Tue, Apr 22, 2025
ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ
ವಿದ್ಯಾಗಿರಿ: 'ಪ್ರಭಾವಿ ಸಂವಹನವೇ ಇಂದಿನ ಸವಾಲು ಮತ್ತು ಅವಶ್ಯಕತೆ' ಎಂದು ಮಂಗಳೂರಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ವಾಸುದೇವ ಕಾಮತ್ ಹೇಳಿದರು. ಇಲ್ಲಿನ ಸುಂದರಿ ಆನಂದ ಆಳ್ವ ಆವರಣದಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ವಾರ್ಷಿಕೋತ್ಸವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತವು ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ನಿಮ್ಮ ಕಲಿಕೆಯೇ (ಶಿಕ್ಷಣ) ಅದರ ವೇಗವರ್ಧಕವಾಗಿದೆ ಎಂದ ಅವರು, ಪರೀಕ್ಷೆಯೇ ಕಲಿಕೆಯ ಅಂತ್ಯವಲ್ಲ. ಬದುಕಿನಲ್ಲಿ ಪ್ರತಿನಿತ್ಯ ಕಲಿಕೆ ಅನಿವಾರ್ಯ ಎಂದರು. ಕೃತಕಬುದ್ಧಿಮತ್ತೆ (ಎಐ) ಎಂಬುದು ಮಿಥ್ಯೆ ಅಲ್ಲ. ಔದ್ಯೋಗಿಕ ಬದುಕಿನ ಅನಿವಾರ್ಯತೆ ಎಂದು ಅವರು ವಿವರಿಸಿದರು. ನೀವು ಉದ್ಯಮಶೀಲತೆಯನ್ನು ಮೈಗೂಡಿಸಿಕೊಂಡು ಯಶಸ್ವಿ ಆಗಬಹುದು ಎಂದ ಅವರು, ಕೋಟ್ಯಧಿಪತಿಗಳಾದ ಕರಾವಳಿ ಸಾಧಕರು ಇದ್ದಾರೆ ಎಂದು ಉದಾಹರಣೆ ನೀಡಿದರು. ನಿಮ್ಮ ಅಂತರAಗವನ್ನು ಆಲಿಸಿ. ಹೃದಯದ ಮಾತು ಕೇಳಿ. ನಿಮಗೆ ಅತ್ಯುತ್ತಮ ಅವಕಾಶವನ್ನು 'ಆಳ್ವಾಸ್' ನೀಡಿದೆ. ನೀವು ಇತರರಿಗೂ ತಿಳಿಸಿ, ಇತರರ ಏಳ್ಗೆಗೆ ನೆರವಾಗಿ ಎಂದು ಸಲಹೆ ನೀಡಿದರು. ಮುರಕಲ್ಲಿನ ಬೆಟ್ಟವನ್ನು ಮನಸ್ಸು ಕಟ್ಟುವ ಶೈಕ್ಷಣಿಕ ನೆಲೆಯಾಗಿ ಪರಿವರ್ತಿಸಿದ ಡಾ| ಮೋಹನ ಆಳ್ವ ಅವರ ಸಾಧನೆ ಅನನ್ಯ ಎಂದು ಶ್ಲಾಘಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ। ಎಂ.ಮೋಹನ ಆಳ್ವ ಮಾತನಾಡಿ, ಸಾಂಸ್ಕೃತಿಕ, ಕ್ರೀಡೆ ಜೊತೆ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಆಳ್ವಾಸ್, ಇಂದು ಶೈಕ್ಷಣಿಕ ಕ್ಷೇತ್ರದ ಮಾದರಿ ಆಗಿದೆ ಎಂದರು. 1998 ಆರಂಭಗೊಂಡ ಆಳ್ವಾಸ್ ಕಾಲೇಜಿನಲ್ಲಿ ಈವರೆಗೆ 68,401 ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ನ್ಯಾಕ್ 'ಎ' ಶ್ರೇಣಿ ಪಡೆದಿದೆ. ನಾಲ್ಕು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ನಮ್ಮ ಪ್ರತಿಷ್ಠಾನದ ಕಾಲೇಜುಗಳ ಕಾರ್ಯಕ್ರಮ ಹಾಗೂ ಯೋಜನೆಗಳು ನಡೆಯುತ್ತಿವೆ. ನಮ್ಮಲ್ಲಿ ಪ್ರಗತಿ ಉದ್ಯೋಗ ಮೇಳ ಪ್ರತಿವರ್ಷ ನಡೆಯುತ್ತಿದ್ದು, ಶೇ 80 ರಷ್ಟು