Article Image

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟ

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟ

ಉಜಿರೆ, ಸೆ.12: ಸಾಹಿತ್ಯವೆನ್ನುವುದು ಸಮುದ್ರ ಇದ್ದಂತೆ. ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಡೀ ಜಗತ್ತಿನ ಸಾಹಿತ್ಯ ತಿಳಿಯಲು ಒಂದು ಜನ್ಮ ಸಾಕಾಗುವುದಿಲ್ಲ. ಯಾವ ಭಾವಕ್ಕೆ ಎಷ್ಟು ಒತ್ತು ನೀಡುತ್ತೇವೆ ಎಂಬುದು ಸಾಹಿತ್ಯದಲ್ಲಿ ಮುಖ್ಯವಾಗುತ್ತದೆ ಎಂದು ಯುವ ಕವಿ, ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮಧು ಬಿರಾದಾರ ಹೇಳಿದರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ಇಂದು (ಸೆ. 12) ಆಯೋಜಿಸಿದ್ದ ‘ಕಾವ್ಯ ಕಟ್ಟುವ ಬಗೆ’ ಕಾವ್ಯ ರಚನಾ ಕಮ್ಮಟದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪಂಪ, ರನ್ನ, ಕುವೆಂಪು ಬರೆದಿರುವುದು ಮಹಾಭಾರತವೇ. ಆದರೆ ಅವರ ಕಾಲಘಟ್ಟ, ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿ ಬೇರೆಯಾಗಿದೆ. ಆದ್ದರಿಂದ ಅವರ ಕೃತಿ ವಿಶಿಷ್ಟತೆ ಹೊಂದಿದೆ. ಪ್ರವಾಹದ ಎದುರು ನಿಲ್ಲುವ ಕವಿಗಳು ಮಾತ್ರ ನೆನಪಿನಲ್ಲಿ ಇರುತ್ತಾರೆ. ಅನುಭವವಿದ್ದರೆ ಕವನ ತುಂಬಾ ಸುಲಭವಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ಕವಿತೆ ಬರೆಯುವುದು ಬಲು ಸುಲಭ. ಇದಕ್ಕೆ ಸೂಕ್ಷ್ಮಗ್ರಹಿಕೆ, ಸಹೃದಯತೆ ಜತೆಗೆ ವಿದ್ಯಮಾನಗಳ ಕುರಿತು ಕುತೂಹಲವಿರಬೇಕು. ಇದರ ಮೇಲೆ ನಮ್ಮ ಅಂತರಂಗದಲ್ಲಿ ಮೂಡುವ ಭಾವನೆಗಳಿಗೆ ಅಕ್ಷರ ನೀಡಿದರೆ ಅದು ಕವನವಾಗುತ್ತದೆ” ಎಂದರು. “ಪ್ರಾಸ, ಭಾವ ಪೂರ್ಣವಾಗಿದ್ದರೆ ಅದುವೇ ಕಾವ್ಯ. ಭಾವನಾತ್ಮಕವಾಗಿ ನಮ್ಮನ್ನು ಹಿಂದಕ್ಕೆ ಕರೆದೊಯ್ಯುವ ಶಕ್ತಿ ಕಾವ್ಯಕ್ಕಿದೆ. ನಾವು ಹಿಂದೆ ಕೇಳಿದ ಪದ್ಯಗಳನ್ನು ಮತ್ತೆ ಕೇಳಿದಾಗ ನಮ್ಮ ಹಿಂದಿನ ದಿನಗಳು ನೆನಪಾಗುತ್ತವೆ” ಎಂದರು. ಕನ್ನಡ ಅಧ್ಯಾಪಕರಾದ ಡಾ. ದಿವಾಕರ ಕೊಕ್ಕಡ, ಡಾ ಎಂ.ಪಿ. ಶ್ರೀನಾಥ್, ಡಾ. ರಾಜಶೇಖರ್, ಭವ್ಯಶ್ರೀ, ತೇಜಸ್ವಿ ಕಾರ್ಯಕ್ರಮ ಸಂಯೋಜಕ ಡಾ. ನಾಗಣ್ಣ ಡಿ.ಎ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಉಲ್ಲೇಖ ವಂದಿಸಿ, ಹಿಮಾಲಿ ಎಂ. ಪಿ. ಕಾರ್ಯಕ್ರಮ ನಿರೂಪಿಸಿದರು.

ಎಸ್.ಡಿ.ಎಂ. ಪಿ.ಜಿ ಸೆಂಟರ್ ಓರಿಯೆಂಟೇಶನ್ ಕಾರ್ಯಕ್ರಮ

Article Image

ಎಸ್.ಡಿ.ಎಂ. ಪಿ.ಜಿ ಸೆಂಟರ್ ಓರಿಯೆಂಟೇಶನ್ ಕಾರ್ಯಕ್ರಮ

ಉಜಿರೆ: ಕೌಶಲ್ಯಗಳನ್ನು ನವೀಕರಿಸಿಕೊಂಡು ಜ್ಞಾನಾಧಾರಿತ ಸಂಶೋಧನಾ ಪ್ರಜ್ಞೆ ಮತ್ತು ಅನ್ವಯಿಕ ಸಾಮರ್ಥ್ಯದೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರುಗೊಂಡಾಗ ಮಾತ್ರ ಅಚ್ಚಳಿಯದ ಪ್ರಭಾವ ಮೂಡಿಸಿ ಯಶಸ್ಸುಗಳಿಸಲು ಸಾಧ್ಯ ಎಂದು ಬೆಂಗಳೂರಿನ ಸಿಗ್ಮಾ ಅಲ್ಡಿಜ್ ಕಂಪನಿಯ ತಾಂತ್ರಿಕ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ. ರವೀಂದ್ರ ವಿಕ್ರಮ್ ಸಿಂಗ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಉದ್ದೇಶದಿಂದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಗುರುವಾರ ಆಯೋಜಿತವಾದ ಕಾರ್ಯಕ್ರಮದಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ಸಿಕ್ಕಿತು. ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಹತ್ತು ವರ್ಷಗಳ ಹಿಂದಿನ ಕೌಶಲ್ಯಗಳು ಇದೀಗ ಅನ್ವಯಗೊಳ್ಳುವುದಿಲ್ಲ. ಕೋವಿಡ್ ನಂತರದ ಜಗತ್ತು ತಾಂತ್ರಿಕವಾಗಿ ಬದಲಾಗಿದೆ. ಹಳೆಯ ಕೌಶಲ್ಯಗಳ ನವೀಕರಣ ಇಂದಿನ ಅಗತ್ಯ. ತಂತ್ರಜ್ಞಾನವನ್ನು ನಿರಾಕರಿಸುವಂತಿಲ್ಲ. ಅದನ್ನು ಟೀಕಿಸಿ ದೂರ ನಿಲ್ಲುವಂತಿಲ್ಲ. ಬದುಕಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅದರ ಮೇಲೆ ಅತಿಯಾದ ಅವಲಂಬನೆಯಾಗದೇ ಸ್ವಯಂ ಸಾಮರ್ಥ್ಯದ ಅಧಾರದಲ್ಲಿ ಮುನ್ನೆಡೆಯುವ ವಿವೇಕದೊಂದಿಗೆ ಇದ್ದಾಗ ಸಾರ್ವಕಾಲಿಕ ಗೆಲುವು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಆ ಕ್ಷಣದ ಅನಿವಾರ್ಯತೆ ಮತ್ತು ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವ್ಯಕ್ತಿಗತ ಮತ್ತು ವೃತ್ತಿಪರ ಬೆಳವಣಿಗೆಯನ್ನು ಕಂಡುಕೊಳ್ಳಬೇಕು. ತಂತ್ರಜ್ಞಾನದ ವೇಗವನ್ನು ಕಂಡುಕೊಂಡು ಅದಕ್ಕನುಗುಣವಾಗಿ ವೃತ್ತಿಪರತೆಯ ಶ್ರೇಷ್ಠತೆಯ ಮಜಲುಗಳನ್ನು ದಾಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತದ ಕಲಿಕೆಯ ಹಾದಿಯನ್ನು ಯಶಸ್ವಿಯಾಗಿ ನಿರ್ವಹಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜ್ಞಾನ, ಸ್ಪರ್ಧಾತ್ಮಕತೆ, ತಾರ್ಕಿಕ ಚಿಂತನೆ, ಕೌಶಲ್ಯ ಮತ್ತು ವಿವೇಚನಾತ್ಮಕ ಎಚ್ಚರದ ಹೊಳಹುಗಳೊಂದಿಗೆ ವಿದ್ಯಾರ್ಥಿಗಳು ಸಾಧನೆಯ ಹಾದಿಯನ್ನು ಕ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದಲ್ಲಿ ವಿಸ್ತೃತ ಜ್ಞಾನಾರ್ಜನೆಯ ತುಡಿತ ಮತ್ತು ಪ್ರಾಯೋಗಿಕ ಅನ್ವಯಿಕತೆಯ ಪ್ರಜ್ಞೆಯೊಂದಿಗೆ ಕಲಿಕೆಯನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು ಎಂದು ನುಡಿದರು. ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಎಸ್.ಎನ್. ಕಾಕತ್ಕರ್ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹಪ್ರಾದ್ಯಾಪಕರಾದ ಡಾ. ನೆಫಿಸತ್ ಪಿ. ಹಾಗೂ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಸ್ವಾತಿ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ವಂದಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಸಮಗ್ರ ವಿವರಗಳನ್ನೊಳಗೊಂಡ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಯುವನಿಧಿ: ಅರ್ಜಿ ಆಹ್ವಾನ

Article Image

ಯುವನಿಧಿ: ಅರ್ಜಿ ಆಹ್ವಾನ

ಯುವನಿಧಿ ಯೋಜನೆಗೆ 2023 ಹಾಗೂ 2024ನೇ ಸಾಲಿನಲ್ಲಿ ಯಾವುದೇ ವೃತ್ತಿ ಪರ ಕೋರ್ಸ್, ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ 6 ತಿಂಗಳವರೆಗೆ (180 ದಿನ) ಉದ್ಯೋಗ ಸಿಗದ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರಾಗಿರಬೇಕು. ವಾಸವಿರುವ ವಿದ್ಯಾರ್ಥಿ ಎಂದರೆ ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳವರೆಗೆ ಪದವಿ/ಡಿಪ್ಲೊಮಾ/ಸ್ನಾತಕೋತ್ತರ ಪದವಿವರೆಗೆ ಅಧ್ಯಯನ ಮಾಡಿದವರು. ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ ಗರಿಷ್ಠ 2 ವರ್ಷ ಅವಧಿಯವರೆಗೆ ಮಾತ್ರ ಈ ಭತ್ತೆ ಸಿಗಲಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 4,023 ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 3,328 ಫಲಾನುಭವಿಗಳಿಗೆ ಜುಲೈ-2024ರ ಅಂತ್ಯಕ್ಕೆ ಒಟ್ಟು 2,02,69,500 ರೂ. ಡಿ.ಬಿ.ಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮೆಯಾಗಿರುತ್ತದೆ. ಅರ್ಜಿ ಸಲ್ಲಿಸುವ ವಿಧಾನ https://sevasindhugs. karnataka.gov.in ಮೂಲಕ ಲಾಗಿನ್ ಆಗಿ ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು ಮೂಲಕವೂ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್‌ ಸಂಖ್ಯೆಗೆ ಜೋಡಣೆ ಆದ ಆಧಾ‌ರ್ ಸಂಖ್ಯೆಯ ಬ್ಯಾಂಕ್‌ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಸ್ವಯಂ-ದೃಢೀಕರಣ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ತಿಂಗಳು 25ನೇ ತಾರೀಕಿನೊಳಗೆ ತಾನು ನಿರುದ್ಯೋಗಿ, ವ್ಯಾಸಂಗ ಮುಂದುವರಿಸುತ್ತಿಲ್ಲ ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು https://sevasindhugs.karnataka.gov.in ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ: ಶೈಕ್ಷಣಿಕ ಪ್ರವೇಶಾತಿಗೆ ಆಹ್ವಾನ

Article Image

ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ: ಶೈಕ್ಷಣಿಕ ಪ್ರವೇಶಾತಿಗೆ ಆಹ್ವಾನ

