ಸತ್ತೂರು, ಧಾರವಾಡ: ವಿಶ್ವ ಔಷಧಿ ವಿತರಕರ ದಿನಾಚರಣೆ
Published Date: 30-Sep-2025 Link-Copied
ಎಸ್.ಡಿ.ಎಂ. ಔಷಧ ವಿಜ್ಞಾನ ಕಾಲೇಜು ಮತ್ತು ಎಸ್.ಡಿ.ಎಂ. ಆಸ್ಪತ್ರೆಯ ಔಷಧಿ ವಿಭಾಗದ ಸಹಯೋಗದೊಂದಿಗೆ “ಆರೋಗ್ಯವನ್ನು ಯೋಚಿಸಿ, ಔಷಧಿಕಾರರನ್ನು ನೆನಪಿಸಿಕೊಳ್ಳಿ” ಎಂಬ ಧ್ಯೆಯೆಯೊಂದಿಗೆ “ವಿಶ್ವ ಔಷಧಿ ವಿತರಕರ ದಿನ”ವನ್ನು ಆಚರಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದು, ಇತರ ಗಣ್ಯರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧಾರವಾಡದ ಹೆಸರಾಂತ ಸಮುದಾಯ ಔಷಧಿ ವಿತರಕರರಾದ ಬಿ.ಎಸ್. ಪಾಟೀಲ್ ಅವರು ಗೌರವ ಅತಿಥಿಯಾಗಿದ್ದು ಗಣ್ಯರು ಅವರನ್ನು ಸನ್ಮಾನಿಸಿದರು. ಗೌರವಾನ್ವಿತ ಅತಿಥಿಗಳಾದ ಬಿ.ಎಸ್. ಪಾಟೀಲ್ ಅವರು ಸನ್ಮಾನಕ್ಕೆ ಉತ್ತರಿಸುತ್ತಾ ಔಷಧಿ ವಿತರಕರು ತಮ್ಮ ವೃತ್ತಿಯಲ್ಲಿ ಗೌರವ, ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಅನುಸರಿಸಬೇಕು. ವೈದ್ಯರ ಸೂಚಿನೆಯಂತೆ ಔಷಧಿ ವಿತರಕರು ಸರಿಯಾದ ಔಷಧಿಗಳನ್ನು ವಿತರಿಸಬೇಕು. ಔಷಧಿಗಳನ್ನು ವಿತರಿಸುವಾಗ ಔಷಧಿ ವಿತರಕರು ಸರಿಯಾದ ಕಾಳಜಿ ಮತ್ತು ಗಮನ ಹರಿಸಬೇಕು. ಔಷಧಿ ವಿತರಕರ ಲಭ್ಯತೆಯು ರೋಗಗಳನ್ನು ಗುಣಪಡಿಸುವುದಲ್ಲದೆ, ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತವೆ. ಔಷಧಿ ವಿತರಕರ ಅನಿವಾರ್ಯ ಮತ್ತು ಸಮರ್ಪಿತ ಸೇವೆಯು ರೋಗಿಗಳ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಔಷಧಿ ವಿತರಕರು ರೋಗಿಗಳ ಸಮಾಲೋಚನೆ ನಡೆಸಿ, ಅವರ ಜೀವನ ಶೈಲಿಯನ್ನು ಬದಲಾಯಿಸಬಹುದು. ಔಷಧಿ ವಿತರಕರು ವೈದ್ಯರು ಮತ್ತು ರೋಗಿಗಳ ಮಧ್ಯವರ್ತಿಯಾಗಿ ಸೇವೆ ಸಲ್ಲಿಸಬೇಕು. ಎಸ್.ಡಿ.ಎಂ. ಸಂಸ್ಥೆಗಳು ಸಾಮಾಜಿಕ ಸೇವೆಯಲ್ಲಿ ವೈಶಿಷ್ಟ್ಯತೆಯೊಂದಿಗೆ ಇತರರಿಗೆ ಮಾದರಿಯಾಗಿವೆ. ಎಸ್.ಡಿ.ಎಂ. ಔಷಧ ವಿಜ್ಞಾನ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಅನಿಲ್ ತುಮಕೂರ ಅವರು ಔಷಧಿ ವಿತರಕರು ದಿನದ ಮಹತ್ವದ ಬಗ್ಗೆ ತಿಳಿಸಿದರು. ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಮಖ್ದೂಮ್ ಕಿಲ್ಲೇದಾರ್, ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು ಮತ್ತು ಉಪ ಪ್ರಾಂಶುಪಾಲರಾದ ಡಾ. ಕಿರಣ್ ಐತಾಳ, ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಮಾಣಿಕ ಮತ್ತು ಸಮರ್ಪಿತ ಸೇವೆಯನ್ನು ಪರಿಗಣಿಸಿ ಎಸ್.ಡಿ.ಎಂ. ಆಸ್ಪತ್ರೆಯ ಹಿರಿಯ ಔಷಧಿ ವಿತರಕರರನ್ನು ಸನ್ಮಾನಿಸಲಾಯಿತು. ಧನುಷ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಔಷಧಿ ವಿಭಾಗದ ಸಹಾಯಕ ವ್ಯವಸ್ಥಾಪಕರಾದ ರಾಘವೇಂದ್ರ ಅವರು ವಂದನಾರ್ಪಣೆ ಸಲ್ಲಿಸಿದರು. ನಂದಿನಿ ಅವರು ಗೌರವಾನ್ವಿತ ಅತಿಥಿ ಬಿ.ಎಸ್. ಪಾಟೀಲ್ ಅವರನ್ನು ಪರಿಚಯಿಸಿದರು. ಮಹಿಮಾ ಮುದ್ಧೊಳೆ ಅವರು ಪ್ರಬಂಧ, ಬಿತ್ತಿಪತ್ರ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿಯನ್ನು ಮಂಡಿಸಿದರು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಔಷಧ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಸಹನಾ ಲದ್ದಿಮಠ್ ಫಾರ್ಮಸಿಯನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿದ್ದನ್ನ್ದು ಸಮರ್ಥಿಸಿಕೊಂಡರು.