್ಧ ಭೂಮಿಗಳು ಮತ್ತು ಗಡಿ ಭಾಗಗಳು ಈಗ ಸುಧಾರಿಸಿವೆ. ಸರ್ಕಾರಗಳು ಸೈನ್ಯದ ಅಭಿವೃದ್ಧಿಗೆ ಮನ್ನಣೆ ನೀಡಿದೆ. ಯುವ ತಲೆಮಾರಿಗೆ ಭಾರತ ಎದುರಿಸಿದ ಯುದ್ಧ ಸನ್ನಿವೇಶಗಳ ಇತಿಹಾಸವನ್ನು ಪರಿಚಯಿಸಬೇಕು. ಸಾಧ್ಯವಾದರೆ ಮುಂದೊಂದು ದಿನ ಇಸ್ರೇಲ್ ಮಾದರಿಯ ಸೈನ್ಯ ವ್ಯವಸ್ಥೆಯನ್ನು ಭಾರತದಲ್ಲೂ ಅಳವಡಿಸುವ ಮೂಲಕ ಯುವ ಜನತೆಯನ್ನು ಸೈನ್ಯದೆಡೆಗೆ ಪ್ರೇರೇಪಿಸಬೇಕು ಎಂದರು. ಈ ಸಂದರ್ಭದಲ್ಲಿ ಅಲಹಬಾದ್, ರಾಜಸ್ಥಾನ್, ಅರುಣಾಚಲ, ಜಮ್ಮು ಇತ್ಯಾದಿ ಗಡಿಭಾಗಗಳಲ್ಲಿ ತಾವು ಅನುಭವಿಸಿದ ರೋಚಕ ಕ್ಷಣಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ, ಸೈನಿಕರು ಕೊರೆಯುವ ಚಳಿ, ಸುಡುವ ಬಿಸಿಲಿನ ನಡುವೆಯೂ ಪ್ರಾಣ ಪಣಕ್ಕಿಟ್ಟು ದೇಶ ಸೇವೆ ಸಲ್ಲಿಸುವ ಬದುಕು ನಮಗೆಲ್ಲರಿಗು ಪ್ರೇರಣೆಯಾಗಬೇಕು. ನಮ್ಮ ಪ್ರತಿದಿನದ ಪ್ರಾರ್ಥನೆಯಲ್ಲಿ ಹಗಲಿರುಳು ದೇಶ ಕಾಯುವ ವೀರ ಯೋಧರಿಗಾಗಿ ಒಂದು ನಿಮಿಷವಾದರೂ ಮೀಸಲಿಡಬೇಕು ಎಂದರು. ಇದೇ ಸಂದರ್ಭದಲ್ಲಿ 1981 ರಿಂದ 1998ರ ವರೆಗೆ ದೇಶದ ಹಲವು ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಕ್ಟರ್ ಕ್ರಸ್ತಾ ರವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ.ಪೂರನ್ ವರ್ಮ, ಕಾರ್ಯದರ್ಶಿ ರೋ.ಸಂದೇಶ್ ಕುಮಾರ್ ರಾವ್,ರೋ.ಅನಂತ ಭಟ್, ರೋ. ವಿದ್ಯಾ ಕುಮಾರ್ ಕಾಂಚೋಡು, ರೋ.ಅರುಣ್, ರೋ‌.ಅರವಿಂದ ಕಾರಂತ್, ರೋ. ಪ್ರವೀಣ್ ಗೋರೆ ಮತ್ತು ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ರೋ. ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ನಿರೂಪಿಸಿ,ವಂದಿಸಿದರು. ಬಾಲ್ಯದಿಂದಲೂ ಭಾರತಮಾತೆಯ ಸೇವೆಸಲ್ಲಿಸಬೇಕೆಂಬ ಕನಸ್ಸು ಕಂಡು, ಭಾರತೀಯ ಸೈನ್ಯ ಸೇರಿ ನಿವೃತ್ತನಾದೆ. ಸೈನಿಕರೂ ತಮ್ಮ ಸರ್ವಸ್ವವನ್ನೆಲ್ಲ ತೊರೆದು ಗಡಿಭಾಗಗಳಲ್ಲಿ ಶ್ರಮಿಸುತ್ತಾರೆ.ಕೆಲವೊಮ್ಮೆ ಅನೀರಿಕ್ಷಿತರಾಗಿ ಗುಡ್ಡ ಕುಸಿತ , ಪರಕೀಯರ ದಾಳಿಗಳಿಗೆ ಬಲಿಯಾಗಿ ವೀರ ಯೋಧರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಮಾಜ ಅವರ ಕುಟುಂಬದ ಜವಾಬ್ದಾರಿಯನ್ನು ಹೊರಬೇಕು. ಸೈನ್ಯ ದಿನ, ಕಾರ್ಗಿಲ್ ವಿಜಯ ದಿನದಂತ ಸಂದರ್ಭಗಳಲ್ಲಿ ಯೋಧರನ್ನು ಸ್ಮರಿಸುವುದರ ಜೊತೆಗೆ, ಸರ್ಕಾರ ಮರಣ ಹೊಂದಿದ ಸೈನಿಕರ ಕುಟುಂಬಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಗಮನಿಸಬೇಕು. - ವಿಕ್ಟರ್ ಕ್ರಸ್ತಾ, ನಿವೃತ್ತ ಸೇನಾನಿ, ಭೂಸೇನೆ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ 2024-25

Article Image

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ 2024-25

ವಿದ್ಯಾಗಿರಿ: ಪಠ್ಯದ ಜೊತೆಗಿನ ಪಠ್ಯೇತರ ಚಟುವಟಿಕೆಗಳು ಸಮಗ್ರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬಲ್ಲದು ಎಂದು ದಕ್ಷಿಣ ಕನ್ನಡ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ನುಡಿದರು. ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಬಾಗಿತ್ವದಲ್ಲಿ ಕೃಷಿ ಸಿರಿ ವೇದಿಕೆಯಲ್ಲಿ ಗುರುವಾರ ‘ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ’ ಕಾರ್ಯಕ್ರಮದ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ, ರೋವರ್ಸ್ ಮತ್ತು ರೇಂಜರ್ಸ್ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯದ ಕಲಿಕೆ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ವಿದ್ಯೆ ಮತ್ತು ಬುದ್ಧಿಯ ಜೊತೆಗೆ ಪಠ್ಯೇತರ ವಿಚಾರಗಳಲ್ಲಿ ತೊಡಗಿಸಿಕೊಂಡಾಗ ಸುಂದರ ಮನಸನ್ನು ಕಟ್ಟಿಕೊಳ್ಳಲು ಸಾಧ್ಯ. ಅವಕಾಶಗಳ ಸದುಪಯೋಗ ಹಾಗೂ ಸಂಸ್ಕಾರದ ಗುಣವನ್ನು ಬೆಳೆಸಿಕೊಳ್ಳಿ. ದೇಶಪ್ರೇಮ, ರಾಷ್ಟ್ರ ಪ್ರೇಮದೊಂದಿಗೆ ಬದುಕೋಣ, ಆದರೆ ಅನ್ಯ ದೇಶದ ನಡುವೆ ಸಂಘರ್ಷ ಬೇಡ ಎಂದರು. ದೇಶಪ್ರೇಮದ ಜೊತೆಗೆ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಿ. ಮನುಷ್ಯ ಬದುಕಲು ನೀರು,ಮಣ್ಣು,ಗಾಳಿ ಅತಿ ಮುಖ್ಯವಾದ ಸಂಪತ್ತು. ಇವುಗಳ ಸಂರಕ್ಷಣೆಯ ಜೊತೆಗೆ ಪ್ರಾಣಿ ಪಕ್ಷಿಗಳ ಬಗ್ಗೆ ಕನಿಕರ ಭಾವ ಹೊಂದಿ ಎಂದರು. ಶಿಸ್ತು, ಸಮಯಪ್ರಜ್ಞೆ, ಸೌಂದರ್ಯ ಪ್ರಜ್ಞೆ, ಸಹಬಾಳ್ವೆ, ಪರೋಪಕಾರ, ಮಾನವೀಯತೆ, ಸೇವಾ ಮನೋಭಾವ, ಸೌಹಾರ್ದತೆ, ಹೋರಾಟ ಮನೋಭಾವ, ವಿನಯತೆ, ಗುರುಹಿರಿಯರಿಗೆ ಗೌರವ ಇವುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಸುಂದರ ವ್ಯಕ್ತಿತ್ವ ಸಾಧ್ಯ. ಸಮಯದ ಮಹತ್ವ ಅರಿತವನು ಜಗತ್ತನ್ನೆ ಗೆಲ್ಲಬಲ್ಲ. ದೇಶದ ಸಂಪತ್ತನ್ನು ಕಾಪಾಡುವ ಮನಸ್ಸನ್ನು ವಿದ್ಯಾರ್ಥಿಗಳು ಏಳವೆಯಲ್ಲಿಯೆ ಬೆಳೆಸಿಕೊಳ್ಳಬೇಕು ಎಂದರು. ಇಂತಹ ಹತ್ತು ಹಲವು ಸದ್ಗುಣಗಳನ್ನು ಸ್ಕೌಟ್ಸ್-ಗೈಡ್ಸ್ ಕ್ಯಾಂಪೋರಿ ಮೂಲಕ ಪಡೆಯಲು ಸಾಧ್ಯ ಎಂದರು. ಜಿಲ್ಲಾ ಸ್ಕೌಟ್ ಆಯುಕ್ತ ಮಹಮ್ಮದ್ ತುಂಬೆ, ಜಿಲ್ಲಾ ಗೈಡ್ ಆಯುಕ್ತೆ ವಿಮಲಾ ರಂಗಯ್ಯ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್, ಜಿಲ್ಲಾ ಸಂಘಟನಾ ಆಯುಕ್ತೆ ಸುನೀತಾ, ಜಿಲ್ಲಾ ತರಬೇತಿ ಆಯುಕ್ತ ಶಾಂತಾರಾಮ ಪ್ರಭು, ಶಿಬಿರ ನಿರ್ದೇಶಕ ನಾರಾಯಣ್ ನಾಯ್ಕ, ಗೈಡ್ ವಿಭಾಗ ನಾಯಕಿ ತ್ರಿಶಲಾ, ರೋವರ್ ಮತ್ತು ರೇಂಜರ್ ವಿಭಾಗ ನಾಯಕಿ ಡಾ. ಅಪರ್ಣಾ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭರತ್ ರಾಜ್ ಕೆ ಇದ್ದರು. ಜಿಲ್ಲೆಯ 13 ಸ್ಥಳೀಯ ಸಂಸ್ಥೆಗಳಿAದ ಸ್ಕೌಟ್-450, ಗೈಡ್-331, ರೋವರ್ಸ್-12, ರೇಂಜರ್ಸ್-33, ಸ್ಕೌಟ್ ಮಾಸ್ಟರ್-33, ಗೈಡ್ ಕ್ಯಾಪ್ಟನ್-25, ರೇಂಜರ್ ಲೀಡರ್-2, ಸ್ವಯಂಸೇವಕರಾಗಿ ರೋವರ್ಸ್-27, ರೇಂಜರ್ಸ್-44, ಸಿಬ್ಬಂದಿ ವರ್ಗದವರು-35 ಸೇರಿದಂತೆ 992 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ ನಿರೂಪಿಸಿದರು.ಜಿಲ್ಲಾ ಸಂಘಟನಾ ಆಯುಕ್ತರು ವಸಂತ್ ದೇವಾಡಿಗ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಕದ್ರಿ ವಾರ್ಷಿಕ ಜಾತ್ರ ಮಹೋತ್ಸವ-2025: ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕ್ರತಿಕ ವೈಭವ

Article Image

ಕದ್ರಿ ವಾರ್ಷಿಕ ಜಾತ್ರ ಮಹೋತ್ಸವ-2025: ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕ್ರತಿಕ ವೈಭವ

ಮಂಗಳೂರು: ಇತಿಹಾಸ ಪ್ರಸಿದ್ದ ಮಂಗಳೂರು ಕದ್ರಿ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವದ ಪ್ರಯುಕ್ತ ಮಲ್ಲಿಕಾ ಕಲಾವೃಂದ ಕದ್ರಿ ಆಶ್ರಯದಲ್ಲಿ ಸೋಮವಾರ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಎಲ್ಲರ ಮೆಚ್ಚುಗೆ ಪಡೆಯಿತು. ಈ ಸಂದರ್ಭದಲ್ಲಿ ಮಲ್ಲಿಕಾ ಕಲಾವೃಂದದ ಕಾರ್ಯಾಧ್ಯಕ್ಷರಾದ ಸುಧಾಕರ ರಾವ್ ಪೇಜಾವರ, ಭಾರತೀಯ ಜೈನ್ ಮಿಲನ್ ಮಂಗಳೂರಿನ ಅಧ್ಯಕ್ಷರಾದ ರತ್ನಾಕರ ಜೈನ್, ಕಲ್ಕೂರ ಪ್ರತಿಷ್ಠಾನ ದ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ, ಮಲ್ಲಿಕಾ ಕಲಾವೃಂದ ದ ಕಾರ್ಯದರ್ಶಿ ವಸುದೇವ ರಾವ್ ಕುಡುಪು ಹಾಗೂ ರಿಮಾ ಜಗನ್ನಾಥ್ ಮಾರ್ನಮಿಕಟ್ಟೆ, ಪ್ರಾರ್ಥನಾ ರೋಹಿತ್ ಹೊಸಬೆಟ್ಟು, ಅಶಿಶ್ ಅಂಚನ್ ಮಂಗಳೂರು , ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು. ಶ್ರೇಯಾ ದಾಸ್ ನಿರೂಪಿಸಿದರು. ಶ್ರೇಯಾ ಭಟ್ ,ಅಪೇಕ್ಷಾ ಎ ಸಹಕರಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶ

