Article Image 1 Article Image 2

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಕಿವಿ-ಮೂಗು-ಗಂಟಲು ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಕಿವಿ-ಮೂಗು-ಗಂಟಲು ತಪಾಸಣಾ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದಲ್ಲಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಫೆ.6ರಂದು ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಶಿಬಿರ ನಡೆಯಿತು. ಉಜಿರೆಯ ಸುರಕ್ಷಾ ಮೆಡಿಕಲ್ ಇದರ ಮಾಲಕರಾದ ಶ್ರೀಧರ್ ಕೆ.ವಿ ಇವರು ಉಚಿತ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೆಲವು ವರ್ಷಗಳ ಹಿಂದೆ ಸಾವಿರಕ್ಕೆ 14 ಮರಣ ಪ್ರಮಾಣ ಇತ್ತು. ಇದೀಗ 6.9ಕ್ಕೆ ಇಳಿದಿದೆ. ಇದಕ್ಕೆ ಮುಖ್ಯ ಕಾರಣ ಸುಧಾರಿತ ವೈದ್ಯಕೀಯ ಚಿಕಿತ್ಸೆ. ಉಜಿರೆ ಎಸ್.ಡಿ.ಎಂ ಆಸ್ಪತೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯುತ್ತಿದೆ. ಮಂಗಳೂರು ಬಿಟ್ಟರೆ ಸುಸಜ್ಜಿತ ಆಸ್ಪತ್ರೆಯಾಗಲಿ, ಪ್ರಯೋಗಾಲಯವಾಗಲಿ ಆಸುಪಾಸಿನಲ್ಲಿ ಇರಲಿಲ್ಲಿ. ಆ ದಿನಗಳಲ್ಲಿ ಎಷ್ಟೋ ಬಾರಿ ನಾನು ನನ್ನ ಮೆಡಿಕಲ್ ಶಾಪ್ ಮಧ್ಯರಾತ್ರಿ ತೆರೆದು ಜನರಿಗೆ ಔಷಧಿ ನೀಡಿದ್ದೇನೆ. ಪೂಜ್ಯರು ಉಜಿರೆಯಲ್ಲಿ ಎಸ್,ಡಿ.ಎಂ ಆಸ್ಪತ್ರೆಯನ್ನು ನಿರ್ಮಿಸಿದ ಬಳಿಕ ಬೆಳ್ತಂಗಡಿ ಮತ್ತು ಆಸುಪಾಸಿನ ತಾಲೂಕಿನ ಜನತೆಗೆ ಸಿಟಿ ಸ್ಕ್ಯಾನ್, ಸುಸಜ್ಜಿತ ಲ್ಯಾಬ್ ಮತ್ತು ಎಲ್ಲಾ ವೈದ್ಯಕೀಯ ಸೇವೆ ದೊರೆಯಿತು ಎಂದರು. ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಇವರು ಮಾತನಾಡಿ-ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರು ಇದ್ದಾರೆ. ಮೂಳೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ 5 ಮಂದಿ ನುರಿತ ತಜ್ಞ ವೈದ್ಯರಿದ್ದು, ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ಎಲ್ಲಾ ಶಸ್ತ್ರಚಿಕಿತ್ಸೆಗಳು ಇಲ್ಲಿ ನಡೆಸಲ್ಪಡುತ್ತಿದೆ. ತಾಲೂಕಿನಲ್ಲಿ ಮನೋರೋಗ ತಜ್ಞರು ಪ್ರತಿದಿನ ಲಭ್ಯವಿರುವ ಏಕೈಕ ಆಸ್ಪತ್ರೆ ಇದಾಗಿದೆ. ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದ, ಕಿವಿ-ಮೂಗು-ಗಂಟಲು ಸಂಬಂಧಿಸಿದ ಕೆಲವೊಂದು ಶಸ್ತ್ರಚಿಕಿತ್ಸೆಗಳನ್ನು ನಮ್ಮ ವೈದ್ಯರು ನಮ್ಮ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸುತ್ತಿದ್ದು, ಜನರ ಪಾಲಿಗೆ ಈ ಆಸ್ಪತ್ರೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಕ್ರಿಟಿಕಲ್ ಕ್ಯಾರ್ ತಜ್ಞರು ಮತ್ತು ನ್ಯೂರೋ ಸರ್ಜನ್ ನಮ್ಮ ಆಸ್ಪತ್ರೆಯಲ್ಲಿ ಪ್ರತಿದಿನ ಲಭ್ಯವಿರಲಿದ್ದು, ಪೂಜ್ಯ ಹೆಗ್ಗಡೆಯವರ ಆಶೀರ್ವಾದದಲ್ಲಿ ಶೀಘ್ರದಲ್ಲಿ ಎಂ.ಆರ್.ಐ ಸೇವೆ ಕೂಡ ದೊರೆಯಲಿದೆ ಎಂದರು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಲೆ ಮತ್ತು ಕುತ್ತಿಗೆಯ ಆಂಕೊಸರ್ಜನ್, ಕಿವಿ-ಮೂಗು-ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇವತ್ತಿನ ಶಿಬಿರದಲ್ಲಿ ಕ್ಯಾನ್ಸರ್ ಸ್ಕ್ರೀನಿಂಗ್‌ಗೆ ಹೆಚ್ಚು ಮಹತ್ವ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ರೋಗ ಪತೆ ಹಚ್ಚುವುದರಿಂದ ಮುಂದೆ ಸಂಭವಿಸಬಹುದಾದ ಭಯಾನಕ ತೊಂದರೆಯನ್ನು ಸುಲಭದಲ್ಲಿ ನಿವಾರಿಸಿಕೊಳ್ಳಬಹುದು. ಇದರೊಂದಿಗೆ ಈ ಶಿಬಿರದಲ್ಲಿ ಶ್ರವಣ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ ಕೂಡ ನಡೆಸಲಿದ್ದೇವೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಉಪಸ್ಥಿತರಿದ್ದು, ಶಿಬಿರಕ್ಕೆ ಶುಭಹಾರೈಸಿದರು. ಸ್ಟೋರ್ ಇನ್‌ಚಾರ್ಜ್ ಜಗನ್ನಾಥ ಎಂ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಷಕ್ಯೂಟಿವ್ ಸುಮಂತ್ ರೈ ಸಹಕರಿಸಿದರು.

ರುಡ್‌ಸೆಟ್ ಸಂಸ್ಥೆ ಸಿದ್ದವನ ಉಜಿರೆ: 6 ದಿನಗಳ NRLM – One GP One BC Sakhi ತರಬೇತಿ ಸಮಾರೋಪ

Article Image

ರುಡ್‌ಸೆಟ್ ಸಂಸ್ಥೆ ಸಿದ್ದವನ ಉಜಿರೆ: 6 ದಿನಗಳ NRLM – One GP One BC Sakhi ತರಬೇತಿ ಸಮಾರೋಪ

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರುಡ್‌ಸೆಟ್ ಸಂಸ್ಥೆ, ಸಿದ್ದವನ, ಉಜಿರೆ ಯಲ್ಲಿ ನಡೆದ 6 ದಿನಗಳ ‘NRLM – One GP One BC Sakhi’ ತರಬೇತಿ ಕಾರ್ಯಕ್ರಮವು ಭಾನುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜೇಯ ಅವರು ಅಧ್ಯಕ್ಷತೆ ವಹಿಸಿದರು. ಹರಿಪ್ರಸಾದ್ – NRLM ಜಿಲ್ಲಾ ಪಂಚಾಯತ್ ಕಾರ್ಯಕ್ರಮ ಸಂಯೋಜಕ, ಶಕುಂತಲಾ – NRLM ಜಿಲ್ಲಾ ವ್ಯವಸ್ಥಾಪಕ, ಉಷಾ – ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಮಾಲೋಚಕಿ, ಅಬ್ರಹಾಂ ಜೇಮ್ಸ್ – ಹಿರಿಯ ಉಪನ್ಯಾಸಕ, ರುಡ್‌ಸೆಟ್, ಕೆ. ಕರಣಾಕರ ಜೈನ್ – ಉಪನ್ಯಾಸಕ, ರುಡ್‌ಸೆಟ್ ಕಾರ್ಯಕ್ರಮವು ಪ್ರೇಮಲತಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಮಾರಂಭಕ್ಕೆ ಅಶ್ವಿನಿ ಅವರು ಹೃತ್ಪೂರ್ವಕ ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ಹರ್ಷಿತಾ ಅವರು ಧನ್ಯವಾದಗಳನ್ನು ಸಲ್ಲಿಸಿದರು. ತರಬೇತಿಯಲ್ಲಿ ಭಾಗವಹಿಸಿದ BC Sakhi ಗಳು ತಮ್ಮ ಅನುಭವಗಳನ್ನು ಹೃದಯಂಗಮವಾಗಿ ಹಂಚಿಕೊಂಡರು. ಅನುಭವ ಹಂಚಿಕೆಗೆ ಇವರು ತಮ್ಮ ಕಲಿಕೆ, practically ಅನುಭವ, ಮತ್ತು ತರಬೇತಿಯಿಂದ ಪಡೆದ ಆತ್ಮವಿಶ್ವಾಸದ ಬಗ್ಗೆ ಮಾತನಾಡಿದರು. ಅತಿಥಿಗಳು ಮಾತನಾಡಿ BC Sakhi ಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಬ್ಯಾಂಕಿಂಗ್ ಸೌಲಭ್ಯಗಳನ್ನು ಮನೆಮನೆಗೂ ತಲುಪಿಸುವ ಪ್ರಮುಖ ಕೊಂಡಿ ಎಂದು ಪ್ರಶಂಸಿಸಿದರು. NRLM ಯೋಜನೆ ಮಹಿಳೆಯರ ಸಬಲೀಕರಣ, ಡಿಜಿಟಲ್ ಸಾಕ್ಷರತೆ, ಮತ್ತು SHG ಚಟುವಟಿಕೆಗಳ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ನಿರ್ದೇಶಕರಾದ ಅಜೇಯ ಮಾತನಾಡಿ, ರುಡ್‌ಸೆಟ್ ಸಂಸ್ಥೆಯ practically ತರಬೇತಿ BC Sakhi ಗಳನ್ನು ಗ್ರಾಮೀನ ಬ್ಯಾಂಕಿಂಗ್ಕ್ಷೇ ತ್ರದಲ್ಲಿ ಸಮರ್ಥವಾಗಲು ಸಹಕಾರಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ತರಬೇತಿಯ ಪ್ರಮುಖ ಅಂಶಗಳು 6 ದಿನಗಳ ತರಬೇತಿಯಲ್ಲಿ ಭಾಗವಹಿಸಿದವರಿಗೆ: ಡಿಜಿಟಲ್ ಬ್ಯಾಂಕಿಂಗ್, ಬ್ಯಾಂಕಿಂಗ್ ಕರಸ್ಪಾಂಡೆಂಟ್ ಕಾರ್ಯವಿಧಾನ, SHG–NRLM ಚಟುವಟಿಕೆಗಳು, ಹಣಕಾಸು ಸಾಕ್ಷರತೆ, ಬ್ಯಾಂಕ್ ಲಿಂಕೆಜ್, MIS & Documentation ಇತ್ಯಾದಿ ವಿಷಯಗಳಲ್ಲಿ practically ಮಾರ್ಗದರ್ಶನ ನೀಡಲಾಯಿತು. ಭಾಗವಹಿಸಿದವರು ತರಬೇತಿ ತಮ್ಮ ಗ್ರಾಮದಲ್ಲಿ ಸುಲಭ ಮತ್ತು ಪರಿಣಾಮಕಾರಿ ಬ್ಯಾಂಕಿಂಗ್ ಸೇವೆ ಒದಗಿಸಲು ಸಹಕರಿಸುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದರು. ಶಿಸ್ತುಪಾಲನೆ, practically ಕಲಿಕೆ ಮತ್ತು ಉತ್ತಮ ಮಾರ್ಗದರ್ಶನದಿಂದ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು.

ಶಾಂತಿವನ ಟ್ರಸ್ಟ್(ರಿ.) ಶ್ರೀ ಕ್ಷೇತ್ರ ಧರ್ಮಸ್ಥಳ-ಮೌಲ್ಯಾಧಾರಿತ ಪುಸ್ತಕಗಳ ಜಿಲ್ಲಾ ಮಟ್ಟದ ಸ್ಪರ್ಧೆ

Article Image

ಶಾಂತಿವನ ಟ್ರಸ್ಟ್(ರಿ.) ಶ್ರೀ ಕ್ಷೇತ್ರ ಧರ್ಮಸ್ಥಳ-ಮೌಲ್ಯಾಧಾರಿತ ಪುಸ್ತಕಗಳ ಜಿಲ್ಲಾ ಮಟ್ಟದ ಸ್ಪರ್ಧೆ

