Article Image

ರೂ. 54 ಲಕ್ಷದ ಪ್ಯಾಕೇಜ್ ಧಿಕ್ಕರಿಸಿ ವೈರಾಗ್ಯದ ಮಾರ್ಗ ಹಿಡಿದ 24ರ ಸಾಫ್ಟ್ವೇರ್ ಇಂಜಿನಿಯರ್

Article Image

ರೂ. 54 ಲಕ್ಷದ ಪ್ಯಾಕೇಜ್ ಧಿಕ್ಕರಿಸಿ ವೈರಾಗ್ಯದ ಮಾರ್ಗ ಹಿಡಿದ 24ರ ಸಾಫ್ಟ್ವೇರ್ ಇಂಜಿನಿಯರ್

ಅಶೋಕನಗರ (ಮಧ್ಯ ಪ್ರದೇಶ )- ಆತ 24ರ ಹರಯದ ಯುವಕ, ಹೆಸರು ಪಿಯುಷ್ ಜೈನ, ಸಾಫ್ಟ್ ವೇರ್ ಇಂಜಿನಿಯರ್ ಆಗಿ ಪುಣೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕಾರ್ಯನಿರತ. ತಂದೆ ತಾಯಿಗಳು ಬಹು ಕನಸು ಹೊತ್ತು ಮಗನ ಭವಿಷ್ಯ ಉಜ್ವಲವಾಗಲಿ ಎಂದು ಆತನನ್ನು ಈ ಹಂತಕ್ಕೆ ಬೆಳೆಸಿದ್ದರು. ಮಗನಿಗೆ ಮದುವೆ ಮಾಡುವುದು ಎಂದು ಯೋಚಿಸಿದ ತಾಯಿ ಸೀಮಾ ಜೈನ್ ಹೆಣ್ಣನ್ನು ಕೂಡ ನೋಡಿ ಮಗನಿಗೆ ತಿಳಿಸಿದ್ದರು. ಬಾಲ್ಯದಿಂದ ಧಾರ್ಮಿಕ ಪರಿಸರ, ಜಿನ ಮುನಿಗಳ ಸಂಪರ್ಕದಲ್ಲಿ ಬೆಳೆದಿದ್ದ ಪಿಯುಷ್ ಮನಸ್ಸು ವೈರಾಗ್ಯದ ಕಡೆ ಮುಖ ಮಾಡಿತ್ತು. ಮಧ್ಯಪ್ರದೇಶದ ಅಶೋಕನಗರದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಶ್ರಮಣ ಶಿರೋಮಣಿ, ಮುನಿಪುಂಗವ ಸುಧಾಸಾಗರರ ಕಡೆಗೆ ಆತನ ಮನಸ್ಸು ಓಡುತ್ತಿತ್ತು. ಹೆಣ್ಣು ನೋಡಲು ಬರುವಂತೆ ತಾಯಿ ಕರೆ ಮಾಡಿದಾಗ ಮಗ ಹೇಳಿದ - ಅಮ್ಮ ನಾನು ನಿಮ್ಮ ಮಗನಾಗಿ ಇನ್ನು ಮುಂದೆ ನಿಮ್ಮ ಎದುರು ಬರಲಾರೆ, ಆದರೆ ಶ್ರಮಣ ಜೀವನದ ಪಥಿಕನಾಗಿ ನಿಮಗೆ ಕಾಣಿಸಿಕೊಳ್ಳುತ್ತೇನೆ. ಹೀಗೆ ಹೇಳಿದ ಪಿಯೂಷ್ ತನ್ನ 54 ಲಕ್ಷದ ಪ್ಯಾಕೇಜ್‌ಗೆ ವಿದಾಯ ಹೇಳಿ ನೇರವಾಗಿ ಮುನಿಗಳ ಚಾತುರ್ಮಾಸ ಸ್ಥಾನಕ್ಕೆ ತೆರಳಿ ತನಗೆ ಸನ್ಯಾಸ ಮಾರ್ಗದ ಮೊದಲ ಹೆಜ್ಜೆ ಬ್ರಹ್ಮಚರ್ಯ ವ್ರತವನ್ನು ನೀಡುವಂತೆ ನಿವೇದಿಸಿಕೊಂಡ. ಮುನಿಗಳು ಆತನನ್ನು ಪರಾಮರ್ಶೆಸಿ, ಚರ್ಚಿಸಿ ವ್ರತ ನೀಡಲು ಒಪ್ಪಿದರು. ವಿಜಯದಶಮಿಯ ಶುಭದಿನ, ಚಾತುರ್ಮಾಸ ಕಾರ್ಯಕ್ರಮಗಳಿಗಾಗಿ ಹಾಕಿದ್ದ ವಿಶಾಲ ಪೆಂಡಾಲನಲ್ಲಿ ಸಹಸ್ರಾರು ಜನರ ಉಪಸ್ಥಿತಿಯಲ್ಲಿ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ಪಿಯುಷನ ತಂದೆ ತಾಯಿಗಳನ್ನೂ ಕರೆಸಲಾಗಿತ್ತು. ಪಿಯುಷನಿಗೆ ಸನ್ಯಾಸ ನೀಡುವ ಬಗ್ಗೆ ಅವರ ಅನುಮತಿಯನ್ನೂ ಪಡೆಯಲಾಗಿತ್ತು. ವೇದಿಕೆಗೆ ಬರುತ್ತಿದ್ದಂತೆ ತಂದೆ ತಾಯಿಯರ ಕಣ್ಣೀರ ಕಟ್ಟೆ ಒಡೆಯಿತು. ಮಗನಿಗೆ ವಿದಾಯ ಹೇಳಬೇಕಾದ ಹೃದಯದ ತಾಪ ಅಶ್ರುವಿನ ರೂಪದಲ್ಲಿ ಧಾರೆಯಾಗಿ ಹರಿಯಿತು. ಈ ಅಶೃಧಾರೆ ಸಂಪೂರ್ಣ ಸಭೆಯನ್ನು ವ್ಯಾಪಿಸಿತು. ನೆರೆದ ಸಭಿಕರೆಲ್ಲರ ಕಣ್ಣುಗಳಿಂದ ಅಶ್ರು ಸುರಿಯುವಿಕೆಯನ್ನು ತಡೆಯಲಾಗಲಿಲ್ಲ. ತಮ್ಮ ಮನೆಯ ಮಗನನ್ನೇ ಬಿಟ್ಟುಕೊಡುತ್ತಿದ್ದೇವೆ ಎನ್ನುವ ನೋವು ಎಲ್ಲರಲ್ಲೂ ಕಾಣುತ್ತಿತ್ತು. ಸಂಪೂರ್ಣ ಪೆಂಡಾಲ್ ಸoವೇದನೆ ಮತ್ತು ಶ್ರದ್ಧೆಯಲ್ಲಿ ನೆನೆದು ಹೋಯಿತು. ಆಗ ಮುನಿ ಶ್ರೀ ಹೇಳಿದರು ಈ ಬಾಲಕನಿಗೆ ಸನ್ಯಾಸ ನೀಡುವ ಮುನ್ನ ಆತನಿಗೆ ಸಾಕಷ್ಟು ತಿಳಿಸಿ ಹೇಳಿದ್ದೇವೆ, ಚರ್ಚಿಸಿದ್ದೇವೆ, ಮೋಕ್ಷ ಮಾರ್ಗ ಸುಲಭವಲ್ಲ, ಇದು ಕತ್ತಿಯ ಅಲಗಿನ ಮೇಲೆ ನಡೆದಂತೆ ಇರುವುದು, ಎಂದೆಲ್ಲ ಹೇಳಿದರೂ ಈ ಬಾಲಕ ಹೆದರಲಿಲ್ಲ, ಹಿಂಜರಿಯಲಿಲ್ಲ, ಯಾವಾಗ ಸಂಸಾರದ ಬಂಧನಗಳು ಸಡಿಲುಗೊಳ್ಳುವವೋ ಆಗ ಈ ಜೀವ ಕಠಿಣ ಮಾರ್ಗದಲ್ಲಿ ಮುನ್ನಡೆಯುತ್ತದೆ. ಇಂದು ವಿಜಯದಶಮಿಯ ಈ ಶುಭ ದಿನ ಪಿಯುಷ್ ವೈರಾಗ್ಯ ಮಾರ್ಗವನ್ನು ಸ್ವೀಕರಿಸಿದ್ದಾನೆ, ಈತ ಸಮಗ್ರ ಸಮಾಜದ ಗೌರವವಾಗಿದ್ದಾನೆ. ಇಂದು ಮಗ ಮನೆಯಿಂದ ದೂರವಾಗುತ್ತಿದ್ದಾನೆ ಎಂದು ತಾಯಿ ಸುರಿಸುತ್ತಿರುವ ಕಣ್ಣೀರು ಮುಂದೊಂದು ದಿನ ಸಂತೋಷದ ಕಣ್ಣೀರಾಗಿ ಪರಿವರ್ತನೆಗೊಳ್ಳಲಿದೆ". ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಿಯುಷ್ ಬ್ರಹ್ಮಚಾರಿ ವ್ರತಧಾರಿಯಾಗಿ ಮುನಿ ಸಂಘ ಸೇರಿದನು. ಹಂತ ಹಂತವಾಗಿ ದಿಗಂಬರತ್ವ ಸ್ವೀಕರಿಸುವನು. ಇಲ್ಲಿಯವರೆಗೆ ಮುನಿ ಸಂಫದಲ್ಲಿ 17 ಬ್ರಹ್ಮಚಾರಿಗಳು ಇದ್ದು ಅವರಲ್ಲಿ ಡಾಕ್ಟರ್, ಇಂಜಿನಿಯರ್, ಸಿ ಎ ಮತ್ತಿತರ ಉನ್ನತ ಶಿಕ್ಷಿತರು ಇದ್ದು ಇದೀಗ ಅವರೊಂದಿಗೆ ಪಿಯುಷ್ ಸೇರ್ಪಡೆಯಾಗಿದೆ. 54 ಲಕ್ಷದ ಪ್ಯಾಕೇಜ್ ಪಡೆದು ಭೋಗ ಜೀವನ ಕೈಗೆಟುಕಿತ್ತಾದರೂ ಅದನ್ನು ಬದಿಗಿಟ್ಟು ಕಠಿಣ ಮಾರ್ಗವನ್ನು ಆಯ್ಕೆ ಮಾಡಿಕೊಂಡು, ಸಭಿಕರ ಅಶ್ರು ಧಾರೆಯ ತೇವದಲ್ಲಿ ವೈರಾಗ್ಯದ ಮಹಿಮೆ ಮತ್ತು ತ್ಯಾಗದ ಹೊಳಪು ಸೇರಿಕೊಂಡ ಸಂದೇಶವನ್ನು ಈ ಪ್ರಸಂಗ ನೀಡುತ್ತಿತ್ತು. ಜೀವನದ ನಿಜಸುಖ ತ್ಯಾಗದಲ್ಲಿದೆ, ವೈರಾಗ್ಯದಲ್ಲಿದೆ ಮತ್ತು ಈ ಮಾರ್ಗವೇ ಅಂತಿಮವಾಗಿ ಆತ್ಮನನ್ನು ಪರಮಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ ಎಂದು ಹೇಳುತ್ತಿತ್ತು. ಇದೇ ಸಂದರ್ಭದಲ್ಲಿ ವಿದ್ವಾಂಸರ ಸಮ್ಮೇಳನ ವೂ ಆಯೋಜಿತವಿದ್ದುದರಿಂದ 550 ಕ್ಕೂ ಹೆಚ್ಚು ವಿದ್ವಾಂಸರು ಕೂಡ ಪಿಯುಷ್ ವೈರಾಗ್ಯ ಪ್ರಸಂಗಕ್ಕೆ ಸಾಕ್ಷಿ ಆದರು. ಶಾಂತಿನಾಥ ಕೆ. ಹೋತಪೇಟಿ