Article Image

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶ

ಉಜಿರೆ: ಧರ್ಮಸ್ಥಳದ ಆಶ್ರಯದಲ್ಲಿ ನಡೆಯುತ್ತಿರುವ ಅನೇಕ ಪವಿತ್ರ ಸೇವಾಕಾರ್ಯಗಳಲ್ಲಿ ಮದ್ಯವ್ಯಸನಿಗಳನ್ನು ಮನಪರಿವರ್ತನೆ ಮೂಲಕ ವ್ಯಸನಮುಕ್ತರನ್ನಾಗಿ ಮಾಡಿ ಆರೋಗ್ಯಪೂರ್ಣ ಸಮಾಜ ರೂಪಿಸುವ ಕಾಯಕ ಅತ್ಯಂತ ಶ್ರೇಷ್ಠ, ಪವಿತ್ರ ಹಾಗೂ ಉತ್ತಮ ಸೇವೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮಸ್ಥಳದ ಮೇಲಿನ ಭಕ್ತಿ, ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಜನಜಾಗೃತಿವೇದಿಕೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತನು, ಮನ, ಧನದ ಮೂಲದ ತ್ರಿಕರಣಪೂರ್ವಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದರಿಂದ ಎಲ್ಲರಿಗೂ ಸಮಾಜದಲ್ಲಿ ವಿಶೇಷ ಗೌರವ, ಮಾನ್ಯತೆ ದೊರಕುತ್ತಿದೆ. ವೇದಿಕೆಯ ಕೀರ್ತಿಯೂ ಹೆಚ್ಚಾಗಿದೆ. ವ್ಯಸನಮುಕ್ತರು ಪವಿತ್ರಾತ್ಮರಾಗಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿದಾಗ ಅವರಿಗೆ ವಿಶೇಷ ಅನುಗ್ರಹವಾಗುತ್ತದೆ. ಮುಂದೆ ಅವರು ನವಜೀವನ ಸಮಿತಿ ಸದಸ್ಯರಾಗಿ ದೃಢಸಂಕಲ್ಪದಿಂದ ಸುಖ- ಶಾಂತಿ ನೆಮ್ಮದಿಯ ಕೌಟುಂಬಿಕ ಜೀವನ ನಡೆಸುವುದು ತಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿ ನೀಡುತ್ತದೆ ಎಂದು ಹೆಗ್ಗಡೆಯವರು ಹೇಳಿದರು. ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶವನ್ನು ಉದ್ಘಾಟಿಸಿದ ಹೇಮಾವತಿ ವೀ. ಹೆಗ್ಗಡೆಯವರು ದೇಶದ ಅಮೂಲ್ಯ ಮಾನವಸಂಪನ್ಮೂಲವಾಗಿದ್ದು, ಯುವಜನತೆ ತಮ್ಮ ಬುದ್ಧಿ ಮತ್ತು ವಿವೇಕವನ್ನು ಕಳೆದುಕೊಂಡು ಮದ್ಯ ವ್ಯಸನಕ್ಕೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು. ಇಡೀ ರಾಜ್ಯದಲ್ಲಿ ವಟವೃಕ್ಷದಂತೆ ಹಲವು ಶಾಖೆಗಳೊಂದಿಗೆ ಬೆಳೆದಿರುವ ಜನಜಾಗೃತಿ ವೇದಿಕೆಯ ನೇತೃತ್ವದಲ್ಲಿ ಕಾರ್ಯಕರ್ತರ ಜನಹಿತ ಹಾಗೂ ಜನಪರ ಸೇವೆಯಿಂದಾಗಿ ಅನೇಕ ಮಂದಿ ಇಂದು ವ್ಯಸನಮುಕ್ತರಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಲ್ಲರ ಮನೆಗಳಲ್ಲಿ ಹಾಗೂ ಮನಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮದಿರೆಯ ಕಬಂಧಬಾಹುಗಳಲ್ಲಿ ಬಂಧಿತರಾದವರು ಯಾವುದೇ ಸಂಶಯ, ಸಮಸ್ಯೆಗಳಿದ್ದರೂ ಜನಜಾಗೃತಿ ವೇದಿಕೆಯ ಕಾರ್ಯಕರ್ತರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ವಿಶೇಷ ಸೇವೆ, ಸಾಧನೆ ಮಾಡಿ ಪ್ರಶಸ್ತಿ, ಪುರಸ್ಕಾರ ಪಡೆದ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.. ಸತೀಶ್ ಬಳೆಗಾರ ಬರೆದ “ ಕತ್ತಲ ಕುಡುಕರ ಬೆಳಕಿನ ಮಕ್ಕಳು” ಎಂಬ ಕೃತಿಯನ್ನು ಶ್ರದ್ಧಾಅಮಿತ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮಧ್ಯಪಾನ ಆಧುನಿಕ ಜೀವನಶೈಲಿಯಾಗಿದೆ ಎಂಬ ಭ್ರಮೆಯ ಆತಂಕವಿದೆ. ಮದ್ಯವ್ಯಸನಿಗಳ ಮಕ್ಕಳ ಬಾಳಿನ ಗೋಳು ವರ್ಣಿಸಲಸದಳವಾಗಿದ್ದು, ಮಕ್ಕಳು ಪೋಷಕರ ಪ್ರೀತಿ, ಭದ್ರತೆ, ರಕ್ಷಣೆಯಿಂದ, ವಂಚಿತರಾಗುತ್ತಾರೆ. ಹಾಗಾಗಿ ಶಾಲಾ-ಕಾಲೇಜುಗಳಲ್ಲಿ “ಸ್ವಾಸ್ಥಸಂಕಲ್ಪ” ಕಾರ್ಯಕ್ರಮದ ಮೂಲಕ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು, ಜಾಗೃತಿ ಮೂಡಿಸಲಾಗುತ್ತದೆ ಎಂದರು. ಕೊಪ್ಪಳ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ನಟರಾಜ ಬಾದಾಮಿ ಅವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ನೂತನ ರಾಜ್ಯ ಸಂಘಟನೆಯ ನೂತನ ರಾಜ್ಯ ಸಂಘಟನಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ರಾಜ್ಯ ಸಂಘಟನಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಜಣ್ಣ ಕೊರವಿ ಅವರನ್ನು ಗೌರವಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್ ಆಶಯ ನುಡಿಗಳೊಂದಿಗೆ ಯೋಜನೆಯ ಸೇವೆ, ಸಾಧನೆಯ ಪಕ್ಷಿನೋಟ ವಿವರಿಸಿದರು. ಜನಜಾಗೃತಿ ವೇದಿಕೆ ಟ್ರಸ್ಟ್ನ ಕಾರ್ಯದರ್ಶಿ ವಿವೇಕ್ ವಿ. ಪಾಯ್ಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರಾಮಸ್ವಾಮಿ ಧನ್ಯವಾದವಿತ್ತರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಗಣೇಶ ಆಚಾರ್ಯ ಮತ್ತು ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು.

ಎಸ್.ಡಿ.ಎಂ. ಕಾಲೇಜಿನಲ್ಲಿ ‘ಪ್ರಮುಕ 2025’ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ

Article Image

ಎಸ್.ಡಿ.ಎಂ. ಕಾಲೇಜಿನಲ್ಲಿ ‘ಪ್ರಮುಕ 2025’ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ

ಉಜಿರೆ, ಜ. 6: ಸ್ಕೌಟ್ಸ್ ಗೈಡ್ಸ್ ನಂತಹ ಪಠ್ಯೇತರ ಚಟುವಟಿಕೆಗಳನ್ನು ಶಿಕ್ಷಣದಲ್ಲಿ ಅತ್ಯಗತ್ಯ ಎಂದು ಪರಿಗಣಿಸಬೇಕು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಸದಸ್ಯರಾದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ ಆ್ಯಂಡ್ ರೇಂಜರ್ಸ್ ಘಟಕ (ಸ್ಕೌಟ್ಸ್ ಗೈಡ್ಸ್ ಹಿರಿಯರ ವಿಭಾಗ) ಇಂದು (ಜ. 6) ಆಯೋಜಿಸಿದ ಒಂದು ದಿನದ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ ‘ಪ್ರಮುಕ 2025’ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಪರೋಪಕಾರಾರ್ಥಂ ಇದಮ್ ಶರೀರಂ’ ಎಂಬ ಸಂಸ್ಕೃತ ಸೂಕ್ತಿಯಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ಪಠ್ಯದ ಜತೆಗೆ ಇಂತಹ ಪಠ್ಯೇತರ ಚಟುವಟಿಕೆಗಳು ಶಿಕ್ಷಣದಲ್ಲಿ ಅಗತ್ಯ ಎಂದು ಅವರು ಹೇಳಿದರು. “ದೇಶದ ಭವಿಷ್ಯವು ಯುವಪೀಳಿಗೆಯ ಮೇಲೆ ಅವಲಂಬಿತವಾಗಿದ್ದು, ಸ್ಕೌಟ್ಸ್ ಗೈಡ್ಸ್ ನಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೂರಕವಾಗಿವೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯು ಈ ದೆಸೆಯಲ್ಲಿ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದರು. “ಜೀವನದಲ್ಲಿ ಸವಾಲುಗಳು ಎದುರಾದಾಗ ಮೌಲ್ಯಗಳನ್ನು ಕಳೆದುಕೊಳ್ಳಬೇಡಿ. ಮೌಲ್ಯಗಳು ನಮ್ಮ ಗೌರವ ಹೆಚ್ಚಿಸುತ್ತವೆ. ಕಷ್ಟ ಎದುರಿಸುವ ಧೈರ್ಯ, ಪ್ರಕೃತಿಯೊಂದಿಗೆ ಬೆರೆತು ಸಹಬಾಳ್ವೆ ನಡೆಸಲು ಪ್ರೇರಣೆಯನ್ನು ಸ್ಕೌಟ್ಸ್ ಗೈಡ್ಸ್ ನೀಡಲಿ” ಎಂದರು. ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯ ವೈಸ್ ಚೇರ್ಮನ್ ಅಶ್ವಿತ್ ಜೈನ್ ಮಾತನಾಡಿದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಶಕ್ತಿ, ಅಸಾಮಾನ್ಯ ಸಾಮರ್ಥ್ಯ ಯುವಕರಲ್ಲಿದೆ ಎಂದು ಅವರು ಹೇಳಿದರು. “ರೋವರ್ಸ್ ಮತ್ತು ರೇಂಜರ್ ವಿದ್ಯಾರ್ಥಿಗಳು ಕೇವಲ ತಂಡದ ಪ್ರತಿನಿಧಿಗಳಲ್ಲ ಬದಲಾಗಿ ತಂಡದ ನಾಯಕರು. ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಹೊಂದಿರುವ ಹಾಗೂ ಇನ್ನೊಬ್ಬರಿಗೆ ಮಾದರಿಯಾಗುವಂತಹ ವ್ಯಕ್ತಿಗಳು. ಬದಲಾವಣೆಯ ಹರಿಕಾರರು. ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ನೀವು ಇತರರಿಗೆ ಮಾದರಿಯಾಗಿದ್ದೀರಿ” ಎಂದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ. ಕ. ಜಿಲ್ಲಾ ಆಯುಕ್ತ (ಸ್ಕೌಟ್ಸ್) ಬಿ. ಎಂ. ತುಂಬೆ ಮಾತನಾಡಿದರು. “ಬಾಲ್ಯವೆಂಬುವುದು ಬಹಳ ಸುಂದರ. ಅದನ್ನು ಸಿಹಿಯಾಗಿಸಿ ಯೌವನವನ್ನು ಆಹ್ವಾನಿಸಿ. ಯೌವನದಲ್ಲಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ. ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಯಭಾರಿಗಳಾಗಿ” ಎಂದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ.ಕ. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್. ಮಾತನಾಡಿದರು. ವಿಶ್ವಮಟ್ಟದ ಸಂಸ್ಥೆಯಾಗಿರುವ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸಲು ಸಹಕರಿಸುತ್ತದೆ ಎಂದರು. ಕಾರ್ಯಕ್ರಮಕ್ಕಾಗಿ ಕಾಲೇಜನ್ನು ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಮಾನವಕುಲದ ಸೇವೆಯೇ ಜೀವನದ ಅತ್ಯುತ್ತಮ ಸೇವೆ. ನಿಜವಾದ ರಾಷ್ಟ್ರ ನಿರ್ಮಾಣವೆಂದರೆ ಮನಸ್ಸುಗಳನ್ನು ಕಟ್ಟುವಂತದ್ದು. ಮನುಷ್ಯರು ಯಂತ್ರಗಳಂತಾಗಿ ಸಂವೇದನೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸ್ಕೌಟ್ಸ್ ಗೈಡ್ಸ್ ನಂತಹ ಸಂಸ್ಥೆಗಳು ಅರ್ಥ ಕಂಡುಕೊಳ್ಳುತ್ತವೆ. ಸ್ಕೌಟ್ಸ್ ಗೈಡ್ಸ್ ಯುವಜನತೆಯಲ್ಲಿ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸುತ್ತದೆ, ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದರು. ಕಾರ್ಯಕ್ರಮ ಸಂಯೋಜಕಿ, ರೇಂಜರ್ ಲೀಡರ್ ಗಾನವಿ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಇಂಡೋನೇಷಿಯನ್ ಭಾಷೆಯಲ್ಲಿ ‘ಪ್ರಮುಕ’ ಎಂದರೆ ಕೆಲಸವನ್ನು ಪ್ರೀತಿಸುವ ಯುವ ಜನರು ಅಥವಾ ಕೆಲಸಕ್ಕೆ ಸಿದ್ಧರಾಗಿರುವ ಯುವ ನಾಗರಿಕರು ಎಂದರ್ಥ. ಈ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ವಿವಿಧ ಸ್ಪರ್ಧೆಗಳ ಟ್ರೋಫಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕಾಲೇಜಿನ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿ ನಾಯಕರಾದ ಹರ್ಷಿಣಿ ಮತ್ತು ದಿಲೀಪ್ ಉಪಸ್ಥಿತರಿದ್ದರು. ರೇಂಜರ್ ನಿತ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕ, ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಮಾನಸಾ ಅಗ್ನಿಹೋತ್ರಿ, ಭೂಮಿಕಾ ಕೆ.ಎಲ್. ಜೈನ್ ಮತ್ತು ಮೋಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳ ರೋವರ್ಸ್ ರೇಂಜರ್ಸ್, ರೋವರ್ ಸ್ಕೌಟ್ ಲೀಡರ್ಸ್, ರೇಂಜರ್ ಲೀಡರ್ಸ್, ಸ್ಥಳೀಯ ಎಸ್.ಡಿ.ಎಂ. ಶಾಲೆಗಳ ಸ್ಕೌಟ್ಸ್ ಗೈಡ್ಸ್, ಕಬ್ ಬುಲ್ ಬುಲ್, ಬನ್ನೀಸ್, ಸ್ಕೌಟ್ ಮಾಸ್ಟರ್ಸ್, ಗೈಡ್ ಕ್ಯಾಪ್ಟನ್ಸ್ ಪಾಲ್ಗೊಂಡಿದ್ದರು. ಬೆಳಗ್ಗೆ ಕಾಲೇಜು ಒಳಾಂಗಣದಲ್ಲಿ ಸ್ಕೌಟ್ಸ್ ಧ್ವಜಾರೋಹಣ ಹಾಗೂ ಪ್ರಾರ್ಥನೆ ನೆರವೇರಿತು. ಸ್ಕೌಟ್ಸ್ ಗೈಡ್ಸ್ ಶಿಬಿರಗಳಲ್ಲಿರುವ ಸಾಹಸಮಯ ಆಟಗಳ ಮಾದರಿಗಳು, ಟೆಂಟ್, ಮರದ ಮೇಲಿನ ಅಟ್ಟಳಿಗೆ, ಬಿದಿರು ಮತ್ತು ಹಗ್ಗಗಳನ್ನು ಬಳಸಿ ತಯಾರಿಸಿದ ಏಣಿ ಸೇರಿದಂತೆ ಸ್ಕೌಟಿಂಗ್ ಸಂಬಂಧಿತ ವಿವಿಧ ವಸ್ತು, ಮಾದರಿಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಉಜಿರೆ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ

Article Image

ಉಜಿರೆ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ

ಉಜಿರೆ, ಜ.1: ಆರ್ಥಿಕ ಅಗತ್ಯವಿರುವ ರೋಗಿಗಳಿಗೆ ಸಹಾಯವಾಗಲಿ ಅನ್ನುವ ಉದ್ದೇಶದಿಂದ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಾರ್ಷಿಕ 1.40 ಕೋಟಿ ರೂ. ಮೊತ್ತದ ಉಚಿತ ಡಯಾಲಿಸಿಸ್ ಸೇವೆ ನೀಡುವ ಯೋಜನೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ ಎಂದು ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು. ಅವರು ಉಜಿರೆಯ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಡಯಾಲಿಸಿಸ್ ರೋಗಿಗಳಿಗೆ ನಿರಂತರ ಆರೈಕೆ ಬೇಕಾಗಿದ್ದು, ಅವರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ. ಆದರೆ ಬಡ ರೋಗಿಗಳಿಗೆ ಇದು ಸವಾಲಿನ ಸಂಗತಿಯಾಗಿದ್ದು, ಅವರ ಉಳಿತಾಯವೆಲ್ಲಾ ಡಯಾಲಿಸಿಸ್-ನಂತಹ ಚಿಕಿತ್ಸೆಗೇ ವ್ಯಯವಾಗುತ್ತದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಈ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಲಾಗಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಆರ್ಥಿಕ ಸಹಾಯದ ಅಗತ್ಯವಿರುವವರಿಗೆ ಹಾಗೂ ಅಶಕ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಹಿಂದೆಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಸಂಪೂರ್ಣ ಸುರಕ್ಷಾ ಯೋಜನೆಯೂ ಜಾರಿಯಲ್ಲಿದೆ ಎಂದರು. ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು, ಉಜಿರೆಯ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2022ರ ಜನವರಿಯಲ್ಲಿ ಡಯಾಲಿಸಿಸ್ ಸೇವೆ ಆರಂಭವಾಗಿದ್ದು, ಒಟ್ಟು 11 ಡಯಾಲಿಸಿಸ್ ಯಂತ್ರಗಳಿವೆ‌. ಈ ಹವಾನಿಯಂತ್ರಿತ ಕೇಂದ್ರದಲ್ಲಿ ಇದುವರೆಗೂ ಪ್ರತಿದಿನ‌ 30ಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದ್ದು, ಒಟ್ಟು 10 ಸಾವಿರಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದೆ. ಬೆಳ್ತಂಗಡಿ ತಾಲೂಕಿನ ಆಸುಪಾಸಿನಲ್ಲಿರುವ ರೋಗಿಗಳಿಗೆ ಈ ಡಯಾಲಿಸಿಸ್ ಸೆಂಟರ್ ವರದಾನವಾಗಿತ್ತು. ಇದರ ಜೊತೆಗೆ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿರುವುದು ಬಹಳಷ್ಟು ರೋಗಿಗಳಿಗೆ ಅನುಕೂಲವಾಗಲಿದೆ ಎಂದರು. ಪ್ರತಿ ರೋಗಿಗೆ ಒಂದು ಬಾರಿಯ ಡಯಾಲಿಸಿಸ್-ಗೆ 1,500 ರೂಪಾಯಿ ವೆಚ್ಚವಾಗುತ್ತದೆ. ಒಬ್ಬ ರೋಗಿಗೆ ವಾರಕ್ಕೆ 3 ರಿಂದ 4 ಡಯಾಲಿಸಿಸ್ ಅಗತ್ಯವಿರುತ್ತದೆ. ಇದೀಗ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಒಬ್ಬ ರೋಗಿಗೆ ತಿಂಗಳಿಗೆ 12 ಸಾವಿರದಿಂದ 24 ಸಾವಿರ ರೂಪಾಯಿಗಳವರೆಗೂ ಉಳಿತಾಯವಾಗುತ್ತದೆ. ಉಚಿತ ಡಯಾಲಿಸಿಸ್ ಯೋಜನೆಯಲ್ಲಿ ಒಬ್ಬ ರೋಗಿ ಮಾಸಿಕ 12 ಡಯಾಲಿಸಿಸ್ ಮಾಡಿಸಿಕೊಳ್ಳಬಹುದು. ಇದರ ಜೊತೆಗೆ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2024 ನೇ ಸಾಲಿನಲ್ಲಿ 4.98 ಕೋಟಿ ರೂ. ಮೊತ್ತದ ಉಚಿತ ವೈದ್ಯಕೀಯ ಸೇವೆಯನ್ನು ರೋಗಿಗಳಿಗೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷವೂ 40ಕ್ಕೂ ಅಧಿಕ ಉಚಿತ ವೈದ್ಯಕೀಯ ಶಿಬಿರಗಳನ್ನೂ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಜಿಶಿಯನ್ ಡಾ. ಸಾತ್ವಿಕ್ ಜೈನ್, ಜೆನರಲ್ ಫಿಜಿಶಿಯನ್ ಡಾ. ಬಾಲಕೃಷ್ಣ ಭಟ್, ಮೆಡಿಕಲ್ ಸುಪರಿಡೆಂಟ್ ಡಾ. ದೇವೇಂದ್ರ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವೈದ್ಯೆ ಅನುಷಾ ನಿರೂಪಿಸಿದರು. ಸಂಪರ್ಕಾಧಿಕಾರಿ ಚಿದಾನಂದ್ ಅವರು ಧನ್ಯವಾದ ಸಮರ್ಪಿಸಿದರು.

ಇಂದಿನಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಳ ಬ್ರಹ್ಮಕಲಶೋತ್ಸವ

Article Image

ಇಂದಿನಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಳ ಬ್ರಹ್ಮಕಲಶೋತ್ಸವ

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ಜ. 8ರಿಂದ 20ರವರೆಗೆ ಸೀಮೆಯ ತಂತ್ರಿಗಳಾದ ನಡ್ಡತಾಡಿ ಬ್ರಹ್ಮಶ್ರೀ ವೇ.ಮೂ. ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಆನುವಂಶಿಕ ಆಡಳಿತ ಮೋಕ್ತಸರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ತಿಳಿಸಿದ್ದಾರೆ. ಅಜಿಲ ವಂಶಸ್ತರು 12 ಮಾಗಣೆಗೆ 32 ಗ್ರಾಮಗಳನ್ನು ಒಳಗೊಂಡು ಅಳದಂಗಡಿ ಶ್ರೀ ಸೋಮನಾಥೇಶ್ವರಿ, ವೇಣೂರು ಶ್ರೀ ಮಹಾಲಿಂಗೇಶ್ವರ, ಕೇಳ ಪಂಚಲಿಂಗೇಶ್ವರ, ಬರಾಯ ಗೋಪಾಲಕೃಷ್ಣ ದೇವಾಲಯಗಳನ್ನು ಸ್ಥಾಪನೆ ಮಾಡಿದ್ದು ಅಳದಂಗಡಿಯ ಈ ದೇವಾಲಯವು ಅಜಿಲ ಸೀಮೆಗೆ ಸಂಬಂಧಪಟ್ಟ ದೇವಾಲಯವಾಗಿದೆ. ಈ ದೇವಾಲಯದಲ್ಲಿ 2007ರಲ್ಲಿ ಸೀಮೆಯ ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಾಗಿತ್ತು. 12 ವರ್ಷಕ್ಕೆ ಬ್ರಹ್ಮಕಲಶೋತ್ಸವ ಮಾಡಬೇಕಾಗಿದ್ದು ಸೀಮೆಯಲ್ಲಿ ಹಲವು ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವ ಇದ್ದುದರಿಂದ ಪ್ರಸಕ್ತ ದೇವಳದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ 18 ವರ್ಷಗಳ ಬಳಿಕ ಮತ್ತೆ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಅದರಂತೆ ಅನೇಕ ಜೀರ್ಣೋದ್ದಾರ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಚಿಂತಿಸಲಾಗಿದೆ. ದೇವಳದ ಪ್ರಾಂಗಣ, ಒಳಾಂಗಣದ ನವೀಕರಣ, ಸುತ್ತ ಪ್ರಾಂಗಣದಲ್ಲಿ ಇಂಟರ್‌ಲಾಕ್ ಅಳವಡಿಕೆ, ಪಾಕಶಾಲೆ ನಿರ್ಮಾಣ ಹಾಗೂ ಋತ್ವಿಜರ ಭೋಜನ ಶಾಲೆ, ರಜತ ಪಲ್ಲಕ್ಕಿ ಸಮರ್ಪಣೆ, ಬ್ರಹ್ಮಕಲಶೋತ್ಸವ ಸೇರಿದಂತೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಸೀಮೆಯ ಭಕ್ತರ ಸಹಕಾರದಿಂದ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಕಲಶೋತ್ಸವ ಮತ್ತು ಉಪಸಮಿತಿ ರಚಿಸಲಾಗಿದೆ. ಈ ಬಾರಿ ಬ್ರಹ್ಮಕಲಶೋತ್ಸವದಲ್ಲಿ ದೇವತಾ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಜ. 2ರಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ ಚಪ್ಪರ ಮುಹೂರ್ತ ನೆರವೇರಿಸಿದ್ದಾರೆ. ಜ. 8ರಂದು ಅಳದಂಗಡಿ ಬಸ್ ನಿಲ್ದಾಣದಿಂದ ಹೊರೆಕಾಣಿಕೆ ಮೆರವಣಿಗೆ ತಾಲೂಕಿನ ಕುಣಿತ ಭಜನಾ ತಂಡಗಳ ಭಜನೆಯೊಂದಿಗೆ ನಡೆಯಲಿದೆ. ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉಗ್ರಾಣ ಮುಹೂರ್ತ ನೆರವೇರಿಸಲಿದ್ದಾರೆ. ಜ. 10ರಂದು ನಡೆಯುವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಜ. 12ರಂದು ಬ್ರಹ್ಮ ಕುಂಭಾಭಿಷೇಕ ಜರುಗಲಿದೆ. ಜ. 14ರಿಂದ 20ರವರೆಗೆ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ-2025: ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವ

Article Image

ಪ್ರಮುಖ-2025: ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವ

ಉಜಿರೆ: ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳು ಸೇವೆ ಹಾಗೂ ನಾಯಕತ್ವ ಗುಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬಾಲ್ಯದ ಸವಿನೆನಪುಗಳು ಜೀವನವಿಡೀ ನೆನಪಿರುತ್ತವೆ. ವ್ಯಕ್ತಿತ್ವವಿಕಸನವೇ ಶಿಕ್ಷಣದ ಗುರಿಯಾಗಿದ್ದು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಸಂಸ್ಕಾರದೊಂದಿಗೆ ವಿದ್ಯಾರ್ಥಿಗಳು ಸಭ್ಯ, ಸುಸಂಸ್ಕೃತ ನಾಗರಿಕರಾಗಲು ಪ್ರೇರಣೆ ನೀಡುತ್ತದೆ ಎಂದರು. ಕೆ.ಪಿ.ಸಿ.ಸಿ. ಕಾರ್ಯದರ್ಶಿ ಅಶ್ವಿತ್‌ಜೈನ್, ಮಹ್ಮದ್‌ತುಂಬೆ, ಮತ್ತು ಪ್ರಸಾದ್‌ಕುಮಾರ್ ಶುಭಾಶಂಸನೆ ಮಾಡಿದರು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ಇಂತಹ ಉತ್ಸವಗಳು ಮಾನವೀಯ ಮೌಲ್ಯಗಳ ಉದ್ದೀಪನಕ್ಕೆ ಪ್ರೇರಕವಾಗಿವೆ ಎಂದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು. ರೇಂಜರ್ ಲೀಡರ್ ಗಾನವಿ ಡಿ., ಸ್ವಾಗತಿಸಿದರು. ರೋವರ್ ಲೀಡರ್ ಪ್ರಸಾದ್ ಕುಮಾರ್ ಧನ್ಯವಾದವಿತ್ತರು. ಭೂಮಿಕಾ, ಕೆ.ಎಲ್. ಜೈನ್ ಮತ್ತು ಮಾನಸ ಅಗ್ನಿಹೋತ್ರಿ ಕಾರ್ಯಕ್ರಮ ನಿರ್ವಹಿಸಿದರು.

ಮುಳಿಯ ಜ್ಯುವೆಲ್ಸ್ ಸಂಸ್ಥೆಗೆ 'ಸೇವಾಶ್ರೀ ಪ್ರಶಸ್ತಿ ಪ್ರದಾನ

Article Image

ಮುಳಿಯ ಜ್ಯುವೆಲ್ಸ್ ಸಂಸ್ಥೆಗೆ 'ಸೇವಾಶ್ರೀ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಜೆಸಿ ಸಪ್ತಾಹ ಕಾರ್ಯಕ್ರಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜಸೇವೆ ಮಾಡುತ್ತಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಳಿಯ ಸಂಸ್ಥೆಯ ಮ್ಯಾನೇಜರ್ ಲೋಹಿತ್ ಮತ್ತು ಸಿಬ್ಬಂದಿಗಳು ಪ್ರಶಸ್ತಿ ಸ್ವೀಕರಿಸಿದರು. ರಾಜ್ಯದ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆಗಳಲ್ಲೊಂದಾದ ಮುಳಿಯ ಜುವೆಲ್ಸ್ ಪರಿಶುದ್ಧತೆಗೆ ಹೆಸರುವಾಸಿ. ಚಿನ್ನಾಭರಣಗಳ ಉದ್ಯಮದೊಂದಿಗೆ ಸಮಾಜಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಕಲೆ ಹೀಗೆ ಹತ್ತು ಹಲವು ಸ್ತರಗಳಲ್ಲಿ ಸಂಸ್ಥೆಯು ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್ ಡಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಜೆಸಿಐ ವಲಯಾಧ್ಯಕ್ಷ ಗಿರೀಶ್ ಎಸ್.ಪಿ, ಉದ್ಯಮಿ ಪ್ರವೀಣ್ ಫರ್ನಾಂಡೀಸ್ ಹಳ್ಳಿಮನೆ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಜೆಎಸಿ ನಿರ್ದೇಶಕ ಕಿರಣ್ ಕುಮಾರ್ ಶೆಟ್ಟಿ, ವಲಯ ಉಪಾಧ್ಯಕ್ಷ ಶಂಕರ್ ರಾವ್, ಪೂರ್ವಾಧ್ಯಕ್ಷರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ಚಿದಾನಂದ ಇಡ್ಯ, ವಸಂತ ಶೆಟ್ಟಿ ಶ್ರದ್ದಾ, ರವೀಂದ್ರ ಶೆಟ್ಟಿ ಸುರಭಿ, ಸುಭಾಶ್ಚಂದ್ರ ಎಂಪಿ, ಅಶೋಕ್ ಕುಮಾರ್ ಬಿಪಿ, ಜೆಸಿ ಸಪ್ತಾಹ ಸಂಯೋಜಕಿ ಹೇಮಾವತಿ, ಲೇಡಿ ಜೆಸಿ ಸಂಯೋಜಕಿ ಶ್ರುತಿ ರಂಜಿತ್, ರಕ್ಷಿತ್ ಅಂಡಿಂಜೆ, ಶೈಲೇಶ್, ಪೂರ್ವಾಧ್ಯಕ್ಷರು, ಜೆಸಿ ಪದಾಧಿಕಾರಿಗಳು, ಉಪಸ್ಥಿತರಿದ್ದರು.

