Article Image 1 Article Image 2

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ಅತ್ಯಾಧುನಿಕ ಸಿ-ಆರ್ಮ್ ಯಂತ್ರಕ್ಕೆ ಚಾಲನೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ಅತ್ಯಾಧುನಿಕ ಸಿ-ಆರ್ಮ್ ಯಂತ್ರಕ್ಕೆ ಚಾಲನೆ

ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಹಾಗೂ ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22.5 ಲಕ್ಷ ರೂಪಾಯಿ ಮೌಲ್ಯದ ಹೊಸ ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರವನ್ನು ಜು.17ರಂದು ಅಳವಡಿಸಿ ಚಾಲನೆ ನೀಡಲಾಯಿತು. ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರದ ಬಗ್ಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರ ಎಕ್ಸ್-ರೇ ತಂತ್ರಜ್ಞಾನವನ್ನು ಆಧರಿಸಿದ ಸುಧಾರಿತ ವೈದ್ಯಕೀಯ ಚಿತ್ರಣವನ್ನು ಕೊಡಬಲ್ಲ ಸಾಧನವಾಗಿದೆ. ಮಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುವ ಈ ಯಂತ್ರ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಈ ಯಂತ್ರ ಶಕ್ತಿಯುತ ಅತ್ಯಾಧುನಿಕ ಇಮೇಜಿಂಗ್, ನವೀನ ಟಚ್ ಮತ್ತು ಪ್ಲೇ ತಂತ್ರಜ್ಞಾನ ಹೊಂದಿದೆ. ಇದರಲ್ಲಿರುವ ಹೊಸ ತಂತ್ರಜ್ಞಾನದೊಂದಿಗೆ ದೃಶ್ಯಚಿತ್ರಗಳು ಹೆಚ್ಚು ವಿಕಸನಗೊಳ್ಳುತ್ತಿರುವ ದೃಶ್ಯಗಳನ್ನು ಕೊಡಬಲ್ಲ ಸಾಧನವಾಗಿದ್ದು, ಸೂಕ್ತವಾದ ವೈದ್ಯಕೀಯ ಫಲಿತಾಂಶಗಳ ಸಾಧನೆಗೆ ನೆರವಾಗುತ್ತದೆ. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 4 ಮಂದಿ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಿದ್ದು, ಇಲ್ಲಿ ಈಗಾಗಲೇ ಹಲವಾರು ಟೋಟಲ್ ನೀ ರಿಪ್ಲೇಸ್‌ಮೆಂಟ್ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್ ಹಾಗೂ ಮೂಳೆ ಮತ್ತು ಕೀಲುಗಳ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಪ್ರಸ್ತುತ ಅಳವಡಿಸಿರುವ ಈ ಯಂತ್ರ ಸೊಂಟ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಗ್ಯಾಸ್ಟ್ರೋ ಕರುಳಿನ ಚಿಕಿತ್ಸೆ, ಎಂಡೋಸ್ಕೋಪಿಕ್, ಮೂತ್ರಶಾಸ್ತ್ರ, ನರಸಂಬಂಧಿ ಖಾಯಿಲೆ, ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಈ ಯಂತ್ರ ಅತೀ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.

ನಾಳೆಯಿಂದ ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ವಾಚನ-ಪ್ರವಚನ

Article Image

ನಾಳೆಯಿಂದ ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ವಾಚನ-ಪ್ರವಚನ

ಉಜಿರೆ: ಧರ್ಮಸ್ಥಳದಲ್ಲಿ ನಾಳೆ ಮಂಗಳವಾರದಿಂದ ಎರಡು ತಿಂಗಳ ಕಾಲ “ಜೈಮಿನಿ ಭಾರತ” ಮತ್ತು “ತುರಂಗ ಭಾರತ”ದ ಬಗ್ಗೆ 53ನೇ ವರ್ಷದ ಪುರಾಣ ವಾಚನ-ಪ್ರವಚನ ನಡೆಯಲಿದೆ. ಶನಿವಾರ ಮತ್ತು ಭಾನುವಾರ ವಿವಿಧ ಕಾವ್ಯಗಳ ಆಯ್ದ ಭಾಗವನ್ನು ಪುರಾಣವಾಚನಕ್ಕೆ ಬಳಸಲಾಗುವುದು. ಮಂಗಳವಾರ ಸಂಜೆ ಗಂಟೆ 5.30ಕ್ಕೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಹಿರಿಯ ವಿದ್ವಾಂಸರಾದ ಮಂಗಳೂರಿನ ಪ್ರೊ. ಎಂ. ಪ್ರಭಾಕರ ಜೋಶಿ ಉದ್ಘಾಟಿಸುವರು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡುವರು. ಮುಂದೆ ಸೆಪ್ಟೆಂಬರ್ 17ರ ವರೆಗೆ ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ಗಂಟೆ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ ಎಂದು ಪುರಾಣ ವಾಚನ-ಪ್ರವಚನ ಸಮಿತಿಯ ಸಂಚಾಲಕ ಎ.ವಿ. ಶೆಟ್ಟಿ ತಿಳಿಸಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಜೈಮಿನಿ ಭಾರತದ ಪೀಠಿಕಾ ಸಂಧಿ ಮತ್ತು ಎರಡನೇ ಸಂಧಿಯನ್ನು ಕಾವ್ಯಶ್ರೀ ಅಜೇರು ವಾಚನ ಮಾಡಿದರೆ, ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರವಚನ ನೀಡುವರು.

ಧರ್ಮಸ್ಥಳ: ನಿವೃತ್ತ ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆ

Article Image

ಧರ್ಮಸ್ಥಳ: ನಿವೃತ್ತ ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆ

ನಿವೃತ್ತ ಮುಖ್ಯೋಪಾಧ್ಯಾಯರಾದ ಪದ್ಮರಾಜು. ಎನ್. ಅವರನ್ನು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಶುಕ್ರವಾರ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ವಿವಿಧ ಸಂಘಗಳನ್ನು ಉದ್ಘಾಟಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಶುಭ ಹಾರೈಸಿ, ವಿದ್ಯಾರ್ಥಿಗಳು ಶಾಲೆಯಲ್ಲಿ ತಮಗೆ ಸಿಗುವ ಅವಕಾಶಗಳ ಸದುಪಯೋಗ ಪಡೆದು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಇದ್ದು ಪ್ರತಿಭಾ ಪ್ರದರ್ಶನಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ ಎಂದರು. ಶಾಲೆಯ ಸಂಚಾಲಕ ಡಿ. ಅನಂತಪದ್ಮನಾಭ ಭಟ್ ವಿವಿಧ ಸಂಘಗಳ ನಾಮಫಲಕಗಳನ್ನು ಅನಾವರಣಗೊಳಿಸಿದರು. ನಿಡ್ಲೆ ಸಮೂಹ ಸಂಪನ್ಮೂಲ ಕೇಂದ್ರದ ಅಧಿಕಾರಿ ಪ್ರತಿಮಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್, ಶಿಕ್ಷಕ ಜಯರಾಮ ಮಯ್ಯ ಮತ್ತು ವಿದ್ಯಾರ್ಥಿಗಳ ಪರವಾಗಿ ನಿಧೀಶ್ ನಿವೃತ್ತ ಮುಖ್ಯೋಪಾಧ್ಯಾಯರಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಜೈನ್ ಅಧ್ಯಕ್ಷತೆ ವಹಿಸಿದರು. ಕನ್ನಡ ಶಿಕ್ಷಕ ಯುವರಾಜ ಸ್ವಾಗತಿಸಿದರು. ವಿನನ್ಯ ಮತ್ತು ಸ್ನೇಹ ಕಾರ್ಯಕ್ರಮ ನಿರ್ವಹಿಸಿದರು.

ಕೆ.ಸಿ.ಇ.ಟಿ. ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟ: ಆಳ್ವಾಸ್‌ನ 7 ವಿದ್ಯಾರ್ಥಿಗಳಿಗೆ ಉನ್ನತ ರ‍್ಯಾಂಕ್

Article Image

ಕೆ.ಸಿ.ಇ.ಟಿ. ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟ: ಆಳ್ವಾಸ್‌ನ 7 ವಿದ್ಯಾರ್ಥಿಗಳಿಗೆ ಉನ್ನತ ರ‍್ಯಾಂಕ್

ಮೂಡುಬಿದಿರೆ: ಕೆ.ಸಿ.ಇ.ಟಿ. ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಅರ್ಹತೆ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಆಳ್ವಾಸ್ ಈ ಬಾರಿಯೂ ಉನ್ನತ ಸಾಧನೆ ಮಾಡಿದೆ. ನಿಸರ್ಗ ಎಸ್. 21ನೇ ರ‍್ಯಾಂಕ್, ಮೃಣಾಲಿನಿ ಎಸ್. ಪೂಜಾರಿ 29ನೇ ರ‍್ಯಾಂಕ್, ಪಾಹಿಮಾ ಹೇಮಚಂದ್ರ 38ನೇ ರ‍್ಯಾಂಕ್, ಎಮ್. ರಾಮ್‌ಪ್ರಸಾದ್ ಮಲ್ಯ 266ನೇ ರ‍್ಯಾಂಕ್, ಎಮ್.ವಿ. ಚಿರಾಂತ್ 290ನೇ ರ‍್ಯಾಂಕ್, ಆಕಾಶ್ ಬಸವರಾಜ್ ಬಚಲಾಪುರ 298ನೇ ರ‍್ಯಾಂಕ್, ಜೈ ಅಶೋಕ್ ರಾಚನ್ನವರ್ 402ನೇ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಂಸ್ಥೆಯ ಪ್ರಾಚರ‍್ಯ ಮೊಹಮ್ಮದ್ ಸದಾಕತ್ ಅಭಿನಂದಿಸಿದ್ದಾರೆ.

ಉಜಿರೆ: ಕಾಗ್ನಿಟೊ ಸಂಘ ಉದ್ಘಾಟನೆ, ಫ್ರೆಶರ್ಸ್ ಡೇ ಸಮಾರಂಭ

Article Image

ಉಜಿರೆ: ಕಾಗ್ನಿಟೊ ಸಂಘ ಉದ್ಘಾಟನೆ, ಫ್ರೆಶರ್ಸ್ ಡೇ ಸಮಾರಂಭ

ಉಜಿರೆಯ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ಜು.9ರಂದು ಮನಃಶಾಸ್ತ್ರ ವಿಭಾಗದ ಕಾಗ್ನಿಟೊ ಸಂಘ ಉದ್ಘಾಟನೆ ಹಾಗೂ ಫ್ರೆಶರ್ಸ್ ಡೇ ಸಮಾರಂಭ ನಡೆಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮನಃಶಾಸ್ತ್ರ ಪ್ರಾಧ್ಯಾಪಕ ಡಾ. ಮಹೇಶ್ ಬಾಬು ಎನ್., ಮನೋವಿಜ್ಞಾನವು ಜೀವನದ ಎಲ್ಲಾ ಅಂಶಗಳನ್ನು ಒಳಗೊಳ್ಳುತ್ತದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯಗತ್ಯವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಮನೋವಿಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ವಿಭಾಗದ ಭಿತ್ತಿಪತ್ರಿಕೆಯ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು. ‘ಕಾಗ್ನಿಟೊ’ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್, ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾನಸಾ ಅಗ್ನಿಹೋತ್ರಿ ಸ್ವಾಗತಿಸಿದರು. ಅನನ್ಯ ಮತ್ತು ವೀಕ್ಷಾ ಪ್ರಾರ್ಥಿಸಿದರು. ಅಖಿಲ್ ವಂದಿಸಿ, ಸೀಮಾ ಜಂಗೀರ್ ನಿರೂಪಿಸಿದರು.

ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನ ಓರಿಯಂಟೇಶನ್ ಕಾರ್ಯಕ್ರಮ

Article Image

ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನ ಓರಿಯಂಟೇಶನ್ ಕಾರ್ಯಕ್ರಮ

ಮೂಡುಬಿದಿರೆ: ಭಾರತೀಯ ಪರಂಪರೆಯಲ್ಲಿ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯಿದ್ದು, ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಹೆತ್ತವರಿಂದ ದೂರವಿದ್ದು ಹಲವು ವರ್ಷಗಳ ಕಾಲ ಗುರುಗಳ ಬಳಿ ವಿದ್ಯಾಭ್ಯಾಸ ಪೂರೈಸಿ ತದನಂತರ ಮನೆಗೆ ಮರಳುವುದು ವಾಡಿಕೆ. ಇಂದಿನ ಆಧುನಿಕ ಯುಗದಲ್ಲೂ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆ ಅನುಸರಿಸುತ್ತಾ ಬಂದಿದೆ. ಒಂದು ಶಿಲೆಯನ್ನು ಸುಂದರ ಮೂರ್ತಿಯಾಗಿ ಕೆತ್ತುವಲ್ಲಿ ಶಿಲ್ಪಿಯು ಹೇಗೆ ಶಿಲೆಯನ್ನು ಕೆತ್ತಬೇಕಾಗುವುದೋ, ಅದೇ ರೀತಿ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗಾಗಿ ತಪ್ಪಿ ನಡೆದ ವಿದ್ಯಾರ್ಥಿಯನ್ನು ತಿದ್ದಿ ತೀಡುವುದು ಗುರುವಿನ ಕರ್ತವ್ಯ. ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಹೋದ ಅದೆಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣವನ್ನು ಪೂರೈಸಿ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಅವರ ಉನ್ನತ ಜೀವನ ನಮ್ಮ ಪ್ರಯತ್ನಕ್ಕೆ ಸಾರ್ಥಕತೆಯನ್ನು ಒದಗಿಸಿಕೊಡುತ್ತದೆ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು. ಅವರು ಎಕ್ಸಲೆಂಟ್ ನ ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳು ಮತ್ತು ಹೆತ್ತವರಿಗಾಗಿ 2024-25ನೇ ಶೈಕ್ಷಣಿಕ ಸಾಲಿನ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಿದ್ದರು. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹೆತ್ತವರು ತ್ಯಾಗ ಮಾಡಿ ನಿಮ್ಮನ್ನು ವಸತಿ ವ್ಯವಸ್ಥೆ ಇರುವ ಶಿಕ್ಷಣ ಸಂಸ್ಥೆಗೆ ಸೇರಿಸಿದ್ದಾರೆ. ಇದು ನಿಮ್ಮನ್ನು ನೋಯಿಸಲೆಂದಲ್ಲ. ಬದಲಾಗಿ ನಿಮ್ಮ ಜೀವನ ಹಸನಾಗಲೆಂದು. ಹಾಗಾಗಿ ನಿಮ್ಮ ಹೆತ್ತವರ ಮನದಿಂಗಿತವನ್ನು ಅರಿತು ಸಾಧನೆಯನ್ನು ಮಾಡುವಂತಾಗಬೇಕು. ಕೇವಲ ಅಂಕಗಳಿಕೆಗೆ ಮಾತ್ರ ಈ ಸಂಸ್ಥೆ ಹೆಸರುವಾಸಿಯಾಗಿಲ್ಲ. ಶಿಕ್ಷಣದ ಜೊತೆ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನೂ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯನ್ನು ಸೇರಿ ಪದವಿಪೂರ್ವ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನವನ್ನು ಪಡೆದ ಅನೇಕ ನಿದರ್ಶನಗಳಿವೆ. ಅಸಾಧ್ಯವೆನ್ನುವುದು ಇಲ್ಲವೇ ಇಲ್ಲ. ನಿರಂತರ ಪರಿಶ್ರಮ, ಛಲ ಅಸಾಧ್ಯವನ್ನು ಸಾಧ್ಯವಾಗಿಸುತ್ತದೆ. ಎಲ್ಲಾ ಹಂತದ ವಿದ್ಯಾರ್ಥಿಗಳಿಗೂ ಇಲ್ಲಿ ಮುಕ್ತ ಅವಕಾಶವಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ, ನಿಮ್ಮ ಮಕ್ಕಳನ್ನು ಈ ಸಂಸ್ಥೆಗೆ ಸೇರಿಸುವ ಮುನ್ನ ಅನೇಕ ಬಾರಿ ವಿಚಾರಿಸಿ, ಮಿಮರ್ಶಿಸಿ ನಿರ್ಧಾರ ತೆಗೆದುಕೊ0ಡಿರುತ್ತೀರಿ. ಒಮ್ಮೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾವುದೇ ಗೊಂದಲ ಬೇಡ. ಸಾವಿರಾರು ವಿದ್ಯಾರ್ಥಿಗಳ 24 ಗಂಟೆಗಳ ಯೋಗಕ್ಷೇಮ ನೊಡಿಕೊಳ್ಳುವುದು ಸಂಸ್ಥೆಯ ಗುರುತರವಾದ ಜವಾಬ್ದಾರಿಯಾಗಿದೆ. ವಿದ್ಯಾಭ್ಯಾಸದ ಪ್ರಕ್ರಿಯೆಯಲ್ಲಿ ಅನೇಕ ಸವಾಲುಗಳು ಬರುತ್ತವೆ. ಆ ಸವಾಲುಗಳನ್ನು ಲೆಕ್ಕಿಸದೆ ಮುನ್ನಡೆಯಬೇಕು. ಪದವಿಪೂರ್ವ ವಿದ್ಯಾಭ್ಯಾಸ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಉತ್ತಮ ಸಮಯ. ಈ ಸಮಯವನ್ನು ಹಾಳು ಮಾಡದೆ ಅದರ ಸದುಪಯೋಗ ಪಡಿಸಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು. ರಾಷ್ಟ್ರ ಮಟ್ಟದ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಸಲಾದ ನೀಟ್ ಪರೀಕ್ಷೆಯಲ್ಲಿ 710 ಅಂಕ ಹಾಗೂ ಸಿಇಟಿಯಲ್ಲಿ 8ನೇ ಸ್ಥಾನ ಪಡೆದ ವಿದ್ಯಾರ್ಥಿ ನಿಖಿಲ್ ಗೌಡ ತನ್ನ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ನಿಖಿಲ್ ಗೌಡನನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಲಾಯಿತು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕ್ರಮ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಉಜಿರೆ: ಕೃತಿ ಬಿಡುಗಡೆ

Article Image

ಉಜಿರೆ: ಕೃತಿ ಬಿಡುಗಡೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪ್ರಕಟಿಸಿದ “ಸಿರಿ ಧಾನ್ಯ ಸಿರಿ-ಸರಿ” ಕೃತಿಯನ್ನು ಧರ್ಮಸ್ಥಳದಲ್ಲಿ ಹೇಮಾವತಿ ವೀ. ಹೆಗ್ಗಡೆಯವರು ಬಡುಗಡೆಗೊಳಿಸಿ ಶುಭ ಹಾರೈಸಿದರು. ಹಿರಿಯ ಪತ್ರಕರ್ತ ಅನಂತ ಹುದಂಗಜೆ ರಚಿಸಿದ ಪುಸ್ತಕದಲ್ಲಿ ಸಿರಿಧಾನ್ಯಗಳ ಬಳಕೆಯೊಂದಿಗೆ ಆರೋಗ್ಯಭಾಗ್ಯ ರಕ್ಷಣೆ ಬಗ್ಗೆ ಸಮಗ್ರ ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಅನಿಲ್ ಕುಮಾರ್, ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಹಿರಿಯ ನಿರ್ದೇಶಕ ದಿನೇಶ್ ಎಂ., ಅಭಿನಂದನ್ ಜೈನ್ ಮತ್ತು ಕೃತಿಯ ಲೇಖಕ ಅನಂತ ಹುದಂಗಜೆ ಉಪಸ್ಥಿತರಿದ್ದರು.