ಧರ್ಮಸ್ಥಳದಲ್ಲಿ ಜೈನಮಠಗಳ ಭಟ್ಟಾರಕರುಗಳಿಂದ: ಧರ್ಮ ಸಂರಕ್ಷಣಾ ಸಮಾವೇಶ

Article Image

ಧರ್ಮಸ್ಥಳದಲ್ಲಿ ಜೈನಮಠಗಳ ಭಟ್ಟಾರಕರುಗಳಿಂದ: ಧರ್ಮ ಸಂರಕ್ಷಣಾ ಸಮಾವೇಶ

ಉಜಿರೆ: ಸತ್ಯ ಮತ್ತು ಅಹಿಂಸಾ ಪರಿಪಾಲಕರಾದ ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ತೊಂದರೆ ಕೊಟ್ಟವರನ್ನು ನಾವು ಬಿಡುವುದಿಲ್ಲ ಎಂದು ತಮಿಳುನಾಡು ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಎಲ್ಲಾ ಜೈನಮಠಗಳ ಭಟ್ಟಾರಕರುಗಳ ನೇತೃತ್ವದಲ್ಲಿ ಆಯೋಜಿಸಿದ ಧರ್ಮ ಸಂರಕ್ಷಣಾ ಸಮಾವೇಶದ ಉದ್ದೇಶವನ್ನು ವಿವರಿಸಿದರು. ಸತ್ಯಮೇವ ಜಯತೇ ಎನ್ನುವಂತೆ ಸತ್ಯಕ್ಕೆ ಸದಾ ಜಯವಿದೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿ ಬಾರದು ಎಂದು ಅವರು ಹೇಳಿದರು. ಶುಕ್ರವಾರ ಎಲ್ಲಾ ಭಟ್ಟಾರಕರುಗಳು ದೇವಸ್ಥಾನಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಗೆ ಬರುವಾಗ ದೇವಸ್ಥಾನದಲ್ಲಿ ಮಹಾಪೂಜೆಯೊಂದಿಗೆ ಘಂಟೆ ಬಾರಿಸಿತು. ಆದುದರಿಂದ ಸಣ್ಣ ಕಳಂಕ ಮಾಯವಾಯಿತು ಎಂದು ತಮಗೆ ತಿಳಿಯಿತು ಎಂದು ಸ್ವಾಮೀಜಿ ಹೇಳಿದರು. ರಾಮಚಂದ್ರ, ಸೀತೆಯ ಹಾಗೆ ಮಹಾಪುರುಷರಿಗೂ ಕಷ್ಟ, ಅಪವಾದ ಬರುತ್ತದೆ. ಹಾಗೆ ಧರ್ಮಸ್ಥಳಕ್ಕೆ ಬಂದ ಸಣ್ಣ ಕಳಂಕ ದೋಷ ಅಲ್ಲ. ಇಂದು ಸಣ್ಣ ಕಳಂಕವೂ ನಿವಾರಣೆಯಾಗಿದೆ. ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ ಎಲ್ಲಾ ಭಟ್ಟಾರಕರುಗಳು ಮುಂದೆ ವಿಧಾನಸಭೆ ಎದುರು ಪ್ರತಿಭಟನೆ ಹಾಗೂ ಉಗ್ರ ಹೋರಾಟ ನಡೆಸುವುದಾಗಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಹೆಗ್ಗಡೆಯವರು ಸಮಗ್ರ ಸಮಾಜದ ಚಕ್ರವರ್ತಿ. ಇಡೀ ರಾಷ್ಟ್ರದ ಮಹಾಪುರುಷ. ಅಧರ್ಮಿಗಳು ಷಡ್ಯಂತ್ರ ಹಾಗೂ ಅಸೂಯೆಯಿಂದ ಧರ್ಮಸ್ಥಳಕ್ಕೆ ಚ್ಯುತಿ ತರಲು ವಿಫಲಯತ್ನ ಮಾಡಿದ್ದಾರೆ. ಸರ್ವಧರ್ಮೀಯರ ಸಕಲ ಮಠ-ಮಂದಿರಗಳಿಗೂ ಸದಾ ನೆರವು, ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಿರುವ ಹೆಗ್ಗಡೆಯವರ ಜೊತೆ ನಾವು ಸದಾ ಇದ್ದೇವೆ. ಹೆಗ್ಗಡೆಯವರು ಎಲ್ಲರಿಗೂ ಪೂಜ್ಯರು ಹಾಗೂ ಸರ್ವಮಾನ್ಯರು. ಜೈನಧರ್ಮೀಯರಾದ ಹೆಗ್ಗಡೆ ಸರ್ವಧರ್ಮೀಯರನ್ನೂ ಸಮಾನ ಪ್ರೀತಿ-ವಿಶ್ವಾಸದಿಂದ ನೋಡುತ್ತಾರೆ, ಗೌರವಿಸುತ್ತಾರೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು. ಅಭಿನಂದನಾ ಭಾಷಣ ಮಾಡಿದ ಖ್ಯಾತ ಸಾಹಿತಿ ನಾಡೋಜಾ ಹಂಪನಾ (ಹಂಪ ನಾಗರಾಜಯ್ಯ) ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಇಂದ್ರಿಯ ನಿಗ್ರಹ, ತಾಳ್ಮೆ, ಸಂಯಮ, ಗಾಭೀರ್ಯ, ಸ್ಥಿತಪ್ರಜ್ಞ ಶಕ್ತಿಯ ಪ್ರತಿಭೆ ವರ್ಣಿಸಲಸದಳವಾಗಿದೆ. ಅವರ ಮೌನದ ಶಕ್ತಿ ಮತ್ತು ಮೌಲ್ಯ ಕರ್ನಾಟಕದ ಮನೆಮಾತಾಗಿದೆ ಎಂದು ಶ್ಲಾಘಿಸಿ, ಅಭಿನಂದಿಸಿದರು. ಕಲುಷಿತ ವಾತಾವರಣದಿಂದ ಯುವಜನರ ಮನಸ್ಸು ಹಾಳಾಗಿದೆ. ಭಿನ್ನಾಭಿಪ್ರಾಯ ಬಂದಾಗ ಅದನ್ನು ಪರಿಹರಿಸುವ ಜವಾಬ್ಧಾರಿ ಹಿರಿಯರಿಗಿದೆ. ಸತ್ಯದ ಸ್ವರೂಪವನ್ನು ಅವರಿಗೆ ತಿಳಿಸಬೇಕು. ಏನೇ ಆಗಲಿ ಷಡ್ಯಂತ್ರದಿಂದ ಆದ ಸಣ್ಣ ಕಳಂಕ ನಿವಾರಣೆಯಾಗಿದೆ. ಅಗ್ನಿಪರೀಕ್ಷೆಯಲ್ಲಿ ಹೆಗ್ಗಡೆಯವರು ಉತ್ತೀರ್ಣರಾಗಿ ಸತ್ಯದ ಸಾಕ್ಷಾತ್ಕಾರವಾಗಿದೆ. ಹೆಗ್ಗಡೆಯವರ ಬೀಡಿನಲ್ಲಿ (ಮನೆಯಲ್ಲಿ), ಕುಟುಂಬದಲ್ಲಿ ಸುಖ-ಶಾಂತಿ, ನೆಮ್ಮದಿಯ ತಂಗಾಳಿ ಸದಾ ಬೀಸುತ್ತಿರಲಿ ಎಂದು ಹಂಪನಾ ಹಾರೈಸಿದರು. ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹೆಗ್ಗಡೆಯವರು ಮಾನವ ಅಲ್ಲ, ದೇವಮಾನವ ಎಂದು ಬಣ್ಣಿಸಿದರು. ಧರ್ಮಸ್ಥಳವು ಸರ್ವಧರ್ಮೀಯರ ಮನೆಗಳನ್ನು ಹಾಗೂ ಮನಗಳನ್ನು ಬೆಳಗುವ “ನಂದಾದೀಪ”ವಾಗಿದೆ. ಅದನ್ನು ನಂದಿಸಲು ಹೋದರೆ ಧರೆಯ ಹೊತ್ತಿ ಉರಿಯಬಹುದು ಎಂದು ಭವಿಷ್ಯ ನುಡಿದರು. ಶ್ರವಣಬೆಲಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಜೈನಧರ್ಮ ಮತ್ತು ಹಿಂದೂ ಧರ್ಮ ಸಮಗ್ರ ಸಮಾಜದ ಸಂಪರ್ಕ ಸೇತುವಾಗಿದೆ. ಹಿಂದೂಗಳನ್ನು ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ. 