Article Image 1 Article Image 2

ಕೌನ್ಸಲಿಂಗ್ ಕುರಿತು ಸಕಾರಾತ್ಮಕತೆ ಮೂಡಲಿ : ಸೀತಾಲಕ್ಷ್ಮೀಕುಮಾರ್

Article Image

ಕೌನ್ಸಲಿಂಗ್ ಕುರಿತು ಸಕಾರಾತ್ಮಕತೆ ಮೂಡಲಿ : ಸೀತಾಲಕ್ಷ್ಮೀಕುಮಾರ್

ಉಜಿರೆ, ಸೆ.23: ಆಪ್ತ ಸಮಾಲೋಚನೆಯ ಕುರಿತು ತಪ್ಪು ಕಲ್ಪನೆಗಳನ್ನು ನಿವಾರಿಸಿ ಜನಸಮೂಹದಲ್ಲಿ ಸಕಾರಾತ್ಮಕ ಅಭಿಪ್ರಾಯಗಳನ್ನು ರೂಪಿಸಬೇಕಿದೆ ಎಂದು ಎಮೋಕೇರ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ, ಮನಃಶಾಸ್ತ್ರಜ್ಞ, ಕಾರ್ಪೋರೇಟ್ ಟ್ರೇನರ್ ಸೀತಾಲಕ್ಷ್ಮೀಕುಮಾರ್ ಅಭಿಪ್ರಾಯಪಟ್ಟರು. ಸೋಮವಾರ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗದ ಪೀಸ್ ಅಸೋಸಿಯೇಷನ್ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಆಪ್ತ ಸಮಾಲೋಚನೆ ಅಥವಾ ಕೌನ್ಸಲಿಂಗ್ ಎಂದ ತಕ್ಷಣ ಜನರಲ್ಲಿ ಭಯ ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ಆಪ್ತ ಸಮಾಲೋಚನೆಯನ್ನು ಜನರು ಇನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ. ಕೌನ್ಸಲಿಂಗ್ ಮಹತ್ವ ತಿಳಿಸಿ ಈ ಭಯವನ್ನು ಹೋಗಲಾಡಿಸಬೇಕು. ಆಪ್ತ ಸಮಾಲೋಚನೆಯ ಪರವಾದ ಮನಃಸ್ಥಿತಿಯನ್ನು ಮನಃಶಾಸ್ತ್ರ ವಿದ್ಯಾರ್ಥಿಗಳು ಸೃಷ್ಟಿಸಬೇಕು ಎಂದರು. ಮಾನಸಿಕ ಅಸ್ವಸ್ಥತೆಯಿಂದ ಬಳಲುವವರಿಗೆ ಭಾವನಾತ್ಮಕ ಸ್ಪಂದನೆಯ ಅಗತ್ಯವಿರುತ್ತದೆ. ಅವರ ಭಾವನೆಗಳಿಗೆ ಆದ್ಯತೆ ನೀಡಬೇಕು. ಭಾವನಾತ್ಮಕವಾಗಿ ಸ್ಪಂದಿಸಿ ಅವರನ್ನು ಮಾನಸಿಕ ಸಂದಿಗ್ಧತೆಯಿಂದ ಹೊರತರಬೇಕು. ಈ ಬಗೆಯ ಸ್ಪಂದನೆಯೊಂದಿಗೆ ಉತ್ತಮ ಕೇಳುಗರಾಗಿ ಅವರ ಸಮಸ್ಯೆ ಆಲಿಸಬೇಕು. ಹಾಗಾದಾಗ ಮಾತ್ರ ಅವರು ಆಂತರ್ಯದಲ್ಲಿ ಎದುರಿಸುತ್ತಿರುವ ಮಾನಸಿಕ ತೊಳಲಾಟಗಳಿಂದ ಮುಕ್ತವಾಗುವುದಕ್ಕೆ ಪರಿಹಾರ ಸೂಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಆಪ್ತ ಸಮಾಲೋಚನೆಯಿಂದ ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗುತ್ತದೆ. ವ್ಯಕ್ತಿ ತನ್ನ ಆಲೋಚನೆ ಮತ್ತು ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಆತಂಕ, ಖಿನ್ನತೆ ಮತ್ತು ಒತ್ತಡಗಳಿಂದ ಮುಕ್ತಿ ನೀಡುತ್ತದೆ. ಆಪ್ತ ಸಮಾಲೋಚಕರ ಮಾರ್ಗದರ್ಶನದ ಮೂಲಕ ವೈಯಕ್ತಿಕ ಅಭಿವೃದ್ಧಿ ಮತ್ತು ಸ್ವಜಾಗೃತಿ ಉಂಟಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪೀಸ್ ಅಸೋಸಿಯೇಷನ್‌ನ ಕಾರ್ಯದರ್ಶಿ ಡಾ.ಮಹೇಶ್ ಬಾಬು ಎನ್ ಉಪಸ್ಥಿತರಿದ್ದರು. ಜಿನಾ ಸ್ವಾಗತಿಸಿದರು. ನಿಶಾನ್ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಕೀರ್ತನಾ ಆನಂದ್ ಸಂಘದ ವಾರ್ಷಿಕ ವರದಿ ವಾಚಿಸಿದರು.

ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟ: ಸಮಾರೋಪ ಸಮಾರಂಭ

Article Image

ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟ: ಸಮಾರೋಪ ಸಮಾರಂಭ

ಉಜಿರೆ: ಭಜನಾ ಕಮ್ಮಟದಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕöÈತಿಯ ಅನಾವರಣವಾಗಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ 27ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಭಜನೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದು ದೃಢಭಕ್ತಿಯಿಂದ ಭಜನೆ ಮಾಡಿದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದರು. ಭಜನೆ ಮೂಲಕ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳನ್ನು ಸಾಧಿಸಬಹುದು. ಇಂದು "ಆನ್‌ಲೈನ್" ಚಿಂತೆ-ಚಿಂತನದಿಂದ "ಲೈಫ್‌ಲೈನ್" ಹಾಳಾಗುತ್ತಿದೆ ಎಂದು ಅವರು ವಿಷಾದಿಸಿದರು. ರಾಮಾಯಣ, ಮಹಾಭಾರತದ ಕಥೆಗಳಿಂದ ನಮ್ಮ ಸಾರ್ಥಕ ಬದುಕಿಗೆ ಮಾರ್ಗದರ್ಶನ ಸಿಗುತ್ತಿದೆ. ಭಜನಾ ಕಮ್ಮಟದ ಮೂಲಕ ಹೆಗ್ಗಡೆಯವರು ಹಿಂದೂ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಸ್ವಾಮೀಜಿ ಅಭಿನಂದಿಸಿದರು. ಭಜನೆಯಿಂದ ಸಾತ್ವಿಕ ಶಕ್ತಿ ಜಾಗೃತಗೊಂಡು ಭಯ, ದ್ವೇಷ ದೂರವಾಗಿ ಪ್ರೀತಿ-ವಿಶ್ವಾಸ ಮೂಡಿ ಬಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಂಸದ ಬ್ರಿಜೇಶ್ ಚೌಟ ಮಾತನಾಡಿ ಧರ್ಮ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಸನಾತನ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನದೊಂದಿಗೆ ಏಕತೆ ಮತ್ತು ಏಕಾಗ್ರತೆ ಸಾಧಿಸಲು ಭಜನೆ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ಶುಭಾಶಂಸನೆ ಮಾಡಿ, ಧರ್ಮಸ್ಥಳದಲ್ಲಿ ಶ್ರದ್ಧಾ-ಭಕ್ತಿಯ ಪವಿತ್ರ ವಾತಾವರಣ ನಮ್ಮ ಅನುಭವಕ್ಕೆ ಬರುತ್ತದೆ. ಪ್ರತಿಯೊಂದು ಮನೆಯಲ್ಲಿಯೂ ವಾರಕ್ಕೊಂದು ದಿನವಾದರೂ ಭಜನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಭಜನೆಯಿಂದ ಮನೆ, ಸಮಾಜ ಹಾಗೂ ಎಲ್ಲಾ ಕಡೆ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಕೂಡಾ ಭಜನೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಸಂತೋಷವಾಗಿದೆ. ಭಜನಾಪಟುಗಳು ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕುಂದಾಪುರದ ಕೃಷ್ಣ ಪೂಜಾರಿ ಮತ್ತು ನೆಲ್ಯಾಡಿಯ ಕುಮಾರಿ ಭವಿಷ್ಯ ಕಮ್ಮಟದ ಬಗ್ಯೆ ಅನಿಸಿಕೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರಪಡಿಸಿದರು. ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಚಂದ್ರಶೇಖರ ಸಾಲ್ಯಾನ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ಚೈತ್ರಾ ನಿರ್ದೇಶನದಲ್ಲಿ ನೃತ್ಯ ಭಜನೆ ಮತ್ತು ಕುಣಿತ ಭಜನೆ ವಿಶೇಷ ಗಮನ ಸೆಳೆಯಿತು.

ಆಳ್ವಾಸ್ : ಭಾರತೀಯ ಕರಾವಳಿ ರಕ್ಷಕ ಪಡೆ ಇನ್ಸ್ಪೆಕ್ಟರ್ ಜನರಲ್ ದಾಸೀಲರ ವಿಶೇಷ ಉಪನ್ಯಾಸ

Article Image

ಆಳ್ವಾಸ್ : ಭಾರತೀಯ ಕರಾವಳಿ ರಕ್ಷಕ ಪಡೆ ಇನ್ಸ್ಪೆಕ್ಟರ್ ಜನರಲ್ ದಾಸೀಲರ ವಿಶೇಷ ಉಪನ್ಯಾಸ

ಮೂಡುಬಿದಿರೆ: ಇಂದಿನ ಜಾಗತಿಕ ಯುಗದಲ್ಲಿ ವಿದ್ಯಾಭ್ಯಾಸದ ಉದ್ದೇಶ ಕೇವಲ ಉದ್ಯೋಗ ಪಡೆಯುವುದಲ್ಲ. ಸಮಾಜದಲ್ಲಿ ಬದಲಾವಣೆ ತರಲು, ಹೊಸ ಅವಕಾಶಗಳನ್ನು ಸೃಷ್ಟಿಸಲು, ಮತ್ತೊಬ್ಬರಿಗೆ ಜೀವನೋಪಾಯ ಕಲ್ಪಿಸಲು ನಾವು ಉದ್ಯೋಗದಾತರಾಗಬೇಕು ಎಂದು ಪುದುಚೇರಿಯ ಕರಾವಳಿ ರಕ್ಷಣಾ ಪಡೆಯ ಇನ್ಸ್ಪೆಕ್ಟರ್ ಜನರಲ್ ಸುರೇಂದ್ರಸಿಂಗ್ ದಾಸೀಲರು ನುಡಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉದ್ಯೋಗವನ್ನು ಮಾತ್ರ ಕನಸು ಕಾಣದೆ, ಸಮಾಜಕ್ಕೆ ಹೊಸ ಉದ್ಯೋಗಾವಕಾಶಗಳನ್ನು ನೀಡಬಲ್ಲ ನಾಯಕರಾಗಿ ರೂಪುಗೊಳ್ಳಬೇಕು. ನಾಯಕತ್ವದ ನಿಜವಾದ ಅರ್ಥವು ಸಂಕಷ್ಟದ ಸಂದರ್ಭಗಳಲ್ಲಿ ಸಹಾನುಭೂತಿಯೊಂದಿಗೆ ನಡೆದುಕೊಳ್ಳುವುದರಲ್ಲಿ ಅಡಗಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ಸದಾ ಆತ್ಮವಿಶ್ವಾಸದಿಂದಿರಬೇಕು. ತಮಗೆ ತಾವೇ ಪ್ರೋತ್ಸಾಹ ನೀಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಕೀಳರಿಮೆ ಬೆಳೆಸದೆ, ತಮ್ಮ ಬೆನ್ನನ್ನು ತಾವೇ ತಟ್ಟುತ್ತಾ ಮುಂದೆ ಸಾಗುವುದು ಸಾಧನೆಯ ರಹಸ್ಯವಾಗಿದೆ. ಮಾನಸಿಕ, ದೈಹಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಆರ್ಥಿಕ ಆರೋಗ್ಯಗಳ ಕಡೆಗೆ ಪ್ರಾಮುಖ್ಯತೆಯನ್ನು ನೀಡಿ. ವಿದ್ಯಾರ್ಥಿ ಜೀವನವೇ ವ್ಯಕ್ತಿತ್ವ ನಿರ್ಮಾಣದ ಅವಧಿ. ಈ ಹಂತದಲ್ಲಿ ನೈತಿಕ ಮೌಲ್ಯಗಳು, ದೇಶಭಕ್ತಿ, ಶಿಸ್ತು, ಸಮಯಪಾಲನೆ ಮತ್ತು ಸಮಾಜಮುಖಿ ಮನೋಭಾವವನ್ನು ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ನೀವು ಯಾವ ಕ್ಷೇತ್ರಕ್ಕೂ ಹೋದರೂ ಸಾಧನೆ ಖಚಿತ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಅದ್ಯಕ್ಷತೆವಹಿಸಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ ಪ್ರಾಚರ‍್ಯ ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿಎನ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಬಿತಾ ಮೋನಿಸ್ ಇದ್ದರು.

ಭಜನೆಗಳು ಜೀವನ ಶಿಕ್ಷಣ ಕಲಿಸುತ್ತವೆ

Article Image

ಭಜನೆಗಳು ಜೀವನ ಶಿಕ್ಷಣ ಕಲಿಸುತ್ತವೆ

ಉಜಿರೆ: ಜೀವನ ಶಿಕ್ಷಣವನ್ನು ಕಲಿಸುವ ಭಜನೆಗಳು ಸಾರ್ಥಕ ಬದುಕಿಗೆ ದಾರಿದೀಪವಾಗಿವೆ. ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಭಜನಾ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟದಲ್ಲಿ "ಭಜನಾ ಸಂಸ್ಕೃತಿ ಬೆಳೆಸುವಲ್ಲಿ ಭಜನಾ ಮಂಡಳಿಗಳ ಪಾತ್ರ’’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಪ್ರತಿಯೊಬ್ಬ ಭಜಕನೂ ಒಂದು ಆಲಯವಿದ್ದಂತೆ ಎಂದು ಹೇಳಿದ ಅವರು ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಭಜಕರೆಲ್ಲರೂ ಭಜನಾ ಸಂಸ್ಕೃತಿಯ ಮೂಲಕ ಆಧ್ಯಾತ್ಮಿಕ ವಿಚಾರಧಾರೆಗಳನ್ನು ಪಸರಿಸುವ ರಾಯಬಾರಿಗಳಾಗಬೇಕು. ಮಕ್ಕಳಿಗೂ ಭಜನೆ ಕಲಿಸುವ ಮೂಲಕ ಅವರನ್ನು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ್ ಸಾಲ್ಯಾನ್ ಗೌರವ ಉಪಸ್ಥಿತಿ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಅಮ್ಮ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ತಿತರಿದ್ದರು. ಶ್ರೀಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸ್ರೂರು, ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಶ್ರೀಜಾ ಯೋಗೀಶ್ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಸಮಾರೋಪ ಸಮಾರಂಭ

Article Image

ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಸಮಾರೋಪ ಸಮಾರಂಭ

ಉಜಿರೆ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಜುಲೈ 16 ರಿಂದ ಸೆ. 16ರ ವರೆಗೆ ಎರಡು ತಿಂಗಳ ಕಾಲ ಪ್ರತಿದಿನ ಸಂಜೆ ಗಂಟೆ 6.30 ರಿಂದ 8ರ ವರೆಗೆ ನಡೆದ 54 ನೇ ವರ್ಷದ ಪುರಾಣ ವಾಚನ-ಪ್ರವಚನದಲ್ಲಿ ಭಾಗವಹಿಸಿದ ವಿದ್ವಾಂಸರು ಹಾಗೂ ಕಲಾವಿದರನ್ನು ಸಮಾರೋಪ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗೌರವಿಸಿ, ಅಭಿನಂದಿಸಿದರು.