ತಾಳಮದ್ದಳೆ ಸಪ್ತಾಹ ಸಮಾರೋಪ-ಪದ್ಯಾಣ, ಕುರಿಯ ಪ್ರಶಸ್ತಿ ಪ್ರದಾನ

Article Image

ತಾಳಮದ್ದಳೆ ಸಪ್ತಾಹ ಸಮಾರೋಪ-ಪದ್ಯಾಣ, ಕುರಿಯ ಪ್ರಶಸ್ತಿ ಪ್ರದಾನ

“ಯಕ್ಷಗಾನ ಬಯಲಾಟಗಳು ಮನಸ್ಸಿಗೆ ಮೋದವನ್ನು ನೀಡಿದರೆ, ತಾಳಮದ್ದಳೆಯು ಬುದ್ದಿಗೆ ಗ್ರಾಸವನ್ನು ಒದಗಿಸುತ್ತದೆ. ಭಾಷಾಶುದ್ಧತೆ, ಪುರಾಣ ಜ್ಞಾನ, ಅಂದವಾಗಿ ಮಾತನಾಡುವ ಶಕ್ತಿ, ಗ್ರಹಿಕಾ ಸಾಮರ್ಥ್ಯ ಮತ್ತು ಬದುಕಿಗೆ ಬೇಕಾದ ಸಂದೇಶಗಳನ್ನು ಯಕ್ಷಗಾನವು ಒದಗಿಸುತ್ತದೆ. ಅಕ್ಷರಾಭ್ಯಾಸ ಇಲ್ಲದವರೂ ಆಟ, ಕೂಟಗಳನ್ನು ನೋಡಿಯೇ ಪುರಾಣ ಜ್ಞಾನವನ್ನು ಪಡೆದವರಿದ್ದಾರೆ. ಅದು ಯಕ್ಷಗಾನದ ಶಕ್ತಿ” ಎಂದು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು. ಅವರು ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡುತ್ತಾ, “ಎಡನೀರು ಮಠದಲ್ಲಿ ಚಾತುರ್ಮಾಸ ವ್ರತಾಚರಣೆ ಸಂದರ್ಭದಲ್ಲಿ ಹಿಂದಿನಿಂದಲೂ ತಾಳಮದ್ದಳೆಯು ಆರಾಧನೆಯ ರೂಪದಲ್ಲಿ ನಡೆಯುತ್ತದೆ.” ಎಂದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಪದ್ಯಾಣ ಮನೆತನದ ಹಿರಿಯ ಪುಟ್ಟು ನಾರಾಯಣ ಭಾಗವತರ ಸ್ಮೃತಿಯಲ್ಲಿ ನೀಡುವ ‘ಪದ್ಯಾಣ ಪ್ರಶಸ್ತಿ’ಯನ್ನು ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ಯನ್ನು ಹಿರಿಯ ಹಿಮ್ಮೇಳ ವಾದಕರಾದ ಧರ್ಮಸ್ಥಳದ ಬಿ. ಸೀತಾರಾಮ ತೋಳ್ಪಾಡಿತ್ತಾಯರಿಗೆ ಶ್ರೀಗಳು ಪ್ರದಾನಿಸಿದರು. ಕುರಿಯ ಸ್ಮೃತಿ ಗೌರವವನ್ನು ಯಕ್ಷಗಾನ ಅರ್ಥದಾರಿಗಳಾದ ಕೆ. ಭಾಸ್ಕರ ರಾವ್ ಹಾಗೂ ಭಾಸ್ಕರ ನೂರಿತ್ತಾಯ ಬಾರ್ಯ ಇವರಿಗೆ ನೀಡಲಾಯಿತು. ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ಇದರ ಆಡಳಿತ ನಿರ್ದೇಶಕ ಮುಳಿಯ ಕೇಶವ ಪ್ರಸಾದ್, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿಯವರು ಪ್ರಶಸ್ತಿ ಪುರಸ್ಕೃತರನ್ನು ನುಡಿಹಾರಗಳ ಮೂಲಕ ಗೌರವಿಸಿದರು. ಶೀಲಾ ಗಣಪತಿ ಭಟ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಮಾತನಾಡುತ್ತಾ, “ಕೀರ್ತಿಶೇಷ ಭಾಗವತ ಪದ್ಯಾಣ ಗಣಪತಿ ಭಟ್ಟರು ಕಾಲಮಿತಿ ಪ್ರದರ್ಶನವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಪದ್ಯಾಣ ಮತ್ತು ಕುರಿಯ ಮನೆತನಗಳ ಯಕ್ಷಗಾನೀಯ ಕೊಡುಗೆಗಳಲ್ಲಿ ಸಮರ್ಪಣಾ ಭಾವವಿರುವುದನ್ನು ಕಾಣಬಹುದು.” ಎಂದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಸಂಮಾನಿತರನ್ನು ನುಡಿಹಾರಗಳ ಮೂಲಕ ಅಲಂಕರಿಸಿದರು. ತಾಳಮದ್ದಳೆ ಸಪ್ತಾಹದುದ್ದಕ್ಕೂ ಭಾಗವತ ಪದ್ಯಾಣ ಗಣಪತಿ ಭಟ್ಟರ ಸ್ಮೃತಿಯನ್ನು ಮಾಡಲಾಗಿತ್ತು. ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯು ಸಪ್ತಾಹದ ಸಂಘಟನೆಯಲ್ಲಿ ದೊಡ್ಡ ಹೆಗಲು ನೀಡಿತ್ತು. ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪದ್ಯಾಣ ಪ್ರಶಸ್ತಿ ಸಮಿತಿಯ ಸ್ವಸ್ತಿಕ್ ಪದ್ಯಾಣ ವಂದಿಸಿದರು. ಕೊನೆಯಲ್ಲಿ ‘ಗಂಗಾ ಸಾರಥ್ಯ’ ಪ್ರಸಂಗದ ತಾಳಮದ್ದಳೆ ನಡೆಯಿತು.

ಪರಿಸರ ಮಾಲಿನ್ಯದ ಪರಿಣಾಮ ಎದುರಿಸಲು ಸಿದ್ಧರಾಗಿ'

Article Image

ಪರಿಸರ ಮಾಲಿನ್ಯದ ಪರಿಣಾಮ ಎದುರಿಸಲು ಸಿದ್ಧರಾಗಿ'

ವಿದ್ಯಾಗಿರಿ: ಪರಿಸರ ಮಾಲಿನ್ಯಕ್ಕೆ ನಾವೇ ಕಾರಣೀಕರ್ತರು, ಇದರ ಪರಿಣಾಮವನ್ನು ನಾವೇ ಎದುರಿಸಬೇಕು ಎಂದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಮ್ ಭಟ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ (ಬಿಎಡ್) ವತಿಯಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ನಾವು ತಿನ್ನುವ ಆಹಾರವೂ ಕಲುಷಿತಗೊಂಡಿದೆ. ಇದರಿಂದಾಗಿ ಅನಾರೋಗ್ಯದ ಸಮಸ್ಯೆಯೂ ಹೆಚ್ಚಿದೆ ಎಂದರು. ಭಾರತದಲ್ಲಿ ಕಾಡಿನ ವ್ಯಾಪ್ತಿ ಕಡಿಮೆಯಾಗಿದೆ. ನಮ್ಮ ದೇಶದ ಸಮತೋಲನಕ್ಕೆ ಕನಿಷ್ಠ ಶೇಕಡ 20ರಷ್ಟು ಕಾಡಿನ ಅವಶ್ಯಕತೆ ಇದೆ. ಆದರೆ ಪ್ರಸ್ತುತವಾಗಿ ಕೇವಲ ಶೇ.8 ರಿಂದ 9 ಮಾತ್ರ ಕಾಡಿನ ಪ್ರಮಾಣವಿರುವುದು ಅಪಾಯದ ಸಂಕೇತ ಎಂದರು. ಪರಿಸರ ದಿನವಾದರೂ ಒಬ್ಬ ವ್ಯಕ್ತಿ ಒಂದು ಗಿಡವನ್ನು ಬೆಳೆಸುವುದರಿಂದ ಪರಿಸರಕ್ಕೆ ಆತ ನೀಡುವ ಕೊಡುಗೆ ಅಪಾರವಾಗಿರುತ್ತದೆ. ನೀರನ್ನು ಪೆಟ್ರೋಲ್ ಬಂಕ್ ಮಾದರಿಯಲ್ಲಿ ಪಡೆಯುವ ಸಮಯ ದೂರ ಇಲ್ಲ. ಇನ್ನಾದರೂ ಜನತೆ ಎಚ್ಚರರಾಗಿ ನೀರನ್ನು ಮಿತವಾಗಿ ಬಳಸ ಬೇಕು ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಪ್ರಾಣಿಗಳು ಮತ್ತು ಪಕ್ಷಿಗಳು ತಮ್ಮ ಗೂಡುಗಳನ್ನು ರಚಿಸಲು ಪರಿಸರಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ಆದರೆ ಮಾನವನಿಗೆ ಆಸರೆಯಾಗಿರುವ ಭೂಮಿಯನ್ನು ಆತನೇ ಹಾಳು ಮಾಡುತ್ತಿದ್ದಾನೆ ಎಂದರು. ದೇಶದ ರಾಜದಾನಿ ದೆಹಲಿಯಲ್ಲಿ ಪ್ರಸ್ತುತವಾಗಿ ಜನರು ಆಮ್ಲಜನಕವನ್ನು ಖರೀದಿಸುತ್ತಿದ್ದಾರೆ. ಮುಂದಿನ ಪೀಳಿಗೆ ದೇಶದ ಎಲ್ಲಾ ಭಾಗಗಳಲ್ಲಿ ಆಮ್ಲಜನಕವನ್ನು ಖರೀದಿಸುವ ಪರಸ್ಥಿತಿ ಬರಬಹುದು ಎಂದು ಹೇಳಿದರು. ಪರಿಸರದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇನ್ನು ನಾವು ಎಚ್ಚೆತ್ತುಕೊಳ್ಳದಿದ್ದರೆ ಅಪಾಯದ ಪ್ರಮಾಣ ಹೆಚ್ಚಾಗಬಹುದು ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರ್‌ಮೂರ್ತಿ ಎಚ್. ಕೆ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಸುರೇಶ್ ಸ್ವಾಗತಿಸಿ, ಸಮರ್ಥ್ ನಿರೂಪಿಸಿದರು.

ಪರಿಶ್ರಮದಿಂದ ಸಾಧಕರಾಗಬಹುದು: ಶ್ವೇತಾ ಜೈನ್

Article Image

ಪರಿಶ್ರಮದಿಂದ ಸಾಧಕರಾಗಬಹುದು: ಶ್ವೇತಾ ಜೈನ್

ಮೂಡಬಿದಿರೆ: ಪರಿಶ್ರಮಪಟ್ಟರೆ ಸಾಮಾನ್ಯ ವ್ಯಕ್ತಿ ಕೂಡ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ನೋಟರಿ ವಕೀಲೆ ಶ್ವೇತಾ ಜೈನ್ ಅಭಿಪ್ರಾಯಪಟ್ಟರು. ರೋಟರಿ ಸೆಂಟ್ರಲ್ ಸ್ಕೂಲಿನಲ್ಲಿ 2024-25 ಸಾಲಿನ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಕ್ಲಬ್‌ಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಇನ್ನರ್‌ವೀಲ್ ಅಧ್ಯಕ್ಷೆ ಸರಿತಾ ಆಶೀರ್ವಾದ್, ಮಾಜಿ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳಿಗೆ ಶುಭಕೋರಿದರು. ಪ್ರಾಂಶುಪಾಲೆ ರೂಪಾ ಮಸ್ಕರೇನ್ಹಸ್, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರೀತಿ ಪ್ರಭಾ ಸ್ವಾಗತಿಸಿ, ವಿದ್ಯಾ ನಿರೂಪಿಸಿದರು.

ಬೆಳ್ತಂಗಡಿ: ಆಮಂತ್ರಣ ಪತ್ರಿಕೆ ಬಿಡುಗಡೆ

Article Image

ಬೆಳ್ತಂಗಡಿ: ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಕೇಂದ್ರ ಕಛೇರಿ, ಬೆಳ್ತಂಗಡಿ ಇದರ ಶ್ರೀ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಹಾಗೂ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭವು ಜು. 13 ರ ಶನಿವಾರದಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯು ಇತ್ತೀಚೆಗೆ ಶ್ರೀ ಗುರುದೇವ ವಿವಿಧೋದ್ದೇಶದ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎನ್. ಪದ್ಮನಾಭ ಮಾಣಿಂಜ, ಉಪಾಧ್ಯಕ್ಷರಾದ ಭಗೀರಥ ಜಿ., ವಿಶೇಷಣಾಧಿಕಾರಿಯಾದ ಯಂ. ಮೋನಪ್ಪ ಪೂಜಾರಿ ಕಂಡೆತ್ಯಾರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಅಶ್ವತ್ಥ ಕುಮಾರ್, ಆಡಳಿತ ಮಂಡಳಿ ನಿರ್ದೇಶಕರಾದ ಸುಜಿತಾ ವಿ. ಬಂಗೇರ, ಸಂಜೀವ ಪೂಜಾರಿ, ತನುಜಾ ಶೇಖರ್, ಕೆ.ಪಿ. ದಿವಾಕರ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ್, ಜಯವಿಕ್ರಮ ಪಿ., ಧರಣೇಂದ್ರ ಕುಮಾರ್, ಆನಂದ ಪೂಜಾರಿ ಸರ್ವೆದೋಳ, ಡಾ| ರಾಜಾರಾಮ್ ಕೆ.ಬಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ರೈತರಿಗೆ ಬೆಳೆ ವಿಮೆ ಪಾವತಿಸಲು ಜು. 31 ಕೊನೆಯ ದಿನಾಂಕ

Article Image

ರೈತರಿಗೆ ಬೆಳೆ ವಿಮೆ ಪಾವತಿಸಲು ಜು. 31 ಕೊನೆಯ ದಿನಾಂಕ

ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಫಸಲ್ ಭಿಮಾ ಯೋಜನೆ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಸಲು ಜು.31 ಕೊನೆಯ ದಿನವಾಗಿದ್ದು ಎಲ್ಲಾ ರೈತ ಬಾಂಧವರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.