800 ವರ್ಷಗಳ ಹಿಂದೆ ತಮ್ಮ ವಾಸ್ತವ್ಯದ ಮನೆಯನ್ನೆ ಧರ್ಮದೇವತೆಗಳಿಗಾಗಿ ಬಿಟ್ಟುಕೊಟ್ಟವರು ಹೆಗ್ಗಡೆ ಪರಂಪರೆಯವರು. ಇಲ್ಲಿನ ಸರ್ವಧರ್ಮ ಸಮನ್ವಯ ಹಾಗೂ ಚತುರ್ವಿದ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ. ಧರ್ಮ ಮತ್ತು ಧರ್ಮಸ್ಥಳದ ಸಂರಕ್ಷಣೆ ತಾವೆಲ್ಲರೂ ಹೆಗ್ಗಡೆಯವರ ಜೊತೆ ಇದ್ದೇವೆ ಎಂದು ಸ್ವಾಮೀಜಿ ಭರವಸೆ ನೀಡಿದರು. ತಮ್ಮ ಪೂರ್ವಾಶ್ರಮದಲ್ಲಿ ಉಜಿರೆಯಲ್ಲಿ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ ಸಿದ್ಧವನ ಗುರುಕುಲ ಹಾಗೂ ಪದವಿಪೂರ್ವ ಕಾಲೇಜು ಶಿಕ್ಷಣ ಹಾಗೂ ಸ್ವಯಂ ಸೇವಕನಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು. ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಸಂರಕ್ಷಣೆಗಾಗಿ ಧರ್ಮಸ್ಥಳದ ವತಿಯಿಂದ ಮಾಡುತ್ತಿರುವ ಸೇವಾಕಾರ್ಯ ವಿಶ್ವಮಾನ್ಯವಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಮಾಡಿದ ಗ್ರಾಮಾಭಿವೃದ್ಧಿ ಯೋಜನೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಆರೋಗ್ಯ, ಶಿಕ್ಷಣ ಮತ್ತು ಇತರ ಬಹುಮುಖ ಸೇವಾ ಕಾರ್ಯಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದರು. ದೂರುದಾರನ ಸುಳ್ಳು ಮಾತು ಕೇಳಿ ತೆಗೆಸಿದ ಹೊಂಡಗಳಲ್ಲಿ ಗಿಡಗಳನ್ನಾದರೂ ನೆಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಸೋಂದಾ ಮಠದ ಭಟ್ಟಾಕಳಂಕ ಸ್ವಮೀಜಿ ಮಾತನಾಡಿ, ಸತ್ಯವು ಸದಾ ಪರಿಶುದ್ಧವಾಗಿರುತ್ತದೆ. ಜೈನರು ಹಾಗೂ ಜೈನಧರ್ಮದ ಬಗ್ಗೆ ಎಂದೂ ಅವಹೇಳನ ಸಲ್ಲದು ಎಂದರು. ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮದಲ್ಲಿ ರಾಜಕೀಯ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಕಿವಿಮಾತು ಹೇಳಿದರು. ತಮಗೆ ಸ್ವಾಮೀಜಿ ಆಗಿ ಪಟ್ಟಾಭಿಷೇಕ ಆಗುವಾಗ “ಅಪೇಕ್ಷೆ ಪಡಬೇಡಿ, ಉಪೇಕ್ಷೆ ಮಾಡಬೇಡಿ” ಎಂದು ಹೆಗ್ಗಡೆಯವರು ಹೇಳಿದ ಕಿವಿಮಾತನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು. ನಮ್ಮ ಸನಾತನ ಧರ್ಮ ಯಾವುದೇ ಜಾತಿ, ಮತಕ್ಕೆ ಸೀಮಿತವಲ್ಲ. ಧರ್ಮಸ್ಥಳದ ಬಗ್ಯೆ ಅಸೂಯೆಯಿಂದ ಅಪಪ್ರಚಾರ ಮಾಡುವವರು “ಮಾನಸಿಕ ಭಯೋತ್ಪಾದಕರು” ಎಂದು ಸ್ವಾಮೀಜಿ ಬಣ್ಣಿಸಿದರು. ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜಸ್ಥಾನದ ತಿಜಾರ ಮಠದ ಸೌರಭಸೇನ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಶುಭ ಹಾರೈಸಿ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಜೊತೆ ಸದಾ ತಾವೆಲ್ಲರೂ ಸೇವೆಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಾದ್ರಪದ ಮಾಸದಲ್ಲಿ ದಶಲಕ್ಷಣ ಪರ್ವ ಆಚರಣೆಯ ಶುಭಾವಸರದಲ್ಲಿ ಎಲ್ಲಾ ಮಠಾಧೀಶರುಗಳ ದರ್ಶನ ಭಾಗ್ಯ ಲಭಿಸಿರುವುದು ಅತೀವ ಸಂತಸವಾಗಿದೆ ಎಂದರು. ಸತ್ಯ, ಅಹಿಂಸೆ, ತ್ಯಾಗ, ಬ್ರಹ್ಮಚರ್ಯ ಇತ್ಯಾದಿ ದಶಧರ್ಮಗಳನ್ನು ಜೈನರು ನಿತ್ಯವೂ ಪಾಲಿಸುತ್ತಾರೆ. ಇಂತಹ ಪವಿತ್ರಪರ್ವದ ಸಂದರ್ಭದಲ್ಲಿ ಎಲ್ಲಾ ಭಟ್ಟಾರಕರುಗಳು ತಮಗೆ ಹಾಗೂ ಧರ್ಮಸ್ಥಳಕ್ಕೆ ಬೆಂಬಲ ನೀಡಿ, ನಿಮ್ಮ ಜೊತೆ ಸದಾ ಇದ್ದೇವೆ ಎಂದು ಭರವಸೆ ನೀಡಿರುವುದು ತಮಗೆ ಹೆಚ್ಚಿನ ಉತ್ಸಾಹ ಮತ್ತು ಪ್ರೇರಣೆ ನೀಡಿದೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು. ತತ್ವ, ಸಿದ್ಧಾಂತ, ಧರ್ಮ ಇರುವುದು ಕೇವಲ ಓದಲು, ಉಪದೇಶಕ್ಕೆ ಮಾತ್ರ ಅಲ್ಲ. ಅದನ್ನು ನಾವು ನಿತ್ಯವೂ ಪಾಲಿಸಬೇಕು. “ಸಮ್ಯಕ್‌ದರ್ಶನ, ಜ್ಞಾನ ಚಾರಿತ್ರಾಣಿ ಮೋಕ್ಷ ಮಾರ್ಗಃ” ಎಂಬುದು ಜೈನ ಧರ್ಮದ ಸಾರವಾಗಿದೆ. ಅಂದರೆ ಸರಿಯಾದ ತತ್ವ ಸಿದ್ಧಾಂತಗಳ ಬಗ್ಯೆ ನಂಬಿಕೆ, ತಿಳುವಳಿಕೆ (ಜ್ಞಾನ) ಮತ್ತು ಆಚರಣೆಯಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದು ಜೈನ ಸಿದ್ಧಾಂತವಾಗಿದೆ. ಇದರ ಪ್ರತೀಕವಾಗಿ ಮೂರು ಎಳೆಗಳಿರುವ ಜನಿವಾರ (ಯಜ್ಞೋಪವೀತ) ವನ್ನು ಜೈನರು ಧರಿಸುತ್ತಾರೆ. ಇಂತಹ ಸಾತ್ವಿಕ ಹಾಗೂ ನೈತಿಕ ಜೀವನದಿಂದ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿ ಹೆಗ್ಗಡೆಯವರು ಎಲ್ಲಾ ಭಟ್ಟಾರಕರುಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್, ಮತ್ತು ಸೋನಿಯಾವರ್ಮ ಉಪಸ್ಥಿತರಿದ್ದರು.