ಪುಂಜಾಲಕಟ್ಟೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌ (ರಿ.) ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ "ಜ್ಞಾನ ರಥ" ಮತ್ತು "ಜ್ಞಾನ ಪಥ" ನೈತಿಕ ಮೌಲ್ಯಾಧಾರಿತ ಪುಸ್ತಕಗಳ ವಿವಿಧ ಸ್ಪರ್ಧೆಗಳು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪುಂಜಾಲಕಟ್ಟೆಯಲ್ಲಿ ನಡೆಯಿತು. ಮಡಂತ್ಯಾರು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ರೂಪಾ ನವೀನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಎಳೆಯ ಪ್ರಾಯದಲ್ಲಿ ದೊರೆಯುವ ಉತ್ತಮ ಸಂಸ್ಕಾರ, ಆಚಾರ-ವಿಚಾರಗಳಿಂದ ಉತ್ತಮ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಬೆಳ್ತಂಗಡಿ ತಾಲೂಕುನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಕೇಸರಿಯವರು ಆಗಮಿಸಿ ಎಲ್ಲಾ ಸ್ಪರ್ಧಿಗಳಿಗೆ ಶುಭಕೋರಿದರು. ವೇದಿಕೆಯಲ್ಲಿ ಕೆ.ಪಿ.ಎಸ್‌ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಡಾ| ಸರೋಜಿನಿ ಆಚಾರ್‌, ಉಪಪ್ರಾಂಶುಪಾಲರಾದ ನಿರಂಜನ್‌ ಜೈನ್‌, ನಿವೃತ್ತ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಸೋಮಶೇಖರ್‌ ಶೆಟ್ಟಿ, ಪುತ್ತೂರಿನ ಕಾಂಚನ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ರಮೇಶ್‌ ಮಯ್ಯರವರು ಉಪಸ್ಥಿತರಿದ್ದರು. ಯೋಜನೆಯ ನಿರ್ದೇಶಕರಾದ ಡಾ| ಶಶಿಕಾಂತ್‌ ಜೈನ್‌ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು, ಶಿಕ್ಷಕಿ ಜಯಂತಿರವರು ವಂದಿಸಿದರು. ಸಂಸ್ಥೆಯ ಶಿಕ್ಷಕರಾದ ಧರಣೇಂದ್ರ ಕೆ. ಜೈನ್‌ರವರು ಕಾರ್ಯಕ್ರಮ ನಿರೂಪಿಸಿದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಮಾತೃ ಸ್ಪರ್ಶ ವಿಭಾಗದ ಉದ್ಘಾಟಣೆ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಮಾತೃ ಸ್ಪರ್ಶ ವಿಭಾಗದ ಉದ್ಘಾಟಣೆ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗ ಹಾಗೂ ಎಸ್.ಡಿ.ಎಂ. ನರ್ಸಿಂಗ್ ಕಾಲೇಜಿನ ಸ್ತ್ರೀರೋಗ ಮತ್ತು ಪ್ರಸೂತಿ ನರ್ಸಿಂಗ್ ವಿಭಾಗವು ಜಂಟಿಯಾಗಿ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಅತ್ಯಂತ ಅಗತ್ಯವಿರುವ ‘ಮಾತೃ ಸ್ಪರ್ಶ’ ವಿಭಾಗವನ್ನು ಪ್ರಾರಂಭಿಸಲಾಯಿತು. ಈ ವಿಭಾಗವು ಎಲ್ಲಾ ಗರ್ಭಿಣಿಯರಿಗೆ ಮತ್ತು ಹೆರಿಗೆಯ ನಂತರದ ತಾಯಂದಿರಿಗೆ ಸ್ತನ್ಯಪಾನ ತಂತ್ರಗಳು ಮತ್ತು ಮಕ್ಕಳಿಗೆ ಹಾಲುಣಿಸುವ ವಿಧಾನಗಳ ಕುರಿತು ಶಿಕ್ಷಣ ಮತ್ತು ಸಲಹೆ ನೀಡುತ್ತದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು ಮುಖ್ಯ ಅತಿಥಿಗಳಾಗಿದ್ದು ಮಾತೃ ಸ್ಪರ್ಶ ವಿಭಾಗವನ್ನು ಉದ್ಘಾಟಿಸಿ, ಮಾತನಾಡುತ್ತಾ ಎಲ್ಲಾ ಪ್ರಸವಪೂರ್ವ ಮತ್ತು ಪ್ರಸವೋತ್ತರ ತಾಯಂದಿರೂ ಮಾತೃ ಸ್ಪರ್ಶ ಸೇವೆಗಳನ್ನು ಬಳಸಿಕೊಳ್ಳಬೇಕು. ಸ್ತನ್ಯಪಾನ ಅಥವಾ ಹಾಲುಣಿಸುವಲ್ಲಿ ಯಾವುದೇ ಅಡಚಣೆ ಎದುರಿಸುವ ತಾಯಂದಿರು ವೈದ್ಯರು ಮತ್ತು ಮಾತೃ ಸ್ಪರ್ಶ ತಂಡವನ್ನು ಸಂಪರ್ಕಿಸಬಹುದು. ರೋಗಿಗಳ ಸುಧಾರಣೆಗೆ ಅಗತ್ಯವಿರುವ ಎಲ್ಲಾ ಉತ್ತಮ ಸೌಲಭ್ಯಗಳನ್ನು ಎಸ್.ಡಿ.ಎಂ. ವಿಶ್ವವಿದ್ಯಾಲಯವು ಒದಗಿಸುತ್ತದೆ. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ, ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯ್ಕ, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗ್ಡೆ, ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಸುನಿಲ್, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಎಸ್.ಡಿ.ಎಂ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ದೇಶಪಾಂಡೆ ಮತ್ತು ಉಪ ಪ್ರಾಂಶುಪಾಲರಾದ ಡಾ. ರಂಗಪ್ಪ ಆಶಿ, ಹಿರಿಯ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಪ್ರಾಧ್ಯಾಪಕರಾದ ಡಾ. ವಿದ್ಯಾ ಕಾಮತ್ ಮತ್ತು ಡಾ. ಸುನಿತಾ, ಹಾಗೂ ನರ್ಸಿಂಗ್ ಅಧೀಕ್ಷಕಿಯವರಾದ ಮಂಜುಳಾ ಕೆ.ಬಿ ಉಪಸ್ಥಿತರಿದ್ದರು. ಸ್ತ್ರೀ ರೋಗ ಮತ್ತು ಪ್ರಸೂತಿ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಮಣಿ ಬಿಜ್ಲೀ ಅವರು ಮಾತೃ ಸ್ಪರ್ಶದ ಹೊಸ ವಿಭಾಗದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಪ್ರಿಯಾಂಕಾ ಅತಿಥಿಗಳನ್ನು ಸ್ವಾಗತಿಸಿದರು. ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು. ಗೀತಾ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.

ವಿಜೃಂಭಣೆಯಿಂದ ನೆರವೇರಿದ ಗೌರಿ ಮಾರುಕಟ್ಟೆ ಉತ್ಸವ

Article Image

ವಿಜೃಂಭಣೆಯಿಂದ ನೆರವೇರಿದ ಗೌರಿ ಮಾರುಕಟ್ಟೆ ಉತ್ಸವ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಐದನೇ ದಿನ ಗೌರಿ ಮಾರುಕಟ್ಟೆ ಉತ್ಸವವು ಲಕ್ಷಾಂತರ ಭಕ್ತ ಸಮ್ಮುಖದಲ್ಲಿ ವಿಜೃಂಭಜಣೆಯಿಂದ ಜರುಗಿತು. ಲಕ್ಷದೀಪೋತ್ಸವದ ಕೊನೇಯ ದಿನ ಗೌರಿ ಮಾರುಕಟ್ಟೆ ಉತ್ಸವವು ನಡೆದಿದ್ದು, ದೇವಸ್ಥಾನದಲ್ಲಿ ಶ್ರೀ ಮಂಜುನಾಥ ದೇವರಿಗೆ ಪೂಜೆಯನ್ನು ಸಲ್ಲಿಸುವುದರೊಂದಿಗೆ ಉತ್ಸವ ಆರಂಭಗೊಂಡಿತು. 16 ಸುತ್ತು ದೇವಳದ ಒಳಾಂಗಣದಲ್ಲಿ ಪ್ರದಕ್ಷಿಣೆಯ ನಂತರ ಹೊರಾಂಗಣಕ್ಕೆ ಉತ್ಸವಮೂರ್ತಿಯನ್ನು ಕರೆತರಲಾಯಿತು. ತದನಂತರ ಉತ್ಸವ ಮೂರ್ತಿಯನ್ನು ಸರ್ವಾಲಂಕೃತವಾದ ಬೆಳ್ಳಿರಥದಲ್ಲಿ ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು. ಓಲಗ, ಚೆಂಡೆ, ಗೊಂಬೆಗಳ ಕುಣಿತ, ಜಗ್ಗಲಿಗೆ, ಬ್ಯಾಂಡ್ ಸೆಟ್ ,ವೀರಗಾಸೆ, ಡೊಳ್ಳು ಕುಣಿತ ತಮತೆ, ವಾದ್ಯಗಳ ಸೇವೆ ಸಲ್ಲಿಸಲಾಯಿತು. ವಿವಿಧ ವರ್ಣದ ಛತ್ರಿ ಛಾಮರ ದ್ವಜಗಳೊಂದಿಗೆ ರಥಬೀದಿಯಲ್ಲಿ ಸಾವಿರಾರು ಭಕ್ತರ ಉದ್ಘೋಷದೊಂದಿಗೆ ಗೌರಿಮಾರು ಕಟ್ಟೆಗೆ ರಥವನ್ನು ಎಳೆಯಲಾಯಿತು.ಮೂರ್ತಿಯನ್ನು ಗೌರಿಮಾರುಕಟ್ಟೆಯ ಕಟ್ಟೇಯ ಮೇಲೆ ಕುಳ್ಳಿರಿಸಿ ಚತುರ್ವೇದ, ಸಂಗೀತ, ಮೌರ್ಯವಾದ್ಯ, ಸರ್ವವಾದ್ಯಗಳಿಂದ ಸ್ವಾಮಿಗೆ ಅಷ್ಟವಿಧಾನ ಸೇವೆಯನ್ನು ನೆರವೇರಿಸಲಾಯಿತು. ಗೌರಿ ಮಾರುಕಟ್ಟೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ರಥ ಬೀದಿಯ ಮಾರ್ಗವಾಗಿ ದೇವರನ್ನು ದೇವಸ್ಥಾನದ ಬಳಿ ತರಲಾಯಿತು. ದೇವಸಾನ್ದ ಒಂದು ಸುತ್ತು ಪ್ರದಕ್ಷಿಣೆ ಹಾಕಿ, ದೇವರ ಮೂರ್ತಿಯನ್ನು ದೇವಳದ ಒಳಗೆ ಕರೆದೊಯ್ಯುವುದರೊಂದಿಗೆ ಗೌರಿ ಮಾರುಕಟ್ಟೆ ಉತ್ಸವವು ಸಂಪನ್ನಗೊಂಡಿತ್ತು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಮೆಸ್ಕಾಂ ಅಧ್ಯಕ್ಷರ ಭೇಟಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಮೆಸ್ಕಾಂ ಅಧ್ಯಕ್ಷರ ಭೇಟಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಮೆಸ್ಕಾಂ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ. ಹರೀಶ್ ಕುಮಾರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಪೂಜ್ಯ ಖಾವಂದರರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬೆಳ್ತಂಗಡಿ ತಾಲೂಕು ಮಾತ್ರವಲ್ಲದೆ ಆಸುಪಾಸಿನ ತಾಲೂಕಿನಲ್ಲಿ ದೊರೆಯದ ಅತ್ಯಾಧುನಿಕ ಹೈಟೆಕ್ ವೈದ್ಯಕೀಯ ಸೇವೆ ಇಲ್ಲಿ ದೊರೆಯುತ್ತಿದೆ. ಈ ಆಸ್ಪತ್ರೆಯ ಸೇವೆ ವಿಸ್ತಾರವಾಗುತ್ತಿದ್ದು, ಜನತೆಗೆ ಇನ್ನೂ ಹೆಚ್ಚಿನ ವೈದ್ಯಕೀಯ ಸೇವೆ ಸಿಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೀಪಾವಳಿಯಂದು ಆಯೋಜಿಸಲಾಗಿದ್ದ ವಿವಿಧ ವಿಭಾಗಗಳ ಅಲಂಕಾರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕೆ. ಹರೀಶ್ ಕುಮಾರ್ ಬಹುಮಾನ ವಿತರಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಕ್ಟೋಬರ್ 24 ಮತ್ತು 25 ರವರೆಗೆ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರವು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಡೆಯಿತು. ಶಿಬಿರವನ್ನು ಉಜಿರೆ ಎಸ್.ಡಿ.ಎಂ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಇವರು ಉದ್ಘಾಟಿಸಿ ಬಳಿಕ ಮಾತನಾಡುತ್ತಾ, 58 ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ಪೂಜ್ಯರು ಚತುರ್ವಿದ ದಾನಗಳನ್ನು ದೇಶಾದ್ಯಂತ ವಿಸ್ತರಿಸಿದರು. ಜನರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ 50 ವರ್ಷಗಳ ಹಿಂದೆ ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಸ್ಥಾಪಿಸಿ ಸಂಚಾರಿ ಆಸ್ಪತ್ರೆಯ ಮೂಲಕ ಹಳ್ಳಿಯ ಜನತೆಯ ಆರೋಗ್ಯ ರಕ್ಷಣೆಗೆ ಒಂದು ನೂತನ ವ್ಯವಸ್ಥೆ ಕಲ್ಪಿಸಿದರು. ಉಜಿರೆಯಂತಹ ಗ್ರಾಮೀಣ ಭಾಗದಲ್ಲಿ ಎಸ್.ಡಿ.ಎಂ ಆಸ್ಪತ್ರೆಯನ್ನು ನಿರ್ಮಿಸಿ ದೂರದ ದುರ್ಗಮ ದಾರಿ ಇರುವ ಮಂಗಳೂರಿಗೆ ರೋಗಿಗಳು ಅಲೆದಾಡುವ ಸಂಕಷ್ಟವನ್ನು ಪೂಜ್ಯರು ನಿವಾರಿಸಿದರು. ಪೂಜ್ಯರ ಆಶಯದಂತೆ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸೇವೆ ನಿರಂತರ ನಡೆಯಲಿ ಎಂದು ಶುಭ ಹಾರೈಸಿದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ದನ್ ಅವರು ಮಾತನಾಡಿ ಸಮಾಜಕ್ಕೆ ಸದುಪಯೋಗವಾಗುವ ಯಾವ ಕಾರ್ಯವಿದ್ದರೂ ಪೂಜ್ಯರು ಅತ್ಯಂತ ಆಸಕ್ತಿಯಿಂದ ಅನುಮತಿ ನೀಡುವುದರಿಂದ ನಮಗೆ ಇಂತಹ ಉಚಿತ ಶಿಬಿರಗಳನ್ನು ನಡೆಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೂಳೆಯ ಸಮಸ್ಯೆ ಜಾಸ್ತಿಯಾಗಿ ಕಂಡುಬರುತ್ತಿರುವುದರಿAದ ಈ ದಿನ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ನಮ್ಮಲ್ಲಿ 5 ಮಂದಿ ಮೂಳೆ ಚಿಕಿತ್ಸಾ ತಜ್ಞರಿದ್ದು ಇಲ್ಲಿ ಮೂಳೆಗೆ ಸಂಬAಧಿಸಿದ ಎಲ್ಲಾ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮಾತನಾಡಿ, ಈ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ನುರಿತ ತಜ್ಞ ವೈದ್ಯರಿದ್ದು, ಕ್ಲಿಷ್ಟಕರವಾದ ಶಸ್ತçಚಿಕಿತ್ಸೆಗಳನ್ನು ಕೂಡ ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಮತ್ತು ಮೂಳೆ ಚಿಕಿತ್ಸಾ ತಜ್ಞರಾದ ಡಾ| ದೇವೇಂದ್ರ ಕುಮಾರ್. ಪಿ, ಮೂಳೆ ಚಿಕಿತ್ಸಾ ತಜ್ಞರಾದ ಡಾ| ಪ್ರತೀಕ್ಷ್ ಪಿ, ಡಾ| ಹರೀಶ್ ಬಿ.ಎಸ್, ಡಾ| ಶತಾನಂದ ಪ್ರಸಾದ್ ರಾವ್, ಡಾ| ರಜತ್ ಹೆಚ್.ಪಿ ಇವರು ಮೂಳೆ ಸಾಂದ್ರತೆ ತಪಾಸಣೆಯ ಬಗ್ಗೆ ವಿವರಿಸಿದರು. ಈ ಶಿಬಿರದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಶಸ್ತçಚಿಕಿತ್ಸಾ ತಜ್ಞರುಗಳಾದ ಡಾ| ಪ್ರತೀಕ್ಷ್.ಪಿ, ಡಾ| ಹರೀಶ್ ಬಿ.ಎಸ್, ಡಾ| ದೇವೇಂದ್ರ ಕುಮಾರ್. ಪಿ, ಡಾ| ಶತಾನಂದ ಪ್ರಸಾದ್ ರಾವ್, ಡಾ| ರಜತ್ ಹೆಚ್.ಪಿ ಭಾಗವಹಿಸಿ ರೋಗಿಗಳ ತಪಾಸಣೆ ನಡೆಸಿದರು. ಶಿಬಿರದಲ್ಲಿ ಉಚಿತ ವೈದ್ಯರ ಸಮಾಲೋಚನೆ, ಉಚಿತ ಮೂಳೆ ಸಾಂದ್ರತೆ ಪರೀಕ್ಷೆ, ಉಚಿತ ಎಕ್ಸ್ರೇ, ಒಳರೋಗಿ ವಿಭಾಗದಲ್ಲಿ ಸರ್ಜರಿ ಮೇಲೆ 10% ರಿಯಾಯಿತಿ, ಹೊರರೋಗಿ ವಿಭಾಗದಲ್ಲಿ ರಕ್ತ ಪರೀಕ್ಷೆ ಮತ್ತು ರೆಡಿಯೋಲಾಜಿ ಪರೀಕ್ಷೆಯಲ್ಲಿ 20% ರಿಯಾಯಿತಿ, ಔಷಧದಲ್ಲಿ 10% ರಿಯಾಯಿತಿ ನೀಡಲಾಯಿತು. ಶಿಬಿರದಲ್ಲಿ 425 ಮಂದಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದರು. ಆಸ್ಪತ್ರೆಯ ಸ್ಟೋರ್ ಮೆನೇಜರ್ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಷಕ್ಯೂಟಿವ್ ಸುಮಂತ್ ರೈ ಹಾಗೂ ಸಂಪರ್ಕಾಧಿಕಾರಿ ಚಿದಾನಂದ ಸಹಕರಿಸಿದರು.

ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಸ್ವಾಗತ ಕಾರ್ಯಕ್ರಮ

Article Image

ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಸ್ವಾಗತ ಕಾರ್ಯಕ್ರಮ

ಸತ್ತೂರು, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ದಿನಾಂಕ 8ನೇ ಅಕ್ಟೊಬರ್ 2025ರಂದು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲತಿಗಳಾದ ಡಾ. ನಿರಂಜನ್ ಕುಮಾರ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ನಿರಂಜನ್ ಕುಮಾರ್ ಅವರು ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮಾತನಾಡುತ್ತಾ: ಕಾಲೇಜಿನ ಶಿಸ್ತು ನಿಯಮಗಳನ್ನು ಪಾಲಿಸುತ್ತಾ, ವಿದ್ಯಾರ್ಜನೆಯ ಕಡಿ ಗಮನ ಕೊಡಬೇಕು. ವೃತ್ತಿ ಶಿಕ್ಷಣದಲ್ಲಿ ಕಠಿಣ ಪರಿಶ್ರಮವು ಆರಂಭದಿಂದಲೇ ಪ್ರಾರಂಭಿಸಿ ಪ್ರಗತಿ ಹೊಂದಬೇಕು. ಶಿಸ್ತು ಬದ್ಧ ವಿದ್ಯಾರ್ಥಿ ಜೀವನವು ಉತ್ತಮ ದಂತ ವೈದ್ಯರನ್ನಾಗಿಸುತ್ತದೆ. ಸಮಯ ಪ್ರಜ್ಞೆ, ಚುರುಕುತನದಂತಹ ಒಳ್ಳೆಯ ಅಭ್ಯಾಸಗಳಿಂದ ವಿದ್ಯಾರ್ಥಿಗಳು ಉತ್ತಮ ವೃತ್ತಿಪರರಾಗಬಹುದು. ಪ್ರಸಿದ್ಧ ವ್ಯಕ್ತಿಗಳ ಸಾಮಿಪ್ಯ ಮತ್ತು ಅವರ ಆದರ್ಶಗಳನ್ನು ಪಾಲಿಸುವುದರಿಂದ ನಾವು ಬಲಿಷ್ಠರಾಗುತ್ತೆವೆ. ಆರೋಗ್ಯ ವೃತ್ತಿಪರರು ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದರು. ಕಾರ್ಯನಿರ್ವಾಹಕ ನಿರ್ದೇಶಕಿಯರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ ಕುಮಾರ, ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯ್ಕ್, ಉಪ ಪ್ರಾಂಶುಪಾಲರಾದ ಡಾ. ಆನಂದ ತಾವರಗೇರೆ, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತಿತರ ಗಣ್ಯರ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ಡಾ. ಲೇಖಾ ಪಿಳೈ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಮೇಘನಾ ಮೇರಿ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಡಾ. ರವಿ ಶಿರಹಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಎಸ್.ಡಿ.ಎಂ ಕಾಲೇಜಿನಲ್ಲಿ ರಸಾಯನಶಾಸ್ತ್ರ ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

Article Image

ಎಸ್.ಡಿ.ಎಂ ಕಾಲೇಜಿನಲ್ಲಿ ರಸಾಯನಶಾಸ್ತ್ರ ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಉಜಿರೆ ಅಕ್ಟೋಬರ್ 8: ರಸಾಯನಶಾಸ್ತ್ರವೂ ಸೇರಿದಂತೆ ವಿವಿಧ ಜ್ಞಾನಶಿಸ್ತು ವಲಯಗಳು ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ಕೇಂದ್ರ ಆಶಯವಾಗಿಸಿಕೊಂಡು ಸಂಶೋಧನಾತ್ಮಕ ಹೆಜ್ಜೆಗಳನ್ನಿರಿಸಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು "ಇನೋವೇಷನ್ಸ್ ಇನ್ ಕೆಮಿಸ್ಟ್ರಿ ಮೆಟೀರಿಯಲ್ಸ್ ಆ್ಯಂಡ್ ಮೆಡಿಸಿನ್ಸ್ ಫಾರ್ ಸಸ್ಟೇನೇಬಲ್ ಸೊಸೈಟಿ" ಶೀರ್ಷಿಕೆಯಡಿ ಹಮ್ಮಿಕೊಂಡ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಅಕ್ಯಾಡೆಮಿಕ್ ವಲಯದ ಸಂಶೋಧನೆಯು ಐದು ಪ್ರಧಾನ ಅಂಶಗಳನ್ನು ಒಳಗೊಳ್ಳಬೇಕು. ಜನತೆ, ಅಭ್ಯುದಯ, ಸಹಭಾಗಿತ್ವ, ಶಾಂತಿ ಮತ್ತು ಭೂಮಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಅನ್ವೇಷಣೆಗಳನ್ನು ನಡೆಯಬೇಕು. ವೈಜ್ಞಾನಿಕತೆ ಮತ್ತು ತಾಂತ್ರಿಕತೆಯ ಅಸ್ತಿತ್ವವನ್ನು ಸುಸ್ಥಿರತೆಯೊಂದಿಗೆ ಸಮೀಕರಿಸಬೇಕು. ಆ ಮೂಲಕ ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಬೇಕು. ಈ ಹಿನ್ನೆಲೆಯಲ್ಲಿ ರಸಾಯನಶಾಸ್ತ್ರ ವಲಯದ ಸಂಶೋಧನೆಗಳು ಮುನ್ನಡೆಯಬೇಕು ಎಂದರು. ಮನುಷ್ಯರು ಭೂಮಿಯ ಮಾಲೀಕರಲ್ಲ. ಭೂಮಿಯ ಮೂಲಕ ಸಿಗುತ್ತಿರುವ ಪ್ರಯೋಜನಗಳ ಫಲಾನುಭವಿಗಳು. ಭೂಮಿಯನ್ನು ಸಂರಕ್ಷಿಸುವ ಜವಾಬ್ದಾರಿ ಮನುಕುಲದ ಮೇಲಿದೆ. ಇದನ್ನು ಅರ್ಥೈಸಿಕೊಂಡು ವಿವಿಧ ಕ್ಷೇತ್ರಗಳ ಸಂಶೋಧನಾತ್ಮಕ ಅಸ್ಮಿತೆ ಪ್ರಖರಗೊಳ್ಳಬೇಕು ಎಂದು ಹೇಳಿದರು. ಸುಸ್ಥಿರ ಪರಿಕಲ್ಪನೆಯು ಜನರ ಅಭ್ಯುದಯವನ್ನು ಸಹಭಾಗಿತ್ವದ ಆಲೋಚನಾ ಕ್ರಮದ ಆಧಾರದಲ್ಲಿ ಸಾಕಾರಗೊಳಿಸುವಲ್ಲಿ ನೆರವಾಗುತ್ತದೆ. ಜನಸಮುದಾಯಗಳ ಒಳಗೊಳ್ಳುವಿಕೆಯ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ವಲಯದಲ್ಲಿ ಸಮುದಾಯಗಳ ನಡುವಿನ ಸೌಹಾರ್ದತೆ, ಪ್ರಾದೇಶಿಕವಾಗಿ ನೆಲೆಸುವ ಶಾಂತಿಯ ಆಯಾಮಗಳ ಮೂಲಕ ಅಭಿವೃದ್ಧಿಯ ಹೆಜ್ಜೆಗಳನ್ನು ಸುಸ್ಥಿರಗೊಳಿಸಬೇಕು. ಹಾಗಾದಾಗ ಮಾತ್ರ ಭೂಮಿಯನ್ನು ಸಂರಕ್ಷಿಸಿಕೊಳ್ಳುವುದು ಸಾಧ್ಯ ಎಂದರು. ಜರ್ಮನಿಯ ಇನ್ಸ್ಟಿ ಟ್ಯೂಟ್ ಆಫ್ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲಿಬ್ನೆಜ್‌ನ ಸಂಶೋಧಕ ಉಲ್ರಿಚ್ ಕೆ ರೊಝಲರ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪಾಶ್ಚಾತ್ಯ ದೇಶಗಳಲ್ಲಿ ಸಂಶೋಧನಾ ಸ್ವಾತಂತ್ರ್ಯ ಅಪಾಯದಲ್ಲಿದೆ. ಅಮೆರಿಕಾ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳಲ್ಲಿ ಸಂಶೋಧನಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ವ್ಯಾಪಕ ಸ್ವಾತಂತ್ರ್ಯದ ಅವಕಾಶಗಳನ್ನು ಉಳಿಸಿಕೊಂಡು ರಸಾಯನಶಾಸ್ತ್ರವೂ ಸೇರಿದಂತೆ ವಿವಿಧ ವೈಜ್ಞಾನಿಕ ಸಂಶೋಧನೆಗಳನ್ನು ಸಮಗ್ರಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ಮಾತನಾಡಿದರು. ದೈನಂದಿನ ಬದುಕಿನ ಆದ್ಯತೆಗಳು ಮತ್ತು ವೈಜ್ಞಾನಿಕ ತಾಂತ್ರಿಕ ಅನ್ವೇಷಣೆಗಳು ಪರಸ್ಪರ ಪೂರಕ ಅಂತರ್‌ಸಂಬಂಧ ಹೊಂದಿವೆ. ವೈದ್ಯಕೀಯ, ಸಂವಹನ ಸೇರಿದಂತೆ ದೈನಂದಿನ ಬದುಕಿನ ಎಲ್ಲಾ ವಲಯಗಳಿಗೂ ಬೇಕಾಗುವ ರೀತಿಯಲ್ಲಿ ರಸಾಯನಶಾಸ್ತ್ರದ ಸಂಶೋಧನೆಗಳು ಪೂರಕವಾಗಿವೆ. ಈ ಸಂಶೋಧನೆಯ ಸ್ವರೂಪವನ್ನು ಸುಸ್ಥಿರತೆಗೆ ಪಕ್ಕಾಗಿಸುವ ಪ್ರಧಾನ ಆಶಯದೊಂದಿಗೆ ಚರ್ಚೆಗಳು ನಡೆಯಬೇಕಾಗಿದೆ ಎಂದರು. ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಶಿವರಾಮ ಹೊಳ್ಳ, ತಮಿಳುನಾಡಿನ ಕರೈಕುಡಿಯ ಸೆಂಟ್ರಲ್ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ನಿರ್ದೇಶಕ ಡಾ. ರಮೇಶ್ ಕೆ, ಗೋವಾದ ಸಿಂಜೆಂಟಾ ಬಯೋಸೈನ್ಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಭಾನು ಮಂಜುನಾಥ್ ನಾರಾಯಣ್ ಉಪಸ್ಥಿತರಿದ್ದರು. ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಸಂಯೋಜಕಿ ಹಾಗೂ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಹ ಪ್ರಾಧ್ಯಾಪಕಿ ಡಾ. ನಫೀಸತ್ ಪಿ ನಿರೂಪಿಸಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ, ಸಹ ಪ್ರಾಧ್ಯಾಪಕಿ ಡಾ. ಶಶಿಪ್ರಭಾ ವಂದಿಸಿದರು.

ಬೆಳ್ತಂಗಡಿ: ಉಚಿತ ಆರ್ಥೋ ತಪಾಸಣಾ ಶಿಬಿರ

Article Image

ಬೆಳ್ತಂಗಡಿ: ಉಚಿತ ಆರ್ಥೋ ತಪಾಸಣಾ ಶಿಬಿರ

ಬೆಳ್ತಂಗಡಿ: ಗಣೇಶ್ ವೈದ್ಯಕೀಯ ಮತ್ತು ಅಪಘಾತ ಚಿಕಿತ್ಸಾ ಕೇಂದ್ರ ಪ್ರಯೋಜಕತ್ವದಲ್ಲಿ ಅ. 6ರಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 1ಗಂಟೆವರೆಗೆ ವಿಶ್ವ PT ದಿನ 2025 ಅಂಗವಾಗಿ ಉಚಿತ ಆರ್ಥೋ ತಪಾಸಣಾ ಶಿಬಿರ. ಥೀಮ್: ಆರೋಗ್ಯಕರ ವೃದ್ಧಾಪ್ಯ ಮತ್ತು ಬಲಹೀನತೆ ನಿವಾರಣೆ. ಸೌಲಭ್ಯಗಳು: ಉಚಿತ ಆರ್ಥೋ ಸಮಾಲೋಚನೆ, ಉಚಿತ ಫಿಸಿಯೋ ಸಮಾಲೋಚನೆ, ಉಚಿತ ಮೂಳೆ ಸಾಂದ್ರತೆ ತಪಾಸಣೆ, ಮನೆ ಮಟ್ಟಿಗೆ ಸೂಕ್ತ ವ್ಯಾಯಾಮ ಕಾರ್ಯಕ್ರಮ, ಕುತ್ತಿಗೆ ನೋವು, ಬೆನ್ನು ನೋವು, ಭುಜದ ನೋವು, ಮೊಣಕಾಲು ನೋವು. ಸ್ಥಳ: ಗಣೇಶ್ ಮೆಡಿಕಲ್ ಮತ್ತು ಟ್ರಾಮಾ ಕೇರ್ ಸೆಂಟರ್‌ ಬಸ್‌ನಿಲ್ದಾಣದ ಎದುರು ಬೆಳ್ತಂಗಡಿ-574214, ನೇಮಕಾತಿಗಳಿಗಾಗಿ ಸಂಪರ್ಕಿಸಿರಿ ಮೊಬೈಲ್: 9480953331, 9448548731.