ಅನುಪಯುಕ್ತ ಪ್ಲಾಸ್ಟಿಕ್ ಬಳಸಿ ಇಂಟರ್‌ಲಾಕಿಂಗ್ ಪೇವರ್ಸ್ ನಿರ್ಮಾಣ: ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಮತ್ತು ಜಾಗೃತ್ ಟೆ

Article Image

ಅನುಪಯುಕ್ತ ಪ್ಲಾಸ್ಟಿಕ್ ಬಳಸಿ ಇಂಟರ್‌ಲಾಕಿಂಗ್ ಪೇವರ್ಸ್ ನಿರ್ಮಾಣ: ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಮತ್ತು ಜಾಗೃತ್ ಟೆ

ಮೂಡುಬಿದಿರೆ: ಅನುಪಯುಕ್ತ ಪ್ಲಾಸ್ಟಿಕ್‌ಗಳನ್ನು ಬಳಸಿ ಗುಣಮಟ್ಟದ ಇಟ್ಟಿಗೆ(ಬ್ರಿಕ್ಸ್) ಹಾಗೂ ಪರಸ್ಪರ ಬೆಸೆಯುವ (ಇಂಟರ್‌ಲಾಕಿಂಗ್) ಪ್ರಿಕಾಸ್ಟ್ ಪೇವರ್ಸ್ ಅನ್ನು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ (ಎಲೆಕ್ಟಾçನಿಕ್ಸ್ ಆಂಡ್ ಕಮ್ಯುನಿಕೇಷನ್) ವಿಭಾಗವು ಅಭಿವೃದ್ಧಿ ಪಡಿಸಿದ್ದು, ಮೈಸೂರಿನ ಜಾಗೃತ್ ಟೆಕ್ ಕಂಪೆನಿ ಜೊತೆ ವಾಣಿಜ್ಯ ಉತ್ಪನ್ನದ ಪೇಟೆಂಟ್ (ಪೇಟೆಂಟ್ ಸಂಖ್ಯೆ: 542790) ಪಡೆದಿದೆ. ಈ ಆವಿಷ್ಕಾರವು ಪರಿಸರ ಸಂರಕ್ಷಣೆ ಹಾಗೂ ನಿರ್ಮಾಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯಾಗಿದೆ. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ. ಸಿದ್ದೇಶ್ ಜಿ.ಕೆ. ಮಾರ್ಗದರ್ಶನ ಹಾಗೂ ಡಾ. ಗುರುಪ್ರಸಾದ್ ನೇತೃತ್ವದಲ್ಲಿ ಮಣಿಪಾಲ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಅರ್ಜುನ್ ಸುನಿಲ್ ರಾವ್ ಅವರ ಸಹಕಾರದೊಂದಿಗೆ ಮೈಸೂರು ಮೂಲದ ಪರಿಸರ ಸ್ನೇಹಿ ಸಂಶೋಧನಾ ಕಂಪನಿ ‘ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್’ ಜೊತೆಗೂಡಿ ಸಂಶೋಧನೆ ನಡೆಸಲಾಗಿತ್ತು. ಬ್ರಿಕ್ಸ್ ಗುಣಲಕ್ಷಣ, ಗುಣಮಟ್ಟ, ಸ್ಥಿರತೆ ಕುರಿತು ಬೆಂಗಳೂರಿನ ಬೆಯೂರೊ ವೆರಿಟಾಸ್ (beuro veritas) ಬ್ರಿಕ್ಸ್ ಪ್ರಯೋಗಾಲಯ ಹಾಗೂ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಚಿತ್ರದುರ್ಗದ ಗುಣಮಟ್ಟ ಪರಿಶೀಲನಾ ಪ್ರಯೋಗಾಲಯ ವರದಿ ನೀಡಿದ್ದು, interlocking paver IS15658:2008 standards ನ ಮೊದಲ ಕೋಷ್ಟಕದಲ್ಲಿ ನಿಗದಿ ಪಡಿಸಿದ compression ಸಾಮರ್ಥ್ಯ ಹೊಂದಿದೆ ಎಂದು ದೃಢಪಡಿಸಿದ್ದಾರೆ. ಈ ವರದಿ ಆಧಾರದಲ್ಲಿ ಭಾರತ ಸರ್ಕಾರದ ಪೇಟೆಂಟ್ ನಿಯಂತ್ರಕ ಇಲಾಖೆಯು ಈ ಮಾದರಿ ಪೇವರ್ಸ್ ತಯಾರಿಕಾ ವಿಧಾನಕ್ಕೆ 20ವರ್ಷಗಳವರೆಗೆ ಪೇಟೆಂಟ್ ಮಂಜೂರು ಮಾಡಿದೆ. ಈ ಪೇವರ್ಸ್ ಮೈಸೂರಿನ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಕೈಗಾರಿಕೆಯಲ್ಲಿ ವಾಣಿಜ್ಯೀಕರಣಗೊಂಡಿದ್ದು, ಜಾಗೃತ್ ಟೆಕ್ ಕಂಪೆನಿಯ ಮುಖ್ಯಸ್ಥ ದಿನೇಶ್ ಬೋಪಣ್ಣ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಆವಿಷ್ಕಾರಕ್ಕೆ ಪ್ರೋತ್ಸಾಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಸಾಧನೆಗೆ ಅಭಿನಂದಿಸಿದ್ದಾರೆ.

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

Article Image

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ ಅವರು ಜೂ.25 ರಂದು 2024-25ರ ಶೈಕ್ಷಣಿಕ ವರ್ಷದ ಶಾಲಾ ಸಂಘಗಳನ್ನು ಉದ್ಘಾಟಿಸಿದರು. ಬಳಿಕ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಕಲಿಕೆಯು ಕಲ್ಪನೆಯೊಂದಿಗೆ ಸಾಗಬೇಕು ಹಾಗೂ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಇತರ ಪೂರಕ ಚಟುವಟಿಕೆಗಳ ಮೂಲಕ ಜ್ಞಾನ ಗಳಿಸಬೇಕು ಹಾಗೂ ಧರ್ಮಸ್ಥಳದ ಸಮಾಜಮುಖಿ ಕಾರ್ಯಗಳಿಂದ ನಾವು ಉತ್ತಮ ಮೌಲ್ಯಗಳನ್ನು ಕಲಿಯಲು ಸಾಧ್ಯ ಎಂದು ಎಂದು ಹೇಳಿದರು. ಶಾಲೆಯ ವಿವಿಧ ಸಂಘಗಳಾದ ಸಾಂಸ್ಕೃತಿಕ ಸಂಘ, ಭಿತ್ತಿ ಪತ್ರಿಕೆ ಸಂಘ, ಕಲಾ ಸಂಘ, ಹವ್ಯಾಸ ಸಂಘ, ಕ್ರೀಡಾ ಸಂಘ, ಇಂಟೆರಾಕ್ಟ್ ಸಂಘ, ಪರಿಸರ ಸಂಘ, ಕನ್ನಡ ಸಂಘ, ವಿಜ್ಞಾನ ಸಂಘ, ಸಾಹಿತ್ಯ ಸಂಘ, ಗಣಿತ ಸಂಘ ಇವುಗಳ ಉದ್ಘಾಟನೆಯು ವಿಶಿಷ್ಟ ರೀತಿಯಿಂದ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಯಾ ಸಂಘಗಳ ಸಂಯೋಜಕ ಶಿಕ್ಷಕರು ತಮ್ಮ ಸಂಘದ ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮ ಆಯೋಜಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ವಿದ್ಯಾರ್ಥಿ ಶಶಾಂಕ್ ಪ್ರಭು ವಂದಿಸಿದರು. ವಿದ್ಯಾರ್ಥಿಗಳಾದ ಚಿಂತನ್ ಮತ್ತು ಆನೆಟ್ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳದಲ್ಲಿ ವಿದುಷಿ ಚೈತ್ರ ಭಟ್ ಅವರ ಭರತನಾಟ್ಯ ರಂಗಪ್ರವೇಶ

