ಎಸ್.ಡಿ.ಎಂ ಗಣರಾಜೋತ್ಸವ ಆಚರಣೆ: ಸಾಧನೆಯ ಮೆಲುಕಿನೊಂದಿಗೆ ಅಭ್ಯುದಯದ ಅಭಿವ್ಯಕ್ತಿ
Published Date: 26-Jan-2025 Link-Copied
ಉಜಿರೆ, ಜ.26: ಭಾರತದ ಸಂವೈಧಾನಿಕ ಶ್ರೇಷ್ಠತೆ, ವೈವಿಧ್ಯಮಯ ಸಾಂಸ್ಕೃತಿಕ ವೈವಿಧ್ಯತೆ, ವೈಜ್ಞಾನಿಕ ತಾಂತ್ರಿಕ ಸಾಧನೆಯ ಮೈಲಿಗಲ್ಲುಗಳೊಂದಿಗಿನ ವಿನೂತನ ಅಸ್ಮಿತೆ ಮತ್ತು ವಿವಿಧ ಕ್ಷೇತ್ರಗಳ ಮಹತ್ವದ ಕೊಡುಗೆಗಳ ವಿಶೇಷತೆಯನ್ನು ಅನಾವರಣಗೊಳಿಸುವ ಕಲಾತ್ಮಕ ಅಭಿವ್ಯಕ್ತಿ ಮತ್ತು ಸ್ತಬ್ಧಚಿತ್ರ ಪ್ರದರ್ಶನದೊಂದಿಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು 76ನೇ ಗಣರಾಜ್ಯೋತ್ಸವದ ಸಂಭ್ರಮವನ್ನು ವಿನೂತನಗೊಳಿಸಿದರು. ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಯ ಸಮ್ಮುಖದಲ್ಲಿ 76ನೇ ವರ್ಷದ ಗಣರಾಜ್ಯೋತ್ಸವದ ಪ್ರಯುಕ್ತ ನಿವೃತ್ತ ಕರ್ನಲ್ ನಿತಿನ್ ಭಿಡೆ ಅವರು ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಹಿಳೆಯರು ವಿವಿಧ ರಂಗಗಳಲ್ಲಿ ಸಾಧಿಸಿದ ವಿಶೇಷ ಹೆಜ್ಜೆಗಳು, ಉಜಿರೆಯ ರತ್ನಮಾನಸ ಜೀವನ ಶಿಕ್ಷಣ ವಿಭಾಗ, ಹಾಲಕ್ಕಿ ನುಡಿಯ ಮೌಲಿಕತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆ, ನ್ಯಾಯ ಪರಿಕಲ್ಪನೆಗಳನ್ನು ಕಾಯಕಪ್ರಜ್ಞೆಯೊಂದಿಗೆ ಸಮೀಕರಿಸಿದ ಕಲಾತ್ಮಕತೆ, ಕರಾವಳಿ ಸಂಸ್ಕೃತಿಯ ವಿಶಿಷ್ಠ ಗುಣಲಕ್ಷಣಗಳು, ವೀರಗಾಸೆ ನೃತ್ಯ, ಕರ್ನಾಟಕ ಜನಪದ ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನದೊಂದಿಗಿನ ಅಭ್ಯುದಯದ ಮಹತ್ವದ ಹಂತಗಳು ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಧಾನ ಆಶಯವನ್ನು ಟ್ಯಾಬ್ಲೊ ಪ್ರದರ್ಶನವು ಧ್ವನಿಸಿತು. ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಬಹುಮಾನಕ್ಕೆ ಪಾತ್ರರಾದರು. ಎಸ್.ಡಿ.ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆದರು. ಖ್ಯಾತ ಗಾಯಕ ಸಿ.ಅಶ್ವತ್ಥ್ ಗಾಯನದ ‘ಸ್ತ್ರೀ ಎಂದರೆ ಅಷ್ಟೇ ಸಾಕೇ’ ಹಾಡಿನ ಹಿನ್ನೆಲೆಯೊಂದಿಗೆ ಮಹಿಳೆಯರ ಯಶೋಗಾಥೆಯನ್ನು ಕಾಣಿಸಿದ ಪ್ರದರ್ಶನ ವಿಶೇಷವಾಗಿತ್ತು. ರತ್ನಮಾನಸ ಜೀವನ ಶಿಕ್ಷಣಕ್ಕಿರುವ ಶ್ರಮಸಂಸ್ಕೃತಿ ಮತ್ತು ವಿದ್ಯಾ ಸಂಸ್ಕಾರದ ಆಯಾಮದ ಅಭಿವ್ಯಕ್ತಿಯು ಕಂಗೊಳಿಸಿತು. ಇಸ್ರೋ ಸಂಸ್ಥೆಯ ಉಪಗ್ರಹ ಉಡಾವಣೆಯ ತಾಂತ್ರಿಕ ನೈಪುಣ್ಯದ ಪ್ರಾತ್ಯಕ್ಷಿಕೆಯೂ ಮನಸೆಳೆಯಿತು. ಸೈನಿಕರ ತ್ಯಾಗ ಮತ್ತು ಬಲಿದಾನದ ಪ್ರಾಮುಖ್ಯತೆಯನ್ನು ಕಾಣಿಸುತ್ತಾ ಭಾರತಮಾತೆಯ ಮಡಿಲಲ್ಲಿ ಪ್ರಜೆಗಳೆಲ್ಲರೂ ಸೌಹಾರ್ದದಿಂದ ಬದುಕುವ ಸೌಂದರ್ಯವನ್ನು ಕಾಣಿಸುವ ನೃತ್ಯಪ್ರದರ್ಶನ ದೇಶಪ್ರೇಮದ ಸಂದೇಶ ಸಾರಿತು. ಉಜಿರೆಯ ಎಸ್.ಡಿ.ಎಂ. ಪದವಿ, ಪದವಿಪೂರ್ವ ಕಾಲೇಜು, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ, ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು, ಎಸ್.ಡಿ.ಎಂ. ಶಾಲೆ ಮತ್ತು ಪ್ರೌಢಶಾಲೆಗಳು ಸೇರಿದಂತೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್.ಡಿ.ಎಂ. ಶಾಲಾ ಕಾಲೇಜುಗಳ ಎನ್.ಸಿ.ಸಿ.ಯ ಆರ್ಮಿ ಮತ್ತು ನೌಕಾದಳ ಕೆಡೆಟ್‌ಗಳ ಪಥಸಂಚಲನ ಆಕರ್ಷಕವಾಗಿತ್ತು. ರೋವರ್ಸ್ ಮತ್ತು ರೇಂಜರ್ಸ್ನ ಬ್ಯಾಂಡ್‌ನ ತಂಡವು ಸಾಥ್ ನೀಡಿತು. ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಎಸ್.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.