27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರ

Article Image

27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರ

ಧರ್ಮಸ್ಥಳ, ಸೆ.19: ಮಾನವರನ್ನು ಮೆಚ್ಚಿಸುವುದಕ್ಕಿಂತ ಭಗವಂತನನ್ನು ಮೆಚ್ಚಿಸುವುದು ಮುಖ್ಯ ಎಂದು ಉಡುಪಿಯ ಸೂಡ ಮೂಲದ ವಕೀಲೆ ಸಹನಾ ಕುಂದರ್ ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರದಲ್ಲಿ 'ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ' ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಸಾಮಾಜಿಕ ಸಾಮರಸ್ಯ ಮೂಡಿಸುವುದಕ್ಕೆ ಬಹಳ ಮುಖ್ಯ ಮೂಲವೇ ಭಜನೆ. ಆಡಂಬರವಿಲ್ಲದ ಭಗವಂತ ಮಂಜುನಾಥ ಪ್ರತಿಯೊಬ್ಬರ ಪ್ರಾರ್ಥನೆಗೂ ಒಲಿಯುತ್ತಾನೆ ಹಾಗಾಗಿ ಉತ್ತಮ ಮನಸ್ಸಿಂದ ಬೇಡಿಕೊಳ್ಳುವುದು ಮುಖ್ಯ. ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಸಜ್ಜನರು ಮತ್ತು ಭಗವಂತನೂ ಒಲಿಯುತ್ತಾನೆ ಎಂದು ಹೇಳಿದರು. ಮಾನವರು ಜೀವನದಲ್ಲಿ ಎಡವುದು ಸಹಜ ಆದರೆ ಮತ್ತೆ ಅದೇ ಸ್ಥಳದಲ್ಲಿ ಎದ್ದು ನಿಂತು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು ಉತ್ತಮ. ಇಂದಿನ ಪೀಳಿಗೆಗೆ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಅತ್ಯಗತ್ಯ. ಅದನ್ನು ಪರಿಪೂರ್ಣಗೊಳಿಸುವ ಹೊಣೆಗಾರಿಕೆ ಪೋಷಕರದ್ದು ಹಾಗಾಗಿ ಭಜಕರು ಕಮ್ಮಟಗಳಲ್ಲಿ ದೊರೆತ ವಿಚಾರಧಾರೆಗಳನ್ನು ಮಕ್ಕಳಿಗೆ ನೀಡಬೇಕಿದೆ. ಬದುಕು ಬದಲಾಯಿಸಬಲ್ಲ ಧೀಮಂತ ಶಕ್ತಿಯಾದ ಭಜನೆಯ ಆಸಕ್ತಿಯನ್ನು ಯುವ ಮನಸ್ಸುಗಳಲ್ಲಿ ಬಿತ್ತಬೇಕಿದೆ ಎಂದು ಅಭಿಪ್ರಾಯಪಟ್ಟರು. ಭಜನೆ ಎಂಬುದು ನಿತ್ಯ, ನಿರಂತರ, ನೂತನವಾಗಬೇಕು. ಇಂದು ವಿದ್ಯಾವಂತ ಮತ್ತು ವಿಚಾರವಂತರಾದ ನಾವು ಆಚಾರವಂತರಾಗಬೇಕಿದೆ. ಅದಕ್ಕಾಗಿ ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕೇನು ನೀಡಿದ್ದೇವೆ ಎಂಬುದು ಮುಖ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಉಪಾಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಮನೆ ಮನಗಳಿಗೆ ಸಂಸ್ಕಾರ ನೀಡುವ ಸಾಧನ ಮತ್ತು ವೇದ ಪುರಾಣ ಹಾಗೂ ಉಪನಿಷತ್ತುಗಳ ಸಾರವೇ ಭಜನೆ ಎಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಗೌರವ ಉಪಸ್ಥಿತಿ ವಹಿಸಿ ಮಾತನಾಡಿದರು. ಶ್ರೀ ಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸ್ರೂರು, ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳ: ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಜಕರಿಗೆ ಶುಭಕೋರಿದರು

Article Image

ಧರ್ಮಸ್ಥಳ: ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಜಕರಿಗೆ ಶುಭಕೋರಿದರು

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರಕ್ಕೆ ಪೂಜ್ಯ ಹೆಗ್ಗಡೆಯವರು ಭೇಟಿ ನೀಡಿ ಭಜನೆ ಮಾಡುವ ಮುನ್ನ ಮಾನಸಿಕ ತಯಾರಿ ಮತ್ತು ದೈಹಿಕ ಸದೃಢತೆ ಮುಖ್ಯ. ಏಕಾಗ್ರತೆ ಮತ್ತು ಚಿತ್ತ ಮನಸ್ಸಿನಿಂದ ಭಜನೆ ಅಭ್ಯಾಸ ಮಾಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ಭಜಕರಿಗೆ ಶುಭಕೋರಿದರು. ಡಾ. ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದು ಭಜಕರಿಗೆ ಶುಭ ಹಾರೈಸಿದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸ್ರೂರು, ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

ಭಜನೆಯಿಂದ ಸಾಮಾಜಿಕ ಸಾಮರಸ್ಯ: ಪ್ರೊ. ಶುಭಾ ಮರವಂತೆ

Article Image

ಭಜನೆಯಿಂದ ಸಾಮಾಜಿಕ ಸಾಮರಸ್ಯ: ಪ್ರೊ. ಶುಭಾ ಮರವಂತೆ

ಉಜಿರೆ: ಭಜನೆಯಿಂದ ಸಮಾಜದ ಸಂಘಟನೆಯೊಂದಿಗೆ ಸಾಮಾಜಿಕ ಸಾಮರಸ್ಯ ಮೂಡಿ ಬರುತ್ತದೆ ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಶುಭಾ ಮರವಂತೆ ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟದಲ್ಲಿ “ದೈನಂದಿನ ಜೀವನದಲ್ಲಿ ಭಜನೆಯ ಮಹತ್ವ”ದ ಬಗ್ಗೆ ಉಪನ್ಯಾಸ ನೀಡಿದರು. “ಭಜನೆ” ಪದದಲ್ಲಿ “ಭ” ಅಂದರೆ ಭಗವಂತ, “ಜ” ಎಂದರೆ ಜನ್ಮಾಂತರಗಳ ಪಾಪನಾಶ ಹಾಗೂ “ನೆ” ಅಂದರೆ ಭಗವಂತನಲ್ಲಿ ನೆಲೆಯಾಗುವುದು ಎಂದು ಅರ್ಥ. ಶ್ರದ್ಧಾ-ಭಕ್ತಿಯಿಂದ ಭಗವಂತನಿಗೆ ಸಂಪೂರ್ಣ ಶರಣಾದರೆ ಮನಸ್ಸು ಮತ್ತು ದೇಹ ಹಗುರವಾಗುತ್ತದೆ. ಭಜನಾ ಕಮ್ಮಟದ ಮೂಲಕ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಮಾಡುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಅವರು ಹೇಳಿ ಅಭಿನಂದಿಸಿದರು. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಉಪಸ್ಥಿತರಿದ್ದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇದ್ದರು. ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ಎನ್. ಕಾರ್ಯಕ್ರಮ ನಿರ್ವಹಿಸಿದರು.

ಮೂಲಭೂತ ವಿಜ್ಞಾನವನ್ನು ಕಡೆಗಣಿಸದಿರಿ : ಡಾ. ಸತೀಶ್ಚಂದ್ರ ಎಸ್

Article Image

ಮೂಲಭೂತ ವಿಜ್ಞಾನವನ್ನು ಕಡೆಗಣಿಸದಿರಿ : ಡಾ. ಸತೀಶ್ಚಂದ್ರ ಎಸ್

ನಾವು ಬಳಸುವ ಎಲ್ಲಾ ಪ್ರಮುಖ ತಂತ್ರಜ್ಞಾನಗಳ ಹಿಂದೆ ಮೂಲಭೂತ ವಿಜ್ಞಾನವಿದೆ.ಮೂಲಭೂತ ವಿಜ್ಞಾನದ ಜ್ಞಾನವಿಲ್ಲದೆ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುವುದು ಅಸಾಧ್ಯ, ಹಾಗಾಗಿ ಮೂಲಭೂತ ವಿಜ್ಞಾನವನ್ನು ಕಡೆಗಣಿಸದಿರಿ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆಯ ಶ್ರೀ ಧ.ಮಂ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಭಾಗಿತ್ವದಲ್ಲಿ, ಕ್ವಾಂಟಮ್ ವಿಜ್ಞಾನದ ಅಂತರಾಷ್ಟ್ರೀಯ ವರ್ಷಾಚರಣೆ ಪ್ರಯುಕ್ತ ಸೆ.17 ರಂದು ಆಯೋಜಿಸಿದ್ದ "ಮಾಲಿಕ್ಯೂಲರ್ ರಹಸ್ಯಗಳು ಮತ್ತು ಕ್ವಾಂಟಮ್ ರಹಸ್ಯಗಳು" ಎಂಬ ವಿಷಯದ ಕುರಿತ ಒಂದು ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಸಾಯನ ಶಾಸ್ತ್ರ, ಭೌತ ಶಾಸ್ತ್ರ, ಗಣಿತಶಾಸ್ತ್ರ ಮುಂತಾದವುಗಳನ್ನು ಒಳಗೊಂಡ ಮೂಲಭೂತ ವಿಜ್ಞಾನದ ಕಲಿಕೆ ಅತ್ಯಗತ್ಯ. ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ವಿಷಯಗಳನ್ನು ಅಭ್ಯಾಸಿಸದೆ ವಿಜ್ಞಾನದ ಮೇಲೆ ವಿಶೇಷ ಆಸಕ್ತಿಯನ್ನು ಬೆಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಕ್ವಾಂಟಮ್ ವಿಜ್ಞಾನದ ಕೊಡುಗೆ ಅಪಾರ. ಕ್ವಾಂಟಮ್ ಕಂಪ್ಯೂಟಿಂಗ್ ನಂತಹ ತಂತ್ರಜ್ಞಾನಗಳು ಹೆಚ್ಚು ಪ್ರಚಲಿತವಾಗಿತ್ತಿರುವ ಈ ಕಾಲದಲ್ಲಿ ಅವುಗಳನ್ನು ಕಲಿಯುವ ಅನಿವಾರ್ಯತೆಯಿದೆ. ಅಂದಿನಿಂದ ಇಂದಿನಿವರೆಗೆ ವಿಜ್ಞಾನಿಗಳು ಮಾಡಿರುವ ಅನ್ವೇಷಣೆ, ಪ್ರಯೋಗಳೆಲ್ಲವೂ ಕೂಡ ಸಮಾಜದ ಅಭಿವೃದ್ಧಿಯ ದೃಷ್ಟಿಕೋನವನ್ನೇ ಹೊಂದಿದೆ.ಸಮಾಜದ ಉನ್ನತ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರ ಎಂದರು. ಬೆಂಗಳೂರಿನ ಪಿ.ಇ.ಎಸ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಹುಲ್ ಎಸ್. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕ್ವಾಂಟಮ್ ಕಂಪ್ಯೂಟಿಂಗ್ ನ ವಿಭಾಗಗಳು ಪ್ರಸ್ತುತ ಕಾಲದ ಉದ್ಯಮಗಳಲ್ಲಿ ಸಿಂಹಪಾಲು ಪಡೆದಿದೆ. ಕ್ವಾಂಟಮ್ ವಿಜ್ಞಾನವನ್ನು ಅರ್ಥೈಸಿಕೊಳ್ಳಲು ಮೂಲಭೂತ ವಿಜ್ಞಾನವನ್ನ ಅರ್ಥೈಸಿಕೊಳ್ಳುವುದು ಬಿಟ್ಟರೆ ಬೇರೆ ಪ್ರತ್ಯೇಕ ದಾರಿಗಳಿಲ್ಲ. ಕ್ವಾಂಟಮ್ ವಿಜ್ಞಾನ ಕ್ಷೇತ್ರದಲ್ಲಿ ಹಿರಿಯ ವಿಜ್ಞಾನಿಗಳು ಹಾಸಿಕೊಟ್ಟಿರುವ ದಾರಿಯಲ್ಲಿ ಇಂದು ನಾವುಗಳು ಮುನ್ನಡೆಯುತ್ತಿದ್ದೇವೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ್. ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ನಾವುಗಳು ಇಂದು ಅನುಭವಿಸುವ ಆಧುನಿಕ ತಂತ್ರಜ್ಞಾನಗಳು ಲಭ್ಯವಿರಲಿಲ್ಲ. ನಾವುಗಳು ಅನುಭವಿಸುವ ಎಲ್ಲಾ ಸೌಕರ್ಯಗಳು ಕೂಡ ವಿಜ್ಞಾನದ ಕೊಡುಗೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಉನ್ನತ ಶಿಕ್ಷಣದ ನಂತರ ವಿದ್ಯಾರ್ಥಿಗಳು ಸಂಶೋಧನೆಯ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ನೀಲಕಂಠನ್ ವಿ.ಕೆ ಮತ್ತು ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಉಪ ಪ್ರಾಂಶುಪಾಲೆ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ ಕೆ.ಪಿ ಸ್ವಾಗತಿಸಿ, ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವ್ಯಾ ವಂದಿಸಿದರು. ವಿದ್ಯಾರ್ಥಿನಿಯರಾದ ಅಪೂರ್ವ ಮತ್ತು ಬಳಗದವರು ಪ್ರಾರ್ಥಿಸಿದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಅನ್ವಿಟಾ ಸೇರಾ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳ ಭೂಲೋಕದ ಸ್ವರ್ಗ: ವಿವೇಕ್ ವಿ. ಪ್ಯಾಸ್

Article Image

ಧರ್ಮಸ್ಥಳ ಭೂಲೋಕದ ಸ್ವರ್ಗ: ವಿವೇಕ್ ವಿ. ಪ್ಯಾಸ್

ಧರ್ಮಸ್ಥಳ, ಸೆ.17: ಭಜನಾ ತರಬೇತಿ ಎಂಬುದು ಒಂದು ರೀತಿಯ ದೀಕ್ಷೆ ಎಂದು ಬೆಳ್ತಂಗಡಿಯ ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪ್ಯಾಸ್ ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 4ನೇ ದಿನದ ಕಾರ್ಯಾಗಾರದಲ್ಲಿ 'ಆರೋಗ್ಯಕರ ಅಭ್ಯಾಸಗಳು ಜನಜಾಗೃತಿ ಚಲನಚಿತ್ರ ಪ್ರದರ್ಶನ' ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಬದುಕಿನ ಬದಲಾವಣೆಗೆ ಅವಕಾಶ ಮಾಡಿಕೊಡಬಲ್ಲ ಶಕ್ತಿ ಈ ಭಜನಾ ಕಮ್ಮಟಕ್ಕಿದೆ ಹಾಗಾಗಿ ಈ ಮಹೋತ್ಸವ ಸಭಾಭವನವು ಇಂದು ಅಧಿಕೃತ ಶಾಲೆಯಾಗಿ ಮಾರ್ಪಾಡುಗೊಂಡು ಭಜಕರಿಗೆ ಬದುಕಿನ ಪಾಠವನ್ನು ಕಲಿಸುತ್ತಿದೆ. ಸಂಸ್ಕೃತಿ ಸಂಸ್ಕಾರದ ಬಿತ್ತನೆಗೆ ಇದೊಂದು ಉತ್ತಮ ಬುನಾದಿ ಎಂದು ಹೇಳಿದರು. ಆರೋಗ್ಯಕರ ದೇಹವೆಂಬುದು ಆತ್ಮದ ಅರಮನೆ ಇದ್ದಂತೆ ಅದನ್ನು ಸಮತೋಲನದಲ್ಲಿ ಇರಿಸಲು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ರಚನಾತ್ಮಕವಾಗಿರಿಸಬೇಕು. ನಮ್ಮ ಆಹಾರದ ಗುಣಗಳು ಬದಲಾದಂತೆ ವರ್ತನೆಗಳು ಅದರ ಮೇಲೆ ಅವಲಂಬಿತಗೊಂಡಿರುತ್ತವೆ, ಆಹಾರದಿಂದ ನಮ್ಮ ಗುಣ ನಿರ್ಧರಿತವಾಗುತ್ತದೆ. ಪ್ರಾಣಿ ಪಕ್ಷಿಗಳು ತಮಗೆ ಬೇಕಾದ ಆಹಾರವನ್ನಲ್ಲದೆ ಬೇರೆ ಯಾವುದನ್ನೂ ಅವು ಸೇವಿಸುವುದಿಲ್ಲ ಅಂತೆಯೇ ನಮ್ಮ ದೇಹಕ್ಕೆ ಪೂರಕವಾದ ಆಹಾರವನ್ನು ಮಾತ್ರ ನಾವು ಸೇವಿಸಬೇಕು, ಅದಲ್ಲದೇ ಯಾವುದೇ ರೀತಿಯ ವ್ಯಸನಗಳಿಗೆ ಬಲಿಯಾಗಿ ಮಾನವ ಜೀವನದ ಮಹತ್ವವನ್ನು ಕಳೆದುಕೊಳ್ಳಬಾರದೆಂದು ಅಭಿಪ್ರಾಯಪಟ್ಟರು. ನಮ್ಮನ್ನು ಡ್ರಿಂಕ್ಸ್, ಡೈನ್, ಡೈ, ಮತ್ತು ಡ್ಯಾನ್ಸ್ ಎಂಬ 4ಡಿಗಳು ಅತಿಯಾಗಿ ಆಕರ್ಷಿಸುತ್ತಿದೆ. ಅದರಿಂದ ನಾವಿಂದು ತಿಂದು, ಕುಡಿದು, ಸಾಯುತ್ತಿದ್ದೇವೆ, ಅಲ್ಲದೇ ಬದುಕನ್ನು ಬದುಕುವಲ್ಲಿ ಸೋಲುತ್ತಿದ್ದೇವೆ. ಸರ್ಪಗಳ ಹೆಡೆಯಲ್ಲಿ ವಿಷವಿದ್ದರೆ, ವ್ಯಸನಿಗಳ ದೇಹವೇ ವಿಷಪೂರಿತಗೊಂಡು ತಮ್ಮ ದೇಹವನ್ನು ತಾವೇ ಕ್ಷೀಣಿಸಿಕೊಳ್ಳುವಂತೆ ಮಾಡುತ್ತಿದೆ. ಹಾಗಾಗಿ ಇಂದು ನಮ್ಮ ದುರಾದೃಷ್ಟಕ್ಕೆ ಭಾರತ ವಿಶ್ವದಲ್ಲಿ ಮದ್ಯಪಾನ ಸೇವನೆಯಲ್ಲಿ ಪ್ರಥಮ ಸ್ಥಾನ, ಧೂಮಪಾನ ವ್ಯಸನದಲ್ಲಿ ಎರಡನೇ ಸ್ಥಾನ, ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ. ಇದರ ಬದಲಾವಣೆ ಮಾಡಲು ಶ್ರೀ ಕ್ಷೇತ್ರ ಹಲವು ಪುಣ್ಯ ಕಾರ್ಯಗಳನ್ನು ಮಾಡುತ್ತಾ ಯಶಸ್ಸನ್ನು ಕಾಣುತ್ತಿದೆ. ಅಲ್ಲದೆ ಹಲವರ ಬದುಕನ್ನು ಕಟ್ಟಿಕೊಟ್ಟು ಭೂಲೋಕದ ಸ್ವರ್ಗ ಎಂದೆನಿಸಿಕೊಂಡಿದೆ ಎಂದು ನುಡಿದರು. ಶರೀರವೆಂಬುದು ಕಾರ್ಖಾನೆ ಇದ್ದಂತೆ ನಾವೇನು ಕ್ರಿಯೆಗಳನ್ನು ಸೂಚಿಸುತ್ತೇವೋ ಅದು ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುತ್ತದೆ. ಬದುಕು ಬಂಗಾರವಾಗಲು ಬಣ್ಣ,ಅಂದ - ಚೆಂದ, ಹಣ, ಜಾತಿ ಯಾವುದು ಮುಖ್ಯವಲ್ಲ ಬುದ್ಧಿವಂತಿಕೆಯಿಂದ ಮಾತ್ರ ಸಾಧ್ಯ. ಆ ಬುದ್ಧಿವಂತಿಕೆ ಬಳಸಿ ಬದುಕಿನ ಸವಾಲುಗಳನ್ನು ಎದುರಿಸಿ ಬದುಕಲು ಆಧ್ಯಾತ್ಮಿಕ ಕಾರ್ಯಗಳು ದಾರಿದೀಪವಾಗುತ್ತದೆ ಎಂದರು.

