ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ “ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು” ಕುರಿತು ಸಂವಾದ ಕಾರ್ಯಕ್ರಮ
Published Date: 18-Jun-2024 Link-Copied
ಮೂಡುಬಿದಿರೆ: “ವೈದ್ಯಕೀಯ ಬಹಳ ಪವಿತ್ರವಾದ ವೃತ್ತಿ. ಆ ವೃತ್ತಿಯ ಎಲ್ಲಾ ತ್ಯಾಗ ಮತ್ತು ಸವಾಲುಗಳ ನಡುವೆಯೂ ಅದು ಬಹಳ ಸಂತೃಪ್ತಿಯನ್ನು ನೀಡುವ ವೃತ್ತಿ. ಈ ನಿಟ್ಟಿನಲ್ಲಿ ನಾನು ಜಗತ್ತಿನ ಅತ್ಯಂತ ಉತ್ತಮ ವೃತ್ತಿಯಲ್ಲಿದ್ದೇನೆ” ಎಂದು ಬೆಂಗಳೂರಿನ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೊವಾಸ್ಕುಲರ್ ಸಾಯನ್ಸಸ್ ಎಂಡ್ ರಿಸರ್ಚ್ ನ ಸಹಾಯಕ ಪ್ರಾಧ್ಯಾಪಕ ಡಾ. ಪಾರಿತೋಶ್ ಬಲ್ಲಾಳ್ ಹೇಳಿದರು. ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆಸಿದ, “ನೀಟ್ ಪರೀಕ್ಷೆಯ ಯಶಸ್ಸಿನ ಸೂತ್ರ” ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ವೈದ್ಯನಾಗಲು ಪಡಬೇಕಾದ ತ್ಯಾಗ, ಶ್ರಮದ ಬಗ್ಗೆ ವಿದ್ಯಾರ್ಥಿಯೊಬ್ಬನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಹೃದಯ ತಜ್ಞನಾಗಲು ಹದಿಮೂರು ವರ್ಷ ಬೇಕಾಗುತ್ತದೆ ಎಂದರು. “ಈ ಎರಡು ವರ್ಷಗಳಲ್ಲಿ ನೀವು ಎದುರಿಸುವ ಕಷ್ಟಗಳು ನಿಮ್ಮ ಭವಿಷ್ಯತ್ತಿಗೆ ನಿಮ್ಮನ್ನು ತಯಾರಿಸುತ್ತದೆ. ದೊಡ್ಡ ಕನಸನ್ನು ಕಾಣಲು ಹಿಂಜರಿಯಬೇಡಿ. ಪ್ರಥಮ ಪದವಿಪೂರ್ವದಲ್ಲಿ ನಾನು ಕಡಿಮೆ ಅಂಕಗಳನ್ನು ಗಳಿಸಿದ್ದೆ. ಆಗ ನನ್ನ ಪ್ರಾಂಶುಪಾಲರ ಮಾರ್ಗದರ್ಶನದಿಂದ ಆದ್ಯತೆಗಳಿಗನುಗುಣವಾಗಿ ನನ್ನ ಚಟುವಟಿಗಳನ್ನು ಆಯ್ದುಕೊಂಡು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ನಿಮ್ಮ ಪ್ರಸ್ತುತ ಪರಿಸ್ಥಿತಿ ಹೇಗೆಯೇ ಇದ್ದರೂ ಉತ್ಕ್ರಷ್ಟವಾದುದನ್ನು ಸಾಧಿಸಲು ಸಾಧ್ಯ. ನಿಮ್ಮ ಕಲಿಕೆಯ ಶೈಲಿಯನ್ನು ಅರಿತುಕೊಳ್ಳಿ, ಉತ್ತಮ ನೆನಪಿಗಾಗಿ ನೀವು ಗಳಿಸಿದ ಜ್ಞಾನವನ್ನು ನಿಮ್ಮ ಪರಿಸರದ ಜೊತೆ ಹೊಂದಿಸಿ, ಅದರ ಜೊತೆಗೆ ವ್ಯಾಯಾಮವನ್ನು ಮಾಡಿ, ನಿಮ್ಮ ಕಲಿಕಾ ಸಾಮಾಗ್ರಿಗಳನ್ನು ಸರಿಯಾಗಿ ಜೋಡಿಸಿಕೊಳ್ಳಿ, ನಿಮ್ಮ ಗುರಿಯನ್ನು ದೃಶ್ಯೀಕರಿಸಿ, ಅನೇಕ ಪುನರಾವರ್ತನೆಗಳನ್ನು ಮಾಡಿ” ಎಂದರು. ಹೀಗೆ ಅವರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಡಾ ಪಾರಿತೋಶ್ ಬಲ್ಲಾಳರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಗುರಿಯನ್ನು ತಲುಪಲು ಅವರು ನೀಡಿದ ಸಲಹೆಯನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನೋಲಿಯ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.