2025ರ ಅವ್ವ ಪ್ರಶಸ್ತಿಗಳಿಗೆ ಪುಸ್ತಕ ಆಹ್ವಾನ

Article Image

2025ರ ಅವ್ವ ಪ್ರಶಸ್ತಿಗಳಿಗೆ ಪುಸ್ತಕ ಆಹ್ವಾನ

ಬೆಂಗಳೂರು 2025ರ ಅವ್ವ ಸೃಜನಶೀಲ ಸಾಹಿತ್ಯ ಹಾಗೂ ಅವ್ವ ದತ್ತಿ ಪ್ರಶಸ್ತಿಗಳಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ. ಲೇಖಕ ಲೇಖಕಿಯರು ತಮ್ಮ ಪುಸ್ತಕಗಳನ್ನು ಕಳುಹಿಸಲು ನವೆಂಬರ್ 15 ಕೊನೆಯ ದಿನವಾಗಿದೆ. ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ: 2024ರ ಜುಲೈನಿಂದ 2025ರ ಜೂನ್ ಅಂತ್ಯದವರೆಗೆ ಪ್ರಕಟಿಸಲಾಗಿರುವ ಕೃತಿಗಳ ಮೂರು ಪ್ರತಿಗಳನ್ನು ಕಳುಹಿಸಿ ಕೊಡಬೇಕು. ಕೃತಿಗಳ ಜೊತೆಗೆ ಸ್ವಪರಿಚಯ, ವಿಳಾಸ ಹಾಗೂ ಸಂಪರ್ಕ ಸಂಖ್ಯೆ ಇರುವ ಪತ್ರ ಲಗತ್ತಿಸಬೇಕು. ಪಿಎಚ್‌ಡಿ ಪ್ರಬಂಧ, ಪ್ರವಾಸ ಕಥನ, ಆತ್ಮಕತೆ, ಅನುವಾದ, ಜೀವನಚರಿತ್ರೆ ಪ್ರಕಾರದ ಕೃತಿಗಳನ್ನು ಶಕ ಪರಿಗಣಿಸಲಾಗುವುದಿಲ್ಲ. ಕೃತಿಗಳನ್ನು ಅಂಚೆಯ (ಸ್ಪೀಡ್ /ಪಾರ್ಸೆಲ್ /ಜ್ಞಾನ ಅಂಚೆ) ಮೂಲಕ ಮಾತ್ರವೇ ಕಳಿಸಿಕೊಡಬೇಕು. ಅವ್ವ ದತ್ತಿ ಪ್ರಶಸ್ತಿಗಳು: ಮಕ್ಕಳ ಸಾಹಿತ್ಯ ಕೃತಿಗಳಿಗೆ ಜ್ಯೋತಿ ಬಸವರಾಜು ದತ್ತಿ, ಯುವಬರಹಗಾರರ ಚೊಚ್ಚಲ ಕೃತಿಗೆ ನಾಗಲಕ್ಷ್ಮಿ ಹಾಗೂ ಎಂ.ಜಿ.ಎನ್ ಪ್ರಸಾದ್ ದತ್ತಿ, ಕನ್ನಡಕ್ಕೆ ಅನುವಾದವಾಗಿರುವ ಕೃತಿಗೆ ಜಯಲಕ್ಷ್ಮಿವೆಂಕಟೇಶ್ ದತ್ತಿ, ಅತ್ಯುತ್ತಮ ಕಥಾಸಂಕಲನಕ್ಕೆ ದಿ. ಗೌರಿ ಅಣ್ಣಪ್ಪ ದತ್ತಿ, ವೈಜ್ಞಾನಿಕ ಅರಿವು ಮೂಡಿಸುವ ಕೃತಿಗೆ ಮಯೂರ ದತ್ತಿ, 20 ವರ್ಷದ ಒಳಗಿನ ಮಕ್ಕಳಿಂದ ರಚಿತವಾದ ಕೃತಿಗೆ ಲಾರಣ್ಯ ಹಾಗೂ ತಾನ್ಯಾ ದತ್ತಿ, ಅತ್ಯುತ್ತಮ ಕಾದಂಬರಿ ಕೃತಿಗೆ ಕೃತಿಗೆ ಲಕ್ಷ್ಮಿದೇವಮ್ಮ ಜಯರಾಮಯ್ಯ ದತ್ತಿ, ನಾಡು-ನುಡಿ- ಭಾಷೆ-ಸಂಸ್ಕೃತಿ ವಿಚಾರಗಳ ಕುರಿತ ಕೃತಿಗೆ ದಿ. ಲಿಂಗಮ್ಮ ತಮ್ಮಯ್ಯ ದತ್ತಿ, ಮಹಿಳಾ ಬರಹಗಾರ್ತಿಯರ ಕೃತಿಗೆ ದತ್ತಿ, ಸರೋಜಮ್ಮ ನಿಂಗೇಗೌಡ ಅತ್ಯುತ್ತಮ ಕವನ ಸಂಕಲನಕ್ಕೆ ರತ್ನ ಗವಿಗೌಡ ದತ್ತಿ. 2024ರ ಜುಲೈನಿಂದ 2025ರ ಜೂನ್ ಅಂತ್ಯದವರೆಗೆ ಪ್ರಕಟವಾಗಿರುವ ಕೃತಿಗಳ ಮೂರು ಪ್ರತಿಗಳೊಂದಿಗೆ, ಸವಿವರ ಪತ್ರ ಲಗತ್ತಿಸಿ, ಯಾವ ದತ್ತಿಗೆ ಎಂಬುದನ್ನು ನಮೂದಿಸಿ, ಅರ್ಜಿ ಸಲ್ಲಿಸಬಹುದು. ಎಲ್ಲಾ ದತ್ತಿಗಳು ಒಂದು ಸಾವಿರೂ. ನಗದು ಬಹುಮಾನ, ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತವೆ. 2026ರ ಜನವರಿಯಲ್ಲಿ ನಡೆಯುವ ಅವ್ವನುಡಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುಸ್ತಕ ಕಳುಹಿಸ ಬೇಕಾದ ವಿಳಾಸ: ಅವ್ವ ಪುಸ್ತಕಾಲಯ, 189, ಕೆಂಚನಹಳ್ಳಿ (ಅಂ), ಎಚ್. ದುರ್ಗ (ಹೋ) ಕುಣಿಗಲ್ (ತಾ), ತುಮಕೂರು - 572123.

ಕರ್ನಾಟಕ ಬ್ಯಾಂಕ್ ನಿಂದ ಧರ್ಮಸ್ಥಳಕ್ಕೆ ಟೆಂಪೊ ಟ್ರಾವೆಲ್ಲರ್ ವಾಹನ ಕೊಡುಗೆ

Article Image

ಕರ್ನಾಟಕ ಬ್ಯಾಂಕ್ ನಿಂದ ಧರ್ಮಸ್ಥಳಕ್ಕೆ ಟೆಂಪೊ ಟ್ರಾವೆಲ್ಲರ್ ವಾಹನ ಕೊಡುಗೆ

ಉಜಿರೆ: ಕರ್ನಾಟಕ ಬ್ಯಾಂಕ್ ವತಿಯಿಂದ ಸೋಮವಾರ ಧರ್ಮಸ್ಥಳಕ್ಕೆ ವಾಹನವನ್ನು ಕೊಡುಗೆಯಾಗಿ ಅರ್ಪಿಸಿದರು. ಕರ್ನಾಟಕ ಬ್ಯಾಂಕಿನ ಎಂ.ಡಿ. ಮತ್ತು ಸಿ.ಇ.ಒ ರಾಘವೇಂದ್ರ ಶ್ರೀನಿವಾಸ ಭಟ್, ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ವಾದಿರಾಜ ಭಟ್ ಮತ್ತು ಉಡುಪಿ ರಥಬೀದಿ ಶಾಖೆಯ ಹಿರಿಯ ಶಾಖಾ ಪ್ರಬಂಧಕ ಪ್ರಶಾಂತ್ ಎಂ. ರಾವ್ ವಾಹನವನ್ನು ಕೊಡುಗೆಯಾಗಿ ನೀಡಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಜಗದೀಶ್, ಮ್ಯಾನೇಜರ್, ಫೋರ್ಸ್ ಮೋಟಾರ್ಸ್, ಮನೀಶ್ ಫೋರ್ಸ್ ಸೇಲ್ಸ್ ಎಕ್ಸಿಕ್ಯುಟಿವ್ ಫೋರ್ಸ್ ಮೋಟಾರ್ಸ್, ಆಕಾಶ್ ಸೇಲ್ಸ್ ಎಕ್ಸಿಕ್ಯುಟಿವ್ ಫೋರ್ಸ್ ಮೋಟಾರ್ಸ್ ಉಪಸ್ಥಿತರಿದ್ದರು. ಕೊಡುಗೆಯನ್ನು ಸ್ವೀಕರಿಸಿದ ಹೆಗ್ಗಡೆಯವರು ಬ್ಯಾಂಕಿಗೆ ಕೃತಜ್ಞತೆ ಸಲ್ಲಿಸಿ ಈ ವಾಹನವನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸೇವಾ ಚಟುವಟಿಕೆಗಳಿಗೆ ಬಳಸಲಾಗುವುದು ಎಂದು ಹೇಳಿದರು.

ಸತ್ತೂರು, ಧಾರವಾಡ: ವಿಶ್ವ ಔಷಧಿ ವಿತರಕರ ದಿನಾಚರಣೆ

Article Image

ಸತ್ತೂರು, ಧಾರವಾಡ: ವಿಶ್ವ ಔಷಧಿ ವಿತರಕರ ದಿನಾಚರಣೆ

ಎಸ್.ಡಿ.ಎಂ. ಔಷಧ ವಿಜ್ಞಾನ ಕಾಲೇಜು ಮತ್ತು ಎಸ್.ಡಿ.ಎಂ. ಆಸ್ಪತ್ರೆಯ ಔಷಧಿ ವಿಭಾಗದ ಸಹಯೋಗದೊಂದಿಗೆ “ಆರೋಗ್ಯವನ್ನು ಯೋಚಿಸಿ, ಔಷಧಿಕಾರರನ್ನು ನೆನಪಿಸಿಕೊಳ್ಳಿ” ಎಂಬ ಧ್ಯೆಯೆಯೊಂದಿಗೆ “ವಿಶ್ವ ಔಷಧಿ ವಿತರಕರ ದಿನ”ವನ್ನು ಆಚರಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದು, ಇತರ ಗಣ್ಯರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧಾರವಾಡದ ಹೆಸರಾಂತ ಸಮುದಾಯ ಔಷಧಿ ವಿತರಕರರಾದ ಬಿ.ಎಸ್. ಪಾಟೀಲ್ ಅವರು ಗೌರವ ಅತಿಥಿಯಾಗಿದ್ದು ಗಣ್ಯರು ಅವರನ್ನು ಸನ್ಮಾನಿಸಿದರು. ಗೌರವಾನ್ವಿತ ಅತಿಥಿಗಳಾದ ಬಿ.ಎಸ್. ಪಾಟೀಲ್ ಅವರು ಸನ್ಮಾನಕ್ಕೆ ಉತ್ತರಿಸುತ್ತಾ ಔಷಧಿ ವಿತರಕರು ತಮ್ಮ ವೃತ್ತಿಯಲ್ಲಿ ಗೌರವ, ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಅನುಸರಿಸಬೇಕು. ವೈದ್ಯರ ಸೂಚಿನೆಯಂತೆ ಔಷಧಿ ವಿತರಕರು ಸರಿಯಾದ ಔಷಧಿಗಳನ್ನು ವಿತರಿಸಬೇಕು. ಔಷಧಿಗಳನ್ನು ವಿತರಿಸುವಾಗ ಔಷಧಿ ವಿತರಕರು ಸರಿಯಾದ ಕಾಳಜಿ ಮತ್ತು ಗಮನ ಹರಿಸಬೇಕು. ಔಷಧಿ ವಿತರಕರ ಲಭ್ಯತೆಯು ರೋಗಗಳನ್ನು ಗುಣಪಡಿಸುವುದಲ್ಲದೆ, ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತವೆ. ಔಷಧಿ ವಿತರಕರ ಅನಿವಾರ್ಯ ಮತ್ತು ಸಮರ್ಪಿತ ಸೇವೆಯು ರೋಗಿಗಳ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಔಷಧಿ ವಿತರಕರು ರೋಗಿಗಳ ಸಮಾಲೋಚನೆ ನಡೆಸಿ, ಅವರ ಜೀವನ ಶೈಲಿಯನ್ನು ಬದಲಾಯಿಸಬಹುದು. ಔಷಧಿ ವಿತರಕರು ವೈದ್ಯರು ಮತ್ತು ರೋಗಿಗಳ ಮಧ್ಯವರ್ತಿಯಾಗಿ ಸೇವೆ ಸಲ್ಲಿಸಬೇಕು. ಎಸ್.ಡಿ.ಎಂ. ಸಂಸ್ಥೆಗಳು ಸಾಮಾಜಿಕ ಸೇವೆಯಲ್ಲಿ ವೈಶಿಷ್ಟ್ಯತೆಯೊಂದಿಗೆ ಇತರರಿಗೆ ಮಾದರಿಯಾಗಿವೆ. ಎಸ್.ಡಿ.ಎಂ. ಔಷಧ ವಿಜ್ಞಾನ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಅನಿಲ್ ತುಮಕೂರ ಅವರು ಔಷಧಿ ವಿತರಕರು ದಿನದ ಮಹತ್ವದ ಬಗ್ಗೆ ತಿಳಿಸಿದರು. ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಮಖ್ದೂಮ್ ಕಿಲ್ಲೇದಾರ್, ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು ಮತ್ತು ಉಪ ಪ್ರಾಂಶುಪಾಲರಾದ ಡಾ. ಕಿರಣ್ ಐತಾಳ, ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಮಾಣಿಕ ಮತ್ತು ಸಮರ್ಪಿತ ಸೇವೆಯನ್ನು ಪರಿಗಣಿಸಿ ಎಸ್.ಡಿ.ಎಂ. ಆಸ್ಪತ್ರೆಯ ಹಿರಿಯ ಔಷಧಿ ವಿತರಕರರನ್ನು ಸನ್ಮಾನಿಸಲಾಯಿತು. ಧನುಷ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಔಷಧಿ ವಿಭಾಗದ ಸಹಾಯಕ ವ್ಯವಸ್ಥಾಪಕರಾದ ರಾಘವೇಂದ್ರ ಅವರು ವಂದನಾರ್ಪಣೆ ಸಲ್ಲಿಸಿದರು. ನಂದಿನಿ ಅವರು ಗೌರವಾನ್ವಿತ ಅತಿಥಿ ಬಿ.ಎಸ್. ಪಾಟೀಲ್ ಅವರನ್ನು ಪರಿಚಯಿಸಿದರು. ಮಹಿಮಾ ಮುದ್ಧೊಳೆ ಅವರು ಪ್ರಬಂಧ, ಬಿತ್ತಿಪತ್ರ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿಯನ್ನು ಮಂಡಿಸಿದರು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಔಷಧ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಸಹನಾ ಲದ್ದಿಮಠ್ ಫಾರ್ಮಸಿಯನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿದ್ದನ್ನ್ದು ಸಮರ್ಥಿಸಿಕೊಂಡರು.