ಗಾಯಕಿ ಅರ್ಚನಾ ಉಡುಪರವರನ್ನು ಸನ್ಮಾನಿಸಿದ ಹೇಮಾವತಿ ವಿ. ಹೆಗ್ಗಡೆಯವರು

Article Image

ಗಾಯಕಿ ಅರ್ಚನಾ ಉಡುಪರವರನ್ನು ಸನ್ಮಾನಿಸಿದ ಹೇಮಾವತಿ ವಿ. ಹೆಗ್ಗಡೆಯವರು

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದಲ್ಲಿ ಶಿಬಿರಾರ್ಥಿಗಳಿಗೆ ಭಜನೆ ಹಾಡುವ ತರಬೇತಿ ನೀಡಿದ ಗಾಯಕಿ ಅರ್ಚನಾ ಉಡುಪರವರನ್ನು ಹೇಮಾವತಿ ವಿ. ಹೆಗ್ಗಡೆಯವರು ಸನ್ಮಾನಿಸಿ ಅಭಿನಂದಿಸಿದರು. ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಸ್ವಾಮೀಜಿಯವರು, ಸೋನಿಯಾವರ್ಮ, ಭಜನಾ ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕ ನಿಶಾಂತ್ ಕಾರ್ಯಕ್ರಮನಿರ್ವಹಿಸಿದರು.

ಯೋಗ್ಯತೆ ಬರುವುದು ವಯಸ್ಸಿನಿಂದ ಅಲ್ಲ ಸಂಸ್ಕಾರದಿಂದ: ಉಜಿರೆ ಅಶೋಕ್ ಭಟ್

Article Image

ಯೋಗ್ಯತೆ ಬರುವುದು ವಯಸ್ಸಿನಿಂದ ಅಲ್ಲ ಸಂಸ್ಕಾರದಿಂದ: ಉಜಿರೆ ಅಶೋಕ್ ಭಟ್

ಧರ್ಮಸ್ಥಳ, ಸೆ.16,: ಸಂಸ್ಕಾರವೆಂಬುದು ಶಿಶುವಿಗೆ ಗರ್ಭಾಂಕುರದಿಂದ ಆರಂಭವಾಗುತ್ತದೆ ಎಂದು ಉಜಿರೆಯ ಧಾರ್ಮಿಕ ವಿದ್ವಾಂಸ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 3ನೇ ದಿನದ ಕಾರ್ಯಾಗಾರದಲ್ಲಿ 'ಯುವಕರಲ್ಲಿ ಸಂಸ್ಕಾರ ಸಂಸ್ಕೃತಿ ಅರಿವು' ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಸಂಸ್ಕಾರವೆಂಬುದು ನಾವು ಭೂಸ್ಪರ್ಶವಾಗುವ ಮುನ್ನವೇ ಆರಂಭವಾಗುತ್ತದೆ. ಗರ್ಭದಲ್ಲಿನ ಕಲಿಕೆ ಅಕ್ಷರಾಭ್ಯಾಸದ ಜೊತೆ ಮುಂದುವರಿದು ಕುಟುಂಬ ಸಂಸ್ಕಾರದ ಜೊತೆ ಬೆರೆತು ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗುತ್ತದೆ. ನಾವು ಸೇವಿಸುವ ಆಹಾರ, ಪಾನೀಯ, ಧರಿಸುವ ವಸ್ತ್ರದಿಂದ ಸಂಸ್ಕಾರವೆಂಬುದು ಆರಂಭವಾಗಿ ಕೌಟುಂಬಿಕ ಪ್ರಜ್ಞೆ ಮತ್ತು ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗುತ್ತದೆ. ವ್ಯಕ್ತಿಯಿಂದ ಕುಟುಂಬ, ಕುಟುಂಬದಿಂದ ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ಸಂಸ್ಕಾರದ ಪಾತ್ರ ಮಹತ್ತರವಾದುದು ಎಂದು ಹೇಳಿದರು. ಯುವಕರಲ್ಲಿ ಅಧ್ಯಾತ್ಮಿಕ, ಭೌತಿಕ ಮತ್ತು ಧಾರ್ಮಿಕ ಚಿಂತನೆಗಳು ಮುಖ್ಯ. ಇವೆಲ್ಲದರ ಬೆಳವಣಿಗೆಯ ಮೊದಲ ಹೆಜ್ಜೆಯು ನಮ್ಮ ಮನೆಯಂಗಳದಲ್ಲಿ ಆರಂಭವಾಗಬೇಕು. 'ವಸುದೈವ ಕುಟುಂಬಕಂ' ಪರಿಕಲ್ಪನೆಯು ಪರಿಪೂರ್ಣವಾಗಲು ಯುವ ಮನಸ್ಸುಗಳನ್ನು ಸದೃಢಗೊಳಿಸುವಲ್ಲಿ ಭಜನೆ, ಹಬ್ಬ,ಆಚರಣೆ, ನಂಬಿಕೆ ಮತ್ತು ಕಲಿಕೆ ಅನುಷ್ಠಾನವಾದಾಗ ಮಾತ್ರ ಸಾಧ್ಯ. ಅಲ್ಲದೆ ಇಂದಿನ ಪೀಳಿಗೆಗಳಲ್ಲಿ ಗುಣ, ಶೀಲ, ನಡತೆ ಹಾಗೂ ಸನ್ನಡತೆಯನ್ನು ಜಾಗೃತಗೊಳಿಸಿ ಸಂಸ್ಕಾರದ ಜ್ಯೋತಿ ಬೆಳಗಬೇಕಿದೆ ಎಂದರು. ಸಂಸ್ಕಾರವೆಂಬುದು ಕಲೆ, ಯೋಗ, ಬಾಂಧವ್ಯ, ಶಿಕ್ಷಣ, ವ್ಯಕ್ತಿತ್ವ ಎಲ್ಲದರ ಮಿಶ್ರಣ. ಕಲೆ ಬದುಕನ್ನು ಕಟ್ಟಲು ಕಲಿಸುತ್ತದೆ. ಮಕ್ಕಳನ್ನು ಬೆಳೆಸುವುದು ಒಂದು ಕಲೆ, ಆ ಕಲೆಗೆ ರೂಪ ನೀಡುವುದೇ ಸಂಸ್ಕಾರ. ಮನೆಯ ಹಬ್ಬದಿಂದ ಹಿಡಿದು ಊರಿನ ಜಾತ್ರೆಗಳಿಗೂ ಮಕ್ಕಳನ್ನು ಕರೆದೊಯ್ದು ಸಂತೆ ತಿರುಗಿಸದೆ ಗರ್ಭಗುಡಿಗೆ ಪ್ರದಕ್ಷಿಣೆ ಹಾಕಿಸಿ ಸಂತರನ್ನಾಗಿ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ. ಕುಟುಂಬವೆಂಬ ಪರಿಕಲ್ಪನೆ ಬಹಳ ಮೌಲ್ಯಯುತವಾದುದು, ಪ್ರಪಂಚದಲ್ಲಿ ಕುಟುಂಬದ ಪರಿಕಲ್ಪನೆ ಭಾರತವನ್ನು ಮಹತ್ತರದ ಸ್ಥಾನಕ್ಕೆ ಕೊಂಡೊಯ್ದಿದೆ. ಈ ಪರಿಕಲ್ಪನೆಯ ಮೂಲವೇ ಅವಲಂಬನೆ, ಕೌಟುಂಬಿಕ ಅವಲಂಬನೆಯಿಂದ ಸಂಸ್ಕಾರದ ಬೆಳವಣಿಗೆಯಾಗುತ್ತದೆ. ಅದರ ಬೆಳವಣಿಗೆಗೆ ನಮ್ಮ ಹಬ್ಬ, ಶಾಸ್ತ್ರೀಯ ಕಲೆಗಳ ಮೂಲಗಳನ್ನು ಕೆಡಿಸದೆ ಮುಂದಿನ ಪೀಳಿಗೆಗೆ ನೀಡಬೇಕಿದೆ ಎಂದರು. ಸಮಾಜದ ಪರಿವರ್ತನೆಯ ಬೃಹತ್ ಕಲ್ಪನೆ ಖಾವಂದರದ್ದು, ಇಂದಿನ ಭಾರತೀಯ ಜ್ಞಾನ ಪರಂಪರೆ, ಆತ್ಮನಿರ್ಭರ ಭಾರತ, ಸ್ವದೇಶಿ ಪ್ರಜ್ಞೆ, ರಾಷ್ಟ್ರೀಯ ಶಿಕ್ಷಣ ನೀತಿ, ಕೌಟುಂಬಿಕ ಪ್ರಜ್ಞೆ ಇಂತಹ ವಿವಿಧ ರಚನಾತ್ಮಕ ಕಾರ್ಯಗಳು ಹಲವು ವರುಷಗಳ ಹಿಂದೆಯೇ ಅವರಿಂದ ಅನುಷ್ಠಾನಕ್ಕೆ ಬಂದಿದೆ. ನನ್ನ ಪ್ರಕಾರ ಖಾವಂದರು ಆಧ್ಯಾತ್ಮಿಕ ಲೋಕದ ಪ್ರಧಾನಿ ಎಂದು ಪ್ರಶಂಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಭಜನಾ ಕಮ್ಮಟಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಕಣಿಯೂರಿನ ಮಾರುತಿಪುರದ ರೈತಬಂಧು ಮಾಲಕ ಶಿವಶಂಕರ್ ನಾಯಕ್, ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು. ಪೂರ್ಣಿಮಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಖ್ಯಾತ ಗಾಯಕಿ ಬೆಂಗಳೂರಿನ ಅರ್ಚನಾ ಉಡುಪ ಶಿಬಿರಾರ್ಥಿಗಳಿಗೆ ಭಜನೆ ಹಾಡುವ ಬಗ್ಗೆ ತರಬೇತಿ ನೀಡಿದರು.

ಸೆ. 22 ರಿಂದ ಅಕ್ಟೋಬರ್ 1 : ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Article Image

ಸೆ. 22 ರಿಂದ ಅಕ್ಟೋಬರ್ 1 : ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಸೆ. 22 ರಿಂದ ಅ. 1 ರವರೆಗೆ ವಿಶೇಷಪೂಜೆ ಹಾಗೂ ಪ್ರತಿದಿನ ಸಂಜೆ 6 ಗಂಟೆಯಿಂದ ಪ್ರವಚನಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ. 22: ಸೋಮವಾರ: ಮಾಸ್ಟರ್ ಅಶ್ಮಿತ್, ಮಂಗಳೂರು (ಭಕ್ತಿಸಂಗೀತ) ಸೆ. 23: ಮಂಗಳವಾರ: ವಿದ್ಯಾ ಎಸ್. ರಾವ್ ಮತ್ತು ಬಳಗ ಉಡುಪಿ (ಶಾಸ್ತ್ರೀಯ ಸಂಗೀತ) ಸೆ. 24: ಬುಧವಾರ: ಕುಮಾರಿ ಅನಘಾ ಅವಧೂತ್, ಬೆಳಗಾವಿ (ಸಿತಾರ್ ವಾದನ) ಸೆ. 25: ಗುರುವಾರ: ಕುಮಾರಿ ಶ್ರೀವಿದ್ಯಾ, ಉಜಿರೆ (ಶಾಸ್ತ್ರೀಯ ಸಂಗೀತ) ಸೆ. 26: ಶುಕ್ರವಾರ: ಕುಮಾರಿ ಸಿಂಚನಾ ಎಂ. ಗೌಡ ಮತ್ತು ಬಳಗ, ಪುತ್ತೂರು (ಭಕ್ತಿರಸಮಂಜರಿ) ಸೆ. 27: ಶನಿವಾರ: ವಿದುಷಿ ಚಂದ್ರಿಕಾ ರಾಜಾರಾಮ್, ಬೆಂಗಳೂರು (ಶಾಸ್ತ್ರೀಯ ಸಂಗೀತ) ಸೆ. 28: ಆದಿತ್ಯವಾರ: ವಿದುಷಿ ಅನುರಾಧ ಭಟ್, ಅಡ್ಕಸ್ಥಳ, ಕೇಪು, ವಿಟ್ಲ (ಶಾಸ್ತ್ರೀಯ ಸಂಗೀತ) ಸೆ. 29: ಸೋಮವಾರ: ಕುಮಾರಿ ಶ್ರೀಲಕ್ಷ್ಮೀ, ಬೆಳ್ಮಣ್ಣು, ಬೆಂಗಳೂರು (ಶಾಸ್ತ್ರೀಯ ಸಂಗೀತ) ಸೆ. 30: ಮಂಗಳವಾರ: ಕುಮಾರಿ ನವ್ಯ ಎಂ. ಆರ್. ಮತ್ತು ಬಳಗ, ಪುತ್ತೂರು (ಸುಗಮ ಸಂಗೀತ), ಅಕ್ಟೋಬರ್ 1: ಬುಧವಾರ : ಕುಮಾರಿ ಆರಾಧ್ಯ ರಾವ್, ಬೆಂಗಳೂರು : ಭಕ್ತಿರಸಮಂಜರಿ (ಸಂಜೆ 6.30 ರಿಂದ 8.30 ರ ವರೆಗೆ), ಕುಮಾರಿ ಕ್ಷಿತಿ ರೈ, ಧರ್ಮಸ್ಥಳ : ಸುಗಮಸಂಗೀತ (ರಾತ್ರಿ ಗಂಟೆ 9 ರಿಂದ 11.30 ರ ವರೆಗೆ)

ವಿದ್ಯಾದಾನದ ಮೂಲಕ ಸಮಾಜಕ್ಕೆ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರ

Article Image

ವಿದ್ಯಾದಾನದ ಮೂಲಕ ಸಮಾಜಕ್ಕೆ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರ

ಧರ್ಮಸ್ಥಳ: ಪ್ರಾಥಮಿಕ ಶಿಕ್ಷಣದಿಂದ ಆರಂಭಗೊಂಡು ಸ್ನಾತಕೋತ್ತರ ಪದವಿ, ವೃತ್ತಿಪರ ಶಿಕ್ಷಣ ಸೇರಿದಂತೆ ಶಿಕ್ಷಣ ಐವತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಮುನ್ನಡೆಸುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯಾದ್ಯಂತ ಮೌಲ್ಯಾಧಾರಿತ ಶಿಕ್ಷಣ ಒದಗಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ರೀ ಧರ್ಮಸ್ಥಳ ಭಜನಾ ಕಮ್ಮಟದ ಕಾರ್ಯದರ್ಶಿ ಎ. ವೀರು ಶೆಟ್ಟಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದಿಂದ ನಡೆಯುವ ವಿದ್ಯಾದಾನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಹೆಗ್ಗಡೆಯವರು ಐಟಿಐ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ, ವೈದ್ಯಕೀಯ, ಇಂಜಿನಿಯರಿಂಗ್ ಅಲ್ಲದೆ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಹೀಗೆ ಹೊಸ ಹೊಸ ಕೋರ್ಸ್ಗಳನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ-ಹೊಸ ಅವಕಾಶಗಳನ್ನು ಸೃಷ್ಟಿಸಿದರು. ಉಜಿರೆಯಲ್ಲಿ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಎಸ್.ಡಿ.ಎಂ. ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಮತ್ತು ಧಾರವಾಡದಲ್ಲಿ ಎಸ್.ಡಿ.ಎಂ ವಿಶ್ವವಿದ್ಯಾಲಯವಿದ್ದು, ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಹೀಗೆ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯು ಪ್ರಸಿದ್ಧವಾಗಿದೆ. ಭಜನಾ ತರಬೇತಿ ಕಮ್ಮಟವು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ. ತರಬೇತಿಯಲ್ಲಿ ಶಿಸ್ತು, ಮೌಲ್ಯ, ಸ್ವಚ್ಛತೆ, ವ್ಯವಹಾರ ಇತ್ಯಾದಿಗಳನ್ನು ಅರಿತುಕೊಂಡು ಮುನ್ನಡೆದಾಗ ಬದುಕಿನಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರು. ಉಪನ್ಯಾಸದಲ್ಲಿ ನಾಡಿನ ವಿವಿಧ ಭಜನಾ ಮಂಡಳಿಗಳಿAದ ಆಗಮಿಸಿದ ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

