Tue, Apr 8, 2025

Tue, Apr 8, 2025

ಇಂದು ದ್ವಿತೀಯ ಪಿಯು ಫಲಿತಾಂಶ

Article Image

ಇಂದು ದ್ವಿತೀಯ ಪಿಯು ಫಲಿತಾಂಶ

ಬೆಂಗಳೂರು: ಪ್ರಸಕ್ತ 2025ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -1ರ ಫಲಿತಾಂಶವನ್ನು ಏ.8ರಂದು ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಮಲ್ಲೇಶ್ವರದಲ್ಲಿರುವ ಮಂಡಳಿಯ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ 12.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ವಿದ್ಯಾರ್ಥಿಗಳು www.karresults.nic.in ಜಾಲತಾಣಕ್ಕೆ ಭೇಟಿ ನೀಡಿ ಫಲಿತಾಂಶ ನೋಡಬಹುದು. ದ್ವಿತೀಯ ಪಿಯು ಪರೀಕ್ಷೆಯು ಮಾ. 1ರಿಂದ 20ರವರೆಗೆ ನಡೆದಿತ್ತು. 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು.

ಆಳ್ವಾಸ್ ಸ್ವಾಯತ್ತ ಕಾಲೇಜು: ವಿವಿಧ ವಿದ್ಯಾರ್ಥಿ ಘಟಕಗಳ ವಾರ್ಷಿಕ ಸಮಾರಂಭ

Article Image

ಆಳ್ವಾಸ್ ಸ್ವಾಯತ್ತ ಕಾಲೇಜು: ವಿವಿಧ ವಿದ್ಯಾರ್ಥಿ ಘಟಕಗಳ ವಾರ್ಷಿಕ ಸಮಾರಂಭ

ಮೂಡುಬಿದಿರೆ/ವಿದ್ಯಾಗಿರಿ: ‘ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳಿಗೆ ಕೊರತೆ ಇರದು. ಆದರೆ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಜಾಣ್ಮೆ ಪ್ರತಿಯೊಬ್ಬರಲ್ಲಿರಬೇಕು ಎಂದು ದ.ಕ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ನುಡಿದರು. ಅವರು ಶನಿವಾರ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ವಿವಿಧ ವಿದ್ಯಾರ್ಥಿ ಘಟಕಗಳ ವಾರ್ಷಿಕ ದಿನಾಚರಣೆ ‘ಇನಾಮು – 2025’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯುವಜನತೆ ತಮ್ಮ ಇಚ್ಛಾಶಕ್ತಿಯ ಸಾಮರ್ಥ್ಯವನ್ನು ಅರಿತು, ತಮ್ಮ ಗುರಿಯನ್ನು ತಲುಪುವಲ್ಲಿ ಕಾರ್ಯಪ್ರವೃತ್ತರಾಗಬೇಕು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಹಳ ಎತ್ತರಕ್ಕೆ ಬೆಳೆದು, ಎಲ್ಲರಿಗೂ ಮಾದರಿಯಾಗಿ ದೇಶಕ್ಕೆ ಹೆಮ್ಮೆ ತರುವ ಕಾರ್ಯ ನೆರವೇರಲಿ ಎಂದು ಆಶಿಸಿದರು. ವ್ಯಕ್ತಿತ್ವ ವಿಕಸನದಲ್ಲಿ ತರಗತಿ ಶಿಕ್ಷಣ ಒಂದು ಭಾಗವಷ್ಟೇ. ಅದನ್ನು ಹೊರತುಪಡಿಸಿ ಪಠ್ಯೇತರ ಚಟುವಟಿಕೆಗಳು ಸಾಕಷ್ಟಿವೆ. ಇಂತಹ ವಿಫುಲ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಆಳ್ವಾಸ್ ಕಲ್ಪಿಸುತ್ತಿರುವುದು ಶ್ಲಾಘಿನೀಯ. ಹಳೆ ವಿದ್ಯಾರ್ಥಿಗಳ ಪುನರ್ಮಿಲನದಂತಹ ಕರ‍್ಯಕ್ರಮಗಳನ್ನು ಆಯೋಜಿಸಿ ಸಂಸ್ಥೆ ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಭಾಂದವ್ಯವನ್ನು ಬೆಸೆಯುವ ವೇದಿಕೆ ಕಲ್ಪಿಸಿಬೇಕು ಎಂದು ಸಲಹೆಯಿತ್ತರು. ತುಳು ಮತ್ತು ಕನ್ನಡ ಚಲನಚಿತ್ರ ನಟ ಅರವಿಂದ್ ಬೋಳಾರ್ ಮಾತನಾಡಿ, ಪ್ರತಿಭೆಗೆ ಎಂದು ಬಡವ, ಶ್ರೀಮಂತ ಎಂಬ ಭೇಧಭಾವವಿಲ್ಲ. ಪ್ರತಿಭೆಗೆ ತಕ್ಕ ವೇದಿಕೆ ಸಿಗುವುದು ಬಹಳ ಮುಖ್ಯ. ಕಲಾವಿದರಿಗೆ ಸಭಿಕರ ಚಪ್ಪಾಳೆಯೆ ಆಶೀರ್ವಾದ ಎಂದರು. ವಿದ್ಯೆಯೊಂದಿಗೆ ಪ್ರತಿಭೆಯನ್ನು ಒಗ್ಗೂಡಿಸಿ ಕಂಡ ಕನಸನ್ನು ನನಸಾಗಿಸುವ ಜವಾಬ್ದಾರಿ ಪ್ರತಿ ವಿದ್ಯಾರ್ಥಿಗಿರುತ್ತದೆ. ಪ್ರತಿಭೆ ಇದ್ದವನಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ದೇವಾಲಯವಿದ್ದಂತೆ. ತನ್ನೊಂದಿಗೆ ತನ್ನವರನ್ನು ಬೆಳೆಸಿದ ಕೀರ್ತಿ ಡಾ. ಮೋಹನ್ ಆಳ್ವರಿಗೆ ಸಲ್ಲುತ್ತದೆ. ಇನಾಮು ಎಂಬ ಹೆಸರಿನಡಿಯಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಹೆಚ್ಚೆಚ್ಚು ಪ್ರತಿಭಾ ಅನಾವರಣಕ್ಕೆ ವೇದಿಕೆಯಾಗಲಿ ಎಂದು ಆಶಿಸಿದರು. ವಿದ್ಯಾರ್ಥಿ ಜೀವನ ಮುಗಿದ ನಂತರ ಕಲಿತ ವಿದ್ಯಾಸಂಸ್ಥೆಯನ್ನು ಎಂದಿಗೂ ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ ನಡೆಯುವ ಅದ್ಭುತ ಕಾರ್ಯಕ್ರಮ ಇನಾಮು. ಕೇವಲ ತರಗತಿಯೊಳಗಿನ ಪಠ್ಯಕ್ಕೆ ಮಾತ್ರ ಸೀಮಿತವಾಗದೇ, ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ. ಇನಾಮು ಉದ್ಘಾಟನಾ ಸಮಾರಂಭದಲ್ಲಿ ಚಲನಚಿತ್ರ ನಟ, ನಿರ್ದೇಶಕ ಅನೀಶ್ ಪೂಜಾರಿ ಮಾತನಾಡಿ, ಶ್ರದ್ಧೆ ಮತ್ತು ಮಾಡುವ ಒಳ್ಳೆಯ ಕೆಲಸಗಳ ಮೂಲಕ ಸಾಧನೆಯ ಸಾವಿರ ಹೆಜ್ಜೆಗಳ ಪಯಣ ಆರಂಭವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ವೃತ್ತಿ ಬದುಕಿಗೆ ಪೂರಕವಾಗಿ ಈ ರೀತಿಯ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಆಯೋಜನೆ ನಿಜಕ್ಕೂ ಶ್ಲಾಘನೀಯ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಮಾತನಾಡಿ, ಇನಾಮು ಎನ್ನುವಂತದ್ದು ಬಹುಮಾನ, ಪ್ರಶಸ್ತಿ ಮತ್ತು ಸನ್ಮಾನವನ್ನು ಪ್ರತಿಬಿಂಬಿಸುವಂತದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಅನಾವರಣಗೊಳಿಸಲು, ವಿವಿಧ ಫೋರಂಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಸ್ತುತ್ಯರ್ಹ ಎಂದರು . ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಇನಾಮು ಸಂಯೋಜಕರಾದ ಡಾ ಯೋಗೀಶ್ ಕೈರೋಡಿ ಮತ್ತು ಮನು ಡಿಎಲ್, ವಿವಿಧ ಫೋರಂ ವಿದ್ಯಾರ್ಥಿ ಸಂಯೋಜಕರು ಮತ್ತು ಪ್ರಾದ್ಯಾಪಕರು ಇದ್ದರು. ಇನಾಮು -2025ರ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಗ್ರ ಪ್ರಶಸ್ತಿಯನ್ನು ಎನ್‌ಎಸ್‌ಎಸ್ ಫೋರಂ ಪಡೆದರೆ, ರನ್ನರ್ ಅಪ್ ಸ್ಥಾನವನ್ನು ತುಳು ಫೋರಂ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಡ್ಯಾನ್ಸ ಫೋರಂ ತೃತೀಯ ಸ್ಥಾನ ಪಡೆದರು. ಎನ್‌ಸಿಸಿ ನೌಕದಳ ಫೋರಂಗೆ ಉತ್ತಮ ಕಾರ‍್ಯಕ್ರಮ ಆಯೋಜಕ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಮೂಲ್ಯ ಜೈನ್ ನಿರೂಪಿಸಿ, ಸೌರಭ್ ಶೆಟ್ಟಿ ವಂದಿಸಿದರು. ನಂತರ ಇನಾಮು ಕಾರ್ಯಕ್ರಮದ ಪ್ರಯುಕ್ತ ನಡೆದ ಹಲವು ಸ್ಪರ್ಧೆಗಳ ವಿಜೇತರ ಪ್ರತಿಭಾ ಪ್ರದರ್ಶನ ನಡೆಯಿತು.