Article Image

ಧರ್ಮಸ್ಥಳದಲ್ಲಿ ವಿದುಷಿ ಚೈತ್ರ ಭಟ್ ಅವರ ಭರತನಾಟ್ಯ ರಂಗಪ್ರವೇಶ

ಭಾರತದ ಅಪೂರ್ವ ಕಲೆಗಳು ಹಾಗೂ ಅಧಿಕ ಮಾನವಸಂಪನ್ಮೂಲ ದೇಶದ ಅಮೂಲ್ಯ ಸಂಪತ್ತು ಹಾಗೂ ವರದಾನವಾಗಿದೆ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ವಿದುಷಿ ಚೈತ್ರ ಭಟ್ ಅವರ ಭರತನಾಟ್ಯ ರಂಗಪ್ರವೇಶ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು. ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಕಲೆಗಳನ್ನೂ ಹವ್ಯಾಸವಾಗಿ ಕರಗತ ಮಾಡಿಕೊಳ್ಳಬೇಕು. ಎಂಟು ವಿಧದ ಶಾಸ್ತ್ರೀಯ ನೃತ್ಯಗಳಲ್ಲಿ ತಮಿಳುನಾಡು ಮೂಲದ ಭರತನಾಟ್ಯ ಸರ್ವಶ್ರೇಷ್ಠ ಕಲೆಯಾಗಿದೆ. ಹಿಂದೆ ಕೇವಲ ಬೆರಳೆಣಿಕೆಯಷ್ಟು ನೃತ್ಯ ಶಿಕ್ಷಕರಿದ್ದರು ಇಂದು ಕರ್ನಾಟಕದಲ್ಲಿ ಮೂರು ಸಾವಿರಕ್ಕೂ ಮಿಕ್ಕಿ ನೃತ್ಯ ಶಿಕ್ಷಕರಿದ್ದಾರೆ ಹಾಗೂ ನೃತ್ಯ ಅಭ್ಯಾಸ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಚೈತ್ರ ಭಟ್ ಅವರು ಭರತನಾಟ್ಯದಲ್ಲಿ ಮಾಡಿದ ಭಗೀರಥ ಪ್ರಯತ್ನ, ಸಾಧನೆ ಮತ್ತು ಪ್ರಭುತ್ವಕ್ಕೆ ಅವರು ಅಭಿನಂದಿಸಿ ಆಕೆಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. ರಶ್ಮಿಚಿದಾನಂದ, ಗೀತಾ ಸರಳಾಯ ಮತ್ತು ರಾಜಶ್ರೀ ಉಳ್ಳಾಲ ಉಪಸ್ಥಿತರಿದ್ದರು. ರಾಜಶ್ರೀ ಉಳ್ಳಾಲ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸುಮಧುರ ಸಂಗೀತ, ಶೃಂಗಾರ, ರಾಗ, ತಾಳ, ಲಯಬದ್ಧ ಹಾಡುಗಳ ಲಾಲಿತ್ಯ, ನಾಟ್ಯ, ಹಾವ-ಭಾವದೊಂದಿಗೆ ನೃತ್ಯ ಮತ್ತು ನರ್ತಕಿ ಒಂದಾದಾಗ ನೃತ್ಯವು ಜೀವಾತ್ಮ ಮತ್ತು ಪರಮಾತ್ಮನ ಐಕ್ಯತೆಯ ಸಂಕೇತವಾಗಿ ಪ್ರತಿಬಿಂಬಿತವಾಗುತ್ತದೆ. ಭಾವಪ್ರಧಾನವಾದ ನಾಟ್ಯಕ್ಕೆ ಭಾಷೆಯ ಹಂಗಿಲ್ಲ ಎಂದು ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು. ಚೈತ್ರ ಭಟ್ ಅವರ ಸಾಧನೆ ಮತ್ತು ಪ್ರತಿಭೆಯನ್ನು ಗೌರವಿಸಿ, ಅಭಿನಂದಿಸಿದರು. ನೃತ್ಯದಲ್ಲಿ ಭಾವನೆಗಳ ಅಭಿವ್ಯಕ್ತಿಯೇ ಮುಖ್ಯವಾಗಿದ್ದು ನೃತ್ಯ ಮಾಡುವವರ ಮನಸ್ಸು ಸದಾ ಜಾಗೃತವಾಗಿರಬೇಕು. ಮೈಯೆಲ್ಲಾ ಕಣ್ಣಾಗಿರಬೇಕು. ನೃತ್ಯ ಕಲಿತರೆ ದೇಹದ ಎಲ್ಲಾ ಅಂಗಗಳಿಗೂ ವ್ಯಾಯಾಮ ದೊರಕಿ ದೈಹಿಕ ಮತ್ತು ಮಾನಸಿಕ ದೃಢತೆ ಹೆಚ್ಚಾಗುತ್ತದೆ. ಆರೋಗ್ಯ ಭಾಗ್ಯವೂ ಸಿಗುತ್ತದೆ ಎಂದು ಅವರು ಹೇಳಿದರು. ಚೈತ್ರ ಭಟ್ ತನಗೆ ಭರತನಾಟ್ಯ ಕಲಿಸಿದ ಗುರುಗಳಾದ ಗೀತಾ ಸರಳಾಯ ಮತ್ತು ರಶ್ಮಿ ಚಿದಾನಂದ ಅವರನ್ನು ಗೌರವಿಸಿ ಕೃತಜ್ಞತೆ ವ್ಯಕ್ತಪಡಿಸಿದರು. ಕುಮಾರಿ ಚೈತ್ರ ಭಟ್ ಮಾತನಾಡಿ ತನ್ನ ಸಾಧನೆಗೆ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಪ್ರೋತ್ಸಾಹ, ತನ್ನ ತಾಯಿ, ಅಕ್ಕ ಮತ್ತು ಬಾವನ ಬೆಂಬಲವನ್ನು ಧನ್ಯತೆಯಿಂದ ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದಲ್ಲಿ ಪ್ರಥಮವಾಗಿ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆದಿದ್ದು ಚೈತ್ರ ಭಟ್ ಅವರು ಭರತನಾಟ್ಯದಲ್ಲಿ ಸ್ವಪ್ರಯತ್ನದಿಂದ ಮಾಡಿದ ಸಾಧನೆ ಮತ್ತು ಪ್ರಭುತ್ವವನ್ನು ಶ್ಲಾಘಿಸಿ ಅಭಿನಂದಿಸಿ ಉಜ್ವಲ ಭವಿಷ್ಯವನ್ನು ಹಾರೈಸಿದರು. ಆಕೆಯ ನೃತ್ಯ ಪ್ರದರ್ಶನ ನೋಡಿ ಎಲ್ಲರೂ ಸಂತೋಷ ಪಟ್ಟಿದ್ದಾರೆ. ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಿಗೂ ಧರ್ಮಸ್ಥಳದಲ್ಲಿ ಅವಕಾಶ ನೀಡಲಾಗುವುದು. ಯುವ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. ಚೈತ್ರ ಭಟ್ ಅವರನ್ನು ಗೌರವಿಸಲಾಯಿತು. ಸುಧಾಕರರಾವ್, ಪೇಜಾವರ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಮಂಜುಳಾ ಕೊನೆಯಲ್ಲಿ ಧನ್ಯವಾದವಿತ್ತರು.

ಎಕ್ಸಲೆಂಟ್: ನಿಶಾಂತ ಪಿ. ಹೆಗಡೆ

Article Image

ಎಕ್ಸಲೆಂಟ್: ನಿಶಾಂತ ಪಿ. ಹೆಗಡೆ

ಎಕ್ಸಲೆಂಟ್ ಪ.ಪೂ. ಕಾಲೇಜು ಮೂಡಬಿದ್ರೆ ಇಲ್ಲಿಯ ವಿದ್ಯಾರ್ಥಿಯಾದ ನಿಶಾಂತ ಪಿ. ಹೆಗಡೆ ಇವರು 09-06-2024 ರಂದು ಜರುಗಿದ ರಾಷ್ಟ್ರಮಟ್ಟದ IISER APTITUDE TEST 2024ರಲ್ಲಿ ರಾಷ್ಟ್ರಮಟ್ಟದ overall 33ನೇ ಬ್ಯಾಂಕ್ ಪಡೆದಿರುತ್ತಾರೆ. JEE advanced (2024)ನಲ್ಲಿ ರಾಷ್ಟ್ರಮಟ್ಟದ CRL-4349 ಬ್ಯಾಂಕ್ ಹಾಗೂ NEETನಲ್ಲಿ 685 ಅಂಕ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ವಿದ್ಯಾರ್ಥಿಯ ಸಾಧನೆಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಮತ್ತು ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 119 ಯುನಿಟ್ ರಕ್ತದಾನ

Article Image

ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 119 ಯುನಿಟ್ ರಕ್ತದಾನ

ವೇಣೂರು ಇಲ್ಲಿನ ಐಟಿಐ ಸಂಸ್ಥೆಯಲ್ಲಿ ರಕ್ತದಾನದ ಬೃಹತ್ ಶಿಬಿರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ, ಹಳೆವಿದ್ಯಾರ್ಥಿ ಸಂಘ, ಪದ್ಮಾಂಬ ಸಮೂಹ ಸಂಸ್ಥೆಗಳು, ವೇಣೂರು, ಹಾಲು ಉತ್ಪಾದಕರ ಸಹಕಾರಿ ಸಂಘ, ಕುಕ್ಕೇಡಿ. ಕುಕ್ಕೇಡಿ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ವೇಣೂರು, ಲಯನ್ಸ್ ಕ್ಲಬ್ ಮಂಗಳೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು, ಪಲ್ಗುಣಿ ಸೇವಾ ಸಂಘ(ರಿ.) ವೇಣೂರು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್, ದ.ಕ. ಉಡುಪಿ ಜಿಲ್ಲೆ, ಬೆಳ್ತಂಗಡಿ ವಲಯ, ಮಂಜುಶ್ರೀ ಭಜನಾ ಮಂಡಳಿ, ಕುಂಡದಬೆಟ್ಟು, ಜನಸೇವಾ ಟ್ರಸ್ಟ್ (ರಿ.) ಪಡ್ಡಂದಡ್ಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಕ್ಕೇಡಿ, ನಿಟ್ಟಡೆ ಇವರ ಸಹಭಾಗಿತ್ವದಲ್ಲಿ ವೇಣೂರು ಐಟಿಐಯಲ್ಲಿ ನಡೆಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು ಇದರ ಅಧ್ಯಕ್ಷರಾದ ಲ| ಸುಂದರ ಹೆಗ್ಡೆ, ಬಿ.ಇ. ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ರಕ್ತದಾನ ಅತ್ಯಂತ ಶ್ರೇಷ್ಠ ದಾನ ಇದರಿಂದ ಹಲವಾರು ಜೀವ ಉಳಿಸಿದಂತಹ ಪುಣ್ಯ ಪ್ರಾಪ್ತಿಯಾಗುತ್ತದೆ, ಇಂತಹ ಕಾರ್ಯಕ್ರಮಗಳಿಂದ ಯುವಜನತೆ ದಾನದಗುಣವನ್ನು ಮೈಗೂಡಿಸಿ ಕೊಳ್ಳಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ 258 ರಕ್ತದಾನ ಶಿಬಿರವನ್ನು ಸಂಯೋಜಿಸಿರುವ ಲ| ಎನ್. ಜೆ. ನಾಗೇಶ್ ಎಂ.ಜೆ.ಎಫ್., ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲ| ಜಯರಾಜ್ ಪ್ರಕಾಶ್, ಸಂಸ್ಥೆಯ ಹಳೆ ವಿದ್ಯಾರ್ಥಿ ಗಬ್ಬರ್ ಸಿಂಗ್ ಚಲನಚಿತ್ರದ ನಾಯಕ ನಟ ಶರಣು ಶೆಟ್ಟಿ, ಜೀವವಿಮಾ ಪ್ರತಿನಿಧಿ ಜಗನ್ನಾಥ ದೇವಾಡಿಗ, ಸಂಸ್ಥೆಯ ಹಳೆ ವಿದ್ಯಾರ್ಥಿ ಮುಖ್ಯ ಜೀವವಿಮಾ ಸಲಹೆಗಾರರಾದ ಶ್ರೀಕಾಂತ್ ಕಾಮತ್ ಇವರುಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದ ಐಟಿಐ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಮಾತನಾಡಿ ವಿದ್ಯಾರ್ಥಿ ದಿಸೆಯಿಂದಲೇ ದಾನದ ಮಹತ್ವವನ್ನು ಅರಿತು ರಕ್ತದಾನದಂತಹ ಶ್ರೇಷ್ಠ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದರು. ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಸುನಿಧಿ ಶೃತಿ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿತಾ ಕೆ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಪದ್ಮಾಂಬ ಸಮೂಹ ಸಂಸ್ಥೆಗಳ ಮಾಲಕರು ಜಿನರಾಜ್ ಜೈನ್, ಪಲ್ಗುಣಿ ಸೇವಾ ಸಂಘದ ಶ್ರೀಕಾಂತ ಉಡುಪ, ಲಯನ್ಸ್ ಕ್ಲಬ್ ಕಾರ್ಯದರ್ಶಿ ದಯಾನಂದ ಭಂಡಾರಿ, ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ನಿರ್ಮಲ್‌ಕುಮಾರ್ ಬೊಳ್ಜಾಲ್ ಗುತ್ತು, ಮಂಜುಶ್ರೀ ಭಜನಾ ಮಂಡಳಿ, ಕುಂಡದಬೆಟ್ಟು, ಇದರ ಅಧ್ಯಕ್ಷರಾದ ರವಿ ಕುಮಾರ್ ಕೆ.ಯೈ., ಸೌತ್‌ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಗಣೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು ಇಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ, ಲಯನ್ಸ್ ಕ್ಲಬ್ ಮಂಗಳೂರು ಇದರ ಕಾರ್ಯದರ್ಶಿ ಶಶಿಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 119 ಯುನಿಟ್ ರಕ್ತ ಸಂಗ್ರಹಿಸಲಾಯಿತು. ವಿದ್ಯಾರ್ಥಿ ವಿನೀತ್ ಪ್ರಾರ್ಥಿಸಿದ ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪದ್ಮಪ್ರಸಾದ್ ಬಸ್ತಿ ಸ್ವಾಗತಿಸಿ, ದಯಾನಂದ ಭಂಡಾರಿ ವಂದಿಸಿದ ಈ ಕಾರ್ಯಕ್ರಮವನ್ನು ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಸತೀಶ್ ನಿರ್ವಹಿಸಿದರು.

