Article Image

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

Article Image

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

ಉಜಿರೆ ಶ್ರೀ ಧ.ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕದ ಸ್ವಯಂಸೇವಕ ನಾಯಕ ರಾಮಕೃಷ್ಣ ಶರ್ಮ ಎನ್. ಅವರು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರಾಜ್ಯ ರಾ.ಸೇ.ಯೋ. ಕೋಶದ ಸಹಯೋಗದೊಂದಿಗೆ ಆ.6 ರಿಂದ 12 ರ ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು 20 ಸ್ವಯಂಸೇವಕರು ಪ್ರತಿನಿಧಿಸಲಿದ್ದು, ಎಸ್.ಡಿ.ಎಂ. ಎನ್.ಎಸ್.ಎಸ್. ಘಟಕವನ್ನು ರಾಮಕೃಷ್ಣ ಶರ್ಮ ಪ್ರತಿನಿಧಿಸಲಿದ್ದಾರೆ. ದ್ವಿತೀಯ ಬಿ.ಕಾಂ. ವಿದ್ಯಾರ್ಥಿಯಾಗಿರುವ ಇವರು ಬೆಳ್ತಂಗಡಿಯ ಎನ್. ಮಹಾಲಿಂಗೇಶ್ವರ ಭಟ್ ಮತ್ತು ವಿದ್ಯಾ ದಂಪತಿಯ ಪುತ್ರ.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ: ಕೆಸರಾಟ ಪಾಠ

Article Image

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ: ಕೆಸರಾಟ ಪಾಠ

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಹಾಗೂ ರೋವರ್ ರೇಂಜರ್ಸ್ ಘಟಕದ ಘಟಕದ ವತಿಯಿಂದ ಕಾರ್ಕಳದ ಮಿಯ್ಯಾರು ಗ್ರಾಮದಲ್ಲಿ ‘ಕೆಸರಾಟ ಪಾಠ’ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಿಯ್ಯಾರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಾಧವ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಿಯ್ಯಾರು ಗ್ರಾಮಕ್ಕೂ ಎನ್‌ಎಸ್‌ಎಸ್ ಚಟುವಟಿಕೆಗಳಿಗೂ ಅವಿನಾಭಾವ ನಂಟಿದೆ. ಈ ಗ್ರಾಮದಲ್ಲಿ ಹೆಚ್ಚಿನ ಎನ್‌ಎಸ್‌ಎಸ್ ಕ್ಯಾಂಪ್‌ಗಳು ನಡೆಯುತ್ತವೆ. ಈ ಕಾರ‍್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜೀವನ ಪಾಠ ಲಭಿಸಲಿ ಎಂದು ಹಾರೈಸಿದರು. ಆಳ್ವಾಸ್ ವಿದ್ಯಾಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕೆಸರಾಟದ ಮಹತ್ವ ಹಾಗೂ ಕೃಷಿಯ ಮಹತ್ವವನ್ನು ತಿಳಿಸಿದರು. ವಿವಿಧ ಆಟಗಳಲ್ಲಿ ತಾವೂ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕೆಸರಾಟ ಪಾಠದ ಅಂಗವಾಗಿ ಹಗ್ಗ ಜಗ್ಗಾಟ, ವಾಲಿಬಾಲ್, ತ್ರೋಬಾಲ್, 100 ಮೀಟರ್ ಓಟ, 400ಮೀಟರ್ ರಿಲೇ, ಪಿರಮಿಡ್ ರಚಿಸುವುದು, ನಿಧಿ ಹುಡುಕುವುದು, ಮಡಕೆ ಒಡೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗದ್ದೆಯನ್ನು ಒದಗಿಸಿದಂತಹ ರಾಜೇಶ್ ಹಾಗೂ ಸಹಕಾರವನ್ನು ನೀಡಿದ ರಮೇಶ್ ಹೆಗ್ಡೆಯನ್ನು ಅಭಿನಂದಿಸಲಾಯಿತು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂಡಿ, ಎನ್‌ಎಸ್‌ಎಸ್ ಘಟಕದ ಸಂಯೋಜಕರಾದ ಧರ್ಮೇಂದ್ರ ಕುದ್ರೋಳಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ ಚಿಪ್ಳೂಣಕರ್ ರೋವರ್ ರೇಂಜರ್ಸ್ ಘಟಕದ ಸಂಯೋಜಕರಾದ ವೀಣಾ ಹಾಗೂ ಸುನಿಲ್, ಉಪನ್ಯಾಸಕ ವರ್ಗದವರು ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರೋವರ್ ರೇಂಜರ್ಸ್ ಹಾಗೂ ಎನ್‌ಎಸ್‌ಎಸ್ ಘಟಕದ 175 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

Article Image

ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಉಜಿರೆ: ಬ್ಯಾಂಕಿಂಗ್‌ ಸಂಸ್ಥೆಗಳು ಜಾಗತಿಕ ಆರ್ಥಿಕತೆಯಲ್ಲಿನ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತಿವೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಾಗುವ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡಾಗ ಇಂದಿನ ಆಧುನಿಕ ಯುಗದಲ್ಲಿ ಬದುಕು ಮತ್ತಷ್ಟು ಸರಾಗವಾಗುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗ, ವ್ಯವಹಾರ ಆಡಳಿತ ವಿಭಾಗ, ಶ್ರೀ ಧ. ಮಂ. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ವತಿಯಿಂದ ಇಂಟರ್ನಲ್‌ ಕ್ವಾಲಿಟಿ ಅಶ್ಯೂರೆನ್ಸ್‌ ಸೆಲ್‌ ಸಹಯೋಗದಲ್ಲಿ ಜು.27 ಆಯೋಜಿಸಿದ್ದ ‘ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು’ ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 1947ರ ಸಮಯದಲ್ಲಿ ಜನರು ಕೇವಲ ರೋಟಿ, ಕಪಡಾ ಮತ್ತು ಮಕಾನ್‌ (ಅಶನ, ವಸನ, ವಸತಿ)ಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದರು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರ ಬೇಡಿಕೆಗಳು ಹೆಚ್ಚಾಗಿವೆ. ಆರ್ಥಿಕ ವ್ಯವಸ್ಥೆಯನ್ನು ಸರಾಗಗೊಳಿಸುವಲ್ಲಿ ಬ್ಯಾಂಕಿಂಗ್ ಸಂಸ್ಥೆಗಳು ಅನೇಕ ರೀತಿ ಯೋಜನೆಗಳನ್ನು ಮುನ್ನೆಲೆಗೆ ತರುತ್ತಿವೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಅನೇಕ ರೈತರು, ಅನಕ್ಷರಸ್ಥರು ಹಾಗೂ ಗ್ರಾಮೀಣ ಭಾಗದವರು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು. “ವಿದ್ಯಾರ್ಥಿ ಹಂತದಲ್ಲಿ ಈ ರೀತಿಯ ವಿಚಾರ ಸಂಕಿರಣಗಳ ಮೂಲಕ ಮಾಹಿತಿ ನೀಡುವುದು ಉತ್ತಮ ಆಲೋಚನೆ. ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಈ ರೀತಿಯ ಅವಕಾಶಗಳ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು. ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಅಬುದಬಿಯ ಝಯದ್‌ ಸಂಸ್ಥೆಯ ಮಾಜಿ ಹಣಕಾಸು ನಿಯಂತ್ರಕ ಸಿಎ ಅಬ್ದುಲ್ಲ ಮಾಡುಮೂಲೆ, “ನಮ್ಮ ಸುತ್ತಮುತ್ತಲಿನ ಬೆಳವಣಿಗೆ ಅರಿತುಕೊಂಡು ನಾವು ಅದಕ್ಕೆ ಹೊಂದಿಕೊಳ್ಳಬೇಕು, ಇಲ್ಲವಾದರೆ ನಮ್ಮ ಉಳಿಯುವಿಕೆ ಕಷ್ಟಸಾಧ್ಯ. ಬದಲಾವಣೆಗಳನ್ನು ಗಮನಿಸಿ ವಿಶ್ಲೇಷಿಸಿ ನಂತರ ಅವುಗಳನ್ನು ಮೈಗೂಡಿಸಿಕೊಳ್ಳುವುದು ಯಶಸ್ಸಿನ ಬಹುದೊಡ್ಡ ಮಾರ್ಗ. ನಿರಂತರ ಕಲಿಕೆ ನಮ್ಮದಾಗಲಿ” ಎಂದರು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಗಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಪನ್ಮೂಲ ವ್ಯಕ್ತಿ, ಮುಂಬೈ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸಿಎಂಎ ಡಾ. ಕಿನ್ನರಿ ಥಾಕರ್‌, ನಮ್ಮ ಯಶಸ್ಸಿನ ಮಾನದಂಡ ನಾವು ಸಮಾಜಕ್ಕೆ ಎಷ್ಟರ ಮಟ್ಟಿಗೆ ಕೊಡುಗೆ ನೀಡಬಲ್ಲೆವು ಎಂಬುದರ ಮೇಲೆ ನಿಂತಿದೆ. ಬ್ಯಾಂಕಿಂಗ್ ಸಂಸ್ಥೆಗಳು ಸಮಾಜದ ಏಳಿಗೆಗೆ ಅನಿವಾರ್ಯ ಎಂಬುದನ್ನು ನಾವು ಒಪ್ಪಲೇಬೇಕು. ಬ್ಯಾಂಕಿಂಗ್‌ ಕ್ಷೇತ್ರ ಸೇರಿದಂತೆ ಉಳಿದೆಲ್ಲ ಕ್ಷೇತ್ರಗಳು ಸುಸ್ಥಿರ ಯೋಜನೆಗಳನ್ನು ತಮ್ಮದಾಗಿಸಿಕೊಳ್ಳಬೇಕು” ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ವಾಣಿಜ್ಯ ಕ್ಷೇತ್ರದ ತಜ್ಞರು ಮತ್ತು ಗ್ರಾಹಕರ ನಡುವೆ ಸೇತುವೆ ಕಟ್ಟುವ ಕೆಲಸವಾಗಬೇಕಿದೆ. ತಂತ್ರಜ್ಞಾನ ಬಳಕೆಯಿಂದ ಬ್ಯಾಂಕಿಂಗ್ ಕ್ಷೇತ್ರಗಳು ಮತ್ತಷ್ಟು ಮುಂದುವರಿದಿವೆ. ಆದರೆ ತಂತ್ರಜ್ಞಾನದ ನ್ಯೂನತೆಯಿಂದ ಎದುರಾಗುವ ಸೈಬರ್‌ ಕ್ರೈಮ್‌ ನಂತಹ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಬ್ಯಾಂಕಿಂಗ್ ವಿಚಾರದ ಹೊರತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಆಯೋಜಿಸಲಾದ ಈ ವಿಚಾರ ಸಂಕಿರಣ ಸೂಕ್ತವಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕರಾದ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶಕುಂತಲಾ, ಶ್ರೀ ಧ. ಮಂ. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ, ಸಂಘಟನಾ ಕಾರ್ಯದರ್ಶಿ, ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕ ಶರಶ್ಚಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್‌. ವಂದಿಸಿದರು. ವಿದ್ಯಾರ್ಥಿನಿ ಕ್ಷಿತಿ ಹಾಗೂ ತಂಡದವರು ಪ್ರಾರ್ಥಿಸಿದರೆ, ವಾಣಿಜ್ಯ ಪ್ರಾಧ್ಯಾಪಕಿಯರಾದ ದೀಕ್ಷಿತ ಕುಮಾರಿ ಮತ್ತು ಫಾತಿಮ ಶಫೀರ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Article Image