ಜರ್ಮನ್ ಆಗಿದ್ದರೂ ಜೈನ ಧರ್ಮ ಪಾಲನೆ ಮಾಡುತ್ತಿರುವ ಖ್ಯಾತ ವಿದ್ವಾಂಸ ಹರ್ಮನ್

Article Image

ಜರ್ಮನ್ ಆಗಿದ್ದರೂ ಜೈನ ಧರ್ಮ ಪಾಲನೆ ಮಾಡುತ್ತಿರುವ ಖ್ಯಾತ ವಿದ್ವಾಂಸ ಹರ್ಮನ್

ಜರ್ಮನ್ ಆಗಿದ್ದರೂ ಜೈನ ಧರ್ಮ ಪಾಲನೆ ಮಾಡುತ್ತಿರುವ ಹರ್ಮನ್ ರವರು ಖ್ಯಾತ ವಿದ್ವಾಂಸರಾಗಿದ್ದಾರೆ. ಸಂಸ್ಕೃತ ಭಾಷೆಯನ್ನು ಕಲಿತು ಜೈನ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿ ಇಂಗ್ಲಿಷ್ ಮತ್ತು ಜರ್ಮನ್ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಬಾರಿ ಸಮ್ಮೇದ ಶಿಖರ್ಜಿ, ಶ್ರವಣಬೆಳಗೊಳ ಮುಂತಾದ ಅನೇಕ ಜೈನ ಕ್ಷೇತ್ರಗಳ ದರ್ಶನ ಮಾಡಿದ್ದಾರೆ. ನಾವು ಜರ್ಮನಿಯಲ್ಲಿರುವ ವಿಷಯವನ್ನು ತಿಳಿದು ಅವರ ಮನೆಗೆ ಆಹ್ವಾನಿಸಿದ್ದರು. ಜರ್ಮನಿಯ ಹನೋವರ್ ನಗರದ ಬಳಿ ಸ್ಟ್ಯನ್ ಹುಡೆರ್ ಗ್ರಾಮದಲ್ಲಿ ದಂಪತಿಗಳು ಬಹಳ ಆದರದಿಂದ ನಮ್ಮನ್ನು ಸ್ವಾಗತಿಸಿ ಸತ್ಕರಿಸಿದರು. ಅವರ ಮನೆಯಲ್ಲಿ ಶ್ರವಣಬೆಳಗೊಳ ಹೊಂಬುಜ ಮತ್ತು ಕೊಲ್ಲಾಪುರ ಮಠದ ಭಟ್ಟಾರಕರು ಆಶೀರ್ವದಿಸಿ ಕೊಟ್ಟಿರುವ ಜಿನ ಬಿಂಬಗಳನ್ನು ಇಟ್ಟು ಪೂಜಿಸುತ್ತಿರುವುದನ್ನು ನಮಗೆ ತೋರಿಸಿದರು. ಮೂಡುಬಿದಿರೆ ಪೂಜ್ಯ ಭಟ್ಟಾರಕ ಸ್ವಾಮೀಜಿ ಅವರನ್ನು ಭೇಟಿ ಆಗಿ ಆಶೀರ್ವಾದ ಪಡೆದ ವಿಷಯವನ್ನು ತಿಳಿಸಿದರು. ಅವರ ಸಂಗ್ರಹದಲ್ಲಿ ಕನ್ನಡ ಪುಸ್ತಕಗಳು ಇವೆ.