ವಿದ್ಯಾಗಿರಿ: ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವರ್ತಿತ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2024-2025ರ ಜುಲೈ ಆವೃತ್ತಿಯ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳು ಸ್ನಾತಕ (ಯುಜಿ)ದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್.ಸಿ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ , ಬಿ.ಎಸ್ಸಿ (ಸಂಯೋಜನೆಗಳು), ಬಿ.ಎಸ್‌ಸಿ ಹೋಮ್ – ಇನ್ಫಾರ್ಮೇಷನ್ ಟೆಕ್ನಾಲಜಿ, ಬಿ.ಸಿ.ಎ ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿಗಳನ್ನು ಪಡೆಯಬಹುದಾಗಿದೆ. ಸ್ನಾತಕೋತ್ತರ (ಪಿಜಿ)ದಲ್ಲಿ ಎಂ.ಎ- ಶಿಕ್ಷಣ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಇತಿಹಾಸ, ರಾಜ್ಯಶಾಶಾಸ್ತ್ರ , ಸಾರ್ವಜನಿಕ ಆಡಳಿತ, ಉರ್ದು, ಸಂಸ್ಕೃತ, ಸಮಾಜಶಾಶಾಸ್ತ್ರ , ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಂ.ಎಸ್.ಡಬ್ಲ್ಯೂ, ಎಂ.ಬಿ.ಎ-ಆನ್‌ಲೈನ್ ಪ್ರವೇಶ ಪರೀಕ್ಷೆ ಮೂಲಕ (ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಆಪರೇಷನ್. ಟೂರಿಸಂ ಕಾಪ್ರೊರೇಟ್ ಲಾ, ಇನ್‌ಫರ್ಮನೇಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತು ಆರೋಗ್ಯ ಕಾಳಜಿ ನಿರ್ವಹಣೆ.), ಎಂ.ಕಾಂ ಡ್ಯುಯೆಲ್ ಸ್ಪೆಷಲೈಜೇಷನ್ ( ಅಕೌಂಟಿಂಗ್ ಮತ್ತು ಫೈನಾನ್ಸ್/ಎಚ್‌ಆರ್ ಎಂ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಮತ್ತು ಎಚ್‌ಆರ್‌ಎಂ /ಫೈನಾನ್ಸ್), ಎಂ.ಸಿ.ಎ, ಎಂ.ಲಿಬ್.ಐ.ಎಸ್‌ಸಿ, ಎಂ.ಎಸ್‌ಸಿ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಷಿಯನ್, ಪರಿಸರ ವಿಜ್ಞಾನ, ಭೂಗೋಳಶಾಸ್ತ್ರ, ಮೈಕ್ರೋಬಯಾಲಜಿ ಮನಃಶಾಸ್ತ್ರ, ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ, ಫುಡ್ ಮತ್ತು ನ್ಯೂಟ್ರಿಷನ್ ಸೈನ್ಸ್ ಮಾಹಿತಿ ತಂತ್ರಜ್ಞಾನ ಡಾಟಸೈನ್, ಕಂಪ್ಯೂಟರ್‌ಸೈನ್ಸ್). ಪಿಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು- ಇಂಗ್ಲಿಷ್, ಕಮ್ಯುನಿಕೇಶನ್, ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕುವೆಂಪು ಸಾಹಿತ್ಯ, ಹಣಕಾಸು ನಿರ್ವಹಣೆ ಮಾನವ ಸಂಪನ್ಮೂಲ ನಿರ್ವಹಣೆ, ಬಿಸಿನೆಸ್ ಲಾ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್, ಅಂಬೇಡ್ಕರ್ ಅಧ್ಯಯನಗಳನ್ನು ಅಭ್ಯಸಿಸಬಹುದಾಗಿದೆ. ಡಿಪ್ಲೋಮ ಶಿಕ್ಷಣ ಕಾರ್ಯಕ್ರಮಗಳಾದ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಮತ್ತು ಹೆಲ್ತ್ ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್, ಅರ್ಲಿ ಚೈಲ್ಡ್ ಹುಡ್‌ಕೇರ್ ಎಜುಕೇಷನ್ ಹಾಗೂ ಸರ್ಟಿಫಿಕೇಟ್ ಶಿಕ್ಷಣ ಕಾರ್ಯಕ್ರಮಗಳಾದ(ಆರು ತಿಂಗಳು)- ಪಂಚಾಯತ್ ರಾಜ್, ನ್ಯೂಟ್ರಿಷನ್ ಮತ್ತು ಫುಡ್, ಮಾಹಿತಿ ಸಂವಹನ ತಂತ್ರಜ್ಞಾನದ (ಐಸಿಟಿ) ಕೋರ್ಸ್ ಗಳನ್ನು ಮಾಡಬಹುದಾಗಿದೆ. ಈ ಮೇಲಿನ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮಾಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 917090715010, 9591546202 ಸಂಪರ್ಕಿಸಬಹುದು. ಇಲ್ಲವೇ, ಇ-ಮೇಲ್:administration@alvas.org ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು. ಆಳ್ವಾಸ್‌ನಲ್ಲಿ ಪರೀಕ್ಷಾ ಕೇಂದ್ರವನ್ನೂ ಹೊಂದಿರುವ ಕಾರಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಲಭ್ಯವಾಗಿದೆ. ಔದ್ಯೋಗಿಕ ನೆಲೆಯಲ್ಲಿ ಸ್ನಾತಕೋತ್ತರ, ಪದವಿ, ಒಂದು ವರ್ಷದ ಡಿಪ್ಲೊಮಾ ಹಾಗೂ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಗಳನ್ನು ವಿವಿಧ ವಿಷಯಗಳಲ್ಲಿ ಮಾಡಲು ಅವಕಾಶವಿದ್ದು, ಉದ್ಯೋಗ ಮಾಡಿಕೊಂಡು ಕೋರ್ಸ್ ಮಾಡಲು ಸುವರ್ಣಾವಕಾಶ ದೊರೆತಿದೆ.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್‌ ಸಲೂನ್‌ ತರಬೇತಿಯ ಸಮಾರೋಪ ಸಮಾರಂಭ

Article Image

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್‌ ಸಲೂನ್‌ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ: ಪ್ರತಿಯೊಬ್ಬರು ವೃತಿ ಜೀವನದಲ್ಲಿ ತಮ್ಮದೇ ಆದ ಶಿಸ್ತು ಅನ್ನು ಅಳವಡಿಸಿಕೊಂಡರೆ ಯಶಸ್ಸು ಕಾಣಬಹುದು ಜೊತೆಗೆ ದುರಭ್ಯಾಸಗಳಿಂದ ಸಹ ದೂರ ಇರುಬೇಕು. ಹಾಗೂ ಕ್ಷೌರಿಕ ವೃತಿಯಲ್ಲಿ ಹೊಸ ಬದಲಾವಣೆಗಳು ಆಗುತ್ತಿದೆ ಅದನ್ನು ಅಳವಡಿಸಿಕೊಂಡು ನಮ್ಮ ವೃತ್ತಿ ಬಗ್ಗೆ ಹೆಮ್ಮೆ ಇರಬೇಕು. ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರುಡ್‌ ಸೆಟ್‌ ಸಂಸ್ಥೆಯಲ್ಲಿ ಅತ್ಯುತ್ತಮವಾದ ಸೌಲಭ್ಯಗಳೊಂದಿಗೆ ಉಚಿತ ತರಬೇತಿ ನೀಡಿ ಸವಿತಾ ಸಮಾಜದ ಹುಡುಗರಿಗೆ ಅನುಕೂಲ ಮಾಡಿದ್ದಾರೆ ಅವರಿಗೆ ಕೃತಜ್ಞತೆಯನ್ನು ನೀವೇ ಸ್ವ ಉದ್ಯೋಗಿಗಳಾಗಿ ಯಶಸ್ಸು ಕಾಣುವುದರಾ ಮೂಲಕ ಸಲ್ಲಿಸಬೇಕೆಂದು ರಾಯಚೂರು ಮಾಜಿ ರಾಜಸಭಾ ಸದಸ್ಯರಾದ ದಿವಗಂತ ಅಶೋಕ್‌ ಗಸ್ತಿಯವರ ಧರ್ಮಪತ್ನಿ ಸುಮಾ ಅಶೋಕ್‌ ಗಸ್ತಿ ಅಭಿಪ್ರಾಯಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಮೆನ್ಸ್ ಪಾರ್ಲರ್‌ ಸಲೂನ್‌ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಅತಿಥಿಯಾಗಿದ್ದ ಶ್ರೀ ರಾಘವೇಂದ್ರ ಇಟಗಿ, ನಿರ್ದೇಶಕರು, ಕರ್ನಾಟಕ ರಾಜ್ಯ ಸವಿತಾ ಇವರು ಮಾತನಾಡಿ ವೃತಿಯನ್ನು ಹೊಸತನ ಇಟ್ಟುಕೊಂಡು ಮುಂದುವರೆಯಿರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು. ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ, ರವಿ ಕುಮಾರ್‌ ಕಡೂರು, ಉಪಸ್ಥಿತರಿದ್ದರು ವೀರೇಶ ಬಳ್ಳಾರಿ ಪ್ರಾರ್ಥನೆ ಮಾಡಿದರು. ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ವಂದಿಸಿದರು. ಸುಮಾರು 32 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು, ಪ್ರಭಾಕರ್‌ , ವರಪ್ರಸಾದ್‌ ತರಬೇತಿಯ ಅನುಭವ ಹಂಚಿಕೊಂಡರು.

ಮೂಡುಬಿದಿರೆ: ‘ಸಿಎ’ ಕೌನ್ಸೆಲಿಂಗ್ ಪ್ರೋಗ್ರಾಮ್

Article Image

ಮೂಡುಬಿದಿರೆ: ‘ಸಿಎ’ ಕೌನ್ಸೆಲಿಂಗ್ ಪ್ರೋಗ್ರಾಮ್

ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಹಾಗೂ ಐ.ಸಿ.ಎ.ಐ ಮಂಗಳೂರು ಚಾಪ್ಟರ್ ವತಿಯಿಂದ ಆಳ್ವಾಸ್ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಿಎ ವೃತ್ತಿಯ ಕುರಿತು ಮಾಹಿತಿ ಕಾರ‍್ಯಕ್ರಮ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ- ಇತ್ತೀಚಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಇಲ್ಲವೇ ತಾಂತ್ರಿಕ ಪದವಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಆದರೆ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನೂರಾರು ದಾರಿಗಳಿವೆ. ಅದನ್ನು ಅವರು ಅರಿತುಕೊಳ್ಳಬೇಕು ಎಂದರು. ಸಿಎಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಆರಂಭಿಕ ಹಂತದಲ್ಲೇ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಎಲ್ಲಾ ಅವಕಾಶಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪದವಿ ಪೂರ್ವ ಹಂತದಲ್ಲಿ ಕಲ್ಪಿಸಲಾಗುವುದು ಎಂದು ತಿಳಿಸಿದರು. ಸಿಎ ಕಾರ್ತಿಕೇಯ ಶೆಣೈ ಮಾತನಾಡಿ ಸಿಎ ಆರಂಭಿಕ ಹಂತದಿಂದ ಹಿಡಿದು ಕೊನೆಯ ತನಕ ಎಲ್ಲಾ ಪರೀಕ್ಷೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಸಿಎ ಗೌತಮ್ ನಾಯಕ್ ಮಾತನಾಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರ ಉದ್ದೇಶಗಳ ಬಗ್ಗೆ ವಿವರಿಸಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಿಎ ಡೇನಿಯಲ್ ಪಿರೇರಾ ಹಾಗೂ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ.ಡಿ ಇದ್ದರು. ವಾಣಿಜ್ಯ ಸಂಘದ ಸಂಯೋಜಕಿ ರಶ್ಮಿನ್ ತನ್ವೀರ್ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’

Article Image

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’

“ಸಂಸ್ಕೃತವು ಸಾರ್ವಕಾಲಿಕ ಶ್ರೇಷ್ಠ ಭಾಷೆ ಹಾಗೂ ಜ್ಞಾನ ಪರಂಪರೆಯ ಭಾಷೆ. ನಾವು ಭಾಷೆಯನ್ನು ಕಲಿಯುವುದು, ಭಾಷೆಯ ಬಗ್ಗೆ ಕಲಿಯುವುದು ಹಾಗೂ ಭಾಷೆಯ ಮೂಲಕ ಕಲಿಯುವುದು ಇದು ಪ್ರತ್ಯೇಕ ಆಯಾಮಗಳುಳ್ಳ ವಿಷಯವಾಗಿದೆ. ಇದನ್ನು ಅರಿತರೆ ಭಾಷೆಯ ಬಗ್ಗೆ ವಿಶಾಲ ವ್ಯಾಪ್ತಿಯಲ್ಲಿ ಅರಿಯಬಹುದು” ಎಂದು ಬೆಳಾಲಿನ ಎಸ್.ಡಿ.ಎಂ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಆ. 30ರಂದು ಆಯೋಜಿಸಿದ್ದ ‘ಸಂಸ್ಕೃತೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. "ಭಾಷೆಯ ಮೂಲಕ ಹಲವು ವಿಚಾರಗಳನ್ನು ನಾವು ತಿಳಿದುಕೊಳ್ಳುತ್ತೇವೆ. ಅಷ್ಟೇ ಅಲ್ಲದೆ ಇತ್ತೀಚಿಗೆ ವಿದೇಶಿಗರು ಕೂಡ ಸಂಸ್ಕೃತ ಭಾಷೆಯನ್ನು ಕಲಿಯುತ್ತಿದ್ದಾರೆ. ಸಂಸ್ಕೃತ ಎಲ್ಲಾ ಭಾಷೆಗಳಿಗೆ ಪ್ರೇರಣೆ ಹಾಗೂ ಪೋಷಣೆಯನ್ನು ನೀಡಿದೆ. ಶಿಕ್ಷಣದಲ್ಲಿ ಜ್ಞಾನ ಮತ್ತು ವೃತ್ತಿಯ ನಡುವೆ ಭಾಷೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಅವರು ಹೇಳಿದರು. “ಸಂಸ್ಕೃತ ಭಾಷೆಯ ಮೂಲಕ ನಮ್ಮ ಪ್ರಾಚೀನ ಪರಂಪರೆ ಹಾಗೂ ಸೊಗಡನ್ನು ಪಸರಿಸಬೇಕಾಗಿರುವುದು ವಿದ್ಯಾರ್ಥಿಗಳ ಜವಾಬ್ದಾರಿ" ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ. ಗಣೇಶ್ ನಾಯಕ್ ಮಾತನಾಡಿ, “ಭಾಷೆಗಳು ನಮ್ಮಲ್ಲಿರುವ ಆಲೋಚನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಸಹಕಾರಿಯಾಗುತ್ತವೆ. ಸಂಸ್ಕೃತ ಭಾಷೆಯು ವ್ಯಾವಹಾರಿಕ ಹಾಗೂ ನೈತಿಕ ಬದುಕಿಗೆ ಸಹಕಾರಿಯಾಗುತ್ತದೆ. ಸಂಸ್ಕೃತ ಭಾಷೆಯ ಮೂಲಕ ತಾಂತ್ರಿಕ ದೃಷ್ಟಿಕೋನ, ಶಬ್ದ ಭಂಡಾರ, ಭಾರತೀಯ ಸಂಸ್ಕೃತಿ, ಪರಂಪರೆ, ಐತಿಹಾಸಿಕ ನೆಲೆಯ ಬಗ್ಗೆ ತಿಳಿದುಕೊಳ್ಳಬಹುದು” ಎಂದರು. ವಿಭಾಗದ 'ಸುಬೋಧಿನೀ' ಭಿತ್ತಿಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸಂಸ್ಕೃತ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅತಿಥಿಯನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿಜ್ಞಾನ ನಿಕಾಯದ ಡೀನ್ ಸವಿತಾ ಕುಮಾರಿ ಹಾಗೂ ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕ ಶ್ರೇಯಸ್ ಪಾಳಂದೆ ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸುಮುಖ್ ಪ್ರಾರ್ಥಿಸಿ, ವಂಶಿ ಆರ್ ಭಟ್ ವಂದನಾರ್ಪಣೆಗೈದರು. ವಿದ್ಯಾರ್ಥಿನಿಯರಾದ ಸಿಂಚನ ಪಾಳಂದೆ ಹಾಗೂ ಸಿಂಚನ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಸಂಸ್ಕೃತ ಪ್ರತಿಭಾ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಎಂ. ನೆನಪಿನಂಗಳ'ದ ಹದಿನೈದನೇ ಕಂತಿನ ಕಾರ್ಯಕ್ರಮ: ಹದಿನೈದು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

