Article Image 1 Article Image 2

ಎಸ್.ಡಿ.ಎಂ. ಎನ್.ಎಸ್.ಎಸ್. ಘಟಕದಿಂದ ಡೆಂಗ್ಯೂ ಜಾಗೃತಿ ಕಾರ್ಯಕ್ರಮ

Article Image

ಎಸ್.ಡಿ.ಎಂ. ಎನ್.ಎಸ್.ಎಸ್. ಘಟಕದಿಂದ ಡೆಂಗ್ಯೂ ಜಾಗೃತಿ ಕಾರ್ಯಕ್ರಮ

ಉಜಿರೆಯ ಶ್ರೀ ಧ. ಮಂ. ಸ್ವಾಯತ್ತ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಹಾಗೂ ಆರೋಗ್ಯ ಇಲಾಖೆ, ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಡೆಂಗ್ಯೂ ಜ್ವರ ಕುರಿತು ಜಾಗೃತಿ ಕಾರ್ಯಕ್ರಮ ಆ.1 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿ, ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಕಛೇರಿಯ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಕ್ಷಿತ್ ಆರ್. ಮಾತನಾಡಿ, ಡೆಂಗ್ಯೂ ಜ್ವರದ ಲಕ್ಷಣಗಳ ಕುರಿತು ಮಾಹಿತಿ ನೀಡಿದರು. "ಹೆಚ್ಚಿನ ಪೌಷ್ಟಿಕ ಆಹಾರ ಸೇವನೆ, ವಿಟಮಿನ್ ಸಿ ಅಂಶವುಳ್ಳ ಹಣ್ಣು ತಿನ್ನುವುದರ ಮೂಲಕ ಮನೆಯಲ್ಲೇ ಡೆಂಗ್ಯೂ ಜ್ವರಕ್ಕೆ ಮದ್ದು ಮಾಡಬಹುದು. ಸಣ್ಣ ಸೊಳ್ಳೆಯಿಂದ ಡೆಂಗ್ಯೂ ಹರಡಿದರೂ ಸಹ ಹಲವಾರು ಬದಲಾವಣೆಯನ್ನು ಮಾಡುತ್ತದೆ. ಡೆಂಗ್ಯೂ ಎನ್ನುವುದು ವಾಸ್ತವದಲ್ಲಿ ಸರಳ, ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ರೋಗ ಬಂದ ನಂತರ ಔಷಧ ಹುಡುಕುವುದಕ್ಕಿಂತ ಅದಕ್ಕೂ ಮುಂಚಿತವಾಗಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ" ಎಂದರು. “ಮನೆಯ ಸುತ್ತಮುತ್ತ ಎಷ್ಟೋ ಕಡೆಗಳಲ್ಲಿ ನಮಗೆ ತಿಳಿಯದೇ ನೀರು ನಿಲ್ಲಲು ದಾರಿ ಮಾಡಿಕೊಟ್ಟು, ಸೊಳ್ಳೆಗಳ ಸಂತಾನೋತ್ಪತ್ತಿಗೆ ನಾವೇ ಅನುವು ಮಾಡಿಕೊಡುತ್ತಿದ್ದೇವೆ. ಕಸವನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಡೆಂಗ್ಯೂ ಹರಡದಂತೆ ಮಾಡಬಹುದು. ಬೇವಿನ ಎಣ್ಣೆ ಹಚ್ಚಿಕೊಳ್ಳುವುದು, ಸಂಜೆಯ ಸಮಯದಲ್ಲಿ ಅಡಿಕೆ ಸಿಪ್ಪೆಯ ಹೊಗೆ ಹಾಕುವುದು ಮುಂತಾದವುಗಳ ಮೂಲಕ ಡೆಂಗ್ಯೂ ತಡೆಗಟ್ಟಬಹುದು. ವಿದ್ಯಾರ್ಥಿಗಳಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ನಿಮ್ಮದು" ಎಂದು ಅವರು ಕಿವಿಮಾತು ಹೇಳಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಅವರು ಎನ್ನೆಸ್ಸೆಸ್ ಸ್ವಯಂಸೇವಕರಿಗೆ ಡೆಂಗ್ಯೂ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಿರ್ವಹಿಸಿದರು. ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಕಛೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮನಾಥ್ ಎಸ್.ಆರ್., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪಾ, ಎಸ್.ಡಿ.ಎಂ. ಕಾಲೇಜು ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರೊ. ದೀಪಾ ಆರ್.ಪಿ. ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಯಂಸೇವಕಿ ದೀಪಶ್ರೀ ವಂದಿಸಿ, ಚಿಂತನಾ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ, ಆ.3: ‘ನೋ ಯುವರ್ ಅಕೌಂಟ್ಸ್’ ವಿಶೇಷ ಮಾಹಿತಿ ಕಾರ್ಯಕ್ರಮ

Article Image

ಉಜಿರೆ, ಆ.3: ‘ನೋ ಯುವರ್ ಅಕೌಂಟ್ಸ್’ ವಿಶೇಷ ಮಾಹಿತಿ ಕಾರ್ಯಕ್ರಮ

ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕಗಳ ವತಿಯಿಂದ ‘ನೋ ಯುವರ್ ಅಕೌಂಟ್ಸ್’ (Know Your Accounts) ವಿಶೇಷ ಮಾಹಿತಿ ಕಾರ್ಯಕ್ರಮ ಆ.3ರಂದು ಜರಗಿತು. ಕಾಲೇಜಿನ ಅಕೌಂಟ್ಸ್ ವಿಭಾಗದ ಮುಖ್ಯಸ್ಥ ದಿವಾಕರ ಪಟವರ್ಧನ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಬ್ಯಾಂಕ್ ಖಾತೆ ಬಳಕೆ ಹಾಗೂ ಹಣಕಾಸು ವ್ಯವಹಾರದ ಬಗ್ಗೆ ಅವರು ಮಾಹಿತಿ ನೀಡಿದರು. “ಬ್ಯಾಂಕ್ ವ್ಯವಹಾರಗಳ ಬಗ್ಗೆ ಎಲ್ಲರಲ್ಲೂ ಸಾಮಾನ್ಯ ಜ್ಞಾನ ಇರಲೇಬೇಕು. ಇಲ್ಲವಾದರೆ ಅದರಿಂದ ಉಂಟಾಗುವ ಸಮಸ್ಯೆಗಳು ಹಲವಾರು” ಎಂದು ಅವರು ಕಿವಿಮಾತು ಹೇಳಿದರು. “ನೇರ ನಗದು ವ್ಯವಹಾರಕ್ಕಿಂತ ಮೊಬೈಲ್ ಮೂಲಕದ (ಆನ್ಲೈನ್) ಅಥವಾ ಚೆಕ್ ಮೂಲಕದ ಹಣದ ವ್ಯವಹಾರ ಉತ್ತಮ. ಯಾಕೆಂದರೆ ಇದರಲ್ಲಿ ಕಪ್ಪು ಹಣ ನಿರ್ಮಾಣವಾಗುವ ಸಾಧ್ಯತೆ ಕಡಿಮೆ ಇದೆ” ಎಂದು ಅವರು ಸಲಹೆ ನೀಡಿದರು. “ಹಣವನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸುವುದೇ ನಿಜವಾದ ಅಕೌಂಟೆಬಿಲಿಟಿ” ಎಂದರು. ಬ್ಯಾಂಕಿಂಗ್ ವಿಚಾರಗಳಾದ ಜರ್ನಲ್ ಎಂಟ್ರಿ, ಅಸೆಟ್, ಲಯೇಬಿಲಿಟಿ ಇತ್ಯಾದಿ ಕುರಿತು ಮಾಹಿತಿ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ಪ್ರೊ. ದೀಪ ಆರ್.ಪಿ. ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು. ಸ್ವಯಂಸೇವಕಿಯರಾದ ಅನುಷ ಬಿ.ಕೆ. ಹಾಗೂ ಕವನ ಕಾರ್ಯಕ್ರಮ ನಿರೂಪಿಸಿದರು.

ಸತ್ತೂರು, ಧಾರವಾಡ: “ಮಿಷನ್ ಪ್ರಿಸನ್ 2.0”

Article Image

ಸತ್ತೂರು, ಧಾರವಾಡ: “ಮಿಷನ್ ಪ್ರಿಸನ್ 2.0”

ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಚರ್ಮರೋಗ ಚಿಕಿತ್ಸಾ ವಿಭಾಗವು ಕೇಂದ್ರ ಕಾರಾಗೃಹ ಮತ್ತು ಜಿಲ್ಲಾ ಆಸ್ಪತ್ರೆ, ಧಾರವಾಡ ಹಾಗೂ ಹುಬ್ಬಳ್ಳಿ-ಧಾರವಾಡ ಚರ್ಮರೋಗ ಸಂಘದ ಸಹಯೋಗದಿಂದ ಕೇಂದ್ರ ಕಾರಾಗೃಹದ ಬಂಧಿಗಳಿಗೆ ಉಚಿತ ಚರ್ಮರೋಗ ಮಾಹಿತಿ, ಚಿಕಿತ್ಸೆ ಮತ್ತು ಔಷಧ ವಿತರಣಾ ಕಾರ್ಯಕ್ರಮವನ್ನು ದಿನಾಂಕ ಆಗಸ್ಟ್ 05, 2024 ರಂದು “ಮಿಷನ್ ಪ್ರಿಸನ್ 2.0” ಎಂಬ ಧ್ಯೇಯೆಯೊಂದಿಗೆ ಧಾರವಾಡದ ಕಾರಗೃಹದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾರಾಗೃಹದ ಅಧೀಕ್ಷಕರಾದ ಪಿ. ಮಹಾದೇವ ನಾಯ್ಕ ಅವರು ಉದ್ಘಾಟಿಸಿದರು. ಕಾರಾಗೃಹದ ಸಹಾಯಕ ಅಧೀಕ್ಷಕರಾದ ಶಹಾಬುದ್ದಿನ ಕೆ., ನಿರ್ಮಲ, ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಎಸ್. ಎನ್. ಹೊನಕೇರಿ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಆಸ್ಪತ್ರೆಯ ಹಿರಿಯ ಚರ್ಮರೋಗ ತಜ್ಞರಾದ ಡಾ. ಗೌರಿ ಬೆಲ್ಲದ ಹಾಗೂ ಎಸ್.ಡಿ.ಎಂ. ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ನವೀನ ಕೆ. ಎನ್. ಮತ್ತು ಡಾ, ಶರತ್‌ಚಂದ್ರ ಅಥಣಿಕರ ಉಪಸ್ಥಿತರಿದ್ದರು. ಕಾರಾಗೃಹದ ಸುಮಾರು 180ಕ್ಕೂ ಹೆಚ್ಚು ಬಂಧಿಗಳಿಗೆ ಚರ್ಮರೋಗದ ಬಗ್ಗೆ ತಿಳುವಳಿಕೆ ನೀಡಿ ಉಚಿತ ಔಷಧವನ್ನು ವಿತರಿಸಲಾಯಿತು. ಎಸ್.ಡಿ.ಎಂ. ಆಸ್ಪತ್ರೆಯ ಚರ್ಮರೋಗ ಚಿಕಿತ್ಸಾ ತಂಡದಲ್ಲಿ ಡಾ. ಶ್ವೇತಾ ಪ್ರಭು, ಡಾ. ಸೌಮ್ಯಶ್ರಿ, ಡಾ. ಸಂಜನಾ, ಡಾ. ವಾಣಿ, ಡಾ. ಸುಷ್ಮಾ ಮತ್ತಿತರರು ತಪಾಸಣೆ ನಡೆಸಿದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಘಟಕಗಳ ಉದ್ಘಾಟನೆ