ಎಕ್ಸಲೆಂಟ್ ಮೂಡುಬಿದಿರೆ ಪ್ರಶಂಸಿದ ರಾಷ್ಟ್ರಪತಿಗಳು

Article Image

ಎಕ್ಸಲೆಂಟ್ ಮೂಡುಬಿದಿರೆ ಪ್ರಶಂಸಿದ ರಾಷ್ಟ್ರಪತಿಗಳು

ನವದೆಹಲಿ: ರಾಣಿ-ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ಬಿಡುಗಡೆ ಸಮಾರಂಭ. ಇಡೀ ಭರತಖಂಡದಲ್ಲಿ 1552 ರಿಂದ 1606ರವರೆಗೆ 54 ವರ್ಷಗಳ ಸುದೀರ್ಘಕಾಲ ರಾಜ್ಯಭಾರ ನಡೆಸಿದ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ಪ್ರಕಟಸಿದ ವಿಶೇಷ ಅಂಚೆ ಚೀಟಿಯ ಲೋಕಾರ್ಪಣೆಯ ಐತಿಹಾಸಿಕ ಕಾರ‍್ಯಕ್ರಮ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ದಿನಾಂಕ 24.7.2025 ರಂದು ನಡೆಯಿತು. ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಅಂಚೆಚೀಟಿ ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟ್ರಪತಿಗಳು ರಾಣಿ ಚೆನ್ನಭೈರಾದೇವಿಯ ಕೊಡುಗೆಗಳನ್ನು ಸ್ಮರಿಸಿಕೊಂಡು ರಾಷ್ಟ್ರದ ಗೌರವವನ್ನು ಸಲ್ಲಿಸಿದರು. ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, ರಾಣಿ ಚೆನ್ನಭೈರಾದೇವಿಯ ಧೈರ್ಯ ಸ್ಥೈರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು. ರಾಣಿ ಚೆನ್ನಭೈರಾದೇವಿಯ ನಾಡಿನ ರಕ್ಷಣೆಗಾಗಿ ಆಕೆ ನಡೆಸಿದ ಹೋರಾಟ, ಸಾಮಾಜಿಕ ಕಾಳಜಿ, ಜಾತ್ಯತೀತ ಮನೋಭಾವ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಆಕೆ ಕೈಕೊಂಡ ರಾಜನೀತಿಗಳನ್ನು ಮುಕ್ತಕಂಠದಿಂದ ಪ್ರಶಂಶಿಸಿದರು. ಅಂಚೆಚೀಟಿ ಹೊರತಂದ ಭಾರತೀಯ ಅಂಚೆ ಇಲಾಖೆ ಹಾಗೂ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳನ್ನು ಅಭಿನಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅತಿಥಿಗಣ್ಯರನ್ನು ಸ್ವಾಗತಿಸುತ್ತ, “ರಾಜ್ಯ ವಿಸ್ತರಣೆ ರಾಣಿ ಚೆನ್ನಭೈರಾದೇವಿಯರಾಜ ನೀತಿಯಾಗಿರಲಿಲ್ಲ. ಬದಲಿಗೆ ಪ್ರಜೆಗಳ ಬದುಕಿಗೆ ಸುಖ ಸೌಲಭ್ಯ ಒದಗಿಸುವುದು ಅವಳ ಉದ್ದೇಶವಾಗಿತ್ತು. ಆಕೆ ವಾಣಿಜ್ಯ ವ್ಯವಹಾರದಲ್ಲಿ ನಿಷ್ಣಾತೆಯಾಗಿದ್ದಳು.ತನ್ನರಾಜ್ಯದಿಂದ, ಕರಿ ಮೆಣಸು, ದಾಲ್ಚಿನ್ನಿ, ಶುಂಠಿ, ಏಲಕ್ಕಿ, ಗಂಧ, ಅಕ್ಕಿ, ಬೆಲ್ಲ, ದಂತ ಮುಂತಾದ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿ ಅಪಾರ ಪ್ರಮಾಣದ ವಿದೇಶೀ ವಿನಿಮಯಗಳಿಸಿದ್ದಳು. ರಾಜಕೀಯವಾಗಿ ವೈರ ಸಾಧಿಸುತ್ತಿದ್ದ ಪೋರ್ಚುಗೀಸರೊಡನೆ ಉತ್ತಮ ವ್ಯಾವಹಾರಿಕ ಸಂಬಂಧ ಇರಿಸಿಕೊಂಡು, ಅವರಿಂದಲೇ "ರೈನಾದ ಪೆಮೆಂಟಾ" ಅರ್ಥಾತ್ "ಕರಿಮೆಣಸಿನ ಅರಸಿ" ಎಂಬ ಬಿರುದು ಪಡೆದಿದ್ದಳು. ಅಂಥ ಹೆಮ್ಮೆಯ ವೀರವನಿತೆಗೆ ಇಂದು ದೇಶದದೊಡ್ಡ ಗೌರವ ಪ್ರಾಪ್ತವಾಗಲಿದೆ” ಎಂದು ಆಶಿಸಿದರು. ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಣಿ ಚೆನ್ನಭೈರಾದೇವಿಯ ಇತಿಹಾಸ, ವೀರತ್ವ ಹಾಗೂ ಸಮಾಜಮುಖಿ ಕರ‍್ಯಗಳನ್ನು ನೆನಪಿಸಿ ಗೌರವ ಸೂಚಿಸಿದರು. ಅಲ್ಲದೆ ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿಯನ್ನು ಹಾಗೂ ಇಂದಿನ ಕರ‍್ಯಕ್ರಮವನ್ನು ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್, ಮೂಡುಬಿದಿರೆ ಇದರ ಮೂಲಕ ಪ್ರಾಯೋಜಿಸಲಾಗಿದೆ ಎಂಬುದನ್ನೂ ಅವರು ವಿವರಿಸಿದರು. ಕಾರ‍್ಯಕ್ರಮಕ್ಕೆ ಮಾರ್ಗದರ್ಶನ ನೀಡಿ ಸಹಕರಿಸಿದವರು ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಅವರು ರಾಣಿ ಚೆನ್ನಭೈರಾದೇವಿಯ ಶೌರ್ಯ, ದೃಢ ನಿರ್ಧಾರ ಮತ್ತು ಆಡಳಿತ ಕೌಶಲ್ಯವನ್ನು ಸ್ಮರಿಸಿದರು. ರಾಣಿ ಚೆನ್ನಭೈರಾದೇವಿ ವಾಣಿಜ್ಯ ಮತ್ತು ನೌಕಾಯಾನದಲ್ಲಿ ದಿಟ್ಟ ಹೆಜ್ಜೆ ಇಟ್ಟ ಹೆಗ್ಗುರುತು ಸ್ವರೂಪ ಎಂದು ಅವರು ಹೇಳಿದರು. ಪೋರ್ಚುಗೀಸ್ ಬಲಗಳ ವಿರುದ್ಧ ನಿರ್ಭೀತಿಯಾಗಿ ಪ್ರತಿರೋಧಿಸಿದ ರಾಷ್ಟ್ರೀಯ ಸ್ವಾಭಿಮಾನದ ಸಂಕೇತವಾಗಿದ್ದಾಳೆ ಎಂದರು. ರೈತರು ಮತ್ತು ಮೀನುಗಾರರ ನೆಮ್ಮದಿಗೆ ಹಲವಾರು ಸಾಮಾಜಿಕ ಸೌಲಭ್ಯಗಳನ್ನು ನೀಡಿದಳು ಎಂಬುದನ್ನು ಜೋಷಿ ತಿಳಿಸಿದರು. ಇಂತಹ ಮಹಾನ್ ಮಹಿಳೆಯ ನೆನಪಿಗಾಗಿ ಸ್ಮಾರಕ ಅಂಚೆಪಟ್ಟಿ ಬಿಡುಗಡೆ ಮಾಡುವುದು ಹೆಮ್ಮೆಯ ವಿಚಾರ ಎಂದು ಅವರು ಅಭಿಪ್ರಾಯಪಟ್ಟರು. ಅಂಚೆ ಚೀಟಿ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಉಪಸ್ಥಿತರಿದ್ದು ಶುಭಕೋರಿದರು. ಕಾರ‍್ಯಕ್ರಮದಲ್ಲಿ ದೆಹಲಿಯ ಅಂಚೆ ಮಹಾನಿರ್ದೇಶಕರಾದ ಅಖಿಲೇಶ್‌ಕುಮಾರ್ ಪಾಂಡಿಯವರು, ಹುಬ್ಬಳ್ಳಿಯ ಸಾಮಾಜಿಕ ಕಾರ‍್ಯಕರ್ತರಾದ ಮಹೇಂದ್ರ ಸಿಂಗ್, ಕರಿಮೆಣಸಿನ ರಾಣಿ ಕಾದಂಬರಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಖ್ಯಾತ ಲೇಖಕರಾದ ಡಾ.ಗಜಾನನ ಶರ್ಮ, ಸಂಯೋಜಕರಾದ ಹುಬ್ಬಳ್ಳಿಯ ಖ್ಯಾತ ಉದ್ಯಮಿ ಮಹಾವೀರ ಕುಂದೂರ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರೂ ಕಾರ‍್ಯಕ್ರಮ ಸಂಯೋಜಕರೂ ಆದ ಡಾ. ಬಿ. ಪಿ. ಸಂಪತ್‌ ಕುಮಾರ, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಇತರ ಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪ್ರಕಟಿಸಿದ ರಾಣಿ ಚೆನ್ನಭೈರಾದೇವಿಯ ಅಂಚೆ ಚೀಟಿ ಬಿಡುಗಡೆ ಸಮಾರಂಭವು ಇತಿಹಾಸದ ಪುಟದಲ್ಲಿ ಶಾಶ್ವತ ಸ್ಥಾನ ಪಡಯುವಲ್ಲಿ ಸಾರ್ಥಕತೆಯನ್ನು ಪಡೆಯಿತು. ಇತಿಹಾಸದ ಗರ್ಭದಲ್ಲಿ ಮರೆಯಾಗಿದ್ದ ಮಹಾನ್ ಚೇತನವೊಂದಕ್ಕೆ ಗೌರವ ನೀಡುವ ಹಾಗೂ ಹೊಸತಲೆಮಾರಿನಲ್ಲಿ ರಾಣಿಯ ಪೌರುಷ, ರಾಜನೀತಿ, ದೂರದೃಷ್ಟಿಯ ಆಡಳಿತ, ನಾಡಪ್ರೇಮ, ಸಂಸ್ಕೃತಿ ಪ್ರೀತಿ ಮೊದಲಾದ ನೆನಪುಗಳನ್ನು ಪುನರ್ ಸ್ಥಾಪಿಸುವ ರಾಷ್ಟ್ರಭಕ್ತಿಯ ಪ್ರತೀಕವಾಗಿಯೂ ಗಮನಸೆಳೆಯಿತು.