Article Image

ಎಸ್.ಡಿ.ಎಂ. ನೆನಪಿನಂಗಳ'ದ ಹದಿನೈದನೇ ಕಂತಿನ ಕಾರ್ಯಕ್ರಮ: ಹದಿನೈದು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಇಂದು (ಆ.31) ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) 'ಎಸ್.ಡಿ.ಎಂ. ನೆನಪಿನಂಗಳ'ದ ಹದಿನೈದನೇ ಕಂತಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ, ಕಾಲೇಜಿನ ಹದಿನೈದು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ. ಸಹಾಯಧನ ವಿತರಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಕೇಂದ್ರ ಸರಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಸೆಂಟ್ರಲ್ ಬ್ಯುರೋ ಆಫ್ ಕಮ್ಯೂನಿಕೇಶನ್ ನ ಮಂಗಳೂರು ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕಾರಾಮ್ ನಿಡ್ಲೆ (ಜಿತು ನಿಡ್ಲೆ), ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ, ಉಜಿರೆ ಶ್ರೀ ಧ.ಮಂ. ಕಾಲೇಜಿನ ವಿಶ್ರಾಂತ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ ಹಾಗೂ ಮಂಗಳೂರಿನ ನ್ಯಾಶನಲ್ ಟ್ಯುಟೋರಿಯರ್ ಕಾಲೇಜಿನ ಪ್ರಾಂಶುಪಾಲ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯು.ಹೆಚ್. ಖಾಲಿದ್ ಮುಖ್ಯ ಅತಿಥಿಗಳಾಗಿದ್ದರು. ಜಿ. ತುಕಾರಾಮ್ ನಿಡ್ಲೆ ಮಾತನಾಡಿ, “ನೆನಪು ಮಾಡಿಕೊಳ್ಳುವುದಕ್ಕಿಂತ, ನೆನಪಿನ ಜೊತೆ ಬದುಕುವವರು ನಾವು. ಎಸ್.ಡಿ.ಎಂ. ಕಾಲೇಜಿನ ನೆನಪು ನನಗೆ ಮತ್ತೆ ಮತ್ತೆ ಆಗುತ್ತಿರುತ್ತದೆ” ಎಂದರು. “ಆ ಕಾಲದಲ್ಲಿ ಇಲ್ಲಿನಷ್ಟು ಸುಸಜ್ಜಿತ ಗ್ರಂಥಾಲಯ ಬೇರೆ ಎಲ್ಲೂ ಇರಲಿಲ್ಲ. ಸಾಹಿತಿ ಕೆ.ಟಿ. ಗಟ್ಟಿ ಅವರ ಪ್ರೇರಣೆಯಿಂದ ನಾನು ಇಂಗ್ಲಿಷ್ ಪುಸ್ತಕ ಓದಲು ಆರಂಭಿಸಿದೆ. ನಾವು ‘ಲಹರಿ’ ಎಂಬ ಕೈ ಬರಹದ ಪತ್ರಿಕೆ ಪ್ರಾರಂಭಿಸಿದ್ದೆವು. ಕಾಲೇಜು ನನಗೆ ರಂಗಭೂಮಿ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕವಾಗಿ ಬೆಳೆಯಲು ಹೇರಳ ಅವಕಾಶ ಕೊಟ್ಟಿದೆ” ಎಂದರು. ಡಾ. ಬಿ.ಪಿ. ಸಂಪತ್ ಕುಮಾರ ಮಾತನಾಡಿ, “ಬೀಜವು ಭೂಮಿಗೆ ಬಿದ್ದು ಬೃಹತ್ ವೃಕ್ಷವಾಗುವ ರೀತಿಯಲ್ಲಿಯೇ ವಿದ್ಯೆ ಕೂಡ. ಅನ್ನದಾನಕ್ಕಿಂತ ಶ್ರೇಷ್ಠದಾನ, ವಿದ್ಯಾದಾನ. ಓದಬೇಕು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಮೂಡಿದ್ದೇ ಈ ಕಾಲೇಜಿಗೆ ಬಂದ ಬಳಿಕ. ಈ ಕಾಲೇಜು, ಸಿದ್ಧವನ ಗುರುಕುಲ ವಿದ್ಯೆಯನ್ನು ನೀಡಿ ನಮ್ಮ ಜೀವನ ರೂಪಿಸಿದೆ” ಎಂದರು. “ನಿಮ್ಮ ಜೀವನದ ಯಶಸ್ಸು ಯಾವುದೆಂದರೆ ಅದು ನಿಮಗೆ ಸಿಗುವ ಅವಕಾಶವನ್ನು ಬಳಸಿಕೊಳ್ಳುವುದು. ನೀವು ಉತ್ತಮ ಕೆಲಸ ಮಾಡಿ. ಇದರಿಂದ ನಿಮಗೂ ನಿಮ್ಮ ಮುಂದಿನವರಿಗೂ ಶ್ರೇಯಸ್ಸು ಸಿಗುತ್ತದೆ” ಎಂದು ಕಿವಿಮಾತು ಹೇಳಿದರು. ಯು.ಹೆಚ್. ಖಾಲಿದ್ ಮಾತನಾಡಿ, “ನನ್ನೆಲ್ಲಾ ಸಾಧನೆಗೆ ಕಾರಣ ಎಸ್.ಡಿ.ಎಂ. ಕಾಲೇಜು. ನನ್ನ ಬದುಕನ್ನು ಬೆಳಗಿಸಿ ನನ್ನ ಮುಂದಿನ ಬದುಕಿಗೆ ದಾರಿ ಮಾಡಿಕೊಟ್ಟಿದೆ” ಎಂದರು. “ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎಂಬ ಮಾತಿದೆ. ಹಾಗೆಯೇ ನಮ್ಮ ಶಕ್ತಿ, ಆಸಕ್ತಿ, ಕಾಳಜಿ, ಪ್ರಯತ್ನವನ್ನು ನಾವೇ ಮೆಚ್ಚಿಕೊಳ್ಳಬೇಕು. ವಿದ್ಯಾವಂತರಾಗಿ ನೀವು ಏನು ಬೇಕಾದರೂ ಮಾಡಿ. ಆದರೆ ಸುಳ್ಳುಗಾರರು, ಪುಂಡರು, ವಂಚಕರು, ಕುಡುಕರು, ಕಟುಕರು ಆಗಬೇಡಿ” ಎಂದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, “ಏನೇ ಆಗುವ ಮೊದಲು ನೀವು ಉತ್ತಮ ಮನುಷ್ಯರಾಗಿ, ನಿಮ್ಮ ಜೀವನದಲ್ಲಿ ಶಿಸ್ತು, ಗುರಿ ಇರಲಿ” ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಈಗಿನ ಮಕ್ಕಳ ಓದಿಗೆ ಸಹಾಯವಾಗಲಿ ಎಂದು ಸಹಾಯಧನ ನೀಡುತ್ತಿದ್ದಾರೆ. ಮಧ್ಯಾಹ್ನದ ಬಿಸಿ ಊಟಕ್ಕೆ ನೆರವು ನೀಡುತ್ತಿದ್ದಾರೆ. ಅವರು ನೀಡಿದ ಹಣದ ಮೌಲ್ಯವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು. ಅತಿಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು, ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ. ಪಿ. ಶ್ರೀನಾಥ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಅಭಿಲಾಷ್ ವಂದಿಸಿ, ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.

‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ

Article Image

‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ

ಮೂಡುಬಿದಿರೆ: ಎಲ್ಲರೂ ಒಂದೇ ಮನಸ್ಸಿನಿಂದ ಒಂದು ನಿಗದಿತ ಗುರಿಯೆಡೆಗೆ ಹೆಜ್ಜೆ ಹಾಕಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಮಾಜಿ ವಿಧಾನ ಪರಿಷತ ಸದಸ್ಯ ಗಣೇಶ್ ಕಾರ್ಣಿಕ್ ತಿಳಿಸಿದರು. ಅವರು ಸೋಮವಾರ, ಆಳ್ವಾಸ್‌ನ ಶಿವರಾಮ್ ಕಾರಂತ ವೇದಿಕೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ- ದಿ ಮ್ಯಾಟ್ರಿಕ್ಸ್ ಗ್ರೂಪ್ ಆಯೋಜಿಸಿದ್ದ- ‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ ವಿಷಯದ ಕುರಿತು ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಸಾಮಾರ್ಥ್ಯ ಹಾಗೂ ದೌರ್ಬಲ್ಯಗಳನ್ನು ಅರಿತು, ತಮ್ಮಲ್ಲಿರುವ ನ್ಯೂನತೆಗಳನ್ನು ಮಣಿಸಲು ಆರಂಬಿಸಿದಾಗ ಸಾಧಿಸಲು ಹೊರಟ ಕೆಲಸದಲ್ಲಿ ಜಯ ಲಭಿಸಲು ಸಾಧ್ಯ. ಇದರ ಜೊತೆಗೆ ಪ್ರತಿಯೊಬ್ಬರು ತಂಡದಲ್ಲಿ ಕೆಲಸಮಾಡುವ ಅಗತ್ಯತೆಯನ್ನು ಅರಿಯಬೇಕು. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಪ್ರಾಶಸ್ತö್ಯವಿರುವುದಿಲ್ಲ. ತಂಡದ ಶ್ರೇಯಸ್ಸೇ ಪ್ರತಿಯೊಬ್ಬರ ಗುರಿಯಾಗಿರುತ್ತದೆ. ಈ ಹಂತದಲ್ಲಿ ನಾವು ಪಡೆಯುತ್ತಿರುವ ಶಿಕ್ಷಣ ಈ ಪ್ರಕ್ರಿಯೆಗೆ ಎಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುತ್ತಿದೆ ಎಂಬುದು ಮುಖ್ಯ. ಶಿಕ್ಷಣ ನಮ್ಮನ್ನು ಜವಾಬ್ದಾರಿಯುತ ಹಾಗೂ ಉತ್ತರದಾಯಿತ್ವದ ವಿದ್ಯಾರ್ಥಿಗಳನ್ನಾಗಿಬೇಕು. ಈ ಹಂತದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಂಡು ಬೆಳವಣಿಗೆ ಹೊಂದುವತ್ತಾ ಶ್ರಮಿಸಬೇಕು ಎಂದರು. ಮ್ಯಾಟ್ಟಿಕ್ಸ್ ಟೀಮ್‌ನ ಸಂಯೋಜಕ ಆದಿತ್ಯ ಟೀಮ್ ಬೆಳೆದುಬಂದ ಹಾದಿ ಹಾಗೂ ತೊಡಿಗಿಕೊಂಡಿರುವ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕುಲಸಚಿವರು ಮೌಲ್ಯಮಾಪನ ಡಾ. ನಾರಾಯಣ ಶೆಟ್ಟಿ ಇದ್ದರು. ಸನ್ವಿತ್ ಕಾರ‍್ಯಕ್ರಮ ನಿರ್ವಹಿಸಿ, ಆದರ್ಶ ಸ್ವಾಗತಿಸಿ, ವೆಂಕಟೇಶ್ ಮಲ್ಯ ಹಾಗೂ ತಂಡ ಪ್ರಾರ್ಥಿಸಿ, ಕಾರ್ತಿಕ್ ಅತಿಥಿಯನ್ನು ಪರಿಚಯಿಸಿ, ಆದಿ ಎಸ್ ರೈ ವಂದಿಸಿದರು.

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

Article Image

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆ.5 ಕೊನೆಯ ದಿನವಾಗಿದೆ. ಈ ವರ್ಷದ ಡಿ. 8ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕೆಎಸ್‌ಕ್ಯುಎಎಸಿ ವತಿಯಿಂದ ವಿದ್ಯಾರ್ಥಿ ನಿಧಿಗೆ ಅರ್ಹತಾ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನು ಸರಕಾರಿ, ಅನುದಾನಿತ ಮತ್ತು ಸ್ಥಳೀಯ ಸಂಸ್ಥೆ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದು, ಬಡ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಪರೀಕ್ಷೆಯ ಆನ್‌ಲೈನ್ ಅರ್ಜಿ ಕೆಎಸ್‌ಇಎಬಿಯ ವೆಬ್‌ಸೈಟ್ https://kseeb.karnataka. gov.inನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 080-23341615 ಸಂಪರ್ಕಿಸಬಹುದು.

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿಗೆ ಪ್ರಶಸ್ತಿ

Article Image

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿಗೆ ಪ್ರಶಸ್ತಿ

ಉತ್ಕರ್ಷ ಪ್ರತಿಷ್ಠಾನ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ವಿಷಯದಡಿ ನಡೆದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪದವಿಪೂರ್ವ ವಿಭಾಗದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಅದಿತಿ.ಕೆ ಪ್ರಥಮ ಹಾಗೂ ತನಿಷಾ ಹೆಚ್ ಹೆಗ್ಡೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅಂಚೆ ಚೀಟಿ ಸಂಗ್ರಹ: ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

Article Image

ಅಂಚೆ ಚೀಟಿ ಸಂಗ್ರಹ: ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ಅಂಚೆ ಇಲಾಖೆ ವತಿಯಿಂದ ವಿದ್ಯಾರ್ಥಿಗಳಲ್ಲಿ ಫಿಲಾಟೆಲಿ (ಅಂಚೆ ಚೀಟಿ ಸಂಗ್ರಹಣೆ) ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ದೀನ್ ದಯಾಳ್ ಸ್ಪರ್ಶ್ ಯೋಜನೆ ಸ್ಕಾಲರ್ ಶಿಪ್‌ಗಾಗಿ 6ರಿಂದ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2023- 24ನೇ ಸಾಲಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಅಧಿಕ ಅಂಕ ಗಳಿಸಿ, ಫಿಲಾಟೆಲಿ ಖಾತೆ ಅಥವಾ ಶಾಲಾ ಫಿಲಾಟೆಲಿ ಕ್ಲಬ್ ಸದಸ್ಯರಾಗಿರುವ ವಿದ್ಯಾರ್ಥಿಗಳು ಸೆ. 3ರ ಮೊದಲು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ವೆಬ್‌ಸೈಟ್ ವಿಳಾಸ: www.karnatakapost.gov.in ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.