27ನೇ ವರ್ಷದ ಭಜನಾ ತರಬೇತಿ ಕಮ್ಮಟದ 2ನೇ ದಿನದ ಕಾರ್ಯಾಗಾರ

Article Image

27ನೇ ವರ್ಷದ ಭಜನಾ ತರಬೇತಿ ಕಮ್ಮಟದ 2ನೇ ದಿನದ ಕಾರ್ಯಾಗಾರ

ಧರ್ಮಸ್ಥಳ, ಸೆ.15,: ಭಜನಾ ಕಮ್ಮಟಗಳು ಮಾನವನ ವ್ಯಕ್ತಿತ್ವ ರೂಪಿಸುವ ಉತ್ತಮ ವೇದಿಕೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 2ನೇ ದಿನದ ಕಾರ್ಯಾಗಾರದಲ್ಲಿ 'ಗ್ರಾಮೀಣ ನಾಯಕತ್ವ ಭಜನಾ ಮಂಡಳಿಗಳ ಪಾತ್ರ' ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಇಂದಿನ ಪೀಳಿಗೆ ಸಾಮಾಜಿಕ ಮಾದ್ಯಮದತ್ತ ಒಲವನ್ನು ತೋರುತ್ತಿದ್ದು ಪ್ರಪಂಚದಾದ್ಯಂತ ಋಣಾತ್ಮಕ ಚಿಂತನೆಗಳನ್ನು ಸೃಷ್ಟಿಸಿ ಅತ್ಯಮೂಲ್ಯ ಸಮಯದ ವ್ಯರ್ಥಮಾಡುತ್ತಿದೆ.ಈ ಚಿಂತನೆಗಳು ಬದಲಾಗಿ ಯುವಕರು ಧಾರ್ಮಿಕ ಮತ್ತು ಆಧ್ಯಾತ್ಮಿಕತೆಗೆ ಒಲವು ತೋರಿದಾಗ ಭಾರತ ತನ್ನನ್ನು ತಾನು ಶ್ರೇಷ್ಠ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾದ್ಯ. ಆಧ್ಯಾತ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆದರ್ಶಗಳು ರೂಪುಗೊಳ್ಳುತ್ತವೆ. ಮಾನವನ ಉತ್ತುಂಗದ ಸಾಧನೆ ಮತ್ತು ಅಧಃಪತನ ಇವೆರಡೂ ನಿರ್ಧಾರಗೊಳ್ಳುವುದು ಆತನ ಸ್ವಭಾವ ಅಥವಾ ವ್ಯಕ್ತಿತ್ವದಿಂದ ಮಾತ್ರ ಎಂದು ಹೇಳಿದರು. ಜೀವನದಲ್ಲಿ ಒಳಿತನ್ನು ಉತ್ತುಂಗಕ್ಕೆ, ಕೆಡುಕನ್ನ ಮಿತಕ್ಕೆ ಕೊಂಡೊಯ್ಯುವ ಪ್ರಯತ್ನ ನಮ್ಮ ಕೈಯಲ್ಲೇ ಇದೆ. ನಮ್ಮೆಲ್ಲರ ಹಣೆಬರಹ ನಮ್ಮ ಅಂಗೈಯಲ್ಲಿದೆ. ಹಣೆಬರಹ ಬದಲಾಯಿಸಲು ಸಾಧ್ಯವಾಗದಿದ್ದರೂ, ಅದನ್ನು ಏರಿಸುವ ಮತ್ತು ಇಳಿಸುವ ಪ್ರಯತ್ನ ನಮ್ಮೆಲ್ಲರಿಂದ ಸಾಧ್ಯವಿದೆ. ನೈತಿಕ ವಿಚಾರಗಳನ್ನು ಅನುಸರಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಉತ್ತಮ ಜೀವನವನ್ನು ನಿರ್ಧರಿಸುವ ಮೂಲಮಂತ್ರವೇ ಆಲೋಚನೆ, ಮಾನವ ಜೀವನದಲ್ಲಿ ಯಶಸ್ಸು ಅಥವಾ ಅವನತಿಗೆ ಆಲೋಚನೆಗಳೇ ಕಾರಣ. ಆಲೋಚನೆಗಳು ಹವ್ಯಾಸವಾಗಿ ನಮ್ಮ ಚಾರಿತ್ರ‍್ಯವನ್ನು ನಿರ್ಧರಿಸುತ್ತವೆ ಮತ್ತು ಚಾರಿತ್ರ‍್ಯವು ಭವಿಷ್ಯವನ್ನು ರೂಪಿಸುತ್ತದೆ. ನಮ್ಮ ಆಲೋಚನೆಗಳು ರಚನಾತ್ಮಕವಾಗಿದಷ್ಟು ಜಗತ್ತಿನಲ್ಲಿ ಸಾಧನೆಗೆ ದಾರಿಗಳು ತೆರೆದುಕೊಳ್ಳುತ್ತವೆ ಎಂದರು. ಜೀವನದಲ್ಲಿ ಯಶಸ್ಸು ಕಂಡ ವ್ಯಕ್ತಿತ್ವಗಳ ಸಾಧನೆಯ ಗುಟ್ಟೇ ಅವರ ಪರಿಶ್ರಮ ಮತ್ತು ಧನಾತ್ಮಕ ಆಲೋಚನೆಗಳು. ಇದಕ್ಕೆ ನಿದರ್ಶನವೆಂಬಂತೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳ ದೃಷ್ಟಿಕೋನ ಮತ್ತು ಬೃಹತ್ ಆಲೋಚನೆಗಳು ಸಮಾಜದಲ್ಲಿ ಉತ್ತಮ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ವಹಿಸಿದ ಬೆಳ್ತಂಗಡಿಯ ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಪದ್ಮ ಗೌಡ ಮಾತನಾಡಿದರು. ದೇವಾಲಯಗಳ ಅಭಿವೃದ್ಧಿಗೆ ಧಾರ್ಮಿಕ ಪ್ರಜ್ಞೆ ಅತೀ ಮುಖ್ಯ. ಜೀವನದ ಆಂತರಿಕ ಮತ್ತು ಬಾಹ್ಯ ಸರ್ವ ಸಂಸ್ಥೆಗಳಿಗೂ ಮನ:ಶಾಂತಿ ತಂದುಕೊಡಬಲ್ಲ ಶಕ್ತಿ ಕೇವಲ ಧ್ಯಾನ ಮತ್ತು ಭಜನೆಗಳಿಂದ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಶ್ರೀ ಕ್ಷೇತ್ರ ಭಜನಾ ಕಮ್ಮಟದ ಕೋಶಾಧಿಕಾರಿ ಪದ್ಮರಾಜ್ ಜೈನ್ ಕಾರ್ಯಕ್ರಮನಿರ್ವಹಿಸಿದರು.

ಧರ್ಮಸ್ಥಳ: ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ

Article Image

ಧರ್ಮಸ್ಥಳ: ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ

ಉಜಿರೆ: ನಿರುದ್ಯೋಗ ಸಮಸ್ಯೆ ನಿವಾರಣೆಯೊಂದಿಗೆ ದೇಶದ ಪ್ರಗತಿಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ಸೇವೆ ಮತ್ತು ಸಾಧನೆ ಶ್ಲಾಘನೀಯವಾಗಿದೆ ಎಂದು ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಎಂ. ಭಾಸ್ಕರ ಚಕ್ರವರ್ತಿ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್‌ಸೆಟ್ ಸಂಸ್ಥೆಗಳ) ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಪ್ರಾಯೋಗಿಕವಾಗಿ ಉಜಿರೆಯಲ್ಲಿ ಆರಂಭಿಸಿದ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಮಾದರಿಯಾಗಿದ್ದು ಕೇಂದ್ರಸರ್ಕಾರವೂ ಇದಕ್ಕೆ ಮಾನ್ಯತೆ ನೀಡಿದ್ದು, ದೇಶದೆಲ್ಲೆಡೆ ಇಂದು 670 ಸಂಸ್ಥೆಗಳು ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡುತ್ತಿದ್ದು ದೇಶದ ಆರ್ಥಿಕ ಪ್ರಗತಿಯಲ್ಲಿ ಇವುಗಳ ತ್ಯಾಗ, ಸೇವೆ ಮತ್ತು ಸಾಧನೆ ಅಮೂಲ್ಯವಾಗಿದೆ ಎಂದು ಶ್ಲಾಘಿಸಿ ಅಭಿನಂದಿಸಿದರು. ಕೌಶಲಾಭಿವೃದ್ಧಿ ಇಂದು ಅಗತ್ಯವಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಗೃಹನಿರ್ಮಾಣ ಕಾರ್ಮಿಕರು ಹಾಗೂ ಇತರ ಕುಶಲಕರ್ಮಿಗಳ ಬೇಡಿಕೆ ಹೆಚ್ಚಾಗುತ್ತಿದ್ದು ಕೌಶಲಾಭಿವೃದ್ಧಿ ತರಬೇತಿಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ಎಲ್ಲಾ ನಿರ್ದೇಶಕರುಗಳು ಪ್ರತಿದಿನ ರುಡ್‌ಸೆಟ್ ಸಂಸ್ಥೆಗಳ ಸ್ವಚ್ಛತೆ ಮತ್ತು ನಿರ್ವಹಣೆ ಬಗ್ಯೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ರುಡ್‌ಸೆಟ್ ಸಂಸ್ಥೆಗಳ ರಾಷ್ಟ್ರೀಯ ನಿಯಂತ್ರಕ ಬೆಂಗಳೂರಿನ ಆರ್.ಆರ್. ಸಿಂಗ್ ಮಾತನಾಡಿ ತರಬೇತಿ ನೀಡುವಾಗ ನಿರುದ್ಯೋಗಿಗಳಲ್ಲಿ ನಾಯಕತ್ವ ಗುಣವನ್ನೂ ಬೆಳೆಸಬೇಕು ಎಂದು ಹೇಳಿದರು. ರುಡ್‌ಸೆಟ್ ಸಂಸ್ಥೆಗಳ ಮಹಾನಿರ್ದೇಶಕ ರಾಜು ಎನ್. ಕೋರಿ ಮಾತನಾಡಿ ಗ್ರಾಮೀಣ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಹೊಸತನದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು. ಉನ್ನತ ಸಾಧನೆ ಮಾಡಿದ ರುಡ್‌ಸೆಟ್ ಸಂಸ್ಥೆಗಳನ್ನು ಗೌರವಿಸಲಾಯಿತು. ಆರ್ಥಿಕ ಆದಾಯ: ರುಡ್‌ಸೆಟ್ ಸಂಸ್ಥೆ, ಒನ್‌ಗೋಲ್ (ಪ್ರಥಮ), ರುಡ್‌ಸೆಟ್ ಸಂಸ್ಥೆ, ಧಾರವಾಡ (ದ್ವಿತೀಯ). ವಾರ್ಷಿಕ ಕಾರ್ಯಯೋಜನೆ: ರುಡ್‌ಸೆಟ್ ಸಂಸ್ಥೆ, ವಿಜಯಪುರ (ಪ್ರಥಮ), ರುಡ್‌ಸೆಟ್ ಸಂಸ್ಥೆ, ಹಾಜಿಪುರ (ದ್ವಿತೀಯ). ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಉತ್ತಮ ಸೇವೆ, ಸಾಧನೆಗೆ ಎಲ್ಲಾ ನೌಕರರನ್ನು ಅಭಿನಂದಿಸಿದರು. ಸಂಸ್ಥೆಗಳ ಪ್ರಗತಿ, ಸಾಧನೆ ಗುರುತಿಸಿ ಹೊಸ ಯೋಜನೆಗಳನ್ನು ರೂಪಿಸುವುದೇ ವಾರ್ಷಿಕ ಸಮ್ಮೇಳನದ ಉದ್ದೇಶವಾಗಿದೆ ಎಂದರು. ಬ್ಯೂಟಿ ಪಾರ್ಲರ್, ಹೊಲಿಗೆ ಮೊದಲಾದ ವೃತ್ತಿಗಳನ್ನು ಮನೆಯಲ್ಲೆ ಮಾಡಬಹುದು ಎಂದು ಅವರು ಸಲಹೆ ನೀಡಿದರು. ನಿರ್ದೇಶಕರುಗಳು ಮತ್ತು ಸಿಬ್ಬಂದಿ ಉತ್ತಮ ಗುಣಮಟ್ಟದ ತರಬೇತಿಗೆ ವೈಯಕ್ತಿಕ ಗಮನ ಹರಿಸಬೇಕೆಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು. ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಸ್ವಾಗತಿಸಿದರು. ಉಜಿರೆ ಸಂಸ್ಥೆಯ ನಿರ್ದೇಶಕ ಅಜೇಯ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.

ಸೆ. 14 ರಿಂದ 21: ಧರ್ಮಸ್ಥಳದಲ್ಲಿ ಭಜನಾ ಕಮ್ಮಟ

Article Image

ಸೆ. 14 ರಿಂದ 21: ಧರ್ಮಸ್ಥಳದಲ್ಲಿ ಭಜನಾ ಕಮ್ಮಟ

ಉಜಿರೆ: ಧರ್ಮಸ್ಥಳದಲ್ಲಿ ಇಪ್ಪತ್ತೇಳನೆ ವರ್ಷದ ಭಜನಾ ಕಮ್ಮಟ ಸೆ. 14 ರಿಂದ 21 ರ ವರೆಗೆ ನಡೆಯಲಿದೆ ಎಂದು ಭಜನಾ ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಕಾರ್ಯದರ್ಶಿ ಎ.ವಿ. ಶೆಟ್ಟಿ ತಿಳಿಸಿದ್ದಾರೆ. ಖ್ಯಾತ ಗಾಯಕರಾದ ಶಂಕರ್‌ಶಾನ್‌ಭಾಗ್, ಅರ್ಚನಾ ಉಡುಪ, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್, ಮಣಿಪಾಲ, ಸೌಮ್ಯ ಸುಭಾಷ್, ಧರ್ಮಸ್ಥಳ, ಮಂಗಲದಾಸ ಗುಲ್ವಾಡಿ, ವಿದುಷಿ ಚೈತ್ರಾ, ಉಜಿರೆ, ಸುನಿಲ್ ಶೆಟ್ಟಿ, ಧರ್ಮಸ್ಥಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಕಮ್ಮಟದಲ್ಲಿ ಮಾಹಿತಿ, ಮಾರ್ಗದರ್ಶನ ನೀಡುವರು. ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಧಾರ್ಮಿಕ ಉಪಾನ್ಯಾಸ, ಸಂಜೆ ಗಂಟೆ 5.30 ರಿಂದ ನಗರಭಜನೆ ಇದೆ. ಸೆ. 21ರಂದು ಭಾನುವಾರ ಸಮಾರೋಪ ಸಮಾರಂಭ ನಡೆಯಲಿದ್ದು ಪೂರ್ವಾಹ್ನ 10 ಗಂಟೆಯಿಂದ 400 ಭಜನಾ ತಂಡಗಳ ಆರು ಸಾವಿರ ಭಜನಾಪಟುಗಳಿಂದ ಶೋಭಾಯಾತ್ರೆ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ಸಾಮೂಹಿಕ ನೃತ್ಯಭಜನೆ ನಡೆಯಲಿದೆ. ಉದ್ಘಾಟನಾ ಸಮಾರಂಭ: ಸೆ. 14 ರಂದು ಭಾನುವಾರ ಪೂರ್ವಾಹ್ನ 11 ಗಂಟೆಗೆ ಮಹೋತ್ಸವ ಸಭಾ ಭವನದಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಭಜನಾ ಕಮ್ಮಟವನ್ನು ಉದ್ಘಾಟಿಸುವರು. ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಧಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರಕ್ಕೆ ಚಾಲನೆ