ಧರ್ಮಸ್ಥಳ: ಶಾಂತಿವನದಲ್ಲಿ ಸಿಂದೂರ ಉದ್ಘಾಟನೆ

Article Image

ಧರ್ಮಸ್ಥಳ: ಶಾಂತಿವನದಲ್ಲಿ ಸಿಂದೂರ ಉದ್ಘಾಟನೆ

ಉಜಿರೆ: ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಪರಿಶುದ್ಧ ಗಾಳಿ, ನೀರು ಮತ್ತು ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯಭಾಗ್ಯ ಹೊಂದಬಹುದು ಎಂದು ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್ ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ನವೀಕರಿಸಿದ ಮಹಿಳೆಯರ ಚಿಕಿತ್ಸಾ ವಿಭಾಗದ “ಸಿಂದೂರ” ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳದ ಪವಿತ್ರ ಸಾನ್ನಿಧ್ಯದಲ್ಲಿ ಶಾಂತಿವನದಲ್ಲಿರುವ ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಉತ್ತಮ ವಿನ್ಯಾಸ, ಮೂಲಭೂತ ಸೌಕರ್ಯಗಳು, ಸಕಾಲಿಕವಾಗಿ ಯೋಗಾಭ್ಯಾಸ, ಪ್ರಾರ್ಥನೆ, ಜಪ, ತಪ, ಧ್ಯಾನ, ಚಿಂತನ-ಮAಥನ ಹಾಗೂ ವೈದ್ಯರು ಮತ್ತು ಸಿಬ್ಬಂದಿಯ ಕರ್ತವ್ಯನಿಷ್ಠೆ, ನಗುಮೊಗದ ಸೌಜನ್ಯಪೂರ್ಣ ಸೇವೆ, ತಾಳ್ಮೆ ಮತ್ತು ಸಂಯಮದಿAದ ಇಲ್ಲಿ ಸೇರಿದ “ಸಾಧಕರು” ಶೀಘ್ರ ಪೂರ್ಣ ಆರೋಗ್ಯ ಹೊಂದುತ್ತಾರೆ. ಇಲ್ಲಿನ ಯಶಸ್ಸಿನ ಫಲವಾಗಿ ಮಣಿಪಾಲದ ಬಳಿ ಪರೀಕಾದಲ್ಲಿ “ಸೌಖ್ಯವನ” ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ “ಕ್ಷೇಮವನ” ಎಂಬ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿದ್ದು, ಮೂರೂ ಆಸ್ಪತ್ರೆಗಳು ಸದಾ “ಹೌಸ್‌ಫುಲ್ ಆಗಿರುವುದು ಪ್ರಕೃತಿಚಿಕಿತ್ಸಾ ಪದ್ಧತಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸುಪ್ರಿಯಾ ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡಿದರು. ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ, ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ, ಆಡಳಿತಾಧಿಕಾರಿ ಜಗನ್ನಾಥ್ ಮತ್ತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಶುಭ ಹಾರೈಸಿದರು. ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಸ್ವಾಗತಿಸಿದರು. ಡಾ. ಸುಜಾತ ದಿನೇಶ್ ಧನ್ಯವಾದವಿತ್ತರು. ಡಾ. ಧನ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಮಣಿಪಾಲ ಮಾಹೆಯ ಕಲಾವಿದರಿಂದ ಧರ್ಮಸ್ಥಳದಲ್ಲಿ ಸಂಗೀತ ಸೇವೆ

Article Image

ಮಣಿಪಾಲ ಮಾಹೆಯ ಕಲಾವಿದರಿಂದ ಧರ್ಮಸ್ಥಳದಲ್ಲಿ ಸಂಗೀತ ಸೇವೆ

ಉಜಿರೆ: ಮಣಿಪಾಲದ ಮಾಹೆಯ ಪ್ರಾಧ್ಯಾಪಕರುಗಳ ತಂಡ ಮಂಗಳವಾರ ರಾತ್ರಿ ಧರ್ಮಸ್ಥಳದಲ್ಲಿ ನವರಾತ್ರಿ ಸಂದರ್ಭ ಪ್ರವಚನ ಮಂಟಪದಲ್ಲಿ ಸಂಗೀತ ಸೇವೆ ಮಾಡಿದರು. ಡಾ. ವಿದ್ಯಾ ಎಸ್. ರಾವ್, ಡಾ. ಭಾಗ್ಯ ಆರ್. ನಾವಡ, ಪ್ರೊ. ರಜಿತ ಕೆ.ವಿ., ಡಾ. ರಮ್ಯ ಎಸ್., ಪ್ರೊ. ಸೌಮ್ಯ ಎಸ್., ಪ್ರೊ. ಪ್ರಥ್ವಿ ಶೆಣೈ, ಡಾ. ಚೈತ್ರ ಎಂ. ಮತ್ತು ಡಾ. ಶಿಲ್ಪಾ ಸುರೇಶ್ ಸುಶ್ರಾವ್ಯ ಸಂಗೀತ ಹಾಡಿದರು. ಹಿನ್ನೆಲೆಯಲ್ಲಿ ವಯಲಿನ್ ವಾದಕರಾಗಿ : ಡಾ. ಸುಹಾಸ್ ಕೌಶಿಕ್, ಮೃದಂಗ ವಾದಕರಾಗಿ : ವಿದ್ವಾನ್ ಬಾಲಚಂದ್ರ ಭಾಗವತ್ ಮತ್ತು ಡಾ. ಕೃಷ್ಣಪ್ರಸಾದ್ ಸಹಕರಿಸಿದರು.

ನಳಪಾಕ: ಅಡುಗೆ ಮಾಡುವ ಸ್ಪರ್ಧೆ

Article Image

ನಳಪಾಕ: ಅಡುಗೆ ಮಾಡುವ ಸ್ಪರ್ಧೆ

ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ಆಶ್ರಯದಲ್ಲಿ ಅ. 19 ರಂದು ಭಾನುವಾರ ಸಂಜೆ ಐದು ಗಂಟೆಯಿಂದ ಉಜಿರೆ ಕಾಶಿಬೆಟ್ಟು ಬಳಿ ಇರುವ ಅರಳಿ ರೋಟರಿ ಸಮುದಾಯ ಭವನದಲ್ಲಿ ಅಡುಗೆ ಮಾಡುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ್‌ಪ್ರಭು ಪಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 18 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಗಂಡಸರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಮೂರು ಸಿಮೆಂಟ್ ಬ್ಲಾಕ್‌ಗಳನ್ನು ಇಟ್ಟಿಗೆ ಒಲೆ, ಕಟ್ಟಿಗೆ, ನೀರು ಮತ್ತು ಮೇಜು ಒದಗಿಸಲಾಗುವುದು. ನಗದು ಬಹುಮಾನ: ಪ್ರಥಮ ಬಹುಮಾನ: ರೂ. 2000/-, ದ್ವಿತೀಯ ಬಹುಮಾನ: ರೂ. 1000/-, ತೃತೀಯ ಬಹುಮಾನ: ರೂ. 500/-. ಬಹುಮಾನ ವಿತರಣೆ ಬಳಿಕ ಭೋಜನ ವ್ಯವಸ್ಥೆ ಇದೆ. ಆಸಕ್ತರು ಹೆಸರು ಮತ್ತು ವಿಳಾಸದೊಂದಿಗೆ ವಾಟ್ಸಾಪ್ ಮೂಲಕ ಅ. 17 (ಶುಕ್ರವಾರ) ರ ಮೊದಲು ಸ್ಪರ್ಧೆಗೆ ನೋಂದಾಯಿಸಲು ಕೋರಲಾಗಿದೆ. ಮೊಬೈಲ್ ನಂಬರ್: 9448060206, 9481844287.

ಉಜಿರೆ : ವಿಶ್ವ ಓಝೋನ್ ದಿನ ಆಚರಣೆ

Article Image

ಉಜಿರೆ : ವಿಶ್ವ ಓಝೋನ್ ದಿನ ಆಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿಯ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಡಾ. ಮನೋಜ್ ಗೋದ್ಬೋಳೆ, ಅಸೋಸಿಯೇಟ್ ಪ್ರೊಫೆಸರ್, ಜೈವಿಕ ತಂತ್ರಜ್ಞಾನ ವಿಭಾಗ ಎಸ್.ಡಿ.ಎಂ. ಪಿ .ಜಿ. ಕಾಲೇಜು ಉಜಿರೆ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಓಝೋನ್ ದಿನದ ಮಹತ್ವವನ್ನು ವಿವರಿಸಿದರು. ವಿಭಾಗದ ಮುಖ್ಯಸ್ಥರಾದ ಶಕುಂತಲಾ ಬಿ ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು.ವಿಭಾಗದ ಎಲ್ಲಾ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಥಮ ಬಿ ಎಸ್ಸಿ .ಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಬಿತ್ತಿಬರಹವನ್ನು ಅನಾವರಣಗೊಳಿಸಲಾಯಿತು. ಸಿರಿಷಾ ಇವರು ಸ್ವಾಗತಿಸಿ ಪ್ರೀತ ವಂದಿಸಿದರು. ದ್ವಿತೀಯ ಬಿ. ಎಸ್ಸಿ. ವಿದ್ಯಾರ್ಥಿನಿಯಾದ ಪ್ರೀತಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕೌನ್ಸಲಿಂಗ್ ಕುರಿತು ಸಕಾರಾತ್ಮಕತೆ ಮೂಡಲಿ : ಸೀತಾಲಕ್ಷ್ಮೀಕುಮಾರ್

Article Image

ಕೌನ್ಸಲಿಂಗ್ ಕುರಿತು ಸಕಾರಾತ್ಮಕತೆ ಮೂಡಲಿ : ಸೀತಾಲಕ್ಷ್ಮೀಕುಮಾರ್

ಉಜಿರೆ, ಸೆ.23: ಆಪ್ತ ಸಮಾಲೋಚನೆಯ ಕುರಿತು ತಪ್ಪು ಕಲ್ಪನೆಗಳನ್ನು ನಿವಾರಿಸಿ ಜನಸಮೂಹದಲ್ಲಿ ಸಕಾರಾತ್ಮಕ ಅಭಿಪ್ರಾಯಗಳನ್ನು ರೂಪಿಸಬೇಕಿದೆ ಎಂದು ಎಮೋಕೇರ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ, ಮನಃಶಾಸ್ತ್ರಜ್ಞ, ಕಾರ್ಪೋರೇಟ್ ಟ್ರೇನರ್ ಸೀತಾಲಕ್ಷ್ಮೀಕುಮಾರ್ ಅಭಿಪ್ರಾಯಪಟ್ಟರು. ಸೋಮವಾರ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗದ ಪೀಸ್ ಅಸೋಸಿಯೇಷನ್ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಆಪ್ತ ಸಮಾಲೋಚನೆ ಅಥವಾ ಕೌನ್ಸಲಿಂಗ್ ಎಂದ ತಕ್ಷಣ ಜನರಲ್ಲಿ ಭಯ ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ಆಪ್ತ ಸಮಾಲೋಚನೆಯನ್ನು ಜನರು ಇನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ. ಕೌನ್ಸಲಿಂಗ್ ಮಹತ್ವ ತಿಳಿಸಿ ಈ ಭಯವನ್ನು ಹೋಗಲಾಡಿಸಬೇಕು. ಆಪ್ತ ಸಮಾಲೋಚನೆಯ ಪರವಾದ ಮನಃಸ್ಥಿತಿಯನ್ನು ಮನಃಶಾಸ್ತ್ರ ವಿದ್ಯಾರ್ಥಿಗಳು ಸೃಷ್ಟಿಸಬೇಕು ಎಂದರು. ಮಾನಸಿಕ ಅಸ್ವಸ್ಥತೆಯಿಂದ ಬಳಲುವವರಿಗೆ ಭಾವನಾತ್ಮಕ ಸ್ಪಂದನೆಯ ಅಗತ್ಯವಿರುತ್ತದೆ. ಅವರ ಭಾವನೆಗಳಿಗೆ ಆದ್ಯತೆ ನೀಡಬೇಕು. ಭಾವನಾತ್ಮಕವಾಗಿ ಸ್ಪಂದಿಸಿ ಅವರನ್ನು ಮಾನಸಿಕ ಸಂದಿಗ್ಧತೆಯಿಂದ ಹೊರತರಬೇಕು. ಈ ಬಗೆಯ ಸ್ಪಂದನೆಯೊಂದಿಗೆ ಉತ್ತಮ ಕೇಳುಗರಾಗಿ ಅವರ ಸಮಸ್ಯೆ ಆಲಿಸಬೇಕು. ಹಾಗಾದಾಗ ಮಾತ್ರ ಅವರು ಆಂತರ್ಯದಲ್ಲಿ ಎದುರಿಸುತ್ತಿರುವ ಮಾನಸಿಕ ತೊಳಲಾಟಗಳಿಂದ ಮುಕ್ತವಾಗುವುದಕ್ಕೆ ಪರಿಹಾರ ಸೂಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಆಪ್ತ ಸಮಾಲೋಚನೆಯಿಂದ ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗುತ್ತದೆ. ವ್ಯಕ್ತಿ ತನ್ನ ಆಲೋಚನೆ ಮತ್ತು ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಆತಂಕ, ಖಿನ್ನತೆ ಮತ್ತು ಒತ್ತಡಗಳಿಂದ ಮುಕ್ತಿ ನೀಡುತ್ತದೆ. ಆಪ್ತ ಸಮಾಲೋಚಕರ ಮಾರ್ಗದರ್ಶನದ ಮೂಲಕ ವೈಯಕ್ತಿಕ ಅಭಿವೃದ್ಧಿ ಮತ್ತು ಸ್ವಜಾಗೃತಿ ಉಂಟಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪೀಸ್ ಅಸೋಸಿಯೇಷನ್‌ನ ಕಾರ್ಯದರ್ಶಿ ಡಾ.ಮಹೇಶ್ ಬಾಬು ಎನ್ ಉಪಸ್ಥಿತರಿದ್ದರು. ಜಿನಾ ಸ್ವಾಗತಿಸಿದರು. ನಿಶಾನ್ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಕೀರ್ತನಾ ಆನಂದ್ ಸಂಘದ ವಾರ್ಷಿಕ ವರದಿ ವಾಚಿಸಿದರು.

ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟ: ಸಮಾರೋಪ ಸಮಾರಂಭ

Article Image

ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟ: ಸಮಾರೋಪ ಸಮಾರಂಭ

ಉಜಿರೆ: ಭಜನಾ ಕಮ್ಮಟದಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕöÈತಿಯ ಅನಾವರಣವಾಗಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ 27ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಭಜನೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದು ದೃಢಭಕ್ತಿಯಿಂದ ಭಜನೆ ಮಾಡಿದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದರು. ಭಜನೆ ಮೂಲಕ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳನ್ನು ಸಾಧಿಸಬಹುದು. ಇಂದು "ಆನ್‌ಲೈನ್" ಚಿಂತೆ-ಚಿಂತನದಿಂದ "ಲೈಫ್‌ಲೈನ್" ಹಾಳಾಗುತ್ತಿದೆ ಎಂದು ಅವರು ವಿಷಾದಿಸಿದರು. ರಾಮಾಯಣ, ಮಹಾಭಾರತದ ಕಥೆಗಳಿಂದ ನಮ್ಮ ಸಾರ್ಥಕ ಬದುಕಿಗೆ ಮಾರ್ಗದರ್ಶನ ಸಿಗುತ್ತಿದೆ. ಭಜನಾ ಕಮ್ಮಟದ ಮೂಲಕ ಹೆಗ್ಗಡೆಯವರು ಹಿಂದೂ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಸ್ವಾಮೀಜಿ ಅಭಿನಂದಿಸಿದರು. ಭಜನೆಯಿಂದ ಸಾತ್ವಿಕ ಶಕ್ತಿ ಜಾಗೃತಗೊಂಡು ಭಯ, ದ್ವೇಷ ದೂರವಾಗಿ ಪ್ರೀತಿ-ವಿಶ್ವಾಸ ಮೂಡಿ ಬಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಂಸದ ಬ್ರಿಜೇಶ್ ಚೌಟ ಮಾತನಾಡಿ ಧರ್ಮ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಸನಾತನ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನದೊಂದಿಗೆ ಏಕತೆ ಮತ್ತು ಏಕಾಗ್ರತೆ ಸಾಧಿಸಲು ಭಜನೆ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ಶುಭಾಶಂಸನೆ ಮಾಡಿ, ಧರ್ಮಸ್ಥಳದಲ್ಲಿ ಶ್ರದ್ಧಾ-ಭಕ್ತಿಯ ಪವಿತ್ರ ವಾತಾವರಣ ನಮ್ಮ ಅನುಭವಕ್ಕೆ ಬರುತ್ತದೆ. ಪ್ರತಿಯೊಂದು ಮನೆಯಲ್ಲಿಯೂ ವಾರಕ್ಕೊಂದು ದಿನವಾದರೂ ಭಜನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಭಜನೆಯಿಂದ ಮನೆ, ಸಮಾಜ ಹಾಗೂ ಎಲ್ಲಾ ಕಡೆ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಕೂಡಾ ಭಜನೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಸಂತೋಷವಾಗಿದೆ. ಭಜನಾಪಟುಗಳು ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕುಂದಾಪುರದ ಕೃಷ್ಣ ಪೂಜಾರಿ ಮತ್ತು ನೆಲ್ಯಾಡಿಯ ಕುಮಾರಿ ಭವಿಷ್ಯ ಕಮ್ಮಟದ ಬಗ್ಯೆ ಅನಿಸಿಕೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರಪಡಿಸಿದರು. ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಚಂದ್ರಶೇಖರ ಸಾಲ್ಯಾನ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ಚೈತ್ರಾ ನಿರ್ದೇಶನದಲ್ಲಿ ನೃತ್ಯ ಭಜನೆ ಮತ್ತು ಕುಣಿತ ಭಜನೆ ವಿಶೇಷ ಗಮನ ಸೆಳೆಯಿತು.

ಆಳ್ವಾಸ್ : ಭಾರತೀಯ ಕರಾವಳಿ ರಕ್ಷಕ ಪಡೆ ಇನ್ಸ್ಪೆಕ್ಟರ್ ಜನರಲ್ ದಾಸೀಲರ ವಿಶೇಷ ಉಪನ್ಯಾಸ

Article Image

ಆಳ್ವಾಸ್ : ಭಾರತೀಯ ಕರಾವಳಿ ರಕ್ಷಕ ಪಡೆ ಇನ್ಸ್ಪೆಕ್ಟರ್ ಜನರಲ್ ದಾಸೀಲರ ವಿಶೇಷ ಉಪನ್ಯಾಸ

ಮೂಡುಬಿದಿರೆ: ಇಂದಿನ ಜಾಗತಿಕ ಯುಗದಲ್ಲಿ ವಿದ್ಯಾಭ್ಯಾಸದ ಉದ್ದೇಶ ಕೇವಲ ಉದ್ಯೋಗ ಪಡೆಯುವುದಲ್ಲ. ಸಮಾಜದಲ್ಲಿ ಬದಲಾವಣೆ ತರಲು, ಹೊಸ ಅವಕಾಶಗಳನ್ನು ಸೃಷ್ಟಿಸಲು, ಮತ್ತೊಬ್ಬರಿಗೆ ಜೀವನೋಪಾಯ ಕಲ್ಪಿಸಲು ನಾವು ಉದ್ಯೋಗದಾತರಾಗಬೇಕು ಎಂದು ಪುದುಚೇರಿಯ ಕರಾವಳಿ ರಕ್ಷಣಾ ಪಡೆಯ ಇನ್ಸ್ಪೆಕ್ಟರ್ ಜನರಲ್ ಸುರೇಂದ್ರಸಿಂಗ್ ದಾಸೀಲರು ನುಡಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉದ್ಯೋಗವನ್ನು ಮಾತ್ರ ಕನಸು ಕಾಣದೆ, ಸಮಾಜಕ್ಕೆ ಹೊಸ ಉದ್ಯೋಗಾವಕಾಶಗಳನ್ನು ನೀಡಬಲ್ಲ ನಾಯಕರಾಗಿ ರೂಪುಗೊಳ್ಳಬೇಕು. ನಾಯಕತ್ವದ ನಿಜವಾದ ಅರ್ಥವು ಸಂಕಷ್ಟದ ಸಂದರ್ಭಗಳಲ್ಲಿ ಸಹಾನುಭೂತಿಯೊಂದಿಗೆ ನಡೆದುಕೊಳ್ಳುವುದರಲ್ಲಿ ಅಡಗಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ಸದಾ ಆತ್ಮವಿಶ್ವಾಸದಿಂದಿರಬೇಕು. ತಮಗೆ ತಾವೇ ಪ್ರೋತ್ಸಾಹ ನೀಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಕೀಳರಿಮೆ ಬೆಳೆಸದೆ, ತಮ್ಮ ಬೆನ್ನನ್ನು ತಾವೇ ತಟ್ಟುತ್ತಾ ಮುಂದೆ ಸಾಗುವುದು ಸಾಧನೆಯ ರಹಸ್ಯವಾಗಿದೆ. ಮಾನಸಿಕ, ದೈಹಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಆರ್ಥಿಕ ಆರೋಗ್ಯಗಳ ಕಡೆಗೆ ಪ್ರಾಮುಖ್ಯತೆಯನ್ನು ನೀಡಿ. ವಿದ್ಯಾರ್ಥಿ ಜೀವನವೇ ವ್ಯಕ್ತಿತ್ವ ನಿರ್ಮಾಣದ ಅವಧಿ. ಈ ಹಂತದಲ್ಲಿ ನೈತಿಕ ಮೌಲ್ಯಗಳು, ದೇಶಭಕ್ತಿ, ಶಿಸ್ತು, ಸಮಯಪಾಲನೆ ಮತ್ತು ಸಮಾಜಮುಖಿ ಮನೋಭಾವವನ್ನು ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ನೀವು ಯಾವ ಕ್ಷೇತ್ರಕ್ಕೂ ಹೋದರೂ ಸಾಧನೆ ಖಚಿತ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಅದ್ಯಕ್ಷತೆವಹಿಸಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ ಪ್ರಾಚರ‍್ಯ ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿಎನ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಬಿತಾ ಮೋನಿಸ್ ಇದ್ದರು.

ಭಜನೆಗಳು ಜೀವನ ಶಿಕ್ಷಣ ಕಲಿಸುತ್ತವೆ

Article Image

ಭಜನೆಗಳು ಜೀವನ ಶಿಕ್ಷಣ ಕಲಿಸುತ್ತವೆ

ಉಜಿರೆ: ಜೀವನ ಶಿಕ್ಷಣವನ್ನು ಕಲಿಸುವ ಭಜನೆಗಳು ಸಾರ್ಥಕ ಬದುಕಿಗೆ ದಾರಿದೀಪವಾಗಿವೆ. ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಭಜನಾ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟದಲ್ಲಿ "ಭಜನಾ ಸಂಸ್ಕೃತಿ ಬೆಳೆಸುವಲ್ಲಿ ಭಜನಾ ಮಂಡಳಿಗಳ ಪಾತ್ರ’’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಪ್ರತಿಯೊಬ್ಬ ಭಜಕನೂ ಒಂದು ಆಲಯವಿದ್ದಂತೆ ಎಂದು ಹೇಳಿದ ಅವರು ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಭಜಕರೆಲ್ಲರೂ ಭಜನಾ ಸಂಸ್ಕೃತಿಯ ಮೂಲಕ ಆಧ್ಯಾತ್ಮಿಕ ವಿಚಾರಧಾರೆಗಳನ್ನು ಪಸರಿಸುವ ರಾಯಬಾರಿಗಳಾಗಬೇಕು. ಮಕ್ಕಳಿಗೂ ಭಜನೆ ಕಲಿಸುವ ಮೂಲಕ ಅವರನ್ನು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ್ ಸಾಲ್ಯಾನ್ ಗೌರವ ಉಪಸ್ಥಿತಿ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಅಮ್ಮ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ತಿತರಿದ್ದರು. ಶ್ರೀಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸ್ರೂರು, ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಶ್ರೀಜಾ ಯೋಗೀಶ್ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಸಮಾರೋಪ ಸಮಾರಂಭ

Article Image

ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಸಮಾರೋಪ ಸಮಾರಂಭ

ಉಜಿರೆ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಜುಲೈ 16 ರಿಂದ ಸೆ. 16ರ ವರೆಗೆ ಎರಡು ತಿಂಗಳ ಕಾಲ ಪ್ರತಿದಿನ ಸಂಜೆ ಗಂಟೆ 6.30 ರಿಂದ 8ರ ವರೆಗೆ ನಡೆದ 54 ನೇ ವರ್ಷದ ಪುರಾಣ ವಾಚನ-ಪ್ರವಚನದಲ್ಲಿ ಭಾಗವಹಿಸಿದ ವಿದ್ವಾಂಸರು ಹಾಗೂ ಕಲಾವಿದರನ್ನು ಸಮಾರೋಪ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗೌರವಿಸಿ, ಅಭಿನಂದಿಸಿದರು.

27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರ

Article Image

27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರ

ಧರ್ಮಸ್ಥಳ, ಸೆ.19: ಮಾನವರನ್ನು ಮೆಚ್ಚಿಸುವುದಕ್ಕಿಂತ ಭಗವಂತನನ್ನು ಮೆಚ್ಚಿಸುವುದು ಮುಖ್ಯ ಎಂದು ಉಡುಪಿಯ ಸೂಡ ಮೂಲದ ವಕೀಲೆ ಸಹನಾ ಕುಂದರ್ ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರದಲ್ಲಿ 'ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ' ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಸಾಮಾಜಿಕ ಸಾಮರಸ್ಯ ಮೂಡಿಸುವುದಕ್ಕೆ ಬಹಳ ಮುಖ್ಯ ಮೂಲವೇ ಭಜನೆ. ಆಡಂಬರವಿಲ್ಲದ ಭಗವಂತ ಮಂಜುನಾಥ ಪ್ರತಿಯೊಬ್ಬರ ಪ್ರಾರ್ಥನೆಗೂ ಒಲಿಯುತ್ತಾನೆ ಹಾಗಾಗಿ ಉತ್ತಮ ಮನಸ್ಸಿಂದ ಬೇಡಿಕೊಳ್ಳುವುದು ಮುಖ್ಯ. ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಸಜ್ಜನರು ಮತ್ತು ಭಗವಂತನೂ ಒಲಿಯುತ್ತಾನೆ ಎಂದು ಹೇಳಿದರು. ಮಾನವರು ಜೀವನದಲ್ಲಿ ಎಡವುದು ಸಹಜ ಆದರೆ ಮತ್ತೆ ಅದೇ ಸ್ಥಳದಲ್ಲಿ ಎದ್ದು ನಿಂತು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು ಉತ್ತಮ. ಇಂದಿನ ಪೀಳಿಗೆಗೆ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಅತ್ಯಗತ್ಯ. ಅದನ್ನು ಪರಿಪೂರ್ಣಗೊಳಿಸುವ ಹೊಣೆಗಾರಿಕೆ ಪೋಷಕರದ್ದು ಹಾಗಾಗಿ ಭಜಕರು ಕಮ್ಮಟಗಳಲ್ಲಿ ದೊರೆತ ವಿಚಾರಧಾರೆಗಳನ್ನು ಮಕ್ಕಳಿಗೆ ನೀಡಬೇಕಿದೆ. ಬದುಕು ಬದಲಾಯಿಸಬಲ್ಲ ಧೀಮಂತ ಶಕ್ತಿಯಾದ ಭಜನೆಯ ಆಸಕ್ತಿಯನ್ನು ಯುವ ಮನಸ್ಸುಗಳಲ್ಲಿ ಬಿತ್ತಬೇಕಿದೆ ಎಂದು ಅಭಿಪ್ರಾಯಪಟ್ಟರು. ಭಜನೆ ಎಂಬುದು ನಿತ್ಯ, ನಿರಂತರ, ನೂತನವಾಗಬೇಕು. ಇಂದು ವಿದ್ಯಾವಂತ ಮತ್ತು ವಿಚಾರವಂತರಾದ ನಾವು ಆಚಾರವಂತರಾಗಬೇಕಿದೆ. ಅದಕ್ಕಾಗಿ ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕೇನು ನೀಡಿದ್ದೇವೆ ಎಂಬುದು ಮುಖ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಉಪಾಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಮನೆ ಮನಗಳಿಗೆ ಸಂಸ್ಕಾರ ನೀಡುವ ಸಾಧನ ಮತ್ತು ವೇದ ಪುರಾಣ ಹಾಗೂ ಉಪನಿಷತ್ತುಗಳ ಸಾರವೇ ಭಜನೆ ಎಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಗೌರವ ಉಪಸ್ಥಿತಿ ವಹಿಸಿ ಮಾತನಾಡಿದರು. ಶ್ರೀ ಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸ್ರೂರು, ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳ: ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಜಕರಿಗೆ ಶುಭಕೋರಿದರು