ಆಳ್ವಾಸ್ ಪದವಿ ಪೂರ್ವ ಕಾಲೇಜು: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Article Image

ಆಳ್ವಾಸ್ ಪದವಿ ಪೂರ್ವ ಕಾಲೇಜು: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ವಿದ್ಯಾಗಿರಿ: ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಮೈಗೂಡಿಸಿ ಕೊಂಡಾಗ ಯಶಸ್ಸು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಮತ್ತು ಮಹಿಳಾ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಪಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಋಣಾತ್ಮಕ ಚಿಂತೆಯನ್ನು ಬಿಡಬೇಕು. ಭಾವನಾತ್ಮಕ ವಿಷಯಗಳಿಗೆ ಮಹತ್ವ ನೀಡಬಾರದು. ದೈನಂದಿನ ಬದುಕಿನಲ್ಲಿ ಶೈಕ್ಷಣಿಕವಾಗಿ ಪರಿಶ್ರಮ ಹಾಕಬೇಕು. ವಾಣಿಜ್ಯ ಶಿಕ್ಷಣಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರೆತಿದ್ದು, ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಹಾಕಿದರೆ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಹಾಗೂ ಕಲಾವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ ರಶ್ಮೀನ್ ಸ್ವಾಗತಿಸಿದರು. ಉಪನ್ಯಾಸಕ ಪ್ರಭಾತ್ ಎಸ್. ಆರ್. ವಂದಿಸಿದರು. ಉಪನ್ಯಾಸಕ ರಾಜೇಶ್ ಡಿ'ಸೋಜ ಕಾರ್ಯಕ್ರಮ ನಿರೂಪಿಸಿದರು. ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ 42 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Article Image

ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಉಜಿರೆ: "ನಮ್ಮ ಭಾರತದ ಜನಸಂಖ್ಯೆ 145 ಕೋಟಿಗೂ ಅಧಿಕವಾಗಿದ್ದು ಚೀನಾವನ್ನು ಹಿಂದಿಕ್ಕಿದೆ. ಚಾರ್ಲ್ಸ್ ಡಾರ್ವಿನ್ ಹೇಳಿದಂತೆ ಅತಿಯಾದ ಜನಸಂಖ್ಯೆಯಿಂದಾಗಿ ಉಳಿಯುವಿಕೆ ಕಷ್ಟವಾದಾಗ, ಅವರಲ್ಲಿ ಯಾರು ಬಲಿಷ್ಠನು ಹಾಗೂ ಕೌಶಲವನ್ನು ಹೊಂದಿರುತ್ತಾನೋ ಆತ ಮಾತ್ರ ಈ ಸಮಾಜದಲ್ಲಿ ಉಳಿಯಲು ಸಾಧ್ಯ" ಎಂದು ಉಜಿರೆ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹೇಳಿದರು. ಕಾಲೇಜಿನ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಸಹಯೋಗದಲ್ಲಿ ಆ.8ರಂದು ಆಯೋಜಿಸಲಾಗಿದ್ದ ವಾಣಿಜ್ಯ ಕ್ಯಾಂಪಸ್ ಅಸೋಸಿಯೇಷನ್’ನ 2024-25ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಮನುಷ್ಯನ ಜೀವನ ಎಂದರೆ ಏಳು- ಬೀಳು ಸಹಜ. ಆದರೆ ಬಿದ್ದಾಗ ಹೇಗೆ ಎದ್ದು ನಿಂತು ಧೈರ್ಯದಿಂದ ಕಷ್ಟವನ್ನು ಎದುರಿಸುತ್ತಾನೆ ಎಂಬುದು ಬಹುಮುಖ್ಯವಾಗಿರುತ್ತದೆ. ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ನಮ್ಮ ಕಾಲೇಜು ಬಹುಮುಖ್ಯ ಪಾತ್ರವನ್ನು ವಹಿಸಲಿದ್ದು, ಮುಂದಿನ ಭವಿಷ್ಯದ‌ ಒಳಿತಿಗಾಗಿ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಿ" ಎಂದು ಅವರು ಕರೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರೀಕ್ಷಾ ಅಕಾಡೆಮಿಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಮತ್ತು ಸಾಫ್ಟ್‌ಸ್ಕಿಲ್ಸ್ ಟ್ರೈನರ್ ಎಂ.ಆರ್. ಚಂದನ್ ರಾವ್, "ನಿಮ್ಮ ಜೀವನದಲ್ಲಿ ವಾಣಿಜ್ಯ ಎಷ್ಟು ಮುಖ್ಯ ಮತ್ತು ಅದನ್ನು ಹೇಗೆ ಬಳಸಬಹುದು ಎಂಬುದನ್ನು ಅರಿಯಿರಿ. ಶ್ರದ್ಧೆ ಮತ್ತು ಕೌಶಲಗಳನ್ನು ಬಳಸಿಕೊಂಡು ನಿಮ್ಮ ವ್ಯವಹಾರ ಜ್ಞಾನವನ್ನು ವಿಸ್ತರಿಸಿ. ಆಗ ಯಶಸ್ಸು ಸದಾ ನಿಮ್ಮೊಟ್ಟಿಗಿರುತ್ತದೆ" ಎಂದು ಕಿವಿಮಾತು ಹೇಳಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ, 2022-23ನೇ ಸಾಲಿನ ರಾಜ್ಯಮಟ್ಟದ ಉತ್ತಮ ರಾಷ್ಟ್ರೀಯ ಸೇವಾಯೋಜನಾ ಘಟಕದ ಆಫೀಸರ್ ಪ್ರಶಸ್ತಿ ಪಡೆದ ಡಾ. ಲಕ್ಷ್ಮಿನಾರಾಯಣ ಕೆ.ಎಸ್. ಹಾಗೂ ಇತ್ತೀಚೆಗೆ ಪಿಎಚ್.ಡಿ. ಪದವಿ ಪಡೆದ ಭಾನುಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. 2023 -24ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವ್ಯವಹಾರ ಆಡಳಿತ ವಿಭಾಗದ ದ್ವಿತೀಯ ಪದವಿ ವಿದ್ಯಾರ್ಥಿ ನಿಹಾಲ್ ಸಿಂಗ್ ಪಿ. ಅವರು ಪ್ರಸ್ತುತ ವ್ಯಾಪಾರ ಬೆಳವಣಿಗೆ ಮತ್ತು ನಿರ್ವಹಣೆಯ ವಿಕಸನದ ಅಗತ್ಯತೆಗಳ ಕುರಿತು ಬರೆದಿರುವ ‘ಟ್ರೆಂಡ್ ಮ್ಯಾಟ್ರಿಕ್ಸ್ – ಮಂತ್ಲಿ ಡೈಜೆಸ್ಟ್ ಆಫ್ ಬ್ಯುಸಿನೆಸ್ ಟ್ರೆಂಡ್ಸ್’ ಪುಸ್ತಕವನ್ನು ಪ್ರಾಂಶುಪಾಲರು ಬಿಡುಗಡೆಗೊಳಿಸಿದರು. ವಾಣಿಜ್ಯ ಕ್ಯಾಂಪಸ್ ಅಸೋಸಿಯೇಶನ್ ನೂತನ ಪದಾಧಿಕಾರಿಗಳಿಗೆ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಪ್ರಮಾಣವಚನ ಬೋಧಿಸಿದರು. ಅಸೋಸಿಯೇಶನ್ ಕಾರ್ಯದರ್ಶಿ ಸಹನಾ ಡೋಂಗ್ರೆ 2023-24ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ವಾಣಿಜ್ಯ ವಿಭಾಗದ ಭಿತ್ತಿಪತ್ರಿಕೆ ‘ವಾಣಿಕ’ ಅನಾವರಣಗೊಳಿಸಲಾಯಿತು. ಕಾಲೇಜಿನ ಆಡಳಿತಾಂಗ ಕುಲಸಚಿವೆ ಡಾ. ಶಲೀಫ್ ಕುಮಾರಿ, ವಾಣಿಜ್ಯ ನಿಕಾಯದ ಡೀನ್ ಹಾಗೂ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥೆ ಶಕುಂತಲಾ, ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ, ವಾಣಿಜ್ಯ ಕ್ಯಾಂಪಸ್ ಅಸೋಸಿಯೇಶನ್ ಸಂಯೋಜಕರಾದ ಗುರುರಾಜ್ ಮತ್ತು ವಿನುತ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಷ್ಮಿತಾ ಮತ್ತು ತಂಡದವರು ಪ್ರಾರ್ಥಿಸಿದರು. ವಾಣಿಜ್ಯ ಕ್ಯಾಂಪಸ್ ಅಸೋಸಿಯೇಶನ್ ಸಿ.ಇ.ಒ. ದೀಕ್ಷಿತ ಸ್ವಾಗತಿಸಿ, ಸಿ.ಎಫ್.ಒ. ಶ್ರೀಗಣೇಶ್ ವಂದಿಸಿದರು. ಧಾರಿಣಿ ಮತ್ತು ಧರಿತ್ರಿ ಕಾರ್ಯಕ್ರಮ ನಿರ್ವಹಿಸಿದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೆಬಲ್ ಟೆನ್ನಿಸ್ ಪಂದ್ಯಾಟ

Article Image

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೆಬಲ್ ಟೆನ್ನಿಸ್ ಪಂದ್ಯಾಟ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ-ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೂಡುಬಿದಿರೆ ತಾಲೂಕು, ದ.ಕ ಮತ್ತು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ- ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ 2024-25ನೇ ಸಾಲಿನ ಮೂಡಬಿದಿರೆ ತಾಲೂಕು ಮಟ್ಟದ- ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ಸಿಸ್ ಪಂದ್ಯಾಟ ಆಗಸ್ಟ್ 3ರ ಶನಿವಾರದಂದು ನಡೆಯಿತು. ಪಂದ್ಯಾಟಗಳನ್ನು ಉದ್ಘಾಟಿಸಿ ಮಾತನಾಡಿದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್- “ಮಕ್ಕಳೇ, ವಿದ್ಯಾರ್ಥಿ ಜೀವನ ಬಹು ಅಮೂಲ್ಯವಾದದ್ದು, ಇಲ್ಲಿ ನಿಮಗೆ ದೊರೆಯುವ ಎಲ್ಲಾ ರೀತಿಯ ಅವಕಾಶಗಳನ್ನು ಬಳಸಿಕೊಳ್ಳಿ, ಗುರಿಯಿಟ್ಟು ಛಲಬಿಡದೇ, ನಿರಂತರವಾಗಿ ಯಶಸ್ಸಿಗಾಗಿ ಶ್ರಮಿಸಿ, ಗೆದ್ದಾಗ ಅತೀಯಾಗಿ ಹಿಗ್ಗದೇ, ಸೋತಾಗ ಕುಗ್ಗದೇ, ಸೋಲನ್ನು ಗೆಲುವಿನ ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ನಿಮ್ಮ ಗುರಿಯತ್ತ ಮುನ್ನಡೆಯಿರಿ. ಬೇರೆಯವರು ಗೆದ್ದಾಗ ಅಸೂಯೆ ಪಡದೇ, ಅವರಿಂದ ಪಾಠ ಕಲಿಯಿರಿ- ನನ್ನಿಂದಾಗದು ಎಂಬ ಕೆಟ್ಟ ಯೋಚನೆಯನ್ನು ಮನಸ್ಸಿನಿಂದ ತೆಗೆದುಹಾಕಿ. ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ನಂತಹ ಶ್ರೇಷ್ಠ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತಮಾತೆಯನ್ನು ಪ್ರತಿನಿಧಿಸಿ-ಪದಕ ಗೆಲ್ಲುವ ಸಾಧಕರು ನೀವಾಗಿ. ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ಅರ್ಹ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲು ಎಕ್ಸಲೆಂಟ್ ವಿದ್ಯಾಸಂಸ್ಥೆ ಸದಾ ಸಿದ್ಧವಿದೆ” ಎನ್ನುತ್ತಾ ಎಲ್ಲ ಮಕ್ಕಳಿಗೂ ಶುಭಹಾರೈಸಿದರು. ಪ್ರಸ್ತಾವಿಕವಾಗಿ ಮಾತನಾಡಿದ ಮೂಡುಬಿದಿರೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾದ ನಿತ್ಯಾನಂದ ಶೆಟ್ಟಿಯವರು, ಈ ಆಟಗಳ ರೂಪುರೇಷೆಗಳನ್ನು ವಿವರಿಸಿ, ಅತ್ಯಂತ ಅಚ್ಚುಕಟ್ಟಾದ ಒಳಾಂಗಣ ಕ್ರೀಡಾಂಗಣದಲ್ಲಿ ಸುಂದರ ರೀತಿಯಲ್ಲಿ ಇಂದಿನ ಆಟಗಳಿಗೆ ಮಾಡಿದ ವ್ಯವಸ್ಥೆಗಳಿಗಾಗಿ ಇಲಾಖೆಯ ವತಿಯಿಂದ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮಕ್ಕಳು ಇದರ ಪ್ರಯೋಜನಗಳನ್ನು ಪಡೆದುಕೊಂಡು ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ, ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಕ್ರೀಡೆಯಲ್ಲಿ ಪ್ರತಿನಿಧಿಸುವಂತಹ ಮಕ್ಕಳಾಗಿ ಬೆಳೆಯಿರಿ ಎಂಬ ಶುಭಹಾರೈಕೆಯನ್ನಿತ್ತರು. ಈ ಸಂದರ್ಭದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ‍್ಯದರ್ಶಿಗಳಾದ- ರಶ್ಮಿತಾ ಜೈನ್, ಮೂಡಬಿದಿರೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ನವೀನ್ ಪುತ್ರನ್, ಹಾಗೂ ಎಕ್ಸಲೆಂಟ್ ಕ್ರೀಡಾ ತರಬೇತುದಾರರಾದ- ಯಸ್.ಯಸ್ ಪಾಟೀಲ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ಬೇರೆ ಬೇರೆ ಶಾಲೆಗಳಿಂದ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಪಂದ್ಯಾಟಗಳಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಹದಿನೇಳು ವರ್ಷದೊಳಗಿನ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಹದಿನಾಲ್ಕು ವರ್ಷದೊಳಗಿನ ಬಾಲಕರ ಶಟಲ್ ಬ್ಯಾಡ್ಮಿಂಟನ್ ಮತ್ತು ಬಾಲಕಿಯರ ಟೇಬಲ್ ಟೆನ್ನೀಸ್ ಹದಿನೇಳು ವರ್ಷದೊಳಗಿನ ಬಾಲಕರ ಟೇಬಲ್ ಟೆನ್ನೀಸ್ ತಂಡಗಳು ಜಯಗಳಿಸಿ ಜಿಲ್ಲಾ ಹಂತಕ್ಕೆ ಪ್ರವೇಶ ಪಡೆದವು. ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಶಿವಪ್ರಸಾದ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು, ಸಂಸ್ಥೆಯ ವಿಜ್ಞಾನ ಶಿಕ್ಷಕ ಪ್ರಜ್ವಲ್ ಶೆಟ್ಟಿಯವರು ಕಾರ‍್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

Article Image

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

ಉಜಿರೆ ಶ್ರೀ ಧ.ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕದ ಸ್ವಯಂಸೇವಕ ನಾಯಕ ರಾಮಕೃಷ್ಣ ಶರ್ಮ ಎನ್. ಅವರು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರಾಜ್ಯ ರಾ.ಸೇ.ಯೋ. ಕೋಶದ ಸಹಯೋಗದೊಂದಿಗೆ ಆ.6 ರಿಂದ 12 ರ ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು 20 ಸ್ವಯಂಸೇವಕರು ಪ್ರತಿನಿಧಿಸಲಿದ್ದು, ಎಸ್.ಡಿ.ಎಂ. ಎನ್.ಎಸ್.ಎಸ್. ಘಟಕವನ್ನು ರಾಮಕೃಷ್ಣ ಶರ್ಮ ಪ್ರತಿನಿಧಿಸಲಿದ್ದಾರೆ. ದ್ವಿತೀಯ ಬಿ.ಕಾಂ. ವಿದ್ಯಾರ್ಥಿಯಾಗಿರುವ ಇವರು ಬೆಳ್ತಂಗಡಿಯ ಎನ್. ಮಹಾಲಿಂಗೇಶ್ವರ ಭಟ್ ಮತ್ತು ವಿದ್ಯಾ ದಂಪತಿಯ ಪುತ್ರ.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ: ಕೆಸರಾಟ ಪಾಠ

