ಆಳ್ವಾಸ್: ಬೃಹತ್ ಉದ್ಯೋಗ ಮೇಳದ
Published Date: 02-Aug-2026 Link-Copied
ಮೂಡುಬಿದಿರೆ: 16ನೇ ಆವೃತ್ತಿಯ ಆಳ್ವಾಸ್ ಪ್ರಗತಿ–2026 ಬೃಹತ್ ಉದ್ಯೋಗ ಮೇಳದ ಯಶಸ್ವಿ ಆಯೋಜನೆಗಾಗಿ ಯುವ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿದ್ದು, ಯುವ ನಾಯಕರು ಈ ಉದ್ಯೋಗ ಮೇಳದ ಅಧಿಕೃತ ಪಾಲುದಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕರೆ ನೀಡಿದರು. ಆಳ್ವಾಸ್ ಪ್ರಗತಿ ಹಿನ್ನೆಲೆಯಲ್ಲಿ ಮಿಜಾರಿನಲ್ಲಿ ಆಯೋಜಿಸಲಾದ ಯುವ ನಾಯಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಯಾವುದೇ ಲಾಭದ ಉದ್ದೇಶವಿಲ್ಲದೆ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮಹತ್ವದ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು. ಈ ಬಾರಿ 343ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಈಗಾಗಲೇ ನೋಂದಾಯಿಸಿಕೊಂಡಿದ್ದು, ಡಿಗ್ರಿ, ಬಿ.ಕಾಂ., ಡಿಪ್ಲೊಮಾ, ಐಟಿಐ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 13ಕ್ಕೂ ಹೆಚ್ಚು ಉದ್ಯೋಗ ವಲಯಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಿವೆ. ಅನುಭವ ಹೊಂದಿದವರಿಗೂ ಸೂಕ್ತ ಉದ್ಯೋಗಗಳಿವೆ ಎಂದರು. ಇಂದಿನ ಉದ್ಯೋಗ ಜಗತ್ತಿನಲ್ಲಿ ಕೇವಲ ಪ್ರಮಾಣಪತ್ರಗಳಿಗೆ ಮಾತ್ರ ಮಹತ್ವವಿಲ್ಲ. ಕೌಶಲ್ಯ, ಆತ್ಮವಿಶ್ವಾಸ ಹಾಗೂ ಕಾರ್ಯಸಾಮರ್ಥ್ಯಕ್ಕೆ ಹೆಚ್ಚಿನ ಮೌಲ್ಯ ಸಿಗುತ್ತಿದೆ. ಆದ್ದರಿಂದ ಗ್ರಾಮೀಣ ಭಾಗದ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಮೇಳಕ್ಕೆ ಕರೆತರಬೇಕು. ಪೂರ್ವ ತಯಾರಿಯೊಂದಿಗೆ, ಆತ್ಮವಿಶ್ವಾಸದಿಂದ ಉದ್ಯೋಗ ಸಂದರ್ಶನಕ್ಕೆ ಹಾಜರಾಗುವಂತೆ ಅವರನ್ನು ಪ್ರೇರೇಪಿಸುವ ಜವಾಬ್ದಾರಿ ಯುವ ನಾಯಕರ ಮೇಲಿದೆ ಎಂದು ಹೇಳಿದರು. ನಮ್ಮ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿದೆ. ಯಾವುದೇ ಶಿಫಾರಸ್ಸು ಅಥವಾ ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಗೂ ಅವರ ಅರ್ಹತೆ ಹಾಗೂ ಕೌಶಲ್ಯದ ಆಧಾರದ ಮೇಲೆಯೇ ಅವಕಾಶ ದೊರೆಯುತ್ತದೆ. ಈ ನಂಬಿಕೆಯನ್ನು ಸಮಾಜದ ಪ್ರತಿಯೊಂದು ಯುವಕರಿಗೂ ತಲುಪಿಸುವ ಕಾರ್ಯವನ್ನು ನೀವು ಮಾಡಬೇಕು ಎಂದು ಮನವಿ ಮಾಡಿದರು. ಯುವಕರಲ್ಲಿ ಅಪಾರ ಶಕ್ತಿ, ಸೃಜನಶೀಲತೆ ಮತ್ತು ಹೊಸತನದ ಚಿಂತನೆ ಅಡಗಿದೆ. ಜೆನ್-ಝಿ ಪೀಳಿಗೆಯ ಉತ್ಸಾಹ ಹಾಗೂ ಹಿರಿಯರ ಮೌಲ್ಯಾಧಾರಿತ ಜೀವನದೃಷ್ಟಿ ಒಂದಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಹಿರಿಯರ ಅನುಭವ ಮತ್ತು ಕಿರಿಯರ ಚೈತನ್ಯ ಎರಡೂ ಸಮಾಜಕ್ಕೆ ಸಮಾನವಾಗಿ ಅಗತ್ಯವೆಂದು ಅಭಿಪ್ರಾಯಪಟ್ಟರು. ಆಳ್ವಾಸ್ ಪ್ರಗತಿ ಕೇವಲ ಉದ್ಯೋಗ ಮೇಳವಲ್ಲ. ಇದು ಸಾವಿರಾರು ಯುವಕರ ಜೀವನಕ್ಕೆ ಹೊಸ ದಿಕ್ಕು ನೀಡುವ ಸಾಮಾಜಿಕ ಚಳವಳಿಯಾಗಿದೆ. ಸಮಾನ ಅವಕಾಶಗಳನ್ನು ಸೃಷ್ಟಿಸುವ, ಯುವಕರ ಜೀವನದಲ್ಲಿ ಉದ್ದೇಶವನ್ನು ಮೂಡಿಸುವ ವೇದಿಕೆಯಾಗಿದೆ. ನಿಮ್ಮಂತಹ ಯುವ ನಾಯಕರು ಜೊತೆಯಾದಾಗ ನಮ್ಮ ಕಾರ್ಯ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದರು. ಈ ಬಾರಿಯ ಉದ್ಯೋಗ ಮೇಳದ ಸಿದ್ಧತೆಗಾಗಿ ಕಳೆದ ಮೂರು ತಿಂಗಳಿಂದ 70ಕ್ಕೂ ಹೆಚ್ಚು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದು, ಮೇಳದ ದಿನದಂದು ಸುಮಾರು 2,500 ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಲಿದ್ದಾರೆ. ಸೇವಾ ಮನೋಭಾವದಿಂದ ಸಭೆಗೆ ಆಗಮಿಸಿರುವ ಯುವ ನಾಯಕರ ಬದ್ಧತೆಯೇ ಈ ಅಭಿಯಾನದ ದೊಡ್ಡ ಶಕ್ತಿ ಎಂದು ಶ್ಲಾಘಿಸಿದರು. ಹೊರ ಜಿಲ್ಲೆಗಳಿಂದ ಕನಿಷ್ಠ 2,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದರೆ, ಗ್ರಾಮೀಣ ಯುವಕರನ್ನು ತಲುಪುವ ನಮ್ಮ ಉದ್ದೇಶ ಸಾರ್ಥಕವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಯುವ ನಾಯಕರು ತಮ್ಮ ವ್ಯಾಪ್ತಿಯ ಹೆಚ್ಚಿನ ಯುವಕರಿಗೆ ನೋಂದಣಿ ಮಾಡಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಕರೆ ನೀಡಿದರು. ವಿಶ್ವ ಕಬ್ಬಡ್ಡಿ ಚಾಂಪಿಯನ್‌ಶಿಪ್ ವಿಜೇತ ಭಾರತ ತಂಡದ ಆಟಗಾರ್ತಿ ಹಾಗೂ ಆಳ್ವಾಸ್‌ನ ವಿದ್ಯಾರ್ಥಿನಿ ಧನಲಕ್ಷ್ಮೀ ಪೂಜಾರಿಯವರು ಗುಜರಾತ್ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ ಪಡೆದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಯುವ ಮುಖಂಡರು, ಸಂಘ ಸಂಸ್ಥೆಗಳನ್ನು ಪ್ರತಿನಿಧಿಸುವ ಯುವ ನಾಯಕರುಗಳು ಭಾಗವಹಿಸಿ, ಆಳ್ವಾಸ್ ಪ್ರಗತಿ ಕುರಿತು ತಮ್ಮ ಅಭಿಪ್ರಾಯಗಳು, ಸಲಹೆಗಳು ಮತ್ತು ಸೂಚನೆಗಳನ್ನು ಹಂಚಿಕೊಂಡರು. ಉಪನ್ಯಾಸಕ ಡಾ. ವಿನಾಯಕ ಭಟ್ ಗಾಳಿಮನೆ ಕಾರ್ಯಕ್ರಮ ನಿರೂಪಿಸಿದರು.