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ಉಜಿರೆ, ಜು. 23: ಯುವಜನತೆ ಕ್ಷುಲ್ಲಕ ಕಾರಣಗಳಿಗಾಗಿ ಅತಿರೇಕದ ಕ್ರಮಗಳನ್ನು ಕೈಗೊಳ್ಳುವುದು ಬಹಳ ನೋವಿನ ಸಂಗತಿ ಎಂದು ಮಂಗಳೂರು ಉತ್ತರ ವಲಯದ ಸಹಾಯಕ ಪೊಲೀಸ್ ಆಯುಕ್ತ, ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಮನೋಜ್ ಕುಮಾರ್ ನಾಯಕ್ ಹೇಳಿದರು. ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ಇಂದು (ಜು.23) 2024-25ನೇ ಸಾಲಿನ ವಿದ್ಯಾರ್ಥಿ ಸಂಘ(Students' Council 2024-25)ದ ವಿವಿಧ ವಿದ್ಯಾರ್ಥಿ ಚಟುವಟಿಕೆ ವೇದಿಕೆ(Students' Activity Fora)ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಯಶಸ್ವಿಯಾಗಲು ವಿಫಲವಾದ ಕೂಡಲೇ ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಪ್ರಸ್ತುತ ಯುವಜನತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದೆವೆಂದು, ಪೋಷಕರು ಫೋನ್ ಕೊಡಿಸಲಿಲ್ಲ ಎಂಬ ಇತ್ಯಾದಿ ಸಣ್ಣ ಸಣ್ಣ ಕಾರಣಗಳಿಗೆ ಆತ್ಮಹತ್ಯೆಯಂತಹ ಅತಿರೇಕದ ಕ್ರಮಕ್ಕೆ ಮುಂದಾಗುವುದನ್ನು ಕಂಡಾಗ ನೋವಾಗುತ್ತದೆ. ವೈಫಲ್ಯ ಮತ್ತು ಒತ್ತಡವನ್ನು ನಿಭಾಯಿಸಲು ಕಲಿಯಿರಿ” ಎಂದು ಅವರು ಹೇಳಿದರು.“ವೈಫಲ್ಯಗಳನ್ನು ಸ್ವೀಕರಿಸಿ. ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ. ಸಮಸ್ಯೆಯಿಂದ ದೂರ ಓಡಬೇಡಿ, ಎದುರಿಸಿ. ಒಂದೋ ಯಶಸ್ಸು ಸಿಗಬಹುದು ಇಲ್ಲವೇ ವಿಫಲವಾದರೆ ಅನುಭವ ದೊರಕಬಹುದು. ಒತ್ತಡದ ಸಂದರ್ಭದಲ್ಲಿಯೇ ನಮ್ಮಿಂದ ಅತ್ಯುತ್ತಮ ಫಲಿತಾಂಶ ಲಭಿಸುತ್ತದೆ. ದೇವರು ಕಷ್ಟದ ಸಂದರ್ಭಗಳನ್ನು ನೀಡುತ್ತಿದ್ದಾನೆಂದರೆ ನಿಮ್ಮಿಂದ ಏನೋ ಸಾಧನೆ ಆಗುವುದರಲ್ಲಿದೆ ಎಂದರ್ಥ” ಎಂದರು. ಯುವಜನತೆ ಮಾದಕ ದ್ರವ್ಯಗಳ ದಾಸರಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಕಾಲೇಜಿಗೆ, ಹುಟ್ಟಿದ ಊರಿಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ, ಪೋಷಕರಿಗೆ ಉತ್ತಮ ಮಕ್ಕಳಾಗಿ. ದ್ವಿಚಕ್ರ ವಾಹನ ಓಡಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಠಿಣ ಪರಿಶ್ರಮ ಮತ್ತು ಶಿಸ್ತು ಇದ್ದಾಗ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಎಷ್ಟು ಮುಖ್ಯವೋ ಶಿಸ್ತು ಸಹ ಅಷ್ಟೇ ಮುಖ್ಯ. ಎಸ್.ಡಿ.ಎಂ. ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳಿಗಷ್ಟೇ ಅಲ್ಲದೆ, ಮೌಲ್ಯ, ಕೌಶಲವೃದ್ಧಿಗೆ ಹೇರಳ ಅವಕಾಶವಿದೆ. ಸಾವಿರಾರು ಕನಸು ಹೊತ್ತು ಇಲ್ಲಿ ಬಂದಿದ್ದೀರಿ, ಒಳ್ಳೆಯ ಜಾಗಕ್ಕೆ ಬಂದಿದ್ದೀರಿ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರಯತ್ನ ಮುಂದುವರಿಸಿ” ಎಂದು ಅವರು ಸಲಹೆ ನೀಡಿದರು. ಮುಖ್ಯ ಅತಿಥಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿದರು. ನಾಯಕತ್ವವೆಂಬುದು ರಾಜಕೀಯಕ್ಕೆ ಸೀಮಿತವಲ್ಲ. ಜೀವನದಲ್ಲಿ ನಾಯಕತ್ವ ಮುಖ್ಯ. ಶಿಕ್ಷಣದ ಸಂದರ್ಭದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಘಗಳು ನೆರವಾಗುತ್ತವೆ ಎಂದು ಅವರು ತಿಳಿಸಿದರು. “ಒಬ್ಬ ಗುರುವಿಗೆ ಖುಷಿ ಸಿಗುವುದು ತನ್ನ ವಿದ್ಯಾರ್ಥಿ ಶ್ರೇಷ್ಠ ಸಾಧನೆ ಮಾಡಿದಾಗ. ನಮ್ಮ ಸಂಸ್ಥೆಯಲ್ಲಿ ಕಲಿತ ಮನೋಜ್ ಕುಮಾರ್ ನಾಯಕ್ ಶಿಸ್ತು, ಪರಿಶ್ರಮ ಹಾಗೂ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘಗಳಿಂದ ವಿದ್ಯಾರ್ಥಿಗಳು ವಿವಿಧ ರಾಜಕೀಯ ಪಕ್ಷಗಳ ಸಿದ್ಧಾಂತಗಳಿಂದ ಪ್ರೇರಿತರಾಗಿ ಪರಸ್ಪರ ಹೊಡೆದಾಟ, ವೈಷಮ್ಯದಿಂದ ಇರುವುದರ ಬದಲು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದು, ವ್ಯಕ್ತಿತ್ವ ವಿಕಸನ ಹೊಂದಬೇಕು ಎಂಬ ಉದ್ದೇಶದಿಂದ ಅಂದಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಅವರ ಪರಿಕಲ್ಪನೆಯಂತೆ ವಿಭಿನ್ನ ರೀತಿಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ 'ಚಿಗುರು' ಹಾಗೂ ಉದ್ಘಾಟನಾ ಸಮಾರಂಭದ ಚಿತ್ರಣಗಳನ್ನೊಳಗೊಂಡ 'ಚಿಗುರು' ಭಿತ್ತಿಪತ್ರಿಕೆ ಬಿಡುಗಡೆಗೊಂಡಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೇಯಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜ್ಞಾನ ಸಂಘದ‌ ಅಧ್ಯಕ್ಷ, ತೃತೀಯ ಬಿಸಿಎ ವಿದ್ಯಾರ್ಥಿ ಸುದೇಶ್ ಸ್ವಾಗತಿಸಿದರು. ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು. ಧರಿತ್ರಿ ಭಿಡೆ ಅತಿಥಿ ಪರಿಚಯ ನೀಡಿದರು. ವೀಕ್ಷಾ ವಂದಿಸಿದರು. ಮಾನಸ ಅಗ್ನಿಹೋತ್ರಿ ಮತ್ತು ರುಚಿರಾ ನಿರೂಪಿಸಿದರು.

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ

Article Image

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ

ವಿದ್ಯಾರ್ಥಿಗಳು ಸದಾ ಮಾತೃಭೂಮಿಯನ್ನು ಗೌರವಿಸಬೇಕು. ಪ್ರಜಾಪ್ರಭುತ್ವ ಹಾಗೂ ರಾಜಕೀಯದ ಅರಿವು ನಿಮಗಿರಬೇಕು. ಚುನಾವಣೆ ಮತ್ತು ಅದರ ನಿಯಮಗಳನ್ನು ತಿಳಿಯುವುದರೊಂದಿಗೆ ಮತದಾನದ ಮಹತ್ವವನ್ನು ಪ್ರತಿಯೊಬ್ಬ ಪ್ರಜೆಯು ಅರಿಯುವಂತಾಗಬೇಕು. ಎಂದಿಗೂ ಮತವನ್ನು ಹಣಕ್ಕಾಗಿ ಮಾರಿಕೊಳ್ಳಬಾರದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರೂ ಸಮಾನರು ಎಲ್ಲರಿಗೂ ತಮಗಿಷ್ಟವಾದ ಅಭ್ಯರ್ಥಿಗೆ ಮತ ನೀಡುವ ಹಕ್ಕಿದೆ. ಅದನ್ನು ಪ್ರತಿಯೊಬ್ಬರು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮನ್ನು ಆಳುವ ನಾಯಕರು ನಮ್ಮ ಸಮಸ್ಯೆಗಳಿಗೆ ಅಗತ್ಯತೆಗಳಿಗೆ ಸ್ಪಂದಿಸುವಂತಿರಬೇಕು. ಇಲ್ಲವಾದರೆ ಪ್ರಶ್ನಿಸುವ ಅಧಿಕಾರ ನಮಗಿದೆ ಅದನ್ನು ನಾವು ಮಾಡಬೇಕು. ನಾಯಕರನ್ನ ಆಯ್ಕೆ ಮಾಡಿದ ನಂತರ ಸುಮ್ಮನೆ ಕುಳಿತುಕೊಳ್ಳಬೇಡಿ. ನಾಯಕನಾದವನು ನಿಯಮಗಳನ್ನು ಮಾನವೀಯ ಮೌಲ್ಯಗಳನ್ನು ಗೌರವಿಸುವಂತವನಾಗಬೇಕು. ಅವರು ಮಾಡುವ ತಪ್ಪುಗಳನ್ನು ನೇರವಾಗಿ ಅವರಿಗೆ ತಿಳಿಸುವುದು ಪ್ರಜೆಗಳಾದ ನಿಮ್ಮ ಕರ್ತವ್ಯವಾಗಿದೆ. ವಿರೋಧ ಪಕ್ಷದ ನಾಯಕನಾದವನು ಆಡಳಿತ ಪಕ್ಷದ ಆಡಳಿತವನ್ನು ಸದಾ ವೀಕ್ಷಿಸುತ್ತಿರಬೇಕು. ಅವರ ಆಡಳಿತದಲ್ಲಿನ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಅಧಿಕಾರ ಅವರಿಗಿರುತ್ತದೆ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವತ್ತ ನಿಮ್ಮ ಪ್ರಯತ್ನವಿರಲಿ ನಿಮ್ಮ ಬಗ್ಗೆ ನಿಮಗೆ ಭರವಸೆ ಇರಲಿ. ಸಮಾಜದಲ್ಲಿ ಉತ್ತಮ ನಾಗರಿಕನಾಗಿ ರೂಪುಗೊಳ್ಳಿ ಎಂದು ಬೆಳ್ತಂಗಡಿಯ ಪ್ರಸಿದ್ಧ ವಕೀಲರಾದ ರೊ. ಬಿ.ಕೆ. ಧನಂಜಯ ರಾವ್ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಉದ್ಘಾಟನೆ ನೆರವೇರಿಸಿ ಮಾತನಾಡಿ ನೂತನ ವಿದ್ಯಾರ್ಥಿ ಸಚಿವರುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ತುಂಬಾ ಮುಖ್ಯವಾದದ್ದು. ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಅಂತಹ ಶಾಲಾ ಸಂಸತ್ತಿಗೆ ಸಂಬಂಧಿಸಿದ ಚುನಾವಣೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲ್ಗೊಂಡಿದ್ದೀರಿ. ಈ ಮೂಲಕ ನಮ್ಮ ಸಂವಿಧಾನ, ಆಡಳಿತದ ಬಗ್ಗೆ ಈ ಹಂತದಲ್ಲಿ ಅರಿವನ್ನು ಮಾಡಿಸಿಕೊಳ್ಳಬೇಕು. ಒಬ್ಬ ಉತ್ತಮ ನಾಯಕನಾಗುವ ಸಾಮರ್ಥ್ಯ ಎಲ್ಲರಲ್ಲಿಯೂ ಇರುತ್ತದೆ. ಅದಕ್ಕೆ ಬೇಕಾದ ಮೌಲ್ಯಗಳನ್ನು ಜ್ಞಾನವನ್ನು ಆತ್ಮ ವಿಶ್ವಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಪ್ರತಿ ದಿನ ಹೊಸತನ್ನು ಕಲಿಯುತ್ತೀರಿ. ಒಳ್ಳೆಯ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿ ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿ ಸಚಿವರುಗಳಿಗೆ ಶುಭ ಹಾರೈಸಿದರು. ಮುಖ್ಯೊಪಾಧ್ಯಾಯರಾದ ಶಿವಪ್ರಸಾದ್ ಭಟ್ ನೂತನ ವಿದ್ಯಾರ್ಥಿ ಸಚಿವರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪಮುಖ್ಯೋಪಾಧ್ಯಾಯರಾದ ಜಯಶೀಲ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ದಾಮೋದರ್ ಸಚಿವರುಗಳಿಗೆ ಖಾತೆಗಳನ್ನು ಹಂಚಿದರು, ಶಾಲಾ ಸಂಸತ್ತಿನ ನಾಯಕನಾಗಿ ಶಶಾಂಕ್ ಎ.ಸಿ., ವಿರೋಧ ಪಕ್ಷದ ನಾಯಕನಾಗಿ ಗ್ಯಾನ್ ಕೆ. ಕಾಳೆ, ಸಭಾಪತಿಯಾಗಿ ಯಶಸ್ವಿನಿ, ಉಪ ನಾಯಕಿ ಚಿನ್ಮಯಿ ಅರುಣ್, ಕ್ರೀಡೆ- ಮನ್ವಿತ್ ರಾಜ್ ಜೈನ್, ಆರೋಗ್ಯ- ಲಿಖಿತ್ ಗೌಡ, ಸಾಂಸ್ಕೃತಿಕ- ಸೋನಿಕ, ಶಿಸ್ತು- ತ್ರಿಶೂಲ್, ಆಹಾರ- ಧ್ರುತಿ ಪಾಟೀಲ್, ಪರಿಸರ- ಜೋವಿನ್, ಜಲ ಮತ್ತು ವಿದ್ಯುತ್- ಖಾತೆಗಳ ಸಚಿವರಾಗಿ ಧನ್ಯತಾ ಆಯ್ಕೆಗೊಂಡರು. ವಿದ್ಯಾರ್ಥಿನಿ ಅದಿತಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಿ.ಎ. ಅಂತಿಮ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