ಮೀನಾಕ್ಷಿ ಜೈನ್ ರಾಜ್ಯಸಭೆಗೆ ರಾಷ್ಟ್ರಪತಿಯಿಂದ ನೇಮಕ

Article Image

ಮೀನಾಕ್ಷಿ ಜೈನ್ ರಾಜ್ಯಸಭೆಗೆ ರಾಷ್ಟ್ರಪತಿಯಿಂದ ನೇಮಕ

ರಾಷ್ಟ್ರಪತಿಯವರು ಹೊಸದಾಗಿ ನಾಲ್ಕು ಜನರನ್ನು ರಾಜ್ಯಸಭಾ ಸದಸ್ಯರನ್ನು ನೇಮಕ ಮಾಡಿದ್ದು ಅವರಲ್ಲಿ ಮೀನಾಕ್ಷಿ ಜೈನ್ ಕೂಡ ಒಬ್ಬರಾಗಿದ್ದಾರೆ. ಮೀನಾಕ್ಷಿ ಜೈನ್ ( 23ನೇ ಮಾರ್ಚ್ 1943 )ರವರು ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಇತಿಹಾಸದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಭಾರತೀಯ ವಿಜ್ಞಾನಿ ಮತ್ತು ಇತಿಹಾಸಕಾರರು. 2014 ರಲ್ಲಿ ಅವರು ಭಾರತ ಸರ್ಕಾರದಿಂದ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್‌ನ ಸದಸ್ಯರಾಗಿ ನಾಮನಿರ್ದೇಶನಗೊಂಡರು. 2020 ರಲ್ಲಿ ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರ : ನಿರಂಜನ್‌ ಜೈನ್‌ ಕುದ್ಯಾಡಿ

Article Image

ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರ : ನಿರಂಜನ್‌ ಜೈನ್‌ ಕುದ್ಯಾಡಿ

ಭಾರತ ದೇಶ ಮೂಲತಃ ಅಹಿಂಸೆಯನ್ನು ಬಯಸುತ್ತಿದೆ. ಈ ಅಹಿಂಸೆಗೆ ತೊಡಕಾಗಿರುವ ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದನೆ ತೊಡಕಾಗಿದೆ. ಭಗವಾನ್ ಮಹಾವೀರ, ಬುದ್ಧ, ಶ್ರೀರಾಮಚಂದ್ರ ಇವರೆಲ್ಲ ಅಹಿಂಸೆಯ ಪ್ರತಿಪಾದಕರಾಗಿದ್ದರೂ ಹಿಂಸೆಗೆ ಕಾರಣವಾಗುವ ವಿಚಾರಗಳನ್ನು ವಿರೋಧಿಸಿದವರಾಗಿದ್ದಾರೆ. ಪಾಕಿಸ್ಥಾನಕ್ಕೆ ತನ್ನ ಪ್ರಜೆಗಳ ಹಿತಕ್ಕಿಂತ ನೆರೆಯ ರಾಷ್ಟ್ರ ಭಾರತಕ್ಕೆ ಕಿರುಕುಳ ನೀಡುವ ಮಾನಸಿಕ ವಿಕೃತಿಯಲ್ಲಿ ಸಂತೋಷವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಭಾರತದ ಆಪರೇಷನ್ ಸಿಂಧೂರ ಸರಿಯಾದ ಕ್ರಮವಾಗಿದೆ. ಇದರಿಂದಾಗಿ ಭಯೋತ್ಪಾದಕ ಮನಸ್ಸುಗಳು ನಿರ್ನಾಮವಾಗಿ ಶಾಂತಿ ನೆಲೆಸಲಿ. ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರವಾಗಿಯೇ ಇರಲಿದೆ. ಜೈ ಹಿಂದ್

'ಆಪರೇಶನ್ ಸಿಂಧೂರ' ಯಶಸ್ವಿ ಕಾರ್ಯಾಚರಣೆ: ಧರ್ಮಸ್ಥಳದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

Article Image

'ಆಪರೇಶನ್ ಸಿಂಧೂರ' ಯಶಸ್ವಿ ಕಾರ್ಯಾಚರಣೆ: ಧರ್ಮಸ್ಥಳದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಪ್ರಧಾನಿ ನರೇಂದ್ರಮೋದಿಯವರ ದಕ್ಷ ಮಾರ್ಗದರ್ಶನದಲ್ಲಿ “ಆಪರೇಶನ್ ಸಿಂಧೂರ” ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೈನಿಕರನ್ನು ಅಭಿನಂದಿಸಿ, ಅವರಿಗೆ ಮುಂದೆಯೂ ಸರ್ವರೀತಿಯ ಯಶಸ್ಸನ್ನು ಕೋರಿ ಗುರುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಿದರು. ಸೈನಿಕರಿಂದ ದೇಶದ ರಕ್ಷಣಾಕಾರ್ಯ ಯಶಸ್ವಿಯಾಗಲಿ ಹಾಗೂ ಭಯ ಮತ್ತು ಆತಂಕ ನಿವಾರಣೆಯಾಗಿ ಎಲ್ಲೆಲ್ಲೂ ಸದಾ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಗೊಳ್ಳಲಿ ಎಂದು ಹೆಗ್ಗಡೆಯವರು ಹಾರೈಸಿದ್ದಾರೆ.