Article Image

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಘಟಕಗಳ ಉದ್ಘಾಟನೆ

ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕನನ್ನಾಗಿ ಮಾಡುವುದೇ ಸ್ಕೌಟ್ಸ್ ಮತ್ತು ಗೈಡ್ಸ್ ನ ಧ್ಯೇಯೋದ್ಧೇಶ. ಪ್ರತಿಯೊಬ್ಬರು ಇದರ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ನ ಸೇರಲು ತುಂಬಾ ಅವಕಾಶಗಳಿವೆ ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ನಿಮಗೆ ವಿದ್ಯೆ ನೀಡುತ್ತಿರುವ ಪ್ರತಿ ಶಿಕ್ಷಕರನ್ನು ಪ್ರತಿದಿನ ಸ್ಮರಿಸಬೇಕು. ಬದುಕಿನಲ್ಲಿ ಶಿಸ್ತು ಮುಖ್ಯ. ಆ ಶಿಸ್ತಿನ ಪಾಠವನ್ನು ಶಿಕ್ಷಕರು ನಿಮಗೆ ಕಲಿಸುತ್ತಾರೆ. ಆ ಮೂಲಕ ನೀವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು. ಒಬ್ಬ ನಾಗರಿಕನಾಗಿ ನನ್ನ ಜವಬ್ದಾರಿಗಳೇನು ಎಂದು ಅರಿತುಕೊಳ್ಳಬೇಕು. ನಾವೆಲ್ಲಾ ಪರಿಸರದ ಕೂಸುಗಳು ಪರಿಸರದೊಂದಿಗೆ ನಮ್ಮ ಜೀವನ ಸಾಗಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧಿಯಾ ಅಭಿಪ್ರಾಯಪಟ್ಟರು. ಮೂಡುಬಿದ್ರಿ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್-ರೇಂಜರ್ಸ್, ಬನ್ನಿ, ಕಬ್ಸ್ ಮತ್ತು ಬುಲ್ ಬುಲ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಪರಿಸರದಲ್ಲಿ ಜೀವಿಸುತ್ತಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಎಲ್ಲಾ ಪ್ರಾಣಿ ಪಕ್ಷಿಗಳನ್ನು, ಮನುಷ್ಯರನ್ನು ಪ್ರೀತಿಯಿಂದ ಕಾಣಬೇಕು. ಇದನ್ನು ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ. ದೇವರಲ್ಲಿ ನಂಬಿಕೆ, ಮಾನಸಿಕ ಹಾಗೂ ದೈಹಿಕವಾಗಿ ಸದೃಢನನ್ನಾಗಿಸುವುದು, ಹಾಗೂ ಸೇವಾ ಮನೋಭಾವನೆಯನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸ್ಕೌಟ್ಸ್ ಸಮವಸ್ತ್ರ ಧರಿಸಿದಾಗ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬರುತ್ತದೆ. ಈ ಮೂಲಕ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾರೇ ಕಷ್ಟದಲ್ಲಿದ್ದರೂ ಅವರ ಸಹಾಯಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಸದಾ ತಯಾರಾಗಿರುತ್ತದೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಶಾಲೆಯಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಸೇರಬೇಕು. ಆ ಮೂಲಕ ಕ್ರೀಯಾಶೀಲ ವ್ಯಕ್ತಿತ್ವ ರೂಪಿಸಿಕೊಂಡು ಪರಿಸರವನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ಯಾರು ಬೇರೆಯವರಿಗೋಸ್ಕರ ಬದುಕುತ್ತಾರೊ ಅವರ ಹೆಸರು ಅಜರಾಮರವಾಗಿರುತ್ತದೆ. ಬದುಕು ಹೇಗಿದೆ ಅದನ್ನು ನಾವು ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನು ಇಂತಹ ಘಟಕಗಳ ಮೂಲಕ ಕಲಿಯಬೇಕು. ದೇಶಕ್ಕೆ ನಿಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಕೊಡುಗೆಗಳನ್ನು ನೀಡಿ. ಸಮಾಜ ಸೇವೆ ಬದುಕಿನ ಮೂಲ ಮಂತ್ರವಾಗಲಿ ಎಂದರು. ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ರಾಜ್ಯ ಸಂಘಟಕರಾದ ಪ್ರಭಾಕರ್ ಭಟ್, ದಕ್ಷಿಣ ಕನ್ನಡ ಜಿಲ್ಲಾ ಸಂಘಟಿಕರಾದ ಭರತ್‌ಕುಮಾರ್, ಮೂಡಬಿದಿರೆ ತಾಲೂಕಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿಗಳಾದ ಭಾರತಿ ನಾಯಕ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸಿಬಿಎಸ್‌ಸಿ ಶಾಲೆಯ ಸಂಯೋಜಕರಾದ ಪ್ರಸಾದ್, ಸ್ಕೌಟ್ಸ್ ಮತ್ತು ಗೈಡ್ಸ್ ಮಾಸ್ಟರ್ಸ್, ರೋವರ್ಸ್-ರೇಂಜರ್ಸ್ ಲೀಡರ್ಸ್, ಬನ್ನಿ, ಕಬ್ಸ್ ಮತ್ತು ಬುಲ್ ಬುಲ್ ಮಾಸ್ಟರ್ಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ಗಳನ್ನು ವಿತರಿಸಲಾಯಿತು. ಉಪ ಮುಖ್ಯೋಪಾಧ್ಯಾಯರು ಜಯಶೀಲ ಕಾರ್ಯಕ್ರಮವನ್ನು ನಿರೂಪಿಸಿದರು, ವಿದ್ಯಾರ್ಥಿನಿ ಮಾನಿತ ಸ್ವಾಗತಿಸಿದರು, ಮಾನ್ಯ ವಂದಿಸಿದರು, ರೋವರ್ಸ್ ಲೀಡರ್ ಪ್ರದೀಪ್ ಅಥಿತಿಗಳನ್ನು ಪರಿಚಯಿಸಿದರು.

ಆಟಿಡೊಂಜಿ ಕೆಸರ್ದ ಕೂಟದ ಕಾರ್ಯಕ್ರಮ

Article Image

ಆಟಿಡೊಂಜಿ ಕೆಸರ್ದ ಕೂಟದ ಕಾರ್ಯಕ್ರಮ

ಕಾರ್ಕಳ ಸಾಂತ್ರಬೆಟ್ಟು ಗುತ್ತುಮನೆತನದ ಬಾಕಿಮಾರು ಗದ್ದೆಯಲ್ಲಿ ಭಾರತೀಯ ಜೈನ್ ಮಿಲನ್ ಕಾರ್ಕಳ, ಯುವ ಜೈನ್ ಮಿಲನ್ ಕಾರ್ಕಳ, ಸನ್ಮಿತ್ರ ಜೈನ್ ಅಸೋಸಿಯೇಷನ್ ಕಾರ್ಕಳ ಹಾಗೂ ಜಿನವಾಣಿ ಮಹಿಳಾ ಸಮಾಜ ಕಾರ್ಕಳ ಇವರುಗಳ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ಕೆಸರ್ದ ಕೂಟ ಕಾರ್ಯಕ್ರಮವು ಜು.28ರಂದು ವಿವಿಧ ಆಟೋಟಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಿತು. ಇದರ ಉದ್ಘಾಟನಾ ಸಮಾರಂಭವು ದಿ. ಶ್ರೀಮತಿ ಸುಮಿತ್ರಮ್ಮ ವೇದಿಕೆ ಸಾಂತ್ರಬೆಟ್ಟು ಇದರಲ್ಲಿ ಸುಬೆದಾರ್ ಅಜಿತ್ ಕುಮಾರ್ ಜೈನ್(ಮಾಜಿ ಭೂ ಸೇನಾ ಸೈನಿಕರು) ರೆಂಜಾಳ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ವಲಯ ಅಧ್ಯಕ್ಷರಾದ ಸುದರ್ಶನ್ ಕುಮಾರ್ ಬಂಟ್ವಾಳ, ನಿರ್ದೇಶಕರಾದ ಯುವರಾಜ ಬಲಿಪ, ವಲಯ ಉಪಕಾರ್ಯದರ್ಶಿ ಶಶಿಕಲಾ ಕೆ. ಹೆಗಡೆ ಹಾಗೂ ಸಾಂತ್ರಬೆಟ್ಟು ಮನೆತನದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು ಕಾರ್ಕಳ ಜೈನ್ ಮಿಲನ್ ಅದ್ಯಕ್ಷ ಅಶೋಕ HM ಅಧ್ಯಕ್ಷತೆ ವಹಿಸಿದ್ದರು ಹಾಗೂ ರೆಂಜಾಳ, ಬಜೆಗೋಳಿ, ಕೆರ್ವಾಶೆ, ಶಿರ್ಲಾಲ್, ಅಜೆಕಾರ್ ಜೈನ್ ಮಿಲನ್ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ಜನ ಭಾಗವಹಿಸಿ 180 ವೀರ, ವೀರಾಂಗನೇಯರು ವೀರ ಕುವರ ವೀರ ಕುವರಿಯವರು ಭಾಗವಹಿಸಿ ಬಹುಮಾನಗಳಿಸಿರುತ್ತಾರೆ.

ಕೀರ್ತಿಶೇಷ ಪ್ರೊ. ಎನ್. ಜಿ. ಪಟವರ್ಧನ್ ಬಗ್ಗೆ ವಿಚಾರ ಸಂಕಿರಣ

Article Image

ಕೀರ್ತಿಶೇಷ ಪ್ರೊ. ಎನ್. ಜಿ. ಪಟವರ್ಧನ್ ಬಗ್ಗೆ ವಿಚಾರ ಸಂಕಿರಣ

ಕೀರ್ತಿಶೇಷ ಪ್ರೊ. ಎನ್.ಜಿ. ಪಟವರ್ಧನ್ ಸ್ಮಾರಕ ದತ್ತಿನಿಧಿಯೊಂದನ್ನು ಎಸ್.ಡಿ.ಎಂ. ಕಾಲೇಜಿನಲ್ಲಿ ಸ್ಥಾಪಿಸಿ ಪ್ರತಿವರ್ಷ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಭಾಗಿತ್ವದಲ್ಲಿ ವರ್ಷಕ್ಕೊಂದು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಯುರ್ವೇದ ಪ್ರಾಧ್ಯಾಪಕರಾದ ಹಾಗೂ ಪ್ರೊ. ಎನ್. ಜಿ. ಪಟವರ್ಧನರ ಪುತ್ರ ಡಾ. ಕಿಶೋರ್ ಪಟವರ್ಧನ್ ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಾಲೇಜಿನ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಎನ್.ಜಿ. ಪಟವರ್ಧನ್ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಬದುಕಿನ ಎಲ್ಲಾ ಸವಾಲುಗಳನ್ನು, ಸಮಸ್ಯೆಗಳನ್ನು ಧನಾತ್ಮಕವಾಗಿ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಸ್ವೀಕರಿಸಿದ ದಿವಂಗತ ಎನ್. ಜಿ. ಪಟವರ್ಧನ್ ಭಾವಪ್ರಧಾನವಾದ ಚುಟುಕುಗಳು, ಹನಿಗವನಗಳು, ಲಲಿತಪ್ರಬಂಧ ಮತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಸದಾ ಹಸನ್ಮುಖಿಯಾಗಿ ಭಾವಜೀವಿಯಾಗಿದ್ದ ಅವರ ಎಲ್ಲಾ ಕೃತಿಗಳು ಸರಳವಾಗಿದ್ದು ಸುಲಭ ಗ್ರಾಹ್ಯವಾಗಿವೆ ಎಂದರು. ವಿಚಾರ ಸಂಕಿರಣ ಉದ್ಘಾಟಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಮಾತನಾಡಿ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಪ್ರೊ. ಪಟವರ್ಧನ್ ಅಜಾತ ಶತ್ರುವಾಗಿದ್ದು, ಸಹೃದಯ ಸಾಹಿತಿ, ಉತ್ತಮ ಗಾಯಕರಾಗಿ, ಕಾಲೇಜಿನಲ್ಲಿ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸುವಲ್ಲಿ ಉತ್ತಮ ಸೇವೆ ನೀಡಿದ್ದರು. ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಅವರು ಕ್ರೀಡಾಪಟುವಾಗಿಯೂ, ಉತ್ತಮ ಕೃಷಿಕರಾಗಿಯೂ ಚಿರಪರಿಚಿತರಾಗಿದ್ದರು ಎಂದು ಅವರ ಸೇವೆ, ಸಾಧನೆಯನ್ನು ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರ ಹೆಗ್ಡೆ ಮಾತನಾಡಿ, ಸೃಜನಶೀಲ ಸಾಹಿತಿಯಾಗಿದ್ದ ಪ್ರೊ. ಎನ್. ಜಿ. ಪಟವರ್ಧನ್ ಆದರ್ಶ ಅಧ್ಯಾಪಕರಾಗಿ, ಸಂತೃಪ್ತ, ಸಾರ್ಥಕ ಜೀವನ ನಡೆಸಿದ್ದಾರೆ. ಅನಾರೋಗ್ಯದ ಸಂದರ್ಭ ಉತ್ತಮ ಶುಶ್ರೂಷೆ ನೀಡಿ ಅವರ ಸೇವೆ ಮಾಡಿದ ಪತ್ನಿ ಮತ್ತು ಮಕ್ಕಳನ್ನು ಅಭಿನಂದಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮೀ ಪಟವರ್ಧನ್ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ರಾಜೇಶ್ವರಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬೋಜಮ್ಮ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಯದುಪತಿ ಗೌಡ ಧನ್ಯವಾದವಿತ್ತರು. ನಿವೃತ್ತ ಪ್ರಾಂಶುಪಾಲ ಪ್ರೊ. ಟಿ. ಕೃಷ್ಣಮೂರ್ತಿ ಪ್ರೊ. ಎನ್. ಜಿ. ಪಟವರ್ಧನರ ವೃತ್ತಿ ಮತ್ತು ವ್ಯಕ್ತಿತ್ವದ ಬಗ್ಗೆ ಹಾಗೂ ಕನ್ನಡ ಉಪನ್ಯಾಕ ಪ್ರೊ. ದಿವಾಕರ ಅವರು ಪಟವರ್ಧನರ ಸಾಹಿತ್ಯ, ಸಾಧನೆ ಬಗ್ಗೆ ಉಪನ್ಯಾಸ ನೀಡಿದರು.