ವಿದ್ಯಾರ್ಥಿಗಳಿಗೆ 'ಆಳ್ವಾಸ್ ಪ್ರಗತಿ' (ಬೃಹತ್ ಉದ್ಯೋಗ ಮೇಳ) ಮೂಲಕ ಉದ್ಯೋಗ ದೊರಕಿದೆ. ಪಠ್ಯದ ಜೊತೆ, ಸ್ಪರ್ಧಾತ್ಮಕ ಪರೀಕ್ಷೆ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಅಂಕದ ಜೊತೆ ವಿವಿಧ ಸಾಧನೆಗಳ ಮೂಲಕ ಬಯೋಡಾಟ ಗಟ್ಟಿಯಾಗಿರಲಿ. ಅದಕ್ಕಾಗಿ ಸಾಧನೆ ಅವಶ್ಯ ಎಂದರು. ಬೆಂಗಳೂರಿನ ದಿಶಾ ಭಾರತ್ ಸಂಸ್ಥಾಪಕಿ ರೇಖಾ ರಾಮಚಂದ್ರ ಮಾತನಾಡಿ, 'ನಾನು ಮತ್ತೆ ವಿದ್ಯಾರ್ಥಿಯಾದರೆ ಆಳ್ವಾಸ್ ಕಾಲೇಜಿಗೆ ಸೇರಿಕೊಳ್ಳುವೆ. ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಯ ಶಿಕ್ಷಣವು ಮಾದರಿಯಾಗಿದೆ' ಎಂದರು. ಎಲ್ಲ ವಿದ್ಯಾರ್ಥಿಗಳು ಮುಂದೊAದು ದಿನ ವೇದಿಕೆಗೆ ಬರಬೇಕು. ಅದಕ್ಕೆ, ತಾನು, ತನ್ನ ಕುಟುಂಬ, ತನ್ನ ಸಂಸ್ಥೆಯ ಜೊತೆ ದೇಶ ಹೆಮ್ಮೆ ಪಡುವ ಸಾಧನೆ ಮಾಡುವ ಛಲ ಬೇಕು ಎಂದರು. ನಮ್ಮಲ್ಲಿ ಧನಾತ್ಮಕ, ಭಾವುಕ ಛಲ, ಉದ್ದೇಶ ಮತ್ತು ದೇಶಭಕ್ತಿ ಇರಬೇಕು. ಸಾಮಾನ್ಯ ಬದುಕಿನ ಬದಲು ಅಸಮಾನ್ಯ ಸಾಧನೆ ಮೂಲಕ ಬದುಕಿ ಎಂದು ಹಾರೈಸಿದರು. ಯಶಸ್ಸು ಸದಾ ಸಕರಾತ್ಮಕ ಉದ್ದೇಶದಿಂದ ಸಾಧ್ಯ. ಸುನಿತಾ ವಿಲಿಯಮ್ಸ್ರವರಲ್ಲಿದ್ದ ಸಕರಾತ್ಮಕ ಗುಣವೇ ಅವರ ಯಶಸ್ಸಿಗೆ ಮುಖ್ಯ ಕಾರಣವಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶಿಸ್ತು ಪಾಲನೆಗಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ ಎಂದರು. ಅವಿರತ ಶ್ರಮದ ಮಾದರಿ ವ್ಯಕ್ತಿತ್ವವನ್ನು ಡಾ.ಎಂ.ಮೋಹನ ಆಳ್ವ ಹೊಂದಿದ್ದಾರೆ. ಅದು ಅವರ ಸಾಧನೆಗೆ ಕಾರಣ ಎಂದರು. ಶಿಕ್ಷಣಕ್ಕೆ ನ್ಯಾಯ ನೀಡುವುದು ನಮ್ಮ ಉದ್ದೇಶ. ನಿಮ್ಮ ಸಾಧನೆ, ಸಾಮಾಜಿಕ ಕೊಡುಗೆಯೇ ನಮಗೆ ಪ್ರೇರಣೆ ಎಂದರು. ಆಳ್ವಾಸ್ (ಸ್ವಾಯತ್ತ) ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ವಾರ್ಷಿಕ ವರದಿ ವಾಚಿಸಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜು ಕುಲಸಚಿವ (ಪರೀಕ್ಷಾಂಗ) ಕೆ ನಾರಾಯಣ ಶೆಟ್ಟಿ, ಆಳ್ವಾಸ್ (ಸ್ವಾಯತ್ತ) ಕಾಲೇಜು ಕುಲಸಚಿವ (ಶೈಕ್ಷಣಿಕ) ಟಿ.ಕೆ. ರವೀಂದ್ರನ್, ಆಳ್ವಾಸ್ (ಸ್ವಾಯತ್ತ) ಕಾಲೇಜು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಆಳ್ವಾಸ್ ವೆಲ್‌ನೆಸ್ ಸೆಂಟರ್ ನಿರ್ದೇಶಕಿ ಡಾ ದೀಪಾ ಕೊಠಾರಿ ಹೊರತಂದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.