ಹೆಗ್ಗಡೆಯವರ ಕಾರ್ಯವೈಖರಿಗೆ ಪ್ರಧಾನಿಯವರಿಂದ ಮೆಚ್ಚುಗೆ

Article Image

ಹೆಗ್ಗಡೆಯವರ ಕಾರ್ಯವೈಖರಿಗೆ ಪ್ರಧಾನಿಯವರಿಂದ ಮೆಚ್ಚುಗೆ

ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರನ್ನು ಆ.9 ರಂದು ಪಾರ್ಲಿಮೆಂಟ್ ಭವನದ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿ ಮೂರನೇ ಬಾರಿ ಪ್ರಧಾನಮಂತ್ರಿ ಆಯ್ಕೆಯಾಗಿರುವುದಕ್ಕೆ ಶುಭಹಾರೈಸಿ ಶ್ರೀ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದವನ್ನು ನೀಡಿ ದೇಶಕ್ಕೆ ಇನ್ನು ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಆಶೀರ್ವದಿಸಿದರು. ನಂತರ ಅನೇಕ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ರಾಜ್ಯಸಭಾ ಸಂಸದರ ವ್ಯಾಪ್ತಿಗೆ ಬರುವ ನಿಧಿಯನ್ನು ಹೆಗ್ಗಡೆಯವರು ಬೀದರ್‌ನಲ್ಲಿ ವಿನೂತನವಾಗಿ ವಿನಿಯೋಗಿಸಿ ಒಂದು ಕ್ಷೀರಕ್ರಾಂತಿಗೆ ನಾಂದಿ ಹಾಡಿರುವ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಇದು ಒಂದು ಮಾದರಿ ಸಂಸದರ ನಿಧಿಯ ಸದ್ವಿನಿಯೋಗ ಎಂದು ಪ್ರಧಾನಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ರಾಜ್ಯದಾದ್ಯಂತ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ವಹಿಸಲ್ಪಡುತ್ತಿರುವ 10 ಸಾವಿರ ಸಿ.ಎಸ್.ಸಿ. ಕೇಂದ್ರಗಳ ಮೂಲಕ ಕೇಂದ್ರ ಸರಕಾರದ ಹಾಗೂ ಸಿ.ಎಸ್.ಸಿ.ಯ ಪ್ರಮುಖ ಸೇವೆಗಳನ್ನು ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ತಲುಪಿಸುತ್ತಿರುವ ಬಗ್ಗೆ ಹೆಗ್ಗಡೆಯವರು ವಿವರಿಸಿದರು. ಇಲ್ಲಿಯವರೆಗೆ ಸುಮಾರು 3 ಕೋಟಿ ಸಿ.ಎಸ್.ಸಿ. ಸೇವೆಗಳು ಯೋಜನೆಯ ಮೂಲಕ ಜನಸಾಮಾನ್ಯರಿಗೆ ತಲುಪಿರುವ ಬಗ್ಗೆ ಪ್ರಧಾನಮಂತ್ರಿಗಳು ಅಚ್ಚರಿ ವ್ಯಕ್ತಪಡಿಸಿದರು. ಹೆಗ್ಗಡೆಯವರ ಈ ಎಲ್ಲಾ ಸೇವೆಗಳ ಚಿಂತನೆಯು ದೇಶಕ್ಕೆ ಮಾದರಿಯಾಗಲಿ ಎಂದು ಪ್ರಧಾನಮಂತ್ರಿಗಳು ಶ್ಲಾಘಿಸಿದರು. ಬೀದರ್‌ನಲ್ಲಿ ಕ್ಷೀರಕ್ರಾಂತಿ: ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಸದರ ನಿಧಿಯಿಂದ ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಯಾದ ಬೀದರ್‌ನಲ್ಲಿ ಒಂದು ಕ್ಷೀರಕ್ರಾಂತಿಯನ್ನೇ ಮಾಡುವ ಯೋಜನೆ ಹಾಕಿಕೊಂಡು ಕೆ.ಎಂ.ಎಫ್. ಸಹಯೋಗದೊಂದಿಗೆ ಅನೇಕ ಹಾಲು ಒಕ್ಕೂಟಗಳನ್ನು ಅಭಿವೃದ್ಧಿಪಡಿಸಿ ಹೈನುಗಾರಿಕೆ ಮಾಡಲು ಅನೇಕ ಪ್ರೋತ್ಸಾಹಗಳನ್ನು ನೀಡಿದ್ದಾರೆ. ಸಂಸದರ ನಿಧಿಯಿಂದ ಹಾಲು ಸಂಗ್ರಹಣಾ ಕಟ್ಟಡಗಳನ್ನು ನಿರ್ಮಿಸಿದ್ದಲ್ಲದೆ, ಹಾಲು ಸಂಗ್ರಹವನ್ನು ಹೆಚ್ಚಿಸಿಕೊಳ್ಳಲು ಅತ್ಯಾಧುನಿಕ ಯಂತ್ರಗಳಾದ ಆಟೋಮ್ಯಾಟಿಕ್ ಮಿಲ್ಕ್ ಕಲೆಕ್ಟಿಂಗ್ ಯುನಿಟ್(ಎ.ಎಂ.ಸಿ.ಯು.), ಸ್ಪೈನ್‌ಲೆಸ್ ಸ್ಟೀಲ್ ಕ್ಯಾನ್, ಪ್ಯಾಟೋಮ್ಯಾಟಿಕ್ ಯಂತ್ರ, ಹಾಲು ತೂಕದ ಯಂತ್ರಗಳನ್ನು ಒದಗಿಸಿರುತ್ತಾರೆ. ಯೋಜನೆಯ ಕೃಷಿ ಅಧಿಕಾರಿಗಳನ್ನು ನಿಯೋಜಿಸಿ ಗ್ರಾಮೀಣ ರೈತರರಿಗೆ ಹೈನುಗಾರಿಕೆಯ ಬಗ್ಗೆ ಸೂಕ್ತ ತರಬೇತಿಯನ್ನು ನೀಡಿದ್ದಾರೆ. ಈ ಯೋಜನೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರತಿನಿತ್ಯ 18 ಸಾವಿರ ಲೀಟರ್ ಮಾತ್ರ ಇತ್ತು. ಇದು ಯೋಜನೆಯಿಂದಾಗಿ ಪ್ರತಿ ದಿನ ಗರಿಷ್ಠ 60 ಸಾವಿರ ಲೀಟರ್‌ಗೆ ಏರಿಕೆ ಕಂಡಿದ್ದು ಕೆಲವೇ ತಿಂಗಳುಗಳಲ್ಲಿ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಸಂಗ್ರಹದ ಗುರಿಯನ್ನು ತಲುಪಲಿದ್ದು ಇದೊಂದು ಐತಿಹಾಸಿಕ ಉತ್ಪಾದನೆಯಾಗಿರುತ್ತದೆ. ಸಂಸದರ ನಿಧಿಯ ಬಳಕೆಗೆ ಇದು ಒಂದು ಉತ್ತಮ ಮಾದರಿ ಎಂದು ಪ್ರಧಾನಮಂತ್ರಿಗಳು ಶ್ಲಾಘಿಸಿದರು. ಆಯುಷ್ಮಾನ್ ಸೇವೆಗೂ ಮೆಚ್ಚುಗೆ: ಡಿ. ವೀರೇಂದ್ರ ಹೆಗ್ಗಡೆಯವರು ಮುನ್ನಡೆಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಕೇಂದ್ರ ಸರಕಾರದ ತಂತ್ರಜ್ಞಾನ ಮತ್ತು ಮಾಹಿತಿ ವಿದ್ಯುನ್ಮಾನ ಸಚಿವಾಲಯದ ಮಹತ್ವದ ಕಾರ್ಯಕ್ರಮವಾದ ಸಿ.ಎಸ್.ಸಿ. ಸೇವೆಗಳನ್ನು ಜನ ಸಾಮಾನ್ಯರಿಗೆ ನೀಡುವ ಒಂದು ಪಾಲುದಾರಿಕಾ ಒಪ್ಪಂದವಾಗಿರುತ್ತದೆ. ರಾಜ್ಯಾದ್ಯಾಂತ ಯೋಜನೆಯು 10 ಸಾವಿರ ಗ್ರಾಹಕ ಸೇವಾಕೇಂದ್ರಗಳ ಮೂಲಕ ಸಿ.ಎಸ್.ಸಿ. ಸೇವೆಯನ್ನು ಯಶಸ್ವಿಯಾಗಿ ಜನಸಾಮಾನ್ಯರಿಗೆ ಯೋಜನೆಯಿಂದ ನೀಡಲಾಗುತ್ತಿದೆ. ‘ಆಯುಷ್ಮಾನ್ ಭಾರತ್’ ಸರಕಾರದ ಮಹತ್ವದ ಆರೋಗ್ಯ ವಿಮೆಯಾಗಿದ್ದು ಅರ್ಹ ಫಲಾನುಭವಿಗಳಿಗೆ ಇದನ್ನು ಉಚಿತವಾಗಿ ಸಿ.ಎಸ್.ಸಿ. ಕೇಂದ್ರಗಳ ಮೂಲಕ ವಿತರಿಸಿದ್ದು ಇಲ್ಲಿಯವರೆಗೆ 1.40 ಕೋಟಿಗೂ ಅಧಿಕ ಜನರು ‘ಆಯುಷ್ಮಾನ್ ವಿಮೆ’ಗೆ ನೋಂದಾಯಿಸಿಕೊಂಡಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಜನರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇವೆ ನೀಡುವ ಬಗ್ಗೆಯೂ ಪ್ರಧಾನಮಂತ್ರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ದೆಹಲಿ: ಜಿನ ಬಸದಿ 24 ತೀರ್ಥಂಕರರ ಪಂಚ ಕಲ್ಯಾಣ-ವಿವಿಧ ಜಿನ ಬಿಂಬಗಳ ಸ್ಥಾಪನೆ