Article Image

ಸಿ.ಎ. ಅಂತಿಮ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

2024 ಮೇ ಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜಾ, ಪ್ರೀತಿಶ್ ಕುಡ್ವಾ, ಜೊನಿಟಾ ಜೋಶ್ನಿ ಸೋಜಾ ಡಿ, ಸಾಹುಲ್ ಹಮೀದ್, ಅನುಷಾ ಹೆಗ್ಡೆ, ಮೆಲ್ವಿನ್ ಜೋಸ್ವಿನ್ ಲೋಬೋ, ಪಲ್ಲವಿ ಹೆಚ್ ಆರ್, ಪ್ರಜ್ವಲ್, ವಿಲಿಟಾ ಆಲ್ವಿಶಾ ರೇಗೊ, ಆಂಚಲ್, ಸುಷ್ಮಾ ಎನ್, ಕಿರಣ್ ಚಂದ್ರಶೇಖರ್ ಶೇರಿಗಾರ್, ರೋಯ್ಡನ್, ಕೌಶಿಕ್, ಕಿರಣ್ ಭಾರಧ್ವಜ್, ರಜತ್ ಜೈನ್, ಶುಭಂಕರ್, ರಾಕೇಶ್, ಪ್ರಖ್ಯಾತ್, ಪವನ್, ನಾಗರಾಜ್ ಜಿ ಶೆಟ್ಟಿ, ಹೇಮಂತ್ ಕುಮಾರ್ ಡಿ.ಕೆ. , ಶ್ರೀನಿಧಿ ಎಸ್ ಶೆಟ್ಟಿ, ಖುಶ್ಬೂ ಮತ್ತು ಗೀತಾ ನಿಶಾ ಪಿರೇರಾ - ಒಟ್ಟು 25 ವಿದ್ಯಾರ್ಥಿಗಳು, ಹಾಗೂ ಜನವರಿ 2024ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಕ್ಲರ‍್ಸನ್, ಮೇಘಾ, ತೇಜಸ್, ವಾಣಿಶ್ರೀ, ಧಾಮಿನಿ, ದರ್ಶನ್ ಜಿ ಎಚ್, ಪ್ರಸಾದ, ನೌಫಾಲ್, ಅಂಕಿತಾ ಕಲ್ಲಪ್ಪ, ರಾಷ್ಟ್ರೀತ್ ಸಿ.ಜಿ, ಅವಿನಾಶ್, ಸುಕ್ಷ್ಮಾ, ಅಭಿಷೇಕ್ ಚೋಟಿ ಸೇರಿದಂತೆ 13 ವಿದ್ಯಾರ್ಥಿಗಳು, ಒಟ್ಟು ಈ ವರ್ಷದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗಣನೀಯ ಸಾಧನೆ ಮೆರೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಉಚಿತ ಶಿಕ್ಷಣವನ್ನು ಪಡೆದವರಾಗಿದ್ದಾರೆ. ಇವರಲ್ಲಿ 10 ವಿದ್ಯಾರ್ಥಿಗಳು ಸಿ.ಎ. ಅಂತಿಮ ಪರೀಕ್ಷೆಯ ಗ್ರೂಪ್-01 ಮತ್ತು ಗ್ರೂಪ್-02 ಎರಡೂ ವಿಭಾಗಗಳನ್ನು ಪ್ರಥಮ ಪ್ರಯತ್ನದಲ್ಲೆ ಉತ್ತೀರ್ಣರಾಗಿ ಈ ಸಾಧನೆ ಮೆರೆದಿದ್ದಾರೆ.

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಮೈಂಡ್ ಮ್ಯಾಪಿಂಗ್ ಕಾರ್ಯಾಗಾರ

Article Image

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಮೈಂಡ್ ಮ್ಯಾಪಿಂಗ್ ಕಾರ್ಯಾಗಾರ

ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮೈಂಡ್ ಮ್ಯಾಪಿಂಗ್ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ರಿಯಾಗಿ ಮನಶಾಸ್ತ್ರಜ್ಞ, ಮೈಂಡ್ ಟ್ರೈನರ್ ಆಗಿರುವ ಮಂಗಳೂರಿನ ಪಿಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಸರ್ಫ್ರಾಜ್ ಜೆ. ಹಾಶಿಮ್ ಆಗಮಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಸುಪ್ತ ಮನಸ್ಸಿಗೆ ಅದ್ಭುತವಾದ ಸಾಮರ್ಥ್ಯವಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಜೀವನದಲ್ಲಿ ನಾವು ಇಟ್ಟ ಗುರಿಯನ್ನು ತಲುಪಬಹುದು. ಋಣಾತ್ಮಕ ಆಲೋಚನೆಗಳು ಬಂದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಲು ಧನಾತ್ಮಕ ಆಲೋಚನೆಗಳನ್ನು ಮಾಡಬೇಕು. ನಮ್ಮ ಮನಸ್ಸು ನಮ್ಮ ಸ್ಥಿಮಿತದಲ್ಲಿದ್ದಲ್ಲಿ ಮಾತ್ರ ಹೊರಗಿನ ಪ್ರಪಂಚದಲ್ಲಿ ಏನೇ ಅನಿಶ್ಚಿತತೆ, ಸಮಸ್ಯೆಗಳಿದ್ದರೂ ಅದನ್ನು ಮೀರಿ ಬೆಳೆಯಲು ಸಾಧ್ಯ. ಸದಾ ಒಳಿತನ್ನೇ ಆಲೋಚಿಸಿ ಇತರರಿಗೂ ಕೇಡನ್ನು ಬಯಸದೇ ಇದ್ದಲ್ಲಿ ಶಾಂತಿಯಿಂದ ಬದುಕಬಹುದು ಎಂದರು. ಮನಸ್ಸಿನ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಅರಿವಾಗುವಂತೆ ಒಂದಷ್ಟು ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ವಿಕ್ರಮ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ಉಜಿರೆ: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Article Image

ಉಜಿರೆ: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ 2024- 25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜು. 8ರಂದು ನಡೆಯಿತು. ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ (ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ವಿಜೇತ ಸ್ವಯಂಸೇವಕ), ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ ಎಂ.ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಅವರು, “ಒಳ್ಳೆಯತನ, ಮಾನವೀಯತೆ ಇದ್ದರೆ ಜನರು ನಮ್ಮನ್ನು ಗುರುತಿಸುತ್ತಾರೆ. ಆತ್ಮವಿಶ್ವಾಸವನ್ನು ಜಾಗೃತಗೊಳಿಸಿದರೆ ಅದಕ್ಕಿಂತ ಒಳ್ಳೆಯ ವಿಚಾರ ಮತ್ತೊಂದಿಲ್ಲ” ಎಂದರು. "ನನ್ನ ಕಾಲೇಜು ದಿನಗಳು ಹಲವಾರು ನೆನಪುಗಳನ್ನು ಕೊಟ್ಟಿವೆ. ಬದುಕಿಗೆ ಹಲವು ಪಾಠಗಳನ್ನು ಕಲಿಸಿಕೊಟ್ಟಿವೆ. ಉಜಿರೆ ಕಾಲೇಜು ಮತ್ತು ಎನ್.ಎಸ್.ಎಸ್. ಘಟಕ ನನ್ನನ್ನು ಬೆಳೆಸಿದೆ, ಬದುಕನ್ನು ಕಲಿಸಿದೆ" ಎಂದು ಅವರು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿದರು. “ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುವ ಈ ವಾಸ್ತವ ಜಗತ್ತಿನಲ್ಲಿ ಸಮಾಜಮುಖಿಗಳಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ” ಎಂದರು. ಸೇವೆ ಎನ್ನುವುದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವಂತಹದ್ದು. ‘ನನಗಲ್ಲ ನಿನಗೆ’ ಎನ್ನುವ ಧ್ಯೇಯ ವಾಕ್ಯದಡಿ ಎನ್ಎಸ್ಎಸ್ ಘಟಕ ನಿರಂತರವಾಗಿ ಸೇವೆ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು. ನೂತನ ಸ್ವಯಂಸೇವಕ ನಾಯಕರಿಗೆ ಹಿರಿಯ ಸ್ವಯಂಸೇವಕರು ಅಧಿಕಾರ ಹಸ್ತಾಂತರಿಸಿದರು. ಸ್ವಯಂಸೇವಕರಿಂದ ತಯಾರಿಸಲ್ಪಟ್ಟ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಬಳಿಕ, ನೂತನವಾಗಿ ಆಯ್ಕೆಗೊಂಡ ಸ್ವಯಂಸೇವಕರಿಗೆ ಪ್ರಶಿಕ್ಷಣ ಕಾರ್ಯಕ್ರಮವನ್ನು ಡಾ. ಮಾಧವ್ ಎಂ.ಕೆ. ನೆರವೇರಿಸಿದರು. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಪ್ರಸ್ತಾವಿಸಿದರು. ಇನ್ನೋರ್ವ ಯೋಜನಾಧಿಕಾರಿ ಪ್ರೊ. ದೀಪಾ ಆರ್. ಪಿ. ವಂದಿಸಿದರು. ಸ್ವಯಂಸೇವಕಿ ಶ್ವೇತಾ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.

ಸಸ್ಯಶಾಸ್ತ್ರ ವಿಭಾಗದ ಸಂಘಗಳ ವಾರ್ಷಿಕ ಚಟುವಟಿಕೆ ಉದ್ಘಾಟನೆ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

Article Image

ಸಸ್ಯಶಾಸ್ತ್ರ ವಿಭಾಗದ ಸಂಘಗಳ ವಾರ್ಷಿಕ ಚಟುವಟಿಕೆ ಉದ್ಘಾಟನೆ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಸಸ್ಯಸೌರಭ ಮತ್ತು ಇಕೋ ಕ್ಲಬ್ ಸಂಘಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಜು. 6ರಂದು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಬಿ. ಎ. ಕುಮಾರ ಹೆಗ್ಡೆ, ಸಂಘದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ವಿಭಾಗದ ‘ಸಸ್ಯಸೌರಭ’ ಭಿತ್ತಿಪತ್ರಿಕೆಯ ಶೈಕ್ಷಣಿಕ ವರ್ಷದ ಮೊದಲ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಸ್ಯಸೌರಭ ಮತ್ತು ಇಕೋ ಕ್ಲಬ್ ನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸಸ್ಯಸೌರಭ ಸಂಘದ ಅಧ್ಯಕ್ಷೆ ಮೇಘಶ್ರೀ ವಿ. ಎಸ್. ಸ್ವಾಗತಿಸಿದರು, ಇಕೋ ಕ್ಲಬ್ ಅಧ್ಯಕ್ಷೆ ಪೂರ್ವಿಕ ಜಿ. ಕೆ. ವಂದಿಸಿದರು, ಅನುಪಮ್ ಬಿ. ಮತ್ತು ಶ್ಲಾಘನಾ ವಿ. ಎಸ್. ನಿರೂಪಿಸಿದರು.

ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Article Image

ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಮೂಡುಬಿದಿರೆ, ವಿದ್ಯಾಗಿರಿ: ಸ್ನಾತಕೋತ್ತರ ವಾಣಿಜ್ಯ ವಿದ್ಯಾರ್ಥಿಗಳು ವಾಣಿಜ್ಯದ ಎಲ್ಲಾ ಆಯಾಮಗಳಲ್ಲಿ ನಿಪುಣತೆ ಹೊಂದುವುದು ಅವಶ್ಯಕ ಎಂದು ಲೆಕ್ಕಪರಿಶೋಧಕ ಎಂ. ಉಮೇಶ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತು ಒಂದು ರಣರಂಗ. ಇದನ್ನು ಎದುರಿಸುವ ಎಲ್ಲ ಕಲೆಗಳನ್ನು ವಿದ್ಯಾರ್ಥಿ ಆಗಿದ್ದಾಗಲೇ ಸಿದ್ಧ ಪಡಿಸಿಕೊಳ್ಳಬೇಕು. ತಂತ್ರಜ್ಞಾನದ ಹೊಸ ಆವಿಷ್ಕಾರ ಕೃತಕ ಬುದ್ಧಿಮತ್ತೆ ವಾಣಿಜ್ಯ ವಿದ್ಯಾರ್ಥಿಗಳಿಗೆ ಸವಾಲಾಗಿ ರೂಪುಗೊಂಡಿದ್ದು,, ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಂಡರೆ ಮಾತ್ರ ಇದನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದರು. ವಾಣಿಜ್ಯ ವಿದ್ಯಾರ್ಥಿಗಳು ಖಾತೆ, ತೆರಿಗೆ ಹಾಗೂ ಈ ಕ್ಷೇತ್ರದ ಇತರ ವಿಷಯಗಳ ಕುರಿತು ತಿಳಿಯುವುದು ಹಾಗೂ ವಾಣಿಜ್ಯದ ಎಲ್ಲಾ ಆಗುಹೋಗುಗಳನ್ನು ಗಮನಿಸಬೇಕು ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳ ನಿಜವಾದ ಜೀವನ ಪ್ರಾರಂಭವಾಗುತ್ತಿದೆ. ಈ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ನಿಮ್ಮ ಮೇಲಿನ ನಂಬಿಕೆಯನ್ನು ಬೆಳೆಸಿಕೊಳ್ಳಿ ಎಂದರು. ಧನಾತ್ಮಕ ಆಲೋಚನೆಗಳು ನಿಮ್ಮ ಜೀವನದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಬೀಳ್ಕೊಡುಗೆ ಸಮಾರಂಭ ವಿದ್ಯಾರ್ಥಿ ಜೀವನದ ಒಂದು ಅಮೂಲ್ಯ ಕಾರ್ಯಕ್ರಮ. ಮುಂದಕ್ಕೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ನಮಗೆ ಒಳ್ಳೆಯ ಹೆಸರನ್ನು ತಂದುಕೊಡಲಿ ಎಂದು ಆಶಿಸುತ್ತೇನೆ ಎಂದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ರೇಖಾ ಶೆಟ್ಟಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಪುಷ್ಪಲತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಿಬಾ ಫಾತಿಮಾ ಸ್ವಾಗತಿಸಿ, ಖತೀಜಾ ಇನಾಜ್ ನಿರೂಪಿಸಿದರು. ಪ್ರಜ್ಞಾಶ್ರೀ ವಂದಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆ: ಸಮಾಲೋಚನಾ ಕಾರ್ಯಾಗಾರ

Article Image

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆ: ಸಮಾಲೋಚನಾ ಕಾರ್ಯಾಗಾರ

ಮೂಡುಬಿದಿರೆ: ದೇಶದ 142 ಕೋಟಿ ಜನಸಂಖ್ಯೆಯಲ್ಲಿ 50 ಕೋಟಿಯವರೆಗೆ ವಿದ್ಯಾರ್ಥಿಗಳು ಇರುವುದು ನಮ್ಮ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಜಿಲ್ಲಾ ಆಯುಕ್ತರಾದ ಡಾ. ಎಂ. ಮೋಹನ ಆಳ್ವ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಬುಧವಾರ ನಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳ ಸಮಾಲೋಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವಿದ್ಯೆ ಹಾಗೂ ಬುದ್ಧಿಯನ್ನು ಬೆಳೆಸುವುದರ ಜೊತೆಗೆ ಒಂದು ಒಳ್ಳೆಯ ಮನಸ್ಸನ್ನು ಕಟ್ಟುವ ಅವಶ್ಯಕತೆ ಇದೆ. ಇದನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ನೆರವೇರಿಸಲು ಸಾಧ್ಯ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಇರುವ ಅವಕಾಶಗಳು ಅಪಾರ. ಸ್ಕೌಟ್ಸ್ ಮತ್ತು ಗೈಡ್ಸ್ ನ ಚಟುವಟಿಕೆಗಳು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಪಸರಿಸಬೇಕು ಎಂದರು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲವಾಗಿ ಮೂಡುವ ಅವಶ್ಯಕತೆ ಇದೆ. ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಕೊರತೆ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಅಲ್ಲಿನ ಸಿಬ್ಬಂದಿಯದ್ದು. ಇದರಿಂದ ನಮ್ಮ ಜಿಲ್ಲೆಯು ದೇಶಕ್ಕೆ ಮಾದರಿಯಾಗಲಿದೆ ಎಂದರು. ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಸಿ. ಡಿ. ಜಯಣ್ಣ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಕಾಲೇಜು ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ನಾನು ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಪಸರಿಸುವ ಧ್ಯೇಯದ ಸಭೆಯನ್ನು ಆಯೋಜಿಸುತ್ತೇನೆ ಎಂದು ಭರವಸೆ ನೀಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತರಾದ ಪಿ. ಜಿ. ಆರ್ ಸಿಂಧ್ಯ ಮಾತನಾಡಿ, ರಾಜ್ಯದ ಶಿಕ್ಷಣ ಕ್ಷೇತ್ರದ ಸಿಬ್ಬಂದಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡುವಲ್ಲಿ ಸಹಕಾರಿಯಾಗಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಯಾವುದೇ ರೀತಿಯ ಸಂಭಾವನೆ ನೀಡದೆ ಇದ್ದರೂ, ನಮ್ಮ ಸಿಬ್ಬಂದಿ ಯಾವುದೇ ಅಪೇಕ್ಷೆ ಇಲ್ಲದೆ ತಮ್ಮ ಅಮೂಲ್ಯ ಸಮಯವನ್ನು ಸಮರ್ಪಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ದೇಶದಲ್ಲೇ ಸ್ಥಳೀಯ ಸಂಸ್ಥೆಯೊಂದಕ್ಕೆ ಇಷ್ಟು ಸುಲಲಿತವಾದ ಕಾರ್ಯಾಲಯ ಇರುವುದು ಮೂಡುಬಿದಿರೆಯಲ್ಲಿ ಮಾತ್ರ, ಇದು ಡಾ ಎಂ ಮೋಹನ ಆಳ್ವರ ಮಾರ್ಗದರ್ಶನದಿಂದ ಸಾಧ್ಯವಾಗಿದೆ. ಎಲ್ಲಾ ಪಕ್ಷ, ಜಾತಿ, ಧರ್ಮಗಳೂ ಪ್ರೀತಿಸುವ ವ್ಯಕ್ತಿ ಡಾ. ಎಂ. ಮೋಹನ ಆಳ್ವ ಅವರಿಂದ ನಮಗೆ ಹೆಚ್ಚಿನ ಶಕ್ತಿ ಬಂದಿದೆ ಎಂದು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ ನ2024-25ನೇ ಸಾಲಿನಲ್ಲಿ ನಡೆಯಲಿರುವ ಚಟುವಟಿಕೆಗಳ ಪುಸ್ತಕ ಬಿಡುಗಡೆ ಮಾಡಲಾಯಿತು. ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಬಿ. ಎನ್ ತುಂಬೆ ಸ್ವಾಗತಿಸಿ, ರಾಜ್ಯ ಸಂಘಟನಾ ಆಯುಕ್ತರಾದ ಎಂ ಪ್ರಭಾಕರ ಭಟ್ ವಂದಿಸಿ, ಜಿಲ್ಲಾ ಕೋಶಾಧಿಕಾರಿಗಳಾದ ನವೀನ್‌ಚಂದ್ರ ಅಂಬೂರಿ ನಿರೂಪಿಸಿದರು.

ಎಕ್ಸಲೆಂಟ್ ವಿದ್ಯಾಲಯದಲ್ಲಿ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ

Article Image

ಎಕ್ಸಲೆಂಟ್ ವಿದ್ಯಾಲಯದಲ್ಲಿ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ

ಆಧುನಿಕ ಸಮಾಜದ ಬಹುದೊಡ್ಡ ಸವಾಲು ಮಾದಕ ದ್ರವ್ಯ ಸೇವನೆಯಾಗಿದೆ. ವಿಶೇಷವಾಗಿ ಯುವಜನತೆ ದುರ್ವ್ಯಸನಗಳಿಗೆ ದಾಸರಾಗಿ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಶಾಪವಾಗಿ ಪರಿಣಮಿಸುತ್ತಿದ್ದಾರೆ. ತಾತ್ಕಾಲಿಕ ಮೋಜಿಗಾಗಿ ಆರಂಭವಾಗುವ ಮಾದಕ ವಸ್ತುಗಳ ಸೇವನೆಯಿಂದ ಅವರ ಭವಿಷ್ಯವನ್ನು ನಾಶಮಾಡುವ ಜೊತೆಗೆ ಸಮಾಜದ ನೆಮ್ಮದಿಯನ್ನು ಕೆಡಿಸುವರು. ಮನುಷ್ಯನ ನರಮಂಡಲದ ಮೇಲೆ ಪರಿಣಾಮ ಬೀರುವ ಇಂತಹ ದುಶ್ಚಟಗಳಿಂದ ದೂರವಿದ್ದು ವೈಯಕ್ತಿಕ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕರಾದ ಸಂದೇಶ ಪಿ. ಜಿ. ಅವರು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆಯ ಅಡ್ಡ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಅವರು ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮಾತನಾಡಿ ಹದಿಹರೆಯದ ಸಮಸ್ಯೆಗಳಲ್ಲಿ ಮಾದಕ ವಸ್ತು ಸೇವನೆಯು ಪ್ರಮುಖವಾದುದು. ಅವುಗಳಿಂದ ಉಂಟಾಗುವ ಅನರ್ಥಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಸುರಕ್ಷಿತ ಮತ್ತು ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಮಾಜ ಸ್ಪಂದಿಸಬೇಕಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕರಾದ ದಿವಾಕರ ರೈ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸ

Article Image

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸ

ಭಾಷಾ ಶಾಸ್ತ್ರದಲ್ಲಿ ಪರಿಣಿತಿ ಹೊಂದಿದಾಗ ಇಂಗ್ಲಿಷ್ ಅಧ್ಯಯನ ಸುಲಲಿತವಾಗುತ್ತದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ವತಿಯಿಂದ ಕಾಲೇಜಿನ ಎ.ವಿ ಹಾಲ್‌ನಲ್ಲಿ ಇತೀಚೆಗೆ ನಡೆದ ಭಾಷಾಶಾಸ್ತ್ರ ವಿಷಯದ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳ ಶಿಕ್ಷಣ ವ್ಯವಸ್ಥೆಯಲ್ಲಿ ತಜ್ಞ ಅಧ್ಯಾಪಕರ ಕೊರತೆ ಇದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ, ಆದರೆ ಇದು ಸತ್ಯಕ್ಕೆ ದೂರವಾದ ಮಾತು. ವಿದ್ಯಾರ್ಥಿಗಳು ಜ್ಞಾನದ ಅನ್ವೇಷಣೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡರೆ, ಅಧ್ಯಾಪಕರೊಂದಿಗೆ ಚರ್ಚಿಸಿದರೆ, ಅಧ್ಯಾಪಕರು ಜ್ಞಾನವನ್ನು ವೃದ್ಧಿಸಿಕೊಳ್ಳಲು ಹೆಚ್ಚು ಶ್ರಮವನ್ನು ವಹಿಸುತ್ತಾರೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಕುಲಸಚಿವ (ಅಕಾಡೆಮಿಕ್ಸ್) ಡಾ. ಟಿ. ಕೆ. ರವಿಚಂದ್ರನ್ ಸ್ವಾಗತಿಸಿ, ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಪವಿತ್ರ ತೇಜ್ ನಿರೂಪಿಸಿ, ವಂದಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ‍್ಯಕ್ರಮ

Article Image

ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ‍್ಯಕ್ರಮ

ಮೂಡುಬಿದಿರೆ: ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕ ವಿಜೇತ, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳವಾರ ವಿದ್ಯಾಗಿರಿಯಲ್ಲಿ ಅಭಿನಂದಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಗೌರವಾಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ನಮ್ಮ ದೇಶದಲ್ಲಿ ಪರಿಚಿತ ಆಟವಾಗಿ, ಆದರೆ ಈ ಭಾಗದಲ್ಲಿ ಅಷ್ಟೊಂದು ಖ್ಯಾತಿಗೆ ಬಾರದ ಕ್ರೀಡೆಯನ್ನು, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್, ಕಳೆದ ಐದು ವರ್ಷಗಳ ಸತತ ಪರಿಶ್ರಮದಿಂದಾಗಿ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನಿರ್ಮಾಣ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಜೋಡಿಸಿಕೊಳ್ಳಬೇಕು. ಇವುಗಳ ನಡವಿನ ಸಮತೋಲಿತ ನಡಿಗೆ ಎರಡು ಕ್ಷೇತ್ರದಲ್ಲಿ ಉನ್ನತಿ ಹೊಂದಲು ಸಹಕಾರಿ. ಆದರೆ ಕ್ರೀಡೆಯ ಹೆಸರಿನಲ್ಲಿ ಶಿಕ್ಷಣವನ್ನು ಕುಂಠಿತಗೊಳಿಸುವುದು ಸಾಧುವಲ್ಲ ಎಂದರು. ಆರೋಗ್ಯ, ಮನೋನಿಶ್ಚಯ, ಕ್ರೀಡಾ ಮನೋಭಾವ ಹಾಗೂ ಸೌಹಾರ್ದತೆಯಂತಹ ಗುಣಗಳು ನಾವು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ನಮ್ಮಲ್ಲಿ ಕರಗತವಾಗುತ್ತದೆ ಎಂದರು. ಆಳ್ವಾಸ್ ಸಂಸ್ಥೆ, ಈ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ನಮ್ಮ ಸಂಘದ ಪರಿಶ್ರಮದಿಂದಾಗಿ ಇಂದು ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರತಿ ಹಂತದಲ್ಲೂ ಕಠಿಣ ಸವಾಲನ್ನು ಮೀರಿ ವಿದ್ಯಾರ್ಥಿಗಳು ಜಯಶಾಲಿಗಳಾಗಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ಏಕೈಕ ತಂಡ ನಮ್ಮದು. ಮುಂದಿನ ಆಗಸ್ಟ್ ನಲ್ಲಿ ಹಂಗೇರಿಯ ಬುಡಾಪೇಸ್ಟಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕಿಕ್ ಚಾಂಪಿಯನ್‌ಶಿಫ್‌ನಲ್ಲಿ ಭಾಗವಹಿಸಲು ನಮ್ಮ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪದಕ ವಿಜೇತರ ವಿವರ: ಮೇ 21ರಿಂದ 27ರವರೆಗೆ ಪುಣೆಯಲ್ಲಿ ನಡೆದ ಚಿಲ್ಡನ್ಸ್ ಮತ್ತು ಕೆಡೆಟ್ ಹಾಗೂ ಜೂನ್ 10 ರಿಂದ 14ರ ವರೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಜಿಲ್ಲೆಯ ಕ್ರೀಡಾಪಟುಗಳು 8 ಚಿನ್ನದ ಪದಕ, 7 ಬೆಳ್ಳಿಯ ಪದಕ ಮತ್ತು 13 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಅನ್ಶಿ ಎನ್. ಎಮ್. ವೈಯಕ್ತಿಕ ವಿಭಾಗದಲ್ಲಿ 3 ಚಿನ್ನದ ಪದಕವನ್ನು ಪಡೆದು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಜೂನ್ 10 ರಿಂದ 13ರವರೆಗೆ ಬಾಗಲಕೋಟೆಯಲ್ಲಿ ನಡೆದ ಸೌತ್ ಝೋನ್ ಖೇಲೋ ಇಂಡಿಯಾ ವುಶು ವುಮೆನ್ಸನ ಲೀಗ್ ನಲ್ಲಿ ದಕ್ಷಿಣ ಕನ್ನಡ ವುಶು ಅಸೋಸಿಯೇಷನ್‌ನ ವಿದ್ಯಾರ್ಥಿಗಳು 1 ಚಿನ್ನದ ಪದಕ ಮತ್ತು 6 ಕಂಚಿನ ಪದಕಗಳನ್ನು ಪಡೆದು ಮುಂಬರುವ ರಾಷ್ಟ್ರೀಯ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾರ‍್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದ ನಿತಿನ್ ಸುವರ್ಣ ಮತ್ತು ಶಿಕ್ಷಕ ಸಂಪತ್ ಕುಮಾರ್ ಇದ್ದರು.

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ “ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು” ಕುರಿತು ಸಂವಾದ ಕಾರ್ಯಕ್ರಮ

Article Image

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ “ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು” ಕುರಿತು ಸಂವಾದ ಕಾರ್ಯಕ್ರಮ

ಮೂಡುಬಿದಿರೆ: “ವೈದ್ಯಕೀಯ ಬಹಳ ಪವಿತ್ರವಾದ ವೃತ್ತಿ. ಆ ವೃತ್ತಿಯ ಎಲ್ಲಾ ತ್ಯಾಗ ಮತ್ತು ಸವಾಲುಗಳ ನಡುವೆಯೂ ಅದು ಬಹಳ ಸಂತೃಪ್ತಿಯನ್ನು ನೀಡುವ ವೃತ್ತಿ. ಈ ನಿಟ್ಟಿನಲ್ಲಿ ನಾನು ಜಗತ್ತಿನ ಅತ್ಯಂತ ಉತ್ತಮ ವೃತ್ತಿಯಲ್ಲಿದ್ದೇನೆ” ಎಂದು ಬೆಂಗಳೂರಿನ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೊವಾಸ್ಕುಲರ್ ಸಾಯನ್ಸಸ್ ಎಂಡ್ ರಿಸರ್ಚ್ ನ ಸಹಾಯಕ ಪ್ರಾಧ್ಯಾಪಕ ಡಾ. ಪಾರಿತೋಶ್ ಬಲ್ಲಾಳ್ ಹೇಳಿದರು. ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆಸಿದ, “ನೀಟ್ ಪರೀಕ್ಷೆಯ ಯಶಸ್ಸಿನ ಸೂತ್ರ” ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ವೈದ್ಯನಾಗಲು ಪಡಬೇಕಾದ ತ್ಯಾಗ, ಶ್ರಮದ ಬಗ್ಗೆ ವಿದ್ಯಾರ್ಥಿಯೊಬ್ಬನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಹೃದಯ ತಜ್ಞನಾಗಲು ಹದಿಮೂರು ವರ್ಷ ಬೇಕಾಗುತ್ತದೆ ಎಂದರು. “ಈ ಎರಡು ವರ್ಷಗಳಲ್ಲಿ ನೀವು ಎದುರಿಸುವ ಕಷ್ಟಗಳು ನಿಮ್ಮ ಭವಿಷ್ಯತ್ತಿಗೆ ನಿಮ್ಮನ್ನು ತಯಾರಿಸುತ್ತದೆ. ದೊಡ್ಡ ಕನಸನ್ನು ಕಾಣಲು ಹಿಂಜರಿಯಬೇಡಿ. ಪ್ರಥಮ ಪದವಿಪೂರ್ವದಲ್ಲಿ ನಾನು ಕಡಿಮೆ ಅಂಕಗಳನ್ನು ಗಳಿಸಿದ್ದೆ. ಆಗ ನನ್ನ ಪ್ರಾಂಶುಪಾಲರ ಮಾರ್ಗದರ್ಶನದಿಂದ ಆದ್ಯತೆಗಳಿಗನುಗುಣವಾಗಿ ನನ್ನ ಚಟುವಟಿಗಳನ್ನು ಆಯ್ದುಕೊಂಡು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ನಿಮ್ಮ ಪ್ರಸ್ತುತ ಪರಿಸ್ಥಿತಿ ಹೇಗೆಯೇ ಇದ್ದರೂ ಉತ್ಕ್ರಷ್ಟವಾದುದನ್ನು ಸಾಧಿಸಲು ಸಾಧ್ಯ. ನಿಮ್ಮ ಕಲಿಕೆಯ ಶೈಲಿಯನ್ನು ಅರಿತುಕೊಳ್ಳಿ, ಉತ್ತಮ ನೆನಪಿಗಾಗಿ ನೀವು ಗಳಿಸಿದ ಜ್ಞಾನವನ್ನು ನಿಮ್ಮ ಪರಿಸರದ ಜೊತೆ ಹೊಂದಿಸಿ, ಅದರ ಜೊತೆಗೆ ವ್ಯಾಯಾಮವನ್ನು ಮಾಡಿ, ನಿಮ್ಮ ಕಲಿಕಾ ಸಾಮಾಗ್ರಿಗಳನ್ನು ಸರಿಯಾಗಿ ಜೋಡಿಸಿಕೊಳ್ಳಿ, ನಿಮ್ಮ ಗುರಿಯನ್ನು ದೃಶ್ಯೀಕರಿಸಿ, ಅನೇಕ ಪುನರಾವರ್ತನೆಗಳನ್ನು ಮಾಡಿ” ಎಂದರು. ಹೀಗೆ ಅವರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಡಾ ಪಾರಿತೋಶ್ ಬಲ್ಲಾಳರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಗುರಿಯನ್ನು ತಲುಪಲು ಅವರು ನೀಡಿದ ಸಲಹೆಯನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನೋಲಿಯ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ರತ್ನಮಾನಸದಲ್ಲಿ ಪ್ರವೇಶದ್ವಾರ ಉದ್ಘಾಟನೆ

