Thu, Apr 24, 2025
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಭೌತಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ
ಉಜಿರೆ, ಮಾರ್ಚ್ 17: ಮೂಲವಿಜ್ಞಾನದಲ್ಲಿ ಪರಿಣತಿ ಗಳಿಸಿ ವೈಜ್ಞಾನಿಕ ಸಂಶೋಧನೆಯ ಮೌಲ್ಯ ಹೆಚ್ಚಿಸಬೇಕಿದೆ. ಇದರಿಂದ ವಿಜ್ಞಾನದ ಸಮಾಜಪರತೆಗೆ ಅರ್ಥಪೂರ್ಣ ಸ್ಪರ್ಶ ದೊರಕುತ್ತದೆ ಎಂದು ಬೆಂಗಳೂರಿನ ಸಿಇಎನ್‌ಎಸ್‌ನ ವಿಜ್ಞಾನಿ, ಪ್ರಾಧ್ಯಾಪಕ ಡಾ.ಸಿ.ವಿ.ಯಳಮಗ್ಗದ್ ಅವರು ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ಅಧ್ಯಯನ, ಸಂಶೋಧನಾ ವಿಭಾಗ ಮತ್ತು ರಿಸರ್ಚ್, ಡೆವಲಪ್‌ಮೆಂಟ್ ಸೆಲ್‌ನ ಸಹಭಾಗಿತ್ವದಲ್ಲಿ ‘ಬ್ರಿಡ್ಜಿಂಗ್ ದ ಮೆನಿ ಫೇಸಸ್ ಆಫ್ ಮ್ಯಾಟರ್’ ಕುರಿತು ಆಯೋಜಿತವಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಆಶಯ ಪ್ರಸ್ತುತಪಡಿಸಿದರು. ಮೂಲವಿಜ್ಞಾನದ ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮೂಲವಿಜ್ಞಾನದ ತಿಳುವಳಿಕೆಯೊಂದಿಗೆ ನಿರ್ವಹಿಸಲ್ಪಡುವ ಸಂಶೋಧನೆ ಸಮಾಜಕ್ಕೆ ಅನುಕೂಲವಾಗುತ್ತದೆ. ವಿಜ್ಞಾನಕ್ಕೆ ಮಾನವಿಕ ಆಯಾಮ ದೊರಕುತ್ತದೆ ಎಂದು ಹೇಳಿದರು. ಸಂಶೋಧನಾ ಪ್ರಬಂಧಗಳ ಸಾರಲೇಖಗಳನ್ನೊಳಗೊಂಡ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅವರು ಭೌತಶಾಸ್ತ್ರ ವಲಯದಲ್ಲಿ ಆಗುತ್ತಿರುವ ಹೊಸ ಪಲ್ಲಟಗಳನ್ನು ತಿಳಿದುಕೊಳ್ಳಲು ರಾಷ್ಟ್ರೀಯ ವಿಚಾರ ಸಂಕಿರಣಗಳು ಪೂರಕವಾಗುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ ವಿಚಾರ ಸಂಕಿರಣದ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎಸ್.ಡಿ.ಎಂ ಎಜ್ಯುಕೇಷನ್ ಸೊಸೈಟಿಯ ಅಕಾಡೆಮಿಕ್ ಸಂಯೋಜಕರಾದ ಎಸ್. ಎನ್. ಕಾಕತ್ಕರ್, ರಿಸರ್ಚ್ ಡೆವಲಪ್‌ಮೆಂಟ್ ಸೆಲ್‌ನ ನಿರ್ದೇಶಕಿ ಡಾ. ಸೌಮ್ಯ ಬಿ.ಪಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ, ಸಹ ಪ್ರಾಧ್ಯಾಪಕ ಡಾ.ರಾಘವೇಂದ್ರ ಎಸ್ಉ ಪಸ್ಥಿತರಿದ್ದರು. ನಂತರ ನಡೆದ ಗೋಷ್ಠಿಗಳಲ್ಲಿ ಡಾ. ವಿನಯಕುಮಾರ್ ಕೆ.ಬಿ., ಡಾ. ಅರವಿಂದ ಎಸ್, ಡಾ. ರ‍್ನಬ್ ದತ್ತಾ ವಿಚಾರಗಳನ್ನು ಮಂಡಿಸಿದರು. ವಿವಿಧ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಲಾಪ್ರದರ್ಶನ ನೀಡಿದರು. ಎರಡು ದಿನಗಳ ಕಾರ್ಯಕ್ರಮದಲ್ಲಿ 150 ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಾಪಕರು ಭಾಗವಹಿಸಿದ್ದರು.