Article Image

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರಕ್ಕೆ ಚಾಲನೆ

ಉಜಿರೆ, ಸೆ.11: ಸಂಶೋಧನಾ ಪ್ರಕ್ರಿಯೆಗೆ ಪೂರಕ ತಾಂತ್ರಿಕ ಪರಿಕರವಾಗಿ ತಂತ್ರಜ್ಞಾನವು ಬಳಕೆಯಾಗಬೇಕೇ ಹೊರತು ಹೊಸದನ್ನು ಹುಡುಕಾಡುವ ಪ್ರಜ್ಞೆಯನ್ನೇ ನಿಯಂತ್ರಿಸುವ ಮಟ್ಟಿಗೆ ನಿರ್ಣಾಯಕವಾಗಬಾರದು ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಕೆ.ಚಿನ್ನಪ್ಪಗೌಡ ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಿಸರ್ಚ್ ಆಂಡ್ ಡೆವೆಲಪ್‌ಮೆಂಟ್ ಸೆಲ್ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ಸಂಶೋಧನ ಬರವಣಿಗೆ ಮತ್ತು ಪ್ರಕಟಣೆ- ವಿಧಾನಾತ್ಮಕ ದೃಷ್ಟಿಕೋನ’ ಕುರಿತು ಗುರುವಾರ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನವು ಸಂಶೋಧಕನ ಪರಿಶ್ರಮ ಕಡಿಮೆಗೊಳಿಸಿ ಸಹಾಯಕನಂತಿರಬೇಕು. ಆದರೆ, ಈ ಪ್ರಕ್ರಿಯೆಯಲ್ಲಿ ಸಂಶೋಧಕನೇ ಮುಖ್ಯಪಾತ್ರ ವಹಿಸಬೇಕೇ ವಿನಃ ತಂತ್ರಜ್ಞಾನ ನಿರ್ಣಾಯಕವಾಗಬಾರದು. ಸಂಶೋಧಕ ಇಲ್ಲದಿದ್ದರೆ ತಂತ್ರಜ್ಞಾನ ಅರ್ಥಹೀನ. ತಂತ್ರಜ್ಞಾನವೂ ಕೂಡಾ ಸಂಶೋಧನೆಯ ಫಲವಾಗಿರುತ್ತದೆ. ತಂತ್ರಜ್ಞಾನವು ಮನುಷ್ಯ ಹುಡುಕಾಟದ ಫಲವೇ ಆಗಿರುತ್ತದೆ. ಹೀಗಾಗಿ ಸಂಶೋಧನೆಯು ಮನುಷ್ಯಕೇಂದ್ರಿತವಾಗಿರಬೇಕು. ಕೇವಲ ತಂತ್ರಜ್ಞಾನ ಕೇಂದ್ರಿತವಾಗಿರಬಾರದು. ತಂತ್ರಜ್ಞಾನದ ಭರಾಟೆಯಲ್ಲಿ ಸಂಶೋಧನೆಯ ಹಿಂದಿನ ಮನುಷ್ಯ ಬೌದ್ಧಿಕ ಶಕ್ತಿ ಹಿನ್ನೆಲೆಗೆ ಸರಿಯಬಾರದು ಎಂದು ಹೇಳಿದರು. ಬೋಧಕರಾಗಲು ಬೇಕಾದ ಶೈಕ್ಷಣಿಕ ಅರ್ಹತೆಯನ್ನಷ್ಟೇ ದೃಷ್ಟಿಯಲ್ಲಿರಿಸಿಕೊಂಡು ಸಂಶೋಧನೆಗೆ ತೊಡಗಬಾರದು. ಸಂಶೋಧನೆ ಎನ್ನುವುದು ಉದ್ಯೋಗ ದಕ್ಕಿಸಿಕೊಳ್ಳುವ ಗುರುತಿಸಿಕೊಳ್ಳುವ ಖಯ್ಯಾಲಿ ಅಲ್ಲ. ಸಂಶೋಧನೆ ಎನ್ನುವುದು ಪ್ರವೃತ್ತಿಯಾಗಬೇಕು. ಅದು ಫ್ಯಾಶನ್ ಅಲ್ಲ. ಅದು ಹೊಸದೊಂದನ್ನು ಹುಡುಕಾಡುವ ವ್ಯಕ್ತಿಗತ ಉತ್ಸಾಹದ ಪ್ರತಿಫಲ ಎಂದು ಹೇಳಿದರು. ನಿರಂತರ ಓದಿನ ಆಸಕ್ತಿ ಮತ್ತು ಸಂಶೋಧನೆಯ ಹಸಿವು ಇಲ್ಲದವರು ಉತ್ತಮ ಪ್ರಾಧ್ಯಾಪಕರಾಗಲು ಸಾಧ್ಯವಿಲ್ಲ. ಸಂಶೋಧನೆಯು ಬೋಧನೆಯ ಅವಿಭಾಜ್ಯ ಅಂಗ. ಒಬ್ಬ ಪ್ರಾಧ್ಯಾಪಕ ಸದಾ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಪ್ರತಿಯೊಂದು ಹೊಸ ಸಂಗತಿಯೂ ಒಂದು ಸಂಶೋಧನೆಯ ಫಲವಾಗಿರುತ್ತದೆ. ತರಗತಿ ನಿರ್ವಹಿಸುವಾಗ ಅಧ್ಯಾಪಕ ಹೊಸ ಐಡಿಯಾ, ಹೊಸ ಪರಿಕಲ್ಪನೆ ಹೊಳೆಸಿಕೊಳ್ಳುವುದುಕ್ಕೆ ಈ ಸಂಶೋಧನಾತ್ಮಕ ಗುಣವೇ ಆಧಾರವಾಗಿರುತ್ತದೆ ಎಂದು ತಿಳಿಸಿದರು. ಸಂಶೋಧನೆ ಎಂದರೆ ಕೇವಲ ಓದು ಅಥವಾ ಬರವಣಿಗೆ ಮಾತ್ರವಲ್ಲ. ಅದು ಸಂಶೋಧಕನ ಅನುಭವ ಮತ್ತು ವೈಯಕ್ತಿಕ ಗಮನವನ್ನು ಅಪೇಕ್ಷಿಸುತ್ತದೆ. ಅಧ್ಯಯನ, ಜ್ಞಾನ ವಿಸ್ತರಣೆಯ ಹಾದಿಯಲ್ಲಿಹೊಸ ವಾದಗಳ ಮಂಡಿಸಬೇಕಾಗುತ್ತದೆ. ಈಗಾಗಲೇ ಇರುವ ಜ್ಞಾನದ ಆಧಾರದ ಮೇಲೆ ಹೊಸದನ್ನು ರೂಪಿಸಬೇಕಾಗುತ್ತದೆ. ಹಿಂದಿನ ಜ್ಞಾನ ವೈಜ್ಞಾನಿಕ ತಳಹದಿಯನ್ನು ಕಲ್ಪಿಸಿಕೊಡುತ್ತದೆ. ಈ ಆಯಾಮದಲ್ಲಿ ಬೌದ್ಧಿಕ ಬಲ ರೂಪಿಸಿಕೊಳ್ಳಬೇಕು. ಹೊಸ ಚಿಂತನೆಕಟ್ಟಬೇಕು. ಆಳವಾದ ಒಳನೋಟಗಳ ಮೂಲಕ ಸಂಶೋಧನೆಯ ಸಾಮರ್ಥ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಗತ್ತಿನಲ್ಲಿ ಇಲ್ಲದೇ ಇರುವುದನ್ನು ಹುಡುಕಲು ಸಾಧ್ಯವಿಲ್ಲ. ಆದ್ದರಿಂದ ಒಂದು ನಿರ್ದಿಷ್ಟ ಸಂಶೋಧನಾ ಪ್ರಮೇಯ ಕಂಡುಕೊಂಡು ಅದನ್ನು ವಿಸ್ತರಣೆ ಅಥವಾ ಪರಿಷ್ಕರಣೆ ಮಾಡುವ ಇಲ್ಲವೇ ಹೊಸ ವಿಷಯವನ್ನು ನೀಡುವುದರ ಕುರಿತಾಗಿ ಸಂಶೋಧಕನಿಗೆ ಸ್ಪಷ್ಟವಾದ ದೃಷ್ಟಿಕೋನ ಇರಬೇಕು. ಇತ್ತೀಚಿನ ಸಂಶೋಧನೆಗಳು ಜಾಳುಜಾಳಾಗುತ್ತಿವೆ ಎಂಬ ಕೊರಗು ವ್ಯಕ್ತವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಮಾರ್ಗದರ್ಶಕರು ಹೆಚ್ಚು ಗಮನವಹಿಸಬೇಕು ಈ ಕೊರಗು ನಿವಾರಿಸಿ ಗುಣಮಟ್ಟದ ಸಂಶೋಧನೆ ಸಾಧ್ಯವಾಗಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಮಾತನಾಡಿದರು. ಸಂಶೋಧನೆಯ ಹಾದಿ ಪ್ರಯಾಸದಾಯಕವಾಗಿದ್ದರೂ ಖುಷಿ ನೀಡುತ್ತದೆ. ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಹೆಚ್ಚಾಗಿ ಆಕರ್ಷಿಸಬೇಕು ಎನ್ನುವ ಉದ್ದೇಶದಿಂದ ಕಾಲೇಜು ಸಂಶೋಧನಾ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್‌ಡಾ. ಸೌಮ್ಯಾ ಬಿ. ಪಿ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕರಾದ ಡಾ. ದಿವಾಕರ ಕೆ., ಡಾ. ಸುದರ್ಶನ್ ಪಿ. ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ. ಎಂ ಆಸ್ಪತ್ರೆ : ಉಚಿತ ಆರೋಗ್ಯ ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ. ಎಂ ಆಸ್ಪತ್ರೆ : ಉಚಿತ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮುಂಡಾಜೆ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಕುಕ್ಕಾವು, ಜನಜಾಗೃತಿ ಸಮಿತಿ ಕುಕ್ಕಾವು ಇದರ ಸಹಕಾರದೊಂದಿಗೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಜಿರೆ ಎಸ್.ಡಿ. ಎಂ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾವು ಇಲ್ಲಿ ನಡೆಸಲಾಯಿತು. ಕೂಡಬೆಟ್ಟು ಸದಾಶಿವೇಶ್ವರ ದೇವಸ್ಥಾನದ ಮೊಕ್ತೇಸರರಾದ ವಾಸುದೇವ ಕಕ್ಕೆನೇಜಿ ಶಿಬಿರವನ್ನು ಉದ್ಘಾಟಿಸಿದರು. ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲ್ವಿಚಾರಕರಾದ ರವೀಂದ್ರ ಗುಡಿಗಾರ್ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವ ವೈದ್ಯಕೀಯ ಸೇವೆಗಳ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯಚಂದ್ರ ಗೌಡ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕಿನ ಯೋಜನಾಧಿಕಾರಿ ಯಶೋಧರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರೀಶ್ ಮಾಂಜ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ನೋಣಯ್ಯ ಗೌಡ, ಬಂಗಾಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಆನಂದ ಗೌಡ, ಒಕ್ಕೂಟದ ಅಧ್ಯಕ್ಷ ಜಗದೀಶ್ ಕುಂಬಾರ ಮತ್ತು ಸುರೇಶ್, ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ಲೋಕೇಶ್ ಕುಂಬಾರು ಉಪಸ್ಥಿತರಿದ್ದರು. ಉಜಿರೆ ಎಸ್.ಡಿ. ಎಂ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ| ಪ್ರತೀತ್, ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ರಜತ್, ಕಣ್ಣಿನ ತಜ್ಞರಾದ ಡಾ| ಶುಭಾಶ್ಚಂದ್ರ, ಇ.ಎನ್.ಟಿ ತಜ್ಞರಾದ ಡಾ| ರೋಹನ್ ದೀಕ್ಷಿತ್, ಜನರಲ್ ಫಿಸಿಷಿಯನ್ ಡಾ| ಪ್ರೌಸ್ಟಿಲ್ ಮತ್ತು ಡಾ| ಆದರ್ಶ ತಪಾಸಣೆಯನ್ನು ನಡೆಸಿಕೊಟ್ಟರು. 504 ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ತ್ರಿವೇಣಿ ಸ್ವಾಗತಿಸಿ, ವಲಯ ಮೇಲ್ವಿಚಾರಕ ಜನಾರ್ದನ್ ಧನ್ಯವಾದ ಅರ್ಪಿಸಿದರು. ಸೇವಾಪ್ರತಿನಿಧಿ ರಶ್ವಿ ಸುರೇಖಾ ಹಾಗೂ ಶೌರ್ಯವಿಪತ್ತು ನಿರ್ವಹಣಾ ಘಟಕದ ಮತ್ತು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಶಿಬಿರದ ಯಶಸ್ವಿಗೆ ಸಹಕರಿಸಿದರು.

ಡಿಜಿಟಲ್ ಲೋಕುಡ್ ತುಳು ಒಂದು ದಿನದ ಬರವಣಿಗೆ ಕಮ್ಮಟ

Article Image

ಡಿಜಿಟಲ್ ಲೋಕುಡ್ ತುಳು ಒಂದು ದಿನದ ಬರವಣಿಗೆ ಕಮ್ಮಟ

ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ಆಸಕ್ತಿ ಮೂಡುವಂತೆ ಮಾಡಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಫಿಕಾಡ್ ಹೇಳಿದರು. ಆಳ್ವಾಸ್ ಕಾಲೇಜಿನ (ಸ್ವಾಯತ್ತ) ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಾಲೇಜಿನಲ್ಲಿ ನಡೆದ ‘ಡಿಜಿಟಲ್ ಲೋಕುಡ್ ತುಳು’ ಒಂದು ದಿನದ ಬರವಣಿಗೆ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನ, ತುಳು ಐಸಿರ, ಒಂಜಿ ದಿನ ಬಲೆ ಓದುಗ ಕೂಟ, ಮಕ್ಕಳ ರಂಗತರಬೇತಿ ಶಿಬಿರ, ತುಳುನಾಡ ಸಿರಿ ಮದಿಪು, ತುಳುಭಾಷೆ ಬದ್ಕ್ ಗೇನದ ಪೊಲಬು ಮುಂತಾದ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತುಳುವಿನ ಕುರಿತು ಆಸಕ್ತಿ ಮೂಡಿಸಲು ಸಹಕಾರಿಯಾಗಿವೆ. ತುಳು ಭಾಷೆಯ ಸಮೃದ್ಧತೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಬೇಕು. ತುಳು ಸಾಹಿತ್ಯ ಓದುವ ಅಭಿರುಚಿಯನ್ನು ಯುವಜನತೆಯಲ್ಲಿ ಬೆಳೆಸಬೇಕಾಗಿದೆ. ತುಳುನಾಡಿನ ತಿಂಡಿತಿನಿಸುಗಳು, ಆಚರಣೆಗಳು, ಆಟಗಳು, ದಸರಾ ವೇಷಗಳು, ಊರಿನ ಹೆಸರುಗಳು ವಿಶೇಷತೆಯಿಂದ ಕೂಡಿವೆ. ಇವುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತುಳು ಮೌಖಿಕ ಪರಂಪರೆಯಿಂದ ಆರಂಭವಾಗಿ ತಳೆ ಗರಿಯಲ್ಲಿ ಬರೆಯುವ ಕಾಲದಿಂದ ಇದೀಗ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡುವ ಕಾಲಘಟ್ಟಕ್ಕೆ ನಾವು ಬಂದಿದ್ದೇವೆ. ಈ ಪ್ರಕ್ರಿಯೆಯಲ್ಲಿ ಯುವಜನತೆ ಹೆಚ್ಚು ಆಸಕ್ತಿ ತೋರಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ತುಳು ಸಾಹಿತ್ಯ ಅಕಾಡೆಮಿ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹಿರಿ–ಕಿರಿಯರ ಸಹಭಾಗಿತ್ವದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತೋಷದ ವಿಷಯ. ತುಳು ಭಾಷೆಯನ್ನು ಬೆಳೆಸುವುದರೊಂದಿಗೆ ಅದರ ಶ್ರೀಮಂತ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ, ವಿಶೇಷವಾಗಿ ತುಳು ಸಾಹಿತ್ಯದ ಬೆಳವಣಿಗೆಯಲ್ಲಿ ಬಾಸೆಲ್ ಮಿಷನ್‌ನ ಕೊಡುಗೆ ಅನನ್ಯ ಎಂದರು. ಸಂತ ಅಲೋಶಿಯಸ್ ಪರಿಗಣಿತ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಕಮ್ಮಟವನ್ನು ನಡೆಸಿಕೊಟ್ಟು ಮಾತನಾಡಿ, “ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಹಾಗೂ ವಿಸ್ತರಿಸಲು ಡಿಜಿಟಲ್ ಜಗತ್ತು ಅಪೂರ್ವ ಅವಕಾಶಗಳನ್ನು ಒದಗಿಸಿದೆ. ತುಳು ವಿಕಿಪೀಡಿಯದಲ್ಲಿ ಈಗಾಗಲೇ ಮಹತ್ವದ ಮಾಹಿತಿಗಳು ದಾಖಲಾಗಿವೆ. ಆದರೆ ಅದು ನಿಂತ ನೀರಾಗಬಾರದು. ನಿರಂತರ ಪರಿಷ್ಕರಣೆ ಹಾಗೂ ಅಮೂಲ್ಯ ಮಾಹಿತಿಗಳ ದಾಖಲಾತಿ ಅಗತ್ಯ, ಎಂದು ತಿಳಿಸಿದರು. ಅವರು ವಿಕಿಪೀಡಿಯದಲ್ಲಿ ಲೇಖನ ಬರೆಯುವ ಕುರಿತು ಪ್ರಾಯೋಗಿಕ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕಮ್ಮಟದಲ್ಲಿ ಕಾಲೇಜಿನ 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯ ಪಾಂಗಳ ಬಾಬು ಕೊರಗ, ಪ್ರಾಂಶುಪಾಲ ಡಾ. ಕುರಿಯನ್ ಇದ್ದರು. ಡಾ. ಯೋಗೀಶ ಕೈರೋಡಿ ಸ್ವಾಗತಿಸಿ, ಸೌಮ್ಯ ಕುಂದರ್ ನಿರೂಪಿಸಿ, ಅನಿಶಾ ಶೆಟ್ಟಿ ವಂದಿಸಿದರು.