Article Image

ರತ್ನಮಾನಸದಲ್ಲಿ ಪ್ರವೇಶದ್ವಾರ ಉದ್ಘಾಟನೆ

ಜೀವನಶಿಕ್ಷಣ ನೀಡುವ ಉಜಿರೆಯ ರತ್ನಮಾನಸ ವಿದ್ಯಾರ್ಥಿನಿಲಯದ ಪ್ರವೇಶದ್ವಾರವನ್ನು ಬುಧವಾರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ರತ್ನಮಾನಸ ವಿದ್ಯಾರ್ಥಿ ನಿಲಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಕೃಷಿ, ಹೈನುಗಾರಿಕೆ, ಅಡುಗೆ ಮಾಡುವುದು, ತರಕಾರಿ ಬೆಳೆಸುವುದು, ಲೆಕ್ಕಪತ್ರ ನಿರ್ವಹಣೆ, ಕ್ಷೌರ ಮಾಡುವುದು, ನಾಯಕತ್ವ, ಸಮಾಜ ಸೇವೆ ಇತ್ಯಾದಿ ವಿಷಯಗಳಲ್ಲಿ ಸೂಕ್ತ ಮಾಹಿತಿ, ಮಾರ್ಗದರ್ಶನ, ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಾಗುತ್ತದೆ. ತನ್ಮೂಲಕ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು. ಧರ್ಮಸ್ಥಳಕ್ಕೆ ಬಂದ ಗಣ್ಯರನ್ನು ಉಜಿರೆಯಲ್ಲಿರುವ ಸಿದ್ಧವನ ಗುರುಕುಲ ಮತ್ತು ರತ್ನಮಾನಸಕ್ಕೆ ವೀಕ್ಷಣೆಗೆ ಕಳುಹಿಸಿ ಎಲ್ಲರೂ ಬಾಲಕರ ಚಟುವಟಿಕೆಗಳನ್ನು ಕಂಡು ಶ್ಲಾಘಿಸಿದ್ದಾರೆ ಎಂದರು. ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಸಲ್ಪಡುವ ಎಲ್ಲಾ ಪ್ರೌಢಶಾಲೆಗಳು ಶೇ. ನೂರು ಫಲಿತಾಂಶ ಪಡೆದ ಬಗ್ಗೆ ಅವರು ವಿಶೇಷ ಅಭಿನಂದನೆ ಸಲ್ಲಿಸಿದರು. ಸುಪ್ರಿಯಾ ಹರ್ಷೇಂದ್ರ ಕುಮಾರ್ ಶುಭ ಹಾರೈಸಿದರು. ಅಖಿಲ ಭಾರತ ಮಟ್ಟದಲ್ಲಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರತ್ನಮಾನಸದ ಹಿರಿಯ ವಿದ್ಯಾರ್ಥಿ ಶ್ಯಾಂ ಪ್ರಸಾದ್ ಅವರನ್ನು ಗೌರವಿಸಲಾಯಿತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಐ.ಟಿ. ವಿಭಾಗದ ಸಿ.ಇ.ಒ. ಪೂರನ್‌ವರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರೀತಂ ಸ್ವಾಗತಿಸಿದರು. ನಿಶಿತ್ ಧನ್ಯವಾದವಿತ್ತರು. ಹಿರಿಯ ವಿದ್ಯಾರ್ಥಿ ಶ್ಯಾಂ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

ಎಕ್ಸಲೆಂಟ್, ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಅಭೂತಪೂರ್ವ ಫಲಿತಾಂಶ

Article Image

ಎಕ್ಸಲೆಂಟ್, ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಅಭೂತಪೂರ್ವ ಫಲಿತಾಂಶ

ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ 2024ರ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ನಿಖಿಲ್ ಬಿ. ಗೌಡ 710 ಅಂಕ ಪಡೆದು ರಾಷ್ಟ್ರ ಮಟ್ಟದಲ್ಲಿ 383ನೇ ರ‍್ಯಾಂಕ್ ಪಡೆದು ಅತ್ಯುನ್ನತ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಸೂರಜ್ ಕೂಡಲಗಿಮಠ-687, ನಿಶಾಂತ್ ಪಿ.ಹೆಗಡೆ-685, ಶಿಶಿರ ಬಿ.ಇ.-685, ಭಾರ್ಗವಿ ಎಂ.ಜೆ.-680, ಸೃಜನ್ ಎಂ.ಆರ್.-680, ಶಶಿಭೂಷಣ-676, ಗೌರವ ಭಾರದ್ವಾಜ್-675, ರಿತೀಶ್ ಎಂ.-671, ರೋಹಿತ್ ಗೌಡ-671, ಹರ್ಶಿತ್ ಡಿ.-666, ಸುಹಾಸ್ ಎಂ.ಎಸ್.-665, ವಿಷ್ಣುಪ್ರಸಾದ್ ಎಸ್.ಆರ್.-656, ಸಮರ್ಥ ಸಮ್ಯಮ್ ರಾಮಕೃಷ್ಣ-655, ಶಶಾಂಕ್ ಎಂ.-655, ಚಿನ್ಮಯ್‌ರಾಜ್ ಎಂ.ಎಸ್.-650, ಶ್ರೀಶೈಲ-650, ಶ್ರಾವ್ಯಾ ಡೋಂಗ್ರೆ-648, ತನುಶ್ರೀ ಎಸ್.ಕಲ್ಕೋಟಿ-643, ಶ್ರೆಯಸ್ ಎಸ್.ಮಾಲಿ-642, ಭೀಮಶಂಕರ-638, ಪವನ್ ಜಿ. ಎಸ್.-637, ಕಾರ್ತಿಕ್ ಎಂ.-636, ಶಶಾಂಕ್ ಎಸ್.ಎಸ್.-636, ಸಂಗಮೇಶ್-636, ರೋಶನ್-633, ಸಾಕ್ಷಿತ್ ಎನ್.ಎಸ್.ಗೌಡ-633, ವರ್ಷಾ ಬಡಿಗೇರ್-632, ಮೋಹನ್ ಗೌಡ-630, ಕೆ.ಜಿ. ಪ್ರಣವ್ ಕಶ್ಯಪ್-627, ಚಿರಂತನ್ ಹೆಚ್.ಆರ್.-626, ಸಚೀಂದ್ರ ಆರ್.-625, ಅಂಕುಶ್ ಬಿ.ಎಂ.-625, ಆದಿತ್ಯ ಜೆ.ಬಿ.-623, ಸೃಷ್ಟಿ ಲಕ್ಷ್ಮಣ-623, ಮಂಜುನಾಥ ಎಸ್.-620, ಪಿ.ಆಕಾಶ್ ರೆಡ್ಡಿ-619, ಪ್ರಕೃತಿ ಸಿ.-615, ಆಶ್ರಯಾ ಪಿ.-614, ಶ್ರೀತೇಜ್ ಎಸ್.-614, ಗಿರಿ ತೇಜಸ್ವಿ ಟಿ.-610, ವಿನೋದ್ ರೆಡ್ಡಿ ಪಾಟೀಲ್-607, ಹಿತೇಶ್ ವೈಷ್ಣವ್-605, ಅನಿರುದ್ಧ ಎನ್.ಎಂ.-602, ಗಾಯತ್ರಿ ಮುಕುಂದ್ ಮೊಗೇರ್-602, ಮನೋಜ್ ಬಿ.ಎಲ್.-602, ಕವನಾ ಪಾಟೀಲ್ ಜಿ.ಬಿ.-601, ಸುಹಾಸ್ ಜಿ.-601, ಕರಿಬಸಪ್ಪ ಯಲಿಗಾರ್-600, ಶರಧಿ ಬಿ.ಎಸ್.-600 ಅಂಕಗಳನ್ನು ಗಳಿಸಿದ ಸಾಧಕ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆದು ಅರ್ಹತೆ ಗಳಿಸಿರುತ್ತಾರೆ. 17 ವಿದ್ಯಾರ್ಥಿಗಳು 650ಕ್ಕಿಂತ ಹೆಚ್ಚಿನ ಅಂಕ, 50 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿರುತ್ತಾರೆ. 105 ವಿದ್ಯಾರ್ಥಿಗಳು 550ಕ್ಕಿಂತಲೂ ಹೆಚ್ಚಿನ ಅಂಕ, 152 ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚಿನ ಅಂಕ, 186 ವಿದ್ಯಾರ್ಥಿಗಳು 450ಕ್ಕಿಂತ ಹೆಚ್ಚಿನ ಅಂಕ, 211 ವಿದ್ಯಾರ್ಥಿಗಳು 400ಕ್ಕಿಂತ ಹೆಚ್ಚಿನ ಅಂಕಗಳಿಸುವ ಮೂಲಕ ಎಕ್ಸಲೆಂಟ್ ಸಂಸ್ಥೆಯ ಸ್ಪರ್ಧಾತ್ಮಕ ಮತ್ತು ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ ಪ್ರಶಾಂತ್ ಹೆಗಡೆ ಮತ್ತು ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ಸಿಇಟಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರ‍್ಯಾಂಕ್

Article Image

ಸಿಇಟಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರ‍್ಯಾಂಕ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸಿದ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ. ನಿಖಿಲ್ ಬಿ. ಗೌಡ ವೆಟರ್ನರಿ ಮತ್ತು ನರ್ಸಿಂಗ್‌ನಲ್ಲಿ ರಾಜ್ಯಕ್ಕೆ 8 ನೇ ರ‍್ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾಗಳಲ್ಲಿ 10ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 31ನೇ ರ‍್ಯಾಂಕ್, ಅಗ್ರಿಕಲ್ಚರಲ್‌ನಲ್ಲಿ 108ನೇ ರ‍್ಯಾಂಕ್ ಪಡೆದಿರುತ್ತಾನೆ. ಶ್ರೀ ಶೈಲ ಅಗ್ರಿಕಲ್ಚರಲ್ (ಪಿ) ಮತ್ತು ವೆಟರ್ನರಿ(ಪಿ) 2ನೇ ರ‍್ಯಾಂಕ್, ನಿಶಾಂತ್ ಪಿ. ಹೆಗಡೆ ವೆಟರ್ನರಿ 54ನೇ ರ‍್ಯಾಂಕ್, ನರ್ಸಿಂಗ್ 54, ಅಗ್ರಿಕಲ್ಚರಲ್ 59, ಬಿಎನ್‌ವೈಎಸ್ 61, ಬಿಫಾರ್ಮಾ ಮತ್ತು ಡಿಫಾರ್ಮಾ 89ನೇ ರ‍್ಯಾಂಕ್ ಪಡೆದಿರುತ್ತಾರೆ. ಅದೇ ರೀತಿ ಭಾರ್ಗವಿ ಎಂ. ಜೆ., ಸೃಜನ್ ಎಂ. ಆರ್, ಶಿಶಿರ ಬಿ. ಇ., ರೋಹನ್ ಎಸ್, ಶಶಾಂಕ್ ಎಂ., ಸುಹಾಸ್ ಎಂ. ಎಸ್, ಸಮರ್ಥ ಸಮ್ಯಮ್, ಸಂಜಯ್ ಬಿರಾದಾರ್ ಅತ್ಯುತ್ತಮ ಅಂಕಗಳೊಂದಿಗೆ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿವಿಧ ವಿಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ನೂರರ ಒಳಗೆ 11 ರ‍್ಯಾಂಕ್, ಐದುನೂರರ ಒಳಗೆ 44 ರ‍್ಯಾಂಕ್, ಸಾವಿರದ ಒಳಗೆ 92 ರ‍್ಯಾಂಕ್‌ಗಳನ್ನು ಪಡೆದು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಹತೆ ಗಳಿಸಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಎಕ್ಸಲೆಂಟ್ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ ಶೆಟ್ಟಿ, ಉಪಪ್ರಾಂಶುಪಾಲ, ಸಿಇಟಿ ಸಂಯೋಜಕ ಮತ್ತು ಭೌತಶಾಸ್ತ್ರ ಉಪನ್ಯಾಸಕ ಮನೋಜ್ ಕುಮಾರ್ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಎಕ್ಸಲೆಂಟ್: ಎನ್ ಸಿ ಸಿ ನೌಕದಳ ಎಕ್ಸಲೆಂಟ್ ವಿದ್ಯಾರ್ಥಿ ಬೆಸ್ಟ್ ಕೆಡೆಟ್

Article Image

ಎಕ್ಸಲೆಂಟ್: ಎನ್ ಸಿ ಸಿ ನೌಕದಳ ಎಕ್ಸಲೆಂಟ್ ವಿದ್ಯಾರ್ಥಿ ಬೆಸ್ಟ್ ಕೆಡೆಟ್

ಮಂಗಳೂರಿನ KARNATAKA NAVAL UNIT ಇದರ ಸಹಭಾಗಿತ್ವದಲ್ಲಿ ಉಡುಪಿಯ ಎಂ.ಐ.ಟಿ ಕ್ಯಾಂಪಸ್‌ನಲ್ಲಿ ನಡೆದ CATS NAVY CAMPನಲ್ಲಿ ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಯಶಸ್ ಜಿ. ಜೂನಿಯರ್ ವಿಭಾಗದ ಬೆಸ್ಟ್ ಕೆಡೆಟ್(JD) ಹಾಗೂ ಶ್ರಾವಣಿ ಎ. ಗುರುಸ್ವಾಮಿ(JW) ಸೆಕೆಂಡ್ ಬೆಸ್ಟ್ ಕೆಡೆಟ್‌ಗಳಾಗಿ ಹೊರಹೊಮ್ಮಿದ್ದಾರೆ. ಕ್ಯಾಂಪ್‌ನಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಸಂಗೀತ, ಕ್ರೀಡೆ, ಪರೇಡ್ ಇತ್ಯಾದಿ ಚಟುವಟಿಕೆಗಳಲ್ಲಿ ಬಹುಮಾನ ಗಳಿಸಿಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಕೇರ್‌ಟೇಕರ್ ಆಫೀಸರ್ ರೇಣುಕಾಚಾರ್ಯ ಅಭಿನಂದಿಸಿದ್ದಾರೆ.