ಸಿರಿ ಸಂಸ್ಥೆಯ 2025ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ

Article Image

ಸಿರಿ ಸಂಸ್ಥೆಯ 2025ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ

ಧರ್ಮಸ್ಥಳ : ಸಿರಿ ಸಂಸ್ಥೆಯ ವತಿಯಿಂದ 2025ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ‍್ಯಕ್ರಮವು ಡಿ.23 ರಂದು ಧರ್ಮಸ್ಥಳದ ಬೀಡು ಕಛೇರಿಯಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಸಿರಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಹೇಮಾವತಿ ವೀ ಹೆಗ್ಗಡೆ ದಂಪತಿಗಳು ಸಿರಿ ಸಂಸ್ಥೆಯ ವತಿಯಿಂದ 2025ನೇ ವರ್ಷದ ನೂತನ ವಾಲ್ ಕ್ಯಾಲೆಂಡರನ್ನು ಮತ್ತು ಟೇಬಲ್ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ದನ್ ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅದೇ ರೀತಿ ಸಿರಿ ಕ್ಯಾಲೆಂಡರ್ ಮುದ್ರಣ ಕಾರ‍್ಯದಲ್ಲಿ ಸಹಕರಿಸಿದ ಮಂಜುಶ್ರೀ ಪ್ರಿಂಟರ್ಸ್ ನ ಶೇಖರ್ ಹಾಗೂ ಸಿರಿ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ಮುಖ್ಯ ನರ‍್ವಹಣಾಧಿಕಾರಿ ಪ್ರಸನ್ನ, ಸಿರಿ ಸಂಸ್ಥೆಯ ವಿವಿಧ ವಿಭಾಗಗಳ ಮೇಲಾಧಿಕಾರಿಗಳು ಹಾಗೂ ಮಾರುಕಟ್ಟೆ ವಿಭಾಗದ ವಿವಿಧ ವಲಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಠಿಣ ದುಡಿಮೆ, ಪರಿಶ್ರಮದಿಂದ ಉತ್ಕೃಷ್ಟ ಸಾಧನೆ: ಡಾ| ಹೆಗ್ಗಡೆ

Article Image

ಕಠಿಣ ದುಡಿಮೆ, ಪರಿಶ್ರಮದಿಂದ ಉತ್ಕೃಷ್ಟ ಸಾಧನೆ: ಡಾ| ಹೆಗ್ಗಡೆ

ಉಜಿರೆ: ವಿದ್ಯಾರ್ಥಿಗಳು ತಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಕಠಿಣ ಪ ರಿಶ್ರಮ , ಸಾಧನೆಯ ಅಧ್ಯಯನದಿಂದ ಯಶಸ್ಸಿನ ಪಥದಲ್ಲಿ ಸಾಗಬಹುದು. ಕ್ರೀಡೆ, ಯೋಗ ಮತ್ತಿತರ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಳ್ಳುವುದರಿಂದ ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಂಡು ಅಧ್ಯಯನದಲ್ಲಿ ಉತೃಷ್ಟ ಸಾಧನೆ ಮಾಡಲು ಸಾಧ್ಯ. ಪ್ರತಿ ವರ್ಷ ಪ್ರತಿ ಶತ ಫಲಿತಾಂಶದಿಂದ ಸಂಸ್ಥೆಗೆ ಕೀರ್ತಿ ತರುವಂತವರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು. ಅವರು ಡಿ 17ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲ ಅನುಕೂಲತೆ ಕಲ್ಪಿಸಿಕೊಡುತ್ತಿದೆ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡುತ್ತಿದೆ. ಇಲ್ಲಿ ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಅಮೇರಿಕ ಮುಂತಾದ ಕಡೆಗಳಲ್ಲಿ ಉನ್ನತ ಉದ್ಯೋಗದಲ್ಲಿ ತೊಡಗಿ ಸಂಸ್ಥೆಯ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ . ಕಾಲೇಜಿನಿಂದ ಹೊರಬರುತ್ತಲೇ ಕ್ಯಾಂಪಸ್ ಸೆಲೆಕ್ಷನ್ ನಿಂದ ಉತ್ತಮ ಉದ್ಯೋಗಾವಕಾಶಗಳು ಕಾದಿರುತ್ತವೆ. ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಪ್ರತಿ ವರ್ಷ ವಿಶ್ವವಿದ್ಯಾಲಯದ ರ್ಯಾಂಕ್ ಗಳು ವಿದ್ಯಾರ್ಥಿಗಳ ಪಾಲಾಗುತ್ತಿರುವುದು ಹೆಮ್ಮೆಯ ವಿಚಾರ. ಈ ಬಾರಿ ವಿ.ವಿ.ಯ 9ನೇ ರಾಂಕ್ ಪಡೆದ ವಿದ್ಯಾರ್ಥಿ ಹಾಗು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದರು. ಈ ಸಂದರ್ಭದಲ್ಲಿ ಅವರು ಕಾಲೇಜಿನ ವಿ.ವಿ.ಯ 9ನೇ ರಾಂಕ್ ಪಡೆದ ವಿದ್ಯಾರ್ಥಿ, ಶಿಕ್ಷಣ,ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳು ಹಾಗು ಮೂವರು ಪಿ ಎಚ್ ಡಿ ಪಡೆದ ಉಪನ್ಯಾಸಕರನ್ನು ಪುರಸ್ಕರಿಸಿ,ಉಜ್ವಲ ಭವಿಷ್ಯ ಹಾಗು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ಶುಭ ಹಾರೈಸಿದರು. ಮಣಿಪಾಲ ಕಾರ್ಮಿಕ್ ಡಿಸೈನ್ ಪ್ರೈ .ಲಿ .ನ ಡೈರೆಕ್ಟರ್ ಮತ್ತು ಚೀಫ್ ಟೆಕ್ನಿಕಲ್ ಆಫೀಸರ್ ಗುರುರಾಜ್ ಬಂಕಾಪುರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ!ಸತೀಶ್ಚಂದ್ರ ಎಸ್., ಕಾರ್ಯಕ್ರಮ ಸಂಯೋಜಕರಾದ ಮೆಕ್ಯಾನಿಕಲ್ ವಿಭಾಗದ ಡಾ!ಬಸವ, ಸಿವಿಲ್ ವಿಭಾಗದ ಡಾ!ಕೃಷ್ಣಪ್ರಸಾದ್ ಮತ್ತು ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಅಶೋಕಕುಮಾರ್ ಟಿ. ಕಾಲೇಜಿನ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು. ಸಂದೀಪ್ ಸ್ವಾಗತಿಸಿ, ಸಿವಿಲ್ ಎಂಜಿನೀಯರಿಂಗ್ ವಿಭಾಗದ ಶ್ರೀನಿಧಿ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲ್ಪಟ್ಟಿತು.

ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಅಭಿಮಾನಿಗಳ ಯಶಸ್ವಿ ಪಾದಯಾತ್ರೆ

Article Image

ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಅಭಿಮಾನಿಗಳ ಯಶಸ್ವಿ ಪಾದಯಾತ್ರೆ

ಉಜಿರೆ: ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಮಾರ್ಗದಲ್ಲಿ ನಡೆದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹೃದಯ ವೈಶಾಲ್ಯದಿಂದ ಕಾಯಕದ ಮೂಲಕ ತಾನು ಸಂತೋಷದಿಂದ ನಿತ್ಯವೂ, ನಿರಂತರವೂ ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡುತ್ತಿರುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಮಂಗಳವಾರ ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಬಂದ 25 ಸಾವಿರಕ್ಕೂ ಮಿಕ್ಕಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ತಮಗೆ ಸುಖ-ದುಃಖ ಮತ್ತು ಪಾಪ - ಪುಣ್ಯದ ಭಯ ಹಾಗೂ ಚಿಂತೆ ಇಲ್ಲ. ಎರಡನ್ನೂ ತಾವು ಸಮಾನವಾಗಿ ಸ್ವೀಕರಿಸಿ ಶ್ರೀ ಸ್ವಾಮಿಯ ಸನ್ನಿಧಿಗೆ ಅರ್ಪಿಸಿ ನಿಶ್ಚಿಂತೆಯಿಂದ ಇರುತ್ತೇನೆ. ಲಕ್ಷಾಂತರ ಮಂದಿ ಭಕ್ತರ ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವವೇ ತಮಗೆ ಶ್ರೀರಕ್ಷೆಯಾಗಿದೆ ಎಂದರು. 2025 ರ ಜನವರಿ 7 ಮತ್ತು 8 ರಂದು ಮಾನ್ಯ ಉಪರಾಷ್ಟ್ರಪತಿಗಳನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದ್ದು ನೂತನ ಸರತಿ ಸಾಲಿನ (ಕ್ಯೂ ಕಾಂಪ್ಲೆಕ್ಸ್) ಕಟ್ಟಡವನ್ನು ಉದ್ಘಾಟಿಸುವರು. ಅಂದು 60 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು. ಉಡುಪಿಯಲ್ಲಿ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು. ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳಕ್ಕೆ ಬೇಕಾದಷ್ಟು ಅಕ್ಕಿ, ತರಕಾರಿಗಳನ್ನು ಭಕ್ತರೇ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಹಾಗಾಗಿ ತಾವು ಖರೀದಿಸುವ ಅವಶ್ಯಕತೆ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಚಿಂತೆ ಮಾಡದೆ ತಾವು ಎಲ್ಲವನ್ನೂ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ಸನ್ನಿಧಿಗೆ ಅರ್ಪಿಸಿ ಸಂತೋಷದಿಂದ ಸೇವಾಕಾರ್ಯಗಳ ಮೂಲಕ ಶ್ರೀ ಸ್ವಾಮಿ ಸೇವೆ ಮಾಡುತ್ತಿರುವುದಾಗಿ ತಿಳಿಸಿದರು. ಲಕ್ಷದೀಪೋತ್ಸವವು ಎಲ್ಲರ ಮನೆಗಳಿಗೂ, ಮನಗಳಿಗೂ ಬೆಳಕನ್ನು ನೀಡಲಿ. ಎಲ್ಲೆಲ್ಲೂ ಸುಖ-ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಹೆಗ್ಗಡೆಯವರು ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವುದೇ ಲಕ್ಷದೀಪೋತ್ಸವದ ಉದ್ದೇಶವಾಗಿದೆ. 12 ವರ್ಷಗಳ ಹಿಂದೆ ಉಜಿರೆಯಿಂದ ಧರ್ಮಸ್ಥಳಕ್ಕೆ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆರಂಭಿಸಿದ ಪಾದಯಾತ್ರೆಯಲ್ಲಿ ವರ್ಷದಿಂದ ವರ್ಷಕ್ಕೆ ಪಾದಯಾತ್ರೆಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ತಮ್ಮೆಲ್ಲರ ಶ್ರದ್ಧಾ-ಭಕ್ತಿಯ ಕೇಂದ್ರವಾದ ಧರ್ಮಸ್ಥಳಕ್ಕೆ ಯಾವುದೇ ರೀತಿಯಲ್ಲಿ ಅಪಚಾರ, ಅಪಪ್ರಚಾರವಾದರೂ ಎಲ್ಲರೂ ನ್ಯಾಯಾಲಯದಲ್ಲಿ ಹಾಗೂ ಜನತಾನ್ಯಾಯಾಲಯದಲ್ಲಿ ಹೋರಾಡಲು ತಾವು ಸಿದ್ಧರು ಹಾಗೂ ಬದ್ಧರು ಎಂದು ಅವರು ಭರವಸೆ ನೀಡಿದರು. ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ ಸುಗಮ ಪಾದಯಾತ್ರೆ ಬಗ್ಗೆ ಎಲ್ಲರನ್ನೂ ಶ್ಲಾಘಿಸಿ ಅಭಿನಂದಿಸಿದರು. ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರ ಕುಮಾರ್, ಉಜಿರೆಯ ಶರತ್‌ಕೃಷ್ಣ ಪಡ್ವೆಟ್ನಾಯ, ಸೋನಿಯಾ ಯಶೋವರ್ಮ, ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರನ್‌ವರ್ಮ ಉಪಸ್ಥಿತರಿದ್ದರು. ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನ

Article Image

ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನ

ಉಜಿರೆ: “ಪ್ರಚಲಿತ ಆರ್ಥಿಕ ವಿದ್ಯಮಾನದಲ್ಲಿ ಗ್ರಾಮೀಣ ಉದ್ಯಮಶೀಲತೆ” ಎಂಬ ವಿಷಯದ ಬಗ್ಯೆ ಉಜಿರೆಯಲ್ಲಿರುವ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಆಶ್ರಯದಲ್ಲಿ 2025ರ ಜನವರಿ 17 ಮತ್ತು 18ರಂದು ಬಹುಶಿಸ್ತೀಯ ಅಂತಾಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನ ಸಮ್ಮೇಳನ ಆಯೋಜಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮತ್ತು ಸಮ್ಮೇಳನದ ಸಂಘಟನಾಕಾರ್ಯದರ್ಶಿ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಮಹೇಶ್‌ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಪ್ರಾರಂಭಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹಾಗೂ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಪ್ರಗತಿ-ಸಾಧನೆಯ ಯಶೋಗಾಥೆಯ ಹಿನ್ನೆಲೆಯಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳು ಗ್ರಾಮೀಣ ಉದ್ಯಮಶೀಲತಾಭಿವೃದ್ಧಿಗಾಗಿ ಬಳಸಿದ ಬಹುಶಿಸ್ತೀಯ ಆರ್ಥಿಕನೀತಿಯ ಹಿನ್ನೆಲೆಯಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ಚರ್ಚೆ, ವಿಚಾರ-ವಿನಿಮಯ ನಡೆಸಲಾಗುವುದು. ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ : 15-12-2024. ಹೆಸರು ನೋಂದಾವಣೆಗೆ ಕೊನೆಯ ದಿನಾಂಕ: 05-01-2025 ಪ್ರತಿನಿಧಿ ಶುಲ್ಕ: ಉಪನ್ಯಾಸಕರುಗಳಿಗೆ: ರೂ.1,000 ಸಂಶೋಧಕರಿಗೆ: ರೂ. 500. ವಿದ್ಯಾರ್ಥಿಗಳಿಗೆ ರೂ. 300 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಡಾ. ಮಹೇಶ್‌ಕುಮಾರ್ ಶೆಟ್ಟಿ. ಸಂಚಾರಿ ದೂರವಾಣಿ: 9880673174

