ಧರ್ಮಸ್ಥಳದಲ್ಲಿ ಇಂದ್ರಿಯ ಆರೋಗ್ಯದ ಬಗ್ಗೆ ಅಂತಾರಾಷ್ಟ್ರೀಯ ಸಮಾವೇಶ “ಪುನರ್ವಸು”
ನಮ್ಮ ದೇಹದ ಪಂಚೇಂದ್ರಿಯಗಳಿಗೂ ಅವಿನಾಭಾವ ಸಂಬಂಧವಿದ್ದು, ಸಾವಿರಾರು ವರ್ಷಗಳಿಂದ ಬಳಸುತ್ತಿರುವ ಪಾರಂಪರಿಕ ಆಯುರ್ವೇದ ಪದ್ಧತಿ ಮೂಲಕ ಪಂಚೇಂದ್ರಿಯಗಳ ಬಲವರ್ಧನೆಯೊಂದಿಗೆ ಆರೋಗ್ಯಭಾಗ್ಯ ಹೊಂದಬಹುದು ಎಂದು ಕೇಂದ್ರಸರ್ಕಾರದ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಪರಿಷತ್‌ನ ಅಧ್ಯಕ್ಷರಾದ ವೈದ್ಯ ಮನೀಷಾ ಕೋಟೆಕಾರ್ ಹೇಳಿದರು. ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಆಪ್ತಾಸ್ ಆಯುರ್ವೇದ ಟ್ರಸ್ಟ್ನ ದಶಮಾನೋತ್ಸವದ ಅಂಗವಾಗಿ ಇಂದ್ರಿಯ ಆರೋಗ್ಯದ ಬಗ್ಗೆ ಆಯೋಜಿಸಿದ ಅಂತಾರಾಷ್ಟ್ರೀಯ ಸಮಾವೇಶ “ಪುನರ್ವಸು” ಉದ್ಘಾಟಿಸಿ ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪ್ರಕೃತಿ-ಪರಿಸರಕ್ಕೂ ನಮ್ಮ ಬದುಕಿಗೂ ಅವಿನಾಭಾವ ಸಂಬಂಧವಿದ್ದು ಪ್ರಗತಿಯ ನೆಪದಲ್ಲಿ ನಾವು ಪ್ರಕೃತಿಯಿಂದ ವಿಮುಖರಾಗಿ, ಪರಿಸರಕ್ಕೆ ಹಾನಿ ಮಾಡುತ್ತಿರುವುದೇ ಇಂದು ಅನೇಕ ರೋಗಗಳು ಪಸರಿಸಲು ಕಾರಣವಾಗಿದೆ ಎಂದು ಅವರು ಹೇಳಿದರು. ವೈದ್ಯರು ನಿರಂತರ ಕಲಿಕೆ, ಅಧ್ಯಯನ, ಸಂಶೋಧನೆಯೊಂದಿಗೆ ತಮ್ಮ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಂಡು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಕೌಶಲ, ಉತ್ತಮಸಂವಹನ, ಅನುಕಂಪ ಮತ್ತು ಸಹಾನುಭೂತಿಯೊಂದಿಗೆ, ನೈತಿಕತೆಯಿಂದ ರೋಗಿಗಳ ಸೇವೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಇಂದ್ರಿಯ ಆರೋಗ್ಯ ಅಭಿಯಾನದ ಲೋಗೊ ಅನಾವರಣಗೊಳಿಸಿ, “ಚೋಟಾ ಚರಕ” ಪುಸ್ತಕ ಬಿಡುಗಡೆಗೊಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೈನಂದಿನ ಜೀವನದಲ್ಲಿ ಆಯುರ್ವೇದ ಪದ್ಧತಿ ಬಳಕೆಯಿಂದ ಆಯುಷ್ಯ ವೃದ್ಧಿಯೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಗಳ ಮೂಲಕ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಶುಶ್ರೂಷೆ ನೀಡಿ ಆಯುರ್ವೇದ ಪದ್ಧತಿಯನ್ನು ಜನಪ್ರಿಯಗೊಳಿಸಲಾಗುತ್ತಿದೆ. ಪಂಚೇಂದ್ರಿಗಳ ನಿಯಂತ್ರಣದಿಂದ ಆರೋಗ್ಯಭಾಗ್ಯ ಹೊಂದಬಹುದು ಎಂದು ಅವರು ಅಭಿಪ್ರಾಯಪಟ್ಟರು. ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ವೈದ್ಯ ಡಾ. ಶರದ್‌ಕುಮಾರ್ ಎಂ. ಇಂದ್ರಿಯ ಆರೋಗ್ಯ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ದೇಶದಲ್ಲಿರುವ ಅರುನೂರು ಆಯುರ್ವೇದ ಕಾಲೇಜುಗಳ ಆಶ್ರಯದಲ್ಲಿ ಮುಂದಿನ 5 ವರ್ಷಗಳಲ್ಲಿ ಪ್ರತಿವರ್ಷ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ 500 ಮಂದಿ ಸ್ವಯಂ-ಸೇವಕರು ಆಯುರ್ವೇದ ಪದ್ಧತಿ ಬಗ್ಗೆ ಅರಿವು, ಜಾಗೃತಿ ಮೂಡಿಸಲಿದ್ದಾರೆ. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಇಂದು ಧರ್ಮಸ್ಥಳದಿಂದಲೆ ಈ ವಿನೂತನ ಕಾರ್ಯಕ್ರಮ ಶುಭಾರಂಭಗೊಳ್ಳುತ್ತದೆ ಎಂದು ಪ್ರಕಟಿಸಿದರು. ಶುಭಾಶಂಸನೆ ಮಾಡಿದ ಆಯುಷ್ ಸಲಹೆಗಾರ ಡಾ. ಕೌಸ್ತುಭ ಉಪಾಧ್ಯಾಯ, ಗ್ರಾಮೀಣ ಪ್ರದೇಶಗಳಲ್ಲಿ ಆಯುರ್ವೇದ ಶಿಬಿರಗಳನ್ನು ಆಯೋಜಿಸಿ ಜನಸಾಮಾನ್ಯರಿಗೆ ಇದರ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಬೇಕು. ಸೇವೆಯ ಬಗ್ಗೆ ದಾಖಲೀಕರಣ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಕರ್ನಾಟಕ ಸರ್ಕಾರದ ಆಯುಷ್ ಇಲಾಖಾ ಆಯುಕ್ತ ಡಾ. ಸುನಿಲ್ ಪನ್ವಾರ್ ಮಾತನಾಡಿ ಆಯುರ್ವೇದ ವೈದ್ಯರುಗಳು ಪಾರಂಪರಿಕ ಪದ್ಧತಿಯ ರಾಯಭಾರಿಗಳಾಗಿ ಎಲ್ಲಾ ಕಡೆ ಈ ಪದ್ಧತಿಯನ್ನು ಜನಪ್ರಿಯಗೊಳಿಸಬೇಕು. ಸಾರ್ವಜನಿಕರಿಂದಲೂ ಈ ಪದ್ಧತಿಗೆ ಉತ್ತಮ ಸ್ಪಂದನೆ ದೊರಕುತ್ತಿದ್ದು, ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ನಡೆಸಬೇಕು ಎಂದು ಅವರು ಹೇಳಿದರು. “ಗುರುವಂದನ” ಕಾರ್ಯಕ್ರಮದಡಿಯಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಎಸ್.ಡಿ.ಎಂ. ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ಕಿರಣ್ ಕೆ. ಧನ್ಯವಾದವಿತ್ತರು. ಡಾ. ಅನುಪಮ ವಿ. ಚಿನ್ನಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಸಮಾರಂಭಕ್ಕೆ ಪೂರ್ವಾಭಾವಿಯಾಗಿ, “ಸಂಹಿತಾ” ಮೆರವಣಿಗೆ, ಪ್ರತಿಷ್ಠಾಪನೆ, ವಾದ್ಯಮೇಳ, ಶಂಖನಾದ, ಸಂಹಿತಾ ಪ್ರತಿಷ್ಠಾಪನೆ ಮೊದಲಾದ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು.