Article Image

ದೆಹಲಿ: ಜಿನ ಬಸದಿ 24 ತೀರ್ಥಂಕರರ ಪಂಚ ಕಲ್ಯಾಣ-ವಿವಿಧ ಜಿನ ಬಿಂಬಗಳ ಸ್ಥಾಪನೆ

ಮುಂಬಯಿ, ಏ.25: ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿಯಲ್ಲಿ 24 ತೀರ್ಥಂಕರರ ಪಂಚ ಕಲ್ಯಾಣವು ರಾಷ್ಟ್ರಸಂತ ೧೦೮ ಉಪಾಧ್ಯಾಯ ಗುಪ್ತಿ ಸಾಗರ ಮುನಿಮಹಾರಾಜರ ಮಾರ್ಗದರ್ಶನ, ಪಾವನ ಸಾನ್ನಿಧ್ಯದಲ್ಲಿ ಮೂಡಬಿದಿರೆ ಶ್ರೀ ದಿಗಂಬರ ಜೈನ ಮಠದ, ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಇಂದು ಜರುಗಿತು. ಮೂರು ಆಡಿ ಎತ್ತರದ ಪಂಚ ಲೋಹದ ಇಪ್ಪತ್ತನಾಲ್ಕು ತೀರ್ಥಂಕರರ ಹಾಗೂ ವಿವಿಧ ಜಿನ ಬಿಂಬಗಳ ಸ್ಥಾಪನೆ, ಮೋಕ್ಷ ಕಲ್ಯಾಣ ಪೂಜೆ, ನಂತರ ದೆಹಲಿ ವಿಶ್ವ ವಿದ್ಯಾಲಯ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಿಂದ ಮೆರವಣಿಗೆ ಮೂಲಕ ಮೂರು ಕಿ.ಮೀ ದೂರದ ಬಸದಿಗೆ ತೆರಳಿ ಬೆಳಿಗ್ಗೆಯಿಂದ ಮಧ್ಯಾಹ್ನವರೆಗೂ ದೆಹಲಿ ರಾಣಾಪತ್ ನಗರದ ಬಸದಿಯಲ್ಲಿ ಮೂರ್ತಿ ಸ್ಥಾಪನೆ ಜರುಗಿತು. ಬಳಿಕ ಧಾರ್ಮಿಕ ಸಭೆಯಲ್ಲಿ ಧರ್ಮೋಪದೇಶ ನೀಡಿದ ಮೂಡುಬಿದಿರೆ ಸ್ವಸ್ತಿಶ್ರೀ ಡಾ|| ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಜಿನ ಬಿಂಬ ಸ್ಥಾಪನೆಯಿಂದ ಆತ್ಮಕಲ್ಯಾಣ ಹಾಗೂ ಪರ ಕಲ್ಯಾಣವಾಗುವುದು, ಜನ ಸಂಸ್ಕೃತಿ ಸಂಸ್ಕಾರ ಧರ್ಮದಿಂದ ಸಾಧ್ಯ ಎಂದು ಹೇಳುತ್ತಾ, ಸುಂದರ ಜಿನಾಲಯ ಸ್ಥಾಪನೆಗೆ ಕಾರಣರಾದ ದಾನಿಗಳನ್ನು ಗೌರವಿಸಿ ಹರಸಿದರು. ರಾಷ್ಟ್ರಸಂತ ೧೦೮ ಗುಪ್ತಿ ಸಾಗರ ಮುನಿಮಹಾರಾಜರು ಮೂಡುಬಿದಿರೆ ಶ್ರೀಗಳವರಿಗೆ ಶಾಸ್ತ್ರ ಸ್ಮರಣಿಕೆ ನೀಡಿ ಹರಸಿ ಆಶೀರ್ವಾದಿಸಿದರು. ಬಳಿಕ ದೆಹಲಿ ಗ್ರೀನ್ ಪಾರ್ಕ್ ಬಸದಿಯಲ್ಲಿ ಉಪಸ್ಥಿತರಿದ್ದ ರಾಷ್ಟ್ರಸಂತ ೧೦೮ ಆಚಾರ್ಯ ಪ್ರಾಗ್ಯ ಸಾಗರ ಮುನಿಮಹಾರಾಜರು ಶ್ರೀಗಳಿಗೆ ಗೌರವಾನ್ವಿತ ಪ್ರಧಾನ ಮಂತ್ರಿಗಳಿಂದ ಏ.21 ರ ಭಗವಾನ್ ಮಹಾವೀರ ಜನ್ಮ ಕಲ್ಯಾಣದಂದು ನಿರ್ವಾಣ ವರ್ಷ 2550ರ ಅಂಗವಾಗಿ ಬಿಡುಗಡೆಗೊಳಿಸಿದ ರೂಪಾಯಿ 100ರ ನಾಣ್ಯ ಹಾಗೂ ಅಂಚೆ ಇಲಾಖೆ ಬಿಡುಗಡೆಗೊಳಿಸಿದ ಪಾವಪುರಿ ಸಿದ್ದಕ್ಷೇತ್ರ ಫಸ್ಟೇಡ್ ಕವರ್ ನೀಡಿ ಹರಸಿದರು. ಈ ಸಂದರ್ಭ ಮೂಡುಬಿದಿರೆ ಸ್ವಾಮೀಜಿಯವರು ಈ ವರ್ಷ ಪೂರ್ತಿ ಆಚಾರ್ಯ ಶಾಂತಿ ಸಾಗರ ಮುನಿಮಹಾರಾಜರ ಆಚಾರ್ಯ ಶತಾಬ್ಧಿ ವರ್ಷ ಹಾಗೂ ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಕಲ್ಯಾಣವನ್ನು ವಿವಿಧೆಡೆ ಆಚರಿಸಲು ಸಂಕಲ್ಪ ಮಾಡಿದರು.

First Previous

Showing 1 of 1 pages

Next Last