ಎಸ್.ಡಿ.ಎಮ್‌. ಕಾಲೇಜಿನಲ್ಲಿ ಎಸ್ಪರಾಂಜ ಫೆಸ್ಟಿವಲ್

Article Image

ಎಸ್.ಡಿ.ಎಮ್‌. ಕಾಲೇಜಿನಲ್ಲಿ ಎಸ್ಪರಾಂಜ ಫೆಸ್ಟಿವಲ್

ಉಜಿರೆ ಮಾರ್ಚ್ 2: ಮಾನವೀಯತೆಯ ಶ್ರೇಷ್ಠತೆ ಎತ್ತಿಹಿಡಿಯುವುದಕ್ಕೆ ಸಾಹಿತ್ಯದ ಅಧ್ಯಯನ ಅಗತ್ಯ ಎಂದು ಕೇರಳ ಮಲ್ಲಾಪುರಂನ ಮಂಕಡ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೈಕಸಿ ವಿ.ಎಸ್ ಅಭಿಪ್ರಾಯಪಟ್ಟರು. ಎಸ್.ಡಿ.ಎಂ. ಸ್ನಾತಕೊತ್ತರ ಕೇಂದ್ರದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಅಂತರ್‌ಕಾಲೇಜು ಫೆಸ್ಟ್ "ಎಸ್ಪರಾಂಜಾ" ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಗೂಗಲ್, ಕೃತಕ ಬುದ್ಧಿಮತ್ತೆ, ಮೆಟಾ ಸೇರಿಂದತೆ ವಿವಿಧತಾಂತ್ರಿಕ ವೇದಿಕೆಗಳು ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಭಾವ ಬೀರುತ್ತಿರುವುದು ಶೋಚನೀಯ ಸಂಗತಿ. ಸಾಹಿತ್ಯದಂತಹ ಜ್ಞಾನಶಿಸ್ತು ತಾಂತ್ರಿಕತೆಯ ಪ್ರಭಾವದೊಂದಿಗೆ ಮನವರಿಕೆಯಾಗುವಂಥದ್ದಲ್ಲ. ತಂತ್ರಜ್ಞಾನದಿಂದಲಷ್ಟೇ ಸಾಹಿತ್ಯದ ಸಮಗ್ರ ತಿಳುವಳಿಕೆ ಸಾಧ್ಯವಾಗುವುದಿಲ್ಲ. ತರಗತಿ ಬೋಧನೆಯ ಕ್ರಮಗಳು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮೌಲಿಕಚರ್ಚೆಯನ್ನು ಹುಟ್ಟುಹಾಕುತ್ತವೆ ಎಂದರು. ಸಾಹಿತ್ಯವು ಅನುಕರಿಸಿ ಅಥವಾ ಬಾಯಿಪಾಠ ಹೊಡೆದು ಕಲಿಯುವಂಥದ್ದಲ್ಲ. ಮನುಷ್ಯನ ಅನುಭವಗಳಿಗೆ ಜೀವ ತುಂಬುವ ಶ್ರೇಷ್ಠ ವಿಷಯವೇ ಸಾಹಿತ್ಯ. ಮನುಷ್ಯ ಜೀವಂತಿಕೆಗೆ ಸಾಕ್ಷಿಯಾಗಬಲ್ಲ ಸಾಮರ್ಥ್ಯ ಸಾಹಿತ್ಯಕ್ಕಿದೆ. ಮಾನವಜೀವಿಯು ಇತರ ಜೀವಿಗಳಿಗಿಂತ ವಿಭಿನ್ನವಾಗಿರಲು ಆತನ ಭಾವನೆಗಳೂ, ಮಾತುಗಳು ಕಾರಣ. ಇದರಿಂದಾಗಿಯೇ ಮನುಷ್ಯ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿದೆ. ಕೇವಲ ಸಾಹಿತ್ಯ ಅಧ್ಯಯನ ಮಾಡಿದ ವ್ಯಕ್ತಿ ಮಾತ್ರ ಇನ್ನೋರ್ವ ವ್ಯಕ್ತಿಯ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ, ಆ ನೋವನ್ನು ಮರೆಸುವ ಶಕ್ತಿಯೂ ಸಹ ಸಾಹಿತ್ಯದ ಓದಿಗೆ ಇದೆ ಎಂದರು. ಸಾಹಿತ್ಯ ಸಂಬಂಧಿತ ಮಹತ್ವದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ರವಾನಿಸಲು ಸ್ಪರ್ಧಾತ್ಮಕ ಮನೋಭಾವ ಬಿತ್ತುವ ಕಾರ್ಯಕ್ರಮಗಳು ಆಯೋಜಿತವಾಗಬೇಕು. ಶಿಕ್ಷಣ ಸಂಸ್ಥೆ, ಅಧ್ಯಾಪಕರು ಮತ್ತು ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸುವುದಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಅಲ್ಲದೇ ಪರಸ್ಪರ ಸಹಕಾರ ಮನೋಭಾವ ಮತ್ತು ಕಾಳಜಿಯನ್ನು ಕಲಿಸುವುದಲ್ಲದೆ ಸಂಶೋಧನಾ ಪ್ರಜ್ಞೆಯನ್ನು ಅಳವಡಿಸಿಕೊಳ್ಳು ನೆರವಾಗುತ್ತವೆ ಎಂದರು. ಎಸ್.ಡಿ.ಎಂ. ಕಾಲೇಜಿನ ಉಪ ಪ್ರಾಂಶುಪಾಲೆ ನಂದಾಕುಮಾರಿ ಕೆ.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ್ಞಾನ ಮತ್ತು ಸೃಜನಶೀಲತೆ ಇವೆರಡೂ ಮಹತ್ವಾಕಾಂಕ್ಷಿ ಕನಸುಗಳ ಸಾಕಾರಕ್ಕೆ ಪೂರಕವಾಗುತ್ತವೆ ಎಂದು ಹೇಳಿದರು. ಈ ಕಾರ್ಯಕ್ರಮದ ಸಂಯೋಜಕರಾದ ದ್ವಿತೀಯ ಎಂ.ಎ.ಯ ಹಾಸಿನಿ ಸಿಂಗ್.ಪಿ ಮತ್ತು ಸಂಮ್ಯಕ್ ಜೈನ್ ಉಪಸ್ಥಿತರಿದ್ದರು. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಗಸ್ಥರಾದ ಡಾ. ಮಂಜುಶ್ರೀ ಆರ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷ್ಣು ವಿನೀತ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಮನು ಎ.ಆರ್. ವಂದಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸಾ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಆದೇಶದಂತೆ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮತ್ತು ಡಿ. ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ ಏ.2 ಬುದವಾರ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 2.30ರವರೆಗೆ ನೆಡೆಯಲಿದೆ. ಈ ಶಿಬಿರದಲ್ಲಿ ಮಂಗಳೂರು ಅತ್ತಾವರ ಕೆಎಂ.ಸಿ ಆಸ್ಪತ್ರೆಯ ಖ್ಯಾತ ಸಂಧಿವಾತ ತಜ್ಞರಾದ ಡಾ| ಶಿವರಾಜ್ ಪಡಿಯಾರ್ ಮತ್ತು ಪ್ರತ್ಯೂಷ ಮಣಿಕುಪ್ಪಂ ಭಾಗವಹಿಸಲಿದ್ದಾರೆ. ಸಂಧಿವಾತ, ಅಸ್ಥಿ ಸಂಧಿವಾತ, ಮಕ್ಕಳ ಸಂಧಿವಾತ, ರುಮಟಾಯ್ಡ್, ಆರ್ಥೈಟಿಸ್, ಸ್ಟಾಂಡಿಲೋ ಆರ್ಥೈಟಿಸ್, ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್, ಸೋರಿಯಾಸಿಸ್, ವಾಸ್ಕುಲೈಟಿಸ್ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಭಾಗವಹಿಸಬಹುದು. ಈ ಶಿಬಿರದಲ್ಲಿ ಉಚಿತ ಸಮಾಲೋಚನೆಯ ಜತೆಗೆ ರಕ್ತ ಪರೀಕ್ಷೆ ಹಾಗೂ ಔಷಧಗಳಿಗೆ ಶೇ. 10 ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹೆಸರು ನೊಂದಾಯಿಸಿಕೊಳ್ಳಲು 7760397878, 9972000438 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ವಿವಿ ಮಟ್ಟದ ಅಂತರ್‌ಕಾಲೇಜು ಕನ್ನಡ ಚರ್ಚಾಸ್ಪರ್ಧೆ

Article Image

ಮಂಗಳೂರು ವಿವಿ ಮಟ್ಟದ ಅಂತರ್‌ಕಾಲೇಜು ಕನ್ನಡ ಚರ್ಚಾಸ್ಪರ್ಧೆ

ಉಜಿರೆ, ಮಾರ್ಚ್ 25: ವಿಚಾರಗಳ ಮಂಥನಕ್ಕೆ ಅವಕಾಶವೀಯುವ ಚರ್ಚೆಗಳು ಮೌಲ್ಯಯುತ ಗಮ್ಯ ತಲುಪಿಕೊಂಡಾಗಲೇ ವೈಚಾರಿಕ ಗೆಲುವು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್‌ಸಿಂಹ ನಾಯಕ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಮ್ಯಕ್‌ದರ್ಶನ ಸಭಾಂಗಣದಲ್ಲಿ ಶ್ರೀ ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಮಂಗಳವಾರ ಆಯೋಜಿತ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚರ್ಚೆ ಎಂದರೆ ಉತ್ತಮ ವಿಚಾರಗಳ ಮಂಥನ. ಮೌಲ್ಯಗಳ ಕುರಿತ ಸರಿಯಾದ ಅರ್ಥೈಸುವಿಕೆಯೇ ಚರ್ಚೆಯ ಸಂದರ್ಭದಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ವ್ಯಕ್ತಿಯ ಮೂಲಕ ಅಭಿವ್ಯಕ್ತವಾಗುವ ಅಭಿಪ್ರಾಯಗಳು ವ್ಯಕ್ತಿಗತ ಪೊರೆಯನ್ನು ಕಳಚಿಕೊಂಡು ನಿಜವಾದ ಮೌಲ್ಯಗಳ ನಿಷ್ಕರ್ಷೆಗೆ ಬೇಕಾಗುವ ಒತ್ತಾಸೆ ಮೂಡಿಸುತ್ತವೆ. ಹಾಗಾದಾಗ ಮಾತ್ರ ಚರ್ಚೆ ರಚನಾತ್ಮಕವಾಗುತ್ತದೆ. ಚಿಂತನೆಯ ಗೆಲುವು ಸಾಧ್ಯವಾಗುತ್ತದೆ ಎಂದರು. ಮಾತುಗಳು ವ್ಯಕ್ತಿಯೊಬ್ಬನ ಜೀವನದ ಸಂಸ್ಕಾರ ಹಾಗೂ ಮೌಲ್ಯಬದ್ಧತೆ ಎಂಥದ್ದು ಎಂಬುದನ್ನು ತೋರ್ಪಡಿಸುತ್ತವೆ. ಮಾತುಗಳ ಪ್ರೇರಣೆಯಿಂದಲೇ ಶಿಸ್ತುಬದ್ಧ ಬದುಕು ರೂಪುಗೊಳ್ಳುತ್ತದೆ. ಸತತ ಅಧ್ಯಯನದ ಮೂಲಕ ಸಂವಹನ ಸಾಮರ್ಥ್ಯ ಹೆಚ್ಚಿಸಿಕೊಂಡು ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಚರ್ಚಾಸ್ಪರ್ಧೆಗಳು ಒಳಿತು-ಕೆಡಕುಗಳ ವಿವೇಚನೆ ತಂದುಕೊಳ್ಳುವುದಕ್ಕೆ ನೆರವಾಗುತ್ತವೆ. ಸಮಾಜಕ್ಕೆ ಬೇಕಾದ ಒಳಿತಿನ ಮಾದರಿಗಳನ್ನು ಕಟ್ಟಿಕೊಡುವುದರ ಕಡೆಗೇ ಹೆಚ್ಚಿನ ಆಸಕ್ತಿ ವಹಿಸಬೇಕು. ಆ ನಿಟ್ಟಿನಲ್ಲಿ ಚರ್ಚೆ ಹುಟ್ಟುಹಾಕುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಮಾತನಾಡಿದರು. ಚರ್ಚೆಯು ಸಂವಹನ ಕೌಶಲ್ಯದ ಒಂದು ಮುಖ್ಯ ಭಾಗವಾಗಿದೆ. ವಿದ್ಯಾರ್ಥಿಗಳು ಚರ್ಚಾ ಕಲೆಯನ್ನು ಕೌಶಲ್ಯವಾಗಿ ಅನ್ವಯಿಸಿಕೊಂಡಾಗ ವಿಭಿನ್ನ ಹೆಗ್ಗುರುತು ಮೂಡಿಸಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಆರಂಭದಲ್ಲಿ ರತ್ನವರ್ಮ ಹೆಗ್ಗಡೆಯವರ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ. ಪಿ. ಉಪಸ್ಥಿತರಿದ್ದರು. ಡಾ.ಕೃಷ್ಣಾನಂದ, ಪದ್ಮರಾಜ್, ಡಾ. ಮಾಧವ ಎಂ. ಕೆ. ಚರ್ಚಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಸಹಾಯಕ ಪ್ರಾಧ್ಯಾಪಕರಾದ ನಾಗಣ್ಣ ಡಿ. ಎ ಸ್ವಾಗತಿಸಿ, ಡಾ. ಸುಧೀರ್.ಕೆ.ವಿ. ವಂದಿಸಿದರು.

ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ

Article Image

ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ

ವಿದ್ಯಾಗಿರಿ: 'ಪ್ರಭಾವಿ ಸಂವಹನವೇ ಇಂದಿನ ಸವಾಲು ಮತ್ತು ಅವಶ್ಯಕತೆ' ಎಂದು ಮಂಗಳೂರಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ವಾಸುದೇವ ಕಾಮತ್ ಹೇಳಿದರು. ಇಲ್ಲಿನ ಸುಂದರಿ ಆನಂದ ಆಳ್ವ ಆವರಣದಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ವಾರ್ಷಿಕೋತ್ಸವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತವು ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ನಿಮ್ಮ ಕಲಿಕೆಯೇ (ಶಿಕ್ಷಣ) ಅದರ ವೇಗವರ್ಧಕವಾಗಿದೆ ಎಂದ ಅವರು, ಪರೀಕ್ಷೆಯೇ ಕಲಿಕೆಯ ಅಂತ್ಯವಲ್ಲ. ಬದುಕಿನಲ್ಲಿ ಪ್ರತಿನಿತ್ಯ ಕಲಿಕೆ ಅನಿವಾರ್ಯ ಎಂದರು. ಕೃತಕಬುದ್ಧಿಮತ್ತೆ (ಎಐ) ಎಂಬುದು ಮಿಥ್ಯೆ ಅಲ್ಲ. ಔದ್ಯೋಗಿಕ ಬದುಕಿನ ಅನಿವಾರ್ಯತೆ ಎಂದು ಅವರು ವಿವರಿಸಿದರು. ನೀವು ಉದ್ಯಮಶೀಲತೆಯನ್ನು ಮೈಗೂಡಿಸಿಕೊಂಡು ಯಶಸ್ವಿ ಆಗಬಹುದು ಎಂದ ಅವರು, ಕೋಟ್ಯಧಿಪತಿಗಳಾದ ಕರಾವಳಿ ಸಾಧಕರು ಇದ್ದಾರೆ ಎಂದು ಉದಾಹರಣೆ ನೀಡಿದರು. ನಿಮ್ಮ ಅಂತರAಗವನ್ನು ಆಲಿಸಿ. ಹೃದಯದ ಮಾತು ಕೇಳಿ. ನಿಮಗೆ ಅತ್ಯುತ್ತಮ ಅವಕಾಶವನ್ನು 'ಆಳ್ವಾಸ್' ನೀಡಿದೆ. ನೀವು ಇತರರಿಗೂ ತಿಳಿಸಿ, ಇತರರ ಏಳ್ಗೆಗೆ ನೆರವಾಗಿ ಎಂದು ಸಲಹೆ ನೀಡಿದರು. ಮುರಕಲ್ಲಿನ ಬೆಟ್ಟವನ್ನು ಮನಸ್ಸು ಕಟ್ಟುವ ಶೈಕ್ಷಣಿಕ ನೆಲೆಯಾಗಿ ಪರಿವರ್ತಿಸಿದ ಡಾ| ಮೋಹನ ಆಳ್ವ ಅವರ ಸಾಧನೆ ಅನನ್ಯ ಎಂದು ಶ್ಲಾಘಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ। ಎಂ.ಮೋಹನ ಆಳ್ವ ಮಾತನಾಡಿ, ಸಾಂಸ್ಕೃತಿಕ, ಕ್ರೀಡೆ ಜೊತೆ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಆಳ್ವಾಸ್, ಇಂದು ಶೈಕ್ಷಣಿಕ ಕ್ಷೇತ್ರದ ಮಾದರಿ ಆಗಿದೆ ಎಂದರು. 1998 ಆರಂಭಗೊಂಡ ಆಳ್ವಾಸ್ ಕಾಲೇಜಿನಲ್ಲಿ ಈವರೆಗೆ 68,401 ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ನ್ಯಾಕ್ 'ಎ' ಶ್ರೇಣಿ ಪಡೆದಿದೆ. ನಾಲ್ಕು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ನಮ್ಮ ಪ್ರತಿಷ್ಠಾನದ ಕಾಲೇಜುಗಳ ಕಾರ್ಯಕ್ರಮ ಹಾಗೂ ಯೋಜನೆಗಳು ನಡೆಯುತ್ತಿವೆ. ನಮ್ಮಲ್ಲಿ ಪ್ರಗತಿ ಉದ್ಯೋಗ ಮೇಳ ಪ್ರತಿವರ್ಷ ನಡೆಯುತ್ತಿದ್ದು, ಶೇ 80 ರಷ್ಟು ವಿದ್ಯಾರ್ಥಿಗಳಿಗೆ 'ಆಳ್ವಾಸ್ ಪ್ರಗತಿ' (ಬೃಹತ್ ಉದ್ಯೋಗ ಮೇಳ) ಮೂಲಕ ಉದ್ಯೋಗ ದೊರಕಿದೆ. ಪಠ್ಯದ ಜೊತೆ, ಸ್ಪರ್ಧಾತ್ಮಕ ಪರೀಕ್ಷೆ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಅಂಕದ ಜೊತೆ ವಿವಿಧ ಸಾಧನೆಗಳ ಮೂಲಕ ಬಯೋಡಾಟ ಗಟ್ಟಿಯಾಗಿರಲಿ. ಅದಕ್ಕಾಗಿ ಸಾಧನೆ ಅವಶ್ಯ ಎಂದರು. ಬೆಂಗಳೂರಿನ ದಿಶಾ ಭಾರತ್ ಸಂಸ್ಥಾಪಕಿ ರೇಖಾ ರಾಮಚಂದ್ರ ಮಾತನಾಡಿ, 'ನಾನು ಮತ್ತೆ ವಿದ್ಯಾರ್ಥಿಯಾದರೆ ಆಳ್ವಾಸ್ ಕಾಲೇಜಿಗೆ ಸೇರಿಕೊಳ್ಳುವೆ. ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಯ ಶಿಕ್ಷಣವು ಮಾದರಿಯಾಗಿದೆ' ಎಂದರು. ಎಲ್ಲ ವಿದ್ಯಾರ್ಥಿಗಳು ಮುಂದೊAದು ದಿನ ವೇದಿಕೆಗೆ ಬರಬೇಕು. ಅದಕ್ಕೆ, ತಾನು, ತನ್ನ ಕುಟುಂಬ, ತನ್ನ ಸಂಸ್ಥೆಯ ಜೊತೆ ದೇಶ ಹೆಮ್ಮೆ ಪಡುವ ಸಾಧನೆ ಮಾಡುವ ಛಲ ಬೇಕು ಎಂದರು. ನಮ್ಮಲ್ಲಿ ಧನಾತ್ಮಕ, ಭಾವುಕ ಛಲ, ಉದ್ದೇಶ ಮತ್ತು ದೇಶಭಕ್ತಿ ಇರಬೇಕು. ಸಾಮಾನ್ಯ ಬದುಕಿನ ಬದಲು ಅಸಮಾನ್ಯ ಸಾಧನೆ ಮೂಲಕ ಬದುಕಿ ಎಂದು ಹಾರೈಸಿದರು. ಯಶಸ್ಸು ಸದಾ ಸಕರಾತ್ಮಕ ಉದ್ದೇಶದಿಂದ ಸಾಧ್ಯ. ಸುನಿತಾ ವಿಲಿಯಮ್ಸ್ರವರಲ್ಲಿದ್ದ ಸಕರಾತ್ಮಕ ಗುಣವೇ ಅವರ ಯಶಸ್ಸಿಗೆ ಮುಖ್ಯ ಕಾರಣವಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶಿಸ್ತು ಪಾಲನೆಗಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ ಎಂದರು. ಅವಿರತ ಶ್ರಮದ ಮಾದರಿ ವ್ಯಕ್ತಿತ್ವವನ್ನು ಡಾ.ಎಂ.ಮೋಹನ ಆಳ್ವ ಹೊಂದಿದ್ದಾರೆ. ಅದು ಅವರ ಸಾಧನೆಗೆ ಕಾರಣ ಎಂದರು. ಶಿಕ್ಷಣಕ್ಕೆ ನ್ಯಾಯ ನೀಡುವುದು ನಮ್ಮ ಉದ್ದೇಶ. ನಿಮ್ಮ ಸಾಧನೆ, ಸಾಮಾಜಿಕ ಕೊಡುಗೆಯೇ ನಮಗೆ ಪ್ರೇರಣೆ ಎಂದರು. ಆಳ್ವಾಸ್ (ಸ್ವಾಯತ್ತ) ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ವಾರ್ಷಿಕ ವರದಿ ವಾಚಿಸಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜು ಕುಲಸಚಿವ (ಪರೀಕ್ಷಾಂಗ) ಕೆ ನಾರಾಯಣ ಶೆಟ್ಟಿ, ಆಳ್ವಾಸ್ (ಸ್ವಾಯತ್ತ) ಕಾಲೇಜು ಕುಲಸಚಿವ (ಶೈಕ್ಷಣಿಕ) ಟಿ.ಕೆ. ರವೀಂದ್ರನ್, ಆಳ್ವಾಸ್ (ಸ್ವಾಯತ್ತ) ಕಾಲೇಜು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಆಳ್ವಾಸ್ ವೆಲ್‌ನೆಸ್ ಸೆಂಟರ್ ನಿರ್ದೇಶಕಿ ಡಾ ದೀಪಾ ಕೊಠಾರಿ ಹೊರತಂದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ರತ್ನಮಾನಸ: ವಿದ್ಯಾರ್ಥಿ ನಿಲಯಕ್ಕೆ 8ನೇ ತರಗತಿ ಕನ್ನಡ ಮಾಧ್ಯಮಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

Article Image

ರತ್ನಮಾನಸ: ವಿದ್ಯಾರ್ಥಿ ನಿಲಯಕ್ಕೆ 8ನೇ ತರಗತಿ ಕನ್ನಡ ಮಾಧ್ಯಮಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುವ "ರತ್ನಮಾನಸ” ವಿದ್ಯಾರ್ಥಿ ನಿಲಯಕ್ಕೆ 8ನೇ ತರಗತಿ ಕನ್ನಡ ಮಾಧ್ಯಮಕ್ಕೆ ಸೇರಲಿಚ್ಚಿಸುವ ಬಡ, ಹಿಂದುಳಿದ ಹಾಗೂ ಕೃಷಿಕ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಇಲ್ಲಿ ನಮ್ಮ ಆಯ್ಕೆ ಪರೀಕ್ಷೆಗೆ ಹಾಜರಾಗಿ ಮೂರು ದಿನ ರತ್ನಮಾನಸದಲ್ಲಿ ಉಳಿದು ಇಲ್ಲಿನ ಪರಿಸರ ಹಾಗೂ ಶಿಸ್ತಿನ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಹೈಸ್ಕೂಲು ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳುವ ಅಂಗವಾಗಿ ಕೃಷಿ, ಹೈನುಗಾರಿಕೆ, ಸಮಾಜಸೇವೆ ಮುಂತಾದ ವೃತ್ತಿಪರ ಹಾಗೂ ಸ್ವ-ಉದ್ಯೋಗ ತರಬೇತಿಯನ್ನು ನೀಡಲಾಗುವುದು. ಇಲ್ಲಿನ ಜೀವನ ಶಿಕ್ಷಣ ಕ್ರಮದ ಮಾಹಿತಿಯನ್ನು ಪಡೆದ ಬಆಕ ಅಭ್ಯರ್ಥಿಗೆ ಒಪ್ಪಿಗೆಯಾದಲ್ಲಿ 8ನೇ ತರಗತಿಯ ಕನ್ನಡ ಮಾಧ್ಯಮಕ್ಕೆ ಸೇರಲಿಚ್ಚಿಸುವ ಅರ್ಹ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ದಿನಾಂಕ 05/04/2025 ರಿಂದ ಅರ್ಜಿಗಳನ್ನು ನೀಡಲಾಗುವುದು. ದಿನಾಂಕ 25/04/25ರಂದು ಅರ್ಜಿ ನೀಡಲು ಕೊನೆಯ ದಿನಾಂಕವಾಗಿರುತ್ತದೆ. ವಿ.ಸೂ: ಆಂಗ್ಲಮಾಧ್ಯಮ, 9ನೇ ಮತ್ತು 10ನೇ ತರಗತಿಗೆ ದಾಖಲಾತಿಗೆ ಅವಕಾಶವಿರುವುದಿಲ್ಲ ಹಾಗೂ ಹುಡುಗಿಯರಿಗೆ ದಾಖಲಾತಿ ಇರುವುದಿಲ್ಲ. ಅರ್ಜಿಯನ್ನು ರತ್ನಮಾನಸ ವಸತಿ ನಿಲಯದಲ್ಲಿಯೇ ಪಡೆದುಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9480351201, 9449244425,

ರೋಟರಿ ಕ್ಲಬ್‌ : ಅಂತರಾಷ್ಟ್ರೀಯ ಮಹಿಳಾ ದಿನ ಸಂಭ್ರಾಮಚರಣೆ

Article Image

ರೋಟರಿ ಕ್ಲಬ್‌ : ಅಂತರಾಷ್ಟ್ರೀಯ ಮಹಿಳಾ ದಿನ ಸಂಭ್ರಾಮಚರಣೆ

ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ಂಗಡಿ ಮತ್ತು ರೋಟರಿ ಸಂಸ್ಥೆಯ ಅಂಗ ಸಂಸ್ಥೆಯಾದ ಆನ್ಸ್ ಕ್ಲಬ್ ವತಿಯಿಂದ ರೋಟರಿ ಸೇವಾ ಭವನ ಕಾಶಿ ಬೆಟ್ಟು, ರೊ.ಕೆ. ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಪರಿಸರದ 3 ಜನ ಮಹಿಳಾ ಸಾಧಕರನ್ನು ಅಭಿನಂದಿಸಲಾಯಿತು. ಕಳೆದ 20 ವರ್ಷಗಳಿಂದ ಸ್ವಾ ಇಚ್ಚೆಯಿಂದ ಹೆಬ್ಬಾವು, ನಾಗರ ಹಾವು ಸೇರಿದಂತೆ ಹಲವು ಬಗೆಯ 130 ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನಿವಾಸಿ ಎಂ. ಪ್ರಶಾಂತ್ ಅವರ ಪತ್ನಿ ಶೋಭಾರವರ ಸಹಾಸವನ್ನು ಪ್ರಶಂಸಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವ, ಕಡಿರುದ್ಯಾವರ ಮಹಿಳಾ ಮಂಡಲದ ಸ್ಥಾಪಕ ಅಧ್ಯಕ್ಷೆ ಮತ್ತು ಬೆಳ್ತಂಗಡಿ ಮಹಿಳಾ ಮಂಡಲಗಳ ಗೌರವ ಅಧ್ಯಕ್ಷೆಯಾಗಿರುವ ಲೋಕೇಶ್ವರಿ ವಿನಯಚಂದ್ರರವರನ್ನು ಗೌರವಿಸಲಾಯಿತು. ಇದರ ಜೊತೆಯಲ್ಲಿ ಪ್ರಗತಿಪರ ಕೃಷಿಯಲ್ಲಿ ಸಾಧನೆಗೈದು ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಮಹಿಳಾ ಕೃಷಿಕೆ ಪ್ರಶಸ್ತಿ ಸ್ವೀಕರಿಸಿರುವ ಜಯಶ್ರೀ ಪ್ರಕಾಶ್ ಇವರನ್ನು ಸಹ ಇದೇ ವೇದಿಕೆಯಲ್ಲಿ ಅಭಿನಂದಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಸವಾಲುಗಳು ಹೆಣ್ಣಿನ ಬದುಕಿನಲ್ಲಿ ಸಹಜ ಇವೆಲ್ಲವುಗಳನ್ನು ಮೆಟ್ಟಿ ನಿಂತಾಗ ಆಕೆ ಸಾಧಕಿಯಾಗುತ್ತಾಳೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದಕ್ಕೆ ಸಮಾಜದ ಪ್ರತಿಯೊಬ್ಬ ಗಂಡಿನ ಸಹಕಾರ ಮತ್ತು ಪ್ರೋತ್ಸಾಹ ಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ನಿಕಟಪೂರ್ವ ಕಾರ್ಯದರ್ಶಿ ರೋ. ವಿದ್ಯಾ ಕುಮಾರ್ ಕಾಂಚೋಡು ಮಾತನಾಡಿ, ಮಹಿಳೆ ಇಂದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಶಕ್ತಳಾಗಿದ್ದಾಳೆ ಎಂದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್ ಮತ್ತು ಕಾರ್ಯದರ್ಶಿ ಡಾ.ವಿನಯ ಕಿಶೋರ್ ಉಪಸ್ಥಿತರಿದ್ದರು. ರೋಟರಿ ಕ್ಲಬ್ ನ ಸದಸ್ಯರಾದ ಅನಂತ್ ಭಟ್, ಪ್ರವೀಣ್ ಗೋರೆ, ಶ್ರಿಕಾಂತ್, ಪ್ರಕಾಶ್ ಪ್ರಭಕ ಮತ್ತು ಆನ್ ಡಾ. ಭಾರತಿ, ಗೀತಾ ಪ್ರಭು ಸೇರಿದಂತೆ ಇತರೆ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ರೋ. ಮನೋರಮಾ ಭಟ್ ನಿರೂಪಿಸಿ ವಂದಿಸಿದರು.