Article Image

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ: ಕೆಸರಾಟ ಪಾಠ

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಹಾಗೂ ರೋವರ್ ರೇಂಜರ್ಸ್ ಘಟಕದ ಘಟಕದ ವತಿಯಿಂದ ಕಾರ್ಕಳದ ಮಿಯ್ಯಾರು ಗ್ರಾಮದಲ್ಲಿ ‘ಕೆಸರಾಟ ಪಾಠ’ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಿಯ್ಯಾರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಾಧವ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಿಯ್ಯಾರು ಗ್ರಾಮಕ್ಕೂ ಎನ್‌ಎಸ್‌ಎಸ್ ಚಟುವಟಿಕೆಗಳಿಗೂ ಅವಿನಾಭಾವ ನಂಟಿದೆ. ಈ ಗ್ರಾಮದಲ್ಲಿ ಹೆಚ್ಚಿನ ಎನ್‌ಎಸ್‌ಎಸ್ ಕ್ಯಾಂಪ್‌ಗಳು ನಡೆಯುತ್ತವೆ. ಈ ಕಾರ‍್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜೀವನ ಪಾಠ ಲಭಿಸಲಿ ಎಂದು ಹಾರೈಸಿದರು. ಆಳ್ವಾಸ್ ವಿದ್ಯಾಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕೆಸರಾಟದ ಮಹತ್ವ ಹಾಗೂ ಕೃಷಿಯ ಮಹತ್ವವನ್ನು ತಿಳಿಸಿದರು. ವಿವಿಧ ಆಟಗಳಲ್ಲಿ ತಾವೂ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕೆಸರಾಟ ಪಾಠದ ಅಂಗವಾಗಿ ಹಗ್ಗ ಜಗ್ಗಾಟ, ವಾಲಿಬಾಲ್, ತ್ರೋಬಾಲ್, 100 ಮೀಟರ್ ಓಟ, 400ಮೀಟರ್ ರಿಲೇ, ಪಿರಮಿಡ್ ರಚಿಸುವುದು, ನಿಧಿ ಹುಡುಕುವುದು, ಮಡಕೆ ಒಡೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗದ್ದೆಯನ್ನು ಒದಗಿಸಿದಂತಹ ರಾಜೇಶ್ ಹಾಗೂ ಸಹಕಾರವನ್ನು ನೀಡಿದ ರಮೇಶ್ ಹೆಗ್ಡೆಯನ್ನು ಅಭಿನಂದಿಸಲಾಯಿತು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂಡಿ, ಎನ್‌ಎಸ್‌ಎಸ್ ಘಟಕದ ಸಂಯೋಜಕರಾದ ಧರ್ಮೇಂದ್ರ ಕುದ್ರೋಳಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ ಚಿಪ್ಳೂಣಕರ್ ರೋವರ್ ರೇಂಜರ್ಸ್ ಘಟಕದ ಸಂಯೋಜಕರಾದ ವೀಣಾ ಹಾಗೂ ಸುನಿಲ್, ಉಪನ್ಯಾಸಕ ವರ್ಗದವರು ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರೋವರ್ ರೇಂಜರ್ಸ್ ಹಾಗೂ ಎನ್‌ಎಸ್‌ಎಸ್ ಘಟಕದ 175 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

Article Image

ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಉಜಿರೆ: ಬ್ಯಾಂಕಿಂಗ್‌ ಸಂಸ್ಥೆಗಳು ಜಾಗತಿಕ ಆರ್ಥಿಕತೆಯಲ್ಲಿನ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತಿವೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಾಗುವ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡಾಗ ಇಂದಿನ ಆಧುನಿಕ ಯುಗದಲ್ಲಿ ಬದುಕು ಮತ್ತಷ್ಟು ಸರಾಗವಾಗುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗ, ವ್ಯವಹಾರ ಆಡಳಿತ ವಿಭಾಗ, ಶ್ರೀ ಧ. ಮಂ. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ವತಿಯಿಂದ ಇಂಟರ್ನಲ್‌ ಕ್ವಾಲಿಟಿ ಅಶ್ಯೂರೆನ್ಸ್‌ ಸೆಲ್‌ ಸಹಯೋಗದಲ್ಲಿ ಜು.27 ಆಯೋಜಿಸಿದ್ದ ‘ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು’ ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 1947ರ ಸಮಯದಲ್ಲಿ ಜನರು ಕೇವಲ ರೋಟಿ, ಕಪಡಾ ಮತ್ತು ಮಕಾನ್‌ (ಅಶನ, ವಸನ, ವಸತಿ)ಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದರು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರ ಬೇಡಿಕೆಗಳು ಹೆಚ್ಚಾಗಿವೆ. ಆರ್ಥಿಕ ವ್ಯವಸ್ಥೆಯನ್ನು ಸರಾಗಗೊಳಿಸುವಲ್ಲಿ ಬ್ಯಾಂಕಿಂಗ್ ಸಂಸ್ಥೆಗಳು ಅನೇಕ ರೀತಿ ಯೋಜನೆಗಳನ್ನು ಮುನ್ನೆಲೆಗೆ ತರುತ್ತಿವೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಅನೇಕ ರೈತರು, ಅನಕ್ಷರಸ್ಥರು ಹಾಗೂ ಗ್ರಾಮೀಣ ಭಾಗದವರು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು. “ವಿದ್ಯಾರ್ಥಿ ಹಂತದಲ್ಲಿ ಈ ರೀತಿಯ ವಿಚಾರ ಸಂಕಿರಣಗಳ ಮೂಲಕ ಮಾಹಿತಿ ನೀಡುವುದು ಉತ್ತಮ ಆಲೋಚನೆ. ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಈ ರೀತಿಯ ಅವಕಾಶಗಳ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು. ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಅಬುದಬಿಯ ಝಯದ್‌ ಸಂಸ್ಥೆಯ ಮಾಜಿ ಹಣಕಾಸು ನಿಯಂತ್ರಕ ಸಿಎ ಅಬ್ದುಲ್ಲ ಮಾಡುಮೂಲೆ, “ನಮ್ಮ ಸುತ್ತಮುತ್ತಲಿನ ಬೆಳವಣಿಗೆ ಅರಿತುಕೊಂಡು ನಾವು ಅದಕ್ಕೆ ಹೊಂದಿಕೊಳ್ಳಬೇಕು, ಇಲ್ಲವಾದರೆ ನಮ್ಮ ಉಳಿಯುವಿಕೆ ಕಷ್ಟಸಾಧ್ಯ. ಬದಲಾವಣೆಗಳನ್ನು ಗಮನಿಸಿ ವಿಶ್ಲೇಷಿಸಿ ನಂತರ ಅವುಗಳನ್ನು ಮೈಗೂಡಿಸಿಕೊಳ್ಳುವುದು ಯಶಸ್ಸಿನ ಬಹುದೊಡ್ಡ ಮಾರ್ಗ. ನಿರಂತರ ಕಲಿಕೆ ನಮ್ಮದಾಗಲಿ” ಎಂದರು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಗಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಪನ್ಮೂಲ ವ್ಯಕ್ತಿ, ಮುಂಬೈ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸಿಎಂಎ ಡಾ. ಕಿನ್ನರಿ ಥಾಕರ್‌, ನಮ್ಮ ಯಶಸ್ಸಿನ ಮಾನದಂಡ ನಾವು ಸಮಾಜಕ್ಕೆ ಎಷ್ಟರ ಮಟ್ಟಿಗೆ ಕೊಡುಗೆ ನೀಡಬಲ್ಲೆವು ಎಂಬುದರ ಮೇಲೆ ನಿಂತಿದೆ. ಬ್ಯಾಂಕಿಂಗ್ ಸಂಸ್ಥೆಗಳು ಸಮಾಜದ ಏಳಿಗೆಗೆ ಅನಿವಾರ್ಯ ಎಂಬುದನ್ನು ನಾವು ಒಪ್ಪಲೇಬೇಕು. ಬ್ಯಾಂಕಿಂಗ್‌ ಕ್ಷೇತ್ರ ಸೇರಿದಂತೆ ಉಳಿದೆಲ್ಲ ಕ್ಷೇತ್ರಗಳು ಸುಸ್ಥಿರ ಯೋಜನೆಗಳನ್ನು ತಮ್ಮದಾಗಿಸಿಕೊಳ್ಳಬೇಕು” ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ವಾಣಿಜ್ಯ ಕ್ಷೇತ್ರದ ತಜ್ಞರು ಮತ್ತು ಗ್ರಾಹಕರ ನಡುವೆ ಸೇತುವೆ ಕಟ್ಟುವ ಕೆಲಸವಾಗಬೇಕಿದೆ. ತಂತ್ರಜ್ಞಾನ ಬಳಕೆಯಿಂದ ಬ್ಯಾಂಕಿಂಗ್ ಕ್ಷೇತ್ರಗಳು ಮತ್ತಷ್ಟು ಮುಂದುವರಿದಿವೆ. ಆದರೆ ತಂತ್ರಜ್ಞಾನದ ನ್ಯೂನತೆಯಿಂದ ಎದುರಾಗುವ ಸೈಬರ್‌ ಕ್ರೈಮ್‌ ನಂತಹ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಬ್ಯಾಂಕಿಂಗ್ ವಿಚಾರದ ಹೊರತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಆಯೋಜಿಸಲಾದ ಈ ವಿಚಾರ ಸಂಕಿರಣ ಸೂಕ್ತವಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕರಾದ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶಕುಂತಲಾ, ಶ್ರೀ ಧ. ಮಂ. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ, ಸಂಘಟನಾ ಕಾರ್ಯದರ್ಶಿ, ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕ ಶರಶ್ಚಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್‌. ವಂದಿಸಿದರು. ವಿದ್ಯಾರ್ಥಿನಿ ಕ್ಷಿತಿ ಹಾಗೂ ತಂಡದವರು ಪ್ರಾರ್ಥಿಸಿದರೆ, ವಾಣಿಜ್ಯ ಪ್ರಾಧ್ಯಾಪಕಿಯರಾದ ದೀಕ್ಷಿತ ಕುಮಾರಿ ಮತ್ತು ಫಾತಿಮ ಶಫೀರ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Article Image

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ಉಜಿರೆ, ಜು. 23: ಯುವಜನತೆ ಕ್ಷುಲ್ಲಕ ಕಾರಣಗಳಿಗಾಗಿ ಅತಿರೇಕದ ಕ್ರಮಗಳನ್ನು ಕೈಗೊಳ್ಳುವುದು ಬಹಳ ನೋವಿನ ಸಂಗತಿ ಎಂದು ಮಂಗಳೂರು ಉತ್ತರ ವಲಯದ ಸಹಾಯಕ ಪೊಲೀಸ್ ಆಯುಕ್ತ, ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಮನೋಜ್ ಕುಮಾರ್ ನಾಯಕ್ ಹೇಳಿದರು. ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ಇಂದು (ಜು.23) 2024-25ನೇ ಸಾಲಿನ ವಿದ್ಯಾರ್ಥಿ ಸಂಘ(Students' Council 2024-25)ದ ವಿವಿಧ ವಿದ್ಯಾರ್ಥಿ ಚಟುವಟಿಕೆ ವೇದಿಕೆ(Students' Activity Fora)ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಯಶಸ್ವಿಯಾಗಲು ವಿಫಲವಾದ ಕೂಡಲೇ ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಪ್ರಸ್ತುತ ಯುವಜನತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದೆವೆಂದು, ಪೋಷಕರು ಫೋನ್ ಕೊಡಿಸಲಿಲ್ಲ ಎಂಬ ಇತ್ಯಾದಿ ಸಣ್ಣ ಸಣ್ಣ ಕಾರಣಗಳಿಗೆ ಆತ್ಮಹತ್ಯೆಯಂತಹ ಅತಿರೇಕದ ಕ್ರಮಕ್ಕೆ ಮುಂದಾಗುವುದನ್ನು ಕಂಡಾಗ ನೋವಾಗುತ್ತದೆ. ವೈಫಲ್ಯ ಮತ್ತು ಒತ್ತಡವನ್ನು ನಿಭಾಯಿಸಲು ಕಲಿಯಿರಿ” ಎಂದು ಅವರು ಹೇಳಿದರು.“ವೈಫಲ್ಯಗಳನ್ನು ಸ್ವೀಕರಿಸಿ. ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ. ಸಮಸ್ಯೆಯಿಂದ ದೂರ ಓಡಬೇಡಿ, ಎದುರಿಸಿ. ಒಂದೋ ಯಶಸ್ಸು ಸಿಗಬಹುದು ಇಲ್ಲವೇ ವಿಫಲವಾದರೆ ಅನುಭವ ದೊರಕಬಹುದು. ಒತ್ತಡದ ಸಂದರ್ಭದಲ್ಲಿಯೇ ನಮ್ಮಿಂದ ಅತ್ಯುತ್ತಮ ಫಲಿತಾಂಶ ಲಭಿಸುತ್ತದೆ. ದೇವರು ಕಷ್ಟದ ಸಂದರ್ಭಗಳನ್ನು ನೀಡುತ್ತಿದ್ದಾನೆಂದರೆ ನಿಮ್ಮಿಂದ ಏನೋ ಸಾಧನೆ ಆಗುವುದರಲ್ಲಿದೆ ಎಂದರ್ಥ” ಎಂದರು. ಯುವಜನತೆ ಮಾದಕ ದ್ರವ್ಯಗಳ ದಾಸರಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಕಾಲೇಜಿಗೆ, ಹುಟ್ಟಿದ ಊರಿಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ, ಪೋಷಕರಿಗೆ ಉತ್ತಮ ಮಕ್ಕಳಾಗಿ. ದ್ವಿಚಕ್ರ ವಾಹನ ಓಡಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಠಿಣ ಪರಿಶ್ರಮ ಮತ್ತು ಶಿಸ್ತು ಇದ್ದಾಗ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಎಷ್ಟು ಮುಖ್ಯವೋ ಶಿಸ್ತು ಸಹ ಅಷ್ಟೇ ಮುಖ್ಯ. ಎಸ್.ಡಿ.ಎಂ. ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳಿಗಷ್ಟೇ ಅಲ್ಲದೆ, ಮೌಲ್ಯ, ಕೌಶಲವೃದ್ಧಿಗೆ ಹೇರಳ ಅವಕಾಶವಿದೆ. ಸಾವಿರಾರು ಕನಸು ಹೊತ್ತು ಇಲ್ಲಿ ಬಂದಿದ್ದೀರಿ, ಒಳ್ಳೆಯ ಜಾಗಕ್ಕೆ ಬಂದಿದ್ದೀರಿ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರಯತ್ನ ಮುಂದುವರಿಸಿ” ಎಂದು ಅವರು ಸಲಹೆ ನೀಡಿದರು. ಮುಖ್ಯ ಅತಿಥಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿದರು. ನಾಯಕತ್ವವೆಂಬುದು ರಾಜಕೀಯಕ್ಕೆ ಸೀಮಿತವಲ್ಲ. ಜೀವನದಲ್ಲಿ ನಾಯಕತ್ವ ಮುಖ್ಯ. ಶಿಕ್ಷಣದ ಸಂದರ್ಭದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಘಗಳು ನೆರವಾಗುತ್ತವೆ ಎಂದು ಅವರು ತಿಳಿಸಿದರು. “ಒಬ್ಬ ಗುರುವಿಗೆ ಖುಷಿ ಸಿಗುವುದು ತನ್ನ ವಿದ್ಯಾರ್ಥಿ ಶ್ರೇಷ್ಠ ಸಾಧನೆ ಮಾಡಿದಾಗ. ನಮ್ಮ ಸಂಸ್ಥೆಯಲ್ಲಿ ಕಲಿತ ಮನೋಜ್ ಕುಮಾರ್ ನಾಯಕ್ ಶಿಸ್ತು, ಪರಿಶ್ರಮ ಹಾಗೂ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘಗಳಿಂದ ವಿದ್ಯಾರ್ಥಿಗಳು ವಿವಿಧ ರಾಜಕೀಯ ಪಕ್ಷಗಳ ಸಿದ್ಧಾಂತಗಳಿಂದ ಪ್ರೇರಿತರಾಗಿ ಪರಸ್ಪರ ಹೊಡೆದಾಟ, ವೈಷಮ್ಯದಿಂದ ಇರುವುದರ ಬದಲು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದು, ವ್ಯಕ್ತಿತ್ವ ವಿಕಸನ ಹೊಂದಬೇಕು ಎಂಬ ಉದ್ದೇಶದಿಂದ ಅಂದಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಅವರ ಪರಿಕಲ್ಪನೆಯಂತೆ ವಿಭಿನ್ನ ರೀತಿಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ 'ಚಿಗುರು' ಹಾಗೂ ಉದ್ಘಾಟನಾ ಸಮಾರಂಭದ ಚಿತ್ರಣಗಳನ್ನೊಳಗೊಂಡ 'ಚಿಗುರು' ಭಿತ್ತಿಪತ್ರಿಕೆ ಬಿಡುಗಡೆಗೊಂಡಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೇಯಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜ್ಞಾನ ಸಂಘದ‌ ಅಧ್ಯಕ್ಷ, ತೃತೀಯ ಬಿಸಿಎ ವಿದ್ಯಾರ್ಥಿ ಸುದೇಶ್ ಸ್ವಾಗತಿಸಿದರು. ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು. ಧರಿತ್ರಿ ಭಿಡೆ ಅತಿಥಿ ಪರಿಚಯ ನೀಡಿದರು. ವೀಕ್ಷಾ ವಂದಿಸಿದರು. ಮಾನಸ ಅಗ್ನಿಹೋತ್ರಿ ಮತ್ತು ರುಚಿರಾ ನಿರೂಪಿಸಿದರು.

