ಧಾರವಾಡ, ಸತ್ತೂರು: ವಿಶ್ವ ಪ್ರಿಕ್ಲಾಂಪ್ಸಿಯಾ ದಿನಾಚರಣೆ
Published Date: 23-May-2024 Link-Copied
ಧಾರವಾಡದ ಸತ್ತೂರಿನ ಎಸ್.ಡಿ.ಎಂ. ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ವಿಭಾಗ ಮತ್ತು ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರಿಕ್ಲಾಂಪ್ಸಿಯಾ ದಿನದ ಅಂಗವಾಗಿ, ಮೇ 22 ರಂದು ಸತ್ತೂರು ಗ್ರಾಮದಲ್ಲಿ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಬಗ್ಗೆ ಜಾಗೃತಿ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಥಾವನ್ನು ಸತ್ತೂರಿನ ಕಾರ್ಪೊರೇಟರ್ ಆದ ಬಸವರಾಜ ಅರಳವಾಡಿ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಆಶಾದೇವಿ ನೆರವಿ ಅವರು ಮಾತನಾಡುತ್ತಾ, ಗರ್ಭಿಣಿಯರು ಆಗಾಗ ವೈದ್ಯರನ್ನು ಸಂಪರ್ಕಿಸಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ಆರಂಭಿಕ ರಕ್ತದೊತ್ತಡದ ಪತ್ತೆಯು ಉತ್ತಮವಾಗಿ ನಿರ್ವಹಿಸಲು ಸಹಾಯಕಾರಿಯಾಗಿದ್ದು, ಅದನ್ನು ತಡೆಯಬಹುದು. ಆರೋಗ್ಯಕರ ಹೆರಿಗೆ ಮತ್ತು ಆರೋಗ್ಯಕರ ಮಗು ಎಲ್ಲಾ ಗರ್ಭಿಣಿಯರ ಆಶಯವಾಗಿದೆ. ಗರ್ಭಾವಸ್ಥೆಯಲ್ಲಿ ಉತ್ತಮ ಜೀವನಶೈಲಿ, ಆಹಾರ ಮತ್ತು ವ್ಯಾಯಾಮದಿಂದ ರಕ್ತದೊತ್ತಡವನ್ನು ತಡೆಯಬಹುದು ಎಂದು ಹೇಳಿದರು. ಈ ಜಾಥಾದಲ್ಲಿ 70ಕ್ಕೂ ಹೆಚ್ಚು ನರ್ಸಿಂಗ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ, ಗರ್ಭಾವಸ್ಥೆಯಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವುದು ಮತ್ತು ಅದರ ನಿರ್ವಹಣೆಯ ಕುರಿತು ವಿವರಿಸಿ ಕರಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಪುಷ್ಪಾ ಪಾಟೀಲ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಮನಿ ಬಿಜ್ಲಿ ಉಪಸ್ಥಿತರಿದ್ದರು. ಅಕ್ಷತಾ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಸುನೀತಾ ವಂದನಾರ್ಪಣೆ ಸಲ್ಲಿಸಿದರು.