ರಾಜ್ಯ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಇದರ ಮಹಾಸಭೆ

Article Image

ರಾಜ್ಯ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಇದರ ಮಹಾಸಭೆ

ರಾಜ್ಯ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಇದರ ಮಹಾಸಭೆ ತಾರೀಕು 24-08-2025ರಂದು ಕರ್ನಾಟಕ ರಾಜ್ಯ ಸಹಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಬೆಳ್ತಂಗಡಿ ಇದರ ಮಹಾಸಭೆಯು ಸುವರ್ಣ ಆರ್ಕೇಡ್ ಬೆಳ್ತಂಗಡಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಡಾ. ಕೆ. ಜಯಕೀರ್ತಿ ಜೈನ್ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್ ಸಹಕಾರಿ ಸಂಘದ ಗತ ವರ್ಷದ ವರದಿಯನ್ನು ಸಭೆಗೆ ಮಂಡಿಸಿ 2025-26ನೇ ಸಾಲಿನ ಬಜೆಟ್ ಮಂಡಿಸಿ ಅನುಮೋದಿಸಲಾಯಿತು. ಈ ಸಂದರ್ಭದಲ್ಲಿ ಕ್ಲಪ್ತ ಸಮಯದಲ್ಲಿ ದಂಡನೆ ಬಡ್ಡಿ ಇಲ್ಲದೆ ಸಾಲ ಮರುಪಾವತಿ ಮಾಡಿದ ಗ್ರಾಹಕರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸರಕಾರಿ ನೌಕರರ ಮಕ್ಕಳಿಗೆ ನೀಡುವ ಪ್ರೋತ್ಸಾಹಕ ಬಹುಮಾನವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 584 (ಶೇ.90) ಅಂಕ ಪಡೆದ ದುರ್ಗಾದಾಸ್ ಎಎಸ್‌ಐ ಬೆಳ್ತಂಗಡಿ ಇವರ ಸುಪುತ್ರ ಸಂಜನಾ ಎಂ.ಡಿ. ಇವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭ ನಿರ್ದೇಶಕರಾದ ಅಬ್ದುಲ್ ರಜಾಕ್ (ಆರೋಗ್ಯ ಇಲಾಖೆ) ಹಾಗೂ ರತ್ನಾವತಿ (ಸಿ.ಡಿ.ಪಿ.ಓ) ಇಲಾಖೆ ಇವರನ್ನು ಗೌರವಿಸಲಾಯಿತು. ಕಳೆದ ಆರ್ಥಿಕ ವರ್ಷದಲ್ಲಿ ಸಂಘವು ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡಾ 20ರಷ್ಟು ಲಾಭಾಂಶವನ್ನು ಅಧ್ಯಕ್ಷರು ಘೋಷಿಸಿದರು. ಸಂಘದಲ್ಲಿ ಸಾಲ ಮೊತ್ತ ವಸೂಗಾಗಿ ನಿರ್ಮಲ್ ಕುಮಾರ್ ನಾರಾವಿ ಎಂಬುವವರನ್ನು ನೇಮಿಸಿದ್ದು ಅವರು ಸಂಘದ ನಿಬಂಧನೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇದ್ದುದರಿಂದ ಅವರನ್ನು ಸದ್ರಿ ಹುದ್ದೆಯಿಂದ ಮುಕ್ತಗೊಳಿಸಿದ್ದಿ ಅವರು ಇದೀಗ ಸಂಘದ ಬ್ಗೆ ಅಪಪ್ರಚಾರ ಮಾಡುತ್ತಿದ್ದು ಈ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದಿರಬೇಕೆಂದು ಅಧ್ಯಕ್ಷರು ವಿನಂತಿಸಿದರು. ಸಂಘದ ಉಪಾಧ್ಯಕ್ಷರಾದ ಚಿದಾನಂದ ಹೂಗಾರ್, ನಿರ್ದೇಶಕರಾದ ಅಬ್ದುಲ್ ರಜಾಕ್, ಚಂದ್ರಶೇಖರ್, ಪರಮೇಶ್, ರತ್ನಾವತಿ, ಆರತಿ, ಪ್ರಶಾಂತ್, ಹರಿಪ್ರಸಾದ್, ವಾರಿಜ ಕೆ. ಉಪಸ್ಥಿತರಿದ್ದರು. ಕೊಕ್ಕಡ ಶಾಖಾ ವ್ಯವಸ್ಥಾಪಕ ಅತಿಶಯ ಜೈನ್ ಉಪಸ್ಥಿತರಿದ್ದರು. ಸಂಘದ ಸಲಹೆಗಾರರಾದ ವಸಂತ್ ಸುವರ್ಣ ಸ್ವಾಗತಿಸಿ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ವಶಾಲ, ಧಾಮಿನಿ ಸಹಕರಿಸಿದರು. ಪಿಗ್ಮಿ ಸಂಗ್ರಾಹಕರೆಲ್ಲರು ಉಪಸ್ಥಿತರಿದ್ದು ಸಹಕರಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ರಮೇಶ್ ಹಾಗೂ ಅವರ ತಂಡ ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು. ಈ ಶಿಬಿರವನ್ನು 100ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಶಿಬಿರ

ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಫಿಸಿಯೋಥೆರಪಿ ದಿನದ ಪ್ರಯುಕ್ತ ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಶಿಬಿರವನ್ನು ದಿನಾಂಕ 5/09/2025 ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ. ಆದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ನರ ಮತ್ತು ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ, ಮಕ್ಕಳಲ್ಲಿ ಕಂಡುಬರುವ ದೈಹಿಕ ತೊಂದರೆಗಳಿಗೆ, ಶಸ್ತ್ರಚಿಕಿತ್ಸೆಯ ಬಳಿಕದ ಫಿಸಿಯೋಥೆರಪಿ ಮತ್ತು ನೋವು ನಿವಾರಣೆಗಳಿಗೆ ಮಾಡಬೇಕಾದ ಫಿಸಿಯೋಥೆರಪಿಗಳನ್ನು ಈ ಶಿಬಿರದಲ್ಲಿ ಉಚಿತವಾಗಿ ಮಾಡಲಾಗುವುದು. ಫಿಸಿಯೋಥೆರಪಿ ಸಮಾಲೋಚನೆ ಉಚಿತ ಮತ್ತು ಫಿಸಿಯೋಥೆರಪಿ ವಿಧಾನಗಳಿಗೆ 20% ರಿಯಾಯತಿ ದೊರೆಯಲಿದೆ. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಸಿಯೋಥೆರಪಿಸ್ಟ್ ತಜ್ಞರಾದ ಸನ್ನಿಧಿ ಜೈನ್ ಮತ್ತು ಪ್ರೀಥಮ್ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಈ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ದಿನಾಂಕ 04/09/2025ರ ಒಳಗೆ ಕಚೇರಿ ಸಮಯದಲ್ಲಿ 7760397878 ಅಥವಾ 8073349216 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಒಂದು ದಿನದ ಕಾರ‍್ಯಗಾರ

Article Image

ರಾಜ್ಯ ಮಟ್ಟದ ಒಂದು ದಿನದ ಕಾರ‍್ಯಗಾರ

ಮೂಡುಬಿದಿರೆ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗ್ರಂಥಪಾಲಕರ ಸಂಘ ಮತ್ತು ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ ‘ಗ್ರಂಥಾಲಯ ಸೇವೆಗಳ ನಾವಿನ್ಯತೆ ಹಾಗೂ ಪರಿಣಾಮಕಾರಿ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜರುಗಿತು. ಮಂಗಳೂರು ವಿವಿ ಕಾಲೇಜಿನ ಡಾ ಮಾಧವ ಎಂಕೆ ಮಾತನಾಡಿ, ಗ್ರಂಥಾಲಯ ವಿಭಾಗದಲ್ಲಿ ಕೆಲಸ ಮಾಡುವವರು ಸರಸ್ವತಿಯ ದಾಸೋಹಿಗಳು. ಅವರ ಸೇವೆ ಅಕ್ಷರಶಃ ಮಾನವ ಸಮಾಜದ ಬೆಳಕಿನ ದೀಪ. ಜ್ಞಾನ ಹಂಚುವ ಕಾರ‍್ಯದಲ್ಲಿ ತೊಡಗಿರುವ ಅವರು ನಿಜಕ್ಕೂ ಪುಣ್ಯವಂತರು ಎಂದರು. ಈ ಜಗತ್ತಿನಲ್ಲಿ ಭಗವಂತನು ಮಾನವನಿಗೆ ನೀಡಿರುವ ಅತ್ಯಂತ ಅಮೂಲ್ಯವಾದ ವರವೇ ಸಮಯ. ಧನ, ಪದವಿ, ಸ್ಥಾನಮಾನದಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಸಮಯ ಮಾತ್ರ ಎಲ್ಲರಿಗೂ ಸಮಾನವಾಗಿ ಹಂಚಲ್ಪಟ್ಟಿದೆ. ಈ ಸಮಯವನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆಯೇ ಜೀವನದ ಸಾಧನೆ ನಿರ್ಧಾರವಾಗುತ್ತದೆ ಎಂದರು. ಕಲಿಕೆಯ ದೇಗುಲವಾದ ಗ್ರಂಥಾಲಯದಲ್ಲಿ ಸಮಯ ಕಳೆಯುವವರು ನಿಜವಾದ ಸಾಧಕರು. ಓದುವ ಹವ್ಯಾಸ ಇರುವವರು ಎಂದಿಗೂ ಅಧೀರರಾಗುವುದಿಲ್ಲ. ಓದಿನಿಂದ ಮಾನಸಿಕ ಆರೋಗ್ಯ, ಏಕಾಗ್ರತೆ, ಒತ್ತಡಮುಕ್ತ ಜೀವನ ಸಾಧ್ಯವಾಗುವುದರ ಜೊತೆಗೆ ಜ್ಞಾನದ ಹಸಿವು, ಭಾವನಾತ್ಮಕ ಧೈರ್ಯ, ಸ್ಥೈರ್ಯ, ಕಲ್ಪನಾಶಕ್ತಿ ಮತ್ತು ಭಾಷಾಸಂಪತ್ತು ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳನ್ನು ಗ್ರಂಥಾಲಯದತ್ತ ಸೆಳೆಯುವ ಸೃಜನಶೀಲ ಕಾರ್ಯಕ್ರಮಗಳನ್ನು ರೂಪಿಸುವುದು ಕಾಲದ ಅವಶ್ಯಕತೆ” ಎಂದು ಸಲಹೆ ನೀಡಿದರು. ಬದುಕನ್ನು ಹೇಗೆ ನೋಡುತ್ತೇವೆ ಎಂಬುದರ ಮೇಲೆ ಬದುಕು ನಿರ್ಮಾಣವಾಗುತ್ತದೆ. ಜೋಗದ ಜಲಪಾತವನ್ನು ನೋಡಿ ಕೆಲವರು ಕೇವಲ ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾರೆ. ಆದರೆ ಅದೇ ದೃಶ್ಯವನ್ನು ಸರ್ ಎಂ. ವಿಶ್ವೇಶ್ವರಯ್ಯ ಕಂಡಾಗ, ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ರೂಪಿಸುವ ಪ್ರೇರಣೆ ದೊರಕಿತು. ಅದೇ ಜೋಗದ ಜಲಪಾತವನ್ನು ಕವಿ ನಿಸಾರ್ ಅಹಮದ್ ನೋಡಿದಾಗ, ಪ್ರಕೃತಿಯ ಸೊಬಗಿನೊಂದಿಗೆ ಮಾನವ ಜೀವನವನ್ನು ಜೋಡಿಸಿ “ನಿತ್ಯೋತ್ಸವ” ಎಂಬ ಅದ್ಭುತ ಕವಿತೆಯನ್ನು ರಚಿಸಿದರು. ಮತ್ತೊಬ್ಬ ಸಿನಿಮಾ ನಟ ಗಣೇಶ್ ಅದೇ ಜಲಪಾತವನ್ನು ನೋಡಿ ಹರ್ಷೋದ್ಗಾರಗೊಂಡು “ಕುಣಿದು ಕುಣಿದು ಬಾರೆ” ಎಂಬ ಹಾಡಿಗೆ ನೃತ್ಯ ಮಾಡಿದರು ಎಂದರು. ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಕುರಿಯನ್ ಮಾತನಾಡಿ, ಜಗತ್ತಿನ ಎಲ್ಲಾ ಸಾಧನೆಯ ಹಿಂದೆ ಗ್ರಂಥಾಲಯದ ಪಾತ್ರವಿದೆ. ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ, ಮಾಸ್ತಿಯನ್ನು ಓದಿಕೊಂಡು ಜ್ಞಾನದ ವರ್ಜನೆಗೆ ಶ್ರಮಿಸಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಸಾಧನಗಳ ಬಳಕೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳ ಗಮನ ಗ್ರಂಥಾಲಯದಿಂದ ದೂರವಾಗುತ್ತಿದೆ. ಇಂಟರ್ನೆಟ್, ಮೊಬೈಲ್, ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಸಮಯವನ್ನು ಆಕ್ರಮಿಸಿವೆ. ಈ ಹಿನ್ನೆಲೆ, ವಿದ್ಯಾರ್ಥಿಗಳನ್ನು ಪುನಃ ಗ್ರಂಥಾಲಯದತ್ತ ಸೆಳೆಯುವ ನವೀನ ಕಾರ್ಯಯೋಜನೆಗಳನ್ನು ರೂಪಿಸುವುದು ಕಾಲದ ಅವಶ್ಯಕತೆ. ಈ ನೆಲೆಯಲ್ಲಿ ಈ ಕಾರ‍್ಯಗಾರ ಹೊಸ ಸಾಧ್ಯತೆಗಳ ಕುರಿತು ಯೋಚಿಸಲಿ ಎಂದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳ ಗ್ರಂಥಾಪಾಲಕರ ಸಂಘದ ನ್ಯೂಸ್ ಬುಲೆಟಿನ್‌ನ್ನು ಬಿಡುಗಡೆಗೊಳಿಸಲಾಯಿತು. ಸಂಘದ ನಿವೃತ್ತ ಗ್ರಂಥಪಾಲಕರಾದ ಬೇಸಂಟ್ ಕಾಲೇಜಿನ ಪ್ರೋ ವಾಸಪ್ಪ ಗೌಡ, ಮಾಹೆಯ ಲೀಲಾವತಿಯವರನ್ನು ಸನ್ಮಾನಿಸಲಾಯಿತು. ಅಧ್ಯಾಪಕ ಭೂಷಣಾ ಪ್ರಶಸ್ತಿ ವಿಜೇತೆರಾದ ಯಶೋಧಾ ಹಾಗೂ ವಿಜಯಲಲಿತಾ, ಶಿಕ್ಷಣಾ ಇಲಾಖೆಯಿಂದ ರಾಜ್ಯ ಮಟ್ಟದ ಅತ್ಯುತ್ತಮ ಗ್ರಂಥಪಾಲಕಿ ಪ್ರಶಸ್ತಿ ವಿಜೇತೆ ರಂಜಿತಾ ಸಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಅದಿಥಿ, ಈ ವರ್ಷ ಪಿಎಚ್‌ಡಿ ಪದವಿ ಪಡೆದ ಡಾ ಪ್ರೇಮಾ, ಡಾ ಲೋಕೇಶ್ ಹಾಗೂ ಡಾ ಲೋಕನಾಥ್‌ರನ್ನು ಸನ್ಮಾನಿಸಲಾಯಿತು. ಆಳ್ವಾಸ್ ಕಾಲೇಜಿನ ಗ್ರಂಥಾಲಯ ವಿಭಾಗ ಅಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದರಿಗೆ ಬಹುಮಾನ ವಿತರಿಸಲಾಯಿತು. ಮೈಸೂರು ವಿವಿಯ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ ಆದಿತ್ಯ ಕುಮಾರಿ ಎಚ್, ಆಳ್ವಾಸ್ ಕಾಲೇಜಿನ ಮುಖ್ಯ ಗ್ರಂಥಾಪಾಲಕಿ ಶ್ಯಾಮಲತಾ ಇದ್ದರು. ಕಾರ‍್ಯಗಾರದಲ್ಲಿ ಸಂಘದ 85ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡರು. ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳ ಗ್ರಂಥಾಪಾಲಕರ ಸಂಘದಅಧ್ಯಕ್ಷೆ ಡಾ ರೇಖಾ ಡಿ ಪೈ ಸ್ವಾಗತಿಸಿ, ಕರ‍್ಯದರ್ಶಿ ಡಾ ವನಜಾ ಬಿ. ವಂದಿಸಿ, ಸದಸ್ಯೆ ಡಾ ಸುಜಾತಾ ಕಾರ‍್ಯಕ್ರಮ ನಿರೂಪಿಸಿದರು.