ಶುಶ್ರೂಷಕಿಯರ ಸಪ್ತಾಹ ಆಚರಣೆ

Article Image

ಶುಶ್ರೂಷಕಿಯರ ಸಪ್ತಾಹ ಆಚರಣೆ

ಸತ್ತೂರು, ಧಾರವಾಡ: ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಮತ್ತು ಎಸ್.ಡಿ.ಎಂ. ಆಸ್ಪತ್ರೆಯ ನರ್ಸಿಂಗ್ ಸೇವಾ ವಿಭಾಗದಿಂದ ಶುಶ್ರೂಷಕಿಯರ ಸಪ್ತಾಹ “ಉತ್ಕರ್ಷ 2024” ಅನ್ನು ಮೇ 13 ರಿಂದ 20ರ ವರೆಗೆ ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಶುಶ್ರೂಷಕಿಯರಿಗೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗೋಲಿ ಸ್ಪರ್ಧೆ, ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಶುಶ್ರೂಷಕಿಯರ ಸಪ್ತಾಹವನ್ನು ಉದ್ಘಾಟಿಸಿದರು. ಶುಶ್ರೂಷಕಿಯರ ಸಪ್ತಾಹದ ಅಂಗವಾಗಿ ಮೇ 20 ರಂದು ಶುಶ್ರೂಷಕಿಯರ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು. ಸಮಾರೋಪ ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಶ್ರೀಮತಿ ಪದ್ಮಲತಾ ನಿರಂಜನ್ ಅವರು ಆಗಮಿಸಿ ನರ್ಸಿಂಗ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮತ್ತು ನರ್ಸಿಂಗ್‌ನಲ್ಲಿ ಉತ್ತಮ ಸೇವೆ ನೀಡಿದ ಶುಶ್ರೂಷಕಿಯರಿಗೆ ಸ್ಮರಣಿಕೆ ಮತ್ತು ಚಿನ್ನದ ಪದಕಗಳನ್ನು ನೀಡಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಡಿ.ಎಂ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ: ಶುಶ್ರೂಷಕಿಯವರ ಸ್ಪರ್ಶವು ರೋಗಿಗಳನ್ನು ವೇಗವಾಗಿ ಮತ್ತು ಉತ್ತಮವಾಗಿ ಗುಣಪಡಿಸುತ್ತದೆ. ಶುಶ್ರೂಷಕಿಯವರು ಕಾಲಕ್ಕೆ ಅಣುಗುಣವಾಗಿ ತಮ್ಮ ಜ್ಞಾನವನ್ನು ನವೀಕರಿಸಬೇಕು. ಶುಶ್ರೂಷಕಿಯವರು ಸಣ್ಣ ಕೆಲಸಗಳನ್ನು ಉತ್ತಮವಾಗಿ ಮಾಡುವ ಮೂಲಕ ಶ್ರೇಷ್ಠರಾಗುತ್ತಾರೆ. ಶುಶ್ರೂಷಕಿಯರಿಗೆ ಪ್ರಪಂಚದಾದ್ಯಂತ ಸಾಕಷ್ಟು ಬೇಡಿಕೆಯಿದೆ, ಆದ್ದರಿಂದ ವೃತ್ತಿ ಪ್ರಗತಿ ಮತ್ತು ಉತ್ಕೃಷ್ಟತೆಯು ಮುಖ್ಯವಾಗಿದೆ. ವಿದೇಶಗಳಲ್ಲಿ ಸೇವೆ ಸಲ್ಲಿಸಲು ಶುಶ್ರೂಷಕಿಯರು ವಿವಿಧ ಭಾಷೆಗಳನ್ನು ಕಲಿಯಬೇಕು. ಹಿರಿಯ ಪ್ರಾಧ್ಯಾಪಕರಾದ ಡಾ. ಗಂಗಾಬಾಯಿ ಕುಲಕರ್ಣಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ. ಪ್ರಸನ್ನ ದೇಶಪಾಂಡೆ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ನಾಗೇಶ ಅಜ್ಜವಾಡಿಮಠ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ನಾನ್ಸಿ ಮೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಂಜುಳಾ ಕೆ.ಬಿ. ವಂದನಾರ್ಪಣೆ ಸಲ್ಲಿಸಿದರು. ಸಭಾ ಕಾರ್ಯಕ್ರಮದ ನಂತರ ಶುಶ್ರೂಷಕಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಬೆಂಗಳೂರು: ಜೂನ್ 14ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ-2

Article Image

ಬೆಂಗಳೂರು: ಜೂನ್ 14ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ-2

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೂನ್ 7ರಿಂದ 14ರವರೆಗೆ ನಡೆಸಲು ತೀರ್ಮಾನಿಸಿದ್ದ ಪರೀಕ್ಷೆಯನ್ನು ಜೂನ್ 14ರಿಂದ 22ರವರೆಗೆ ನಡೆಸುವುದಾಗಿ ಘೋಷಿಸಲಾಗಿದೆ. ಈ ಹಿಂದಿನ ವೇಳಾಪಟ್ಟಿ ಪ್ರಕಾರ ಜೂನ್ 14ಕ್ಕೆ ಪರೀಕ್ಷೆ ಮುಗಿಯಬೇಕಿತ್ತು. ಆದರೆ, ಪರಿಹಾರ ಬೋಧನಾ ಅವಧಿ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ. ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣದಲ್ಲಿ ಪಡೆದು ಶಿಕ್ಷಕರು ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿ: ಜೂನ್ 14-ಕನ್ನಡ, ಜೂನ್ 15-ಹಿಂದಿ NSQF, ಜೂನ್ 18-ಗಣಿತ, ಜೂನ್ 20-ವಿಜ್ಞಾನ, ಜೂನ್ 21-ಇಂಗ್ಲಿಷ್, ಜೂನ್ 22 -ಸಮಾಜವಿಜ್ಞಾನ.

ಡಿಪ್ಲೊಮಾ ಕೋರ್ಸ್: ಅರ್ಜಿ ಆಹ್ವಾನ

Article Image

ಡಿಪ್ಲೊಮಾ ಕೋರ್ಸ್: ಅರ್ಜಿ ಆಹ್ವಾನ

ಮಂಗಳೂರು: ಬೈಕಂಪಾಡಿಯಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2024-25ನೇ ಸಾಲಿನ ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ ಎಸೆಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನೇರವಾಗಿ ದ್ವಿತೀಯ ವರ್ಷದ ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. ಡಿಪ್ಲೊಮಾ ಇನ್ ‘ಟೂಲ್ ಆ್ಯಂಡ್ ಡೈ ಮೇಕಿಂಗ್ ವಿಭಾಗದಲ್ಲಿ 60 ವಿದ್ಯಾರ್ಥಿಗಳು, ಡಿಪ್ಲೊಮಾ ಇನ್ ಪ್ರಿಶಿಷನ್ ಮ್ಯಾನುಫ್ಯಾಕ್ಟರಿಂಗ್ ವಿಭಾಗದಲ್ಲಿ 30 ವಿದ್ಯಾರ್ಥಿಗಳು, ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಮಿಷಿನ್ ಲರ್ನಿಂಗ್ ವಿಭಾಗದಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಕೋರ್ಸುಗಳ ಅಧ್ಯಯನ ಮಾಡುವಾಗ ಒಂದು ವರ್ಷದ ಇಂಟರ್ನ್ಶಿಪ್ ತರಬೇತಿ ಜೊತೆಗೆ ವಿದ್ಯಾರ್ಥಿಗಳಿಗೆ ಮಾಸಿಕ 15,000 ದಿಂದ 20,000 ರೂ. ವರೆಗೆ ಶಿಷ್ಯವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಬೈಕಂಪಾಡಿಯಲಿರುವ ಕೈಗಾರಿಕಾ ವಲಯದ, ಪ್ಲಾಟ್ ನಂಬರ್ 7ಇ ಯಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಸಂಪರ್ಕಿಸುವಂತೆ ಜಿಟಿಟಿಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಲೇಜುಗಳ ಸಂಯೋಜನೆ: ಅರ್ಜಿ ಆಹ್ವಾನ

Article Image

ಕಾಲೇಜುಗಳ ಸಂಯೋಜನೆ: ಅರ್ಜಿ ಆಹ್ವಾನ

ಮಂಗಳೂರು: ಮಂಗಳೂರು ವಿವಿ ಸಂಯೋಜನೆಗಳ ಪಟ್ಟಿರುವ ಎಲ್ಲ ಕಾಲೇಜು, ವಿದ್ಯಾಸಂಸ್ಥೆಗಳಿಂದ 2024-25ನೇ ಸಾಲಿಗೆ ಸಂಯೋಜಿತ ಕಾಲೇಜುಗಳಿಗೆ ಹೊಸ ವ್ಯಾಸಂಗ ಕ್ರಮ ಮತ್ತು ಹೊಸ ವಿಷಯಗಳು, ಮುಂದುವರಿಕೆ, ವಿಸ್ತರಣೆ ಸಂಯೋಜನೆ, ವಿದ್ಯಾರ್ಥಿ ಪ್ರಮಾಣ ಹೆಚ್ಚಳ, ಕಾಲೇಜಿನ ಹೆಸರು ಬದಲಾವಣೆ, ಮ್ಯಾನೇಜ್‌ಮೆಂಟ್ ಬದಲಾವಣೆ ಮತ್ತು ಆಸಕ್ತ ವಿದ್ಯಾಸಂಸ್ಥೆಗಳಿಂದ ಹೊಸ ಸಂಯೋಜನೆ ನೀಡುವ ಬಗ್ಗೆ ಪೋರ್ಟಲ್ www.uucms.karnataka.gov.in ಮೂಲಕ 2000 ರೂ. ಶುಲ್ಕ ಪಾವತಿಸಿ ಮೇ 25ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ www.mangloreuniversity.ac.in ವೆಬ್ ಸೈಟ್ ನೋಡುವಂತೆ ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್‌ಟಿಇ ಅರ್ಜಿ: ಅವಧಿ ವಿಸ್ತರಣೆ

Article Image

ಆರ್‌ಟಿಇ ಅರ್ಜಿ: ಅವಧಿ ವಿಸ್ತರಣೆ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು 2024-25ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 20ರ ವರೆಗೆ ವಿಸ್ತರಿಸಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೂ.19ರಂದು ಆನ್‌ಲೈನ್ ಮೂಲಕ 2ನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಇಲ್ಲಿ ಆಯ್ಕೆಯಾದವರಿಗೆ ಜೂ.20ರಿಂದ 27ರ ವರೆಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದಾಖಲಾದ ಮಕ್ಕಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲು ಜೂ.20ರಿಂದ 28ರವರೆಗೆ ಅವಕಾಶ ಕಲ್ಪಿಸಿ ಶಾಲಾ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿ ಹೊರಡಿಸಿದೆ. ಜೂ.1ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ. ಜೂ.5ರಂದು ಅನ್‌ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆಯ ಪಲಿತಾಂಶ ಪ್ರಕಟವಾಗಲಿದೆ. ಆಯ್ಕೆಯಾದ ಮಕ್ಕಳಿಗೆ ಜೂ.6ರಿಂದ 13ರವರೆಗೆ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ.