ಎಸ್‌ಡಿಎಂ ರಾಷ್ಟ್ರೀಯ ಮಾಧ್ಯಮ ಪರ್ವ-2025

Article Image

ಎಸ್‌ಡಿಎಂ ರಾಷ್ಟ್ರೀಯ ಮಾಧ್ಯಮ ಪರ್ವ-2025

ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಸಮಗ್ರ ಚಾಂಪಿಯನ್ಸ್ ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ಹಾಗೂ ಬಿವೋಕ್ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಮಾಧ್ಯಮ ಪರ್ವ-2025ರಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಒಟ್ಟು 4 ವಿಭಾಗದಲ್ಲಿ ಪ್ರಥಮ, ಎರಡು ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಚಾಂಪಿಯನ್ಸ್ ಪಟ್ಟ ಅಲಂಕರಿಸಿದರು. ವಿದ್ಯಾರ್ಥಿಗಳಾದ ಇಶಿತ್ ಹಾಗೂ ಅಶ್ವಿನ್ ಕ್ರೈಸಿಸ್ ಮ್ಯಾನೇಜ್ಮೆಂಟ್ (ಬಿಕ್ಕಟ್ಟು ನಿರ್ವಹಣೆ)ನಲ್ಲಿ ಪ್ರಥಮ, ಪ್ರಧಾನ್ ಛಾಯಾಗ್ರಹಣದಲ್ಲಿ ಪ್ರಥಮ, ರುಧೀರ್ ಹಾಗೂ ಮಿಯಾರವರನ್ನು ಒಳಗೊಂಡ ತಂಡ ರಸಪ್ರಶ್ನೆಯಲ್ಲಿ ಪ್ರಥಮ, ರಚನ್, ಸರ್ವೇಶ್, ವಿಶಾಲ್, ದೀಕ್ಷಾ, ಸುರಕ್ಷಾ, ಆಕಾಶ್, ಸುಮಿತ್, ದಿಶಾ, ಪ್ರಗತಿ, ಸ್ವಾತಿ, ರಿಶಾಂತ್, ರಕ್ಷಿತಾ, ಶ್ರೀವಲ್ಲಿಯವರ ತಂಡ ವೆರೈಟಿ ಪ್ರದರ್ಶನದಲ್ಲಿ ( ವೈವಿಧ್ಯಮಯ ನೃತ್ಯ ಪ್ರಥಮ ಸ್ಥಾನ ಪಡೆದರು. ವೀಕ್ಷಿತಾ ಹಾಗೂ ರಾಹುಲ್ ಕ್ರಮವಾಗಿ ವರದಿಗಾರಿಕೆ ಹಾಗೂ ರೀಲ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಉಪನ್ಯಾಸಕ ಸುಧೀಂದ್ರ ಶಾಂತಿ ಹಾಗೂ ಉಪನ್ಯಾಸಕಿ ಹನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕಯಾಗಿ ಸಹಕರಿಸಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚರ‍್ಯ ಡಾ ಕುರಿಯನ್ ಅಭಿನಂದಿಸಿದ್ದಾರೆ.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಭೌತಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ

Article Image

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಭೌತಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ

ಉಜಿರೆ, ಮಾರ್ಚ್ 17: ಮೂಲವಿಜ್ಞಾನದಲ್ಲಿ ಪರಿಣತಿ ಗಳಿಸಿ ವೈಜ್ಞಾನಿಕ ಸಂಶೋಧನೆಯ ಮೌಲ್ಯ ಹೆಚ್ಚಿಸಬೇಕಿದೆ. ಇದರಿಂದ ವಿಜ್ಞಾನದ ಸಮಾಜಪರತೆಗೆ ಅರ್ಥಪೂರ್ಣ ಸ್ಪರ್ಶ ದೊರಕುತ್ತದೆ ಎಂದು ಬೆಂಗಳೂರಿನ ಸಿಇಎನ್‌ಎಸ್‌ನ ವಿಜ್ಞಾನಿ, ಪ್ರಾಧ್ಯಾಪಕ ಡಾ.ಸಿ.ವಿ.ಯಳಮಗ್ಗದ್ ಅವರು ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ಅಧ್ಯಯನ, ಸಂಶೋಧನಾ ವಿಭಾಗ ಮತ್ತು ರಿಸರ್ಚ್, ಡೆವಲಪ್‌ಮೆಂಟ್ ಸೆಲ್‌ನ ಸಹಭಾಗಿತ್ವದಲ್ಲಿ ‘ಬ್ರಿಡ್ಜಿಂಗ್ ದ ಮೆನಿ ಫೇಸಸ್ ಆಫ್ ಮ್ಯಾಟರ್’ ಕುರಿತು ಆಯೋಜಿತವಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಆಶಯ ಪ್ರಸ್ತುತಪಡಿಸಿದರು. ಮೂಲವಿಜ್ಞಾನದ ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮೂಲವಿಜ್ಞಾನದ ತಿಳುವಳಿಕೆಯೊಂದಿಗೆ ನಿರ್ವಹಿಸಲ್ಪಡುವ ಸಂಶೋಧನೆ ಸಮಾಜಕ್ಕೆ ಅನುಕೂಲವಾಗುತ್ತದೆ. ವಿಜ್ಞಾನಕ್ಕೆ ಮಾನವಿಕ ಆಯಾಮ ದೊರಕುತ್ತದೆ ಎಂದು ಹೇಳಿದರು. ಸಂಶೋಧನಾ ಪ್ರಬಂಧಗಳ ಸಾರಲೇಖಗಳನ್ನೊಳಗೊಂಡ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅವರು ಭೌತಶಾಸ್ತ್ರ ವಲಯದಲ್ಲಿ ಆಗುತ್ತಿರುವ ಹೊಸ ಪಲ್ಲಟಗಳನ್ನು ತಿಳಿದುಕೊಳ್ಳಲು ರಾಷ್ಟ್ರೀಯ ವಿಚಾರ ಸಂಕಿರಣಗಳು ಪೂರಕವಾಗುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ ವಿಚಾರ ಸಂಕಿರಣದ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎಸ್.ಡಿ.ಎಂ ಎಜ್ಯುಕೇಷನ್ ಸೊಸೈಟಿಯ ಅಕಾಡೆಮಿಕ್ ಸಂಯೋಜಕರಾದ ಎಸ್. ಎನ್. ಕಾಕತ್ಕರ್, ರಿಸರ್ಚ್ ಡೆವಲಪ್‌ಮೆಂಟ್ ಸೆಲ್‌ನ ನಿರ್ದೇಶಕಿ ಡಾ. ಸೌಮ್ಯ ಬಿ.ಪಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ, ಸಹ ಪ್ರಾಧ್ಯಾಪಕ ಡಾ.ರಾಘವೇಂದ್ರ ಎಸ್ಉ ಪಸ್ಥಿತರಿದ್ದರು. ನಂತರ ನಡೆದ ಗೋಷ್ಠಿಗಳಲ್ಲಿ ಡಾ. ವಿನಯಕುಮಾರ್ ಕೆ.ಬಿ., ಡಾ. ಅರವಿಂದ ಎಸ್, ಡಾ.‌ ರ‍್ನಬ್ ದತ್ತಾ ವಿಚಾರಗಳನ್ನು ಮಂಡಿಸಿದರು. ವಿವಿಧ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಲಾಪ್ರದರ್ಶನ ನೀಡಿದರು. ಎರಡು ದಿನಗಳ ಕಾರ್ಯಕ್ರಮದಲ್ಲಿ 150 ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಾಪಕರು ಭಾಗವಹಿಸಿದ್ದರು.

ಅರಿಹಂತ್‌ ಆಹಾರ್‌ ಉದ್ಘಾಟನೆ

Article Image

ಅರಿಹಂತ್‌ ಆಹಾರ್‌ ಉದ್ಘಾಟನೆ

ಮೂಡುಬಿದಿರೆ ಕಲ್ಸಂಕ ಉದಯ ಕಿಚನ್‌ ನೆಕ್ಸ್ಟ್‌ನ ಎದುರು ದಿ. ಸುದರ್ಶನ್‌ ಜೈನ್‌ ಕಜಂಗೆ ಮತ್ತು ಕಮಲಾಜಿ ದಂಪತಿಗಳ ಪುತ್ರ ಸೌರವ್‌ ಅವರ ಮಾಲಿಕತ್ವದ ಅರಿಹಂತ್‌ ಆಹಾರ್‌ ಶುದ್ಧ ಸಸ್ಯಹಾರಿ ಹೋಟೇಲ್‌ ಇಂದು ಉದ್ಘಾಟನೆಗೊಂಡಿದೆ. ಸೌತ್‌ ಇಂಡಿಯನ್‌, ನಾರ್ಥ್‌ ಇಂಡಿಯನ್‌, ಚೈನೀಸ್‌, ಜೈನ್‌ ಫುಡ್‌, ಚಾಟ್ಸ್‌ ಮತ್ತು ಜ್ಯೂಸ್‌ ಇಲ್ಲಿ ದೊರೆಯುತ್ತದೆ.

ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಐಐಐಟಿ, ಧಾರವಾಡ ಒಡಂಬಡಿಕೆಗೆ ಸಹಿ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಐಐಐಟಿ, ಧಾರವಾಡ ಒಡಂಬಡಿಕೆಗೆ ಸಹಿ

ಧಾರವಾಡದ ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯವು ಮಾರ್ಚ 11, 2025ರಂದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT), ಇಟಿಗಟ್ಟಿ ಧಾರವಾಡದೊಂದಿಗೆ ಒಡಂಬಡಿಕೆಗೆ ಸಹಿ ಮಾಡಲಾಯಿತು. ಈ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಐಐಐಟಿ ಧಾರವಾಡದ ಅಧ್ಯಾಪಕರು ಮತ್ತು ಸಂಶೋಧಕರು ಶೈಕ್ಷಣಿಕ ಉನ್ನತೀಕರಣ, ಸಂಶೋಧನಾ ಸಹಯೋಗ ಮತ್ತು ಮಾಹಿತಿ ತಂತ್ರಜ್ಞಾನದ ಜೊತೆಗೆ ಆರೋಗ್ಯ ವಿಜ್ಞಾನದ ಏಕೀಕರಣ ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ. ಧಾರವಾಡದ ಎರಡು ಪ್ರತಿಷ್ಠತ ಸಂಸ್ಥೆಗಳ ಸಂಶೋಧನಾ ಸಹಯೋಗ ಮತ್ತು ನಾವೀನ್ಯತೆಗಾಗಿ ಒಟ್ಟಿಗೆ ಸೇರಿರುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಧಾರವಾಡದ ಐಐಐಟಿಯನ್ನು ನಿರ್ದೇಶಕರಾದ ಡಾ. ಮಹಾದೇವ ಪ್ರಸನ್ನ, ಕುಲಸಚಿವರಾದ ಡಾ. ರವಿ ಬಿ. ವಿಟ್ಲಾಪುರ, ಡಾ. ಮಂಜುನಾಥ ಕೆ ವನಹಳ್ಳಿ, ಡಾ. ಕೆ. ಗೋಪಿನಾಥ ಮತ್ತು ಇತರ ಹಿರಿಯ ಅಧ್ಯಾಪಕರು ಮತ್ತು ಸಂಶೋಧಕರು ಪ್ರತಿನಿಧಿಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪಕುಲಪತಿಗಳಾದ ವಿ. ಜೀವಂಧರ್ ಕುಮಾರ, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ.ಜಿ ಪ್ರಭು, ಸಂಶೋಧನಾ ನಿರ್ದೇಶಕರಾದ ಡಾ. ಕೆ ಸತ್ಯಮೂರ್ತಿ, ಉಪ ಕುಲಸಚಿವರಾದ ಡಾ. ಅಜಂತ ಜಿ. ಎಸ್., ಎಸ್.ಡಿ.ಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ರತ್ನಮಾಲಾ ಎಂ. ದೇಸಾಯಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ವರ್ಷಾವಧಿ ಜಾತ್ರಾ ಮಹೋತ್ಸವ

Article Image

ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ವರ್ಷಾವಧಿ ಜಾತ್ರಾ ಮಹೋತ್ಸವ

ಬೆಳ್ತಂಗಡಿ: ಪಡ್ಯಾರಬೆಟ್ಟ ಪೆರಿಂಜೆಯ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯು ದಿನಾಂಕ 14.03.2025ನೇ ಶುಕ್ರವಾರ ಮೊದಲ್ಗೊಂಡು ದಿನಾಂಕ 19.03.2025ನೇ ಬುಧವಾರ ಪರ್ಯಂತ ನಡೆಯಲಿದೆ. ಕಾರ್ಯಕ್ರಮಗಳು ದಿನಾಂಕ 14.03.2025ನೇ ಶುಕ್ರವಾರ ಮೀನ ಸಂಕ್ರಮಣ ದಿನ ಮಧ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ, ರಾತ್ರಿ ಗಂಟೆ 09:30ಕ್ಕೆ ಪಡ್ಯೋಡಿಗುತ್ತಿನಲ್ಲಿ ಉಪಹಾರ, ರಾತ್ರಿ ಗಂಟೆ 10:00ಕ್ಕೆ ಪಡ್ಯೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು, ಪಡ್ಯಾರಬೆಟ್ಟಕ್ಕೆ ಆಗಮನ, ದ್ವಜಾರೋಹಣ, ಬಲಿ, ಚೆಂಡು ದಿನಾಂಕ 15.03.2025ನೇ ಶನಿವಾರ ಭೂತಬಲಿ ಉತ್ಸವ ದಿನಾಂಕ 16.03.2025ನೇ ಭಾನುವಾರ ಅಂಬೋಡಿ, ಬಲಿ, ಉತ್ಸವ ಹೂವಿನ ಪೂಜೆ, ರಥಾರೋಹಣ ದಿನಾಂಕ 17.03.2025ನೇ ಸೋಮವಾರ ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ ಗಂಟೆ 12:00ರಿಂದ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ, 1:30 ರಿಂದ 7:30ರ ತನಕ ಮಹಾ ಅನ್ನಸಂತರ್ಪಣೆ, ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ದಿನಾಂಕ 18.03.2025ನೇ ಮಂಗಳವಾರ ಧ್ವಜ ಅವರೋಹಣ, ಸಂಪ್ರೋಕ್ಷಣೆ ಪಡ್ಯೋಡಿಗುತ್ತಿಗೆ ಭಂಡಾರ ಹಿಂದಿರುಗುವುದು ದಿನಾಂಕ 19.03.2025ನೇ ಬುಧವಾರ ರಾತ್ರಿ ಗಂಟೆ 7:30ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ 19-03-2025 ನೇ ಬುಧವಾರ ರಾತ್ರಿ ಗಂಟೆ 8 ರಿಂದ ಜೀ ಕನ್ನಡ ಸರಿಗಮಪ ಖ್ಯಾತಿಯ ಕರ್ನಾಟಕದ ಹೆಸರಾಂತ ಕಲಾವಿದೆ ವಿದುಷಿ ಸಾಧ್ವಿನಿ ಕೊಪ್ಪ ಮತ್ತು ತಂಡದವರಿಂದ "ಗಾನ ಸುರಭಿ" ಕಾರ್ಯಕ್ರಮ ಜರುಗಲಿದೆ (ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಹಳೆಯ ಚಲನಚಿತ್ರ ಗೀತೆಗಳ ಸಮ್ಮಿಲನ)