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ

Article Image

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ

ವಿದ್ಯಾರ್ಥಿಗಳು ಸದಾ ಮಾತೃಭೂಮಿಯನ್ನು ಗೌರವಿಸಬೇಕು. ಪ್ರಜಾಪ್ರಭುತ್ವ ಹಾಗೂ ರಾಜಕೀಯದ ಅರಿವು ನಿಮಗಿರಬೇಕು. ಚುನಾವಣೆ ಮತ್ತು ಅದರ ನಿಯಮಗಳನ್ನು ತಿಳಿಯುವುದರೊಂದಿಗೆ ಮತದಾನದ ಮಹತ್ವವನ್ನು ಪ್ರತಿಯೊಬ್ಬ ಪ್ರಜೆಯು ಅರಿಯುವಂತಾಗಬೇಕು. ಎಂದಿಗೂ ಮತವನ್ನು ಹಣಕ್ಕಾಗಿ ಮಾರಿಕೊಳ್ಳಬಾರದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರೂ ಸಮಾನರು ಎಲ್ಲರಿಗೂ ತಮಗಿಷ್ಟವಾದ ಅಭ್ಯರ್ಥಿಗೆ ಮತ ನೀಡುವ ಹಕ್ಕಿದೆ. ಅದನ್ನು ಪ್ರತಿಯೊಬ್ಬರು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮನ್ನು ಆಳುವ ನಾಯಕರು ನಮ್ಮ ಸಮಸ್ಯೆಗಳಿಗೆ ಅಗತ್ಯತೆಗಳಿಗೆ ಸ್ಪಂದಿಸುವಂತಿರಬೇಕು. ಇಲ್ಲವಾದರೆ ಪ್ರಶ್ನಿಸುವ ಅಧಿಕಾರ ನಮಗಿದೆ ಅದನ್ನು ನಾವು ಮಾಡಬೇಕು. ನಾಯಕರನ್ನ ಆಯ್ಕೆ ಮಾಡಿದ ನಂತರ ಸುಮ್ಮನೆ ಕುಳಿತುಕೊಳ್ಳಬೇಡಿ. ನಾಯಕನಾದವನು ನಿಯಮಗಳನ್ನು ಮಾನವೀಯ ಮೌಲ್ಯಗಳನ್ನು ಗೌರವಿಸುವಂತವನಾಗಬೇಕು. ಅವರು ಮಾಡುವ ತಪ್ಪುಗಳನ್ನು ನೇರವಾಗಿ ಅವರಿಗೆ ತಿಳಿಸುವುದು ಪ್ರಜೆಗಳಾದ ನಿಮ್ಮ ಕರ್ತವ್ಯವಾಗಿದೆ. ವಿರೋಧ ಪಕ್ಷದ ನಾಯಕನಾದವನು ಆಡಳಿತ ಪಕ್ಷದ ಆಡಳಿತವನ್ನು ಸದಾ ವೀಕ್ಷಿಸುತ್ತಿರಬೇಕು. ಅವರ ಆಡಳಿತದಲ್ಲಿನ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಅಧಿಕಾರ ಅವರಿಗಿರುತ್ತದೆ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವತ್ತ ನಿಮ್ಮ ಪ್ರಯತ್ನವಿರಲಿ ನಿಮ್ಮ ಬಗ್ಗೆ ನಿಮಗೆ ಭರವಸೆ ಇರಲಿ. ಸಮಾಜದಲ್ಲಿ ಉತ್ತಮ ನಾಗರಿಕನಾಗಿ ರೂಪುಗೊಳ್ಳಿ ಎಂದು ಬೆಳ್ತಂಗಡಿಯ ಪ್ರಸಿದ್ಧ ವಕೀಲರಾದ ರೊ. ಬಿ.ಕೆ. ಧನಂಜಯ ರಾವ್ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಉದ್ಘಾಟನೆ ನೆರವೇರಿಸಿ ಮಾತನಾಡಿ ನೂತನ ವಿದ್ಯಾರ್ಥಿ ಸಚಿವರುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ತುಂಬಾ ಮುಖ್ಯವಾದದ್ದು. ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಅಂತಹ ಶಾಲಾ ಸಂಸತ್ತಿಗೆ ಸಂಬಂಧಿಸಿದ ಚುನಾವಣೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲ್ಗೊಂಡಿದ್ದೀರಿ. ಈ ಮೂಲಕ ನಮ್ಮ ಸಂವಿಧಾನ, ಆಡಳಿತದ ಬಗ್ಗೆ ಈ ಹಂತದಲ್ಲಿ ಅರಿವನ್ನು ಮಾಡಿಸಿಕೊಳ್ಳಬೇಕು. ಒಬ್ಬ ಉತ್ತಮ ನಾಯಕನಾಗುವ ಸಾಮರ್ಥ್ಯ ಎಲ್ಲರಲ್ಲಿಯೂ ಇರುತ್ತದೆ. ಅದಕ್ಕೆ ಬೇಕಾದ ಮೌಲ್ಯಗಳನ್ನು ಜ್ಞಾನವನ್ನು ಆತ್ಮ ವಿಶ್ವಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಪ್ರತಿ ದಿನ ಹೊಸತನ್ನು ಕಲಿಯುತ್ತೀರಿ. ಒಳ್ಳೆಯ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿ ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿ ಸಚಿವರುಗಳಿಗೆ ಶುಭ ಹಾರೈಸಿದರು. ಮುಖ್ಯೊಪಾಧ್ಯಾಯರಾದ ಶಿವಪ್ರಸಾದ್ ಭಟ್ ನೂತನ ವಿದ್ಯಾರ್ಥಿ ಸಚಿವರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪಮುಖ್ಯೋಪಾಧ್ಯಾಯರಾದ ಜಯಶೀಲ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ದಾಮೋದರ್ ಸಚಿವರುಗಳಿಗೆ ಖಾತೆಗಳನ್ನು ಹಂಚಿದರು, ಶಾಲಾ ಸಂಸತ್ತಿನ ನಾಯಕನಾಗಿ ಶಶಾಂಕ್ ಎ.ಸಿ., ವಿರೋಧ ಪಕ್ಷದ ನಾಯಕನಾಗಿ ಗ್ಯಾನ್ ಕೆ. ಕಾಳೆ, ಸಭಾಪತಿಯಾಗಿ ಯಶಸ್ವಿನಿ, ಉಪ ನಾಯಕಿ ಚಿನ್ಮಯಿ ಅರುಣ್, ಕ್ರೀಡೆ- ಮನ್ವಿತ್ ರಾಜ್ ಜೈನ್, ಆರೋಗ್ಯ- ಲಿಖಿತ್ ಗೌಡ, ಸಾಂಸ್ಕೃತಿಕ- ಸೋನಿಕ, ಶಿಸ್ತು- ತ್ರಿಶೂಲ್, ಆಹಾರ- ಧ್ರುತಿ ಪಾಟೀಲ್, ಪರಿಸರ- ಜೋವಿನ್, ಜಲ ಮತ್ತು ವಿದ್ಯುತ್- ಖಾತೆಗಳ ಸಚಿವರಾಗಿ ಧನ್ಯತಾ ಆಯ್ಕೆಗೊಂಡರು. ವಿದ್ಯಾರ್ಥಿನಿ ಅದಿತಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಿ.ಎ. ಅಂತಿಮ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

Article Image

ಸಿ.ಎ. ಅಂತಿಮ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

2024 ಮೇ ಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜಾ, ಪ್ರೀತಿಶ್ ಕುಡ್ವಾ, ಜೊನಿಟಾ ಜೋಶ್ನಿ ಸೋಜಾ ಡಿ, ಸಾಹುಲ್ ಹಮೀದ್, ಅನುಷಾ ಹೆಗ್ಡೆ, ಮೆಲ್ವಿನ್ ಜೋಸ್ವಿನ್ ಲೋಬೋ, ಪಲ್ಲವಿ ಹೆಚ್ ಆರ್, ಪ್ರಜ್ವಲ್, ವಿಲಿಟಾ ಆಲ್ವಿಶಾ ರೇಗೊ, ಆಂಚಲ್, ಸುಷ್ಮಾ ಎನ್, ಕಿರಣ್ ಚಂದ್ರಶೇಖರ್ ಶೇರಿಗಾರ್, ರೋಯ್ಡನ್, ಕೌಶಿಕ್, ಕಿರಣ್ ಭಾರಧ್ವಜ್, ರಜತ್ ಜೈನ್, ಶುಭಂಕರ್, ರಾಕೇಶ್, ಪ್ರಖ್ಯಾತ್, ಪವನ್, ನಾಗರಾಜ್ ಜಿ ಶೆಟ್ಟಿ, ಹೇಮಂತ್ ಕುಮಾರ್ ಡಿ.ಕೆ. , ಶ್ರೀನಿಧಿ ಎಸ್ ಶೆಟ್ಟಿ, ಖುಶ್ಬೂ ಮತ್ತು ಗೀತಾ ನಿಶಾ ಪಿರೇರಾ - ಒಟ್ಟು 25 ವಿದ್ಯಾರ್ಥಿಗಳು, ಹಾಗೂ ಜನವರಿ 2024ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಕ್ಲರ‍್ಸನ್, ಮೇಘಾ, ತೇಜಸ್, ವಾಣಿಶ್ರೀ, ಧಾಮಿನಿ, ದರ್ಶನ್ ಜಿ ಎಚ್, ಪ್ರಸಾದ, ನೌಫಾಲ್, ಅಂಕಿತಾ ಕಲ್ಲಪ್ಪ, ರಾಷ್ಟ್ರೀತ್ ಸಿ.ಜಿ, ಅವಿನಾಶ್, ಸುಕ್ಷ್ಮಾ, ಅಭಿಷೇಕ್ ಚೋಟಿ ಸೇರಿದಂತೆ 13 ವಿದ್ಯಾರ್ಥಿಗಳು, ಒಟ್ಟು ಈ ವರ್ಷದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗಣನೀಯ ಸಾಧನೆ ಮೆರೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಉಚಿತ ಶಿಕ್ಷಣವನ್ನು ಪಡೆದವರಾಗಿದ್ದಾರೆ. ಇವರಲ್ಲಿ 10 ವಿದ್ಯಾರ್ಥಿಗಳು ಸಿ.ಎ. ಅಂತಿಮ ಪರೀಕ್ಷೆಯ ಗ್ರೂಪ್-01 ಮತ್ತು ಗ್ರೂಪ್-02 ಎರಡೂ ವಿಭಾಗಗಳನ್ನು ಪ್ರಥಮ ಪ್ರಯತ್ನದಲ್ಲೆ ಉತ್ತೀರ್ಣರಾಗಿ ಈ ಸಾಧನೆ ಮೆರೆದಿದ್ದಾರೆ.