ಉಜಿರೆ: ರೋಟರಿ ಕ್ಲಬ್ ನಿಂದ ಗಿಡ ನೆಡುವ ಕಾರ್ಯಕ್ರಮ ಮತ್ತು ಯಶೋವನದಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಆಚರಣೆ

Article Image

ಉಜಿರೆ: ರೋಟರಿ ಕ್ಲಬ್ ನಿಂದ ಗಿಡ ನೆಡುವ ಕಾರ್ಯಕ್ರಮ ಮತ್ತು ಯಶೋವನದಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಆಚರಣೆ

ಉಜಿರೆಯ ಯಶೋವನ ಆರ್ಬೋರೇಟಮ್ ನ ಕುವೆಂಪು ವನ ಮತ್ತು ಪಂಪವನದಲ್ಲಿ ಬೆಳ್ತಂಗಡಿಯ ರೋಟರಿ ಕ್ಲಬ್ ವತಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ ಮಾತನಾಡಿ, ಪ್ರಕೃತಿ ಈ ನೆಲದ ಸಂಪತ್ತು,ಇದನ್ನು ಸಂರಕ್ಷಿಸುವ ಜೊತೆಗೆ ಪ್ರಕೃತಿಯನ್ನು ಸುಸ್ಥಿರ ಅಭಿವೃದ್ಧಿಯೆಡೆಗೆ ಸಾಗಿಸುವಲ್ಲಿ ನಮ್ಮೆಲ್ಲರ ಮಹತ್ವದ ಜವಾಬ್ದಾರಿ ಇದೆ. ಈ ಕಾರಣಕ್ಕೆ ನಾವು ವರ್ಷಕ್ಕೆ ಒಮ್ಮಯಾದರು ಗಿಡ ನೆಟ್ಟು ಪೋಷಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀಗಂಧ, ಮಾವು, ಹಲಸು ಇತ್ಯಾದಿ ಗಿಡಗಳನ್ನು ನೆಡಲಾಯಿತು . ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಸೇರಿದಂತೆ, ರೋಟರಿ ಕ್ಲಬ್ ನ ಸದಸ್ಯರುಗಳಾದ ಸೋನಿಯಾ ವರ್ಮಾ, ವಿದ್ಯಾ ಕುಮಾರ್, ಶ್ರೀಧರ್ ಕೆ.ವಿ, ವೈಕುಂಠ ಪ್ರಭು, ಶ್ರೀಕಾಂತ್ ಕಾಮತ್, ಗೋಪಾಲಕೃಷ್ಣ ಗುಲ್ಲೋಡಿ, ಪ್ರಶಾಂತ್ ಜೈನ್, ಸ್ಮೀತಾ ಜೈನ್, ಸಾತ್ವೀಕ್ ಜೈನ್, ನಿಯತಿ ಜೈನ್ ಮತ್ತು ಆದರ್ಶ್ ಕಾರಂತ್ ಉಪಸ್ಥಿತರಿದ್ದರು.

ಮಾನವ-ಪ್ರಕೃತಿಯ ಸಮತೋಲನಕ್ಕೆ ಸಸ್ಯ ಶ್ಯಾಮಲಾ ಅಭಿಯಾನ

Article Image

ಮಾನವ-ಪ್ರಕೃತಿಯ ಸಮತೋಲನಕ್ಕೆ ಸಸ್ಯ ಶ್ಯಾಮಲಾ ಅಭಿಯಾನ

ಪ್ರಕೃತಿ ಹಚ್ಚ ಹಸಿರಾಗಿದ್ದರೆ ಮಾನವನಿಗೆ ಉಸಿರು. ಮನುಷ್ಯ ಮತ್ತು ಪ್ರಕೃತಿಯ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಇದ್ದರೆ ಬದುಕು ಹಸನಾಗುತ್ತದೆ. ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಸ್ಯ ಶ್ಯಾಮಲಾ ಎಂಬ ಘೋಷ ವಾಕ್ಯದಡಿ ಮೂಡುಬಿದಿರೆಯಿಂದ ವೇಣೂರಿನವರಗೆ ವಿವಿಧ ತಳಿಗಳ ಒಂದು ಸಾವಿರ ಸಸ್ಯಗಳನ್ನು ನೆಡುವ ಸಂಕಲ್ಪವನ್ನು ತೊಟ್ಟು ಈಗಾಗಲೇ ಕಾರ್ಯತತ್ಪರವಾಗಿದೆ. ಇಂದು ನೆಡುವ ಗಿಡ ಸಾವಿರ ಜನರಿಗೆ ಆಶ್ರಯವಾಗಬೇಕು. ಸಮಾಜದಲ್ಲಿ ಪರಿಸರ ಜಾಗೃತಿ ಮೂಡಬೇಕು. ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮವು ಅರಳಿ ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಮೂಡಬೇಕು. ಕಾರ್ಯಕ್ರಮದ ಉದ್ದೇಶ ಸಫಲವಾಗಬೇಕು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ನುಡಿದರು. ಅವರು ಹೊಸಂಗಡಿ ಗ್ರಾಮ ಪಂಚಾಯಿತಿ ಸಮೀಪದ ಬಡಕೋಡಿ ಕಿರಿಂಬಿ ಕೆರೆಯ ಹತ್ತಿರ ಸಸ್ಯ ಶ್ಯಾಮಲಾ ಘೋಷವಾಕ್ಯದಡಿ ಒಂದು ಸಾವಿರ ಗಿಡ ನೆಡುವ ಬೃಹತ್ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಸ್ಯ ಶ್ಯಾಮಲಾ ಸಂಕಲ್ಪಕ್ಕೆ ಗ್ರಾಮ ಪಂಚಾಯಿತಿ ಹೊಸಂಗಡಿ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಪದಾಧಿಕಾರಿಗಳು ಸಹಯೋಗ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ಹೆಗ್ಡೆ ವಹಿಸಿದ್ದರು. ಎ. ಜೀವಂಧರ್ ಕುಮಾರ್, ಆನುವಂಶೀಯ ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಶಿವಯ್ಯ ಎಸ್. ಎಲ್., ಟೆಂಪಲ್ ಟೌನ್ ಮೂಡುಬಿದಿರೆ ರೋಟರಿ ಅಧ್ಯಕ್ಷರಾದ ಪೂರ್ಣಚಂದ್ರ ಜೈನ್, ಪ್ರಗತಿಪರ ಕೃಷಿಕರಾದ ವಿದ್ಯಾನಂದ ಜೈನ್ ಬಡಕೋಡಿ, ರೋ. ರಾಘವೇಂದ್ರ ಭಟ್ ನಿಕಟಪೂರ್ವ ಸಹಾಯಕ ಗವರ್ನರ್ ರೋಟರಿ ಜಿಲ್ಲಾ 3181 ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ತೇಜಸ್ವೀ ಭಟ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಐ.ಟಿ. ಕ್ಲಬ್ ಉದ್ಘಾಟನೆ

Article Image

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಐ.ಟಿ. ಕ್ಲಬ್ ಉದ್ಘಾಟನೆ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ 2024-25ನೇ ಸಾಲಿನ 'ಐ.ಟಿ. ಕ್ಲಬ್' ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇಂದು (ಜು.29) ಜರಗಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಉಜಿರೆಯ ಪ್ರಕಾಶ ಎಲೆಕ್ಟ್ರಾನಿಕ್ಸ್ ಇದರ ಪಾರ್ಟ್ನರ್ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಮನಾ ಶೆಟ್ಟಿ, "ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ನಾವು ಅದರ ಜೊತೆ ಸಾಗಬೇಕು ಹೊರತು ಹಿಂದುಳಿಯಬಾರದು” ಎಂದರು. “ತಂತ್ರಜ್ಞಾನ ಕ್ಷೇತ್ರ ಜನರಿಗೆ ಸದಾ ಪೂರಕವಾಗಿ ಇರಬೇಕು. ಸಮಾಜಕ್ಕೆ ನಮ್ಮ ಕೈಲಾದಷ್ಟು ಕೊಡುಗೆ ನೀಡುವುದರ ಕಡೆಗೆ ನಮ್ಮ ಗಮನ ಇರಲಿ" ಎಂದು ಅವರು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಆಧುನಿಕತೆಯ ಯುಗದಲ್ಲಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ವಿದ್ಯಾರ್ಥಿ ಹಂತದಲ್ಲಿ ಉತ್ತಮ ಹಾಗೂ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಕಾಲೇಜಿನಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಅವಕಾಶದಂತೆ ಸ್ವೀಕರಿಸಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಐ.ಟಿ. ಕ್ಲಬ್ ಸಂಯೋಜಕರಿಗೆ ಬ್ಯಾಡ್ಜ್ ನೀಡಿ ಅಭಿನಂದಿಸಲಾಯಿತು. ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ತಯಾರಿಸಿದ ಭಿತ್ತಿಪತ್ರ ಅನಾವರಣಗೊಳಿಸಲಾಯಿತು. ವಿಭಾಗದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ವಿಭಾಗ ಮುಖ್ಯಸ್ಥ ಶೈಲೇಶ್ ಕುಮಾರ್ ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಮೋನಲ್ ಸ್ವಾಗತಿಸಿದರು. ಆಶಾ ಹಾಗೂ ತಂಡ ಪ್ರಾರ್ಥಿಸಿದರು. ಐ. ಟಿ. ಕ್ಲಬ್ ಕಾರ್ಯದರ್ಶಿ ಅಂಶಿತಾ ವಂದಿಸಿದರು. ತ್ರಿಶಾ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ಸಂಭ್ರಮಾಚರಣೆ

Article Image

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ಸಂಭ್ರಮಾಚರಣೆ

ಬೆಳ್ತಂಗಡಿ: ಈ ನಾಡಿನ ತರುಣ- ತರುಣಿಯರು ಆತ್ಮವಿಶ್ವಾಸಿ ಛಲಗಾರರಾಗಬೇಕು. ನಮ್ಮ ನಾಳೆಗಳಿಗಾಗಿ ಅಂದು ತಮ್ಮ ಬದುಕು ಮೀಸಲಿಟ್ಟ ಯೋಧರ ತ್ಯಾಗ, ಪರಿಶ್ರಮ, ಬಲಿದಾನಗಳು ಅವಿಸ್ಮರಣೀಯ ಎಂದು ನಿವೃತ್ತ ಮೇಜರ್ ಜನರಲ್ ಮತ್ತು ಬೆಳ್ತಂಗಡಿ ನಿವೃತ್ತ ಯೋಧರ ಸಂಘದ ಗೌರವ ಅಧ್ಯಕ್ಷ ಎಮ್. ವೆಂಕಟೇಶ್ವರ ಭಟ್ ಹೇಳಿದರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಬೆಳ್ತಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿದ 25 ನೇ ಕಾರ್ಗಿಲ್ ವಿಜಯ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಯಶಸ್ಸಿನ ಮಾರ್ಗದೆಡೆಗೆ ಸಾಗಲು ಶಿಸ್ತು ಮತ್ತು ಸಮಯಪಾಲನೆ ಅತಿ ಮುಖ್ಯ. ಬಿರುಸಿನ ಚಳಿಗಾಳಿಯ ನಡುವೆಯು ದೇಶದ ರಕ್ಷಣೆಗಾಗಿ ಗಡಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಬದುಕು ನಮಗೆ ಮಾರ್ಗದರ್ಶನವಾಗಬೇಕು. ಇಂತಹ ಸೇವೆಗಳನ್ನು ಸಮಾಜ ಸದಾ ಗೌರವಿಸಬೇಕು ಮತ್ತು ಅವರ ಒಳಿತಿಗಾಗಿ ಪ್ರಾರ್ಥಿಸಬೇಕು ಎಂದು ಅಭಿಪ್ರಾಯಪಟ್ಟರು. ಮುಂದುವರಿದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರತಿವರ್ಷದ ಬೆಳವಣಿಗೆಯನ್ನು ಶ್ಲಾಘಿಸಿ, ಮಹಿಳೆಯರಿಗೂ ರಕ್ಷಣಾ ವಿಭಾಗದಲ್ಲಿ ವಿಪುಲ್ಲವಾದ ಅವಕಾಶಗಳಿವೆ. ರಕ್ಷಣಾವಲಯದಲ್ಲಿನ ಭೂಪಡೆ, ವಾಯುಪಡೆ ಮತ್ತು ನೌಕಾಪಡೆಯಲ್ಲಿನ ಮಹಿಳಾ ಮೀಸಲಾತಿಯನ್ನು ಹೆಣ್ಣುಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಳಿಕ ವಿದ್ಯಾರ್ಥಿಗಳು ಕೇಳಿದ ನಾನಾ ಪ್ರಶ್ನೆಗಳಿಗೆ ಉತ್ತರಿಸಿ, ಸೇನಾ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ತರಬೇತಿ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ಅರವಿಂದ ಮಾತನಾಡಿ ಈ ದೇಶ ಬೆಳೆದು ಬಂದ ಇತಿಹಾಸದ ಪುಟಗಳನ್ನು ನಾವು ಗಮನಿಸಬೇಕು. ಇವತ್ತಿನ ಸಂಭ್ರಮಾಚರಣೆಯಲ್ಲಿ ನೂರಾರು ಯೋಧರ ತ್ಯಾಗದ ಸಮರ್ಪಣೆಯಿದೆ ಎಂದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಮತ್ತು ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣಿತಶಾಸ್ತ್ರ ಉಪನ್ಯಾಸಕ ಮೋಹನ್ ಭಟ್ ಸ್ವಾಗತಿಸಿ, ರಾಸಾಯನ ಶಾಸ್ತ್ರ ಉಪನ್ಯಾಸಕಿ ಹೇಮಾ ಕೆ. ಕಾರ್ಯಕ್ರಮವನ್ನು ವಂದಿಸಿದರು.