ಸಿಇಟಿ: ಕೇಂದ್ರ ಪಠ್ಯಕ್ರಮದ ಪಿಯು ಅಂಕ ದಾಖಲಿಸಲು ಮೇ 20ರವರೆಗೆ ಅವಕಾಶ

Article Image

ಸಿಇಟಿ: ಕೇಂದ್ರ ಪಠ್ಯಕ್ರಮದ ಪಿಯು ಅಂಕ ದಾಖಲಿಸಲು ಮೇ 20ರವರೆಗೆ ಅವಕಾಶ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 12ನೇ ತರಗತಿಯನ್ನು ಸಿಬಿಎಸ್‌ಇ (ಜಮ್ಮು ಮತ್ತು ಕಾಶ್ಮೀರ ಸೇರಿದಂತೆ), ಸಿಐಎಸ್‌ಸಿಇ, 10+2, ಐಜಿಸಿಎಸ್‌ಇ ಮತ್ತಿತರ ಬೋರ್ಡುಗಳಲ್ಲಿ 2024ರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ದಾಖಲಿಸಲು ಮೇ 14ರಿಂದ 20ರವರೆಗೆ ಆನ್‌ಲೈನ್ ಪೋರ್ಟಲ್ ಲಿಂಕ್ ಅನ್ನು ಸಕ್ರಿಯಗೊಳಿಸಲಿದೆ. ಅರ್ಹ ಅಭ್ಯರ್ಥಿಗಳು ಮೇ 20ರ ಒಳಗೆ ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳ ವಿವರಗಳನ್ನು ನಿಗದಿತ ಲಿಂಕ್‌ನಲ್ಲಿ ದಾಖಲಿಸಿ, ಅಂಕಪಟ್ಟಿಯ ಪಿಡಿಎಫ್‌ ಪ್ರತಿಯನ್ನು ತಪ್ಪದೇ ಅಪ್ ಲೋಡ್ ಮಾಡಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2024ಕ್ಕಿಂತ ಹಿಂದಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರೂ ಅಂಕಗಳನ್ನು ದಾಖಲಿಸಬೇಕು ಎಂದು ಸೂಚಿಸಲಾಗಿದೆ. ಅರ್ಹತಾ ಕಂಡಿಕೆ 'Ckause-Y' ಅನ್ನು ಆಯ್ಕೆ ಮಾಡಿರುವ ಅಭ್ಯರ್ಥಿಗಳೂ ಅಂಕಗಳನ್ನು ಪೋರ್ಟಲ್ ನಲ್ಲಿ ದಾಖಲಿಸಬೇಕು. ಕರ್ನಾಟಕ ದ್ವಿತೀಯ ಪಿಯುಸಿ 2024ರ ಅಂಕಗಳನ್ನು ಪ್ರಾಧಿಕಾರವು ನೇರವಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಪಡೆದುಕೊಳ್ಳುತ್ತದೆ. ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024ರ 'ನಾಟಾ' ಪರೀಕ್ಷೆಯ ಅಂಕಗಳನ್ನು ಅರ್ಹತೆಗೆ‌ ಅನುಗುಣವಾಗಿ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.inಗೆ ಭೇಟಿ ನೀಡಲು ಕೋರಿದೆ.

ಸರಕಾರಿ ಪಾಲಿಟೆಕ್ನಿಕ್: ಡಿಪ್ಲೋಮಾ ಪ್ರವೇಶಕ್ಕೆ ಆಹ್ವಾನ

Article Image

ಸರಕಾರಿ ಪಾಲಿಟೆಕ್ನಿಕ್: ಡಿಪ್ಲೋಮಾ ಪ್ರವೇಶಕ್ಕೆ ಆಹ್ವಾನ

ಬಂಟ್ವಾಳ: ರಾಜ್ಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಆಯುಕ್ತರ ಆದೇಶದ ಪ್ರಕಾರ 2024-25ನೇ ಸಾಲಿನಲ್ಲಿ ಮೆರಿಟ್ ಆಧಾರಿತ ಆನ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡುವ ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕೆ ಎಸೆಸೆಲ್ಸಿ/ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ ತಾಂತ್ರಿಕ ವೆಬ್‌ಸೈಟ್ https://dtetech.karnataka.gov.in/kartechnical ನಿಂದ ಮಾಹಿತಿ ಪುಸ್ತಕವನ್ನು ಡೌನ್ ಲೋಡ್ ಮಾಡಿಕೊಂಡು ಅದರ ಸೂಚನೆಗಳನ್ವಯ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಸಿಬಂದಿಯವರ ಸಹಾಯದೊಂದಿಗೆ ತಮ್ಮ ಇಚ್ಛೆಗನುಗುಣವಾಗಿ ಕೋರ್ಸ್/ಕಾಲೇಜು ಆಯ್ಕೆ ಮಾಡಿ ಆನ್‌ಲೈನ್ ಮೂಲಕ ಅರ್ಜಿ ದಾಖಲಿಸಲು ಮೇ 21 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

ಪ್ರಾಯೋಗಿಕ ಪರೀಕ್ಷೆ ಮುಂದಕ್ಕೆ

Article Image

ಪ್ರಾಯೋಗಿಕ ಪರೀಕ್ಷೆ ಮುಂದಕ್ಕೆ

ರಾಜ್ಯದ ನಾನಾ ಕೃಷಿ ಮತ್ತು ತೋಟಗಾರಿಕೆ ವಿವಿಗಳಲ್ಲಿ ವಿವಿಧ ಸ್ನಾತಕ ಪದವಿಗಳ ಪ್ರವೇಶಕ್ಕೆ ಮೇ 14ರಂದು ನಿಗದಿಯಾಗಿದ್ದ ಪ್ರಾಯೋಗಿಕ ಪರೀಕ್ಷೆಯನ್ನು ಮೇ 25ಕ್ಕೆ ಮುಂದೂಡಲಾಗಿದೆ. 2024-25ನೇ ಸಾಲಿನ ಪ್ರಥಮ ವರ್ಷದ ಸ್ನಾತಕ ಪದವಿಗಳಿಗೆ ಬೆಂಗಳೂರು, ಧಾರವಾಡ ಕೃಷಿ ವಿವಿ, ರಾಯಚೂರು ಮತ್ತು ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿಯಲ್ಲಿ ವಿವಿಧ ಸ್ನಾತಕ ಪದವಿಗಳಿಗೆ ಮೇ 17ರಂದು ಸಂಜೆ 4 ಗಂಟೆಯೊಳಗೆ ಸೂಕ್ತ ದಾಖಲೆಗಳನ್ನು ಖುದ್ದು ಸಂಬಂಧಪಟ್ಟ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲೇ ಸಲ್ಲಿಸಬೇಕು ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ. ಮುಂದೂಡಿರುವ ಸ್ನಾತಕ ಪದವಿಯ ಪ್ರಾಯೋಗಿಕ ಪರೀಕ್ಷೆಗಳ ಕುರಿತು ಹಾಗೂ ದಾಖಲಾತಿ ಸಲ್ಲಿಕೆಯ ಕುರಿತ ಪೂರ್ಣ ಮಾಹಿತಿಯನ್ನು ಕರ್ನಾಟಕ ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಗಳ ಅಧಿಕೃತ ಅಂತರ್ಜಾಲದಿಂದ ಪಡೆಯಬಹುದು ಎಂದು ತಿಳಿಸಿದೆ.

ವೈದ್ಯಕೀಯ ಕಾಲೇಜುಗಳ ಬಾಸ್ಕೆಟ್‌ಬಾಲ್ ಪಂದ್ಯಾವಳಿ

Article Image

ವೈದ್ಯಕೀಯ ಕಾಲೇಜುಗಳ ಬಾಸ್ಕೆಟ್‌ಬಾಲ್ ಪಂದ್ಯಾವಳಿ

ಸತ್ತೂರು, ಧಾರವಾಡ: ವೈದ್ಯಕೀಯ ಕಾಲೇಜುಗಳ ಬಾಸ್ಕೆಟ್‌ಬಾಲ್ (ಪುರುಷ ಮತ್ತು ಮಹಿಳೆಯರ) ಪಂದ್ಯಾವಳಿಯನ್ನು ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೇ 9 ರಿಂದ 12 ರವರೆಗೆ “ಕ್ರಾಸ್‌ಓವರ್-2024” ಅನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಂದ 11 ಪುರುಷರ ಮತ್ತು 6 ಮಹಿಳಾ ವೈದ್ಯಕೀಯ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಅವರು ಈ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪುರುಷ ಮತ್ತು ಮಹಿಳಾ ತಂಡಗಳು ಪ್ರಥಮ ಸ್ಥಾನ ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪುರುಷ ಮತ್ತು ಮಹಿಳಾ ತಂಡಗಳು ದ್ವಿತಿಯ ಸ್ಥಾನಗಳನ್ನು ಗಳಿಸಿವೆ. ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ ಅವರು ಪಂದ್ಯಾವಳಿಗಳ ವಿಜೇತರಿಗೆ ಮೇ 12 ರಂದು ಬಹುಮಾನಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ, ಡಾ. ನೈದಿಲ ಶೆಟ್ಟಿ ಮತ್ತು ಡಾ. ಶರದ್ ಜವಳಿ ಉಪಸ್ಥಿತರಿದ್ದರು.

ಸಿಬಿಎಸ್ಇ: ಎಕ್ಸೆಲೆಂಟ್ ಸಿಬಿಎಸ್ಇ ಶಾಲೆಗೆ ಶೇ.100 ಫಲಿತಾಂಶ

Article Image

ಸಿಬಿಎಸ್ಇ: ಎಕ್ಸೆಲೆಂಟ್ ಸಿಬಿಎಸ್ಇ ಶಾಲೆಗೆ ಶೇ.100 ಫಲಿತಾಂಶ

ಮೂಡುಬಿದಿರೆ: ಎಕ್ಸೆಲೆಂಟ್ ಮೂಡುಬಿದಿರೆ ಆಡಳಿತದಲ್ಲಿ ನಡೆಯುತ್ತಿರುವ ಎಂ. ಕೆ. ಶೆಟ್ಟಿ ಸ್ಕೂಲ್ ಮೂಡುಬಿದಿರೆ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 27 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿರುತ್ತಾರೆ. ಸುವಿತ್ ಭಂಡಾರಿ ಶೇ.92 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಶೇ.90 ಅಂಕಗಳಿಸಿದ ಸುಯೋಗ್ ಎಸ್. ಅಂಚನ್ ಹಾಗೂ ಪೃಥ್ವಿ ಪ್ರಕಾಶ್ ಭಂಡಾರಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಆಡಳಿತ ನಿರ್ದೇಶಕರಾದ ಬಿ .ಪಿ. ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಬಿ. ಪುಷ್ಪರಾಜ್ ಹಾಗೂ ಪ್ರಾಂಶುಪಾಲರಾದ ಸುರೇಶ ಅಭಿನಂದನೆ ಸಲ್ಲಿಸಿದ್ದಾರೆ.

ಮಂಗಳೂರು: ಪಶುಪಾಲಕರಿಂದ ಅರ್ಜಿ ಆಹ್ವಾನ

Article Image

ಮಂಗಳೂರು: ಪಶುಪಾಲಕರಿಂದ ಅರ್ಜಿ ಆಹ್ವಾನ

ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಶೇ.50 ಸಹಾಯಧನ ಮೂಲಕ 2024-25 ನೇ ಸಾಲಿಗೆ 2 ಎಚ್‌ಪಿ ಮೇವು ಕತ್ತರಿಸುವ ಯಂತ್ರಗಳ ಸರಬರಾಜು ಯೋಜನೆಗೆ ಪಶುಪಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಸ್ಥಳೀಯ ಪಶು ವೈದ್ಯಾಧಿಕಾರಿ ಅಥವಾ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ), ಹತ್ತಿರದ ಪಶು ಆಸ್ಪತ್ರೆ ಕಚೇರಿಯನ್ನು ಸಂಪರ್ಕಿಸಿ, ಅರ್ಜಿಯನ್ನು ಅವಶ್ಯಕ ದಾಖಲೆಯೊಂದಿಗೆ ಮೇ 18ರೊಳಗೆ ಸಲ್ಲಿಸುವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

First Previous

Showing 2 of 3 pages

Next Last