ಕರ್ನಾಟಕದಲ್ಲಿ ಮಕ್ಕಳ ಕೇಂದ್ರಿತ ಉಪಕ್ರಮಗಳನ್ನು ಬಲಪಡಿಸಲು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯೋಜನೆ

Article Image

ಕರ್ನಾಟಕದಲ್ಲಿ ಮಕ್ಕಳ ಕೇಂದ್ರಿತ ಉಪಕ್ರಮಗಳನ್ನು ಬಲಪಡಿಸಲು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯೋಜನೆ

United Nations Children’s Emergency Fund (UNICEF) ನ ಹೈದರಾಬಾದ್ ಫೀಲ್ಡ್ ಆಫೀಸ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಮಕ್ಕಳ ಕೇಂದ್ರಿತ ಉಪಕ್ರಮಗಳನ್ನು ಬಲಪಡಿಸಲು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯೋಜನೆಯನ್ನು ರೂಪಿಸಿದೆ. UNICEFನ ಹೈದರಾಬಾದ್ ಫೀಲ್ಡ್ ಆಫೀಸ್ (HFO), ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣವನ್ನು ರಾಜ್ಯಗಳ ವ್ಯಾಪ್ತಿಯನ್ನು ಹೊಂದಿದೆ. ಫೀಲ್ಡ್ ಆಫೀಸಿನ ಮುಖ್ಯಸ್ಥರಾದ ಡಾ. ಝೆಲಾಲೆಮ್ ಟಫೆಸ್ಸೆಯವರ ನೇತೃತ್ವದ ತಂಡ ಇಂದು ಧರ್ಮಸ್ಥಳದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ, ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳ-ಕೇಂದ್ರಿತ ಗಂಭೀರ ಸಮಸ್ಯೆಗಳಾದ ಮಕ್ಕಳ ಬಾಲ್ಯದ ಬೆಳವಣಿಗೆ, ಅಪೌಷ್ಟಿಕತೆ, ಬಾಲ್ಯ ವಿವಾಹ ಸಮಸ್ಯೆ ಮತ್ತು ಸ್ವಚ್ಛತೆ ಹಾಗೂ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸುವುದರ ಕುರಿತು ಚರ್ಚಿಸಿದರು. ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರ ಬಹಳ ಮಹತ್ವವಾಗಿದ್ದು, ಅವರನ್ನು ಉತ್ತಮ ಪೋಷಕರನ್ನಾಗಿಸಲು ಮತ್ತು ಮಕ್ಕಳನ್ನು ಸಾಮಾಜಿಕ ಹಾಗೂ ಮತ್ತು ಉತ್ತಮ ವ್ಯಕ್ತಿತ್ವದವರನ್ನಾಗಿಸಲು ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಡಾ.ಟಾಫೆಸ್ಸೆಯವರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು (SKDRDP) ಈ ಕಾರ್ಯಕ್ರಮವನ್ನು ಸ್ವೀಕರಿಸಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿ ಅನುಷ್ಠಾನಿಸಲು ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸಿದೆ. ಈ ಸಹಯೋಗವು SKDRDP ಮತ್ತು UNICEF ನಡುವಿನ ಸಹಭಾಗಿತ್ವದಲ್ಲಿ ‘ನೀರು ಉಳಿಸಿ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ರಾಜ್ಯದ 14 ಬರಪೀಡಿತ ಜಿಲ್ಲೆಗಳಲ್ಲಿ ಅನುಷ್ಠಾನಿಸಿದೆ. SKDRDPಯು ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಯೋಜಿಸುತ್ತಿದೆ. ಸಭೆಯಲ್ಲಿ ಎಸ್‌ಕೆಡಿಆರ್‌ಡಿಪಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಅನಿಲ್ ಕುಮಾರ್ ಎಸ್.ಎಸ್., ಮುಖ್ಯ ಹಣಕಾಸು ಅಧಿಕಾರಿಯಾದ ಶಾಂತಾರಾಮ ಪೈ, UNICEF HFO ವಾಶ್ ಸ್ಪೆಷಲಿಸ್ಟ್ ವೆಂಕಟೇಶ ಅರಳಿಕಟ್ಟಿ, UNICEF HFO ವಾಶ್ ಮತ್ತು CCES ತಜ್ಞ ಡಾ. ಮಟ್ಪಾಡಿ ಪ್ರಭಾತ್ ಕಲ್ಕೂರ, ವಸಂತ್, ಜಗದೀಶ್ ಹಾಗೂ ನಿಖಿಲೇಶ್ ಇವರು ಉಪಸ್ಥಿತರಿದ್ದರು. ಈ ಸಹಯೋಗವು ಎರಡೂ ಸಂಸ್ಥೆಗಳ ಸಾಂಸ್ಥಿಕ ಸಹಭಾಗಿತ್ವದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ರಾಜ್ಯದ ಮಕ್ಕಳ ಉಜ್ವಲ ಭವಿಷ್ಯವನ್ನು ಬೆಳೆಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

“ಮಂಜೂಷಾ” ವಸ್ತುಸಂಗ್ರಹಾಲಯ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಮಾನ್ಯತೆ

Article Image

“ಮಂಜೂಷಾ” ವಸ್ತುಸಂಗ್ರಹಾಲಯ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಮಾನ್ಯತೆ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ರೂಪಿಸಿದ ಅಪೂರ್ವ “ಮಂಜೂಷಾ” ವಸ್ತುಸಂಗ್ರಹಾಲಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ವಿಶೇಷ ಮಾನ್ಯತೆಗೆ ಪಾತ್ರವಾಗಿದೆ. ನವದೆಹಲಿಯಲ್ಲಿರುವ ಸಂಸ್ಥೆಯ ಮುಖ್ಯಸ್ಥರಾದ ಡಾ. ಅನಿಲ್ ಕುಮಾರ್ ಶರ್ಮ ಹೆಗ್ಗಡೆಯವರ 76ನೆ ಜನ್ಮದಿನಾಚರಣೆ ಶುಭ ಸಂದರ್ಭದಲ್ಲಿ ಕಾರ್ತಿಕ ಸೋಮವಾರ ಶುಭದಿನ ಹೆಗ್ಗಡೆಯವರಿಗೆ ಗೌರವಪೂರ್ವಕವಾಗಿ ಅಭಿನಂದನೆಗಳೊAದಿಗೆ ಪ್ರಮಾಣಪತ್ರವನ್ನು ಸಮರ್ಪಿಸಿದರು. ಒಬ್ಬನೆ ವ್ಯಕ್ತಿ ಕಳೆದ 50 ವರ್ಷಗಳಲ್ಲಿ ನಮ್ಮ ಭವ್ಯ ಇತಿಹಾಸ, ಕಲೆ, ಸಂಸ್ಕೃತಿಗೆ ಅಪೂರ್ವ ಪ್ರಾಚೀನ ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ವಿಶಿಷ್ಠ ಸೇವೆಯಾಗಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. 7500 ತಾಳೆಗರಿ ಹಸ್ತಪ್ರತಿಗಳು, 21,000 ಕಲಾತ್ಮಕ ವಸ್ತುಗಳು, 25,000 ಅಪೂರ್ವ ಪ್ರಾಚೀನ ಗ್ರಂಥಗಳು ಹಾಗೂ ನೂರಕ್ಕೂ ಮಿಕ್ಕಿ ವಿಂಟೇಜ್ ಕಾರುಗಳ ಸಂಗ್ರಹದ ಬಗ್ಯೆ ಹೆಗ್ಗಡೆಯವರನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ

10ನೇ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ “SDM MitO24” (ಸೊಸೈಟಿ ಆಫ್ ಮೈಟೊಕಾಂಡ್ರಿಯಾ ರಿಸರ್ಚ್ ಆ್ಯಂಡ್ ಮೆಡಿಸಿನ್, ಭಾರತ) “ಮೈಟೊಕಾಂಡ್ರಿಯ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ಪ್ರಗತಿ” ಎಂಬ ಧ್ಯೆಯೆಯೊಂದಿಗೆ ನವೆಂಬರ್ 11 ರಿಂದ 12 ರವರೆಗೆ ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ದೇಶ ವಿದೇಶಗಳಿಂದ ಸುಮಾರು 100ಕ್ಕೂ ಹೆಚ್ಚು ತಜ್ಞ ಪ್ರತಿನಿಧಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಮತ್ತು ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್ ಮತ್ತಿತರ ಗಣ್ಯರು ಸಮ್ಮೇಳನವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ಡಾ. ನಿರಂಜನ ಕುಮಾರ್ ಮಾತನಾಡುತ್ತಾ: ಮೈಟೊಕಾಂಡ್ರಿಯವು ಎಲ್ಲಾ ಜೀವಕೋಶಗಳ ಶಕ್ತಿ ಕೇಂದ್ರವಾಗಿದೆ. ಮೈಟೊಕಾಂಡ್ರಿಯದ ಕಾಯಿಲೆಗಳು ಬಹಳ ಅಪರೂಪದ ಕಾಯಿಲೆಗಳಾಗಿದ್ದು ಜೀವಕೋಶಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ರೋಗಗಳನ್ನು ಗುಣಪಡಿಸಬಹುದು. ಜೀವನದ ಗುಣಮಟ್ಟವನ್ನು ಆಧರಿಸಿ ಸಂಶೋಧನೆ ಮಾಡಬೇಕು. ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಮೈಟೊಕಾಂಡ್ರಿಯದ ಸಂಶೋಧನೆಗಳು ಪ್ರಗತಿಯಲ್ಲಿವೆ. ಸೊಸೈಟಿ ಆಫ್ ಮೈಟೊಕಾಂಡ್ರಿಯಾ ರಿಸರ್ಚ್ ಆ್ಯಂಡ್ ಮೆಡಿಸಿನ್, ಭಾರತದ ಅಧ್ಯಕ್ಷರಾದ ಡಾ. ಕೆ ತಂಗರಾಜ್ ಅವರು ಸೊಸೈಟಿಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಸಮ್ಮೇಳನದ ಭಾಗವಾಗಿ ಬಿತ್ತಿಪತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಮ್ಮೇಳನದಲ್ಲಿ ಅತ್ಯುತ್ತಮ ಬಿತ್ತಿಪತ್ರ ಪ್ರಶಸ್ತಿ ಮತ್ತು ಯುವ ವಿಜ್ಞಾನಿಗಳ ಪ್ರಶಸ್ತಿಗಳನ್ನು ನೀಡಲಾಯಿತು. ಸಂಶೋಧನ ನಿರ್ದೇಶಕ ಮತ್ತು ಸಂಘಟನಾ ಕಾರ್ಯದರ್ಶಿಗಳಾದ ಡಾ. ಕೆ. ಸತ್ಯಮೂರ್ತಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಅರವಿಂದ ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ. ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಅಜಯ್ ಕುಮಾರ್ ಓಲಿ ವಂದನಾರ್ಪಣೆ ಸಲ್ಲಿಸಿದರು.