ಧಾರವಾಡದಲ್ಲಿ ಉಜಿರೆ ಉಪನ್ಯಾಸಕರಿಗೆ ಸನ್ಮಾನ

Article Image

ಧಾರವಾಡದಲ್ಲಿ ಉಜಿರೆ ಉಪನ್ಯಾಸಕರಿಗೆ ಸನ್ಮಾನ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋಧ್ಯಮ ವಿಭಾಗದ ಇತ್ತೀಚಿಗೆ ನಡೆದ 40ನೇ ವರ್ಷದ ಸಂಭ್ರಮಾಚಾರಣೆಯ ಸಂದರ್ಭದಲ್ಲಿ ಉಜಿರೆಯ ಶ್ರೀ. ಧ. ಮ. ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ ಅವರನ್ನ ಸನ್ಮಾನಿಸಲಾಯಿತು. ವಿಭಾಗವು ತನ್ನ 40ನೇ ವರ್ಷದ ಪ್ರಯುಕ್ತ ವಿಭಾಗದ ಸಾಧಕ 40 ವಿದ್ಯಾರ್ಥಿಗಳನ್ನು ಗುರುತಿಸುವ ಹಾಗೂ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಿವಿಧ ರಂಗದಲ್ಲಿ ಅನುಪಮ ಹಾಗೂ ಅನನ್ಯ ಸೇವಾನಿರತವನ್ನು 40 ವಿದ್ಯಾರ್ಥಿಗಳನ್ನು ಇದರಡಿ ಆಯ್ಕೆ ಮಾಡಲಾಗಿತ್ತು. ರಾಷ್ಟ್ರ ಮಟ್ಟದ ಎರಡು ದಿನದ ವಿಚಾರ ಸಂಕಿರಣ, ಮಾಧ್ಯಮ ಸ್ಪರ್ಧೆ ಕೂಡಾ ಇದೇ ಶುಭಾವಸರದಲ್ಲಿ ನಡೆಯಿತು. ಜು. 8 ಹಾಗೂ 4 ರಂದು ಕಾರ್ಯಕ್ರಮ ಏರ್ಪಡಾಗಿತ್ತು. ವಿಭಾಗದ ಬಹುಸಂಖ್ಯೆಯ ಹಿಂದಿನ ವಿದ್ಯಾರ್ಥಿಗಳು, ಪತ್ರಕರ್ತರು, ವಿವಿಧ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಭಾಗದ ಹಳೇ ವಿದ್ಯಾರ್ಥಿಗಳ ಸಮಾವೇಶ ಕೂಡಾ ನಡೆಯಿತು. 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ವಿಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಪೂರೈಸಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ಅತ್ಯಾಧುನಿಕ ಸಿ-ಆರ್ಮ್ ಯಂತ್ರಕ್ಕೆ ಚಾಲನೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ಅತ್ಯಾಧುನಿಕ ಸಿ-ಆರ್ಮ್ ಯಂತ್ರಕ್ಕೆ ಚಾಲನೆ

ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಹಾಗೂ ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22.5 ಲಕ್ಷ ರೂಪಾಯಿ ಮೌಲ್ಯದ ಹೊಸ ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರವನ್ನು ಜು.17ರಂದು ಅಳವಡಿಸಿ ಚಾಲನೆ ನೀಡಲಾಯಿತು. ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರದ ಬಗ್ಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರ ಎಕ್ಸ್-ರೇ ತಂತ್ರಜ್ಞಾನವನ್ನು ಆಧರಿಸಿದ ಸುಧಾರಿತ ವೈದ್ಯಕೀಯ ಚಿತ್ರಣವನ್ನು ಕೊಡಬಲ್ಲ ಸಾಧನವಾಗಿದೆ. ಮಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುವ ಈ ಯಂತ್ರ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಈ ಯಂತ್ರ ಶಕ್ತಿಯುತ ಅತ್ಯಾಧುನಿಕ ಇಮೇಜಿಂಗ್, ನವೀನ ಟಚ್ ಮತ್ತು ಪ್ಲೇ ತಂತ್ರಜ್ಞಾನ ಹೊಂದಿದೆ. ಇದರಲ್ಲಿರುವ ಹೊಸ ತಂತ್ರಜ್ಞಾನದೊಂದಿಗೆ ದೃಶ್ಯಚಿತ್ರಗಳು ಹೆಚ್ಚು ವಿಕಸನಗೊಳ್ಳುತ್ತಿರುವ ದೃಶ್ಯಗಳನ್ನು ಕೊಡಬಲ್ಲ ಸಾಧನವಾಗಿದ್ದು, ಸೂಕ್ತವಾದ ವೈದ್ಯಕೀಯ ಫಲಿತಾಂಶಗಳ ಸಾಧನೆಗೆ ನೆರವಾಗುತ್ತದೆ. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 4 ಮಂದಿ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಿದ್ದು, ಇಲ್ಲಿ ಈಗಾಗಲೇ ಹಲವಾರು ಟೋಟಲ್ ನೀ ರಿಪ್ಲೇಸ್‌ಮೆಂಟ್ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್ ಹಾಗೂ ಮೂಳೆ ಮತ್ತು ಕೀಲುಗಳ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಪ್ರಸ್ತುತ ಅಳವಡಿಸಿರುವ ಈ ಯಂತ್ರ ಸೊಂಟ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಗ್ಯಾಸ್ಟ್ರೋ ಕರುಳಿನ ಚಿಕಿತ್ಸೆ, ಎಂಡೋಸ್ಕೋಪಿಕ್, ಮೂತ್ರಶಾಸ್ತ್ರ, ನರಸಂಬಂಧಿ ಖಾಯಿಲೆ, ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಈ ಯಂತ್ರ ಅತೀ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.

ನಾಳೆಯಿಂದ ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ವಾಚನ-ಪ್ರವಚನ

Article Image

ನಾಳೆಯಿಂದ ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ವಾಚನ-ಪ್ರವಚನ

ಉಜಿರೆ: ಧರ್ಮಸ್ಥಳದಲ್ಲಿ ನಾಳೆ ಮಂಗಳವಾರದಿಂದ ಎರಡು ತಿಂಗಳ ಕಾಲ “ಜೈಮಿನಿ ಭಾರತ” ಮತ್ತು “ತುರಂಗ ಭಾರತ”ದ ಬಗ್ಗೆ 53ನೇ ವರ್ಷದ ಪುರಾಣ ವಾಚನ-ಪ್ರವಚನ ನಡೆಯಲಿದೆ. ಶನಿವಾರ ಮತ್ತು ಭಾನುವಾರ ವಿವಿಧ ಕಾವ್ಯಗಳ ಆಯ್ದ ಭಾಗವನ್ನು ಪುರಾಣವಾಚನಕ್ಕೆ ಬಳಸಲಾಗುವುದು. ಮಂಗಳವಾರ ಸಂಜೆ ಗಂಟೆ 5.30ಕ್ಕೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಹಿರಿಯ ವಿದ್ವಾಂಸರಾದ ಮಂಗಳೂರಿನ ಪ್ರೊ. ಎಂ. ಪ್ರಭಾಕರ ಜೋಶಿ ಉದ್ಘಾಟಿಸುವರು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡುವರು. ಮುಂದೆ ಸೆಪ್ಟೆಂಬರ್ 17ರ ವರೆಗೆ ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ಗಂಟೆ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ ಎಂದು ಪುರಾಣ ವಾಚನ-ಪ್ರವಚನ ಸಮಿತಿಯ ಸಂಚಾಲಕ ಎ.ವಿ. ಶೆಟ್ಟಿ ತಿಳಿಸಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಜೈಮಿನಿ ಭಾರತದ ಪೀಠಿಕಾ ಸಂಧಿ ಮತ್ತು ಎರಡನೇ ಸಂಧಿಯನ್ನು ಕಾವ್ಯಶ್ರೀ ಅಜೇರು ವಾಚನ ಮಾಡಿದರೆ, ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರವಚನ ನೀಡುವರು.

ಧರ್ಮಸ್ಥಳ: ನಿವೃತ್ತ ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆ

Article Image

ಧರ್ಮಸ್ಥಳ: ನಿವೃತ್ತ ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆ

ನಿವೃತ್ತ ಮುಖ್ಯೋಪಾಧ್ಯಾಯರಾದ ಪದ್ಮರಾಜು. ಎನ್. ಅವರನ್ನು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಶುಕ್ರವಾರ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ವಿವಿಧ ಸಂಘಗಳನ್ನು ಉದ್ಘಾಟಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಶುಭ ಹಾರೈಸಿ, ವಿದ್ಯಾರ್ಥಿಗಳು ಶಾಲೆಯಲ್ಲಿ ತಮಗೆ ಸಿಗುವ ಅವಕಾಶಗಳ ಸದುಪಯೋಗ ಪಡೆದು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಇದ್ದು ಪ್ರತಿಭಾ ಪ್ರದರ್ಶನಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ ಎಂದರು. ಶಾಲೆಯ ಸಂಚಾಲಕ ಡಿ. ಅನಂತಪದ್ಮನಾಭ ಭಟ್ ವಿವಿಧ ಸಂಘಗಳ ನಾಮಫಲಕಗಳನ್ನು ಅನಾವರಣಗೊಳಿಸಿದರು. ನಿಡ್ಲೆ ಸಮೂಹ ಸಂಪನ್ಮೂಲ ಕೇಂದ್ರದ ಅಧಿಕಾರಿ ಪ್ರತಿಮಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್, ಶಿಕ್ಷಕ ಜಯರಾಮ ಮಯ್ಯ ಮತ್ತು ವಿದ್ಯಾರ್ಥಿಗಳ ಪರವಾಗಿ ನಿಧೀಶ್ ನಿವೃತ್ತ ಮುಖ್ಯೋಪಾಧ್ಯಾಯರಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಜೈನ್ ಅಧ್ಯಕ್ಷತೆ ವಹಿಸಿದರು. ಕನ್ನಡ ಶಿಕ್ಷಕ ಯುವರಾಜ ಸ್ವಾಗತಿಸಿದರು. ವಿನನ್ಯ ಮತ್ತು ಸ್ನೇಹ ಕಾರ್ಯಕ್ರಮ ನಿರ್ವಹಿಸಿದರು.

ಕೆ.ಸಿ.ಇ.ಟಿ. ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟ: ಆಳ್ವಾಸ್‌ನ 7 ವಿದ್ಯಾರ್ಥಿಗಳಿಗೆ ಉನ್ನತ ರ‍್ಯಾಂಕ್

Article Image

ಕೆ.ಸಿ.ಇ.ಟಿ. ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟ: ಆಳ್ವಾಸ್‌ನ 7 ವಿದ್ಯಾರ್ಥಿಗಳಿಗೆ ಉನ್ನತ ರ‍್ಯಾಂಕ್

ಮೂಡುಬಿದಿರೆ: ಕೆ.ಸಿ.ಇ.ಟಿ. ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಅರ್ಹತೆ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಆಳ್ವಾಸ್ ಈ ಬಾರಿಯೂ ಉನ್ನತ ಸಾಧನೆ ಮಾಡಿದೆ. ನಿಸರ್ಗ ಎಸ್. 21ನೇ ರ‍್ಯಾಂಕ್, ಮೃಣಾಲಿನಿ ಎಸ್. ಪೂಜಾರಿ 29ನೇ ರ‍್ಯಾಂಕ್, ಪಾಹಿಮಾ ಹೇಮಚಂದ್ರ 38ನೇ ರ‍್ಯಾಂಕ್, ಎಮ್. ರಾಮ್‌ಪ್ರಸಾದ್ ಮಲ್ಯ 266ನೇ ರ‍್ಯಾಂಕ್, ಎಮ್.ವಿ. ಚಿರಾಂತ್ 290ನೇ ರ‍್ಯಾಂಕ್, ಆಕಾಶ್ ಬಸವರಾಜ್ ಬಚಲಾಪುರ 298ನೇ ರ‍್ಯಾಂಕ್, ಜೈ ಅಶೋಕ್ ರಾಚನ್ನವರ್ 402ನೇ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಂಸ್ಥೆಯ ಪ್ರಾಚರ‍್ಯ ಮೊಹಮ್ಮದ್ ಸದಾಕತ್ ಅಭಿನಂದಿಸಿದ್ದಾರೆ.