ಎಕ್ಸಲೆಂಟ್: ಜಿಲ್ಲಾ ಮಟ್ಟದ INSPIRE AWARD MANAK-2024 ಕ್ಕೆ ಆಯ್ಕೆ

Article Image

ಎಕ್ಸಲೆಂಟ್: ಜಿಲ್ಲಾ ಮಟ್ಟದ INSPIRE AWARD MANAK-2024 ಕ್ಕೆ ಆಯ್ಕೆ

ಭಾರತೀಯ ವಿಜ್ಞಾನ ಮಟ್ಟದ ಹಾಗೂ ತಂತ್ರಜ್ಞಾನ ಇಲಾಖೆಯು ಆಯೋಜಕತ್ವದ INSPIRE AWARD MANAK-2024ಕ್ಕೆ ಸ್ಪರ್ದೆಯಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಮನ್ವಿತ್‌ರಾಜ್ ಜೈನ್ ಹಾಗೂ ಮೈತ್ರಿ ಎಮ್. ಎಚ್. ಇವರುಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮನ್ವಿತ್‌ರಾಜ್ ಜೈನ್ ಇವರು Electricity generation by busy High way ಹಾಗೂ ಮೈತ್ರಿ ಎಮ್. ಎಚ್. ಇವರು Motar bike theft detector ವಿಷಯಕ್ಕೆ ಸಂಬAಧಿಸಿ ವೈಜ್ಞಾನಿಕ ಮಾದರಿಗಳನ್ನು ಸಿದ್ಧಗೊಳಿಸಿದ್ದರು. ಇವರೀರ್ವರ ಮಾದರಿಗಳು ಇದೀಗ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ರೂ.10,000 ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಈ ಹಿಂದೆಯೂ ಕೂಡ ವೈಜ್ಞಾನಿಕ ಮಾದರಿ, ವೈಜ್ಞಾನಿಕ ಪ್ರಬಂಧಗಳ ಮೂಲಕ ಎಕ್ಸಲೆಂಟ್ ಸಂಸ್ಥೆಯ ಹಲವು ವಿದ್ಯಾರ್ಥಿಗಳು ರಾಜ್ಯ- ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿರುವುದನ್ನು ಇಲ್ಲಿ ಸ್ಮರಿಸಲಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಹಾಗೂ ಶಿಕ್ಷಕ ವೃಂದದವರು ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪುತ್ತಿಗೆ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಹಸಿರುವಾಣಿ ಹೊರೆಕಾಣಿಕೆ

Article Image

ಪುತ್ತಿಗೆ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಹಸಿರುವಾಣಿ ಹೊರೆಕಾಣಿಕೆ

ಉಜಿರೆ: ಮೂಡಬಿದ್ರೆ ಬಳಿ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭ ಶುಕ್ರವಾರ ಧರ್ಮಸ್ಥಳದಿಂದ ಹೊರೆಕಾಣಿಕೆ ಸಾಗಾಣಿಕೆಗೆ ಡಿ. ನಿಶ್ಚಲ್ ಚಾಲನೆ ನೀಡಿ ಶುಭ ಹಾರೈಸಿದರು. ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ಪಾರ್ಶ್ವನಾಥ ಜೈನ್, ಸುಬ್ರಹ್ಮಣ್ಯಪ್ರಸಾದ್, ಕೆ. ಮಹಾವೀರ ಅಜ್ರಿ, ಶ್ರೀಧರ ಉಳಿಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ 'ಕಲರವ ' ಅಂತರ್ ಕಾಲೇಜು ಹಾಗೂ ಅಂತ‌ರ್ ತರಗತಿ ಉತ್ಸವ

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ 'ಕಲರವ ' ಅಂತರ್ ಕಾಲೇಜು ಹಾಗೂ ಅಂತ‌ರ್ ತರಗತಿ ಉತ್ಸವ

ವಿದ್ಯಾರ್ಥಿಗಳು ಜ್ಞಾನ, ಉತ್ತಮ ಮನೋಧೋರಣೆ ಮತ್ತು ಕೌಶಲ ಗಳಿಸಿಕೊಂಡು ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು, ಸಾಧನೆಗೈಯಬೇಕು ಎಂದು ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಉಜಿರೆ ಎಸ್ ಡಿ ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಯುವರಾಜ್ ಜೈನ್‌ ಹೇಳಿದರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಇಂದು (ಫೆ. 24) ಮಾನವಿಕ ವಿಭಾಗವು ಆಯೋಜಿಸಿದ್ದ 'ಕಲರವ ' ಅಂತರ್ ಕಾಲೇಜು ಹಾಗೂ ಅಂತ‌ರ್ ತರಗತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಉತ್ತಮ ಬುದ್ಧಿಮತ್ತೆಯ ಹೊರತಾಗಿಯೂ ಜ್ಞಾನ, ಕೌಶಲದ ಅಗತ್ಯವಿದೆ. ಉತ್ತಮ ಮನೋಧೋರಣೆಯೂ ಇದ್ದಲ್ಲಿ ವಿಶೇಷ ಸಾಧನೆಗಳನ್ನು ಮಾಡಬಹುದು. ವಿಜ್ಞಾನ, ಕಲೆ, ವಾಣಿಜ್ಯ ಇತ್ಯಾದಿ ಭೇದ ಮಾಡದೆ, ಯಾವ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಿದೆಯೋ ಆ ಕ್ಷೇತ್ರದಲ್ಲಿ ಸ್ವಯಂ ಅಭಿವೃದ್ಧಿಯೊಂದಿಗೆ ಸಾಗಬೇಕು ಎಂದು ಅವರು ಹೇಳಿದರು. “ಬದುಕಿನ ಹಾದಿಯಲ್ಲಿ ಮುಳ್ಳುಗಳು ಸಹಜ ಅದನ್ನು ಹೂವಿನ ಹಾಸಿಗೆಯನ್ನಾಗಿ ಬದಲಾಯಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಟೀಕೆಗಳನ್ನು ಪರಿಶೀಲಿಸಿ. ಟೀಕೆಗಳು ನಿಮಗೆ ಅನ್ವಯವಾಗುತ್ತಿದ್ದರೆ ನಿಮ್ಮಲ್ಲಿ ಬದಲಾವಣೆ ತಂದುಕೊಳ್ಳಿ; ಇಲ್ಲವಾದರೆ ಸುಮ್ಮನಿದ್ದುಬಿಡಿ. ಸಣ್ಣ ಸಣ್ಣ ಬದಲಾವಣೆಗಳಿಂದ ದೊಡ್ಡ ಬದಲಾವಣೆ ಸಾಧ್ಯವಾಗುತ್ತದೆ. ಕಲೆ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲೂ ತೊಡಗಿಕೊಳ್ಳಿ. ಕಲಿಯುವ ವಯಸ್ಸಿನಲ್ಲಿ ಕಲಿಯಿರಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. "ಎಸ್.ಡಿ.ಎಂ. ಸಂಸ್ಥೆಯು ಬದುಕಿಗೆ ಬೇಕಾದ ಎಲ್ಲಾ ರೀತಿಯ ಗುಣಗಳನ್ನು ಕಲಿಸಿಕೊಡುತ್ತದೆ ಹಾಗೂ ಪ್ರತಿಭೆಗೆ ತಕ್ಕ ಪ್ರೋತ್ಸಾಹವನ್ನು ನೀಡುತ್ತದೆ. ಇಂದಿನ ನನ್ನೆಲ್ಲಾ ಸಾಧನೆ ಹಾಗೂ ಏಳಿಗೆಗೆ ಸಂಸ್ಥೆ ಕಲಿಸಿಕೊಟ್ಟ ಪಾಠಗಳೇ ಕಾರಣ” ಎಂದರು. ಮುಖ್ಯ ಅತಿಥಿ, ಉದ್ಯಮಿ ಮಹೇಂದ್ರ ವರ್ಮ ಜೈನ್ ಮಾತನಾಡಿದರು. ತಮ್ಮ ಉದ್ಯಮಶೀಲತೆಗೆ ರುಡ್ಸೆಟ್ ಸಂಸ್ಥೆಯ ತರಬೇತಿ ಒದಗಿಸಿದ ನೆರವನ್ನು ಸ್ಮರಿಸಿಕೊಂಡರು. “ಯಶಸ್ಸು ಲಭಿಸಿದಾಗ ಅತಿಯಾಗಿ ಹಿಗ್ಗದೆ, ಕೆಲಸದಲ್ಲಿ ಗುಣಮಟ್ಟ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಉದ್ಯಮಿಗಳಿಗೆ ಪರಿಸ್ಥಿತಿ ಸದಾ ಒಂದೇ ಆಗಿರುವುದಿಲ್ಲ. ಜೀವನ ನಿರ್ವಹಣೆಗೆ ಪರ್ಯಾಯ ದಾರಿಗಳನ್ನು ಸಜ್ಜಾಗಿರಿಸಿಕೊಂಡಿರಬೇಕು. ದೇಶಕ್ಕೆ ಉತ್ತಮ ಪ್ರಜೆಗಳಾಗಿ, ಪ್ರಾಮಾಣಿಕ ತೆರಿಗೆದಾರರಾಗಿ, ರಾಷ್ಟ್ರೀಯತೆಗೆ ಬದ್ಧರಾಗಿ ಬದುಕಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, "ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಹಿತ ಬದುಕಿನ ಎಲ್ಲ ಸ್ತರಗಳಲ್ಲಿ ಸುದೃಢರಾಗಿ, ತಮ್ಮಲ್ಲಿರುವ ಕೌಶಲ, ಸಾಮರ್ಥ್ಯವನ್ನು ಗುರುತಿಸಿ ಸಮರ್ಥ ರೀತಿಯಾಗಿ ಉಪಯೋಗಿಸಿಕೊಂಡು ಬದುಕಬೇಕು" ಎಂದರು. ಇದೇ ಸಂದರ್ಭದಲ್ಲಿ, 2024 ರಲ್ಲಿ ನಡೆದ ಇಂಡೋ - ನೇಪಾಳ್ ಅಂತರರಾಷ್ಟ್ರೀಯ ಥ್ರೋ ಬಾಲ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ತೃತೀಯ ಬಿ.ಎ. ವಿದ್ಯಾರ್ಥಿನಿ ಉಷಾ ಕೆ.ಜಿ. ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲರು ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಭಟ್, ಕಲಾ ನಿಕಾಯದ ಡೀನ್ ಡಾ. ಭಾಸ್ಕರ ಹೆಗಡೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಮೀರ್ ಮತ್ತು ವೀಕ್ಷಾ ಉಪಸ್ಥಿತರಿದ್ದರು. ಸುದೀಕ್ಷಾ ಮತ್ತು ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ. ಸನ್ಮತಿ ಕುಮಾರ್ ಸ್ವಾಗತಿಸಿದರು. ಮಾನಸ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ 10 ಕಾಲೇಜುಗಳಿಂದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಫೆ.22: ವೇಣೂರು ಯುವಸೇವಾ ಸಂಗಮ ಟ್ರಸ್ಟ್ ವತಿಯಿಂದ ಸಾರ್ವಜನಿಕ ಅಂಬ್ಯುಲೆನ್ಸ್‌ ಲೋಕಾರ್ಪಣೆ

Article Image

ಫೆ.22: ವೇಣೂರು ಯುವಸೇವಾ ಸಂಗಮ ಟ್ರಸ್ಟ್ ವತಿಯಿಂದ ಸಾರ್ವಜನಿಕ ಅಂಬ್ಯುಲೆನ್ಸ್‌ ಲೋಕಾರ್ಪಣೆ

ಬೆಳ್ತಂಗಡಿ: ವೇಣೂರು ಯುವಸೇವಾ ಸಂಗಮ ಸೇವಾ ಟ್ರಸ್ಟ್ ವತಿಯಿಂದ ಸಾರ್ವಜನಿಕ ಅಂಬುಲೆನ್ಸ್‌ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಬೆಳ್ತಂಗಡಿ ತಾಲೂಕು ಅಮೆಚೂರು ಕಬಡ್ಡಿ ಆಸೋಸಿಯೇಶನ್, ತಾಲೂಕು ಯುವಜನ ಒಕ್ಕೂಟದ ಸಹಭಾಗಿತ್ವದಲ್ಲಿ 65 ಕೆ.ಜಿ. ವಿಭಾಗದ ಪ್ರೊ ಮಾದರಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಚಾಂಪಿಯನ್ ಶಿಪ್ ಪಂದ್ಯಾಟ ಫೆ. 22 ರಂದು ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 3ಕ್ಕೆ ಕಬಡ್ಡಿ ಪಂದ್ಯಾಟ ಉದ್ಘಾಟನೆ, ಸಂಜೆ 6ರಿಂದ ಮಂಗಳೂರು ಸುದೇಶ್ ಕುಮಾರ್ ಜೈನ್‌ ಮಕ್ಕಿ ಮನೆ ಕಲಾ ವೃಂದದಿಂದ ಸಾಂಸ್ಕೃತಿಕ ವೈಭವ, ರಾತ್ರಿ 8 ಕ್ಕೆ ಸಭಾ ಕಾರ್ಯಕ್ರಮ ಹಾಗೂ ಅಂಬುಲೆನ್ಸ್ ಲೋಕಾರ್ಪಣೆ ನಡೆಯಲಿದ ಎಂದು ಸಮಿತಿ ಅಧ್ಯಕ್ಷ ಕೆ. ವಿಜಯ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೇಣೂರು ಐಟಿಐಯಲ್ಲಿ 108 ಯುನಿಟ್ ರಕ್ತದಾನ