Article Image

ಧರ್ಮಸ್ಥಳ: ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಜಕರಿಗೆ ಶುಭಕೋರಿದರು

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರಕ್ಕೆ ಪೂಜ್ಯ ಹೆಗ್ಗಡೆಯವರು ಭೇಟಿ ನೀಡಿ ಭಜನೆ ಮಾಡುವ ಮುನ್ನ ಮಾನಸಿಕ ತಯಾರಿ ಮತ್ತು ದೈಹಿಕ ಸದೃಢತೆ ಮುಖ್ಯ. ಏಕಾಗ್ರತೆ ಮತ್ತು ಚಿತ್ತ ಮನಸ್ಸಿನಿಂದ ಭಜನೆ ಅಭ್ಯಾಸ ಮಾಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ಭಜಕರಿಗೆ ಶುಭಕೋರಿದರು. ಡಾ. ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದು ಭಜಕರಿಗೆ ಶುಭ ಹಾರೈಸಿದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸ್ರೂರು, ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

ಭಜನೆಯಿಂದ ಸಾಮಾಜಿಕ ಸಾಮರಸ್ಯ: ಪ್ರೊ. ಶುಭಾ ಮರವಂತೆ

Article Image

ಭಜನೆಯಿಂದ ಸಾಮಾಜಿಕ ಸಾಮರಸ್ಯ: ಪ್ರೊ. ಶುಭಾ ಮರವಂತೆ

ಉಜಿರೆ: ಭಜನೆಯಿಂದ ಸಮಾಜದ ಸಂಘಟನೆಯೊಂದಿಗೆ ಸಾಮಾಜಿಕ ಸಾಮರಸ್ಯ ಮೂಡಿ ಬರುತ್ತದೆ ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಶುಭಾ ಮರವಂತೆ ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟದಲ್ಲಿ “ದೈನಂದಿನ ಜೀವನದಲ್ಲಿ ಭಜನೆಯ ಮಹತ್ವ”ದ ಬಗ್ಗೆ ಉಪನ್ಯಾಸ ನೀಡಿದರು. “ಭಜನೆ” ಪದದಲ್ಲಿ “ಭ” ಅಂದರೆ ಭಗವಂತ, “ಜ” ಎಂದರೆ ಜನ್ಮಾಂತರಗಳ ಪಾಪನಾಶ ಹಾಗೂ “ನೆ” ಅಂದರೆ ಭಗವಂತನಲ್ಲಿ ನೆಲೆಯಾಗುವುದು ಎಂದು ಅರ್ಥ. ಶ್ರದ್ಧಾ-ಭಕ್ತಿಯಿಂದ ಭಗವಂತನಿಗೆ ಸಂಪೂರ್ಣ ಶರಣಾದರೆ ಮನಸ್ಸು ಮತ್ತು ದೇಹ ಹಗುರವಾಗುತ್ತದೆ. ಭಜನಾ ಕಮ್ಮಟದ ಮೂಲಕ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಮಾಡುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಅವರು ಹೇಳಿ ಅಭಿನಂದಿಸಿದರು. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಉಪಸ್ಥಿತರಿದ್ದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇದ್ದರು. ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ಎನ್. ಕಾರ್ಯಕ್ರಮ ನಿರ್ವಹಿಸಿದರು.

ಮೂಲಭೂತ ವಿಜ್ಞಾನವನ್ನು ಕಡೆಗಣಿಸದಿರಿ : ಡಾ. ಸತೀಶ್ಚಂದ್ರ ಎಸ್

Article Image

ಮೂಲಭೂತ ವಿಜ್ಞಾನವನ್ನು ಕಡೆಗಣಿಸದಿರಿ : ಡಾ. ಸತೀಶ್ಚಂದ್ರ ಎಸ್

ನಾವು ಬಳಸುವ ಎಲ್ಲಾ ಪ್ರಮುಖ ತಂತ್ರಜ್ಞಾನಗಳ ಹಿಂದೆ ಮೂಲಭೂತ ವಿಜ್ಞಾನವಿದೆ.ಮೂಲಭೂತ ವಿಜ್ಞಾನದ ಜ್ಞಾನವಿಲ್ಲದೆ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುವುದು ಅಸಾಧ್ಯ, ಹಾಗಾಗಿ ಮೂಲಭೂತ ವಿಜ್ಞಾನವನ್ನು ಕಡೆಗಣಿಸದಿರಿ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆಯ ಶ್ರೀ ಧ.ಮಂ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಭಾಗಿತ್ವದಲ್ಲಿ, ಕ್ವಾಂಟಮ್ ವಿಜ್ಞಾನದ ಅಂತರಾಷ್ಟ್ರೀಯ ವರ್ಷಾಚರಣೆ ಪ್ರಯುಕ್ತ ಸೆ.17 ರಂದು ಆಯೋಜಿಸಿದ್ದ "ಮಾಲಿಕ್ಯೂಲರ್ ರಹಸ್ಯಗಳು ಮತ್ತು ಕ್ವಾಂಟಮ್ ರಹಸ್ಯಗಳು" ಎಂಬ ವಿಷಯದ ಕುರಿತ ಒಂದು ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಸಾಯನ ಶಾಸ್ತ್ರ, ಭೌತ ಶಾಸ್ತ್ರ, ಗಣಿತಶಾಸ್ತ್ರ ಮುಂತಾದವುಗಳನ್ನು ಒಳಗೊಂಡ ಮೂಲಭೂತ ವಿಜ್ಞಾನದ ಕಲಿಕೆ ಅತ್ಯಗತ್ಯ. ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ವಿಷಯಗಳನ್ನು ಅಭ್ಯಾಸಿಸದೆ ವಿಜ್ಞಾನದ ಮೇಲೆ ವಿಶೇಷ ಆಸಕ್ತಿಯನ್ನು ಬೆಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಕ್ವಾಂಟಮ್ ವಿಜ್ಞಾನದ ಕೊಡುಗೆ ಅಪಾರ. ಕ್ವಾಂಟಮ್ ಕಂಪ್ಯೂಟಿಂಗ್ ನಂತಹ ತಂತ್ರಜ್ಞಾನಗಳು ಹೆಚ್ಚು ಪ್ರಚಲಿತವಾಗಿತ್ತಿರುವ ಈ ಕಾಲದಲ್ಲಿ ಅವುಗಳನ್ನು ಕಲಿಯುವ ಅನಿವಾರ್ಯತೆಯಿದೆ. ಅಂದಿನಿಂದ ಇಂದಿನಿವರೆಗೆ ವಿಜ್ಞಾನಿಗಳು ಮಾಡಿರುವ ಅನ್ವೇಷಣೆ, ಪ್ರಯೋಗಳೆಲ್ಲವೂ ಕೂಡ ಸಮಾಜದ ಅಭಿವೃದ್ಧಿಯ ದೃಷ್ಟಿಕೋನವನ್ನೇ ಹೊಂದಿದೆ.ಸಮಾಜದ ಉನ್ನತ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರ ಎಂದರು. ಬೆಂಗಳೂರಿನ ಪಿ.ಇ.ಎಸ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಹುಲ್ ಎಸ್. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕ್ವಾಂಟಮ್ ಕಂಪ್ಯೂಟಿಂಗ್ ನ ವಿಭಾಗಗಳು ಪ್ರಸ್ತುತ ಕಾಲದ ಉದ್ಯಮಗಳಲ್ಲಿ ಸಿಂಹಪಾಲು ಪಡೆದಿದೆ. ಕ್ವಾಂಟಮ್ ವಿಜ್ಞಾನವನ್ನು ಅರ್ಥೈಸಿಕೊಳ್ಳಲು ಮೂಲಭೂತ ವಿಜ್ಞಾನವನ್ನ ಅರ್ಥೈಸಿಕೊಳ್ಳುವುದು ಬಿಟ್ಟರೆ ಬೇರೆ ಪ್ರತ್ಯೇಕ ದಾರಿಗಳಿಲ್ಲ. ಕ್ವಾಂಟಮ್ ವಿಜ್ಞಾನ ಕ್ಷೇತ್ರದಲ್ಲಿ ಹಿರಿಯ ವಿಜ್ಞಾನಿಗಳು ಹಾಸಿಕೊಟ್ಟಿರುವ ದಾರಿಯಲ್ಲಿ ಇಂದು ನಾವುಗಳು ಮುನ್ನಡೆಯುತ್ತಿದ್ದೇವೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ್. ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ನಾವುಗಳು ಇಂದು ಅನುಭವಿಸುವ ಆಧುನಿಕ ತಂತ್ರಜ್ಞಾನಗಳು ಲಭ್ಯವಿರಲಿಲ್ಲ. ನಾವುಗಳು ಅನುಭವಿಸುವ ಎಲ್ಲಾ ಸೌಕರ್ಯಗಳು ಕೂಡ ವಿಜ್ಞಾನದ ಕೊಡುಗೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಉನ್ನತ ಶಿಕ್ಷಣದ ನಂತರ ವಿದ್ಯಾರ್ಥಿಗಳು ಸಂಶೋಧನೆಯ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ನೀಲಕಂಠನ್ ವಿ.ಕೆ ಮತ್ತು ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಉಪ ಪ್ರಾಂಶುಪಾಲೆ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ ಕೆ.ಪಿ ಸ್ವಾಗತಿಸಿ, ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವ್ಯಾ ವಂದಿಸಿದರು. ವಿದ್ಯಾರ್ಥಿನಿಯರಾದ ಅಪೂರ್ವ ಮತ್ತು ಬಳಗದವರು ಪ್ರಾರ್ಥಿಸಿದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಅನ್ವಿಟಾ ಸೇರಾ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳ ಭೂಲೋಕದ ಸ್ವರ್ಗ: ವಿವೇಕ್ ವಿ. ಪ್ಯಾಸ್

Article Image

ಧರ್ಮಸ್ಥಳ ಭೂಲೋಕದ ಸ್ವರ್ಗ: ವಿವೇಕ್ ವಿ. ಪ್ಯಾಸ್

ಧರ್ಮಸ್ಥಳ, ಸೆ.17: ಭಜನಾ ತರಬೇತಿ ಎಂಬುದು ಒಂದು ರೀತಿಯ ದೀಕ್ಷೆ ಎಂದು ಬೆಳ್ತಂಗಡಿಯ ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪ್ಯಾಸ್ ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 4ನೇ ದಿನದ ಕಾರ್ಯಾಗಾರದಲ್ಲಿ 'ಆರೋಗ್ಯಕರ ಅಭ್ಯಾಸಗಳು ಜನಜಾಗೃತಿ ಚಲನಚಿತ್ರ ಪ್ರದರ್ಶನ' ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಬದುಕಿನ ಬದಲಾವಣೆಗೆ ಅವಕಾಶ ಮಾಡಿಕೊಡಬಲ್ಲ ಶಕ್ತಿ ಈ ಭಜನಾ ಕಮ್ಮಟಕ್ಕಿದೆ ಹಾಗಾಗಿ ಈ ಮಹೋತ್ಸವ ಸಭಾಭವನವು ಇಂದು ಅಧಿಕೃತ ಶಾಲೆಯಾಗಿ ಮಾರ್ಪಾಡುಗೊಂಡು ಭಜಕರಿಗೆ ಬದುಕಿನ ಪಾಠವನ್ನು ಕಲಿಸುತ್ತಿದೆ. ಸಂಸ್ಕೃತಿ ಸಂಸ್ಕಾರದ ಬಿತ್ತನೆಗೆ ಇದೊಂದು ಉತ್ತಮ ಬುನಾದಿ ಎಂದು ಹೇಳಿದರು. ಆರೋಗ್ಯಕರ ದೇಹವೆಂಬುದು ಆತ್ಮದ ಅರಮನೆ ಇದ್ದಂತೆ ಅದನ್ನು ಸಮತೋಲನದಲ್ಲಿ ಇರಿಸಲು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ರಚನಾತ್ಮಕವಾಗಿರಿಸಬೇಕು. ನಮ್ಮ ಆಹಾರದ ಗುಣಗಳು ಬದಲಾದಂತೆ ವರ್ತನೆಗಳು ಅದರ ಮೇಲೆ ಅವಲಂಬಿತಗೊಂಡಿರುತ್ತವೆ, ಆಹಾರದಿಂದ ನಮ್ಮ ಗುಣ ನಿರ್ಧರಿತವಾಗುತ್ತದೆ. ಪ್ರಾಣಿ ಪಕ್ಷಿಗಳು ತಮಗೆ ಬೇಕಾದ ಆಹಾರವನ್ನಲ್ಲದೆ ಬೇರೆ ಯಾವುದನ್ನೂ ಅವು ಸೇವಿಸುವುದಿಲ್ಲ ಅಂತೆಯೇ ನಮ್ಮ ದೇಹಕ್ಕೆ ಪೂರಕವಾದ ಆಹಾರವನ್ನು ಮಾತ್ರ ನಾವು ಸೇವಿಸಬೇಕು, ಅದಲ್ಲದೇ ಯಾವುದೇ ರೀತಿಯ ವ್ಯಸನಗಳಿಗೆ ಬಲಿಯಾಗಿ ಮಾನವ ಜೀವನದ ಮಹತ್ವವನ್ನು ಕಳೆದುಕೊಳ್ಳಬಾರದೆಂದು ಅಭಿಪ್ರಾಯಪಟ್ಟರು. ನಮ್ಮನ್ನು ಡ್ರಿಂಕ್ಸ್, ಡೈನ್, ಡೈ, ಮತ್ತು ಡ್ಯಾನ್ಸ್ ಎಂಬ 4ಡಿಗಳು ಅತಿಯಾಗಿ ಆಕರ್ಷಿಸುತ್ತಿದೆ. ಅದರಿಂದ ನಾವಿಂದು ತಿಂದು, ಕುಡಿದು, ಸಾಯುತ್ತಿದ್ದೇವೆ, ಅಲ್ಲದೇ ಬದುಕನ್ನು ಬದುಕುವಲ್ಲಿ ಸೋಲುತ್ತಿದ್ದೇವೆ. ಸರ್ಪಗಳ ಹೆಡೆಯಲ್ಲಿ ವಿಷವಿದ್ದರೆ, ವ್ಯಸನಿಗಳ ದೇಹವೇ ವಿಷಪೂರಿತಗೊಂಡು ತಮ್ಮ ದೇಹವನ್ನು ತಾವೇ ಕ್ಷೀಣಿಸಿಕೊಳ್ಳುವಂತೆ ಮಾಡುತ್ತಿದೆ. ಹಾಗಾಗಿ ಇಂದು ನಮ್ಮ ದುರಾದೃಷ್ಟಕ್ಕೆ ಭಾರತ ವಿಶ್ವದಲ್ಲಿ ಮದ್ಯಪಾನ ಸೇವನೆಯಲ್ಲಿ ಪ್ರಥಮ ಸ್ಥಾನ, ಧೂಮಪಾನ ವ್ಯಸನದಲ್ಲಿ ಎರಡನೇ ಸ್ಥಾನ, ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ. ಇದರ ಬದಲಾವಣೆ ಮಾಡಲು ಶ್ರೀ ಕ್ಷೇತ್ರ ಹಲವು ಪುಣ್ಯ ಕಾರ್ಯಗಳನ್ನು ಮಾಡುತ್ತಾ ಯಶಸ್ಸನ್ನು ಕಾಣುತ್ತಿದೆ. ಅಲ್ಲದೆ ಹಲವರ ಬದುಕನ್ನು ಕಟ್ಟಿಕೊಟ್ಟು ಭೂಲೋಕದ ಸ್ವರ್ಗ ಎಂದೆನಿಸಿಕೊಂಡಿದೆ ಎಂದು ನುಡಿದರು. ಶರೀರವೆಂಬುದು ಕಾರ್ಖಾನೆ ಇದ್ದಂತೆ ನಾವೇನು ಕ್ರಿಯೆಗಳನ್ನು ಸೂಚಿಸುತ್ತೇವೋ ಅದು ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುತ್ತದೆ. ಬದುಕು ಬಂಗಾರವಾಗಲು ಬಣ್ಣ,ಅಂದ - ಚೆಂದ, ಹಣ, ಜಾತಿ ಯಾವುದು ಮುಖ್ಯವಲ್ಲ ಬುದ್ಧಿವಂತಿಕೆಯಿಂದ ಮಾತ್ರ ಸಾಧ್ಯ. ಆ ಬುದ್ಧಿವಂತಿಕೆ ಬಳಸಿ ಬದುಕಿನ ಸವಾಲುಗಳನ್ನು ಎದುರಿಸಿ ಬದುಕಲು ಆಧ್ಯಾತ್ಮಿಕ ಕಾರ್ಯಗಳು ದಾರಿದೀಪವಾಗುತ್ತದೆ ಎಂದರು.