ಉಜಿರೆ: ಕಾಗ್ನಿಟೊ ಸಂಘ ಉದ್ಘಾಟನೆ, ಫ್ರೆಶರ್ಸ್ ಡೇ ಸಮಾರಂಭ

Article Image

ಉಜಿರೆ: ಕಾಗ್ನಿಟೊ ಸಂಘ ಉದ್ಘಾಟನೆ, ಫ್ರೆಶರ್ಸ್ ಡೇ ಸಮಾರಂಭ

ಉಜಿರೆಯ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ಜು.9ರಂದು ಮನಃಶಾಸ್ತ್ರ ವಿಭಾಗದ ಕಾಗ್ನಿಟೊ ಸಂಘ ಉದ್ಘಾಟನೆ ಹಾಗೂ ಫ್ರೆಶರ್ಸ್ ಡೇ ಸಮಾರಂಭ ನಡೆಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮನಃಶಾಸ್ತ್ರ ಪ್ರಾಧ್ಯಾಪಕ ಡಾ. ಮಹೇಶ್ ಬಾಬು ಎನ್., ಮನೋವಿಜ್ಞಾನವು ಜೀವನದ ಎಲ್ಲಾ ಅಂಶಗಳನ್ನು ಒಳಗೊಳ್ಳುತ್ತದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯಗತ್ಯವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಮನೋವಿಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ವಿಭಾಗದ ಭಿತ್ತಿಪತ್ರಿಕೆಯ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು. ‘ಕಾಗ್ನಿಟೊ’ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್, ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾನಸಾ ಅಗ್ನಿಹೋತ್ರಿ ಸ್ವಾಗತಿಸಿದರು. ಅನನ್ಯ ಮತ್ತು ವೀಕ್ಷಾ ಪ್ರಾರ್ಥಿಸಿದರು. ಅಖಿಲ್ ವಂದಿಸಿ, ಸೀಮಾ ಜಂಗೀರ್ ನಿರೂಪಿಸಿದರು.

ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನ ಓರಿಯಂಟೇಶನ್ ಕಾರ್ಯಕ್ರಮ

Article Image

ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನ ಓರಿಯಂಟೇಶನ್ ಕಾರ್ಯಕ್ರಮ

ಮೂಡುಬಿದಿರೆ: ಭಾರತೀಯ ಪರಂಪರೆಯಲ್ಲಿ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯಿದ್ದು, ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಹೆತ್ತವರಿಂದ ದೂರವಿದ್ದು ಹಲವು ವರ್ಷಗಳ ಕಾಲ ಗುರುಗಳ ಬಳಿ ವಿದ್ಯಾಭ್ಯಾಸ ಪೂರೈಸಿ ತದನಂತರ ಮನೆಗೆ ಮರಳುವುದು ವಾಡಿಕೆ. ಇಂದಿನ ಆಧುನಿಕ ಯುಗದಲ್ಲೂ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆ ಅನುಸರಿಸುತ್ತಾ ಬಂದಿದೆ. ಒಂದು ಶಿಲೆಯನ್ನು ಸುಂದರ ಮೂರ್ತಿಯಾಗಿ ಕೆತ್ತುವಲ್ಲಿ ಶಿಲ್ಪಿಯು ಹೇಗೆ ಶಿಲೆಯನ್ನು ಕೆತ್ತಬೇಕಾಗುವುದೋ, ಅದೇ ರೀತಿ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗಾಗಿ ತಪ್ಪಿ ನಡೆದ ವಿದ್ಯಾರ್ಥಿಯನ್ನು ತಿದ್ದಿ ತೀಡುವುದು ಗುರುವಿನ ಕರ್ತವ್ಯ. ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಹೋದ ಅದೆಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣವನ್ನು ಪೂರೈಸಿ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಅವರ ಉನ್ನತ ಜೀವನ ನಮ್ಮ ಪ್ರಯತ್ನಕ್ಕೆ ಸಾರ್ಥಕತೆಯನ್ನು ಒದಗಿಸಿಕೊಡುತ್ತದೆ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು. ಅವರು ಎಕ್ಸಲೆಂಟ್ ನ ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳು ಮತ್ತು ಹೆತ್ತವರಿಗಾಗಿ 2024-25ನೇ ಶೈಕ್ಷಣಿಕ ಸಾಲಿನ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಿದ್ದರು. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹೆತ್ತವರು ತ್ಯಾಗ ಮಾಡಿ ನಿಮ್ಮನ್ನು ವಸತಿ ವ್ಯವಸ್ಥೆ ಇರುವ ಶಿಕ್ಷಣ ಸಂಸ್ಥೆಗೆ ಸೇರಿಸಿದ್ದಾರೆ. ಇದು ನಿಮ್ಮನ್ನು ನೋಯಿಸಲೆಂದಲ್ಲ. ಬದಲಾಗಿ ನಿಮ್ಮ ಜೀವನ ಹಸನಾಗಲೆಂದು. ಹಾಗಾಗಿ ನಿಮ್ಮ ಹೆತ್ತವರ ಮನದಿಂಗಿತವನ್ನು ಅರಿತು ಸಾಧನೆಯನ್ನು ಮಾಡುವಂತಾಗಬೇಕು. ಕೇವಲ ಅಂಕಗಳಿಕೆಗೆ ಮಾತ್ರ ಈ ಸಂಸ್ಥೆ ಹೆಸರುವಾಸಿಯಾಗಿಲ್ಲ. ಶಿಕ್ಷಣದ ಜೊತೆ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನೂ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯನ್ನು ಸೇರಿ ಪದವಿಪೂರ್ವ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನವನ್ನು ಪಡೆದ ಅನೇಕ ನಿದರ್ಶನಗಳಿವೆ. ಅಸಾಧ್ಯವೆನ್ನುವುದು ಇಲ್ಲವೇ ಇಲ್ಲ. ನಿರಂತರ ಪರಿಶ್ರಮ, ಛಲ ಅಸಾಧ್ಯವನ್ನು ಸಾಧ್ಯವಾಗಿಸುತ್ತದೆ. ಎಲ್ಲಾ ಹಂತದ ವಿದ್ಯಾರ್ಥಿಗಳಿಗೂ ಇಲ್ಲಿ ಮುಕ್ತ ಅವಕಾಶವಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ, ನಿಮ್ಮ ಮಕ್ಕಳನ್ನು ಈ ಸಂಸ್ಥೆಗೆ ಸೇರಿಸುವ ಮುನ್ನ ಅನೇಕ ಬಾರಿ ವಿಚಾರಿಸಿ, ಮಿಮರ್ಶಿಸಿ ನಿರ್ಧಾರ ತೆಗೆದುಕೊ0ಡಿರುತ್ತೀರಿ. ಒಮ್ಮೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾವುದೇ ಗೊಂದಲ ಬೇಡ. ಸಾವಿರಾರು ವಿದ್ಯಾರ್ಥಿಗಳ 24 ಗಂಟೆಗಳ ಯೋಗಕ್ಷೇಮ ನೊಡಿಕೊಳ್ಳುವುದು ಸಂಸ್ಥೆಯ ಗುರುತರವಾದ ಜವಾಬ್ದಾರಿಯಾಗಿದೆ. ವಿದ್ಯಾಭ್ಯಾಸದ ಪ್ರಕ್ರಿಯೆಯಲ್ಲಿ ಅನೇಕ ಸವಾಲುಗಳು ಬರುತ್ತವೆ. ಆ ಸವಾಲುಗಳನ್ನು ಲೆಕ್ಕಿಸದೆ ಮುನ್ನಡೆಯಬೇಕು. ಪದವಿಪೂರ್ವ ವಿದ್ಯಾಭ್ಯಾಸ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಉತ್ತಮ ಸಮಯ. ಈ ಸಮಯವನ್ನು ಹಾಳು ಮಾಡದೆ ಅದರ ಸದುಪಯೋಗ ಪಡಿಸಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು. ರಾಷ್ಟ್ರ ಮಟ್ಟದ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಸಲಾದ ನೀಟ್ ಪರೀಕ್ಷೆಯಲ್ಲಿ 710 ಅಂಕ ಹಾಗೂ ಸಿಇಟಿಯಲ್ಲಿ 8ನೇ ಸ್ಥಾನ ಪಡೆದ ವಿದ್ಯಾರ್ಥಿ ನಿಖಿಲ್ ಗೌಡ ತನ್ನ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ನಿಖಿಲ್ ಗೌಡನನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಲಾಯಿತು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕ್ರಮ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಉಜಿರೆ: ಕೃತಿ ಬಿಡುಗಡೆ

Article Image

ಉಜಿರೆ: ಕೃತಿ ಬಿಡುಗಡೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪ್ರಕಟಿಸಿದ “ಸಿರಿ ಧಾನ್ಯ ಸಿರಿ-ಸರಿ” ಕೃತಿಯನ್ನು ಧರ್ಮಸ್ಥಳದಲ್ಲಿ ಹೇಮಾವತಿ ವೀ. ಹೆಗ್ಗಡೆಯವರು ಬಡುಗಡೆಗೊಳಿಸಿ ಶುಭ ಹಾರೈಸಿದರು. ಹಿರಿಯ ಪತ್ರಕರ್ತ ಅನಂತ ಹುದಂಗಜೆ ರಚಿಸಿದ ಪುಸ್ತಕದಲ್ಲಿ ಸಿರಿಧಾನ್ಯಗಳ ಬಳಕೆಯೊಂದಿಗೆ ಆರೋಗ್ಯಭಾಗ್ಯ ರಕ್ಷಣೆ ಬಗ್ಗೆ ಸಮಗ್ರ ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಅನಿಲ್ ಕುಮಾರ್, ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಹಿರಿಯ ನಿರ್ದೇಶಕ ದಿನೇಶ್ ಎಂ., ಅಭಿನಂದನ್ ಜೈನ್ ಮತ್ತು ಕೃತಿಯ ಲೇಖಕ ಅನಂತ ಹುದಂಗಜೆ ಉಪಸ್ಥಿತರಿದ್ದರು.

ತಾಳಮದ್ದಳೆ ಸಪ್ತಾಹ ಸಮಾರೋಪ-ಪದ್ಯಾಣ, ಕುರಿಯ ಪ್ರಶಸ್ತಿ ಪ್ರದಾನ

Article Image

ತಾಳಮದ್ದಳೆ ಸಪ್ತಾಹ ಸಮಾರೋಪ-ಪದ್ಯಾಣ, ಕುರಿಯ ಪ್ರಶಸ್ತಿ ಪ್ರದಾನ

“ಯಕ್ಷಗಾನ ಬಯಲಾಟಗಳು ಮನಸ್ಸಿಗೆ ಮೋದವನ್ನು ನೀಡಿದರೆ, ತಾಳಮದ್ದಳೆಯು ಬುದ್ದಿಗೆ ಗ್ರಾಸವನ್ನು ಒದಗಿಸುತ್ತದೆ. ಭಾಷಾಶುದ್ಧತೆ, ಪುರಾಣ ಜ್ಞಾನ, ಅಂದವಾಗಿ ಮಾತನಾಡುವ ಶಕ್ತಿ, ಗ್ರಹಿಕಾ ಸಾಮರ್ಥ್ಯ ಮತ್ತು ಬದುಕಿಗೆ ಬೇಕಾದ ಸಂದೇಶಗಳನ್ನು ಯಕ್ಷಗಾನವು ಒದಗಿಸುತ್ತದೆ. ಅಕ್ಷರಾಭ್ಯಾಸ ಇಲ್ಲದವರೂ ಆಟ, ಕೂಟಗಳನ್ನು ನೋಡಿಯೇ ಪುರಾಣ ಜ್ಞಾನವನ್ನು ಪಡೆದವರಿದ್ದಾರೆ. ಅದು ಯಕ್ಷಗಾನದ ಶಕ್ತಿ” ಎಂದು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು. ಅವರು ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡುತ್ತಾ, “ಎಡನೀರು ಮಠದಲ್ಲಿ ಚಾತುರ್ಮಾಸ ವ್ರತಾಚರಣೆ ಸಂದರ್ಭದಲ್ಲಿ ಹಿಂದಿನಿಂದಲೂ ತಾಳಮದ್ದಳೆಯು ಆರಾಧನೆಯ ರೂಪದಲ್ಲಿ ನಡೆಯುತ್ತದೆ.” ಎಂದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಪದ್ಯಾಣ ಮನೆತನದ ಹಿರಿಯ ಪುಟ್ಟು ನಾರಾಯಣ ಭಾಗವತರ ಸ್ಮೃತಿಯಲ್ಲಿ ನೀಡುವ ‘ಪದ್ಯಾಣ ಪ್ರಶಸ್ತಿ’ಯನ್ನು ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ಯನ್ನು ಹಿರಿಯ ಹಿಮ್ಮೇಳ ವಾದಕರಾದ ಧರ್ಮಸ್ಥಳದ ಬಿ. ಸೀತಾರಾಮ ತೋಳ್ಪಾಡಿತ್ತಾಯರಿಗೆ ಶ್ರೀಗಳು ಪ್ರದಾನಿಸಿದರು. ಕುರಿಯ ಸ್ಮೃತಿ ಗೌರವವನ್ನು ಯಕ್ಷಗಾನ ಅರ್ಥದಾರಿಗಳಾದ ಕೆ. ಭಾಸ್ಕರ ರಾವ್ ಹಾಗೂ ಭಾಸ್ಕರ ನೂರಿತ್ತಾಯ ಬಾರ್ಯ ಇವರಿಗೆ ನೀಡಲಾಯಿತು. ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ಇದರ ಆಡಳಿತ ನಿರ್ದೇಶಕ ಮುಳಿಯ ಕೇಶವ ಪ್ರಸಾದ್, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿಯವರು ಪ್ರಶಸ್ತಿ ಪುರಸ್ಕೃತರನ್ನು ನುಡಿಹಾರಗಳ ಮೂಲಕ ಗೌರವಿಸಿದರು. ಶೀಲಾ ಗಣಪತಿ ಭಟ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಮಾತನಾಡುತ್ತಾ, “ಕೀರ್ತಿಶೇಷ ಭಾಗವತ ಪದ್ಯಾಣ ಗಣಪತಿ ಭಟ್ಟರು ಕಾಲಮಿತಿ ಪ್ರದರ್ಶನವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಪದ್ಯಾಣ ಮತ್ತು ಕುರಿಯ ಮನೆತನಗಳ ಯಕ್ಷಗಾನೀಯ ಕೊಡುಗೆಗಳಲ್ಲಿ ಸಮರ್ಪಣಾ ಭಾವವಿರುವುದನ್ನು ಕಾಣಬಹುದು.” ಎಂದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಸಂಮಾನಿತರನ್ನು ನುಡಿಹಾರಗಳ ಮೂಲಕ ಅಲಂಕರಿಸಿದರು. ತಾಳಮದ್ದಳೆ ಸಪ್ತಾಹದುದ್ದಕ್ಕೂ ಭಾಗವತ ಪದ್ಯಾಣ ಗಣಪತಿ ಭಟ್ಟರ ಸ್ಮೃತಿಯನ್ನು ಮಾಡಲಾಗಿತ್ತು. ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯು ಸಪ್ತಾಹದ ಸಂಘಟನೆಯಲ್ಲಿ ದೊಡ್ಡ ಹೆಗಲು ನೀಡಿತ್ತು. ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪದ್ಯಾಣ ಪ್ರಶಸ್ತಿ ಸಮಿತಿಯ ಸ್ವಸ್ತಿಕ್ ಪದ್ಯಾಣ ವಂದಿಸಿದರು. ಕೊನೆಯಲ್ಲಿ ‘ಗಂಗಾ ಸಾರಥ್ಯ’ ಪ್ರಸಂಗದ ತಾಳಮದ್ದಳೆ ನಡೆಯಿತು.