Article Image

ವೇಣೂರು ಐಟಿಐಯಲ್ಲಿ 108 ಯುನಿಟ್ ರಕ್ತದಾನ

ವೇಣೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಮಂಜುಶ್ರೀ ರೋವರ್ಸ್ ಘಟಕ, ಹಳೆವಿದ್ಯಾರ್ಥಿ ಸಂಘ, ಪದ್ಮಾಂಬ ಸಮೂಹ ಸಂಸ್ಥೆಗಳು, ವೇಣೂರು, ಹಾಲು ಉತ್ಪಾದಕರ ಸಹಕಾರಿ ಸಂಘ, ಕುಕ್ಕೇಡಿ. ಕುಕ್ಕೇಡಿ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ವೇಣೂರು, ಲಯನ್ಸ್‌ ಕ್ಲಬ್ ಮಂಗಳೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು, ಪಲ್ಗುಣಿ ಸೇವಾ ಸಂಘ[ರಿ] ವೇಣೂರು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್, ದ.ಕ. ಉಡುಪಿ ಜಿಲ್ಲೆ, ಬೆಳ್ತಂಗಡಿ ವಲಯ, ಮಂಜುಶ್ರೀ ಭಜನಾ ಮಂಡಳಿ, ಕುಂಡದಬೆಟ್ಟು, ಜನಸೇವಾ ಟ್ರಸ್ಟ್ (ರಿ) ಪಡ್ಡಂದಡ್ಕ, ದೇವಾಡಿಗರ ಸೇವಾ ವೇದಿಕೆ (ರಿ.) ವೇಣೂರು ಹಾಗೂ ಶ್ರೀ ದೇವಿ ಮಹಮ್ಮಾಯಿ ಮಾರಿಗುಡಿ ಮಂಗಳತೇರು ಸೇವಾ ಟ್ರಸ್ಟ್ (ರಿ.) ಇವರ ಸಹಭಾಗಿತ್ವದಲ್ಲಿ ರಕ್ತದಾನದ ಬೃಹತ್ ಶಿಬಿರ ವೇಣೂರು ಐಟಿಐಯಲ್ಲಿ ನಡೆಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು ಇದರ ಅಧ್ಯಕ್ಷರಾದ ಲ:ಸುಂದರ ಹೆಗ್ಡೆ, ಬಿ.ಇ. ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಕ್ತದಾನ ಅತ್ಯಂತ ಶ್ರೇಷ್ಠ ದಾನ ಇದರಿಂದ ಹಲವಾರು ಜೀವ ಉಳಿಸಿದಂತಹ ಪುಣ್ಯ ಪ್ರಾಪ್ತಿಯಾಗುತ್ತದೆ, ಇಂತಹ ಕಾರ್ಯಕ್ರಮಗಳಿಂದ ಯುವಜನತೆ ದಾನದ ಗುಣವನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ 266 ರಕ್ತದಾನ ಶಿಬಿರವನ್ನು ಸಂಯೋಜಿಸಿರುವ ಲ| ಎನ್. ಜೆ. ನಾಗೇಶ್ ಎಂ.ಜೆ.ಎಫ್., ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲ| ಜಯರಾಜ್ ಪ್ರಕಾಶ್, ಖ್ಯಾತ ಪಾಕಶಾಸ್ತçಜ್ಞರಾದ ಶ್ರೀ ನಾಗಕುಮಾರ್ ಜೈನ್, ಜೀವವಿಮಾ ಪ್ರತಿನಿಧಿ ಜಗನ್ನಾಥ ದೇವಾಡಿಗ ಇವರುಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದ ಐಟಿಐ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಮಾತನಾಡಿ ವಿದ್ಯಾರ್ಥಿ ದಿಸೆಯಿಂದಲೇ ದಾನದ ಮಹತ್ವವನ್ನು ಅರಿತು ರಕ್ತದಾನದಂತಹ ಶ್ರೇಷ್ಠ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದರು. ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ: ಪ್ರೇಮಿ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿತಾ ಕೆ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಪದ್ಮಾಂಬ ಸಮೂಹ ಸಂಸ್ಥೆಗಳ ಮಾಲಕರು ಜಿನರಾಜ್ ಜೈನ್, ಪಲ್ಗುಣಿ ಸೇವಾ ಸಂಘದŒ ಅಧ್ಯಕ್ಷರಾದ ವಿ. ಎಸ್. ಜಯರಾಜ್, ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ನಿರ್ಮಲ್‌ಕುಮಾರ್ ಬೊಳ್ಜಾಲ್ ಗುತ್ತು, ಸೌತ್‌ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಸಿಲ್ವಿಯಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು ಇಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ, ಶ್ರೀ ದೇವಿ ಮಹಮ್ಮಾಯಿ ಮಾರಿಗುಡಿ ಮಂಗಳತೇರು ಸೇವಾ ಟ್ರಸ್ಟ್(ರಿ.) ಇದರ ಅಧ್ಯಕ್ಷರಾದ ಸತೀಶ್ ಗೌಡ, ದೇವಾಡಿಗರ ಸೇವಾ ವೇದಿಕೆ (ರಿ.) ವೇಣೂರು ಇದರ ಗೌರವಾಧ್ಯಕ್ಷರಾದ ಎಂ. ಸುಂದರ ಎಂ. ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 108 ಯುನಿಟ್ ರಕ್ತ ಸಂಗ್ರಹಿಸಲಾಯಿತು. ವಿದ್ಯಾರ್ಥಿ ವಿವೇಕ್ ಪ್ರಾರ್ಥಿಸಿದ ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪದ್ಮಪ್ರಸಾದ್ ಬಸ್ತಿ ಸ್ವಾಗತಿಸಿ, ಜಾಕೊಬ್ ಟಿ. ವಿ. ವಂದಿಸಿದ ಈ ಕಾರ್ಯಕ್ರಮವನ್ನು ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಸತೀಶ್ ನಿರ್ವಹಿಸಿದರು.

ವೇಣೂರು: 2ನೇ ವರ್ಷದ ಪ್ರತಿಷ್ಠಾ ದಿನಾಚರಣೆಯ

Article Image

ವೇಣೂರು: 2ನೇ ವರ್ಷದ ಪ್ರತಿಷ್ಠಾ ದಿನಾಚರಣೆಯ

ಬೆಳ್ತಂಗಡಿ ತಾಲೂಕು, ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 23(ನಾಳೆ)ರಂದು 2ನೇ ವರ್ಷದ ಪ್ರತಿಷ್ಠಾ ದಿನಾಚರಣೆಯ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮಗಳು ಪೂರ್ವಾಹ್ನ ಗಂಟೆ 8.30ಕ್ಕೆ ದೇವತಾ ಪ್ರಾರ್ಥನೆ, ಪುಣ್ಯಾಹ, ಗಣಹೋಮ, ಶ್ರೀ ದೇವರಿಗೆ ಪಂಚವಿಂಶತಿ ಕಲಶ, ಪರಿವಾರ ದೇವರಿಗೆ ನವಕಲಶ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.

ವೇಣೂರು: ಮಹಾಶಿವರಾತ್ರಿ ಮಹೋತ್ಸವ ಶತರುದ್ರಾಭಿಷೇಕ, ಅಹೋರಾತ್ರಿ ಭಜನೋತ್ಸವ

Article Image

ವೇಣೂರು: ಮಹಾಶಿವರಾತ್ರಿ ಮಹೋತ್ಸವ ಶತರುದ್ರಾಭಿಷೇಕ, ಅಹೋರಾತ್ರಿ ಭಜನೋತ್ಸವ

ಬೆಳ್ತಂಗಡಿ ತಾಲೂಕು, ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ಭಜನಾ ಮಂಡಳಿ, ವೇಣೂರು ಇವರ ಸಹಕಾರದೊಂದಿಗೆ ಫೆಬ್ರವರಿ 26ರಂದು ಮಹಾಶಿವರಾತ್ರಿ ಮಹೋತ್ಸವ ಶತರುದ್ರಾಭಿಷೇಕ, ಅಹೋರಾತ್ರಿ ಭಜನೋತ್ಸವವು, ಊರ-ಪರವೂರ ಭಜನಾ ಮಂಡಳಿಗಳಿಂದ ಜರಗಲಿರುವುದು. ರಾತ್ರಿ ಗಂಟೆ 7.00ರಿಂದ ಸಾಮೂಹಿಕ 'ಶಿವಪಂಚಾಕ್ಷರಿ ಪಠಣ' ವಿಶೇಷವಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜುನ ಪ್ರಶಸ್ತಿ ಪುರಸ್ಕೃತೆ ಪೂವಮ್ಮ ಅವರಿಂದ ಎಸ್.ಡಿ.ಎಂ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

Article Image

ಅರ್ಜುನ ಪ್ರಶಸ್ತಿ ಪುರಸ್ಕೃತೆ ಪೂವಮ್ಮ ಅವರಿಂದ ಎಸ್.ಡಿ.ಎಂ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

"ಸೋತು ಗೆಲ್ಲುವ ಸಾಧ್ಯತೆಗಳಿಂದ ಅದಮ್ಯ ಆತ್ಮವಿಶ್ವಾಸ" ಸೋತು ಗೆಲ್ಲುವ ಸಾಧ್ಯತೆಗಳು ಅದಮ್ಯ ಆತ್ಮವಿಶ್ವಾಸವನ್ನು ಮೂಡಿಸಿ ಬದುಕನ್ನು ಸುಂದರಗೊಳಿಸುತ್ತವೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು, ಓಲಿಂಪಿಯನ್ ಎಂ.ಆರ್‌ ಪೂವಮ್ಮ ಹೇಳಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ದ್ವಜಾರೋಹಣ ನಡೆಸಿ, ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಸ್ಪರ್ಧೆಗಳಲ್ಲಿ ಸೋಲು-ಗೆಲುವುಗಳು ಸಾಮಾನ್ಯ. ಹಿನ್ನಡೆಯನ್ನು ಸವಾಲಾಗಿ ತೆಗೆದುಕೊಂಡು ಸತತ ಪ್ರಯತ್ನಗಳ ಮೂಲಕ ಗೆಲುವಿನ ಹಾದಿಯಲ್ಲಿ ಸಾಗಬಹುದು ಎಂದು ಅವರು ಹೇಳಿದರು. ರತ್ನವರ್ಮ ಕ್ರೀಡಾಂಗಣವು ತಮ್ಮ ವೃತ್ತಿ ಜೀವನದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದರು. ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಕ್ರೀಡಾಜೀವನದ ಆರಂಭದಲ್ಲಿ ಸರಿಯಾದ ಮಾರ್ಗದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಗುರುಗಳಾದ ವಸಂತ್‌ ಹೆಗಡೆ ಅವರು ಮುಖ್ಯಪಾತ್ರ ವಹಿಸಿದ್ದಾರೆ ಎಂದು ಕೃತಜ್ಞತಾಪೂರ್ವಕವಾಗಿ ಪೂವಮ್ಮ ನೆನಪಿಸಿಕೊಂಡರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ ಹೆಗ್ಡೆ ಮಾತನಾಡಿ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸದೃಡತೆಯನ್ನು ಕಾಯ್ದುಕೊಳ್ಳುವ ಮೂಲಕ ಬದುಕಿನ ಯಾವುದೇ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಹೇಳಿದರು. ವಿದ್ಯಾರ್ಥಿಗಳು ಪ್ರತಿದಿನ ಯಾವುದಾದರೊಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಸದೃಡತೆಯನ್ನು ಸಾಧಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಪೂವಮ್ಮ ಅವರನ್ನು ಸನ್ಮಾನಿಸಲಾಯಿತು. ಪ್ರೋ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿರುವ ಗಗನ್‌ ಗೌಡ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಮೇಶ್‌ ಎಚ್‌ ಉಪಸ್ಥಿತರಿದ್ದರು. ಕ್ರೀಡಾ ಕೂಟದ ಅಂಗವಾಗಿ ವಿದ್ಯಾರ್ಥಿಗಳಿಗೆ ಪಥ ಸಂಚಲನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಂತಿಮ ಬಿ.ಕಾಂ ʼಸಿʼ ವಿದ್ಯಾರ್ಥಿಗಳು ಪ್ರಥಮ ಬಹುಮಾನ, ಪ್ರಥಮ ಬಿಸಿಎ ʼಬಿʼ ವಿದ್ಯಾರ್ಥಿಗಳು ದ್ವಿತೀಯ ಮತ್ತು ಬಿ.ವೋಕ್‌ನ ರೀಟೈಲ್‌ ಆಂಡ್‌ ಮ್ಯಾನೇಜ್ಮೇಂಟ್‌ ತೃತೀಯ ಬಹುಮಾನ ಪಡೆದುಕೊಂಡರು. ಡಾ.ಸುವೀರ್‌ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ: ನೀರು ಉಳಿಸಿ ಅಭಿಯಾನ

Article Image

ಉಜಿರೆ: ನೀರು ಉಳಿಸಿ ಅಭಿಯಾನ

ಉಜಿರೆ: ಕರ್ನಾಟಕ ರಾಜ್ಯದಲ್ಲಿ 12 ಬರಪೀಡಿತ ಜಿಲ್ಲೆಗಳು ಹಾಗೂ ಎರಡು ನಗರ ಪ್ರದೇಶದ ವ್ಯಾಪ್ತಿಯಲ್ಲಿ 14,80,519 ಯುವ ಸ್ವಯಂ ಸೇವಕರನ್ನು ತೊಡಗಿಸಿಕೊಳ್ಳುವ ಮೂಲಕ 3,86,432 ಘನ ಮೀಟರ್ ನೀರನ್ನು ಈಗಾಗಲೆ ಸಂರಕ್ಷಿಸಲಾಗಿದೆ ಯುನಿಸೆಫ್‌ನ ಹಿರಿಯ ಅಧಿಕಾರಿ ವೆಂಕಟೇಶ್ ಅರಳಿಕಟ್ಟೆ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಸೇವಾಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದಲ್ಲಿ ನೀರಿನ ಉಳಿತಾಯ ಮತ್ತು ಸಂರಕ್ಷಣೆ ಬಗ್ಗೆ ಹೈದ್ರಾಬಾದ್‌ನ ಯುನಿಸೆಫ್‌ನ ಜಂಟಿ ಆಶ್ರಯದಲ್ಲಿ ಆಯೋಜಿಸಿದ ನೀರು ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೀರು ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲಾ ಶಿಕ್ಷಣ ಸಂಸ್ಥೆಗಳ ಮೂಲಕ ರಾಜ್ಯ ವ್ಯಾಪ್ತಿಯಲ್ಲಿ ನೀರು ಉಳಿಸಿ ಅಭಿಯಾನವನ್ನು ಯುನಿಸೆಫ್ ಆಶ್ರಯದಲ್ಲಿ ಆಯೋಜಿಸಿದ್ದಿ, ಸರ್ವರ ಸಹಕಾರವನ್ನು ಕೋರಿದರು. ಯುನಿಸೆಫ್‌ನ ಡಾ. ಪ್ರಭಾತ್ ಮಟ್ಟಾಡಿ ಶುಭ ಹಾರೈಸಿದರು. ಎಸ್.ಡಿ.ಎಂ. ಕಾಲೇಜಿನ ಇನ್ನೂರು ವಿದ್ಯಾರ್ಥಿಗಳು ನೀರು ಉಳಿಸಿ ಜಾಥಾದಲ್ಲಿ ಭಾಗವಹಿಸಿದರು. ಮಡಂತ್ಯಾರು ಸೇಕ್ರೆಡ್‌ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಜಲಸಂರಕ್ಷಣೆ ತಜ್ಞರಾದ ಡಾ. ಜೋಸೆಫ್, ಎನ್. ಎಂ. ನೀರುಸಂರಕ್ಷಣೆ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ. ಮಹೇಶ್‌ಕುಮಾರ್ ಶೆಟ್ಟಿ ಮತ್ತು ಪ್ರೊ. ದೀಪಾ, ಆರ್.ಪಿ., ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಷಾಕಿರಣ್ ಕಾರಂತ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಎಸ್.ಎಸ್. ಉಪಸ್ಥಿತರಿದ್ದರು.