ಕಂಚಿಕಾಮಕೋಟಿ ಸ್ವಾಮೀಜಿ : ಧರ್ಮಸ್ಥಳ ಪುರಪ್ರವೇಶ, ಅನುಗ್ರಹ ಭಾಷಣ

Article Image

ಕಂಚಿಕಾಮಕೋಟಿ ಸ್ವಾಮೀಜಿ : ಧರ್ಮಸ್ಥಳ ಪುರಪ್ರವೇಶ, ಅನುಗ್ರಹ ಭಾಷಣ

ಉಜಿರೆ: ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ಸದಾ ಕಾಪಾಡುತ್ತದೆ. ಧರ್ಮಸ್ಥಳ ಸೌಂದರ್ಯ ನಗರ, ಸಂಸ್ಕೃತಿ ನಗರ ಮತ್ತು ಸೇವಾ ನಗರ. ಧರ್ಮೋ ರಕ್ಷತಿ ರಕ್ಷಿತ:. ಇಡೀ ದೇಶಕ್ಕೆ ಮುಕುಟಪ್ರಾಯವಾದ ಧರ್ಮಸ್ಥಳದಲ್ಲಿ ಅಮೂಲ್ಯ ಆಸ್ತಿಯಾದ ಭಕ್ತಿ, ಸೇವೆ, ಅನುಭವ, ನಾಯಕತ್ವ, ಪ್ರತಿಷ್ಠೆ, ಪ್ರಜ್ಞಾ, ಕೀರ್ತಿ ಎಲ್ಲವೂ ಇದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಒಬ್ಬ ಸಾಧಾರಣ ವ್ಯಕ್ತಿಯಾಗಿ. ಅಸಾಧಾರಣ ಸೇವೆ, ಸಾಧನೆ ಮಾಡಿದ್ದಾರೆ. ಅವರ ದಕ್ಷ ಕಾರ್ಯವೈಖರಿ, ಆದರ್ಶ ನಾಯಕತ್ವ, ಸಾಮಾಜಿಕ ಸೇವಾ ಕಳಕಳಿ ಮತ್ತು ಹೃದಯಶ್ರೀಮಂತಿಕೆಯನ್ನು ಮನ್ನಿಸಿ ಪ್ರಧಾನಿ ನರೇಂದ್ರಮೋದಿಯವರೇ ಹೆಗ್ಗಡಯವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದು ಕರ್ನಾಟಕ ರಾಜ್ಯಕ್ಕೇ ಸಂದ ಗೌರವ ಎಂದು ಕಂಚಿಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಹೇಳಿದರು. ಅವರು ಶನಿವಾರ ಧರ್ಮಸ್ಥಳ ಕ್ಷೇತ್ರಕ್ಕೆ ಪುರಪ್ರವೇಶ ಮಾಡಿದಾಗ ಮುಖ್ಯ ಪ್ರವೇಶ ದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅನುಗ್ರಹ ಭಾಷಣ ಮಾಡಿದರು, ದಾರಿದ್ರ್ಯಾಂ ನಿರ್ಮೂಲನೆಯೊಂದಿಗೆ ಭಾವದಾರಿದ್ರ್ಯಾಂ ನಿರ್ಮೂಲನವೂ ಆಗಬೇಕು ಎಂದು ಹೇಳಿದ ಸ್ವಾಮೀಜಿ ಹೆಗ್ಗಡೆ ಕುಟುಂಬದವರ ಅವಿಭಕ್ತ ಕುಟುಂಬ ಪದ್ಧತಿಯ ಜೀವನ ಶೈಲಿಯನ್ನು ಶ್ಲಾಘಿಸಿ ಅಭಿನಂದಿಸಿದರು. ಕರ್ನಾಟಕ ಸಂಗೀತ ಮತ್ತು ಯಕ್ಷಗಾನದ ಸೊಗಡನ್ನು ಶ್ಲಾಘಿಸಿದ ಅವರು ವಿದ್ಯೆ, ಕಲೆಗಳು ಮತ್ತು ವಿದ್ವಾಂಸರ ರಕ್ಷಣೆಯಾಗಬೇಕು ಎಂದು ಸಲಹೆ ನೀಡಿದರು. ಕಂಚಿಮಠದಲ್ಲಿ ಕೃಷಿ ಸುಭಿಕ್ಷೆಗಾಗಿ ಪ್ರತಿವರ್ಷ ಮಾಡುವ ಅನ್ನಾಭಿಷೇಕ ಸೇವೆಯನ್ನು ತಾವು ಧರ್ಮಸ್ಥಳದಲ್ಲಿ ಕೂಡಾ ಮಾಡುವುದಾಗಿ ತಿಳಿಸಿದರು. ಅಲ್ಲದೆ ಸೋಮವಾರ ಕಾರ್ತಿಕ ಪೂಜೆ, ದ್ವಾದಶಿ ಪೂಜೆ, ತ್ರಯೋದಶಿ ಪೂಜೆ ಮೊದಲಾದ ವಿಶೇಷ ಸೇವೆಗಳನ್ನು ಮಾಡುವುದಾಗಿ ತಿಳಿಸಿದರು. ಅನ್ನಪೂರ್ಣ ಛತ್ರದ ಮೇಲಂತಸ್ತಿನಲ್ಲಿ ಸುಸಜ್ಜಿತ ಆಸನ ವ್ಯವಸ್ಥೆ ಹೊಂದಿರುವ ಭೋಜನಾಲಯದ ಉದ್ಘಾಟನೆಗೆ ಹೆಗ್ಗಡೆಯವರು ಆಹ್ವಾನಿಸಿದ್ದು ತಾವು ಇದೇ ಸಂದರ್ಭ ಇಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಪ್ರಕಟಿಸಿದರು. ಬಹುಮುಖ ಪ್ರತಿಭೆ ಹಾಗೂ ಆದರ್ಶ ವ್ಯಕ್ತಿತ್ವ ಹೊಂದಿದ ಹೆಗ್ಗಡೆಯವರ ಹೃದಯ ಶ್ರೀಮಂತಿಕೆ ಹಾಗೂ ಸೇವಾ ಕಾಳಜಿ ಇಡೀ ದೇಶಕ್ಕೆ ಮಾದರಿಯಾಗಿದೆ. ಇತರರಿಗೂ ಸ್ಫೂರ್ತಿ, ಪ್ರೇರಣೆ ನೀಡುತ್ತವೆ ಎಂದರು. ಸರ್ವರ ಬೌದ್ಧಿಕ, ಆಧ್ಯಾತ್ಮಿಕ ಹಾಗೂ ಸಾರ್ವಕಾಲಿಕ ಭದ್ರತೆ ಮತ್ತು ವಿಕಾಸಕ್ಕಾಗಿ ಅವಕಾಶ ಕಲ್ಪಿಸಿರುವುದು ಹೆಗ್ಗಡೆಯವರಿಗೆ ವಿಶೇಷ ಮಾನ್ಯತೆ ಮತ್ತು ಗೌರವ ದೊರಕುವಂತೆ ಮಾಡಿದೆ. ಸ್ವಾಮೀಜಿಯವರು ಹೆಗ್ಗಡೆಯವರು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ವಿಶೇಷವಾಗಿ ಗೌರವಿಸಿ ಆಶೀರ್ವದಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾಯಶೋವರ್ಮ ಮತ್ತು ಪೂರಣ್‌ವರ್ಮ ಉಪಸ್ಥಿತರಿದ್ದರು.

ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರ ಧರ್ಮಸ್ಥಳ ಪುರಪ್ರವೇಶ

Article Image

ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರ ಧರ್ಮಸ್ಥಳ ಪುರಪ್ರವೇಶ

ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ದಿನಾಂಕ: 09-11-2024ರಂದು ಸಂಜೆ ಗಂಟೆ 6.00 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪುರಪ್ರವೇಶ ಮಾಡಲಿದ್ದಾರೆ. ಮಹಾದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ತಲುಪಿ ಭಕ್ತರೆಲ್ಲರಿಗೂ ಅನುಗ್ರಹ ಭಾಷಣವನ್ನು ಮಾಡಲಿದ್ದಾರೆ. ದಿನಾಂಕ: 09-11-2024 ರಿಂದ 16-11-2024ರ ತನಕ ಕ್ಷೇತ್ರದಲ್ಲಿ ಮೊಕ್ಕಾಂ ಮಾಡಲಿದ್ದಾರೆ. ದಿನಾಂಕ: 14-11-2024 ಗುರುವಾರ ಸಂಜೆ ಗಂಟೆ 5.00ಕ್ಕೆ ಅನ್ನಪೂರ್ಣದ ಮೇಲಂತಸ್ತಿನಲ್ಲಿ ನೂತನವಾಗಿ ನಿರ್ಮಿಸಿರುವ ಭೋಜನಾಲಯವನ್ನು ಪೂಜ್ಯ ಸ್ವಾಮೀಜಿಯವರು ಉದ್ಘಾಟಿಸಲಿರುವರು.

ಉಜಿರೆ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರಮಟ್ಟದ ಎರಡು ಪ್ರಶಸ್ತಿ

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರಮಟ್ಟದ ಎರಡು ಪ್ರಶಸ್ತಿ

ಉಜಿರೆ: ದೇಶದ ಪ್ರತಿಷ್ಠಿತ ಯುಜಿಸಿಯು ನ್ಯಾಕ್ ಸಂಸ್ಥೆ ಮೂಲಕ ನಡೆಸುವ ಗುಣಮಟ್ಟ ಪರೀಕ್ಷೆಯಲ್ಲಿ ಸತತ ನಾಲ್ಕು ಬಾರಿ A++ ಮಾನ್ಯತೆಯೊಂದಿಗೆ ರಾಜ್ಯದ, ದೇಶದ ಹಲವು ಪ್ರಶಸ್ತಿ, ಗೌರವಕ್ಕೆ ಭಾಜನವಾಗಿರುವ ಉಜಿರೆಯ ಶ್ರೀ ಧ.ಮಂ. ಕಾಲೇಜಿಗೆ ಈಚೆಗೆ ಇನ್ನೆರಡು ಪ್ರಶಸ್ತಿಗಳು ಲಭಿಸಿವೆ. ರಾಷ್ಟ್ರಮಟ್ಟದ ‘ಬಿಗಿನಪ್ ರಿಸರ್ಚ್ ಇಂಟಲಿಜೆನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ಉಜಿರೆ ಶ್ರೀ ಧ.ಮಂ. ಕಾಲೇಜನ್ನು ‘ಬೆಸ್ಟ್ ಆ್ಯಂಡ್ ಮೋಸ್ಟ್ ಟ್ರಸ್ಟೆಡ್ ಡಿಗ್ರಿ ಕಾಲೇಜ್ ಆಫ್ ಕರ್ನಾಟಕ’ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಅತ್ಯುತ್ತಮ ಆಡಳಿತ, ಗುಣಾತ್ಮಕ ಶಿಕ್ಷಣ ಹಾಗೂ ಸಾಮಾಜಿಕ ಕೊಡುಗೆಗೆ ನೀಡಲಾಗುವ ಪ್ರಶಸ್ತಿಗೆ ಕಾಲೇಜನ್ನು ಆಯ್ಕೆ ಮಾಡಿದೆ. ಜೊತೆಗೆ, ‘ಶೈಕ್ಷಣಿಕ ಗುಣಮಟ್ಟದಲ್ಲಿ ಉತ್ಕೃಷ್ಟತೆ ಹಾಗೂ ಅದರ ಪರಿಣಾಮಕಾರಿ ಅಳವಡಿಕೆ ಅನುಷ್ಠಾನ’ ವಿಭಾಗದಲ್ಲಿಯೂ ಕಾಲೇಜನ್ನು ಪ್ರಶಸ್ತಿಗೆ ಪರಿಗಣಿಸಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ಇಂಡಿಯಾ ಇಲೈಟ್ ಎಜುಕೇಶನ್ ಆ್ಯಂಡ್ ಇನ್ಸ್ಟಿಟ್ಯೂಷನಲ್ ಎಕ್ಸೆಲೆನ್ಸ್ ಅವಾರ್ಡ್ಸ್ ಆ್ಯಂಡ್ ಕಾನ್ಫರೆನ್ಸ್ 2024’ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹಾಗೂ ಉಪ ಪ್ರಾಂಶುಪಾಲ ಎಸ್.ಎನ್. ಕಾಕತ್ಕರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ, 450ಕ್ಕೂ ಹೆಚ್ಚು ಅಧಿಕ ರಾಷ್ಟ್ರಮಟ್ಟದ ಸಂಸ್ಥೆಗಳ ಪ್ರತಿನಿಧಿಗಳು, ವಿದ್ವಾಂಸರು, ಶೈಕ್ಷಣಿಕ ತಜ್ಞರು, ವಿಶ್ವವಿದ್ಯಾಲಯ ಹಾಗೂ ಶಾಲಾ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

Article Image

ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

ಬೆಳ್ತಂಗಡಿ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು, ಅರ್ಥಿಕವಾಗಿ ಬಲಿಷ್ಡರಾಗಬೇಕು ಅದಕ್ಕಾಗಿ ಅವರಿಗೆ ಉದ್ಯೋಗ ಬೇಕು ಎಂದು ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಸಿರಿ ಸಂಸ್ಥೆ ಪ್ರಾರಂಭಿಸಿದ್ದು ಇದರಲ್ಲಿ ನೂರಾರು ಉತ್ಪನ್ನಗಳಿದ್ದು ಇದರ ಗುಣಮಟ್ಟದಿಂದ ರಾಜ್ಯಾದ್ಯಂತ ಮನೆಮಾತಾಗಿದೆ ಎಂದು ಉದ್ಯಮಿ ಸಿರಿ ಸಂಸ್ಥೆಯ ಟ್ರಸ್ಟೀ ರಾಜೇಶ್ ಪೈ ಹೇಳಿದರು. ಅವರು ಶನಿವಾರ ಉಜಿರೆ ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವದ ಕೂಪನ್ ಬಿಡುಗಡೆಗೊಳಿಸಿ ಮಾತನಾಡಿ ಗ್ರಾಹಕರಿಗೆ ಮತ್ತು ಉದ್ದಿಮೆದಾರಿಗೆ ವಿಜಯವಾಣಿ ಈ ವಿಜಯೋತ್ಸವ ಉತ್ತಮ ಯೋಜನೆ. ಇದರ ಮುಖ್ಯಸ್ಥರಾದ ವಿಜಯಸಂಕೇಶ್ವರ್ ರವರು ಸ್ವತಃ ಶ್ರಮಜೀವಿ ಅವರ ವೃತ್ತಿ ಪ್ರಾಮಾಣಿಕತೆ, ಶ್ರಮದಿಂದ ಅವರ ಎಲ್ಲಾ ಉದ್ಯಮಗಳು ಯಶಸ್ವಿಯಾಗಿದ್ದು ಇದು ಇತರ ಉದ್ಯಮಿಗಳಿಗೆ ಆದರ್ಶವಾಗಿದೆ. ಅವರ ವಿಜಯವಾಣಿ ಪತ್ರಿಕೆಯು ಉತ್ತಮ ವರದಿ, ಲೇಖನಗಳಿಂದ ಮನೆಮಾತಾಗಿದ್ದು ಇಡೀ ಕುಟುಂಬ ಓದುವ ಪತ್ರಿಕೆಯಾಗಿದೆ. ಎಲ್ಲರು ಸಿರಿ ಉತ್ಪನ್ನಗಳನ್ನು ಖರೀದಿಸಿ ಕಾರು, ಬೈಕ್ ಸಹಿತ 2500 ಬಹುಮಾನಗಳನ್ನು ಪಡೆಯುವ ಭಾಗ್ಯ ಬರಲಿ ಎಂದರು. ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ, ಲಕ್ಷ್ಮೀ ಗ್ರುಪ್ ನ ಮಾಲಕ ಮೋಹನ್ ಕುಮಾರ್ ಮಾತನಾಡಿ ಯಾವುದೇ ಉತ್ಪನ್ನಗಳು ಗುಣಮಟ್ಟ ಇದ್ದಾಗ ಗ್ರಾಹಕರು ಕೇಳಿ ಪಡೆಯುತ್ತಾರೆ .ಗುಣಮಟ್ಟದ ಉತ್ಪನ್ನಗಳು ಸಿರಿ ಸಂಸ್ಥೆಯಲ್ಲಿದೆ. ಮಹಿಳೆಯರ ಭವಿಷ್ಯದ ದ್ರುಷ್ಡಿಯಿಂದ ಡಾ ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಡೆಯವರ ಕನಸಿನ ಸಿರಿ ಸಂಸ್ಥೆ ಬೆಳೆಯುತ್ತಿದ್ದು ಇದರ ಉತ್ಪನ್ನಗಳು ಖರೀದಿಸಿ ವಿಜಯವಾಣಿಯ ಅದ್ರುಷ್ಟ ಬಹುಮಾನ ಗೆಲ್ಲಬಹುದು ಎಂದರು. ಸಿರಿ ಸಿಬ್ಬಂದಿಗಳ ಶ್ರಮದಿಂದ ಸಿರಿ ಸಂಸ್ಥೆ ಬೆಳೆದಿದೆ: ಜನಾರ್ದನ್ ಒಂದು ಸಂಸ್ಥೆಯ ಬೆಳವಣಿಗೆ ಸಿಬ್ಬಂದಿಯ ಪ್ರಾಮಾಣಿಕ, ಶ್ರಮದಿಂದ ಇದೆ. ಇದು ಸಿರಿ ಸಂಸ್ಥೆಯ ಬೆಳವಣಿಗೆಗೂ ಸಿಬ್ಬಂದಿಯ ಪ್ರಾಮಾಣಿಕತೆ, ಶ್ರಮ ಕಾರಣ. ಸಿರಿ ಸಂಸ್ಥೆಯ ಬಗ್ಗೆ ಸಂಸ್ಥೆಯ ಅದ್ಯಕ್ಷರಾದ ಶ್ರಿಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಮತ್ತು ಸಿರಿ ಸಂಸ್ಥೆ ಕನಸು ಕಂಡ ಹೇಮಾವತಿ ಹೆಗ್ಗಡೆಯವರು ಅಪಾರ ಪ್ರೀತಿಸುತ್ತಿದ್ದು ಮಹಿಳೆಯರು ಆರ್ಥಿಕವಾಗಿ ಬಲಿಷ್ಟವಾಗಬೇಕು ಎನ್ಬುತ್ತಾರೆ. ಸಿರಿ ಉತ್ಪನ್ನಗಳ ಆದಾಯ ಸಿರಿ ಬೆಳವಣಿಗೆಗೆ ವಿನಿಯೋಗಿಸಲು ಹೇಳಿದ್ದಾರೆ. ಸಿರಿ ಸಂಸ್ಥೆಗೆ ಸುಮಾರು 80 ಕೋಟಿ ವೆಚ್ಚದ ಅತ್ಯಾಕರ್ಷಕ ಕಟ್ಟಡವನ್ನು ಹೆಗ್ಗಡೆಯವರು ಮಂಜೂರುಗೊಳಿಸಿದ್ದು ಉದ್ಘಾಟನಾ ಹಂತದಲ್ಲಿದೆ. ವಿಜಯವಾಣಿ ವಿಜಯೋತ್ಸವದಲ್ಲಿ ಸಿರಿ ಸಂಸ್ಥೆ ಪಾಲುದಾರಿಕೆ ಪಡೆದದ್ದು ಹೆಮ್ಮೆಯಾಗಿದೆ.ಕಳೆದ ವರ್ಷವೂ ಬೈಕ್, ಚಿನ್ನದ ನಾಣ್ಯ ಸಹಿತ ಅನೇಕ ಬಹುಮಾನ ಲಬಿಸಿದೆ. ಈ ಭಾರಿಯೂ ಸಿರಿ ಉತ್ಪನ್ನಗಳು ಖರೀದಿಸಿ ಅದ್ರುಷ್ಡ ಬಹುಮಾನ ಗೆಲ್ಲಿರಿ ಎಂದರು. ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ 50 ವರ್ಷಾಚನೆಯ ಪ್ರಯುತ್ಕ ಸೇವಾರತ್ನ ಗೌರವ ಪಡೆದ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ರವರನ್ನು ಸಿರಿ ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿದರು. ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕ ಪತ್ರ ವಿಭಾಗದ ಮುಖ್ಯ ಕಾರ್ಯನಿರ್ವಹಣಾದಿಕಾರಿ ಪ್ರಸನ್ನ ಸ್ವಾಗತಿಸಿ ಮಾರುಕಟ್ಟೆ ವಿಭಾಗದ ಡಿ.ಜೆ.ಎಂ. ವಿನ್ಸೆಂಟ್ ಲೋಬೋ ವಂ ದಿಸಿದರು.ಗೋದಾಮು ವಿಭಾಗದ ಜಿ.ಎಂ ಜೀವನ್ ಕಾರ್ಯಕ್ರಮ ನಿರೂಪಿಸಿದರು.

ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ‍್ಯಕ್ರಮ

Article Image

ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ‍್ಯಕ್ರಮ

ಮೂಡುಬಿದಿರೆ: ಕಾಲೇಜು ಜೀವನವು ವಿದ್ಯಾರ್ಥಿ ಜೀವನದ ಒಂದು ವಿಶಿಷ್ಟವಾದ ಹಂತ. ಇದು ಸಂಪೂರ್ಣವಾಗಿ ತಾರುಣ್ಯವು ಅಲ್ಲದ ಸಂಪೂರ್ಣವಾಗಿ ವಯಸ್ಕರು ಅಲ್ಲದ ಸಮಯ. ಇಲ್ಲಿ ಸಾಕಷ್ಟು ಸವಾಲು ನಮ್ಮ ಮುಂದೆ ಇರುತ್ತದೆ. ನಾವು ಸ್ವಾತಂತ್ರ‍್ಯವನ್ನು ಬಯಸುತ್ತಿರುವಾಗ, ಆರ್ಥಿಕವಾಗಿ ಹೆತ್ತವರ ಮೇಲೆ ಅವಲಂಬಿತರಾಗುತ್ತೇವೆ. ನಮ್ಮ ಮನಸ್ಸು ಹಲವಾರು ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಹಂತವಿದು ಎಂದು ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿ ನುಡಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಗಳಾದ ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳ 2024-25 ಸಾಲಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿವಿನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ. ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ರೀತಿಯ ಒತ್ತಡಗಳನ್ನು ಅನುಭವಿಸುತ್ತಾರೆ. ಮೊದಲನೆಯದಾಗಿ ಶೈಕ್ಷಣಿಕ ಒತ್ತಡ, ಎರಡನೆಯದು ಕಾಲೇಜಿನ ನಿಯಮ, ನಿಬಂಧನೆಗಳನ್ನು ಪಾಲಿಸುವ ಒತ್ತಡ, ಮೂರನೆಯದು, ಸಹಪಾಠಿಗಳ ಜೊತೆಗೆ ಹೊಂದಿಕೊಳ್ಳುವ ಒತ್ತಡ. ಈ ರೀತಿಯ ಒತ್ತಡಗಳು ಅಗತ್ಯ. ಆದರೆ ಇವುಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದರು. ವ್ಯಕ್ತ ಪಡಿಸದ ಸಮಸ್ಯೆ ದ್ವಿಗುಣಗೊಳ್ಳುತ್ತದೆ ವಿದ್ಯಾರ್ಥಿಗಳು ತಮ್ಮ ಪ್ರಯಾಣದ ಆರಂಭದಲ್ಲಿ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ಇದು ಮನೆಗೀಳಾಗಿರಬಹುದು, ಮೊಬೈಲ್ ಫೋನ್‌ಗಳ ವ್ಯಸನವಾಗಿರಬಹುದು ಅಥವಾ ಕೆಲವು ದುಷ್ಚಟಗಳಲ್ಲಿ ತೊಡಗಿರಬಹುದು. ತಮ್ಮ ಸಮಸ್ಯೆಗಳನ್ನು ಪೋಷಕರು, ಸ್ನೇಹಿತರು ಮತ್ತು ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು. ಹಂಚಿದ ಸಮಸ್ಯೆ ಅರ್ಧ ಪರಿಹಾರವಾದಂತಾದರೆ, ವ್ಯಕ್ತ ಪಡಿಸದ ಸಮಸ್ಯೆ ದ್ವಿಗುಣಗೊಳ್ಳುತ್ತಾ ಸಾಗುತ್ತದೆ ಎಂದರು. ತಾತ್ಕಾಲಿಕ ಸಮಸ್ಯೆಗೆ ಆತ್ಮಹತ್ಯೆ ಶಾಶ್ವತ ಪರಿಹಾರವೆಂದು ಪರಿಗಣಿಸದಿರಿ ಒತ್ತಡ, ವೈಫಲ್ಯವನ್ನು ಒಪ್ಪಿಕೊಳ್ಳುವುದು ಮತ್ತು ಒಬ್ಬರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದಿರುವುದು ಸಹಜ ವಿದ್ಯಮಾನವೆಂದು ಪರಿಗಣಿಸಬೇಕು. ವಿದ್ಯಾರ್ಥಿಗಳು ತಮ್ಮ ತಾತ್ಕಾಲಿಕ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೆ ಶಾಶ್ವತ ಪರಿಹಾರವೆಂದು ಪರಿಗಣಿಸುವುದು ದೊಡ್ಡ ತಪ್ಪು ಎಂದು ಕಿವಿಮಾತು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ.ಹನ್ನಾ ಶೆಟ್ಟಿ, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ಸ್ ಕ್ಷೇತ್ರವು ಸಮಾಜಕ್ಕೆ ಸೇವೆ ಒದಗಿಸಲು ಇರುವ ಉತ್ತಮ ಅವಕಾಶ. ಆಳ್ವಾಸ್‌ನಲ್ಲಿ ಲಭಿಸುವ ಉತ್ತಮ ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ವೃತ್ತಿಪರತೆಯನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲೆ ಡಾ.ಶಮಾ ಶೆಟ್ಟಿ, ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್‌ನ ಪ್ರಾಂಶುಪಾಲ ಡಾ.ಶಂಕರ್ ಶೆಟ್ಟಿ, ಆಡಳಿತಾಧಿಕಾರಿ ಹೇಮಂತ್ ಇದ್ದರು. ಉಪಪ್ರಾಂಶುಪಾಲೆ ಶ್ರೀವನಿತಾ ಟಿವೈ ಸ್ವಾಗತಿಸಿ, ಬುಶ್ರಾ ನಿರೂಪಿಸಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಸ್ಥ ಆದರ್ಶ ಹೆಗ್ಡೆ ವಂದಿಸಿ, ಸುದೇಶ್ ಕಾರ‍್ಯಕ್ರಮದಲ್ಲಿ ಸಹಕರಿಸಿದರು.

ಶ್ರೀಮದ್ ವಾಲ್ಮೀಕಿ ರಾಮಾಯಣ ಶ್ರವಣಸಪ್ತಾಹ ಉದ್ಘಾಟನಾ ಕಾರ್ಯಕ್ರಮ

Article Image

ಶ್ರೀಮದ್ ವಾಲ್ಮೀಕಿ ರಾಮಾಯಣ ಶ್ರವಣಸಪ್ತಾಹ ಉದ್ಘಾಟನಾ ಕಾರ್ಯಕ್ರಮ

ವಿದ್ಯಾಗಿರಿ: ಎಲ್ಲಾದರೂ ಇರಿ, ಹೇಗಾದರೂ ಇರಿ. ಭಾರತೀಯತೀಯತೆ ಎತ್ತಿ ಹಿಡಿಯಿರಿ. ಉತ್ತಮ ಜೀವನ ರೂಪಿಸಿಕೊಳ್ಳಲು ಭಾರತವೇ ಶ್ರೇಷ್ಠ ಎಂದು ಶ್ರೀ ಕ್ಷೇತ್ರ ಕಟೀಲಿನ ವಿದ್ವಾನ್ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಳ್ವಾಸ್ ಕಾಲೇಜು (ಸ್ವಾಯತ್ತ)ಸಂಸ್ಕೃತ ವಿಭಾಗ ಮತ್ತು ಪ್ರಜ್ಞಾ -ಜಿಜ್ಞಾಸಾವೇದಿ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಆರಂಭಗೊಂಡ 7 ದಿನಗಳ "ಶ್ರೀಮದ್ ವಾಲ್ಮೀಕಿರಾಮಾಯಣ-ಶ್ರವಣಸಪ್ತಾಹ" ಉದ್ಘಾಟಿಸಿ ಅವರು ಮಾತನಾಡಿದರು . ರಾಮಾಯಣ ಎನ್ನುವುದು ರಾಮ, ರಾಮಸ್ಯ, ಅಯಣಂ. ಅಂದರೆ ರಾಮ ನಡೆದ ದಾರಿಯಲ್ಲಿ ಸಾಗುವುದು ಎಂದರ್ಥ. ರಾಮಾಯಣ ಎಂಬ ಪೂಜ್ಯನೀಯ ಕಾವ್ಯವನ್ನು ಲೋಕಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಶ್ರೀ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ರಾಮನ ಕಾಲದಲ್ಲಿ ಪ್ರಜಾಪ್ರಭುತ್ವ ಇಲ್ಲದ್ದಿದರೂ ಪ್ರಜೆಗಳು ರಾಮನ ಆದರ್ಶಗಳನ್ನು ಪರಿಪಾಲನೆ ಮಾಡುತ್ತಿದ್ದರು. ಕೇವಲ ರಾಮನ ಹೆಸರನ್ನು ಪೂಜಿಸುವುದಲ್ಲದೆ ರಾಮನ ನಿಜಗುಣ, ಆದರ್ಶಗಳ ಪರಿಪಾಲನೆ ಮಾಡುತ್ತಾ ಜೀವನವನ್ನು ನಡೆಸುವುದು ಅತ್ಯುತ್ತಮ. ಉತ್ತಮವಾದ ಧ್ಯೇಯ ಒಳಗೊಂಡ ರಾಮಾಯಣ ಮಹಾಕಾವ್ಯದ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು. ರಾಮಾಯಣವು ದೀಕ್ಷಾಬದ್ಧತೆಯ ಜೀವನವನ್ನು ಸಾರುವುದರಿಂದ ಪ್ರತಿಯೊಬ್ಬರೂ ಸಮರ್ಪಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ರಾಮನು ಏಕಪತ್ನಿ ವೃತಸ್ಥ. ಆ ಮೂಲಕ ದೀಕ್ಷಾಬದ್ಧತೆಯ ಮಾರ್ಗವನ್ನು ನಿದರ್ಶನವಾಗಿ ಜಗತ್ತಿಗೆ ತೋರಿದ್ದು ಸ್ಮರಣೀಯ. ಬದುಕಿನಲ್ಲಿ ದಾನಶೀಲ ಮನೋಭಾವ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು. ರಾಮ ತಾನು ಉದ್ದಾರವಾಗುವುದರೊಂದಿಗೆ, ವನರಣರನ್ನು ವಾನರರನ್ನಾಗಿಸಿ ಉದ್ಧರಿಸಿದ ಧೀಮಂತ. ಒಂದಲ್ಲ ಒಂದು ರೀತಿಯಲ್ಲಿ ಮಾನವರು ವನರಣರೇ ಆಗಿರುತ್ತಾರೆ. ನಾಗರಿಕ ಜೀವನಕ್ಕೆ ಅರಣ್ಯವೇ ಪ್ರಾಶಸ್ತ್ಯ. ಬದುಕಿನ ಸಂದೇಶವನ್ನು ಸಾರಿ ಹೇಳುವುದೇ ರಾಮಾಯಣ ಎಂದು ತಿಳಿಸಿದರು. ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯು ಇಂಡಸ್ಟ್ರಿಯ ಮಾಲಕ ಕೆ. ಶ್ರೀಪತಿ ಭಟ್ ಮಾತನಾಡಿ, ಭಾರತೀಯ ಪರಂಪರೆ ಒಂದು ಶ್ರೇಷ್ಠ ಪರಂಪರೆ. ರಾಮಾಯಣ, ಮಹಾಭಾರತ ಮತ್ತು ವೇದ, ಪುರಾಣಗಳ ಸಂದೇಶವನ್ನು ಬದುಕಿನಲ್ಲಿ ಪರಿಪಾಲಿಸುವುದು ಆದ್ಯ ಕರ್ತವ್ಯವಾಗಬೇಕು. ಆಳ್ವಾಸ್ ಸಂಸ್ಥೆ ರಾಮಾಯಣದಂತಹ ಕಾವ್ಯವನ್ನು ಶ್ರವಣ ಸಪ್ತಾಹದ ಮೂಲಕ ತಿಳಿಹೇಳುವ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಪ್ರತಿಯೊಬ್ಬ ಪ್ರಜೆಯು ಪ್ರಚಲಿತ ವಿದ್ಯಮಾನ ಅರಿತುಕೊಳ್ಳಬೇಕು. ಮೌಲ್ಯಯುತವಾದ ಜೀವನವನ್ನು ನಡೆಸಲು ಕಲಿಸುವುದೇ ರಾಮಾಯಣದ ತಿರುಳು. ಮುಂದಿನ ದಿನಗಳಲ್ಲಿ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಸಪ್ತಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದು ಆಶಿಸಿದರು. ಬಳಿಕ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ಮಂಜುನಾಥ ಭಟ್ಟ ಹೇರೂರು ಆದಿಕವಿ ವಾಲ್ಮೀಕಿ ವಿಷಯದ ಕುರಿತು ಉಪನ್ಯಾಸ ನೀಡಿ ,ಕವಿ ಮಾಡಿದ್ದು ಕಾವ್ಯವಾಗುತ್ತದೆ. ಆದರೆ, ಕವಿಯಿಂದ ಹೊರಹೊಮ್ಮಿದೆಲ್ಲವೂ ಕಾವ್ಯವಾಗಲು ಸಾಧ್ಯವಿಲ್ಲ. ರಾಮಾಯಣವು ಶ್ರೀ ವಾಲ್ಮೀಕಿ ಬರೆದಿರುವ ಅದ್ಬುತ ಮಹಾಕಾವ್ಯ. ಇದರಲ್ಲಿನ ತತ್ವಗಳು, ಸತ್ವಗಳನ್ನು ಬದುಕಿನಲ್ಲಿ ಮೈಗೂಡಿಸಬೇಕು ಎಂದರು. ಎಲ್ಲರೂ ವಾಲ್ಮೀಕಿ ಬಗೆಗಿನ ಇತಿಹಾಸದ ಪುಟ ತಿರುವಿ ನೋಡುವುದು ಬಹಳ ಅವಶ್ಯ. ವಾಲ್ಮೀಕಿ ಕುರಿತ ಅನೇಕ ಪುರಾಣಗಳಲ್ಲಿ ದಂತಕಥೆಯಿರುವುದು ಆಶ್ಚರ್ಯ ಸಂಗತಿ. ಅದರ ಕುರಿತು ಆಳವಾಗಿ ತಿಳಿದುಕೊಳ್ಳುವುದು ಹೆಚ್ಚು ಉತ್ತಮ ಎಂದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ ವಿನಾಯಕ ಭಟ್ಟ ಗಾಳಿಮನೆ ಪ್ರಸ್ತಾವಿಕ ಮಾತುಗಳನ್ನಾಡಿ ಕಾರ‍್ಯಕ್ರಮದ ಉದ್ದೇಶವನ್ನು ವಿವರಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಫಾರ್ಮಸಿಯ ಮುಖ್ಯ ನಿರ್ವಾಹಕಿ ಡಾ ಗ್ರೀಷ್ಮಾ ವಿವೇಕ್ ಆಳ್ವ, ಮೂಡುಬಿದಿರೆ ಎಂಸಿಎಎಸ್ ಬ್ಯಾಂಕ್ ಸಿಇಒ ಚಂದ್ರಶೇಖರ ಎಮ್., ಕಟೀಲಿನ ಸದಾನಂದ ಅಸ್ರಣ್ಣ, ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಯುಎಇ ಮೂಲದ ಉದ್ಯಮಿ ಕೀರ್ತಿ, ಆಳ್ವಾಸ್ ಪದವಿ(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸಪ್ತಾಹ ವಿದ್ಯಾರ್ಥಿ ಸಂಯೋಜಕ ವೈಶಾಖ್ ರಾಜ್ ಜೈನ್ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶ್ರಾವ್ಯ ನಡೆಸಿಕೊಟ್ಟರು.