ಪರಿಸರ ಮಾಲಿನ್ಯದ ಪರಿಣಾಮ ಎದುರಿಸಲು ಸಿದ್ಧರಾಗಿ'

Article Image

ಪರಿಸರ ಮಾಲಿನ್ಯದ ಪರಿಣಾಮ ಎದುರಿಸಲು ಸಿದ್ಧರಾಗಿ'

ವಿದ್ಯಾಗಿರಿ: ಪರಿಸರ ಮಾಲಿನ್ಯಕ್ಕೆ ನಾವೇ ಕಾರಣೀಕರ್ತರು, ಇದರ ಪರಿಣಾಮವನ್ನು ನಾವೇ ಎದುರಿಸಬೇಕು ಎಂದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಮ್ ಭಟ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ (ಬಿಎಡ್) ವತಿಯಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ನಾವು ತಿನ್ನುವ ಆಹಾರವೂ ಕಲುಷಿತಗೊಂಡಿದೆ. ಇದರಿಂದಾಗಿ ಅನಾರೋಗ್ಯದ ಸಮಸ್ಯೆಯೂ ಹೆಚ್ಚಿದೆ ಎಂದರು. ಭಾರತದಲ್ಲಿ ಕಾಡಿನ ವ್ಯಾಪ್ತಿ ಕಡಿಮೆಯಾಗಿದೆ. ನಮ್ಮ ದೇಶದ ಸಮತೋಲನಕ್ಕೆ ಕನಿಷ್ಠ ಶೇಕಡ 20ರಷ್ಟು ಕಾಡಿನ ಅವಶ್ಯಕತೆ ಇದೆ. ಆದರೆ ಪ್ರಸ್ತುತವಾಗಿ ಕೇವಲ ಶೇ.8 ರಿಂದ 9 ಮಾತ್ರ ಕಾಡಿನ ಪ್ರಮಾಣವಿರುವುದು ಅಪಾಯದ ಸಂಕೇತ ಎಂದರು. ಪರಿಸರ ದಿನವಾದರೂ ಒಬ್ಬ ವ್ಯಕ್ತಿ ಒಂದು ಗಿಡವನ್ನು ಬೆಳೆಸುವುದರಿಂದ ಪರಿಸರಕ್ಕೆ ಆತ ನೀಡುವ ಕೊಡುಗೆ ಅಪಾರವಾಗಿರುತ್ತದೆ. ನೀರನ್ನು ಪೆಟ್ರೋಲ್ ಬಂಕ್ ಮಾದರಿಯಲ್ಲಿ ಪಡೆಯುವ ಸಮಯ ದೂರ ಇಲ್ಲ. ಇನ್ನಾದರೂ ಜನತೆ ಎಚ್ಚರರಾಗಿ ನೀರನ್ನು ಮಿತವಾಗಿ ಬಳಸ ಬೇಕು ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಪ್ರಾಣಿಗಳು ಮತ್ತು ಪಕ್ಷಿಗಳು ತಮ್ಮ ಗೂಡುಗಳನ್ನು ರಚಿಸಲು ಪರಿಸರಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ಆದರೆ ಮಾನವನಿಗೆ ಆಸರೆಯಾಗಿರುವ ಭೂಮಿಯನ್ನು ಆತನೇ ಹಾಳು ಮಾಡುತ್ತಿದ್ದಾನೆ ಎಂದರು. ದೇಶದ ರಾಜದಾನಿ ದೆಹಲಿಯಲ್ಲಿ ಪ್ರಸ್ತುತವಾಗಿ ಜನರು ಆಮ್ಲಜನಕವನ್ನು ಖರೀದಿಸುತ್ತಿದ್ದಾರೆ. ಮುಂದಿನ ಪೀಳಿಗೆ ದೇಶದ ಎಲ್ಲಾ ಭಾಗಗಳಲ್ಲಿ ಆಮ್ಲಜನಕವನ್ನು ಖರೀದಿಸುವ ಪರಸ್ಥಿತಿ ಬರಬಹುದು ಎಂದು ಹೇಳಿದರು. ಪರಿಸರದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇನ್ನು ನಾವು ಎಚ್ಚೆತ್ತುಕೊಳ್ಳದಿದ್ದರೆ ಅಪಾಯದ ಪ್ರಮಾಣ ಹೆಚ್ಚಾಗಬಹುದು ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರ್‌ಮೂರ್ತಿ ಎಚ್. ಕೆ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಸುರೇಶ್ ಸ್ವಾಗತಿಸಿ, ಸಮರ್ಥ್ ನಿರೂಪಿಸಿದರು.

ಪರಿಶ್ರಮದಿಂದ ಸಾಧಕರಾಗಬಹುದು: ಶ್ವೇತಾ ಜೈನ್

Article Image

ಪರಿಶ್ರಮದಿಂದ ಸಾಧಕರಾಗಬಹುದು: ಶ್ವೇತಾ ಜೈನ್

ಮೂಡಬಿದಿರೆ: ಪರಿಶ್ರಮಪಟ್ಟರೆ ಸಾಮಾನ್ಯ ವ್ಯಕ್ತಿ ಕೂಡ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ನೋಟರಿ ವಕೀಲೆ ಶ್ವೇತಾ ಜೈನ್ ಅಭಿಪ್ರಾಯಪಟ್ಟರು. ರೋಟರಿ ಸೆಂಟ್ರಲ್ ಸ್ಕೂಲಿನಲ್ಲಿ 2024-25 ಸಾಲಿನ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಕ್ಲಬ್‌ಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಇನ್ನರ್‌ವೀಲ್ ಅಧ್ಯಕ್ಷೆ ಸರಿತಾ ಆಶೀರ್ವಾದ್, ಮಾಜಿ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳಿಗೆ ಶುಭಕೋರಿದರು. ಪ್ರಾಂಶುಪಾಲೆ ರೂಪಾ ಮಸ್ಕರೇನ್ಹಸ್, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರೀತಿ ಪ್ರಭಾ ಸ್ವಾಗತಿಸಿ, ವಿದ್ಯಾ ನಿರೂಪಿಸಿದರು.

ಬೆಳ್ತಂಗಡಿ: ಆಮಂತ್ರಣ ಪತ್ರಿಕೆ ಬಿಡುಗಡೆ

Article Image

ಬೆಳ್ತಂಗಡಿ: ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಕೇಂದ್ರ ಕಛೇರಿ, ಬೆಳ್ತಂಗಡಿ ಇದರ ಶ್ರೀ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಹಾಗೂ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭವು ಜು. 13 ರ ಶನಿವಾರದಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯು ಇತ್ತೀಚೆಗೆ ಶ್ರೀ ಗುರುದೇವ ವಿವಿಧೋದ್ದೇಶದ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎನ್. ಪದ್ಮನಾಭ ಮಾಣಿಂಜ, ಉಪಾಧ್ಯಕ್ಷರಾದ ಭಗೀರಥ ಜಿ., ವಿಶೇಷಣಾಧಿಕಾರಿಯಾದ ಯಂ. ಮೋನಪ್ಪ ಪೂಜಾರಿ ಕಂಡೆತ್ಯಾರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಅಶ್ವತ್ಥ ಕುಮಾರ್, ಆಡಳಿತ ಮಂಡಳಿ ನಿರ್ದೇಶಕರಾದ ಸುಜಿತಾ ವಿ. ಬಂಗೇರ, ಸಂಜೀವ ಪೂಜಾರಿ, ತನುಜಾ ಶೇಖರ್, ಕೆ.ಪಿ. ದಿವಾಕರ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ್, ಜಯವಿಕ್ರಮ ಪಿ., ಧರಣೇಂದ್ರ ಕುಮಾರ್, ಆನಂದ ಪೂಜಾರಿ ಸರ್ವೆದೋಳ, ಡಾ| ರಾಜಾರಾಮ್ ಕೆ.ಬಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ರೈತರಿಗೆ ಬೆಳೆ ವಿಮೆ ಪಾವತಿಸಲು ಜು. 31 ಕೊನೆಯ ದಿನಾಂಕ

Article Image

ರೈತರಿಗೆ ಬೆಳೆ ವಿಮೆ ಪಾವತಿಸಲು ಜು. 31 ಕೊನೆಯ ದಿನಾಂಕ

ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಫಸಲ್ ಭಿಮಾ ಯೋಜನೆ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಸಲು ಜು.31 ಕೊನೆಯ ದಿನವಾಗಿದ್ದು ಎಲ್ಲಾ ರೈತ ಬಾಂಧವರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.

ಅನುಪಯುಕ್ತ ಪ್ಲಾಸ್ಟಿಕ್ ಬಳಸಿ ಇಂಟರ್‌ಲಾಕಿಂಗ್ ಪೇವರ್ಸ್ ನಿರ್ಮಾಣ: ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಮತ್ತು ಜಾಗೃತ್ ಟೆ

Article Image

ಅನುಪಯುಕ್ತ ಪ್ಲಾಸ್ಟಿಕ್ ಬಳಸಿ ಇಂಟರ್‌ಲಾಕಿಂಗ್ ಪೇವರ್ಸ್ ನಿರ್ಮಾಣ: ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಮತ್ತು ಜಾಗೃತ್ ಟೆ

