ರೋಟರಿ ಕ್ಲಬ್ ಬೆಳ್ತಂಗಡಿ : ಭಾರತೀಯ ಸೇನಾದಿನ ಆಚರಣೆ
Published Date: 24-Jan-2025 Link-Copied
ಬೆಳ್ತಂಗಡಿ : ಗಡಿ ಭಾಗ ಮತ್ತು ಯುದ್ಧ ಭೂಮಿಯ ಪ್ರತಿಯೊಂದು ಕ್ಷಣವು ರೋಚಕ. ಗುಡ್ಡ ಭಾಗದ ಹವಮಾನದ ಪರಿಸ್ಥಿತಿಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ ಪರಕೀಯರ ಸವಾಲುಗಳಿಗೂ ಸದಾ ಸಿದ್ದರಾಗಿರಬೇಕು. ಜೊತೆಯಲ್ಲಿ ಇದ್ದವರು ಕ್ಷಣಾರ್ಧದಲ್ಲಿ ಗುಂಡಿಗೆ ಬಲಿಯಾಗುವ ಸನ್ನಿವೇಶದ ವೇದನೆಗಳು ಹೇಳತೀರದು. ಪ್ರತಿ ಮನೆಯಲ್ಲಿನ ಒಂದು ಕ್ಷಣದ ಪ್ರಾರ್ಥನೆಯೇ ನಮ್ಮ ಆತ್ಮವಿಶ್ವಾಸ ಮತ್ತು ಆರೋಗ್ಯದ ಶಕ್ತಿ ಎಂದು ನಿವೃತ್ತ ಸೇನಾನಿ ವಿಕ್ಟರ್ ಕ್ರಸ್ತಾ ಅಭಿಪ್ರಾಯಪಟ್ಟರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನದಲ್ಲಿ ನಡೆದ 77ನೇ ಭಾರತೀಯ ಸೇನಾದಿನದ ಆಚರಣೆಯಲ್ಲಿ ಮಾತನಾಡಿದರು. 1980 ರ ದಶಕದ ಯುದ್ಧ ಭೂಮಿಗಳು ಮತ್ತು ಗಡಿ ಭಾಗಗಳು ಈಗ ಸುಧಾರಿಸಿವೆ. ಸರ್ಕಾರಗಳು ಸೈನ್ಯದ ಅಭಿವೃದ್ಧಿಗೆ ಮನ್ನಣೆ ನೀಡಿದೆ. ಯುವ ತಲೆಮಾರಿಗೆ ಭಾರತ ಎದುರಿಸಿದ ಯುದ್ಧ ಸನ್ನಿವೇಶಗಳ ಇತಿಹಾಸವನ್ನು ಪರಿಚಯಿಸಬೇಕು. ಸಾಧ್ಯವಾದರೆ ಮುಂದೊಂದು ದಿನ ಇಸ್ರೇಲ್ ಮಾದರಿಯ ಸೈನ್ಯ ವ್ಯವಸ್ಥೆಯನ್ನು ಭಾರತದಲ್ಲೂ ಅಳವಡಿಸುವ ಮೂಲಕ ಯುವ ಜನತೆಯನ್ನು ಸೈನ್ಯದೆಡೆಗೆ ಪ್ರೇರೇಪಿಸಬೇಕು ಎಂದರು. ಈ ಸಂದರ್ಭದಲ್ಲಿ ಅಲಹಬಾದ್, ರಾಜಸ್ಥಾನ್, ಅರುಣಾಚಲ, ಜಮ್ಮು ಇತ್ಯಾದಿ ಗಡಿಭಾಗಗಳಲ್ಲಿ ತಾವು ಅನುಭವಿಸಿದ ರೋಚಕ ಕ್ಷಣಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ, ಸೈನಿಕರು ಕೊರೆಯುವ ಚಳಿ, ಸುಡುವ ಬಿಸಿಲಿನ ನಡುವೆಯೂ ಪ್ರಾಣ ಪಣಕ್ಕಿಟ್ಟು ದೇಶ ಸೇವೆ ಸಲ್ಲಿಸುವ ಬದುಕು ನಮಗೆಲ್ಲರಿಗು ಪ್ರೇರಣೆಯಾಗಬೇಕು. ನಮ್ಮ ಪ್ರತಿದಿನದ ಪ್ರಾರ್ಥನೆಯಲ್ಲಿ ಹಗಲಿರುಳು ದೇಶ ಕಾಯುವ ವೀರ ಯೋಧರಿಗಾಗಿ ಒಂದು ನಿಮಿಷವಾದರೂ ಮೀಸಲಿಡಬೇಕು ಎಂದರು. ಇದೇ ಸಂದರ್ಭದಲ್ಲಿ 1981 ರಿಂದ 1998ರ ವರೆಗೆ ದೇಶದ ಹಲವು ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಕ್ಟರ್ ಕ್ರಸ್ತಾ ರವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ.ಪೂರನ್ ವರ್ಮ, ಕಾರ್ಯದರ್ಶಿ ರೋ.ಸಂದೇಶ್ ಕುಮಾರ್ ರಾವ್,ರೋ.ಅನಂತ ಭಟ್, ರೋ. ವಿದ್ಯಾ ಕುಮಾರ್ ಕಾಂಚೋಡು, ರೋ.ಅರುಣ್, ರೋ.ಅರವಿಂದ ಕಾರಂತ್, ರೋ. ಪ್ರವೀಣ್ ಗೋರೆ ಮತ್ತು ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ರೋ. ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ನಿರೂಪಿಸಿ,ವಂದಿಸಿದರು. ಬಾಲ್ಯದಿಂದಲೂ ಭಾರತಮಾತೆಯ ಸೇವೆಸಲ್ಲಿಸಬೇಕೆಂಬ ಕನಸ್ಸು ಕಂಡು, ಭಾರತೀಯ ಸೈನ್ಯ ಸೇರಿ ನಿವೃತ್ತನಾದೆ. ಸೈನಿಕರೂ ತಮ್ಮ ಸರ್ವಸ್ವವನ್ನೆಲ್ಲ ತೊರೆದು ಗಡಿಭಾಗಗಳಲ್ಲಿ ಶ್ರಮಿಸುತ್ತಾರೆ.ಕೆಲವೊಮ್ಮೆ ಅನೀರಿಕ್ಷಿತರಾಗಿ ಗುಡ್ಡ ಕುಸಿತ , ಪರಕೀಯರ ದಾಳಿಗಳಿಗೆ ಬಲಿಯಾಗಿ ವೀರ ಯೋಧರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಮಾಜ ಅವರ ಕುಟುಂಬದ ಜವಾಬ್ದಾರಿಯನ್ನು ಹೊರಬೇಕು. ಸೈನ್ಯ ದಿನ, ಕಾರ್ಗಿಲ್ ವಿಜಯ ದಿನದಂತ ಸಂದರ್ಭಗಳಲ್ಲಿ ಯೋಧರನ್ನು ಸ್ಮರಿಸುವುದರ ಜೊತೆಗೆ, ಸರ್ಕಾರ ಮರಣ ಹೊಂದಿದ ಸೈನಿಕರ ಕುಟುಂಬಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಗಮನಿಸಬೇಕು. - ವಿಕ್ಟರ್ ಕ್ರಸ್ತಾ, ನಿವೃತ್ತ ಸೇನಾನಿ, ಭೂಸೇನೆ