ಧರ್ಮಸ್ಥಳ ಸಿರಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಸನ್ಮಾನ
ಉಜಿರೆ: ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಅವರಿಗೆ ಅಭಿನಂದನಾ ಕಾರ್ಯಕ್ರಮ ಸಿರಿ ಕೇಂದ್ರ ಕಚೇರಿಯಲ್ಲಿ ಜರುಗಿತು. ಸಿರಿ ಬ್ರ್ಯಾಂಡ್ ರಾಯಭಾರಿ, ಚಲನಚಿತ್ರ ನಟ ರಮೇಶ್ ಅರವಿಂದ್ ಅಭಿನಂದಿಸಿ ಮಾತನಾಡಿ, “ಖಾವಂದರ ಆದರ್ಶ ತತ್ವವನ್ನು ಮೈಗೂಡಿಸಿಕೊಂಡಿರುವ ಜನಾರ್ದನ್ ಅವರು ಸದಾ ಕ್ರಿಯಾಶೀಲರಾಗಿದ್ದಾರೆ. ಇಂತಹ ಸಜ್ಜನಿಕೆ, ಸಹೃದಯವನ್ನು ಹೊಂದಿರುವ ವ್ಯಕ್ತಿ ಸಿರಿ ಸಂಸ್ಥೆಯ ಎಂಡಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯ'' ಎಂದರು. ಕೊಡಗು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಅಶೋಕ್ ಅಲೂರು ಮತ್ತು ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ರೂಪಾ ಅಶೋಕ್ ಅಲೂರು ದಂಪತಿ ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ರಾಜೇಶ್ ಪೈ, ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ ಮೋಗರಾಜ್ ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಸನ್ನ ಸ್ವಾಗತಿಸಿದರು. ಜೀವನ್ ಕುಮಾರ್ ನಿರೂಪಿಸಿದರು.