ಮೂಡುಬಿದಿರೆ: ಅನುಪಯುಕ್ತ ಪ್ಲಾಸ್ಟಿಕ್‌ಗಳನ್ನು ಬಳಸಿ ಗುಣಮಟ್ಟದ ಇಟ್ಟಿಗೆ(ಬ್ರಿಕ್ಸ್) ಹಾಗೂ ಪರಸ್ಪರ ಬೆಸೆಯುವ (ಇಂಟರ್‌ಲಾಕಿಂಗ್) ಪ್ರಿಕಾಸ್ಟ್ ಪೇವರ್ಸ್ ಅನ್ನು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ (ಎಲೆಕ್ಟಾçನಿಕ್ಸ್ ಆಂಡ್ ಕಮ್ಯುನಿಕೇಷನ್) ವಿಭಾಗವು ಅಭಿವೃದ್ಧಿ ಪಡಿಸಿದ್ದು, ಮೈಸೂರಿನ ಜಾಗೃತ್ ಟೆಕ್ ಕಂಪೆನಿ ಜೊತೆ ವಾಣಿಜ್ಯ ಉತ್ಪನ್ನದ ಪೇಟೆಂಟ್ (ಪೇಟೆಂಟ್ ಸಂಖ್ಯೆ: 542790) ಪಡೆದಿದೆ. ಈ ಆವಿಷ್ಕಾರವು ಪರಿಸರ ಸಂರಕ್ಷಣೆ ಹಾಗೂ ನಿರ್ಮಾಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯಾಗಿದೆ. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ. ಸಿದ್ದೇಶ್ ಜಿ.ಕೆ. ಮಾರ್ಗದರ್ಶನ ಹಾಗೂ ಡಾ. ಗುರುಪ್ರಸಾದ್ ನೇತೃತ್ವದಲ್ಲಿ ಮಣಿಪಾಲ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಅರ್ಜುನ್ ಸುನಿಲ್ ರಾವ್ ಅವರ ಸಹಕಾರದೊಂದಿಗೆ ಮೈಸೂರು ಮೂಲದ ಪರಿಸರ ಸ್ನೇಹಿ ಸಂಶೋಧನಾ ಕಂಪನಿ ‘ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್’ ಜೊತೆಗೂಡಿ ಸಂಶೋಧನೆ ನಡೆಸಲಾಗಿತ್ತು. ಬ್ರಿಕ್ಸ್ ಗುಣಲಕ್ಷಣ, ಗುಣಮಟ್ಟ, ಸ್ಥಿರತೆ ಕುರಿತು ಬೆಂಗಳೂರಿನ ಬೆಯೂರೊ ವೆರಿಟಾಸ್ (beuro veritas) ಬ್ರಿಕ್ಸ್ ಪ್ರಯೋಗಾಲಯ ಹಾಗೂ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಚಿತ್ರದುರ್ಗದ ಗುಣಮಟ್ಟ ಪರಿಶೀಲನಾ ಪ್ರಯೋಗಾಲಯ ವರದಿ ನೀಡಿದ್ದು, interlocking paver IS15658:2008 standards ನ ಮೊದಲ ಕೋಷ್ಟಕದಲ್ಲಿ ನಿಗದಿ ಪಡಿಸಿದ compression ಸಾಮರ್ಥ್ಯ ಹೊಂದಿದೆ ಎಂದು ದೃಢಪಡಿಸಿದ್ದಾರೆ. ಈ ವರದಿ ಆಧಾರದಲ್ಲಿ ಭಾರತ ಸರ್ಕಾರದ ಪೇಟೆಂಟ್ ನಿಯಂತ್ರಕ ಇಲಾಖೆಯು ಈ ಮಾದರಿ ಪೇವರ್ಸ್ ತಯಾರಿಕಾ ವಿಧಾನಕ್ಕೆ 20ವರ್ಷಗಳವರೆಗೆ ಪೇಟೆಂಟ್ ಮಂಜೂರು ಮಾಡಿದೆ. ಈ ಪೇವರ್ಸ್ ಮೈಸೂರಿನ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಕೈಗಾರಿಕೆಯಲ್ಲಿ ವಾಣಿಜ್ಯೀಕರಣಗೊಂಡಿದ್ದು, ಜಾಗೃತ್ ಟೆಕ್ ಕಂಪೆನಿಯ ಮುಖ್ಯಸ್ಥ ದಿನೇಶ್ ಬೋಪಣ್ಣ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಆವಿಷ್ಕಾರಕ್ಕೆ ಪ್ರೋತ್ಸಾಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಸಾಧನೆಗೆ ಅಭಿನಂದಿಸಿದ್ದಾರೆ.

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

Article Image

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ ಅವರು ಜೂ.25 ರಂದು 2024-25ರ ಶೈಕ್ಷಣಿಕ ವರ್ಷದ ಶಾಲಾ ಸಂಘಗಳನ್ನು ಉದ್ಘಾಟಿಸಿದರು. ಬಳಿಕ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಕಲಿಕೆಯು ಕಲ್ಪನೆಯೊಂದಿಗೆ ಸಾಗಬೇಕು ಹಾಗೂ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಇತರ ಪೂರಕ ಚಟುವಟಿಕೆಗಳ ಮೂಲಕ ಜ್ಞಾನ ಗಳಿಸಬೇಕು ಹಾಗೂ ಧರ್ಮಸ್ಥಳದ ಸಮಾಜಮುಖಿ ಕಾರ್ಯಗಳಿಂದ ನಾವು ಉತ್ತಮ ಮೌಲ್ಯಗಳನ್ನು ಕಲಿಯಲು ಸಾಧ್ಯ ಎಂದು ಎಂದು ಹೇಳಿದರು. ಶಾಲೆಯ ವಿವಿಧ ಸಂಘಗಳಾದ ಸಾಂಸ್ಕೃತಿಕ ಸಂಘ, ಭಿತ್ತಿ ಪತ್ರಿಕೆ ಸಂಘ, ಕಲಾ ಸಂಘ, ಹವ್ಯಾಸ ಸಂಘ, ಕ್ರೀಡಾ ಸಂಘ, ಇಂಟೆರಾಕ್ಟ್ ಸಂಘ, ಪರಿಸರ ಸಂಘ, ಕನ್ನಡ ಸಂಘ, ವಿಜ್ಞಾನ ಸಂಘ, ಸಾಹಿತ್ಯ ಸಂಘ, ಗಣಿತ ಸಂಘ ಇವುಗಳ ಉದ್ಘಾಟನೆಯು ವಿಶಿಷ್ಟ ರೀತಿಯಿಂದ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಯಾ ಸಂಘಗಳ ಸಂಯೋಜಕ ಶಿಕ್ಷಕರು ತಮ್ಮ ಸಂಘದ ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮ ಆಯೋಜಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ವಿದ್ಯಾರ್ಥಿ ಶಶಾಂಕ್ ಪ್ರಭು ವಂದಿಸಿದರು. ವಿದ್ಯಾರ್ಥಿಗಳಾದ ಚಿಂತನ್ ಮತ್ತು ಆನೆಟ್ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳದಲ್ಲಿ ವಿದುಷಿ ಚೈತ್ರ ಭಟ್ ಅವರ ಭರತನಾಟ್ಯ ರಂಗಪ್ರವೇಶ

Article Image

ಧರ್ಮಸ್ಥಳದಲ್ಲಿ ವಿದುಷಿ ಚೈತ್ರ ಭಟ್ ಅವರ ಭರತನಾಟ್ಯ ರಂಗಪ್ರವೇಶ

ಭಾರತದ ಅಪೂರ್ವ ಕಲೆಗಳು ಹಾಗೂ ಅಧಿಕ ಮಾನವಸಂಪನ್ಮೂಲ ದೇಶದ ಅಮೂಲ್ಯ ಸಂಪತ್ತು ಹಾಗೂ ವರದಾನವಾಗಿದೆ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ವಿದುಷಿ ಚೈತ್ರ ಭಟ್ ಅವರ ಭರತನಾಟ್ಯ ರಂಗಪ್ರವೇಶ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು. ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಕಲೆಗಳನ್ನೂ ಹವ್ಯಾಸವಾಗಿ ಕರಗತ ಮಾಡಿಕೊಳ್ಳಬೇಕು. ಎಂಟು ವಿಧದ ಶಾಸ್ತ್ರೀಯ ನೃತ್ಯಗಳಲ್ಲಿ ತಮಿಳುನಾಡು ಮೂಲದ ಭರತನಾಟ್ಯ ಸರ್ವಶ್ರೇಷ್ಠ ಕಲೆಯಾಗಿದೆ. ಹಿಂದೆ ಕೇವಲ ಬೆರಳೆಣಿಕೆಯಷ್ಟು ನೃತ್ಯ ಶಿಕ್ಷಕರಿದ್ದರು ಇಂದು ಕರ್ನಾಟಕದಲ್ಲಿ ಮೂರು ಸಾವಿರಕ್ಕೂ ಮಿಕ್ಕಿ ನೃತ್ಯ ಶಿಕ್ಷಕರಿದ್ದಾರೆ ಹಾಗೂ ನೃತ್ಯ ಅಭ್ಯಾಸ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಚೈತ್ರ ಭಟ್ ಅವರು ಭರತನಾಟ್ಯದಲ್ಲಿ ಮಾಡಿದ ಭಗೀರಥ ಪ್ರಯತ್ನ, ಸಾಧನೆ ಮತ್ತು ಪ್ರಭುತ್ವಕ್ಕೆ ಅವರು ಅಭಿನಂದಿಸಿ ಆಕೆಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. ರಶ್ಮಿಚಿದಾನಂದ, ಗೀತಾ ಸರಳಾಯ ಮತ್ತು ರಾಜಶ್ರೀ ಉಳ್ಳಾಲ ಉಪಸ್ಥಿತರಿದ್ದರು. ರಾಜಶ್ರೀ ಉಳ್ಳಾಲ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸುಮಧುರ ಸಂಗೀತ, ಶೃಂಗಾರ, ರಾಗ, ತಾಳ, ಲಯಬದ್ಧ ಹಾಡುಗಳ ಲಾಲಿತ್ಯ, ನಾಟ್ಯ, ಹಾವ-ಭಾವದೊಂದಿಗೆ ನೃತ್ಯ ಮತ್ತು ನರ್ತಕಿ ಒಂದಾದಾಗ ನೃತ್ಯವು ಜೀವಾತ್ಮ ಮತ್ತು ಪರಮಾತ್ಮನ ಐಕ್ಯತೆಯ ಸಂಕೇತವಾಗಿ ಪ್ರತಿಬಿಂಬಿತವಾಗುತ್ತದೆ. ಭಾವಪ್ರಧಾನವಾದ ನಾಟ್ಯಕ್ಕೆ ಭಾಷೆಯ ಹಂಗಿಲ್ಲ ಎಂದು ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು. ಚೈತ್ರ ಭಟ್ ಅವರ ಸಾಧನೆ ಮತ್ತು ಪ್ರತಿಭೆಯನ್ನು ಗೌರವಿಸಿ, ಅಭಿನಂದಿಸಿದರು. ನೃತ್ಯದಲ್ಲಿ ಭಾವನೆಗಳ ಅಭಿವ್ಯಕ್ತಿಯೇ ಮುಖ್ಯವಾಗಿದ್ದು ನೃತ್ಯ ಮಾಡುವವರ ಮನಸ್ಸು ಸದಾ ಜಾಗೃತವಾಗಿರಬೇಕು. ಮೈಯೆಲ್ಲಾ ಕಣ್ಣಾಗಿರಬೇಕು. ನೃತ್ಯ ಕಲಿತರೆ ದೇಹದ ಎಲ್ಲಾ ಅಂಗಗಳಿಗೂ ವ್ಯಾಯಾಮ ದೊರಕಿ ದೈಹಿಕ ಮತ್ತು ಮಾನಸಿಕ ದೃಢತೆ ಹೆಚ್ಚಾಗುತ್ತದೆ. ಆರೋಗ್ಯ ಭಾಗ್ಯವೂ ಸಿಗುತ್ತದೆ ಎಂದು ಅವರು ಹೇಳಿದರು. ಚೈತ್ರ ಭಟ್ ತನಗೆ ಭರತನಾಟ್ಯ ಕಲಿಸಿದ ಗುರುಗಳಾದ ಗೀತಾ ಸರಳಾಯ ಮತ್ತು ರಶ್ಮಿ ಚಿದಾನಂದ ಅವರನ್ನು ಗೌರವಿಸಿ ಕೃತಜ್ಞತೆ ವ್ಯಕ್ತಪಡಿಸಿದರು. ಕುಮಾರಿ ಚೈತ್ರ ಭಟ್ ಮಾತನಾಡಿ ತನ್ನ ಸಾಧನೆಗೆ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಪ್ರೋತ್ಸಾಹ, ತನ್ನ ತಾಯಿ, ಅಕ್ಕ ಮತ್ತು ಬಾವನ ಬೆಂಬಲವನ್ನು ಧನ್ಯತೆಯಿಂದ ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದಲ್ಲಿ ಪ್ರಥಮವಾಗಿ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆದಿದ್ದು ಚೈತ್ರ ಭಟ್ ಅವರು ಭರತನಾಟ್ಯದಲ್ಲಿ ಸ್ವಪ್ರಯತ್ನದಿಂದ ಮಾಡಿದ ಸಾಧನೆ ಮತ್ತು ಪ್ರಭುತ್ವವನ್ನು ಶ್ಲಾಘಿಸಿ ಅಭಿನಂದಿಸಿ ಉಜ್ವಲ ಭವಿಷ್ಯವನ್ನು ಹಾರೈಸಿದರು. ಆಕೆಯ ನೃತ್ಯ ಪ್ರದರ್ಶನ ನೋಡಿ ಎಲ್ಲರೂ ಸಂತೋಷ ಪಟ್ಟಿದ್ದಾರೆ. ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಿಗೂ ಧರ್ಮಸ್ಥಳದಲ್ಲಿ ಅವಕಾಶ ನೀಡಲಾಗುವುದು. ಯುವ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. ಚೈತ್ರ ಭಟ್ ಅವರನ್ನು ಗೌರವಿಸಲಾಯಿತು. ಸುಧಾಕರರಾವ್, ಪೇಜಾವರ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಮಂಜುಳಾ ಕೊನೆಯಲ್ಲಿ ಧನ್ಯವಾದವಿತ್ತರು.