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಮೈಂಡ್ ಮ್ಯಾಪಿಂಗ್ ಕಾರ್ಯಾಗಾರ

Article Image

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಮೈಂಡ್ ಮ್ಯಾಪಿಂಗ್ ಕಾರ್ಯಾಗಾರ

ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮೈಂಡ್ ಮ್ಯಾಪಿಂಗ್ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ರಿಯಾಗಿ ಮನಶಾಸ್ತ್ರಜ್ಞ, ಮೈಂಡ್ ಟ್ರೈನರ್ ಆಗಿರುವ ಮಂಗಳೂರಿನ ಪಿಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಸರ್ಫ್ರಾಜ್ ಜೆ. ಹಾಶಿಮ್ ಆಗಮಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಸುಪ್ತ ಮನಸ್ಸಿಗೆ ಅದ್ಭುತವಾದ ಸಾಮರ್ಥ್ಯವಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಜೀವನದಲ್ಲಿ ನಾವು ಇಟ್ಟ ಗುರಿಯನ್ನು ತಲುಪಬಹುದು. ಋಣಾತ್ಮಕ ಆಲೋಚನೆಗಳು ಬಂದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಲು ಧನಾತ್ಮಕ ಆಲೋಚನೆಗಳನ್ನು ಮಾಡಬೇಕು. ನಮ್ಮ ಮನಸ್ಸು ನಮ್ಮ ಸ್ಥಿಮಿತದಲ್ಲಿದ್ದಲ್ಲಿ ಮಾತ್ರ ಹೊರಗಿನ ಪ್ರಪಂಚದಲ್ಲಿ ಏನೇ ಅನಿಶ್ಚಿತತೆ, ಸಮಸ್ಯೆಗಳಿದ್ದರೂ ಅದನ್ನು ಮೀರಿ ಬೆಳೆಯಲು ಸಾಧ್ಯ. ಸದಾ ಒಳಿತನ್ನೇ ಆಲೋಚಿಸಿ ಇತರರಿಗೂ ಕೇಡನ್ನು ಬಯಸದೇ ಇದ್ದಲ್ಲಿ ಶಾಂತಿಯಿಂದ ಬದುಕಬಹುದು ಎಂದರು. ಮನಸ್ಸಿನ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಅರಿವಾಗುವಂತೆ ಒಂದಷ್ಟು ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ವಿಕ್ರಮ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ಉಜಿರೆ: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Article Image

ಉಜಿರೆ: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ 2024- 25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜು. 8ರಂದು ನಡೆಯಿತು. ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ (ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ವಿಜೇತ ಸ್ವಯಂಸೇವಕ), ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ ಎಂ.ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಅವರು, “ಒಳ್ಳೆಯತನ, ಮಾನವೀಯತೆ ಇದ್ದರೆ ಜನರು ನಮ್ಮನ್ನು ಗುರುತಿಸುತ್ತಾರೆ. ಆತ್ಮವಿಶ್ವಾಸವನ್ನು ಜಾಗೃತಗೊಳಿಸಿದರೆ ಅದಕ್ಕಿಂತ ಒಳ್ಳೆಯ ವಿಚಾರ ಮತ್ತೊಂದಿಲ್ಲ” ಎಂದರು. "ನನ್ನ ಕಾಲೇಜು ದಿನಗಳು ಹಲವಾರು ನೆನಪುಗಳನ್ನು ಕೊಟ್ಟಿವೆ. ಬದುಕಿಗೆ ಹಲವು ಪಾಠಗಳನ್ನು ಕಲಿಸಿಕೊಟ್ಟಿವೆ. ಉಜಿರೆ ಕಾಲೇಜು ಮತ್ತು ಎನ್.ಎಸ್.ಎಸ್. ಘಟಕ ನನ್ನನ್ನು ಬೆಳೆಸಿದೆ, ಬದುಕನ್ನು ಕಲಿಸಿದೆ" ಎಂದು ಅವರು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿದರು. “ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುವ ಈ ವಾಸ್ತವ ಜಗತ್ತಿನಲ್ಲಿ ಸಮಾಜಮುಖಿಗಳಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ” ಎಂದರು. ಸೇವೆ ಎನ್ನುವುದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವಂತಹದ್ದು. ‘ನನಗಲ್ಲ ನಿನಗೆ’ ಎನ್ನುವ ಧ್ಯೇಯ ವಾಕ್ಯದಡಿ ಎನ್ಎಸ್ಎಸ್ ಘಟಕ ನಿರಂತರವಾಗಿ ಸೇವೆ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು. ನೂತನ ಸ್ವಯಂಸೇವಕ ನಾಯಕರಿಗೆ ಹಿರಿಯ ಸ್ವಯಂಸೇವಕರು ಅಧಿಕಾರ ಹಸ್ತಾಂತರಿಸಿದರು. ಸ್ವಯಂಸೇವಕರಿಂದ ತಯಾರಿಸಲ್ಪಟ್ಟ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಬಳಿಕ, ನೂತನವಾಗಿ ಆಯ್ಕೆಗೊಂಡ ಸ್ವಯಂಸೇವಕರಿಗೆ ಪ್ರಶಿಕ್ಷಣ ಕಾರ್ಯಕ್ರಮವನ್ನು ಡಾ. ಮಾಧವ್ ಎಂ.ಕೆ. ನೆರವೇರಿಸಿದರು. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಪ್ರಸ್ತಾವಿಸಿದರು. ಇನ್ನೋರ್ವ ಯೋಜನಾಧಿಕಾರಿ ಪ್ರೊ. ದೀಪಾ ಆರ್. ಪಿ. ವಂದಿಸಿದರು. ಸ್ವಯಂಸೇವಕಿ ಶ್ವೇತಾ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.

ಸಸ್ಯಶಾಸ್ತ್ರ ವಿಭಾಗದ ಸಂಘಗಳ ವಾರ್ಷಿಕ ಚಟುವಟಿಕೆ ಉದ್ಘಾಟನೆ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

Article Image

ಸಸ್ಯಶಾಸ್ತ್ರ ವಿಭಾಗದ ಸಂಘಗಳ ವಾರ್ಷಿಕ ಚಟುವಟಿಕೆ ಉದ್ಘಾಟನೆ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಸಸ್ಯಸೌರಭ ಮತ್ತು ಇಕೋ ಕ್ಲಬ್ ಸಂಘಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಜು. 6ರಂದು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಬಿ. ಎ. ಕುಮಾರ ಹೆಗ್ಡೆ, ಸಂಘದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ವಿಭಾಗದ ‘ಸಸ್ಯಸೌರಭ’ ಭಿತ್ತಿಪತ್ರಿಕೆಯ ಶೈಕ್ಷಣಿಕ ವರ್ಷದ ಮೊದಲ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಸ್ಯಸೌರಭ ಮತ್ತು ಇಕೋ ಕ್ಲಬ್ ನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸಸ್ಯಸೌರಭ ಸಂಘದ ಅಧ್ಯಕ್ಷೆ ಮೇಘಶ್ರೀ ವಿ. ಎಸ್. ಸ್ವಾಗತಿಸಿದರು, ಇಕೋ ಕ್ಲಬ್ ಅಧ್ಯಕ್ಷೆ ಪೂರ್ವಿಕ ಜಿ. ಕೆ. ವಂದಿಸಿದರು, ಅನುಪಮ್ ಬಿ. ಮತ್ತು ಶ್ಲಾಘನಾ ವಿ. ಎಸ್. ನಿರೂಪಿಸಿದರು.

ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Article Image

ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಮೂಡುಬಿದಿರೆ, ವಿದ್ಯಾಗಿರಿ: ಸ್ನಾತಕೋತ್ತರ ವಾಣಿಜ್ಯ ವಿದ್ಯಾರ್ಥಿಗಳು ವಾಣಿಜ್ಯದ ಎಲ್ಲಾ ಆಯಾಮಗಳಲ್ಲಿ ನಿಪುಣತೆ ಹೊಂದುವುದು ಅವಶ್ಯಕ ಎಂದು ಲೆಕ್ಕಪರಿಶೋಧಕ ಎಂ. ಉಮೇಶ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತು ಒಂದು ರಣರಂಗ. ಇದನ್ನು ಎದುರಿಸುವ ಎಲ್ಲ ಕಲೆಗಳನ್ನು ವಿದ್ಯಾರ್ಥಿ ಆಗಿದ್ದಾಗಲೇ ಸಿದ್ಧ ಪಡಿಸಿಕೊಳ್ಳಬೇಕು. ತಂತ್ರಜ್ಞಾನದ ಹೊಸ ಆವಿಷ್ಕಾರ ಕೃತಕ ಬುದ್ಧಿಮತ್ತೆ ವಾಣಿಜ್ಯ ವಿದ್ಯಾರ್ಥಿಗಳಿಗೆ ಸವಾಲಾಗಿ ರೂಪುಗೊಂಡಿದ್ದು,, ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಂಡರೆ ಮಾತ್ರ ಇದನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದರು. ವಾಣಿಜ್ಯ ವಿದ್ಯಾರ್ಥಿಗಳು ಖಾತೆ, ತೆರಿಗೆ ಹಾಗೂ ಈ ಕ್ಷೇತ್ರದ ಇತರ ವಿಷಯಗಳ ಕುರಿತು ತಿಳಿಯುವುದು ಹಾಗೂ ವಾಣಿಜ್ಯದ ಎಲ್ಲಾ ಆಗುಹೋಗುಗಳನ್ನು ಗಮನಿಸಬೇಕು ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳ ನಿಜವಾದ ಜೀವನ ಪ್ರಾರಂಭವಾಗುತ್ತಿದೆ. ಈ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ನಿಮ್ಮ ಮೇಲಿನ ನಂಬಿಕೆಯನ್ನು ಬೆಳೆಸಿಕೊಳ್ಳಿ ಎಂದರು. ಧನಾತ್ಮಕ ಆಲೋಚನೆಗಳು ನಿಮ್ಮ ಜೀವನದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಬೀಳ್ಕೊಡುಗೆ ಸಮಾರಂಭ ವಿದ್ಯಾರ್ಥಿ ಜೀವನದ ಒಂದು ಅಮೂಲ್ಯ ಕಾರ್ಯಕ್ರಮ. ಮುಂದಕ್ಕೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ನಮಗೆ ಒಳ್ಳೆಯ ಹೆಸರನ್ನು ತಂದುಕೊಡಲಿ ಎಂದು ಆಶಿಸುತ್ತೇನೆ ಎಂದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ರೇಖಾ ಶೆಟ್ಟಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಪುಷ್ಪಲತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಿಬಾ ಫಾತಿಮಾ ಸ್ವಾಗತಿಸಿ, ಖತೀಜಾ ಇನಾಜ್ ನಿರೂಪಿಸಿದರು. ಪ್ರಜ್ಞಾಶ್ರೀ ವಂದಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆ: ಸಮಾಲೋಚನಾ ಕಾರ್ಯಾಗಾರ

Article Image

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆ: ಸಮಾಲೋಚನಾ ಕಾರ್ಯಾಗಾರ

ಮೂಡುಬಿದಿರೆ: ದೇಶದ 142 ಕೋಟಿ ಜನಸಂಖ್ಯೆಯಲ್ಲಿ 50 ಕೋಟಿಯವರೆಗೆ ವಿದ್ಯಾರ್ಥಿಗಳು ಇರುವುದು ನಮ್ಮ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಜಿಲ್ಲಾ ಆಯುಕ್ತರಾದ ಡಾ. ಎಂ. ಮೋಹನ ಆಳ್ವ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಬುಧವಾರ ನಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳ ಸಮಾಲೋಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವಿದ್ಯೆ ಹಾಗೂ ಬುದ್ಧಿಯನ್ನು ಬೆಳೆಸುವುದರ ಜೊತೆಗೆ ಒಂದು ಒಳ್ಳೆಯ ಮನಸ್ಸನ್ನು ಕಟ್ಟುವ ಅವಶ್ಯಕತೆ ಇದೆ. ಇದನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ನೆರವೇರಿಸಲು ಸಾಧ್ಯ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಇರುವ ಅವಕಾಶಗಳು ಅಪಾರ. ಸ್ಕೌಟ್ಸ್ ಮತ್ತು ಗೈಡ್ಸ್ ನ ಚಟುವಟಿಕೆಗಳು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಪಸರಿಸಬೇಕು ಎಂದರು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲವಾಗಿ ಮೂಡುವ ಅವಶ್ಯಕತೆ ಇದೆ. ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಕೊರತೆ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಅಲ್ಲಿನ ಸಿಬ್ಬಂದಿಯದ್ದು. ಇದರಿಂದ ನಮ್ಮ ಜಿಲ್ಲೆಯು ದೇಶಕ್ಕೆ ಮಾದರಿಯಾಗಲಿದೆ ಎಂದರು. ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಸಿ. ಡಿ. ಜಯಣ್ಣ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಕಾಲೇಜು ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ನಾನು ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಪಸರಿಸುವ ಧ್ಯೇಯದ ಸಭೆಯನ್ನು ಆಯೋಜಿಸುತ್ತೇನೆ ಎಂದು ಭರವಸೆ ನೀಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತರಾದ ಪಿ. ಜಿ. ಆರ್ ಸಿಂಧ್ಯ ಮಾತನಾಡಿ, ರಾಜ್ಯದ ಶಿಕ್ಷಣ ಕ್ಷೇತ್ರದ ಸಿಬ್ಬಂದಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡುವಲ್ಲಿ ಸಹಕಾರಿಯಾಗಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಯಾವುದೇ ರೀತಿಯ ಸಂಭಾವನೆ ನೀಡದೆ ಇದ್ದರೂ, ನಮ್ಮ ಸಿಬ್ಬಂದಿ ಯಾವುದೇ ಅಪೇಕ್ಷೆ ಇಲ್ಲದೆ ತಮ್ಮ ಅಮೂಲ್ಯ ಸಮಯವನ್ನು ಸಮರ್ಪಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ದೇಶದಲ್ಲೇ ಸ್ಥಳೀಯ ಸಂಸ್ಥೆಯೊಂದಕ್ಕೆ ಇಷ್ಟು ಸುಲಲಿತವಾದ ಕಾರ್ಯಾಲಯ ಇರುವುದು ಮೂಡುಬಿದಿರೆಯಲ್ಲಿ ಮಾತ್ರ, ಇದು ಡಾ ಎಂ ಮೋಹನ ಆಳ್ವರ ಮಾರ್ಗದರ್ಶನದಿಂದ ಸಾಧ್ಯವಾಗಿದೆ. ಎಲ್ಲಾ ಪಕ್ಷ, ಜಾತಿ, ಧರ್ಮಗಳೂ ಪ್ರೀತಿಸುವ ವ್ಯಕ್ತಿ ಡಾ. ಎಂ. ಮೋಹನ ಆಳ್ವ ಅವರಿಂದ ನಮಗೆ ಹೆಚ್ಚಿನ ಶಕ್ತಿ ಬಂದಿದೆ ಎಂದು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ ನ2024-25ನೇ ಸಾಲಿನಲ್ಲಿ ನಡೆಯಲಿರುವ ಚಟುವಟಿಕೆಗಳ ಪುಸ್ತಕ ಬಿಡುಗಡೆ ಮಾಡಲಾಯಿತು. ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಬಿ. ಎನ್ ತುಂಬೆ ಸ್ವಾಗತಿಸಿ, ರಾಜ್ಯ ಸಂಘಟನಾ ಆಯುಕ್ತರಾದ ಎಂ ಪ್ರಭಾಕರ ಭಟ್ ವಂದಿಸಿ, ಜಿಲ್ಲಾ ಕೋಶಾಧಿಕಾರಿಗಳಾದ ನವೀನ್‌ಚಂದ್ರ ಅಂಬೂರಿ ನಿರೂಪಿಸಿದರು.