ಗಾಯಕಿ ಅರ್ಚನಾ ಉಡುಪರವರನ್ನು ಸನ್ಮಾನಿಸಿದ ಹೇಮಾವತಿ ವಿ. ಹೆಗ್ಗಡೆಯವರು

Article Image

ಗಾಯಕಿ ಅರ್ಚನಾ ಉಡುಪರವರನ್ನು ಸನ್ಮಾನಿಸಿದ ಹೇಮಾವತಿ ವಿ. ಹೆಗ್ಗಡೆಯವರು

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದಲ್ಲಿ ಶಿಬಿರಾರ್ಥಿಗಳಿಗೆ ಭಜನೆ ಹಾಡುವ ತರಬೇತಿ ನೀಡಿದ ಗಾಯಕಿ ಅರ್ಚನಾ ಉಡುಪರವರನ್ನು ಹೇಮಾವತಿ ವಿ. ಹೆಗ್ಗಡೆಯವರು ಸನ್ಮಾನಿಸಿ ಅಭಿನಂದಿಸಿದರು. ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಸ್ವಾಮೀಜಿಯವರು, ಸೋನಿಯಾವರ್ಮ, ಭಜನಾ ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕ ನಿಶಾಂತ್ ಕಾರ್ಯಕ್ರಮನಿರ್ವಹಿಸಿದರು.

ಯೋಗ್ಯತೆ ಬರುವುದು ವಯಸ್ಸಿನಿಂದ ಅಲ್ಲ ಸಂಸ್ಕಾರದಿಂದ: ಉಜಿರೆ ಅಶೋಕ್ ಭಟ್

Article Image

ಯೋಗ್ಯತೆ ಬರುವುದು ವಯಸ್ಸಿನಿಂದ ಅಲ್ಲ ಸಂಸ್ಕಾರದಿಂದ: ಉಜಿರೆ ಅಶೋಕ್ ಭಟ್

ಧರ್ಮಸ್ಥಳ, ಸೆ.16,: ಸಂಸ್ಕಾರವೆಂಬುದು ಶಿಶುವಿಗೆ ಗರ್ಭಾಂಕುರದಿಂದ ಆರಂಭವಾಗುತ್ತದೆ ಎಂದು ಉಜಿರೆಯ ಧಾರ್ಮಿಕ ವಿದ್ವಾಂಸ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 3ನೇ ದಿನದ ಕಾರ್ಯಾಗಾರದಲ್ಲಿ 'ಯುವಕರಲ್ಲಿ ಸಂಸ್ಕಾರ ಸಂಸ್ಕೃತಿ ಅರಿವು' ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಸಂಸ್ಕಾರವೆಂಬುದು ನಾವು ಭೂಸ್ಪರ್ಶವಾಗುವ ಮುನ್ನವೇ ಆರಂಭವಾಗುತ್ತದೆ. ಗರ್ಭದಲ್ಲಿನ ಕಲಿಕೆ ಅಕ್ಷರಾಭ್ಯಾಸದ ಜೊತೆ ಮುಂದುವರಿದು ಕುಟುಂಬ ಸಂಸ್ಕಾರದ ಜೊತೆ ಬೆರೆತು ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗುತ್ತದೆ. ನಾವು ಸೇವಿಸುವ ಆಹಾರ, ಪಾನೀಯ, ಧರಿಸುವ ವಸ್ತ್ರದಿಂದ ಸಂಸ್ಕಾರವೆಂಬುದು ಆರಂಭವಾಗಿ ಕೌಟುಂಬಿಕ ಪ್ರಜ್ಞೆ ಮತ್ತು ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗುತ್ತದೆ. ವ್ಯಕ್ತಿಯಿಂದ ಕುಟುಂಬ, ಕುಟುಂಬದಿಂದ ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ಸಂಸ್ಕಾರದ ಪಾತ್ರ ಮಹತ್ತರವಾದುದು ಎಂದು ಹೇಳಿದರು. ಯುವಕರಲ್ಲಿ ಅಧ್ಯಾತ್ಮಿಕ, ಭೌತಿಕ ಮತ್ತು ಧಾರ್ಮಿಕ ಚಿಂತನೆಗಳು ಮುಖ್ಯ. ಇವೆಲ್ಲದರ ಬೆಳವಣಿಗೆಯ ಮೊದಲ ಹೆಜ್ಜೆಯು ನಮ್ಮ ಮನೆಯಂಗಳದಲ್ಲಿ ಆರಂಭವಾಗಬೇಕು. 'ವಸುದೈವ ಕುಟುಂಬಕಂ' ಪರಿಕಲ್ಪನೆಯು ಪರಿಪೂರ್ಣವಾಗಲು ಯುವ ಮನಸ್ಸುಗಳನ್ನು ಸದೃಢಗೊಳಿಸುವಲ್ಲಿ ಭಜನೆ, ಹಬ್ಬ,ಆಚರಣೆ, ನಂಬಿಕೆ ಮತ್ತು ಕಲಿಕೆ ಅನುಷ್ಠಾನವಾದಾಗ ಮಾತ್ರ ಸಾಧ್ಯ. ಅಲ್ಲದೆ ಇಂದಿನ ಪೀಳಿಗೆಗಳಲ್ಲಿ ಗುಣ, ಶೀಲ, ನಡತೆ ಹಾಗೂ ಸನ್ನಡತೆಯನ್ನು ಜಾಗೃತಗೊಳಿಸಿ ಸಂಸ್ಕಾರದ ಜ್ಯೋತಿ ಬೆಳಗಬೇಕಿದೆ ಎಂದರು. ಸಂಸ್ಕಾರವೆಂಬುದು ಕಲೆ, ಯೋಗ, ಬಾಂಧವ್ಯ, ಶಿಕ್ಷಣ, ವ್ಯಕ್ತಿತ್ವ ಎಲ್ಲದರ ಮಿಶ್ರಣ. ಕಲೆ ಬದುಕನ್ನು ಕಟ್ಟಲು ಕಲಿಸುತ್ತದೆ. ಮಕ್ಕಳನ್ನು ಬೆಳೆಸುವುದು ಒಂದು ಕಲೆ, ಆ ಕಲೆಗೆ ರೂಪ ನೀಡುವುದೇ ಸಂಸ್ಕಾರ. ಮನೆಯ ಹಬ್ಬದಿಂದ ಹಿಡಿದು ಊರಿನ ಜಾತ್ರೆಗಳಿಗೂ ಮಕ್ಕಳನ್ನು ಕರೆದೊಯ್ದು ಸಂತೆ ತಿರುಗಿಸದೆ ಗರ್ಭಗುಡಿಗೆ ಪ್ರದಕ್ಷಿಣೆ ಹಾಕಿಸಿ ಸಂತರನ್ನಾಗಿ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ. ಕುಟುಂಬವೆಂಬ ಪರಿಕಲ್ಪನೆ ಬಹಳ ಮೌಲ್ಯಯುತವಾದುದು, ಪ್ರಪಂಚದಲ್ಲಿ ಕುಟುಂಬದ ಪರಿಕಲ್ಪನೆ ಭಾರತವನ್ನು ಮಹತ್ತರದ ಸ್ಥಾನಕ್ಕೆ ಕೊಂಡೊಯ್ದಿದೆ. ಈ ಪರಿಕಲ್ಪನೆಯ ಮೂಲವೇ ಅವಲಂಬನೆ, ಕೌಟುಂಬಿಕ ಅವಲಂಬನೆಯಿಂದ ಸಂಸ್ಕಾರದ ಬೆಳವಣಿಗೆಯಾಗುತ್ತದೆ. ಅದರ ಬೆಳವಣಿಗೆಗೆ ನಮ್ಮ ಹಬ್ಬ, ಶಾಸ್ತ್ರೀಯ ಕಲೆಗಳ ಮೂಲಗಳನ್ನು ಕೆಡಿಸದೆ ಮುಂದಿನ ಪೀಳಿಗೆಗೆ ನೀಡಬೇಕಿದೆ ಎಂದರು. ಸಮಾಜದ ಪರಿವರ್ತನೆಯ ಬೃಹತ್ ಕಲ್ಪನೆ ಖಾವಂದರದ್ದು, ಇಂದಿನ ಭಾರತೀಯ ಜ್ಞಾನ ಪರಂಪರೆ, ಆತ್ಮನಿರ್ಭರ ಭಾರತ, ಸ್ವದೇಶಿ ಪ್ರಜ್ಞೆ, ರಾಷ್ಟ್ರೀಯ ಶಿಕ್ಷಣ ನೀತಿ, ಕೌಟುಂಬಿಕ ಪ್ರಜ್ಞೆ ಇಂತಹ ವಿವಿಧ ರಚನಾತ್ಮಕ ಕಾರ್ಯಗಳು ಹಲವು ವರುಷಗಳ ಹಿಂದೆಯೇ ಅವರಿಂದ ಅನುಷ್ಠಾನಕ್ಕೆ ಬಂದಿದೆ. ನನ್ನ ಪ್ರಕಾರ ಖಾವಂದರು ಆಧ್ಯಾತ್ಮಿಕ ಲೋಕದ ಪ್ರಧಾನಿ ಎಂದು ಪ್ರಶಂಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಭಜನಾ ಕಮ್ಮಟಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಕಣಿಯೂರಿನ ಮಾರುತಿಪುರದ ರೈತಬಂಧು ಮಾಲಕ ಶಿವಶಂಕರ್ ನಾಯಕ್, ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು. ಪೂರ್ಣಿಮಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಖ್ಯಾತ ಗಾಯಕಿ ಬೆಂಗಳೂರಿನ ಅರ್ಚನಾ ಉಡುಪ ಶಿಬಿರಾರ್ಥಿಗಳಿಗೆ ಭಜನೆ ಹಾಡುವ ಬಗ್ಗೆ ತರಬೇತಿ ನೀಡಿದರು.

ಸೆ. 22 ರಿಂದ ಅಕ್ಟೋಬರ್ 1 : ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Article Image

ಸೆ. 22 ರಿಂದ ಅಕ್ಟೋಬರ್ 1 : ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಸೆ. 22 ರಿಂದ ಅ. 1 ರವರೆಗೆ ವಿಶೇಷಪೂಜೆ ಹಾಗೂ ಪ್ರತಿದಿನ ಸಂಜೆ 6 ಗಂಟೆಯಿಂದ ಪ್ರವಚನಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ. 22: ಸೋಮವಾರ: ಮಾಸ್ಟರ್ ಅಶ್ಮಿತ್, ಮಂಗಳೂರು (ಭಕ್ತಿಸಂಗೀತ) ಸೆ. 23: ಮಂಗಳವಾರ: ವಿದ್ಯಾ ಎಸ್. ರಾವ್ ಮತ್ತು ಬಳಗ ಉಡುಪಿ (ಶಾಸ್ತ್ರೀಯ ಸಂಗೀತ) ಸೆ. 24: ಬುಧವಾರ: ಕುಮಾರಿ ಅನಘಾ ಅವಧೂತ್, ಬೆಳಗಾವಿ (ಸಿತಾರ್ ವಾದನ) ಸೆ. 25: ಗುರುವಾರ: ಕುಮಾರಿ ಶ್ರೀವಿದ್ಯಾ, ಉಜಿರೆ (ಶಾಸ್ತ್ರೀಯ ಸಂಗೀತ) ಸೆ. 26: ಶುಕ್ರವಾರ: ಕುಮಾರಿ ಸಿಂಚನಾ ಎಂ. ಗೌಡ ಮತ್ತು ಬಳಗ, ಪುತ್ತೂರು (ಭಕ್ತಿರಸಮಂಜರಿ) ಸೆ. 27: ಶನಿವಾರ: ವಿದುಷಿ ಚಂದ್ರಿಕಾ ರಾಜಾರಾಮ್, ಬೆಂಗಳೂರು (ಶಾಸ್ತ್ರೀಯ ಸಂಗೀತ) ಸೆ. 28: ಆದಿತ್ಯವಾರ: ವಿದುಷಿ ಅನುರಾಧ ಭಟ್, ಅಡ್ಕಸ್ಥಳ, ಕೇಪು, ವಿಟ್ಲ (ಶಾಸ್ತ್ರೀಯ ಸಂಗೀತ) ಸೆ. 29: ಸೋಮವಾರ: ಕುಮಾರಿ ಶ್ರೀಲಕ್ಷ್ಮೀ, ಬೆಳ್ಮಣ್ಣು, ಬೆಂಗಳೂರು (ಶಾಸ್ತ್ರೀಯ ಸಂಗೀತ) ಸೆ. 30: ಮಂಗಳವಾರ: ಕುಮಾರಿ ನವ್ಯ ಎಂ. ಆರ್. ಮತ್ತು ಬಳಗ, ಪುತ್ತೂರು (ಸುಗಮ ಸಂಗೀತ), ಅಕ್ಟೋಬರ್ 1: ಬುಧವಾರ : ಕುಮಾರಿ ಆರಾಧ್ಯ ರಾವ್, ಬೆಂಗಳೂರು : ಭಕ್ತಿರಸಮಂಜರಿ (ಸಂಜೆ 6.30 ರಿಂದ 8.30 ರ ವರೆಗೆ), ಕುಮಾರಿ ಕ್ಷಿತಿ ರೈ, ಧರ್ಮಸ್ಥಳ : ಸುಗಮಸಂಗೀತ (ರಾತ್ರಿ ಗಂಟೆ 9 ರಿಂದ 11.30 ರ ವರೆಗೆ)

First Previous

Showing 1 of 10 pages

Next Last