ಉಜಿರೆ: ಸಹಕಾರಿ ಕ್ಷೇತ್ರದ ಪ್ರಗತಿ, ಸಾಧನೆ ಶ್ಲಾಘನೀಯವಾಗಿದೆ

Article Image

ಉಜಿರೆ: ಸಹಕಾರಿ ಕ್ಷೇತ್ರದ ಪ್ರಗತಿ, ಸಾಧನೆ ಶ್ಲಾಘನೀಯವಾಗಿದೆ

ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆಯಿಂದ ವ್ಯವಹಾರ ಮಾಡುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಹಕಾರಿ ಸಂಘಗಳಲ್ಲಿ ಶೇ. ನೂರು ಸಾಲ ವಸೂಲಾತಿ ಆಗುತ್ತಿದ್ದು ಸಹಕಾರಿ ಕ್ಷೇತ್ರದ ಪ್ರಗತಿ, ಸಾಧನೆ ಶ್ಲಾಘನೀಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ “ಉನ್ನತಿ” ಉದ್ಘಾಟಿಸಿ ಶುಭ ಹಾರೈಸಿದರು. ಸಮಾಜದ ಎಲ್ಲಾ ಸ್ತರದ ಜನರು ಸಹಕಾರಿ ರಂಗದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಸರ್ವಾಂಗೀಣ ಪ್ರಗತಿಯಾಗಬೇಕು. ಜನರ, ಜನರಿಂದ ಮತ್ತು ಜನರಿಗಾಗಿ ಸೇವೆ ಸಲ್ಲಿಸುವ ಸಹಕಾರಿ ಸಂಘಗಳನ್ನು ಎಲ್ಲರೂ ಸೇರಿ ಬಲಪಡಿಸಬೇಕು. ತನ್ಮೂಲಕ ಸರ್ವಾಂಗೀಣ ಪ್ರಗತಿಯಾಗಲಿ ಎಂದು ಅವರು ಶುಭ ಹಾರೈಸಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಹಕಾರಿ ಸಂಘಗಳ ಸೇವೆ-ಸಾಧನೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ರೈತರ ಸಭಾಭವನವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ವಾಣಿಜ್ಯ ಬ್ಯಾಂಕ್‌ಗಳ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಜನರ ಸೇವೆಯಲ್ಲಿ ವಿಫಲವಾಗಿ ವಿಲೀನವಾಗುತ್ತಿರುವುದು ಶೋಚನೀಯವಾಗಿದೆ. ಭಾಷೆ ಮತ್ತು ಸಂಸ್ಕೃತಿಯ ಅರಿವಿಲ್ಲದ ಸಿಬ್ಬಂದಿಯೇ ಇದಕ್ಕೆ ಕಾರಣ. ಆದರೆ ಸಹಕಾರಿ ಸಂಘಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಕಾಲಿಕ ನೆರವು ನೀಡುವುದರಿಂದ ಉತ್ತಮ ಪ್ರಗತಿ ಸಾಧ್ಯವಾಗಿದೆ. ಕೇಂದ್ರ ಸರ್ಕಾರ ಕೂಡಾ ಸಹಕಾರಿ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದೆ ಎಂದರು. ಶಾಸಕರುಗಳಾದ ಹರೀಶ್ ಪೂಂಜ ಮತ್ತು ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು. ಪ್ರೀತಂ ಅಧ್ಯಕ್ಷತೆ ವಹಿಸಿದರು. ಶ್ರೀನಿವಾಸ ರಾವ್ ಸ್ವಾಗತಿಸಿದರು. ಧನಲಕ್ಷ್ಮೀ ಧನ್ಯವಾದವಿತ್ತರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗೆಡೆಯವರಿಂದ ಸಂವಾದ ಕಾರ್ಯಕ್ರಮ

Article Image

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗೆಡೆಯವರಿಂದ ಸಂವಾದ ಕಾರ್ಯಕ್ರಮ

ಉಜಿರೆ: ಉಜಿರೆಯ ರುಡ್‌ಸೆಟ್ ಸಂಸ್ಥೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಸಂಸ್ಥೆಯಲ್ಲಿ ನಡೆಯುತ್ತಿರುವ ತರಬೇತಿ ತಂಡಗಳ ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡುತ್ತಾ ರುಡ್‌ಸೆಟ್ ಸಂಸ್ಥೆಗಳ ತರಬೇತಿಯಲ್ಲಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದರಿಂದ ಶಿಬಿರಾರ್ಥಿಗಳಿಗೆ ಹೆಚ್ಚು ಕೌಶಲ್ಯ ಪಡೆಯಲು ಸಾದ್ಯವಾಗುತ್ತದೆ ಎಂದು ತಿಳಿಸಿದರು. ಇದರಿಂದ ಸ್ವಂತ ಉದ್ಯೋಗ ಪ್ರಾರಂಭಿಸಲು ಅನುಕೂಲವಾಗುತ್ತದೆ. ಇಲ್ಲಿನ ತರಬೇತಿ ಪಡೆದ ನಂತರವೂ ಹೊಸ ಹೊಸ ತಂತ್ರಜ್ಞಾನಗಳನ್ನು ನವೀಕರಿಸಿಕೊಳ್ಳಿ, ಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ ಹಾಗೂ ಉದ್ಯಮಿಗಳು ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಂಡಾಗ ಲಾಭ ನಷ್ಟಗಳ ವಿವರ ದೊರೆಯುತ್ತದೆ ಎಂದು ಹೇಳಿದರು. ತರಬೇತಿ ಪಡೆದ ಎಲ್ಲರಿಗೂ ಶುಭ ಹಾರೈಸಿ ಆರ್ಶೀವದಿಸಿದರು. ಈ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕರಾದ ರಂಜನ್ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ಎನ್. ಜನಾರ್ಧನ್, ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಜಯ ಕುಮಾರ ಬಿ. ಪಿ. ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್ ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಹಿರಿಯ ಉಪನ್ಯಾಸಕರುಗಳಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿ, ಕೆ. ಕರುಣಾಕರ ಜೈನ್ ವಂದಿಸಿದರು. ತರಬೇತಿಯಲ್ಲಿ ಒಟ್ಟು 65 ಜನ ಅಭ್ಯರ್ಥಿಗಳು ಭಾಗವಹಿಸಿದ್ದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಮಹಿಳಾ ವಿಭಾಗದಲ್ಲಿ ಉಜಿರೆ ಎಸ್‌ಡಿಎಂಗೆ ಪ್ರಶಸ್ತಿ, ಆರೋಗ್ಯ ವಿ.ವಿ. ಕಬಡ್ಡಿ: ಆಳ್ವಾಸ್ ಚಾಂಪಿಯನ್

Article Image

ಮಹಿಳಾ ವಿಭಾಗದಲ್ಲಿ ಉಜಿರೆ ಎಸ್‌ಡಿಎಂಗೆ ಪ್ರಶಸ್ತಿ, ಆರೋಗ್ಯ ವಿ.ವಿ. ಕಬಡ್ಡಿ: ಆಳ್ವಾಸ್ ಚಾಂಪಿಯನ್

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಅತಿಥ್ಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಜ್ಯ ಮಟ್ಟ) ಕಬಡ್ಡಿ ಪಂದ್ಯಾಟದ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಮಹಿಳಾ ವಿಭಾಗದಲ್ಲಿ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜುಗಳು ಚಾಂಪಿಯನ್ ಆಗಿವೆ. ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಅಂಕಣದಲ್ಲಿ ಬುಧವಾರ ನಡೆದ ಪುರುಷರ ಫೈನಲ್‌ನಲ್ಲಿ ಮಂಗಳೂರಿನ ಎ.ಜೆ. ಇನ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ಮಣಿಸಿದ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಪ್ರಶಸ್ತಿ ಎತ್ತಿ ಹಿಡಿಯಿತು. ಮಹಿಳಾ ವಿಭಾಗದಲ್ಲಿ ಬಾಗಲಕೋಟೆಯ ಸಜ್ಜಲಶ್ರೀ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜನ್ನು ಮಣಿಸಿದ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಅತಿಥೇಯ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ತೃತೀಯ ಸ್ಥಾನ ಪಡೆಯಿತು. ಪುರುಷರ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ವೀರೇಶ್, ಅತ್ಯುತ್ತಮ ಡಿಫೆಂಡರ್ ಆಗಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನ ಹೇಮಂತ್ ಜಿ. ವೈ., ಅತ್ಯುತ್ತಮ ಆಲ್ ರೌಂಡರ್ ಆಗಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಮಹಮ್ಮದ್ ಸತಾರ್ ಪುರಸ್ಕೃತರಾದರು. ಮಹಿಳಾ ಅತ್ಯುತ್ತಮ ರೈಡರ್ ಆಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವಿಭಾಗದ ಮಾನಸ, ಎಸ್‌ಡಿಎಂ ಅತ್ಯುತ್ತಮ ರಕ್ಷಕರಾಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಎಸ್‌ಡಿಎಂ ನ ಪ್ರಗತಿ, ಅತ್ಯುತ್ತಮ ಆಲ್‌ರೌಂಡರ್ ಆಗಿ ಸಜನಶ್ರೀ, ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ನ ನಂದಿತಾ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. ಸಮಾರೋಪ ಪದ್ಮಶ್ರೀ ಅನಿಲ ಏಜೆನ್ಸಿ ವ್ಯವಸ್ಥಾಪಕ ಪಾಲುದಾರರಾದ ಅಭಿಜಿತ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೀಕ್ಷಕರಾದ ಧರ್ಮೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕರಾದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ, ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಶನ್ ಪಿಂಟೊ ಇದ್ದರು.

ವಿದ್ಯಾಗಿರಿ: ಸ್ಪಟಿಕ ವಿದ್ಯಾರ್ಥಿ ವೇದಿಕೆಯ ಸಮಾರೋಪ ಸಮಾರಂಭ

Article Image

ವಿದ್ಯಾಗಿರಿ: ಸ್ಪಟಿಕ ವಿದ್ಯಾರ್ಥಿ ವೇದಿಕೆಯ ಸಮಾರೋಪ ಸಮಾರಂಭ

ನಿಮ್ಮ ವ್ಯಕ್ತಿತ್ವ ಹಾಗೂ ಕೌಶಲಗಳ ಮೂಲಕವೇ ಸಮಾಜಕ್ಕೆ ಪರಿಚಿತರಾಗಿ ಎಂದು ಆಳ್ವಾಸ್ ಕಾಲೇಜಿನ ಕುಲಸಚಿವ (ಅಕಾಡೆಮಿಕ್ಸ್) ಡಾ ಟಿ. ಕೆ. ರವೀಂದ್ರನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ಪದವಿ ಸಮಾಜ ಕಾರ್ಯ ವಿಭಾಗದ ಸ್ಪಟಿಕ ವಿದ್ಯಾರ್ಥಿ ವೇದಿಕೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ದೊಡ್ಡದಾಗಿ ಕನಸು ಕಾಣಬೇಕು ಇದರಿಂದ ಉನ್ನತ ಸಾಧನೆ ಮಾಡಲು ಸಾಧ್ಯ. ವರ್ತಮಾನದಲ್ಲಿ ಜಗತ್ತು ಒಂದು ಪುಟ್ಟ ಹಳ್ಳಿ ಆಗಿದೆ. ಅವಕಾಶಗಳು ವಿಸ್ತಾರಗೊಂಡಿದ್ದು, ಸ್ಪರ್ಧೆ ಹೆಚ್ಚಿದೆ ಎಂದರು. ಸಮಾಜ ಕಾರ್ಯದ ವಿದ್ಯಾರ್ಥಿಗಳಿಗೆ ಅವಕಾಶಗಳ ಕೊರತೆ ಬರಲು ಸಾಧ್ಯವಿಲ್ಲ. ಈ ವೃತ್ತಿಯೂ ನೀಡುವ ಸಂತೃಪ್ತಿ ಬೇರೆ ಕಡೆಯೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲ. ಆದರೆ, ಅದಕ್ಕೆ ತಕ್ಕ ಅಭ್ಯರ್ಥಿಗಳ ಕೊರತೆ ಇದೆ. ಹಾಗಾಗಿ ಉದ್ಯೋಗಕ್ಕೆ ಬೇಕಾದ ಕೌಶಲಗಳನ್ನು ವೃದ್ಧಿಸಿಕೊಳ್ಳಿ ಎಂದರು. ಎಸ್.ಕೆ.ಎಫ್. ಬಾಯ್ಲೆರ್ಸ್ ಮತ್ತು ಡ್ರೆಯರ‍್ಸ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಪ್ರಶಾಂತ್ ದೇವಾಡಿಗ ಮಾತನಾಡಿ, ‘ನಿಮ್ಮ ಜೀವನದ ಗುರಿಯನ್ನು ಆಲೋಚಿಸಿ. ಆ ಗುರಿಯನ್ನು ಸಾಧಿಸಲು ಬೇಕಾದ ಸಿದ್ಧತೆಗಳನ್ನು ನಡೆಸಿ’ ಎಂದರು. ವೃತ್ತಿ ಜೀವನಕ್ಕೆ ಬೇಕಾದ ವಿವಿಧ ಕೌಶಲ, ಜ್ಞಾನ, ಹಾಗೂ ವರ್ತನೆಗಳ ಮೇಲೆ ಗಮನವಿರಿಸಿ ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸ್ಪಟಿಕ ವಿದ್ಯಾರ್ಥಿ ವೇದಿಕೆಯೂ ಅನೇಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡಿದೆ. ಸಮಾಜಕಾರ್ಯ ವಿಭಾಗದ ಸೇವಾ ಮನೋಭಾವ ಶ್ಲಾಘನೀಯ ಎಂದು ಹೇಳಿದರು. ಪದವಿ ಸಮಾಜ ಕಾರ್ಯದ ಮುಖ್ಯಸ್ಥೆ ಡಾ. ಮಧುಮಲಾ, ಸ್ಪಟಿಕ ವಿದ್ಯಾರ್ಥಿ ವೇದಿಕೆಯ ಸಂಯೋಜಕಿ ಡಾ. ಸ್ವಪ್ನ ಆಳ್ವ ಇದ್ದರು.

ರಾಜ್ಯಮಟ್ಟದ ಮಹಿಳಾ ಟೇಬಲ್ ಟೆನಿಸ್: ಎಸ್‌ಡಿಎಂ ಕಾನೂನು ಕಾಲೇಜು ಚಾಂಪಿಯನ್

Article Image

ರಾಜ್ಯಮಟ್ಟದ ಮಹಿಳಾ ಟೇಬಲ್ ಟೆನಿಸ್: ಎಸ್‌ಡಿಎಂ ಕಾನೂನು ಕಾಲೇಜು ಚಾಂಪಿಯನ್

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ ಅಂತರ್ ಕಾಲೇಜು ಮಹಿಳಾ ಟೇಬಲ್ ಟೆನಿಸ್ ಪಂದ್ಯದಲ್ಲಿ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ತಂಡ ಚಾಂಪಿಯನ್ ಆಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಕಾನೂನು ಕಾಲೇಜಿನಲ್ಲಿ ನಡೆದ ಪಂದ್ಯಾಟದಲ್ಲಿ ರಾಜ್ಯದ ವಿವಿಧಕಾಲೇಜುಗಳ 15ಕ್ಕಿಂತಲೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ವಿಜೇತ ತಂಡವು ಪ್ರಶಸ್ತಿ ಶೆಟ್ಟಿ, ಭಾಗ್ಯಶ್ರೀ, ಪ್ರಮಯಿ ಜೈನ್ ಅವರನ್ನು ಒಳಗೊಂಡಿದ್ದು, ಎಸ್‌ಡಿಎಂನ ದೈಹಿಕ ಶಿಕ್ಷಣ ನಿರ್ದೇಶಕ ಶಶಿಪ್ರಸಾದ್ ತಂಡದ ನೇತೃತ್ವ ವಹಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಶೆಟ್ಟಿ ಪಂದ್ಯಾಟದ ಉತ್ತಮ ಕ್ರೀಡಾಪಟು ಬಹುಮಾನವನ್ನು ಗೆದ್ದುಕೊಂಡಿದ್ದಾರೆ.

ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಹೇಮಾವತಿ ವೀ. ಹೆಗ್ಗಡೆಯವರ ನಿರ್ದೇಶನದಂತೆ ದಿನಾಂಕ ಜೂ. 16 ಆದಿತ್ಯವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಉಚಿತ ಹಿಯರಿಂಗ್ ಟೆಸ್ಟ್ (ಉಚಿತ ಶ್ರವಣ ಪರೀಕ್ಷೆ), ಮಕ್ಕಳು ಮತ್ತು ವಯಸ್ಕರಲ್ಲಿ ಮೂಗಿನ ದ್ರವದ ತಪಾಸಣೆ, ಅಲರ್ಜಿಗೆ ಚಿಕಿತ್ಸೆ, ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ, ವರ‍್ಟಿಗೋ ಪರೀಕ್ಷೆ ಮತ್ತು ಚಿಕಿತ್ಸೆ, ಧ್ವನಿ ಬದಲಾವಣೆಗಳ ಪರೀಕ್ಷೆ ಮತ್ತು ಚಿಕಿತ್ಸೆ, ಕಿವುಡುತನದ ಪರೀಕ್ಷೆ ಮತ್ತು ಚಿಕಿತ್ಸೆ, ಥೈರಾಯಿಡ್ ಪರೀಕ್ಷೆ ಮತ್ತು ಚಿಕಿತ್ಸೆ, ಕಿವಿ-ಮೂಗು- ಗಂಟಲು ಕ್ಯಾನ್ಸರ್ ತಪಾಸಣೆ, ಗೊರಕೆಗೆ ಚಿಕಿತ್ಸೆ ಇತ್ಯಾದಿ ಸೌಲಭ್ಯಗಳು ಈ ಶಿಬಿರದಲ್ಲಿ ದೊರೆಯಲಿದೆ. ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್ MBBS, MS (ENT & HNS) Fellowship in Head & Neck Oncologist ಇವರು ರೋಗ ತಪಾಸಣೆ ನಡೆಸಲಿದ್ದಾರೆ. ಡಾ| ರೋಹನ್ ಎಂ. ದೀಕ್ಷಿತ್ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ತಜ್ಞರಾಗಿದ್ದಾರೆ. ಇವರು ಪ್ರತಿದಿನ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿರುತ್ತದೆ. ಒಳರೋಗಿ ವಿಭಾಗದಲ್ಲಿ 10%, ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ದೊರೆಯಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳ: “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಸೇರ್ಪಡೆಗೊಂಡ “ಜೈಬಾಲಾಜಿ” ಹಾಯಿದೋಣಿ

Article Image

ಧರ್ಮಸ್ಥಳ: “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಸೇರ್ಪಡೆಗೊಂಡ “ಜೈಬಾಲಾಜಿ” ಹಾಯಿದೋಣಿ

ಕುಂದಾಪುರದಲ್ಲಿ ಪಂಚಗಂಗಾವಳಿ ನದಿಯಲ್ಲಿ ಕಳೆದ 14 ವರ್ಷಗಳಿಂದ ಚಿಪ್ಪುಗಳನ್ನು ಸಾಗಿಸುತ್ತಿದ್ದ “ಜೈಬಾಲಾಜಿ” ಹಾಯಿದೋಣಿಯನ್ನು ಸೋಮವಾರ ಧರ್ಮಸ್ಥಳದಲ್ಲಿ “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಅರ್ಪಿಸಲಾಯಿತು. ಕುಂದಾಪುರದ ಖಾರ್ವಿಕೇರಿಯ ಜೈಬಾಲಾಜಿ ಎಂಟರ್‌ಪ್ರೈಸಸ್ ಮಾಲಕ ವೆಂಕಟೇಶ್ ಖಾರ್ವಿ ತಮ್ಮ ಹಾಯಿದೋಣಿಯನ್ನು “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಸಮರ್ಪಿಸಿದರು. ಸವಿವರ ಮಾಹಿತಿ: 51 ಅಡಿ ಉದ್ದ ಹಾಗೂ 10 1/2 ಅಡಿ ಅಗಲದ ಬೃಹತ್ ಹಾಯಿದೋಣಿ ಒಂದೇ ಮರದ ಹಲಗೆಯಿಂದ ನಿರ್ಮಿತವಾಗಿದೆ. ಇದಕ್ಕೆ 22 ಅಡಿ ಎತ್ತರದ ಕಾಟಿಮರ ಮತ್ತು ಹಾಯಿ ಇದೆ. 20 ವರ್ಷಗಳ ಹಿಂದೆ ಇಂತಹ ಹತ್ತು ದೊಣಿಗಳಿದ್ದವು. ಚಿಪ್ಪು, ಮರ, ಹಂಚು ಸಾಗಾಟಕ್ಕೂ ಅವುಗಳು ಬಳಕೆಯಾಗುತ್ತಿದ್ದವು. ಚಿಪ್ಪು ಸದ್ಯ ನಶಿಸುತ್ತಾ ಬಂದಿರುವುದರಿಂದ ಮುಂದಿನ ಪೀಳಿಗೆಗೆ ಕೊಂಕಣಿ ಖಾರ್ವಿಸಮಾಜದ ಜನಜೀವನ ಹಾಗೂ ಹಾಯಿದೋಣಿ ಬಗ್ಗೆ ಪರಿಚಯ ಮಾಡಿಕೊಳ್ಳಲು ಹಾಯಿ ದೋಣಿ ಮಾರ್ಗದರ್ಶಿಯಾಗಲಿ ಎಂಬ ಉದ್ದೇಶದಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅನುಮತಿ ಮತ್ತು ಆಶೀರ್ವಾದಗಳೊಂದಿಗೆ ಇದನ್ನು “ಮಂಜೂಷಾ”ಕ್ಕೆ ಸಮರ್ಪಿಸಲಾಗಿದೆ ಎಂದು ಮಾಲಕ ವೆಂಕಟೇಶ್ ಖಾರ್ವಿ ತಿಳಿಸಿದ್ದಾರೆ. ಕೊಂಕಣಿ ಖಾರ್ವಿ ಸಮಾಜದ ಸುಭಾಷ್ ಖಾರ್ವಿ, ಸುನಿಲ್ ಖಾರ್ವಿ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿ ಪಾಸ್‌: ಅರ್ಜಿ ವಿತರಣೆ ಆರಂಭ

Article Image

ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿ ಪಾಸ್‌: ಅರ್ಜಿ ವಿತರಣೆ ಆರಂಭ

ಮಂಗಳೂರು, ಜೂ. 2: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಹಾಗೂ ಸರ್ವಿಸ್ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಕೆನರಾ ಬಸ್‌ ಮಾಲಕರ ಸಂಘದಿಂದ ನೀಡುವ 2024-25ನೇ ಸಾಲಿನ ಶೇ. 50 ರಿಯಾಯಿತಿ ಪಾಸುಗಳ ಅರ್ಜಿ ವಿತರಣೆ ಪ್ರಾರಂಭಗೊಂಡಿದೆ. ಸಂಘದ ಕಚೇರಿಗಳಾದ ಮಂಗಳೂರು, ಪಡುಬಿದ್ರಿ, ಉಡುಪಿ, ಕುಂದಾಪುರ, ಕಾರ್ಕಳ, ಮೂಡುಬಿದಿರೆ, ಕಿನ್ನಿಗೋಳಿ, ಹಿರಿಯಡಕ, ಹೆಬ್ರಿ, ಸಿದ್ಧಾಪುರ, ಬೈಂದೂರು, ಹಾಲಾಡಿ, ಕೇಂದ್ರದಲ್ಲಿ ಅರ್ಜಿಯನ್ನು ಪಡೆದು ಸೂಕ್ತ ದಾಖಲೆಗಳನ್ನು ನೀಡಿ ವಿದ್ಯಾರ್ಥಿ ಪಾಸುಗಳನ್ನು ಪಡೆದುಕೊಳ್ಳುವಂತೆ ಕೆನರಾ ಬಸ್ ಮಾಲಕರ ಸಂಘದ ಪ್ರಕಟಣೆ ತಿಳಿಸಿದೆ.