ಧರ್ಮಸ್ಥಳ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನಕ್ಕೆ ಚಾಲನೆ

Article Image

ಧರ್ಮಸ್ಥಳ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನಕ್ಕೆ ಚಾಲನೆ

ಪ್ರಾಚೀನ ಕಾಲದ ನಾಣ್ಯಗಳು ನೋಡಲು ಸಿಗುವುದು ಅಪರೂಪ. ಅಂತಹ ನಾಣ್ಯಗಳನ್ನು ನೋಡುವುದರ ಜೊತೆಗೆ ಅವುಗಳ ಬಗ್ಗೆ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾರೆ. ಹೆಗ್ಗಡೆಯವರ ಪುರಾತನ ವಸ್ತುಗಳ ಸಂಗ್ರಹಗಳ ಜೊತೆಗೆ ಮೂಡಿಗೆರೆಯ ಎಂ. ಎಲ್. ಅಶೋಕ್ ಅವರು ಸಂಗ್ರಹಿಸಿದ ಪ್ರಾಚೀನ ಕಾಲದ ನಾಣ್ಯಗಳ ಪ್ರದರ್ಶನವನ್ನು ಆಯೋಜಿಸಿದ್ದು ಶಾಲಾ ಮಕ್ಕಳಿಗೆ, ಆಸಕ್ತರಿಗೆ ನಾಣ್ಯಗಳ ಮೂಲಕ ಇತಿಹಾಸವನ್ನು ತಿಳಿದುಕೊಳ್ಳಲು ಇರುವ ಅವಕಾಶವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣರವರು ಹೇಳಿದರು. ಅವರು ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಫೆ. 17ರಿಂದ ಮಾರ್ಚ್ 1ರವರೆಗೆ ನಡೆಯಲಿರುವ ಪ್ರಾಚೀನ ಕಾಲದ ನಾಣ್ಯ ಹಾಗೂ ಅಂಚೆ ಚೀಟಿಗಳ ವಿಶೇಷ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ನಾಣ್ಯಗಳ ಸಂಗ್ರಹಕಾರರಾದ ಮೂಡಿಗೆರೆಯ ಎಂ. ಎಲ್. ಅಶೋಕ್ ಮಾತನಾಡಿ ನನ್ನ ಪ್ರಾಚೀನ ವಸ್ತುಗಳ ಸಂಗ್ರಹಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಮಂಜೂಷಾ ವಸ್ತು ಸಂಗ್ರಹಾಲಯವೇ ಪ್ರೇರಣೆ. ಅವಕಾಶ ಮಾಡಿಕೊಟ್ಟ ಪೂಜ್ಯರಿಗೆ ಹಾಗೂ ಮಂಜೂಷಾದ ಸಿಬಂದಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಾಚೀನ ಭಾರತದಿಂದ ಆರಂಭಗೊಂಡು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಗೊಂಡ ನಾಣ್ಯಗಳವರೆಗೆ ಸಂಗ್ರಹಿಸಲಾದ 1000ಕ್ಕೂ ಹೆಚ್ಚಿನ ನಾಣ್ಯಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ರಾಜ-ಮಹಾರಾಜರ ಕಾಲ, ಸ್ವಾತಂತ್ರ್ಯ ಪೂರ್ವ, ಸ್ವತಂತ್ರ ಭಾರತದ ಕಾಲದಿಂದ ಹಿಡಿದು ವಿಶೇಷ ಸಂದರ್ಭಗಳಲ್ಲಿ ಸರಕಾರವು ಬಿಡುಗಡೆಗೊಳಿಸಿದ ನಾಣ್ಯಗಳು, ಅಂಚೆ ಚೀಟಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಚಿನ್ನ, ಬೆಳ್ಳಿ, ತಾಮ್ರ ಹೀಗೆ ಹಲವು ರೀತಿಯ ನಾಣ್ಯಗಳನ್ನು ನೋಡಬಹುದು ಎಂದು ಹೇಳಿದರು. ಧರ್ಮಸ್ಥಳದಲ್ಲಿರುವ ಮಂಜೂಷಾ ಮ್ಯೂಸಿಯಂನಲ್ಲಿ ವೀರೇಂದ್ರ ಹೆಗ್ಗಡೆಯವರ ಸಂಗ್ರಹಗಳ ಪ್ರದರ್ಶನದ ಜೊತೆಗೆ ವಿವಿಧ ಚಟುವಟಿಕೆ, ಕಾರ್ಯಾಗಾರಗಳ ಮೂಲಕ ಶಾಲಾ ಮಕ್ಕಳಿಗೆ, ಆಸಕ್ತರಿಗೆ ಪುರಾತನ ವಸ್ತುಗಳ ಮಾಹಿತಿ ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಸ್ತು ಸಂಗ್ರಹಾಲಯವು ಜ್ಞಾನ ಹೆಚ್ಚಿಸುವುದರ ಜೊತೆಗೆ ಪ್ರಾಚೀನ ವಸ್ತುಗಳ ಬಗ್ಗೆ ಅರಿವು ಮೂಡಿಸಿ, ಇನ್ನಷ್ಟು ಆಸಕ್ತಿ, ಕುತೂಹಲ ಹೆಚ್ಚಲು ಪ್ರೇರಣೆಯಾಗಿವೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ ಹೇಳಿದರು. ಈ ಸಂದರ್ಭದಲ್ಲಿ ಮಂಜೂಷಾ ವಸ್ತು ಸಂಗ್ರಹಾಲಯದ ಉಪ ನಿರ್ದೇಶಕ ರಿತೇಶ್ ಶರ್ಮಾ ಎಸ್‌ಡಿಎಂ ಸಂಸ್ಕೃತಿ ಮತ್ತು ಸಂಶೋಧನಾ ಪ್ರತಿಷ್ಠಾನದ ಡಾ. ಪವನ್ ಕುಮಾರ್ ಹಾಗೂ ಇತರ ಸಿ‌ಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉಚಿತ ಸಾಮೂಹಿಕ ವಿವಾಹ: ನೋಂದಣಿ ಕಛೇರಿ ಉದ್ಘಾಟನೆ

Article Image

ಉಚಿತ ಸಾಮೂಹಿಕ ವಿವಾಹ: ನೋಂದಣಿ ಕಛೇರಿ ಉದ್ಘಾಟನೆ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ 2025ರ ಮೇ 3 ರಂದು ಶನಿವಾರ ಸಂಜೆ ಗಂಟೆ 6.48ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ವಿವಾಹ ನೋಂದಣಿ ಕಛೇರಿಯನ್ನು ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಭಾನುವಾರ ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್ ನ ಕಾರ್ಯದರ್ಶಿ ಎ.ವಿ. ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೇವಳ ಪಾರುಪತ್ಯಗಾರ್ ಲ ಕ್ಷ್ಮೀನಾರಾಯಾಣ ರಾವ್, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀನಿವಾಸ ರಾವ್, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯಪ್ರಸಾದ್, ನಿವೃತ್ತ ಮುಖ್ಯೋಪಾಧ್ಯಾಯ ಧರ್ಣಪ್ಪ ಮಾಸ್ಟರ್, ಸಂತೋಷ್ ಗೌಡ, ಶಿವರಾಮ್, ಪವಿತ್ರ, ಭವಾನಿ, ಮಂಜುಳಾ ಉಪಸ್ಥಿತರಿದ್ದರು. ಸಾಮೂಹಿಕ ವಿವಾಹದ ಎಲ್ಲಾ ವೆಚ್ಚವನ್ನು ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ನಿರ್ವಹಿಸಲಿದ್ದು, ಈ ಸಮಾರಂಭದಲ್ಲಿ ಮದುವೆಯಾಗಲಿಚ್ಛಿಸುವವರು ಏಪ್ರಿಲ್ 25 ರೊಳಗೆ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0825626644, 9663464648, 8147263422

ಎಕ್ಸಲೆಂಟ್ ಮೂಡುಬಿದಿರೆ: ಜೆ ಇ ಇ ಮೈನ್ 99.97143 ಸಾಧನೆ

Article Image

ಎಕ್ಸಲೆಂಟ್ ಮೂಡುಬಿದಿರೆ: ಜೆ ಇ ಇ ಮೈನ್ 99.97143 ಸಾಧನೆ

ಎನ್ ಟಿ ಎ ನಡೆಸುವ ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಜೆಇಇ ಮೈನ್-1 ಇದರ ಫಲಿತಾಂಶ ಪ್ರಕಟವಾಗಿದ್ದು ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಮೊದಲ ಆವೃತ್ತಿಯ ಪರೀಕ್ಷೆಯನ್ನು ಜನವರಿ-ಫೆಬ್ರವರಿಯಲ್ಲಿ ನಡೆಸಲಾಗಿದ್ದರೆ, ಎರಡನೇ ಆವೃತ್ತಿ ಏಪ್ರಿಲ್ನಲ್ಲಿ ನಡೆಯಲಿದೆ. ಜೆಇಇ- ಮೇನ್ಸ್ ಪತ್ರಿಕೆ 1 ಮತ್ತು ಪತ್ರಿಕೆ 2ರ ಫಲಿತಾಂಶಗಳ ಆಧಾರದ ಮೇಲೆ, ಈ ವರ್ಷದ ಜೂನ್‌ನಲ್ಲಿ ನಡೆಯಲಿರುವ ಜೆಇಇ-ಅಡ್ವಾಸ್ಡ್ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ಮಾ ಡಲಾಗುತ್ತದೆ, ಇದು 23 ಪ್ರಮುಖ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶ ಪಡೆಯಲು ದಾರಿ ಮಾಡಿಕೊಡುತ್ತದೆ. ಎಕ್ಸಲೆಂಟ್ ಮೂಡುಬಿದಿರೆ ದೇಶದ ಅತ್ಯುತ್ತಮ ಶಿಕ್ಷಕವರ್ಗವನ್ನು ಹೊಂದಿದ್ದು, ಶ್ರೇಷ್ಠ ಮಟ್ಟದ ತರಬೇತಿ ನೀಡುತ್ತಿದ್ದೆ, ಇಲ್ಲಿಯವರೆಗೆ ಹಲವಾರು ವಿದ್ಯಾರ್ಥಿಗಳು ದೇಶದ ವಿವಿಧ ಐಐಟಿಗಳಿಗೆ ಪ್ರವೇಶವನ್ನು ಪಡೆದಿರುವುದು ಇಲ್ಲಿಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳಾದ ಶಿಶಿರ್ ಎಚ್ ಶೆಟ್ಟಿ (99.97143 ಪರ್ಸೆಂಟೈಲ್), ಶ್ರೇಯಾಂಕ್ ಮನೋಹರ ಪೈ (99.8251 ಪರ್ಸೆಂಟೈಲ್), ಕಾರ್ತಿಕ್ ಎಸ್ (99.02732 ಪರ್ಸೆಂಟೈಲ್) ಉತ್ತಮ ಅಂಕ ಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪರೀಕ್ಷೆಗೆ ಹಾಜರಾದ 89 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು 99ಪರ್ಸೆಂಟೈಲ್‌ಗಿಂತ ಹೆಚ್ಚು, 6 ವಿದ್ಯಾರ್ಥಿಗಳು 98 ಪರ್ಸೆಂಟೈಲ್‌ಗಿಂತ ಹೆಚ್ಚು ಮತ್ತು 36 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೆ. ವಿಷಯವಾರು 7 ವಿದ್ಯಾರ್ಥಿಗಳು ಭೌತಶಾ‌ಸ್ತ್ರದಲ್ಲಿ, 6 ವಿದ್ಯಾರ್ಥಿಗಳು ರಸಾಯನ ಶಾ‌ಸ್ತ್ರದಲ್ಲಿ, 4 ವಿದ್ಯಾರ್ಥಿಗಳು ಗಣಿತಶಾ‌ಸ್ತ್ರದಲ್ಲಿ 99 ಪರ್ಸೈಂಟೈಲ್‌ಗಿಂತ ಅಧಿಕ ಅಂಕವನ್ನು ಪಡೆದಿರುತ್ತಾರೆ. ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಎಸ್.ಡಿ.ಎಮ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Article Image