ಚಿಪ್ಪು ತೆಗೆದು ಮುತ್ತನ್ನು ಪಡೆಯುವ ಭಾಷೆ ಸಂಸ್ಕೃತ – ಡಾ. ಶ್ರೀಶ ಕುಮಾರ

Article Image

ಚಿಪ್ಪು ತೆಗೆದು ಮುತ್ತನ್ನು ಪಡೆಯುವ ಭಾಷೆ ಸಂಸ್ಕೃತ – ಡಾ. ಶ್ರೀಶ ಕುಮಾರ

ಕಲ್ಲಬೆಟ್ಟು : ಸಂಸ್ಕೃತ ಭಾಷೆಯು ಸಮುದ್ರದ ಆಳದಿಂದ ಹುಟ್ಟುವ ಮುತ್ತಿನಂತೆ. ಮುತ್ತನ್ನು ಪಡೆಯಲು ಚಿಪ್ಪನ್ನು ಒಡೆದು ನೋಡುವ ಅಗತ್ಯವಿದ್ದಂತೆ ಸಂಸ್ಕೃತವನ್ನು ಅರಿಯಲು ಅದರ ಪಾಠಪುಸ್ತಕದ ಚಿಪ್ಪುಗಳನ್ನು ಮೀರಿ ಒಳನೋಟ ಬೀರಿದರೆ ಅದರ ನಿಜವಾದ ಮೌಲ್ಯವು ನಮ್ಮ ಜೀವನವನ್ನು ಅಂದಗೊಳಿಸುತ್ತದೆ. ಭಾಷೆಯು ವ್ಯಕ್ತಿಗೆ ಆತ್ಮವಿಶ್ವಾಸ ತುಂಬಿ ನೈತಿಕ ನೆಲೆಯಲ್ಲಿ ಬದುಕಿಗೆ ಪ್ರೇರಣೆಯಾಗಿ ಜೀವನದ ಎಲ್ಲ ಬಾಗಿಲುಗಳನ್ನು ತೆರೆಯುವ ಕೀಲಿಕೈ ಇದ್ದಂತೆ. ಭಾರತೀಯ ಜ್ಞಾನ ಪರಂಪರೆಗಳ ಮೂಲಾಧಾರವಾದ ಸಂಸ್ಕೃತ ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಸಂಸ್ಕೃತಿ, ಪರಂಪರೆ, ಮೌಲ್ಯ ಹಾಗೂ ಚಿಂತನೆಗಳ ಜೀವಂತ ಪ್ರತಿರೂಪ. ವಿದ್ಯಾರ್ಥಿಗಳು ಇದರ ಅಂತರಾಳವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಅವರು ನಿಜವಾದ ಜ್ಞಾನವನ್ನು ಸಂಪಾದಿಸುತ್ತಾರೆ. ನೋಡಿ ಆಲಿಸಿ ಸ್ವಯಂ ಚಿಂತನೆಯನ್ನು ಮಾಡಿ ವಿಷಯವನ್ನು ಮಥಿಸಿದರೆ ಕಲಿಕೆ ಪರಿಪೂರ್ಣವಾಗಿ ಬದುಕಿಗೆ ದಾರಿದೀಪವಾಗುವ ಬಗೆಯನ್ನು ಸಂಸ್ಕೃತವು ಸೂತ್ರ ರೂಪದಲ್ಲಿ ತಿಳಿಸಿಕೊಟ್ಟಿದೆ ಎಂದು ಪುತ್ತೂರು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಶ ಕುಮಾರ ಅಭಿಪ್ರಾಯಪಟ್ಟರು. ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ರಶ್ಮಿತಾ ಜೈನ್ ಮಾತನಾಡಿ ನವ ಚೇತನದ ಭಾಷೆಯಾದ ಸಂಸ್ಕೃತವು ವಿಶ್ವ ಭಾಷೆಯಾಗಿ, ಸಂಸ್ಕಾರದ ಬಿಂಬವಾಗಿ ಭಾರತವನ್ನು ಪ್ರತಿನಿಧಿಸುತ್ತಿದೆ. ಭಾರತದ ಪ್ರಾಚೀನ ಸಾಹಿತ್ಯ-ಜ್ಞಾನ ಪರಂಪರೆಯ ಶ್ರೀಮಂತಿಕೆಗೆ ಅನ್ಯದೇಶೀಯರೂ ಒಲವನ್ನು ತೋರುತ್ತಿರುವುದು ಇದಕ್ಕೆ ನಿದರ್ಶನ ಎಂದು ಸಂಸ್ಕೃತ ಮಹತ್ತಿಕೆಯನ್ನು ಕೊಂಡಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭರತನಾಟ್ಯ ಮತ್ತು ಸಂಸ್ಕೃತ ಗೀತಗಾಯನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಸಂಸ್ಕೃತ ಉಪನ್ಯಾಸಕ ತೇಜಸ್ವೀ ಭಟ್ ಸ್ವಾಗತಿಸಿ, ಗಗನ್ ಪಾಟೀಲ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕು. ಹಿಮಾನಿ ಶೆಟ್ಟಿ ನಿರೂಪಿಸಿ ಸಂಸ್ಕೃತ ಶಿಕ್ಷಕ ಪಾರ್ಶ್ವನಾಥ ಜೈನ್ ವಂದಿಸಿದರು.

ಉಜಿರೆ ಎಸ್.ಡಿ.ಎಂ ಕಾಲೇಜು: ಪುಸ್ತಕ ಬಿಡುಗಡೆ ಕಾರ್ಯಕ್ರಮ

Article Image

ಉಜಿರೆ ಎಸ್.ಡಿ.ಎಂ ಕಾಲೇಜು: ಪುಸ್ತಕ ಬಿಡುಗಡೆ ಕಾರ್ಯಕ್ರಮ

ಉಜಿರೆ : ಪ್ರಸ್ತುತ ಸಂದರ್ಭದಲ್ಲಿ ಪುಸ್ತಕ ರಚಿಸಿ ಪ್ರಕಟಣದ ಹಂತಕ್ಕೆ ತರುವುದು ತುಸು ಕಷ್ಟ, ಪ್ರಕಟಗೊಂಡರೂ ಬಳಿಕ ಕಾಡುವ ಪ್ರಶ್ನೆಯೆಂದರೆ ಓದುವ ಸಮೂಹ ಯಾವುದೆಂದು. ಪುಸ್ತಕಗಳಿಂದ ದೊರಕುವ ಅಧಿಕೃತ ಜ್ಞಾನಕ್ಕೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ಆದ್ದರಿಂದ ಪುಸ್ತಕದಿಂದ ದೊರಕುವ ವಿಚಾರವು ಅತ್ಯಂತ ಅಮೂಲ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಹೇಳಿದರು. ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗ ಹಾಗೂ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಮಣ್ಯೇಶ್ವರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಹಾಗೂ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿರುವ ಸಮಗ್ರ ಬೆಳವಣಿಗೆ ಕುರಿತು ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ. ವಿ. ಜೋಶಿ ಹಾಗೂ ಪ್ರೊ. ರಮೇಶ್ ಸಾಲಿಯಾನ್ ಅವರು ಬರೆದಿರುವ "ಎ ಸರ್ಚ್ ಫಾರ್ ಇನ್ ಕ್ಲೂಸಿವ್ ಗ್ರೋಥ್ ಇನ್ ಅರ್ಥಶಾಸ್ತ್ರ" ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅರ್ಥಶಾಸ್ತ್ರ ವಿಭಾಗದಿಂದ ಸಂಪಾದಿಸಲಾದ ಮುಖ್ಯ ಸಂಕಲನಕಾರ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಮತ್ತು ಸಹ ಸಂಕಲನಕಾರ ಡಾ. ಗಣರಾಜ ಕೆ. ರವರಿಂದ ಮೂಡಿದ "ರೂರಲ್ ಡೆವಲಪ್ಮೆಂಟ್ ಫಾರ್ ಜಾಬ್ ಕ್ರಿಯೇಶನ್ ಅಂಡ್ ಪಾವರ್ಟಿ ಅಲಿವೇಶನ್ ಇನ್ ಎಮರ್ಜಿಂಗ್ ಎಕನಾಮೀಸ್" ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಳಿಸಿ ಮಾತನಾಡಿದ ಡಾ.ಸತೀಶ್ಚಂದ್ರ ಎಸ್. ಅವರು ಸಾವಿರ ಎರಡು ಸಾವಿರ ವರ್ಷಗಳ ಹಿಂದೆಯೇ ದೂರದೃಷ್ಟಿಯನ್ನು ಹಾಯಿಸಿ ಒಂದು ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ಏನೆಲ್ಲಾ ಮಾಡಬೇಕು ಹಾಗೂ ಆರ್ಥಿಕವಾಗಿ ಎಷ್ಟು ಬಲಿಷ್ಠರಾಗಿರಬೇಕು ಎಂಬ ಮಾಹಿತಿಯನ್ನು ಕೌಟಿಲ್ಯನು ಅಂದಿನ ಕಾಲದಲ್ಲಿ ಈ ಅರ್ಥಶಾಸ್ತ್ರದಲ್ಲಿ ಒಳಗೊಡಿಸಿಕೊಂಡಿದ್ದನು. ಪುಸ್ತಕಗಳನ್ನು ಓದುವವರು ಕಡಿಮೆಯಾಗಿರುವ ಈ ಕಾಲಘಟ್ಟದಲ್ಲಿ ಈ ರೀತಿಯ ಮಾಹಿತಿ ಕಾರ್ಯಗಾರಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗುತ್ತದೆ. ಕಾಲೇಜಿನಲ್ಲಿ ಹಲವಾರು ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಬಳಿಕ ಡಾ. ಜಿ. ವಿ.ಜೋಶಿ, ತಾವು ಬರೆದ ಪುಸ್ತಕದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉದ್ದೇಶಿಸಲಾದ 'ಒಳಗೊಳ್ಳುವಿಕೆಯ ಮೂಲಕ ಅಭಿವೃದ್ಧಿ' ಎಂಬ ವಿಷಯದ ಮೇಲೆ ವಿಚಾರ ಮಂಡನೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮಾತನಾಡಿ, ಈಗಿನ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದುವರೆಯುವ ಆಸಕ್ತಿ ಇರುತ್ತದೆ. ಕೆಲವರಿಗೆ ಮುಂದೇನು ಮಾಡಬೇಕು ಎನ್ನುವ ಖಚಿತತೆ ಇರುವುದಿಲ್ಲ. ಸಾಹಿತ್ಯಾಸಕ್ತರು ಕಾಲೇಜು ಜೀವನದಿಂದಲೇ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕಾಲೇಜು ಉತ್ತಮ ವೇದಿಕೆ. ತಮ್ಮ ಆಯ್ಕೆಯ ವಿಷಯದ ಜೊತೆಗೆ ಪುಸ್ತಕಗಳ ಒಲವನ್ನು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ನವದೆಹಲಿಯ ಜೆ.ಎನ್. ಯು. ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ರಮೇಶ್ ಸಾಲಿಯನ್ ಸೇರಿದಂತೆ. ಕಾರ್ಯಕ್ರಮ ಸಂಯೋಜಕರಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗಣರಾಜ ಕೆ. ಹಾಗೂ ಸುಬ್ರಹ್ಮಣ್ಯ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ. ಟಿ. ಹಾಗೂ ಪ್ರಾಧ್ಯಾಪಕ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಕಾರ್ಯಕ್ರಮ ಸಂಯೋಜಕ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಗಣರಾಜ ಕೆ. ಸ್ವಾಗತಿಸಿ, ರಕ್ಷಾ ಆರ್. ದೇವಾಡಿಗ ವಂದಿಸಿದರು. ವಿದ್ಯಾರ್ಥಿನಿ ಮಾನ್ಯ ಕೆ.ಅರ್. ಕಾರ್ಯಕ್ರಮವನ್ನು ನಿರೂಪಿಸಿದರು.

ಮಹಿಳಾ ಕ್ಷೇಮಪಾಲನಾ ಸಮಿತಿಯ 2025-26ರ ಚಟುವಟಿಕೆಗಳ ಉದ್ಘಾಟನೆ

Article Image

ಮಹಿಳಾ ಕ್ಷೇಮಪಾಲನಾ ಸಮಿತಿಯ 2025-26ರ ಚಟುವಟಿಕೆಗಳ ಉದ್ಘಾಟನೆ

ಮೂಡುಬಿದಿರೆ: ಪಿಯುಸಿ ಹಂತವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟ. ಈ ಅವಧಿಯಲ್ಲಿ ಪ್ರತಿಯೊಬ್ಬರೂ ತಮ್ಮ ಗುರಿಯನ್ನು ಸಾಧಿಸಲು ಕ್ರಿಯಾಶೀಲರಾಗಬೇಕು. ನಿಜವಾದ ಕ್ರಿಯಾಶೀಲತೆಯೇ ಯಶಸ್ಸಿನ ದಾರಿಯನ್ನು ತೆರೆದಿಡುತ್ತದೆ ಎಂದು ಆಳ್ವಾ ಫಾರ್ಮಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗ್ರೀಷ್ಮಾ ಆಳ್ವ ನುಡಿದರು. ಅವರು ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಹಾಗೂ ಆಂತರಿಕ ಸಮಿತಿಯ 2025-26ರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವಕಾಶಗಳು ಎಲ್ಲರಿಗೂ ಸಮಾನವಾಗಿ ಲಭ್ಯ, ಆದರೆ ಅದನ್ನು ಬಳಸಿಕೊಳ್ಳುವ ರೀತಿಯೇ ಭವಿಷ್ಯವನ್ನು ನಿರ್ಧರಿಸುತ್ತದೆ. ತಪ್ಪು-ಸರಿಗಳನ್ನು ಅರಿತು ಯೌವ್ವನದಲ್ಲಿ ಜಾಗರೂಕತೆಯಿಂದ ಹೆಜ್ಜೆಯಿಡಬೇಕು. ಸಾಧನೆಯ ಹಂಬಲವಿದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಲ್ಲಿ ಗೊಂದಲ, ನೋವು, ರೋಷ, ಹತಾಶೆ, ಆತಂಕ ಇಂತಹ ಭಾವನೆಗಳು ಸಾಮಾನ್ಯ. ಇದು ವ್ಯಕ್ತಿತ್ವದ ಬೆಳವಣಿಗೆಯ ಒಂದು ಹಂತ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಭಾವನೆಗಳೊಂದಿಗೆ ಮುನ್ನಡೆಯಲು ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರ ಬೆಂಬಲ ಅಗತ್ಯ. ನಮ್ಮ ಜೀವನದಲ್ಲಿ ಪ್ರತಿ ಒಬ್ಬರಿಗೂ ಆದರ್ಶ ವ್ಯಕ್ತಿಯೊಬ್ಬ ಅಗತ್ಯ. ‘ನನ್ನ ಆದರ್ಶ ಯಾರು? ಅವರು ನನಗೆ ಏಕೆ ಆದರ್ಶ?’ ಎಂಬ ಪ್ರಶ್ನೆಯನ್ನು ಆತ್ಮಾವಲೋಕನದಿಂದ ಅರಿತು ಸಾಗಿದರೆ ಜೀವನದಲ್ಲಿ ಗುರಿಸಾಧಿಸಲು ಸಾಧ್ಯ. ಆದರ್ಶ ವ್ಯಕ್ತಿಯ ಜೀವನಶೈಲಿ, ಪರಿಶ್ರಮ, ಮೌಲ್ಯಗಳು ಮತ್ತು ಧೈರ್ಯವನ್ನು ಅವಲೋಕಿಸಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಾವು ಸಹ ಶ್ರೇಷ್ಠತೆಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಮಹಿಳಾ ಕ್ಷೇಮಪಾಲನಾ ಸಮಿತಿ ಸಂಯೋಜಕಿ ಕೀರ್ತನಾ ಶೆಟ್ಟಿ ಮತ್ತು ಆಂತರಿಕ ಸಮಿತಿ ಸಂಯೋಜಕಿ ಡಾ. ಸುಲತಾ ವಿದ್ಯಾಧರ್ ಇದ್ದರು. ವಿದ್ಯಾರ್ಥಿನಿ ಮಧು ಕಾರ್ಯಕ್ರಮ ನಿರೂಪಿಸಿ, ನಿಧಿ ಸ್ವಾಗತಿಸಿ, ಪೂರ್ವಿ ವಂದಿಸಿದರು.

ಎಸ್ ಡಿ ಎಂ ನಲ್ಲಿ ಸಂಸ್ಕೃತ ಸಂಧ್ಯಾ ಕಾರ್ಯಕ್ರಮ

Article Image

ಎಸ್ ಡಿ ಎಂ ನಲ್ಲಿ ಸಂಸ್ಕೃತ ಸಂಧ್ಯಾ ಕಾರ್ಯಕ್ರಮ

ಉಜಿರೆ, ಅ 21 : ಸಂಸ್ಕೃತ ಭಾಷೆ ನಶಿಸಿ, ಅಳಿಸಿ ಹೋಗಲು ಬಿಡದೇ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ. ಮೂಲ ಭಾಷೆಯನ್ನ ನಾವು ಮಾತನಾಡಿ, ಅಭಿವೃದ್ಧಿಗೊಳಿಸಬೇಕು ಎಂದು ಇಲ್ಲಿನ ಶ್ರೀ .ಧ. ಮಂ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್ ಹೇಳಿದರು. ಇಲ್ಲಿನ ಶ್ರೀ. ಧ. ಮಂ ಕಾಲೇಜು (ಸ್ವಾಯತ್ತ) ಮತ್ತು ಶ್ರೀ. ಧ. ಮಂ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ವಿಭಾಗದ ಜಂಟಿ ಆಶ್ರಯದಲ್ಲಿ ಇಂದು (21/08) ಸಂಸ್ಕೃತ ಸಂಧ್ಯಾ- ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ತರಗತಿಗಳನ್ನ ನಡೆಸುವಾಗ ಆದಷ್ಟು ಸಂಸ್ಕೃತ ಭಾಷೆಯಲ್ಲೇ ಸಂಭಾಷಣೆಯನ್ನು ನಡೆಸ ಬೇಕು. ದಿನ ನಿತ್ಯವೂ ಕೂಡ ಕನಿಷ್ಠ ಒಂದು ವಾಕ್ಯವನ್ನು ಸಂಸ್ಕೃತದಲ್ಲಿ ಮಾತನಾಡುವುದಕ್ಕೆ ಎಲ್ಲರೂ ಅಭ್ಯಾಸ ಮಾಡಬೇಕು ಎಂದು ಸಂಸ್ಕೃತ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು. ವಿಭಾಗದ ವತಿಯಿಂದ ಮುಂದಿನ ದಿನಗಳಲ್ಲಿ ಸಂಸ್ಕೃತ ಭಾಷೆ, ಸಂಸ್ಕೃತಿಯನ್ನ ಉಳಿಸಿ ಬೆಳೆಸುವಂತಹ ಹಲವಾರು ಕಾರ್ಯಕ್ರಮಗಳು ಬರಲಿ ಎಂದು ಅವರು ಶುಭಹಾರೈಸಿದರು. ಪದವಿ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಮತ್ತು ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಎನ್ ಭಟ್ ಅಧ್ಯಕ್ಷೀಯ ಸ್ಥಾನವಹಿಸಿ ಮಾತನಾಡಿದರು. ಸಂಸ್ಕೃತ ದೇವ ಭಾಷೆ. ಯಾಕೆಂದರೆ ಹಿಂದೆ ದೇವತೆಗಳು ಪರಸ್ಪರ ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಮಾತ್ರವಲ್ಲದೇ ಹಿಂದಿನ ಕಾಲದಲ್ಲಿ ಜನರು ಪರಸ್ಪರ ಸಂಸ್ಕೃತ ಭಾಷೆಯಲ್ಲೇ ಸಂಸ್ಕೃತ ಭಾಷೆಯಲ್ಲೇ ವ್ಯವಹರಿಸುತ್ತಿದ್ದರು. ಬ್ರಿಟೀಷರು ನಮ್ಮ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ನಂತರವೇ ನಮ್ಮ ದೇಶದಲ್ಲಿ ಸಂಸ್ಕೃತ ಭಾಷೆಯ ಉಪಯೋಗ ಕಡಿಮೆಯಾಗಿದ್ದು ಎಂದು ಅವರು ಹೇಳಿದರು. ಪ್ರಾಚೀನ ಕಾಲದಲ್ಲಿ ನಮ್ಮೆಲ್ಲರ ಮಾತೃ ಭಾಷೆ ಸಂಸ್ಕೃತವೇ ಆಗಿತ್ತು. ಆದ್ದರಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನಮ್ಮನಿಂದ ಆದಷ್ಟು ಸಂಸ್ಕೃತ ಭಾಷೆಯನ್ನ ನಮ್ಮ ಸಂಭಾಷಣೆಯಲ್ಲಿ ಪ್ರಯೋಗ ಮಾಡುವ ಪ್ರಯತ್ನವನ್ನು ಮಾಡಿದರೆ ಮಾತ್ರ ಭಾಷೆಯ ಮೇಲೆ ನಮಗೆ ಪ್ರೀತಿ, ಅಭಿಮಾನ ಹುಟ್ಟುತ್ತದೆ ಎಂದು ಅವರು ಹೇಳಿದರು. ವಿಭಾಗದ ವತಿಯಿಂದ ಪ್ರತಿ ತಿಂಗಳು ಹೊರತರುವ “ಸುಬೋಧಿನಿ” ಬಿತ್ತಿ ಪತ್ರದ ವಿಶೇಷಾಂಕವನ್ನು ಉದ್ಘಾಟಕರು ಬಿಡುಗಡೆಗೊಳಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಸಂಸ್ಕೃತ ಭಾಷಾ ಪತ್ರಿಕೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪದವಿ ಪೂರ್ವ ಕಾಲೇಜಿನ ಸಂಸ್ಕೃತ ವಿಭಾಗ ಪ್ರಾಧ್ಯಾಪಕ ಡಾ. ಪ್ರಸನ್ನ ಕುಮಾರ್ ಐತಾಳ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಲಕಾ, ಆತ್ಮಿಕ ನಿರೂಪಿಸಿ, ಹಿರಿಯ ವಿದ್ಯಾರ್ಥಿನಿ ಹಾಗೂ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ ವಂದಿಸಿದರು. ಸಂಸ್ಕೃತ ಭಾಷೆಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮ ಸಂಯೋಜಕ, ಸಹ ಪ್ರಾಧ್ಯಾಪಕ ಶ್ರೇಯಸ್. ಜೆ. ಪಾಳಂದೆ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಶೈಕ್ಷಣಿಕ ಚಟುವಟಿಕೆ ಉದ್ಘಾಟನೆ