ಆದೀಶ್ ಜೈನ್‌ರವರ ಚಿಕಿತ್ಸೆಗೆ ನೆರವಾಗಿ

Article Image

ಆದೀಶ್ ಜೈನ್‌ರವರ ಚಿಕಿತ್ಸೆಗೆ ನೆರವಾಗಿ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ನಿವಾಸಿ ಧರ್ಮಪಾಲ್ ಜೈನ್‌ರವರ ಪುತ್ರ ಆದೀಶ್ ಜೈನ್ (20 ವರ್ಷ) ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಇವರ ಮಗನ ಕ್ಯಾನ್ಸರ್ ಚಿಕಿತ್ಸೆಯು ಮಂಗಳೂರಿನ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್‌ನಲ್ಲಿ ನಡೆಯುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ಲಕ್ಷಾಂತರ ರೂಪಾಯಿಗಳ ಹಣವನ್ನು ಕ್ರೂಡೀಕರಿಸಲು ತುಂಬಾ ಕಷ್ಟವಾಗಿದ್ದು, ಚಿಕಿತ್ಸೆಗೆ ನೆರವು ನೀಡಬೇಕೆಂದು ತಂದೆ-ತಾಯಿ ವಿನಂತಿಸಿಕೊಂಡಿದ್ದಾರೆ. ನೆರವನ್ನು ನೀಡುವವರು PUSHPAVATHI (ತಾಯಿ) A/c- 01712250001817 IFSC- CNRB0010171 ಮಾಹಿತಿಗಾಗಿ ಸಂಪರ್ಕಿಸಿ– 7022728669, 7338528071 ಧರ್ಮಪಾಲ್ ಜೈನ್ (ತಂದೆ) PhonePe: 7338528071 PhonePay & Google payಯಲ್ಲಿ ದಿನಕ್ಕೆ 20,000ಕ್ಕಿಂತ ಜಾಸ್ತಿ ಭಾರದ ಕಾರಣ ಆದಷ್ಟು ಈ A/c ಗೆ ಹಾಕಬೇಕಾಗಿ ವಿನಂತಿ

ಮೂಡಬಿದಿರೆ: ಇಂಜಿನಿಯರ್ ಕೋರ್ಸ್ ಗಳ ಪ್ರವೇಶ ಪರೀಕ್ಷೆಯಲ್ಲಿ ಎಕ್ಸಲೆಂಟ್ ನ ವಿದ್ಯಾರ್ಥಿಗಳು ರ‍್ಯಾಂಕ್

Article Image

ಮೂಡಬಿದಿರೆ: ಇಂಜಿನಿಯರ್ ಕೋರ್ಸ್ ಗಳ ಪ್ರವೇಶ ಪರೀಕ್ಷೆಯಲ್ಲಿ ಎಕ್ಸಲೆಂಟ್ ನ ವಿದ್ಯಾರ್ಥಿಗಳು ರ‍್ಯಾಂಕ್

ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ(ಕಾಮೆಡ್-ಕೆ) ಇಂಜಿನಿಯರ್ ಕೋರ್ಸ್ ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಮೂಡಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ 4 ವಿದ್ಯಾರ್ಥಿಗಳು ಅಧಿಕ ಪರ್ಸಂಟೇಜ್‌ನೊಂದಿಗೆ ರ‍್ಯಾಂಕ್ ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಪ್ರಾಪ್ತಿ ಬೆಳಕೇರಿ 99.7861210 ಪರ್ಸಂಟೇಜ್‌ನೊಂದಿಗೆ 234ನೇ ರ‍್ಯಾಂಕ್ ಪಡೆದಿದ್ದಾರೆ. ರೋಹನ್ ಎಸ್. 99.4987613 ಪರ್ಸಂಟೇಜ್‌ನೊಂದಿಗೆ 548ನೇ ರ‍್ಯಾಂಕ್, ಅಮೋಘ ಪಾಟೀಲ್ 98.5252788 ಪರ್ಸಂಟೇಜ್‌ನೊಂದಿಗೆ 1559ನೇ ರ‍್ಯಾಂಕ್ ಪಡೆದಿದ್ದಾರೆ. ಇವರ ಸಾಧನೆಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

ಬೀದಿನಾಯಿ ಮತ್ತು ಸಾಕುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಅಭಿಯಾನ

Article Image

ಬೀದಿನಾಯಿ ಮತ್ತು ಸಾಕುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಅಭಿಯಾನ

ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ (ರಿ.) ಬಜಗೋಳಿ ಇದರ ಆಶ್ರಯದಲ್ಲಿ ಬೀದಿನಾಯಿ ಮತ್ತು ಸಾಕುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಅಭಿಯಾನವನ್ನು ಜೂನ್ 2, ಆದಿತ್ಯವಾರದಂದು ಬೆಳಿಗ್ಗೆ 9.00ಗಂಟೆಯಿಂದ ಸಂಜೆ 4.00ಗಂಟೆಯವರೆಗೆ ಹಮ್ಮಿಕೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಸ್ಥಳ- ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಬಜಗೋಳಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ವೀರು ಬಜಗೋಳಿ- 9611944763

ಮೂಡಬಿದ್ರೆ: ಉಚಿತ ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರ

Article Image

ಮೂಡಬಿದ್ರೆ: ಉಚಿತ ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರ

ಮೂಡುಬಿದ್ರಿ ಕೋ-ಓಪರೇಟಿವ್ ಸರ್ವೀಸ್ ಸೊಸೈಟಿ ಲಿ. ಮೂಡಬಿದ್ರೆ ಮತ್ತು ಎಂ.ಸಿ. ಲಿಯೋಡ್ ಫಾರ್ಮಾ ಇವರ ಆಶ್ರಯದಲ್ಲಿ ‘ಉಚಿತ ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರ’ವನ್ನು 50 ವರ್ಷ ವಯಸ್ಸು ಮೀರಿದ ಬ್ಯಾಂಕಿನ ಸದಸ್ಯರಿಗಾಗಿ ಮೇ 26 ರಂದು ಭಾನುವಾರ ಪೂರ್ವಾಹ್ನ ಗಂಟೆ 9-30ರಿಂದ ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಅಗತ್ಯವಿರುವ ಸದಸ್ಯರಿಗೆ ಮೂಳೆ ರೋಗ ತಜ್ಞರಾದ ಡಾ| ಗುರುಪ್ರಸಾದ್ D.ortho, M.S. (Ortho) ಅವರಲ್ಲಿ ಸಲಹೆ, ಸೂಚನೆಗಳನ್ನು ಪಡೆಯುವ ಅವಕಾಶವಿದೆ. ಅರ್ಹ ವ್ಯಕ್ತಿಗಳಿಗೆ ಉಚಿತ ಔಷಧಿಯನ್ನು ನೀಡಲಾಗುವುದು. ಸೂಚನೆಗಳು: * ಕಾರ್ಯಕ್ರಮದ ಮೊದಲಿಗೆ 50 ವರ್ಷ ಪ್ರಾಯ ಮೀರಿದ ನಂತರ ಮೂಳೆ ಸವೆತವನ್ನು ತಡೆಯುವ ಕುರಿತು 10 ನಿಮಿಷಗಳ ಭಾಷಣ ಮತ್ತು ಪ್ರಶ್ನೋತ್ತರ ಕಾರ್ಯಕ್ರಮವಿದೆ. * ಈ ಸದಾವಕಾಶವು ಮೊದಲು ಬಂದ 100 ಮಂದಿ ಅರ್ಹ ಸದಸ್ಯರಿಗೆ ಮಾತ್ರ.

ಉಜಿರೆ: ರುಡ್‌ಸೆಟ್ ಉಚಿತ ತರಬೇತಿ

Article Image

ಉಜಿರೆ: ರುಡ್‌ಸೆಟ್ ಉಚಿತ ತರಬೇತಿ

ಬೆಳ್ತಂಗಡಿ: ಉಜಿರೆಯ ರುಡ್‌ಸೆಟ್‌ನಲ್ಲಿ ನಡೆಯಲಿರುವ ಉಚಿತ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್ ಡಿಟಿಪಿ ಮೇ 27 ರಿಂದ ಜು. 10ರ ವರೆಗೆ, ಮಹಿಳೆಯರ ವಸ್ತ್ರವಿನ್ಯಾಸ ಮೇ 30 ರಿಂದ ಜೂ. 28ರ ವರೆಗೆ, ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ಜೂ. 11ರಿಂದ ಜು. 10ರ ವರೆಗೆ, ಕಂಪ್ಯೂಟರ್ ಟ್ಯಾಲಿ (ಅಕೌಂಟಿಂಗ್) ಜು. 11ರಿಂದ ಆ. 9ರ ವರೆಗೆ ನಡೆಯಲಿವೆ. ಆಸಕ್ತ 18ರಿಂದ 45 ವರ್ಷ ವಯೋಮಿತಿಯ, ಕನ್ನಡ ಓದು-ಬರಹ ಬಲ್ಲ ಯುವಕ/ಯುವತಿಯರು ರುಡ್‌ಸೆಟ್ ಸಂಸ್ಥೆಯ emailujirerudsetigmail.comಗೆ ಸಲ್ಲಿಸಬಹುದು. ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್ ಸಂಖ್ಯೆ 6364561982ಗೆ ಸಲ್ಲಿಸಬಹುದು. ನೇರವಾಗಿಯೂ ಅರ್ಜಿ ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿ ಬರೆದು, ನಿರ್ದೇಶಕರು ರುಡ್‌ಸೆಟ್ ಸಂಸ್ಥೆ ಸಿದ್ದವನ ಉಜಿರೆ ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 08256-236404 ಸಂಪರ್ಕಿಸಬಹುದು. ಜತೆಗೆ https://forms.gle/Z2xPLE1FigamcMBd9 ಅರ್ಜಿ ಸಲ್ಲಿಸಲು ಅವಕಾಶ ಇದೆ.

First Previous

Showing 3 of 6 pages

Next Last