ಆಳ್ವಾಸ್ ಆಂಗ್ಲ ವಿಭಾಗದ ಗ್ಲಿಸ್ಟನ್ ವೇದಿಕೆ ಉದ್ಘಾಟನೆ ಮತ್ತು ಆಳ್ವಾಸ್ ಇಂಗ್-ಗೈಡ್' ಯೂಟ್ಯೂಬ್ ಚಾನೆಲ್‌ಗೆ ಚಾಲನೆ

Article Image

ಆಳ್ವಾಸ್ ಆಂಗ್ಲ ವಿಭಾಗದ ಗ್ಲಿಸ್ಟನ್ ವೇದಿಕೆ ಉದ್ಘಾಟನೆ ಮತ್ತು ಆಳ್ವಾಸ್ ಇಂಗ್-ಗೈಡ್' ಯೂಟ್ಯೂಬ್ ಚಾನೆಲ್‌ಗೆ ಚಾಲನೆ

ವಿದ್ಯಾಗಿರಿ: ನಾವೀನ್ಯತೆಯು ಜಗತ್ತಿಗೆ ಹೊಸ ವಿಷಯಗಳನ್ನು ಪರಿಚಯಿಸುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ವಿಷಯಗಳಲ್ಲಿ ಮಾತ್ರ ನೈಪುಣ್ಯರಾಗದೆ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುತ್ತಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಇಂಗ್ಲಿಷ್ ವಿಭಾಗ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ‘ಗ್ಲಿಸ್ಟನ್ ಸಾಹಿತ್ಯ ವೇದಿಕೆ' ಮತ್ತು ‘ಇಂಗ್ಲಿಷ್ ಪ್ರಾಕ್ಟಿಸ್ ಸರ್ಟಿಫಿಕೇಟ್ ಕೋರ್ಸ್’ ಹಾಗೂ 'ಆಳ್ವಾಸ್ ಇಂಗ್-ಗೈಡ್' ಯೂಟ್ಯೂಬ್ ಚಾನೆಲ್ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆಯನ್ನು ಸುಲಭಗೊಳಿಸಲು ಈ ಚಾನೆಲ್ ಸಹಾಯಕವಾಗಲಿದೆ ಎಂದರು. ನಮ್ಮನ್ನು ನಾವೇ ಸರ್ವ ರೀತಿಯಲ್ಲಿ ಧೃಡಗೊಳಿಸಲು ಸಂವಹನ ಸಹಕಾರಿಯಾಗಿದೆ. ಪರಿಣಾಮಕಾರಿ ಸಂವಹನವು ಭಾಷಾ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಕರ್ಜೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ರಾಜೇಶ್ ಆನಂದ್ ಮಾತನಾಡಿ, ಸಾಹಿತ್ಯ ಮತ್ತು ಭಾಷೆ ಎರಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಸಾಹಿತ್ಯವು ಭಾಷಾ ಪರಿಪೂರ್ಣತೆಯನ್ನು ಹೆಚ್ಚಿಸುತ್ತದೆ. ಭಾಷೆಯಿಂದ ಆಲಿಸುವ ಮತ್ತು ಮಾತನಾಡುವ ಕೌಶಲ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ 'ಆಳ್ವಾಸ್ ಇಂಗ್- ಗೈಡ್' ಯೂಟ್ಯೂಬ್ ಚಾನೆಲ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಈ ಭಾಗದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಸಹಾಯಕಾವಾಗಲಿದೆ ಎಂದರು. ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ರಿಜಿಸ್ಟಾçರ್ (ಅಕಾಡೆಮಿಕ್ಸ್) ಡಾ ಟಿ. ಕೆ. ರವೀಂದ್ರನ್, ಪದವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಚ್ಛೇಂದ್ರ ಬಿ. ಇದ್ದರು. ವಿದ್ಯಾರ್ಥಿ ವೈಭವ್ ಕಾರ್ಯಕ್ರಮ ನಿರೂಪಿಸಿದರು. ಶಿಶಿರ್ ಶೆಟ್ಟಿ ವಂದಿಸಿದರು.

ಯುವಸಿರಿ, ರೈತಭಾರತದ ಐಸಿರಿ: ಕಾಲೇಜು ವಿದ್ಯಾರ್ಥಿಗಳಿಂದ ನೇಜಿನಾಟಿ

Article Image

ಯುವಸಿರಿ, ರೈತಭಾರತದ ಐಸಿರಿ: ಕಾಲೇಜು ವಿದ್ಯಾರ್ಥಿಗಳಿಂದ ನೇಜಿನಾಟಿ

ಉಜಿರೆ: ಪ್ರಕೃತಿಗೂ, ಕೃಷಿಗೂ ಅವಿನಾಭಾವ ಸಂಬಂಧವಿದ್ದು ಕೃಷಿ ನಮ್ಮ ಭವ್ಯ ಸಂಸ್ಕ್ರತಿಯ ಪ್ರತೀಕವಾಗಿದೆ ಎಂದು ಉಜಿರೆಯ ಸೋನಿಯಾಯಶೋವರ್ಮ ಹೇಳಿದರು. ಅವರು ಭಾನುವಾರ ಬೆಳಾಲು ಗ್ರಾಮದ ಅನಂತೋಡಿಯಲ್ಲಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ ಉಜಿರೆಯ ಬದುಕು ಕಟ್ಟೋಣ ತಂಡ, ಬೆಳ್ತಂಗಡಿ ರೋಟರಿಕ್ಲಬ್, ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ, ಎಸ್.ಡಿ.ಎಂ. ಕ್ರೀಡಾಸಂಘ, ತಾಲ್ಲೂಕು ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನೇಜಿನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅನ್ನದಾನಕ್ಕಿಂತ ಮಿಗಿಲಾದ ದಾನವಿಲ್ಲ. ಆಹಾರದ ಪೋಲು ಹಾಗೂ ಅಪವ್ಯಯ ಮಾಡಬಾರದು ಎಂದು ಸಲಹೆ ನೀಡಿದ ಅವರು ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಅವರಲ್ಲಿರುವ ಅಪಾರ ಶಕ್ತಿ-ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರು-ಹಿರಿಯರ ಸಕಾಲಿಕ ಮಾರ್ಗದರ್ಶನದಲ್ಲಿ ಕೃಷಿಗೆ ಬಳಸಬೇಕು. ಕೃಷಿಯಲ್ಲಿ ಭತ್ತದ ಬೀಜ ಬಿತ್ತುವುದು, ನೇಜಿನಾಟಿ, ಅದು ಬೆಳೆದು ಪೈರಾದಾಗ ಕಟಾವು ಮಾಡುವುದು, ಭತ್ತ ತೆಗೆದು ಅಕ್ಕಿ ಪಡೆಯುವುದು ಮೊದಲಾದ ವಿವಿಧ ಹಂತಗಳಲ್ಲಿ ನಾವು ಪಡೆಯುವ ಸಂತೋಷ, ತೃಪ್ತಿ, ನೆಮ್ಮದಿ ಅನುಭವಿಸಿದಾಗ ಮಾತ್ರ ಅದರ ಸೊಗಡನ್ನು ತಿಳಿಯಬಹುದು ಎಂದು ಅವರು ಹೇಳಿದರು. ಪ್ರಕೃತಿ ಮತ್ತು ಭೂಮಿಯನ್ನು ನಾವು ತಾಯಿ, ದೇವರು ಎಂದು ಆರಾಧಿಸುವುದು ಕೃಷಿ ಸಂಸ್ಕ್ರತಿಯ ಪ್ರತೀಕ ಎಂದು ಅವರು ಅಭಿಪ್ರಾಯಪಟ್ಟರು. ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ನೇಜಿನಾಟಿ ತಯಾರಿ ಬಗ್ಗೆ ಮಾಹಿತಿ ನೀಡಿದರು. ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ನೇಜಿನಾಟಿಯಲ್ಲಿ ಭಾಗವಹಿಸಿದರು. ಎಸ್.ಡಿ.ಎಂ. ಕಾಲೇಜಿನ ೭೫೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ನೇಜಿನಾಟಿಯಲ್ಲಿ ಭಾಗವಹಿಸಿದರು. ನಾಲ್ಕು ಗದ್ದೆಗಳಲ್ಲಿ ನಾಲ್ಕು ಪ್ರತ್ಯೇಕ ತಂಡಗಳಲ್ಲಿ ನೇಜಿನಾಟಿ ಮಾಡಲಾಯಿತು. ಉಜಿರೆಯ ಸಂತೋಷ್ ಮತ್ತು ಶ್ರೀಕಾಂತರ ಅಲಂಕರಿಸಿದ ಕೋಣಗಳ ಜೋಡಿಯನ್ನು ಗದ್ದೆಗೆ ಇಳಿಸಿ, ಪ್ರಸಾದ ಹಾಕಿ ನೇಜಿನಾಟಿಗೆ ಚಾಲನೆ ನೀಡಲಾಯಿತು. ಶುಭಾಶಂಸನೆ ಮಾಡಿದ ಶಾಸಕ ಹರೀಶ್ ಪೂಂಜ ಶಿಸ್ತು ಮತ್ತು ಬದ್ಧತೆಗೆ ಹೆಸರಾದ ಬದುಕು ಕಟ್ಟೋಣ ತಂಡದವರು ಕೃಷಿ ಸಂಸ್ಕ್ರತಿಯನ್ನು ಯುವಜನತೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಭತ್ತದತಳಿ ತಜ್ಞ, ಕೃಷಿಋಷಿ ಬಿ.ಕೆ. ದೇವರಾವ್ ಅವರನ್ನು ಗೌರವಿಸಲಾಯಿತು. ಶರತ್‌ಕೃಷ್ಣ ಪಡ್ವೆಟ್ನಾಯ, ವಕೀಲ ಬಿ.ಕೆ. ಧನಂಜಯ ರಾವ್, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ, ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ರವೀಶ್ ಪಡುಮಲೆ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಶ್ರೀನಿವಾಸ ಗೌಡ, ಧರ್ಮಸ್ಥಳದ ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ, ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು. ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಗಳಾದ ಪ್ರೊ. ಮಹೇಶ್ ಕುಮಾರ್ ಶೆಟ್ಟಿ ಮತ್ತು ದೀಪಾ, ಆರ್.ಪಿ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಎಚ್. ಉಪಸ್ಥಿತರಿದ್ದು ನೇಜಿನಾಟಿಗೆ ಸಹಕರಿಸಿದರು. ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರಣ್‌ವರ್ಮ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ತಿಮ್ಮಯ್ಯ ನಾಯ್ಕ ಕೊನೆಯಲ್ಲಿ ಧನ್ಯವಾದವಿತ್ತರು.

First Previous

Showing 8 of 15 pages

Next Last