Article Image

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಶೈಕ್ಷಣಿಕ ಚಟುವಟಿಕೆ ಉದ್ಘಾಟನೆ

ಸಾವಯವ ಕೃಷಿಗೆ ಸಂಬಂಧಿಸಿ ಹಲವಾರು ಯೋಜನೆಗಳು ಜಾರಿಗೆ ಬಂದರೂ ಬಳಸಿಕೊಳ್ಳದೆ ರಾಸಾಯನಿಕ ಗೊಬ್ಬರ, ಔಷಧಿಗೆ ಮೊರೆಹೊಗುವ ಮಾನವನ ಅತಿಯಾಸೆಯಿಂದಾಗಿ ಪರಿಸರದ ಮೇಲೆ ಅತ್ಯಾಚಾರವಾಗುತ್ತಿದೆ ಎಂದು ಉಜಿರೆಯ ಸಿವಿಲ್ ಇಂಜಿನಿಯರ್ ಜಗದೀಶ್ ಪ್ರಸಾದ್ ಕಳವಳ ವ್ಯಕ್ತಪಡಿಸಿದರು. ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಜು.30 ರಂದು ಅವರು ಸಸ್ಯಶಾಸ್ತ್ರ ವಿಭಾಗದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಹಾಗೂ ಸಸ್ಯಸೌರಭ ಮತ್ತು ಇಕೋ ಕ್ಲಬ್ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು. ಹವಾಮಾನದಲ್ಲಿ ಏರಿಳಿತ ಏಕೆ ಆಗುತ್ತಿದೆ ಎಂದು ಸಂಶೋಧಿಸಿದಾಗ ರಾಸಾಯನಿಕಗಳನ್ನು ಭೂಮಿಗೆ ಸಿಂಪಡಿಸುವುದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿರುವುದೇ ಕಾರಣ ಎಂದು ಕಂಡುಕೊಳ್ಳಲಾಗಿದೆ. ತೋಟಗಳಲ್ಲಿ ಸಿಂಪಡಿಸಿದ ರಾಸಾಯನಿಕಗಳು ಮಳೆ ನೀರಿನೊಂದಿಗೆ ಅಂತರ್ಜಲಕ್ಕೇ ಸೇರಿ ಜೀವಕ್ಕೆ ಮಾರಕವಾಗುತ್ತಿವೆ. ಹಣ ಮಾಡಬೇಕು ಎಂಬ ಆಸೆಗೆ ಬಿದ್ದು ಭೂಮಿಯ ಫಲವತ್ತತೆ ಹಾಳು ಮಾಡಲಾಗುತ್ತಿದೆ ಎಂದರು. ವಿದ್ಯಾವಂತರಾಗಿರುವ ಪ್ರಸ್ತುತ ಪೀಳಿಗೆ ಕೂಡ ಕೃಷಿ ಸಂಬಂಧಿತ ವಿಷಯದಲ್ಲಿ ರಾಸಾಯನಿಕ ಔಷಧಿ ಬಳಸುತ್ತಿದೆ. ಆ ಮೂಲಕ ಪರಿಸರದ ಬಲಿಗೆ ಕಾರಣವಾಗುತ್ತಿದೆ. ಪರಿಸರಕ್ಕೆ ಇನ್ನೊಂದು ಸವಾಲು ಪ್ಲಾಸ್ಟಿಕ್. ಇದನ್ನು ನಿರ್ಮೂಲನೆ ಮಾಡಲು ಎಷ್ಟೇ ಕ್ರಮಗಳು ಬಂದರೂ ಅದನ್ನು ಯಾರೂ ಪಾಲಿಸುತ್ತಿಲ್ಲ. ಯುವಜನತೆ ಈ ಬಗ್ಗೆ ಚಿಂತಿಸಬೇಕು ಎಂದು ಸಲಹೆ ನೀಡಿದರು. "ಇವತ್ತಿನ ಯುವಸಮಾಜ ನಮ್ಮ ದೇಶದ ರಾಯಭಾರಿ ಇದ್ದಂತೆ. ದೇಶದ ಗತಿಯನ್ನು ಉತ್ತುಂಗಕ್ಕೆ ಏರಿಸುವ ಶಕ್ತಿ ಯುವಜನತೆಗಿದೆ. ದೇಶದ ಹಾಗೂ ಪ್ರಪಂಚದ ಭವಿಷ್ಯವನ್ನು ಬದಲಾಯಿಸಲು ಸಾಧ್ಯ ಎಂದರೆ ಅದು ನಿಮ್ಮಂತಹ ಯುವ ಜನತೆಯಿಂದ ಮಾತ್ರ. ದೇಶವನ್ನು ಭದ್ರಗೊಳಿಸುವ ಶಕ್ತಿ ನಿಮ್ಮಲ್ಲಿ ಇದೆ” ಎಂದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಕುಂತಲಾ ಅವರು ವಿಭಾಗದ ಬಗ್ಗೆ ಮಾತನಾಡಿದರು. ವಿಭಾಗದ ಭಿತ್ತಿಪತ್ರಿಕೆ 'ಸಸ್ಯಸೌರಭ' ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ವಿಭಾಗದಲ್ಲಿ 34 ವರ್ಷಗಳಿಂದ ಸಹಾಯಕರಾಗಿದ್ದು, ನಿವೃತ್ತಿ ಹೊಂದಿದ ಜಿನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ರಾವ್ ಹಾಗೂ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಪದ್ಮಶ್ರೀ ಸ್ವಾಗತಿಸಿ, ಚಿತ್ಕಲಾ ಹಾಗೂ ತಂಡದವರು ಪ್ರಾರ್ಥಿಸಿದರು. ಯುವಿಕಾ ವಂದಿಸಿದರು. ನಿಕಿತಾ ಹಾಗೂ ಜ್ಯೋತಿಕಾ ಕಾರ್ಯಕ್ರಮ ನಿರೂಪಿಸಿದರು.

ಭಾವನಾತ್ಮಕ ಬುದ್ಧಿಮತ್ತೆ ಬೆಳವಣಿಗೆಯಿಂದ ಯಶಸ್ಸು ಸಾಧ್ಯ: ಅಶ್ವಿನಿ ಹೆಚ್

Article Image

ಭಾವನಾತ್ಮಕ ಬುದ್ಧಿಮತ್ತೆ ಬೆಳವಣಿಗೆಯಿಂದ ಯಶಸ್ಸು ಸಾಧ್ಯ: ಅಶ್ವಿನಿ ಹೆಚ್

ಭಾವನಾತ್ಮಕವಾಗಿ ಬಲವಾದರೆ, ಅದು ಜೀವನದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಹೆಚ್. ಹೇಳಿದರು. ಎಸ್.ಡಿ.ಎಂ. ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗ ಜು.28ರಂದು ಆಯೋಜಿಸಿದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಶೈಕ್ಷಣಿಕ ಯಶಸ್ಸಿಗೆ ಭಾವನಾತ್ಮಕ ಬುದ್ಧಿಮತ್ತೆ’ ಕುರಿತು ಮಾತನಾಡಿದರು. “ಭಾವನಾತ್ಮಕ ಬುದ್ಧಿಮತ್ತೆ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ನಮ್ಮ ಭಾವನೆಗಳನ್ನು ಅರ್ಥೈಸಿಕೊಳ್ಳುವುದರ ಜೊತೆಗೆ ಇತರರ ಭಾವನೆಗಳನ್ನೂ ಅರ್ಥಮಾಡಿಕೊಳ್ಳುವ ಈ ಗುಣ ಹುಟ್ಟಿದಾಗಿನಿಂದ ಬರುವಂಥದ್ದಲ್ಲ; ನಾವು ಬೆಳೆಸಿಕೊಂಡು ಹೋಗುವಂತದ್ದು. ಅದನ್ನು ಸ್ಥಿರವಾಗಿ ಇಟ್ಟುಕೊಂಡು ನಮ್ಮ ಗುರಿಯ ಕಡೆ ಮುನ್ನಡೆಯುವುದು ಮುಖ್ಯ. ಭಾವನಾತ್ಮಕ ಬುದ್ಧಿಮತ್ತೆ ಸ್ಥಿರವಾಗಿದ್ದರೆ ಯಾವುದೇ ರೀತಿಯ ಮಾನಸಿಕ ಒತ್ತಡಗಳಾದರೂ ಅದರಿಂದ ಹೊರಬರುವ ದಾರಿ ಕಂಡುಕೊಳ್ಳಬಹುದು” ಎಂದು ಅವರು ತಿಳಿಸಿದರು. ಇತ್ತೀಚೆಗೆ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಅತಿಯಾದ ಉದ್ವೇಗದಿಂದ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದು ಕಂಡು ಬರುತ್ತಿದೆ. ಅದಕ್ಕೆ ಕಾರಣ ಭಾವನಾತ್ಮಕ ಬುದ್ಧಿಮತ್ತೆಯ ಕೊರತೆ. ಅದನ್ನು ಹತೋಟಿಯಲ್ಲಿಡಲು, ಅದರಿಂದಾಗುವ ಸಮಸ್ಯೆಗಳನ್ನು ನಿವಾರಿಸಲು, ಮಾನಸಿಕ ಒತ್ತಡ ಕಡಿಮೆ ಮಾಡಲು, ಮೊದಲು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ. ನಂತರ ನಿಮ್ಮ ದಿನನಿತ್ಯದ ದಿನಚರಿಯನ್ನು ಟೈಮ್ ಟೇಬಲ್ ಮಾಡಿ, ಅದರ ಮೇಲೆ ಕೆಲಸ ಮಾಡಿ, ನಿಮ್ಮ ಶಕ್ತಿ ಹಾಗೂ ದೌರ್ಬಲ್ಯಗಳ ಬಗ್ಗೆ ಅರ್ಥ ಮಾಡಿಕೊಂಡು, ನಿಮ್ಮ ಗುರಿ ಕುರಿತು ಚಿಂತಿಸಿ. ಅನಗತ್ಯ ಆಲೋಚನೆಗಳನ್ನು ಬಿಟ್ಟು ಸ್ವಲ್ಪ ಸಮಯ ಧ್ಯಾನ ಮಾಡಿ ಎಂದು ಸಲಹೆ ನೀಡಿದರು. ಶೈಕ್ಷಣಿಕ ನೆಲೆಯಲ್ಲಿ ಭಾವನಾತ್ಮಕ ಬುದ್ಧಿಮತ್ತೆಯು ಒತ್ತಡಗಳಿಂದ ಹೊರಬಂದು, ಗುರಿಯ ಕಡೆಗೆ ಏಕಾಗ್ರತೆ ವಹಿಸಿ, ಭಾವನೆಗಳನ್ನು ಹತೋಟಿಯಲ್ಲಿ ಹಿಡಿದು, ಸ್ನೇಹಿತರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಉತ್ತಮ ಸಂವಹನ ವೃದ್ಧಿಸಲು ಸಹಾಯ ಮಾಡುತ್ತದೆ. ವಿಶ್ವವಿದ್ಯಾಲಯಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ ಭಾವನಾತ್ಮಕ ಬುದ್ಧಿಮತ್ತೆ ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ಸಂಶೋಧನೆ ಪ್ರಕಾರ ಯಾವುದೇ ಕಂಪೆನಿಯಲ್ಲಿ ಉನ್ನತ ಹುದ್ದೆ ಗಳಿಸಬೇಕಾದರೆ ಭಾವನಾತ್ಮಕ ಬುದ್ಧಿಮತ್ತೆ ಉತ್ತಮವಾಗಿರುವುದು ಅಗತ್ಯ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಭಾವನಾತ್ಮಕ ಬುದ್ಧಿಮತ್ತೆಯನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕರಾದ ಶರಸ್ಚಂದ್ರ ಕೆ.ಎಸ್., ಗುರುರಾಜ್ ಕೆ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯ ನಿಕಾಯದ ಡೀನ್ ಹಾಗೂ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥೆ ಶಕುಂತಲಾ ಸ್ವಾಗತಿಸಿದರು. ವಿದ್ಯಾರ್ಥಿ ಯಶವಂತ್ ಅತಿಥಿ ಪರಿಚಯ ನೀಡಿದರು. ತೇಜಸ್ವಿನಿ ವಿ.ಎಸ್. ವಂದಿಸಿ, ವಿಷ್ಮಾ ಜಿ. ಹಾಗೂ ಏಂಜಲ್ ನಿರೂಪಿಸಿದರು.

ಬೆಳ್ತಂಗಡಿ ಮುಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Article Image

ಬೆಳ್ತಂಗಡಿ ಮುಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

ಬೆಳ್ತಂಗಡಿ ಮುಳಿಯದಲ್ಲಿ ಮುಳಿಯ ಗೋಲ್ಡ್ & ಡೈಮಂಡ್ಸ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆಯು ಆಗಸ್ಟ್ 23ರಂದು ಸಂಜೆ 3.00ಗಂಟೆಗೆ ಬೆಳ್ತಂಗಡಿ ಮುಳಿಯ ಶೋರೂಮ್ ಮುಂಭಾಗದಲ್ಲಿ ನಡೆಯಲಿದೆ. ಮುದ್ದು ಕೃಷ್ಣ- 0-3 ವರ್ಷ ಬಾಲ ಕೃಷ್ಣ- 4-7 ವರ್ಷ ರಾಧಾ ಕೃಷ್ಣ- 8-12 ವರ್ಷ (ಇಬ್ಬರು ಕಡ್ಡಾಯ). ಸ್ಪರ್ಧೆಯ ನಿಬಂಧನೆಗಳು * ಆಗಸ್ಟ್ 21 ರ ಒಳಗೆ ನೋಂದಾಯಿಸಿಕೊಳ್ಳಬೇಕು * ತೀರ್ಪುಗಾರರ ತೀರ್ಮಾನವೇ ಅಂತಿಮ * ನಿರ್ದಿಷ್ಟ ಸಮಯಕ್ಕೆ ಹಾಜರಿರಬೇಕು * ಸ್ಪರ್ಧಿಗಳು ತಮ್ಮ ಆಧಾರ್ ಕಾರ್ಡ್ ತರಬೇಕು * ಪ್ರತಿ ವಿಭಾಗಕ್ಕೂ ನಿರ್ದಿಷ್ಟ ಸಮಯ ನೀಡಲಾಗುವುದು (2-3 ನಿಮಿಷ) * ಪ್ರತಿ ವಿಭಾಗಕ್ಕೂ ವೇಷ ಭೂಷಣವನ್ನು ತಯಾರಿ ಮಾಡಿಕೊಂಡು ಬರಬೇಕು * ಸ್ಪರ್ಧಿಗಳು ತಮಗೆ ಬೇಕಾದ ಹಾಡನ್ನು ತಾವೇ ತರಬೇಕು * ಫೋಟೋಶೂಟ್ ಮಾಡಲು ಮುಕ್ತ ಅವಕಾಶ * ವಿಜೇತ ಸ್ಪರ್ಧಾಳುಗಳ ಫೋಟೋ ವೀಡಿಯೋವನ್ನು ಮುಳಿಯ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಾಕಲಾಗುವುದು * ವಿಜೇತ ಸ್ಪರ್ಧಿಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ನೋಂದಾವಣೆಗಾಗಿ: 9902349916 8792530916.

First Previous

Showing 2 of 10 pages

Next Last