ಎಸ್.ಡಿ.ಎಮ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಪೇಟೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಿನಿ ಇವುಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಹಯೋಗದಲ್ಲಿ ದಿನಾಂಕ 26-01-2025 ರಂದು ಬೆಳಿಗ್ಗೆ 9.30 ರಿಂದ ಸ. ಹಿ. ಪ್ರಾಥಮಿಕ ಶಾಲೆ ಹಳೆಪೇಟೆ ಇಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಈ ಆರೋಗ್ಯ ತಪಾಸಣಾ ಶಿಬಿರವು ಎಲ್ಲಾ ವಯೋಮಾನದವರಿಗೆ ಉಚಿತವಾಗಿದೆ. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶತಮಾನೋತ್ಸವ ಆಚರಣೆ ಅಂಗವಾಗಿ ವರ್ಷವಿಡಿ ವೈವಿಧ್ಯಮಯ ಕಾರ್ಯಕ್ರಮಗಳು

Article Image

ಶತಮಾನೋತ್ಸವ ಆಚರಣೆ ಅಂಗವಾಗಿ ವರ್ಷವಿಡಿ ವೈವಿಧ್ಯಮಯ ಕಾರ್ಯಕ್ರಮಗಳು

ಉಜಿರೆ: ಕಳೆದ ನೂರು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜ್ಞಾನದಾಸೋಹದ ಮೂಲಕ ಸಾವಿರಾರು ಮಂದಿ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಿ ಸಮಾಜಕ್ಕೆ ಅರ್ಪಿಸಿದ ಉಜಿರೆಯ ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ವರ್ಷವಿಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನ ನಾಗರಿಕರು ಸಮಾರಂಭಕ್ಕೆ ಸಕ್ರಿಯ ಸಹಕಾರ ನೀಡಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಶತಮಾನೋತ್ಸವ ಲಾಂಛನವನ್ನೂ ಅನಾವರಣಗೊಳಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ತಮ್ಮ ಪ್ರಾಥಮಿಕ ಶಾಲಾದಿನಗಳ ಸಿಹಿ-ಕಹಿ ಅನುಭವಗಳನ್ನು ಸ್ಮರಿಸಿಕೊಂಡು, ಪ್ರಾಥಮಿಕ ಶಾಲಾ ಶಿಕ್ಷಕರು ನೀಡಿದ ಮಾರ್ಗದರ್ಶನ, ಕಲಿಸಿದ ಶಿಸ್ತು, ಸಂಸ್ಕಾರ ತಮ್ಮ ಬದುಕಿಗೆ ದಾರಿದೀಪವಾಗಿದೆ. ದೇವಪ್ಪ ಗೌಡ ಮೇಸ್ಟ್ರು ಕಲಿಸಿದ ನಾಟಕದ ಅಭಿನಯ, ಕಮಲಾ ಟೀಚರ್ ಹೇಳಿಕೊಟ್ಟ ಸಂಸ್ಕಾರ, ತರಗತಿಯಲ್ಲಿ ಮಕ್ಕಳ ತುಂಟಾಟಕ್ಕೆ ನೀಡಿದ ಬೆತ್ತದ ಪೆಟ್ಟು, ಹುಡುಗಿಯರ ಮಧ್ಯೆ ತಪ್ಪು ಮಾಡಿದ ಹುಡುಗರನ್ನು ಕುಳಿತುಕೊಳ್ಳಿಸಿದ ಪ್ರಕರಣವನ್ನು ಸ್ಮರಿಸಿಕೊಂಡರು. ಶಾಲಾ ವಠಾರದಲ್ಲಿ ತಿಂದ ಐಸ್‌ಕ್ಯಾಂಡಿ, ಅಕ್ರೋಟ್, ಹಣ್ಣು-ಹಂಪಲುಗಳ ಸವಿಯ ಸೊಗಡನ್ನು ಧನ್ಯತೆಯಿಂದ ನೆನಪಿಸಿಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಶುಭಹಾರೈಸಿ ಧರ್ಮಸ್ಥಳದಿಂದ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ನೀಡುತ್ತಿರುವ ಸಹಕಾರ, ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಮಾತನಾಡಿ, ವರ್ಷವಿಡಿ ತಿಂಗಳಿಗೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು. ಶತಮಾನೋತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿ ಅಬೂಬಕ್ಕರ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣನಾಯ್ಕ ಧನ್ಯವಾದವಿತ್ತರು. ನಿವೃತ್ತ ಮುಖ್ಯೋಪಾಧ್ಯಾಯ ಬಿ. ಸೋಮಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಜ. 11, 12: ಮಂಗಳೂರಿನಲ್ಲಿ ಬೀಚ್ ಉತ್ಸವ

Article Image

ಜ. 11, 12: ಮಂಗಳೂರಿನಲ್ಲಿ ಬೀಚ್ ಉತ್ಸವ

ಮಂಗಳೂರು, ಜ.6: ಕರಾವಳಿ ಉತ್ಸವದ ಅಂಗವಾಗಿ ನಡೆಯುವ ಬಹುನಿರೀಕ್ಷಿತ ಬೀಚ್ ಉತ್ಸವವು ಜ. 11 ಮತ್ತು 12ರಂದು ಪಣಂಬೂರು ಸಮೀಪದ ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯಲಿದೆ. ರೋಹನ್ ಕಾರ್ಪೊರೇಷನ್‌ ಸಹಯೋಗದೊಂದಿಗೆ ನಡೆಯುವ ಬೀಚ್ ಉತ್ಸವದಲ್ಲಿ ಎರಡು ದಿನಗಳ ಕಾಲ ಆಕರ್ಷಕ ಸಂಗೀತ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಜ. 11ರಂದು ಸಂಜೆ 6 ಗಂಟೆಗೆ ನೃತ್ಯೋತ್ಸವ, 7.30ಕ್ಕೆ ಕದ್ರಿ ಮಣಿಕಾಂತ್ ಲೈವ್ ನಡೆಯಲಿದೆ. ಜ. 12ರಂದು ಬೆಳಗ್ಗೆ 5.30ಕ್ಕೆ ಯೋಗ, 6.30ಕ್ಕೆ ಉದಯರಾಗ, 9ಕ್ಕೆ ಜಲ ಕ್ರೀಡೆ, 9:30ಕ್ಕೆ ಮರಳು ಶಿಲ್ಪ ಸ್ಪರ್ಧೆ, 5.30ಕ್ಕೆ ನೃತ್ಯೋತ್ಸವ, 6.30ಕ್ಕೆ ಸಮಾರೋಪ ಸಮಾರಂಭ, 7.30 ರಘು ದೀಕ್ಷಿತ್ ಪ್ರಾಜೆಕ್ಟ್ ಲೈವ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಧರ್ಮಸ್ಥಳದಲ್ಲಿ ಇಂದು ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ಸರತಿಸಾಲಿನ ನೂತನ ಸಂಕೀರ್ಣ “ಶ್ರೀ ಸಾನ್ನಿಧ್ಯ” ಉದ್ಘಾಟನೆ

Article Image

ಧರ್ಮಸ್ಥಳದಲ್ಲಿ ಇಂದು ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ಸರತಿಸಾಲಿನ ನೂತನ ಸಂಕೀರ್ಣ “ಶ್ರೀ ಸಾನ್ನಿಧ್ಯ” ಉದ್ಘಾಟನೆ

ಉಜಿರೆ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ, ಸರ್ವಧರ್ಮ ಸಮನ್ವಯ ಕ್ಷೇತ್ರವೆಂದೇ ಚಿರಪರಿಚಿತವಾಗಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ದೇವರದರ್ಶನಕ್ಕಾಗಿ ಆರಾಮದಾಯಕ ಸರತಿಸಾಲಿನ ನೂತನ ಸಂಕೀರ್ಣ “ಶ್ರೀ ಸಾನ್ನಿಧ್ಯ” ನಿರ್ಮಾಣಗೊಂಡಿದ್ದು ಇಂದು ಮಂಗಳವಾರ ಅಪರಾಹ್ನ ಎರಡು ಗಂಟೆಗೆ ಮಾನ್ಯ ಜಗದೀಪ್ ಧನ್‌ಕರ್ ಉದ್ಘಾಟಿಸುವರು. ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಡಾ. ಸುದೇಶ್ ಧನ್‌ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾನ್ಯ ದಿನೇಶ್ ಗುಂಡೂರಾವ್, ಹೇಮಾವತಿ ವೀ. ಹೆಗ್ಗಡೆ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸನ ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಸಕ್ತ ವರ್ಷದ ಜ್ಞಾನದೀಪ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುವುದು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್. ತಿಳಿಸಿದ್ದಾರೆ. ವಿಶೇಷ ಸೌಲಭ್ಯಗಳು: 2,75,177 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ “ಶ್ರೀ ಸಾನ್ನಿಧ್ಯ” ಸರತಿಸಾಲಿನ ಸಂಕೀರ್ಣ ಎರಡು ಅಂತಸ್ತುಗಳನ್ನು ಹೊಂದಿದ್ದು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಭಕ್ತಾದಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಹತ್ತು ಸಾವಿರ ಜನರಿಗೆ ಆರಾಮದಾಯಕ ಆಸನ ವ್ಯವಸ್ಥೆ, ವೃದ್ಧರು, ಅಂಗವಿಕಲರು ಮತ್ತು ಮಕ್ಕಳ ಆರೈಕೆ ಕೇಂದ್ರ, ವೈದ್ಯಕೀಯ ನೆರವು, ಶೌಚಾಲಯ, ಉಪಾಹಾರ ಸೌಲಭ್ಯ, ದೂರದರ್ಶನ ಸಹಿತ ಹವಾನಿಯಂತ್ರಿತ ಸೌಲಭ್ಯ ಕಲ್ಪಿಸಲಾಗಿದೆ. ದರ್ಶನದ ಸಮಯದಲ್ಲಿ ವಿವಿಧ ಸೇವೆಗಳ ಮಾಹಿತಿ ಪಡೆಯಲು ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗಿದೆ. ಕಟ್ಟಡಕ್ಕೆ ಸಂಪೂರ್ಣ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದ್ದು, ಮರುಬಳಕೆಯ ಸೋಲಾರ್ ಇಂಧನ ಅಳವಡಿಸಲಾಗಿದೆ. ಪ್ರತಿ ಭವನದಲ್ಲಿ 800 ಮಂದಿ ತಂಗಲು ಅವಕಾಶವಿರುವ 16 ವಿಶಾಲ ಭವನಗಳು “ಶ್ರೀ ಸಾನ್ನಿಧ್ಯ”ದಲ್ಲಿವೆ. ಅಲ್ಲಲ್ಲಿ ಸೂಚನಾ ಫಲಕಗಳು ಹಾಗೂ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಸಂಕೀರ್ಣದ ಪ್ರವೇಶದ್ವಾರದ ಎದುರು ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ಆಕರ್ಷಕ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ದೇವರ ದರ್ಶನಕ್ಕೆ ಪ್ರಸ್ತುತ ಇರುವ ಸರತಿಸಾಲಿನ ವ್ಯವಸ್ಥೆಯನ್ನೂ ಕೆಲವು ಸುಧಾರಣೆಗಳೊಂದಿಗೆ ಮುಂದುವರಿಸಲಾಗುವುದು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಅಪ್ರಕಟಿತ ನಾಟಕ ಕೃತಿ ಆಹ್ವಾನ

Article Image

ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಅಪ್ರಕಟಿತ ನಾಟಕ ಕೃತಿ ಆಹ್ವಾನ

ಮಂಗಳೂರು: ತುಳುಕೂಟ ಕುಡ್ಲ ನಡೆಸುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಪ್ರÀಕಟಿತ ಸ್ವತಂತ್ರ ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಕೊಡಮಾಡುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿಯನ್ನು ಕುಡ್ಲದ ತುಳುಕೂಟದ ಮೂಲಕ ಕಳೆದ 45 ವರ್ಷಗಳಿಂದ ಪ್ರದಾನಿಸಲಾಗುತ್ತದೆ. ಎ 4 ಹಾಳೆಯಲ್ಲಿ 60-70 ಪುಟಗಳೊಳಗೆ ಕೃತಿ ಇರಬೇಕು. ಹಾಳೆಯ ಒಂದೇ ಬದಿಯಲ್ಲಿ ಇರಬೇಕು. ನಾಟಕ ಸ್ವತಂತ್ರ ಕೃತಿಯಾಗಿರಬೇಕು. 2025ರ ಮಕರ ಸಂಕ್ರಾಂತಿಯವರೆಗೆ ಪ್ರದರ್ಶನಗೊಳ್ಳಬಾರದು. ಪೌರಾಣಿಕ/ಚಾರಿತ್ರಿಕ/ಸಾಮಾಜಿಕ/ ಹೀಗೆ ಯಾವ ಪ್ರಕಾರವೂ ಆಗುತ್ತದೆ. ಭಾಷಾಂತರಗೊಂಡ /ಆಧಾರಿತ ಕೃತಿ ನಿರಾಕರಿಸಲಾಗುವುದು. ಲೇಖಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಸ್ವತಂತ್ರ ಕೃತಿಯೆಂದು ಸ್ವಯಂಘೋಷಿತ ಪ್ರಮಾಣಪತ್ರ ಇರಬೇಕು. ಹತ್ತು ಬಾರಿ ಪ್ರಶಸ್ತಿಯನ್ನು ಪಡೆದವರು ಸ್ಪರ್ಧೆಗೆ ಅನರ್ಹರಾಗುತ್ತಾರೆ. ನಾಟಕ ಕೃತಿಗಳನ್ನು ಜ.15ರೊಳಗೆ ಕಳುಹಿಸಬೇಕು. ಬಿಸು ಪರ್ಬದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೃತಿಗಳನ್ನು ವರ್ಕಾಡಿ ರವಿ ಅಲೆವೂರಾಯ, ಸರಯೂ ಮನೆ, ಅಂಚೆ: ಅಶೋಕ ನಗರ, ಕೋಡಿಕಲ್, ಮಂಗಳೂರು-06 ವಿಳಾಸಕ್ಕೆ ಕಳುಹಿಸಬೇಕು ಎಂದು ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ತಿಳಿಸಿದ್ದಾರೆ.

First Previous

Showing 1 of 7 pages

Next Last