ಎಕ್ಸಲೆಂಟ್: ನಿಶಾಂತ ಪಿ. ಹೆಗಡೆ

Article Image

ಎಕ್ಸಲೆಂಟ್: ನಿಶಾಂತ ಪಿ. ಹೆಗಡೆ

ಎಕ್ಸಲೆಂಟ್ ಪ.ಪೂ. ಕಾಲೇಜು ಮೂಡಬಿದ್ರೆ ಇಲ್ಲಿಯ ವಿದ್ಯಾರ್ಥಿಯಾದ ನಿಶಾಂತ ಪಿ. ಹೆಗಡೆ ಇವರು 09-06-2024 ರಂದು ಜರುಗಿದ ರಾಷ್ಟ್ರಮಟ್ಟದ IISER APTITUDE TEST 2024ರಲ್ಲಿ ರಾಷ್ಟ್ರಮಟ್ಟದ overall 33ನೇ ಬ್ಯಾಂಕ್ ಪಡೆದಿರುತ್ತಾರೆ. JEE advanced (2024)ನಲ್ಲಿ ರಾಷ್ಟ್ರಮಟ್ಟದ CRL-4349 ಬ್ಯಾಂಕ್ ಹಾಗೂ NEETನಲ್ಲಿ 685 ಅಂಕ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ವಿದ್ಯಾರ್ಥಿಯ ಸಾಧನೆಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಮತ್ತು ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 119 ಯುನಿಟ್ ರಕ್ತದಾನ

Article Image

ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 119 ಯುನಿಟ್ ರಕ್ತದಾನ

ವೇಣೂರು ಇಲ್ಲಿನ ಐಟಿಐ ಸಂಸ್ಥೆಯಲ್ಲಿ ರಕ್ತದಾನದ ಬೃಹತ್ ಶಿಬಿರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ, ಹಳೆವಿದ್ಯಾರ್ಥಿ ಸಂಘ, ಪದ್ಮಾಂಬ ಸಮೂಹ ಸಂಸ್ಥೆಗಳು, ವೇಣೂರು, ಹಾಲು ಉತ್ಪಾದಕರ ಸಹಕಾರಿ ಸಂಘ, ಕುಕ್ಕೇಡಿ. ಕುಕ್ಕೇಡಿ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ವೇಣೂರು, ಲಯನ್ಸ್ ಕ್ಲಬ್ ಮಂಗಳೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು, ಪಲ್ಗುಣಿ ಸೇವಾ ಸಂಘ(ರಿ.) ವೇಣೂರು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್, ದ.ಕ. ಉಡುಪಿ ಜಿಲ್ಲೆ, ಬೆಳ್ತಂಗಡಿ ವಲಯ, ಮಂಜುಶ್ರೀ ಭಜನಾ ಮಂಡಳಿ, ಕುಂಡದಬೆಟ್ಟು, ಜನಸೇವಾ ಟ್ರಸ್ಟ್ (ರಿ.) ಪಡ್ಡಂದಡ್ಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಕ್ಕೇಡಿ, ನಿಟ್ಟಡೆ ಇವರ ಸಹಭಾಗಿತ್ವದಲ್ಲಿ ವೇಣೂರು ಐಟಿಐಯಲ್ಲಿ ನಡೆಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು ಇದರ ಅಧ್ಯಕ್ಷರಾದ ಲ| ಸುಂದರ ಹೆಗ್ಡೆ, ಬಿ.ಇ. ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ರಕ್ತದಾನ ಅತ್ಯಂತ ಶ್ರೇಷ್ಠ ದಾನ ಇದರಿಂದ ಹಲವಾರು ಜೀವ ಉಳಿಸಿದಂತಹ ಪುಣ್ಯ ಪ್ರಾಪ್ತಿಯಾಗುತ್ತದೆ, ಇಂತಹ ಕಾರ್ಯಕ್ರಮಗಳಿಂದ ಯುವಜನತೆ ದಾನದಗುಣವನ್ನು ಮೈಗೂಡಿಸಿ ಕೊಳ್ಳಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ 258 ರಕ್ತದಾನ ಶಿಬಿರವನ್ನು ಸಂಯೋಜಿಸಿರುವ ಲ| ಎನ್. ಜೆ. ನಾಗೇಶ್ ಎಂ.ಜೆ.ಎಫ್., ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲ| ಜಯರಾಜ್ ಪ್ರಕಾಶ್, ಸಂಸ್ಥೆಯ ಹಳೆ ವಿದ್ಯಾರ್ಥಿ ಗಬ್ಬರ್ ಸಿಂಗ್ ಚಲನಚಿತ್ರದ ನಾಯಕ ನಟ ಶರಣು ಶೆಟ್ಟಿ, ಜೀವವಿಮಾ ಪ್ರತಿನಿಧಿ ಜಗನ್ನಾಥ ದೇವಾಡಿಗ, ಸಂಸ್ಥೆಯ ಹಳೆ ವಿದ್ಯಾರ್ಥಿ ಮುಖ್ಯ ಜೀವವಿಮಾ ಸಲಹೆಗಾರರಾದ ಶ್ರೀಕಾಂತ್ ಕಾಮತ್ ಇವರುಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದ ಐಟಿಐ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಮಾತನಾಡಿ ವಿದ್ಯಾರ್ಥಿ ದಿಸೆಯಿಂದಲೇ ದಾನದ ಮಹತ್ವವನ್ನು ಅರಿತು ರಕ್ತದಾನದಂತಹ ಶ್ರೇಷ್ಠ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದರು. ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಸುನಿಧಿ ಶೃತಿ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿತಾ ಕೆ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಪದ್ಮಾಂಬ ಸಮೂಹ ಸಂಸ್ಥೆಗಳ ಮಾಲಕರು ಜಿನರಾಜ್ ಜೈನ್, ಪಲ್ಗುಣಿ ಸೇವಾ ಸಂಘದ ಶ್ರೀಕಾಂತ ಉಡುಪ, ಲಯನ್ಸ್ ಕ್ಲಬ್ ಕಾರ್ಯದರ್ಶಿ ದಯಾನಂದ ಭಂಡಾರಿ, ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ನಿರ್ಮಲ್‌ಕುಮಾರ್ ಬೊಳ್ಜಾಲ್ ಗುತ್ತು, ಮಂಜುಶ್ರೀ ಭಜನಾ ಮಂಡಳಿ, ಕುಂಡದಬೆಟ್ಟು, ಇದರ ಅಧ್ಯಕ್ಷರಾದ ರವಿ ಕುಮಾರ್ ಕೆ.ಯೈ., ಸೌತ್‌ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಗಣೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು ಇಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ, ಲಯನ್ಸ್ ಕ್ಲಬ್ ಮಂಗಳೂರು ಇದರ ಕಾರ್ಯದರ್ಶಿ ಶಶಿಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 119 ಯುನಿಟ್ ರಕ್ತ ಸಂಗ್ರಹಿಸಲಾಯಿತು. ವಿದ್ಯಾರ್ಥಿ ವಿನೀತ್ ಪ್ರಾರ್ಥಿಸಿದ ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪದ್ಮಪ್ರಸಾದ್ ಬಸ್ತಿ ಸ್ವಾಗತಿಸಿ, ದಯಾನಂದ ಭಂಡಾರಿ ವಂದಿಸಿದ ಈ ಕಾರ್ಯಕ್ರಮವನ್ನು ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಸತೀಶ್ ನಿರ್ವಹಿಸಿದರು.

ಉಜಿರೆ: ಸಹಕಾರಿ ಕ್ಷೇತ್ರದ ಪ್ರಗತಿ, ಸಾಧನೆ ಶ್ಲಾಘನೀಯವಾಗಿದೆ

Article Image

ಉಜಿರೆ: ಸಹಕಾರಿ ಕ್ಷೇತ್ರದ ಪ್ರಗತಿ, ಸಾಧನೆ ಶ್ಲಾಘನೀಯವಾಗಿದೆ

ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆಯಿಂದ ವ್ಯವಹಾರ ಮಾಡುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಹಕಾರಿ ಸಂಘಗಳಲ್ಲಿ ಶೇ. ನೂರು ಸಾಲ ವಸೂಲಾತಿ ಆಗುತ್ತಿದ್ದು ಸಹಕಾರಿ ಕ್ಷೇತ್ರದ ಪ್ರಗತಿ, ಸಾಧನೆ ಶ್ಲಾಘನೀಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ “ಉನ್ನತಿ” ಉದ್ಘಾಟಿಸಿ ಶುಭ ಹಾರೈಸಿದರು. ಸಮಾಜದ ಎಲ್ಲಾ ಸ್ತರದ ಜನರು ಸಹಕಾರಿ ರಂಗದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಸರ್ವಾಂಗೀಣ ಪ್ರಗತಿಯಾಗಬೇಕು. ಜನರ, ಜನರಿಂದ ಮತ್ತು ಜನರಿಗಾಗಿ ಸೇವೆ ಸಲ್ಲಿಸುವ ಸಹಕಾರಿ ಸಂಘಗಳನ್ನು ಎಲ್ಲರೂ ಸೇರಿ ಬಲಪಡಿಸಬೇಕು. ತನ್ಮೂಲಕ ಸರ್ವಾಂಗೀಣ ಪ್ರಗತಿಯಾಗಲಿ ಎಂದು ಅವರು ಶುಭ ಹಾರೈಸಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಹಕಾರಿ ಸಂಘಗಳ ಸೇವೆ-ಸಾಧನೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ರೈತರ ಸಭಾಭವನವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ವಾಣಿಜ್ಯ ಬ್ಯಾಂಕ್‌ಗಳ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಜನರ ಸೇವೆಯಲ್ಲಿ ವಿಫಲವಾಗಿ ವಿಲೀನವಾಗುತ್ತಿರುವುದು ಶೋಚನೀಯವಾಗಿದೆ. ಭಾಷೆ ಮತ್ತು ಸಂಸ್ಕೃತಿಯ ಅರಿವಿಲ್ಲದ ಸಿಬ್ಬಂದಿಯೇ ಇದಕ್ಕೆ ಕಾರಣ. ಆದರೆ ಸಹಕಾರಿ ಸಂಘಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಕಾಲಿಕ ನೆರವು ನೀಡುವುದರಿಂದ ಉತ್ತಮ ಪ್ರಗತಿ ಸಾಧ್ಯವಾಗಿದೆ. ಕೇಂದ್ರ ಸರ್ಕಾರ ಕೂಡಾ ಸಹಕಾರಿ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದೆ ಎಂದರು. ಶಾಸಕರುಗಳಾದ ಹರೀಶ್ ಪೂಂಜ ಮತ್ತು ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು. ಪ್ರೀತಂ ಅಧ್ಯಕ್ಷತೆ ವಹಿಸಿದರು. ಶ್ರೀನಿವಾಸ ರಾವ್ ಸ್ವಾಗತಿಸಿದರು. ಧನಲಕ್ಷ್ಮೀ ಧನ್ಯವಾದವಿತ್ತರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗೆಡೆಯವರಿಂದ ಸಂವಾದ ಕಾರ್ಯಕ್ರಮ

Article Image

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗೆಡೆಯವರಿಂದ ಸಂವಾದ ಕಾರ್ಯಕ್ರಮ

ಉಜಿರೆ: ಉಜಿರೆಯ ರುಡ್‌ಸೆಟ್ ಸಂಸ್ಥೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಸಂಸ್ಥೆಯಲ್ಲಿ ನಡೆಯುತ್ತಿರುವ ತರಬೇತಿ ತಂಡಗಳ ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡುತ್ತಾ ರುಡ್‌ಸೆಟ್ ಸಂಸ್ಥೆಗಳ ತರಬೇತಿಯಲ್ಲಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದರಿಂದ ಶಿಬಿರಾರ್ಥಿಗಳಿಗೆ ಹೆಚ್ಚು ಕೌಶಲ್ಯ ಪಡೆಯಲು ಸಾದ್ಯವಾಗುತ್ತದೆ ಎಂದು ತಿಳಿಸಿದರು. ಇದರಿಂದ ಸ್ವಂತ ಉದ್ಯೋಗ ಪ್ರಾರಂಭಿಸಲು ಅನುಕೂಲವಾಗುತ್ತದೆ. ಇಲ್ಲಿನ ತರಬೇತಿ ಪಡೆದ ನಂತರವೂ ಹೊಸ ಹೊಸ ತಂತ್ರಜ್ಞಾನಗಳನ್ನು ನವೀಕರಿಸಿಕೊಳ್ಳಿ, ಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ ಹಾಗೂ ಉದ್ಯಮಿಗಳು ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಂಡಾಗ ಲಾಭ ನಷ್ಟಗಳ ವಿವರ ದೊರೆಯುತ್ತದೆ ಎಂದು ಹೇಳಿದರು. ತರಬೇತಿ ಪಡೆದ ಎಲ್ಲರಿಗೂ ಶುಭ ಹಾರೈಸಿ ಆರ್ಶೀವದಿಸಿದರು. ಈ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕರಾದ ರಂಜನ್ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ಎನ್. ಜನಾರ್ಧನ್, ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಜಯ ಕುಮಾರ ಬಿ. ಪಿ. ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್ ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಹಿರಿಯ ಉಪನ್ಯಾಸಕರುಗಳಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿ, ಕೆ. ಕರುಣಾಕರ ಜೈನ್ ವಂದಿಸಿದರು. ತರಬೇತಿಯಲ್ಲಿ ಒಟ್ಟು 65 ಜನ ಅಭ್ಯರ್ಥಿಗಳು ಭಾಗವಹಿಸಿದ್ದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

First Previous

Showing 2 of 5 pages

Next Last