ಸಿಇಟಿ: ಕೇಂದ್ರ ಪಠ್ಯಕ್ರಮದ ಪಿಯು ಅಂಕ ದಾಖಲಿಸಲು ಮೇ 20ರವರೆಗೆ ಅವಕಾಶ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 12ನೇ ತರಗತಿಯನ್ನು ಸಿಬಿಎಸ್‌ಇ (ಜಮ್ಮು ಮತ್ತು ಕಾಶ್ಮೀರ ಸೇರಿದಂತೆ), ಸಿಐಎಸ್‌ಸಿಇ, 10+2, ಐಜಿಸಿಎಸ್‌ಇ ಮತ್ತಿತರ ಬೋರ್ಡುಗಳಲ್ಲಿ 2024ರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ದಾಖಲಿಸಲು ಮೇ 14ರಿಂದ 20ರವರೆಗೆ ಆನ್‌ಲೈನ್ ಪೋರ್ಟಲ್ ಲಿಂಕ್ ಅನ್ನು ಸಕ್ರಿಯಗೊಳಿಸಲಿದೆ. ಅರ್ಹ ಅಭ್ಯರ್ಥಿಗಳು ಮೇ 20ರ ಒಳಗೆ ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳ ವಿವರಗಳನ್ನು ನಿಗದಿತ ಲಿಂಕ್‌ನಲ್ಲಿ ದಾಖಲಿಸಿ, ಅಂಕಪಟ್ಟಿಯ ಪಿಡಿಎಫ್ ಪ್ರತಿಯನ್ನು ತಪ್ಪದೇ ಅಪ್ ಲೋಡ್ ಮಾಡಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2024ಕ್ಕಿಂತ ಹಿಂದಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರೂ ಅಂಕಗಳನ್ನು ದಾಖಲಿಸಬೇಕು ಎಂದು ಸೂಚಿಸಲಾಗಿದೆ. ಅರ್ಹತಾ ಕಂಡಿಕೆ 'Ckause-Y' ಅನ್ನು ಆಯ್ಕೆ ಮಾಡಿರುವ ಅಭ್ಯರ್ಥಿಗಳೂ ಅಂಕಗಳನ್ನು ಪೋರ್ಟಲ್ ನಲ್ಲಿ ದಾಖಲಿಸಬೇಕು. ಕರ್ನಾಟಕ ದ್ವಿತೀಯ ಪಿಯುಸಿ 2024ರ ಅಂಕಗಳನ್ನು ಪ್ರಾಧಿಕಾರವು ನೇರವಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಪಡೆದುಕೊಳ್ಳುತ್ತದೆ. ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024ರ 'ನಾಟಾ' ಪರೀಕ್ಷೆಯ ಅಂಕಗಳನ್ನು ಅರ್ಹತೆಗೆ ಅನುಗುಣವಾಗಿ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.inಗೆ ಭೇಟಿ ನೀಡಲು ಕೋರಿದೆ.