ಎಕ್ಸಲೆಂಟ್ ವಿದ್ಯಾಲಯದಲ್ಲಿ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ

Article Image

ಎಕ್ಸಲೆಂಟ್ ವಿದ್ಯಾಲಯದಲ್ಲಿ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ

ಆಧುನಿಕ ಸಮಾಜದ ಬಹುದೊಡ್ಡ ಸವಾಲು ಮಾದಕ ದ್ರವ್ಯ ಸೇವನೆಯಾಗಿದೆ. ವಿಶೇಷವಾಗಿ ಯುವಜನತೆ ದುರ್ವ್ಯಸನಗಳಿಗೆ ದಾಸರಾಗಿ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಶಾಪವಾಗಿ ಪರಿಣಮಿಸುತ್ತಿದ್ದಾರೆ. ತಾತ್ಕಾಲಿಕ ಮೋಜಿಗಾಗಿ ಆರಂಭವಾಗುವ ಮಾದಕ ವಸ್ತುಗಳ ಸೇವನೆಯಿಂದ ಅವರ ಭವಿಷ್ಯವನ್ನು ನಾಶಮಾಡುವ ಜೊತೆಗೆ ಸಮಾಜದ ನೆಮ್ಮದಿಯನ್ನು ಕೆಡಿಸುವರು. ಮನುಷ್ಯನ ನರಮಂಡಲದ ಮೇಲೆ ಪರಿಣಾಮ ಬೀರುವ ಇಂತಹ ದುಶ್ಚಟಗಳಿಂದ ದೂರವಿದ್ದು ವೈಯಕ್ತಿಕ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕರಾದ ಸಂದೇಶ ಪಿ. ಜಿ. ಅವರು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆಯ ಅಡ್ಡ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಅವರು ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮಾತನಾಡಿ ಹದಿಹರೆಯದ ಸಮಸ್ಯೆಗಳಲ್ಲಿ ಮಾದಕ ವಸ್ತು ಸೇವನೆಯು ಪ್ರಮುಖವಾದುದು. ಅವುಗಳಿಂದ ಉಂಟಾಗುವ ಅನರ್ಥಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಸುರಕ್ಷಿತ ಮತ್ತು ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಮಾಜ ಸ್ಪಂದಿಸಬೇಕಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕರಾದ ದಿವಾಕರ ರೈ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸ

Article Image

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸ

ಭಾಷಾ ಶಾಸ್ತ್ರದಲ್ಲಿ ಪರಿಣಿತಿ ಹೊಂದಿದಾಗ ಇಂಗ್ಲಿಷ್ ಅಧ್ಯಯನ ಸುಲಲಿತವಾಗುತ್ತದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ವತಿಯಿಂದ ಕಾಲೇಜಿನ ಎ.ವಿ ಹಾಲ್‌ನಲ್ಲಿ ಇತೀಚೆಗೆ ನಡೆದ ಭಾಷಾಶಾಸ್ತ್ರ ವಿಷಯದ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳ ಶಿಕ್ಷಣ ವ್ಯವಸ್ಥೆಯಲ್ಲಿ ತಜ್ಞ ಅಧ್ಯಾಪಕರ ಕೊರತೆ ಇದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ, ಆದರೆ ಇದು ಸತ್ಯಕ್ಕೆ ದೂರವಾದ ಮಾತು. ವಿದ್ಯಾರ್ಥಿಗಳು ಜ್ಞಾನದ ಅನ್ವೇಷಣೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡರೆ, ಅಧ್ಯಾಪಕರೊಂದಿಗೆ ಚರ್ಚಿಸಿದರೆ, ಅಧ್ಯಾಪಕರು ಜ್ಞಾನವನ್ನು ವೃದ್ಧಿಸಿಕೊಳ್ಳಲು ಹೆಚ್ಚು ಶ್ರಮವನ್ನು ವಹಿಸುತ್ತಾರೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಕುಲಸಚಿವ (ಅಕಾಡೆಮಿಕ್ಸ್) ಡಾ. ಟಿ. ಕೆ. ರವಿಚಂದ್ರನ್ ಸ್ವಾಗತಿಸಿ, ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಪವಿತ್ರ ತೇಜ್ ನಿರೂಪಿಸಿ, ವಂದಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ‍್ಯಕ್ರಮ

Article Image

ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ‍್ಯಕ್ರಮ

ಮೂಡುಬಿದಿರೆ: ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕ ವಿಜೇತ, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳವಾರ ವಿದ್ಯಾಗಿರಿಯಲ್ಲಿ ಅಭಿನಂದಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಗೌರವಾಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ನಮ್ಮ ದೇಶದಲ್ಲಿ ಪರಿಚಿತ ಆಟವಾಗಿ, ಆದರೆ ಈ ಭಾಗದಲ್ಲಿ ಅಷ್ಟೊಂದು ಖ್ಯಾತಿಗೆ ಬಾರದ ಕ್ರೀಡೆಯನ್ನು, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್, ಕಳೆದ ಐದು ವರ್ಷಗಳ ಸತತ ಪರಿಶ್ರಮದಿಂದಾಗಿ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನಿರ್ಮಾಣ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಜೋಡಿಸಿಕೊಳ್ಳಬೇಕು. ಇವುಗಳ ನಡವಿನ ಸಮತೋಲಿತ ನಡಿಗೆ ಎರಡು ಕ್ಷೇತ್ರದಲ್ಲಿ ಉನ್ನತಿ ಹೊಂದಲು ಸಹಕಾರಿ. ಆದರೆ ಕ್ರೀಡೆಯ ಹೆಸರಿನಲ್ಲಿ ಶಿಕ್ಷಣವನ್ನು ಕುಂಠಿತಗೊಳಿಸುವುದು ಸಾಧುವಲ್ಲ ಎಂದರು. ಆರೋಗ್ಯ, ಮನೋನಿಶ್ಚಯ, ಕ್ರೀಡಾ ಮನೋಭಾವ ಹಾಗೂ ಸೌಹಾರ್ದತೆಯಂತಹ ಗುಣಗಳು ನಾವು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ನಮ್ಮಲ್ಲಿ ಕರಗತವಾಗುತ್ತದೆ ಎಂದರು. ಆಳ್ವಾಸ್ ಸಂಸ್ಥೆ, ಈ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ನಮ್ಮ ಸಂಘದ ಪರಿಶ್ರಮದಿಂದಾಗಿ ಇಂದು ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರತಿ ಹಂತದಲ್ಲೂ ಕಠಿಣ ಸವಾಲನ್ನು ಮೀರಿ ವಿದ್ಯಾರ್ಥಿಗಳು ಜಯಶಾಲಿಗಳಾಗಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ಏಕೈಕ ತಂಡ ನಮ್ಮದು. ಮುಂದಿನ ಆಗಸ್ಟ್ ನಲ್ಲಿ ಹಂಗೇರಿಯ ಬುಡಾಪೇಸ್ಟಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕಿಕ್ ಚಾಂಪಿಯನ್‌ಶಿಫ್‌ನಲ್ಲಿ ಭಾಗವಹಿಸಲು ನಮ್ಮ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪದಕ ವಿಜೇತರ ವಿವರ: ಮೇ 21ರಿಂದ 27ರವರೆಗೆ ಪುಣೆಯಲ್ಲಿ ನಡೆದ ಚಿಲ್ಡನ್ಸ್ ಮತ್ತು ಕೆಡೆಟ್ ಹಾಗೂ ಜೂನ್ 10 ರಿಂದ 14ರ ವರೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಜಿಲ್ಲೆಯ ಕ್ರೀಡಾಪಟುಗಳು 8 ಚಿನ್ನದ ಪದಕ, 7 ಬೆಳ್ಳಿಯ ಪದಕ ಮತ್ತು 13 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಅನ್ಶಿ ಎನ್. ಎಮ್. ವೈಯಕ್ತಿಕ ವಿಭಾಗದಲ್ಲಿ 3 ಚಿನ್ನದ ಪದಕವನ್ನು ಪಡೆದು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಜೂನ್ 10 ರಿಂದ 13ರವರೆಗೆ ಬಾಗಲಕೋಟೆಯಲ್ಲಿ ನಡೆದ ಸೌತ್ ಝೋನ್ ಖೇಲೋ ಇಂಡಿಯಾ ವುಶು ವುಮೆನ್ಸನ ಲೀಗ್ ನಲ್ಲಿ ದಕ್ಷಿಣ ಕನ್ನಡ ವುಶು ಅಸೋಸಿಯೇಷನ್‌ನ ವಿದ್ಯಾರ್ಥಿಗಳು 1 ಚಿನ್ನದ ಪದಕ ಮತ್ತು 6 ಕಂಚಿನ ಪದಕಗಳನ್ನು ಪಡೆದು ಮುಂಬರುವ ರಾಷ್ಟ್ರೀಯ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾರ‍್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದ ನಿತಿನ್ ಸುವರ್ಣ ಮತ್ತು ಶಿಕ್ಷಕ ಸಂಪತ್ ಕುಮಾರ್ ಇದ್ದರು.

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ “ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು” ಕುರಿತು ಸಂವಾದ ಕಾರ್ಯಕ್ರಮ

Article Image

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ “ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು” ಕುರಿತು ಸಂವಾದ ಕಾರ್ಯಕ್ರಮ

ಮೂಡುಬಿದಿರೆ: “ವೈದ್ಯಕೀಯ ಬಹಳ ಪವಿತ್ರವಾದ ವೃತ್ತಿ. ಆ ವೃತ್ತಿಯ ಎಲ್ಲಾ ತ್ಯಾಗ ಮತ್ತು ಸವಾಲುಗಳ ನಡುವೆಯೂ ಅದು ಬಹಳ ಸಂತೃಪ್ತಿಯನ್ನು ನೀಡುವ ವೃತ್ತಿ. ಈ ನಿಟ್ಟಿನಲ್ಲಿ ನಾನು ಜಗತ್ತಿನ ಅತ್ಯಂತ ಉತ್ತಮ ವೃತ್ತಿಯಲ್ಲಿದ್ದೇನೆ” ಎಂದು ಬೆಂಗಳೂರಿನ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೊವಾಸ್ಕುಲರ್ ಸಾಯನ್ಸಸ್ ಎಂಡ್ ರಿಸರ್ಚ್ ನ ಸಹಾಯಕ ಪ್ರಾಧ್ಯಾಪಕ ಡಾ. ಪಾರಿತೋಶ್ ಬಲ್ಲಾಳ್ ಹೇಳಿದರು. ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆಸಿದ, “ನೀಟ್ ಪರೀಕ್ಷೆಯ ಯಶಸ್ಸಿನ ಸೂತ್ರ” ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ವೈದ್ಯನಾಗಲು ಪಡಬೇಕಾದ ತ್ಯಾಗ, ಶ್ರಮದ ಬಗ್ಗೆ ವಿದ್ಯಾರ್ಥಿಯೊಬ್ಬನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಹೃದಯ ತಜ್ಞನಾಗಲು ಹದಿಮೂರು ವರ್ಷ ಬೇಕಾಗುತ್ತದೆ ಎಂದರು. “ಈ ಎರಡು ವರ್ಷಗಳಲ್ಲಿ ನೀವು ಎದುರಿಸುವ ಕಷ್ಟಗಳು ನಿಮ್ಮ ಭವಿಷ್ಯತ್ತಿಗೆ ನಿಮ್ಮನ್ನು ತಯಾರಿಸುತ್ತದೆ. ದೊಡ್ಡ ಕನಸನ್ನು ಕಾಣಲು ಹಿಂಜರಿಯಬೇಡಿ. ಪ್ರಥಮ ಪದವಿಪೂರ್ವದಲ್ಲಿ ನಾನು ಕಡಿಮೆ ಅಂಕಗಳನ್ನು ಗಳಿಸಿದ್ದೆ. ಆಗ ನನ್ನ ಪ್ರಾಂಶುಪಾಲರ ಮಾರ್ಗದರ್ಶನದಿಂದ ಆದ್ಯತೆಗಳಿಗನುಗುಣವಾಗಿ ನನ್ನ ಚಟುವಟಿಗಳನ್ನು ಆಯ್ದುಕೊಂಡು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ನಿಮ್ಮ ಪ್ರಸ್ತುತ ಪರಿಸ್ಥಿತಿ ಹೇಗೆಯೇ ಇದ್ದರೂ ಉತ್ಕ್ರಷ್ಟವಾದುದನ್ನು ಸಾಧಿಸಲು ಸಾಧ್ಯ. ನಿಮ್ಮ ಕಲಿಕೆಯ ಶೈಲಿಯನ್ನು ಅರಿತುಕೊಳ್ಳಿ, ಉತ್ತಮ ನೆನಪಿಗಾಗಿ ನೀವು ಗಳಿಸಿದ ಜ್ಞಾನವನ್ನು ನಿಮ್ಮ ಪರಿಸರದ ಜೊತೆ ಹೊಂದಿಸಿ, ಅದರ ಜೊತೆಗೆ ವ್ಯಾಯಾಮವನ್ನು ಮಾಡಿ, ನಿಮ್ಮ ಕಲಿಕಾ ಸಾಮಾಗ್ರಿಗಳನ್ನು ಸರಿಯಾಗಿ ಜೋಡಿಸಿಕೊಳ್ಳಿ, ನಿಮ್ಮ ಗುರಿಯನ್ನು ದೃಶ್ಯೀಕರಿಸಿ, ಅನೇಕ ಪುನರಾವರ್ತನೆಗಳನ್ನು ಮಾಡಿ” ಎಂದರು. ಹೀಗೆ ಅವರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಡಾ ಪಾರಿತೋಶ್ ಬಲ್ಲಾಳರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಗುರಿಯನ್ನು ತಲುಪಲು ಅವರು ನೀಡಿದ ಸಲಹೆಯನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನೋಲಿಯ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

First Previous

Showing 1 of 3 pages

Next Last